Monday, March 16, 2020

ಕೊರೋನಾ - ಭೀತಿ ಬೇಡ, ಮೌಢ್ಯ ಬೇಡ - ಹೊಣೆಯಿರಲಿ


ಪ್ರಪಂಚವೆಲ್ಲಾ ಕೊರೋನಾ ಭೀತಿಯಲ್ಲಿ ತತ್ತರಿಸುತ್ತಿರುವಾಗ, ನಾಲ್ಕು ಮೌಢ್ಯದ ಸುದ್ದಿಗಳು ನನ್ನ ಮುಂದಿವೆ.  ಇಂಥವು ನೂರಾರಿರಬಹುದು, ಈ ನಾಲ್ಕು ಪ್ರಾತಿನಿಧಿಕ:
  1. ದುಬೈನಿಂದ ಬಂದ ನಾಲ್ವರು ಯುವಕರು ತಮ್ಮ ಧರ್ಮದ ನೆಪವೊಡ್ಡಿ ಕೊರೋನಾ ಪರೀಕ್ಷೆಗೆ ನಿರಾಕರಿಸಿದ್ದಾರೆ
  2. ಅದೇನೋ "ಗೋಮೂತ್ರ ಪಾರ್ಟಿ"ಯಂತೆ - ಗೋಮೂತ್ರವಾದಿ ಸಂಘಟನೆಯೊಂದು ಏರ್ಪಡಿಸಿದ್ದ 'ಪಾರ್ಟಿ'ಯಲ್ಲಿ ಎಷ್ಟೆಷ್ಟೋ ಜನ ದೂರದೂರದಿಂದ ಬಂದು ಲೋಟಗಟ್ಟಲೆ ಗೋಮೂತ್ರವನ್ನು ಗಟಗಟನೆ ಕುಡಿದು, ಕೊರೋನಾ ವೈರಸ್ಸಿಗೆ ಪೂಜೆ ಮಾಡಿ "ಕೊರೋನಾ ಸಾಂತ್ ಹೋ ಜಾವ್" ಎಂದು ಘೋಷಣೆ ಕೂಗಿ ಗೆದ್ದೆವೆಂದುಕೊಂಡಿದ್ದಾರೆ - ಗೋಮೂತ್ರದಿಂದ ಕೊರೋನಾ ಕಂಬಿಕೀಳುತ್ತದೆಂದೂ, ಕೊರೋನಾ ಹಿಡಿದಿರುವ ಯಾರನ್ನೇ ಆಗಲಿ ತಮ್ಮ ಬಳಿ ಕರೆತಂದರೆ ತಾವು ಚಟಕ್ಕನೆ ಅವರನ್ನು ಗೋಮೂತ್ರದಿಂದಲೇ ಗುಣಪಡಿಸುತ್ತೇವೆಂದು ಸಂಘಟನೆಯ ಕೆಲವರು ಘಂಟಾಘೋಷವಾಗಿ ಭರವಸೆ ನೀಡಿದ್ದಾರೆ.
  3. ಇರಾನಿನ ಮುಲ್ಲಾ ಒಬ್ಬ, ಗುದದ್ವಾರಕ್ಕೆ ಕೆಲವು ಎಣ್ಣೆ ಹಚ್ಚಿದರೆ ಕೊರೋನಾ ಮಟಾಮಾಯವಾಗುತ್ತದೆಂದು 'ಕಂಡುಹಿಡಿದು', ಹಾಗೇ ಮಾಡುವಂತೆ ಕರೆಕೊಟ್ಟಿದ್ದಾನೆ. 
  4. ಯಾವುದನ್ನಾದರೂ ಸರೇ, 'ಓರಾಟ'ವೇ ಪರಿಹಾರವೆಂದು ತಿಳಿದಿರುವ ಡಾಕ್ಟರೊಬ್ಬ, ಕೊರೋನಾ ವಿರುದ್ಧ ಮುನ್ನೆಚ್ಚರಿಕೆಯಾಗಿ ಶಾಲೆ ಕಾಲೇಜು ಸಮಾರಂಭ ಮೊದಲಾದುವುಗಳನ್ನು ಸ್ಥಗಿತಗೊಳಿಸಿರುವುದನ್ನು ಪ್ರತಿಭಟಿಸಿ, ಜನ ಬೀದಿಗಿಳಿದು ಹೋರಾಡಬೇಕೆಂದು ಕರೆಕೊಟ್ಟಿದ್ದಾನೆ.

ಮೌಢ್ಯದ ನಾಲ್ಕು ಮುಖಗಳನ್ನು ನೋಡಿದ್ದಾಯಿತಲ್ಲ.  ಇನ್ನಿವನ್ನು ಆಯಾ ಪಂಥದ ಪರವಿರುವವರು, ವಿರುದ್ಧವಿರುವವರು ಹಂಚಿಕೊಂಡು ಮೆಚ್ಚುತ್ತಾ ಹೀಗಳೆಯುತ್ತಾ ಸಂಭ್ರಮಿಸುತ್ತಿದ್ದರೆ, ಇತ್ತ ಟೀವಿ ಚಾನಲ್ಲುಗಳು, ಈಗಿನ್ನೂ ದೇಶದೊಳಗೆ ಮೂಗಿಟ್ಟು ಹತ್ತು ಜನರನ್ನೂ ಕೊಂದಿಲ್ಲದ ವೈರಸ್ಸಿನ ಬಗ್ಗೆ "ಕೊರೋನಾ ಮರಣಮೃದಂಗ", "ಕೊರೋನಾ ಸಾವಿನ ತಮಟೆ" ಎಂದೆಲ್ಲಾ ರುಮ್ಮರುಮ್ಮನೆ ಮಾರಿತಮಟೆಯನ್ನು ಬಡಿಯುತ್ತಾ, ಬೀದಿಬೀದಿಯಲ್ಲೂ ನೂರಾರು ಹೆಣ ಬೀಳುವ ದೃಶ್ಯವನ್ನು ಕಲ್ಪಿಸಿಕೊಂಡು ಜೊಲ್ಲುಸುರಿಸುತ್ತಾ ಕುಣಿಯುತ್ತಿವೆ; ಸರ್ಕಾರವೋ, ಫೋನು ಮಾಡುವವರ ಕಿವಿಯೊಳಗೆಲ್ಲಾ ಕೆಹ್ಹು ಕೆಹ್ಹು ಎಂದು ಕೆಮ್ಮುತ್ತಾ, ಕೊರೋನಾಗಿಂತಾ ಈ ಕೊರೋನಾ ಜಾಗೃತಿಯ ಬಗೆಗೇ ಅಸಹ್ಯ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಯಾರಿಗಾದರೂ ಅರ್ಜೆಂಟಾಗಿ ಕರೆ ಮಾಡಬೇಕು, ಅವರು ಫೋನೆತ್ತುತ್ತಿಲ್ಲ.  ಹೀಗೆ ಒಂದಿಪ್ಪತ್ತು ಕರೆ ಮಾಡಿದರೆ, ಪ್ರತಿ ಕರೆಯಲ್ಲೂ ಅರ್ಧರ್ಧ ನಿಮಿಷ ಇವರ ಕೊರೋನಾ ಕೆಮ್ಮು - ವಿಫಲವಾದ ಇಪ್ಪತ್ತು ಕರೆಗೆ ಹತ್ತು ನಿಮಿಷ ಕೆಮ್ಮಿನ ನಿನಾದ ಕೇಳುವುದರಲ್ಲೇ ಖತಂ.  ಸಹನೆ ಉಳಿದೀತಾದರೂ ಎಲ್ಲಿಂದ?

ಇನ್ನಿವೆಲ್ಲಾ ಗೊಂದಲ ಗದ್ದಲಗಳ ನಡುವೆಯೂ, ನಮ್ಮ ದೇಶವೂ ಸೇರಿದಂತೆ ಪ್ರಪಂಚದಾದ್ಯಂತ ನೂರಾರು ವಿಜ್ಞಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಈ ವೈರಸ್ಸಿಗೆ ಮದ್ದರೆಯುತ್ತಿದ್ದಾರೆ, ಸಾವಿರಾರು ಜನ ವೈದ್ಯರು, ದಾದಿಯರು, ತಮ್ಮ ಜೀವವನ್ನೇ ಒತ್ತೆಯಿಟ್ಟು ರೋಗಿಗಳ ಶುಶ್ರೂಷೆಯಲ್ಲಿ ಈಡುಪಟ್ಟಿದ್ದಾರೆ, ಸರ್ಕಾರ, ಸಾವಿರಾರು ಜನ ಸರ್ಕಾರೀ ಅಧಿಕಾರಿಗಳು, ಆರೋಗ್ಯಕಾರ್ಯಕರ್ತರು ಏರ್ಪೋರ್ಟುಗಳಲ್ಲಿ, ಸಾರ್ವಜನಿಕಸ್ಥಳಗಳಲ್ಲಿ ರೋಗ ಹರಡದಂತೆ ತಕ್ಕ ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಹೆಣಗುತ್ತಿದ್ದಾರೆ.

ಇವರೆಲ್ಲರ ಶ್ರಮ ವ್ಯರ್ಥವಾಗಬಾರದೆಂದರೆ, ನಮ್ಮ ಈ ಗದ್ದಲ ಗೊಂದಲಗಳನ್ನು ಹತ್ತಿಕ್ಕಿ, ಕಿಂಚಿತ್ತಾದರೂ ಪ್ರಬುದ್ಧತೆ ತೋರುವುದು ನಮ್ಮೆಲ್ಲರ ಹೊಣೆ.  ಕೊರೋನಾ ಬಗ್ಗೆ ಜೋಕು ಮಾಡಿ ನಕ್ಕುಕೊಳ್ಳುವುದಕ್ಕೂ, ಮೌಢ್ಯವನ್ನು ಚಳುವಳಿಯೋಪಾದಿಯಲ್ಲಿ ಹರಡುವುದಕ್ಕೂ ವ್ಯತ್ಯಾಸವಿದೆ.  ಮೊದಲನೆಯದು ಮನಸ್ಸನ್ನು ಹಗುರಗೊಳಿಸಿ ಸುಸ್ಥಿತಿಯಲ್ಲಿಡಬಲ್ಲುದು, ಎರಡನೆಯದು ಇದ್ದ ಬುದ್ಧಿಯನ್ನೂ ಕೆಡಿಸಿ ಅನಾಹುತಕ್ಕೆಡೆಮಾಡಿಕೊಡಬಲ್ಲುದು.

ಅನಗತ್ಯವಾಗಿ ಎಲ್ಲಿಯೂ ಹೋಗದೇ, ಕೊರೋನಾ ಶಂಕೆಯಿರುವ ಕಡೆಗಂತೂ ತಲೆಯನ್ನೇ ಹಾಕದೇ ಸಾಧ್ಯವಾದಷ್ಟೂ ಮನೆಯಲ್ಲಿ ಕಾಲ ಕಳೆಯಲು ಇದು ಸುಸಮಯ.  ಕೊನೆಯ ಪಕ್ಷ ಮನೋರಂಜನೆ, ಊಟ-ತಿಂಡಿಗಳಾದರೂ ಮನೆಯಲ್ಲೇ ಆದರೆ ಅಷ್ಟರ ಮಟ್ಟಿಗೆ ಸಂಸಾರದ ಬಂಧ ಬಲಗೊಂಡಿತೆನ್ನಬೇಕು.  ಕೆಲಸಕ್ಕೆ ಹೋಗಲೇಬೇಕಾದವರಿಗೆ ವಿಧಿಯಿಲ್ಲ, ಮಾಸ್ಕು ಧರಿಸಿ, ಇದ್ದುದರಲ್ಲಿ ಹುಷಾರಾಗಿದ್ದರೆ ಆಯಿತು.  ಮಾಸ್ಕಿಗಾಗಿ ಅಂಗಡಿಯ ಮುಂದೆ ನೂಕುನುಗ್ಗಲು ಬೇಡ.  ಸ್ವಚ್ಛವಾದ ಬಟ್ಟೆಯಿಂದ ಮನೆಯಲ್ಲಿ ಮಾಸ್ಕು ಮಾಡಿಳ್ಳುವುದು ಕಷ್ಟವಲ್ಲ - ಮಾಸ್ಕೇನು ಕೊರೋನಾದಿಂದ ರಕ್ಷಣೆ ನೀಡುವುದಿಲ್ಲ, ಕೆಮ್ಮಿದಾಗ ಸೀನಿದಾಗ ಅದು ಬಲವಾಗಿ ವಾತಾವರಣದೊಳಗೆ ಉಗ್ಗದಂತೆ ತಡೆಯುತ್ತದೆ, ಹೊರಗಿರುವ ವೈರಸ್ಸು ಸಲೀಸಾಗಿ ಮೂಗಿನೊಳಗೆ ನುಗ್ಗಲು ಕೆಲಮಟ್ಟಿಗೆ ತಡೆಯೊಡ್ಡುತ್ತದೆ - ಅಷ್ಟುಮಟ್ಟಿಗೆ ಹರಡುವಿಕೆಯನ್ನು ನಿಧಾನ ಮಾಡುತ್ತದಷ್ಟೇ.

ತಜ್ಞರ ಸಲಹೆ ಎಲ್ಲಕ್ಕಿಂತ ಮುಖ್ಯ, ಸ್ವವೈದ್ಯ ಬೇಡ.  ತುಳಸಿ, ಶುಂಠಿ, ಮೆಣಸು, ಬೆಳ್ಳುಳ್ಳಿ, ಅಮೃತಬಳ್ಳಿ, ಬೇವು, ಪರಂಗಿ ಎಲೆ ಇವೆಲ್ಲಾ ಸಾಮಾನ್ಯವಾಗಿ ರೋಗನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆಂಬುದು ಹೌದು, ಹೆಚ್ಚಿದ ರೋಗನಿರೋಧಕಶಕ್ತಿ ಕೊರೋನಾ ವಿರುದ್ಧ ಹೋರಾಡುವ ಶಕ್ತಿಯನ್ನೂ ಕೆಲಮಟ್ಟಿಗೆ ನೀಡಬಹುದು - "ಬಹುದು" ಅಷ್ಟೇ.  ಇವಾವುವೂ ನಿರ್ದಿಷ್ಟವಾಗಿ ಕೊರೋನಾ ವೈರಸ್ಸಿಗೆ ಮದ್ದೆಂಬ ಸಂಗತಿ ದೃಢಪಟ್ಟಿಲ್ಲ.  ಸಾಮಾನ್ಯ ಹಿತದೃಷ್ಟಿಯಿಂದ ಇವನ್ನು ಬಳಸಿದರೆ ನಷ್ಟವೇನೂ ಇಲ್ಲ.  ಸಾಂಪ್ರದಾಯಿಕ ಮನೆಮದ್ದು ಎಷ್ಟೋ ವಿಷಯಗಳಲ್ಲಿ ರಾಮಬಾಣವೆನ್ನುವುದು ಸತ್ಯ (ಬಳಸಿದ್ದರಿಂದ ಒಳ್ಳೆಯದಾದರೆ ಸಂತೋಷವೇ), ಆದರೆ ಬಳಸಿದ ಮಾತ್ರಕ್ಕೆ ನಾನು ಕೊರೋನಾದಿಂದ ಸುರಕ್ಷಿತ ಎಂಬ ಭ್ರಮೆ ಬೇಡ, ತಕ್ಕ ಪರೀಕ್ಷೆ/ಚಿಕಿತ್ಸೆಗಳನ್ನು ಕಡೆಗಣಿಸುವುದು ಬೇಡ.

ಸೋಂಕನ್ನು ತಡೆಗಟ್ಟಲು, ಸೋಂಕಿನ ಲಕ್ಷಣ ಕಂಡುಬಂದರೆ ಏನು ಮಾಡಬೇಕೆಂಬುದನ್ನು ಸರ್ಕಾರ ಮತ್ತಿತರ ಸಂಸ್ಥೆಗಳು ವಿಶದವಾಗಿ ತಿಳಿಸಿವೆ.  ಅದನ್ನು ಅನುಸರಿಸಿದರೆ ಸಾಕು.  ಅನಧಿಕೃತಮೂಲಗಳಿಂದ ಬರುವ ಯಾವ ವದಂತಿಯನ್ನೂ 'ಪರಿಹಾರ'ಗಳನ್ನೂ ನಂಬಬೇಡಿ.  ಮೇಲೆ ಹೇಳಿದ, ಎಣ್ಣೆಬಿಟ್ಟುಕೊಳ್ಳುವ ಕೆಲಸವೂ, ಗೋಮೂತ್ರ ಕುಡಿಯುವ ಕೆಲಸವೂ ಹೇಳುವವರೂ ಯಾರೂ ವೈದ್ಯರೂ ಅಲ್ಲ, ಕೊನೆಗೆ ಆಯುರ್ವೇದ/ಯುನಾನಿ ತಜ್ಞರೂ ಅಲ್ಲವೆಂಬುದು ನೆನಪಿರಲಿ.  ಗೋಮೂತ್ರ/ಸೆಗಣಿ ಒಂದು ಮಟ್ಟಕ್ಕೆ ಕ್ರಿಮಿನಾಶಕವೆಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ, ಆದರೆ ಅದೇನಿದ್ದರೂ ಹೊರಗೆ, ದೇಹದೊಳಗೆ ತೆಗೆದುಕೊಳ್ಳಲಿಕ್ಕಲ್ಲ.  ಪಂಚಗವ್ಯದಂತಹ ಧಾರ್ಮಿಕ ಮಿಶ್ರಣಗಳೂ ಶಾಸ್ತ್ರಕ್ಕಾಗಿ ಒಂದೆರಡು ಹನಿಯಷ್ಟು ಗೋಮೂತ್ರವನ್ನು ಬಳಸುತ್ತವೆಯೇ ಹೊರತು, ಲೋಟಗಟ್ಟಲೆ ಚೊಂಬುಗಟ್ತಲೆ ಗೋಮೂತ್ರ ಕುಡಿಯುವುದು ಒಳ್ಳೆಯದೆಂದು ಯಾವ ಗ್ರಂಥದಲ್ಲೂ ಹೇಳಿದಂತಿಲ್ಲ.  ಹಾಗೊಮ್ಮೆ ಹೇಳಿದ್ದರೂ, ವೈಜ್ಞಾನಿಕವಾಗಿ ಸ್ಥಿರಪಟ್ಟಲ್ಲದೇ ಅದನ್ನು ನಂಬುವಂತಿಲ್ಲ (ಶಿಖಾ-ಯಜ್ಞೋಪವೀತ, ನಮಸ್ಕಾರಗಳಂತಹ, ಶ್ರದ್ಧೆ ನಂಬಿಕೆಗಳೇ ಆಧಾರವಾದ ವಿಷಯಗಳಿಗೆ, ಬೇಕಿಲ್ಲದಿದ್ದರೂ ಯಾವಯಾವುದೋ ಸುಳ್ಳು ವೈಜ್ಞಾನಿಕ ಕಾರಣಗಳನ್ನು ಪುಂಖಾನುಪುಂಖವಾಗಿ ಉದುರಿಸುವವರು, ಔಷಧವಾಗಿ ಹೊಟ್ಟೆಗೆ ತೆಗೆದುಕೊಳ್ಳಬೇಕೆನ್ನುವ ಗಂಜಲ ಮೊದಲಾದುವುಗಳನ್ನು ವೈಜ್ಞಾನಿಕವಾಗಿ ವಿವರಿಸುವ ಗೋಜಿಗೆ ಹೋಗುವುದಿಲ್ಲ) ಧಾರ್ಮಿಕ ಆಚರಣೆಗಳು, ಅಮಾನವೀಯವಲ್ಲದಿದ್ದರೆ, ಯಾವಾಗಲೂ ಗೌರವನೀಯ.  ಆದರೆ ಅವು ನಂಬಿಕೆಯ ಮಟ್ಟದಲ್ಲಿದ್ದರೆ ಚೆನ್ನ (ಕೆಲನಂಬಿಕೆಗಳು ಅನೇಕ ಬಾರಿ ಕೆಲಸ ಮಾಡುತ್ತವೆ ಎಂಬುದು ನನ್ನ ನಂಬಿಕೆ ಕೂಡ).  ಆದರೆ ನಮ್ಮ ನಂಬಿಕೆಯಿಂದ ಇತರರಿಗೆ ತೊಂದರೆಯಾಗಬಾರದು, ಇತರರು ದಾರಿತಪ್ಪಬಾರದು ಎನ್ನುವುದು ಮುಖ್ಯ.  ಕೊರೋನಾ ವಿರುದ್ಧ ತಿಮ್ಮಪ್ಪನಿಗೆ ಮುಡಿಪು ಕಟ್ಟಿಡುತ್ತೀರಾ, ತೋಟದ ಭೂತನಿಗೆ ಕಾಣಿಕೆ ಹಾಕುತ್ತೀರಾ, ದರ್ಗಾದಲ್ಲಿ ಸಕ್ಕರೆ ಹಂಚುತ್ತೀರಾ, ವೇಲಾಂಗಣಿಗೆ ಹರಕೆ ಹೊರುತ್ತೀರಾ, ಅದು ನಿಮ್ಮ ನಂಬಿಕೆ, ಗೌರವಿಸೋಣ, ನಿಮಗೆ ಶುಭವಾಗಲಿ; ಆದರೆ ಅದನ್ನು ಬಿಟ್ಟು ಬೇರೇನನ್ನೂ ನೀವು ಮಾಡುವುದಿಲ್ಲವೇ, ಸರಿ, ನಿಮ್ಮಿಷ್ಟ, ನಿಮ್ಮ ಹಣೆಯಬರಹ - ನಿಮ್ಮ ನಂಬಿಕೆ ನಿಮ್ಮನ್ನು ಕಾಪಾಡುವವರೆಗೂ ಬಾಗಿಲು ಹಾಕಿಕೊಂಡು ಮನೆಯಲ್ಲಿರಿ, ಹೊರಬಂದು ನಿಮ್ಮ ಕೇವಲ'ನಂಬಿಕೆ'ಯ ಫಲವನ್ನು ಅನ್ಯರಿಗೆ ಹರಡಬೇಡಿ.  ನಾನು ಒಂದು ಲೀಟರು ಗಂಜಲ ಕುಡಿದಿದ್ದೇನೆ, ಕೆಳಕ್ಕೆ ಎಣ್ಣೆ ಹಚ್ಚಿಕೊಂಡಿದ್ದೇನೆ, ನನ್ನ ಸುತ್ತಾ ಕೊರೋನಾ ಸುಳಿಯುವುದೂ ಇಲ್ಲ ಎಂಬೆಲ್ಲ ಭ್ರಮೆ ನಿಮ್ಮದಾಗಿದ್ದರೆ, ನಿಮಗೆ ನಮಸ್ಕಾರ, ಬೋನು ಬಿಟ್ಟು ಹೊರಗೆ ಬರಲೇಬೇಡಿ 🙏🙏🙏

[ಈ ಲೇಖನದ ಇಂಗ್ಲಿಷ್ ಆವೃತ್ತಿಗಾಗಿ ಇಲ್ಲಿ ಕ್ಲಿಕ್ ಮಾಡಿ]