Friday, September 23, 2022

ಬೆಳದಿಂಗಳ ಕಸುಬು

ಚಂದ್ರನನ್ನು ಹಾಡಿ ಹೊಗಳದವರಾರು.  ತಂಬೆಳಕು ನೀಡುವವನು, ಮನಸ್ಸಿಗೆ ಆಹ್ಲಾದ ನೀಡುವವನು, ನಿಶಾಪತಿ, ತಾರಾಪತಿ, ನೈದಿಲೆಗಳಿಗೆ ಚಕೋರಪಕ್ಷಿಗೆ ಪರಮಾಪ್ತಮಿತ್ರ, ಎಷ್ಟೆಲ್ಲ ಉಪಾಧಿಗಳು ಚಂದ್ರನಿಗೆ! "ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ" ಎನ್ನುತ್ತಾರೆ ಬಸವಣ್ಣನವರು.  ಇನ್ನು ಪ್ರೇಮಿಗಳಿಗಂತೂ ಮನ್ಮಥನನ್ನು ಬಿಟ್ಟರೆ ಈತನೇ ಆರಾಧ್ಯದೈವ.  ಬೆಳದಿಂಗಳಿನಲ್ಲಿ ಕಡಲತಡಿಯಲ್ಲಿ ಕೈಕೈ ಹಿಡಿದುಕೊಂಡು ನಡೆಯುವ ಪ್ರೇಮಿಗಳಿಗೆ ಬೇರೆ ಪ್ರಪಂಚವೇ ಬೇಡವಂತೆ - ಅಂತೆ, ನಮಗೆ ತಿಳಿಯದು.  "ತೆಂಗುಗರಿಗಳ ನಡುವೆ ತುಂಬು ಚಂದಿರ ಬಂದು ಬೆಳ್ಳಿ ಹಸುಗಳ ಹಾಲ ಕರೆಯುವಂದು ಅಂಗಳದ ನಡುವೆ ಬೃಂದಾವನದ ಬಳಿ ನಿಂದು ಹಾಡುವೆವು ಸಿರಿಯ ಕಂಡು" ಎಂದು ಕವಿ ಕನಸುತ್ತಾನೆ.  

ಇಂಥಾ ಚಂದಿರನನ್ನು ದ್ವೇಷಿಸುವವರೂ ಇರುತ್ತಾರೆಯೇ?  ಯಾಕಿಲ್ಲ?  ಆರಾಧ್ಯದೈವವೆಂದು ಕೊಂಡಾಡುವ ಅದೇ ಪ್ರೇಮಿಗಳನ್ನು ಒಮ್ಮೆ ಅಗಲಿಸಿ, ಅವರ ಮೇಲೆ ಬೆಳದಿಂಗಳನ್ನು ಹರಿಸಿ ನೋಡಿ, ಆಗ ತಿಳಿಯುತ್ತದೆ ಅವರ ಚಂದ್ರಭಕ್ತಿಯ ಅಸಲಿಯತ್ತು - ಪ್ರೇಮಿಯನ್ನಗಲಿದ ಜೀವಕ್ಕೆ ಬೆಳದಿಂಗಳೇ ಬಿಸಿಲಾಗಿ ಕಾಡುತ್ತದಂತೆ, ಮಲಯಾನಿಲ ಬಿಸಿಗಾಳಿಯಾಗಿಬಿಡುತ್ತದಂತೆ, ಚಂದನ ಮೈಸುಡುತ್ತದಂತೆ.  ಶೃಂಗಾರಕಾವ್ಯಗಳ ಅರ್ಧಕ್ಕರ್ಧ ಈ ವಿರಹಿಗಳ ವಿರಹಾಲಾಪದಿಂದಲೇ ತುಂಬಿ ಹೋಗಿದೆ - ಮನ್ಮಥ, ವಸಂತ, ಚಂದ್ರ, ಚಂದನ ಮತ್ತು ಮಲಯಾನಿಲ ಇವಿಷ್ಟನ್ನು ಎಷ್ಟು ಗೋಳುಗರೆದರೂ ಸಾಲದು.  ಪಾಪ ಇಲ್ಲೊಬ್ಬ ಪ್ರೇಮಿ ಚಂದ್ರನಲ್ಲಿ ಹೇಗೆ ಮೊರೆಯಿಡುತ್ತಾನೆ ನೋಡಿ, ರಾಜಶೇಖರನ ವಿದ್ಧಶಾಲಭಂಜಿಕಾ ನಾಟಕದಲ್ಲಿ:

ಸೂತಿರ್ದುಗ್ಧಸಮುದ್ರತೋ ಭಗವತಃ ಶ್ರೀಕೌಸ್ತುಭೌ ಸೋದರೌ

ಸೌಹಾರ್ದಂ ಕುಮುದಾಕರೇಷು ಕಿರಣಾಃ ಪೀಯೂಷಧಾರಾಕಿರಃ

ಸ್ಪರ್ಧಾ ತೇ ವದನಾಂಬುಜೈರ್ಮೃಗದೃಶಾಂ ತತ್ ಸ್ಥಾಣುಚೂಡಾಮಣೇ

ಹಂಹೋ ಚಂದ್ರ ಕಥಂ ನು ಮುಂಚಸಿ ಮಯಿ ಜ್ವಾಲಾಮುಚೋ ವೇದನಾಃ

(ಹೇ ಚಂದ್ರಭಗವನ್, ನೀನು ಹುಟ್ಟಿದ್ದು ನೋಡಿದರೆ ಹಾಲಿನ ಸಮುದ್ರದಲ್ಲಿ, ಲಕ್ಷ್ಮಿಯೂ ಕೌಸ್ತುಭರತ್ನವೂ ನಿನ್ನ ಸೋದರರು, ನಿನ್ನ ಸ್ನೇಹವೋ ಕುಮುದಪುಷ್ಪಗಳಿಂದ ತುಂಬಿದ ಕೊಳಗಳೊಡನೆ, ಕಿರಣವೋ ಅಮೃತಧಾರೆ, ಇನ್ನು ನಿನ್ನ ಸ್ಪರ್ಧೆಯೋ, ಆ ಮೃಗನಯನಿಯರ ಮುಖಕಮಲಗಳೊಂದಿಗೇ, ವಾಸವನ್ನು ನೋಡಿದರೆ, ಸಾಕ್ಷಾತ್ ಶಿವನ ತಲೆಯಮೇಲೆ ಚೂಡಾಮಣಿಯಾಗಿ ನೆಲೆಸಿದ್ದೀಯೆ - ಹೀಗಿದ್ದೂ ನನ್ನ ಮೇಲೆ ಮಾತ್ರ ಏಕಪ್ಪಾ ಈ ವೇದನಾಮಯವಾದ ಜ್ವಾಲೆಯನ್ನು ಹರಿಸುತ್ತಿದ್ದೀಯೆ?)

ಚಂದ್ರನನ್ನು ದ್ವೇಷಿಸುವ ಇನ್ನೊಂದು ಜೀವವಿದೆ - ಆತ ವಿರಹಿಯೂ ಅಲ್ಲ, ಪ್ರೇಮಿಯೂ ಅಲ್ಲ, ಭಾವುಕನೂ ಅಲ್ಲ, ಕೇವಲ ಡೌನ್ ಟು ಅರ್ಥ್ ಕಸಬುದಾರ - 

ಕಳ್ಳ.  

ಈಗಿನ ಕಳ್ಳರು ಹೇಗೋ ಗೊತ್ತಿಲ್ಲ, ಹಿಂದಿನ ಕಳ್ಳರಂತೂ ಪಾರಂಪರಿಕವಾಗಿ ಚಂದ್ರನನ್ನು ದ್ವೇಷಿಸಿಕೊಂಡೇ ಬಂದಿದ್ದಾರೆ.  "ಚೋರ ನಿಂದಿಸಿ ಶಶಿಯ ಬೈದೊಡೆ... ಏನಹುದು" ಎಂದು ಹೀಯಾಳಿಸುತ್ತಾನೆ ಕವಿ ಕುಮಾರವ್ಯಾಸ.  ಆಚಾರ್ಯ ಚಾಣಕ್ಯನಂತೂ "ಚೋರಾಣಾಂ ಚಂದ್ರಮಾ ರಿಪುಃ" ಎಂದೇ ಘೋಷಿಸಿಬಿಟ್ಟಿದ್ದಾನೆ.  ಕಳ್ಳನೊಬ್ಬನದೇ ಏಕೆ, ಆ ಪೂರ್ತಿ ಪದ್ಯವೇ ಅವಗಾಹ್ಯವಾಗಿದೆ, ಒಮ್ಮೆ ನೋಡಿಬಿಡೋಣ:

ಲುಬ್ಧಾನಾಂ ಯಾಚಕಃ ಶತ್ರುಃ ಮೂರ್ಖಾಣಾಂ ಬೋಧಕೋ ರಿಪುಃ |

ಜಾರಸ್ತ್ರೀಣಾಂ ಪತಿಃ ಶತ್ರುಃ ಚೋರಾಣಾಂ ಚಂದ್ರಮಾ ರಿಪುಃ

(ಚಾಣಕ್ಯನೀತಿ 10-6)

(ಲೋಭಿಗೆ ಬೇಡುವವನೇ ಶತ್ರುವಾದರೆ ಮೂರ್ಖನಿಗೆ ಬೋಧಿಸುವವನು; ಹಾದರಗಿತ್ತಿಗೆ ಪತಿಯೇ ಶತ್ರುವಾದರೆ, ಕಳ್ಳರಿಗೆ ಚಂದ್ರನೇ ಶತ್ರು)

ಎಂಜಲ ಕೈಯಲ್ಲಿ ಕಾಗೆ ಹೊಡೆಯದ ಲೋಭಿಯ ಬಳಿ ಹೋಗಿ ಸ್ವಲ್ಪ "ಕೀತ ಬೆಟ್ಟಿಗೆ ಉಚ್ಚೆ ಹೊಯ್ಯಿ" ಎಂದು ಬೇಡಿದರೆ ಆತ "ಜಲ ಮಲ ಕಟ್ಟಿ ಮೂರು ದಿನ ಆಯ್ತು" ಎಂದು ಹೇಳಿ ಎದ್ದು ಹೋದನಂತೆ.  ಹೀಗಿರುವಾಗ ಯಾಚಿಸಿದರೆ?  ನೀವೇ ಯೋಚಿಸಿ!  ಇನ್ನು ಮೂರ್ಖರಿಗೆ ಬೋಧಕರು ಅದೆಂತಹ ಪರಮಶತ್ರುಗಳು ಎಂಬುದನ್ನಂತೂ ಹೇಳುವುದೇ ಬೇಡ.  ಅಂತಹ ಸರ್ವಜ್ಞನೇ "ಮೂರ್ಖರಿಗೆ ನೂರ್ಕಾಲ ಬುದ್ಧಿ ಪೇಳಿದರೇನು ಗೋರ್ಕಲ್ಲ ಮೇಲೆ ಮಳೆ ಸುರಿಯಲಾ ಕಲ್ಲು ನೀರ್ಗುಡಿಯಲಪ್ಪುದೇ" ಎಂದು ಕೈ ಚೆಲ್ಲಿ, ಅಲ್ಲಲ್ಲ, ನೀರು ಚೆಲ್ಲಿ ಕೈಬಿಟ್ಟಿದ್ದಾನೆ.  ಸರ್ವಜ್ಞನಾದರೋ ನೂರ್ಕಾಲ ಮಳೆಸುರಿದು ನೋಡಿದ.  ಆದರೆ ಇದನ್ನು ಶತಮಾನಗಳ ಮೊದಲೇ ಕಂಡಿದ್ದ ಚಾಣಕ್ಯ, ಈ ಪ್ರಯತ್ನವೇ ವಿಫಲ ಎನ್ನುತ್ತಾನೆ.  "ಎಷ್ಟು ನೂರು ಬಾರಿ ತೊಳೆದರೂ ಗುದವು ಗುದವೇ ಹೊರತು ವದನವಾದೀತೇ" ಎಂಬುದು ಆತನ ನೇರ ಅಭಿಪ್ರಾಯ (ದುರ್ಜನಂ ಸಜ್ಜನಂ ಕರ್ತುಂ ಉಪಾಯಂ ನ ಹಿ ಭೂತಲೇ; ಅಪಾನಂ ಶತಧಾ ಧೌತಂ ನ ಶ್ರೇಷ್ಠಮಿಂದ್ರಿಯಂ ಭವೇತ್ (ಚಾಣಕ್ಯನೀತಿ - 10-10) - ದುರ್ಜನರನ್ನು ಸಜ್ಜನರನ್ನಾಗಿ ಮಾಡುವ ಉಪಾಯ ಈ ಭೂಮಿಯಲ್ಲಿ ಇಲ್ಲವೇ ಇಲ್ಲ; ಗುದವನ್ನು ನೂರು ಬಾರಿ ತೊಳೆದರೂ ಅದು ವದನವಾಗುವುದಿಲ್ಲ)

ಅದಿರಲಿ, ಮೂಲಶ್ಲೋಕಕ್ಕೆ ಮರಳೋಣ. ಲೋಭಿಗಳು ಮತ್ತು ಮೂರ್ಖರ ಬಗೆಗೆ ಹೇಳಿದ್ದೇನೋ ಸರಿ, ಆದರೆ "ಜಾರಸ್ತ್ರೀಣಾಂ ಪತಿಃ ಶತ್ರುಃ" ಎಂಬಲ್ಲಿ ಮಾತ್ರ ಚಾಣಕ್ಯನು ಪಕ್ಕಾ ಮೇಲ್ ಶೌವೆನಿಸ್ಟಿಕ್ ಆಗಿಬಿಟ್ಟಿದ್ದಾನೆ - ಜಾರತನವನ್ನು ಕೇವಲ ಸ್ತ್ರೀಯರು ಮಾಡುತ್ತಾರೆಯೇ?  ಅಥವಾ ಜಾರತನ ಮಾಡುವ ಪುರುಷರಿಗೇನು ಅವರ ಸತಿ ಶತ್ರುವೇ ಅಲ್ಲವೇ?  ಇದನ್ನೂ ಚಾಣಕ್ಯ ಹೇಳಬೇಕಾಗಿತ್ತು.  ಈ ಕಾರಣಕ್ಕಾಗಿ ಯಾರಾದರೂ ಚಾಣಕ್ಯನ ಮೇಲೆ ಹಕ್ಕುಚ್ಯುತಿ ಮಂಡಿಸುವುದಿದ್ದರೆ ಅದನ್ನು ನಾನಂತೂ ಬೆಂಬಲಿಸುತ್ತೇನೆ.  

ನೋಡಿ, ನಾವು ಶುರುಮಾಡಿದ್ದು ಕಳ್ಳನ ವಿಷಯ.  ಕಳ್ಳತನದ ಸುಳಿವು ಕಂಡದ್ದೇ ತಡ, ಮಾತು ಯಾವಯಾವುದೋ ಕಳ್ಳವ್ಯವಹಾರಗಳ ಹಾದಿಯನ್ನೇ ಹಿಡಿಯಿತು.  ಮತ್ತೆ ಸರಿದಾರಿಗೆ - ಅಂದರೆ ಕಳ್ಳನ ದಾರಿಗೆ ಬರೋಣ - "ಚೋರಾಣಾಂ ಚಂದ್ರಮಾ ರಿಪುಃ" - ಸದ್ಯಕ್ಕೆ ನಮ್ಮ ಅವಗಾಹನೆಗೆ ಬೇಕಾದ್ದು ಈ ಚಂದ್ರವೈರಿಯಾದ ಕಳ್ಳೋತ್ತಮನೇ.  

ಇಷ್ಟಕ್ಕೂ ಕಳ್ಳನಿಗೆ ಚಂದ್ರನ ಮೇಲೆ ಅಷ್ಟು ದ್ವೇಷವೇಕೆ, ಅದಕ್ಕೇನಾದರೂ ಪುರಾಣದ ಕತೆಯಿದೆಯೇ ಎಂದು ಕೇಳಬೇಡಿ - ಅದರ ಹಿಂದೆ ಇರುವುದು ಪುರಾಣವಲ್ಲ, ಕಾಮನ್ ಸೆನ್ಸು.  ಅಲ್ಲ, ಎಲ್ಲೆಲ್ಲೂ ಹಾಲು ಚೆಲ್ಲಿದಂತೆ ಬೆಳದಿಂಗಳು ಚೆಲ್ಲಿದ್ದರೆ ಆ ಬೆಳದಿಂಗಳ ರಾತ್ರಿಯಲ್ಲಿ ಕಳ್ಳನೇನು ಮೋಹಿನಿಯ ಜೊತೆ ಕೂತು ರೊಮ್ಯಾನ್ಸ್ ಮಾಡುತ್ತಾ ಕಾಲ ಹಾಕಬೇಕೇ?  ಅವ ಬಂದಿರುವುದು ಕಳ್ಳತನ ಮಾಡಲು - ಕಳ್ಳತನ ಯಾರ ಕಣ್ಣಿಗೂ ಬೀಳದಂತೆ ಮಾಡಬೇಕಾದ ಕೆಲಸ, ನಮ್ಮ ವಡಿವೇಲುವಿನಂತೆ ಢಾಣಾಢಂಗುರ ಹೊಯಿಸಿ, ಪೋಸ್ಟರ್ ಹಚ್ಚಿ ಮಾಡಬೇಕಾದ ಸಮಾರಂಭವಲ್ಲ.  ಅದು ಹೇಳಿಕೇಳಿ ಕಪ್ಪು ಕೆಲಸ - ಅದಕ್ಕೆ ಬೆಳದಿಂಗಳ ರಾತ್ರಿ ಆಗಿಬರದು. ಮಾಟಮಂತ್ರವೇ ಮೊದಲಾದ ಅಭಿಚಾರವಿದ್ಯೆಗಳಂತೆ ಇದೂ ಕಪ್ಪು ರಾತ್ರಿಯಲ್ಲೇ ಮಾಡಬೇಕಾದ ಕೆಲಸ - ಸೂರ್ಯಗ್ರಹಣವೂ ಕಪ್ಪುಕಾಲವೇ ಆದರೂ ಅದು ಮಾಟಮಂತ್ರಗಳಿಗೆ ಆದೀತೇ ಹೊರತು ಕಳ್ಳತನಕ್ಕೆ ಆಗಿಬರುವುದಿಲ್ಲ, ಏಕೆಂದರೆ ಸೂರ್ಯಗ್ರಹಣಗಳು ಆಗುವುದು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲೇ ನೋಡಿ!  ಗ್ರಹಣಕ್ಕೆ ಹೆದರಿ ಜನ ಮನೆಯಲ್ಲೇ ಗುಬ್ಬೆಂದು ಕೂತಿರುವಾಗ ಅಲ್ಲಿಗೆ ಕಳ್ಳ ಹೊಕ್ಕು ಜಯಿಸಲಾಗುವುದೇ?

ಈಗೆಲ್ಲ ಬಿಡಿ, ಕಳ್ಳನ ಕೆಲಸಕ್ಕೆ ಕಲ್ಲು ಹಾಕಲು ಹುಣ್ಣಿಮೆಯ ಚಂದ್ರನೇ ಬೇಕಿಲ್ಲ - ಬೀದಿ ದೀಪಗಳಿವೆ (ಅವು ನೂರಕ್ಕೆಪ್ಪತ್ತರಷ್ಟು ಕೆಟ್ಟು ಕೂತಿರುತ್ತವೆ ಎಂಬ ವಿಷಯವನ್ನು ಸದ್ಯಕ್ಕೆ ಪಕ್ಕಕ್ಕಿಡೋಣ), ಅವಿಲ್ಲದಿದ್ದರೇನಾಯಿತು, ದಂಡಿಯಾಗಿ ಬೀದಿ ನಾಯಿಗಳಿವೆ - ನಮ್ಮ ರಕ್ಷಣೆಗಾಗಿಯೇ ಕಾರ್ಪೊರೇಷನ್ನು ಅವುಗಳನ್ನು ಬೀದಿಬೀದಿಗಳಲ್ಲಿ ಬೆಳೆಸಿದೆ, ಸ್ವಲ್ಪ ಶ್ರೀಮಂತರ ಮನೆಗಳಲ್ಲಾದರೆ ಮನೆಯಲ್ಲಿ ಸಾಕಿದ ನಾಯಿಗಳೂ ಇರುತ್ತವೆ, ಮನೆಯ ದೀಪಗಳಂತೂ ಇದ್ದೇ ಇವೆ, ಸ್ವಲ್ಪ ಮುಂದುವರೆದ ಮನೆಗಳಲ್ಲಿ ಬರ್ಗಲರ್ ಅಲಾರ್ಮು, ಸಿಸಿಟಿವಿ ಹೀಗೆ ಇನ್ನೂ ಏನೇನೋ ಇರುತ್ತವೆ.  ಆದ್ದರಿಂದ ಈಚಿನ ಕಳ್ಳರಿಗೆ ಚಂದ್ರನೇನು ಬಲುದೊಡ್ಡ ತೊಡಕಲ್ಲ.  ಅಲ್ಲದೇ ಈಗಂತೂ ಹಾಡುಹಗಲಲ್ಲೇ ದರೋಡೆ ಮಾಡಿ ಹೋಗುವಷ್ಟು ಟೆಕ್ನಾಲಜಿ ಮುಂದುವರೆದಿರುವುದರಿಂದ ಈಗೇನಿದ್ದರೂ ಚಂದ್ರ ಒಂದು ಸಂಕೇತವಷ್ಟೇ - ಕಸುಬಿಗೆ ತೊಡಕಾಗಿರುವ ಎಲ್ಲದರ ಸಂಕೇತ - ಎಲ್ಲಿ ಯಾವುದೇ ಕೆಟ್ಟದಿದ್ದರೂ ಅದನ್ನು ಬ್ರಾಹ್ಮಣ್ಯವೆಂದು ಕರೆಯುವುದಿಲ್ಲವೇ, ಹಾಗೆ ಎಂದಿಟ್ಟುಕೊಳ್ಳಬಹುದು.

ಅದೇನೇ ಇರಲಿ, ವಾಸ್ತವದಲ್ಲಿ ಕಳ್ಳರು ಚಂದ್ರಪ್ರೇಮಿಗಳಲ್ಲದಿದ್ದರೂ ಚಂದ್ರದ್ವೇಷಿಗಳಲ್ಲ ಎಂಬುದನ್ನು ಸ್ಥಾಪಿಸಲಿಕ್ಕೆ ಇಷ್ಟು ಹೇಳಬೇಕಾಯಿತು.  ಅಷ್ಟೇಕೆ, ಈಗೀಗ ಒಂದು ಹೊಸಬಗೆಯ ಕಳ್ಳರ ಸಮುದಾಯ ರೂಪುಗೊಂಡಿದೆ.  ಅವರು ಸುತರಾಂ ಚಂದ್ರದ್ವೇಷಿಗಳಲ್ಲ.  ಇವರೂ ಸಾಮಾನ್ಯವಾಗಿ ನಡುರಾತ್ರಿಯಲ್ಲೇ ಕೆಲಸಮಾಡುವುದರಿಂದ ಇವರನ್ನು ನಿಶಾಚರರು ಎಂದೇ ಕರೆಯಬಹುದಾದರೂ ಇವರ ಕಸುಬಿಗೆ moonlighting ಎಂಬ ಸುಂದರವಾದ, ಕಾವ್ಯಮಯವಾದ ಹೆಸರಿದೆ.  ತಡೆಯಿರಿ, ಹೆಸರನ್ನು ನೋಡಿಕೊಂಡು ಕಸುಬಿಗಿಳಿಯುವುದು ಒಳ್ಳೆಯದಲ್ಲ.  ಹೆಸರು moonlighting ಆದರೂ ವಾಸ್ತವದಲ್ಲಿ ಅದು ಕಳ್ಳಕೆಲಸ.  ಒಂದು ಕಂಪನಿಯಲ್ಲಿ ಕೆಲಸಕ್ಕಿದ್ದುಕೊಂಡೇ ಗುಟ್ಟಾಗಿ ಇನ್ನೊಂದು ಕಂಪನಿಗೆ ಕೆಲಸ ಮಾಡುವುದಕ್ಕೆ ಕಾರ್ಪೊರೇಟ್ ವಲಯದಲ್ಲಿ moonlighting ಎಂಬ ನಾಮಧೇಯವಿದೆ.  ಈ moonlighting ಯಾವ ಕ್ಷೇತ್ರದಲ್ಲೂ ಆಗಬಹುದಾದರೂ ಸಾಮಾನ್ಯವಾಗಿ ಇದು ಐಟಿ ವಲಯದಲ್ಲೇ ಹೆಚ್ಚು.  ಈಗಂತೂ work from home ಬಹಳ ಹೆಚ್ಚಾದುದರಿಂದ ಈ 'ತಂಬೆಳಕು ಕೋರ'ರ ಸಂಖ್ಯೆಯೂ ವಿಪರೀತ ಹೆಚ್ಚಾಗಿದೆಯಂತೆ.  ಸಾಮಾನ್ಯವಾಗಿ ಐಟಿ ವಲಯದಲ್ಲಿ ಕೆಲಸದಲ್ಲಿರುವ ಯಾರಿಗಾದರೂ ಅವರವರ ಮಾನವಸಂಪನ್ಮೂಲವಿಭಾಗದಿಂದ ಹೀಗೆ ಮಾಡದಂತೆ ಎಚ್ಚರಿಕೆ ಸಂದೇಶ ಬಂದೇ ಇರುತ್ತದೆ.  ಸರಿ, ಮಾಡುವುದು ಕಳ್ಳಕೆಲಸ.  ಇದಕ್ಕೆ moonlighting ಎಂಬ ಹೆಸರೇಕೆ ಎಂದಿರಾ?  ಅದು ಹೀಗೆ.  ನೀವು ಮಾಡುವ ಮುಖ್ಯ ಕೆಲಸ ಸಾಮಾನ್ಯವಾಗಿ ಹಗಲು ಹೊತ್ತಿನದು - 9ರಿಂದ 6 ಎಂದಿಟ್ಟುಕೊಳ್ಳೋಣ - ಇದು sunlight ಇರುವ ಸಮಯ.  ಅದಾದ ಮೇಲೆ ನಿಮ್ಮ ಬಿಡುವಿನ ಸಮಯದಲ್ಲಿ ಇನ್ನೊಂದು ಕಂಪನಿಯಲ್ಲಿ ಇನ್ನೊಂದು ಆರೇಳು ಗಂಟೆ ಕೆಲಸ ಮಾಡುತ್ತೇನೆಂದರೆ ಅದು ರಾತ್ರಿಯ ಕೆಲಸವಾಯಿತಲ್ಲ - ಅದು moonlight ಸಮಯವಷ್ಟೇ?  ಆ ಸಮಯದಲ್ಲಿ ಮಾಡುವ ಕೆಲಸವಾದ್ದರಿಂದ ಅದು moonlighting.  

ಸರಿಯಪ್ಪಾ, ಆದರೂ ಕಳ್ಳಕೆಲಸಕ್ಕೆ ಇಷ್ಟು ಸುಂದರ ಹೆಸರೇ ಎಂದರೆ, ನೋಡಿ, ನಾವು ಐಟಿ ಜನ, ಭಾಷಾನಯವನ್ನು ಅರಿತವರು, ಯಾವುದನ್ನೂ ಎದುರಾಳಿಯ (ಅವನು ಕಳ್ಳನೇ ಆದರೂ) ಮನಸ್ಸಿಗೆ ನೋವಾಗದಂತೆ ಹೇಳುವ ಕಲೆ ನಮ್ಮ ಕಸುಬಿನ ಒಂದು ಭಾಗ.  ಅದ್ದರಿಂದಲೇ ಮೀಟಿಂಗುಗಳಲ್ಲಿ problem (ಗೋಳು)ಗಳು concernಗಳಾಗುತ್ತವೆ, hurdle (ತೊಡಕು)ಗಳು challengeಗಳಾಗುತ್ತವೆ; ನಾವು ಒಬ್ಬರಿನ್ನೊಬ್ಬರೊಂದಿಗೆ discuss ಮಾಡುವುದಿಲ್ಲ, brainstorm ಮಾಡುತ್ತೇವೆ, ಹಾಗೆ brainstorm ಮಾಡಲು ಒಂದೆಡೆ ಸೇರಬೇಕಲ್ಲ, ಸೇರಬೇಕೆಂದರೆ ಸಂಬಂಧಪಟ್ಟವರನ್ನು ಸಂಪರ್ಕಿಸಬೇಕಲ್ಲ; ಹಾಗೆಲ್ಲಾ ಒಡ್ಡೊಡ್ಡಾಗಿ ಹೋಗಿ ಸಂಪರ್ಕಿಸಿಬಿಡುವುದಿಲ್ಲ, ನಯವಾಗಿ touch base ಮಾಡುತ್ತೇವೆ - ಇಲ್ಲ ಇಲ್ಲ, ತಪ್ಪು ತಿಳಿಯಬೇಡಿ, ಮುಟ್ಟುವ ಕೆಲಸವೇನು ಇಲ್ಲ, ಮೀಟಿಂಗ್ ಮಾಡೋಣವಾ ಎಂದು ಕೇಳುವ ವಿಧಾನವಷ್ಟೇ ಅದು.  ಅಷ್ಟೇಕೆ, ಐಡಿ ಕಾರ್ಡ್ ಇಲ್ಲದೇ ಹೊಂಚು ಕಾದು ಇನ್ನೊಬ್ಬರ ಹಿಂದೆ ಒಳನುಗ್ಗುವುದನ್ನೂ tresspassing ಎಂದು ಕರೆದು ಅವರ ಮನನೋಯಿಸುವುದಿಲ್ಲ, ಅವರಿಗೆ ಖುಶಿಯಾಗುವ ಹಾಗೆ tailgating ಎನ್ನುತ್ತೇವೆ.  ಆದ್ದರಿಂದಲೇ ಒಂದು ಕೆಲಸದಲ್ಲಿದ್ದುಕೊಂಡೇ ಇನ್ನೊಂದು ಕಡೆ ಕೆಲಸ ಮಾಡುವುದನ್ನು doublecrossing ಎನ್ನುವ ಬದಲು ಡೀಸೆಂಟಾಗಿ moonlighting ಎನ್ನುತ್ತೇವಷ್ಟೇ.  ಬೇಕಾದರೆ ಇದನ್ನು "ಚಂದ್ರೋಪಜೀವನ" ಎಂದು ಅನುವಾದಿಸಿಕೊಳ್ಳಬಹುದು, ಅಥವಾ ಅಚ್ಚಗನ್ನಡದಲ್ಲಿ "ಬೆಳದಿಂಗಳ ಬದುಕು" ಎನ್ನಬಹುದು (ಬದುಕು = ಉದ್ಯೋಗ, ಉಪಜೀವಿಕೆ, ವೃತ್ತಿ).  ಅಥವಾ ಹೆಚ್ಚು ಕಸುಬುದಾರಿಕೆ ಕಾಣಬೇಕೆಂದರೆ "ಬೆಳದಿಂಗಳ ಕಸುಬು" ಎನ್ನಲೂ ಬಹುದು.  ಏನೇ ಇರಲಿ, ಇತ್ತೀಚಿಗೆ ಈ moonlighting ಒಂದು ಭಾರೀ ಪಿಡುಗಾಗಿದೆಯಂತೆ.  ಆದರೆ ಅದಕ್ಕಾಗಿ ಚಂದ್ರನನ್ನು ಶಪಿಸಬೇಕಿಲ್ಲ - ಈ ವಿಷಯದಲ್ಲಿ ನಿಜಕ್ಕೂ ನಿಷ್ಪಾಪಿ ಆತ.  

ಇರಲಿ, ಇಷ್ಟೆಲ್ಲಾ ಹೇಳಿದ ಮೇಲೆ ಒಂದು ಜೋಕು ನೆನಪಿಗೆ ಬರುತ್ತಿದೆ.  ಅದೂ ಒಂದನ್ನು ಕೇಳಿಬಿಡುವುದರಲ್ಲಿ ನಿಮಗೆ ಹೆಚ್ಚಿನ ತೊಂದರೆಯೇನೂ ಆಗದು.  ಪರೀಕ್ಷೆಗೆ ಹೋದವನೊಬ್ಬನಿಗೆ ಅಲ್ಲಿ ಹಸುವಿನ ಮೇಲೆ ಪ್ರಬಂಧ ಬರೆಯಲು ಹೇಳಿದ್ದು ಕೇಳಿ ಗಾಬರಿಯಾಯಿತಂತೆ.  ಇವನು ಓದಿಕೊಂಡು ಹೋಗಿದ್ದು ತೆಂಗಿನ ಮರದ ಬಗ್ಗೆ.  ಚಿಂತಿಸಿ ಏನು ಪ್ರಯೋಜನ?  ಓದಿಕೊಂಡು ಹೋಗಿದ್ದಂತೆ ತೆಂಗಿನ ಮರದ ಮೇಲೇ ಪ್ರಬಂಧ ಬರೆದನಂತೆ, ಕೊನೆಯಲ್ಲಿ "ಇಂಥಾ ಕಲ್ಪವೃಕ್ಷದಂತಹ ತೆಂಗಿನ ಮರಕ್ಕೆ, ಕಾಮಧೇನುವಿನಂತಹ ಹಸುವನ್ನು ಕಟ್ಟುತ್ತಾರೆ - ಇಲ್ಲಿಗೆ ಹಸುವಿನ ಮೇಲಿನ ಪ್ರಬಂಧ ಮುಗಿಯಿತು" ಎಂದು ಮುಗಿಸಿ ಎದ್ದು ಬಂದನಂತೆ.  ಮಿತ್ರ ಶ್ರೀ Hunasuru Sudeendra ಅವರು moonlighting ಬಗ್ಗೆ ಬರೆಯಿರಿ ಎಂದರು.  ಅದಕ್ಕಾಗಿ ಇಷ್ಟು ಬರೆಯಬೇಕಾಯಿತು.


Wednesday, June 1, 2022

ನಿರಾಶಯ

ನನ್ನ ಕವಿತೆಗೆ ಅದಿರಲಿ ಇದಿರಲಿ ಎಂದೆಲ್ಲ ನಾನು ಕೇಳುವುದಿಲ್ಲ ಅದಿಲ್ಲದಿರಲಿ ಇದಿಲ್ಲದಿರಲಿ ಎಂದಂತೂ ಮೊದಲೇ ಕೇಳುವುದಿಲ್ಲ. "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವ ವೀರನೂ ಅಲ್ಲ" ಬೇಕಾದ್ದ ಬೇಕಾದೆಡೆಯಿಡುವ ಸೃಷ್ಟಿಶಕ್ತಿಯ ಬಾರದ್ದ ಬಾರದೆಡೆಯಿಡದ ದೃಷ್ಟಿವಿವೇಕವ ಬಳಸಲರಿಯದೆ ಮತ್ತೊಂದಕೆ ಗೆಂಜುವ ಹಲ್ಲು ಶೂರನದೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಕವಿತೆಯ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ. ತನ್ನ ರಕ್ತಮಾಂಸದೆ ಮೈದಳೆದ ಕವಿತೆಗೆ ಅವರ ಸತ್ವ, ಇವರ ಸತ್ಯ, ಅವರ ಹೃದಯ, ಇವರ ಮಿದುಳು
ಇನ್ನೊಬ್ಬರ ರಕ್ತ ಸಿಕ್ತ ಬಟ್ಟೆ ತಿರಿತಂದು ತೊಡಿಸಿ ಮೆರೆಸುವ ತಿರುಪ ತನಗೆಂದೂ ಬಾರದಿರಲಿ. ಗಾಂಧಿ ಬುದ್ಧ ಬಸವ ಅಲ್ಲಮರ, ಇಸಾಯಿ ಪೈಗಂಬರರ ಸತ್ವ ಕವಿತೆಯಲ್ಲಲ್ಲ, ಅದು ಹುಟ್ಟುವ ಮಣ್ಣಿನಲ್ಲಿ ತುಂಬಲಿ ಇರುವುದಿಲ್ಲದ ಅಲ್ಲದ್ದು ಮೊಳೆತ ಅಷ್ಟಾವಕ್ರವ ಹುಟ್ಟುವ ಮೊದಲೇ ಹೂತು ಮತ್ತೊಂದ ನೇಯುವ ಕಸುವಿರದವ ಕವಿಯೇ ಅಲ್ಲ
ವಿಸೂ: ಇದೊಂದು ಪದ್ಯವಲ್ಲ (ಕಾವ್ಯ ಮೊದಲೇ ಅಲ್ಲ), ಪದ್ಯದ ಕೌದಿ ಹೊದ್ದ ಗದ್ಯ ಎಂದು ಈ ಮೂಲಕ ದೃಢೀಕರಿಸುತ್ತೇನೆ. ಹಾಗೆಂದ ಮಾತ್ರಕ್ಕೆ ಇದನ್ನು ಯಾವುದೇ ಪಠ್ಯಪುಸ್ತಕದಲ್ಲಿ (ಕದ್ದಾದರೂ) ಅಳವಡಿಸಲು ನನ್ನ ಅನುಮತಿಯಿಲ್ಲವೆಂದೂ ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಮತ್ತಿದನ್ನು ಯಾರ ಕೋರಿಕೆಯೂ ಇಲ್ಲದೇ ನಾನಾಗಿಯೇ ಸ್ವಯಿಚ್ಛೆಯಿಂದ ಇಲ್ಲಿ ಪ್ರಕಟಿಸುತ್ತಿದ್ದೇನಾದ್ದರಿಂದ ನನ್ನ ಬರಹಕ್ಕೆ ನಾನೇ ಕಾರಣವೆಂದೂ ಇದಕ್ಕಾಗಿ ಬೇರಾರನ್ನೂ ದೂರಬಾರದೆಂದೂ ಈ ಮೂಲಕ ವಿನಂತಿಸುತ್ತೇನೆ.

Wednesday, May 11, 2022

ಹಿರಿದು ಕಿರಿದು

ಹಿರಿದೆಂಬುದ ಭಂಜಿಸಿದೊಡೆ ಹಿರಿದಹೆನೆಂಬ ಕಿರಿತನವ ನೋಡಿರೇ ನೆರೆಗೆರೆಯನಳಿದು ತಾ ಹಿರಿದಹೆನೆಂಬ ಕಿರಿಗೆರೆಯಂತಪ್ಪಿರಯ್ಯಾ ಅಯ್ಯಾ ನಿಮ್ಮೀ ಕಿರಿತನವೆ ಹಿರಿದು ವಿಕಾರಮಾಯಿತ್ತು ಮೊಳೆವ ಸಿರಿಗೆ ನೆರಳಾಗದೆ ಎಲರಾಗದೆ ಬಿಸುಪಾಗದೆ ಬೆಳಕಾಗದೆ ಮರೆಯಾಗದೆ ಹಿರಿದಲ್ಲ ಬೆಳೆಯ ಹಿಗ್ಗಿಂಗೆ ಎದೆಯರಳದೆ ಕೈವರಿಯದೆ ಮೈದಡಹದೆ ತಕ್ಕೈಸದೆ ಹಿರಿದಲ್ಲ ಪೆತ್ತ ಮಗುವ ತಿಂಬ ರಕ್ಕಸಿ ತಾಯಪ್ಪಳೇ ಶಿವಪೂಜೆಗೆ ಗೋಕ್ಷೀರವಲ್ಲದೆ ಕತ್ತೆಯ ಹಾಲಪ್ಪುದೇ ಮೊಲ್ಲೆಮಲ್ಲಿಗೆಯಲ್ಲದೆ ಕಳ್ಳಿಯ ಮುಳ್ಳಪ್ಪುದೇ ಹೂವಿನೊಳಗಂಧವಾಗದೆ ಹೊಗುವ ಮುಳ್ಳಪ್ಪೊಡೆ ಹಣ್ಣಿನೊಳಸ್ವಾದವಾಗದೆ ಹಿಡಿದ ಹುಳುವಪ್ಪೊಡೆ ಆದರಿಸಿ ಅಂದಣವನಿಕ್ಕಿರೆ ಸೊಣಗನಂತಪ್ಪೊಡೆ ಆ ಮುಳ್ಳನಾ ಹುಳುವನಾ ಸೊಣಗನನೆಡಗೈಯ ತುದಿವೆರಲೊಳೆ ಚಿಮ್ಮಿ ಮಿಂದು ಮಡಿಯಾಗೆಂದ ನಮ್ಮ ದಮ್ಮಪುರದ ಮಂಜೇಶನು.



Friday, April 1, 2022

ಮನುಷ್ಯಜಾತಿ ತಾನೊಂದೆ ವಲಂ...

ಆದಿಕವಿ ಪಂಪನೇ ಹೀಗೆ ಹೇಳಿದ್ದಾನೆ, ಆದ್ದರಿಂದ ಮನುಷ್ಯರೆಲ್ಲ ಒಂದೇ, ನಮ್ಮಲ್ಲಿ ಭೇದಭಾವ ಸಲ್ಲ ಎಂಬರ್ಥದ ಅಭಿಪ್ರಾಯವೊಂದನ್ನು ಫೇಸ್ಬುಕ್ಕಿನಲ್ಲಿ ನೋಡಿದೆ.  ಈ ಅಭಿಪ್ರಾಯದ ಬಗೆಗೆ ನಮ್ಮ ತಕರಾರಿಲ್ಲ; ಅಥವಾ ಮೇಲಿನ ಮಾತುಗಳು ಪಂಪನವೇ ಎಂಬಲ್ಲಿ ಕೂಡ ತಕರಾರಿಲ್ಲ.  ಆದರೆ ಮೇಲಿನ ಮಾತುಗಳು ಈ ಅಭಿಪ್ರಾಯವನ್ನು ಸೂಚಿಸುತ್ತವೆ ಎಂಬ 'ಮೂಢನಂಬಿಕೆ'ಯ ಬಗೆಗಷ್ಟೇ ತಕರಾರು.

ಇದು ಹೊಸದೇನಲ್ಲ.  ಪಂಪ "ಮನುಷ್ಯರೆಲ್ಲ ಒಂದೇ" ಎಂದೇ ಹೇಳಿದ್ದಾನೆ ಎಂಬ ಅಭಿಪ್ರಾಯ ಬಹಳವಾಗಿ ಚಾಲ್ತಿಯಲ್ಲಿದೆ.  ಕೆಲವು ಹಿರಿಯ ವಿಮರ್ಶಕರು (ತಿಳಿಯದವರೇನಲ್ಲ), ಅದಾವುದೋ ತಮಗಷ್ಟೇ ತಿಳಿದಿರಬಹುದಾದ ಕಾರಣಕ್ಕೆ ಇಂಥದ್ದೊಂದು ವ್ಯಾಖ್ಯಾನವನ್ನು ಹರಿಯಬಿಟ್ಟಿದ್ದಾರೆ, ಸಾವಿರ ವರ್ಷದ ಹಿಂದೆಯೇ ಜಾತಿಪದ್ಧತಿಯನ್ನು ವಿರೋಧಿಸಿದ ಪ್ರಗತಿಪರಕವಿಯದೊಂದು ಇಮೇಜ್ ಸಿದ್ಧವಾಗಿಬಿಟ್ಟಿದೆ, ಮತ್ತು ಪಂಪನಿಗೆ ತಾನು ಕನಸುಮನಸಿನಲ್ಲಿಯೂ ಊಹಿಸಿರದ ಜಾತ್ಯತೀತ ವಿಶ್ವಮಾನವಕವಿಯ ಪಟ್ಟ ದಕ್ಕಿಬಿಟ್ಟಿದೆ.  ಜಾತಿಯನ್ನು ಖಂಡಿಸುವವರು (ಅದಕ್ಕಾಗಿ ಬ್ರಾಹ್ಮಣರ ಮೂತಿ ದೆಬ್ಬುವವರು), ಪಂಪನನ್ನು ಓದಿಕೊಂಡಿದ್ದೇನೆಂದು ತೋರಿಸಿಕೊಳ್ಳುವವರು, ಪಂಪನನ್ನು ಅರೆಬರೆ ಓದಿಕೊಂಡವರು, ಪಂಪನ ಹೆಸರನ್ನು ಎಲ್ಲೋ ಕೇಳಿದವರು, ಪುಡಾರಿಗಳು, ಪುಡಿಸಾಹಿತಿಗಳು, ಧಡಿಸಾಹಿತಿಗಳು, ಮಾನವತಾವಾದದ ಉದ್ಯಮವನ್ನು ನಡೆಸುವವರು ಎಲ್ಲರಿಗೂ ಪಂಪನ ಇದೊಂದು ವಾಕ್ಯ, ಅಲ್ಲಲ್ಲ, ವಾಕ್ಯಖಂಡ ಬಹಳ ಅನುಕೂಲಕರವಾದ ಕೈಹಿಡಿಯಾಗಿ ಪರಿಣಮಿಸಿಬಿಟ್ಟಿದೆ.  ಇದೊಂದು ಸಾಲನ್ನು ಪಂಪನ 'ವಿಶ್ವಮಾನವದೃಷ್ಟಿ'ಗೆ ದ್ಯೋತಕವಾಗಿ ಎಲ್ಲೆಲ್ಲಿ ಎಷ್ಟೆಷ್ಟು ಹೇಗೆಹೇಗೆ ಬರೆದರೂ ಸಾಲದು.  ಅಷ್ಟೇಕೆ, ಸ್ವತಃ ಕನ್ನಡಸಾಹಿತ್ಯಪರಿಷತ್ತೇ ತನ್ನ ಪುಸ್ತಕಸರಣಿಯಲ್ಲಿ ಇದನ್ನು ಘೋಷವಾಕ್ಯವಾಗಿ ಮುದ್ರಿಸಿಕೊಂಡಿದೆ.  ಹೀಗಾಗಿ ಈ ವಾಕ್ಯದ ಹಿಂದುಮುಂದು ತಿಳಿಯದೇ, ಈ ಮಾತಿನ ಮೂಲಕ "ಮನುಷ್ಯಜಾತಿ ಒಂದೇ" ಎಂಬ ಏಕತ್ವದ ಸಂದೇಶವನ್ನು ಪಂಪ ಸಾರುತ್ತಿದ್ದಾನೆ ಎಂದು ಮುಗ್ಧವಾಗಿ ನಂಬಿದವರೂ ಕಡಿಮೆಯಿಲ್ಲ.

ಇರಲಿ, ಕೆಟ್ಟ ಅಪಾರ್ಥಗಳಿಗಿಂತ ಒಳ್ಳೆಯ ಅಪಾರ್ಥ ಯಾವಾಗಲೂ ಒಳ್ಳೆಯದೇ.  ಈ ವಾಕ್ಯದ ಅಭಿಪ್ರಾಯವೇನೇ ಇರಲಿ, ಮನುಷ್ಯಜಾತಿಯೊಂದೇ ಎಂಬುದರಲ್ಲಿ ಎರಡು ಮಾತಿಲ್ಲವೇ ಇಲ್ಲ.  ಬಸವಣ್ಣನವರೇ ಹೇಳಿಲ್ಲವೇ - "ನೆಲನೊಂದೆ ಹೊಲಗೇರಿ ಶಿವಾಲಯಕೆ"; ಅದಕ್ಕೆ ಸರ್ವಜ್ಞನೂ ದನಿಗೂಡಿಸಿದ್ದಾನಲ್ಲ - "ನಡೆವುದೊಂದೇ ಭೂಮಿ ಕುಡಿವುದೊಂದೇ ನೀರು ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ ನಡುವೆ ಎತ್ತಣದು"; ಕನಕದಾಸರೂ ಅದನ್ನೇ ಹೇಳುತ್ತಾರೆ - "ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?"  ಅಷ್ಟೇಕೆ ಪಂಪನೂ ಕುಲಾಚಾರಗಳನ್ನು ಗೌರವಿಸಿದರೂ ಅದು ಅತಿರೇಕಕ್ಕೆ ಹೋದರೆ ಸಹಿಸುವವನಲ್ಲ.   ಉದಾಹರಣೆಗೆ ವಿಕ್ರಮಾರ್ಜುನವಿಜಯದಲ್ಲಿ ಕರ್ಣನ ಬಾಯಲ್ಲಿ ಆತ ಹೇಳಿಸುವ ಮಾತುಗಳನ್ನು ಕೇಳಿ:

"ಕುಲಮನೆ ಮುನ್ನಮುಗ್ಗಡಿಪಿರೇಂ ಗಳ, ನಿಮ್ಮ ಕುಲಂಗಳಾಂತು ಮಾರ್ಮಲೆವನನಟ್ಟಿ ತಿಂಬುವೆ? ಕುಲಂ ಕುಲಮಲ್ತು - ಚಲಂ ಕುಲಂ, ಗುಣಂ ಕುಲಂ, ಅಭಿಮಾನಮೊಂದೆ ಕುಲಂ, ಅಣ್ಮು ಕುಲಂ.  ಬಗೆವಾಗಳ್ ಈಗಳ್ ಈ ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ" (ಕುಲವನ್ನೇ ಎತ್ತೆತ್ತೆತ್ತಿ ಆಡುವಿರಲ್ಲ, ನಿಮ್ಮ ಕುಲಗಳೇನು ಏರಿಬರುವ ಶತ್ರುಗಳನ್ನು ಅಟ್ಟಿ ತಿನ್ನುತ್ತವೆಯೇ?  ಕುಲ ಕುಲವಲ್ಲಪ್ಪಾ, ಛಲ ಕುಲ, ಗುಣ ಕುಲ, ಅಭಿಮಾನವೊಂದೇ ಕುಲ, ವೀರ್ಯವೇ ಕುಲ.  ನೋಡಿದರೆ ಈಗ ಈ ಕಲಹದಲ್ಲಿ, ಅಣ್ಣಾ, ನಿಮ್ಮ ಕುಲವೇ ನಿಮಗೆ ಆಕುಲವನ್ನು (ದುಃಖವನ್ನು) ತಂದೀತು).

ಪಂಪನ ಶಾಸ್ತ್ರದೃಷ್ಟಿಯೇನೇ ಇರಲಿ, ಮೇಲೆ ಕರ್ಣ ಹೇಳುವ ಮಾತು ಕೆಲಮಟ್ಟಿಗೆ ಪಂಪನ ಜೀವನದೃಷ್ಟಿಯನ್ನೂ ಧ್ವನಿಸುತ್ತದೆಂದಿಟ್ಟುಕೊಳ್ಳಬಹುದು. ಮಾನವಧರ್ಮವೇ ಸರ್ವಶ್ರೇಷ್ಠವೆಂಬ ಮಾತಿನಲ್ಲಿ ಅನುಮಾನವಿಲ್ಲ; ಮಾನವತೆಯೆಂಬುದು ದಯೆ-ಕರುಣೆ ಎಂದು ಅರ್ಥೈಸುವುದಾದರೆ ಸ್ವತಃ ಜೈನಮತಾವಲಂಬಿಯಾದ ಪಂಪನೂ ಮಾನವಧರ್ಮದಲ್ಲಿ ನಂಬಿಕೆಯಿಟ್ಟವನೇ ಎಂದರೂ ತಪ್ಪಾಗಲಾರದು.  ಆದರೆ ಪಂಪನ 'ಮಾನವತೆ' ನಮ್ಮ ಆಧುನಿಕಬುದ್ಧಿಜೀವಿಗಳ ಬ್ರಾಂಡಿನ ಮಾನವತೆಯಲ್ಲ.  ಅವನ ಮಾನವತೆಯು ಜಾತಿ-ಕುಲ-ನಂಬಿಕೆಗಳಿಗೆ, ಅದರಿಂದ ಹೊಮ್ಮಬಹುದಾದ ಸಹಜವಾದ ಹೆಮ್ಮೆಗೆ, ಸ್ವಾಭಿಮಾನಕ್ಕೆ, ಶ್ರೇಷ್ಠತೆಯ ಪ್ರಜ್ಞೆಗೆ ಎಂದೂ ವಿರುದ್ಧವಾದದ್ದಲ್ಲ.  ಅಷ್ಟೇಕೆ?  ಸ್ವತಃ ಪಂಪ ಧರ್ಮದಿಂದ ಜೈನನಾದರೂ ಜಾತಿಯಿಂದ ಬ್ರಾಹ್ಮಣ, ಮತ್ತು ಅವನಿಗೆ ತನ್ನ ಜಾತಿಯ ಬಗ್ಗೆ ಅಪಾರವಾದ ಹೆಮ್ಮೆಯಿದೆ.  'ವಿಪ್ರಶ್ರೇಷ್ಠ'ನಾದ ತನ್ನ ತಂದೆ ಅಭಿರಾಮದೇವರಾಯ (ಭೀಮಪಯ್ಯ)ನು ಜೈನಧರ್ಮವನ್ನು ಪರಿಗ್ರಹಿಸಿದ ಘಟನೆಯನ್ನು ಹೆಮ್ಮೆಯಿಂದ ವಿವರಿಸುತ್ತಾ ಪಂಪ ಹೀಗೆ ಹೇಳುತ್ತಾನೆ:

ಜಾತಿಯೊಳೆಲ್ಲಮುತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇ

ಮಾತೊ ಜಿನೇಂದ್ರಧರ್ಮಮೆ ವಲಂ ದೊರೆ ಧರ್ಮದೊಳೆಂದು ನಂಬಿ ತ

ಜ್ಜಾತಿಯನುತ್ತರೋತ್ತರಮೆ ಮಾಡಿ ನೆಗೞ್ಚಿದನಿಂತಿರಾತ್ಮವಿ

ಖ್ಯಾತಿಯನಾತನಾತನ ಮಗಂ ನೆಗೞ್ದಂ ಕವಿತಾಗುಣಾರ್ಣವಂ

 - ವಿಕ್ರಮಾರ್ಜುನವಿಜಯ 14/48

(ಜಾತಿಗಳಲ್ಲಿ ಉತ್ತಮಜಾತಿಯವನಾದ ವಿಪ್ರನಿಗೆ ಧರ್ಮಗಳಲ್ಲಿ ಉನ್ನತವಾದ ಜಿನೇಂದ್ರಧರ್ಮವೇ ಸರಿಯಾದ ಧರ್ಮವೆಂದು ನಂಬಿ, ಅದರಿಂದ ಆ (ಬ್ರಾಹ್ಮಣ)ಜಾತಿಯನ್ನೇ ಉತ್ತರೋತ್ತರವನ್ನಾಗಿಸಿ (ತನ್ನ ಜಾತಿಯ ಪೆರ್ಮೆಯನ್ನು ಇನ್ನೂ ಹಿರಿದಾಗಿಸಿ) ತನ್ನ ಖ್ಯಾತಿಯನ್ನೂ ಹೆಚ್ಚಿಸಿಕೊಂಡನು; ಆತನ (ಅಂತಹ ಅಭಿರಾಮದೇವರಾಯನ) ಮಗನೇ ಈ ಕವಿತಾಗುಣಾರ್ಣವನಾದ ಪಂಪ)

ಮುಂದುವರೆದು ತನ್ನ ಬಗ್ಗೆ ಪಂಪ ಹೇಳಿಕೊಳ್ಳುವ ಪರಾಕುಗಳನ್ನೂ ನೋಡಿ - 

ಪಂಪಂ ಧಾತ್ರೀವಳಯನಿ

ಳಿಂಪಂ ಚತುರಂಗಬಳಭಯಂಕರಣಂ ನಿ

ಷ್ಕಂಪಂ ಲಲಿತಾಲಂಕರ

ಣಂ ಪಂಚಶರೈಕರೂಪನಪಗತಪಾಪಂ

 - ವಿಕ್ರಮಾರ್ಜುನವಿಜಯ 14/49

(ಪಂಪ, ಧಾತ್ರೀವಳಯನಿಳಿಂಪ (ಭೂಲೋಕದ ದೇವತೆ - ಭೂಸುರ - ಬ್ರಾಹ್ಮಣ), ಚತುರಂಗಬಲಭಯಂಕರ, ಎಂದೂ ನಡುಗದವನು, ಲಲಿತವಾಗಿ ಅಲಂಕರಿಸಿಕೊಂಡ ಮನ್ಮಥರೂಪ, ಪಾಪರಹಿತ).

ಮತ್ತೆ, ತನ್ನ ದೊರೆಯಾದ ಅರಿಕೇಸರಿಯು ತನಗೆ ಮೆಚ್ಚುಗೆಯಾಗಿ ಕೊಡಮಾಡಿದ ಧರ್ಮಪುರವೆಂಬ ಅಗ್ರಹಾರವನ್ನು ಪಂಪನು ವರ್ಣಿಸುವ ಬಗೆ ನೋಡಿ:

ದೆಸೆ ಮಖಧೂಮದಿಂ ದ್ವಿಜರ ಹೋಮದಿನೊಳ್ಗೆಱೆ ಹಂಸಕೋಕಸಾ

ರಸಕಳನಾದದಿಂದೊಳಗೆ ವೇದನಿನಾದದಿನೆತ್ತಮೆಯ್ದೆ ಶೋ

ಭಿಸೆ ಸುರಮಥ್ಯಮಾನವನಧಿಕ್ಷುಭಿತಾರ್ಣವಘೋಷದಂತೆ ಘೂ

ರ್ಣಿಸುತಿರಲೀ ಗುಣಾರ್ಣವನ ಧರ್ಮದ ಧರ್ಮವುರಂ ಮನೋಹರಂ

 - ವಿಕ್ರಮಾರ್ಜುನವಿಜಯ 14/57

(ದಿಕ್ಕುಗಳು ಬ್ರಾಹ್ಮಣರ ಹೋಮಧೂಮದಿಂದಲೂ, ಒಳ್ಳೆಯ ಕೆರೆಗಳು ಹಂಸಕೋಕಸಾರಸಪಕ್ಷಿಗಳ ಕಳಕಳನಾದದಿಂದಲೂ, ಊರಿನ ಒಳಭಾಗವು ವೇದನಿನಾದದಿಂದಲೂ ಶೋಭಿಸುತ್ತಿರಲು, ಗುಣಾರ್ಣವನ ಧರ್ಮದ ಈ ಧರ್ಮಪುರವು ದೇವತೆಗಳಿಂದ ಕಡೆಯಲ್ಪಟ್ಟ ಸಮುದ್ರದಂತೆ ಘೂರ್ಣಿಸುತ್ತಾ ಮನೋಹರವಾಗಿತ್ತು) 

ಇದನ್ನೋದಿ ಪಂಪನಿಗೆ ಬ್ರಾಹ್ಮಣ್ಯದ, ಶ್ರೇಷ್ಠತೆಯ ವ್ಯಸನವಿತ್ತೆಂದು ನಾನಂತೂ ಹುಯಿಲೆಬ್ಬಿಸುವುದಿಲ್ಲ.  "ಮನುಷ್ಯಜಾತಿ ತಾನೊಂದೆವಲಂ" ಎಂಬ ಅರ್ಧವಾಕ್ಯವನ್ನು ಹಿಡಿದು ಪಂಪನನ್ನು ಆಧುನಿಕ ಬ್ರಾಂಡ್ ಮಾನವತಾವಾದಿಯಾಗಿಸಿ ಮೆರೆಸಿದವರು ಈಗ ಇದನ್ನೋದಿ ನಿಲುವು ಬದಲಿಸಿಕೊಂಡರೆ, ಪಂಪನ 'ಶ್ರೇಷ್ಠತೆಯ ವ್ಯಸನದ ಬಗ್ಗೆ, ಎದ್ದು ಕಾಣುವ 'ಬ್ರಾಹ್ಮಣ್ಯ'ದ ಬಗ್ಗೆ ಹುಯಿಲೆಬ್ಬಿಸಿದರೆ ನಾನು ಪಂಪನನ್ನು ರಕ್ಷಿಸಲೂ ಹೋಗುವುದಿಲ್ಲ.  ಏಕೆಂದರೆ ಸ್ವಪ್ರಶಂಸೆ ಪ್ರಾಚೀನಕವಿಗಳ ಶೈಲಿಯೇ ಆಗಿದೆ.  ಅದು ತಪ್ಪೂ ಅಲ್ಲ, ಮತ್ತು ಪಂಪನಂತಹ ಸಿದ್ಧಕವಿಗಳಿಗೆ ಅದು ಕೇವಲ ವ್ಯಸನವೂ ಅಲ್ಲ.  ಆದ್ದರಿಂದ ಅದರ ವೈಖರಿಯನ್ನು ಆಸ್ವಾದಿಸುತ್ತಾ ತಲೆದೂಗುತ್ತೇನಷ್ಟೇ.  ಬ್ರಾಹ್ಮಣ್ಯದ ಹೆಮ್ಮೆ ಪಂಪನಿಗಿರಬಹುದು, ಆದರೆ ನಮ್ಮ ಹೆಮ್ಮೆ ಪಂಪನ ಬ್ರಾಹ್ಮಣ್ಯಲ್ಲ, ಸ್ವತಃ ಪಂಪನೇ.

ಇರಲಿ, ಇಲ್ಲಿ ವಿವರಿಸಹೊರಟದ್ದು "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಸಾಲನ್ನಷ್ಟೇ?  ಇದು ಬರುವುದು ಆದಿಪುರಾಣದಲ್ಲಿ, ಭರತಚಕ್ರವರ್ತಿಯ ರಾಜ್ಯಭಾರವನ್ನು ವರ್ಣಿಸುವ ಹದಿನೈದನೆಯ ಆಶ್ವಾಸದಲ್ಲಿ.  ರಾಜ್ಯದಲ್ಲಿ ತಂತಮ್ಮ ಜಾತಿಧರ್ಮಗಳನ್ನು ನಿಷ್ಠೆಯಿಂದ ಪಾಲಿಸದವರನ್ನು ಬೇರಿರಿಸಿ, ಪಾಲಿಸುವವರನ್ನು ಸನ್ಮಾನಿಸುವ ಮೂಲಕ ಧರ್ಮವ್ರತಗಳನ್ನು ಬಿಟ್ಟವರೂ ಮತ್ತೆ ಅದನ್ನು ಹಿಡಿಯುವಂತೆ ಮಾಡುತ್ತಿದ್ದ ಎಂದು ವಿವರಿಸುವ ಭಾಗ.  ಹೀಗೆ ಸ್ವಧರ್ಮವ್ರತಗಳಲ್ಲಿ ನಿರತರಾದ ಕೃಷಿ, ವಾಣಿಜ್ಯ, ಶಿಲ್ಪ, ಮೊದಲಾದ ಕಸುಬುದಾರರನ್ನೂ, ಶ್ರಾವಕರನ್ನೂ, ಉಪಾಸನೆ ಅಧ್ಯಯನ ಅಧ್ಯಾಪನ ಮೊದಲಾದವುಗಳಲ್ಲಿ ನಿರತರಾದ ಬ್ರಾಹ್ಮಣರನ್ನೂ ಯಾವಯಾವ ರೀತಿ ಸನ್ಮಾನಿಸುತ್ತಿದ್ದನೆಂದು ವಿವರಿಸುವ ಈ ಭಾಗದಲ್ಲಿ, ಬ್ರಾಹ್ಮಣರನ್ನು ಕುರಿತು ಬರುವ ಮಾತುಗಳು ಹೀಗಿವೆ:

"ಉಪಾಸಕಾಧ್ಯಯನಾಧ್ಯಾಪನಾನಂತರಂ ಸಕಳಶಾಸ್ತ್ರಂಗಳನೋದುವೋದಿಸುವ ನೆನೆವ ಬರೆವ ಪರಮಸ್ವಾಧ್ಯಾಯಮುಂ, ಪಂಚಾಣುವ್ರತಾದಿಪ್ರವರ್ತನಸ್ವಭಾವಸಂಯಮಮುಮನ್ ಅನಶನವೃತ್ಯಾದಿ ತಪೋನುಷ್ಠಾನಮುಂಬೆರಸು ಆರ್ಯಷಟ್ಕರ್ಮಂಗಳಂ ನಿಮಗಿವು ಕುಲಾಚಾರಂಗಳೆಂದಱಿಯೆ ಪೇೞ್ದು ಕೈಕೊಳಿಸಿ,

ಆಱುಂ ವೃತ್ತಿಗಳನಿವಂ

ಮೀಱಿದರಲ್ಲರ್ ದ್ವಿಜನ್ಮರೀವೃತ್ತಿಗಳಿಂ

ಬೇಱಾದರ್ ದ್ವಿಜರುಂತೇಂ

ಬೇಱುಂಟೆ ಮನುಷ್ಯಜಾತಿ ತಾನೊಂದೆ ವಲಂ"

 - ಆದಿಪುರಾಣ 15/14

ಇಲ್ಲಿ ಬರುವುದು "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಮಾತು.  ಇದರರ್ಥ ಸ್ಥೂಲವಾಗಿ ಹೀಗೆ:

ಉಪಾಸನೆ, ಅಧ್ಯಯನ, ಅಧ್ಯಾಪನ, ಶಾಸ್ತ್ರಗಳನ್ನು ಓದುವುದು, ಓದಿಸುವುದು, ಚಿಂತಿಸುವುದು, ಬರೆಯುವುದು ಮೊದಲಾದ ಚಟುವಟಿಕೆಗಳನ್ನೂ, ಪಂಚಾಣುವ್ರತವೇ ಮೊದಲಾದ ಸಂಯಮವನ್ನೂ, ಉಪವಾಸವೇ ಮೊದಲಾದ ತಪೋನುಷ್ಠಾನಗಳಿಂದ ಕೂಡಿದ ಆರ್ಯರ ಆರು ಕರ್ಮಗಳನ್ನೂ "ನಿಮಗಿದು ಕುಲಾಚಾರ" ಎಂದು ತಿಳಿಯಹೇಳಿ, "ಈ ಆರು ವೃತ್ತಿಗಳನ್ನು ದ್ವಿಜರು (ಬ್ರಾಹ್ಮಣರು) ಎಂದಿಗೂ ಮೀರುವುದಿಲ್ಲ, ಏಕೆಂದರೆ ಈ ವೃತ್ತಿಗಳೇ ಅವರನ್ನು ಇತರರಿಂದ ಬೇರಾಗಿಸಿರುವುದು (ವಿಶಿಷ್ಟವಾಗಿಸಿರುವುದು).  ಅದು ಬಿಟ್ಟರೆ ಅವರು ಕೇವಲ ಮನುಷ್ಯಜಾತಿ ಒಂದೇ ಆಗಿ (ಮನುಷ್ಯಜಾತಿಯಷ್ಟೇ ಆಗಿ) ಉಳಿಯುತ್ತಾರಲ್ಲವೇ? (ಅವರನ್ನು ದ್ವಿಜರೆನ್ನಲಾಗುತ್ತದೆಯೇ?)

ಎಂದರೆ ಮನುಷ್ಯಜಾತಿ ಒಂದು ಪದರ, ಅದರ ಮೇಲೆ ದ್ವಿಜರು ತಮ್ಮ ಈ ಷಟ್ಕರ್ಮಗಳಿಂದ ಎರಡನೆಯ ಜನ್ಮ ತಳೆಯುತ್ತಾರೆ, ಉಳಿದ ಮನುಷ್ಯಜಾತಿಯಿಂದ ಒಂದು ಮೆಟ್ಟಿಲು ಮೇಲೇರುತ್ತಾರೆ.  ಈ ಕರ್ಮಗಳನ್ನು ಬಿಟ್ಟರೆ ದ್ವಿಜತ್ವವನ್ನು ಕಳೆದುಕೊಂಡ ಅವರು ಕೇವಲ ಮನುಷ್ಯರೊಂದೇ ಆಗಿ ಉಳಿಯುತ್ತಾರೆ ಎಂಬುದು ಇಲ್ಲಿ ಕವಿಯ ಭಾವ.  ಅದನ್ನೇ ಮುಂದಿನ ಪದ್ಯದಲ್ಲಿ ಇನ್ನಷ್ಟು ಸ್ಪಷ್ಟಪಡಿಸುತ್ತಾನೆ:

ವ್ರತಸಂಸ್ಕಾರದಿನಾದರ್ವಿ

ತತಗುಣರ್ ಬ್ರಾಹ್ಮಣರ್ ಕ್ರಿಯಾಸಂತತಿಸಂ

ಯುತರುಚಿತಸತ್ಕ್ರಿಯಾವಿರ

ಹಿತನಾತಂ ನಾಮಧಾರಕಂ ದ್ವಿಜನಲ್ಲಂ

 - ಆದಿಪುರಾಣ 15/15

ಹುಟ್ಟುತ್ತ ಸಾಮಾನ್ಯಮನುಷ್ಯರಾದ ಬ್ರಾಹ್ಮಣರು ಈ ವ್ರತಸಂಸ್ಕಾರಗಳಿಂದ, ಅದಕ್ಕನುಗುಣವಾದ ಕ್ರಿಯಾಕರ್ಮಗಳಿಂದ ವಿತತಗುಣರಾಗುತ್ತಾರೆ (ವಿಸ್ತರಿಸಿದ, ಉತ್ತಮಗುಣವನ್ನು ಸಂಪಾದಿಸುತ್ತಾರೆ).  ಈ ಸತ್ಕ್ರಿಯಾಸಂಸ್ಕಾರಗಳನ್ನು ಬಿಟ್ಟ ಬ್ರಾಹ್ಮಣ ಕೇವಲ ಹೆಸರಿಗೆ ಬ್ರಾಹ್ಮಣನೆನಿಸುತ್ತಾನಷ್ಟೇ, ಅವನು ದ್ವಿಜನಲ್ಲ.

ಮೇಲಿನ ಎರಡೂ ಪದ್ಯಗಳನ್ನು ವಿವರವಾಗಿ ಓದಿದರೆ, "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಮಾತಿನಲ್ಲಿರುವ "ಒಂದೇ" ಎಂಬುದನ್ನು ಯಾವ ಅರ್ಥದಲ್ಲಿ ಬಳಸಿದ್ದೆಂಬುದು ಸ್ಪಷ್ಟವಾಗುತ್ತದೆ.  "ಒಂದೇ" ಎಂಬುದನ್ನು ಎರಡರ್ಥದಲ್ಲಿ ಬಳಸಬಹುದಷ್ಟೇ? 

1) "ಎಲ್ಲರೂ ಒಂದೇ" ಎಂಬ ಸಮಷ್ಟಿ ಅರ್ಥದಲ್ಲಿ (ನಾವೆಲ್ಲರೂ ಒಂದೇ, ಮನುಷ್ಯಜಾತಿ ಒಂದೇ, ಇತ್ಯಾದಿ); 

2) "ಒಂದೇ, ಅಷ್ಟೇ, only" ಎಂಬ ಅರ್ಥದಲ್ಲಿ (ನನ್ನ ಬಳಿ ಒಂದೇ ಪುಸ್ತಕವಿದೆ, ಒಂದೇ ನಾಯಿಯಿದೆ ಇತ್ಯಾದಿ).  

ಇಲ್ಲಿ ಒಂದೇ ಎಂಬ ಪದವನ್ನು ಬಳಸಿರುವುದು ಈ ಎರಡನೆಯ ಅರ್ಥದಲ್ಲಿ - ದ್ವಿಜಸಂಸ್ಕಾರವನ್ನು ಬಿಟ್ಟ ಬ್ರಾಹ್ಮಣನಲ್ಲಿ ಉಳಿಯುವುದು "ಮನುಷ್ಯಜಾತಿಯೊಂದೇ (ಮತ್ತೇನು ಇಲ್ಲ)" ಎಂಬ ಅರ್ಥದಲ್ಲಿ.  ಬ್ರಾಹ್ಮಣನ ಕುಲಾಚಾರವೇನು, ಅವನು ಇತರ ಮನುಷ್ಯರಿಗಿಂತ ಹೇಗೆ ಬೇರಾಗುತ್ತಾನೆ, ತನ್ನ ಕುಲಾಚಾರಗಳನ್ನು ಬಿಟ್ಟ ಬ್ರಾಹ್ಮಣ ಹೇಗೆ ಕೇವಲ ಮನುಷ್ಯನಾಗಿಯಷ್ಟೇ ಉಳಿಯುತ್ತಾನೆ, ಹೇಗೆ ಹೆಸರಿಗಷ್ಟೇ ಬ್ರಾಹ್ಮಣನಾಗಿರುತ್ತಾನೆ, ಅದರ ಮೇಲಿನ 'ದ್ವಿಜ' ಎಂಬ ಎರಡನೆಯ ಪದರವನ್ನು ಕಳೆದುಕೊಂಡು ಮನುಷ್ಯ ಎಂಬ 'ಒಂದೇ' ಪದರದಲ್ಲಿ ಉಳಿದುಬಿಡುತ್ತಾನೆ ಎಂಬ ವಿವರಣೆಯಷ್ಟೇ ಇಲ್ಲಿರುವುದು.  ಇಲ್ಲಿ "ಒಂದೇ" ತತ್ತ್ವದ ವಿಶ್ವಮಾನವದೃಷ್ಟಿಯನ್ನು ಹುಡುಕುವ ವ್ಯರ್ಥಪ್ರಯತ್ನ ಬೇಡವೇನೋ.

ಕೊನೆಯದಾಗಿ, ಇಲ್ಲಿ ವಿವರಿಸಿರುವುದು ಪಂಪನ ಮತ್ತು ಅವನ ಪಾತ್ರಗಳ ಅಭಿಪ್ರಾಯವೇ ಹೊರತು ನನ್ನದಲ್ಲ.  ಈ ವಿಷಯದ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿ ಅಪ್ರಸ್ತುತ.

ಅಂದ ಹಾಗೆ, "ಬೇಱಾದರ್ ದ್ವಿಜರುಂತೇಂ ಬೇಱುಂಟೆ ಮನುಷ್ಯಜಾತಿ ತಾನೊಂದೆ ವಲಂ" ಎಂಬುದೂ ಪಂಪನೇ ಸ್ವತಃ ಮಾಡಿಕೊಂಡ ಅಭಿಪ್ರಾಯವೂ ಅಲ್ಲ. ಪಂಪನ ಆದಿಪುರಾಣದ ಆಕರವಾದ ಜಿನಸೇನಾಚಾರ್ಯರ ಮಹಾಪುರಾಣದ (ಪೂರ್ವಪುರಾಣ/ಆದಿಪುರಾಣ) 38ನೆಯ ಅಧ್ಯಾಯದ ಈ ಕೆಳಗಿನ ಶ್ಲೋಕಗಳನ್ನು ಗಮನಿಸಬಹುದು (ಬ್ರಾಕೆಟ್ಟಿನಲ್ಲಿ ಅದರ ಸ್ಥೂಲ ಅರ್ಥವನ್ನೂ ವಿವರಿಸಿದ್ದೇನೆ - ಪಂಪನು ತನ್ನ ಆದಿಪುರಾಣದಲ್ಲೂ ಇದೇ ಅಭಿಪ್ರಾಯವನ್ನೇ ಯಥಾವತ್ತಾಗಿ ತಂದಿದ್ದಾನೆ ):

ವಿಶುದ್ಧಾ ವೃತ್ತಿರೇವೈಷಾಂ ಷಟ್ತಯೋಷ್ಟಾ ದ್ವಿಜನ್ಮನಾಂ

ಯೋऽತಿಕ್ರಾಮೇದಿಮಾಂ ಸೋऽಜ್ಞೋ ನಾಮ್ನೈವ ನ ಗುಣೈರ್ದ್ವಿಜಃ ||42||

(ಮೇಲೆ ಹೇಳಿದ ಷಟ್ಕರ್ಮಗಳು (ಪೂಜಾ, ದಾನ, ಸ್ವಾಧ್ಯಾಯ, ಇತ್ಯಾದಿ) ದ್ವಿಜರಿಗೆ ಆಚರಣೀಯ.  ಇವನ್ನು ಅತಿಕ್ರಮಿಸುವ ಅಜ್ಞನು ಕೇವಲ ಹೆಸರಿಗಷ್ಟೇ ದ್ವಿಜನಾಗಿರುತ್ತಾನೆ, ಗುಣದಿಂದಲ್ಲ)

ತಪಃ ಶ್ರುತಂಚ ಜಾತಿಶ್ಚ ತ್ರಯಂ ಬ್ರಾಹ್ಮಣ್ಯಕಾರಣಮ್

ತಪಶ್ರುತಾಭ್ಯಾಂ ಯೋ ಹೀನೋ ಜಾತಿಬ್ರಾಹ್ಮಣ ಏವ ಸಃ ||43||

(ತಪಸ್ಸು, ಶಾಸ್ತ್ರಜ್ಞಾನ ಮತ್ತು ಜಾತಿ ಇವು ಮೂರು ಬ್ರಾಹ್ಮಣ್ಯಕ್ಕೆ ಕಾರಣಗಳು.  ತಪಸ್ಸು ಮತ್ತು ಶಾಸ್ತ್ರಜ್ಞಾನವಿಲ್ಲದಾತ ಕೇವಲ ಜಾತಿಬ್ರಾಹ್ಮಣನಷ್ಟೇ)

ಮನುಷ್ಯಜಾತಿರೇಕೈವ ಜಾತಿನಾಮೋದಯೋದ್ಭವಾ

ವೃತ್ತಿಭೇದಾಹಿತಾದ್ಭೇದಾಚ್ಚಾತುರ್ವಿಧ್ಯಮಿಹಾಶ್ನುತೇ ||45||

(ಮೂಲತಃ ಮನುಷ್ಯಜಾತಿಯೊಂದೇ, ಆದರೆ ಜೀವನೋಪಾಯಕ್ಕಾಗಿ ಮಾಡುವ ನಾಲ್ಕು ವಿಧದ ಕರ್ಮಗಳಿಂದಾಗಿ ಅದು ನಾಲ್ಕು ವಿಧದ ಜಾತಿಯಾಗಿ ಪರಿಣಮಿಸುತ್ತದೆ)

ಬ್ರಾಹ್ಮಣಾ ವ್ರತಸಂಸ್ಕಾರಾತ್ ಕ್ಷತ್ರಿಯಾಃ ಶಸ್ತ್ರಧಾರಣಾತ್

ವಣಿಜೋಽರ್ಥಾರ್ಜನಾನ್ಯಾಯಾಚ್ಛೂದ್ರಾನ್ಯಗ್ವೃತ್ತಿಸಂಶ್ರಯಾತ್ ||46||

(ವ್ರತಸಂಸ್ಕಾರದಿಂದ ಬ್ರಾಹ್ಮಣ, ಶಸ್ತ್ರಧಾರಣದಿಂದ ಕ್ಷತ್ರಿಯ, ನ್ಯಾಯಬದ್ಧವಾದ ಧನಾರ್ಜನದಿಂದ ವೈಶ್ಯ ಮತ್ತು ಇತರ ವೃತ್ತಿಗಳಿಂದ ಶೂದ್ರ - ಹೀಗಾಗುತ್ತದೆ).

ದ್ವಿರ್ಜಾತೋ ಹಿ ದ್ವಿಜನ್ಮೇಷ್ಟಃ ಕ್ರಿಯಾತೋ ಗರ್ಭತಶ್ಚ ಯಃ

ಕ್ರಿಯಾಮಂತ್ರವಿಹೀನಸ್ತು ಕೇವಲಂ ನಾಮಧಾರಕಃ ||48||

(ದ್ವಿಜನೆಂದರೆ ಎರಡು ಜನ್ಮ ತಾಳಿದವನು - ಗರ್ಭದಿಂದ ಮೊದಲನೆಯ ಜನ್ಮ, ಕ್ರಿಯೆಯಿಂದ (ಸಂಸ್ಕಾರದಿಂದ) ಎರಡನೆಯದು.  ಕ್ರಿಯಾಮಂತ್ರವಿಹೀನನಾದ ಬ್ರಾಹ್ಮಣನು ಕೇವಲ ಹೆಸರಿಗಷ್ಟೇ ಬ್ರಾಹ್ಮಣನಾಗಿರುತ್ತಾನೆ)

ನೆನಪಿರಲಿ, ಮೇಲಿನ ಯಾವ ಉಲ್ಲೇಖಗಳೂ ವೈದಿಕ ಉಲ್ಲೇಖಗಳಲ್ಲ, ಸ್ವತಃ ಪಂಪನೇ ಆಕರವಾಗಿರಿಸಿಕೊಂಡಿರುವ ಜೈನರ ಪವಿತ್ರಗ್ರಂಥವಾದ ಮಹಾಪುರಾಣದ್ದು.  ಆದರೆ ಇವನ್ನು ನೋಡಿದಾಗ, ವೈದಿಕವಲಯದಿಂದ ಈ ಕೆಳಕಂಡ ಶ್ಲೋಕಗಳೂ ನೆನಪಾದರೆ ಅದು ಅಸಹಜವಲ್ಲ:

ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ

ವೇದಜ್ಞಾನೇನ ವಿಪ್ರತ್ವಂ ಬ್ರಹ್ಮಜ್ಞಾನೇನ ಬ್ರಾಹ್ಮಣಃ

(ಹುಟ್ಟುವಾಗ ಎಲ್ಲರೂ ಶೂದ್ರರಿರುತ್ತಾರೆ, ಉಪನಯನಸಂಸ್ಕಾರದಿಂದ ದ್ವಿಜರೆನಿಸಿಕೊಳ್ಳುತ್ತಾರೆ, ವೇದಜ್ಞಾನದಿಂದ ವಿಪ್ರರಾಗುತ್ತಾರೆ, ಬ್ರಹ್ಮಜ್ಞಾನದಿಂದ ಬ್ರಾಹ್ಮಣರಾಗುತ್ತಾರೆ)

ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ (ಭಗವದ್ಗೀತಾ)

(ಗುಣಕರ್ಮವಿಶೇಷಗಳಿಗನುಗುಣವಾಗಿ ನಾಲ್ಕು ವರ್ಣಗಳು ನನ್ನಿಂದ ಸೃಷ್ಟಿಸಲ್ಪಟ್ಟಿವೆ)

ಶೂದ್ರೇಣ ಹಿ ಸಮಸ್ತಾವತ್ ಯಾವದ್ವೇದೇ ನ ಜಾಯತೇ (ಮನುಸ್ಮೃತಿ)

ಉಪನಯನವೇ ಮೊದಲಾದ ದ್ವಿಜಸಂಸ್ಕಾರಗಳಾಗುವವರೆಗೆ ಎಲ್ಲರೂ ಶೂದ್ರರೇ.

ಈ ಕೊನೆಯ ಮೂರು ಉಲ್ಲೇಖಗಳನ್ನು ನೋಡಿದ ಮೇಲೆ, ಇದುವರೆಗೆ ಮಹಾನ್ ಮಾನವತಾವಾದಿಯಾಗಿದ್ದ ಪಂಪನೂ ಇದ್ದಕ್ಕಿದ್ದಂತೆ ವೈದಿಕವಾದಿ, ಬ್ರಾಹ್ಮಣವಾದಿ, ಭಗವದ್ಗೀತಾವಾದಿ, ಮನುವಾದಿ ಹೀಗೆಲ್ಲ ಕಾಣತೊಡಗಿದರೆ ತಪ್ಪು ನನ್ನದಲ್ಲ.  ನಮಗಂತೂ "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ" - ಆವಗಂ!!!

Wednesday, January 5, 2022

ಮುದ್ದಣಮನೋಲಹರಿ

ಮುದ್ದಣನಿಗೂ ಮನೋರಮೆಗೂ ಒಂದೇ ಜಗಳ , ವಿಳ್ಳೇದೆಲೆ ವಿಷಯಕ್ಕೆ.  ಕೊಡಲೇ ಇಲ್ಲವೆಂದು ಇವನು, ಹತ್ತು ಕೊಟ್ಟಿದ್ದೇನೆಂದು ಅವಳು.  

ಅದು ಹೀಗಾಯ್ತು.  ಅರಮನೆಯಿಂದ ರಾಜಮರ್ಯಾದೆ ಹೊತ್ತು ದಣಿದು ಬಂದ ಗಂಡನಿಗೆ ಕಾಲಿಗೆ ನೀರಿತ್ತು, ಕೈಹಿಡಿದು ಒಳಚೌಕಿಗೆ ಕರೆದೊಯ್ದು, ಮಣೆಯ ಮೇಲೆ ಕುಳ್ಳಿರಿಸಿ ಸೊಗಸಾದ ಹಣ್ಣುಗಳನ್ನು ತಿನ್ನಲಿತ್ತು, ಕೆನೆ ಹಾಲನ್ನು ಕುಡಿಯಲಿತ್ತು, ಬಳಿಯಲ್ಲೇ ಕುಳಿತು ನರುದಂಬುಲವನ್ನು ಮಡಚಿಕೊಡುತ್ತಾ ಅವನು ಹೇಳುವ ನಲ್ಗತೆಯನ್ನು ಆಲಿಸುವುದು ಮನೋರಮೆಯ ವಾಡಿಕೆ.  ಇಂದೂ ಆದದ್ದು ಅದೇ.  ಆದರೆ ಕತೆ ಕೇಳುವ ಭರದಲ್ಲಿ ಅವಳು ತಂಬುಲವನ್ನು ಕೊಡಲೇ ಇಲ್ಲವೆಂಬುದು ಮುದ್ದಣನ ವಾದ, ಇಲ್ಲ, ಕೊಟ್ಟಿದ್ದೇನೆಂದರೆ ಕೊಟ್ಟಿದ್ದೇನೆ ಎಂದು ಇವಳ ವಾದ.  ಇರಲಿ ಇದನ್ನು ನಮ್ಮ ಬಡನುಡಿಯಲ್ಲಿ ವರ್ಣಿಸಿ ಕೆಡಿಸುವುದೇಕೆ?  ಬನ್ನಿ ಅದೇನು ಕಲಹವೋ ಅಲ್ಲಿಯೇ ನೋಡೋಣ:

***

ಮುದ್ದ: ದೇವೀ

ಮನೋ: ಆಂ?

ಮುದ್ದ: ಕತೆ ನಿನಗೆ ಸೊಗಮೆನಿಸಿರ್ಪುದೇಂ?

ಮನೋ: ಅಲ್ತೇಂ?  ಬಲ್ಸೊಗಸು ಕಣಾ ನೀಂ ಕತೆವೇೞ್ವ ಮೊಗಸು.

ಮುದ್ದ: ಅಕ್ಕಕ್ಕು ರಮಣೀ.  ಅಂತಾ ಮಾತೀಗಳೆಮ್ಮ ಮನಕಂ ಬಂದುದೈಸೆ.

ಮನೋ: ಅಂತೇಕೆನುವಯ್?

ಮುದ್ದ: ಮತ್ತೇವೇೞ್ವೆನ್? ಕತೆಗೇಳ್ವೊಂದು ಮನಮರೆವಿನೊಳೆನ್ನ ನಿಚ್ಚದ ಮೆಚ್ಚಿನ ನಱುದಂಬುಲಕಂ ಸೊನ್ನೆಸುತ್ತಿರ್ದಪೆಯಲ್ತೇ?

ಮನೋ: ಮನಮರೆವೇಂ? ಏವಾತೋ?  ಆಂ ಸೊನ್ನೆಸುತ್ತಿದೆನ್?

ಮುದ್ದ: ಮತ್ತೇಂ?  ತಂಬುಲಮೆಲ್ಲೇ?

ಮನೋ: ಎಲ್ಲೆಂಬೆಯೇಂ?  ನಿನ್ನ ಗಡಿಗೆವೊಟ್ಟೆಯೊಳ್.  ಒಂದೆರೞ್ಮೂರೋರಂತೆ ಪತ್ತು ತಂಬುಲಮಂ ಮಡಿದಿತ್ತೆನೈಸೆ? 

ಮುದ್ದ:  ಪತ್ತು? ಎಂದೇ?  ಎನಗೇಂ?

ಮನೋ: ಆಂ, ಪತ್ತು - ಒಂದೆರೞ್ಮೂರ್ನಾಲ್ಕೈದಾರಲ್ತು, ಪತ್ತು, ಪತ್ತು; ಇಂದೇ, ಈಗಳೇ, ನಿನಗೇ.  

ಮುದ್ದ: ಓವೋ, ನೀಂ ಬಲ್ಗಡಸುಗಾರ್ತಿಯೈಸೆ!  ನಡುವೊಳ್ ಪುಸಿ ಸೊಗಸಕ್ಕುಂ, ನುಡಿಯೊಳಲ್ತು.

ಮನೋ: ಆ?  ಆಂ ಪುಸಿವೆನೇಂ?  ಒಂದಾದುದೆರೞ್ಮೂರಾದುದು, ಪತ್ತುಂ ವೀಳಯಮನೆಡೆವಿಡದೆ ತಡೆಯಿಡದೆ ಮೆದ್ದುದಿಲ್ಲಾ?  ನೀನೇಂ ಗಂಡನೆಯೋ ತೊಂಡುಮೇಂಕೆಯೋ?

ಮುದ್ದ: ಪುಸಿಯಲ್ಲದೇಂ ದಿಟಮೇ?  ಕತೆವೇಳ್ವೊಂದುದ್ಯಮದೊಳ್ ಬಾಯಾಱಿವಂದೊಡಂ ತೆಱೆವಾಯ್ಮುಚ್ಚಿರ್ದೆನಿಲ್ಲ.  ಪತ್ತುಂ ವೀಳಯಂ ಮೆದ್ದೆನ್?

ಮನೋ: ಅವ್ವೀ!  ಏವೇಳ್ವಯ್?  ನಿನ್ನೊಳಾವ ಬೂತುವೊಕ್ಕಿದುದೋ? ಕತೆವೇಳ್ವೆಡೆಯೆಡೆಯೊಳ್ ತಂಬುಲಮಂ ಮಡಿಮಡಿದು, ಎನ್ನ ರಸಿಕರಾಜಂಗೆ ನಲ್ವೆಚ್ಚನೀವೊಂದು ಪಾಂಗಿನೊಳಾನೆ ತುಟಿಯೊಳ್ವಿಡಿದು ಬಾಯ್ಗಿತ್ತೆನಿಲ್ಲಾ? 

ಮುದ್ದ:  (ನೆನಪಿನಿಂದೆ) ಆಂ!  ಅಂತುವೇೞ್!  ಅಂತುವೇೞ್!

ಮನೋ: ಏಂ? ನೆನವಾದುದೋ?

ಮುದ್ದ: ಅಪ್ಪುದು!  ಕತೆಗೇಳ್ವೆಡೆಯೆಡೆಯೊಳ್ ಸೊಗವರಿದಿರೆ, ರಸಿಕತೆವಿಕ್ಕಿರೆ, ಚೆಂಗದಪಿನ ಚೆಲುನಗೆವೆರಸು ನೀಂ ತಂಬುಲಮಂ ಮಡಿದುದು ದಿಟಂ

ಮನೋ: (ಗೆಲ್ದ ಸಂತಸದಿಂದೆ) ಹಾಂ!  ಅಂತೆವೇೞ್!

ಮುದ್ದ: ಮಡಿದುದಂ ನಿನ್ನ ತುಟಿಯೊಳಿಟ್ಟುದುಂ ಸಚ್ಚಂ

ಮನೋ: (ಕಾತರದಿಂದೆ) ಮುಂದೆ, ಮುಂದೆ?

ಮುದ್ದ: ಸರಸದಿಂ ಅದನೆನ್ನ ಬಾಯ್ವೞಿಗೆ ತಂದುದುಂ ದಿಟಮೇ

ಮನೋ: (ಉದ್ವೇಗದಿಂದೆ) ಮತ್ತಂ?  ಪೇೞ್ ಪೇೞ್

ಮುದ್ದ: ಮತ್ತೇವೇೞ್ವೆಂ?  ಆದೊಡದಂ ನೀನೆನ್ನ ಬಾಯ್ಗಿತ್ತುದಿಲ್ಲಂ!

ಮನೋ: (ಅಚ್ಚರಿಯಿಂದೆ) ಆಂ?  ಮತ್ತೇಗೆಯ್ದೆನೋ!

ಮುದ್ದ: (ಪುಸಿಗೋವದಿಂದೆ) ಏಗೆಯ್ದೆಯೇಂ? ಅದನಿತುಮಂ ನೀನೆ ಮೆಯ್ದೆಯಲ್ತೆ?  ಅಟ್ಟಡುಗೆಯಂ ಕುಡದೆ ತಾನುಣ್ಬ ತಿನಿವೆಂಡಿರೊಲ್!  ಬಯಸಿ ಬಾಯ್ವಿಟ್ಟುದನಿತೆಯೆಮಗೊದವಿದ ಭಾಗ್ಯಂ!

ಮನೋ: (ಬಿಲ್ಲುಂಬೆಱಗಾಗಿ) ಅವ್ವಯ್ಯಾ! ಇದೇಂ ಗಡಸೋ! ಇದೇಂ ಗಟ್ಟಿಗಾಱತನಮೋ! ಸೆಱಗಿಲ್ಲದೆ ಪುಸಿವದಟೋ! ಪುಸಿನುಡಿವೊಂದುಪಾಂಗು ಇಂತುಮಿರ್ಕುಮೆ!  ಹಾ ಗೌರೀ! ಇನಿತುಂ ಭಂಡುಳ್ಳ ಗಂಡನೊಡನೆಂತು ಬಾಳಂಗೆಯ್ವೆಂ! 

ಮುದ್ದ: ಏವೆಣ್ಣೆ?  ಆಗಳಿಂ ನೋಳ್ಪೆಂ. ಆಂ ಗಡಸುಗಾಱಂ ಗಡ!  ಪುಸಿವಂ ಗಡ! ಭಂಡಂ ಗಡ! ತೊಂಡಂ ಮೇವ ಮೇಂಕೆಗಡ!  ತಂಬುಲಮನಾರ್ ಮೆದ್ದರ್ ಈಗಳೆ ನೋಳ್ಪಂ.   ಆರ ತುಟಿಯೊಳ್ ರಂಗುವೆರ್ಚಿರ್ಪುದೋ ರನ್ನಗನ್ನಡಿಯೊಳೆ ಕಾಣ್ಬಂ.

ಮನೋ: ಪೋ!  ಇದೇತಱ ಮಾತಯ್?  ಬೊಮ್ಮನಿತ್ತ ಸಾಜದ ತುಟಿಗೆಂಪಂ ತಂಬುಲಗೆಂಪಿಂಗೆತ್ತುವುದೇವಾತೋ? 

ಮುದ್ದ: ಅಂತೇಂ?  ಅಂತಪ್ಪೊಡಾ ಚೆಂದುಟಿಯ ಕೆಂಪೆನಿತು ಸಾಜಮೊ ತುಟಿಯನೆ ಕೇಳ್ವಂ (ಬೞಿಸಾರ್ದು ಮೊಗವಿಡಿವನ್)

ಮನೋ: (ಬೆರ್ಚುತ್ತುಂ, ನಾಣ್ಚುತ್ತುಂ, ಕೊಸಱುತ್ತುಂ) ಓ ಇದೇಂ ಮಾೞ್ಪಯ್! ಬಿಡು ಬಿಡು! ನಡುವಗಲ್, ಪಿರಿಯರ್ ನೋಳ್ಪರಿಲ್ಲಾ?  ಇದೇನೀ ನಾಣಿಲಿಗೆಯ್ತಂ! ಮಾಣ್ ಮಾಣ್!

ಇಂತು "ಮಾಣ್ಮಾಣೆಂಬೊಂದು ನೆವದಿಂದೊಚ್ಚತಮುಣ್ಮುವ ಕಾಮಿನಿಯ ಕಂಠರುತಿಯ ಹೂಂಕೃತಿಯುಪಚಾರಮಾಗೆ ತುಂಬುಂಗೊಡನೊಳಿಟ್ಟೊಂದು ನುಣ್ಮೞಲ್ವರಲಿಂ ಪುಟ್ಟುವ ಕುಳ್ಕುಳೆಂಬ ಮೆಲ್ಲುಲಿಯ ಪಾಂಗಿನಿಂ ಕಂಠಮೂಲದೊಳಡಿಗಡಿಗೆ ಕಳಕಳನಾದಮೊದವೆ ಮುಂಬಲ್ಗಳಿಂ ಮೆಲ್ಲನೆ ಕರ್ಚಿಯುಂ, ತನಿರಸಂ ಸೋಱುವನ್ನಂ..."

***

ಸಾಕು ಬನ್ನಿ, ಇನ್ನು ನಾವಲ್ಲಿರುವುದು ತರವಲ್ಲ.  ನೀವೂ ಸರಿ, ಅಲ್ಲೇ ಖುರ್ಚಿ ಹಾಕಿಕೊಂಡು ಕೂತೇ ಬಿಡುವುದೇ?  ಅವರಷ್ಟಕ್ಕೆ ಅವರನ್ನು ಬಿಟ್ಟು ನಮ್ಮ ಕೆಲಸ ನೋಡೋಣ.  ಅಂದಹಾಗೆ, ಎಲ್ಲರ ಕನ್ನಡದ ಜಗಳ ಏನಾಯ್ತು?

ವಿ.ಸೂ:  

ಬೇರೇನನ್ನೋ ಗಂಭೀರವಾಗಿ ಬರೆಯಲು ಹೊರಟದ್ದು - ಸಂಸ್ಕೃತವಿಲ್ಲದ ಕನ್ನಡವೆಂದರೆ ಅದನ್ನು ವಿಕಾರ ಮಾಡಲೇಬೇಕೆಂದಿಲ್ಲ ಎಂದೇನೋ ಹೇಳುತ್ತಾ, ಕನ್ನಡ-ಸಂಸ್ಕೃತ-ಸಂಸ್ಕೃತವಿಲ್ಲದ ಹಳಗನ್ನಡ, ಚೆಲುಗನ್ನಡ ಹೀಗೆ ಲೇಖನವೊಂದನ್ನು ಬರೆಯಹೊರಟೆ.  ಮುದ್ದಣ ಮನೋರಮೆಯರ ಉದಾಹರಣೆಯೊಂದಿಗೆ ಶುರುಮಾಡಿದರೆ, ಅದು ತನ್ನಷ್ಟಕ್ಕೇ ಚೆಲುವಾದೊಂದು ಲಹರಿಯಾಗಿ ಬೆಳೆಯತೊಡಗಿತು.  ಬರೆಯಬೇಕೆಂದಿದ್ದ ವಿಷಯವನ್ನು ಪಕ್ಕಕ್ಕಿಟ್ಟು ಲಹರಿಯನ್ನು ಬೆಳೆಯಲು ಬಿಟ್ಟೆ - ಇಷ್ಟಾಯ್ತು.

ಅಂದ ಹಾಗೆ, ಇದು ಮುದ್ದಣನ ಬರಹವಲ್ಲ - ಹಿನ್ನೆಲೆ ಮುದ್ದಣನದ್ದು, ಮುದ್ದಣಮನೋರಮೆಯರ ಅಂತರಂಗಕ್ಕಿಳಿದಾಗ ಹೊರಟ ಸಂಭಾಷಣೆ ನನ್ನದೇ ಲಹರಿ.   "***" ಚಿಹ್ನೆಯ ಮೇಲಿರುವ ಕೊನೆಯ ಪ್ಯಾರಾ ಮಾತ್ರ (ಮಾಣ್ಮಾಣೆಂಬೊಂದು ನೆವದಿಂದೊಚ್ಚತಮುಣ್ಮುವ...") ಮುದ್ದಣನದು, ರಾಮಾಶ್ವಮೇಧದ ಅಷ್ಟಮಾಶ್ವಾಸದ ಒಂದು ಭಾಗ.

Wednesday, December 29, 2021

ಮಾತೆಂಬ ಜ್ಯೋತಿರ್ಲಿಂಗ

ಬಹಳ ಕಾಲ ಇದರ ಬಗ್ಗೆ ಬರೆಯಬೇಕೆಂದು ಯೋಚಿಸುತ್ತಿದ್ದೆ.  ಹಂಸಲೇಖ ಬಿರುದಾಂಕಿತರಾದ ಶ್ರೀಮಾನ್ ಗಂಗರಾಜು ಅವರು ಮೊನ್ನೆ ಈ ವಚನವನ್ನು ತಮ್ಮ ಸಮರ್ಥನೆಗೆ ಬಳಸಿಕೊಂಡ ರೀತಿ ನೋಡಿ ಬರೆಯಲೇಬೇಕೆಂಬ ಒತ್ತಡ ಮೂಡಿತು. 

ಅವರೇನೋ ಮುತ್ತಿನ ಹಾರದಂತಿರಬೇಕು ಎಂದು ಮಾತಾಡತೊಡಗಿದರೆ (ಬರೆದುಕೊಂಡು ಬಂದಿಲ್ಲದುದರಿಂದ) ಏನೇನೋ ಆಗಿ, ಅದರೊಳಗಿನ ಮಾಣಿಕ್ಯದ ದೀಪ್ತಿ, ಸ್ಫಟಿಕದ (ಸತ್ಯದ) ಸಲಾಕಿಗಳೆಲ್ಲ ಕಂಡುಬಿಟ್ಟುವಂತೆ - ಅದೇ, ವಯೋವೃದ್ಧ ದಿವಂಗತ ಸನ್ಯಾಸಿಯೊಬ್ಬರ ಆಹಾರಕ್ರಮದ ಬಗ್ಗೆ ಕೆಲದಿನಗಳ ಹಿಂದೆ ಲೇವಡಿ ಮಾಡಿದ್ದ ವಿಷಯ ಅವರು ಹೇಳಿದ್ದು.  ಆ ವಿಷಯಕ್ಕಾಗಲೀ, ಅವರ ಮಾಲುಬಾಲು ಸಾಹಿತ್ಯಕ್ಕಾಗಲೀ 'ಅಹುದಹುದು' ಎಂದು ತಲೆಹಾಕುವ ಲಿಂಗ ಯಾವುದೋ ನಮಗೆ ತಿಳಿಯದು.  ಆದರೆ ವಚನದಲ್ಲಿ ಬಸವಣ್ಣನವರು ನಿರ್ದೇಶಿಸಿದ 'ಅಹುದಹುದೆ'ನ್ನುವ ಲಿಂಗ ಮಾತ್ರ ಆ ಲಿಂಗವಲ್ಲವೆಂಬುದು ನಮ್ಮ ಅರಿವು.  ಅದೇನೇ ಇರಲಿ, ಈ ನೆಪದಲ್ಲಾದರೂ ಈ ಉಜ್ವಲವಾದ ವಚನವನ್ನೊಮ್ಮೆ ಮತ್ತೆ ಮನನ ಮಾಡಿಕೊಳ್ಳಬಹುದಾದರೆ ಅದು ಒಳ್ಳೆಯದೇ ಅಲ್ಲವೇ?  ಅದಕ್ಕಾಗಿ ಗಂಗರಾಜರಿಗೆ ನಮ್ಮ ಕೃತಜ್ಞತೆ ಸಲ್ಲಲೇಬೇಕು.

ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕದ ದೀಪ್ತಿಯಂತಿರಬೇಕು. ನುಡಿದಡೆ ಸ್ಫಟಿಕದ ಶಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯಾ.

ಅಣ್ಣನವರ ಈ ಸುಪ್ರಸಿದ್ಧವಚನವನ್ನು ಕೇಳದವರಾರು?  ಅದನ್ನು ಉದಾಹರಿಸದ ಹಿರಿಯರಿಲ್ಲ, ತಮ್ಮ ಮಾತಿನಲ್ಲಿ ಬಳಸಿ ಟೀಆರ್ಪಿ ಬೇಳೆ ಬೇಯಿಸಿಕೊಳ್ಳದ ಸಾಹಿತಿ-ರಾಜಕಾರಣಿಯಿಲ್ಲ.  ಮಹಾಜ್ಞಾನಿಗಳಿಂದ ಹಿಡಿದು ಅಪಾಪೋಲಿಗಳವರೆಗೆ ಎಲ್ಲರಲ್ಲೂ ಅವರವರದೇ ಕಾರಣಗಳಿಗಾಗಿ ಜನಪ್ರಿಯವಾದ ವಚನವಿದು.  ಆದರೆ ಇದರ ತಾಕತ್ತು ನೋಡಿ - ಬಳಸಿದವರು ಯಾರೇ ಇರಲಿ, ಯಾವ ಗದ್ದಲದೊಡನೆಯೇ ಬಳಸಿರಲಿ, ಆ ಗದ್ದಲವನ್ನೂ ಮೀರಿ ಪ್ರಜ್ಞೆಯನ್ನು ತಟ್ಟುತ್ತದೆ, ಅದರ ಉಜ್ವಲಪ್ರಭೆ ಕಣ್ಸೆಳೆಯುತ್ತದೆ - ಏಕೆಂದರೆ "ಮಾತೆಂಬುದು ಜ್ಯೋತಿರ್ಲಿಂಗ" ಎಂಬ ಹಿರಿಯರಿವಿನಿಂದ ಬಂದ ಕಾಣ್ಕೆ ಅದು, ಸ್ವಯಂಪ್ರಕಾಶವುಳ್ಳದ್ದು, ಸ್ವಯಂಪಾವಿತ್ರ್ಯವುಳ್ಳದ್ದು.  ಅದಕ್ಕೇ ಎಂತಹ ನಾಲಿಗೆಯ ಮೇಲೇ ನಲಿದರೂ ಅದರ ತೇಜ ಮಸಗುವುದಿಲ್ಲ, ಚುರುಕು ಕುಂದುವುದಿಲ್ಲ.   ಬದಲಿಗೆ ಹಲವರನ್ನು ಚಿಂತನೆಗೆ ಹಚ್ಚುತ್ತದೆ, ಹಲವು ಪ್ರಜ್ಞೆಗಳಲ್ಲಿ ಪ್ರತಿಫಲಿಸುತ್ತದೆ, ಪ್ರಜ್ವಲಿಸುತ್ತದೆ.

ಈ ವಚನದ ಸೊಗಸನ್ನು ನೋಡಿ.  ಒಂದು ನುಡಿ - ಅದು ಹೇಗಿರಬೇಕೆಂಬುದಕ್ಕೆ ಹಲವು ಉಪಮೆಗಳು, ಸೋಪಾನಕ್ರಮದಲ್ಲಿ ಒಂದು ಇನ್ನೊಂದಕ್ಕಿಂತ ಉಜ್ವಲಗೊಳ್ಳುತ್ತಾ ಹೋಗಿ ಕೊನೆಗೆ ಅತ್ಯುನ್ನತವಾದ ಪರಿಣಾಮದಲ್ಲಿ ವಿಶ್ರಾಂತಿ ಹೊಂದುತ್ತದೆ.  ಒಂದು ವಾಕ್ಯವನ್ನೋ ಪದವನ್ನೋ ಅಕ್ಷರವನ್ನೋ ತೆಗೆದು ಹಾಕುವಂತಿಲ್ಲ - ವಚನಗಳ ಸೊಗಸೇ ಹಾಗೆ.  ಅದರಲ್ಲೂ ಈ ವಚನವಂತೂ ಸ್ವೋಪಜ್ಞವಾದುದು, ತನ್ನ ಮಾತಿಗೆ ತಾನೇ ಉದಾಹರಣೆಯಾಗಿ ನಿಲ್ಲುವಂಥದು.

ಅಣ್ಣನವರ ಈ ವಚನವನ್ನು ಪರಿಭಾವಿಸುವುದಕ್ಕೂ ಮುಂಚೆ, ಆ ವಚನ ನಮ್ಮ ಮುಂದಿಡುವ ಪ್ರಶ್ನೆಯನ್ನು ಮೊದಲು ಗಮನಿಸಬೇಕು.  ಈ ವಚನ ಹೇಳುತ್ತಿರುವುದು "ನುಡಿದರೆ" ಹೇಗಿರಬೇಕು ಎಂಬುದನ್ನು ಕುರಿತು ತಾನೆ?  ನುಡಿದರೆ - ನುಡಿ ಹೀಗಿರಲು ಸಾಧ್ಯವಿಲ್ಲದಿದ್ದರೆ?  ಈ ವಿಷಯದಲ್ಲಿ ವಚನದ್ದು ದಿವ್ಯಮೌನ.  ಆ ಮೌನವೇ ಆ ಪ್ರಶ್ನೆಗೆ ಉತ್ತರ - ಸಾಧ್ಯವಿಲ್ಲದಿದ್ದರೆ? ತೆಪ್ಪಗಿರು.  ಒಂದರ್ಥದಲ್ಲಿ ಈ ವಚನವು ಆಡಿ ತೋರಿಸಿರುವುದಕ್ಕಿಂತ ಆಡದೇ ತೋರಿಸಿರುವುದೇ ಅಗಾಧವಾದದ್ದು - ಅದನ್ನರಿಯದೇ ವಚನ 'ಆಡಿದ್ದನ್ನು' ಮಾತ್ರ ವಿಶ್ಲೇಷಿಸುವುದು ಮೂರ್ಖತನವೇ ಸರಿ.  ಅಲ್ಲಮ ಒಂದೆಡೆ ಹೇಳುತ್ತಾನಲ್ಲ "ಅರಿಯಬಾರದ ಘನವನರಿತವರು ಅರಿಯದಂತಿಪ್ಪರು" - ಏಕೆಂದರೆ ಅದು ಮಾತಿಗೆ ಮೀರಿದ್ದು, ಹೇಳುವುದಕ್ಕೂ ಕೇಳುವುದಕ್ಕೂ ಅದು ಸಂದರ್ಭವೇ ಅಲ್ಲ. ಇದೇ ಅಲ್ಲಮಪ್ರಭುದೇವರು ಇನ್ನೊಂದು ಕಡೆ ಹೇಳುತ್ತಾರೆ "ವಾಕಿನಿಂ ಪರಬ್ರಹ್ಮವ ನುಡಿವ ಕುತರ್ಕಿಗಳೆಡೆಯಲ್ಲಿ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು" 

ಇದು ಅರಿತವರ ಮಾತಾಯಿತು; ಇನ್ನು ಅರಿಯದವರೋ?  ಅಲ್ಲಿ ಮಾತಿಗೆ ಕೆಲಸವೇ ಇಲ್ಲ.  ಬಾಯಿಬಿಟ್ಟು ಬಣ್ಣಗೇಡಾದರೆ ಪ್ರಯೋಜನವೇನು?  ತುಂಬಿದ ಕೊಡ ತುಳುಕುವುದಿಲ್ಲ, ಬರಿಗೊಡಗಳೂ ತುಳುಕುವುದಿಲ್ಲವಷ್ಟೇ? ಒಂದು ಹಳೆಯ ಜೋಕ್ ನೆನಪಾಗುತ್ತದೆ - I know only my mother tongue but I can keep shut in ten other languages (ನನಗೆ ನನ್ನ ತಾಯ್ನುಡಿಯಷ್ಟೇ ಗೊತ್ತು, ಆದರೆ ಇನ್ನೂ ಹತ್ತು ಭಾಷೆಗಳಲ್ಲಿ ನಾನು ತೆಪ್ಪಗಿರಬಲ್ಲೆ).  ಹೀಗೆ ತೆಪ್ಪಗಿದ್ದುಬಿಡುವುದೇ ಅನೇಕವೇಳೆ ಘನತೆಯನ್ನು ತಂದು ಕೊಡುತ್ತದೆ.  ತೆಲುಗಿನಲ್ಲಿ ಒಂದು ಗಾದೆಯಿದೆ - "ಅಯ್ಯವಾರಿಕಿ ಜ್ಞಾನಮೂ ಲೇದು ಗರ್ವಮೂ ಲೇದು" - ಜ್ಞಾನಮು ಲೇಕಪೋತೆ ಏಮಿ, ಗರ್ವಮು ಲೇದು ಕಾದಾ? (ಜ್ಞಾನವಿಲ್ಲದಿದ್ದರೆ ಏನು, ಗರ್ವವಂತೂ ಇಲ್ಲವಲ್ಲ) ಎಂದು ಸಮಾಧಾನಪಟ್ಟುಕೊಳ್ಳಬಹುದಲ್ಲ.  ಇಷ್ಟಕ್ಕೂ ಕೊಡದ ಖಾಲಿತನ ಹೀನಾಯವೇನಲ್ಲ.  ಖಾಲಿಯಾಗುವುದೇ ತುಂಬಿಸುವುದರ ಮೊದಲ ಹೆಜ್ಜೆ - ಖಾಲಿಯಿದ್ದೇನೆಂಬ ಅರಿವು ಇದಕ್ಕೆ ಸಾಧಕ.  ಆದರೆ ಆ ಅರಿವು ಕೀಳರಿಮೆಯಾದರೆ ಮಾತ್ರ ಮಹಾಕಷ್ಟ.  ಖಾಲಿ ಕೊಡವನ್ನು ನೀರಿಗೊಯ್ಯಬೇಕು, ನೀರು ಸದ್ದಿಲ್ಲದೇ ಒಳತುಂಬುತ್ತಿದ್ದರೆ ಒಳಗಿನ ಗಾಳಿ ಸದ್ದಿಲ್ಲದೇ ಇನ್ನೊಂದು ಬದಿಯಿಂದ ಹೊರಹೋಗಬೇಕು - ಆಗ ಆ ಕೊಡ ಖಾಲಿಯಿದ್ದಾಗಲೂ ತುಂಬಿದ ಮೇಲೂ ತುಳುಕದೇ ಉಳಿದೀತು.  ಕೊಡದ ಬಾಯಿ ಬಹಳ ಚಿಕ್ಕದಾದರೆ ನೀರು ತುಂಬುವಾಗಲೂ ಡುಬುಡುಬು ಸದ್ದು ತಪ್ಪಿದ್ದಲ್ಲ.  ಎಷ್ಟೋ ವೇಳೆ ಪೂರ್ತಿ ತುಂಬುವುದೂ ಇಲ್ಲ.  ಈ ನೀರುತುಂಬುವುದಕ್ಕಿಂತ ಸುಲಭವೆಂದು ಖಾಲಿ ಕೊಡದೊಳಗೆ ಕಲ್ಲು ಹಾಕಿ ಆಡಿಸಿದರೆ?  ತುಂಬಿದ ಕೊಡದ ನೀರು ಕೊಡದೊಳಗೇ ಅಲ್ಲಾಡುತ್ತಾ ಹೊರಡಿಸುವ ಮೃದುಮಧುರವಾದ ಸಪ್ಪಳವೆಲ್ಲಿ, ಖಾಲಿ ಕೊಡದೊಳಗೆ ಕಲ್ಲಾಡಿಸುವ ಗಲಗಲ ಗಡಗಡ ಶಬ್ದವೆಲ್ಲಿ?  ಬಹುಶಃ ಈ ಎರಡನೆಯದು ಬಸವಣ್ಣನವರನ್ನು ಬಹಳ ಹೈರಾಣಗೊಳಿಸಿರಬಹುದು.  ಆ ಖಾಲಿ ಕೊಡಗಳ ಗದ್ದಲದ ಸಂತೆಯಲ್ಲಿ ಮೌನವನ್ನ, ಮೌನ ಮಥಿಸಿ ಹೊರಬಿದ್ದ ಮುತ್ತಿನ ಹಾರದಂತಹ ಮಾತಿನ ಬೆರಗನ್ನು ಕುರಿತು ಧ್ಯಾನಿಸುತ್ತಾರೆ ಬಸವಣ್ಣ. 

ಈ ಹೋಲಿಕೆಗಳು ಸೋಪಾನಕ್ರಮದಲ್ಲಿ (ಮೆಟ್ಟಿಲುಮೆಟ್ಟಿಲಾಗಿ) ಹೋಗುತ್ತವೆಂದು ನಾನು ಮೊದಲಲ್ಲಿ ಹೇಳಿದೆ.  ಅದನ್ನು ಈಗ ಗಮನಿಸೋಣ.

ಮೊದಲನೆಯದಾಗಿ ಮುತ್ತು ಅಪರೂಪದ ವಸ್ತು (ಕೃತಕ ಮುತ್ತುಗಳ ವಿಷಯ ಬಿಡಿ, ಹಾಗೆಯೇ ಬಣ್ಣದ ಮಾತುಗಳನ್ನೂ ಬಿಡಿ, ಅವು ನೋಡಿದೊಡನೆ ತಿಳಿದುಬಿಡುತ್ತದೆ).  ಎಲ್ಲೋ ಲಕ್ಷಾಂತರ ಹನಿಗಳಲ್ಲಿ ಒಂದು ಮುತ್ತಾಗುತ್ತದೆ.  ಇಂತಹ ಮುತ್ತುಗಳ ಹಾರವೊಂದನ್ನು ಮಾಡಬೇಕಾದರೆ ಒಂದೊಂದೇ ಮುತ್ತನ್ನು ಹೆಕ್ಕಿ ತರಬೇಕು.  ಇನ್ನು ಮುತ್ತಿನಲ್ಲಿ ಹಲವು ಬಣ್ಣಗಳಿರಬಹುದು, ಆದರೆ ಮುತ್ತಿನ ಹಾರವೆಂದರೆ ಕಣ್ಣಿಗೆ ಬರುವುದು ಶುಭ್ರವಾದ ಬಿಳಿಯ ಮುತ್ತೇ.  ಈ 'ಶುಭ್ರ'ತೆಯೇ ಮಾತಿನ ಮುಖ್ಯಗುಣ.  ಅದಕ್ಕೇ ವಾಗ್ದೇವಿಯನ್ನು "ಸರ್ವಶುಕ್ಲಾ" ಎಂದಿದ್ದಾನೆ ಲಾಕ್ಷಣಿಕ ದಂಡಿ; ಕವಿರಾಜಮಾರ್ಗಕಾರನ ಪ್ರಕಾರ ಆಕೆ "ವಿಶದವರ್ಣೆ" - ಸ್ವಚ್ಛವಾದ (ಬಿಳೀ) ಬಣ್ಣದವಳು.  "ಕುಂದೇಂದುತುಷಾರಹಾರಧವಳಾ" ಎಂದೇ ನಾವು ಸರಸ್ವತಿಯನ್ನು ಧ್ಯಾನಿಸುವುದು.  ಆಡುವ ಮಾತು ಆಕೆಯ ಪ್ರತೀಕವಾಗಿಲ್ಲದಿದ್ದರೆ ಹೇಗೆ?  ಆಡಬೇಕೇ ಅಂತಹ ಮಾತನ್ನು?  ಇನ್ನು ಮುತ್ತಿನ ಇನ್ನೊಂದು ಲಕ್ಷಣ ದುಂಡು - ದುಂಡೆಂದರೆ ದುಂಡೇ, ಒಂದಿನಿತೂ ಓರೆಕೋರೆಗಳಿಲ್ಲ.  ಆಡಿದ ಮಾತು ಹೀಗೆ ಸ್ಫುಟವಾಗಿರಬೇಕೆಂಬುದು ಒಂದು.  ಮತ್ತೆ, ಇಲ್ಲಿ ಅಣ್ಣನವರು ಮುತ್ತಿನಂತಹ ಮಾತಿನ ಬಗೆಗೆ ಹೇಳುತ್ತಿಲ್ಲ, ಮುತ್ತಿನ ಹಾರದಂತಹ ಮಾತಿನ ಬಗ್ಗೆ.  ಮಾತು ಮುತ್ತಿನಂತಿದ್ದರೇನಾಯಿತು, ಅದಕ್ಕೊಂದು ಸಂಬದ್ಧತೆ, ಪ್ರಮಾಣವಿಲ್ಲದಿದ್ದರೆ? ಮುತ್ತಿನಲ್ಲಿ ಬೇರೆಬೇರೆ ಗಾತ್ರದವಿವೆ.  ಅದನ್ನು ಸಮಂಜಸವಾಗಿ ಕಟ್ಟುವುದು ಅಕ್ಕಸಾಲಿಯ ಕೌಶಲ.  ಯಾವಯಾವುದೋ ಗಾತ್ರದ ಮುತ್ತುಗಳನ್ನು ಪೋಣಿಸಿ ಕೊರಳಿಗೆ ಹಾಕಿದರೆ ಅದು ಹಾರವಾಗುವುದಿಲ್ಲ, ಕೊರಳಿಗೆ ಭಾರವಾಗುತ್ತದಷ್ಟೇ.  ಉತ್ತಮವಾದ ಕೈಬರಹವನ್ನು "ಮುತ್ತು ಪೋಣಿಸಿದಂತೆ" ಎನ್ನುತ್ತೇವೆ.  ಮುತ್ತು ಪೋಣಿಸಿದ ಹಾರದ ಹೋಲಿಕೆಯೂ ಇದೇ ಆಶಯವನ್ನು ಹೊಂದಿದಂಥದ್ದು - ಮಾತಿನಲ್ಲಿ ಶುಭ್ರತೆ, ಹೊಳಪು, ಸಮಂಜಸತೆ, ಸಂಬದ್ಧತೆ. 

ಆಯಿತು, ಇಷ್ಟಿದ್ದರೆ ಸಾಕೇ?  ಇಂತಹ ಮುತ್ತಿನ ಹಾರದಂತಹ ಮಾತುಗಳನ್ನು ಯಾವುದೇ ಮಾತಿನ ಕಲೆಗಾರನೂ ಪಂಡಿತನೂ ನೂರು ಆಡಿಯಾನು.  ಅದನ್ನು ಆಭರಣದಂತೆ ಧರಿಸಿ ಮೆರೆಯಬಹುದಷ್ಟೇ - ಪ್ರಯೋಜನವೇನು?  ಮುತ್ತಿನಂತೆ ಮುದ್ದುಮುದ್ದಾದ ನೂರು ಪದಗಳನ್ನು ಜೋಡಿಸಿದರೆ ಏನು ಫಲ?  ಅರ್ಥದ ಬೆಳಕಿಲ್ಲದ ಬರೀ ಮಾತು ಎಷ್ಟು ಸುಂದರವಾಗಿದ್ದರೆ ಏನು ಪ್ರಯೋಜನ?  ಮಾಣಿಕದ ದೀಪ್ತಿಯಂತೆ ಅರ್ಥವನ್ನು ಬೆಳಗಿ ತೋರಿಸಬಲ್ಲುದಾದರೆ, ಅದೀಗ ಮಾತು.

ಮಾತು ಬೆಳಗಿ ಅರ್ಥದ ಬೆಳಕು ಹೊಮ್ಮುವುದೇನೋ ಸರಿಯೇ.  ಆ ಬೆಳಕಿನಲ್ಲಿ ಕಣ್ಣಿಗೆ ಕಾಣುವುದು ಕಂಡಿತು.  ಕಾಣದ್ದು? ಅಡಗಿದ್ದು?  ಹೊರಗಿನದನ್ನು ಬೆಳಗುವ ಮಾತಿಗೆ ತನ್ನನ್ನು ತಾನೇ ಬೆಳಗಿಸಿಕೊಳ್ಳುವ, ತನ್ನ ಒಳಗನ್ನು ತೆರೆದು ತೋರುವ ಶಕ್ತಿಯೂ ಇರಬೇಕಲ್ಲವೇ?  "ಮಾತು ಅರ್ಥ ಎರಡು ವ್ಯರ್ಥ ಸ್ವಯಂ ಅರ್ಥವಿರದಿರೆ" ಅಲ್ಲವೇ?  ಹಾಗೆ ಸ್ವಯಂ ಅರ್ಥವನ್ನು ಹೊಂದಿದ ಮಾತಿಗೆ ವಿವರಣೆ ಬೇಕಿಲ್ಲ, ಸಂಪೂರ್ಣ ಪಾರದರ್ಶಕವಾಗಿರುತ್ತದೆ.  ಇಲ್ಲಿ ಅಣ್ಣನವರು ಸ್ಫಟಿಕದ ಶಲಾಕೆ ಎಂಬ ಮಾತನ್ನು ಬಳಸುತ್ತಾರೆ.  ಇದೊಂದು ಮಾತಿನಲ್ಲಿ ಅದೆಷ್ಟು ಅರ್ಥಗಳು ಹುದುಗಿವೆ ನೋಡಿ - ಸ್ಪಟಿಕ ಶುಭ್ರತೆಯ, ಪಾರದರ್ಶಕತೆಯ ಸಂಕೇತ.  ಆಡಿದ ಮಾತು ನಿಚ್ಚಳವಾಗಿರಬೇಕು, ಅದರ ಹೊರ ಅರ್ಥ ಒಳ ಅರ್ಥಗಳೆಲ್ಲ ಮನದಟ್ಟಾಗಬೇಕು, ಅಷ್ಟಾದರೆ ಸಾಕೇ?  ಮಾತು ಕೇವಲ ಸ್ಫಟಿಕವಾದರೆ ಸಾಲದು, ಸ್ಫಟಿಕದ ಶಲಾಕೆಯಾಗಬೇಕು.  ಶಲಾಕೆಯೆಂದರೆ ಕಿಟಕಿಗೆ ಹಾಕುವ ಕಬ್ಬಿಣದ ಸಲಾಕೆಯಲ್ಲ, ಮೊನೆಯಾದ, ದೃಢವಾದ, ಹಗುರಾದ ಕಡ್ಡಿ.  ಅದನ್ನು ಹಿಡಿದು ತೋರಿದರೆ, ಅದರ ಮೊನೆ ಗಮ್ಯವನ್ನು ಮುಟ್ಟಬೇಕು, ತೋರಿದ ಅರಿವಾಗಬೇಕು, ಆದರೆ ತೋರುವ ಶಲಾಕೆ ಕಾಣಬಾರದು - ಅರ್ಥವಷ್ಟೇ ಉಳಿಯಬೇಕು, ಮಾತು ನಿಲ್ಲಬಾರದು.  ದಿ. ಮೈಸೂರು ವಾಸುದೇವಾಚಾರ್ಯರು ವೀಣೆ ಶೇಷಣ್ಣನವರು ಯಾವಾಗಲೂ ಹೇಳುತ್ತಿದ್ದ ಒಂದು ಮಾತನ್ನು ನೆನೆಯುತ್ತಾರೆ - ವೀಣೆ ನುಡಿಸಿದರೆ, ಆ ತಂತಿ ಮಿಡಿಯುವ ಉಗುರಿನ ಕಟಪಟ ಶಬ್ದ ಒಂದಿನಿತೂ ಕೇಳಬಾರದು, ಕೇವಲ ಮಿದುವಾದ, ಹದವಾದ ನಾದವಷ್ಟೇ ಹೊರಹೊಮ್ಮಬೇಕು - ಅದೇ ಆಶಯ ಇಲ್ಲೂ.  ಆಡಿದ ಮಾತು, ತಾನು ಹೇಳಬೇಕಾದ ಭಾವವನ್ನಷ್ಟೇ ತೋರಿ ತಾನು ಮರೆಯಾಗಬೇಕು.  ಅದು ಬಹಳ ಕಷ್ಟಸಾಧ್ಯ.  ಬಹಳ ತಪಸ್ಸನ್ನು ಬೇಡುವಂಥದ್ದು.  ಅದಕ್ಕೇ ಕವಿ ಶಿವರುದ್ರಪ್ಪನವರು "ಮನದ ಭಾವ ಹೊಮ್ಮಿಸಲಿಕೆ ಭಾಷೆ ಒರಟು ಯಾನ" ಎನ್ನುತ್ತಾರೆ.  ಹೀಗೆ ಕಷ್ಟವಾದ್ದರಿಂದಲೇ ಮಾತು ಹೀಗಿರಬೇಕೆಂಬುದು ಒಂದು ಆದರ್ಶ.  ಶಲಾಕೆಗೆ ಬಾಣ, ಭರ್ಜಿ ಮೊದಲಾದ ಅರ್ಥಗಳೂ ಇವೆ - ಅವೂ ಮೊನೆಯುಳ್ಳವೇ.  ಆಡಿದ ಮಾತು ಗುರಿತಪ್ಪದೇ ಹೋಗಿ ಗಮ್ಯದಲ್ಲಿ ನೆಡಬೇಕು - ನೆಟ್ಟ ಮಾತು ಮರೆಯಾಗಬೇಕು, ನೆಟ್ಟ ಅನುಭವ ಮಾತ್ರ ಉಳಿಯಬೇಕು - ಇದು ಸ್ಫಟಿಕದ ಶಲಾಕೆ. 

ಹೀಗೆ, ಒಂದು ಆಡಲೇಬೇಕಾದ ಮಾತು ಹೇಗಿರಬೇಕೆಂದು ವಿವರಿಸುತ್ತಲೇ ಹೋಗಬಹುದು - ಎಷ್ಟೆಂದು ವಿವರಿಸುವುದು.  ಅದೇ ಒಂದು ಮಾತಿನ ಹೋರಟೆಯಾಗಬಾರದಷ್ಟೇ.  ಅದಕ್ಕೇ ಏನೋ ಮಾತಿನ ಕೊನೆಯಲ್ಲಿ "ಇತ್ಯಾದಿ" ಎಂದು ಹೇಳಿ ಮುಗಿಸುವಂತೆ ಬಸವಣ್ಣನವರು ಇದೆಲ್ಲ ಲಕ್ಷಣಗಳ ಒಟ್ಟಾರೆ ಗಮ್ಯವನ್ನು ತಿಳಿಸಿ ಮುಗಿಸುತ್ತಾರೆ - "ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು" ಎಂದುಬಿಡುತ್ತಾರೆ.  ಲಿಂಗವೆಂದರೆ ಅಲ್ಲೆಲ್ಲೋ ಹೊರಗೆ ಕುಳಿತ ಕಲ್ಲುಬಂಡೆಯಲ್ಲ - ನನ್ನದೇ ಒಳಗಿನ ಒಳಗು, ಯಾವುದನ್ನು ಬಿಟ್ಟು ನಾನಿಲ್ಲವೋ ಅದು - ನೀವು ಅದನ್ನು ಇಷ್ಟಲಿಂಗವೆನ್ನಿ, ಪರಶಿವನೆನ್ನಿ, ಮತ್ತೊಂದೆನ್ನಿ - ಅದು ನಿಮ್ಮ ಪ್ರಜ್ಞೆಯ, ಅಸ್ತಿತ್ವದ ಒಂದು ಭಾಗವೇ ಆಗಿರದಿದ್ದರೆ ಅದು ಕೇವಲ ಕಲ್ಲು.  ಈ ನಿಮ್ಮೊಳಗಿನ ಲಿಂಗ ನಿಮ್ಮ ಮಾತನ್ನು ಮೆಚ್ಚಬೇಕು, ಮೆಚ್ಚಿ ಅಹುದಹುದೆನಬೇಕು.  ಅದು ಅಹುದೆನ್ನುತ್ತದೆಯೋ ಅಲ್ಲದೆನುತ್ತದೆಯೋ ಎಂಬುದು ಹೊರಗಿನವರಿಗಿಂತ ನಿಮಗೇ ಅರಿವಾಗುವಂಥದ್ದು. 

ಮಾತೆಂಬುದು ಜ್ಯೋತಿರ್ಲಿಂಗವೆಂಬ ಪ್ರಜ್ಞೆಯಿರುವವನು ಸಿಕ್ಕಸಿಕ್ಕಂತೆ ಆಡಿ ಅದನ್ನು ಮೈಲಿಗೆ ಮಾಡಲಾರ.  ಅದನ್ನೇ ಅಲ್ಲಮಪ್ರಭುವಿನ ಮಾತಿನಲ್ಲಿ ಹೇಳುವುದಾದರೆ "ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ; ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ. ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರುಳೆ"  

ಇಷ್ಟಾಗಿಯೂ ನುಡಿಯಲೇ ಬೇಕೆಂದರೆ, ನುಡಿಯ ಸೂತಕವನ್ನೊಲ್ಲದ ನಿಚ್ಚಟನು ಆ ನುಡಿಗೆ 'ನಡೆ'ಯ ಮುಡಿ ಹಾಸುತ್ತಾನೆ, ಏಕೆಂದರೆ ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನು ಒಲಿಯನೆಂಬ ಪ್ರಜ್ಞೆ ಅವನಿಗಿದ್ದೇಯಿದೆ.  ಈ ಪ್ರಜ್ಞೆ ತಪ್ಪಿದರೆ, ಮಾತೆಂಬುದು ತೂತುಮಡಕೆಯಿಂದ ಸೋರುವ ಹೊಲಸಾಗುತ್ತದೆ.  ಅದನ್ನು ಹೊನ್ನಿನ ಧಾರೆಯೆನ್ನಲಾಗದಷ್ಟೇ?

Sunday, November 7, 2021

ಮೂರು ಹೆಜ್ಜೆ ಭೂಮಿಗೆ ದೈವವನ್ನೇ ಅಳೆದುಕೊಂಡ ಬಲಿ

(ದಿ.05/11/2021ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ)

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ

ಇದು ಭಗವದ್ಗೀತೆಯಲ್ಲಿ ಪರಮಾತ್ಮನ ಭರವಸೆ - ಸಾಧುಗಳನ್ನು ರಕ್ಷಿಸಲು, ಕೆಟ್ಟದ್ದನ್ನು ನಾಶಮಾಡಲು, ಧರ್ಮಸ್ಥಾಪನೆ ಮಾಡಲು ಯುಗಯುಗದಲ್ಲೂ ಅವತರಿಸುತ್ತೇನೆ.    ಮತ್ಸ್ಯಾವತಾರದಲ್ಲಿ ಸೋಮಕನನ್ನು ಸಂಹರಿಸಿದ, ಕೂರ್ಮಾವತಾರದಲ್ಲಿ ಮಂದರವನ್ನೆತ್ತಿ ಹಿಡಿದು ಅಮೃತಮಥನಕ್ಕೆ ಆಧಾರವಾದ, ವರಾಹ ನರಸಿಂಹಾವತಾರಗಳಲ್ಲಿ ದುಷ್ಟರಾದ ಹಿರಣ್ಯಾಕ್ಷ-ಹಿರಣ್ಯಕಶಿಪುಗಳನ್ನು ಸಂಹರಿಸಿ ಪ್ರಹ್ಲಾದನನ್ನು ಉದ್ಧರಿಸಿದ, ಪರಶುರಾಮನಾಗಿ ದುಷ್ಟಕ್ಷತ್ರಿಯರನ್ನು ಸಂಹರಿಸಿದ, ಇನ್ನು ರಾಮ-ಕೃಷ್ಣರ ಕತೆಯಂತೂ ತಿಳಿದದ್ದೇ.  ಆದರೆ ವಾಮನಾವತಾರದ ಕತೆಯೇನು?  ಪರಮಾತ್ಮನ ಅವತಾರವೆಂದರೆ ದುಷ್ಟಸಂಹಾರವಾಗಬೇಕು, ಅಥವಾ ಶಿಷ್ಟರಕ್ಷಣೆಯಾದರೂ ಆಗಬೇಕು.  ಬಲಿಚಕ್ರವರ್ತಿ ರಾಕ್ಷಸನಿರಬಹುದು, ಆದರೆ ದುಷ್ಟನಿದ್ದಿಲ್ಲ - ಬದಲಿಗೆ ಮಹಾ ಧರ್ಮಾತ್ಮ, ದಾನಿ, ಪ್ರಜಾವತ್ಸಲ, ಪರಾಕ್ರಮಿ ಎಂದೇ ಭಾಗವತ ಹೇಳುತ್ತದೆ.  ಸುಖಲೋಲುಪರಾದ ದೇವತೆಗಳು ಇವನ ಪರಾಕ್ರಮದ ಮುಂದೆ ನಿರ್ವೀರ್ಯರಾಗಿ ತಮ್ಮದೆಲ್ಲವನ್ನೂ ಕಳೆದುಕೊಂಡು ರಾಜ್ಯಭ್ರಷ್ಟರಾದದ್ದು ಸಹಜವೇ.  ದೈತ್ಯರ ಉಪಟಳಕ್ಕೆ ಸಿಕ್ಕಿ ತನ್ನ ಮಕ್ಕಳು ಪಡುತ್ತಿದ್ದ ಪಾಡನ್ನು ನೋಡಿ ತಡೆಯಲಾರದೇ ತಾಯಿಯಾದ ಅದಿತಿ ಮಹಾವಿಷ್ಣುವನ್ನು ಪ್ರಾರ್ಥಿಸುತ್ತಾಳೆ.  ಅವಳ ಮಗನಾಗಿ ಹುಟ್ಟಿ ದೈತ್ಯರನ್ನು ನಿಗ್ರಹಿಸಿ ದೇವತೆಗಳಿಗೆ ಅವರ ರಾಜ್ಯವನ್ನು ಸಂಪಾದಿಸಿಕೊಡುವುದಾಗಿ ವಿಷ್ಣು ಭರವಸೆ ನೀಡುತ್ತಾನೆ.

ಭರವಸೆ ನೀಡಿದ್ದಾಯಿತು, ಆದರೆ ಅದನ್ನು ಆಗಮಾಡಿಸುವುದು ಹೇಗೆ?  ದುಷ್ಟರನ್ನು ಸಂಹರಿಸುವುದು ಪರಮಾತ್ಮನಿಗೆ ಕಷ್ಟವಲ್ಲ, ಆದರೆ ಮಹಾತ್ಮನಾದ, ಮೇಲಾಗಿ ವಿಷ್ಣುಭಕ್ತನೇ ಆದ ಬಲಿಯನ್ನು ಸಂಹರಿಸುವುದು ಹೇಗೆ?  ಸಂಹರಿಸುವುದು ಏಕೆ?  ಸಂಹರಿಸಿದರೆ ಅದು "ಧರ್ಮಸಂಸ್ಥಾಪನೆ" ಹೇಗಾದೀತು?  ಇಂಥಲ್ಲಿ ಸ್ವತಃ ಪರಮಾತ್ಮನೂ ನಿಸ್ಸಹಾಯಕನಾಗಿಬಿಡುತ್ತಾನಲ್ಲ.  ಅದಕ್ಕಾಗಿಯೇ ಇನ್ನಾವ ಅವತಾರದಲ್ಲೂ ಮಾಡದಂತೆ ಇಲ್ಲಿ ಯಾಚಕನಾಗಿ ಬರಬೇಕಾಯಿತು; ಮೂರಡಿ ಎತ್ತರದ ಕುಳ್ಳನಾಗಿ ಬರಬೇಕಾಯಿತು.  "ಆರಡಿ ಎತ್ತರದ ಶರೀರವನ್ನು ಗೇಣುದ್ದ ಮಾಡಿಕೊಂಡು" ಎನ್ನುವ ಗಾದೆಯೇ ಇದೆಯಲ್ಲ - ಬೇಡಬೇಕಾದಲ್ಲಿ ಹಾಗೇ ತಾನೆ?

ಬಲಿ ಧರ್ಮಾತ್ಮನೇ ಇದ್ದರೂ ದಾನಿಯೆಂಬ ಹಮ್ಮು ಮಾತ್ರ ಸಹಜವಾಗಿಯೇ ಇತ್ತು.  ಅದರಲ್ಲೂ ಬೇಡುವಾತ ಮೂರಡಿಯ ಕುಳ್ಳನಾದರೆ ನಮಗರಿವಿಲ್ಲದೇ ಎರಡಾಳೆತ್ತರಕ್ಕೆ ಹಿಗ್ಗಿಬಿಡುತ್ತೇವಷ್ಟೇ?  ಜೊತೆಗೆ ತಾನು ಭಾಗವತೋತ್ತಮನಾದ ಪ್ರಹ್ಲಾದನ ಮೊಮ್ಮಗನೆಂಬ ಹೆಮ್ಮೆ ಬೇರೆ.  ಬಂದ ವಟುವನ್ನು ಉಪಚರಿಸಿ ಸತ್ಕರಿಸಿ ಬಲಿ ಹೇಳಿದ, ನಿನಗೆ ಬೇಕಾದ್ದನ್ನು ಕೇಳಬಹುದು, ಕೊಡುತ್ತೇನೆ.  ವಾಮನ ಹೇಳಿದ, ಹೆಚ್ಚೇನೂ ಬೇಡ, ಮೂರಡಿ ಜಾಗ ಕೊಡು ಸಾಕು.  ಇದನ್ನು ಕೇಳಿ ಬಲಿಗೆ ತಡೆಯದಷ್ಟು ನಗೆ.  ಎಲಾ, ಸಾಕ್ಷಾತ್ ಬಲಿಚಕ್ರವರ್ತಿ ಇಲ್ಲಿದ್ದೇನೆ, ಏನು ಬೇಕಾದರೂ ಕೊಡಲು ಸಿದ್ಧನಿದ್ದೇನೆ, ಬೇಕೆಂದರೆ ಒಂದಿಡೀ ದ್ವೀಪವನ್ನೇ ಕೊಡಬಲ್ಲೆ, ಈ ವಟು ಅವಿವೇಕಿ ಹುಡುಗನಂತೆ ತೋರುತ್ತಾನಲ್ಲ ಎಂಬುದು ಅವನ ಯೋಚನೆ.  ಅದನ್ನೇನೂ ಮುಚ್ಚಿಟ್ಟುಕೊಳ್ಳದೇ ಹಾಗೇ ಹೇಳಿಯೂ ಬಿಡುತ್ತಾನೆ.  ಅದಕ್ಕೆ ವಾಮನ ಕೊಡುವ ಉತ್ತರ ಮಾರ್ಮಿಕವಾಗಿದೆ - "ತ್ರಿಭಿಃ ಕ್ರಮೈರಸಂತುಷ್ಟೋ ದ್ವೀಪೇನಾಪಿ ನ ಪೂರ್ಯತೇ - ಮೂರು ಹೆಜ್ಜೆಯಿಂದ ಸಂತುಷ್ಟರಾಗದವರು ದ್ವೀಪದಿಂದಲೂ ಸಂತುಷ್ಟರಾಗುವುದಿಲ್ಲ".

ಬಲಿ ನಗುನಗುತ್ತಾ, ಸರಿ, ನಿನ್ನಿಷ್ಟ ಎಂದು ಹೇಳಿ ಮೂರು ಹೆಜ್ಜೆ ಭೂಮಿಯನ್ನು ಧಾರೆಯೆರೆದು ಕೊಡುತ್ತಾನೆ.  ಬಂದವನು ಸಾಕ್ಷಾತ್ ಮಹಾವಿಷ್ಣುವೇ, ನಿನ್ನ ಸರ್ವಸ್ವವನ್ನೂ ಅಪಹರಿಸಿ ಶತ್ರುಗಳಾದ ದೇವತೆಗಳಿಗೆ ಕೊಟ್ಟುಬಿಡುತ್ತಾನೆ ಎಂದು ಶುಕ್ರಾಚಾರ್ಯರು ಹೇಳಿದರೂ ಬಲಿ ಕೊಟ್ಟ ಮಾತಿನಿಂದ ಹಿಂದೆಗೆಯುವುದಿಲ್ಲ.  ಇವನು ವಿಷ್ಣುವೇ ಆದರೆ ನಿರಪರಾಧಿಯಾದ ನನ್ನನ್ನು ಮೋಸಗೊಳಿಸಿ ತನ್ನ ಕೀರ್ತಿಯನ್ನು ಕಳೆದುಕೊಳ್ಳಲಾರ ಎಂಬುದು ಬಲಿಯ ನಂಬಿಕೆ.  ಆದರೆ ದಾನ ಪಡೆದ ವಾಮನ ನೋಡನೋಡುತ್ತಿದ್ದಂತೆ ಬೆಳೆದು ನಿಂತು ಭೂಮ್ಯಾಕಾಶಗಳನ್ನು ವ್ಯಾಪಿಸಿಬಿಡುತ್ತಾನೆ.  ಒಂದು ಹೆಜ್ಜೆಯಿಂದ ಭೂಮಂಡಲವನ್ನೆಲ್ಲಾ ಅಳೆದು, ಮತ್ತೊಂದು ಹೆಜ್ಜೆಯಿಂದ ಮೇಲಿನ ಲೋಕಗಳನ್ನೆಲ್ಲಾ ಅಳೆದು ನಗುತ್ತಾ ಬಲಿಗೆ ಹೇಳುತ್ತಾನೆ - "ನಿನ್ನದೆಲ್ಲವನ್ನೂ ಎರಡು ಹೆಜ್ಜೆಯಿಂದ ಅಳೆದದ್ದಾಯಿತು, ನೀನು ಕೊಟ್ಟ ಮಾತನ್ನು ನಡೆಸಲಾಗದೇ ನನ್ನನ್ನು ವಂಚಿಸುತ್ತಿದ್ದೀಯೆ, ಆ ತಪ್ಪಿಗೆ ನರಕವೇ ಶಿಕ್ಷೆ, ಹೊರಡು".  ಇದರಿಂದ ಒಂದಿನಿತೂ ವಿಚಲಿತನಾಗದ ಬಲಿ ಹೇಳುತ್ತಾನೆ - ಐಶ್ವರ್ಯದ ಮದದಿಂದ ಮುಚ್ಚಿದ್ದ ನನ್ನ ಕಣ್ಣನ್ನು ತೆರೆಸಿ ನೀನಿಂದು ನನಗೆ ಪರಮಗುರುವಾದೆ, ಇರಲಿ, ನಾನು ನಿನ್ನನ್ನು ಮೋಸಗೊಳಿಸುವುದು ಸಾಧ್ಯವೇ ಇಲ್ಲ.  ಎರಡು ಹೆಜ್ಜೆಯಿಂದ ಲೋಕವನ್ನೆಲ್ಲ ಅಳೆದರೂ ಇನ್ನೊಂದು ಹೆಜ್ಜೆಗೆ ಜಾಗ ಉಳಿದೇ ಇದೆ - ನನ್ನ ತಲೆ.  ಅದರ ಮೇಲೆ ನಿನ್ನ ಪಾದವನ್ನಿಟ್ಟು ದಾನವನ್ನು ಪೂರೈಸಿಕೋ.  ಬಲಿಯ ಪ್ರಾರ್ಥನೆಯಿಂದ ಸಂತುಷ್ಟನಾದ ತ್ರಿವಿಕ್ರಮ ಹೇಳುತ್ತಾನೆ "ಯಾರ ಮೇಲೆ ನಾನು ಕೃಪೆದೋರಲು ನಿರ್ಧರಿಸುತ್ತೇನೋ ಅವನ ಸರ್ವಸ್ವವನ್ನೂ ಮೊದಲು ಕಸಿದುಕೊಳ್ಳುತ್ತೇನೆ, ಆಗಷ್ಟೇ ಅವನ ಕಣ್ಣು ಮುಸುಕಿದ ಪೊರೆ ಹರಿದು ಆತನಿಗೆ ನನ್ನನ್ನು ಕಾಣಲು ಸಾಧ್ಯ".  ಹೀಗೆ ಹೇಳಿ ಬಲಿಯ ತಲೆಯ ಮೇಲೆ ಮತ್ತೊಂದು ಹೆಜ್ಜೆಯಿಟ್ಟು ತನ್ನ ದಾನವನ್ನು ಅಳೆದುಕೊಳ್ಳುತ್ತಾನೆ.  

ಸಾಮಾನ್ಯವಾಗಿ ರಾಮಾಯಣಮಹಾಭಾರತಗಳನ್ನು ಇತಿಹಾಸ (ನಡೆದ ವಿಷಯಗಳು) ಎಂದು ನಮ್ಮ ಪರಂಪರೆ ವರ್ಗೀಕರಿಸುತ್ತವೆ.  ಆದರೆ ಪುರಾಣಕತೆಗಳು ಇತಿಹಾಸವಲ್ಲ.  ಪುರಾಣ, ಹಳೆಯ ಕತೆ, ಎಂದೋ ಎಷ್ಟೋ ಯುಗಗಳ ಹಿಂದೆ ಎಲ್ಲೋ ನಡೆಯಿತೆಂದು ಹೇಳಲಾಗುವ ಕತೆಗಳು - ರಮ್ಯಾತಿರಮ್ಯ ಕಲ್ಪನೆಗಳು, ವೈಭವೀಕರಿಸಿದ ವರ್ಣನೆಗಳು, ಕಲ್ಪನೆಗೂ ನಿಲುಕದ ವಿದ್ಯಮಾನಗಳು ಇಲ್ಲಿ ಸಾಮಾನ್ಯ.  ಇದನ್ನು ಗ್ರಹಿಸಬೇಕಾದರೆ ವಸ್ತುನಿಷ್ಠವಾದ 'Rational' ದೃಷ್ಟಿಕೋನಕ್ಕಿಂತ ವಿದ್ಯಮಾನದ ಹಿಂದೆ ಅಡಗಿರುವ ಸಾಂಕೇತಿಕೆಯನ್ನು ಅರಿಯುವ ಕಣ್ಣು ಅತ್ಯಗತ್ಯ.  ಕುವೆಂಪು ಹೇಳುತ್ತಾರಲ್ಲ "ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ, ತನ್ನ ತಮದಿಂ ತಾಂ ಮುಕ್ತಮಪ್ಪುದು ದಿಟಂ" - ರಾವಣನೆಂಬೊಬ್ಬ ಹತ್ತು ತಲೆಯ ರಕ್ಕಸನಿದ್ದನೋ ಇಲ್ಲವೋ, ಅದು ನಮ್ಮಲ್ಲೇ ಮನೆಮಾಡಿರುವ 'ಅವಿದ್ಯೆ'ಯ ಸಂಕೇತವೆಂದು ಗ್ರಹಿಸಿದರೆ ಕತೆಗೊಂದು ಹೊಸ ಹೊಳಹು ದೊರೆಯುತ್ತದೆ.  ಪುರಾಣಕತೆಗಳನ್ನು ನೋಡಲು ಬೇಕಾದ ದೃಷ್ಟಿ ಇದು.  ವಿಷ್ಣುವು ನಿರಪರಾಧಿಯಾದ, ವಿಷ್ಣುಭಕ್ತನಾದ ಬಲಿಚಕ್ರವರ್ತಿಯನ್ನು ಓಡಿಸಿದ್ದು ತಪ್ಪಲ್ಲವೇ?  ಸ್ವತಃ ವಿಷ್ಣುಭಕ್ತನೇ ಆಗಿದ್ದರೂ ರಾಕ್ಷಸನಾಗಿದ್ದ ಕಾರಣಕ್ಕೆ ಅವನಿಗೆ ಅನ್ಯಾಯವಾಯಿತಲ್ಲವೇ?  ಈ ಬಗೆಯ 'Rational' ಪ್ರಶ್ನೆಗಳಿಗೆ ಇಲ್ಲಿ ಅವಕಾಶವೇ ಇಲ್ಲ, ಏಕೆಂದರೆ ಇದು ಇತಿಹಾಸವಲ್ಲ, ಕತೆ - ಇಲ್ಲಿ ಕತೆ ಏನು ಸಂಕೇತಿಸುತ್ತಿದೆ ಎನ್ನುವುದು ಮುಖ್ಯ.  ರಾಕ್ಷಸನಾದ ಮಾತ್ರಕ್ಕೆ ಅನ್ಯಾಯವಾಗಬೇಕೆಂದಿದ್ದರೆ ಅದೇ ಅನ್ಯಾಯ ಪ್ರಹ್ಲಾದನಿಗೂ ಆಗಬೇಕಿತ್ತಲ್ಲ.  ಅಥವಾ ಬಲಿಗೆ ಅನ್ಯಾಯವೇ ಆಗಬೇಕಿದ್ದರೆ ವಿಷ್ಣು ಬಲಿಯನ್ನು ಕೊಂದೇ ಬಿಡಬಹುದಿತ್ತಲ್ಲ - ಈ ಬಗೆಯ ಪ್ರಶ್ನೆಗಳೂ ಹುಟ್ಟಿಕೊಳ್ಳಬಹುದು.  ಆದರೆ ಕತೆ ಹೇಗೆ ಬೆಳೆಯುತ್ತದೆಂಬುದನ್ನು ಗಮನಿಸಬೇಕು.  ಬಲಿ ಮೂಲತಃ ಭಕ್ತ.  ತನ್ನ ಕಣ್ಣನ್ನು ಮುಸುಕಿದ್ದ ಅಹಂಕಾರ ಹರಿಯುತ್ತಿದ್ದಂತೆಯೇ ಅವನಿಗೆ ತನ್ನ ನೆಲೆ, ಭಗವಂತನ ನೆಲೆ ಅರಿವಾಯಿತು.  ಶರಣಾಗತನಾದ.  ಹೀಗೆ ತನ್ನವನಾದ ಬಲಿಯ ಯೋಗಕ್ಷೇಮವೂ ತನಗೇ ಸೇರಿದ್ದಷ್ಟೇ?  ತನ್ನ ಆದೇಶದಂತೆ ಸುತಲಲೋಕಕ್ಕೆ ಹೋಗಿ ನೆಲೆಸಿದ ಬಲಿಯ ಬಾಗಿಲನ್ನು ಕಾಯುವುದಕ್ಕೆ ಭಗವಂತ ಸ್ವತಃ ತಾನೇ ನಿಂತ.  ಕುಮಾರವ್ಯಾಸ ಬೇರೊಂದು ಸಂದರ್ಭದಲ್ಲಿ ಹೇಳುತ್ತಾನೆ "ಕಿರೀಟಿಯ ಮನೆಯ ಬಂಡಿಯ ಬೋವನಾದನು ವೀರನಾರಯಣ" - ತನ್ನ ಭಕ್ತನಾದ ಅರ್ಜುನನ ಬಂಡಿಯ ಬೋವನಾದನಂತೆ ಕೃಷ್ಣ; ಇದು ಅಂಥದ್ದೇ ಇನ್ನೊಂದು ಉದಾಹರಣೆ, ಮೂರು ಹೆಜ್ಜೆ ಭೂಮಿಯನ್ನು ದಾನ ಪಡೆದ ಪರಮಾತ್ಮ, ದಾನ ಕೊಟ್ಟ ಮಹಾತ್ಮನಾದ ಬಲಿಯ ಮನೆಯ ಕಾವಲಿಗೆ ನಿಂತ ಕತೆ.  ಈ ಅವತಾರದ ಉದ್ದೇಶ ಬಲಿಯ ನಿಗ್ರಹವಲ್ಲ, ಉದ್ಧಾರ ("ಪರಿತ್ರಾಣಾಯ ಸಾಧೂನಾಂ").

ಇರಲಿ, ಹೀಗೆ ಸುತಲದಲ್ಲಿ ನೆಲೆ ನಿಂತ ಬಲಿಚಕ್ರವರ್ತಿ ವರ್ಷಕ್ಕೊಮ್ಮೆ ಭೂಲೋಕಕ್ಕೆ ಬಂದು ತನ್ನ ರಾಜ್ಯವನ್ನು ನೋಡಿ ಹರಸಿ ಹೋಗುತ್ತಾನೆಂಬ ನಂಬಿಕೆ.  ಅದೇ ಬಲಿಪಾಡ್ಯಮಿ, ಬಲಿಯ ತ್ಯಾಗವನ್ನು ನೆನೆಯುವ ದಿನ. ಈ ದಿನ ಅನೇಕ ಕಡೆಗಳಲ್ಲಿ ವಿವಿಧ ರೀತಿಗಳಲ್ಲಿ ಬಲೀಂದ್ರನ ಪೂಜೆ ನಡೆಯುತ್ತದೆ.  ಸಪ್ತಚಿರಂಜೀವಿಗಳಲ್ಲೊಬ್ಬನಾದ ಬಲಿಚಕ್ರವರ್ತಿಯ ಹರಕೆ ನಮ್ಮೆಲ್ಲರ ಮೇಲಿರಲಿ.  ಬಲಿಪಾಡ್ಯಮಿಯ ಈ ದಿನದಂದು ಅಹಂಕಾರದ ಅಂಧಕಾರ ತೊಲಗಿ ಅರಿವಿನ ದೀವಿಗೆ ಬೆಳಗಲಿ.  ಎಲ್ಲರಿಗೂ ದೀಪಾವಳಿ-ಬಲಿಪಾಡ್ಯಮಿಯ ಶುಭಾಶಯಗಳು.

Monday, September 13, 2021

ಆಡುಮಾತಿ'ನಲ್ಲಿ' (ಸಪ್ತಮೀ)ವಿಭಕ್ತಿಪ್ರತ್ಯಯ

ಮಿತ್ರರಾದ ವಸಂತ ಬಂಟಕಲ್ ಅವರು "ಮನೇನಲ್ಲಿ, ಕಾಶೀನಲ್ಲಿ, ಬೀದೀನಲ್ಲಿ" ಎಂದು ಮಾತಾಡುವ ವಿದ್ವಾಂಸರೋರ್ವರ ಅಭ್ಯಾಸದ ಬಗ್ಗೆ ತಮಾಷೆಯಾಗಿ ಹೇಳಿದರು.  ಸ್ವಾರಸ್ಯವಾದ ಗಮನಿಕೆ.  "ಸರ್ವಂ 'ನಲ್ಲಿ'ಮಯಂ ಜಗತ್" ಎನ್ನೋಣವೇ? 🙂 'ನಲ್ಲಿ' ಪ್ರತ್ಯಯ ತಪ್ಪೆಂಬುದರಲ್ಲಿ ಎರಡು ಮಾತಿಲ್ಲ.  ಆದರೆ ಆ ತಮಾಷೆಯ ನೆಪದಲ್ಲಾದರೂ ಆಡುನುಡಿಯಲ್ಲಿ ಅದು ಏಕೆ ಬರುತ್ತದೆ ಎಂಬುದನ್ನು ತಿಳಿದು ನೋಡುವುದು ಕುತೂಹಲಕರವೆನಿಸಿತು.  ಅದಕ್ಕಾಗಿ ಈ ಲೇಖನ (ನೆನಪಿರಲಿ, ಹಳಗನ್ನಡದ ವ್ಯಾಕರಣಸೂತ್ರಗಳಲ್ಲಿ, ಹೊಸಗನ್ನಡದ ವ್ಯಾಕರಣದಲ್ಲಿ, ಶಿಷ್ಟಭಾಷೆಯ ರೂಢಿಯಲ್ಲಿ ಏನಿದೆ ಎನ್ನುವುದಕ್ಕಿಂತ ಆಡುಮಾತಿನಲ್ಲಿ ಅವು ಹೇಗೆ/ಏಕೆ ಹಾಗೆ ಮೈದಳೆದಿವೆ ಎನ್ನುವುದರ ವಿಶ್ಲೇಷಣೆಯೇ ಈ ಬರಹದ ಉದ್ದೇಶ.  ಆದ್ದರಿಂದ ಬಳಕೆಯನ್ನು ವಿವರಿಸುವಾಗ ವ್ಯಾಕರಣದಲ್ಲಿ ಹೇಳಿರದ/ಅಥವಾ ಅದಕ್ಕಿಂತ ಭಿನ್ನವಾದ ವಿವರಗಳು ಇಲ್ಲಿ ಕಾಣಬಹುದು).
 
ಮೊದಲಿಗೆ ಹೊಸಗನ್ನಡದಲ್ಲಿ ನಾವು ಬಳಸುವ ವಿಭಕ್ತಿಪ್ರತ್ಯಯಗಳನ್ನು ನೋಡೋಣ

ಪ್ರಥಮಾ - ಉ
ದ್ವಿತೀಯಾ - ಅನ್ನು
ತೃತೀಯಾ/ಪಂಚಮೀ - ಇಂದ
ಚತುರ್ಥೀ - ಗೆ
ಷಷ್ಠೀ - ಅ
ಸಪ್ತಮೀ - ಅಲ್ಲಿ

ಆದರೆ ಈ ವಿಭಕ್ತಿಪ್ರತ್ಯಯಗಳು ನಾಮಪದಕ್ಕೆ ನೇರವಾಗಿ ಹತ್ತಲಾರವು.  ಉದಾಹರಣೆಗೆ ರಾಮನು ಎಂಬುದನ್ನು ನೋಡಿ.  ರಾಮ (ನಾಮಪದ) + ಉ (ಪ್ರಥಮಾವಿಭಕ್ತಿ) = ರಾಮು ಆಗಬೇಕಲ್ಲವೇ?  ರಾಮನು ಎಂಬ ನಕಾರ ಎಲ್ಲಿಂದ ಬಂತು? (ಇದರ ಹಳಗನ್ನಡರೂಪ ರಾಮನ್ ಮತ್ತು ಹಳಗನ್ನಡದಲ್ಲಿ ಇದಕ್ಕೆ ವಿಭಕ್ತಿಪ್ರತ್ಯಯವಿಲ್ಲ, ಆದ್ದರಿಂದ ಅಲ್ಲಿ ಈ ಸಮಸ್ಯೆ ಬರುವುದಿಲ್ಲ).  ಮೇಲಿನ ಸಮೀಕರಣವನ್ನು ಮರುಬರೆದರೆ ರಾಮ + ನ್ + ಉ ಹೀಗಾಗಿರಬೇಕಲ್ಲವೇ?  ಈ ನಕಾರ ಏಕೆ ಬಂತು?  ಅದೇ ರೀತಿ ಗುಡ್ಡವನ್ನು ಎಂಬುದನ್ನು ಗಮನಿಸಿ.  ಗುಡ್ಡ + ವ್ + ಅನ್ನು = ಗುಡ್ಡವನ್ನು ಆಯಿತು.  ವಕಾರವೊಂದು ಬಂದು ಸೇರಿತು.  ಇದಿಲ್ಲದೇ ಕೇವಲ 'ಅನ್ನು' ವಿಭಕ್ತಿಪ್ರತ್ಯಯ ಸೇರಿಸಿದ್ದರೆ ಗುಡ್ಡನ್ನು ಎಂದಾಗುತ್ತಿತ್ತು.  ಹಾಗೆಯೇ ಮರದಲ್ಲಿ ಎನ್ನುವಲ್ಲಿ ಮರ (ನಾಮಪದ) + ದ + ಅಲ್ಲಿ = ಮರದಲ್ಲಿ.  ಇಲ್ಲಿ ದಕಾರವೊಂದು ಸೇರಿತು.  ಮರ ಮತ್ತು ಅಲ್ಲಿ ಇಷ್ಟನ್ನು ಹಾಗೆಯೇ ಸಂಧಿ ಮಾಡಿದ್ದರೆ ಮರಲ್ಲಿ ಆಗಬೇಕಿತ್ತಷ್ಟೇ?  (ವಾಸ್ತವದಲ್ಲಿ ಇಲ್ಲಿ ಬಂದಿರುವುದು ದ ಎಂಬ ಪೂರ್ಣಾಕ್ಷರವಲ್ಲ, ದ್ ಎಂಬ ಅಕ್ಷರ ಮತ್ತು ಅ ಎಂಬ ಷಷ್ಠೀವಿಭಕ್ತಿ, ಎರಡೂ ಸೇರಿ 'ದ' ಆಗಿರುವುದು.  ನಾವು ಕನ್ನಡದಲ್ಲಿ ವಿಭಕ್ತಿಪ್ರತ್ಯಯಗಳು ಹತ್ತುವ ರೀತಿಯನ್ನು ಗಮನಿಸಿದರೆ, ಪ್ರಥಮಾ, ದ್ವಿತೀಯಾ, ಚತುರ್ಥೀ ಮತ್ತು ಷಷ್ಠೀವಿಭಕ್ತಿಪ್ರತ್ಯಯಗಳು ಸ್ವತಂತ್ರ ವ್ಯವಹಾರವುಳ್ಳವು - ನಾಮಪದಕ್ಕೆ ನೇರವಾಗಿ ಹತ್ತುತ್ತವೆ.  ಆದರೆ ತೃತೀಯಾ/ಪಂಚಮೀ ಮತ್ತು ಸಪ್ತಮೀವಿಭಕ್ತಿಗಳ ಪ್ರತ್ಯಯಗಳು ನಾಮಪದಕ್ಕೆ ನೇರವಾಗಿ ಸೇರುವುದಿಲ್ಲ - ಅವು ಷಷ್ಠೀವಿಭಕ್ತಿಯ ಮೇಲೆ ಬಂದು ಕೂರುವಂಥವು - ನ್+ಅ+ಇಂದ=ನಿಂದ, ದ್+ಅ+ಅಲ್ಲಿ=ದಲ್ಲಿ ಹೀಗೆ, ಇರಲಿ) ನಾಮಪದಕ್ಕೂ ವಿಭಕ್ತಿಪ್ರತ್ಯಯಗಳಿಗೂ ನಡುವೆ ಈ ಹೊಸ ಅಕ್ಷರಗಳು ಏಕೆ ಬರುತ್ತವೆ?  ಏಕೆಂದರೆ ನೇರವಾಗಿ ವಿಭಕ್ತಿಪ್ರತ್ಯಯ ಸೇರಿದರೆ ರಾಮು, ಗುಡ್ಡನ್ನು, ಮರಲ್ಲಿ ಮುಂತಾದ ವಿಕಾರಗಳು ಬರುವುವಷ್ಟೇ?  ಅದನ್ನು ನಿವಾರಿಸುವುದಕ್ಕೋಸ್ಕರವೇ, ನಾಲಿಗೆಗೆ ಆಧಾರವಾಗಿ ಈ ಅಕ್ಷರಗಳು ಬಂದು ಕೂಡಿಕೊಳ್ಳುತ್ತವೆ (ಆಗಮ).  ಹೀಗೆ ಯಾವ ಅಕ್ಷರವು ಆಗಮವಾಗಿ ಬರುತ್ತದೆ ಎನ್ನುವುದು, ಆ ನಾಮಪದ ಯಾವ ಸ್ವರದಿಂದ ಕೊನೆಗೊಳ್ಳುತ್ತದೆ ಮತ್ತು ಅದರ ಲಿಂಗ/ವಚನಗಳೇನು ಎಂಬುದರ ಮೇಲೆ ನಿರ್ಧಾರವಾಗುತ್ತದೆ - ಸಾಮಾನ್ಯವಾಗಿ ದ್/ನ್/ಇನ್/ಳ್/ಅಳ್/ರ್/ಅರ್ ಹೀಗೆ ಹಲವು ಅಕ್ಷರಗಳು ಬಂದು ಸೇರುತ್ತವೆ.  ಇವನ್ನು ಆಗಮ (ಹೊಸದಾಗಿ ಬಂದು ಸೇರಿದ್ದು) ಎನ್ನುತ್ತಾರೆ, 'ಔಪವಿಭಕ್ತಿ'ಗಳೆಂದೂ ಕರೆಯುತ್ತಾರೆ - ದಕಾರಾಗಮ, ನಕಾರಾಗಮ, ಇನಾಗಮ, ಳಕಾರಾಗಮ, ಅಳಾಗಮ, ಅರಾಗಮ ಇತ್ಯಾದಿ.  ಉದಾಹರಣೆಗೆ, ದಾಸನಲ್ಲಿ ಎಂಬ ಸಪ್ತಮೀವಿಭಕ್ತಿರೂಪವನ್ನು ಬಿಡಿಸಿ ಬರೆದರೆ ದಾಸ (ನಾಮಪದ) + (ನ್ (ಆಗಮ) + ಅ (ಷಷ್ಠೀ)) + ಅಲ್ಲಿ (ಸಪ್ತಮೀ) = ದಾಸ + ನ + ಅಲ್ಲಿ = ದಾಸ'ನಲ್ಲಿ'.  ಇಲ್ಲಿ "ನಲ್ಲಿ" ಎಲ್ಲಿಂದ ಬಂದಿತೆಂದು ತಿಳಿಯಿತಲ್ಲ.  ಹೀಗಾಗಿ ನಲ್ಲಿಯ ಮೂಲವಿರುವುದು ಕೊನೆಯಲ್ಲಿ ಬರುವ ಸಪ್ತಮೀವಿಭಕ್ತಿಯಲ್ಲಲ್ಲ, ನಾಮಪದಕ್ಕೆ ಸೇರುವ ಆಗಮಾಕ್ಷರಗಳಲ್ಲಿ

ಈಗ, ಈ ಆಗಮಾಕ್ಷರಗಳು ಹೇಗೆ ಬಂದು ಕೂರುತ್ತವೆ ನೋಡೋಣ - ಮೊದಲೇ ಹೇಳಿದಂತೆ ನಾಮಪದದ ಕೊನೆಯ ಸ್ವರ ಮತ್ತು ನಾಮಪದದ ಲಿಂಗವಚನಗಳೇ ಇದಕ್ಕೆ ಆಧಾರ - ಸಾಮಾನ್ಯವಾಗಿ ಹೀಗೆ:

ನಕಾರಾಗಮ
ಅಕಾರಾಂತ ಪುಲ್ಲಿಂಗ - ರಾಮ + ನ್ + ಅ = ರಾಮನ
ಆಕಾರಾಂತ ಪುಲ್ಲಿಂಗ - ಗಾಮಾ + ನ್ + ಅ = ಗಾಮಾನ
ಊಕಾರಾಂತ ಪುಲ್ಲಿಂಗ - ಬಬ್ಲೂ + ನ್ + ಅ = ಬಬ್ಲೂನ
ಊಕಾರಾಂತ ನಪುಂಸಕ - ಝೂ + ನ್ + ಅ = ಝೂನ
ಓಕಾರಾಂತ ಪುಲ್ಲಿಂಗ - ಮನ್ರೋ + ನ್ + ಅ = ಮನ್ರೋನ
ಓಕಾರಾಂತ ನಪುಂಸಕ - ಎಸ್ಕಿಮೋ + ನ್ + ಅ = ಎಸ್ಕಿಮೋನ

ಇನಾಗಮ
ವ್ಯಂಜನಾಂತ ಸರ್ವಲಿಂಗ - ಕಣ್ + ಇನ್ + ಅ = ಕಣ್ಣಿನ; ಊರ್ + ಇನ್ + ಅ = ಊರಿನ; ಮನಸ್ + ಇನ್ + ಅ = ಮನಸಿನ; ಬಾರ್+ ಇನ್ + ಅ = ಬಾರಿನ
ಉಕಾರಾಂತ ಸರ್ವಲಿಂಗ (ಆಗಮದೊಂದಿಗೆ ಉಕಾರಲೋಪವೂ) - ಓದು + ಇನ್ + ಅ = ಓದಿನ; ಕಾಡು +ಇನ್ + ಅ = ಕಾಡಿನ; ಗುಡ್ಡು + ಇನ್ + ಅ = ಗುಡ್ಡಿನ
ಉಕಾರಾಂತ ಸರ್ವಲಿಂಗ (ಆಗಮಮಾತ್ರ; ಉಕಾರಲೋಪವಿಲ್ಲ) - ಗುರು + ಇನ್ + ಅ = ಗುರುವಿನ; ಪಾರು +ಇನ್ + ಅ = ಪಾರುವಿನ; ಕರು + ಇನ್ + ಅ = ಕರುವಿನ
ಊಕಾರಾಂತ ಸರ್ವಲಿಂಗ (ಆಗಮಮಾತ್ರ; ಉಕಾರಲೋಪವಿಲ್ಲ) - ಹೂ + ಇನ್ + ಅ = ಹೂವಿನ

ಳಕಾರಾಗಮ
ಅಕಾರಾಂತ ಸ್ತ್ರೀಲಿಂಗ - ಸೇವಕ + ಳ್ + ಅ = ಸೇವಕಳ (ಸೇವಿಕಾ/ಸೇವಕಿ ಎಂಬುದು ಸರಿ, ಸೇವಕಶಬ್ದಕ್ಕೇ ಸ್ತ್ರೀಲಿಂಗಪ್ರತ್ಯಯ ಸೇರಿಸಬೇಕಾದರೆ ಇದು)
ಆಕಾರಾಂತ ಸ್ತ್ರೀಲಿಂಗ - ರೀಟಾ + ಳ್ + ಅ = ರೀಟಾಳ
ಊಕಾರಾಂತ ಸ್ತ್ರೀಲಿಂಗ - ಸೋನೂ + ಳ್ + ಅ = ಸೋನೂಳ
ಓಕಾರಾಂತ ಸ್ತ್ರೀಲಿಂಗ - ದನ್ನೋ + ಳ್ + ಅ = ದನ್ನೋಳಲ್ಲಿ

ದಕಾರಾಗಮ
ಅಕಾರಾಂತ ನಪುಂಸಕ - ಮರ + ದ್ + ಅ = ಮರದ
ಆಕಾರಾಂತ ನಪುಂಸಕ - ಪಿzzಆ + ದ್ + ಅ = ಪಿzzಆದ
ಊಕಾರಾಂತ ನಪುಂಸಕ - ಝೂ + ದ್ + ಅ = ಝೂದ
ಓಕಾರಾಂತ ನಪುಂಸಕ - ಎಸ್ಕಿಮೋ + ದ್ + ಅ = ಎಸ್ಕಿಮೋದ

ರಕಾರಾಗಮ
ಅಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಸೇವಕ + ರ್ + ಅ = ಸೇವಕರ

ಅವರ್ ಆಗಮ
ಆಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಗಾಮಾ + ಅವರ್ + ಅ = ಗಾಮಾ ಅವರ; ರೀಟಾ + ಅವರ್ + ಅ = ರೀಟಾ ಅವರ
ಈಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಅಣ್ಣಾಜೀ + ಅವರ್ + ಅ = ಅಣ್ಣಾಜೀ ಅವರ; ಜೋಲೀ + ಅವರ್ + ಅ = ಜೋಲೀ ಅವರ
ಊಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಬಬ್ಲೂ + ಅವರ್ + ಅ = ಬಬ್ಲೂ ಅವರ; ಸೋನೂ + ಅವರ್ + ಅ = ಸೋನೂ ಅವರ
ಓಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಮನ್ರೋ + ಅವರ್ + ಅ = ಮನ್ರೋ ಅವರ; ದನ್ನೋ + ಅವರ್ + ಅ = ದನ್ನೋ ಅವರ

ಅರಾಗಮ
ಇ/ಎಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಹಿರಿ + ಅರ್ + ಅ = ಹಿರಿಯರ

ಅಱಾಗಮ (ಹೊಸಗನ್ನಡದಲ್ಲಿ ಇದೂ ಅರಾಗಮವೇ)
ಉಕಾರಾಂತ ಕೃದಂತ, ಸರ್ವನಾಮ, ಗುಣವಾಚಕ ಅಥವಾ ಸಂಖ್ಯಾವಾಚಕ - ಮಾಡಿದ್ದು + ಅರ್ + ಅ = ಮಾಡಿದ್ದರ; ಅದು + ಅರ್ + ಅ = ಅದರ; ದೊಡ್ಡದು + ಅರ್ + ಅ = ದೊಡ್ಡದರ; ಐದು + ಅರ್ + ಅ = ಐದರ

ಗಳಾಗಮ
ಅಕಾರಾಂತ ನಪುಂಸಕಬಹುವಚನ - ಮರ + ಗಳ್ + ಅ = ಮರಗಳ
ಆಕಾರಾಂತ ನಪುಂಸಕಬಹುವಚನ - ಪಿzzಆ + ಗಳ್ + ಅ = ಪಿzzಆಗಳ
ಇ/ಎಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಸಿರಿ + ಗಳ್ + ಅ = ಸಿರಿಗಳ; ದೊರೆ + ಗಳ್ + ಅ = ದೊರೆಗಳ
ಇ/ಎಕಾರಾಂತ ನಪುಂಸಕಲಿಂಗಬಹುವಚನ - ನದಿ + ಗಳ್ + ಅ = ನದಿಗಳ; ತೊರೆ + ಗಳ್ + ಅ = ತೊರೆಗಳ
ಈಕಾರಾಂತ ನಪುಂಸಕಲಿಂಗಬಹುವಚನ - ಸಬ್ಜೀ + ಗಳ್ + ಅ = ಸಬ್ಜೀಗಳ
ಓಕಾರಾಂತ ನಪುಂಸಕಲಿಂಗಬಹುವಚನ - ಎಸ್ಕಿಮೋ + ಗಳ್ + ಅ = ಎಸ್ಕಿಮೋಗಳ

ಯಕಾರಾಗಮ
ಇ/ಎಕಾರಾಂತ ಸರ್ವಲಿಂಗ ಏಕವಚನ - ಹರಿ + ಯ್ + ಅ = ಹರಿಯ;  ದೊರೆ + ಯ್ + ಅ = ದೊರೆಯ; ಲಕ್ಷ್ಮಿ + ಯ್ + ಅ = ಲಕ್ಷ್ಮಿಯ; ವರದೆ + ಯ್ + ಅ = ವರದೆಯ; ನದಿ + ಯ್ + ಅ = ನದಿಯ; ತೊರೆ + ಯ್ + ಅ = ತೊರೆಯ;
ಈಕಾರಾಂತ ಸರ್ವಲಿಂಗ ಏಕವಚನ - ಅಣ್ಣಾಜೀ + ಯ್ + ಅ = ಅಣ್ಣಾಜೀಯ; ಜೋಲೀ + ಯ್ + ಅ = ಜೋಲೀಯ; ಸಬ್ಜೀ + ಯ್ + ಅ = ಸಬ್ಜೀಯ
 
ಮೇಲಿನ ಎಲ್ಲವೂ ಷಷ್ಠೀವಿಭಕ್ತಿರೂಪಗಳು.  ಅದಕ್ಕೇ 'ಅಲ್ಲಿ' ಪ್ರತ್ಯಯ ಸೇರಿಸಿದರೆ ಸಪ್ತಮೀವಿಭಕ್ತಿರೂಪವು ದೊರೆಯುತ್ತದೆ - ರಾಮನಲ್ಲಿ, ಸೇವಕಳಲ್ಲಿ, ಮರದಲ್ಲಿ, ಸೇವಕರಲ್ಲಿ, ಗಾಮಾ ಅವರಲ್ಲಿ, ಹಿರಿಯರಲ್ಲಿ, ಮಾಡಿದ್ದರಲ್ಲಿ, ಮರಗಳಲ್ಲಿ, ಹರಿಯಲ್ಲಿ ಹೀಗೆ.

ಅದು ಸರಿ.  ಸಹಜವಾಗಿ ಮನೆಯಲ್ಲಿ, ಬೀದಿಯಲ್ಲಿ, ಕಾಶಿಯಲ್ಲಿ ಎಂದಿರಬೇಕಾದದ್ದು ಆಡುಮಾತಿನಲ್ಲಿ ಮನೇನಲ್ಲಿ, ಬೀದೀನಲ್ಲಿ, ಕಾಶೀನಲ್ಲಿ ಎಂದೇಕಾಯಿತು ಎಂಬುದಲ್ಲವೇ ಪ್ರಶ್ನೆ?  ಇದು ತಪ್ಪೇನೋ ಹೌದು, ಆದರೆ ಈ ತಪ್ಪು ಬಳಕೆ ಬಂದದ್ದಾದರೂ ಹೇಗೆ?

ಮೇಲೆ ನಕಾರಾಗಮವನ್ನು ಪಡೆದುಕೊಂಡ ಅಕಾರಾಂತಪುಲ್ಲಿಂಗಗಳನ್ನು ನೋಡಿ - ರಾಮ (ನಾಮ) + ನ್ (ಆಗಮ) + ಅ (ಷಷ್ಠೀ) + ಅಲ್ಲಿ (ಸಪ್ತಮೀ) = ರಾಮನಲ್ಲಿ; ಇದೇ ರೀತಿ ಕೃಷ್ಣನಲ್ಲಿ, ಬ್ರಹ್ಮನಲ್ಲಿ ಹೀಗೊಂದು 'ನಲ್ಲಿ'ಯ ಕಂತೆ.  

ಹಾಗೆಯೇ ಇನಾಗಮವನ್ನು ಪಡೆದ ವ್ಯಂಜನಾಂತಗಳನ್ನೂ ಉಕಾರಾಂತಗಳನ್ನೂ ಗಮನಿಸಿ - ಕಣ್ಣಿನಲ್ಲಿ, ಕಾಲಿನಲ್ಲಿ, ಊರಿನಲ್ಲಿ, ಮನಸಿನಲ್ಲಿ, ಬಾರಿನಲ್ಲಿ, ಕಾರಿನಲ್ಲಿ, ಓದಿನಲ್ಲಿ, ಕಾಡಿನಲ್ಲಿ, ಗುಡ್ಡಿನಲ್ಲಿ - ಇದು ಮತ್ತೊಂದು 'ನಲ್ಲಿ'ಯ ಕಂತೆ.  ಇವಂತೂ ಬಳಕೆಯಲ್ಲಿ ಮತ್ತಷ್ಟು ಸವೆದು ಕಣ್ನಲ್ಲಿ, ಕಾಲ್ನಲ್ಲಿ, ಊರ್ನಲ್ಲಿ, ಮನಸ್ನಲ್ಲಿ, ಬಾರ್ನಲ್ಲಿ, ಕಾರ್ನಲ್ಲಿ, ಓದ್ನಲ್ಲಿ, ಕಾಡ್ನಲ್ಲಿ, ಗುಡ್ನಲ್ಲಿ ಎಂದಾಗಿ, 'ನಲ್ಲಿ'ಯ ಭ್ರಮೆ ಮತ್ತಷ್ಟು ಹೆಚ್ಚಾಗುತ್ತದೆ.  ಇವಲ್ಲದೇ, ಇನಾಗಮವನ್ನು ಪಡೆದು, ನಾಮಪದದ ಉಕಾರವನ್ನೂ ಉಳಿಸಿಕೊಂಡ ಉಕಾರಾಂತಗಳನ್ನೂ ನೋಡಬಹುದು - ಗುರುವಿನಲ್ಲಿ, ಪಾರುವಿನಲ್ಲಿ, ಕರುವಿನಲ್ಲಿ.  ಇಲ್ಲೆಲ್ಲಾ ಸಂಧಿಯಾದಾಗ ಉಂಟಾದ 'ವಿ' ಅಕ್ಷರ ಆಡುವ ನಾಲಿಗೆಗೆ ತೊಡಕು.  ಆದ್ದರಿಂದ ಅದು ಬಳಕೆಯಲ್ಲಿ ಸವೆದು ಸವೆದು ಹಿಂದಿನ ಉಕಾರದೊಡನೆ ಉಕಾರವಾಗಿ ಬೆರೆತು ಕಾಣೆಯಾಗಿಬಿಡುತ್ತದೆ.  ಗುರುವಿನಲ್ಲಿ > ಗುರುವ್ ನಲ್ಲಿ > ಗುರುವ್ನಲ್ಲಿ > ಗುರೂನಲ್ಲಿ ಹೀಗೆ.  ಹೀಗಾಗಿ ಗುರೂನಲ್ಲಿ, ಪಾರೂನಲ್ಲಿ, ಕರೂನಲ್ಲಿ ಇಂತಹ (ತಪ್ಪು) ರೂಪಗಳು ಬಳಕೆಯಲ್ಲಿ ನಿಲ್ಲುತ್ತವೆ (ಕೆಲವರು "ಪಾರೂನಲ್ಲಿ" ಎಂಬಲ್ಲಿ ನಕಾರವನ್ನು ಪುಲ್ಲಿಂಗವಾಚಿಯೆಂದು ಭ್ರಮಿಸಿ, ಸ್ತ್ರೀಲಿಂಗಕ್ಕೆ ಅದೇಕೆಂದು ಚಿಂತಿಸಿ ಅದನ್ನೂ ತೆಗೆದು ನಕಾರದ ಜಾಗಕ್ಕೆ ಳಕಾರ ಹಾಕುವುದೂ ಉಂಟು ಪಾರೂನಲ್ಲಿ > ಪಾರೂಳಲ್ಲಿ ಆಗುವುದು ಹೀಗೆ. ಇರಲಿ).  ಕನ್ನಡದಲ್ಲಿ ಉಕಾರಾಂತ/ವ್ಯಂಜನಾಂತಶಬ್ದಗಳ ಬಳಕೆ ಬಹಳ ಹೆಚ್ಚು.  ಆದ್ದರಿಂದ ಈ ಬಗೆಯ ಸವೆದ 'ನಲ್ಲಿ'ಗಳ' ಬಳಕೆಯೂ ಬಹಳ ಹೆಚ್ಚೇ :) - ಕಾರ್ನಲ್ಲಿ, ಬಸ್ನಲ್ಲಿ, ಊರ್ನಲ್ಲಿ, ಬಿಗಿನಿಂಗ್ನಲ್ಲಿ, ಪಾರೂನಲ್ಲಿ, ಮಗೂನಲ್ಲಿ, ಹಸೂನಲ್ಲಿ, ಕರೂನಲ್ಲಿ, ಶುರೂನಲ್ಲಿ ಹೀಗೆ.  'ನಲ್ಲಿ'ಯೆಂಬುದು ಈಗ ಸರ್ವೇಸಾಮಾನ್ಯವಾಯಿತಲ್ಲ.

ಇನ್ನು ಈ ಭಾವನೆಗೆ ಪುಷ್ಟಿ ಕೊಡುವಂತೆ ಮೇಲೆ ನಾವು ನೋಡಿದ ಆಕಾರಾಂತ, ಊಕಾರಾಂತ, ಓಕಾರಾಂತಪದಗಳ ಪ್ರತ್ಯಯವನ್ನು ಮತ್ತೆ ಗಮನಿಸಿ - ಅವೆಲ್ಲಾ ನಮಗೆ ಅಪರಿಚಿತ ಪದಗಳೇ - ಗಾಮಾನಲ್ಲಿ, ಬಬ್ಲೂನಲ್ಲಿ, ಮನ್ರೋನಲ್ಲಿ, ಝೂನಲ್ಲಿ, ಮೆಂಥೋನಲ್ಲಿ (ಇಲ್ಲಿ ಪುಲ್ಲಿಂಗವಷ್ಟೇ ಅಲ್ಲ, ನಪುಂಸಕಲಿಂಗಕ್ಕೂ 'ನಲ್ಲಿ' ಬಂತು).  ಇವಿಷ್ಟರಿಂದ ಏನಾಯಿತು?  'ನಲ್ಲಿ' ಎಂಬುದು ಸಾಮಾನ್ಯವಾದ ಸಪ್ತಮೀವಿಭಕ್ತಿಪ್ರತ್ಯಯ, ಹೊಸಪದಗಳಿಗೆ 'ನಲ್ಲಿ' ಬಳಸಬಹುದು/ಬೇಕು ಎಂಬ ತಪ್ಪು ಅಂಶ ನಮ್ಮ ವ್ಯಾಕರಣಪ್ರಜ್ಞೆಯಲ್ಲಿ ಜಮೆಯಾಗಿಹೋಯಿತು.  

ಸರಿ, ಆದರೂ ಬೀದಿ, ಕಾಶಿ, ಮನೆ ಇವೆಲ್ಲಾ ನಮಗೆ ಅಪರಿಚಿತಪದಗಳಲ್ಲವಷ್ಟೇ?  ಅವಕ್ಕೆ 'ಅಲ್ಲಿ' ಪ್ರತ್ಯಯ ಸೇರಬೇಕೆಂದು ನಮ್ಮ ಪ್ರಜ್ಞೆಗೆ ಗೊತ್ತು.  ಬರೆಯುವಾಗ ಚಿಂತಿಸಿ ಬರೆಯುತ್ತೇವಾದ್ದರಿಂದ ಸರಿಯಾಗಿಯೇ ಬರೆಯುತ್ತೇವೆ ಕೂಡ.  ಆದರೆ ಮಾತಾಡುವಾಗ ಮಾತ್ರ ಏಕೆ "ನಲ್ಲಿ ಬಿಡು"ತ್ತೇವೆ? ಇದಕ್ಕೆ ಅಪ್ರಜ್ಞಾಪೂರ್ವಕವಾಗಿ ನಾವು ಆ ನಾಮಪದಗಳನ್ನು ನುಡಿಯುವ ರೀತಿಯೇ ಕಾರಣ.  ನಾವು ಆಡುಮಾತಿನಲ್ಲಿ ಬೀದಿ, ಕಾಶಿ, ಮನೆ ಎಂದು ಹ್ರಸ್ವವನ್ನು ಹ್ರಸ್ವವಾಗಿ ನುಡಿಯುವುದೇ ಇಲ್ಲ.  ಬೀದೀ, ಕಾಶೀ, ಮನೇ ಎಂದು ದೀರ್ಘವಾಗಿಯೇ ನುಡಿಯುವುದು ಉದಾಹರಣೆಗೆ:

"ಅಯ್ಯೋ ಬಿಡಮ್ಮಾ, ಎಲ್ಲಾರ್ ಮನೇ ದೋಸೇನೂ ತೂತೇ" (ಅಯ್ಯೋ ಬಿಡಮ್ಮಾ, ಎಲ್ಲರ ಮನೆ ದೋಸೆಯೂ ತೂತೇ)
"ನಮ್ ಬೀದೀ ಎಷ್ಟೋಂದು ದೊಡ್ದಿದೇ ಗೊತ್ತಾ?"; (ನಮ್ಮ ಬೀದಿ ಎಷ್ಟೊಂದು ದೊಡ್ಡದಿದೆ ಗೊತ್ತಾ?)
"ಕಾಶೀಗ್ಹೋದ ನಂ ಭಾವ ಕಬ್ಡದ್ ದೋಣೀಲೀ; ರಾಶೀ ರಾಶೀ ಗಂಗೇ ತರೋಕ್ ಸೊಳ್ಳೇ ಪರ್ದೇಲೀ" (ಕಾಶಿಗೆ ಹೋದ ನಮ್ಮ ಭಾವ ಕಬ್ಬಿಣದ್ ದೋಣಿಯಲ್ಲಿ; ರಾಶಿರಾಶಿ ಗಂಗೆ ತರೋಕ್ ಸೊಳ್ಳೆಯ ಪರದೆಯಲ್ಲಿ - ಇದೂ ಆಡುಮಾತೇ, 'ಸರಿ'ಯಾಗಿ ಆಡುವ ಮಾತು, ಆದರೆ ತಿಳಿದವರೂ ಹೀಗೆ ಮಾತಾಡುವುದಿಲ್ಲವೆಂಬುದನ್ನು ಗಮನಿಸಬೇಕು)

ಮನೆ, ಬೀದಿ, ಕಾಶಿ ಇವುಗಳೇನೋ ನಮಗೆ ಸುಪರಿಚಿತವಾದ ಪದಗಳು.  ಆದರೆ ಮಾತಿನ ಓಘದಲ್ಲಿ ನಾವು ಬಳಸುವ ಮನೇ, ಬೀದೀ, ಕಾಶೀ ಇವು ನಮ್ಮ ಶಿಷ್ಟವ್ಯಾಕರಣಪ್ರಜ್ಞೆಗೆ ಅಪರಿಚಿತ.  ಮೇಲೆ ವಿವರಿಸಿದಂತೆ, ನಮ್ಮ ವ್ಯಾಕರಣಪ್ರಜ್ಞೆಯಲ್ಲಿ ದಾಖಲಾಗಿರುವ ವಿಷಯವೆಂದರೆ, ಅಪರಿಚಿತಪದಗಳಿಗೆ ಸಪ್ತಮೀವಿಭಕ್ತಿಯಾಗಿ 'ನಲ್ಲಿ' ಬರಬೇಕೆಂಬುದಷ್ಟೇ.  ಆದ್ದರಿಂದ ಬರೆಯುವಾಗ ಸರಿಯಾಗಿಯೇ ಚಿಂತಿಸಿ ಬರೆದರೂ ಆಡುವಾಗ ನಾವು ಒಂದೊಂದು ಪದವನ್ನೂ ಚಿಂತಿಸಿ ಆಡುವುದಿಲ್ಲವಾದುದರಿಂದ, ಮಾತಿನ ಓಘದಲ್ಲಿ ನಲ್ಲಿ ಲಗತ್ತಾಗಿಬಿಡುತ್ತದೆ.  ಮನಸ್ಸು ಮಾಡಿದರೆ ಸರಿಪಡಿಸಲಾಗದ ವಿಷಯವೇನೂ ಅಲ್ಲ.  ಆದರೆ ಆಡುಮಾತಿನ ರೀತಿಯನ್ನು ಮೆಚ್ಚಿ ಆಡುವವರು ಆಡುಮಾತಿನ ಬಗ್ಗೆ ಅಷ್ಟು ಸೂಕ್ಷ್ಮವಾಗಿ ತಲೆಕೆಡಿಸಿಕೊಳ್ಳದೇ ಆ ರೂಪವನ್ನೇ ಉಳಿಸಿಕೊಳ್ಳುವುದುಂಟು.  

ತಪ್ಪು, ಆದರೆ ವೈಯಾಕರಣನು ತಾನೆ ನಮ್ಮ ಆಡುಮಾತಿನ ಮೇಲೆ ಎಷ್ಟೆಂದು ಕಾರ್ಕತ್ತು ನಡೆಸಿಯಾನು?

Thursday, July 22, 2021

'ಬೋಳುಬಸವ' ಶ್ರೀ ಕುಮಾರ ನಿಜಗುಣ ಸ್ವಾಮಿಗಳು - ಕೆಲವು ನೆನಪುಗಳು

ಹಿರಿಯರಾದ ಶ್ರೀ ಕುಮಾರನಿಜಗುಣಸ್ವಾಮಿಗಳು ಮೊನ್ನೆ ಇಹಲೋಕವನ್ನು ತ್ಯಜಿಸಿದ್ದಾರೆ.  ಇದು ಅವರು ಬಯಸಿದ ಕೈವಲ್ಯವೋ ಮೋಕ್ಷವೋ ಅಲ್ಲವೋ ತಿಳಿಯುವ ಯೋಗ್ಯತೆ ನಮಗಿಲ್ಲ.  ಸನ್ಯಾಸಿಗಳು ಮೃತಿಯನ್ನೈದಿದಾಗ ಶೋಕಿಸಬಾರದೆಂಬ ಮಾತೂ ಇದೆ.  ಆದರೆ ನಿತ್ಯಸಂಸಾರಿಗಳಾದ ನಮಗೆ ಅದರ ಗೊಡವೆಯೇಕೆ?  ನಮ್ಮ ದುಃಖ ನಮ್ಮದು.

ಕುಮಾರನಿಜಗುಣರ ಬಗೆಗೆ ಹೆಚ್ಚು ಜನಕ್ಕೆ ತಿಳಿದಿರಲಾರದು - ಅವರು ಸಾಹಿತ್ಯಲೋಕದ, ವಿದ್ವಲ್ಲೋಕದ ಧ್ರುವತಾರೆಯಾಗಿ ತೊಳಗಲಿಲ್ಲ, ಸೂರ್ಯನಾಗಿ ಬೆಳಗಲಿಲ್ಲ - ಹಾಗೆ ತೊಳಗಿ ಬೆಳಗಲು ಬೇಕಾದ ವಿದ್ವತ್ತೆಯೂ, ಅದನ್ನು ಮಿಂಚಿದ ಪ್ರತಿಭೆಯೂ ಅವರ ಬಳಿ ಬೇಕಾದಷ್ಟಿತ್ತೆಂಬುದನ್ನು ಅವರನ್ನು ವಿದ್ವದೃಷ್ಟಿಯಿಂದ ಕಂಡವರು ಬಲ್ಲರು - ಬಲ್ಲವರು ಹಲವಷ್ಟು ಬರೆದಿದ್ದಾರೆ ಕೂಡ.  ಅದರಲ್ಲಿ ನಾನು ಕಂಡುದು ಅತ್ಯಲ್ಪವೆಂದರೆ ಅದಕ್ಕೆ ಕಾರಣ ಆ ವಿದ್ವತ್ಪ್ರತಿಭೆಯನ್ನು ಸ್ವಾಮಿಗಳು ಧರಿಸಿದ್ದ ರೀತಿ - ಆ ವಿದ್ವತ್ತೆ ಮತ್ತು ಪ್ರತಿಭೆಗಳ ಭಾರವು ತಮ್ಮದಲ್ಲವೆಂಬಂತೆ ಅವಲೀಲೆಯಾಗಿ ಹೊತ್ತು ಬದುಕಿದವರು ಕುಮಾರನಿಜಗುಣಸ್ವಾಮಿಗಳು.  ಯಾವುದೇ ವೈಭವ, ಭಾಜಾಭಜಂತ್ರಿ, ತುತ್ತೂರಿಗಳಿಲ್ಲದೇ, ಜಾತಿ-ರಾಜಕೀಯಗಳ ಹೋರಟೆಯಿಲ್ಲದೇ ಚಿಲಕವಾಡಿಯ ಬೆಟ್ಟದ ಗುಹೆಯ ಪ್ರಸನ್ನತೆಯಲ್ಲಿ, ಗುರು ನಿಜಗುಣರ ಸಾನ್ನಿಧ್ಯದಲ್ಲಿ, ಕೇವಲ ಕಾಡುಹೂವಿನಂತೆ ಬದುಕಿ ಮರೆಯಾದರು.  ರಾಜರಸ್ತೆ ಬಿಟ್ಟು ಪಕ್ಕಕ್ಕೆ ಹೊರಳಿದಲ್ಲದೇ, ಕಾಡುಹೊಕ್ಕಲ್ಲದೇ ವನಸುಮದ ಗಂಧ ಅರಿವಿಗೆ ಬಾರದಷ್ಟೇ?  ಹೀಗಾಗಿ ಅನೇಕರಿಗೆ ಅಜ್ಞಾತರಾಗಿಯೇ ಉಳಿದರು ಸ್ವಾಮಿಗಳು, ಅದು ಅವರು ಬಯಸಿ ಆರಿಸಿಕೊಂಡ ಬದುಕು.  ಅದನ್ನು ಆಗೀಗಾದರೂ ಹತ್ತಿರದಿಂದ ಕಂಡು ಆಘ್ರಾಣಿಸಿದವರು ಭಾಗ್ಯಶಾಲಿಗಳು - ಆ ಭಾಗ್ಯದ ಕಿಂಚಿತ್ಪ್ರಮಾಣವು ನನ್ನದೂ ಕೂಡ.

ಅವರ ಪರಿಚಯವಿರುವ ಬಹುಮಂದಿಗೆ ಕುಮಾರ ನಿಜಗುಣಸ್ವಾಮಿಗಳೆಂದರೆ ಮೊಟ್ಟಮೊದಲು ಮನಸ್ಸಿಗೆ ಬರುವುದು ಅವರ ಅಗಾಧ ವಿದ್ವತ್ಕೃಷಿಯಲ್ಲ, ಅವರ "ಬೋಳು ಬಸವನ ಬೊಂತೆ".  ಪೂಜ್ಯ ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳುಮುನಿಯನ ಕಗ್ಗಗಳಂತೆಯೇ ಇದೂ ಒಂದು ಬಿಡಿಚೌಪದಿಗಳ ಗುಚ್ಚ.  ಶೈಲಿವಿನ್ಯಾಸಗಳಲ್ಲಿ ಅದರ ಅನುಕರಣೆಯಂತೆ ತೋರಿ ಬಂದರೂ ಹೂರಣದಲ್ಲಿ ಇದು ಅವರದೇ ಜೀವನಾನುಭವದ, ಅನುಭಾವದ ರಸಗಟ್ಟಿ, ಬದುಕಿನ ಪ್ರಾಮಾಣಿಕ ಕಾಣ್ಕೆ.  ಅದರಂತೆ ಇದೂ ಬದುಕಿನ ದುರ್ಭರಸನ್ನಿವೇಶಗಳಲ್ಲಿ ನನ್ನ ಕೈಹಿಡಿದು ನಡೆಸಿದೆ.  ಈ ಕೃಪೆಗಾಗಿ ಸ್ವಾಮಿಗಳು ನನಗೆ ವಿಶೇಷವಾಗಿ ಪ್ರಾತಃಸ್ಮರಣೀಯರು.  ಬೋಳು ಬಸವನ ಬೊಂತೆಯಲ್ಲಿ ಒಂದು ಪದ್ಯವಿದೆ:

ಮಕ್ಕಳಿಲ್ಲದವರಿಗೆ ಮುಕ್ತಿ ದುರ್ಲಭವೆಂದು
ಉಕ್ಕಿಪರು ದುಃಖಮಂ ಹೆಗ್ಗ ಜನರು
ಮಕ್ಕಳಾಗದೆಯಲ್ತು ಮಕ್ಕಳಂತಾಗದಿರೆ
ದಕ್ಕದೈ ಮೋಕ್ಷಸುಖ ಬೋಳುಬಸವ.

ಇದಕ್ಕೆ ಲಕ್ಷ್ಯವಾಗಿ ಬದುಕಿದವರು ಸ್ವಾಮಿಗಳು.  ಮಗುವಿನ ಮಂದಹಾಸ, ಮಗುವಿನ ಮುಗ್ಧತೆ, ಮಗುವಿನದೇ ಸ್ನೇಹಪರತೆ, ಮಗುವಿನದೇ ಸರಳತೆ, ಮಗುವಿನದೇ ಶೀಘ್ರಕೋಪವೂ (ಈ ಕೊನೆಯ ಗುಣದ ಪರಿಚಯ ನನಗಾಗಿಲ್ಲ ಆದರೆ ಅದನ್ನು ಅನುಭವಿಸಿದವರು ಹಲವರು ಅದಕ್ಕೆ ಸಾಕ್ಷಿ ನುಡಿಯಬಲ್ಲರು).  ಆದರೆ ಇವೆಲ್ಲವೂ ಅವರಲ್ಲಿ ಶ್ರೀಮಂತವಾಗಿ ನೆಲೆಗೊಂಡಿದ್ದ ಭಾವಪ್ರಾಮಾಣಿಕತೆಯಿಂದ ಹೊಮ್ಮಿದ್ದೆನ್ನುವುದರಲ್ಲಿ ಸಂಶಯವಿಲ್ಲ - ಸಂತಸವಾಗಲಿ, ಸ್ನೇಹವಾಗಲಿ, ಮಂದಹಾಸವಾಗಲಿ, ಕೊನೆಗೆ ಆ ಕ್ಷಣಕ್ಕೆ ಉರವಣಿಸಿ ಮರೆಯಾಗುವ ಕೋಪವಾಗಲಿ ಪ್ರಾಮಾಣಿಕವಾದದ್ದು, ಕಪಟವರಿಯದ್ದು, ಪರಿಶುದ್ಧವಾದದ್ದು.  ಹೀಗಿರುವುದೂ ಸುಲಭವೇನಲ್ಲ.

ಕುಮಾರನಿಜಗುಣರ ಪರೋಕ್ಷ ಪರಿಚಯ ನನಗಾದದ್ದು ಅದೇ ಬೋಳುಬಸವನ ಬೊಂತೆಯಿಂದಲೇ.  ನಮ್ಮ ತಂದೆಯವರ ಸಂಗ್ರಹದಲ್ಲಿತ್ತು.  ಆಗ ನನಗೆ ಹತ್ತೋ ಹನ್ನೊಂದೋ.  ಆಗಿನ್ನೂ ಅವರು ಸ್ವಾಮಿಗಳಾಗಿರಲಿಲ್ಲ, ಲಾಯರ್ ಪಿ ಬಸವಣ್ಣನವರಾಗಿದ್ದರು.  ತಿಂಗಳಿಗೊಮ್ಮೆಯೋ ಎರಡು ತಿಂಗಳಿಗೊಮ್ಮೆಯೋ ನಡೆಯುತ್ತಿದ್ದ 'ಟೀಚರ್ಸ್ ಮೀಟಿಂಗ್'ನಲ್ಲಿ ಕೆಲವೊಮ್ಮೆ ಭಾಷಣಕಾರರಾಗಿ ಶ್ರೀ ಬಸವಣ್ಣನವರನ್ನು ವಿದ್ಯಾ ಇಲಾಖೆ ಕರೆಸುತ್ತಿತ್ತೆಂದು, ಶಿಕ್ಷಕರಾಗಿದ್ದ ನಮ್ಮ ತಂದೆ ಹೇಳಿದ್ದ ನೆನಪು.  ಇಂತಹ ಮೀಟಿಂಗೊಂದರಲ್ಲಿ ಬಸವಣ್ಣನವರು ಆಗಷ್ಟೇ ಪ್ರಕಟವಾಗಿದ್ದ ತಮ್ಮ ಬೋಳುಬಸವನ ಬೊಂತೆಯನ್ನು ಶಿಕ್ಷಕರಿಗೆ ಹಂಚಿದ್ದರೆಂದು ನೆನಪು.  ನಮ್ಮ ಮನೆಗೆ ಬೊಂತೆ ಬಂದದ್ದು ಹೀಗೆ.  ಸಾಮಾನ್ಯವಾಗಿ ನಮ್ಮ ತಂದೆಯವರ ಸಂಗ್ರಹದಲ್ಲಿದ್ದ ಪುಸ್ತಕವನ್ನೆಲ್ಲಾ ನಾನು ಅದೊಂದು ರೀತಿ ನಿಸ್ಪೃಹತೆಯಿಂದ ಓದುತ್ತಿದ್ದೆ - ಓದಬೇಕೆಂಬ ಕುತೂಹಲವಿಲ್ಲ, ಜ್ಞಾನವೃದ್ಧಿಯೋ ಮತ್ತೊಂದೋ ಉದ್ದೇಶವೂ ಇಲ್ಲ - ಸುಮ್ಮನೇ ಓದುವ ಹವ್ಯಾಸವಷ್ಟೇ.  ಅದೇ ನಿಸ್ಪೃಹತೆಯಿಂದಲೇ ಮಂಕುತಿಮ್ಮನ ಕಗ್ಗವನ್ನೂ ಓದಿದ್ದು, ಅದೇ ರೀತಿ ಬೋಳುಬಸವನ ಬೊಂತೆಯನ್ನೂ.  ಹೀಗೆ ಲಾಯರ್ ಬಸವಣ್ಣ ಮತ್ತು ಬೋಳುಬಸವನ ಬೊಂತೆ ಇವೆರಡೂ ಪರ್ಯಾಯನಾಮಗಳಾಗಿ ನನ್ನ ಸ್ಮೃತಿಕೋಶದಲ್ಲಿತ್ತು.  ಅದು ಬಿಟ್ಟರೆ ನಮ್ಮ ಪಾಲಿಗೆ, ಕೊಳ್ಳೇಗಾಲದಲ್ಲಿ ಆ ಕಾಲಕ್ಕೆ ಖ್ಯಾತನಾಮರಾಗಿದ್ದ ನಾಲ್ಕೋ ಐದೋ ಜನ ಲಾಯರುಗಳಲ್ಲಿ ಪಿ ಬಸವಣ್ಣನವರದ್ದೂ ಒಂದು ಹೆಸರು - ನೇರ ಪರಿಚಯವಿಲ್ಲ - ಕಾನೂನೆಂಬ ಒಂದು ಪ್ರಾಣಿ ಇದೆಯೆಂಬುದನ್ನೂ ಅರಿಯದ ಸರಳಜೀವನಕ್ಕೆ ಲಾಯರುಗಳ ಪ್ರವೇಶ ತಾನೇ ಹೇಗೆ ಸಾಧ್ಯ.

ಬಸವಣ್ಣನವರನ್ನು ಅಲ್ಲಿಲ್ಲಿ ಪೇಟೆಬೀದಿ ಮೊದಲಾದ ಕಡೆ ಸುಮ್ಮನೇ ಕಂಡಿದ್ದೆನಾದರೂ ಮೊದಲ ಬಾರಿಗೆ ಹತ್ತಿರದಿಂದ ಕಂಡಿದ್ದು ಒಂದು ತಮಾಷೆಯ ಸಂದರ್ಭದಲ್ಲಿ.  ನಮ್ಮೂರಿನಲ್ಲಿ ಇನ್ನೊಬ್ಬರು ಹೆಸರಾಂತ ಲಾಯರಿದ್ದರು.  ಶೇಷಾದ್ರಿ ಅಯ್ಯಂಗಾರರೆಂದೋ ಏನೋ ಅವರ ಹೆಸರು.  ಅವರಿಗೂ ನನಗೂ ಸಂಬಂಧವುಂಟಾದದ್ದೂ ವೃತ್ತಿಯ ಕಾರಣದಿಂದಲ್ಲ, ನಮ್ಮೂರ ಆಂಜನೇಯನ ಕಾರಣದಿಂದ.  10-11 ವರ್ಷದವನಾದ ನನಗೂ ಪ್ರತಿಷ್ಠಿತ ವಕೀಲರಾಗಿದ್ದ, ಆಗ್ಗೆ ಸುಮಾರು ಐವತ್ತು ಮೀರಿರಬಹುದಿದ್ದ ಅಯ್ಯಂಗಾರರಿಗೂ ಇದ್ದ ಸಮಾನಧರ್ಮ ಈ ಹನುಮದ್ಭಕ್ತಿಯೇ.  ಆ ಪರಿಚಯದಿಂದಲೇ ಅವರ ಮಡದಿಮಕ್ಕಳೊಂದಿಗೂ ಪರಿಚಯ.  ದೊಡ್ಡ ಮನೆ, ಹೊರಗೆ ಅದಕ್ಕಿಂತ ದೊಡ್ಡದಾದ ಸುಮಾರು ನಲವತ್ತೋ ಐವತ್ತೋ ಅಡಿ ವಿಸ್ತೀರ್ಣವುಳ್ಳ ಅಂಗಳ.  ಜಗುಲಿಯ ಮೇಲೇ ಲಾಯರರ ಆಫೀಸು - ಕಕ್ಷಿದಾರರನ್ನು, ವೃತ್ತಿಬಾಂಧವರನ್ನು ಅವರು ಭೇಟಿಯಾಗುತ್ತಿದ್ದುದು ಅಲ್ಲೇ.  ಅವರ ಮನೆಯಲ್ಲಿ ಒಂದು ಅಲ್ಸೇಷನ್ ನಾಯಿಯಿತ್ತು.  ಒಳ್ಳೆ ಸಿಂಹದಂತಿತ್ತು.  ರಿಂಕಿ ಎಂದು ಅದರ ಹೆಸರು.  ಕೆಲಕಾಲದ ಬಳಕೆಯಿಂದ ಅದರ ಭಯವನ್ನು ಮೆಟ್ಟಿದ್ದೆನಾದರೂ ಅದರೊಡನೆ ಎಂದೂ ಸಲುಗೆ ಬೆಳೆಯಲಿಲ್ಲ.  ಅದೂ ನನ್ನನ್ನು ಹೆಚ್ಚೇನು ಕಾಡದೇ ಇವನೇನೋ ಪಾಪದ ಪ್ರಾಣಿಯೆಂದು ನನ್ನನ್ನು ಕ್ಷಮಿಸಿ ಸುಮ್ಮನಾದಂತಿತ್ತು.  ನಾನು ಅಪರೂಪಕ್ಕೆ ಅವರ ಮನೆಗೆ ಹೋದರೆ ಬೊಗಳದೇ ಬಾಲವನ್ನೂ ಆಡಿಸದೇ ನಾನು ಕಾಣಲೇ ಇಲ್ಲವೆಂಬಂತೆ ಸುಮ್ಮನಿರುತ್ತಿತ್ತು.  ನಾನೂ ಅಷ್ಟೇ, ದುಷ್ಟರನ್ನು ಕಂಡರೆ ದೂರವಿರು ಎಂಬ ಗಾದೆಯಂತೆ ನನ್ನಷ್ಟಕ್ಕೆ ನಾನಿರುತ್ತಿದ್ದೆ.  ಮನೆಗೆ ಹೋದಾಗ ಮಾಮಿ (ಅಯ್ಯಂಗಾರ್ ಲಾಯರರ ಮಡದಿ) ಏನಾದರೂ ತಿಂಡಿ ಕೊಡುತ್ತಿದ್ದರು - ತಿನ್ನುತ್ತಾ ಅವರ ಮಕ್ಕಳೊಡನೆ ಹರಟುತ್ತಾ ಜಗುಲಿಯ ಮೇಲೆ ಕೂರುವುದು ವಾಡಿಕೆ.   

ಇಂಥದ್ದೊಂದು ಸಂಜೆ, ಅಂಗಳದಲ್ಲಿ ಗೇಟಿನ ಬಳಿ ಎಂಥದೋ ಭಾರೀ ಕೋಲಾಹಲ.  ರಿಂಕಿ ಯಾರನ್ನೋ ಅಟ್ಟಾಡಿಸಿಕೊಂಡು ಹೋಗಿ ಕೊನೆಗೆ ಹಿಡಿದೇ ಬಿಟ್ಟು ವರವರಗುಟ್ಟುತ್ತಿದೆ.  ನೋಡಿದರೆ ದಾಳಿಗೊಳಗಾಗಿದ್ದವರು ಮತ್ತಾರೂ ಅಲ್ಲ, ಲಾಯರ್ ಬಸವಣ್ಣನವರು.  ಎತ್ತರದ ನಿಲುವು, ಕಪ್ಪೆಂದರೆ ಕಡುಗಪ್ಪು ಗಡ್ಡ, ಒಪ್ಪವಾಗಿ ಹಿಂದಕ್ಕೆ ಬಾಚಿ ಗಂಟು ಕಟ್ಟಿದ್ದ ಕಪ್ಪು ಕೂದಲು, ಕೃಷ್ಣವರ್ಣದ ಮುಖದ ಮೇಲೆ ಅಚ್ಚಾಗಿ ಬಳಿದ ಅಚ್ಚ ಬಿಳಿಯ ವಿಭೂತಿ, ಅದರ ಕೆಳಗೆ ಹೊಳೆಹೊಳೆವ ಕಣ್ಣುಗಳು, ಹುಡುಕಿದರೂ ಕಪ್ಪು ಚುಕ್ಕೆಯೊಂದು ಕಾಣದ ಬಿಳಿಯ ದಟ್ಟಿ ಪಂಚೆ, ಅದರಮೇಲೊಂದು ಅಚ್ಚಬಿಳಿಯ ಒರಟು ಖಾದಿಯ ಕಸೆಯಂಗಿ, ಬಗಲಲ್ಲಿ ಚರ್ಮದ್ದೋ ಬಟ್ಟೆಯದೋ ಕಪ್ಪು ಚೀಲ.  ಕಪ್ಪು ನಾಯಿ ಪಕ್ಕನೆ ಬಾಯಿ ಹಾಕಿ ಹಿಡಿದದ್ದು ಈ ಕಪ್ಪು ಚೀಲವನ್ನೇ.  ಹೇಗಾದರೂ ಅನುನಯದಿಂದ ಅದನ್ನು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಬಸವಣ್ಣನವರು.  ನಾಯಿಯ ಗಲಭೆ, ನಮ್ಮ ಗಲಭೆ ಇವನ್ನೆಲ್ಲಾ ಕೇಳಿ ಮನೆಯೊಳಗಿಂದ ಓಡಿ ಬಂದ ಲಾಯರು "Hey Rinky, don't you do that... say sorry" ಎಂದು ಕೂಗಿದ ಮೇಲೆಯೇ ರಿಂಕಿ ಬಸವಣ್ಣನವರನ್ನು ಬಿಟ್ಟಿದ್ದು, ಮತ್ತು "ಸಾರಿ"ಯಾಗಿ ಬಾಲವಾಡಿಸತೊಡಗಿದ್ದು.  ಹೇಗೋ ಸಾವರಿಸಿಕೊಳ್ಳುತ್ತಾ, "ಹಹ್ಹಾ... ಪಾಪ ಫ್ರೆಂಡ್ ಮಾಡಿಕೊಳ್ಳೋಕ್ಕೆ ಪ್ರಯತ್ನ ಪಡ್ತಾ ಇದ್ಲು" ಎಂದು ನಗುನಗುತ್ತಾ ಬಸವಣ್ಣನವರು ಒಳಬಂದರು.  ಇದೊಂದು ನೆನಪು.

ಮತ್ತೊಮ್ಮೆ ಅವರು ನನ್ನ ಗಮನಕ್ಕೆ ಬಂದದ್ದು ನಮ್ಮೂರಿನಲ್ಲಿ 1986ರಲ್ಲೋ 87ರಲ್ಲೋ ನಡೆದ ಅವಧಾನಕಾರ್ಯಕ್ರಮದಲ್ಲಿ - ಶತಾವಧಾನಿ ಆರ್ ಗಣೇಶರ (ಅವರಿನ್ನೂ ಆಗ ಶತಾವಧಾನಿಗಳಾಗಿರಲಿಲ್ಲವೆಂದು ನೆನಪು) ಅವಧಾನ.  ನನಗಾಗ ಹದಿನಾರೋ ಹದಿನೇಳೋ.  ಅದು ನಾನು ನೋಡಿದ ಮೊತ್ತಮೊದಲ ಅವಧಾನಕಾರ್ಯಕ್ರಮ.  ಆಗಿನ್ನೂ ಅವಧಾನವೆಂಬುದು ನಮಗಿರಲಿ, ಕನ್ನಡಕ್ಕೇ ಹೊಸದು.  ಕನ್ನಡದಲ್ಲಿ ಸಂಪೂರ್ಣ ಮರೆಯಾಗಿಬಿಟ್ಟಿದ್ದ ಅವಧಾನಕಲೆಯನ್ನು ಕನ್ನಡಕ್ಕೆ ಮರುಪರಿಚಯಿಸಿದ್ದೂ ಗಣೇಶರೇ, ಮೊದಲ ಅವಧಾನದಲ್ಲಿ ಅವರಿಗೆ ಹತ್ತೊಂಬತ್ತು ವರ್ಷವಂತೆ.  ನಮ್ಮೂರಲ್ಲಿ ಅವಧಾನಕಾರ್ಯಕ್ರಮ ಮಾಡಿದಾಗ ಅವರು ಇಪ್ಪತ್ನಾಲ್ಕು ಇಪ್ಪತ್ತೈದರ ತರುಣ.  ಅವಧಾನಕಲೆಯನ್ನವರು ಆರಂಭಿಸಿ ಐದಾರು ವರ್ಷಗಳು ಸಂದಿದ್ದೀತಷ್ಟೇ.  ನಮಗೋ ಅವಧಾನದ ಬಗ್ಗೆ ವಿಚಿತ್ರ ಅದ್ಭುತಕಲ್ಪನೆಗಳು.  ಯಾವ ಪದ್ಯ ಕೇಳಿದರೂ ಅಲ್ಲೇ ಹೇಳಿಬಿಡುತ್ತಾರಂತೆ, ಬೇಡವೆಂದ ಅಕ್ಷರ ಬಳಸದೇ ಅಲ್ಲೇ ಪದ್ಯ ಹೇಳುತ್ತಾರಂತೆ, ಗಂಟೆ ಹೊಡೆದದ್ದನ್ನೆಲ್ಲಾ ಲೆಕ್ಕವಿಟ್ಟುಕೊಂಡು ಕೊನೆಯಲ್ಲಿ ಹೇಳುತ್ತಾರಂತೆ (ಆಗ ಗಣೇಶರು ಘಂಟಾಗಣನವನ್ನೂ ಅವಧಾನದ ಭಾಗವಾಗಿ ಇಟ್ಟುಕೊಂಡಿದ್ದರು).  ಕಿಕ್ಕಿರಿದ ಕಲಾಮಂಟಪ ಸಭಾಂಗಣದಲ್ಲಿ ಕೊನೆಯ ಮೂಲೆಯಲ್ಲಿ ನಿಂತು ಇಡೀ ಕಾರ್ಯಕ್ರಮವನ್ನು ವೀಕ್ಷಿಸಿದ ನೆನಪಿದೆ.  ಅಲ್ಲಿ ಗಣೇಶರು ಕೇಸರೀಭಾತ್ ಎಂಬುದನ್ನು ಬಳಸಿ ಸಂಸ್ಕೃತ ಪದ್ಯವೊಂದನ್ನು ಮಾಡಿದ್ದರು.  "ಕೇಸರೀಭಾತ್ ವಿಶಿಷ್ಯತೇ" (ಕೇಸರಿ = ಸಿಂಹ, ಇಭ=ಆನೆ) ಎಂದೇನೋ ಪೂರಣ ಮಾಡಿದ್ದು ನೆನಪಿದೆ.  ಈ ಅವಧಾನದಲ್ಲಿ ಬಸವಣ್ಣನವರದು ನಿಷೇಧಾಕ್ಷರಪೃಚ್ಛಕಪಾತ್ರ.  ಅವರು ಯಾವ ಪದ್ಯ ಕೇಳಿದರೋ ಹೇಳಿದರೋ ನೆನಪಿಲ್ಲ, ಆದರೆ ಒಂದು ಮಾತ್ರ ಅಚ್ಚಳಿಯದೇ ನೆನಪಿನಲ್ಲಿದೆ - ಅವಧಾನದಲ್ಲಿ ಅಪ್ರಸ್ತುತಪ್ರಸಂಗಿಗಳು ಕೇಳಿದ ಯಾವುದೋ ಪ್ರಶ್ನೆ, ಅದಕ್ಕೆ ಅವಧಾನಿಗಳು ಕೊಟ್ಟ ಉತ್ತರ ಇಡೀ ಸಭೆಯನ್ನು ನಗೆಗಡಲಲ್ಲಿ ಮುಳುಗಿಸಿತ್ತು.  ಆಗ ಇದ್ದಕ್ಕಿದ್ದಂತೆ ಇಡೀ ಸಭೆಯ ನಗೆಯನ್ನು ಸೀಳಿಕೊಂಡು ಹಹ್ಹಹ್ಹಹ್ಹಹ್ಹಾ ಎಂಬ ಜೋರು ಅಟ್ಟಹಾಸ ವೇದಿಕೆಯ ಮೇಲಿಂದ ಕೇಳಿಬಂತು, ಧ್ವನಿವರ್ಧಕದ ಮೂಲಕ - ಎಸ್ ವಿ ರಂಗರಾವ್ ಘಟೋತ್ಕಚನ ಪಾತ್ರದಲ್ಲಿ ನಗುವ ರೀತಿ.  ಯಾರು ನಗುತ್ತಿದ್ದಾರೆಂಬುದು ಕ್ಷಣಕಾಲ ತಿಳಿಯಲಿಲ್ಲ.  ಆದರೆ ನಗು ನಿಲ್ಲುತ್ತಲೇ ಇಲ್ಲ.  ನೋಡಿದರೆ, ಬಸವಣ್ಣನವರು.  ನಗುತ್ತಿದ್ದಾರೆ, ಮೈಕ್ ಆಫ್ ಮಾಡುವುದನ್ನೂ, ಮೈಕನ್ನು ದೂರವೊಯ್ಯುವುದನ್ನೂ ಮರೆತು ಗಹಗಹಿಸಿ ನಗುತ್ತಿದ್ದಾರೆ.  ಮತ್ತೊಮ್ಮೆ ಸಭೆ ನಗೆಯಲ್ಲಿ ಮುಳುಗಿತು.  ನೀವು ಹೀಗೆ ಅಟ್ಟಹಾಸ ಮಾಡಿದರೆ ನಮ್ಮ ಗುಂಡಿಗೆಯ ಗತಿಯೇನು ಎಂದೋ ಏನೋ ಗಣೇಶರು ಚಟಾಕಿ ಹಾರಿಸಿದ್ದೂ ನೆನಪಿದೆ.

ಇದಾದ ಮೇಲೆ ಸುಮಾರು ಇಪ್ಪತ್ತೈದು ವರ್ಷ ಬಸವಣ್ಣನವರು ನನ್ನ ನೆನಪಿನಿಂದ ಆಚೆಗೆ ಸರಿದುಬಿಟ್ಟಿದ್ದರು - ನಮ್ಮೂರಿನ ಇತರ ಹಲವು ನೆನಪುಗಳಂತೆ.  ಈ ನಡುವೆ ಒಂದೆರಡು ಬಾರಿ, ಬೋಳುಬಸವನ ಬೊಂತೆಯ ಲಾಯರ್ ಬಸವಣ್ಣನವರು ಸನ್ಯಾಸಿಗಳಾದರಂತೆ ಎಂಬ ಸುದ್ದಿ ಕೇಳಿದ್ದುಂಟು, ಅದೇನು ಅಷ್ಟೊಂದು ಕುತೂಹಲ ಕೆರಳಿಸುವ ಸಂಗತಿಯಾಗಿರಲಿಲ್ಲ.  ಆಮೇಲೆ ಮತ್ತೆ ಅವರ ದರ್ಶನವಾಗಿದ್ದು 2012ರಲ್ಲಿ, ಮೈಸೂರಿನಲ್ಲಿ, ಇನ್ನೊಂದು ಅವಧಾನದಲ್ಲೇ!  ವಿಶೇಷವೆಂದರೆ ಈ ಬಾರಿ ನಾನು ಪ್ರೇಕ್ಷಕನಾಗಿ ಅಲ್ಲ, ಅವರ ಪಕ್ಕದಲ್ಲೇ ಪೃಚ್ಛಕನಾಗಿ ಕುಳಿತು ಅವಧಾನದಲ್ಲಿ ಭಾಗವಹಿಸುವುದಿತ್ತು.  ಈ ಇಪ್ಪತ್ತೈದು ವರ್ಷಗಳಲ್ಲಿ ಸಾಕಷ್ಟೇ ಆಗಿತ್ತು - ಭಾಷೆ-ಸಾಹಿತ್ಯಗಳಲ್ಲಿನ ನನ್ನ ಆಸಕ್ತಿಯ ಸ್ವರೂಪವೇ ಬದಲಾಗಿತ್ತು; ಹಳಗನ್ನಡದ ರುಚಿ ಬಹುವಾಗಿ ಬೆಳೆದಿತ್ತು, ನಿಬದ್ಧಪದ್ಯರಚನೆಯಲ್ಲೂ ಕೈ ಸುಮಾರಾಗಿ ಪಳಗಿತ್ತು - ಈ ಹೊಸ ರುಚಿಗಳೇ ಶತಾವಧಾನಿ ಶ್ರೀ ಗಣೇಶರ ಪರಿಚಯಭಾಗ್ಯವನ್ನೂ ತಂದುಕೊಟ್ಟಿತ್ತು.  ವೈಯಕ್ತಿಕಜೀವನದಲ್ಲಿ, ನನ್ನ ಓದು ಮುಗಿದು, ಕೆಲಸಕ್ಕೆ ಸೇರಿ, ಸಂಸಾರವನ್ನೂ ಕಟ್ಟಿಕೊಂಡಿದ್ದೆ.  ಇತ್ತ, ಲಾಯರ್ ಪಿ ಬಸವಣ್ಣನವರು ಆ ಉಪಾಧಿಯನ್ನು ತ್ಯಜಿಸಿ ಶ್ರೀ ಕುಮಾರ ನಿಜಗುಣಸ್ವಾಮಿಗಳಾಗಿದ್ದರು.

2012ರ ಒಂದು ಸಂಜೆ, ಹೇಗೂ ಬೆಂಗಳೂರಿಗೆ ಬಂದಿದ್ದುದರಿಂದ ಶ್ರೀ ಗಣೇಶರನ್ನೊಮ್ಮೆ ನೋಡಿ ಹೋಗೋಣವೆಂದು ಅವರ ಮನೆಗೆ ಹೋಗಿದ್ದೆ.  ಅವರು ಯಾವುದೋ ಕಾರ್ಯಕ್ರಮವೊಂದಕ್ಕೆ ಹಾಜರಿ ಹಾಕಿ ಬರುವುದಿದ್ದುದರಿಂದ ನನ್ನನ್ನೂ ಜೊತೆಯಲ್ಲೇ ಕರೆದುಕೊಂಡು ಹೊರಟರು.  ಮಾತಿನ ಮಧ್ಯೆ, ಮುಂದಿನ ತಿಂಗಳು ಮೈಸೂರಿನಲ್ಲಿ ನಡೆಯಲಿದ್ದ ತಮ್ಮ ಅವಧಾನವೊಂದರಲ್ಲಿ ಪೃಚ್ಛಕಪಾತ್ರವಹಿಸಲು ನನ್ನನ್ನು ಕೇಳಿದಾಗ ನನಗೆ ಆನಂದವೇನೋ ಆಯಿತು, ಅದಕ್ಕಿಂತ ಹೆಚ್ಚಾಗಿ ಆಶ್ಚರ್ಯವೂ ಅದನ್ನು ಮೀರಿದ ಗಾಬರಿಯೂ ಆಯಿತು.  ಅವಧಾನದ ಬಗೆಗೆ ಇಪ್ಪತ್ತೈದು ವರ್ಷಗಳ ಹಿಂದಿದ್ದ ಬಾಲಿಶಕಲ್ಪನೆಗಳೇನೂ ಇಲ್ಲದಿದ್ದರೂ ಅದು ವಿದ್ವಾಂಸರ, ಸಾಹಿತ್ಯಪಟುಗಳ ಆಡುಂಬೊಲವೆಂಬ ಅರಿವಂತೂ ಇತ್ತು.  ಅಷ್ಟೊಂದು ಜನ ವಿದ್ವಾಂಸರ ನಡುವೆ ನಾನು ಕುಳಿತು ವಿದ್ಯೆಯ ಪರ್ವತಕ್ಕೇ ಬಾಣ ಬಿಡುವ ಕಲ್ಪನೆ ನಿಜಕ್ಕೂ ನನಗೇ ನಗೆ ತರಿಸುವಂತಿತ್ತು.  ಆದರೆ ಕಿರಿಯರನ್ನೂ ಎಳೆಯರನ್ನೂ ಮೇಲೆತ್ತಿ ಕೂರಿಸಿಕೊಳ್ಳುವ ಗಣೇಶರ ಸ್ನೇಹಬುದ್ಧಿ ನನಗೆ ಹೊಸದು.  ಇರಲಿ, ಅದು ಬೇರೆಯದೇ ವಿಷಯವಾಯಿತು.  ಅಂತೂ ಮೈಸೂರಿನ ಅವಧಾನದಲ್ಲಿ ನಾನು ಪೃಚ್ಛಕನಾಗಿ ಸಮಸ್ಯಾಪೂರಣದ ವಿಭಾಗವನ್ನು ನಿರ್ವಹಿಸುವುದೆಂದಾಯಿತು.

ಈ ಮೈಸೂರು ಅವಧಾನ ಕೆಲವು ಸಣ್ಣಪುಟ್ಟ ವಿಶೇಷಗಳನ್ನೊಳಗೊಂಡಿತ್ತು.  ನಾನು ಭಾಗವಹಿಸಲಿದ್ದ ಮೊದಲ ಅವಧಾನಕಾರ್ಯಕ್ರಮ; ಮೈಸೂರು ಆಕಾಶವಾಣಿಯ ಬೆಳ್ಳಿಹಬ್ಬದ ನೆನಪಿಗಾಗಿ ನಿಲಯವು ಆಯೋಜಿಸಿದ ಕಾರ್ಯಕ್ರಮವಿದಾಗಿತ್ತು.  ಹಿರಿಯವಿದ್ವಾಂಸರಾದ ಪ್ರೊ. ವೆಂಕಟಾಚಲಶಾಸ್ತ್ರಿಗಳು ಆಶಯಭಾಷಣ ಮಾಡುವವರಿದ್ದರು (ಆಗ್ಗೆ ಅವರ ಪರಿಚಯವೂ ನನಗಿರಲಿಲ್ಲ).  ಮತ್ತಷ್ಟು ಹಿರಿಯ ವಿದ್ವಾಂಸರ ಪರಿಚಯವಾಗುವುದಿತ್ತು - ಎಲ್ಲಕ್ಕಿಂತ ಹೆಚ್ಚಾಗಿ ಕುಮಾರನಿಜಗುಣರ ಮರುಪರಿಚಯವಾಗುವುದೂ ಇತ್ತು.  ನನಗೆ ಕುಮಾರನಿಜಗುಣರೂ ಒಳಗೊಂಡಂತೆ ಕಾರ್ಯಕ್ರಮದ ಪರಿಚಯಪತ್ರಿಕೆಯಲ್ಲಿದ್ದ ಯಾವ ವಿದ್ವಾಂಸರ ಮುಖಪರಿಚಯವೂ ಇಲ್ಲ.  ನಿಜಗುಣ ಎಂಬ ಹೆಸರನ್ನು ನೋಡಿ ನಮ್ಮ ನಿಜಗುಣಶಿವಯೋಗಿಗಳ, ಕುಂತೂರು-ಚಿಲಕವಾಡಿಗಳ ನೆನಪಂತೂ ತುಂಬಿ ಬಂದಿತಷ್ಟೇ.  ಇತ್ತ ಸ್ವಾಮಿಗಳಿಗೆ "ಕೊಳ್ಳೇಗಾಲ ಮಂಜುನಾಥ" ಎಂಬ ಹೆಸರನ್ನು ನೋಡಿ ಇದಾವುದು ಹೊಸಮುಖ ಎಂಬ ಕುತೂಹಲ.  ಬಹುಶಃ ಅವರಿಗೆ ನನ್ನನ್ನು ಬಿಟ್ಟು ಅಂದು ಪೃಚ್ಛಕತ್ವವಹಿಸುವ ಎಲ್ಲ ವಿದ್ವಾಂಸರ ನಿಕಟಪರಿಚಯವಿತ್ತು.  ಇವರನ್ನೊಮ್ಮೆ ಭೇಟಿಮಾಡಬೇಕಲ್ಲಾ, ನಮ್ಮೂರಿನವರು ಬೇರೆ, ನನಗೆ ಪರಿಚಯವೇ ಇಲ್ಲವಲ್ಲಾ - ಎಂದು ಗಣೇಶರಲ್ಲಿ ಹಳಹಳಿಸಿದರಂತೆ.  ನಾನು ಕಾರ್ಯಕ್ರಮಕ್ಕೆ ಹೋದೊಡನೆ ಎದುರುಗೊಂಡ ಗಣೇಶರು, "ಕುಮಾರನಿಜಗುಣಸ್ವಾಮಿಗಳು ನಿಮ್ಮನ್ನು ನೋಡಬೇಕೆಂದು ಬಹುವಾಗಿ ಕಾದಿದ್ದಾರೆ, ಅವರೂ ನಿಮ್ಮೂರಿನವರೇ, ಪರಿಚಯ ಮಾಡಿಕೊಳ್ಳಿ" ಎಂದು ಹೇಳಿ ನನ್ನನ್ನು ಮುಂದಿನ ಸಾಲಿನಲ್ಲಿ ಕೂರಿಸಿ ಹೋದರು.  ಸ್ವಲ್ಪಕಾಲದ ಮೇಲೆ ಯಾರೋ ಸ್ವಾಮಿಗಳು ಬಂದರು, ಅವರನ್ನೂ ಗಣೇಶರು ಕರೆತಂದು ನನ್ನ ಪಕ್ಕದಲ್ಲಿ ಕುಳ್ಳಿರಿಸಿ ಇವರೇ ಕುಮಾರನಿಜಗುಣಸ್ವಾಮಿಗಳು, ನಿಮ್ಮೂರಿನವರೇ ಎಂದು ಪರಿಚಯ ಮಾಡಿಸಿದರು.  ನೋಡಿದರೆ, ಇದು ನನಗೆ ಬಹುಪರಿಚಿತವಾದ ಮುಖವೇ, ಲಾಯರ್ ಬಸವಣ್ಣನವರು!   ಅದೆಂತಹ ಬದಲಾವಣೆಯೋ - ಆ ಇಪ್ಪತ್ತೈದು ವರ್ಷದಲ್ಲಿ!  ಕಣ್ಣು ಕೋರೈಸುವ ಶುಭ್ರಶ್ವೇತವಸನ ಮಾಸಲು ಕಾವಿ ಬಣ್ಣವಾಗಿದೆ, ಕಡುಗಪ್ಪು ಬಣ್ಣದ ಗಡ್ಡ ಬಹುವಾಗಿ ನೆರೆತು ಮಾಸಲು ಬಿಳಿಯ ಬಣ್ಣಕ್ಕೆ ತಿರುಗಿದೆ, ಆಜಾನುಬಾಹು ಶರೀರ ಕುಗ್ಗಿ ಕೃಶವಾಗಿದೆ, ಕಣ್ಣಿನ ಕಾಂತಿ, ಮುಗ್ಧಮಂದಹಾಸ ಮಾತ್ರ ಅದೇ - ಅವರೇ ಇವರು ಎಂಬುದಕ್ಕೆ ಸಾಕ್ಷಿ (ಭವಭೂತಿ ಹೇಳುತ್ತಾನಲ್ಲ, "ನಿವೇಶಃ ಶೈಲಾನಾಂ ತದಿದಮಿತಿ ಬುದ್ಧಿಂ ದ್ರಢಯತಿ")!  ಸ್ವಾಮಿಗಳು ನನ್ನ ಪಕ್ಕ ಕುಳಿತುಕೊಳ್ಳುತ್ತಾ "ಶರಣು" ಎಂದರು.  ಪರಿಚಯದ ಪ್ರತಿನಮಸ್ಕಾರ ಮಾಡಲೆಂದು ಮುಗಿಯಲಿದ್ದ ಕೈ ಅರ್ಧ ದಾರಿಯಲ್ಲೇ ತಡೆಯಿತು.  ಪಕ್ಕ ಕುಳಿತವರು ಓರ್ವ ಸನ್ಯಾಸಿಯೆಂಬುದು ಪ್ರಜ್ಞೆಗೆ ಹೊಳೆದು ಕೂಡಲೇ ಎದ್ದು ನಿಂತೆ, ಸಂಪ್ರದಾಯದಂತೆ ನಮಸ್ಕರಿಸಿದೆ.  ಅದಕ್ಕೆ ಮತ್ತೆರಡು ಬಾರಿ ಶರಣುಶರಣು ಎಂದ ಸ್ವಾಮಿಗಳು ಕುಳಿತುಕೊಳ್ಳಲು ಸೂಚಿಸಿದರು.  ಕೂರಲು ಅವರಿಗಿಂತ ತಗ್ಗಾದ ಯಾವ ಸ್ಥಾನವೂ ಇಲ್ಲದುದರಿಂದ ಸಂಕೋಚದ ಮುದ್ದೆಯಾಗಿ ಪಕ್ಕದಲ್ಲೇ ಕೂತೆ.  "ನಿಮ್ಮನ್ನು ನೋಡಿದ್ದು ತುಂಬಾ ಸಂತೋಷವಾಯಿತು, ನಮ್ಮೂರಿನವರು - ನಿಮ್ಮ ಪರಿಚಯವೇ ಇರಲಿಲ್ಲ, ಆಶ್ಚರ್ಯ" ಎಂದರು ಸ್ವಾಮಿಗಳು.  "ಏನು ಕಾಯಕ ಮಾಡಿಕೊಂಡಿದ್ದೀರಿ?" ಎಂದು ಕೇಳಿದರು.  ನನ್ನ ಪರಿಚಯ ಹೇಳಿಕೊಂಡೆ.

ಕಾರ್ಯಕ್ರಮ ಆರಂಭವಾಯಿತು, ನಾವು ವೇದಿಕೆಯ ಮೇಲೆ ಹೋದೆವು.  ಆ ದಿನದ ಸಮಸ್ಯಾಪೂರಣಕ್ಕೆ ನಾನು ಸ್ರಗ್ಧರಾವೃತ್ತದಲ್ಲಿ "ನಾನೀನೋನೀನೆನಾನೋ ನೆನೆನೆನೆನೆನೆನಾ ನೇನೊನೀನೇನದೇನೋ (ನಾನೀನೋ ನೀನೆನಾನೋ ನೆನೆ ನೆನೆ ನೆನೆ ನಾನೇನೊ ನೀನೇನದೇನೋ)" ಎಂಬ ಸಾಲನ್ನು ರಚಿಸಿ ಸಮಸ್ಯೆಯಾಗಿ ನೀಡಿದೆ.  ಪಕ್ಕದಲ್ಲೇ ಸಹಪೃಚ್ಛಕರಾಗಿ ಕುಳಿತಿದ್ದ ಸ್ವಾಮಿಗಳು ತಲೆದೂಗಿ ಭಲಾ ಭಲಾ ಎಂದರು (ಯಥಾಪ್ರಕಾರ, ಮೈಕನ್ನು ಬಾಯೊಳಗೇ ಇಟ್ಟುಕೊಂಡು - ಆ ಅಭ್ಯಾಸವಂತೂ ಮಾಸಿರಲಿಲ್ಲ).  ಮುಂದಿನ ನಾಲ್ಕು ಸುತ್ತುಗಳಲ್ಲಿ ಅವಧಾನಿಗಳು ಅದಕ್ಕೊಂದು ಸುಂದರವಾದ ಸಮಸ್ಯಾಪೂರಣಪದ್ಯವನ್ನೂ ರಚಿಸಿದರು.  ಕಾರ್ಯಕ್ರಮದ ಕೊನೆಯಲ್ಲಿ ನಮ್ಮ ಪೂರಣವನ್ನೂ ಹೇಳಬೇಕಲ್ಲ - ನಾನು ಇದೇ ಸಮಸ್ಯೆಗೆ ನನ್ನ ಪರಿಹಾರವನ್ನೂ ರಚಿಸಿ ಹಾಡಿ ತೋರಿಸಿದೆ.  ಕಾರ್ಯಕ್ರಮವಾದ ಮೇಲೆ ಇದರ ಬಗ್ಗೆ ಬಹುವಾಗಿ ಮೆಚ್ಚುಗೆ ಸೂಚಿಸಿದ ಸ್ವಾಮಿಗಳು "ನಿಮ್ಮ ಪರಿಚಯ ಇದುವರೆಗೆ ಆಗೇ ಇರಲಿಲ್ಲ ಅನ್ನೋದೇ ದುಃಖದ ವಿಚಾರ, ನೀವು ಚಿಲಕವಾಡಿಗೆ ತಪ್ಪದೇ ಬನ್ನಿ" ಎಂದು ಹೇಳಿ ಬೀಳ್ಕೊಂಡರು.  ಅದು ಕೇವಲ ಬಾಯುಪಚಾರದ ಮಾತಾಗಿರಲಿಲ್ಲವೆಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಕೈತುಂಬ ಸಂಪಾದನೆಯಾಗುವ ವಕೀಲಿಕೆಯನ್ನೂ ತೊರೆದು ನಿಜಗುಣಶಿವಯೋಗಿಗಳ ಗುಹೆಯಲ್ಲಿ ಇರತೊಡಗಿದ ಈ ವಿರಕ್ತಯೋಗಿಯ ಬಗ್ಗೆ ವಿಪರೀತ ಕುತೂಹಲ ಮೂಡಿತ್ತು.  ಪರಿಚಯದ ಆಮಂತ್ರಣವೂ ಇದ್ದುದರಿಂದ ಸಂಕೋಚವಿಲ್ಲದೇ ತಿಂಗಳೆರಡು ತಿಂಗಳಲ್ಲಿ ಚಿಲಕವಾಡಿಗೆ ಹೊರಟೆ.  ನಮ್ಮೂರಿನ ಕಡೆ ಹೋಗೇ ಎಷ್ಟೋ ಕಾಲವಾಗಿಬಿಟ್ಟಿತ್ತು.  ಬರುತ್ತೇನೆಂದು ಕರೆಮಾಡಿ ತಿಳಿಸಿದಾಗ ಸ್ವಾಮಿಗಳು ಬಹು ಸಂಭ್ರಮದಿಂದ "ಪ್ರಸಾದಕ್ಕೆ ಇಲ್ಲೇ ಬಂದುಬಿಡಿ" ಎಂದೂ ಹೇಳಿದರು.  ದಾರಿಯುದ್ದಕ್ಕೂ ಎರಡುಮೂರು ಬಾರಿ ಕರೆ ಬಂತು.  ಹೋಗಿ ಸೇರುವುದು ತಡವಾಯಿತು.  ಅವರು ಪ್ರಸಾದ ಸ್ವೀಕರಿಸದೇ ಕಾದು ಕುಳಿತದ್ದು ನೋಡಿ ಬಹಳ ಬೇಸರವಾಯಿತು.  ಗುಡ್ಡದ ಕೆಳಗಣ ಮಠದಲ್ಲಿ ಕೂರಿಸಿ ತಾವೇ ಬಡಿಸಿದರು.  ಹೊಟ್ಟೆ ತುಂಬಿ ಸಾಕುಬೇಕೆನಿಸುವಂತಾಗಿದ್ದರೂ "ಇಷ್ಟು ಕಡಿಮೆ ಉಂಡರೆ ಹೇಗೆ?  ಚಿಕ್ಕವಯಸ್ಸು.  ಚೆನ್ನಾಗಿ ಉಣಬೇಕು" ಎಂದು ಬಲವಂತ ಮಾಡಿ ಬಡಿಸಿದರು.  ಆನಂತರ ತಾವೂ ಕುಳಿತು ಪ್ರಸಾದ ಸ್ವೀಕರಿಸಿದರು.

ಊಟವಾದನಂತರ ಬೆಟ್ಟದ ತಪ್ಪಲಿನಲ್ಲೇ ತುಸು ಎತ್ತರದಲ್ಲಿದ್ದ ಚಾವಡಿಗೆ ಕರೆದೊಯ್ದರು - ಗುಹೆಯೊಂದಕ್ಕೇ ಸೇರಿದಂತೆ ಕಟ್ಟಿದ್ದ ಕಲ್ಲುಮಂಟಪ, ಸುತ್ತಲೂ ಬಿದಿರಿನ ತಡಿಕೆ.  ಇದು ಸ್ವಾಮಿಗಳ ಗ್ರಂಥಾಲಯ, ವ್ಯಾಸಂಗಸ್ಥಳ, ವಿರಾಮಸ್ಥಳ, ಊರ ಹತ್ತುಮಂದಿಯೊಂದಿಗೆ ಬೆರೆತು ಹರಟುವ ಸ್ಥಳ.  ನಾನು ಬರುತ್ತೇನೆಂದು ಮೊದಲೇ ತಿಳಿಸಿದ್ದುದರಿಂದ ನನ್ನನ್ನು ಭೇಟಿಮಾಡಲು ಊರಿನ ಐದಾರು ಜನರನ್ನು ಸಹ ಕರೆಸಿದ್ದರು ಸ್ವಾಮಿಗಳು.  ಈ ಆದರ, ಉತ್ಸಾಹ, ಸಂಭ್ರಮ - ನನಗೆ ತೀರ ಹೊಸದು.  ಅವರಲ್ಲೊಬ್ಬರನ್ನು ನನಗೆ ಪರಿಚಯಿಸಿ "ನಿಮಗೆ ಇವರ ಗುರುತು ಹತ್ತುತ್ತದೆಯೋ ನೋಡಿ" ಎಂದರು.  ಎದುರಿದ್ದ ವ್ಯಕ್ತಿ ನನಗೆ ಕೈ ಮುಗಿದು ನಮಸ್ಕಾರ ಹೇಳಿದರು - ನನಗೆ ಗುರುತು ಸಿಕ್ಕಲಿಲ್ಲ.  ಸ್ವಾಮಿಗಳೇ ನಗುತ್ತಾ "ಇವರು ನಿಮಗೆ ಚಿಕ್ಕಂದಿನಲ್ಲಿ ಮೇಷ್ಟರಾಗಿದ್ದರು, ಕುಮಾರಾರಾಧ್ಯರು ಅಂತ" ಎಂದು ಪರಿಚಯಿಸಿದರು.  ನನಗೆ ಬೆರಗಾಗಿ ಹೋಯಿತು.  ಅವರನ್ನು ಮತ್ತೆ ನಿಟ್ಟಿಸಿ ನೋಡಿದರೆ, ಹೌದು, ಅದೇ ಕುಮಾರಾರಾಧ್ಯರು, ನನಗೆ ಮೂರನೆಯ ತರಗತಿಯಲ್ಲಿ ಮೇಷ್ಟರಾಗಿದ್ದವರು.  ಮೂವತ್ತೈದು ವರ್ಷಗಳ ಹಿಂದೆ ಆಗಷ್ಟೇ ಕೆಲಸಕ್ಕೆ ಸೇರಿದ್ದ ಚಿಗುರುಮೀಸೆಯ ತೆಳ್ಳಗೆ ಮಡಿಕೋಲಿನಂತಿದ್ದ ಯುವಕನೀಗ, ಆಗಷ್ಟೇ ನಿವೃತ್ತಿಹೊಂದಿದ್ದ ಬೆಳ್ಮೀಸೆಯ ತುಸು ಸ್ಥೂಲಕಾಯವಡೆದ ವೃದ್ಧರಾಗಿದ್ದರು.  ಅವರು ನನಗೆ ಮೇಷ್ಟರಾಗಿದ್ದುದು ಒಂದೇ ವರ್ಷ, ಆರಾಧ್ಯ ಮೇಷ್ಟ್ರೆಂದರೆ ನನಗೆ ಥಟ್ಟನೆ ನೆನಪಾಗುವುದು, ಅದೇ ಮೂರನೆಯ ತರಗತಿಯಲ್ಲಿದ್ದಾಗೊಮ್ಮೆ ಅವರು ಮರದ ಪಟ್ಟಿಯಿಂದ ಅಂಗೈಗೆ ಬಾರಿಸಿದ್ದ ಏಟು, ಅದರ ಚುರುಕು, ಬಿಸುಪು ಇನ್ನೂ ಅಂಗೈಯಲ್ಲಿದ್ದಂತೆನಿಸುತ್ತದೆ.  ಅದನ್ನೇ ಅವರಿಗೆ ನೆನಪಿಸಿ ನಮಸ್ಕರಿಸಿದೆ.  ಅದನ್ನು ನೆನಪಿಸಿದೊಡನೆ ಯಾವಾಗಲೋ ನನಗೆ ಹೊಡೆದದ್ದಕ್ಕೆ ಪಾಪ ಅವರು ಮುಜುಗರಗೊಂಡರೆನಿಸುತ್ತದೆ, ಸಂಕೋಚ ಬೆರೆತ ಮುಗುಳ್ನಗೆಯೊಡನೆ ನಮಸ್ಕಾರವನ್ನು ಸ್ವೀಕರಿಸಿ ಮೇಲೆಬ್ಬಿಸಿದರು.  ನಿಜಗುಣಸ್ವಾಮಿಗಳು ನಗುತ್ತಾ "ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸುವಡೆ ಆಗಲಿ ಮಹಾಪ್ರಸಾದವೆಂದೆನಯ್ಯ ಎಂದಿಲ್ಲವೇ, ನೋಡಿ ನಿಮ್ಮ ಶಿಷ್ಯ ಈಗ" ಎಂದರು.  ಅದುವರೆಗೆ ಹೊಟ್ಟೆ ತುಂಬಿತ್ತು, ಈಗ ಮನಸ್ಸೂ ತುಂಬಿ ಬಂತು.  ಎಲ್ಲಿಯ ಲಾಯರ್ ಬಸವಣ್ಣನವರು, ಎಲ್ಲಿಯ ಚಿಲಕವಾಡಿ ಸ್ವಾಮಿಗಳು, ಎಲ್ಲಿಯ ನನ್ನ ಬಾಲ್ಯ, ಎಲ್ಲಿಯ ನಮ್ಮ ಮೇಷ್ಟರು ಎಲ್ಲಿಯ ನಾನು - ಹೋಗಲಿ ಇವಿಷ್ಟನ್ನು ಇವರು ಪತ್ತೆಹಚ್ಚಿದ್ದಾದರೂ ಹೇಗೆ - ಬುದ್ದಿಯವರ ಪ್ರೀತಿ-ವಾತ್ಸಲ್ಯ-ಆದರ ನಿಜಕ್ಕೂ ಕಣ್ಣಲ್ಲಿ ನೀರು ತರಿಸಿತು.  "ಮೊನ್ನೆ ಮೈಸೂರಿನ ಅವಧಾನದಲ್ಲಿ, ಸ್ರಗ್ಧರಾವೃತ್ತದಲ್ಲಿ ಪದ್ಯ ರಚಿಸಿದರು, ಸೊಗಸಾಗಿ ಹಾಡ್ತಾರೆ ಕೂಡ, ನಮ್ಮೂರಿನಾತ ಈತ" ಎಂದು ನೆರೆದಿದ್ದವರಿಗೆ ಹೇಳಿ ಹೇಳಿ, ನನ್ನ ಅದೇ ಪದ್ಯವನ್ನ ಎರಡು ಮೂರು ಬಾರಿ ಹಾಡಿಸಿದರು - ಅದೇ ರಾಗದಲ್ಲಿ, ಬೇರೆಬೇರೆ ರಾಗದಲ್ಲಿ; ಪ್ರತಿಬಾರಿಯೂ ಸಣ್ಣ ಮಕ್ಕಳಂತೆ ಖುಷಿಪಟ್ಟರು.  

ಆನಂತರ ಬುದ್ದಿಯವರು ಬೆಟ್ಟದಲ್ಲಿ ಇನ್ನೊಂದು ಸ್ವಲ್ಪ ಮೇಲಿದ್ದ ಮುಪ್ಪಿನ ಷಡಕ್ಷರಿಗಳ ಗುಹೆಗೆ ಕೊಂಡೊಯ್ದರು.  ಅದು ಶಿವಯೋಗಿ ಮುಪ್ಪಿನ ಷಡಕ್ಷರಿಗಳು ಇದ್ದ ಸ್ಥಳ, ಬುದ್ಧಿಯವರು ಧ್ಯಾನಾಸಕ್ತರಾಗುವ ಸ್ಥಳ ಕೂಡ.  "ಮೊದಲು ಇನ್ನೊಂದು ಸ್ವಲ್ಪ ಮೇಲಿರುವ ನಿಜಗುಣಶಿವಯೋಗಿಗಳ ಗುಹೆಯಲ್ಲಿ ಕೂರುತ್ತಿದ್ದೆ.  ಈಗ ಹತ್ತಲು ಕೈಲಾಗೊಲ್ಲ, ಇಲ್ಲಿ ಕೂರುತ್ತೇನೆ" ಎಂದು ಹೇಳಿದ ಬುದ್ಧಿಯವರು, "ನೀವಿಲ್ಲಿ ಸ್ವಲ್ಪ ಹೊತ್ತು ಕಳೆದು, ಮೇಲೆ ನಿಜಗುಣಶಿವಯೋಗಿಗಳ ಗುಹೆಯಲ್ಲೂ ಸ್ವಲ್ಪಹೊತ್ತು ಕೂತಿದ್ದು ಹರಕೆ ಪಡೆದು ಕೆಳಗೆ ಬನ್ನಿ" ಎಂದು ಹೇಳಿ ನನ್ನನ್ನು ಅಲ್ಲೇ ಬಿಟ್ಟು ಕೆಳಗೆ ಹೋದರು.  ತುಸು ಹೊತ್ತು ಕುಳಿತೆ.  ಈ ಸ್ಥಳದಲ್ಲಿ ಕುಳಿತು ಷಡಕ್ಷರಿ ಯೋಗಿ ಏನೇನು ಚಿಂತಿಸಿರಬಹುದು, ಧೇನಿಸಿರಬಹುದು - ಯಾವಯಾವ ಕಾಣ್ಕೆ ಕಣ್ಣ ಮುಂದೆ ಸುಳಿದಿರಬಹುದು.  "ಹೋರಾಟ ಹುಟ್ಟಿಸಲು ಬೇರಾದೆಯಲ್ಲದೆ ಬೇರುಂಟೆ ಜಗದೊಳಗೆ ಎಲೆ ದೇವನೇ" ಎನ್ನುವಾಗ ದೈವಪಾರಮ್ಯಕ್ಕಾಗಿ ಶತಶತಮಾನಗಳು ನಡೆದ, ನಡೆಯುತ್ತಿರುವ, ನಡೆಯಲಿರುವ ಎಷ್ಟೊಂದು ಹೋರಾಟಗಳು ಅವರ ಕಣ್ಣಮುಂದೆ ಮೆರವಣಿಗೆ ಹೊರಟಿರಬಹುದು!  ಕ್ಷಣಕಾಲ ಕುಳಿತು, ಮೇಲಿದ್ದ ನಿಜಗುಣರ ಗುಹೆಗೆ ಹತ್ತಿಕೊಂಡು ಹೋದೆ.  ಕೆಲಕಾಲ ಬಳಕೆತಪ್ಪಿದ್ದರಿಂದ ಅಲ್ಲಿ ಹರಡಿದ್ದ ಹಿಕ್ಕೆ, ಗುಹೆಗೆ ಸಹಜವಾದ ಜುಂಗುವಾಸನೆ - ಸಾನ್ನಿಧ್ಯದ ಪಾವಿತ್ರ್ಯಕ್ಕೇನೂ ಭಂಗ ತರಲಿಲ್ಲ.  ಅಲ್ಲೊಂದಷ್ಟು ಹೊತ್ತು ತಂಗಿದ್ದೆ; ನಿಜಗುಣಶಿವಯೋಗಿಗಳ ಕೆಲವು ಸ್ವರವಚನಗಳನ್ನು ಕೆಳದನಿಯಲ್ಲಿ ಹಾಡಿಕೊಂಡೆ; ಮನಸ್ಸು ಪ್ರಸನ್ನವಾಯಿತು; ಹರಕೆ ಸಂದಿತೆಂದು ಭಾವಿಸಿ ಕೆಳಗಿಳಿದೆ.  ಬಂದವರೆಲ್ಲ ಹೊರಟಿದ್ದರು.  ಬುದ್ದಿಯವರು ವಿರಾಮವಾಗಿ ಕುಳಿತು ಬಹುಕಾಲ ಮಾತಾಡಿದರು - ಅವರ ಛಂದಃಪ್ರೀತಿ, ಅದರ ಬಗ್ಗೆ ಅವರು ನಡೆಸಿದ ಅಧ್ಯಯನ, ಸಂಶೋಧನೆಗಳು, ತಮ್ಮ ಪ್ರತಿಭಾವಿಶೇಷದಿಂದ ಅವರೇ ಸೃಷ್ಟಿಸಿದ ಲೆಕ್ಕವಿಲ್ಲದಷ್ಟು ಹೊಸಹೊಸ ಛಂದಸ್ಸುಗಳ ಪರಿಚಯ ಮಾಡಿಸಿದರು.  ಛಂದಶ್ಶಾಸ್ತ್ರದ ಬಗೆಗಿರಲಿ, ಛಂದಸ್ಸುಗಳ ಬಗೆಗೇ ಅವರ ಹೊಕ್ಕುಬಳಕೆ ಯಾರಾದರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥದ್ದು.  ಇಂತಿಂತಹ ಛಂದೋವರ್ಗಗಳಲ್ಲಿ ಇಷ್ಟಿಷ್ಟು ಬಗೆಯ ಗಣಸಂಯೋಜನೆ ಸಾಧ್ಯ, ಅದರಲ್ಲಿ ಇಷ್ಟಿಷ್ಟು ಸಂಯೋಜನೆಗಳನ್ನು ಯಾರೂ ಬಳಸೇ ಇಲ್ಲ, ಅದರಲ್ಲಿ ಈ ಸಂಯೋಜನೆಯನ್ನು ನಾನು ಮಾಡಿದ್ದೇನೆ ನೋಡಿ - ಹೀಗೇ ಸಾಗುತ್ತಿತ್ತು ಬುದ್ದಿಯವರ ವಿವರಣೆ.  ಲಕ್ಷಾಂತರ ವೃತ್ತಗಳ ಸಂರಚನೆ ಸಾಧ್ಯವೆನ್ನುತ್ತಾರೆ ಲಾಕ್ಷಣಿಕರು - ನಿಜಗುಣಸ್ವಾಮಿಗಳು ವಿವಿಧ ಮಾತ್ರಾಗಣಗಳನ್ನು ಅಕ್ಷರಗಣಗಳನ್ನು ಚಿತ್ರವಿಚಿತ್ರವಾಗಿ ಸಂಯೋಜಿಸಿ ಅನೇಕ ಹೊಸಹೊಸ ಷಟ್ಪದಿ, ವೃತ್ತಗಳನ್ನು ರೂಪಿಸಿದ್ದಾರೆ.  ಉದಾಹರಣೆಗೆ ಶರಷಟ್ಪದಿಗೆ ಸಂವಾದಿಯಾಗಿ ಮಹಾಶರಷಟ್ಪದಿ, ಅನೇಕ ವಿನೂತನವೃತ್ತಗಳು - ನವಯೌವ್ವನ, ಭೂಮೀಶ, ಪಾಂಚಾಲಿ; ಛಂದಸ್ಸಿನ ಸೃಷ್ಟಿಯಷ್ಟೇ ವಿನೂತನವಲ್ಲ, ಅವಕ್ಕಿಟ್ಟ ಹೆಸರುಗಳೂ ವಿನೂತನವೇ - ಉದಾಹರಣೆಗೆ ಏಳುಮಲೆ ಮಾದೇವ ಎಂಬುದೊಂದು ವೃತ್ತ, ನನ್ನಿ, ಕುವೆಂಪು, ಕನ್ನಡಾಂಬೆ, ರಾಮರಾಜ್ಯ - ಮತ್ತೆ ಅವು ಒಂದೊಂದಕ್ಕೂ ಲಕ್ಷಣಪದ್ಯಗಳು ಬೇರೆ.  ಕೆಲವು ಛಂದಸ್ಸುಗಳು ಲಯದುಷ್ಕರವೆನಿಸಿದುವು, ಕಟುವೆನಿಸಿದುವು.  ಅದನ್ನೇ ಹೇಳಿದೆ - "ಕೆಲವು ವೃತ್ತಗಳಲ್ಲಿ ಲಯಸೌಕರ್ಯವೇ ಇಲ್ಲವಲ್ಲ ಬುದ್ದೀ, ಕೆಲವು ಕಡೆ ಜಗಣವಿರಬಾರದೆಡೆ ಜಗಣವಿದೆ..." ಹೀಗೇ ಏನೋ ಹೇಳಿದ ನೆನಪು.  ಕೂಡಲೇ ಸಿಟ್ಟಿಗೆದ್ದ ಬುದ್ಧಿಯವರು - "ಅದೆಲ್ಲಾ ಕಂದಾಚಾರ.  ಯಾವುದು ಲಯಸೌಕರ್ಯ?  ಹಾಡ್ತಾ ಹಾಡ್ತಾ ರಾಗ.  ಹಾಡೋಕ್ಕೆ ಬರಬೇಕಷ್ಟೇ; ಈಗ ವೆಂಕಟಮಖಿ 72 ಮೇಳಕರ್ತ ಮಾಡಿದಾನಲ್ಲ, ಅದನ್ನೆಲ್ಲಾ ಹಾಡೋಕ್ಕೆ ಆಗುವುದೋ?  ಅದು ಪ್ರತಿಭಾಸೃಷ್ಟಿಯಷ್ಟೇ, ದಕ್ಕಿಸಿಕೊಳ್ಳುವವರು ದಕ್ಕಿಸಿಕೊಳ್ಳುತ್ತಾರೆ" ಎಂದರು "ನಿನಗೆ ಯೋಗ್ಯತೆಯಿದ್ದರೆ ದಕ್ಕಿಸಿಕೋ ಇಲ್ಲದಿದ್ದರೆ ತೆಪ್ಪಗಿರು" ಎಂಬ ಧ್ವನಿಯನ್ನು ಅದರಲ್ಲಿ ಗುರುತಿಸಿ, ಅರಿತು ಕೈಮುಗಿದು ಸುಮ್ಮನಾದೆ.  ಮಾತು ವಚನಸಾಹಿತ್ಯಕ್ಕೆ, ಅನುಭಾವಕ್ಕೆ, ಶರಣಸತಿ-ಲಿಂಗಪತಿ ಪರಿಕಲ್ಪನೆಗೆ ಹೊರಳಿತು.  ಈ ಪರಿಕಲ್ಪನೆಯ ಕೆಲವು ವಚನಗಳನ್ನು ಬುದ್ದಿಯವರು ಭಾವಪೂರ್ಣವಾಗಿ, ಅಭಿನಯಪೂರ್ವಕವಾಗಿ ಅಂದು ತೋರಿಸಿದರು.  ಅವರು ಹೀಗೆ 'ಅನ್ನು'ವ ಶೈಲಿಯೇ ಅನನ್ಯ.  ಕೇಳುತ್ತ ಕೇಳುತ್ತಾ ಹೊತ್ತು ಸರಿಯಿತು, ಸಂಜೆಯಾಗತೊಡಗಿತು.  ಬನ್ನಿ ಕೆಳಗೆ ನಿಜಗುಣಾನುಭವಮಂಟಪವನ್ನು ನೋಡಿಕೊಂಡು ಹೊರಡುವಿರಂತೆ ಎಂದು ಕೆಳಗೆ ಕರೆದುಕೊಂಡುಬಂದರು.  ವಿಶಾಲವಾದ ಪ್ರಾಂಗಣ, ನಿಜಗುಣಶಿವಯೋಗಿಗಳ ದೊಡ್ಡ ಚಿತ್ರಪಟ, ಕಟ್ಟಡದ ಸುತ್ತ ಆಪ್ತವೆನಿಸುವ ಕೈತೋಟ.  ಸುತ್ತುಹಾಕಿಕೊಂಡು ಒಳಬಂದು ಕುಳಿತೆವು.  ಇಲ್ಲಿ ಆಗೀಗ ಭಜನೆ, ಕೆಲವು ಕಾರ್ಯಕ್ರಮಗಳು ನಡೆಯುತ್ತವೆ, ನಿರೀಕ್ಷಿಸಿದಷ್ಟು ಉತ್ಸಾಹ ಕಾಣುತ್ತಿಲ್ಲ ಎಂದು ಹೇಳುವಾಗ ಬುದ್ದಿಯವರ ಮುಖ ಸಪ್ಪಗಾಯಿತು.  ಯಾವುದೋ ಲೋಕದಲ್ಲಿದ್ದವರಂತೆ ತೇಲುಗಣ್ಣಾಗಿ ಹೇಳಿದರು - "ನಾನು, ಕೈವಲ್ಯಸಾಧನೆಯಲ್ಲಿ ಬಹಳಷ್ಟು ದೂರ ಕ್ರಮಿಸಿಬಿಟ್ಟಿದ್ದೆ, ಬಹಳ ಮೇಲೆ ತಲುಪಿದ್ದೆ, ಗುರಿಗೆ ಬಹಳ ಹತ್ತಿರವಿದ್ದೆ..." ಕೆಲಕಾಲ ನಿಲ್ಲಿಸಿ ಮತ್ತೆ ನಿಧಾನಕ್ಕೆ ನುಡಿದರು "ಈ ಅನುಭವಮಂಟಪ ಕಟ್ಟುವ ಹವ್ಯಾಸದಲ್ಲಿ ಮತ್ತೆ ಭವಕ್ಕೆ ಬಿದ್ದೆ..."  ಬುದ್ದಿಯವರ ಕಣ್ಣು ತೇವವಾಗಿದ್ದು ಸ್ಪಷ್ಟವಾಗಿತ್ತು.  ಅದನ್ನವರು ತೊಡೆಯುವ ಪ್ರಯತ್ನವನ್ನೇನೂ ಮಾಡಲಿಲ್ಲ.  ಕೆಲಕಾಲದ ಮೌನದನಂತರ ಇಹಕ್ಕೆ ಮರಳಿದವರೇ, ತಟಕ್ಕನೆ ಏಳುತ್ತಾ, "ನಿಮಗೆ ಹೊತ್ತಾಯಿತು, ಹೊರಟುಬಿಡಿ, ಆಗಾಗ ಬರುತ್ತಿರಿ" ಎಂದರು.

ನಾನೂ ಕತ್ತಲಲ್ಲಿ ಐವತ್ತು ಕಿಲೋಮೀಟರು ಟೂವ್ಹೀಲರ್ ಓಡಿಸಿಕೊಂಡು ನನ್ನ 'ಭವ'ಕ್ಕೆ ಸುರಕ್ಷಿತವಾಗಿ ಮರಳಬೇಕಿತ್ತು.  ಅವರವರ ಭವ ಅವರವರಿಗೆ ದೊಡ್ಡದು ಎನ್ನುವ ಭಾವ ಹೊತ್ತು ಮರಳಿದೆ.

ಆಮೇಲೆ ಬುದ್ದಿಯವರನ್ನು ಒಂದೆರಡು ಬಾರಿ ದೂರವಾಣಿಯಲ್ಲಿ ಮಾತಾಡಿಸಿದ್ದಷ್ಟೇ.  ಕೆಲವರ್ಷಗಳ ಮೇಲೆ ಒಂದುಬಾರಿ ಇದ್ದಕ್ಕಿದ್ದಂತೆ ಬೆಳಗಿನ ಏಳುಗಂಟೆಗೆ ಕರೆಮಾಡಿ, ನಿಮ್ಮ ಮನೆಯ ಹತ್ತಿರದ ಸರ್ಕಲಿನಲ್ಲಿದ್ದೇನೆ, ನಿಮ್ಮ ಮನೆಗೆ ಹೇಗೆ ಬರಬೇಕೆಂದು ತಿಳಿಸಿ ಎಂದಿದ್ದರು.  ನಮ್ಮಲ್ಲೋ, ಸ್ವಾಮಿಗಳು ಮನೆಗೆ ಬರುವುದೆಂದರೆ ಸಾಮಾನ್ಯವಲ್ಲ, ಅದರ ಪರಿಠವಣೆಯೇ ಬೇರೆ.  ನೋಡಿದರೆ ಈತ ಮನೆಯ ಹತ್ತಿರವೇ ನಿಂತುಕೊಂಡು ದಾರಿ ಕೇಳುತ್ತಿದ್ದಾರೆ.  ಅರ್ಧ ಮನೆ ಇನ್ನೂ ಹಾಸಿಗೆ ಬಿಟ್ಟು ಎದ್ದೂ ಇಲ್ಲ.  ಮನೆಯಲ್ಲಿ ದೊಡ್ಡ ಗಡಿಬಿಡಿಯೆದ್ದಿತು.  ಅದೇ ಗಡಿಬಿಡಿಯಲ್ಲಿ ಮುಖ ಗಲಬರಿಸಿಕೊಂಡು, ಅಂಗಿಯೇರಿಸಿಕೊಂಡು ಓಡಿದೆ.  ಹೋಗಿ ಮನೆಗೆ ಕರೆದುಕೊಂಡು ಬಂದೆ.  "ಸ್ವಾಮಿಗಳು" ಮನೆಗೆ ಬಂದಹಾಗಾಗಲೇ ಇಲ್ಲ.  ಬುದ್ದಿಯವರು ಬಂದು ಸ್ವಲ್ಪಹೊತ್ತು ಕುಳಿತಿದ್ದು, ಎಲ್ಲರನ್ನೂ ಮಂದಹಾಸದೊಡನೆ ಮಾತಾಡಿಸಿ, ಮಗನ ತಲೆ ಸವರಿ, ತಮ್ಮನ ಬೆನ್ನು ತಟ್ಟಿ, ಒಂದು ಲೋಟ ಹಾಲು ಕುಡಿದು ಹೊರಟರು.  "ನನ್ನನ್ನು ಇಲ್ಲೇ ಸರ್ಪಭೂಷಣಮಠಕ್ಕೆ ಬಿಟ್ಟುಬಿಡಿ ಸಾಕು" ಎಂದು ನನ್ನ ಟೂವ್ಹೀಲರಿನಲ್ಲೇ ಕುಳಿತು ಡ್ರಾಪ್ ಪಡೆದರು.

ಆಮೇಲೆ ಅವರನ್ನು ಹಲವು ಬಾರಿ ನೆನೆದಿದ್ದೇನೆ; ಈ ಐದಾರು ತಿಂಗಳಲ್ಲಂತೂ ಅದೇಕೋ, ಮಿತ್ರರೊಡನೆ ಮಾತುಕತೆಗಳಲ್ಲಿ ಅವರ ವಿಷಯ ಸಾಕಷ್ಟು ಬಾರಿ ಬಂದು ಹೋಗಿದೆ.  ಮನಸ್ಸು ವಿಹ್ವಲಗೊಂಡಾಗಲೆಲ್ಲಾ ತಣ್ಣಗೆ ಶಂಭುಲಿಂಗನ ಬೆಟ್ಟಕ್ಕೆ ಹೋಗಿ ಇದ್ದುಬಿಡುವುದೆಂಬ ಕಲ್ಪನಾಸಮಾಧಾನವನ್ನು ಅನೇಕ ಬಾರಿ ಮನಸ್ಸಿಗೆ ತಂದುಕೊಂಡಿದ್ದೇನೆ.  ಹಾಗೆಂದುಕೊಂಡಾಗಲೆಲ್ಲಾ, ದೂರದಲ್ಲಿರುವ ಮಿನುಗುದೀವೊಂದು ನಾವು ಯಾತಕ್ಕೂ ಉಪಯೋಗಿಸದಿದ್ದರೂ ತನ್ನ ಮಿನುಗುವಿಕೆಯಿಂದಲೇ ಒಂದು ಬಗೆಯ ಭರವಸೆ ತುಂಬುವಂತೆ ಭರವಸೆ ತುಂಬಿ ಬಂದಿದೆ.  ಅನೇಕ ಬಾರಿ ಅಲ್ಲಿ ಹೋಗಿ ಒಂದೆರಡು ಗಂಟೆಯಾದರೂ ಅವರೊಡನೆ ಕಾಲಕಳೆದು ಬರಬೇಕೆಂದುಕೊಂಡಿದ್ದೇನೆ.  ಆದರೆ ಯಾವತ್ತೂ ಅದು ಸಾಧ್ಯವಾಗಲೇ ಇಲ್ಲ.  ಈಗ್ಗೆ ಕೆಲತಿಂಗಳ ಹಿಂದೆ ಕುಮಾರನಿಜಗುಣರಿಗೆ ಬಹಳ ಹುಷಾರಿಲ್ಲ, ಬೆಂಗಳೂರಿನಲ್ಲಿದ್ದಾರೆ ಎಂಬ ಸುದ್ದಿ ಬಂತು.  ಅಂದುಕೊಂಡಂತೆ ಮೊದಲೇ ಒಮ್ಮೆ ಚಿಲಕವಾಡಿಗೆ ಹೋಗಿ ನೋಡಿ ಬರಲಾಗದ್ದಕ್ಕೆ ವಿಷಾದವಾಯಿತು.  ಈಗ ಅವರು ನಮ್ಮನ್ನಗಲಿದನಂತರ, ಆ ವಿಷಾದ ಶಾಶ್ವತವಾಗಿ ಉಳಿದುಕೊಂಡಿತು.

ಅಗಲಿದ ಹಿರಿಯರಿಗೆ, ಅವರೊಪ್ಪುವಂತೆ ಒಂದು ಶ್ರದ್ಧಾಂಜಲಿಯನ್ನಾದರೂ ಸಲ್ಲಿಸುವುದು ನಮಗುಳಿದ ಕಾರ್ಯ.  ಅವರೇ ಸೃಷ್ಟಿಸಿದ "ಏಳುಮಲೆ ಮಾದೇವ" ವೃತ್ತದಲ್ಲಿ ಅವರಿಗಾಗಿ ಈ ಶ್ರದ್ಧಾಂಜಲಿ (ಏಳುಮಲೆ ಮಾದೇವ ವೃತ್ತ - ಭಯಜಸ ರನತ ಗಣಗಳು ಮತ್ತೊಂದು ಗುರು - ಒಟ್ಟು 22 ಅಕ್ಷರಗಳು - "ಏಳುಮಲೆ ಮಾದೇವ ಏಳುಮಲೆ ಮಾದೇವ ಏಳುಮಲೆ ಮಾದೇವನೇ" - ಹೀಗೆ):

ವೃತ್ತಗಳ ಸುತ್ತುತ್ತೆ ಕಂದಗಳ ತಾನೆತ್ತುತುಂ ಸಲಹಿ ಸಂತೈಸುತುಂ
ಚಿತ್ತದೊಳಗೆತ್ತಿರ್ದ ಶಂಭುವಿನ ರೂಹೆತ್ತಲುಂ ಕದಲದಂತಾವಗಂ
ಸುತ್ತರಿದು ಕಾಯುತ್ತಲಿತ್ತ ಶಿವಯೋಗಂಗಳೊಳ್ಮುಳುಗುತುಂ ಸೌಖ್ಯಮಂ
ಪೊತ್ತ ಮೃದುಮಂದಸ್ಮಿತಂ ನಿಜಗುಣಾಖ್ಯ ಶಿವಯೋಗಿಕುವರಂಗೊಂದಿಪೆಂ



Sunday, July 4, 2021

ಭವ-ಭಾವ-ಅನುಭಾವ

"... ರಸವೆಂದರೇನು ಎಂಬುದರ ದಿಗ್ದರ್ಶನವನ್ನಾದರೂ ಇಲ್ಲಿ ಮಾಡಿಕೊಡುವುದು ಅವಶ್ಯವೆನಿಸುತ್ತದೆ... ಭಾವವನ್ನು ಉದ್ಬೋಧಗೊಳಿಸುವ ಕಾರಣಸಾಮಗ್ರಿಗೆ 'ವಿಭಾವ' ಎಂದೂ, ಭಾವದ ಕಾರ್ಯಸಮುದಾಯಕ್ಕೆ 'ಅನುಭಾವ' ಎಂದೂ ಸಂಜ್ಞೆ... ಈ ವಿಭಾವಾನುಭಾವಗಳನ್ನು ಕವಿ ಸಮುಚಿತವಾಗಿ ವರ್ಣಿಸಿರುವುದರಿಂದ ಅವುಗಳನ್ನು ಪರಿಭಾವಿಸಿದ ಮಾತ್ರಕ್ಕೇ ನಾವು ...ರಸವನ್ನು ಅನುಭವಿಸುತ್ತೇವೆ"
 
- ತೀನಂಶ್ರೀ (ಭಾರತೀಯಕಾವ್ಯಮೀಮಾಂಸೆ).

ಟಿಪ್ಪಣಿ:
ಭವವೆಂಬ ಭೌತಿಕಜಗತ್ತಿನಿಂದ ವಿಭಾವ, ವಿಭಾವದಿಂದ ಅನುಭವ, ಅನುಭವದಿಂದ ಭಾವ, ಭಾವದಿಂದ ಅನುಭಾವ; ಈ ವಿಭಾವಾನುಭಾವಗಳು ಭೌತಿಕ ಜಗತ್ತಿನಲ್ಲಾಗುವುದರ ಬದಲು ಕಾವ್ಯದಲ್ಲಿ ಆದಾಗ ಅದರಿಂದ ನಮ್ಮಲ್ಲುಂಟಾಗುವ ವಿಶಿಷ್ಟ ಅನುಭವಕ್ಕೆ 'ರಸ' ಎಂದು ಹೆಸರು - ಹೀಗಿಟ್ಟುಕೊಳ್ಳಬಹುದು.

ಭವ (ಈ ಭೌತಿಕಜಗತ್ತು) ತನ್ನ ದಿನನಿತ್ಯದ ಆಗುಹೋಗುಗಳಿಂದ ವ್ಯಕ್ತಿಯ ಮೇಲೆ ನಿರಂತರ ಪರಿಣಾಮವನ್ನುಂಟುಮಾಡುತ್ತಿರುತ್ತದೆ.  ಭವದ ಆಗುಹೋಗುಗಳಿಂದ ವ್ಯಕ್ತಿಯಲ್ಲಾಗುವ ಅನುಭೂತಿ (ಹಿತ, ನೋವು, ಉತ್ಸಾಹ ಇತ್ಯಾದಿಗಳು) ಅನುಭವವೆಂದು ಕರೆಸಿಕೊಳ್ಳುತ್ತವೆ - ಭವವನ್ನು ಅನುಸರಿಸಿ ಬಂದದ್ದು, ಭವದಿಂದ ಬಂದದ್ದು 'ಅನು'ಭವ.  ಈ ಅನುಭವದಿಂದ ಉಂಟಾಗುವ ಚಿತ್ತವೃತ್ತಿಯೇ ಭಾವ (ಸುಖ, ದುಃಖ, ಆನಂದ ಇತ್ಯಾದಿ).  ಈ ಭಾವವನ್ನುಂಟುಮಾಡುವ ಜಗತ್ತಿನ ಕಾರ್ಯಸಮುದಾಯ (ಆಗುಹೋಗು)ಗಳೇ 'ವಿಭಾವ'ಗಳು.   

ಈ ಭಾವ, ವ್ಯಕ್ತಿಯಲ್ಲಿ ಉಂಟಾದ ಮೇಲೆ ಅದು ಆ ಆಗುಹೋಗಿಗೆ (ವಿಭಾವಕ್ಕೆ) ಪ್ರತಿಕ್ರಿಯೆಯಾಗಿ ಅಭಿವ್ಯಕ್ತಿಗೊಳ್ಳಬೇಕಷ್ಟೇ?  ಭಾವದಿಂದ ಹೊಮ್ಮಿದ ಈ ಪ್ರತಿಕ್ರಿಯೆಯೇ ಅನುಭಾವ.  ಭವವು ಮನಸ್ಸಿನ ಮೇಲೆ ಪರಿಣಾಮ ಬೀರಿ 'ಭಾವ'ವವನ್ನುಂಟುಮಾಡುವಂತೆಯೇ ಆ ಭಾವವೂ ಮನಸ್ಸಿನ ಮೇಲೆ ವಿಶೇಷಪರಿಣಾಮವನ್ನುಂಟುಮಾಡುತ್ತದೆ.  ಆ ಪರಿಣಾಮವೇ ಅದು ಮನಸ್ಸಿಗೆ ತಂದುಕೊಡುವ ಒಂದು ಒಳನೋಟ, ಅಂತರ್ದೃಷ್ಟಿ - ಅದೂ ಅನುಭಾವವೇ (ಮೊದಲ ಚಿತ್ರ ನೋಡಿರಿ).

ಈ ವಿಭಾವಾನುಭಾವಗಳ ಸಂಬಂಧವನ್ನು ವಿವರಿಸಲು, ಮದುವೆಯಾದ ಮಗಳನ್ನು ಗಂಡನ ಮನೆಗೆ ಬೀಳ್ಕೊಡುವ ಮನೋಜ್ಞಚಿತ್ರಣವೊಂದನ್ನು ಕಟ್ಟಿಕೊಡುವ ಪಂಪನ ಪ್ರಸಿದ್ಧಪದ್ಯವೊಂದನ್ನು ತೀನಂಶ್ರೀ ಉದಾಹರಿಸುತ್ತಾರೆ (ಎರಡನೆಯ ಚಿತ್ರ ನೋಡಿರಿ) -


ಪೊಡೆಮಡುವಪ್ಪಿಕೊಳ್ವ ನೆನೆಯುತ್ತಿರಿಮೆಂಬ ಸಮಸ್ತವಸ್ತುವಂ
ಕುಡುವ ಪಲರ್ಮೆಯಿಂ ಪರಸಿ ಸೇಸೆಯನಿಕ್ಕುವ ಬುದ್ಧಿವೇೞ್ವ ಕ-
ಯ್ಯೆಡೆ ನಿಮಗೆಂದೊಡಂಬಡಿಪ ನಲ್ಲರಗಲ್ಕೆಗೆ ಕಣ್ಣ ನೀರ್ಗಳಂ
ಮಿಡಿವ ಬಹುಪ್ರಕಾರಜನಸಂಕಟಮೊಪ್ಪಿದುದಾ ಪ್ರಯಾಣದೊಳ್
(ಆದಿಪುರಾಣ 4-57)

ಪೊಡೆಮಡುವ (ನಮಸ್ಕರಿಸುವ), ಅಪ್ಪಿಕೊಳ್ವ, "ನೆನೆಯುತ್ತಿರಿಂ" ಎಂಬ, ಸಮಸ್ತವಸ್ತುವಂ ಕುಡುವ, ಪಲರ್ಮೆಯಿಂ ಪರಸಿ ಸೇಸೆಯನಿಕ್ಕುವ (ಬಹುವಿಧವಾಗಿ ಹರಸಿ ಅಕ್ಷತೆಯಿಕ್ಕುವ), ಬುದ್ಧಿವೇಳ್ವ, "ಇದು ಕೈಗಾವಲಿಗಿರಲಿ" ಎಂದು ಹೇಳಿ ಒಪ್ಪಿಸುವ, ಪ್ರಿಯರ ಅಗಲಿಕೆಗೆ ಕಣ್ಣೀರುಗರೆವ ಬಹುಪ್ರಕಾರವಾದ ಜನಸಂಕಟವು ಆ ಪ್ರಯಾಣದಲ್ಲಿ ತೋರಿಬಂತು.

ಮಗಳ ಅಗಲಿಕೆಯೆನ್ನುವುದು ಇಲ್ಲಿ ವಿಭಾವ.  ಅದರಿಂದ ಉಂಟಾದ ನೋವು ಅನುಭವ.  ಅದರ ಪರಿಣಾಮವಾಗಿ ದುಃಖವೆಂಬ ಭಾವ ಮಡುಗಟ್ಟುತ್ತದೆ.  ಈ ದುಃಖವೇ ಕಣ್ಣೀರಾಗಿ, ಅಪ್ಪುಗೆಯಾಗಿ, ಆಶೀರ್ವಾದವಾಗಿ, ಬುದ್ಧಿಮಾತಾಗಿ, ಆತಂಕವಾಗಿ, ಕಕ್ಕುಲತೆಯಾಗಿ ಅಭಿವ್ಯಕ್ತಿಗೊಳುತ್ತದೆ.  ಇದು ಅನುಭಾವ, ಭಾವದ ಕಾರ್ಯ.  ಈ ಅನುಭಾವವು ಒಂದು ಒಳನೋಟವಾಗಿ ಪ್ರತಿಯೊಬ್ಬರಲ್ಲೂ ಇರುವುದೇ ಆದ್ದರಿಂದ ನಿಜಕ್ಕೂ ಆ ದುಃಖವನ್ನು ಅನುಭವಿಸುತ್ತಿಲ್ಲದವರೂ ಹಾಗೆ ಅನುಭವಿಸುವವರಿಗಾಗಿ ಮರುಗುತ್ತಾರೆ, ಸಹಾನುಭೂತಿ ವ್ಯಕ್ತಪಡಿಸುತ್ತಾರೆ, ಮೇಲೆ ವರ್ಣಿಸಿದಂತೆ ವಿಧವಿಧವಾಗಿ ದುಃಖಿಸುತ್ತಿರುವ ಪ್ರೀತಿಪಾತ್ರರ ಅಗಲಿಕೆಯ ದುಃಖವನ್ನು ನೋಡಿ ಮತ್ತೆ ಹಲವರು ತಾವೂ "ಕಣ್ಣ ನೀರ್ಗಳಂ ಮಿಡಿ"ಯುತ್ತಾರೆ - ಇದೂ ಅನುಭಾವವೇ.

ಇವೆಲ್ಲಾ ನಿಜಜಗತ್ತಿನಲ್ಲಿ ಆದಾಗ ಆ ವಿಭಾವಾನುಭಾವಗಳೆಲ್ಲ ಸತ್ಯ - ನಾವು ಅದರಲ್ಲಿ ಪ್ರತ್ಯಕ್ಷವಾಗಿ ಭಾಗಿಯಾಗಿದ್ದೇವೆ.  ಒಳ್ಳೆಯದಾದರೆ ಮಾತ್ರ ಸಂತೋಷಿಸಬಲ್ಲೆವು - ಕೆಟ್ಟದಾಗಲೆಂದು ಬಯಸುವುದೂ ಇಲ್ಲ, ಅದನ್ನು ಆನಂದಿಸುವುದು ದೂರದ ಮಾತು.  ಆದರೆ ಇವೆಲ್ಲಾ ಕಾವ್ಯದಲ್ಲಿ ಬಂದರೆ, ಅದು ಒಳ್ಳೆಯ ಅನುಭವವಿರಲಿ ಕೆಟ್ಟದಿರಲಿ, ನಾವದರಲ್ಲಿ ಇಲ್ಲದಿರುವುದರಿಂದ ಆ ಕಾವ್ಯ ಮೂಡಿಸುವ ಭಾವಗಳು ಒಂದು ರೀತಿ ಆಹ್ಲಾದವನ್ನೇ ಕೊಡಬಲ್ಲುದು.  ಕಾವ್ಯದಲ್ಲಿ ದುಃಖಿಸುವವರ ಜೊತೆ ನಾವೂ ದುಃಖಿಸುತ್ತೇವೆ, ಸುಖಿಸುವವರ ಜೊತೆ ನಾವೂ ಸುಖಿಸುತ್ತೇವೆ, ಕೋಪಗೊಳ್ಳುವವರ ಜೊತೆ ನಾವೂ ಕೋಪಗೊಳ್ಳುತ್ತೇವೆ - ಆದರೆ ಇದಾವುದೂ ನಮ್ಮದೇ ಭಾವವಲ್ಲ, ಮತ್ತು ಅದು ನಮ್ಮಲ್ಲಿ ಯಾವ ಪ್ರತಿಕ್ರಿಯೆಯನ್ನೂ ಪ್ರೇರಿಸುವುದಿಲ್ಲ.  ಹೀಗೆ, ನಿಜಜೀವನದಲ್ಲಿ ನಮ್ಮಲ್ಲಿ ಪ್ರತಿಕ್ರಿಯೆಯನ್ನು ಪ್ರೇರಿಸಬಹುದಾದ ಭಾವಗಳು, ಅವೇ ಕಾವ್ಯದಲ್ಲಿ ಬಂದಾಗ ಕೇವಲ ಭಾವಗಳಾಗಿ ಮಾತ್ರ ಉಳಿಯುತ್ತವೆ.  ಇದೇ 'ರಸ'.   - ನಿಜಜೀವನದ ವಿಭಾವಾನುಭಾವಗಳು ಕಾವ್ಯದಲ್ಲಿ ಬಂದಾಗ ನಮ್ಮಲ್ಲಿ ಉಂಟಾಗುವ ಭಾವವೇ 'ರಸ'  (ಮೂರನೆಯ ಚಿತ್ರ ನೋಡಿ).


ಈ ರಸಕ್ಕೆ ಪ್ರತಿಯಾಗಿ ನಮ್ಮಲ್ಲಿ ಮೂಡಬಹುದಾದ 'ಅನುಭಾವ'ವೆಂದರೆ ಆನಂದವಷ್ಟೇ - ಅದು ಕರುಣರಸವಿರಲಿ, ವೀರರಸವಿರಲಿ, ಉತ್ಸಾಹರಸವಿರಲಿ, ಭೀಭತ್ಸವೇ ಇರಲಿ ಅದು ಒಂದು ಆಹ್ಲಾದಕರವಾದ ಅನುಭವವನ್ನು ನೀಡುತ್ತದೆಯಾಗಲೀ ನಮ್ಮನ್ನು ನಿಜಕ್ಕೂ ಅಳುವಂತೆ, ಯುದ್ಧಮಾಡುವಂತೆ, ಕುಣಿದಾಡುವಂತೆ, ಹೆದರಿ ಓಡಿಹೋಗುವಂತೆ ಪ್ರೇರೇಪಿಸುವುದಿಲ್ಲ.  ನಿಜಜೀವನದಲ್ಲಿ ಯಾರದೋ ತಲೆಯೊಡೆದು ಮಿದುಳು ಹೊರಚೆಲ್ಲಿದ್ದರೆ ನಿಮ್ಮಲ್ಲಿ ಮೊದಲು ಮೂಡುವ ಭಾವ ಭಯ.  ಅದಕ್ಕೆ ಪ್ರತಿಕ್ರಿಯೆಯಾಗಿ ನೀವು ಕಿಟಾರನೆ ಕಿರುಚಿಕೊಳ್ಳಬಹುದು, ಓಡಿಹೋಗಬಹುದು, ಪೋಲೀಸರಿಗೆ ಫೋನ್ ಮಾಡಬಹುದು, ಹೆಣದ ವಿಲೇವಾರಿಗೆ ವ್ಯವಸ್ಥೆ ಮಾಡಬಹುದು, ಅಥವಾ ಇದೆಲ್ಲಿಯ ಗ್ರಹಚಾರವಪ್ಪಾ ಎಂದುಕೊಂಡು ಮೆಲ್ಲನೆ ಜಾರಿಕೊಳ್ಳಬಹುದು, ಇವೆಲ್ಲ 'ಅನುಭಾವ'ಗಳು.  ಅದೇ ಸನ್ನಿವೇಶ ಕಾವ್ಯದಲ್ಲಿ ಬಂದರೆ "ಕದನದೊಳುಣ್ಮಿದೊಳ್ಮಿದುಳ ಕರ್ದಮ"ದ ಚಿತ್ರಣವನ್ನು ನೋಡಿ ಭಯದಿಂದ ಓಡಿಹೋಗುವುದಿಲ್ಲ.  ಬದಲಿಗೆ "ಆಹಾ, ಅಬ್ಬಾ, ಅದ್ಭುತ" ಎಂಬ ಉದ್ಗಾರದೊಡನೆ ಆಸ್ವಾದಿಸುತ್ತೀರಿ.  ಜೊತೆಗೊಂದು ಫಿಲ್ಟರ್ ಕಾಫಿಯೋ ಖಾರದ ಶೇಂಗಾ ಬೀಜವೋ ಇದ್ದರೆ ಇನ್ನೂ ಸೊಗಸು.  ಭಯದ 'ಭಾವ'ವು ಇಲ್ಲಿ ಭೀಭತ್ಸ'ರಸ'ವಾಗಿ ನಿಮ್ಮಲ್ಲಿ ಮೂಡಿದೆ.  ಭಯದ ಪರಿಣಾಮವಾಗಿ ನಿಜಜೀವನದಲ್ಲಿ ಬಂದಿರಬಹುದಾಗಿದ್ದ ಅನುಭಾವಗಳು (ಕಿರುಚಿಕೊಳ್ಳುವುದು, ಓಡಿಹೋಗುವುದು ಇತ್ಯಾದಿ), ಇಲ್ಲಿಲ್ಲ.  ಬದಲಿಗೆ ಇಲ್ಲಿ 'ರಸ'ದ ಪರಿಣಾಮವಾಗಿ ಮೂಡುವ ಅನುಭಾವ - ಆನಂದ.

ಕಾವ್ಯದ ಓದು ಒಂದು ರೀತಿ ಕನಸಿದ್ದಂತೆ.  ಅಲ್ಲಿನ ಎಲ್ಲ ಪಾತ್ರಗಳ ಸನ್ನಿವೇಶಗಳ ಒಳಹೊಕ್ಕು ನಾವೇ ಅದನ್ನು ಅನುಭವಿಸಿದರೂ, ಅದು ನಿಜಕ್ಕೂ ನಮ್ಮದಲ್ಲವೆಂಬ ಅರಿವು ಚೆನ್ನಾಗಿಯೇ ಇರುವುದರಿಂದ ಅಲ್ಲಿ ಬರುವ ಭಾವಗಳೆಲ್ಲ ನಿಜವಾದ ಭಾವಗಳಾಗದೇ ಕೇವಲ 'ರಸ'ವಾಗಿ ಪರಿಣಮಿಸಿ ಅಂತಿಮವಾಗಿ ಆನಂದವನ್ನೇ ನೀಡುತ್ತವೆ.

ಆದರೆ ಕೆಲವೊಮ್ಮೆ ಕನಸಿನಲ್ಲಿ ಹೀರೋಗಳ ರೀತಿ ಫೈಟಿಂಗ್ ಮಾಡುತ್ತಾ ಆನಂದಿಸುತ್ತಿರುವ ವ್ಯಕ್ತಿ ನಿಜಕ್ಕೂ ಪಕ್ಕದಲ್ಲಿದ್ದವರಿಗೆ ಒದೆಯುವುದೂ ಉಂಟು - ಪಕ್ಕದಲ್ಲಿದ್ದವರು ಎಚ್ಚೆತ್ತು ತಿರುಗಿಸಿ ಒದೆಯುವವರೆಗೂ.  ರಸೋತ್ಕರ್ಷವೂ ಮಿತಿಮೀರಿದರೆ ರಸಾಭಾಸವಾಗಬಹುದಷ್ಟೇ?  ಚಿಕ್ಕಂದಿನಲ್ಲಿ ಎಲ್ಲೋ ಓದಿದ್ದ/ಹಿರಿಯರು ಯಾರೋ ಹೇಳುತ್ತಿದ್ದ ನಾಟಕದ ಘಟನೆಯೊಂದು ನೆನಪಾಗುತ್ತದೆ.

ಸತ್ಯವಾನ್ ಸಾವಿತ್ರಿ ನಾಟಕದ ಪ್ರದರ್ಶನ.  ಯಮರಾಜ ಬಂದು ಸತ್ಯವಾನಿಗೆ ಪಾಶ ಹಾಕಿದ್ದಾನೆ.  ಸಾವಿತ್ರಿಯ ಗೋಳಾಟ ಎಂತಹ ಕಲ್ಲೆದೆಯನ್ನೂ ಕರಗಿಸುವಂತಿದೆ.  ಪಿಟೀಲಿನವನಂತೂ ಈ ಗೋಳುಕರೆ ನೂರ್ಮಡಿಯಾಗುವಂತೆ ಕಮಾನಾಡಿಸಿ ಪೀಡಿಸುತ್ತಿದ್ದಾನೆ.  ಈ ಗೋಳುಕರೆ ತಾರಕಕ್ಕೇರಿದಾಗ ತಡೆಯಲಾರದೇ ಪ್ರೇಕ್ಷಕರಲ್ಲೊಬ್ಬ ದಢೂತಿ ಆಸಾಮಿ ರಂಗಕ್ಕೆ ನುಗ್ಗೇ ಬಿಡುತ್ತಾನೆ.  ಸಾವಿತ್ರಿಯನ್ನು ಗೋಳಾಡಿಸುತ್ತಿದ್ದ ಯಮಧರ್ಮನಿಗೆ ಕಪಾಳಕ್ಕೆ ಬಿಗಿದು ಅಬ್ಬರಿಸುತ್ತಾನೆ - "ಸಾಕ್ ನಿಲ್ಸಯ್ಯಾ, ಅವಾಗಿಂದ ನಾನೂ ನೋಡ್ತಾನೇ ಅವ್ನಿ, ಆ ಯಮ್ಗೂಸು ಅಂಗೆ ಕಳ್ಳು ಕಿತ್ಬರಂಗೆ ಗೋಳಾಡ್ತಾದೆ, ರಟ್ಟೆಗಾತ್ರದ ಮೀಸೆಯಿಟ್ಕಂಡು, ಯಮ್ಗೂಸ್ನ ಗೋಳಾಡಿಸ್ತಿದ್ದಯಲ್ಲ ನಾಚ್ಗೆ ಆಗಾಕಿಲ್ವಾ... ಅಂಗೂ ನಿಂಗೆ ಯಾರ್ನಾರ ತಗಂಡೋಗ್ಲೇಬೇಕು ಅಂದಿದ್ರೆ, ಅಲ್ನೋಡಲ್ಲಿ ಆಗಿಂದ ಕಮಾನಾಡ್ಸೀ ಆಡ್ಸೀ ಪೀಡಿಸ್ತವ್ನಲ್ಲ ಆ ಪಿಟೀಲ್ನೋನ್ನ ಯಳಕಂಡ್ ಹೋಗ್..." - ಕಾವ್ಯವನ್ನು ನಿಜಜೀವನದೊಳಗೆ ಬಿಟ್ಟುಕೊಂಡಾಗ ಹೀಗಾಗುತ್ತದೇನೋ.

ಸೂ: 
ದಿ. ತೀನಂಶ್ರೀಯವರ ಆಚಾರ್ಯಕೃತಿ ಭಾರತೀಯಕಾವ್ಯಮೀಮಾಂಸೆಯನ್ನು ಅಲ್ಲಿಲ್ಲಿ ಆಗೀಗ ಅನೇಕ ಬಾರಿ ತಿರುವಿ ಹಾಕಿದ್ದೇನಾದರೂ, ಇದುವರೆಗೂ ಒಮ್ಮೆಯಾದರೂ ಆಮೂಲಾಗ್ರವಾಗಿ ಕೂತು ಓದಲಾಗಿರಲಿಲ್ಲವೆಂಬುದೇ ಆಶ್ಚರ್ಯ.  ನನ್ನನ್ನು ಕಾವ್ಯ ಸೆಳೆದಷ್ಟು ಕಾವ್ಯಮೀಮಾಂಸೆ ಸೆಳೆಯಲಿಲ್ಲವೆಂಬುದೂ ಇದಕ್ಕೆ ಕಾರಣವಿರಬಹುದು.  ರಸವನ್ನು ಅನುಭವಿಸುವ ಬದಲು ಅದರ ವಿಶ್ಲೇಷಣೆಗೆ ತೊಡಗುವುದು ಯಾವ ಪುರುಷಾರ್ಥಕ್ಕೆ ಎಂಬ ನನ್ನ ಧೋರಣೆಯೂ ಇದಕ್ಕೆ ಕಾರಣವಿರಬಹುದು.  ಆದರೆ ತೀನಂಶ್ರೀಯವರ ಈ ಕೃತಿ ಸುಂದರವಾದ ಗದ್ಯವನ್ನೋದುವ ಸುಖವನ್ನೂ ಒದಗಿಸುವುದರಿಂದ ಇಲ್ಲಿ ಕಾವ್ಯಮೀಮಾಂಸೆಯೂ ರಸಮಯವೇ.  ಇತ್ತೀಚಿಗೆ ಹಲವು ಪ್ರೇರಣೆಗಳಿಂದಾಗಿ ಇದನ್ನು ಕೂತು ಓದಬೇಕೆನ್ನಿಸಿತು.  ಓದಿನ ಹಾದಿಯಲ್ಲಿ ಮನಸ್ಸಿಗೆ ಹೊಳೆದದ್ದನ್ನು ಹೀಗೆ ಟಿಪ್ಪಣಿ ಮಾಡಿ ಹಾಕುತ್ತಿದ್ದೇನಷ್ಟೇ.  ನನ್ನ ಗ್ರಹಿಕೆಗಳು ತಪ್ಪಿರಬಹುದು, ಓದು ಬೆಳೆದಂತೆ ಬದಲಾಗಲೂಬಹುದು.  ಕಾವ್ಯಮೀಮಾಂಸೆಯನ್ನು ಬಲ್ಲ ಹಲವು ವಿದ್ವಾಂಸರೂ ನನ್ನ ಮಿತ್ರವಲಯದಲ್ಲಿರುವುದರಿಂದ ಅವರ ಗ್ರಹಿಕೆಗಳ ಲಾಭವೂ ಇಲ್ಲಿ ದಕ್ಕೀತೆಂಬುದು ಇದನ್ನಿಲ್ಲಿ ಹಂಚಿಕೊಂಡ ಆಶಯಗಳಲ್ಲೊಂದು.

Tuesday, May 18, 2021

ಸೀಸಪದ್ಯ - ವಿವರಣೆ

ಸೀಸಪದ್ಯದ ಬಗ್ಗೆ ವಿವರಣೆ ಕೋರಿ ಮೊನ್ನೆ 'ವಾಗರ್ಥ'ದಲ್ಲಿ ಪ್ರಶ್ನೆಯೊಂದು ಬಂದು ಸಾಕಷ್ಟು ಚರ್ಚೆಗಳು ನಡೆದಿದ್ದುವು.  ಸೀಸಪದ್ಯವೆಂದರೆ ಅಂಶಚ್ಛಂದಸ್ಸಿನ ಒಂದು ಪದ್ಯಪ್ರಕಾರ.  ಆರಾರು ಮಾತ್ರಾಕಾಲದ ಆರು ಗಣಗಳು ಮತ್ತು ನಾಲ್ಕುನಾಲ್ಕು ಮಾತ್ರಾಕಾಲದ ಎರಡು ಗಣಗಳನ್ನು ಹೊಂದಿದ ನಾಲ್ಕು ಸಾಲುಗಳು ಸೀಸಚೌಪದಿಯೆನಿಸಿಕೊಳ್ಳುತ್ತದೆ.  ಸೀಸಪದ್ಯದಲ್ಲಿ ಸಾಮಾನ್ಯವಾಗಿ ಈ ಚೌಪದಿಯೊಂದಿಗೆ ಇನ್ನು ನಾಲ್ಕು ಸಾಲು ಬೇರೆ ಛಂದಸ್ಸಿನ ಪದ್ಯವೂ ಸೇರುತ್ತದೆ - ಅದು ಅಟವೆಲದಿ ಅಥವಾ ತೇಟಗೀತವಾಗಿರುತ್ತದೆ. ಇವೂ ಅಂಶಚ್ಛಂದಸ್ಸಿನ ಪದ್ಯಗಳೇ, ಸ್ವಲ್ಪ ವಿಭಿನ್ನ ಲಯದವು.  ಹಲವರು ವಿದ್ವಾಂಸರು ಅದನ್ನು ಉದಾಹರಣೆಗಳೊಂದಿಗೆ ವಾಗರ್ಥದಲ್ಲಿ ವಿವರಿಸಿದ್ದಾರೆ.  ಅಲ್ಲಿಗೆ ಸೀಸಪದ್ಯಲಕ್ಷಣದ 'ಥಿಯರಿ' ಪರಿಪೂರ್ಣವಾದಂತಾಯಿತಾದರೂ ಅದನ್ನು ಗಟ್ಟಿಯಾಗಿ ಓದಿಕೊಂಡಲ್ಲದೇ ಅದರ ಲಕ್ಷಣಗಳು, ಲಯ ಮನದಟ್ಟಾಗುವುದಿಲ್ಲ. ಅದರಲ್ಲೂ ಅಂಶಚ್ಛಂದಸ್ಸಿನ ಪದ್ಯಗಳ ಓದು ಒಂದು ವಿಶಿಷ್ಟ ಬಗೆಯದಾದ್ದರಿಂದ ಅದನ್ನಿಲ್ಲಿ ತಕ್ಕ ಹಿನ್ನೆಲೆಯೊಂದಿಗೆ ವಿವರಿಸಲು ಯತ್ನಿಸುತ್ತೇನೆ (ಸೀಸಪದ್ಯವನ್ನು ಮುಖ್ಯವಾಗಿ ವಿವರಿಸಲೆತ್ನಿಸಿದರೂ ಸಾಂದರ್ಭಿಕವಾಗಿ ಇತರ ಅಂಶಚ್ಛಂದಸ್ಸುಗಳಾದ ತ್ರಿಪದಿ, ಸಾಂಗತ್ಯಗಳನ್ನೂ, ಹೋಲಿಸಲೋಸುಗ ಕೆಲವು ಮಾತ್ರಾಛಂದಸ್ಸುಗಳ ಹಾಗೂ ಅಕ್ಷರಛಂದಸ್ಸುಗಳ ಉದಾಹರಣೆಯನ್ನೂ ಪರಿಶೀಲಿಸಿದ್ದೇನೆ).

ಸಾಮಾನ್ಯವಾಗಿ ಯಾವುದೇ ಪದ್ಯ, ಗಟ್ಟಿಯಾಗಿ ಓದಿಯೇ ಆನಂದಿಸಬೇಕಾದದ್ದು - ಮನಸ್ಸಿನಲ್ಲೇ ಓದಿಕೊಂಡರೆ ಅದರ ಅರ್ಥಸ್ವಾರಸ್ಯ ಮನದಟ್ಟಾಗಬಹುದಾಗಲೀ ಅದರ ಲಯಪ್ರಾಸಗಳ ಸೌಂದರ್ಯ ದಕ್ಕುವುದಿಲ್ಲ.  ಉದಾಹರಣೆಗೆ, "ರಂಗಪ್ಪ ಬಂದೌನೆ ಬಾಕ್ಲಲ್ಲಿ ನಿಂದೌನೆ" ಎಂದು ಸುಮ್ಮನೇ ಓದುವುದಕ್ಕೂ, "ರಂಗಪ್ಪಾ ಬಂದೌನೇ ಬಾಕ್ಲಲ್ಲಿ ನಿಂದೌನೇ ಸಿಂಗಾರಾ ವಾಗೌs ನೇ..." ಇದನ್ನು ಚಪ್ಪಾಳೆಯೊಡನೆ ಓದಿಕೊಂಡರೆ ಇದರ ಲಯ ಹೇಗೆ ದಕ್ಕುತ್ತದೆ ನೋಡಿ. 

ಷಟ್ಪದಿಯೋ ಕಂದವೋ ವೃತ್ತವೋ ಆದರೆ ಬರೆದಂತೆಯೇ ಓದುವುದು, ಏನೇನೂ ತೊಡಕಿಲ್ಲ. ಹ್ರಸ್ವವಿರುವ ಕಡೆ ಹ್ರಸ್ವ, ದೀರ್ಘವಿರುವ ಕಡೆ ದೀರ್ಘ, ಒತ್ತು ಇರುವ ಕಡೆ ಒತ್ತು - ಹೀಗೆ ನೋಡಿಕೊಂಡು ಎಲ್ಲೂ ನಿಲ್ಲಿಸದೇ ಓದಿದರೆ ಪದ್ಯದ ಲಯ ತಾನಾಗಿಯೇ ದಕ್ಕಿಬಿಡುತ್ತದೆ. ಉದಾಹರಣೆಗೆ, ಭಾಮಿನೀಷಟ್ಪದಿಯ

ಶ್ರೀವನಿತೆಯರಸನೆ ವಿಮಲರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿಸಜ್ಜನನಿಕರದಾತಾರ

ಎನ್ನುವುದನ್ನು ಅದು ಇರುವ ಹಾಗೇ ಎಲ್ಲೂ ನಿಲ್ಲಿಸದೇ ಓದಿದರೆ ಸಾಕು - 

ಶ್ರೀವ|ನಿತೆಯರ|| ಸನೆ ವಿ|ಮಲರಾ||
ಜೀವ| ಪೀಠನ|| ಪಿತನೆ| ಜಗಕತಿ||
ಪಾವ|ನನೆ ಸನ|| ಕಾದಿ|ಸಜ್ಜನ|| ನಿಕರ|ದಾತಾ|| ರ.. ...." 

ಹೀಗೆ 3+4=ಏಳೇಳು ಮಾತ್ರೆಗಳ ಲಯ ದಕ್ಕಿಬಿಡುತ್ತದೆ. 

ಹಾಗೆಯೇ ಮತ್ತೇಭವಿಕ್ರೀಡಿತವೃತ್ತದ "ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಶೆಯಂ ಮಾಡದಂ" ಎಂಬುದನ್ನೂ ಹಾಗೆಯೇ ಓದಿದರೆ ಸಾಕು - 

"ಪ್ರಜೆಯಂ ಪಾ| ಲಿಸಬ| ಲ್ಲೊಡಾತ| ನರಸಂ| ಕೈಯಾಶೆ| ಯಂ ಮಾಡ| ದಂ" ಹೀಗೆ ಲಯ ಸಿಗುತ್ತದೆ (ಇಲ್ಲಿ ತೋರಿಸುವ ವಿಭಾಗ ಓದಿನ ಲಯಕ್ಕೆ ಸಂಬಂಧಿಸಿದ್ದು, ಅಕ್ಷರಗಣ/ಯತಿ ಇವುಗಳ ವಿಭಾಗ ಹೇಗೆಂಬ ಪ್ರಶ್ನೆ ಸದ್ಯಕ್ಕೆ ಬೇಡ). 

ಹಾಗೆಯೇ ಕಂದಪದ್ಯವಾದ
"ಆ ರವಮಂ ನಿರ್ಜಿತಕಂ
ಠೀರವರವಮಂ ನಿರಸ್ತಘನರವಮಂ ಕೋ
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುರಗಪತಾಕಂ" 

ಎಂಬುದನ್ನೂ ಅದಿದ್ದ ಹಾಗೆಯೇ ಓದಿದರೆ
ಆ ರವ| ಮಂ ನಿ| ರ್ಜಿತಕಂ|
ಠೀರವ| ರವಮಂ| ನಿರಸ್ತ| ಘನರವ| ಮಂ ಕೋ||
ಪಾರುಣ| ನೇತ್ರಂ| ಕೇಳ್ದಾ|
ನೀರೊಳ| ಗಿರ್ದುಂ|  ಬೆಮರ್ತ| ನುರಗಪ| ತಾಕಂ|| 

ಎಂಬ ನಾಲ್ಕುನಾಲ್ಕು ಮಾತ್ರೆಯ ಲಯವೂ, "ನಿರಸ್ತ" ಮತ್ತು "ಬೆಮರ್ತ" ಎಂಬಲ್ಲಿನ ಎಡುಪೂ, ರಕಾರಪ್ರಾಸವೂ ಸಹಜವಾಗಿಯೇ ಎದ್ದು ತೋರುತ್ತದೆ.

ಮೇಲೆ ವಿವರಿಸಿದ್ದೆಲ್ಲಾ ಬರೆದಂತೆ ಓದುವುದು - ಹ್ರಸ್ವವಿದ್ದಲ್ಲಿ ಹ್ರಸ್ವ, ದೀರ್ಘವಿದ್ದಲ್ಲಿ ದೀರ್ಘ ಒತ್ತಿದ್ದಲ್ಲಿ ಒತ್ತು. ಆದರೆ ಸೀಸವೇ ಮೊದಲಾದ ಅಂಶಚ್ಛಂದಸ್ಸುಗಳು ಲಯವನ್ನು ಹಿಡಿಯುವ ರೀತಿಯೇ ಬೇರೆ. ಮಾತ್ರಾಗಣಗಳಲ್ಲಿ (ಮೇಲಿನ ಭಾಮಿನೀ ಷಟ್ಪದಿ/ಕಂದಪದ್ಯ ಇತ್ಯಾದಿ) ಲಯದ ಮೂಲಘಟಕ ನಿರ್ದಿಷ್ಟ ಮಾತ್ರಾಕಾಲದ ಲಘು/ಗುರುವಿನ ಗುಂಪು (3+4=7 ಮಾತ್ರೆಯ ಗುಂಪಿನಲ್ಲಿ ಇಷ್ಟೇ ಅಕ್ಷರ/ಇಷ್ಟೇ ಲಘು/ಗುರು ಇರಬೇಕೆಂದಿಲ್ಲ - ಒಟ್ಟಾರೆ 3+4 ಮಾತ್ರಾಕಾಲವಿದ್ದರಾಯಿತು), ಅಕ್ಷರಗಣದಲ್ಲಿ (ಉದಾಹರಣೆಗೆ ಮೇಲಿನ ಮತ್ತೇಭವಿಕ್ರೀಡಿತವೃತ್ತ) ಲಯದ ಮೂಲಘಟಕ ಮೂರುಮೂರಕ್ಷರಗಳ ಗುಂಪು (ಮಾತ್ರಾಕಾಲ ಕನಿಷ್ಠ ಮೂರರಿಂದ ಗರಿಷ್ಠ ಆರರವರೆಗೆ ಎಷ್ಟಾದರೂ ಇರಬಹುದು - ಒಂದೊಂದು ಗುಂಪಿಗೆ ಒಂದೊಂದು ರೀತಿ) ಆದರೆ ಅಂಶಚ್ಛಂದಸ್ಸುಗಳಲ್ಲಿ ಲಯದ ಮೂಲಘಟಕ ಎರಡೆರಡು ಮಾತ್ರೆಗಳ ಜೋಡಿ (ಎರಡು ಲಘು ಅಥವಾ ಒಂದು ಗುರು). ಇದನ್ನು "ಅಂಶ" ಎನ್ನುತ್ತೇವೆ. ಒಂದು ಅಂಶದಲ್ಲಿ ಎರಡು ಲಘು ಅಕ್ಷರಗಳಿರಬಹುದು, ಅಥವಾ ಒಂದು ಗುರು ಅಕ್ಷರವಿರಬಹುದು, ಅಥವಾ ಒಂದೇ ಲಘು ಅಕ್ಷರವಿದ್ದು ಅದು ಗುರುವಿನಂತೆ ಎಳೆಯಲ್ಪಡಬಹುದು (ಈ ಎಳೆದು ಓದುವ ಗುಣವೇ ಅಂಶಚ್ಛಂದಸ್ಸಿನ ಜೀವಾಳ). ಉದಾಹರಣೆಗೆ:

ಹರಿ, ಹರ, ಮನೆ, ಮರ ಇವೆಲ್ಲವೂ ಒಂದೊಂದು ಅಂಶಗಳು - ಎರಡೆರಡು ಲಘು ಇರುವ ಎರಡೆರಡು ಮಾತ್ರೆಗಳ ಜೋಡಿ; ಹಾಗೆಯೇ ನಾ, ನೀ, ಬಾ, ತಾ ಇವೂ ಒಂದೊಂದು ಅಂಶಗಳು - ಒಂದೊಂದು ಗುರುವಿರುವ ಎರಡೆರಡು ಮಾತ್ರೆಗಳ ಜೋಡಿ. ಅದೇ ರೀತಿ ನs ಕs ಬs ಶs ಇವೂ ಒಂದೊಂದು ಅಂಶಗಳು. ಇಲ್ಲಿ ಇರುವುದು ಲಘುವಾದರೂ ಹಾಡಿನ ಲಯಕ್ಕೆ ತಕ್ಕಂತೆ ಗುರುವಿನಂತೆ ಎಳೆದು ಹೇಳುತ್ತೇವೆ (ಒಂದು ಲಘು + ಒಂದು ಲಘುವಿನಷ್ಟು ಖಾಲಿ ಜಾಗ).  ಅಲ್ಲಿರುವ s ಸಂಜ್ಞೆ ಈ ಖಾಲಿ ಜಾಗವನ್ನು ಸೂಚಿಸುತ್ತದೆ. ಹೀಗೆ ಎಳೆದು ಹೇಳುವ ಈ ಲಕ್ಷಣ ಅಂಶಚ್ಛಂದಸ್ಸಿನ ಜೀವಾಳ

[ಉದಾಹರಣೆಗೆ
"ಆಡಿ ಬಾ ನನ ಕಂದ ಅಂಗಾಲ ತೊಳೆದೇನ" ಎನ್ನುವುದನ್ನು ಹಾಡುವ ರೀತಿ ಹಾಗಲ್ಲ - "ಆಡಿs ಬಾ ನನ ಕಂದs ಅಂಗಾಲs ತೊಳೆದೇನs" ಹೀಗೆ ಓದಬೇಕು (s ಎಂದು ಸೂಚಿಸಿರುವ ಕಡೆ ಹಿಂದಿನ ಲಘುವನ್ನೇ ಎಳೆದು ಹೇಳುತ್ತೇವೆಂಬುದನ್ನು ಗಮನಿಸಿ) - ಇದು ಹೇಗೆ ಕೇಳುತ್ತದೆಯೆಂದರೆ "ಆಡೀಬಾ ನನಕಂದಾ ಅಂಗಾಲಾ ತೊಳೆದೇನಾ" ಹೀಗೆ.  ಹಾಗೆ ಅದನ್ನು ಜೋರಾಗಿ ಹೇಳಿಕೊಂಡು ನೋಡಿ - "ಆಡೀಬಾ ನನಕಂದಾ ಅಂಗಾಲಾ ತೊಳೆದೇನಾ" ಎಂಬುದರಲ್ಲಿ "ತಾಕೀಟಾ ತತಕೀಟಾ ತಾಕೀಟಾ ತತಕೀಟಾ" - ಈ ಬಗೆಯ ಲಯ ಕೇಳುತ್ತದಲ್ಲವೇ?  ಇದು ಅಂಶಚ್ಛಂದಸ್ಸಿನ ಲಕ್ಷಣ (ಸುಮ್ಮನೇ "ಆಡಿ ಬಾ ನನ ಕಂದ ಅಂಗಾಲ ತೊಳೆದೇನ" ಎಂದು ಓದಿದರೆ ಈ ಲಯ ದಕ್ಕುವುದಿಲ್ಲ, ಗಮನಿಸಿ)]
 

ಇರಲಿ, ಎರಡೆರಡು ಮಾತ್ರೆಗಳ ಜೋಡಿಗೆ 'ಅಂಶ' ಎನ್ನುತ್ತಾರೆ ಎಂದೆವಷ್ಟೇ?  ಇಂತಹ ಎರಡು, ಮೂರು ಅಥವಾ ನಾಲ್ಕು ಅಂಶಗಳ ಒಂದು ಗುಂಪು ಅಂಶಗಣವೆನಿಸಿಕೊಳ್ಳುತ್ತದೆ.  ಮೂರು ಬಗೆಯ ಗಣಗಳಿವೆ - ಎರಡು ಅಂಶದ (2+2=4 ಮಾತ್ರೆಯ) ಗುಂಪು ಬ್ರಹ್ಮಗಣ, ಮೂರು ಅಂಶದ (2+2+2=6 ಮಾತ್ರೆಯ) ಗುಂಪು ವಿಷ್ಣುಗಣ ಮತ್ತು ನಾಲ್ಕು ಅಂಶದ (2+2+2+2=8 ಮಾತ್ರೆಯ) ಗುಂಪು ರುದ್ರಗಣ .  ಮೂರು ಬಗೆಯ ಗಣಗಳಿವೆ.  ಕೆಳಗಿನ ವಿವರಣೆ ನೋಡಿ -

[1 ಮಾತ್ರಾಕಾಲವನ್ನು ಲಘು ( U ) ಎನ್ನುತ್ತಾರೆ, ಎರಡು ಮಾತ್ರಾಕಾಲಕ್ಕೆ ಗುರು ( _ ) ಎನ್ನುತ್ತಾರೆ.  ಲಘುವಿದ್ದೂ ಗುರುವಿನಂತೆ ಎಳೆದು ಹೇಳುವ ಕಡೆ, ಆ ಎಳೆತವನ್ನು s ಸಂಜ್ಞೆಯಿಂದ ಸೂಚಿಸಲಾಗಿದೆ]

ಬ್ರಹ್ಮಗಣ  - ಎರಡು ಅಂಶಗಳು (2+2=4 ಮಾತ್ರೆ) - ಇದರ ವಿನ್ಯಾಸ ಹೀಗಿರಬಹುದು
2 | 2 ( _ | _ ) - ಉದಾ: ರಂಗಾ
2 | 1s ( _ | Us ) - ಉದಾ: ರಂಗs ( _ | Us ) - ಉದಾ: ರಂಗs
2 | s1 ( _ | sU ) - ಉದಾ: ರಂsಗ ( _ | sU ) - ಉದಾ: ರಂsಗ
1s | 2 ( Us | _ ) - ಉದಾ: ಹsರೀ ( Us | _ ) - ಉದಾ: ಹsರೀ
1s | s1 ( Us | sU ) - ಉದಾ: ಹssರಿ ( Us | sU ) - ಉದಾ: ಹssರಿ
1s | 1s ( Us | Us ) - ಉದಾ: ಹsರಿs ( Us | Us ) - ಉದಾ: ಹsರಿs
11 | 2 ( UU | _ ) - ಉದಾ: ಕರೆವೇ ( UU | _ ) - ಉದಾ: ಕರೆವೇ
11 | s1 ( UU | sU ) - ಉದಾ: ಕರೆsವೆ ( UU | sU ) - ಉದಾ: ಕರೆsವೆ
11 | 1s ( UU | Us ) - ಉದಾ: ಕರೆವೆs ( UU | Us ) - ಉದಾ: ಕರೆವೆs

ಒಟ್ಟಿನಲ್ಲಿ ತsಕs ತsಕs ತsಕs ತsಕs ಇದು ಬ್ರಹ್ಮಗಣದ ಲಯ

ವಿಷ್ಣುಗಣ  - ಮೂರು ಅಂಶಗಳು (2+2+2=6 ಮಾತ್ರೆ) - ಇದರ ವಿನ್ಯಾಸ ಹೀಗಿರಬಹುದು
2 | 2 | 2 ( _ | _ | _ ) - ಉದಾ: ರಂಗಪ್ಪಾ
2 | 2 | 1s ( _ | _ | Us ) - ಉದಾ: ಬಂದೌನೆs
2 | 2 | s1 ( _ | _ | sU ) - ಉದಾ: ಬಾಕ್ಲsಲ್ಲಿ
2 | 1s | 2 ( _ | Us | _ ) - ಉದಾ: ಬಂದsನೇ
11 | 1s | s1 ( UU | Us | sU ) - ಉದಾ: ಕರುಮssದ
11 | 1s | 1s ( UU | Us | Us ) - ಉದಾ: ಕರುಮsದs
11 | s1 | 2 ( UU | sU | _ ) - ಉದಾ: ಕರುsಮದಾ
11 | s1 | s1 ( UU | sU | sU ) - ಉದಾ: ಕರುsಮsದ
1s | s1 | 1s ( Us | sU | Us ) - ಉದಾ: ತssರಿಸುs
1s | 11 | 2 ( Us | UU | _ ) - ಉದಾ: ತsರಿಸಿಕೋ
1s | 11 | s1 ( Us | UU | sU ) - ಉದಾ: ತsರಿಸಿsಕೊ
1s | 11 | 1s ( Us | UU | Us ) - ಉದಾ: ತsರಿಸಿಕೊs

ಒಟ್ಟಿನಲ್ಲಿ ತsಕಿsಟs ತsಕಿsಟs ತsಕಿsಟs ತsಕಿsಟs ಇದು ವಿಷ್ಣುಗಣದ ಲಯ

ರುದ್ರಗಣ  - ನಾಲ್ಕು ಅಂಶಗಳು (2+2+2+2=8 ಮಾತ್ರೆ) - ಇದರ ವಿನ್ಯಾಸ ಹೀಗಿರಬಹುದು
2 | 2 | 2 | 2 ( _ | _ | _ | _ ) - ಉದಾ: ನಾದಬ್ರಹ್ಮಾ
2 | 11 | 2 | 1s ( _ | UU | _ | Us ) - ಉದಾ: ಚೆಂದದ ನಾರಿs
2 | 1s | 2 | s1 ( _ | Us | _ | sU ) - ಉದಾ: ಮೆಲ್ಲುs ಬೇsಗ
2 | s1 | 1s | 2 ( _ | sU | Us | _ ) - ಉದಾ: ಮ್ಯಾsಲ ಕsರೀ
11 | 2 | 1s | s1 ( UU | _ | Us | sU ) - ಉದಾ: ಹುಲಿ ಬಂದssದ
11 | 11 | 1s | 1s ( UU | UU | Us | Us ) - ಉದಾ: ಹಸುಕರುವಿsಗೆs
11 | 1s | s1 | 2 ( UU | Us | sU | _ ) - ಉದಾ: ಮುದವs ತಂದೇ
11 | s1 | s1 | s1 ( UU | sU | sU | sU ) - ಉದಾ: ದುಡಿsವ sಜsನ
1s | 2 | s1 | 1s ( Us | _ | sU | Us ) - ಉದಾ: ಬsರೀ sಮರಿs
1s | 11 | 11 | 2 ( Us | UU | UU | _ ) - ಉದಾ: ಮsನಿಯೊಳಗಡೇ
1s | 1s | 11 | s1 ( Us | Us | UU | sU ) - ಉದಾ: ಅsವsನಿಗೆsಯೆ
1s | s1 | 11 | 1s ( Us | sU | UU | Us ) - ಉದಾ: ಹssಳೆಹುಲಿಯೊs

ಒಟ್ಟಿನಲ್ಲಿ ತsಕsತsಕs ತsಕsತsಕs ತsಕsತsಕs ತsಕsತsಕs ಇದು ರುದ್ರಗಣದ ಲಯ

ಮೇಲಿನವು ಕೆಲವು ಸಾಧ್ಯತೆಗಳಷ್ಟೇ.  ವಿಷ್ಣುಗಣದಲ್ಲಿ ಸುಮಾರು ನಲವತ್ತು ಬೇರೆಬೇರೆ ವಿನ್ಯಾಸಗಳು ಸಾಧ್ಯ; ರುದ್ರಗಣದಲ್ಲಿ ನೂರೈವತ್ತಕ್ಕೂ ಹೆಚ್ಚು ವಿನ್ಯಾಸಗಳು ಸಾಧ್ಯ.

ಮೇಲಿನ ಉದಾಹರಣೆಗಳಲ್ಲಿ ಹಾಗೆ ಎಳೆಯದೇ ಕರುಮದ, ತರಿಸು, ಮೆಲ್ಲು ಬೇಗ, ಮ್ಯಾಲ ಕರಿ, ಹಳೆಹುಲಿಯೊ ಹೀಗೆ ಹೇಳಿದರೆ ಮೇಲೆ ತೋರಿಸಿದ ಲಯ ದಕ್ಕುವುದಿಲ್ಲವೆಂಬುದನ್ನು ಗಮನಿಸಿ.  ಅಂಶಗಣದ ಛಂದಸ್ಸುಗಳಲ್ಲಿ ಹೀಗೆ ಎಳೆದು ಹೇಳುವುದೇ ಲಯದ ಲೆಕ್ಕ.

ತ್ರಿಪದಿ, ಸಾಂಗತ್ಯ, ಸೀಸ, ಅಟವೆಲದಿ, ತೇಟಗೀತಿ ಇಂಥವು ಹಲವು ಅಂಶಗಣದ ಛಂದಸ್ಸುಗಳು.  ಇವು ಒಂದೊಂದು ಛಂದಸ್ಸಿನಲ್ಲೂ ಮೇಲೆ ವಿವರಿಸಿದ ಬ್ರಹ್ಮ, ವಿಷ್ಣು ಮತ್ತು ರುದ್ರಗಣಗಳು ಬೇರೆಬೇರೆ ವಿನ್ಯಾಸಗಳಲ್ಲಿ ಬರುತ್ತವೆ.  ಉದಾಹರಣೆಗೆ ತ್ರಿಪದಿಯಲ್ಲಿ ಗಣಗಳ ವಿನ್ಯಾಸ ಹೀಗೆ:
ವಿಷ್ಣು | ವಿಷ್ಣು | ವಿಷ್ಣು | ವಿಷ್ಣು |
ವಿಷ್ಣು | ಬ್ರಹ್ಮ | ವಿಷ್ಣು | ವಿಷ್ಣು |
ವಿಷ್ಣು | ಬ್ರಹ್ಮ | ವಿಷ್ಣು |

ತಕ್ಕೀಟಾ ತಕ್ಕೀಟಾ ತಕ್ಕೀಟಾ ತಕ್ಕೀಟಾ
ತಕ್ಕೀಟಾ ತಕ್ಕಾ ತಕ್ಕೀಟಾ ತಕ್ಕೀಟಾ
ತಕ್ಕೀಟಾ ತಕ್ಕಾ ತಕ್ಕೀಟಾ 

ಉದಾ:
ಮುಂಗೋಳಿ | ಕೂಗ್ಯಾವು | ಮೂಡೂ ಕೆಂ | ಪೇರ್ಯಾವು|
ಸ್ವಾಮೀ ನ | ನ್ನಯ್ಯs | ರಥವೇರೀ | ಬರುವಾಗ|
ನಾವೆದ್ದು | ಕೈಯಾ | ಮುಗಿದೇವು|

ಇದೇ ರೀತಿ, ಸಾಂಗತ್ಯದಲ್ಲಿ 6 ವಿಷ್ಣುಗಣಗಳು ಮತ್ತು ಕೊನೆಯಲ್ಲಿ ಬ್ರಹ್ಮಗಣ (ಉದಾ: ಪರಕಿsಪೆ|ವೆಲ್ಲೆಲ್ಲಿ|ಯೆಂದs ಮಂ|ತ್ರಿಗೆ ಕಿsರುs|ವೆರಲs ಸs|ಟೆಗೆ ಡೊಂಕುs| ಮಾಡಿs - ಪರಿಕಿಪೆವೆಲ್ಲೆಲ್ಲಿಯೆಂದಮಂತ್ರಿಗೆ ಕಿರುವೆರಲ ಸಟೆಗೆ ಡೊಂಕು ಮಾಡಿ).  

ಸೀಸಪದ್ಯವೆಂಬುದು ಮೂಲತಃ ಚೌಪದಿ, ನಾಲ್ಕು ಸಾಲಿನ ಪದ್ಯ.  ಪ್ರತಿಸಾಲಿನಲ್ಲೂ ಈಗಾಗಲೇ ವಿವರಿಸಿದಂತೆ ಆರು ವಿಷ್ಣುಗಣಗಳು ಮತ್ತು ಕೊನೆಗೆ ಎರಡು ಬ್ರಹ್ಮಗಣಗಳು ಬರುತ್ತವೆ.  ಆದರೆ ಸೀಸಪದ್ಯದ ಜೊತೆಗೆ ಅಟವೆಲದಿ ಅಥವಾ ತೇಟಗೀತಿ ಎಂಬ ಇನ್ನೊಂದು ಚೌಪದಿಯನ್ನು ಸೇರಿಸುವುದು ವಾಡಿಕೆ.  ಆಟವೆಲದಿ ಎಂಬ ಚೌಪದಿಯ ಮೊದಲ ಸಾಲಿಗೆ ಮೂರು ಬ್ರಹ್ಮ ಹಾಗೂ ಎರಡು ವಿಷ್ಣುಗಣಗಳು ಮತ್ತು ಎರಡನೆಯ ಸಾಲಿಗೆ ಐದು ಬ್ರಹ್ಮಗಣಗಳು; ಮೂರು ಮತ್ತು ನಾಲ್ಕನೆಯ ಸಾಲು ಕ್ರಮವಾಗಿ ಮೊದಲೆರಡು ಸಾಲಿನಂತೆ; ತೇಟಗೀತಿಯೂ ಚೌಪದಿಯೇ.  ಅದಕ್ಕೆ ಪ್ರತಿಸಾಲಿನಲ್ಲೂ ಬ್ರಹ್ಮ| ವಿಷ್ಣು| ವಿಷ್ಣು | ಬ್ರಹ್ಮ| ಬ್ರಹ್ಮ| ಹೀಗೆ ಬರುತ್ತದೆ.  ಸೀಸಪದ್ಯದ ವಿನ್ಯಾಸವನ್ನು ಒಟ್ಟಾರೆ ಹೀಗೆ ನೋಡಬಹುದು:

ಸೀಸಚೌಪದಿ
ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ಬ್ರಹ್ಮ| ಬ್ರಹ್ಮ|
ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ಬ್ರಹ್ಮ| ಬ್ರಹ್ಮ|
ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ಬ್ರಹ್ಮ| ಬ್ರಹ್ಮ|
ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ವಿಷ್ಣು | ಬ್ರಹ್ಮ| ಬ್ರಹ್ಮ|

ಇದರ ಲಯ ಹೀಗೆ
ತಕ್ಕೀಟಾ ತಕ್ಕೀಟಾ ತಕ್ಕೀಟಾ ತಕ್ಕೀಟಾ ತಕ್ಕೀಟಾ ತಕ್ಕೀಟಾ ತಕ್ಕಾ ತಕ್ಕಾ 

ಜೊತೆಗೆ ಅಟವೆಲದಿ
ಬ್ರಹ್ಮ| ಬ್ರಹ್ಮ| ಬ್ರಹ್ಮ| ವಿಷ್ಣು | ವಿಷ್ಣು |
ಬ್ರಹ್ಮ| ಬ್ರಹ್ಮ| ಬ್ರಹ್ಮ| ಬ್ರಹ್ಮ| ಬ್ರಹ್ಮ|
ಬ್ರಹ್ಮ| ಬ್ರಹ್ಮ| ಬ್ರಹ್ಮ| ವಿಷ್ಣು | ವಿಷ್ಣು |
ಬ್ರಹ್ಮ| ಬ್ರಹ್ಮ| ಬ್ರಹ್ಮ| ಬ್ರಹ್ಮ| ಬ್ರಹ್ಮ|

ಇದರ ಲಯ ಹೀಗೆ
ತಕ್ಕಾ ತಕ್ಕಾ ತಕ್ಕಾ ತಕ್ಕೀಟಾ ತಕ್ಕೀಟಾ
ತಕ್ಕಾ ತಕ್ಕಾ ತಕ್ಕಾ ತಕ್ಕಾ ತಕ್ಕಾ

ಅಥವಾ ತೇಟಗೀತಿ
ಬ್ರಹ್ಮ| ವಿಷ್ಣು| ವಿಷ್ಣು | ಬ್ರಹ್ಮ| ಬ್ರಹ್ಮ|
ಬ್ರಹ್ಮ| ವಿಷ್ಣು| ವಿಷ್ಣು | ಬ್ರಹ್ಮ| ಬ್ರಹ್ಮ|
ಬ್ರಹ್ಮ| ವಿಷ್ಣು| ವಿಷ್ಣು | ಬ್ರಹ್ಮ| ಬ್ರಹ್ಮ|
ಬ್ರಹ್ಮ| ವಿಷ್ಣು| ವಿಷ್ಣು | ಬ್ರಹ್ಮ| ಬ್ರಹ್ಮ| 

ಇದರ ಲಯ ಹೀಗೆ
ತಕ್ಕಾ ತಕ್ಕೀಟಾ ತಕ್ಕೀಟಾ ತಕ್ಕಾ ತಕ್ಕಾ 

ಈಗ ಸೀಸಪದ್ಯದ ವಿನ್ಯಾಸವು ಪರಿಚಿತವಾಗಿರುವುದರಿಂದ ಸೀಸಪದ್ಯವನ್ನು ಹೇಗೆ ಓದುವುದೆಂದು ನೋಡಬಹುದು.  ಶ್ರೀ ಗೌತಮನಾಯಕರ ಸೀಸಪದ್ಯದ ಒಂದು ಸಾಲು, ತೇಟಗೀತಿಯ ಒಂದು ಸಾಲನ್ನು ತೆಗೆದುಕೊಳ್ಳೋಣ (ಉಳಿದುವನ್ನು ಅದೇ ರೀತಿ ಓದಿಕೊಳ್ಳಬಹುದು)

ಸೀಸಪದ್ಯದ ಒಂದು ಸಾಲು:
ಕವಿ ನಂಜುಂಡನ ಕಾವ್ಯಲೋಕದ ಹರಹನು ಬೆರಗಿಂದ ನೋಡುತ್ತೀ ಜಗವ ಮರೆತೆ

ತೇಟಗೀತಿಯ ಎರಡು ಸಾಲು:
ಜವದೊಳಿಷ್ಟನೆ ಪೇಳಲು ಸೀಸವಲ್ಲ
ಛವಿಯು ವಿಧಿ ಹರಿ ಹರಿ ವಿಧಿ ವಿಧಿಯ ಸೊಲ್ಲ

ಇದನ್ನು ಮೇಲಿನಂತೆ ನೇರವಾಗಿ ಓದಿದರೆ ಸೀಸಪದ್ಯದ ಲಯ ದಕ್ಕುವುದಿಲ್ಲ.  ಮೇಲೆ ವಿವರಿಸಿದಂತೆ ಅಂಶಗಣದ ಲಯಕ್ಕೆ ತಕ್ಕಂತೆ ಓದಬೇಕು:

ಸೀಸಪದ್ಯದ ಒಂದು ಸಾಲು:
ಕವಿ ನಂಜುಂ | ಡನ ಕಾವ್ಯs | ಲೋಕsದs | ಹರಹsನುs | ಬೆರಗಿಂದs | ನೋಡುತ್ತೀ | ಜಗವs | ಮರೆತೆs |
(ತಕ್ಕೀಟಾ ತಕ್ಕೀಟಾ ತಕ್ಕೀಟಾ ತಕ್ಕೀಟಾ ತಕ್ಕೀಟಾ ತಕ್ಕೀಟಾ ತಕ್ಕಾ ತಕ್ಕಾ - ಈ ಲಯ ಗಮನಿಸಿ)

ತೇಟಗೀತಿಯ ಎರಡು ಸಾಲು:
ಜವದೊs | ಳಿಷ್ಟsನೆs | ಪೇಳsಲುs | ಸೀಸs | ವಲ್ಲs |
ಛವಿಯುs | ವಿಧಿ ಹsರಿs  | ಹರಿ ವಿsಧಿs  | ವಿಧಿಯs | ಸೊಲ್ಲs |

ಕೊನೆಯದಾಗಿ ಒಂದು ಮಾತು.  ಮೇಲೆ ನಾವು ಗಮನಿಸಿದಂತೆ ಲಯಕ್ಕೆ ತಕ್ಕಂತೆ ಹ್ರಸ್ವಾಕ್ಷರಗಳನ್ನು ಎಳೆದು (s ಸೇರಿಸಿ) ದೀರ್ಘ ಮಾಡಿಕೊಂಡಿದ್ದೇವೆ.  ಒಂದು ಗುಂಪಿನಲ್ಲಿ ಇದೇ ಅಕ್ಷರವನ್ನೇ ಏಕೆ ಎಳೆಯಬೇಕು ಆ ಇನ್ನೊಂದು ಅಕ್ಷರವನ್ನು ಏಕೆ ಎಳೆಯಬಾರದು ಎಂಬುದಕ್ಕೆ ನಿಯಮಗಳಿಲ್ಲ - ಕೆಲವಿವೆ, ಕೊನೆಯಲ್ಲಿ ಎರಡು ಲಘುವಿರುವ ಅಂಶ ಬರಬಾರದು, ಜಗಣ (ಗಣೇಶ, ಗಿರೀಶ, ಬರೊಲ್ಲ ಇಂಥವು - "U _ U" ವಿನ್ಯಾಸವಿರುವಂತಹವು) ಬರಬಾರದು, ಗಣದ ಆರಂಭದಲ್ಲೇ ಹ್ರಸ್ವ-ದೀರ್ಘ ("U _") ಇಂತಹ ವಿನ್ಯಾಸ ಬರಬಾರದು, ಹೀಗೆ - ಆದರೆ ಅಂಥವುಗಳನ್ನು ಬಿಟ್ಟರೆ ಅಕ್ಷರಗಳನ್ನು ಎಲ್ಲಿ ಎಳೆಯಬೇಕೆಂದು ನಮಗೆ ದಾರಿತೋರಿಸಬೇಕಾದ್ದು ನಮ್ಮ ಲಯಪ್ರಜ್ಞೆಯೇ.  ಅದನ್ನು ಬೆಳೆಸಿಕೊಳ್ಳುವುದು ಬಲುಸುಲಭ - ಹಳ್ಳಿಯ ಜನರು ಭತ್ತ ಕುಟ್ಟುವ, ರಾಗಿ ಬೀಸುವ ಲಯಕ್ಕೆ ಪಕ್ಕನೆ ಒದಗುವ ಲಯಗಳಿವು, ಶುದ್ಧ ದೇಸೀ ಛಂದಸ್ಸುಗಳು.  ಒಂದೆರಡು ಜಾನಪದತ್ರಿಪದಿಗಳನ್ನು, ಸಾಂಗತ್ಯದ ಸಾಲುಗಳನ್ನು ಗಟ್ಟಿಯಾಗಿ ಹೇಳಿಕೊಂಡರೆ ಆ ಲಯ ತಾನಾಗೇ ದಕ್ಕುತ್ತದೆ.  ಅಭ್ಯಾಸಕ್ಕಾಗಿ ಕೆಲವು ಸಾಲುಗಳು:

ಜಾನಪದ ತ್ರಿಪದಿ
ಮಕ್ಕsಳಾ | ಟವು ಚೆಂದs | ಮsತ್ತೆs ಯೌ | ವನ ಚೆಂದs
ಮುಪ್ಪಿನಲಿs | ಚೆಂದs | ನರೆಗಡ್ಡs| ಜಗದೊಳಗೆs
ಎತ್ತs ನೋ | ಡಿದರುs | ನಗು ಚೆಂದs |

ಹಾಲ್ಬೇಡಿs | ಅತ್ತಾನs | ಕೋಲ್ಬೇಡಿs | ಕುಣದಾನs
ಮೊಸರ್ಬೇಡಿ | ಕೆಸರs | ತುಳದಾನs | ಕಂದಯ್ನs |
ಕುಸುಲಾದs | ಗೆಜ್ಜೆs | ಕೆಸರಾಯ್ತುs |

ಸರ್ವಜ್ಞನ ತ್ರಿಪದಿ
ಸsರ್ವsಜ್ಞs|ನೆಂಬೋನುs| ಗರ್ವsದಿಂ|ದಾದವನೇ|
ಎಲ್ಲsರೊಳ|ಗೊಂದುs| ನುಡಿಗಲಿತುs| ವಿದ್ಯೆsಯs|
ಪರ್ವತವೆs | ಆದs | ಸರ್ವಜ್ಞ|

ಸಾಂಗತ್ಯ (ಭರತೇಶವೈಭವ)
ಪರಕಿsಪೆs|ವೆಲ್ಲೆಲ್ಲಿs|ಯೆಂದs ಮಂ|ತ್ರಿಗೆ ಕಿsರುs|ವೆರಲs ಸs|ಟೆಗೆ ಡೊಂಕುs| ಮಾಡಿs|
ಅರಸುs ತೋ| ರಿದನsದುs| ತುದಿವಾಗಿs | ದೊಂದುsಪೂ | ಸರಲಂತೆs | ಕಣ್ಗೆs ಶೋ | ಭಿಸಿತುs|

ಸೀಸ (ಹಳೆಯದೊಂದು ರಾಮಕಥೆ)
ಸುರಪುsರs| ವೆಂಬಗ್ರs| ಹಾರsವುs| ಶುಭಕsರs| ಸರಯೂ ನs| ದಿಯ ತೀರs| ದೊಳಗಿs| ಹುsದುs|
ವರಭೂಸುs| ರs ಕೇಶs| ವsಭಟ್ಟs| ನೆಂಬೋನುs| ಹರುಷsದಿಂ| ದಲಿ ವಾಸs| ವಾಗಿs| ಹsನುs|

ಅಟವೆಲದಿ (ನನ್ನದೇ)
ಆಟs| ವಾಡುs| ತಿದ್ದs| ಮಕ್ಕsಳುs| ಕುಣಿದsರುs|
ತಕ್ಕs| ತಕ್ಕs| ತಕ್ಕs| ಥೈಯs| ತಕ್ಕs| 

ತೇಟಗೀತಿ (ಹಿರಣ್ಯಯ್ಯನವರ ಎಚ್ಚಮನಾಯಕ ನಾಟಕ)
ನಾನುs|  ಏನೆಂದುs| ಹೇಳsಲಿs| ಗಾಂಜಾ| ಮsಜಾ|
ನಾss|  ನೇನೆಂದುs| ಹೇಳsಲಿs| ಗಾಂಜಾ| ಮsಜಾ|