Sunday, October 2, 2011

ಸ್ತನ ದೊಡ್ಡತನದಲ್ಲಿ ಶೋಭಿಸಿಹುದು


"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬಳಸಿ ಸಮಸ್ಯೆಯನ್ನು ಪೂರ್ತಿಗೊಳಿಸುವ  ಸವಾಲಿತ್ತು.  ಅದಕ್ಕಾಗಿ ರಚಿಸಿದ್ದು ಈ ಚೌಪದಿಗಳು:

ಮನೆಗಲ್ಲದೆಯೆ ನೆಂಟ ಮಠಕೆ ಬರುವನೆ ಪೇಳು
ಒಣಮರಕೆ ಬಹುದೆ ಕೋಗಿಲೆಯು ಗಿಳಿವಿಂಡು
ಮನದಣಿಯೆ ಉಣಬಡಿಪ ಸಿರಿವನೆಯು ಮನೆತನ-
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ಇನಸುತಗೆ ತಿಳಿದೊಡೇಂ ತನ್ನ ಹುಟ್ಟಿನ ಹಿರಿಮೆ
ಅನುಮಾನವಿನಿತಿಲ್ಲ ಜೀಯನೊಲವಿನೊಳು
ಧನವದುವೆ ಕೌರವನ ಮಾನಧನ ನಂಬಿಕ-
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ವನಕೆ ಹೆಮ್ಮರ ಸೊಗಸು ಗಿರಿಗಾ ಶಿಖರ ಸೊಗಸು
ಮನೆಗೆ ಹಿರಿಗಂಬದಾಲಂಬ ಸೊಗಸು
ಇನಿವೆಣ್ಣಿನೊಡಲಿಗಾಲಂಬವೆನೆ ಚೆಲುವಿನಾ
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ಜನಕಗಲ್ಲದೆ ಶುನಕಕಹುದೆ ರಾಮನ ನಂಟು
ಘನಶೈಲಿ ಶೂಲಿ ಹುಲು ಮೊರಡಿ ಬಯಸುವನೇ
ವನಮಾಲಿಯಲ್ತೆ ಸಾಗರನಳಿಯ?ಹಿರಿನಂಟ-
ತನ ದೊಡ್ಡತನದಲ್ಲಿ ಶೋಭಿಸಿಹುದು

ಕೊನೆಯ ಚೌಪದಿ “ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” ಎಂದು ಬಳಸಿದರೆ ಮೂರನೆಯ ಸಾಲಿನ ಛಂದಸ್ಸು ಕೆಡುತ್ತದೆಯಾದ್ದರಿಂದ ಅದು ಸಮಸ್ಯೆಯನ್ನು ಯಥಾವತ್ತಾಗಿ ಪೂರೈಸುವುದಿಲ್ಲ, ಆದರೂ ಉಳಿದ ಸಾಲುಗಳು ಬಂದುವಲ್ಲ ಎಂದು ಪೋಸ್ಟಿಸಿದೆ ಅಷ್ಟೇ.

18 comments:

ಬಾಲು said...

ಮೊದಲ ಪದ್ಯ ಬಹಳ ಇಷ್ಟ ಆಯಿತು.

ಸಮಸ್ಯೆಯನ್ನು ಬಿದಿಸುವುದೇ ನಿಮ್ಮ ದೊಡ್ದಸ್ತನ :)

ಸಾಗರದಾಚೆಯ ಇಂಚರ said...

bidisuttale iruvudu doddastana nimmadu

sundara kavite

Manjunatha Kollegala said...

ಬಾಲು ಮತ್ತು ಗುರು, ನಿಮ್ಮ ಅನಿಸಿಕೆಗೆ ನನ್ನಿ. ಬರುತ್ತಿರಿ.

V.R.BHAT said...

ಮಂಜುನಾಥರೇ, ಸ್ತನ ದೊಡ್ಡತನದಲ್ಲಿ ಶೋಭಿಸುತಿಹುದು ---ಎಂದಾಗ ಮೊದಲೊಮ್ಮೆ ' ಕುಂಡೆ ಡರ್ರೆನಿಸಿ ' ಎಂದಂತೆ ಜಾದೂ ಇದ್ದುದು ಅರ್ಥವಾದರೂ ಇತ್ತೆಚಿನ 'ದೊಡ್ಡ ಸ್ತನಗಳ ಪ್ರದರ್ಶನ ಹಾಗೂ ವಹಿವಾಟು ' ನೋಡಿ ಕಂಗಾಲಾಗಿದ್ದ ನನಗೆ ಒಮ್ಮೆ ಬೇಸ್ತು ಬೀಳುವಂತಾಗಿತ್ತು, ಅಡ್ಡಿಲ್ಲ ಮಾರಾಯ್ರೇ ಏನೆಲ್ಲಾ ಸರ್ಕಸ್ಸು ಮಾಡ್ತೀರಿ ! ಮಜಾತೆಗೆದುಕೊಳ್ಳಲು ಚೆನ್ನಾಗಿದೆ, ಹಾಗೇನೆ ಕಾವ್ಯ ಅರ್ಥಪೂರ್ಣವಾಗಿದೆ.

sunaath said...

ಕಾವ್ಯವಿದ್ವತ್ತಿನಲ್ಲಿ ನಿಮ್ಮದು ನಿಜವಾಗಿಯೂ ದೊಡ್ಡಸ್ತನ. ಮನ ತಣಿಸಿದ ಪದ್ಯಪಾನಕ್ಕಾಗಿ ಧನ್ಯವಾದಗಳು. ಇಂತಹ ಕಾವ್ಯಮಧುವನ್ನು ಕುಡಿಸುತ್ತ ಇರಿ.

Manjunatha Kollegala said...

ಭಟ್ಟರೇ, ಆ ವಹಿವಾಟೆಲ್ಲಾ ನೋಡಿ ಕಂಗಾಲಾಗುವ ಕಾಲ ಮುಗೀತು :) ಅಂತೂ ಬೇಸ್ತಂತು ಬಿದ್ದಿರಲ್ಲ :)

ನಿಜ, ಸ್ವಲ್ಪ ಭಾಷೆ ಹತ್ಯಾರುಗಳನ್ನು ಚೂಪಾಗಿಟ್ಟುಕೊಳ್ಳಲು ಸರ್ಕಸ್ ಇದು. ಪದ್ಯಪಾನ.ಕಾಂ ನಲ್ಲಿ ಶ್ರೀ ಆರ್. ಗಣೇಶ್ ಮತ್ತಿತರ ಗೆಳೆಯರು ಆಗಾಗ ಕೆಲವು ಕಾವ್ಯ-ಸಮಸ್ಯೆ (challenge)ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಮಸ್ಯಾಪೂರಣ, ಆಶುಕವಿತೆ ಇತ್ಯಾದಿ ಅವಧಾನದಲ್ಲಿ ಕೇಳುವ ಪ್ರಕಾರದ ಸಮಸ್ಯೆಗಳವು. ಸುಮ್ಮನೇ ಸ್ವಲ್ಪ ನುಡಿ ಹರಿತದಲ್ಲಿಟ್ಟುಕೊಳ್ಳಲು ಅವನ್ನು ಪ್ರಯತ್ನಿಸುತ್ತಿರುತ್ತೇನೆ ಅಷ್ಟೇ

Manjunatha Kollegala said...

ಸುನಾಥರೇ ದೊಡ್ಡಮಾತು. ಈ ಸಾಲುಗಳು ತಮಗೆ ಹಿಡಿಸಿದ್ದಕ್ಕೆ ನನ್ನಿ.

VISHVANATH B MANNE said...

Nimma Dodda-stana Illi Nijavagiyoo Shobisuttihudu!

Badarinath Palavalli said...

ವ್ಹಾವ್ ಸ್ತನ! ಆಹಾ ಸ್ತನ!
ಸಮಸ್ಯೆ ಸುಂದರವಾಗಿ ಬಿಡಿಸಿ,
ಮೆರೆದಿದ್ದೀರಾ ನಿಮ್ಮ ದೊಡ್ಡ ಸ್ತನ!

ಉತ್ತಮ ಕವನ ಶೈಲಿ ಮತ್ತು ಸುಲಲಿತ ಭಾಷೆ. ಭೇಷ್!...

ನನ್ನ ಬ್ಲಾಗುಗಳಿಗೆ ಬನ್ನಿರಿ:
www.badari-poems.blogspot.com
www.badari-notes.blogspot.com

Raghu said...

ನಿಮ್ಮ ಸ್ತನ (ದಪದ್ಯ) ತುಂಬಾ ಚೆನ್ನಾಗಿದೆ

KalavathiMadhusudan said...

adbhutavaada,arthapoornavaada kavanavalla!! kaavyakkaagi dhanyavaadagalu.

Manjunatha Kollegala said...

@ ಕಲರವ: ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು, ಬರುತ್ತಿರಿ.

Melkote simha said...

padyapana.com sigta illa maraayre... padyagalu chennagive

Manjunatha Kollegala said...

ಸಿಂಹರೇ ತಪ್ಪು ಲಿಂಕಿಗೆ ಕ್ಷಮೆಯಿರಲಿ. ಸರಿಯಾದ ಲಿಂಕ್ ಇಲ್ಲಿದೆ padyapaana.com

Subrahmanya said...

ನಶೆ ಏರಿಸುವ ಕಾವ್ಯರಸವನ್ನು ನೀಡಿದ್ದಕ್ಕೆ ಧನ್ಯವಾದಗಳು !.

Manjunatha Kollegala said...

ಸುಬ್ರಹ್ಮಣ್ಯ, ನಶೆಯಿಂದ ನೀವು ಚಿತ್ತಾಗದಿರಲಿ ಅಂತ ಹಾರೈಕೆ. ಮೆಚ್ಚಿದ್ದಕ್ಕೆ ನನ್ನಿ.

ಚಾರ್ವಾಕ ವೆಂಕಟರಮಣ ಭಾಗವತ said...

ಮಂಜುನಾಥರೇ ಬಹು ಸೊಗಸಾದ ಪೂರಣಗಳು. ಪ್ರತಿ ಪದ್ಯದಲ್ಲೂ ’ಸ್ತನ’ದ ವಿವಿಧ ದೃಷ್ಟಿಕೋನಗಳು ಅಚ್ಚರಿಗೊಳಿಸುತ್ತವೆ.

Manjunatha Kollegala said...

ಚಾರ್ವಾಕರೇ ಧನ್ಯವಾದ. ಸೌಂದರ್ಯ ನೋಡುಗನ ಕಣ್ಣುಗಳಲ್ಲಿ ರಂಜಿಸುತ್ತದೆ ಅಲ್ಲವೇ :)