Tuesday, February 19, 2008

ಜೋಧಾ-ಅಕ್ಬರ್; ಕ್ಷಮಿಸಿ, ಐಶ್ವರ್ಯಾ-ಹೃತಿಕ್

ಮೂವತ್ತೇಳರ ಆಸುಪಾಸಿನಲ್ಲೂ ಐಶ್ವರ್ಯಾ ತನ್ನ ಸ್ನಿಗ್ಧ ಸೌಂದರ್ಯದಿಂದ ಮನ ಸೆಳೆಯುತ್ತಾಳೆ / ಅಕ್ಬರನ ಪಾತ್ರಕ್ಕಿಂತ ಹೃತಿಕ್ ತನ್ನ ಕಟ್ಟುಮಸ್ತು ದೇಹಸಿರಿ ತೋರಿಸುವ ಕೆಲಸವನ್ನೇ ಹೆಚ್ಚು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾನೆ... ತಲೆ ಚಿಟ್ಟು ಹಿಡಿಸುವ ಚಿತ್ರದ ಕೊನೆಯಲ್ಲಿ ಆಕಳಿಸುತ್ತಾ ನೀವು ಹೊರನೆಡೆಯುವಾಗ ನಿಮ್ಮ ಮನದಲ್ಲಿ ಉಳಿಯುವ ಪಾಯಿಂಟುಗಳು ಬಹುಶಃ ಇವೆರಡೇ.

ಇದು ಬಿಟ್ಟರೆ ಮನಸಿನಲ್ಲಿ ಉಳಿಯುವುದು ಒಂದೆರಡು ಕತ್ತಿ ವರಸೆ ದೃಶ್ಯಗಳು - ಇಲ್ಲೂ ಐಶ್ವರ್ಯಾಳದೇ ಮಿಂಚು... ಹಾಂ, ಇನ್ನೊಂದೆರಡಿವೆ; ಸಂದರ್ಭಕ್ಕೆ ಚೂರೂ ಸರಿಹೊಂದದ ತಲೆ ಚಿಟ್ಟು ಹಿಡಿಸುವ "ಸಂಗೀತ", ಕಾಲಕ್ಕೂ ದೇಶಕ್ಕೂ ಸರಿಹೊಂದದ, ಸುಮಾರು ಆಧುನಿಕಕ್ಕೆ ಹತ್ತಿರವೆನ್ನಿಸುವ ಹಿಂದಿ; ಹಿಂದೂ ಮುಸ್ಲಿಂ ಏಕತೆಯನ್ನೋ, ವೈಷಮ್ಯವನ್ನೋ ಪ್ರೇಕ್ಷಕನ ತಲೆಗೆ ತುಂಬಲೇ ಬೇಕೆಂದು ಹಟ ತೊಟ್ಟ ನಿರ್ದೇಶಕ ಐಶ್ವರ್ಯಾಳ ಬಾಯಿಂದ ಆಡಿಸುವ ಒಂದೆರಡು ಭಾಷಣಗಳು (ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತವೆ!) ನಾಟಕದ ವೇಷದಂತೆ ತೋರುವ (ಮೊಘಲಾಯಿ ಸಿರಿವಂತಿಕೆ - ಕಲಾವಂತಿಕೆಗೆ ಹೊರತಾದ) ವೇಷಭೂಷಣ; ಇನ್ನು ಹಾಡುಗಳೋ, ಮಾತಾಡದಿರುವುದೇ ಉತ್ತಮ (ಒಂದೆರಡು ಬಿಟ್ಟು)

ಮೂಲತಃ ಕೇವಲ ರಾಜಕೀಯ ಅನುಕೂಲಕ್ಕಷ್ಟೇ ನಡೆದಿರಬಹುದಾದ ಜೋಧಾ-ಅಕ್ಬರ್ ಮದುವೆ (ಅದೂ ವಿವಾದಾಸ್ಪದ) ಯಲ್ಲಿ, ಒಂದು ಅಮರ ಪ್ರೇಮ ಕತೆಯನ್ನು ಹುಡುಕ ಹೊರಡುವ ನಿರ್ದೇಶಕ, ಆ ಹುಡುಕಾಟದಲ್ಲೂ ವಿಫಲನಾಗುತ್ತಾನೆ (ಇನ್ನು ಅದನ್ನು picturise ಮಾಡುವುದು ದೂರವೇ ಉಳಿಯಿತು). ಏನನ್ನೂ ಮಾಡಬಲ್ಲ "ಸರ್ವಶಕ್ತ" ನಾದ ಚಕ್ರವರ್ತಿ ಒಂದುಕಡೆ, ಈ high profile ಸಂಬಂಧದಿಂದ ಲಾಭವನ್ನೇ ಪಡೆಯಬಹುದಾದ ರಾಜ ಇನ್ನೊಂದುಕಡೆ, ಯಾವುದೇ ಅಡೆತಡೆಯೇ ಕಾಣದ ಈ ಸಂಬಂಧ "ಅಮರ ಪ್ರೇಮ"ವೆಂದು ಕರೆಯಲು ಬೇಕಾದ ರೊಮ್ಯಾಂಟಿಸಿಸಂ ಆಗಲೀ, ತ್ಯಾಗವಾಗಲೀ ಕಡುಕಷ್ಟವಾಗಲೀ ಇವೊಂದನ್ನೂ ಕಾಣದೇ ಸೊರಗುತ್ತದೆ. ಅದು ಏಕೆ ಅಮರವೋ, ಏಕೆ ಪ್ರೇಮವೋ ಕೊನೆಗೂ ತಿಳಿಯುವುದಿಲ್ಲ. ಇನ್ನು ಅಕ್ಬರ್-ಜೋಧಾರ ವಿರಹಕ್ಕೆ ಕಾರಣವಾದ ಘಟನಾವಳಿಗಳೂ ಕೂಡ, ಪ್ರೇಮವೆಂದರೆ ವಿರಹ ಇರಲೇ ಬೇಕೆನ್ನುವ ಸವಕಲು ಫಾರ್ಮ್ಯುಲಾವನ್ನು ಅನುಸರಿಸಿ ಹೆಣೆದ ಕ್ಷುಲ್ಲಕ ಘಟನೆಗಳಾಗಿ ಕಾಣುತ್ತವೆಯೇ ಹೊರತು ಜೋಧಾ ಆಗಲೀ, ಅಕ್ಬರ್ ಆಗಲೀ ಯಾವುದೂ ಕಷ್ಟವನ್ನು ಅನುಭವಿಸಿದಂತೆ ಅನಿಸುವುದೇ ಇಲ್ಲ.

ಇನ್ನು ಹಿಂದೂ ರಾಜಕುವರಿ ಜೋಧಾಳ ಪ್ರವೇಶದಿಂದಾಗಿಯೇ ಅಕ್ಬರ್ ಒಬ್ಬ ಜನಾನುರಾಗಿ ದೊರೆಯಾಗಿ ಪರಿವರ್ತಿತನಾದ ಎಂದು ಹೇಳಬಯಸುವ ಪ್ರಯತ್ನವಂತೂ ಅತ್ಯಂತ ಹಾಸ್ಯಾಸ್ಪದವಾಗಿ ತೋರುತ್ತದೆ.

ಚಿತ್ರದ ಕೊನೆಯಲ್ಲಿ ನೀವು ಜೋಧಾ ಆಗಲಿ, ಅಕ್ಬರ್ ಆಗಲೀ ಎಲ್ಲಿ ಎಂದು ತಲೆ ಕೆರೆದುಕೊಂಡರೆ, ಅದು ನಿಮ್ಮ ಪಾಡು. ಒಟ್ಟಾರೆ, ಇದು ಇನ್ನೊಂದು ಪಕ್ಕಾ ಮಸಾಲೆ ಚಿತ್ರ. ಅದು ಹೇಳಿಕೊಳ್ಳುವಂತೆ (ಅಥವಾ ಚಿತ್ರದ ಮೊದಲಲ್ಲಿ ಅಮಿತಾಭ್ ಘೋಷಿಸುವಂತೆ) ಒಂದು ಚಾರಿತ್ರಿಕ, ಭೌದ್ಧಿಕ ಚಿತ್ರವೆಂದೇನಾದರೂ ನೀವು ಹೋದರೆ, ಬೇಸ್ತು ಬಿದ್ದಿರಿ.

ಆಟೋಗ್ರಫಿ

ಇವತ್ತೇಕೋ ಇದನ್ನು ಬರೆಯಬೇಕೆನ್ನಿಸಿತು. ಬಹುದಿನದ ನಂತರ ಮಡದಿ ಮಗುವಿನೊಂದಿಗೆ ಒಂದು ಸಿನಿಮಾಕ್ಕೆ ಹೋಗಿದ್ದೆ (ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ, ಸಾಧ್ಯವಾದರೆ). ಸಿನಿಮಾ ಮುಗಿಸಿಕೊಂಡು, ಚೆನ್ನೈ ಸಿಟಿ ಸೆಂಟರ್ ನಲ್ಲಿದ್ದ ಚಿತ್ರಮಂದಿರದಿಂದ ಮೈಲಾಪುರಕ್ಕೆ ಬಂದೆವು. ಅಲ್ಲಿ ರಾತ್ರೆ ಊಟ ಮುಗಿಸಿಕೊಂಡು ತಿರುವಾನ್ಮಿಯೂರಿಗೆ ಹೋಗಲು ಬಸ್ಸು ಕಾಯುತ್ತಿದ್ದೆವು. ಆಗಲೇ ತಡವಾಗುತ್ತಿದ್ದರಿಂದ, ಆಟೋ ಹಿಡಿದು ಹೋದರಾಯಿತೆಂದು ಆಟೋ ವಿಚಾರಿಸಿದರೆ, ಯಥಾಪ್ರಕಾರ ತಲೆ ಬೆಲೆ, ನೂರರಿಂದ ನೂರ ಮೂವತ್ತಕ್ಕೆ ಕಡಿಮೆ ಒಬ್ಬನೂ ಇಲ್ಲ. ಮೈಲಾಪುರದಿಂದ ತಿರುವಾನ್ಮಿಯೂರಿಗೆ ಮೀಟರ್ ಹಾಕಿದರೆ ಹೆಚ್ಚೆಂದರೆ ಅರುವತ್ತು ರೂಪಾಯಿ ಆದೀತು. ಆದರೆ ಇಲ್ಲಿ ನೂರು ರೂಪಾಯಿ ಸಾಮಾನ್ಯ ಬೆಲೆ. ಆದರೂ ಚೌಕಾಸಿ ಮಾಡದೆ ಆಟೋ ಹತ್ತುವುದು ಹೇಗೆ. ನಾನು ಎಂಭತ್ತು ರೂಪಾಯಿ ಕೊಡಲು ತಯಾರಿದ್ದೆ (ಇನ್ನೊಂದು ಇಪ್ಪತ್ತು ರೂಪಾಯಿ ಹೆಚ್ಚಾಗುತ್ತಿತ್ತೆಂದಲ್ಲ, ಆದರೂ ಆಟವನ್ನು ನಿಯಮಕ್ಕನುಸಾರ ಆಡಬೇಕಷ್ಟೇ?). ಬೆಂಗಳೂರು ಮತ್ತು ಚೆನ್ನೈ ಈ ಎರಡೂ ಕಡೆ ಆಟೋದವರ ಜೊತೆ ಏಗಿ ಏಗಿ, ಅವರ ಪಟ್ಟು-ಪ್ರತಿ ಪಟ್ಟುಗಳೆಲ್ಲ ಅರ್ಥವಾಗಿಬಿಟ್ಟಿದೆ. ಹಣವನ್ನು ಚರಂಡಿಯಲ್ಲಿ ಬಿಸಾಡಿದರೂ ಪರವಾಗಿಲ್ಲ, ಆಟೋದವನಿಗೆ ಮಾತ್ರ ಒಂದು ಕಾಸು ಹೆಚ್ಚು ಕೊಡಬಾರದೆಂಬ ದುರ್ಬುದ್ಧಿ ಅದು ಹೇಗೊ ಮನದಲ್ಲಿ ಕೂತುಬಿಟ್ಟಿದೆ. ಆಟೋದವರೆಲ್ಲಾ ಕೆಟ್ಟವರಲ್ಲ ಎಂಬ ಥಿಯರಿ ಗೊತ್ತಿದ್ದರೂ, ಎಷ್ಟೋ ಜನ ಒಳ್ಳೆಯ ಆಟೋ ಚಾಲಕರನ್ನು ನಾನೇ ನನ್ನ ಕಣ್ಣಾರೆ ನೋಡಿದ್ದರೂ, ಅದೇಕೋ, ಆಟೋದವನ ಜೊತೆ ವ್ಯವಹರಿಸುವಾಗ, ಪಾವ್ಲೋವ್ ನ ನಾಯಿಯಂತೆ ನನ್ನ ತಲೆಯಲ್ಲಿ ಚೌಕಾಸಿಯ ಗಂಟೆ ಬಾರಿಸತೊಡಗುತ್ತದೆ, ಮೈಯೆಲ್ಲಾ ಕಣ್ಣಾಗುತ್ತದೆ, ಕಣ್ಣುಗಳು ಮೀಟರಿನಲ್ಲಿ ಕೀಲಿಸಿ ಹೋಗುತ್ತವೆ, ಮಾತು ಬಿಗಿಯಾಗುತ್ತದೆ.

ನನ್ನ ಎಂಬತ್ತು ರೂಪಾಯಿ ಬೆಲೆಗೆ ಒಪ್ಪುವ ಆಟೋಗಾಗಿ ಕಾಯುತ್ತಾ ಅರ್ಧ ಗಂಟೆ ಕಳೆಯಿತು. ಹೊತ್ತಾಗುತ್ತಿದೆ, ಮನೆಗೆ ಬೇಗ ಹೋಗೋಣವೆಂದು ಮಡದಿಯ ವರಾತ ಹೆಚ್ಚಾಯಿತು. ಕೊನೆಗೆ ನಾನು ನಿಧಾನವಾಗಿ ನೂರಕ್ಕೆ ಏರುವಹೊತ್ತಿಗೆ, ಆಟೋ ದರ ಕೂಡ ಏರಿತ್ತು.

ಅಷ್ಟು ಹೊತ್ತಿಗೆ ಅಲ್ಲಿಗೆ ಒಂದು ಆಟೋ ಬಂತು. ಆ ವ್ಯಕ್ತಿಗೆ ಹೋಗಬೇಕಾದ ಸ್ಥಳದ ವಿವರ ಹೇಳಿ ದರ ಎಷ್ಟೆಂದು ಕೇಳಿದೆ. ಅವನು ಎಂಭತ್ತು ರೂಪಾಯಿ ಕೇಳಿದಾಗ ಒಂದು ಕ್ಷಣ ದಂಗಾದೆ. ಈ ಹೊತ್ತಿನಲ್ಲಿ ಅಲ್ಲಿ ನಡೆಯುತ್ತಿದ್ದ ರೇಟ್ ನೂರ ಮೂವತ್ತು ರುಪಾಯಿ. ಇವನಿಗೆ ಹೋಗಬೇಕಾದ ಸ್ಥಳದ ದೂರ ತಿಳಿದಿಲ್ಲದಿರಬಹುದು, ಆಮೇಲೆ ತಗಾದೆ ಮಾಡಬಾರದೆಂದು ಮತ್ತೆ ಅವನಿಗೆ ಸ್ಥಳದ ಗುರುತು ಹೇಳಿದೆ. ಮತ್ತೆ ಅವನು ಎಂಭತ್ತು ರೂಪಯಿಯ ಬೇಡಿಕೆಯನ್ನು ಪುನರುಚ್ಚರಿಸಿದ. ಇದಕ್ಕಿಂತಾ ಒಳ್ಳೆಯ ದರ ಎಲ್ಲಿ ಸಿಗಲು ಸಾಧ್ಯ? ಸರಿ, ಆಟೋ ಹತ್ತಿಯೇ ಬಿಡಬೇಕೆಂದುಕೊಳ್ಳುವಾಗ, ಅಲ್ಲಿಯವರೆಗೂ ಅಪ್ರತಿಭವಾಗಿದ್ದ ಚೌಕಾಸಿ ಪ್ರಜ್ಞೆ ಮತ್ತೆ ಸಾವರಿಸಿಕೊಂಡು. ಅಲ್ಲಿಂದ ತಿರುವಾಣ್ಮಿಯೂರಿಗೆ ತೀರ ಹತ್ತಿರವೆಂದೂ, ಎಂಭತ್ತು ರೂಪಾಯಿ ಹೆಚ್ಚಾಯಿತೆಂದೂ ಹೇಳಿದೆ. ಹೆಚ್ಚೆಂದರೆ ಎಪ್ಪತ್ತು ರೂಪಾಯಿ ಕೊಡುತ್ತೇನೆಂದೆ (ತೀರಾ ಕಡಿಮೆ ಕೇಳುವಹಾಗೂ ಇಲ್ಲ). ತುಸುಹೊತ್ತು ನನ್ನ ಮುಖವನ್ನೇ ದಿಟ್ಟಿಸಿ ನಸು ನಕ್ಕು ಆತ ಹೇಳಿದ, "ಸರ್, ಈ ಹೊತ್ತಿನಲ್ಲಿ ಇಲ್ಲಿ ಎಲ್ಲರೂ ನೂರಿಪ್ಪತ್ತು ಕೇಳುವುದು ನಿಮಗೂ ಗೊತ್ತು, ಒಂದು ರೇಟ್ ಹೇಳಿ ಮತ್ತೆ ಕಡಿಮೆ ಮಾಡುವುದು ಬೇಡವೆಂದು ನಾನು ಸರಿಯಾದ ರೇಟ್ ಹೇಳಿದ್ದೇನೆ; ಇನ್ನೂ ಚೌಕಾಸಿ ಮಾಡುವುದು ನಿಮಗೆ ಸರಿ ಅನ್ಸುತ್ತಾ ಸಾರ್?" ಇದಕ್ಕೆ ನನ್ನಲ್ಲಿ ಉತ್ತರವಿರಲಿಲ್ಲ. ಆದರೂ ಎಂಬತ್ತಕ್ಕೆ ಒಪ್ಪಿ ಬಿಗಿಮುಖ ಮಾಡಿಕೊಂಡು ಆಟೋ ಏರಿ ಕುಳಿತೆ.

ಆಟೋ ಚಾಲಕ ಸ್ವಲ್ಪ ಮಾತುಗಾರನೆಂದು ತೋರುತ್ತದೆ, ದಾರಿಯುದ್ದಕ್ಕೂ ಅದು ಇದು ಮಾತಾಡುತ್ತಾ ಬಂದ. ಊಟ ಆಯಿತೇ ವಿಚಾರಿಸಿದ, ಮೈಲಾಪುರದಲ್ಲಿ ದೇವಸ್ಥಾನಕ್ಕೆ ಬಂದಿದ್ದಿರಾ ಎಂದ, ತಿರುವಾಣ್ಮಿಯೂರಿನಲ್ಲಿ ಮರುಂದೀಶ್ವರನ ದೇವಸ್ಥಾನಕ್ಕೆ ಏಕೆ ಹೋಗಲಿಲ್ಲವೆಂದು ವಿಚಾರಿಸಿದ. ದಾರಿಯಲ್ಲಿ ಮಗು ಸ್ವಲ್ಪ ಗಲಾಟೆ ಮಾಡಿದಾಗ "ಆಟೊ ನಿಲ್ಲಿಸಲೇ" ಎಂದ. ಬೇರೆಯವರಂತೆ ಇವನಬಳಿ ಏಕೋ ಮುಖ ಗಂಟುಮಾಡಿಕೊಂಡಿರಲು ಆಗುತ್ತಿಲ್ಲ, ಆದರೂ ನನ್ನ limited ತಮಿಳು ಜ್ಞಾನ ನನ್ನ ನಾಲಗೆಯನ್ನು ತಡೆದಿತ್ತು. ಸಾಧ್ಯವಾದಷ್ಟು ಹಸನ್ಮುಖಿಯಾಗಿರಲು ಪ್ರಯತ್ನಿಸುತ್ತಾ, ಕೇಳಿದ್ದಕ್ಕೆ ಹೂಂ - ಉಹೂಂ ಕೊಡುತ್ತಾ ಬಂದೆ.

ಮಾತಿನ ಮಧ್ಯೆ ಈ ಚಾಲಕನಿಗೆ ಕಾಲು ಸ್ವಾಧೀನದಲ್ಲಿರಲಿಲ್ಲವೆಂಬುದು ಗಮನಕ್ಕೆ ಬಂತು. ಪಕ್ಕದಲ್ಲಿದ್ದ ಅವನ ಊರೆಗೋಲುಗಳನ್ನು ತೋರುತ್ತಾ ನನ್ನ ಮಡದಿ ಮೆಲುದನಿಯಲ್ಲಿ ಹೇಳಿದಳು, "ಇಂಥವರ ಜೊತೆ ಚೌಕಾಸಿ ಮಾಡುವುದು ಸರಿಯಲ್ಲ, ಅವನು ಕೇಳಿದಷ್ಟು ಕೊಟ್ಟುಬಿಡಿ... afterall, we should help such people" ಮನಸ್ಸಿಗೆ ಸ್ವಲ್ಪ ನೋವಾಯಿತಾದರೂ ನನಗೇಕೋ ಈ ಮನುಷ್ಯನ ಬಗ್ಗೆ ಅಭಿಮಾನ ತೋರುತ್ತಿತ್ತೇ ಹೊರತು, ಕರುಣೆಯಲ್ಲ. "ಸಹಾಯ" ಮಾಡಿ ಅವನ ಅಭಿಮಾನ ಕೆಡಿಸುವುದು ನನಗೆ ಸರಿಬರಲಿಲ್ಲ. ಮೇಲಾಗಿ, ಚೌಕಾಸಿ ಮಾಡುವುದು ಸರ್ವೇ ಸಾಮಾನ್ಯ, ಹಾಗೂ ನಾನೇನು ತೀರಾ unfairಆಗೇನೂ ಇಲ್ಲ. ಇಷ್ಟಕ್ಕೂ ನಾನು ಅವನು ಕೇಳಿದ ಎಂಭತ್ತು ರುಪಾಯನ್ನು ಕೊಡಲು ಸಿದ್ಧನಿದ್ದೆ.
ತಿರುವಾನ್ಮಿಯೂರು ಬಂತು. ಕೈಯಲ್ಲಿ ಸಿದ್ಧಮಾಡಿಟ್ಟುಕೊಂಡಿದ್ದ ಎಂಭತ್ತು ರುಪಾಯಿಯನ್ನು ಅವನ ಕೈಯಲ್ಲಿಟ್ಟು ಆಟೋ ಇಳಿದೆವು. ಗುಡ್ ನೈಟ್ ಹೇಳಿದ ಆತ ಒಂದು ಕ್ಷಣ ತಡೆಯ ಹೇಳಿದ. ಆಲ್ಲೇ ದಾರಿಯಲ್ಲಿ ನಿಂತಿದ್ದವನೊಬ್ಬನ ಹತ್ತಿರ ಹತ್ತು ರೂಪಾಯಿಗೆ ಚಿಲ್ಲರೆ ಇಸಿದುಕೊಂಡು ಐದು ರೂಪಾಯಿ ಮರಳಿ ಕೊಟ್ಟ. ಎಂಬತ್ತು ರೂಪಾಯಿ ಕೊಟ್ಟು ಹೋಗುವುದರಲ್ಲಿದ್ದ ನನಗೆ ಇದು ಕೊಂಚ ಆಶ್ಚರ್ಯ ತಂದಿತು. ಅದನ್ನು ಇಸಕೊಳ್ಳದೆ, ನಾನು ಅವನು ಕೇಳಿದ ಎಂಭತ್ತು ರೂಪಾಯಿಯನ್ನೇ ಕೊಟ್ಟಿರುವುದಾಗಿಯೂ, ಚಿಲ್ಲರೆಯೇನೂ ಬಾಕಿ ಇಲ್ಲವೆಂದೂ ಹೇಳಿದೆ. ಅದಕ್ಕವನು ಒಪ್ಪದೇ ಹೇಳಿದ "ಸಾರ್, ನಾನು ಕೇಳಿದ್ದು ಎಂಭತ್ತೇ ಆದರೂ ನೀವು ಕೊಡುತ್ತೇನೆಂದದ್ದು ಎಪ್ಪತ್ತು ರುಪಾಯಿ. ಅದಕ್ಕೆ ಮನಸಿನಲ್ಲಿ ನಿಮ್ಮ ಎಪ್ಪತ್ತು ರೂಪಾಯಿಗೆ ತಯಾರಿದ್ದೆ. ಆದರೂ ಎಂಭತ್ತು ಕೊಟ್ಟಿದ್ದು ನೋಡಿ ಒಂದುರೀತಿ ಅನ್ನಿಸಿತು, ಅದಕ್ಕೆ ಈ extra ಹಣವನ್ನ ಎರಡು ಭಾಗ ಮಾಡಿ ನಿಮಗೆ ಐದು ರೂಪಾಯಿ ವಾಪಸ್ ಕೊಡುತ್ತಿದ್ದೇನೆ, ವ್ಯವಹಾರ ಅಂದರೆ ವ್ಯವಹಾರ, ದಯವಿಟ್ಟು ತಗೊಳ್ಳಿ" ಅಂದ. ಮತ್ತೆ ನನ್ನಲ್ಲಿ ಉತ್ತರವಿರಲಿಲ್ಲ... ಐದು ರುಪಾಯಿಯನ್ನು ತೆಗೆದುಕೊಂಡರೆ ಹೇಗೆ, ಇಲ್ಲದಿದ್ದರೆ ಹೇಗೆ ಎಂದು ಚಿಂತಿಸಿ ಬಳಲುತ್ತಿರಲು, ಐದು ರುಪಾಯಿ ನಾಣ್ಯವನ್ನ ನನ್ನ ಕೈಯಲ್ಲಿ ತುರುಕಿ ಹೇಳಿದ "ನಿಮಗೆ ಬೇಡದಿದ್ದರೆ, ಮಗೂಗೆ ಒಂದು chocolate ತೆಗೆದು ಕೊಡಿ ಸಾರ್"... ಇಷ್ಟು ಹೇಳಿ, ಆಟೋ ತಿರುಗಿಸಿಕೊಂಡು, ನಮ್ಮೆಲ್ಲರತ್ತ ಮತ್ತೊಂದು ಟಾಟಾ ಮಾಡಿ ಏರಿ ಬರುತ್ತಿದ್ದ ಟ್ರಾಫಿಕ್ ನಲ್ಲಿ ಕಣ್ಮರೆಯಾದ.
ಘಟನೆಯ ಬಗ್ಗೆ ಭರತವಾಕ್ಯವೊಂದನ್ನು ಬರೆಯಬೇಕಿಲ್ಲವೇನೋ. ಮತ್ತೊಂದು ಸಾಮಾನ್ಯ ಘಟನೆಯಾಗಿ ಮರೆಯಬಹುದಿದ್ದ ಇದು, ಏಕೆ ಮಹತ್ವ ಪಡೆಯಿತು, ತಿಳಿಯುತ್ತಿಲ್ಲ. ನಾನು ಎಂಭತ್ತು ಕೊಟ್ಟು ಅವನು ಐದು ಮರಳಿ ಕೊಡುವದರ ಬದಲು, ನಾನು ಎಪ್ಪತ್ತು ರೂಪಾಯಿ ಕೊಟ್ಟು ಅವನು ಇನ್ನೈದಕ್ಕೆ ಚೌಕಾಸಿ ಮಾಡಿದ್ದರೆ (ಹಾಗೂ ಎಪ್ಪತ್ತೈದೇ ರೂಪಾಯಿ), ಸಮೀಕರಣ ಬದಲಾಗುತ್ತಿತ್ತೇ? ಅಥವಾ ನನ್ನ ಮಾತಿನಂತೆ ಅವನು ಎಪ್ಪತ್ತನ್ನಷ್ಟೇ ತೆಗೆದುಕೊಂಡು ಪೂರಾ ಹತ್ತು ರೂಪಾಯಿ ವಾಪಸು ಕೊಟ್ಟಿದ್ದರೆ? ಅಥವಾ ಎಲ್ಲರಂತೆ ನೂರು ಕೇಳಿ ಕೊನೆಗೆ ಎಪ್ಪತ್ತಕ್ಕೇ ಒಪ್ಪಿದ್ದರೆ? ಏಕೋ ಲೆಕ್ಕ ಹತ್ತುತ್ತಿಲ್ಲ.