Showing posts with label ೦೨. ಕವನಗಳು. Show all posts
Showing posts with label ೦೨. ಕವನಗಳು. Show all posts

Tuesday, May 21, 2024

ಭರವಸೆ

























ಬೀಸುಗಾಳಿಗೆ ದಿಂಡುಗೆಡೆದ ಸಸಿ
ನೆಲಕಚ್ಚಿದರೂನೂ
ಕಳಚಿಲ್ಲ 
ತಾಯಿಬೇರಿನ ಕರುಳ ಬಳ್ಳಿ ದಾರ;
ಹಗ್ಗ
ಕಟ್ಟಿದ್ದಾಯ್ತು, ಕಡ್ಡಿ ನೆಟ್ಟಿದ್ದಾಯ್ತು
ಇಟ್ಟಿಗೆ ಕಲ್ಲು 
ಮತ್ತಾವುದೋ ಮರದ ಗೆಲ್ಲು ಬಳ್ಳಿ 
ತಂದು ಒಟ್ಟಿದ್ದಾಯ್ತು
ದಿಟಕು ನಿಲುವುದೆ ಹೇಳಿ ಮುರಿದ ಸೊಂಟ?
ಕೊನೆಗೊಮ್ಮೆ ಚೆಲ್ಲಿ ಕೈ 
ಬಿಟ್ಟಿದ್ದಾಯ್ತು;
ಮುರಿದು ತೆಗೆಯಲೆ ಬೇಕು ಇಂದು ನಾಳೆ.

ಬೇರಿಗೋ, ಹುಚ್ಚು - 
ನೆಚ್ಚಿಗೆಲ್ಲಿಯ ಪಾರ?
ನಡುಮುರಿದ ಗಿಡಕೆ
ಅಂಟಿಯೂ ಅಂಟಿರದ 
ತುಣುಕು ತೊಗಟೆಯ ದಾರಿ
ಹಿಡಿದು ಹರಿಸುತ್ತಲಿದೆ
ಜೀವಸಾರ;
ಸಾವ ದಾರಿಯ ತುಂಬ ಹಸಿರ ನಳನಳಿಸುತಿಹ
ಉಡಿದ ಮರ - 
ಯಾವುದೋ ಮಾಂತ್ರಿಕನ ನೆಚ್ಚಿ ಕಾಯ್ದಿಹ ಬೇರು - 
ಹನಿ ಹನಿ ಹನಿ ಹನಿ.

ದಿನವೆರಡು ಕಳೆದರೂ
ಎಲೆಯೊಂದೂ ಕಂದಿಲ್ಲ
ಮೂರು ಮತ್ತೆರಡಾಯ್ತು
ಹಸಿರ ಸಿರಿ ಸವೆದಿಲ್ಲ
ಕಾದದ್ದೇ ಬಂತು.
ಹತ್ತಕ್ಕೆ ಸೂತಕವೂ ಕಳೆಯಿತು
ವೈಕುಂಠ
ಮುಕ್ತಿ ಕರುಣಿಸೆ ಕಡಿವ ಕೊಡಲಿ ಬಂದು,
ಸಾಕಿನ್ನು ಯಾತನೆಯು
ಹುರುಳಿರದ ವೇದನೆಯು
ರೋದನೆಗೆ ಮಂಗಳವ ಹಾಡಲಿನ್ನು
ಕೊಡಲಿಯೆತ್ತಿದ ಕೈಗೆ ಕಂಡುದೇನು?
ಅಯ್ಯೋ ತಡೆ ತಡೆ
ಕಾಣು ಕಾಣದೇನು?
ಸಿರಿಯ ಹಸುರಿಗೆ ಹೊನ್ನ ಸರಿಗೆಯಿಟ್ಟಂತೆವೋಲ್
ನಳನಳಿಸಿ ನಗುವೊಂದು ನವಪಲ್ಲವಂ
ಅಡ್ಡಮಲಗಿದ ಗಿಡದ ನಡುವಿಂದ ಮೊಗವೆತ್ತಿ
ಬದುಕ ಭರವಸೆಯೆ ಮೈಯಾಂತಂತೆ 
ಕೇಳುತಿದೆ-
"ದೊರೆಯಬಹುದೇ ಒಂದು ಕಾಯಕಲ್ಪ"
ಉತ್ತರ
ಕುರಿತು ಹೊರಟಿಹ ಮೋಡ
'ಧೋಂ'ಕಾರದೊಡನೆ ಮುಂಗಾರುತ್ತಿದೆ
ದೊರೆಯಬಹುದೋ ಒಂದು ಕಾಯಕಲ್ಪ!

ದೊರೆಯಬಹುದೇ ಒಂದು ಕಾಯಕಲ್ಪ? 

Wednesday, June 1, 2022

ನಿರಾಶಯ

ನನ್ನ ಕವಿತೆಗೆ ಅದಿರಲಿ ಇದಿರಲಿ ಎಂದೆಲ್ಲ ನಾನು ಕೇಳುವುದಿಲ್ಲ ಅದಿಲ್ಲದಿರಲಿ ಇದಿಲ್ಲದಿರಲಿ ಎಂದಂತೂ ಮೊದಲೇ ಕೇಳುವುದಿಲ್ಲ. "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವ ವೀರನೂ ಅಲ್ಲ" ಬೇಕಾದ್ದ ಬೇಕಾದೆಡೆಯಿಡುವ ಸೃಷ್ಟಿಶಕ್ತಿಯ ಬಾರದ್ದ ಬಾರದೆಡೆಯಿಡದ ದೃಷ್ಟಿವಿವೇಕವ ಬಳಸಲರಿಯದೆ ಮತ್ತೊಂದಕೆ ಗೆಂಜುವ ಹಲ್ಲು ಶೂರನದೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಕವಿತೆಯ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ. ತನ್ನ ರಕ್ತಮಾಂಸದೆ ಮೈದಳೆದ ಕವಿತೆಗೆ ಅವರ ಸತ್ವ, ಇವರ ಸತ್ಯ, ಅವರ ಹೃದಯ, ಇವರ ಮಿದುಳು
ಇನ್ನೊಬ್ಬರ ರಕ್ತ ಸಿಕ್ತ ಬಟ್ಟೆ ತಿರಿತಂದು ತೊಡಿಸಿ ಮೆರೆಸುವ ತಿರುಪ ತನಗೆಂದೂ ಬಾರದಿರಲಿ. ಗಾಂಧಿ ಬುದ್ಧ ಬಸವ ಅಲ್ಲಮರ, ಇಸಾಯಿ ಪೈಗಂಬರರ ಸತ್ವ ಕವಿತೆಯಲ್ಲಲ್ಲ, ಅದು ಹುಟ್ಟುವ ಮಣ್ಣಿನಲ್ಲಿ ತುಂಬಲಿ ಇರುವುದಿಲ್ಲದ ಅಲ್ಲದ್ದು ಮೊಳೆತ ಅಷ್ಟಾವಕ್ರವ ಹುಟ್ಟುವ ಮೊದಲೇ ಹೂತು ಮತ್ತೊಂದ ನೇಯುವ ಕಸುವಿರದವ ಕವಿಯೇ ಅಲ್ಲ
ವಿಸೂ: ಇದೊಂದು ಪದ್ಯವಲ್ಲ (ಕಾವ್ಯ ಮೊದಲೇ ಅಲ್ಲ), ಪದ್ಯದ ಕೌದಿ ಹೊದ್ದ ಗದ್ಯ ಎಂದು ಈ ಮೂಲಕ ದೃಢೀಕರಿಸುತ್ತೇನೆ. ಹಾಗೆಂದ ಮಾತ್ರಕ್ಕೆ ಇದನ್ನು ಯಾವುದೇ ಪಠ್ಯಪುಸ್ತಕದಲ್ಲಿ (ಕದ್ದಾದರೂ) ಅಳವಡಿಸಲು ನನ್ನ ಅನುಮತಿಯಿಲ್ಲವೆಂದೂ ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಮತ್ತಿದನ್ನು ಯಾರ ಕೋರಿಕೆಯೂ ಇಲ್ಲದೇ ನಾನಾಗಿಯೇ ಸ್ವಯಿಚ್ಛೆಯಿಂದ ಇಲ್ಲಿ ಪ್ರಕಟಿಸುತ್ತಿದ್ದೇನಾದ್ದರಿಂದ ನನ್ನ ಬರಹಕ್ಕೆ ನಾನೇ ಕಾರಣವೆಂದೂ ಇದಕ್ಕಾಗಿ ಬೇರಾರನ್ನೂ ದೂರಬಾರದೆಂದೂ ಈ ಮೂಲಕ ವಿನಂತಿಸುತ್ತೇನೆ.

Wednesday, February 19, 2020

ಅಡಿಗರ ನೆನಕೆ



















ಇಲ್ಲ, ನೀವು
ಅರ್ಥವಾಗುವುದಿಲ್ಲ.

ತೋಳಬಂದಿಯ ಲಲ್ಲೆಮಾತ ಕನಸಿನ ನಡುವೆ
ತೋಳದೂಳನು ಕೇಳಿ ಬೆಚ್ಚಿದವರು;
ಕಾಣದಾವುದೊ ಕರೆಯ, ಕೇಳದಾವುದೊ ತೆರೆಯ
ಭೋರ್ಗರೆತಕೋಗೊಟ್ಟು ತೆರಳಿದವರು.

ಅಡಿಗರೆಂದರೆ ಬಡಿಗೆ!
ಅಡುಗೆತುಂಬಿದ ಗಡಿಗೆ-
ಯೊಡೆದು,
ಚೆಲ್ಲಾಪಿಲ್ಲಿ ಚೆಲ್ಲಿದನ್ನವ ಭುವಿಗೆ
ಬಿತ್ತಿ ಬಿತ್ತಿ ಮತ್ತೆ ಭತ್ತ ಬೆಳಕೊಂಡವರು.

ಬೆಳಬೆಳೆಸಿ ಚಾಚಿ ಮೂಗನು ಮೈಲುದ್ದ
ನೇಗಿಲಿನಂತೆ,
ಉದ್ದೋ ಉದ್ದ
ಉತ್ತು ಕೆತ್ತುತ ಭೂಮಿ-
ಗೀತ ಹಾಡಿಸಿದವರು;
ಕಾಲುವೆಯ ಬಗೆದು
ಸಾಗರವನೇ ಮೊಗೆಮೊಗೆದು
ಹಿಮಗಿರಿಯ ಕಂದರವ ತುಂಬಿದವರು.

ಪ್ರಾಸಲಯವೃತ್ತಗಳ ಮುರಿದು, ಶೀಷೆಯನೊಡೆದು
ಕರಗಿ ಗಾಳಿಗೆ ಸಲುವ ಕಾವ್ಯಜೀವವ ಪಿಡಿದು
ನಿರ್ಬಂಧಬಂಧದೊಳು ನಿಲಿಸಿದವರು.
ನೀರಿನಿತೂ ಸೋಂಕಿಸದ ಗಡಿಗೆಗಟ್ಟಲೆ ಗಟ್ಟಿ
ಗರಣೆಮೊಸರಿನ ಎಡೆಯ ಸಲಿಸಿದವರು;
ಜೀರ್ಣಕ್ಕೆ,
ಏಳು ಕೆರೆಗಳ ನೀರ ಕುಡಿಸಿದವರು.

ಪ್ರಜ್ಞೆಯಾಳದ ಕುರುಡುಗತ್ತಲೆಯ ಪಾತಾಳ-
ಕಿಳಿಸಿ
ಪಾತಾಳಗರಡಿ,
ನೆಳಲೊಡನೆ ಜೋಲುತಿಹ ನೂರೆಂಟು ಭೂತಗಳ
ಸೆಕ್ಕಿ ಕೊಕ್ಕೆಗೆ, ರಂಗಕೆಳೆತಂದು,
ಹಚ್ಚಿ ಬಣ್ಣದವೇಷ,
ಧೀಂಕು ಧೀಂಕಿಟಗುಡುತ
ಚಂಡೆಮದ್ದಳೆ ಲಯಕೆ ಕುಣಿಸಿದವರು.

ಅರ್ಥವಾದೀರಿ ಹೇಗೆ?
ರಾಜರಸ್ತೆಯ ನೆಚ್ಚಿ ನಡೆಯದವರು?
ಮೊಸರ ಹೆಸರಲಿ ನೀರ ಕುಡಿಯದವರು?

ನೀವಂದು ಬೇಡೆಂದ ರಾಜರಸ್ತೆಗಳೀಗ
ಪಯಣಿಗರ ಕಳಕೊಂಡು ಕಾಡಾಗಿವೆ
ಹುಚ್ಚು ಹೂ, ಜೇನು ಹಲಸುಗಳ ಸಮೃದ್ಧಿಯಲಿ
ಬನದ ಕರಡಿಗಳಲ್ಲಿ ಮನೆಮಾಡಿವೆ
ನವ್ಯಚಿಂತನೆಯಿರದ ಪೆದ್ದು ಪರಪುಟ್ಟಗಳು
ತಾರಪಂಚಮದಲ್ಲಿ ಪಲುಕುತ್ತಿವೆ
ನವಿಲೊಡನೆ ಕುಣಿವ ಕೆಂಬೂತಗಳು ಕೋತಿಗಳು
ವಾನಪ್ರಸ್ಥವ ಹಿಡಿದು ಹಾಯಾಗಿವೆ.

ಪ್ರಜಾರಸ್ತೆಗಳು?
ಕಾಡ ಸವರಿ, ಬೆಟ್ಟವೇರಿ
ಬಿಟ್ಟು ಹತ್ತುದಿಕ್ಕಿಗು ಕಣ್ಣುಕಣ್ಣು -
ನೀವು ಕೆತ್ತಿಟ್ಟು ಹೋದವು;
ಸವೆಸವೆದು, ಅವೇ ಈಗ ಅಫಿಶಿಯಲ್ ರಾಜರಸ್ತೆಗಳು!

ರಾಜತ್ವದ ವ್ಯಾಖ್ಯೆಯಿಂದು ಬದಲಾಗಿದೆ -
ಈಗ ರಾಜನೆಂದರೆ ಪ್ರಜೆ, ಪ್ರಜೆಯೆಂದರೂ ಪ್ರಜೆ;
ಪ್ರಭುತ್ವ
ದಂಡವೀಗ ನಮ್ಮ ಕೈಯಲ್ಲಿ -
ಅದು ಲೇಖನಿಗಿಂತ ಹರಿತ,
ಒಮ್ಮೆ ಸಾಣೆ ಹಿಡಿಸಿದರೆ ಸಾಕು
ಮುಂದಿನೈದು ವರ್ಷಕೆ ಚಿಂತೆಯಿಲ್ಲ;
ಮನಬಂದಂತೆ ಕೆತ್ತಬಹುದು, ಕುತ್ತಬಹುದು
ಕೊಚ್ಚಬಹುದು, ಸೀಳಬಹುದು, ಹೂಳಬಹುದು.

ಕಂದರವೇನು ಹಿಮಗಿರಿಯ ತಾತನ ಗಂಟೇ?
ಆ ಗಿರಿಯನೀಗ ಕಡಿದು ಕಂದರಕೆ ತುಂಬಿ,
ತಗ್ಗುತೆವರಿಲ್ಲದಂತೆ ಸಪಾಟು ಮಾಡಿದ್ದೇವೆ,
ಸರ್ವಸಮತಾಭಾವ ಮೆರೆದಿದ್ದೇವೆ.
"ಸಮತ್ವಂ ಯೋಗಮುಚ್ಯತೇ" -
ಯೋಗಾಸನಾಚಾರ್ಯರಿಗೆ ಕರೆಯ ಕಳಿಸಿದ್ದೇವೆ.

ಸಪಾಟಿದ್ದಲ್ಲಿ?
ಹೊಸ ಕಂದರವನಗೆದಿದ್ದೇವೆ
ಹೆಜ್ಜೆಯಿಟ್ಟರೆ
ಲಾಗ -
ಲಾಗವೆ ಯೋಗ;
ಲಾಗಾಯಿತಿನ ಕಲೆಗೆ ಎಡೆಯೊದಗಿಸಿದ್ದೇವೆ;
ಹೆಜ್ಜೆಹೆಜ್ಜೆಗು ಈಗ
ಭಂಗೀಜಂಪಿನ ಥ್ರಿಲ್ಲು,
ಎಲ್ಲೆಲ್ಲು.

ನೀವೇ ನೀಡಿದ್ದು,
ನಮ್ಮ ದಾರಿ ನಾವೇ ಕಂಡುಕೊಳ್ಳುವ ದೀಕ್ಷೆ -
ಕಾಡ ಸವರುವ ದೀಕ್ಷೆ ಗುಡ್ಡ ಕಡಿಯುವ ದೀಕ್ಷೆ -
ಅದು ಬೇರೆ ದೀಕ್ಷಿತರದ್ದು,
ಅವರಿಗೀಗ ಅಗೆದಷ್ಟು ಚಿನ್ನ, ಬಗೆದಷ್ಟು ಬಣ್ಣ!
ದಾರಿಯ ತೆವಲು ಅವರದಲ್ಲ.
ದಾರಿದೀಕ್ಷೆಯ ನಮಗೋ,
ಸವರಲು ಕಾಡುಗಳಿಲ್ಲ, ಕಡಿಯಲು ಗುಡ್ಡಗಳಿಲ್ಲ.
ಕಾಣುವುದು ಹೇಗೆ ಹೊಸ ದಾರಿಯನ್ನ?
ಇಲ್ಲೋ, ಮುಟ್ಟಿದ್ದಕ್ಕೆ ಪರ್ಮಿಟ್ಟು, ಹಿಡಿದದ್ದೇ ಬಕೆಟ್ಟು.

ನಿಮ್ಮದೇ ದಾರಿಯಲ್ಲಿ ನಡೆಯೋಣವೆಂದರೆ
ಅದೀಗ ಸವೆದು ಸವೆದು ರಾಜಾರಸ್ತೆಯಾಗಿದೆ.
ತಂತಮ್ಮ ಮೂಗಿನಳತೆಯ
ಅಳತೆಗೋಲುಗಳು, ಕೋಲುಗಳು
ಮೈಲುಗಲ್ಲುಗಳು, ಗಲ್ಲುಗಳು
ಇಲ್ಲೂ ಬಂದಿವೆ.
ಕುಳಿಬಿದ್ದ ರಸ್ತೆಗಳು
ತಲೆ ಗಿರ್ರೆನಿಸುವ,
ಎಲ್ಲೋ ಹೊಕ್ಕು ಇನ್ನೆಲ್ಲೋ ಹೊರಳುವ
ಗೊಂದಲದ ಸಂದುಗೊಂದುಗಳು
ಒಮ್ಮೆ ಜಾಮ್ ಆಯಿತೋ -
ಗಂಟೆಗಟ್ಟಲೆ ಒಳಕಟ್ಟುಗಳು ಸಡಿಲುವುದೇ ಇಲ್ಲ
ಹೊಟ್ಟೆಯುಬ್ಬರಿಸಿದರೂ, ಅಬ್ಬರಿಸಿದರೂ ಪ್ರಜ್ಜೆ
ಅಮಿಕ್ಕೊಂಡು ಕಾಯುವುದೇ ಲಕ್ಷಣ,
ರಸ್ತೆ ತೆರೆಯುವವರೆಗೆ;
ಕಾಯುವಿಕೆಗಿಂತನ್ಯ ತಪವು ಇಲ್ಲ.

ಪ್ರಜಾರಾಜ್ಯರಸ್ತೆಯಲ್ಲಿ
ಗಾಡಿಯೋಡಿಸುವ ಲೈಸೆನ್ಸೇ?
ಛೇ, ಎಂತಹ ಪ್ಯಾಸಿಸ್ಟ್ ಮನೋವೃತ್ತಿ!
ತಗೋ ಗಾಡಿ,
ನುಗ್ಗು -
ಎಡಕೂ ಬಲಕೂ ನಡಕೂ!
ಹಿಂದಿನಿಂದಲೂ ಹೊಡೆ
ಮುಂದಿನಿಂದಲೂ.
ದಿನಕೆರಡು ಢಿಕ್ಕಿ, ಕ್ಷಣಕ್ಕೆರಡು ಅಪಘಾತ
ನಿದ್ದೆಗೊಮ್ಮೆ ನಿತ್ಯಮರಣ,
ನಿಮ್ಮ ರಾಜರಸ್ತೆಗಳಲ್ಲಿ.
ಹಾಗೂ ನಿಮ್ಮ ರಸ್ತೆ ಹಿಡಿದೆವೆಂದುಕೊಳ್ಳಿ,
ನೀವೇ ತೊಡಿಸಿದ ದೀಕ್ಷೆಯುಳಿದೀತೆ ಹೇಳಿ.

ಅದಕೇ ನಾವೀಗ ಆಕಾಶದವಕಾಶವನ್ನಗೆದು
ಹೊಸ ರಸ್ತೆ ಮಾಡಬೇಕೆಂದಿದ್ದೇವೆ.
ಪರ್ಮಿಟ್ಟಿಗೆ ಅರ್ಜಿ ಹಾಕಿದ್ದೇವೆ
ದಿನ ಗೊತ್ತು ಮಾಡಲು
ನವೋನವ್ಯದ ಪುರೋಹಿತರಿಗೆ ಕರೆಹೋಗಿದೆ

ಇದೊಂದಕಾದರೂ ದೀಕ್ಷೆ ಮೀರುತ್ತೇನೆ,
ನಿಮಗೆ ನಮನವ ನಿಮ್ಮ ಶೈಲಿಯಲ್ಲೇ ಮಾಡುತ್ತೇನೆ
ಆಶೀರ್ವದಿಸಿ ಹಿರಿಯರೇ!
ಇದು ನಮನವೋ ವಮನವೋ, ಕವನವೋ ಕದನವೋ
ಎಂಬ ಒಣಜಿಜ್ಞಾಸೆ ನನ್ನದಲ್ಲ
(ಅದು ನಿಮ್ಮದೂ ಆಗಿರಲಿಲ್ಲ);
ಸಾಲುಸಾಲುಗಳಲ್ಲಿ ನೀವಿದ್ದೀರೆಂದು ಬಲ್ಲೆ
ಅಷ್ಟು ಸಾಕಿಂದಿಗೆ,
ನಿಮ್ಮ ನೆನಪಿಗೆ.
ನಮಸ್ಕಾರ.

Saturday, August 11, 2018

ಬೆಳಕಿನ ಹಾಡು (ಸಂ: ಕಾಂತಿಕಾವ್ಯಮ್) - ನವೀನ ಗಂಗೋತ್ರಿಯವರ ಅನುವಾದ

ವಿದ್ವನ್ಮಿತ್ರರಾದ ಶ್ರೀ Naveen Gangotriಯವರು, ದೀಪಾವಳಿಯನ್ನು ಕುರಿತ ನನ್ನ "ಬೆಳಕಿನ ಹಾಡು" ಪದ್ಯವನ್ನು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. ಈಗ್ಗೆ ಮೂರುವರ್ಷದ ಹಿಂದಿನ ಅನುವಾದವಿದು, ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ್ದೆ, ಕಳೆದುಹೋಗಬಾರದೆಂದು ಇಲ್ಲಿ ಸೇರಿಸಿಡುತ್ತಿದ್ದೇನೆ (ನನ್ನ ಮೂಲಪದ್ಯದ ಕೊಂಡಿ ಇಲ್ಲಿದೆ) 

ಪುಟ್ಟ ಕುಟುಂಬವೊಂದರ typical ಹಬ್ಬದ ಸಂಭ್ರಮವನ್ನು ಮನೆಮಟ್ಟಿನ ಭಾಷೆಯಲ್ಲಿ ಚಿತ್ರಿಸುವ ಈ ಕವನವು ಸಂಸ್ಕೃತದಂಥಾ ಔಪಚಾರಿಕ, ಗ್ರಾಂಥಿಕ ಭಾಷೆಯಲ್ಲಿ ಇಷ್ಟು ಸೊಗಸಾಗಿ ಬರಬಹುದೇ ಎಂಬ ಬೆರಗು ನನ್ನದು! Falling in love all over again ಅಂತಾರಲ್ಲಾ, ಹಾಗೆ ನನ್ನ ಪದ್ಯದೊಡನೆ ನಾನೇ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದೇನೆ

ಅವರೇನೋ ಇದನ್ನು ಭಾವಾನುವಾದವೆಂದು ಹೇಳಿಕೊಂಡಿದ್ದಾರೆ, ಭಾವಾನುವಾದವೆಂದರೆ ಕೇವಲ ಸಾರಭೂತವಾದ, ಸಂಗ್ರಹಾನುವಾದವೆಂಬ ನಂಬಿಕೆಯಿರುವಾಗ ಇದಂತೂ ಪದಶಃ ಅಕ್ಷರಶಃ ಭಾವಾನುವಾದವೇ! ಮೂಲಪದ್ಯದ ಒಂದೊಂದು ಪದದ ಭಾವವನ್ನೂ ಗ್ರಹಿಸಿ ಅದನ್ನು ಯಥಾವತ್ತಾಗಿ ಸಂಸ್ಕೃತದಲ್ಲಿ ಮೂಡಿಸುವುದಲ್ಲದೇ ಅಕ್ಷರಗಳ ನಾದವನ್ನೂ ಕೂಡಿದಮಟ್ಟಿಗೂ ಹಿಡಿದಿಡುವ ಪ್ರಯತ್ನವನ್ನು ಇಲ್ಲಿನ ಒಂದೊಂದು ಸಾಲಿನಲ್ಲೂ ಕಾಣಬಹುದು. ಈ ಪುನಸೃಷ್ಟಿ ಕೇವಲ ಭಾಷಾಪಟುತ್ವದಿಂದ ಆಗುವಂಥದ್ದಲ್ಲ - ಒಬ್ಬ ಸ್ವತಃ ಕವಿಗಷ್ಟೇ ಸಾಧ್ಯವಾಗುವ ಕೆಲಸವೆಂಬುದು ನನ್ನ ಅನಿಸಿಕೆ! ಈ ಪ್ರಯತ್ನದಲ್ಲಿ ಇವರು ಸೃಷ್ಟಿಸುವ ಉಜ್ವಲ ಸಮಸ್ತಪದಗಳು; ಪದ್ಯದ ಉತ್ಸಾಹವರ್ಧನೆ-ಪ್ರಶಮನಗಳಿಗಾಗಿ ಮೂಲದಲ್ಲಿ ಬಳಸಿರುವ "ರಗಳೆ" ಛಂದಸ್ಸಿನ ವಿವಿಧ ಪ್ರಭೇದಗಳಿಗನುಗುಣವಾಗಿ ಅರ್ಥಪೂರ್ಣವಾಗಿ ಬಳಸುವ, ಅವೇ ಭಾವಗಳನ್ನು ಬಿಂಬಿಸುವ ಛಂದಸ್ಸುಗಳು - ಇವು ಬಹಳ ಖುಷಿಕೊಡುವಂಥದ್ದು.

ಮೂಲದ ಭಾವಮುದ್ರೆಯು ಸಂಸ್ಕೃತದ ಭಾಷೆ-ಲಯಗಳಲ್ಲಿ ಸಂಸ್ಕೃತದ ಸ್ವಭಾವಗೌರವಗಳಿಗೆ ತಕ್ಕಂತೆ ಸೊಗಸಾಗಿ ಒಡಮೂಡಿವೆ. ಕೆಲವೆಡೆಯಂತೂ ಅನುವಾದವು ಮೂಲವನ್ನು ಮಿಂಚಿ ನಿಂದಿವೆ. ಉದಾಹರಣೆಗೆ, "ಪ್ರಭಾವಲೀಪೂರ್ಣಸುದೀಪರಾಜಃ" ಎಂಬ ಭಾಗ. ಚುಕ್ಕಿ ಬೆಳಕ ಚೆಲ್ಲುವಲ್ಲಿ, ಹಕ್ಕಿ ಹಾಡು ಮೂಡುವಲ್ಲಿ ತನ್ನ ಹೊಳೆವ ಮೈ ಮುರಿಯುತ್ತಾ ಎದ್ದದ್ದು ಯಾವುದು? ದೀಪಗಳರಾಜನಾದ ದೀಪಾವಳಿಯೇ. ಹೊಳೆವ ಮೈಯಿನ ಬೆಳಕಿನ ಹಬ್ಬ ಎಂಬ ದೇಸೀ ಭಾವನೆಯು ಸಂಸ್ಕೃತದ ಗಾಂಭೀರ್ಯದಲ್ಲಿ "ಪ್ರಭಾವಲೀಪೂರ್ಣ ಸುದೀಪರಾಜ"ನಾಗಿದೆ - ಅಷ್ಟೇ ಅಲ್ಲ; ಆ ಬೆಳಗಿನ ಜಾವದಲ್ಲಿ ದಿನನಿತ್ಯವೂ ಎದ್ದು ಝಗಝಗಿಸುವವನು ಪ್ರಚಂಡಪ್ರಭನಾದ ದೀಪಗಳ ರಾಜ ಸಾಕ್ಷಾತ್ ಸೂರ್ಯನೇ. ಆ ರೀತಿಯಲ್ಲೂ "ಪ್ರಭಾವಲೀಪೂರ್ಣ ಸುದೀಪರಾಜ" ಎಂಬ ಪ್ರಯೋಗ ಸಾರ್ಥಕವಾಗಿದೆ. ಮೂಲದಲ್ಲಿಲ್ಲದ ಶ್ಲೇಷೆಯಿದು. ಹಾಗೆಯೇ ಮತ್ತೊಂದು ಕಲ್ಪನೆ, ""ಸಮಂತತಃ ಕಿಂ ವಿಗುಣೀಕೃತಾದ್ಯುತಿಃ ಸುಸಪ್ತವರ್ಣಾಂಚಿತಶಕ್ರಧನ್ವನಾ" ಎಂಬ ಭಾಗದ್ದು. "ಏಳುಬಣ್ಣದಿಂದ್ರಚಾಪ ಬೆಳಕ ಸೆಳೆದು ಬಿಟ್ಟಿತೇಂ" (ಏಳುಬಣ್ಣದ ಇಂದ್ರಚಾಪವು ಬೆಳಕಿನ ಬಾಣ ಬಿಟ್ಟಿತೇ) ಎಂದು ನಾನು ಕಲ್ಪಿಸಿದ್ದರೆ, ಅನುವಾದಕರು ಬೆಳಕನ್ನೇ ಹುರಿಮಾಡಿ ಇಂದ್ರಚಾಪಕ್ಕೆ ಕಟ್ಟಿಬಿಟ್ಟಿದ್ದಾರೆ (ಸಮಂತತಃ ಕಿಂ ವಿಗುಣೀಕೃತಾದ್ಯುತಿಃ - ಗುಣ = ಹುರಿ).

ಹಾಗೆಯೇ "ಬಂದಳಿವಳು ಸರಸರ; ಚಂದವವಳ ಸಡಗರ" ಎಂಬಲ್ಲಿನ ’ಇವಳು’ ಎಂಬ ತುಸು ನಾಚಿಕೆಯ ಸಂಕೋಚದ ವಿಶೇಷಾರ್ಥ ಸಂಸ್ಕೃತದಲ್ಲೂ ಎಷ್ಟು ಮುದ್ದಾಗಿ ಒಡಮೂಡಿದೆ ನೋಡಿ ("ಸಾಕ್ಷಾದಿಯಂ ಸಂಭ್ರಮತಃ ಸಮಾಗಾತ್"). ಇಯಂ ಎಂಬ ಸಂಸ್ಕೃತದ ಸಾಮಾನ್ಯ ಸರ್ವನಾಮಕ್ಕೆ ಕನ್ನಡದ ’ಇವಳು’ ಎಂಬ ವಿಶೇಷಾರ್ಥವು ಸಂಸ್ಕೃತಸಾಹಿತ್ಯದಲ್ಲಿದೆಯೋ ಇಲ್ಲವೋ ತಿಳಿಯದು, ಆದರೆ ಈ ಶ್ಲೋಕವನ್ನೋದುವ ಕನ್ನಡಿಗರಿಗೆ ಮಾತ್ರ ಸಂಭ್ರಮದಿಂದ ಬರುವ ’ಇವಳು’ ಕಣ್ಣಿಗೆ ಕಟ್ಟುವುದಂತೂ ಖಂಡಿತ. ಇನ್ನು ಅಪ್ಪಟ ಕನ್ನಡ ಪದಗಳಾದ ಸುರುಬತ್ತಿ, ಚಕ್ಕುಲಿ, ಪುಳಿಯೋಗರೆ, ಕೋಸಂಬರಿ, ಒಬ್ಬಟ್ಟುಗಳು ಸಂಸ್ಕೃತದ ಜಾಯಮಾನಕ್ಕೆ ಭಂಗತರದೇ ಸುರ್ಸುರುಶಬ್ದಕುಂಡ, ಶಷ್ಕುಲೀ, ಪುಲೀಯೋಗಾರ, ಕೋಸಂಬರಿ, ಓಬ್ಬಟ್ಟುಗಳಾಗಿ ಅನುವಾದದಲ್ಲಿ ಒಡಮೂಡಿವೆ.

ನನ್ನ ಕವನವೊಂದಕ್ಕೆ ದೊರೆತ ಅತ್ಯುತ್ತಮ ಮೆಚ್ಚುಗೆಯಾಗಿ ನಾನಿದನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಇಂಥದ್ದೊಂದು ಅದ್ಭುತ ಅನುವಾದಕ್ಕಾಗಿ ಶ್ರೀ ನವೀನರಿಗೆ ಧನ್ಯವಾದವನ್ನು ಸೂಚಿಸುತ್ತಾ, ಮೂಲವನ್ನೂ ಅನುವಾದವನ್ನೂ ಒಟ್ಟಿಗೇ ಸವಿಯಲು ಅನುವಾದವಾಗುವಂತೆ ಎರಡನ್ನೂ ಒಟ್ಟಿಗೇ ಇಲ್ಲಿ ಪ್ರಕಟಿಸುತ್ತಿದ್ದೇನೆ:

ಬೆಳಕಿನ ಹಾಡು (ಸಂ: ಕಾಂತಿಕಾವ್ಯಮ್)
========================
ಚುಕ್ಕಿ ಬೆಳಕ ಚೆಲ್ಲುವಲ್ಲಿ
ಹಕ್ಕಿ ಹಾಡು ಮೂಡುವಲ್ಲಿ
ಕತ್ತಲೊಡನೆ ತೆಕ್ಕೆಬಿದ್ದು
ಎತ್ತಲಾಗೊ ಹೊರಳುತಿದ್ದ
ಬೆಳಕ ಹಬ್ಬವೆದ್ದಿತೈ
ಹೊಳೆವ ಮೈಯ ಮುರಿದಿತೈ

>> ತತಃ ಸುತಾರಾಗಣಮುಕ್ತಭಾಭಿಃ ಶಕುಂತಿಶಬ್ದಾಯಿತಸುಪ್ರಭಾತೇ
>> ತಮೋ ವಿನಿಘ್ನನ್ನುದತಿಷ್ಠದೇಷಃ ಪ್ರಭಾವಲೀಪೂರ್ಣಸುದೀಪರಾಜಃ ||೧||

ಒಳಗೆ ಬಚ್ಚಲಲ್ಲಿ ನೀರು
ಮರಳಿ ಮರಳಿ ಕುದಿವ ಜೋರು
ಕಾದ ಎಣ್ಣೆ ಸೌಟ ಹಿಡಿದು
ಸೀದ ಜಗುಲಿಯೆಡೆಗೆ ನಡೆದು
ಬಂದಳಿವಳು ಸರಸರ
ಚಂದವವಳ ಸಡಗರ

>> ಸ್ನಾನಾಲಯೇ ತತ್ರ ಜಲಂ ವಿದುನ್ವತ್ ಕ್ವಥನ್ನದತ್ತಚ್ಚ ರವಂ ತನೋತಿ
>> ಹಸ್ತಸ್ಥಿತೋಷ್ಣೀಕೃತತೈಲಪಾತ್ರಾ ಸಾಕ್ಷಾದಿಯಂ ಸಂಭ್ರಮತಃ ಸಮಾಗಾತ್ ||೨||

ಕೈಯನೆತ್ತಿ ತಲೆಯ ಸುತ್ತಿ
ಮೈಯ ಸವರಿ ಮೊಗವನೊತ್ತಿ
ಕಾದ ಎಣ್ಣೆ ಸುಡಲು ನೆತ್ತಿ
ಆಹ ಬಡಿಯೆ ಕೈಯನೆತ್ತಿ
ಉಜ್ಜುತಿರಲು ಗಸಗಸ
ತೋರುತಿತ್ತು ಗರಗಸ

>> ಚಲತ್ಕರಾಭ್ಯಾಮಭಿಲೇಪಯಂತೀ ತೈಲೇನ ಕಾಯಂ ಮುಖಮುತ್ತಮಾಂಗಮ್
>> ಮಾಽಕಾರಯತ್ ಸಾ ಸುಖಿತಂ ಪ್ರಸನ್ನಂ ಹಿತೋಷ್ಣಸಂವೇದನದಾನಶೀಲಾ ||೩||

ಕುದಿವ ನೀರ ಮೈಯಿಗೆರಚಿ
ಅಯ್ಯೊ ಬೇಡವೆಂದು ಅರಚಿ
ಕಣ್ಣ ತುಂಬ ತುಂಬಿ ಸೀಗೆ
ಆಗಬಹುದೆ ಇಂದು ಹೀಗೆ
ಕೊನೆಗು ಬಂತೆ ಬಿಡುಗಡೆ
ಆಹ ಎಂಥ ನಿಲುಗಡೆ!

>> ತಪಜ್ಜಲಂ ಜೀವಮಿಮಂ ಹಿನಸ್ತಿ ಕ್ರಂದನ್ನಹೋ ಸೋಢುಮಥಾಸ್ತಿ ಕೋ ಹಿ
>> ಫೇನಾವಲಿಪ್ತೇ ನಯನೇ ದ್ರವೇತೇ ಮುಕ್ತಿಸ್ಸಮಾಯಾಚ್ಚ ಕಥಂಚಿದಂತೇ || ೪ ||

ಹೊಸತು ಬಟ್ಟೆ ಹೊಸತು ಹೂ
ಹೊಸತು ಗಂಧ ಎಂಥ ಚಂದ
ಹೊಸತು ಬೆಳಕು ಬಣ್ಣ ಬಿಳುಪು
ಕಣ್ಣುಗಳಲಿ ಹೊಳೆವ ಹೊಳಪು
ನಮಿಸಿ ದೇವ ದೇವಗೆ
ಗಮನವಾ ಪಟಾಕಿಗೆ

>> ವಾಸೋ ನವಂ ತತ್ಸುಮನಂ ನವೀನಂ ಗಂಧೋ ನವೋ ನೂತನಮಸ್ತಿ ತೇಜಃ
>> ನಮನ್ತತೋನಾಥಮನಾಥಪಾಲಂ ಲೀಲಾಸ್ಫುಟತ್-ಸ್ಫೋಟಕಮಾದದಾತಿ || ೫ ||

ಮಗನಿಗಾ ಪಟಾಕಿ ಕೇಪು
ಒಳಗೆ ನಡುಗಿ ಕಿರುಚೆ ಪಾಪು
ಇವಳಿಗೆ ಸುರುಬತ್ತಿ ಕುಂಡ
ಬಾಣ ಬಿರುಸು ಬರಿಯ ದಂಡ
ಸಮಯವೀಗ ಊಟಕೆ
ಸಗ್ಗದ ರಸದೂಟಕೆ

>> ಉಚ್ಚೈಃ ಶಿಶುಃ ಕ್ರಂದತಿ ಶಬ್ದಭೀತಃ ಸುಪುತ್ರಕೇ ಫೋಟರತೇ ಬಹಿಷ್ಠೇ
>> ಅಸ್ಯಾಯಿದಂ ಸುರ್ಸುರುಶಬ್ದಕುಂಡಂ ಕಾಲಃ ಸಮೇತಃ ಪರಿಪಾತುಮತ್ತುಮ್ ||೬ ||

ಪಾಯಸ ಪುಳಿಯೋಗರೆ ಗೊಜ್ಜುಗಳೇನ್
ರಾಯತ ಕೋಸಂಬರಿ ಪಲ್ಯಗಳೇನ್
ಬಾಯೊಳು ನೀರೊಡೆಸುವ ಚಕ್ಕುಲಿಯೇನ್
ಕಾಯೊಬ್ಬಟ್ಟಿನ ಗಮಗಮ ಕಂಪೇನ್
ರಾಯನಡುಗೆಯೇಂ ಸಮನೆ ಇದಕೆ ಪೇಳ್
ಬಾಯ ತುಂಬ ನೀಂ ತಿಂದುಣ್ಣುತ ಬಾಳ್

>> ಆಯಾಸಾಪಗಮಪ್ರಸಿದ್ಧವಿಫುಲಾನನ್ನಾದಿಕಾನಾದರಾತ್
>> ಪಲ್ಯಾದೀನಥಶಷ್ಕುಲೀಪರಿಯುತಂ ತದ್ರಾಜತಂ ರಾಯತಮ್
>> ಲಾಲಾಗ್ರಂಥಿವಿಭೇದಪೇಶಲಪುಲೀಯೋಗಾರಕೋಸಂಬರೀಮ್-
>> ಓಬ್ಬಟ್ಟಾದಿಸುರಾಜಸಗ್ಧಿಸಮಗಾನ್ ಭುಕ್ತ್ವಾ ರಮಸ್ವಾಧುನಾ ||೭||

ಹಗಲಿನ ಕೊನೆಗಿರಣಗಳಾಡುತಿರಲ್
ಹೆಗಲಿನ ಭಾರವ ರವಿ ಕೊಡವುತಿರಲ್
ಬೆವರಿದನೆನೆ ಹನಿಯೆರಡುದುರುತಿರಲ್
ಅವನಿಯ ಮೇಲ್ಕತ್ತಲೆ ಸೆರಗಿಕ್ಕಲ್

>> ದಿಗಂತವಿಶ್ರಾಂತರವಿಂ ಕೃತಶ್ರಮಮ್ ದಿನಾಂತಕಾಲೇ ಕಿರಣಾ ವ್ಯಭೂಷಯನ್
>> ತದಂಗತೋ ತೋಯಕಣಾ ಪತಂತ್ಯಮೀ ಸ್ವವಾಸಸಾ ರಾತ್ರಿರಿಳಾಮವಾರಯತ್ ||೮ ||

ಓಹೊ ಬೆಳಕು ಹರಿಯಿತೇಂ
ಬಾನು ಬಣ್ಣ ತಳೆಯಿತೇಂ
ಏಳುಬಣ್ಣದಿಂದ್ರಚಾಪ
ಬೆಳಕ ಸೆಳೆದು ಬಿಟ್ಟಿತೇಂ

>> ಅಹೋ ವಿಭಾಭಾಸಿತಭೂರಭೂದಿಯಂ ನಭೋಭವದ್ವರ್ಣಚಯಾನುಲೇಪಿತಮ್
>> ಸಮಂತತಃ ಕಿಂ ವಿಗುಣೀಕೃತಾದ್ಯುತಿಃ ಸುಸಪ್ತವರ್ಣಾಂಚಿತಶಕ್ರಧನ್ವನಾ ||೯ ||

ಹಳದಿ ಕೆಂಪು ಹಸಿರು ನೀಲಿ
ಬಿಳುಪ ಬಸಿರ ಸೀಳಿ ಸೀಳಿ
ತಮದ ಮಹಾಭಿತ್ತಿಯಲ್ಲಿ
ಗಮನಸೆಳೆವ ರಂಗವಲ್ಲಿ
ಸುರರ ಕಲ್ಪತರುವೆ ಹಿಗ್ಗು
ತರಳಿ ಹೂವ ಬಿಟ್ಟಿತೇಂ
ಮನದಿ ಮನೆಯ ಕಟ್ಟಿತೇಂ
ಮನದ ಕದವ ತಟ್ಟಿತೇಂ

>> ಸಿತಶ್ರಿಯೋ ನಿಷ್ಕ್ರಮಿತಾ ಕ್ರಮಾದಿಮೇ ಸಿತೇತರಾ ಲೋಹಿತಪೀತನೀಲಕಾಃ
>> ಸ ಕಲ್ಪವೃಕ್ಷೋ ಕಿಮು ಪುಷ್ಪಿತಃ ಸ್ವತೋ ತಮಸ್ಸುರಾರಾಜಿತರಾಗರಂಜನಾತ್ ||೧೦||

ಮಂದಾನಿಲ ತಣ್ಣಗೆ ಬೀಸುತಿರಲ್
ಸುಂದರ ಕನಸೆನೆ ಹಬ್ಬವು ಕರಗಲ್
ಹಿತಮಿತದಿರುಳೂಟದ ಸವಿಯೆರೆಯಲ್
ಅತಿ ಹಿತದೊಳ್ ಮೆದು ಹಾಸಿಗೆ ಕರೆಯಲ್
ಹಬ್ಬದ ಬೆಳಕದು ಕಣ್ಣೊಳ್ ಕುಣಿಯಲ್
ತಬ್ಬಿದ ನಿದಿರೆಯ ತೋಳೊಳ್ ಜಾರಲ್

>> ಮಂದಂಮಂದಂ ನುದತಿ ಪವನೇ ಪರ್ವಣಿ ಕ್ಲಾಂತಿಮಾಪ್ತೇ
>> ಖಾದಂಖಾದಂ ನಿಶಿತದುಚಿತಂ ಭಕ್ಷ್ಯಭೋಜ್ಯಂಸುಭೋಜ್ಯಂ
>> ತತ್ರಶ್ರಾಂತ್ಯಾ ಮುದಿತಮನಸಾ ತಲ್ಪಮಾರುಹ್ಯ ಸಾಕ್ಷಾತ್
>> ಭದ್ರಾಂನಿದ್ರಾಂ ಪಿಹಿತನಯನೋ ಪ್ರೀತಿಭಾರಃ ಸಮೇತಿ ||೧೧||

ಮುಗಿದಿತ್ತಾ ಸವಿ ದೀವಳಿಗೆ
ಸೊಗವನು ಹಂಚುತಲೀಯಿಳೆಗೆ

>> ಇತಿ ದೀಪಾವಲೀನಾಮಾ ಶಾಂತಿಮಾಪ್ನೋತಿ ಸೂತ್ಸವಃ
>> ವಿಕಿರನ್ಕಾಂತಿಮಾಮೋದಂ ಲೋಕೇ ಸರ್ವತ್ರ ಭಾಸತೇ || ೧೨ ||
 


Monday, February 19, 2018

ಹುಚ್ಚು ಹೂವೊಂದರ ಸ್ವಗತ

ನಿನ್ನ ಕೈಲಿಹುದು ಕುಡುಗೋಲೇನು?
ನಾನರಿಯೆ
(ಯಾರ‍್ಯಾರ ಮುಕ್ತಿ ಎಲ್ಲಿಹುದೊ ಬಲ್ಲವರಾರು? -
ಈ ಚಣವೆ ದಿಂಡುರುಳಿ ಮಲಗುವುದೋ
ನಿನ್ನ ತಿರುವಡಿಯ ಹುಡಿಸೇರಿ ನಲುಗುವುದೋ
ನನ್ನದೆಂತೋ!)

ನೀ ಬರುವ ಹಾದಿಯಲಿ ಬಾಡಿರದ ನಗೆ ಹೂವು
ಮೃದುಮಂದಹಾಸದೊಲು ಕಾದಿರುವುದು
ಹೆಸರಿರದ ನೆಪ್ಪಿರದ ಮುಪ್ಪಿರದ ಪುಷ್ಪವಿದು
ಮೊಗವೆತ್ತಿ ನಿನ್ನನೇ ನೋಡುತಿಹುದು

ಗಗನದಿಂ ಕಣ್ಕಿತ್ತು ಭುವಿಗೆ ಚಿತ್ತವನಿತ್ತು
ನೋಡಬಾರದೆ ಕಣ್ಗೆ ಕಣ್ಣ ಬೆರೆಸಿ? -
ವಾಮನನ ಹೆಜ್ಜೆಯದು ಭೂಮಿಗಿಳಿಸುವ ಮುನ್ನ
ಮುಖದ ಚಹರೆಯನಿಷ್ಟು ಎದೆಯೊಳುಳಿಸಿ.

ಹಾದಿಬದಿ ಬೆಳೆದಳಿವ ಗುರುತಿರದ ಹೂವಿದನು
ಕಾಣಬಹುದೇ ಕಂಡು ಹುಡುಕಬಹುದೇ?
ಎಲ್ಲಿಯೋ ಮುಂದೊಮ್ಮೆ ಕಂಡರಳಿ ನಗಲಾಗ
ಬಿರುಮೊಗದಿ ಪರಿಚಯದ ನಗೆಯಿರುವುದೇ?

Monday, August 11, 2014

ಅಪೀಲು

ಕೊಲೆಯಿರದ ಮನೆಯ
ಸಾಸಿವೆಯನೆಲ್ಲಿಂದ ತರಲಿ ದೊರೇ!

ಸಾಯಲಸುವೊಂದಿರಲು
ಕೊಲುವ ಕೈಗಳು ಹಲವು;
ಬಡಿಯದಿರು ಅವಕೆ ಕಸ್ತೂರಿ ಚಂದನ ನಾಮ.
ರುದ್ರಾಕ್ಷದಗ್ನಿಯಲಿ ಸನಾತನ
ಕಾಯುತಿದೆ ಚಿನ್ಮುದ್ರೆ;
ಕೊಲೆಯ ಕೈಗಳಿಗಿವನು ಒತ್ತಬಹುದೇ?

ಗ್ರೀಷ್ಮಹತಿಗೆಲೆಯುದುರಿ
ಬೋಧಿಯ ಕೆಳಗೂ ಬಲೆಬಲೆಯ ಬಿಸಿಲು,
ಹೊಸ ಟೊಂಗೆ ಟಿಸಿಲುಗಳು ಬೆಳೆಯಬೇಕು.

ವಿಲಾಯತಿ ಸಿರಿಂಜು ಕತ್ತಿ-ಕತ್ತರಿ ಬರುವ ಮೊದಲು
ಮಾಟಗಾರನೆ ಮನೆವೈದ್ಯ;
ತಾಯತವೆ ಸಕಲ ರುಜಾಪಹಾರಿ.
ಇಂದು ಹಳತೆಂದವನು ದೂಡಬೇಕೆ?
ದತ್ತೂರಿಯಿರಲಿ ಬಿಡು,
ಔಷಧಕೂ ಬಂದೀತು
(ಅತಿಯಾದ ಕ್ಷೀರವೂ ಅತಿಸಾರ ತಂದೀತು).

ಕೊಲೆಯ ಕೈಗಳಿಗಿಂದು ಕಾವ ಕಸುಬನು ಕಲಿಸು,
ಬಿಳಿಲು ಇಳಿಯಲಿ ನೇಣ ಹೆಣದ ಬದಲು;
ಭೂತಗಳಿಗೊಂದೊಮ್ಮೆ ಮುಕ್ತಿ ಕರುಣಿಸಿ ಸಲಿಸು,
ಸತ್ತವರ ನೆನಪಿನಲಿ ಸಂಪಗೆಯು ನಗಲಿ.

Friday, August 8, 2014

ಸಾಂತ್ವನ

ಮನೆ ಹಿತ್ತಿಲು ಪಾಳು ಬಿದ್ದಿರಲು
ಸಂತೆಯೊಳು ಧ್ಯಾನವ ಕನಸುವವ
ಸಂತನೂ ಅಲ್ಲ ಯೋಗಿಯೂ ಅಲ್ಲ

ಬಿಡು ರಾಜಾ,
ಅದೊಂದು ಥರ
ಕಾಸೂ ಕೇಡು ತಲೆಯೂ ಬೋಳಿನ ಕತೆ.

ಗುದ್ದಲಿ ಪಿಕಾಸಿ ತೊಗೋ
ಹಿತ್ತಿಲಲಿ ಬೆಳೆದ ಕಳೆ ಕೀಳು
ಮಣ್ಣ ಹದಮಾಡಿ
ಐನಾತಿ ಅಸಲೀ ಬೀಜಗಳ ನೆಟ್ಟು
ನಗುವ ಸೂರ್ಯನ ತೊಡಿಸಿ
ಆತ್ಮಜಲ ಎರೆದು, ಬೆಳೆ
ನಿನಗೆ ಬೇಕಾದ್ದು
ನಿನ್ನ ಧ್ಯಾನಸ್ಥ ಮೌನದಲ್ಲಿ, ಏಕಾಂತದಲ್ಲಿ
ಬೆಳೆದು
ಕೊಂಡದ್ದು
ಸಂತೆಯ ಕೊಂಡ ಸರಕಿಗಿಂತ ಸಾವಿರಪಾಲು ಪುಷ್ಟಿ
ಬೆಳೆದಿದ್ದು ಮಾರದಿರು
ಮಾರಿದ್ದು ಕೊಳ್ಳದಿರು
ನಿನಗಷ್ಟು ಇಟ್ಟು ಬಂದವರಿಗಷ್ಟು ಕೊಟ್ಟು...
ರುಚಿಯಿಲ್ಲದ ಹಣ್ಣ ಗಿಣಿ ಕಚ್ಚುವುದೇ ಇಲ್ಲ
ಹೋಗು, ಹುಷಾರಾಗಿ, ಮತ್ತೆ ಬಾ
ಆಗೀಗ.

Tuesday, January 14, 2014

ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು

ಕುಮಾರವ್ಯಾಸಜಯಂತಿಯಂದು ನನ್ನ ಭಾವಪೋಷಕನಾದ ಕುಮಾರವ್ಯಾಸನಿಗೆ ನಮನ

ನಾರಣನೆ ಕರ್ಣಾಟ ಭಾರತ
ಕಾರಣನೆ ಕೃಷ್ಣಾಮೃತಾರ್ಣವ
ಪೂರಣನೆ ಕವಿತಿಲಕ ಕುವರವ್ಯಾಸ ಮುನಿರಾಯ
ಚಾರುಕವಿತೆಯಿದಲ್ಲವೆನುತಲೆ
ಮೇರೆವರಿಸಿದೆ ಬರಿಯ ತೊಳಸಿಯ
ತೀರುತಕೆ ಕಪ್ಪುರವ ಬೆರೆಸಿದೆ ಕಾವ್ಯಸೌರಭವ

ಕಾಳಗದ ಕಲಿಕರ್ಣ ಭಕುತಿಯ
ಸೂಳರಿತ ಗಾಂಗೇಯ ಘನ ಸುವಿ
ಶಾಲಮತಿ ವಿದುರಾಂಕ ಬೆಂಕಿಯ ಕುವರಿ ಪಾಂಚಾಲಿ
ಕಾಳಮತಿ ದುರ್ಯೋಧನಾಹವ
ಕಾಲ ಭೀಮ ಪರಂತಪರ ಕರು
ಣಾಳು ಕೃಷ್ಣನ ಕಂಡರಿಸಿದೈ ಭಾವಭಿತ್ತಿಯಲಿ

ಅರಗಿನರಮನೆಯೋ ವಿರಾಟನ
ಪುರದೊಳಜ್ಞಾತವೊ ಸುಯೋಧನ
ಹರಣವೋ ಕಲಿ ಕರ್ಣಭೀಷ್ಮರ ಮರಣವೋ ಕೊನೆಗೆ
ದುರುಪದಿಯ ಧನ ಹರಣವೋ ಸಲೆ
ಪರಮಪುರುಷನ ಕರುಣವೋ ಮಿರು
ಮಿರುಗಿತಲ ನಿಜರೂಪಕದ ಭಾಂಡದೊಳು ತೊಳತೊಳಗಿ

ನಾರಣನ ಮೊರೆಯಿಡುವ ಭಕುತನ
ನಾರಣಮು ಕೊಂಕಿಸರು ಗಜಪತಿ
ನಾರಣನ ಪಿತನಜಮಿಳನು ಪ್ರಹ್ಲಾದನೇ ಸಾಕ್ಷಿ
ನಾರಣನೆ ಬಾರಯ್ಯ ದುರುಳರ
ನಾರಣೆವರೆಂದವಳ ಮಾನವ
ನಾರಣಿಯೊಳಡಗಿಸುತ ಕಾಯ್ದರು ಕೃಷ್ಣ ದೊರೆಯಲ್ತೇ?

ನಾರಣನ ಕೈವಲ್ಯಕಾರಣ
ನಾ ರಣದ ಪಂಡಿತರ ಗಂಡನ
ನಾರಣಗಿಸುವರೈ ಮಹಾಭಾರತದ ನಾಯಕನ
ನಾರಣನ ಮಂಗಳದ ನಾಮವ
ನಾರಣಿಸುತಿಹ ನಿಗಮಸಾರವು
ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು

Wednesday, December 21, 2011

ಹಾಯ್ಕುಗಳು

ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ - ಅರ್ಥದ, ಭಾವದ ಮಿಂಚು, ಮಿಂಚಿ ಮರೆಯಾಗುವ ಒಂದು ಕ್ಷಣದ ಸ್ತಬ್ಧಚಿತ್ರ. ತೀರ ಚಿಕ್ಕ ಪದ್ಯವಾದ್ದರಿಂದ ಈ ಅರ್ಥದ ಮಿಂಚು ಬಹಳ ಮುಖ್ಯ. ಅರ್ಥದ ಸೊಗಸು ಪದೇಪದೇ ಮನಸ್ಸಿನಲ್ಲಿ ಮೂಡುವಂತಿರಬೇಕು. ಈ ಅರ್ಥದ ಮಿಂಚು ಎಂದೆನಲ್ಲ, ಅದು ಯಾವುದೋ ಒಂದು ಕಳೆದೇಹೋಗುವಂತಿರುವ ಕ್ಷಣವನ್ನು ಕಟ್ಟಿಕೊಡಬೇಕು - ಅದೊಂದು ಸಾರ್ಥಕಕ್ಷಣ, ಮಿಂಚಿ ಮರೆಯಾಗಿಬಿಡುವ ಆ ಕ್ಷಣ ಚಿತ್ರಪಟದಂತೆ ಹಾಯ್ಕಿನ ಆ ಸಾಲಿನಲ್ಲಿ ನಿಂತುಬಿಟ್ಟಿದೆ.  ಆ ಕ್ಷಣದ ಆಳ, ಆಧ್ಯಾತ್ಮಿಕತೆ ಹೆಚ್ಚಿದ್ದಷ್ಟೂ ಹಾಯ್ಕು ಹೆಚ್ಚು ಪರಿಣಾಮಕಾರಿ.  ಇರಲಿ, ಇದು ವಿವರಿಸಿ ತಿಳಿಸುವಂಥದ್ದಲ್ಲ, ಅವರವರ ಕಾವ್ಯದೃಷ್ಟಿಗೆ ಬಿಟ್ಟ ವಿಷಯ, ಅವರವರು ಕಂಡುಕೊಳ್ಳಬೇಕಾದ್ದು.  ಆದ್ದರಿಂದ ನಾವಿಲ್ಲಿ ಅದನ್ನು ಒಂದು ಪಂಚ್ ಲೈನ್ ಎನ್ನೋಣ, ಮತ್ತು ಹಾಯ್ಕಿನ ಭೌತಿಕ ಅಂಶಗಳಿಗಷ್ಟೇ ಗಮನ ಕೊಡೋಣ.


ನಮ್ಮ ಹನಿಗವನಗಳಂತೆ ಅಂದೆ, ಆದರೆ ನಮ್ಮ ಹನಿಗವನಗಳಂತೆ ಅಳತೆಯಿಲ್ಲದ ಕವನಗಳಲ್ಲ ಇವು. ನಮ್ಮ ಹಳೆಗನ್ನಡದ ಕಂದಪದ್ಯಗಳಂತೆ ಚುಟುಕು, ಆದರೆ ಲೆಕ್ಕಾಚಾರದಿಂದ ಕೂಡಿದ ಪದ್ಯಗಳು. ಆದರೆ ನಮ್ಮ ಕಂದಪದ್ಯಗಳಲ್ಲಿ ಮಾತ್ರಾಕಾಲವನ್ನು ಪರಿಗಣಿಸುತ್ತೇವೆ, ಹಾಯ್ಕುಗಳಲ್ಲಿ ಅಕ್ಷರಗಳನ್ನು.

ಹಾಯ್ಕುಗಳು ಮೂರುಸಾಲಿನವು. ಮೊದಲನೆಯ ಸಾಲಿನಲ್ಲಿ ೫, ಎರಡನೆಯ ಸಾಲಿನಲ್ಲಿ ೭ ಮತ್ತು ಮೂರನೆಯ ಸಾಲಿನಲ್ಲಿ ೫ ಅಕ್ಷರಗಳು. ಜಪಾನೀಯರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ಹಾಯ್ಕುಗಳ ಅಕ್ಷರವಿನ್ಯಾಸದ ಬಗ್ಗೆ ಹೇಳಿದ್ದೆ (ಮೊದಲ, ಎರಡನೆಯ ಮತ್ತು ಮೂರನೆಯ ಸಾಲುಗಳಲ್ಲಿ ಕ್ರಮವಾಗಿ ೫,೭ ಮತ್ತು ೫ ಅಕ್ಷರಗಳು). ಆದರೆ ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜಪಾನೀ ಭಾಷೆ ಕನ್ನಡದಂತಲ್ಲ. It is a highly phonetic language (ಅಂದರೆ ಸ್ವರಬದ್ಧವಾದ ಭಾಷೆ). ಆದ್ದರಿಂದ ಅಲ್ಲಿನ ಅಕ್ಷರಗಳ ಎಣಿಕೆ ನಮ್ಮ ಕನ್ನಡದ ಅಕ್ಷರದ ಎಣಿಕೆಯಂತಲ್ಲ. ನಾವು ಕಣ್ಣಿಗೆ ಕಾಣುವ ಅಕ್ಷರಗಳನ್ನು ಎಣಿಸಿದರೆ ಅವರು ಉಚ್ಛಾರಣೆಯಲ್ಲಿ ಬರುವ ಘಟಕಗಳನ್ನು (syllableಗಳನ್ನು) ಎಣಿಸುತ್ತಾರೆ. Syllable ಎಂದರೆ ಒಂದೇ ಉಚ್ಚಾರಣೆಯ ಪ್ರಯತ್ನದಲ್ಲಿ ಉಚ್ಚರಿಸಲ್ಪಡುವ ಶಬ್ದ. ಅದು ಒಂದೇ ಅಕ್ಷರವಿರಬಹುದು, ಅಥವ ಒಂದಕ್ಕಿಂತ ಹೆಚ್ಚು ಅಕ್ಷರಗಳ ಗುಂಪೂ ಇರಬಹುದು. ಇದನ್ನು ಕೆಲವು ಉದಾಹರಣೆಗಳೊಂದಿಗೆ ಹೀಗೆ ವಿವರಿಸೋಣ:

"ಲವ್ (love)" ಇಲ್ಲಿ ಕಣ್ಣಿಗೆ ಕಾಣುವುದು ಕನ್ನಡದಲ್ಲಿ ಎರಡು ಅಕ್ಷರಗಳು, ಇಂಗ್ಲಿಷಿನಲ್ಲಿ ನಾಲ್ಕು ಅಕ್ಷರಗಳು. ಆದರೆ ಉಚ್ಚಾರಣೆಯ unit (syllable) ಕೇವಲ ಒಂದೇ (ಲೌ). ಆದ್ದರಿಂದ ಹಾಯ್ಕುಗಳ ವಿಷಯದಲ್ಲಿ ಇದನ್ನು ಒಂದು ಎಂದು ಎಣಿಸಬೇಕು.

"ಕಣ್" ಇದೂ ಹಾಗೆಯೇ, ಎರಡು ಅಕ್ಷರಗಳು ಕಂಡರೂ ಉಚ್ಚಾರಣೆಯ syllable ಒಂದೇ. ಆದ್ದರಿಂದ ಹಾಯ್ಕಿನಲ್ಲಿ ಇದು ಒಂದೇ ಅಕ್ಷರವೆಂದಾಗುತ್ತದೆ.

"ಜಂಪ್" ಎನ್ನುವುದೂ ಹಾಗೇ. ಆದರೆ "ಜಂಪು" ಎಂದಾಗ ಮಾತ್ರ ಅಲ್ಲಿ ಎರಡು syllables ಬರುತ್ತವೆ, ಜಂ ಮತ್ತು ಪು.

ಹಾಗೆಯೇ "ಬಂಪರ್ (bumper)" ಎನ್ನುವುದರಲ್ಲಿ 3 (ಇಂಗ್ಲಿಷಿನ 6) ಅಕ್ಷರಗಳು ಆದರೆ ಎರಡೇ syllableಗಳು (ಬಂ + ಪರ್), ಆದರೆ "ಬಂಪರು" ಎನ್ನುವುದರಲ್ಲಿ ಮೂರು syllables ಮತ್ತು ಮೂರು ಅಕ್ಷರಗಳು.

"ಕಾವೇರಿ" ಇಲ್ಲಿ ಕಣ್ಣಿಗೆ ಕಾಣುವುದೂ ಮೂರು ಅಕ್ಷರ, ಉಚ್ಚಾರಣೆಯಲ್ಲೂ ಮೂರು ಅಕ್ಷರ (3 letters and 3 syllables).

ಆದ್ದರಿಂದ ಹಾಯ್ಕುಗಳನ್ನು ಬರೆಯುವಾಗ ೧,೨ ಮತ್ತು ೩ನೆಯ ಸಾಲುಗಳಲ್ಲಿ ೫,೭ ಮತ್ತು ೫ ಅಕ್ಷರಗಳನ್ನು ಎಣಿಸುವ ಬದಲಿಗೆ ೫,೭ ಮತ್ತು ೫ ಸಿಲೆಬಲ್ಲುಗಳನ್ನು ಎಣಿಸುವುದು ಸೂಕ್ತ.

ಹೀಗೆ ಹಾಯ್ಕುಗಳ ಸಾಮಾನ್ಯ format ಹೀಗಿರಬಹುದು:

ನನ ನನನ
ನನ ನನ ನನನ
ನನ ನನನ

(ಮೇಲೆ ಹೇಳಿದಂತೆ ಅದು ಹ್ರಸ್ವಾಕ್ಷರವೇ ಆಗಬೇಕಿಲ್ಲ, "ನ" ಅನ್ನುವುದರ ಬದಲು "ನಾ" ಎಂದು ಕೂಡ ಆಗಬಹುದು, ಅಥವ "ನನ್" ಕೂಡ ಆಗಬಹುದು)

ಮತ್ತೆ, ಮೊದಲೇ ಹೇಳಿದಂತೆ ಜಪಾನೀ ನುಡಿ ಕನ್ನಡಕ್ಕಿಂತ ಹೆಚ್ಚು phonetic ನುಡಿಯಾದ್ದರಿಂದ ಅವರು ಈ ಎಣಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಕನ್ನಡದ ಜಾಯಮಾನ ಹಾಗಲ್ಲವಾದ್ದರಿಂದ ನಾವು ಅದನ್ನು ಅಷ್ಟು ಕಟ್ಟುನಿಟ್ಟಾಗಿ ಅನುಸರಿಸಬೇಕಿಲ್ಲವೆಂಬುದು ನನ್ನ ಅನಿಸಿಕೆ. ಆದರೂ ಆದಷ್ಟು ಈ ಲಕ್ಷಣಗಳನ್ನು ಅನುಸರಿಸುವುದು ಒಳ್ಳೆಯದು. ಒಂದೋ ಎರಡೋ ಸಿಲೆಬಲ್ಲುಗಳು ಹೆಚ್ಚು ಕಡಿಮೆಯಾದರೆ ಪರವಾಗಿಲ್ಲ, ಆದರೆ ತೀರ ಎಣಿಕೆಗೇ ಸಿಗದಂತಿರಬಾರದೆಂಬುದು ನನ್ನ ನಿಲುವು.

ಮತ್ತೆ, ಪ್ರಾಸದ ಬಗ್ಗೆ ಯಾವ ನಿಯಮವೂ ಇದ್ದಂತಿಲ್ಲ, ಆದರೆ ಪ್ರಾಸವಿರಬಾರದೆಂದೇನೂ ಇಲ್ಲ. ಅರ್ಥದ ಮಿಂಚಿಗೆ ಮತ್ತಷ್ಟು ಹೊಳಪು ಸೇರಿಸುವುದಾದರೆ ಏಕಿರಬಾರದು? ಹೀಗೇ ಗೀಚಿದ ಕೆಲವು ಹಾಯ್ಕುಗಳು ಇಲ್ಲಿವೆ (ಮತ್ತೆ ಮೊದಲೇ ಹೇಳಿದಂತೆ, ಇವನ್ನು ನಿಜಾರ್ಥದಲ್ಲಿ ಹಾಯ್ಕು ಎನ್ನಲಾಗುವುದಿಲ್ಲ, ಏಕೆಂದರೆ ಹಾಯ್ಕೊಂದರಲ್ಲಿ ಮುಖ್ಯವಾಗಿ ಇರಲೇ ಬೇಕಾದ ಆ ಒಂದು ಕ್ಷಣವನ್ನು, ಸಾರ್ಥಕಕ್ಷಣವನ್ನು ಚಿತ್ರಪಟದಂತೆ ಹಿಡಿದಿಡುವ ಪಂಚ್ ಲೈನ್ ಇಲ್ಲಿಲ್ಲ - ಕೇವಲ ಹಾಯ್ಕಿನ ಭೌತಿಕ ರೂಪವನ್ನಷ್ಟೇ ಗಮನಿಸುವುದು):

ಐದು ಏಳರ
ಮೇಲೈದುಲಿಯಂ ಹಾಕು
ಬಂದಿತು ಹಾಯ್ಕು

ಬಂಪರ್ ಟು ಬಂಪರ್
ಜೋರಾಗಿ ಗುದ್ದಿದರೆ
ಬಂಪರ್ ಹೊಡೆತ

ನಿನ್ನ ನಗೆ ಹೂ
ಮೊಲ್ಲೆಯ ಚೆಲ್ಲಿಬಿಡು
ಹೂಮಂಚವೇಕೆ?

ಆ ಕಣ್ಣು ತುಟಿ
ಹೀರಿ ತೂರಾಡುವನು
ಇವ, ಕುಡುಕ!

ನಗೆಯ ಮಿಂಚ
ಮುಂದೆ ಮಳೆಯ ಮಿಂಚು
ಮಂಕಾಯಿತಲ್ಲ!

ಮಳೆ ಗುಡುಗು
ಮಿಂಚಿ ತೋರಿಸಿದ್ದೇನು?
ಊಳಿಡೋ ದೆವ್ವ!

ಕಣ್ಣ ಮುಚ್ಚಿದೆ
ನಿದ್ದೆಯಲೂ ನೀ ಬಂದೆ
ನಿದ್ದೆ ಬಿಟ್ಟೆದ್ದೆ

ಕಾಡದಿರು ನೀ
ಗೆಳತಿ, ನೋಡುವಳು
ನಿನ್ನ ಸವತಿ!

ಕಾಡೆ ನೀ ಹೀಗೆ,
ಬೇಜಾರುಗೊಳ್ಳುವನು
ಶನಿರಾಯನು

ಎಕ್ಸಾಮಂದ್ರಿಷ್ಟೇ,
ಜಸ್ಟ್ ಕಾಪಿ ಪೇಸ್ಟ್, ಕಾಪಿ ಪೇಸ್ಟ್
ಓದೋದೆಲ್ಲಾ ವೇಸ್ಟ್

ದೆವ್ವದ್ ಕತೇಲೇ
ಹೆದ್ರುಸ್ತಿದ್ದಾ ನಂ ತಾತ
ಈಗವ್ನೇ ಭೂತಾ!

ಎತ್ತಣ ಮಾವೋ
ಎತ್ತಣ ಕೋಗಿಲೆಯೋ
ಬಂದೂಕು ಶಬ್ದ!

ಹೊಟ್ಗಿಲ್ಲ ಅನ್ನಾ
ತಿರ್ಕೊಂಡ್ ತಿನ್ನೋದ್ ಏನ್ ಚೆನ್ನ?
ಹಾಕ್ತೀನಿ ಕನ್ನ

ಹಾಯ್ಕುವಿನ ಗಮ್ಮತ್ತೇ ಅದು. ಸುಮ್ನೇ ಚಾಟ್ ಮಾಡಿದಹಾಗೆ ಬರೀತಾನೇ ಹೋಗಬಹುದು.

ಈ ಮಾತೇ ಮುತ್ತು
ಮಾತೇ ಮತ್ತು, ಮಾತಲ್ಲೇ
ಕಾಣೋ ಗಮ್ಮತ್ತು

ಚಾಟ್ ಮಾಡ್ದಾಗೆ, ಚಾಟ್
ತಿಂದ್ ಹಾಗೆ, ಚಾಟೀ ಹಾಯ್ಕೊಂಡ್
ಬಂದ್ ಹಾಗ್ ಮಾತು

ನೀನಾಡೋ ಮಾತ್ನೇ
ಕಟ್ ಕಟ್ ಮಾಡು, ಹಾಯ್ಕೊಂದಲ್
ಬಂದಯ್ತೆ ನೋಡು

ಒಂದಷ್ಟು ಸೀರಿಯಸ್ ಹಾಯ್ಕುಗಳು:
ಎಲೆ ಹುಳಕೆ
ಕಪ್ಪೆ ಹಾರಲು ತಡೆ
ಆಡುವ ಹೆಡೆ

ತುಟಿ ಚಾಚಿದೆ
ಮುತ್ತೆಲ್ಲೋ ಉದುರಿದೆ
ಮೆದೆಯ ಸೂಜಿ

ಒಂದು ಎರಡು
ಬಾಳೆಲೆಯ ಹರಡು
ಚುರುಗುಟ್ಟಿದೆ

ಹುಲಿ ಹಸಿದು
ನೆಗೆದಿದೆ; ಗೋವಿಗೋ
ಕರು ಯೋಚನೆ

ರವಿ ಮುಳುಗಿ
ಗಡಂಗು ಕರೆದಿದೆ
ಖಾಲಿ ಜೇಬು

ನೇಣೆತ್ತುವ ಕೈ
ಕಾಣುತ್ತಿಲ್ಲ ಕೈಮರ
ಕಣ್ಣೊರಸಿದೆ

ನೇಣೆತ್ತುವ ಕೈ
ಕಾಣುತ್ತಿಲ್ಲ ಕೈಮರ
ಕಣ್ಣರಸಿದೆ

ಎಂಜಲು ರೊಟ್ಟಿ
ತುಪ್ಪದೊಳಗೆ ಬಿತ್ತು
ಕೇಜಿ ಐನೂರು




Thursday, October 27, 2011

ಬೆಳಕಿನ ಹಾಡು

ದೀವಳಿಗೆಯ ಲಯಕ್ಕೆ ಹೊಂದುವಂತೆ ಕೆಲವು ಲಯಗಳು ಮನಕ್ಕೆ ಹೊಳೆದುದರ ಫಲವೇ ಈ ಕವನ. ಇದು ನಡುಗನ್ನಡದ "ರಗಳೆ" ಛಂದಸ್ಸನ್ನು ಬಹುತೇಕ ಹೋಲುತ್ತದೆಯಾದರೂ ಅಲ್ಲಲ್ಲಿ ಕವನದ ಓಟಕ್ಕೆ ತಕ್ಕಂತೆ ಛಂದಸ್ಸನ್ನು ಬದಲಿಸಿಕೊಳ್ಳುವ ಸ್ವಾತಂತ್ರ್ಯ ವಹಿಸಿದ್ದೇನೆ. ಉತ್ಸಾಹ ರಗಳೆ, ಮಂದಾನಿಲ ರಗಳೆ ಮತ್ತು ಲಲಿತ ರಗಳೆಗಳು ಇಲ್ಲಿ ಕಾಣಬರುವ ಛಂದೋರೂಪಗಳು. ಈ ಪದ್ಯದ ಉದ್ದೇಶವೇ ಹಬ್ಬದ, ಸಂಭ್ರಮದ, ಸ್ವಚ್ಛಂದದ ಅಂದವನ್ನು ಹಿಡಿಯುವುದಾದ್ದರಿಂದ ಪದ್ಯದ ಗಾತ್ರವನ್ನು ನಿಯಂತ್ರಿಸಲು ನಾನು ಯತ್ನಿಸಿಲ್ಲ. ಆದ್ದರಿಂದ ಪದ್ಯ ತುಸು ಉದ್ದವೇ ಬೆಳೆದಿದೆಯೆನ್ನಬೇಕು. ಪಟಾಕಿ ಹೊಡೆಯುವ ಮಕ್ಕಳ ಸಂಭ್ರಮವನ್ನು ಮೊಟಕುಗೊಳಿಸಿ ಊಟಕ್ಕೆಳೆದುಕೊಂಡು ಬಂದರೆ ಇಷ್ಟಪಡುವರೇ?

ಚುಕ್ಕಿ ಬೆಳಕ ಚೆಲ್ಲುವಲ್ಲಿ
ಹಕ್ಕಿ ಹಾಡು ಮೂಡುವಲ್ಲಿ
ಕತ್ತಲೊಡನೆ ತೆಕ್ಕೆಬಿದ್ದು
ಎತ್ತಲಾಗೊ ಹೊರಳುತಿದ್ದ
ಬೆಳಕ ಹಬ್ಬವೆದ್ದಿತೈ
ಹೊಳೆವ ಮೈಯ ಮುರಿದಿತೈ

ಒಳಗೆ ಬಚ್ಚಲಲ್ಲಿ ನೀರು
ಮರಳಿ ಮರಳಿ ಕುದಿವ ಜೋರು
ಕಾದ ಎಣ್ಣೆ ಸೌಟ ಹಿಡಿದು
ಸೀದ ಜಗುಲಿಯೆಡೆಗೆ ನಡೆದು
ಬಂದಳಿವಳು ಸರಸರ
ಚಂದವವಳ ಸಡಗರ

ಕೈಯನೆತ್ತಿ ತಲೆಯ ಸುತ್ತಿ
ಮೈಯ ಸವರಿ ಮೊಗವನೊತ್ತಿ
ಕಾದ ಎಣ್ಣೆ ಸುಡಲು ನೆತ್ತಿ
ಆಹ ಬಡಿಯೆ ಕೈಯನೆತ್ತಿ
ಉಜ್ಜುತಿರಲು ಗಸಗಸ
ತೋರುತಿತ್ತು ಗರಗಸ

ಕುದಿವ ನೀರ ಮೈಯಿಗೆರಚಿ
ಅಯ್ಯೊ ಬೇಡವೆಂದು ಅರಚಿ
ಕಣ್ಣ ತುಂಬ ತುಂಬಿ ಸೀಗೆ
ಆಗಬಹುದೆ ಇಂದು ಹೀಗೆ
ಕೊನೆಗು ಬಂತೆ ಬಿಡುಗಡೆ
ಆಹ ಎಂಥ ನಿಲುಗಡೆ!

ಹೊಸತು ಬಟ್ಟೆ ಹೊಸತು ಹೂ
ಹೊಸತು ಗಂಧ ಎಂಥ ಚಂದ
ಹೊಸತು ಬೆಳಕು ಬಣ್ಣ ಬಿಳುಪು
ಕಣ್ಣುಗಳಲಿ ಹೊಳೆವ ಹೊಳಪು
ನಮಿಸಿ ದೇವ ದೇವಗೆ
ಗಮನವಾ ಪಟಾಕಿಗೆ

ಮಗನಿಗಾ ಪಟಾಕಿ ಕೇಪು
ಒಳಗೆ ನಡುಗಿ ಕಿರುಚೆ ಪಾಪು
ಇವಳಿಗೆ ಸುರುಬತ್ತಿ ಕುಂಡ
ಬಾಣ ಬಿರುಸು ಬರಿಯ ದಂಡ
ಸಮಯವೀಗ ಊಟಕೆ
ಸಗ್ಗದ ರಸದೂಟಕೆ

ಪಾಯಸ ಪುಳಿಯೋಗರೆ ಗೊಜ್ಜುಗಳೇನ್
ರಾಯತ ಕೋಸಂಬರಿ ಪಲ್ಯಗಳೇನ್
ಬಾಯೊಳು ನೀರೊಡೆಸುವ ಚಕ್ಕುಲಿಯೇನ್
ಕಾಯೊಬ್ಬಟ್ಟಿನ ಗಮಗಮ ಕಂಪೇನ್
ರಾಯನಡುಗೆಯೇಂ ಸಮನೆ ಇದಕೆ ಪೇಳ್
ಬಾಯ ತುಂಬ ನೀಂ ತಿಂದುಣ್ಣುತ ಬಾಳ್

ಹಗಲಿನ ಕೊನೆಗಿರಣಗಳಾಡುತಿರಲ್
ಹೆಗಲಿನ ಭಾರವ ರವಿ ಕೊಡವುತಿರಲ್
ಬೆವರಿದನೆನೆ ಹನಿಯೆರಡುದುರುತಿರಲ್
ಅವನಿಯ ಮೇಲ್ಕತ್ತಲೆ ಸೆರಗಿಕ್ಕಲ್

ಓಹೊ ಬೆಳಕು ಹರಿಯಿತೇಂ
ಬಾನು ಬಣ್ಣ ತಳೆಯಿತೇಂ
ಏಳುಬಣ್ಣದಿಂದ್ರಚಾಪ
ಬೆಳಕ ಸೆಳೆದು ಬಿಟ್ಟಿತೇಂ
ಹಳದಿ ಕೆಂಪು ಹಸಿರು ನೀಲಿ
ಬಿಳುಪ ಬಸಿರ ಸೀಳಿ ಸೀಳಿ
ತಮದ ಮಹಾಭಿತ್ತಿಯಲ್ಲಿ
ಗಮನಸೆಳೆವ ರಂಗವಲ್ಲಿ
ಸುರರ ಕಲ್ಪತರುವೆ ಹಿಗ್ಗು
ತರಳಿ ಹೂವ ಬಿಟ್ಟಿತೇಂ
ಮನದಿ ಮನೆಯ ಕಟ್ಟಿತೇಂ
ಮನದ ಕದವ ತಟ್ಟಿತೇಂ

ಮಂದಾನಿಲ ತಣ್ಣಗೆ ಬೀಸುತಿರಲ್
ಸುಂದರ ಕನಸೆನೆ ಹಬ್ಬವು ಕರಗಲ್
ಹಿತಮಿತದಿರುಳೂಟದ ಸವಿಯೆರೆಯಲ್
ಅತಿ ಹಿತದೊಳ್ ಮೆದು ಹಾಸಿಗೆ ಕರೆಯಲ್
ಹಬ್ಬದ ಬೆಳಕದು ಕಣ್ಣೊಳ್ ಕುಣಿಯಲ್
ತಬ್ಬಿದ ನಿದಿರೆಯ ತೋಳೊಳ್ ಜಾರಲ್

ಮುಗಿದಿತ್ತಾ ಸವಿ ದೀವಳಿಗೆ
ಸೊಗವನು ಹಂಚುತಲೀಯಿಳೆಗೆ

Friday, September 23, 2011

ಪ್ರಭಾತ ಚತುರ್ಮುಖ

"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ ಮುಂಜಾವಿನ ವರ್ಣನೆಯ ಬಗೆಗೊಂದು ಸವಾಲಿತ್ತು.  ಅದಕ್ಕಾಗಿ ರಚಿಸಿದ್ದು ಈ ಚೌಪದಿಗಳು:


(೧)
ಸೋರೆ ಕತ್ತಲ ಸಾರ ನೇಸರನ ಮೆಲ್ಬರವ
ಸಾರೆ ಗಗನಾಂಗನೆಯ ಕೆಂಪು ಕದಪು|
ವಾರಿಜದ ಮೊಗವರಳಿ ಮಲಗಿದಿಬ್ಬನಿ ಹೊರಳಿ
ಕೋರಿದುವು ಮಂಗಳದ ಮುಂಬೆಳಗನು||

(೨)
ತಂಗದಿರನಗಲಿಕೆಯ ವಿರಹಕಾಡಲು ರಾತ್ರಿ
ಯಂಗನೆಯ ಕೆನ್ನೆ ತುಸು ಬಿಳುಪಡರಿದೆ|
ಸಂಗಡಲೆ ರವಿಯು ಝುಮ್ಮನೆ ಸೋಂಕೆ ಬಿಸುಪಿನಾ
ಲಿಂಗನದಿ ನಾಚಿ ಮೊಗ ಕೆಂಪೇರಿದೆ||

(೩)
ಮುಂಗೋಳಿ ಕೂಗಿರಲು, ಹಕ್ಕಿಗಳು ಹಾಡಿರಲು
ರಂಗೋಲಿ ನಗುತಲಿವೆ ಅಂಗಳದೊಳು|
ಅಂಗಡಿಯು ತೆರೆಯುತಿದೆ, ತರಕಾರಿ ಕೂಗು ಮನೆ
ಮುಂಗಡೆಯೆ ಸಾಗುತಿದೆ ಏನು ಬೇಕು?

(೪)
ಮಾಗಿಯಿರುಳಿನ ಕೊನೆಗೆ ಮೂಡಣದಿ ನಸುವೆ ಬೆಳ
ಗಾಗೆ ಜಗವೆದ್ದು ಚಡಪಡಿಸುತಿಹುದು|
ಸಾಗೆ ಭರಗುಟ್ಟಿ ಮೋಟಾರುಗಳು ಒಣಮರದ
ಕೋಗಿಲೆಯೆ ಶ್ರುತಿಗೆಟ್ಟು ಕಾಗುತಿಹುದು||

Tuesday, June 14, 2011

ಅದು ನೀನಲ್ಲ

ಎಂದೋ ಬಿಡಿಸಿದ ಚಿತ್ರ -
ಹಿಂದೊಂದು ಕಾಲದಲಿ, ದೇಶದಲಿ,
ವರ್ತಮಾನದಿ ಸುಳಿವ ಭೂತದಲ್ಲಿ.
ಕುಡಿಹುಬ್ಬು, ಸುಳಿಗಣ್ಣು
ಮೂಗು ಸಂಪಿಗೆಯೆಸಳು
ನಗೆಯ ಮಲ್ಲಿಗೆಯರಳು
ಮುದ್ದು ಸುರಿಯುವ ಗಲ್ಲ,
ಆಗೆಲ್ಲ;

ಹಾಲ್ಬಿಳುಪು, ಕಡುಗಪ್ಪು,
ಚೆಂಗುಲಾಬಿಯ ಕೆಂಪು,
ನರುಗಂಪು;
ಮಳೆಸುರಿವ ಮುಗಿಲು
ನವಿಲು
ಗರಿ
ಕಾಮನಬಿಲ್ಲು
ಎಲ್ಲೆಲ್ಲು;
ಎಲೆ ಹಸಿರು ಚೆಲ್ಲಾಡಿ,
ಹಳದಿ ಕಿತ್ತಳೆ ಮೋಡಿ;
ಬಣ್ಣಗಳ ರಾಡಿ,
ನೆತ್ತರಿನ ಕಡುಗೆಂಪು-
ಸುರಿಯುವ ಕಣ್ಣ
ನೀರಿಗದ್ದಿದ ಕುಂಚ
ತೊಳೆದಿಟ್ಟು,
ಬಿಸಿಲಿಗಿಕ್ಕಿದ ಚಿತ್ರ;
ಒಣಗಿ ರಟ್ಟು-
ಗಟ್ಟಿದ ನೂರು ಪತ್ರ-
ಗಳ
ಕೆಳಗೆಲ್ಲೋ ಹೂತು ಪೆಟ್ಟಿಗೆಯ
ಬೀಗವ ಜಡಿದು
ಕಳೆದಿದ್ದೆನಲ್ಲ
ಕೈ!

ಆ ಮೇಲೆ
ಸವೆದದ್ದೆಷ್ಟು ವೈಶಾಖ
ಸುರಿದು ಸರಿದದ್ದೆಷ್ಟು ಆಷಾಢ
ಶಿಶಿರ!
ಕಿತ್ತೊಗೆದ ಸುಳಿಬಳ್ಳಿ ಮತ್ತೆಲ್ಲೋ ಬೇರಿಳಿಸಿ
ಮರವನೊಂದನು ಹಬ್ಬಿ,
ಹೂತು, ಮಿಡಿ ಕಾಯಾಗಿ
ತೂಗು ತೊಟ್ಟಿಲು ತೂಗಿ,
ನನಗೊಬ್ಬ ಪುಟ್ಟ, ನಿನಗೆ ಪುಟ್ಟಿ.

ಮೊನ್ನೆ,
ಅದೇನೋ, ತುಕ್ಕಿಡಿದ ತಗಡಿನ ಪೆಟ್ಟಿಯೊಳಗಿಂದ
ದಡದಡನೆ ತಟ್ಟಿದಂತಾಗಿ,
ಕ್ಷಣ ಎದೆ ನಡುಗಿ
ತೆರೆದು ನೋಡಿದರೆ
ನೀನು,
ನಗುತ್ತಲಿದ್ದಿ!
"ನೀ ಒಂಚೂರೂ ಬದಲಾಗಿಲ್ಲ"ವೆಂದಿ
"ಬದಲಾಗು" ಎಂದಿ
ಅದ ಅರಗಿಸಿಕೊಳಲು ನಾನಿಲ್ಲಿ ಹೆಣ-
ಗುತ್ತಿರಲು
ನೀ ಆರಾಮ
ಮಾತಾಡುತ್ತಲೇ ಹೋದಿ -
ಪುಟ್ಟನಿಗೆ ವಯಸೆಷ್ಟು? ಪುಟ್ಟಿಯೇನೋದುವಳು;
ಮನೆ, ಗಂಡ, ಕಾರು, ಹೆಂಡತಿ-
ಪಟ್ಟ
ಆನೆ ಬಂತೊಂದಾನೆ...
ಹೌದೇ? ಅದು ನೀನೇನೆ?
ಆ ಕೆನ್ನೆ, ಆ ಕದಪು
ಆ ಚೆದುರು, ನುಡಿ-ನವಿರು,
ಬರಿಯ ಕಿರುನೋಟದೊಳೆ ಸುತ್ತೆಲ್ಲ ಎಳೆಚಿಗುರು -
ಒಳಗೇ ಹೋಲಿಸಿಕೊಂಡೆ;
ಇಲ್ಲ,
ಅದು ನೀನಲ್ಲವೆಂದು ಹೊಳೆದು,
ಎಂದೂ ಅದು ನೀನಾಗಿರಲೇ ಇಲ್ಲೆಂದು ತಲೆಗಿಳಿದು,
ನೆಮ್ಮದಿಯ ನಿಟ್ಟುಸಿರ ಹೊರದಬ್ಬಿದೆ;
ಮತ್ತಷ್ಟು ಖುಶಿಯಿಂದ ನಿನ್ನೊಡನೆ ಹರಟಿ
ಲೋಕಾಭಿರಾಮದಾರಾಮ
ಅನುಭವಿಸಿದೆ;
ಕೊನೆಗೊಮ್ಮೆ ಸ್ಟೈಲಾಗಿ ಬೈ ಹೇಳಿ
ಪೆಟ್ಟಿಗೆಯ ಮೇಲೆ ಮತ್ತೊಂದು
ಹೂವಿಟ್ಟು ಹಗುರಾಗಿ
ನಿದ್ದೆಹೋದೆ.

Tuesday, November 2, 2010

ಸ್ತಬ್ಧ ಚಿತ್ರ

ನಿನ್ನ ಕಣ್ಣಿನ ಮಿಂಚಿನಂಚಿನೊಳಗಿಂದೇನೊ
ಹೊಸ ಹೊಳಪು ಹೊಳೆಯುತಿಹುದು;
ಬೀಸುಗತ್ತಿಯು ಕೂಡ ಕೂರಲಗ ಮೊನೆಯಿಂದ
ಹೂಮಿಂಚನೆಸೆಯುತಿಹುದು.

ಇರುಳಿಡೀ ಸೋನೆಯಲಿ ಮಿಂದು ಚಳಿಹಿಡಿದ ಮುಂ-
ಜಾವೀಗ ನಗುತಲಿಹುದು;
ಎಳೆಬಿಸಿಲ ಕಾಯಿಸುತ ಮಿಡಿಯ ನಾಗರವೊಂದು
ಹೆಡೆಬಿಚ್ಚಿ ತೂಗುತಿಹುದು.

ಹೊಡೆಯುವುದೆ, ಬೇಡ ಬಿಡು; ಎಷ್ಟು ಚೆನ್ನಿದೆ ನೋಡು,
ಕಾಣಿಸದು ರೋಷ ಲೇಶ;
ಏಕೆ ಬಂದಿತೊ ಏನೊ ಸರಿದುಹೋಗಲಿ ತಾನೆ
ನಮಗೇಕೆ ನಾಗದೋಷ.

ಹರಿದ ಹಾದಿಯನಳೆದ ಸೌರಮಾನಗಳೆಷ್ಟೊ
ಸಪ್ತಪದಬಂಧದೊಳಗೆ;
ವೈಶಾಖದಿರುಳುಗಳ ಚಂದಿರನು ಕೂಡೆ ಬೆಳ
ದಿಂಗಳೊಂಭತ್ತರೊಳಗೆ.

ಇಬ್ಬರೊಳಗೊಂದಾಗಿ ಕೂಡಿದೆವು ಕಾಡಿದೆವು
ಬೇಡಿದೆವು ದೇವನಲ್ಲಿ;
ಚೆಂಗುಲಾಬಿಯ ಮೇಲೆ ಇಬ್ಬನಿಯು ನಗುತಿತ್ತು
ಕಂಪೊಡನೆ ತಂಪ ಚೆಲ್ಲಿ.

ಇಲ್ಲಿಬಾ, ತುಸುಹೊತ್ತು ಕೂರೋಣ ನಾವಿಲ್ಲಿ
ಹಚ್ಚಿ ಗಲ್ಲಕ್ಕೆ ಗಲ್ಲ;
ಅಮೃತಗಳಿಗೆಯನಿಂತು ಕಳೆಯುವುದು ತರವಲ್ಲ
ನಲ್ಲೆ ನಾ ನಿನ್ನ ನಲ್ಲ

Thursday, October 29, 2009

ಕನ್ಯಾಕುಮಾರಿ

(೧)
ಸಂಜೆ ಎಂಟಕೆ ಬಿಡುವ
ಲೌಡ್ ಸ್ಪೀಕರಿನ
someಗೀತ
ಟ್ರಾವೆಲ್ ಬಸ್ಸು;
ಬೆಂಗಳೂರಿಂದ ಹದಿನೆಂಟು ತ್ರಾಸು
ರೆಪ್ಪೆಯಿಲ್ಲದ ಕಿವಿಯ ಮುಚ್ಚಲಾರದ ದಿಟಕೆ
ಕಣ್ಮುಚ್ಚಿ ಕೂತ
ಚಿತ್-
ಭಂಗಿ, ನಿದ್ರಾಯೋಗ
ನಟಿಸಿ, ವಟವಟಿಸಿ ಚಡಪಡಿಸಿ ಸಿಡಿವುದರೊಳಗೆ
ಕನ್ಯಾ
ಕು
ಮಾರಿ
ಬಿಸಿಲು-ಅಂಟು
ಮೈಯೆಲ್ಲ ಉಪ್ಪು
ಕಾರುವ ಕಡಲು
ಅಲೆ
ಯುವ ಮಂದೆ-
ಮಂದಿ
ರ
ದ ಒಳ ಹೊರಗೆ
ಕಡಲ ತಡಿಯಡಿಗಡಿಗೆ
ಕಾಗದ ಚೂರು
ಪ್ಲಾಸ್ಟೀಕು ಕವರು
ಕಚಪಚ ಕೆಸರು
ಚೆಲ್ಲುವ ವಿವೇಕ
ಸಾಗರದ
ನಡುವೆ ತಲೆಯೆತ್ತಿದ
ವಿವೇಕ
ಶಿಲೆಗೆ
ಲಾಂಚರು
ಕಾದುನಿಂತ ಮೈಲುದ್ದ ಕ್ಯೂ!

(೨)
ವಿವೇಕ ಮಂದಿರದಿ
ಧ್ಯಾನದಾನಂದದಾರಾಮ;
ತಂಪೆರೆವ ನಿಃಶಬ್ದ ನಿರ್ವಾತ ಧಾಮ;
ಗದ್ದಲದ ವಾಕ್ಯದಲಿದೊಂದು
ಅಲ್ಪ ವಿರಾಮ.

(೩)
ದಿನವೆಲ್ಲ ಉರಿದು ಸುಸ್ತಾಗಿ
ಪಡುಗಡಲಲ್ಲಿ ಮಲಗಲೆಳಸುವ ಸೂರ್ಯ;
ಕಡಲ ಹೊನ್ನೀರ್ ತುಳುಕಿ
ಸುತ್ತೆಲ್ಲ ಬಣ್ಣವೋ ಬಣ್ಣ;
ಸಂಜೆಬಾನಿನ ಕಾಂತಿ,
ಶಿಲೆಯ ನೆಲೆಯಿಂ ಹೊರಟು
ದಿಕ್ಕ ತುಂಬಿದ ಶಾಂತಿ -
ಶ್ರೀ ವಿವೇಕಾನಂದ ಚಿತ್ಛಾಂತಿ

(೪)
ಮುಂಜಾವಿನರುಣೋದಯದ
ಹೊನ್ನ ಕಿರಣದಲಿ
ತೀಡುತಿಹ ತಂಗಾಳಿ,
ದೇವಿಯ ಕೃಪೆಯ ಸುಯ್ಯುತಿಹ
ಉದಯರಾಗ;
ವರ್ಣಮಯವೀ ಬಾನು
ವರ್ಣಮಯವೀ ಕಡಲು
ವರ್ಣಮಯವದರ ಮಳಲು.
ಮುಂಜಾವ ಸಿಹಿಗನಸಲಿನ್ನೂ ಮಿಸುಗುವ ಸೂರ್ಯ
ಮೈತಿಳಿದು ಕಣ್ಹೊಸಕಿ ಉರಿಯ ಕೆದರುವ ಮುನ್ನ
ಕಟ್ಟುತ್ತೇನೆ ಜೋಳಿಗೆಯ,
ಮುಂದಿನೂರಿಗೆ ಪಯಣ.

Sunday, July 12, 2009

ನಮ್ಮೂರಲೊಂದು ಸುತ್ತು

ಬೆಂಗಳೂರಿಂದ ನಮ್ಮೂರು,ಬಹುದೂರ
ಏನಿಲ್ಲ; ಮೂರು
ಗಂಟೆಯ ಪಯಣ.
(ಆದರೂ ಬೆಂಗಳೂರಿನ ಗಜಿ-
ಬಿಜಿಯ ಮಂದಿಗೆ,
ಹತ್ತಿರದ ಶೌಚವೂ ನಿತ್ಯ ಮರಣ)

ಬಹುದೂರವೇನಿಲ್ಲ...
ರಾಮನಗರ-
ದಲ್ಲೊಂದು ಹಿಡಿ ಕಡಲೆ ಬೆಲ್ಲ;
ಮದ್ದೂರಿನೊಂದು ಕಡೆ ಒಂದೆರಡು ವಡೆ
ನಂಚಿಕೊಳ್ಳಲು ದೆವ್ವದ್ದೋ ಭೂತದ್ದೋ ಕತೆಯ ಕಂತೆ -
ಮೆದ್ದು ಮುಗಿವುದರೊಳಗೆ
ಅದೋ ಅಲ್ಲಿ,
ಕೊಳ್ಳೆ-
ಗಾಲ!
ಕೊಳ್ಳೆ ಹೊಡೆದವರಿಲ್ಲ, ಗಾಲ ಪಿಡಿದವರಿಲ್ಲ,
ಆದರೂ ನಮ್ಮೂರು,
ಕೊಳ್ಳೆಗಾಲ.

ಬೆಂಗಳೂರಿನ ಕಾಡಿಗೆನ್ನನಟ್ಟಿದಮೇಲೆ
ಬಹಳ ಬದಲಾಗಿಹುದು
ಊರು-ಕೇರಿ

ಬಸ್ಸಿಳಿದ ಒಡನೆ
ಮುರುಕು ಸೊಂಡಿಲ ಬೀಸಿ
ಸ್ವಾಗತಿಪ ಗಣಪ ಕಾಣಲಿಲ್ಲ
ಗೋಪುರದ ಮೇಲೆ
ಝಗಝಗಿಸಿತ್ತು ಪಾಶಾಂಕುಶ ಕರ
ರಕ್ತಾಂಬರಧರ
ಲಂಬೋದರ
ಮಂಡಿತ ಸೊಂಡಿಲು ಪೂರ!

ಮೊಗದಿರುಹಿ
ಎಡಕೆ ನಡೆದರೆ ಪೇಟೆ
ಬೀದಿ
ಮಾರ್ಕೆಟ್ ಚೌಕದ ಅರವಟ್ಟಿಗೆ ಜಾಗದಲ್ಲೀಗ
ಹೊಸ ಮಸೀದಿ ಮಿನಾರ!
ಮುಂದೀಗ ಮಾರುವರು ಕೋಕ-ಕೋಲ
ಹಿಂದೆಯೇ ಶಿವನ ಗೋಪುರ ಬಸವ,
ಮತ್ತದರ ಬಾಲ.

ತರಕಾರಿ ಮಾರುಕಟ್ಟೆಯಲಿ ಸೊಪ್ಪನು ಮೆದ್ದು
ಓಡುತಿದ್ದುವು ತೊಂಡು ದನದ ಹಿಂಡು
ಮೂವತ್ತು ವರ್ಷಗಳ ಹಿಂದೆಯೂ ಇದೆ ಕೆಲಸ
ಹಿಡಿದು ನಡೆಸಿತ್ತಿದರ ಪೂರ್ವಜರ ದಂಡು

ಗುಡಿಬೀದಿಯಲಿ ನಾವು ಬಾಡಿಗೆಗಿದ್ದ ಮನೆ
ಕೆಡವಿ
ಹೊಸಮನೆ ಕಟ್ಟಿದ್ದಾರೆ;
ಮನೆಮುಂದಿನೊಗೆಯುವ ಕಲ್ಲು,
ನೆರೆಮನೆಯ ಹುಡುಗಿ
ದಿನವು ಎದೆಯಲ್ಲಿ ಮಿಡಿಸುತ್ತಿದ್ದ ಝಲ್ಲು
ಮುಗಿಲೆತ್ತರದ ತೆಂಗಿನ ಮರ
ಕೆ
ಹೆದೆಯೇರಿಸಿದ ಕಾಮ
ನ ಬಿಲ್ಲು
ಇಂದಿಲ್ಲ.

ಮುಟ್ಟು ಚಟ್ಟಾದರೂ ಹೊತ್ತಿ ಉರಿಯುತ್ತಿದ್ದ
ಹನುಮನ ಕಿತ್ತೆತ್ತಿ ತಂದು
ಹೊಸ ಗುಡಿಯಲಿಟ್ಟಿದ್ದಾರೆ
ಹಾರಿ ಹೋಗದ ಹಾಗೆ ಸರೀ ಕಟಕಟೆಯ ಕಟ್ಟಿದ್ದಾರೆ.

ಪಾಂಡವರು ಪೂಜಿಸಿದ
ಊರ ನಾರಾಯಣನ
ದೇಗುಲಕೆ,
ಹೊಸ ಬೊಂಬೆಗಳ ಜಡಿದು,
ಮೇಲೆ ಬಣ್ಣವ ಬಡಿದು ಚೊಕ್ಕ ಮಾಡಿದ್ದಾರೆ.

ಮಜ
ಬೂತಾದ ತೇರಿಗೀಗೊಂದು ಭಾರಿಯ ಶೆಡ್ಡು.
ತೇರ ತುಂಬೆಲ್ಲ ಗಿಜಿಗುಡುತಿದ್ದ
ಪಡ್ಡೆದೆವ್ವಗಳೀಗ
ಕತೆಯ ಬುಕ್ಕುಗಳಲ್ಲಿ ತಲೆಮರೆಸಿವೆ.

ಗುಡಿಬಿಟ್ಟು ಎಡಕೆ ಹೊರಳಿದರೆ,
ಕಾವೇರಿ
ಬೀದಿ;
ಪೈಸಕೊಂದು ಬಿಸ್ಕತ್ತಿನಂಗಡಿ-
ರಾಮು ಅಂಗಡಿ;
ಅಲ್ಲೀಗ ನೆಟ್ ಬ್ರೌಸಿಂಗ್ ಸೆಂಟರ್ ತಲೆಯೆತ್ತಿದೆ
ರಾಮುವೂ ಇಲ್ಲ, ರಾವಣನೂ ಇಲ್ಲ.

ಶಾಲೆಯಲ್ಲೆನ್ನೊಮ್ಮೆ ಕಚ್ಚಿ ನೆತ್ತರಿಸಿದ್ದ
ಗುಂಡಣ್ಣನಿನ್ನೂ ಇದ್ದಾನೆ, ಅವಗಿಂದು
ಹಲ್ಲು ಬಿದ್ದಿವೆ, ತಲೆಗೆ ನರೆ ಬಂದಿದೆ

ನನ್ನೊಡನೆ ಬಚ್ಚಲು ಬಿದ್ದು,
ಗೋಲಿ ಗಜ್ಜುಗವಾಡಿ,
ಚಿಣ್ಣಿ-ದಾಂಡನು ಬಡಿದು,
ದೊಣ್ಣೆಯಾಡಿದ ಸಹ-
ಧರ್ಮಚಾರಿಗಳಿಂದು
ಅಪ್ಪಂದಿರಾಗಿದ್ದಾರೆ;
ಮಕ್ಕಳು
ಹೊಂ-ವರ್ಕು ಬುಕ್ಕಿನಲ್ಲಿ ತಲೆಹುಗಿದಿವೆ.

ಸಂಜೆ ಐದಕ್ಕಿಹುದು ಬೆಂಗಳೂರಿನ ಬಸ್ಸು,
ಹೊಚ್ಚ'ಹೊಸ' ಉದಯರಂಗ, ಎಕ್ಸ್ ಪ್ರೆಸ್ಸು.
ಕಿವಿಗೆ ಹತ್ತಿಯ ಜಡಿದು ಸಣ್ಣ ನಿದ್ದೆಯ ಬಡಿದು
ಕಣ್ಣು ಬಿಡುವಷ್ಟರಲಿ ಬೆಂಗಳೂರು,
ಬಿದ್ದಿಹುದು ಕೆಲಸಗಳು ನೂರು ನೂರು!

Friday, September 14, 2007

ಶ್ರಾವಣ ಮುಗಿದ ಮೇಲೊಂದು ಸಂಜೆ

ಶ್ರಾವಣ ಮುಗಿಯಿತು,
ಗೌರಿ
ಬರುವ ಸಮಯ
ಆದರೂ ಬರಲಿಲ್ಲ
ಮಳೆ.

ಆಗಸದಿ ಕಿಕ್ಕಿರಿದ ಮೋಡ,
ಕಂಬಳಿ ಕವುಚಿದಂತೆ;
ಮೂರುದಿನದಿಂದ
ಒಂದೇ ಸಮ
ಧಗೆ,
ಮೂಗುಬ್ಬಸ;

ಅಲ್ಲಲ್ಲಿ ಮಿಂಚು -
ಒಳಗೆಲ್ಲೋ
ಮಿಡಿಯುವ ಕವಿತೆ
ಮೂಡಲೊಲ್ಲದು ಏಕೊ -
ನಡುವೆ ಸಣ್ಣನೆ ಗುಡುಗು,
ಮಳೆರಾಯ ನಕ್ಕಂತೆ -
ಆಹ! ಒಳ್ಳೆಯ ಉಪಮೆ -
ಆಗೊಮ್ಮೆ - ಈಗೊಮ್ಮೆ
ಬೀಸಿ ಬಹ ತಂಗಾಳಿ
ಆದರೂ
ಮಳೆಗೆ ಸಮನೇ ಹೇಳಿ!
ಮಾತು ಕೊಟ್ಟ ಮಳೆ
ಬರಲೇ ಬೇಕಲ್ಲ,
ಗೌರಿಯ ತಣಿಸಲಲ್ಲದಿದ್ದರೂ,
ಕಾವ್ಯದ ತಂತ್ರಕ್ಕಾದರೂ!

ಕಾಯುತ್ತೇನೆ,
ಹನಿಗಣ್ಣ ಮುಗಿಲಲಿ ನೆಟ್ಟು
ನೋಡುತ್ತೇನೆ;
ಮನದಿ ಮೂಡಿದ್ದನ್ನು
ಮುಂದಿರುವ ಕಾಗದದಿ
ಗೀಚುತಿದೆ ಪೆನ್ನು.
ಗುಡುಗಿಗೆಚ್ಚೆತ್ತ ಮಗು
ಅಳು ನಿಲಿಸಿ ನೋಡುತಿದೆ,
ಬರೆವ ಕಾಗದದ ಮೇಲವನ ಕಣ್ಣು;
ಅವಗೀಗ ಆಟದ ಸಮಯ.
ನೂರು ನಲ್ಗಬ್ಬಗಳ-
ನೊಮ್ಮೆಲೇ ಚಿಮ್ಮಿಸುವ ಹಾಲುನಗು-
ಮೊಗದಲ್ಲಿ
ಎರಡು ಹಲ್ಲು,
ಬಾಯ್ತುಂಬ ಜೊಲ್ಲು,
ಅಳು-ನಗು
ಬೆರೆತ ಮಳೆಬಿಲ್ಲು.

ಅರೆ ಇವನ!
ಕಾಗದವ ಕಸಗೊಂಡು
ನಗುತ ಓಡುವ ಪೋರ,
ಪುಟ್ಟ ಕೈಗಳಲಿದ್ದ ನನ್ನ ಕವನ,
ಸರ್ರ ಹರಿಯಿತು
ಮನೆಯ ತುಂಬಿ ಸುರಿಯಿತು
ಕೇಕೆ!
ಹೊರಗೆ ಧೋ... ಮಳೆ!

- ೧೩/೦೯/೨೦೦೭

Saturday, August 11, 2007

ನೀನು ೨

ನೀ ಗಗನ ತಾರಾ,
ನಾ ಮಂದ್ರ
ಪಂಚಮ;
ನಡುವಿನಂತರ
ದ
ಗಾಂಧಾರ-
ದಾಚೆಯ ದಾರಿ
ಗಮನಶ್ರಮ.

ನೀ ಬಾಗಿ ಎನ್ನ ಸೋಂಕಿಸಬಾರದು,
ನಾ ಎಟುಕಿ ನಿನ್ನ ಪಿಡಿಯುವುದಾಗದು;
ಆದರೂ ಇದು ಸಾಧ್ಯ.
ಅಲ್ಲಿಂದ ನೀನಿಲ್ಲಿಗವತರಿಸಿ ಬರಬಹುದು,
ಅಥವ ಇಲ್ಲಿಂದೆನ್ನನುದ್ಧರಿಸಿಕೊಳಬಹುದು;
ಎರಡೂ ಪಾವನ!

ತಾನಗಳ ಗಮಕಿಸುವ
ದೇವಯಾನ ವಿಮಾನ
ವಿರೆ
ಯಾವುದಾಗದು ಹೇಳು
ಸ್ವರ್ಗ ಗಾನ?

- ೨೯/೦೧/೨೦೦೭

Sunday, August 5, 2007

ನೀನು ೧

ಅರೆ!
ನೀ ಯಾವಾಗ ಬಂದೆ?
ಬಂದದ್ದು ತಿಳಿಯಲೆ ಇಲ್ಲ!
ಬರುತಿರುವ ಸುದ್ದಿ ತಿಳಿಸುವುದಿರಲಿ,
ಕದವಾದರೂ ತಟ್ಟಿ ಬರಬಾರದೇ?
ತೆರೆದ ಬಾಗಿಲು ನಿಜ; ಹಾಗೆಂದು...
ಇರಲಿ ಬಿಡು, ತಮಾಷೆಗಂದೆ,
ನೀನು ಬಂದದ್ದೆ ಸಂತಸವೆನಗೆ.

ಹಗಲು ದುಡಿತದ
ನೆರಳು
ಕವಿದ ಕಾರಿರುಳಿನಲಿ
ಹೊರಳಾಟಳ ನಡುವೆ ಸಣ್ಣ ಜೊಂಪು;
ಕ್ಷಣದ ಸುಖ -
ನಿದ್ದೆ,
ಮಂಪರಲಿ ಹಿತ -
ವಾಗಿ ತೀಡುತ್ತಿರುವ ಮಲಯವಾತ
ಹೊತ್ತು ತಂದಿಹ ಪಾರಿಜಾತ
ಕುಸುಮದ ಕಂಪು;
ಚಿಲಪಿಲ ಹಕ್ಕಿಗೊರಳಿನ ಇಂಪು;
(ನಿನ್ನೊಡನೆ ತಂದುದೇನು?)
ದೂರದ ಮಸೀದಿಯಲಿ ಐದರ ನಮಾಜು,
ದೇಗುಲದಿ ಸುಬ್ಬಲಕ್ಷ್ಮಿಯು ಉಲಿವ
ಸುಪ್ರಭಾತ,
ದಿನವು ಆಗುವುದೆನಗೆ ಜೋಗುಳದ ಗೀತ.

ಕಣ್ತೆರೆದು ನೋಡೆ,
ನೀ
ಎಂದಿನಿಂದಲು ಇಲ್ಲೆ ಇದ್ದಂತೆ
ಸವ್ವಾರಿ ನಡೆಸಿದ್ದೆ ನನ್ನ ಮೇಲೆ;
ಹೊರಗೆ
ಬೀದಿಯ ತುಂಬ
ಹೊಸ ಚಿಗುರಿನೊಗರು,
ಹುರಿಯೆದ್ದ ಕಾಮನ ಬಿಲ್ಲು
ಮೆರವಣಿಗೆ ಹೊರಟಿತ್ತು ನೂರು ನೂರು;
ಮನೆಯ ಮುಂದೆಲ್ಲ
ನೂರ್ ಬಣ್ಣಗಳ ರಂಗೋಲೆ;
ಊರೆಲ್ಲ ಧರಿಸಿತ್ತು ಹಬ್ಬಗಳ ಮಾಲೆ.
ಈ ವಸಂತದ ಸಂತ -
ಸದ ಯಾವ ಕ್ಷಣದಲ್ಲಿ,
ಯಾವ ಮಾಯೆಯಲಿ ನೀ
ಹೊಕ್ಕು ಬಂದೆ?

ಎಂದಿನಿಂದಲು ನೀನಿಲ್ಲೆ
ಇದ್ದದ್ದೆ ನಿಜವಿರಬೇಕು;
ಇಲ್ಲದಿದ್ದರೆ,
ನೀನು ಕದ ದೂಡಿ ಒಳಬಂದರೂ
ಏಳದಿಹ ಕತ್ತೆ
ಆಸಾಮಿ ನಾನಲ್ಲ.
ಅಥವ
ನೀನು ಕಾಲಲಿ ಬೆಕ್ಕನಿಟ್ಟು ನಡೆದಿರಬೇಕು.

ಇರಲಿ,
ನಿನಗೀ ಸವಾರಿ ಖುಶಿ ತಂದಿತಷ್ಟೆ?
ನೀ ಸುಖದ ಸವ್ವಾರಿ ನಡೆಸಿರಲು
ಮನದೊಳೊಸರಿದ ಬೆಚ್ಚನೆಯ
ಚೊಚ್ಚಲನುಭವಕೊಂದು ರೂಪವ ಕೊಡಲು
ಹುಡುಕಿರಲು
ಕಂಡಳಾ ಸೊಗಸುಗಾತಿ;
ಅವಳ ಕೆನ್ನೆಯ ಕೆಂಪು
ನುಡಿಯಿಂಪು, ಮೈಸೊಂಪು,
ಕಣ್ಣಂಗಳದ ತುಂಬ ಬೆಳದಿಂಗಳು.

ನೀನಂತು ಮತ್ತೇರಿ ತೂಗುತಿದ್ದೆ;
ಮರದೆದೆಯ ಹದಗೊಳಿಸಿ,
ಹೂವಂತೆ ಮಿದುಗೊಳಿಸಿ,
ಮಡಗಿಸಿದೆ ಅದನವಳ ಕಾಲಡಿಯಲಿ.
ನಿನ್ನ ಮಾಯೆಯೆ ಮಾಯೆ!
ಮಡಗಿದ್ದು, ಕಾಲಡಿಗೆ ಸಿಲುಕಿ ನಲುಗಿರುವಾಗ
ತಡೆವ ಕಡುಕಠೋರತೆ ಹನಿಸಿ ಹೂವೆದೆಗೆ,
ಕಾದೆ,
ಸುಮವಜ್ರಸಮವೆನ್ನಿಸಿ!
ಏನಿದೀ ಹುಡುಗಾಟ?
ಮಗುವನೂ ಜಿಗುಟಿ ತೊಟ್ಟಿಲ ತೂಗುವಾಟ!

ಪೊರೆಯಲಿನ್ನೊಂದು ಕೈ
ಮೈ-ಮನಗಳೊಡನಾಟ;
ಅಮೃತವಾಗಿತ್ತಿಲ್ಲಿ
ಕಾಳಕೂಟ!

ಅಂತೂ
(ನಾ ನಿನ್ನ ಹೊತ್ತೆನೋ, ನೀನೆನ್ನ ಹೊತ್ತೆಯೋ)
ಮುನ್ನೆಡೆದಿರಲು
ಹಾದಿಬದಿ ಮರವೆಲ್ಲ ಕೆಂದಳಿರು,
ಹೂ-ಹಸಿರು,
ಹಣ್ಣ ಸವಿದಿಹ ಹಕ್ಕಿ,
ಅಂಕದೊಳಗಾಡುತಿಹ ಹೂ ಮಕ್ಕಳು;
ಹಿಮ್ಮೇಳ - ಮುಮ್ಮೇಳ
ಬೆಳ್ಗೊಡೆಯ ನೆರಳಡಿಗೆ
ಮುಗಿದಿರಲು ಅರ್ಧ ದಾರಿ,
ಏಕೋ ಸಣ್ಣಗೆ ಸುಸ್ತು;
ನಿಂತೆ
ಒಂದರೆಗಳಗೆ;
ಮೇಳಗಳ ಸದ್ದಿಲ್ಲ,
ದೂರದಲಿ ಕೂಗಿತ್ತು ಒಂಟಿ ಕಾಗೆ.
ತಲೆಯೆತ್ತಿ ನೋಡಿದರೆ
ಮೇಲೆ ಬೆಳ್ಗೊಡೆ
ಬಿಸಿಲು,
ಮಧ್ಯಾಹ್ನ ಒಂದೊ ಎರಡೋ!
ಕುರಿತ ಊರಿನ್ನು ನಾಲ್ಕೈದು ತಾಸಿರಬೇಕು.
ಇದ್ದಕಿದ್ದಂತೆ ನೀನೆಲ್ಲಿ ಹೊರಟೆ?
ಅಥವ
ನೀನಿಲ್ಲೆಂದು ಹೇಳಬರುವುದೂ ಇಲ್ಲ;
ಇಲ್ಲೆ ನಗುತಿವೆ ಪಾರಿಜಾತದರಳು.

ಸರಿ, ಇನ್ನು ನಡೆಯೋಣ,
ತಾಸೆರಡು ತಾಸಿನಲಿ ಕಂತೀತು ಸುಡುಬಿಸಿಲು
ಹರಡೀತು ಹೊನ್ನ ಹೊನಲು.
ಹಾದಿಬದಿಯಲ್ಲೊಂದು ಹೊಂಗೆ ಮರವಿದೆಯಂತೆ
ಹಿತವಂತೆ ಅದರ ನೆರಳು.

- ೨೧/೦೧/೨೦೦೭

Sunday, July 29, 2007

ಪದ್ದಕ್ಕ ಸತ್ತ ಸುದ್ದಿ

ಮಕರ
ಸಂಕ್ರಮಣದ ಮರುದಿನ
ಕರಿ ಹರಿದಿತ್ತು
ಮುಂಜಾನೆ
ಬ್ರಾಹ್ಮಿ ಕಳೆದೆರಡು ತಾಸು;
ಆರು
ಹೊಡೆಯಲಿನ್ನೈದು ನಿಮಿಷಗಳನಳೆದಿತ್ತು ಗಡಿ
ಯಾರ;
ಗುಣುಗುಣಿಸಿ ಕರೆದಿತ್ತುಫೋನು.

ಅಷ್ಟು ಹೊತ್ತಲಿ ನಮಗೆ ಫೋನು ಬರುವುದೆ ಇಲ್ಲ,
ಕೆಲಸದ ಕರೆಯನು ಬಿಟ್ಟು.
ಕೆಲಸದ್ದಂತೂ ಇರಲಿಕ್ಕಿಲ್ಲ,
ಅದಕೆ ಮೊಬೈಲಿದೆಯಲ್ಲ.
ಹಬ್ಬದ ಸಡಗರ ಖಂಡಿತ ಅಲ್ಲ,
ನೆನ್ನೆಯೆ ಮುಗಿದಿತ್ತೆಲ್ಲ!
ಮತ್ತೇನೀ ಕರೆ
ಬೆಳಗಿನ-
ಮಂಗಳ ವೇಳೆಯಲಿ?

ಕೊನೆಪಟ್ಟಿಯಲ್ಲಿಹರನೊಮ್ಮೆ ಮನ ನೆನೆದಿತ್ತು,
ಛೆ ಛೆ! ಮಂಗಳಮಸ್ತು!
ನಡುಗುಗೈಯನು ಪಿಡಿದು ನುಡಿದಿತ್ತು ಗ್ರಾಹಿ,
ದೂರದಿಂ ತಂದ ಸುದ್ದಿ;
ಪದ್ದಕ್ಕ ಸತ್ತರಂತೆ.
ಸುದ್ದಿ ಬರ
ಸಿಡಿಲೇನು ಆಗಿರಲಿಲ್ಲ;
ನೂರರ ವೃದ್ಧೆ ಪದ್ದಕ್ಕ
ಇದ್ದದ್ದೆ ಗೊತ್ತಿರಲಿಲ್ಲ.
ತುಂಬು ಜೀವ,ಇದ್ದಾಗೊಮ್ಮೆ ನೋಡಿ ಬರಬೇಕಿತ್ತು;
ಸಂಬಂಧ,
ಬದುಕಿಗೆ ದೂರ,
ಸಾವಿಗೆ ಹತ್ತಿರ;
ದಶರಾತ್ರ
ಜ್ಞಾತಿ
ಹತ್ತು ದಿನ
ಸೂತಕವಿರಬೇಕು.

ಅಣ್ಣ ನಡುಗುತ್ತಿದ್ದರು.
ಕೊರೆವ ಚಳಿ,
ಕಾಯಿಸಲು
ಗ್ಯಾಸಿಲ್ಲ, ಲೈಟಿಲ್ಲ, ನೀರಿನ್ನೂ ಬಂದಿಲ್ಲ;
ಸುದ್ದಿ ಕೇಳಿದ ಸ್ನಾನವಾಗಬೇಕು.
ಸ್ನಾನವಾಗಲೆ ಬೇಕು
ಹೊರಗೆ ಹೊರಡುವ ಮುನ್ನ,
ಎಂಟಕ್ಕೆ ಆಫೀಸು.
ಆರು ಹೊಡೆದಿತ್ತು ಗಡಿಯಾರ
ಮಂಗಳವಾರ
ರೇಡಿಯೋ ಮೊಳಗಿತ್ತು ನಾದಸ್ವರ.
ಹೊರಗೆ ಬೀದಿಯ ಮೇಲೆ ಹೂವು ಮಾರುತ್ತಿತ್ತು;
ಹಾಲೂ ಬಂತು, ಪೇಪರೂ ಬಂತು.
ಏಳಕ್ಕೆ ಎದ್ದ ಮಗು ಆಟವಾಡುತ್ತಿತ್ತು,
ಸಂದ ನೂರರ ಹರಕೆ ತುಂಬಿದಂತೆ.

- ೧೭/೦೧/೨೦೦೭

Sunday, July 22, 2007

ಕಾವ್ಯ ಎಂದರೆ...

ಶತಮಾನಗಳಿಂದ ಕನ್ನಡ ಕಾವ್ಯ ನಡೆದುಬಂದ ದಾರಿಯನ್ನು ಸುಮ್ಮನೆ ಸ್ಥೂಲವಾಗಿ ಗುರುತಿಸುವ ಪ್ರಯತ್ನ ಈ ಕವನ. ಹಾಗೆಂದು ಎಲ್ಲ ಕಾಲಘಟ್ಟದಲ್ಲಿ ಬರುವ ಎಲ್ಲ ಪ್ರಾತಿನಿಧಿಕ ಮಾದರಿಗಳನ್ನು/ಕವಿಗಳನ್ನು ಈ ಕವನ ಒಳಗೊಳ್ಳುವುದಿಲ್ಲ, ಅದು ಈ ಕವನದ ಉದ್ದೇಶವೂ ಅಲ್ಲ. ಕೇವಲ, ಕಾವ್ಯ ನಡೆದು ಬಂದ ದಾರಿಯನ್ನು ನನಗೆ ತೋರಿದಂತೆ ಚಿತ್ರಿಸುವುದಷ್ಟೇ ಈ ಕವನದ ಉದ್ದೇಶ.

ಆಯಾ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ ಭಾಷೆ, ಶೈಲಿ, ಪ್ರತಿಮೆಗಳ ಮಾದರಿಯನ್ನೇ ಬಳಸಿಕೊಳ್ಳುವ, ಹಾಗೂ ಆಯಾ ಕಾಲಘಟ್ಟದಲ್ಲಿ ಅತಿಯೆನ್ನಿಸುವಷ್ಟು ಎದ್ದು ಕಾಣುವ ಅಂಶಗಳನ್ನು ಬಳಸುವ ಮೂಲಕ ಆಯಾ ಕಾಲದ ಕಾವ್ಯವನ್ನು ಗುರುತಿಸುವ ಪ್ರಯತ್ನ ಇಲ್ಲಿದೆ. ಇದು ಕೆಲವೊಮ್ಮೆ ವಿಡಂಬನೆಯ ರೂಪವನ್ನು ತಳೆದಿರುವುದೂ ಇದೆ. ಆದರೆ ಇದರ ಅರ್ಥ ಆ ಕಾಲಘಟ್ಟದಲ್ಲಿ ಬಂದ ಕಾವ್ಯ ಜೊಳ್ಳು ಅಥವ ಹಾಸ್ಯಾಸ್ಪದ ಎಂದಲ್ಲ; ನಮಗೆ ತೀರ ಪ್ರಿಯರಾದವರ ಅಂಕು ಡೊಂಕುಗಳನ್ನು ಎತ್ತಿ ತೋರಿಸಿ ತಮಾಷೆ ಮಾಡುವ ರೀತಿ ಎಂದಿಟ್ಟುಕೊಳ್ಳಬಹುದು.

=========
ಕಾವ್ಯ ಎಂದರೆ...
=========
(೧)
ಕವಿರಾಜಮಾರ್ಗಮೆಸೆದಿರೆ,
ಕವಿಕುಳಾಶ್ರಯ ಕಲ್ಪತರುವೆನಿಪ
ಭೂಪಾಲ ಕುಳಮಿರಲ್,
ಕವಿ ಮೇಘ ಸಂಘರ್ಷಣೋಜ್ಜನಿತ
ಕಾವ್ಯ ವಿದ್ಯುಲ್ಲತಾ ಪ್ರಭಾವಳಯಂ;
ಕಾವ್ಯ ವರ್ಷಂ;
ಕವಿಮತ್ತವಾರಣ ಪರಸ್ಪರಾಭಿಸಂಘಟ್ಟನೋತ್ಪಾದಿತಾರುಣ ಸಲಿಲ ಸಮ್ಮಿಶ್ರಿತ
ಕಾವ್ಯ ಸರಸ್ವತೀ ಸರಿತ್ಪ್ರವಾಹಂ.

(೨)
ಕಾವ್ಯಪ್ರಯೋಜನಂ
ವಾರ್ಧಕಮನೈದಿ ಬರಲೊಂದು ಸೊಗಂ;
ಕಂದನ ರಗಳೆಯದೊಂದು ಮುದಂ;
ಭಾಮಿನಿಯ ನಲ್ವಾತಿನ ಸೊಗಕೇಂ ಸಮನೈ?
ಕೇಳದೋ,
ವೀರನಾರಯಣಕುವರಂ ಪೇಳುತಿಹ
ಭಾರತದ ಚಾರು ಕತೆಯಂ.

(೩)
ಅನುಭವದ ಮಂಟಪದಿ
ನುಡಿಯ ಸ್ಫಟಿಕ ಶಲಾಕೆಯಲುಗೆ
ತೊಳಗಿದ ಮಾಣಿಕದ ದೀಪ್ತಿ
ತೋರಿದ್ದು
ಶೂನ್ಯ
ಸಿಂಹಾಸನ.
ಕೊನೆಗುಳಿದದ್ದು
ಸಿಂಹಾಸನವೂ ಅಲ್ಲ!
ಮಾಡು ಸಿಕ್ಕಲಿಲ್ಲ,
ಮಾಡಿನ ಗೂಡೂ ದಕ್ಕಲಿಲ್ಲ;
ನಾಮ
ಸಂಕೀರ್ತನೆಗೆ ಆದಿಕೇಶವ - ವಿಠಲ.

(೪)
ಹೊಂಬಿಸಿಲು,
ಹೂ - ಹಣ್ಣು,
ಹೆಣ್ಣ ಕುರುಳಿನ ಲಾಸ್ಯ;
ಹಿತವಾಗಿ ಅಲ್ಲಲ್ಲಿ ಹೊಕ್ಕು ಹೊರಡುವ ಹಾಸ್ಯ;
ಕವಿಶೈಲದಲಿ ಕುಳಿತು ಧ್ಯಾನಿಸಿ ನೋಡೆ
ಬಾನಿನಲಿ ನರ್ತಿಸುವ ಹೊನ್ನ ನವಿಲು;
ಒಮ್ಮೊಮ್ಮೆ ಕಾರಿರುಳು,
ಜೀರಿಡುವ ಮಲೆ - ಕಾನು
ರುದ್ರ ಭೀಷಣ ಭೀಷ್ಮ ಸಹ್ಯಾದ್ರಿ;
ಮಹಾ ಮೇಘ ರಂಜಿತ ರುಂದ್ರ ಗಗನ, ಘನ ನೀಲ;
ಮರುಕ್ಷಣವೆ ಮಳೆ,
ಗುರುಕೃಪೆಯೆ ಇಳೆಗೆ ಸುರಿದಂತೆ;
ಮಲೆ ದೇವ ನಗುವಂತೆ
ತೀಡುತಿಹ ತಂಗಾಳಿ
ಯಲಿ
ಮಿಂದು ಪಾವನ
ಯದುಶೈಲ.

(೫)
ಯೋನಿತಳದಿಂದೆಳೆದು
ಎದೆಹೊಕ್ಕು ಹೊರಡುವ ನಾಳ,
ವೈತರಣಿ;
ಎದೆಯಾಳದುದ್ವೇಗ,
ಮತಿ ವಿಚಾರ - ವಿಕಾರ
ಕಲಮಲಿಸಿ
ತೊಳಸಿ
ಹೊರನುಗ್ಗಿರಲು
ಪೈಪಿನ ತುದಿಗೆ
ನವರಂಧ್ರ ಝಾಲರಿಯಿಟ್ಟು
ಕಾರಂಜಿ
ತೋರಿಸುವ ಕಸರತ್ತು;
ಕೆಲವೊಮ್ಮೆ
ಧಾತು ಸಾಲದೆ
ಹೊರಟ ಮಾತೂ ಹರಡಿ
ಜರಡಿ
ಬಿದ್ದ
ಪೈಪಿನ ತುದಿಗೆ
ಸೊರಗಿದ ಬುಗ್ಗೆ.

(೬)
ಧಿಕ್ಕಾರ...
ತಳೆದ ಮುಖವಾಡಕ್ಕೆ,
ಒಣಹುಲ್ಲ ಮಾಡಕ್ಕೆ,
ನನಗೆ, ನಿನಗೆ, ಅದಕೆ, ಇದಕೆ;
ನೂರು ಕಣ್ಣು ಮಣ್ಣಲ್ಲಿ ಹುದುಗಿರುವಾಗ,
ಕಾವ್ಯ?!
ಪುಟಗೋಸಿ, ಮಣ್ಣಂಗಟ್ಟಿ.
ಎಲ್ಲಿ ಹುಡುಕುವೆ ನೀನು?
ಕಾವ್ಯವಿರುವುದು ನಿನ್ನ ಪೆನ್ನಲಲ್ಲೋ ಅಣ್ಣ,
ಮಣ್ಣಿನಲ್ಲಿ.
ಎಸೆ ಪೆನ್ನು,
ಹಿಡಿ ಮಣ್ಣು;
ತೊಡೆ,
ಹಣೆಗೆ...
ಕಣ್ಣು ಬಸೆದಿರುವ ಬಿಸಿ
ನೆತ್ತರನೆ ಮಸಿ ಮಾಡಿ
ಬರೆ,
ಮುಟ್ಟಿ ನೋಡಿಕೊಳ್ಳೋಹಾಗೆ.
ಬಂಡೇಳು! ಬಂಡೇಳು!!
ಓ ಏಳು ಬಂಡೆಯೆ ಏಳು.
ಒಂದೆರಡಾದರೂ ಬೀಳದಿರೆ ತಲೆ,
ವ್ಯರ್ಥ ಕಾಣೋ ನಿನ್ನ ಲೇಖನ ಕಲೆ!

(೭)
ವರುಷ ವರುಷಗಳಿಂದ
ಹರಿದಿಹಳು ಕಾವ್ಯಧುನಿ,
ರಕ್ತೆ, ಶ್ಯಾಮಲೆ, ಅಮಲೆ,
ಮಲಿನೆ, ಶುದ್ಧಸ್ಫಟಿಕೆ,
ವಿವಿಧ ವರ್ಣೆ;
ಈ-ಮೈಲು ಎಸ್ಸೆಮ್ಮೆಸ್ಸುಗಳ
ವೇಗದಬ್ಬರದಲ್ಲೂ
ಕೆಲವೊಮ್ಮೆ ಸುವ್ಯಕ್ತೆ,
ಕೆಲವೊಮ್ಮೆ ಲುಪ್ತೆ.

- ೦೮/೦೫/೨೦೦೬