Thursday, December 27, 2018

ಅರ್ಧನಾರೀಶ್ವರನ ದಾಂಪತ್ಯ

ಬಾದಾಮಿಯ ಮಹಾಕೂಟದಲ್ಲಿರುವ ಅರ್ಧನಾರೀಶ್ವರನ ಶಿಲ್ಪ
ಈ ದಾಂಪತ್ಯಕ್ಕೂ ವಿವಾದಕ್ಕೂ ಮುಗಿಯದ ನಂಟೆಂದು ತೋರುತ್ತದೆ - ನಮ್ಮ ಪಂಡಿತರು ದೇವದಂಪತಿಗಳನ್ನೂ ಬಿಡಲಿಲ್ಲ ನೋಡಿ :) ಅದೇಕೆಂಬುದನ್ನು ಆಮೇಲೆ ಹೇಳುತ್ತೇನೆ.  ಸಧ್ಯಕ್ಕೆ ಹದಿನಾಲ್ಕನೆಯ ಶತಮಾನದ ಜಗದ್ಧರನ ಈ ಪದ್ಯವನ್ನು ನೋಡಿ:

किमयं शिवः किमु शिवाऽथ शिवा-
विति यत्र वन्दनविधौ भवति ।
अविभाव्यमेव वचनं विदुषा-
मविभाव्यमेव वचनं विदुषाम् ॥

(ಅವಧಾನಿ ಶ್ರೀ ಶಂಕರ್ ರಾಜಾರಾಮರ ಟ್ವೀಟೊಂದರಲ್ಲಿ ಕಣ್ಣಿಗೆ ಬಿದ್ದುದು)

ಕಿಮಯಂ ಶಿವಃ ಕಿಮು ಶಿವಾಽಥ ಶಿವಾ-
ವಿತಿ ಯತ್ರ ವಂದನವಿಧೌ ಭವತಿ |
ಅವಿಭಾವ್ಯಮೇವ ವಚನಂ ವಿದುಷಾ-
ಮವಿಭಾವ್ಯಮೇವ ವಚನಂ ವಿದುಷಾಮ್ ||

ಅದನ್ನು ನಾನು ಹೀಗೆ ಅನುವಾದಿಸಿದೆ.
ಶಿವನೆಂಬರ್ ಶಿವೆಯೆಂಬರ್
ಶಿವಶಿವೆಯೊರ್ಮೆಯ್ಯಭಾವಕಿಂತೆರಗುತಿರ-
ಲ್ಕಿವರ ವಿಚಾರಂ ಪಂಡಿತ
ರಿವರ ವಿಚಾರಮವಿಭಾವ್ಯಮರ್ಥವಿಹೀನಂ

ಶಿವಶಿವೆಯರ ದೈವೀ ಐಕ್ಯದ ಅನುಭೂತಿ ಮಾತಿಗೆ ನಿಲುಕದ್ದು, ಭಾವೈಕಗಮ್ಯವಾದದ್ದು.  ಅದನ್ನು ಹೋಗಿ ಇದು ಶಿವನೋ, ಶಿವೆಯೋ, ಶಿವಶಿವೆಯರೆಂಬ ದ್ವಿವಚನವೋ ಎಂಬ ಶುಷ್ಕಚರ್ಚೆಯಲ್ಲಿ ತೊಡಗುವ ಈ ವಿದ್ವಾಂಸರ ಮಾತು ಅವಿಭಾವ್ಯ - ಅರ್ಥವಾಗದ್ದು, ವ್ಯರ್ಥ ಎಂಬುದು ಇಲ್ಲಿನ ಭಾವಾರ್ಥ.  ಆದರೆ "ಅವಿಭಾವ್ಯಮೇವ ವಚನಂ ವಿದುಷಾಂ" ಎಂಬ ದ್ವಿರುಕ್ತಿಯ ಮೂಲಕ ಕವಿ ಎರಡರ್ಥವನ್ನು ಸೂಚಿಸಲು ಹೊರಟಿದ್ದಾನೆ.  ಮೊದಲನೆಯದು, ಐಕ್ಯದ ಅನುಭೂತಿ ಮಾತಿಗೆ ನಿಲುಕದ್ದೆಂಬುದನ್ನು ಈ ಪಂಡಿತರು ಅರಿಯರು, ವ್ಯರ್ಥಚರ್ಚೆಯಲ್ಲಿ ತೊಡಗಿದ್ದಾರೆ, ಆದ್ದರಿಂದ ಅವರ ಮಾತು ಅವಿಭಾವ್ಯ, ಅರ್ಥವಿಲ್ಲದ್ದು ಎಂಬುದು.  ಇನ್ನೊಂದು, ಶಿವಶಿವೆಯರ ಆ ಐಕ್ಯದ ಭಾವವೇ ಒಂದು ದಿವ್ಯಾನುಭೂತಿ.  ಅಂಥಲ್ಲಿ ಈ ಒಣಚರ್ಚೆ ಕೇವಲ ಅರ್ಥಹೀನವಷ್ಟೇ ಅಲ್ಲ, ಭಾವಾಭಾಸವನ್ನುಂಟುಮಾಡುವಂಥದ್ದು, ಆ ದಿವ್ಯಭಾವವನ್ನು ಹಾಳುಗೆಡವುವಂಥದ್ದು, ಆದ್ದರಿಂದ ಅವರ ಮಾತು ಅವಿಭಾವ್ಯ, ಭಾವಕ್ಕೆ ಒಗ್ಗದ್ದು.

ಇಷ್ಟೆಂದರೂ ಕೂದಲು ಸೀಳುವ ಬುದ್ಧಿಯನ್ನಂತೂ ಪಂಡಿತರು ಬಿಡುವುದೇ ಇಲ್ಲ ನೋಡಿ - ಈ ದಾಂಪತ್ಯಕ್ಕೂ ವಿವಾದಕ್ಕೂ ಮುಗಿಯದ ನಂಟಿರಬೇಕೆಂದು ಮೊದಲಲ್ಲೇ ಹೇಳಿದ್ದು ಇದಕ್ಕೇ.  ಅರ್ಧನಾರೀಶ್ವರನಾಗಿ ಒಂದಾದ ಶಿವಪಾರ್ವತಿಯರನ್ನು ಸ್ತುತಿಸಹೊರಟ ಹದಿನೇಳನೆಯ ಶತಮಾನದ, ನೀಲಕಂಠದೀಕ್ಷಿತನೆಂಬ ತಮಿಳುನಾಡಿನ ಕವಿ ಹೀಗೆ ಹೇಳುತ್ತಾನೆ (ಇದೂ ಶ್ರೀ ಶಂಕರ ರಾಜಾರಾಮರ ಅದೇ ಟ್ವೀಟಿನಲ್ಲಿ ಕಣ್ಣಿಗೆ ಬಿದ್ದದ್ದು):

वन्दे वाञ्छितलाभाय कर्म किं तन्न कथ्यते ।
किं दम्पतिमिति ब्रूयामुताहो दम्पती इति ॥

ವಂದೇ ವಾಂಛಿತಲಾಭಾಯ ಕರ್ಮ ಕಿಂ ತನ್ನ ಕಥ್ಯತೇ
ಕಿಂ ದಂಪತಿಮಿತಿಬ್ರೂಯಾಮುತಾಹೋ ದಂಪತೀ ಇತಿ

ಅದನ್ನ ಮಿತ್ರ ಶ್ರೀ Ramaprasad ಹೀಗೆ ಅನುವಾದಿಸಿದ್ದಾರೆ:
ಮನದಲಿಹ ಬಯಕೆಗಳ ತೀರಿಸಲು ಕೋರಲಿಕೆ
ಹೊರಟಿರಲು ಮಾತೊಂದು ತೋಚದಾಯ್ತೇ!
ತನುವೊಂದೆ ಆಗಿಹರ ದಂಪತಿಗಳೆನ್ನುವುದೆ?
ಬರಿದೆ ದಂಪತಿಯೆನಲು ಸರಿಯಪ್ಪುದೇ?

"ವಂದೇ ವಾಂಛಿತಲಾಭಾಯ" ಎಂದು ಸ್ತುತಿಸಲು ಶುರುಮಾಡಿದವನಿಗೆ, ಅಲ್ಲಿ ಯಾವ ಕರ್ಮಪದ ಹಾಕಬೇಕು ಎಂಬ ಗೊಂದಲಕ್ಕಿಟ್ಟುಕೊಂಡಿತಂತೆ - ದಂಪತಿ ಎನ್ನಲೋ ದಂಪತಿಗಳೆನ್ನಲೋ?...  ಏಕಪ್ಪಾ ಬೇಕು?  ಹೋಗಿರುವುದೇ ನಮಿಸುವುದಕ್ಕೆ, ವರಬೇಡುವುದಕ್ಕೆ.  ಅದನ್ನು ಮಾಡಿದರಾಯಿತು - ಅವರನ್ನು ದಂಪತಿಯೆನ್ನಬೇಕೋ ದಂಪತಿಗಳೆನ್ನಬೇಕೋ ಎಂಬ ಅಧಿಕಜಿಜ್ಞಾಸೆಯೇಕೆ?(ನಮ್ಮನಿಮ್ಮಂಥವರ ವಿಷಯದಲ್ಲಿ ಅದನ್ನು ಅಧಿಕಪ್ರಸಂಗವೆನ್ನುತ್ತಾರೆ ಪ್ರಾಜ್ಞರು).  ಪಂಡಿತರಿಗೆ ಮುಕ್ತಿಯಲ್ಲೂ ಸ್ವರ್ಗದಲ್ಲೂ ಸ್ಥಳವಿಲ್ಲವೆನ್ನುವುದು ಅದಕ್ಕೇ ಇರಬೇಕು :)


ಅದೇನೇ ಇರಲಿ, ದಂಪತಿ ಏಕವಚನವೆನ್ನುವುದಕ್ಕೆ ಒಂದು ಸಾಕ್ಷಿ ಸಿಕ್ಕಿತು, ಜೈ ಎಂದು ಹೊರಟುಬಿಡಬೇಡಿ, ತಡೆಯಿರಿ. ಪಾರ್ವತೀಪರಮೇಶ್ವರರದ್ದು ಕೇವಲ ಭಾವದಲ್ಲಷ್ಟೇ ಅಲ್ಲ, ಶರೀರದಲ್ಲೂ ಒಂದಾಗಿರುವ ಜೋಡಿ - ಒಂದೆಂದರೆ ಒಂದೇ - ಎರಡಿಲ್ಲದ ಒಂದು. ಆದ್ದರಿಂದ ಅದು ಏಕವಚನವಾದರೆ ನಷ್ಟವಿಲ್ಲ. ಕೆಮ್ಮಿದ್ದಕ್ಕೆ ಸೀನಿದ್ದಕ್ಕೆಲ್ಲಾ ವಿಚ್ಛೇದನವೆನ್ನುವ ಮರ್ತ್ಯದಂಪತಿ’ಗಳು’ ಆ ಏಕವಚನದ ಐಕ್ಯವನ್ನು ಸಾಧಿಸಲು ಆಗುವುದೇ? ಎಲ್ಲೋ ಭ್ರಾಂತು, ಭ್ರಾಂತು - ಇದು ವ್ಯಾಕರಣದ ವಿಷಯವೂ ಅಲ್ಲ, ವಾಸ್ತವವಂತೂ ಮೊದಲೇ ಅಲ್ಲ :)


ಕೊನೇ ಕುಟುಕು (ಕೊ.ಕು): ಅಂದಹಾಗೆ ಈ ಜಗದ್ಧರನಾಗಲೀ ನೀಲಕಂಠದೀಕ್ಷಿತನಾಗಲೀ ನಮ್ಮ ಪಂಪನಷ್ಟು ಹಳಬರೇನಲ್ಲ ಬಿಡಿ