Wednesday, February 19, 2020

ಅಡಿಗರ ನೆನಕೆ



















ಇಲ್ಲ, ನೀವು
ಅರ್ಥವಾಗುವುದಿಲ್ಲ.

ತೋಳಬಂದಿಯ ಲಲ್ಲೆಮಾತ ಕನಸಿನ ನಡುವೆ
ತೋಳದೂಳನು ಕೇಳಿ ಬೆಚ್ಚಿದವರು;
ಕಾಣದಾವುದೊ ಕರೆಯ, ಕೇಳದಾವುದೊ ತೆರೆಯ
ಭೋರ್ಗರೆತಕೋಗೊಟ್ಟು ತೆರಳಿದವರು.

ಅಡಿಗರೆಂದರೆ ಬಡಿಗೆ!
ಅಡುಗೆತುಂಬಿದ ಗಡಿಗೆ-
ಯೊಡೆದು,
ಚೆಲ್ಲಾಪಿಲ್ಲಿ ಚೆಲ್ಲಿದನ್ನವ ಭುವಿಗೆ
ಬಿತ್ತಿ ಬಿತ್ತಿ ಮತ್ತೆ ಭತ್ತ ಬೆಳಕೊಂಡವರು.

ಬೆಳಬೆಳೆಸಿ ಚಾಚಿ ಮೂಗನು ಮೈಲುದ್ದ
ನೇಗಿಲಿನಂತೆ,
ಉದ್ದೋ ಉದ್ದ
ಉತ್ತು ಕೆತ್ತುತ ಭೂಮಿ-
ಗೀತ ಹಾಡಿಸಿದವರು;
ಕಾಲುವೆಯ ಬಗೆದು
ಸಾಗರವನೇ ಮೊಗೆಮೊಗೆದು
ಹಿಮಗಿರಿಯ ಕಂದರವ ತುಂಬಿದವರು.

ಪ್ರಾಸಲಯವೃತ್ತಗಳ ಮುರಿದು, ಶೀಷೆಯನೊಡೆದು
ಕರಗಿ ಗಾಳಿಗೆ ಸಲುವ ಕಾವ್ಯಜೀವವ ಪಿಡಿದು
ನಿರ್ಬಂಧಬಂಧದೊಳು ನಿಲಿಸಿದವರು.
ನೀರಿನಿತೂ ಸೋಂಕಿಸದ ಗಡಿಗೆಗಟ್ಟಲೆ ಗಟ್ಟಿ
ಗರಣೆಮೊಸರಿನ ಎಡೆಯ ಸಲಿಸಿದವರು;
ಜೀರ್ಣಕ್ಕೆ,
ಏಳು ಕೆರೆಗಳ ನೀರ ಕುಡಿಸಿದವರು.

ಪ್ರಜ್ಞೆಯಾಳದ ಕುರುಡುಗತ್ತಲೆಯ ಪಾತಾಳ-
ಕಿಳಿಸಿ
ಪಾತಾಳಗರಡಿ,
ನೆಳಲೊಡನೆ ಜೋಲುತಿಹ ನೂರೆಂಟು ಭೂತಗಳ
ಸೆಕ್ಕಿ ಕೊಕ್ಕೆಗೆ, ರಂಗಕೆಳೆತಂದು,
ಹಚ್ಚಿ ಬಣ್ಣದವೇಷ,
ಧೀಂಕು ಧೀಂಕಿಟಗುಡುತ
ಚಂಡೆಮದ್ದಳೆ ಲಯಕೆ ಕುಣಿಸಿದವರು.

ಅರ್ಥವಾದೀರಿ ಹೇಗೆ?
ರಾಜರಸ್ತೆಯ ನೆಚ್ಚಿ ನಡೆಯದವರು?
ಮೊಸರ ಹೆಸರಲಿ ನೀರ ಕುಡಿಯದವರು?

ನೀವಂದು ಬೇಡೆಂದ ರಾಜರಸ್ತೆಗಳೀಗ
ಪಯಣಿಗರ ಕಳಕೊಂಡು ಕಾಡಾಗಿವೆ
ಹುಚ್ಚು ಹೂ, ಜೇನು ಹಲಸುಗಳ ಸಮೃದ್ಧಿಯಲಿ
ಬನದ ಕರಡಿಗಳಲ್ಲಿ ಮನೆಮಾಡಿವೆ
ನವ್ಯಚಿಂತನೆಯಿರದ ಪೆದ್ದು ಪರಪುಟ್ಟಗಳು
ತಾರಪಂಚಮದಲ್ಲಿ ಪಲುಕುತ್ತಿವೆ
ನವಿಲೊಡನೆ ಕುಣಿವ ಕೆಂಬೂತಗಳು ಕೋತಿಗಳು
ವಾನಪ್ರಸ್ಥವ ಹಿಡಿದು ಹಾಯಾಗಿವೆ.

ಪ್ರಜಾರಸ್ತೆಗಳು?
ಕಾಡ ಸವರಿ, ಬೆಟ್ಟವೇರಿ
ಬಿಟ್ಟು ಹತ್ತುದಿಕ್ಕಿಗು ಕಣ್ಣುಕಣ್ಣು -
ನೀವು ಕೆತ್ತಿಟ್ಟು ಹೋದವು;
ಸವೆಸವೆದು, ಅವೇ ಈಗ ಅಫಿಶಿಯಲ್ ರಾಜರಸ್ತೆಗಳು!

ರಾಜತ್ವದ ವ್ಯಾಖ್ಯೆಯಿಂದು ಬದಲಾಗಿದೆ -
ಈಗ ರಾಜನೆಂದರೆ ಪ್ರಜೆ, ಪ್ರಜೆಯೆಂದರೂ ಪ್ರಜೆ;
ಪ್ರಭುತ್ವ
ದಂಡವೀಗ ನಮ್ಮ ಕೈಯಲ್ಲಿ -
ಅದು ಲೇಖನಿಗಿಂತ ಹರಿತ,
ಒಮ್ಮೆ ಸಾಣೆ ಹಿಡಿಸಿದರೆ ಸಾಕು
ಮುಂದಿನೈದು ವರ್ಷಕೆ ಚಿಂತೆಯಿಲ್ಲ;
ಮನಬಂದಂತೆ ಕೆತ್ತಬಹುದು, ಕುತ್ತಬಹುದು
ಕೊಚ್ಚಬಹುದು, ಸೀಳಬಹುದು, ಹೂಳಬಹುದು.

ಕಂದರವೇನು ಹಿಮಗಿರಿಯ ತಾತನ ಗಂಟೇ?
ಆ ಗಿರಿಯನೀಗ ಕಡಿದು ಕಂದರಕೆ ತುಂಬಿ,
ತಗ್ಗುತೆವರಿಲ್ಲದಂತೆ ಸಪಾಟು ಮಾಡಿದ್ದೇವೆ,
ಸರ್ವಸಮತಾಭಾವ ಮೆರೆದಿದ್ದೇವೆ.
"ಸಮತ್ವಂ ಯೋಗಮುಚ್ಯತೇ" -
ಯೋಗಾಸನಾಚಾರ್ಯರಿಗೆ ಕರೆಯ ಕಳಿಸಿದ್ದೇವೆ.

ಸಪಾಟಿದ್ದಲ್ಲಿ?
ಹೊಸ ಕಂದರವನಗೆದಿದ್ದೇವೆ
ಹೆಜ್ಜೆಯಿಟ್ಟರೆ
ಲಾಗ -
ಲಾಗವೆ ಯೋಗ;
ಲಾಗಾಯಿತಿನ ಕಲೆಗೆ ಎಡೆಯೊದಗಿಸಿದ್ದೇವೆ;
ಹೆಜ್ಜೆಹೆಜ್ಜೆಗು ಈಗ
ಭಂಗೀಜಂಪಿನ ಥ್ರಿಲ್ಲು,
ಎಲ್ಲೆಲ್ಲು.

ನೀವೇ ನೀಡಿದ್ದು,
ನಮ್ಮ ದಾರಿ ನಾವೇ ಕಂಡುಕೊಳ್ಳುವ ದೀಕ್ಷೆ -
ಕಾಡ ಸವರುವ ದೀಕ್ಷೆ ಗುಡ್ಡ ಕಡಿಯುವ ದೀಕ್ಷೆ -
ಅದು ಬೇರೆ ದೀಕ್ಷಿತರದ್ದು,
ಅವರಿಗೀಗ ಅಗೆದಷ್ಟು ಚಿನ್ನ, ಬಗೆದಷ್ಟು ಬಣ್ಣ!
ದಾರಿಯ ತೆವಲು ಅವರದಲ್ಲ.
ದಾರಿದೀಕ್ಷೆಯ ನಮಗೋ,
ಸವರಲು ಕಾಡುಗಳಿಲ್ಲ, ಕಡಿಯಲು ಗುಡ್ಡಗಳಿಲ್ಲ.
ಕಾಣುವುದು ಹೇಗೆ ಹೊಸ ದಾರಿಯನ್ನ?
ಇಲ್ಲೋ, ಮುಟ್ಟಿದ್ದಕ್ಕೆ ಪರ್ಮಿಟ್ಟು, ಹಿಡಿದದ್ದೇ ಬಕೆಟ್ಟು.

ನಿಮ್ಮದೇ ದಾರಿಯಲ್ಲಿ ನಡೆಯೋಣವೆಂದರೆ
ಅದೀಗ ಸವೆದು ಸವೆದು ರಾಜಾರಸ್ತೆಯಾಗಿದೆ.
ತಂತಮ್ಮ ಮೂಗಿನಳತೆಯ
ಅಳತೆಗೋಲುಗಳು, ಕೋಲುಗಳು
ಮೈಲುಗಲ್ಲುಗಳು, ಗಲ್ಲುಗಳು
ಇಲ್ಲೂ ಬಂದಿವೆ.
ಕುಳಿಬಿದ್ದ ರಸ್ತೆಗಳು
ತಲೆ ಗಿರ್ರೆನಿಸುವ,
ಎಲ್ಲೋ ಹೊಕ್ಕು ಇನ್ನೆಲ್ಲೋ ಹೊರಳುವ
ಗೊಂದಲದ ಸಂದುಗೊಂದುಗಳು
ಒಮ್ಮೆ ಜಾಮ್ ಆಯಿತೋ -
ಗಂಟೆಗಟ್ಟಲೆ ಒಳಕಟ್ಟುಗಳು ಸಡಿಲುವುದೇ ಇಲ್ಲ
ಹೊಟ್ಟೆಯುಬ್ಬರಿಸಿದರೂ, ಅಬ್ಬರಿಸಿದರೂ ಪ್ರಜ್ಜೆ
ಅಮಿಕ್ಕೊಂಡು ಕಾಯುವುದೇ ಲಕ್ಷಣ,
ರಸ್ತೆ ತೆರೆಯುವವರೆಗೆ;
ಕಾಯುವಿಕೆಗಿಂತನ್ಯ ತಪವು ಇಲ್ಲ.

ಪ್ರಜಾರಾಜ್ಯರಸ್ತೆಯಲ್ಲಿ
ಗಾಡಿಯೋಡಿಸುವ ಲೈಸೆನ್ಸೇ?
ಛೇ, ಎಂತಹ ಪ್ಯಾಸಿಸ್ಟ್ ಮನೋವೃತ್ತಿ!
ತಗೋ ಗಾಡಿ,
ನುಗ್ಗು -
ಎಡಕೂ ಬಲಕೂ ನಡಕೂ!
ಹಿಂದಿನಿಂದಲೂ ಹೊಡೆ
ಮುಂದಿನಿಂದಲೂ.
ದಿನಕೆರಡು ಢಿಕ್ಕಿ, ಕ್ಷಣಕ್ಕೆರಡು ಅಪಘಾತ
ನಿದ್ದೆಗೊಮ್ಮೆ ನಿತ್ಯಮರಣ,
ನಿಮ್ಮ ರಾಜರಸ್ತೆಗಳಲ್ಲಿ.
ಹಾಗೂ ನಿಮ್ಮ ರಸ್ತೆ ಹಿಡಿದೆವೆಂದುಕೊಳ್ಳಿ,
ನೀವೇ ತೊಡಿಸಿದ ದೀಕ್ಷೆಯುಳಿದೀತೆ ಹೇಳಿ.

ಅದಕೇ ನಾವೀಗ ಆಕಾಶದವಕಾಶವನ್ನಗೆದು
ಹೊಸ ರಸ್ತೆ ಮಾಡಬೇಕೆಂದಿದ್ದೇವೆ.
ಪರ್ಮಿಟ್ಟಿಗೆ ಅರ್ಜಿ ಹಾಕಿದ್ದೇವೆ
ದಿನ ಗೊತ್ತು ಮಾಡಲು
ನವೋನವ್ಯದ ಪುರೋಹಿತರಿಗೆ ಕರೆಹೋಗಿದೆ

ಇದೊಂದಕಾದರೂ ದೀಕ್ಷೆ ಮೀರುತ್ತೇನೆ,
ನಿಮಗೆ ನಮನವ ನಿಮ್ಮ ಶೈಲಿಯಲ್ಲೇ ಮಾಡುತ್ತೇನೆ
ಆಶೀರ್ವದಿಸಿ ಹಿರಿಯರೇ!
ಇದು ನಮನವೋ ವಮನವೋ, ಕವನವೋ ಕದನವೋ
ಎಂಬ ಒಣಜಿಜ್ಞಾಸೆ ನನ್ನದಲ್ಲ
(ಅದು ನಿಮ್ಮದೂ ಆಗಿರಲಿಲ್ಲ);
ಸಾಲುಸಾಲುಗಳಲ್ಲಿ ನೀವಿದ್ದೀರೆಂದು ಬಲ್ಲೆ
ಅಷ್ಟು ಸಾಕಿಂದಿಗೆ,
ನಿಮ್ಮ ನೆನಪಿಗೆ.
ನಮಸ್ಕಾರ.

4 comments:

sunaath said...

ಹುತ್ತಗಟ್ಟದೆ ಚಿತ್ತ ಮತ್ತೆ ರೂಪಿಸಬಹುದೆ, ಅಡಿಗರು ಬರೆದಂಥ ಕಾವ್ಯವನ್ನು?
ನಿಮ್ಮ ನಮನದ ಜೊತೆಗೆ ನನ್ನದೂ ಒಂದು ಸಾಷ್ಟಾಂಗ ಇಲ್ಲಿಯೇ ಸಲಿಸುತಿರುವೆ!

Manjunatha Kollegala said...

ಧನ್ಯವಾದ

Anonymous said...

good writing

Anonymous said...

ಇಲ್ಲ ಅರ್ಥವಾಗುವದಿಲ್ಲ ....

Parthasarathy Narasingarao