ಇತ್ತೀಚಿಗೆ ಕನ್ನಡದ್ದೇ ಪದಗಳನ್ನು ಬಳಸಬೇಕೆಂಬ ಪ್ರಚಾರದಡಿಯಲ್ಲಿ ಟೊಮ್ಯಾಟೋ ಮತ್ತು ಕ್ಯಾರೆಟ್ ಗಳಿಗೆ ಗೂದೆಹಣ್ಣು ಮತ್ತು ಕೆಂಗೆಣಸು ಎಂಬ ಹೆಸರು ಬಳಸಿ ಎಂದು ಹೇಳಲಾಗುತ್ತಿದೆ. ಹೀಗೆ ಕರೆಕೊಡುವ ವಿಡಿಯೋ ತುಣುಕೊಂದು ಇಲ್ಲಿದೆ.
https://www.facebook.com/TheKachaguli/videos/1063052510445410/
ವಿಡಿಯೋ ಮಾಡಿದವರ ಆಶಯವೇನೋ ಮೆಚ್ಚತಕ್ಕದ್ದೇ. ಅನಗತ್ಯವಾಗಿ ಇಂಗ್ಲಿಷ್, ಹಿಂದಿ, ಸಂಸ್ಕೃತಗಳನ್ನು ಕನ್ನಡದಲ್ಲಿ ತುರುಕಿದರೆ ಯಾರಿಗಿಷ್ಟವಾಗುತ್ತದೆ ಹೇಳಿ. ಹಾಗೆಯೇ, ವಿಡಿಯೂ ಕೂಡ ಅಚ್ಚುಕಟ್ಟಾಗಿದೆ, ಅಭಿನಯವೂ ಚೆನ್ನಾಗಿದೆ. ಆದರೆ ಹಾಗೆ ಚೆನ್ನಾಗಿರುವುದೇ ತಪ್ಪು ಅರಿವನ್ನು ಹರಡಲು ರಹದಾರಿಯಾಗಬಾರದಲ್ಲ, ಅದಕ್ಕಾಗಿ ಈ ಲೇಖನ. ಗೂದೆ ಹಣ್ಣು ಮತ್ತು ಕೆಂಗೆಣಸು ಏಕೆ ಸರಿಯಲ್ಲ ಎಂಬುದನ್ನಷ್ಟು ನೋಡೋಣ.
ಮೊದಲಿಗೆ ನಾವು ಅಷ್ಟು ಬಾಯಿ ಚಪ್ಪರಿಸಿಕೊಂಡು ತಿನ್ನುವ ಅಚ್ಚುಮೆಚ್ಚಿನ ಟೊಮ್ಯಾಟೋ ಹಣ್ಣಿನ ಕತೆ ನೋಡೋಣ. ಇದಕ್ಕೆ ಗೂದೆಹಣ್ಣು ಎಂದು ಹೆಸರಂತೆ. ಹೌದು, ಕೆಲವು ಪ್ರದೇಶಗಳಲ್ಲಿ ಅದನ್ನು ಹಾಗೆ ಕರೆಯುತ್ತಾರೆ, ಆದರೆ ಪದಮೂಲವನ್ನೂ ಅರಿಯಬೇಕಷ್ಟೇ.
https://www.facebook.com/TheKachaguli/videos/1063052510445410/
ವಿಡಿಯೋ ಮಾಡಿದವರ ಆಶಯವೇನೋ ಮೆಚ್ಚತಕ್ಕದ್ದೇ. ಅನಗತ್ಯವಾಗಿ ಇಂಗ್ಲಿಷ್, ಹಿಂದಿ, ಸಂಸ್ಕೃತಗಳನ್ನು ಕನ್ನಡದಲ್ಲಿ ತುರುಕಿದರೆ ಯಾರಿಗಿಷ್ಟವಾಗುತ್ತದೆ ಹೇಳಿ. ಹಾಗೆಯೇ, ವಿಡಿಯೂ ಕೂಡ ಅಚ್ಚುಕಟ್ಟಾಗಿದೆ, ಅಭಿನಯವೂ ಚೆನ್ನಾಗಿದೆ. ಆದರೆ ಹಾಗೆ ಚೆನ್ನಾಗಿರುವುದೇ ತಪ್ಪು ಅರಿವನ್ನು ಹರಡಲು ರಹದಾರಿಯಾಗಬಾರದಲ್ಲ, ಅದಕ್ಕಾಗಿ ಈ ಲೇಖನ. ಗೂದೆ ಹಣ್ಣು ಮತ್ತು ಕೆಂಗೆಣಸು ಏಕೆ ಸರಿಯಲ್ಲ ಎಂಬುದನ್ನಷ್ಟು ನೋಡೋಣ.
ಮೊದಲಿಗೆ ನಾವು ಅಷ್ಟು ಬಾಯಿ ಚಪ್ಪರಿಸಿಕೊಂಡು ತಿನ್ನುವ ಅಚ್ಚುಮೆಚ್ಚಿನ ಟೊಮ್ಯಾಟೋ ಹಣ್ಣಿನ ಕತೆ ನೋಡೋಣ. ಇದಕ್ಕೆ ಗೂದೆಹಣ್ಣು ಎಂದು ಹೆಸರಂತೆ. ಹೌದು, ಕೆಲವು ಪ್ರದೇಶಗಳಲ್ಲಿ ಅದನ್ನು ಹಾಗೆ ಕರೆಯುತ್ತಾರೆ, ಆದರೆ ಪದಮೂಲವನ್ನೂ ಅರಿಯಬೇಕಷ್ಟೇ.
ಗೂದೆ
ಎನ್ನುವ ಪದಕ್ಕೆ ಕನ್ನಡದಲ್ಲಿ ಅಷ್ಟು ಬಾಯಿಚಪ್ಪರಿಸುವ ಅರ್ಥವೇನಿಲ್ಲ. ಕೆಲವೊಮ್ಮೆ
ಮಲದ್ವಾರದಲ್ಲಿ ದುರ್ಮಾಂಸ ಬೆಳೆದು, ಮಲವಿಸರ್ಜನೆಯ ಸಮಯದಲ್ಲಿ ಹೊರಬಂದುಬಿಡುತ್ತದೆ;
ಇದನ್ನು ಕೈಯಿಂದ ಒಳತಳ್ಳಬಹುದು - ಅಸಾಧ್ಯ ನೋವಾಗುತ್ತದೆಂಬುದು ಅನುಭವಿಸಿದವರ ನುಡಿ.
ಇದನ್ನು ಮೂಲವ್ಯಾಧಿ (anal prolapse/piles/fistula) ಎನ್ನುತ್ತಾರೆ. ಹೀಗೆ ಹೊರಬರುವ ಕೆಂಪನೆಯ
ಭಾಗವೇ ಗೂದೆ. ಅದಕ್ಕೇ ಈ ರೋಗಕ್ಕೆ ಗೂದೆರೋಗ ಎಂದೂ ಹೆಸರು. ಕೆಲವು ಜಾತಿಯ ಮಂಗಗಳಲ್ಲಿ
ಪೃಷ್ಠಭಾಗವು ಕೆಂಪಗೆ ಊದಿ ಹೊರಚಾಚಿಕೊಂಡಂತಿರುತ್ತದೆ. ಸಂಗಾತಿಯನ್ನು ಆಕರ್ಷಿಸಲು ಇದು
ಸಹಕಾರಿ ಎಂದು ಪ್ರಾಣಿಶಾಸ್ತ್ರಜ್ಞರ ಅಂಬೋಣ. ಇದನ್ನು ಮಂಗನಗೂದೆ ಎನ್ನುತ್ತಾರೆ.
ಸೊಗಸಾಗಿ ರಸತುಂಬಿ ನಳನಳಿಸುವ ಟೊಮ್ಯಾಟೋ ವಿಷಯ ಬರೆಯಹೋಗಿ ಇದನ್ನು ವಿವರಿಸಬೇಕಾಯಿತು
ನೋಡಿ, ಇರಲಿ, ಈಗ ಟೊಮ್ಯಾಟೋ ವಿಷಯಕ್ಕೆ ಬರೋಣ.
ಟೊಮ್ಯಾಟೋ ಭಾರತದ ಸ್ಥಳೀಯ ಹಣ್ಣಲ್ಲ. ಆದ್ದರಿಂದಲೇ ಇದಕ್ಕೊಂದು ಸ್ಥಳೀಯ ಹೆಸರಿಲ್ಲ. ಇದನ್ನು ಭಾರತಕ್ಕೆ ತಂದಿದ್ದು ಪೋರ್ತುಗೀಸರು, ಹದಿನಾರು-ಹದಿನೇಳನೆಯ ಶತಮಾನದ ಸುಮಾರಿಗೆ. ಎಲ್ಲ ವಿದೇಶೀ ವಸ್ತುಗಳ ವಿಷಯದಲ್ಲಾಗುವಂತೆ ಇದನ್ನೂ ಸ್ಥಳೀಯರು ಅನುಮಾನ ಅಸಹ್ಯಗಳಿಂದಲೇ ನೋಡಿದರು. ಹೀಗಾಗಿ ತಿಪ್ಪೆಯ ಮೇಲೆ ಬೆಳೆಯುವ ಈ ಹಣ್ಣು ಅವರಿಗೆ ಪೃಷ್ಠದಿಂದ ಹೊರಚಾಚಿದ ದುರ್ಮಾಂಸದಂತೆ ಅಸಹ್ಯಕರವಾಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಗೂದೆಹಣ್ಣು ಹೆಸರು ಪ್ರಚಾರ ಮಾಡುವವರಿಗೆ ಬಹುಶಃ ಇದರ ಅರಿವಿಲ್ಲವೇನೋ. ಜನಪದಕ್ಕೆ ಹೊಸತಾದ ಯಾವುದೇ ವಸ್ತುವು ಹೊರಗಿನಿಂದ ಬಂದರೂ ಅದರ ಹೆಸರೂ ಅದರೊಂದಿಗೇ ಬರುತ್ತದೆ ಎಂಬುದು ಯಾವುದೇ ಭಾಷೆಗೂ ಸಹಜ. ಉದಾಹರಣೆಗೆ ಇಡ್ಲಿಯನ್ನು rice cake, backed rice ball ಎಂಬ ಏನೇ ಹೆಸರಿನಿಂದ ಕರೆದರೂ ಅದು ಇಡ್ಲಿಯಾಗುವುದಿಲ್ಲ, ಇಡ್ಲಿ ಇಡ್ಲಿಯೇ. ಹಾಗೆಯೇ ದ್ವಿಚಕ್ರವಾಹನವು ಸ್ಕೂಟರ್ ಆಗುವುದಿಲ್ಲ, ಅದು ಸೈಕಲ್ ಕೂಡ ಆಗಬಹುದು, ಆದರೆ ಸ್ಕೂಟರ್ ಸ್ಕೂಟರೇ, ಸೈಕಲ್ ಸೈಕಲೇ. ತಮಿಳನ್ನು ಬಿಟ್ಟು ಭಾರತದ ಬೇರೆಲ್ಲ ಭಾಷೆಗಳಲ್ಲೂ ಈ ಹಣ್ಣಿಗೆ ಟೊಮ್ಯಾಟೋ ಅಥವ ಅದರ ವಿವಿಧ ರೂಪಗಳೇ ಹೆಸರು - ತಮೋಟ, ತಮಾಟ, ತಮಾಟರ್, ತಮೇಟೋ ಕಾಯಿ ಹೀಗೆ. ತಮಿಳಿನಲ್ಲಿ ಇದನ್ನು ತಕ್ಕಾಳಿ ಎನ್ನುತ್ತಾರೆ ಆದರೆ ಅದೂ ಪ್ರಾಚೀನವಾದ ಹೆಸರೇನಲ್ಲ - ತಕ್+ಆಳ್+ಇ = ಆಳಿಗೆ ತಕ್ಕ ಪುಷ್ಠಿ ಕೊಡುವುದು ಎಂಬಂಥದ್ದೇನೋ ಅರ್ಥದಲ್ಲಿ ಅದನ್ನು ಹಾಗೆ ಕರೆಯುತ್ತಾರೆ.
ಟೊಮ್ಯಾಟೋ
ನಮಗೆ ಟೊಮ್ಯಾಟೋ ಎಂದೇ ಪರಿಚಿತವಾದ ವಿದೇಶೀ ತರಕಾರಿ, ಅದು ಹಾಗಿರುವುದೇ ಚೆನ್ನ. ನಮ್ಮವರೂ
ಮೊದಮೊದಲು ಗೂದೆಹಣ್ಣು ಎಂಬ ಅಸಹ್ಯ ಹೆಸರನ್ನಿಟ್ಟು ಅಪಹಾಸ್ಯ ಮಾಡಿದರೂ ಆಮೇಲಾಮೇಲೆ
ಅದನ್ನು ಅಪ್ಪಿ-ಕೊಂಡಿಲ್ಲವೇ? ಈಗಂತೂ ಟೊಮ್ಯಾಟೋ ಯಾವುದೇ ಅಡುಗೆ ಮನೆಯ ಬಹುಮುಖ್ಯ
ತರಕಾರಿಗಳಲ್ಲೊಂದು. ಸೊಗಸಾದ ಟೊಮ್ಯಾಟೋ ಗೊಜ್ಜನ್ನು ಗೂದೆಹಣ್ಣಿನ ಗೊಜ್ಜು ಎಂದು ಕಲ್ಪಿಸಲಾದರೂ
ಆಗುತ್ತದೆಯೇ, ಹಾಗೆ ಕಲ್ಪಿಸಿದರೆ ಆ ಗೊಜ್ಜು ಗಂಟಲಲ್ಲಿ ಇಳಿಯಬಹುದೇ?
ಇನ್ನು ಮೈಯೆಲ್ಲಾ ಗಂಟುಗಂಟಾಗಿರುವ (ಗೆಣ್ಣುಗಳಿಂದ ತುಂಬಿರುವ)ದಕ್ಕೆ ಗೆಣಸು (ಗಿಣ್ > ಗೆಣ್ > ಗೆಣಸು). ಉರುಟುರುಟಾಗಿ ಗೆಣ್ಣುಗಳಿಂದ ತುಂಬಿರುವ ಗೆಣಸಿನ ರೂಪವೇ ಬೇರೆ, ಸಪೂರವಾಗಿ ನೇರವಾಗಿರುವ ಕ್ಯಾರಟ್ಟಿನ ರೂಪವೇ ಬೇರೆ. ಅದು ರೂಪದಲ್ಲಿ ಗೆಣಸಿಗಿಂತ ಮೂಲಂಗಿಗೇ ಹತ್ತಿರ. ನೆಲದಲ್ಲಿ ಬೆಳೆಯುವ ಹಲವು ’ಮೂಲಂಗಿ’ಗಳಲ್ಲಿ (ಮೂಲ ಅಥವಾ ಬೇರಿನ ರೂಪದಲ್ಲಿ ಬೆಳೆಯುವ ತರಕಾರಿಗಳಲ್ಲಿ) ಗರ್ಜರ (ಗಜ್ಜರಿ) ಸಹ ಒಂದು. ಆದ್ದರಿಂದ ’ಮೂಲ’ಸಂಬಂಧದ ಹೆಸರು ಇದಕ್ಕೂ ಹತ್ತುತ್ತದೆ. ಆದ್ದರಿಂದಲೇ ತಮಿಳಿನಲ್ಲಿ ಕ್ಯಾರೆಟ್ಟಿಗೆ ಮಂಜಳ್ ಮೂಲಂಗಿ (ಹಳದಿ/ಕೇಸರಿ ಮೂಲಂಗಿ) ಎಂಬ ನಿರ್ದೇಶನವೂ ಇದೆ. ಕ್ಯಾರೆಟ್ಟಿಗೂ ಮೂಲಂಗಿಗೂ ಎಷ್ಟೋ ವ್ಯತ್ಯಾಸವಿದ್ದರೂ ಆ ವ್ಯತ್ಯಾಸವು ತೀರ ಕ್ಯಾರೆಟ್ಟು ಗೆಣಸುಗಳ ನಡುವಿನಷ್ಟಲ್ಲ. ಆದ್ದರಿಂದ ಕರೆಯುವುದೇ ಆದರೆ, ಕೆಂಗೆಣಸು ಎಂದು ತಪ್ಪಾಗಿ ಕರೆಯುವುದಕ್ಕಿಂತ ಕೆಂಪುಮೂಲಂಗಿ ಎನ್ನುವುದು ಎಷ್ಟೋ ವಾಸಿ, ಆದರೆ ಮೂಲಂಗಿಯಲ್ಲೇ ಕೆಂಪುಮೂಲಂಗಿ ಕೂಡ ಈಗಾಗಲೇ ಇದೆ! ಇಷ್ಟೆಲ್ಲಾ ತಾಪತ್ರಯಗಳ ಬದಲು ಈಗಾಗಲೇ ಇರುವ ಗಜ್ಜರಿ ಎನ್ನುವ ಹೆಸರೇ ಸೊಗಸಾಗಿದೆಯಲ್ಲವೇ, ಮೊದಲೇ ಹೇಳಿದಂತೆ ಜನಪದಕ್ಕೆ ಹೊಸತಾದ ಯಾವುದೇ ವಸ್ತುವು ಹೊರಗಿನಿಂದ ಬಂದರೂ ಅದರ ಹೆಸರೂ ಅದರೊಂದಿಗೇ ಬರುತ್ತದೆ ಎಂಬುದು ಯಾವುದೇ ಭಾಷೆಗೂ ಸಹಜ. ಅದು ಇಲ್ಲಿ ಬಂದು, ಈ ಭಾಷೆಯ ಜಾಯಮಾನಕ್ಕೆ ಹೊಂದಿಕೊಂಡು ನೆಲೆಯೂರುತ್ತದೆ. ಕ್ಯಾರಟ್ ಕೂಡ ಬಳಸುತ್ತಾ ಬಳಸುತ್ತಾ ಕನ್ನಡದ ಪದವೇ ಆಗಿದೆ.