Wednesday, August 21, 2019

ಕನ್ನಡಕೆ ಹೋರಾಡು ಕನ್ನಡವ ಕಾಪಾಡು ಕನ್ನಡದ ಕಂದಾ...ಕನ್ನಡ ಹೋರಾಟದ ಹೆಸರಿನಲ್ಲಿ, ಕನ್ನಡದ ಹಿತಾಸಕ್ತಿಯನ್ನು ಮೂರಾಬಟ್ಟೆ ಮಾಡಲು ಕಾಲದಿಂದಲೂ ಒಳಗೂ ಹೊರಗೂ ಕಾದುನಿಂತ ಶಕ್ತಿಗಳಿಗೆ ಗ್ರಾಸವಾಗುವಂತಹ ಇಂಥದ್ದೊಂದು ಘಟನೆ ನಡೆಯಬಾರದಿತ್ತು.  ಮೊನ್ನೆ ಬೆಂಗಳೂರಿನ ಮಾರವಾಡಿ ಸಮುದಾಯದ ಖಾಸಗೀ ಧಾರ್ಮಿಕ/ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಹಾಕಿದ್ದ ಹಿಂದೀ ಬ್ಯಾನರುಗಳನ್ನು ಕನ್ನಡ ಹೋರಾಟಗಾರರೆಂದು ಹೇಳಿಕೊಳ್ಳುವ ಗುಂಪೊಂದು ಹರಿದುಹಾಕಿದ್ದು, ಅದನ್ನು ವಿರೋಧಿಸಿ ಕನ್ನಡದ ಎಳೇ ಸಂಸದರೊಬ್ಬರು ಪ್ರತಿಕ್ರಿಯೆ ಕೊಟ್ಟಿದ್ದೂ, ಅದಕ್ಕೆ ವಿರುದ್ಧವಾಗಿ ಭುಗಿಲೆದ್ದ ಪ್ರತಿಭಟನೆಗಳೂ, ಎರಡೂ ಬಣಗಳೂ ತಂತಮ್ಮ ಸಮರ್ಥನೆಗಾಗಿ ಮುಂದೂಡ್ಡುತ್ತಿರುವ ಹಾಸ್ಯಾಸ್ಪದ ವಾದಗಳೂ, ಅವುಗಳ ಹಿಂದಿರುವ ರಾಜಕೀಯ ಹುನ್ನಾರಗಳೂ - ಬೇಡವಾಗಿತ್ತು.  ಅಂತಿಮವಾಗಿ ಇವರೆಲ್ಲ ಸೇರಿ ಸೆಳೆಯಲೆತ್ನಿಸುತ್ತಿರುವುದು ಕನ್ನಡಮ್ಮನ ಜೀರ್ಣವಸ್ತ್ರವನ್ನಷ್ಟೇ, ಇದು ಸಂಕಟದ ವಿಷಯ.

ವಿಷಯದ ವಿಶ್ಲೇಷಣೆಗೆ ತೊಡಗುವ ಮೊದಲು, ಆದದ್ದನ್ನೊಮ್ಮೆ ಪರಿಶೀಲಿಸೋಣ.  ಬೆಂಗಳೂರಿನ ಗಣೇಶ ಬಾಗ್ ನಲ್ಲಿ ಮಾರವಾಡಿ ಜೈನಸಮುದಾಯದವರು ಚಾತುರ್ಮಾಸ್ಯ ಸಮಾರಂಭದ ಸಲುವಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ - ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಅವರ ಗುರುಗಳನ್ನು ಸ್ವಾಗತಿಸಿ ರಸ್ತೆ ಕಮಾನನ್ನು ನಿರ್ಮಿಸಿದ್ದಾರೆ, ಮತ್ತು ಅವರ ಸಮುದಾಯಕ್ಕೇ ಸೀಮಿತವಾದ ಸಮಾರಂಭವಾದ್ದರಿಂದ ಸಹಜವಾಗಿಯೇ ಅವರ ಮಾತೃಭಾಷೆಯಲ್ಲಿ ಸ್ವಾಗತವಾಕ್ಯಗಳನ್ನು ಬರೆದಿದ್ದಾರೆ.  ಇದೊಂದು ಸಮುದಾಯದ ಒಳಗಣ ಸಂಭ್ರಮದ ಸಮಾರಂಭ, ಅಷ್ಟು ಮಟ್ಟಿಗೆ ವೈಯಕ್ತಿಕ ಕಾರ್ಯಕ್ರಮ ಕೂಡ.

ಆದರೆ ಇದಾವುದನ್ನೂ ಲೆಕ್ಕಿಸದ ಕೆಲವರು ’ಹೋರಾಟ’ಗಾರರು ಕೇವಲ ದೊಡ್ಡದೊಡ್ಡ ಅಕ್ಷರಗಳ ಹಿಂದೀ ಬ್ಯಾನರನ್ನು ಮಾತ್ರ ಗಮನಿಸಿ, ಸ್ಥಳಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ - ವಿಡಿಯೋ ನೋಡಿದರೆ ಇವರು ಬಳಸಿದ ಭಾಷೆಯೂ ತೀರ ವೈಯಕ್ತಿಕವಾಗಿದೆ.  ಅಲ್ಲಿದ್ದ ಇಬ್ಬರೇ ಇಬ್ಬರು ಸೆಕ್ಯುರಿಟಿಗಳು ವಿನಯವಾಗಿಯೇ ತಮಗೆ ತಿಳಿದ ಸಮಜಾಯಿಸಿ ನೀಡಲೆತ್ನಿಸಿದ್ದಾರೆ.  ಸ್ವಾಮೀಜಿ ಬರುತ್ತಿದ್ದಾರೆ ಎಂದೇನೋ ಹೇಳಿದ ಹಾಗಿದೆ.  ಅದಕ್ಕೆ ಗಲಾಟೆ ಮಾಡುತ್ತಿದ್ದವರಲ್ಲೊಬ್ಬ "ಅವನ್ಯಾವನೋ ಮುಚ್ಕೊಂಡ್ ಬಂದಿರೋ ಸ್ವಾಮಿ... " ಎಂದು ಅಸಹ್ಯವಾಗಿ ಮಾತಾಡಿದ್ದೂ ವಿಡಿಯೋದಲ್ಲಿ ದಾಖಲಾಗಿದೆ.  ಅಷ್ಟಾದ ಮೇಲೆ, ಸೆಕ್ಯುರಿಟಿಗಳು ನಿಸ್ಸಹಾಯಕವಾಗಿ ನೋಡುತ್ತಿದ್ದಂತೆಯೇ ಈ ಜನ ಮೇಲೆ ಹತ್ತಿ ಬ್ಯಾನರುಗಳನ್ನು ಕಿತ್ತುಹಾಕಿದ್ದೂ, ಗುರುಗಳ ಚಿತ್ರವನ್ನು ಚೂರಿಯಲ್ಲಿ ಹರಿದು ಕೆಳಗೆಳೆದದ್ದೂ, ಬ್ಯಾನರನ್ನು ಕಾಲಿನಲ್ಲಿ ಹೊಸಕಿದ್ದೂ - ಇವಿಷ್ಟೂ ವಿಡಿಯೋದಲ್ಲಿ ದಾಖಲಾಗಿರುವ ಅಂಶ.

ಹೀಗೆ ತಮ್ಮ ಧರ್ಮಗುರುಗಳ ಭಾವಚಿತ್ರಕ್ಕಾದ ಅಪಚಾರದಿಂದ, ತಮ್ಮ ಖಾಸಗೀ ಕಾರ್ಯಕ್ರಮದಲ್ಲಿ ಆದ ದಾಂದಲೆಯಿಂದ ನೊಂದು ಜೈನಸಮಾಜದವರು ಪೋಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ, ಮತ್ತು ಸಹಜವಾಗಿಯೇ ಪೋಲೀಸರು ಅಪರಾಧಿಗಳನ್ನು ಬಂಧಿಸಿದ್ದಾರೆ.

ಸಧ್ಯಕ್ಕೆ ಕನ್ನಡದ ಪರ-ವಿರೋಧವಾಗಿ ಹಾರಾಡುತ್ತಿರುವ ಹಲವು ಕಾಮೆಂಟುದಾರರಿಗೆ ಮೇಲಿನ ಘಟನಾವಳಿಗಳು ಪೂರ್ಣ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.  ಇರಲಿ, ಸಧ್ಯಕ್ಕೆ ಇದನ್ನು ನಾವೂ ತಾತ್ಕಾಲಿಕವಾಗಿ ಮರೆತು ಆನಂತರ ನಡೆದದ್ದನ್ನು ಒಮ್ಮೆ ನೋಡೋಣ.  ಕನ್ನಡ-ಕನ್ನಡತನದ ಬಗ್ಗೆ ತಮ್ಮ ಬಾಲಿಶ ಹೇಳಿಕೆಗಳಿಗೆ ಪ್ರಸಿದ್ಧರಾದ 'ಸೆಂಟ್ರಲ್' ಸ್ಕೂಲಿನ ಎಳೇ ವಿದ್ಯಾರ್ಥಿ ಸಂಸದರೊಬ್ಬರು "ಕೆಲವು ರೌಡಿ ಶಕ್ತಿಗಳಿಂದ ನಮ್ಮ ಜೈನಬಂಧುಗಳ ಮೇಲೆ ಹಲ್ಲೆಯಾಗಿರುವುದು ನೋವುಂಟುಮಾಡಿದೆ, ಆದರೆ ಅವರು ಬೆಂಗಳೂರಿನಲ್ಲಿ ಉರ್ದೂ ಬಳಕೆಯ ಬಗ್ಗೆ ಚಕಾರವೆತ್ತುವುದಿಲ್ಲ.  ಕರ್ನಾಟಕಕ್ಕೆ ತಮ್ಮ ಕೊಡುಗೆ ನೀಡಿರುವ ಈ ಶಾಂತಿಪ್ರಿಯ ಸಮುದಾಯದ ಮೇಲೆ ನಡೆದ ಹಲ್ಲೆ ನ್ಯಾಯವಾದ ಕನ್ನಡಿಗರಿಗೆ, ಕನ್ನಡ ಹೋರಾಟಗಾರರಿಗೆ ಕಳಂಕ ತಂದಿದೆ" ಎಂದು ಹೇಳಿಕೆ ನೀಡಿದ್ದಾರೆ.  ಮೇಲೆ ವಿವರಿಸಿದ ಹಿನ್ನೆಲೆಯನ್ನರಿಯದೇ, ಹೋರಾಟಗಾರರೇ ಅಪ್ಲೋಡ್ ಮಾಡಿದ ವಿಡಿಯೋವನ್ನು ನೋಡದೆಯೇ ಈ ಹೇಳಿಕೆಯನ್ನಷ್ಟೇ ನೋಡಿದವರಿಗೆ (ಅದೂ ಈ ಸಂಸದರ ಈ ಹಿಂದಿನ ಕನ್ನಡವಿರೋಧೀ ನಿಲುವುಗಳನ್ನು ಗಮನಿಸಿದವರಿಗೆ), ಭಾಷೆಯ ವಿಷಯದಲ್ಲಿ ಧರ್ಮವನ್ನು ಬೆರೆಸಿ ಒಡಕುತಂದೊಡ್ಡುವ ಟಿಪಿಕಲ್ ಹೇಳಿಕೆಯಂತೆ ತೋರಿ ಅಸಹ್ಯ ಹುಟ್ಟಿಸುವುದರಲ್ಲಿ, ಈ ಸಂಸದರ ಬಗ್ಗೆ ಸಿಟ್ಟು ತರಿಸುವುದರಲ್ಲಿ ಅನುಮಾನವಿಲ್ಲ (ನನಗೂ ಇದನ್ನೋದಿದ ಕೂಡಲೇ ಬಂದದ್ದು ಅದೇ ಭಾವ - ಈಗ ಇದರ ಬಗ್ಗೆ ಗಲಭೆಯೆಬ್ಬಿಸುತ್ತಿರುವವರಿಗೆ ಬೇಕಾದ್ದೂ ಅದೇ).  ಆದರೆ ಅದೃಷ್ಟವೋ ದುರದೃಷ್ಟವೋ, ಈ ಸಲ, ಈ ಸಂಸದರ ಹೇಳಿಕೆಯಲ್ಲಿ ಹುರುಳಿದೆಯೆಂಬುದು ಮೇಲಿನ ಘಟನೆಯನ್ನು ಪರಿಶೀಲಿಸಿದ, ವಿಡಿಯೋ ನೋಡಿದ ಯಾರಿಗಾದರೂ ಮನದಟ್ಟಾಗದಿರದು.  ಇದು ನಿಜಕ್ಕೂ ಭಾಷೆಗೆ ಸಂಬಂಧಪಟ್ಟ ವಿಷಯವಲ್ಲ, ಬದಲಿಗೆ ಹಾಗೆ ತಪ್ಪುತಿಳಿದು ಸಮುದಾಯವೊಂದರ ಧಾರ್ಮಿಕ ಭಾವನೆಗಳ ಮೇಲೆ ನಡೆಸಿದ ಹಲ್ಲೆ ಎಂಬುದು ಸ್ಪಷ್ಟವಾಗಿಯೇ ಕಾಣುತ್ತದೆ.

ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಎಂಬ ಮಾತಿಗೆ ಎರಡಿಲ್ಲ - ಕನ್ನಡದೊಂದಿಗೇ ಹಾಸುಹೊಕ್ಕಾಗಿ ಜೊತೆವಾಳುತ್ತಿರುವ ತುಳು ಕೊಡವ ಕೊಂಕಣಿಗಳನ್ನೂ ಸೇರಿಸಿ ಪಲವುಂ ಕನ್ನಡಂಗಳ್ ಎನ್ನಿ ಬೇಕಾದರೆ.  ಆದರೆ ಕನ್ನಡವು ಈ ನಾಡಿಗರ ಹಲವು ಅಸ್ಮಿತೆಗಳಲ್ಲಿ ಒಂದಷ್ಟೇ, ಅದೇ ಎಲ್ಲವೂ ಅಲ್ಲ.  ಪ್ರತಿವ್ಯಕ್ತಿಗೂ ಹಲವು ಅಸ್ಮಿತೆಗಳಿರುತ್ತವೆ - ಭಾಷೆ, ದೇಶ, ಊರು, ಜಾತಿ, ಧರ್ಮ, ಉದ್ಯೋಗ, ಲಿಂಗ, ಕೊನೆಗೆ ನಿಮ್ಮ ಗೆಳೆಯರ ಗುಂಪೂ ಒಂದು ಅಸ್ಮಿತೆಯೇ.  ಇದಾವುದಕ್ಕೆ ಪೆಟ್ಟು ಬೀಳುವುದನ್ನೂ ವ್ಯಕ್ತಿ ಸಹಿಸಲಾರ.  ಯಾವಯಾವ ಅಸ್ಮಿತೆಗೆ ಎಲ್ಲೆಲ್ಲಿ ಬೆಲೆ ಕೊಡಬೇಕೆಂಬುದನ್ನು ಅರಿತಾತ ಗೆದ್ದ - ಹಾಗೆ ಅರಿತ ಸಮುದಾಯ ಗೆದ್ದಿತು, ನಾಡು ಗೆದ್ದಿತು.  ಬದಲಿಗೆ ಒಂದು ಅಸ್ಮಿತೆ ಮೆರೆಯಬೇಕಾದೆಡೆ ಇನ್ನಾವುದೋ ಅಸ್ಮಿತೆಯನ್ನು ತಂದು ಹೇರುವುದು ಇಲ್ಲಿನ ಅಸ್ಮಿತೆಯನ್ನು ತುಳಿಯುವುದು ದೊಡ್ಡ ಅಪಚಾರ.  ಮೊನ್ನೆ ಬೆಂಗಳೂರಿನಲ್ಲಾದದ್ದೂ ಅಂಥದ್ದೇ ಒಂದು.  ಕನ್ನಡ ನೆಲದಲ್ಲಿ ಕನ್ನಡ ಅಸ್ಮಿತೆ - ಯಾವಾಗ? ಸಾರ್ವಜನಿಕ ಸ್ಥಳಗಳಲ್ಲಿ, ಸಾರ್ವಜನಿಕ ಸಂವಹನಗಳಲ್ಲಿ, ಸಾರ್ವಜನಿಕ ಉದ್ಯೋಗಗಳಲ್ಲಿ - ಖಾಸಗಿಯ ವಿಷಯ ಬೇರೆ.  ಕನ್ನಡನಾಡಿನ ದಾರ್ಶನಿಕರಲ್ಲೊಬ್ಬರಾದ ಡಿವಿಜಿಯವರ ಮನೆಮಾತು ತಮಿಳು; ಬೀದಿಯಲ್ಲಿ ಆಡುತ್ತಿದ್ದುದು ಪಕ್ಕಾ, ಮುಲಕನಾಡು ಬ್ರಾಹ್ಮಣರ ತೆಲುಗು, ವರಕವಿ ಬೇಂದ್ರೆ ಮರಾಠಿಗರು, ಕನ್ನಡಕ್ಕೊಬ್ಬನೇ ಕೈ ಕೈಲಾಸಂ ತಮಿಳರು.  ಇವರಾರೂ ಖಾಸಗೀ ಜೀವನದಲ್ಲಿ ತಂತಮ್ಮ ಅಸ್ಮಿತೆಗಳನ್ನು ಬಿಟ್ಟುಕೊಡಲೂ ಇಲ್ಲ, ಸಾರ್ವಜನಿಕ ಜೀವನದಲ್ಲಿ ಅವುಗಳನ್ನು ಮೆರೆಸಲೂ ಇಲ್ಲ.  ಬದಲಿಗೆ ತಂತಮ್ಮ ’ಅನ್ಯ’ ಹಿನ್ನೆಲೆಗಳ ಹೊರತಾಗಿಯೂ ಕನ್ನಡದ ’ಗುರುತಾಗಿ’ ಮೆರೆದರು.  ಅಷ್ಟೇಕೆ?  ಕನ್ನಡದ ಬಲುದೊಡ್ಡ ಹೆಗ್ಗುರುತು, ಕನ್ನಡದ ಕಣ್ಮಣಿ ಡಾ. ರಾಜ್ಕುಮಾರ್ ಹುಟ್ಟಿದ್ದು ತಮಿಳುನಾಡಿನಲ್ಲಿ, ತಮಿಳರ ಆ ಕಾಲದ ಆರಾಧ್ಯದೈವ ಎಮ್ ಜಿ ಆರ್ ಮಲಯಾಳದವರು, ಮತ್ತೊಬ್ಬ ಆರಾಧ್ಯದೇವತೆ ಪುರಚ್ಚಿ ತಲೈವಿ ಜಯಲಲಿತಾ ನಮ್ಮ ಮಂಡ್ಯದ ಹೆಣ್ಣುಮಗಳು.  ಇನ್ನು ತಮಿಳು ಸಿನಿಮಾ ರಸಿಕರ ಹೃದಯಸಿಂಹಾಸನದಲ್ಲಿ ಕುಳಿತ 'ಸದಾಹಸಿರು' (ever green) ಹೀರೋ ರಜನೀಕಾಂತ್ ಅಂತೂ ಕನ್ನಡನಾಡಿನಲ್ಲೇ ಬೆಳೆದ ಮರಾಠಿಗರು.  ’ನಮ್ಮ’ ರಾಜಕುಮಾರರ ಪ್ರೀತಿಯ ಗೆಳೆಯನಾಗಿದ್ದ ಇವರು, ಈಗಲೂ ಇಲ್ಲಿಗೆ ಬಂದಾಗ ಶುದ್ಧವಾದ ಕನ್ನಡದಲ್ಲೇ ಮಾತಾಡುತ್ತಾರೆ, ಕೇವಲ ಮಾತಷ್ಟೇ ಏಕೆ, ಅವರು ಓದಿದ ತ್ರಿವೇಣಿ, ಗಟ್ಟಿ ಮೊದಲಾದ ಕಾದಂಬರಿಕಾರರಿಂದ ಮಾತುಗಳನ್ನು ಹಂಚಿಕೊಳ್ಳುತ್ತಾರೆ.  ಅವರನ್ನು ಪ್ರೀತಿಸಲು ನಮಗೆ, ಕನ್ನಡಿಗರಿಗೆ ಇನ್ನೇನು ಬೇಕು?  ಹಾಗೆಂದು ಅವರು ತಮಿಳು ವಿರೋಧಿಯೇ?  ತಮಿಳಿನ ಹಿತಾಸಕ್ತಿಯ ವಿಷಯ ಬಂದಾಗ ನಿರ್ದಾಕ್ಷಿಣ್ಯವಾಗಿ ತಮಿಳಿನ ಪರ ವಹಿಸಿ ನಿಲ್ಲುವುದು ಇದೇ ’ತಲೈವ’ರೇ.  ಹಲವು ಅಸ್ಮಿತೆಗಳೆಡೆಗೆ ವ್ಯಕ್ತಿಯೊಬ್ಬ ಇಟ್ಟುಕೊಳ್ಳಲೇಬೇಕಾದ ವಿವೇಕ ಇದು.

ಇನ್ನು ಭಾಷೆಗೂ ಧರ್ಮಕ್ಕೂ ಬಿಡಿಸಲಾಗದ ನಂಟು.  ನಾವು ಇನ್ನೆಷ್ಟೇ ಕನ್ನಡವಂತರಾಗಿರಲಿ, ದಾಸರಪದಗಳನ್ನು ಹಾಡಿಕೊಂಡೇ ಕುಣಿಯಲಿ ವಿಷ್ಣುಸಹಸ್ರನಾಮವನ್ನೋ ಲಲಿತಾಸಹಸ್ರನಾಮವನ್ನೋ ಕನ್ನಡಕ್ಕೆ ಅನುವಾದಿಸಿ ಅರ್ಚಿಸುತ್ತೇನೆಂದರೆ ಆ ವಿಷ್ಣುವೋ ಲಲಿತೆಯೋ ನಿಮ್ಮ ಮೊರೆಯನ್ನು ಕೇಳುವುದೇ ಇಲ್ಲ - ಆಗಮೋಕ್ತಪೂಜೆಯೆಂದರೆ ಸಂಸ್ಕೃತವೇ ಬೇಕು (ಆಗಮೋಕ್ತ ಪೂಜೆಯೇ ಏಕೆ ಬೇಕು ಎನ್ನುವುದಾದರೆ, ಅದು ಬೇರೆಯ ವಿಷಯ, ಅವರವರ ನಂಬಿಕೆಗೆ ಬಿಟ್ಟದ್ದು, ನಮ್ಮ ಚರ್ಚೆಯಲ್ಲ); ಮುಸಲ್ಮಾನರು ಕಾಬಾ ಕಡೆ ತಿರುಗಿ ಕನ್ನಡದಲ್ಲಿ ನಮಾಜು ಮಾಡಲಾಗುವುದಿಲ್ಲ, ಅರಬ್ಬಿಯೇ ಬೇಕು; ಹಾಗೇ ಪಂಡರಿಯ ವಿಟ್ಠಲನಿಗೆ ಮರಾಠಿಯ ಅಭಂಗ, ತಿರುಪತಿಯ ತಿಮ್ಮನಿಗೆ ಅನ್ನಮಯ್ಯನ ತೆಲುಗು ಗೀತೆಗಳು, ಶ್ರೀರಂಗದ ರಂಗನಿಗೆ ತಮಿಳಿನ ಪಾಶುರಗಳು (ನಾನಂತೂ ಈ ಪಾಶುರಗಳ ನಾದಾನುಭಾವಕ್ಕೆ ಮರುಳಾಗಿ ಇದನ್ನು ಅಭ್ಯಸಿಸಲಿಕ್ಕಾದರೂ ಶುದ್ಧವಾಗಿ ತಮಿಳು ಕಲಿಯಬೇಕೆಂದು ಆಸೆಪಟ್ಟವನು).  ಹೀಗಿರುವಾಗ ಭಾಷೆಯೆನ್ನುವುದು ಆಯಾ ಧಾರ್ಮಿಕಸಮುದಾಯಗಳ ಆಚರಣೆಯ ಭಾಗವೇ ಆಗಿಬಿಡುತ್ತದೆ.  ಅನೇಕವೇಳೆ ಆಯಾ ಸಮುದಾಯಗಳಲ್ಲಿ ಬಹುಸಂಖ್ಯಾತರ ಭಾಷೆಯೇ ಆ ಧರ್ಮದ ಭಾಷೆಯೂ ಆಗಿಬಿಡುತ್ತದೆ.  ಉದಾಹರಣೆಗೆ, ಅಯ್ಯಂಗಾರರ ಪಂಗಡವನ್ನು ತೆಗೆದುಕೊಳ್ಳಿ - ಈ ಪಂಗಡ ಮೂಲತಃ ತಮಿಳುನಾಡಿನದು, ಆದರೆ ಈ ಪಂಗಡಕ್ಕೆ ಸೇರಿದ ಜನ ಕೇವಲ ತಮಿಳುನಾಡಿಗೆ ಸೀಮಿತವಾಗಿಲ್ಲ - ಕರ್ನಾಟಕ, ಅಂಧ್ರಗಳಲ್ಲೂ ಹರಡಿದ್ದಾರೆ.  ಮನೆಮಾತು ಸಾಮಾನ್ಯವಾಗಿ ತಮಿಳು, ಪೂಜೆಯ ಬಹುಭಾಗ ತಮಿಳು.  ಬೇರೆಬೇರೆ ಪ್ರಾಂತ್ಯಕ್ಕೆ ಸೇರಿದ ಅಯ್ಯಂಗಾರರು ಭೆಟ್ಟಿಯಾದಾಗ ಪರಸ್ಪರ ಕುಶಲ ವಿಚಾರಿಸುವುದೂ ಸಾಮಾನ್ಯವಾಗಿ ತಮಿಳಿನಲ್ಲೇ.  ಆದ್ದರಿಂದ ತಮಿಳು ಅಯ್ಯಂಗಾರ್ ಧರ್ಮದ ಭಾಷೆ.  ಹಾಗೇ ಮಾಧ್ವಬ್ರಾಹ್ಮಣರದ್ದು ಸಾಮಾನ್ಯವಾಗಿ ಕನ್ನಡ ಭಾಷೆ.  ಪೂಜೆಯಲ್ಲಿ ಕನ್ನಡದ ಪಾತ್ರವೇನಿಲ್ಲದಿದ್ದರೂ ಮಾಧ್ವಮತದ ಸಂಸ್ಕೃತೇತರ ಧಾರ್ಮಿಕಸಾಹಿತ್ಯವಿರುವುದು ಬಹುಮಟ್ಟಿಗೆ ಕನ್ನಡದಲ್ಲೇ - ಹರಿದಾಸಸಾಹಿತ್ಯದಲ್ಲಿ.  ಕನ್ನಡನಾಡಿನ ಹೊರಗೆ ತಮಿಳುನಾಡಿನಲ್ಲಿ ಆಂಧ್ರದಲ್ಲಿ ನೆಲೆಸಿದ ಮಾಧ್ವರೂ ಅವರದ್ದೇ ಪ್ರಭೇದದ ವಿಚಿತ್ರವಾದ ಕನ್ನಡವನ್ನೇ ಆಡುತ್ತಾರೆ.  ಅವರ ಧರ್ಮಗುರುಗಳು ನೂರಕ್ಕೆ ನೂರು ಕನ್ನಡಿಗರು.  ಅವರು ತಮ್ಮ ಹೊರರಾಜ್ಯದ ಶಿಷ್ಯರನ್ನು ಭೇಟಿಮಾಡಲು ಹೋದಾಗ ಅಲ್ಲಿ ಕನ್ನಡದ ಸ್ವಾಗತಫಲಕಗಳು ರಾರಾಜಿಸುತ್ತದೆ.  ಹೀಗೇ ಇವತ್ತಿನ ಮಾರವಾಡೀ ಜೈನಸಮುದಾಯದ ಭಾಷೆ ಗುಜರಾಥೀ, ರಾಜಾಸ್ತಾನೀ, ಹಿಂದೀ - ಅದು ಅವರ ಧರ್ಮದ ಭಾಷೆ.  ಇಲ್ಲಿ ಅವರ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಿ ಅವರ ಗುರುಗಳನ್ನಿಲ್ಲಿಗೆ ಕರೆಸಿದಾಗ ಸಹಜವಾಗಿಯೇ ಅವರ ಧರ್ಮದ ಭಾಷೆ ಬಳಸಲ್ಪಡುತ್ತದೆಯೇ ಹೊರತು, ಈ ನೆಲದ ಭಾಷೆಯಲ್ಲ.  ’ತಮ್ಮವರು’ ಇಲ್ಲಿಗೆ ಬಂದಾಗ ಇವರು ಅವರಿಗೆ ಸ್ವಾಗತ ಕೋರಬೇಕಾದ್ದು ತಮ್ಮೆಲ್ಲರ ಭಾಷೆಯಲ್ಲೇ ಹೊರತು ಕನ್ನಡದಲ್ಲಲ್ಲ.  ಹಾಗಿದ್ದರೆ ಕನ್ನಡನಾಡಿನ ಜೈನರ ಕತೆ? ಎಂದರೆ, ಅದನ್ನು ಅವರೇ ಕೇಳುತ್ತಿಲ್ಲ, ನಾವೇಕೆ ತಲೆಕೆಡಿಸಿಕೊಳ್ಳಬೇಕು?  ಕನ್ನಡನಾಡಿನಲ್ಲಿ ಜೈನರೂ ಇದ್ದಾರೆ, ಜೈನಗುರುಗಳೂ ಇದ್ದಾರೆ, ಅವರು ಕನ್ನಡದಲ್ಲೇ ವ್ಯವಹರಿಸುತ್ತಾರೆ - ಆದರೆ ಧರ್ಮದ ವಿಷಯಕ್ಕೆ ಬಂದರೆ ಅವರೇನು ಪಂಪರನ್ನರನ್ನೋದಿ ಧರ್ಮವನ್ನು ಕಲಿಯುವುದಿಲ್ಲ.  ಅವರ ಆಕರವೇ ಬೇರೆ, ಅದರ ಭಾಷೆಯೇ ಬೇರೆ - ಅದು ಅವರ ವೈಯಕ್ತಿಕ ವಿಷಯ.  ನಾವು ಸಾರ್ವಜನಿಕರು, ನಮಗೆ ಅವರ ವೈಯಕ್ತಿಕ ಆಚರಣೆಗಳಲ್ಲಿ ಪ್ರವೇಶವಿಲ್ಲ.  ಒಟ್ಟಿನಲ್ಲಿ ಮೇಲೆ ವಿವರಿಸಿದ ಘಟನೆಯಲ್ಲಿ ಭಾಷೆ ಯಾವ ದೃಷ್ಟಿಯಿಂದಲೂ ಕನ್ನಡದ ಅಸ್ಮಿತೆಯ ವಿಷಯವಾಗಿರಲಿಲ್ಲ, ಬದಲಿಗೆ ಅವರ ಧಾರ್ಮಿಕ ಆಚರಣೆಯ ಅಸ್ಮಿತೆಯ ವಿಷಯವಾಗಿತ್ತು.  ಈ ದೃಷ್ಟಿಯಿಂದ ಆ ಹಲ್ಲೆ ದುರಾಚಾರವೇ ಸರಿ.  ಇನ್ನು, ಯಾವ ಧರ್ಮಕ್ಕೇ ಸೇರಿರಲಿ, ಗುರುಗಳೊಬ್ಬರ ಚಿತ್ರವನ್ನು ಕಾಲಿಗೆ ಹಾಕಿ ತುಳಿದದ್ದು ಅಪಚಾರ - ಭಾಷಾತೀತವಾಗಿ ಅಪಚಾರ.

ಇರಲಿ, ಇದು ಹೇಗೂ ಜಾತಿ/ಧರ್ಮದ ವಿಷಯ ಬಂದುಬಿಟ್ಟಿರುವುದರಿಂದ ಮೇಲೆ ಸಂಸದರ ಹೇಳಿಕೆಯ ಇನ್ನೊಂದು ಭಾಗವನ್ನೂ ಪರಿಶೀಲಿಸುವುದೊಳ್ಳೆಯದು.  ಹೌದಲ್ಲವೇ?  ಇದೇ ಜಾಗದಲ್ಲಿ ಯಾವುದಾದರೂ ಉರ್ದು ಹೋರ್ಡಿಂಗ್ ಇದ್ದಿದ್ದರೆ ಪ್ರತಿಕ್ರಿಯೆಗಳು, ದಾಂಧಲೆಗಳು ಹೀಗೇ ಇರುತ್ತಿದ್ದುವಾ?  ಇಲ್ಲ, ಇವರಿಗೆ ಮಾಡಿದಿರಲ್ಲ ಅವರಿಗೂ ಮಾಡಿ ಎಂಬುದು ಎಷ್ಟುಮಾತ್ರಕ್ಕೂ ನನ್ನ ಸವಾಲಲ್ಲ.  ನಾನು ಮೇಲೇ ವಿವರಿಸಿದಂತೆ ಧರ್ಮ, ಅದಕ್ಕೆ ಸಂಬಂಧಿಸಿದ ಆಚರಣೆ, ಅದರೊಡನೆ ಹಾಸುಹೊಕ್ಕಾದ ಭಾಷೆ ಇವಿಷ್ಟೂ ಆ ಧಾರ್ಮಿಕಸಮುದಾಯದ ವೈಯಕ್ತಿಕವಿಷಯ - ಅದು ಮುಸಲ್ಮಾನರಾದರೂ ಜೈನರಾದರೂ ಅಯ್ಯಂಗಾರರಾದರೂ ಅಷ್ಟೇ.  ಆದರೂ, ಅಹಿಂಸೆಯನ್ನೇ ಆಚರಣೆಯನ್ನಾಗಿ ಮಾಡಿಕೊಂಡು, ಒಬ್ಬರ ಹಂಗಿಲ್ಲದೇ ಪರರಾಜ್ಯವೊಂದರಲ್ಲಿ ತಮ್ಮ ಜೀವನ ಕಟ್ಟಿಕೊಂಡು ಅಲ್ಲಿನ ಜನರೊಂದಿಗೆ ಬೆರೆತು ಬದುಕುತ್ತಿರುವ ಸಮುದಾಯವೊಂದರ ಖಾಸಗೀ ಆಚರಣೆಯಲ್ಲಿ ಬಳಸಿದ ಭಾಷೆಗೆ ಕಿಡಿಕಿಡಿಯಾದ ಹೋರಾಟಗಾರರು, ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಜನರ ನಡುವೆಯೇ ಬದುಕಿದ್ದೂ ಕನ್ನಡ ಮಾತಾಡಲೊಲ್ಲದ, ಕಲಿಯಲೊಲ್ಲದ, ಧಾರ್ಮಿಕವಲ್ಲದ ಸಂವಹನದಲ್ಲೂ ಉರ್ದೂವಿಗೇ ಪ್ರಾಧಾನ್ಯ ಕೊಡುವ, ಕೊನೆಗೆ ಚುನಾವಣಾಪ್ರಚಾರಗಳಲ್ಲೂ ಉರ್ದೂವನ್ನೇ ಬಳಸುವ, ಉರ್ದೂ ಶಾಲೆಗಳಲ್ಲೇ ತಮ್ಮ ಮಕ್ಕಳಿಗೆ ಕಲಿಸುವ ಸಮುದಾಯಗಳ ಮೇಲೂ ಹೀಗೆ 'ಕ್ರಮ' ಕೈಗೊಳ್ಳುವ ಧೈರ್ಯ ತೋರುತ್ತಿದ್ದರೇ?  ಕನ್ನಡ'ಕ್ರಿಯೆ' ದುರ್ಬಲರ ಮೇಲೆ ಎತ್ತಿದ ಕೋಲಾಗಬಾರದಲ್ಲವೇ?  ಇದು ಯಾರನ್ನೂ ಕಾಡುವ ಪ್ರಶ್ನೆ.

ಇವಿಷ್ಟೂ ಈ ನಿರ್ದಿಷ್ಟ ಘಟನೆಗೆ ಸಂಬಂಧಿಸಿದ ಮಾತಾಯಿತು.  ಆದರೆ ಇದನ್ನು ವಿರೋಧಿಸುತ್ತಿರುವವರಾಗಲೀ ಸಮರ್ಥಿಸುತ್ತಿರುವವರಾಗಲೀ ತಂತಮ್ಮ ರಾಜಕೀಯ ಅಜೆಂಡಾಗಳಿಗನುಗುಣವಾಗಿ ಅದನ್ನು ಮಾಡುತ್ತಿದ್ದಾರೆಯೇ ವಿನಾ ಘಟನೆಯ ಗುಣಾವಗುಣಗಳನ್ನು ಆಧರಿಸಿ ಅಲ್ಲವೆನ್ನುವುದು ಸ್ಪಷ್ಟ.  ಉದಾಹರಣೆಗೆ, ಈ ದಾಂಧಲೆ ಮಾರವಾಡಿಗಳ ಮೇಲಲ್ಲದೇ ಮೇಲೆ ವಿವರಿಸಿದಂತೆ ಬೇರೆ ಇನ್ನೊಂದು ಧರ್ಮದವರ ಮೇಲಾಗಿದ್ದಿದ್ದರೆ ಆ ಹೋರಾಟಗಾರರ ಬಗೆಗಿನ 'ವಿರೋಧ' ಇಷ್ಟೇ ಪ್ರಮಾಣದಲ್ಲಿರುತ್ತಿತ್ತೇ?  ಈ ವಿರೋಧದಲ್ಲಿ, ಕೇಂದ್ರದ ಹಿಂದೀ-ಪರ ನೀತಿಯಿಂದ ಆ ಪಕ್ಷದ ಹಿಂಬಾಲಕರಲ್ಲಿ ಇದ್ದಕ್ಕಿದ್ದಂತೆ ಜಾಗೃತವಾದ ಹಿಂದೀಪ್ರೇಮದ ಪಾತ್ರವೆಷ್ಟು?  ಈಗ ರಾಜ್ಯದಲ್ಲಿ ಯಡಿಯೂರಪ್ಪನವರ ಬಿಜೆಪಿ ಸಂಪುಟ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಈ ಘಟನೆ ನಡೆದಿರಬೇಕಾದರೆ ಅದಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ, ಅಧಿಕಾರದಿಂದ ನಿರ್ಗಮಿಸಿದವರ ಪಾತ್ರವೇನೂ ಇರಲಿಕ್ಕಿಲ್ಲವಷ್ಟೇ?  ಬಿಜೆಪಿ ಬದಲು ರಾಜ್ಯದಲ್ಲಾಗಲೀ ಕೇಂದ್ರದಲ್ಲಾಗಲೀ ಬೇರೆ ಸರ್ಕಾರವಿದ್ದಿದ್ದರೆ ಸಮೀಕರಣ ಬದಲಾಗುತ್ತಿದ್ದಿತೇ?  ಹೀಗೆ ಹಲವು ಲೆಕ್ಕಾಚಾರಗಳಾಚೆಗೆ ಕನ್ನಡದ ಅಸ್ಮಿತೆ-ಹೋರಾಟವನ್ನು ನೋಡುವುದು ಇಂದಿನ ಅಗತ್ಯ.  ಈ ಹೋರಾಟಗಳೂ, ಆ ಹೋರಾಟದ ಪ್ರತಿಭಟನೆಗಳೂ ವಸ್ತುನಿಷ್ಠವಾಗಿರಬೇಕಾದ್ದು ಬಹುಮುಖ್ಯ.  ಮೊನ್ನೆ ಕಳೆದ ತಿಂಗಳು ಹಂಪಿಯ ನವಬೃಂದಾವನದಲ್ಲಿ ವ್ಯಾಸರಾಜರ ಬೃಂದಾವನವನ್ನು ನೆಲಸಮ ಮಾಡಲಾಯಿತು.  ಕನ್ನಡದ ಸಾಂಸ್ಕೃತಿಕ ಪರಂಪರೆಗೆ ವ್ಯಾಸರಾಜರ ಕೊಡುಗೆ ಸಾಮಾನ್ಯದ್ದೇ?  ಇಂತಿದ್ದರೂ ಒಂದೇ ಒಂದು ಕನ್ನಡಪರಸಂಘಟನೆ ಕಮಕ್ ಕಿಮಕ್ ಎಂದುದನ್ನು ನೋಡಲಿಲ್ಲ - ಮಾಧ್ಯಮಗಳಲ್ಲಿ ಪ್ಯಾನಲ್ ಡಿಸ್ಕಶನ್ ಆಗಲಿಲ್ಲ; ಹೋಗಲಿ ಸನಾತನ ಸಂಸ್ಕೃತಿಯನ್ನು ಎತ್ತಿಹಿಡಿದರೆಂಬ ಕಾರಣಕ್ಕಾದರೂ ಒಂದೇ ಒಂದು ಹಿಂದೂ ಸಂಘಟನೆ ಈ ಅನಾಹುತದ ಬಗ್ಗೆ ಚಕಾರವೆತ್ತಲಿಲ್ಲ.  ಕೊನೆಯ ಪಕ್ಷ ಬ್ರಾಹ್ಮಣರ ಗುರುವೆಂಬ ಕಾರಣಕ್ಕಾಗಿ ಒಂದೇ ಒಂದು ಬ್ರಾಹ್ಮಣಸಂಘಟನೆ ಇದರ ಬಗ್ಗೆ ಉಸಿರೆತ್ತಲಿಲ್ಲ.  ಇದೆಂತಹ ಕನ್ನಡ ಕಳಕಳಿ?  ಇದೆಂತಹ ಹಿಂದೂ ಜಾಗೃತಿ?  ಇದೆಂತಹ ಬ್ರಾಹ್ಮಣ ಒಗ್ಗಟ್ಟು?

ಇರಲಿ.  ಕನ್ನಡಪರ ಹೋರಾಟಕ್ಕೆ ಅದರದ್ದೇ ಆದ ಗೌರವಾನ್ವಿತ ಇತಿಹಾಸವಿದೆ - ಕನ್ನಡವನ್ನು ಕನಸಿದ ಹಲವು ಮಹಾನ್ ಚೇತನಗಳ ಶ್ರಮ-ಮುಂಗಾಣ್ಕೆಗಳು ಇದರಲ್ಲಿವೆ; ಹಾಗೆಯೇ ಸ್ವಾತಂತ್ರ್ಯಪೂರ್ವದಿಂದಲೂ ಕನ್ನಡದೆಡೆಗೆ ಮಲತಾಯಿ ಧೋರಣೆಯನ್ನೇ ತಳೆದಿರುವ ಉತ್ತರದ ಹಿಂದೀವಾಲಾಗಳ ಅಡಾವುಡಿಗೂ ಅದರ ವಿರುದ್ಧದ ಪ್ರತಿಭಟನೆಗಳಿಗೂ ಅಷ್ಟೇ ದೀರ್ಘ ಇತಿಹಾಸವಿದೆ.  ಈ ನಾಡಿಗೆ ಇದಾವುದೂ ಹೊಸದಲ್ಲ - ಮೊದಲೆಲ್ಲಾ ಪ್ರತಿಭಟನೆಗಳಲ್ಲಿ ಎಲ್ಲ ಕನ್ನಡಿಗರೂ ಮನಸಾರೆ ದನಿಗೂಡಿಸದಿದ್ದರೂ ಒಡಕು ದನಿಗಳಂತೂ ಬಹಳವಿರಲಿಲ್ಲ.  ಹೆಚ್ಚೆಂದರೆ ಕನ್ನಡ ಹೋರಾಟಗಾರರು ಕನ್ನಡವನ್ನೇ ಸರಿಯಾಗಿ ಮಾತಾಡದ ಬಗ್ಗೆ, ಕನ್ನಡದ ಹೆಸರಿನಲ್ಲಿ ನಡೆಯುವುದೆನ್ನಲಾದ ರೋಲ್ಕಾಲುಗಳ ಬಗ್ಗೆ ಗೊಣಗಾಟವಿರುತ್ತಿತ್ತು (ಅನೇಕ ವೇಳೆ ಅದು ಸರಿಯೂ ಕೂಡ).  ಆದರೆ ಈಗೀಗಂತೂ ಕನ್ನಡದ ಹೋರಾಟವನ್ನೇ ಹೀಯಾಳಿಸುವುದು, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಿಂದೀ ಪ್ರೇಮದ ಹೊಳೆಯನ್ನೇ ಹರಿಸುವುದು, ಹಿಂದೀವಿರೋಧಕ್ಕೆ ಪ್ರತಿಯಾಗಿ ಇಂಗ್ಲಿಷ್ ಬೆರ್ಚಪ್ಪನನ್ನು ತೋರಿಸುವುದು, ತುಳುವರನ್ನ ಕೊಡವರನ್ನ ಕನ್ನಡದ ಮೇಲೆ ಎತ್ತಿಕಟ್ಟುವುದು - ಛೇ, ರಾಜಕೀಯಸಿದ್ಧಾಂತವೊಂದರ ಸಮರ್ಥನೆಗೋಸ್ಕರ ಇಷ್ಟೆಲ್ಲಾ ಸರ್ಕಸುಗಳು, ನಮ್ಮ ಕಾಲ ಮೇಲೇ ನಾವು ಕಲ್ಲೆತ್ತಿಹಾಕಿಕೊಳ್ಳುವ ವಿಚಾರಹೀನತೆ ಬೇಕಾ ಎನ್ನಿಸುತ್ತದೆ.  ಇದು ಕನ್ನಡದ ಮಟ್ಟಿಗಂತೂ ನಲ್ಮೆಯ ವಿಷಯವಲ್ಲ.

ಕನ್ನಡಕ್ಕೆ ಹೊರಗಿನ ಶತ್ರುಗಳಂತೂ ಇದ್ದೇ ಇದ್ದಾರೆ, ಒಳಗಿನಿಂದಲೂ ಘಾತಿಸುವ ಶಕ್ತಿಗಳು ಬುದಬುದನೆ ಹುಟ್ಟಿಕೊಳ್ಳುತ್ತಿರುವ ಈ ವಿಷಮಸಂದರ್ಭದಲ್ಲಿ ಕನ್ನಡಪರ ಹೋರಾಟ ಕೇವಲ ತೋಳ್ಬಲದ ಮಟ್ಟದಲ್ಲಿ ಉಳಿದಿಲ್ಲ, ಬದಲಿಗೆ ಅಲ್ಲಿಂದ ಮೇಲೇರಿ ಬೌದ್ಧಿಕಮಟ್ಟವನ್ನು ಮುಟ್ಟಿದೆಯೆಂಬುದನ್ನು ನಮ್ಮ ಕನ್ನಡಪರಸಂಘಟನೆಗಳು ಅರಿತುಕೊಳ್ಳುವುದು ಕನ್ನಡದ ದೃಷ್ಟಿಯಿಂದ ಕ್ಷೇಮ. ಈಗ ಎಷ್ಟು ಎಚ್ಚರವಿದ್ದರೂ ಸಾಲದು!  ಹೋರಾಟವೆಂದರೆ ಕೇವಲ ಕೈ ಮಾಡುವುದಲ್ಲ - ಹೋರಾಟದ ಪರಿಣಾಮ ಕಾಣಬೇಕು.  ಹಾಗಾಗಬೇಕೆಂದರೆ ಅಧಿಕಾರಸ್ಥರು ಮಣಿಯಬೇಕು.  ಅಧಿಕಾರಸ್ಥರು ಮಣಿಯುವುದು ತೋಳ್ಬಲಕ್ಕಲ್ಲ, ಜನಾಭಿಪ್ರಾಯಕ್ಕೆ.  ಆದರೆ, ನಗುವವರ ಮುಂದೆ ಎಡವಿಬಿದ್ದಂತೆ ಕಾಣುವ ಮೇಲಿನ ಘಟನೆಯಂತಹ ಅನ್ಯಾಯಗಳು ಕನ್ನಡಪರ ಜನಾಭಿಪ್ರಾಯವನ್ನು ಕ್ಷಣಾರ್ಧದಲ್ಲಿ ಮಣ್ಣುಗೂಡಿಸಬಲ್ಲುವು.  ಹೋರಾಡುವುದೇ ಆದರೆ ವಿಷಯಕ್ಕೇನು ಕೊರತೆ - ಕನ್ನಡಿಗರಿಗೆ ಉದ್ಯೋಗಾವಕಾಶವಿಲ್ಲ, ಭಾಷಾಗುಂಪುಗಾರಿಕೆ ನಡೆಯುತ್ತಿದೆ (ನಮ್ಮ ಘನ ಸಂಸದರು "ಕನ್ನಡಿಗರಿಗೆ ಪಂಜಾಬಿನಲ್ಲಿ ಕೆಲಸ ಸಿಗುತ್ತಲ್ಲ" ಎಂದು ಆಣಿಮುತ್ತನ್ನುದುರಿಸಿದ್ದರು ಮೊನ್ನೆ - ಪ್ರತಿಭಟಿಸಬೇಕಾದ್ದು ಇಂಥದ್ದನ್ನು), ಸದ್ದಿಲ್ಲದೇ ಹಿಂದಿಯನ್ನು ನಮ್ಮ ಪಠ್ಯಗಳಲ್ಲಿ ವಿಮಾನನಿಲ್ದಾಣಗಳಲ್ಲಿ, ಬ್ಯಾಂಕುಗಳಲ್ಲಿ, ಪೋಸ್ಟಾಫೀಸುಗಳಲ್ಲಿ ನುಗ್ಗಿಸಲಾಗುತ್ತಿದೆ,  ಹಿಂದೀವಾಲಾಗಳೇ ಹೆಚ್ಚಿರುವ ಕಂಪನಿಗಳಲ್ಲಿ, ಅಂಗಡಿಮುಂಗಟ್ಟುಗಳಲ್ಲಿ ಕನ್ನಡವನ್ನು ಕೇಳುವವರಿಲ್ಲವಾಗಿದೆ; 'ಪಾಶ್' ಎನ್ನಿಸಿಕೊಳ್ಳುವ ಮಾಲುಗಳಲ್ಲಿ ಕನ್ನಡದ ಮನೋರಂಜನೆಯಿಲ್ಲ, ಕನ್ನಡದ ಫಲಕಗಳಿಲ್ಲ, ಕೊನೆಗೆ ಅಲ್ಲಿ ಕನ್ನಡಿಗ ಅನಾಥಶಿಶುವಾದರೆ ಅದನ್ನು ಗಮನಿಸುವವರೂ ಇಲ್ಲ.  ಕನ್ನಡದ ಬೋರ್ಡು ಇರಲೇಬೇಕೆಂಬ ಕಾಟಾಚಾರಕ್ಕಾಗಿ ಗೂಗಲ್ ಟ್ರಾನ್ಸ್ಲೇಟರ್ ಸಹಾಯದಿಂದ ಅಸಹ್ಯ ಬೋರ್ಡುಗಳನ್ನು ಹಾಕುತ್ತಾರೆ (ಪಡವಲಕಾಯಿ = ಹಾವಿನ ಸುವಾಸನೆ, ಹೀಗೆ).  ಕನ್ನಡದ ಬಗೆಗೆ ಇಂತಹ ಬೇಕಾಬಿಟ್ಟಿ ಧೋರಣೆಯನ್ನು ವಿರೋಧಿಸಬೇಕಾದ್ದು.  ನಮ್ಮ ಹೋರಾಟವಿರಬೇಕಾದ್ದು ಸರ್ಕಾರದ, ಉತ್ತರದ ಸಂಸ್ಥೆಗಳ ಸಾರ್ವಜನಿಕ ಕನ್ನಡವಿರೋಧಿ ನೀತಿಯ ಬಗೆಗೆ - ಯಾವುದೋ ಧಾರ್ಮಿಕಸಮುದಾಯವೊಂದರ ಖಾಸಗೀ ಕಾರ್ಯಕ್ರಮದ ಬಗೆಗಲ್ಲ.

ಕನ್ನಡದ ಆಳ್ಮೆಗೆ, ಬಾಳ್ಮೆಗೆ ಇವತ್ತು ಬೇಕಾದ್ದು ಎರಡು - ಒಂದು, ಭಾಷೆಯ ಅರಿವನ್ನು, ಶುದ್ಧತೆಯನ್ನು, ಸೌಂದರ್ಯವನ್ನು ಕಾಪಿಟ್ಟುಕೊಳ್ಳುವುದು, ಅದರ ಘನತೆಯನ್ನರಿತು ಬಳಸುವುದು, ಕನ್ನಡಿಗರೆಲ್ಲರ ಹೊಣೆ ಇದು, ಜೊತೆಗೆ ಕನ್ನಡನುಡಿಯನ್ನರಿತ ವಿದ್ವಾಂಸರ ವಿಶೇಷ ಹೊಣೆ ಕೂಡ.  ಇದು ಕನ್ನಡಕ್ಕೆ ಒಳಗಿನಿಂದ ಕಸುವು ತುಂಬುವ ಕೆಲಸ.  ಆದರೆ ಕನ್ನಡ ಹೋರಾಟವೆಂದರೆ ಕನ್ನಡವನ್ನು ಸರಿಯಾಗಿ ಕಲಿತು ಮಾತಾಡುವುದಷ್ಟೇ ಅಲ್ಲ (ಹಾಗೆನ್ನುವವರು, ಹಿಂಬಾಲಕರಿಂದ ಹಾಗೆನ್ನಿಸುವವರು, ಕನ್ನಡತನದ ನೆಲೆಯರಿಯದ ರಾಜಕೀಯಸ್ಥರು ಮಾತ್ರ).  ಹೀಗಾಗಿ ಎರಡನೆಯ ಕೆಲಸ, ಕನ್ನಡವನ್ನು ಸುತ್ತಲಿಂದ ಕಾದು ರಕ್ಷಿಸಿಕೊಳ್ಳುವುದು, ಹೊರಗಣ ದಾಳಿಯಿಂದ, ಒಳಗಣ ದಾಳಿಯಿಂದ ಕಾಪಿಟ್ಟುಕೊಳ್ಳುವುದು.  ಇದು ಮೊದಲ ಕೆಲಸದಂತೆ ಬಾಯ್ಮಾತಿನ ಕೆಲಸವಲ್ಲ, ಕಾರ್ಯಕ್ಷಮತೆ ಬೇಡುವಂಥದ್ದು, ಗಂಟಲ ಬಲ, ಕೆಲವೊಮ್ಮೆ ತೋಳ್ಬಲವನ್ನೂ ಬೇಡುವಂಥದ್ದು.  ಮೊದಲನೆಯ ಕೆಲಸ ಮಾಡುವವರು ಎರಡನೆಯದನ್ನು ಮಾಡಲಾರರು, ಎರಡನೆಯವರು ಮೊದಲನೆಯದನ್ನು.  ಎರಡೂ ಶಕ್ತಿಗಳು ಪರಸ್ಪರರನ್ನು ಹೀಯಾಳಿಸುತ್ತಾ ಶತ್ರುವಿಗೆ ಅನುಕೂಲ ಮಾಡುವುದರ ಬದಲು, ಪರಸ್ಪರ ಕೈಹಿಡಿದು ನಡೆದಾಗ ಮಾತ್ರ ಕನ್ನಡದ ಉಳಿವು ಬೆಳವು ಸಾಧ್ಯ.  ಇನ್ನೊಂದು ಚರ್ಚೆಯಲ್ಲಿ ಮಿತ್ರರೊಬ್ಬರು ಕೇಳಿದರು "ಕನ್ನಡ ಹೋರಾಟದ ಪರಂಪರೆಯ ಬಗೆಗೆ ಹೇಳುತ್ತೀರಿ, ಈಗಿನ 'ವೋರಾಟ'ಗಾರರು ಆ ಪರಂಪರೆಗೆ ಸೇರಿದವರು ಅನ್ಸುತ್ತಾ?  ಅಂತಹ ಅನಾಗರಿಕರನ್ನು ನೀವು ಸಪೋರ್ಟ್ ಮಾಡುತ್ತೀರಾ/ಮಾಡಬೇಕಾ?".  ನನ್ನ ಉತ್ತರ ಇಷ್ಟು - "ಕನ್ನಡದ ಹೋರಾಟದಲ್ಲಿ 'ನಾಗರೀಕತೆ' ಕಡಿಮೆಯಾಗುತ್ತದೆನ್ನಿಸಿದ್ದರೆ ಅದಕ್ಕೆ ಕಾರಣ ನಿಮ್ಮಂತಹ 'ಸುಸಂಸ್ಕೃತ'ರ ಅನುಪಸ್ಥಿತಿ.  ಅನುಪಸ್ಥಿತಿಯೇ ದೊಡ್ಡ ಧಕ್ಕೆಯೆಂದರೆ, ಇನ್ನು ಮುಂದುವರೆದು ಕನ್ನಡದ ವಿರುದ್ಧವಾಗಿಯೇ ಕೆಲಸ ಮಾಡುವುದು ಇನ್ನಷ್ಟು ದೊಡ್ಡ ಧಕ್ಕೆ.  ಯಾರಿಗೆ ಗೊತ್ತು, ನೀವು ಹೋರಾಟದಲ್ಲಿದ್ದು ಅದಕ್ಕೆ ದಿಶಾನಿರ್ದೇಶನವನ್ನು ನೀಡಿದ್ದರೆ, ಮೇಲೆ ವಿವರಿಸಿದ ಘಟನೆ ನಡೆಯುತ್ತಲೇ ಇರಲಿಲ್ಲವೇನೋ?  ಸುಸಂಸ್ಕೃತರು ಹೊರನೆಡೆದ ಮೇಲೆ ಹೋರಾಟದಲ್ಲಿ 'ಸಂಸ್ಕೃತಿ' ಉಳಿಯುವುದಾದರೂ ಹೇಗೆ?  ಇವತ್ತಿದ್ದು ನಾಳೆ ಹೋಗುವ ಒಂದು ನಾಯಕತ್ವವನ್ನು ಸಮರ್ಥಿಸಿಕೊಳ್ಳುವ ಹುಚ್ಚಿನಲ್ಲಿ, ಇಲ್ಲದ ಹಿಂದೀ ಪ್ರೇಮವನ್ನು ಸೂಸುತ್ತಾ ಇಲ್ಲದ ವಿತಂಡವಾದಗಳನ್ನು ಹೂಡುತ್ತಾ ಕನ್ನಡವನ್ನು ಬೀಳುಗಳೆವ ಬದಲು, ಮರಳಿ ಬನ್ನಿ, ಕನ್ನಡ ಹೋರಾಟವನ್ನು ಕೈಹಿಡಿದು ನಡೆಸಿ, ಅದಕ್ಕೆ 'ಸಂಸ್ಕೃತಿ'ಯ ಕಸುವು ತುಂಬಿ.