Saturday, November 1, 2008

ಕನ್ನಡ ರಾಜ್ಯೋತ್ಸವ - ಒಂದು ಹರಟೆ

[ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ]

=====================
ಕನ್ನಡ ರಾಜ್ಯೋತ್ಸವ - ಒಂದು ಹರಟೆ
=====================
[ರಾಜ್ಯೋತ್ಸವದ ಗಲಾಟೆ ಎಲ್ಲೆಲ್ಲೂ. ನೇಪಥ್ಯದಲ್ಲಿ ಅಬ್ಬರದ ಸಂಗೀತ, ಆರ್ಕೆಸ್ಟ್ರಾ, ಮೈಕುಗಳ ಗದ್ದಲ. ರಂಗದ ಮೇಲೆ ೪-೫ ಮಂದಿ ಪ್ರವೇಶ]

ವ್ಯಕ್ತಿ ೧:
[ಜುಗುಪ್ಸೆಯಿಂದ] ಅಬ್ಬಬ್ಬಬ್ಬಾ... ಏನಯ್ಯಾ ಇದು ಗಲಾಟೆ! ಬೆಳಗ್ಗಿನಿಂದ ರಾತ್ರೀವರಗೂ ಒಂದೇ ಸಮನೆ ಕುಟ್ಟಿದ್ದೇ ಸೈ. ತಲೆ ಮೇಲೆ ಸುತ್ತಿಗೆ ಬಡಿದ್ಹಾಗೆ!

ವ್ಯಕ್ತಿ ೨:
ರಾಜ್ಯೋತ್ಸವ ಬಂತೂಂತಂದ್ರೆ ಜನಕ್ಕೆ ಶನಿಕಾಟ ಬಂದ ಹಾಗೇ ನೋಡು. ಇಡೀ ತಿಂಗಳು ಇವರ ಗದ್ದಲ ಸಹಿಸೋದೇ ಒಂದು ಯಮ ಸಾಹಸ ಆಗಿಬಿಡ್ತದೆ.

ವ್ಯಕ್ತಿ ೧:
ಇವ್ರು ಇಷ್ಟ್ ಕಡಿದ್ಹಾಕೋ ಸಂಪತ್ತಿಗೆ ನಾವು ಚಂದಾ ಬೇರೆ ಕೊಡಬೇಕು. [ನಾಟಕೀಯವಾಗಿ] ಅದೂ ಚಂದಾ ಕೇಳೊ ಸ್ಟೈಲ್ ನೋಡ್ಬೇಕು ಕಣಯ್ಯ. ಅದು ಅವಂದೇ ದುಡ್ಡು ಅನ್ನೋ ಹಾಗೂ, ಏನೊ... ನಮ್ಮ ಉಪ್ಕಾರಕ್ಕೆ ನಮ್ಹತ್ರ ಬಿಟ್ಟಿದಾನೆ ಅನ್ನೋಹಾಗೂ ಮಾತು...

ವ್ಯಕ್ತಿ ೩:
ಏ, ಅದೇನ್ರಯ್ಯ? ನಿಮಗೆ ಚಂದಾ ಕೊಡೋದಕ್ಕೆ ಇಷ್ಟಇಲ್ದೇ ಇದ್ರೆ, ಬಿಡಿ. ಅವ್ರಷ್ಟಕ್ಕೆ ಅವ್ರು ರಾಜ್ಯೋತ್ಸವ ಆಚರಣೆ ಮಾಡಿದ್ರೆ, ನಿಮ್ದೇನ್ ಹೋಗುತ್ರಯ್ಯಾ?

ವ್ಯಕ್ತಿ ೪:
ಅಲ್ಲಪ್ಪ, ಕನ್ನಡ ನಾಡ್ನಲ್ಲಿ ಹುಟ್ಟಿ, ಕನ್ನಡದ ಅನ್ನಾನೇ ತಿಂದು, ಕನ್ನಡದ ನೀರ್ನೇ ಕುಡಿಯೋ ನಿಮಗೆ, ಒಂಚೂರಾದ್ರೂ ಕನ್ನಡ ಅಭಿಮಾನ ಬೇಡ್ವೇನ್ರಯ್ಯ? ದಿನಾ ಮಾಡ್ತಾರ ರಾಜ್ಯೋತ್ಸವಾನ? ವರ್ಷಕ್ಕೊಂದ್ಸಾರಿನಪ್ಪ... ನೀವೂ ಇದ್ರಲ್ಲಿ ಸಂತೋಷದಿಂದ ಭಾಗವಹಿಸೋದ್ ಬಿಟ್ಟು, ಕನ್ನಡ ರಾಜ್ಯೋತ್ಸವಾನೇ ಶನಿಕಾಟ ಅಂತೀರಲ್ಲ, ನೀವು ನಿಜವಾಗ್ಲೂ ಕನ್ನಡಿಗರೇನಯ್ಯ?

ವ್ಯಕ್ತಿ ೩:
[ಅನುಮೋದಿಸುತ್ತಾ - ವ್ಯಕ್ತಿ ೧ ಮತ್ತು ೨ ಕಡೆ] ಅದೇಯ ಮತ್ತೆ. ರಾಜ್ಯೋತ್ಸವಾನಂತೆ, ಶನಿಕಾಟ ಅಂತೆ... [ಬೆದರಿಸುವಂತೆ] ಯ್ಯೋಯ್... ಹೀಗೆಲ್ಲಾ ನಂಹತ್ರ ಮಾತಾಡಿದ್ರಿ, ಸರಿ ಹೋಯ್ತು. ಹೊರಗೆಲ್ಲಾರೂ ಮಾತಾಡೀರ, ಜೋಕೆ! ಕಳ್ದ್ಹೋಗ್ತೀರ, ಹುಷಾರ್!
[ಅವರವರಲ್ಲೇ ಜೋರಾದ ವಾಗ್ವಾದ ನಡೆಯ ತೊಡಗುತ್ತದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತದೆ. ಕನ್ನಡ ಪ್ರೊಫೆಸರ್ ವೆಂಕಟಗಿರಿ ಪ್ರವೇಶಿಸುತ್ತಾರೆ]

ವೆಂಕಟಗಿರಿ:
[ಜಗಳ ಬಿಡಿಸಲು ಯತ್ನಿಸುತ್ತಾ] ಏಯ್ ಏಯ್ ಏಯ್... ನಿಲ್ಸಿ, ನಿಲ್ಸಿ. ಏನಿದು [ನೋಡಿ ಚಕಿತನಾಗಿ] ಅರೇ! ಏನಿದು, ಪಿ.ಜಿ. ಪೈಲ್ವಾನ್ರು ನಾಕೂ ಜನಾನೂ ಸೇರಿಬಿಟ್ಟಿದಾರೆ! [ಬಿಡಿಸಿ ದೂರ ಮಾಡಿ] ಏನ್ರಯ್ಯಾ ಇದು... ಕಾಯ್ತಾ ಇರ್ತಾರಪ್ಪ ಕೈ ಕೈ ಮಿಲಾಯ್ಸೋದಕ್ಕೆ. ಏನಾಯ್ತ್ರಪ್ಪಾ?

[ನಾಲ್ಕೂ ಜನ ಹಾವಭಾವಗಳೊಂದಿಗೆ, ನಡೆದಿದ್ದನ್ನು ವಿವರಿಸುತ್ತಾರೆ]

[ಕೇಳುತ್ತಿದ್ದು, ಕುಚೇಷ್ಟೆಯಿಂದ ನಗುತ್ತಾ] ಓಹೋಹೋ... ನೀವೆಲ್ಲಾ "ಕನ್ನಡ ಹೋರಾಟ" ಮಾಡ್ತಾ ಇದೀರ ಅಂತಾಯ್ತು!

ವ್ಯಕ್ತಿ ೩:
[ನಸುಕೋಪದಿಂದ] ಅಯ್... ಏನ್ಸಾರ್, ನೀವೂ ಇವ್ರ ಥರಾನೇ...

ವೆಂಕಟಗಿರಿ:
[ನಸುನಗುತ್ತಾ, ಸಮಾಧಾನಿಸುವವನಂತೆ, ೩ನೇ ವ್ಯಕ್ತಿಗೆ] ಅಲ್ಕಾಣಯ್ಯಾ ಚಂದ್ರಣ್ಣ, ಈ ಗದ್ದಲ ತಡೀಲಾರ್ದೇ ರಾಜಪ್ಪ ಏನೋ ಅಂದ್ನಪ್ಪ; ಅವ್ನು ಏನಂದ ಅಂತ ಅರ್ಥಾನೂ ಮಾಡ್ಕೊಳ್ದೇ ಅವನ್ಗೆ ಹೊಡ್ಯಕ್ಕೆ ಹೋಗಿದ್ಯಲ್ಲ... [ಕ್ಷಣ ತಡೆದು] ಮಸಲಾ, ಈಗ ಅವನಿಗೆ ಕನ್ನಡಾಭಿಮಾನ ಇಲ್ವೇ ಇಲ್ಲ ಅಂತ್ಲೇ ಇಟ್ಕೋಳ್ಳೋಣ. ನೀನು ಅವನಿಗೆ ಹೊಡೆದ್ರೆ ಕನ್ನಡಾಭಿಮಾನ ಬರುತ್ತೇನಯ್ಯ?
[ಚಂದ್ರಣ್ಣ ಇರುಸುಮುರುಸಿನಿಂದ ಬೆಪ್ಪ ನಗೆ ನಗುತ್ತಾ ತಲೆ ತಗ್ಗಿಸುವನು].

[ವೆಂಕಟಗಿರಿ ಮುಂದುವರಿಸುತ್ತಾ] ನೋಡ್ರಯ್ಯಾ, ಅಭಿಮಾನ ಅನ್ನೋದು ಬಲಪ್ರಯೋಗದಿಂದ, ಗದ್ಲಾ ಹಚ್ಚೋದ್ರಿಂದ ಬರೋದಲ್ಲ. ಅದು, ನಮ್ಮ ನಾಡು, ನಮ್ಮ ಸಂಸ್ಕೃತಿಗಳನ್ನ ತಿಳಿದುಕೊಳ್ಳೋದ್ರಿಂದ ಬರೋದು. [ತಡೆದು, ನಿಧಾನವಾಗಿ ಭಾವುಕನಾಗುತ್ತಾ] ಎಂಥಾ ನಾಡು ಇದು. ಸಿರಿಗಂಧದ ಬೀಡು, ಮರಿದುಂಬಿ-ಕೋಗಿಲೆಗಳ ಗೂಡು. "ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಅಂತಾನೆ, ಆದಿ ಕವಿ ಪಂಪ. ಸಸ್ಯ ಶ್ಯಾಮಲೆ, ಸಿರಿದೇವಿ ಕನ್ನಡ ತಾಯಿಗೆ ನಿತ್ಯೋತ್ಸವ - ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ-ಗಂಧಗಳಲ್ಲಿ. "ಕಾವೇರಿಯಿಂದಮಾ ಗೋದಾವರಿವರೆಗಿರ್ದ" ಕನ್ನಡ ನಾಡಿನ ನೆಲ-ಜಲ, ಜನ, ಸಿರಿಸಂಪತ್ತನ್ನು ಪ್ರಾಚೀನ ಕವಿ ಶ್ರೀವಿಜಯನಿಂದ ಹಿಡಿದು ಎಷ್ಟು ಜನ ಕವಿಗಳು ಹಾಡಿ ಹೊಗಳಿದ್ದಾರೆ!

ವ್ಯಕ್ತಿ ೧:
ಅದನ್ನೇ ಸಾರ್, ನಾನು ಹೇಳಿದ್ದು. ಆ ಭವ್ಯ ಸಂಸ್ಕೃತಿ ಎಲ್ಲಿ, ಈ ಗಲಾಟೆ, ಗೂಂಡಾಗಿರಿ ಎಲ್ಲಿ...

ವೆಂಕಟಗಿರಿ:
[ಅನುಮೋದಿಸುತ್ತಾ] ಅದೇ ನಾನೂ ಹೇಳಿದ್ದು. ಹೀಗೆ ಯಾಕಾಗ್ತಾ ಇದೆ? ಯಾಕೇಂದ್ರೆ, ನಮಗೆ ನಮ್ಮ ಬಗ್ಗೆ ಹೆಮ್ಮೆ ಏನೋ ಇದೆ, ಆದರೆ ಯಾವುದರ ಬಗ್ಗೆ ಹೆಮ್ಮೆ ಪಡಬೇಕು ಅಂತಾನೇ ನಮಗೆ ಗೊತ್ತಿಲ್ಲ. ಯಾವುದರ ಬಗ್ಗೆ ನಾಚಿಕೆ ಪಟ್ಟುಕೋ ಬೇಕೋ ಅದರ ಬಗ್ಗೆ ಹೆಮ್ಮೆ ಪಡ್ತೀವಿ. ಅದು ದುರಭಿಮಾನ, ಒಣಹೆಮ್ಮೆ. ಅದು ಹೋಗಬೇಕು, ಅಭಿಮಾನ ಬರಬೇಕು, ರಾಜ್ಯೋತ್ಸವ ನಿಜವಾಗ್ಲೂ ನಮ್ಮ ಹೆಮ್ಮೆಯ ಉತ್ಸವ ಆಗ್ಬೇಕು ಅಂದ್ರೆ, ನಮ್ಮ ಇತಿಹಾಸ, ಪರಂಪರೆ, ಸಾಮರ್ಥ್ಯಗಳ ಬಗ್ಗೆ ತಿಳೀಬೇಕು. ಹಾಗೇ ನಮ್ಮ ಕುಂದುಗಳನ್ನೂ ತೆರೆದ ಮನಸ್ಸಿನಿಂದ ಒಪ್ಕೋಬೇಕು.

ವ್ಯಕ್ತಿ ೧:
ಸಿರಿಸಮೃದ್ಧವಾದ ಈ ನೆಲದಲ್ಲಿ ಅದೆಷ್ಟು ರಾಜವಂಶಗಳು; ಗಂಗ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯ ನಗರದ ಅರಸರು, ಮೈಸೂರು ಅರಸರು...

ವ್ಯಕ್ತಿ ೨:
ಪುಲಿಕೇಶಿ, ನೃಪತುಂಗ, ವಿಷ್ಣುವರ್ಧನ, ಕೃಷ್ಣದೇವರಾಯ, ರಣಧೀರ ಕಂಠೀರವ, ಕಿತ್ತೂರ ಚನ್ನಮ್ಮ, ಒನಕೆ ಓಬವ್ವ, ಟಿಪ್ಪೂ ಸುಲ್ತಾನ್... ಎಷ್ಟೊಂದು ಜನ ವೀರರು ಈ ಮಣ್ಣಿನಲ್ಲಿ ಮೆರೆದವರು!

ವೆಂಕಟಗಿರಿ:
ಹೌದು. ಆದ್ರೆ ನಮ್ಮ ನಾಡು ಕೇವಲ ನೆಲ-ಜಲಗಳ ಸಿರಿಯಷ್ಟೇ ಅಲ್ಲ; ಧೀರರ ನಾಡಷ್ಟೇ ಅಲ್ಲ; ಕಲೆ-ಸಂಸ್ಕೃತಿ-ತಂತ್ರಜ್ಞಾನಗಳ ನೆಲೆವೀಡೂ ಹೌದು. ಕನ್ನಡಿಗರ ಕಲಾ ಸಿದ್ಧಿ ಐಹೊಳೆ, ಬಾದಾಮಿ, ಬೇಲೂರು-ಹಳೇಬೀಡುಗಳಲ್ಲಿ ತನ್ನ ಉತ್ತುಂಗವನ್ನು ಕಂಡರೆ, ಕನ್ನಂಬಾಡಿಯ ಕಟ್ಟೆ, ಕನ್ನಡಿಗರ ಕ್ರಿಯಾಸಿದ್ಧಿಗೆ ಸಾಕ್ಷಿಯಾಗಿದೆ.

ವ್ಯಕ್ತಿ ೧:
ಅಲ್ಲಮ, ಬಸವ, ರಾಮಾನುಜ, ಮಧ್ವ, ವಿದ್ಯಾರಣ್ಯರ ಧರ್ಮಭೂಮಿ ಇದು; ಹಕ್ಕ-ಬುಕ್ಕರ ಕರ್ಮ ಭೂಮಿ; ಪಂಪ, ರನ್ನ, ಲಕ್ಶ್ಮೀಶ, ಕುಮಾರವ್ಯಾಸ, ಹರಿಹರ, ರಾಘವಾಂಕ ಮುಂತಾದ ಕವಿಕೋಗಿಲೆಗಳ ಪುಣ್ಯಾರಾಮ ಇದು; ದಾಸರ-ಶರಣರ ಅನುಭಾವ-ಸಾಹಿತ್ಯಗಳಿಂದ ಶ್ರೀಮಂತಗೊಂಡ ನೆಲ ಇದು;

ವ್ಯಕ್ತಿ ೨:
ಆಧುನಿಕರಲ್ಲಿ? ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಕಾರ್ನಾಡ್... ಪಟ್ಟಿ ಬೆಳೀತಾನೇ ಹೋಗುತ್ತೆ. ಬೇರೆ ಯಾವ ಭಾಷೆಗೂ ದಕ್ಕದ ಏಳು ಜ್ಞಾನಪೀಠ ಪ್ರಶಸ್ತಿಗಳ ಗರಿ, ಕನ್ನಡದ ಕಿರೀಟಕ್ಕೆ!

ವ್ಯಕ್ತಿ ೪:
ಅದು ಸರಿ ಸಾರ್, ರಾಜ್ಯೋತ್ಸವ ಅಂದ್ರೆ ನಮ್ಮಲ್ಲಿ, ಕನ್ನಡ ಬಾವುಟ ಹಾರ್ಸೋದು, ಆರ್ಕೆಸ್ಟ್ರಾ, ಭಾಷಣ ಇದೆಲ್ಲ ಮಾಡ್ತೀವಿ. ಆದ್ರೆ, ಬೇರೆ ರಾಜ್ಯಗಳಲ್ಲೂ ಆಯಾ ರಾಜ್ಯೋತ್ಸವ ಯಾಕೆ ಮಾಡಲ್ಲ?

ವೆಂಕಟಗಿರಿ:
ಒಳ್ಳೇ ಪ್ರಶ್ನೆ. ಮೊದಲಿಂದಲೂ ಅಸ್ತಿತ್ವದಲ್ಲಿ ಇರುವ ರಾಜ್ಯಗಳಲ್ಲಿ ಬಹುಶಃ ಮಾಡೊಲ್ವೋ ಏನೊ. ಆದ್ರೆ, ನಮ್ಮ ರಾಜ್ಯ, ನಾವು ಹೋರಾಡಿ ಗಳಿಸಿದ್ದು. ಸುಮಾರು ೧೦೦ ವರ್ಷಗಳ ಸುದೀರ್ಘ ಇತಿಹಾಸ ಇದೆ, ಈ ಹೋರಾಟಕ್ಕೆ!

ಎಲ್ಲರೂ:
[ಆಶ್ಚರ್ಯ]

ವೆಂಕಟಗಿರಿ:
೧೯೦೫ರ ಸುಮಾರು. ಆಗ ತಾನೆ ವಿದ್ಯಾಭ್ಯಾಸ ಮುಗಿಸಿ ಪುಣೆಯಿಂದ ಬಳ್ಳಾರಿ ಜಿಲ್ಲೆಯ ಆನೆಗೊಂದಿಗೆ ಮರಳಿದ ಆ ಯುವಕ, ತುಸುದೂರದಲ್ಲಿ ಮುಗಿಲಿಗೆ ಮುತ್ತಿಡುವಂತೆ ನಿಂತಿದ್ದ ಭವ್ಯ ಗೋಪುರವನ್ನು ನೋಡಿ ಕೇಳ್ತಾನೆ, "ಅದು ಏನು?" ಅದು ಹಂಪೆಯ ವಿರೂಪಾಕ್ಷ ದೇವಾಲಯ ಎಂಬ ಸ್ಥಳೀಯನ ಉತ್ತರ ಅವನನ್ನು ಚಕಿತಗೊಳಿಸುತ್ತದೆ. ಕರ್ನಾಟಕದ ಮೂಲೆ ಕೊಂಪೆಯಲ್ಲಿದ್ದ, ಹಾಳು ಹಂಪೆಯೇ ಪ್ರಖ್ಯಾತ ವಿಜಯನಗರ ಮಹಾಸಾಮ್ರಾಜ್ಯದ ರಾಜಧಾನಿಯಾಗಿತ್ತು ಅನ್ನೋ ಸತ್ಯ ಅವನಿಗೆ ಹೊಳೀತಲ್ಲ, ಆ ಕ್ಷಣ, ಕರ್ನಾಟಕದ ಇತಿಹಾಸಕ್ಕೆ ಹೊಸ ತಿರುವನ್ನೇ ಕೊಟ್ಟಿತು. ಈ ಯುವಕ ಬೇರಾರೂ ಅಲ್ಲ, ಮುಂದೆ ನಾಡಿನಾದ್ಯಂತ ಸಂಚರಿಸಿ, ಕನ್ನಡಿಗರ ಎದೆ ಎದೆಯಲ್ಲೂ ಕನ್ನಡಾಭಿಮಾನದ ಕೆಚ್ಚನ್ನು ಹೊತ್ತಿಸಿದ ಆಲೂರು ವೆಂಕಟರಾಯರು. ಬಂಗಾಳ ಪಂಜಾಬಗಳಂತೆಯೇ ಕನ್ನಡ ನಾಡು ಸಹ ಭವ್ಯ ಇತಿಹಾಸವನ್ನು ಹೊಂದಿದೆ ಅನ್ನೋ ಸತ್ಯ ಮನದಟ್ಟಾಗುತ್ತಿದ್ದಂತೆ, ಯುವಕ ವೆಂಕಟರಾಯರು ಈ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತರಾದರು. ಸಂಶೋಧನೆಗಳನ್ನು ಕೈಗೊಂಡರು. ಇದರ ಫಲವೇ ಕನ್ನಡ ಇತಿಹಾಸದ ಹೆಮ್ಮೆಯ ಯಶೋಗಾಥೆ, "ಕರ್ನಾಟಕ ಗತ ವೈಭವ". ಜೊತೆಜೊತೆಗೆ, ಹರಿದು ಹಂಚಿಹೋಗಿದ್ದ ನಾಡಿನಾದ್ಯಂತ ಸಂಚಾರ ಕೈಗೊಂಡ ರಾಯರು ತಮ್ಮ ಪ್ರಖರವಾದ ಭಾಷಣಗಳಿಂದ ಜನಮನದಲ್ಲಿ ಕನ್ನಡತನದ ಮಿಂಚು ಹರಿಸಿದರು; ಕಣ್ಣುಗಳಲ್ಲಿ ಅಖಂಡ ಕರ್ನಾಟಕದ ಕನಸನ್ನು ಬಿತ್ತಿದರು.

ಎಲ್ಲರೂ:
[ಆಲಿಸುತ್ತಾರೆ]

ವೆಂಕಟಗಿರಿ:
ಮುಂದೆ ೧೯೧೫ರಲ್ಲಿ ಕರ್ಪೂರ ಶ್ರೀನಿವಾಸರಾಯರು ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವುದರೊಂದಿಗೆ ಕರ್ನಾಟಕ ಏಕೀಕರಣದ ಆಶಯ ಸ್ಪಷ್ಟ ರೂಪು ಪಡೀತು. ೧೯೨೦ರಲ್ಲಿ ಕರ್ನಾಟಕ ರಾಜಕೀಯ ಕಾಂಗ್ರೆಸ್ ಹಾಗೂ ೧೯೨೪ರಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾಂ ಕಾಂಗ್ರೆಸ್ ಅಧಿವೇಶನಗಳು ಕರ್ನಾಟಕ ಏಕೀಕರಣದ ಬೇಡಿಕೆ ಮುಂದಿಟ್ಟವು. ಆಗ ದಕ್ಷಿಣ ಭಾರತದಲ್ಲಿ ಕನ್ನಡ ಭಾಷಿಕರ ೨೨ ಪ್ರದೇಶಗಳಿದ್ದವು. ಅವುಗಳಲ್ಲಿ ಅತಿ ದೊಡ್ಡದು ಮೈಸೂರು ಪ್ರಾಂತ್ಯ. ಸ್ವಾತಂತ್ರ್ಯಾನಂತರ ಈ ಎಲ್ಲ ಪ್ರದೇಶಗಳನ್ನು ಪುನರ್ವಿಂಗಡಿಸಿ ಮುಂಬೈ, ಮದರಾಸು, ಹೈದರಾಬಾದ್, ಕೊಡಗು ಹಾಗೂ ಮೈಸೂರು ಪ್ರಾಂತ್ಯಗಳಿಗೆ ಹಂಚಲಾಯಿತು. ಏಕೀಕೃತ ಕರ್ನಾಟಕದ ಕನಸು ಕನಸಾಗೇ ಉಳೀತು.

ವ್ಯಕ್ತಿ ೪:
ಎಂಥ ವಿಪರ್ಯಾಸ! ಕನ್ನಡಿಗರು ತಮ್ಮ ನಾಡಿನಲ್ಲಿ ತಾವೇ ಪರಕೀಯರು!

ವೆಂಕಟಗಿರಿ:
ಹೌದು. ೧೯೪೭ರಲ್ಲೇ ಭಾರತ ಸ್ವತಂತ್ರಗೊಂಡರೂ, ಕನ್ನಡಿಗರ "ಸ್ವಾತಂತ್ರ್ಯ" ಹೋರಾಟ ನಿಲ್ಲಲಿಲ್ಲ! ಅದಾಗಿ ಒಂಬತ್ತು ವರ್ಷಗಳ ನಂತರ, ೧೯೫೬ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ಆಯೋಗ ತನ್ನ ವರದಿ ಮಂಡಿಸಿತು. ಅದರ ಶಿಪಾರಸಿನ ಮೇರೆಗೆ, ಐದೂ ರಾಜ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡದ ಪ್ರದೇಶಗಳನ್ನೆಲ್ಲ ಒಗ್ಗೂಡಿಸಿ ಒಂದು ಪ್ರತ್ಯೇಕ ರಾಜ್ಯವನ್ನು ರಚಿಸಲಾಯಿತು. ಹೀಗೆ ನವೆಂಬರ್ ೧, ೧೯೫೬ರಂದು ಉದಯವಾಯಿತು ನಮ್ಮ ಚಲುವ ಕನ್ನಡ ನಾಡು. ಆದರೆ, ಇದಕ್ಕೆ "ಕರ್ನಾಟಕ" ಎಂಬ ಹೆಸರು ಬಂದದ್ದು ಮಾತ್ರ ೧೯೭೩ರಲ್ಲಿ.

ವ್ಯಕ್ತಿ ೪:
ಹಾಂ! ಇಷ್ಟು ಹೋರಾಡಿ ಪಡೆದ ನಾಡು. ನಮಗೆ ಅದರ ಬಗ್ಗೆ ಅಷ್ಟೊಂದು ಅಭಿಮಾನ ಇರೋದು ಆಶ್ಚರ್ಯವೇನಲ್ಲ!

ವೆಂಕಟಗಿರಿ:
ಅದೇನೋ ಸರಿ. ಕನ್ನಡದಲ್ಲಿ ಏನಿಲ್ಲ ಹೇಳಿ? ಸುಂದರ ಭಾಷೆ, ತುಂಬಿ ತುಳುಕುವ ಸಂಪತ್ತು, ಶ್ರೀಮಂತ ಸಾಹಿತ್ಯ-ಕಲೆ-ಸಂಗೀತ, ಭವ್ಯ ಇತಿಹಾಸ... ಇವಕ್ಕೆಲ್ಲಾ ವಾರಸುದಾರರು, ನಾವು. ನಮ್ಮ ಬೆನ್ನನ್ನು ನಾವು ತಟ್ಟಿಕೊಳ್ತಾನೇ ಹೋಗಬಹುದು. ಆದರೆ ಇದರಲ್ಲಿ ನಮಗೆ ದಕ್ಕಿದ್ದೆಷ್ಟು; ಎಷ್ಟು ಉಳಿಸಿಕೊಳ್ತಿದೀವಿ... ನೋಡಿದರೆ ಮನಸ್ಸು ಭಾರವಾಗುತ್ತೆ. ಕನ್ನಡದ ನೆಲ-ಜಲ-ಅರಣ್ಯಗಳು ಲೂಟಿಯಾಗ್ತಿವೆ, ಮಲಿನವಾಗ್ತಿವೆ; ಕನ್ನಡದ ಹೆಸರಲ್ಲಿ ಬರೇ ಮಾತಾಡ್ತೀವಿ; ವರ್ಷಕ್ಕೊಮ್ಮೆ ರಾಜ್ಯೋತ್ಸವ ಮಾಡ್ತೀವಿ, ಮೆರೀತೀವಿ, ಮರೀತೀವಿ. ಇನ್ನೊಂದು ಭಾಷೇನ ದ್ವೇಷಿಸೋದನ್ನೇ ಕನ್ನಡಪ್ರೇಮ ಅಂತ ಭ್ರಮಿಸುತ್ತೀವಿ! ನಮ್ಮಲ್ಲಿ ಎಷ್ಟು ಜನ ನಮ್ಮ ಭವ್ಯ ಸಂಸ್ಕೃತಿ-ಪರಂಪರೆಗಳ ಬಗ್ಗೆ ತಿಳಿದಿದ್ದೇವೆ, ಅಭಿಮಾನ ತಳೆದಿದ್ದೇವೆ ಹೇಳಿ, ನೋಡೋಣ? ಎಷ್ಟು ಜನ ಕನ್ನಡ ಪುಸ್ತಕಗಳನ್ನು ಕೊಳ್ಳುತ್ತೇವೆ, ಎಷ್ಟು ಜನ ಅವನ್ನು ಓದುತ್ತೇವೆ? ಬೇಡಪ್ಪ, ಎಷ್ಟು ಜನ ಕೊನೆಯ ಪಕ್ಷ ಸ್ವಚ್ಛ-ಸ್ಪಷ್ಟ ಕನ್ನಡ ಮಾತಾಡ್ತೇವೆ-ಬರೀತೇವೆ? - ಕನ್ನಡ ಅಭಿಮಾನವೆಂದರೆ, ಇದು.

ಎಲ್ಲರೂ:
[ಅನುಮೋದಿಸುವಂತೆ ತಲೆದೂಗುವರು]

ವೆಂಕಟಗಿರಿ:
ಆದರೆ ಈವತ್ತು ನೋಡಿ, ಕನ್ನಡ ರಾಜ್ಯೋತ್ಸವವೆಂದರೆ ಬರೀ ಮೈಕಾಸುರನ ಹಾವಳಿ ಎಂದಾಗಿದೆ. ಕರ್ನಾಟಕ ಸಂಗೀತದ ಸ್ಥಾನವನ್ನು ಈ ನೆಲದ್ದಲ್ಲದ ಅಬ್ಬರದ ಸಿನಿಮಾ ಸಂಗೀತ ಆಕ್ರಮಿಸಿದೆ. "ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ" ಎಂದು ಹಿರಿಯರು ಆಶಿಸಿದ್ದರು. ಆದರೆ ಅದನ್ನೇ ಇಂದು ನಾವು ದೇವರಲ್ಲಿ ಬೇಡಿಕೊಳ್ಳಬೇಕಾಗಿದೆ. ಕನ್ನಡಕ್ಕೆ ನಮ್ಮಿಂದಲೇ ಸಂಚಕಾರ ಬಂದೊದಗಿದೆ. ರಾಜ್ಯೋತ್ಸವದಂದು ದೊಡ್ಡ ದೊಡ್ಡ ಭಾಷಣ ಮಾಡ್ತೇವೆ; ಕನ್ನಡ ಹೋರಾಟದ ಹೆಸರಲ್ಲಿ ರಾಜಕೀಯ ಮಾಡ್ತೇವೆ.

ವ್ಯಕ್ತಿ ೧:
ಕನ್ನಡದ ಸಾಂಸ್ಕೃತಿಕ-ಸಾಹಿತ್ಯ ಕ್ಷೇತ್ರಗಳಲ್ಲೂ ರಾಜಕೀಯ ಕಾಲಿಟ್ಟಿದೆ.

ವೆಂಕಟಗಿರಿ:
ಯಾವ ನಾಡಿನ ಸಾಕಾರಕ್ಕಾಗಿ ಅನೇಕ ಚೇತನಗಳು ಜೀವವನ್ನೇ ತೇದುವೋ ಅದೇ ಕನ್ನಡ ನಾಡಿನಲ್ಲಿ ಇವತ್ತು ಪ್ರತ್ಯೇಕತೆಯ ಅಪಸ್ವರ ಕೇಳಬರುತ್ತಿದೆ. ಈಗ ಹೇಳಿ, ಎಲ್ಲಿದೆ ಕನ್ನಡ? ಎಲ್ಲಿದೆ ಕನ್ನಡತನ?

ಎಲ್ಲರೂ:
[ನಿರುತ್ತರ-ಮೌನ]

ವೆಂಕಟಗಿರಿ:
[ಮುಂದುವರಿಸುತ್ತಾ] ಈ ಸಂದರ್ಭದಲ್ಲಿ ಕುವೆಂಪುರವರ ಸಾಲುಗಳು ನೆನಪಿಗೆ ಬರುತ್ತವೆ [ಘಂಟಾಘೋಷವಾಗಿ ಹೇಳುವನು]

"ಅಖಂಡ ಕರ್ನಾಟಕ:
ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ ಸರ್ವಜ್ಞ ಷಡಕ್ಷರ:
ಸರಸ್ವತಿಯೆ ರಚಿಸಿದೊಂದು ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ!

"ಕರ್ಣಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಕಾವ ಕೊಲುವ ಒಲವ ಬಲವಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ!"

ವ್ಯಕ್ತಿ ೩:
ಸಾರ್, ನಾವು ಈ ವರಗೂ ಕನ್ನಡ ರಾಜ್ಯೋತ್ಸವದ ಬಗ್ಗೆ ಎಷ್ಟು ಹಗುರವಾದ ಭಾವನೆ ಇಟ್ಕೊಂಡಿದ್ವಿ ಅಂತ ನೋಡಿದ್ರೆ, ನಮಗೇ ನಾಚಿಕೆ ಆಗುತ್ತೆ ಸಾರ್.

ವ್ಯಕ್ತಿ ೨:
ನೀವು ಹೇಳೋದು ಸರಿ ಸಾರ್. ಕನ್ನಡ ರಾಜ್ಯೋತ್ಸವದ ಆಚರಣೆ ಹೀಗಲ್ಲ. ಅದು ನಿಜವಾದ ಕನ್ನಡತನಾನ ಬಿಂಬಿಸಬೇಕು.

ವ್ಯಕ್ತಿ ೧:
ಹಾಗಾಗಬೇಕಾದ್ರೆ, ನಮ್ಮ ವ್ಯಕ್ತಿತ್ವದಲ್ಲಿ ಕನ್ನಡತನ ಮೈಗೂಡಬೇಕು.

ವ್ಯಕ್ತಿ ೪:
ಹೌದು. ನಾವು ಕನ್ನಡ ಕಲೀಬೇಕು, ಕಲಿಸಬೇಕು. ಬೇರೆ ಭಾಷೆ ಸಂಸ್ಕೃತಿಗಳ್ನೂ ನೋಡಬೇಕು, ಕನ್ನಡ ಬೆಳೆಸಬೇಕು.

ವೆಂಕಟಗಿರಿ:
[ಸಂತಸದಿಂದ] ಸಂತೋಷ, ಸ್ನೇಹಿತರೆ. ಹಾಗಂತ ನಾವೆಲ್ಲಾ ಪ್ರತಿಜ್ಞೆ ಮಾಡೋಣ.

[ಘೋಷಿಸುವನು] ಕನ್ನಡವೇ...

ಎಲ್ಲರೂ:
ನಮ್ಮುಸಿರು...

ವೆಂಕಟಗಿರಿ:
ಸಿರಿಗನ್ನಡಂ ...

ಎಲ್ಲರೂ:
ಗೆಲ್ಗೆ

ವೆಂಕಟಗಿರಿ:
ಸಿರಿಗನ್ನಡಂ ...

ಎಲ್ಲರೂ:
ಆಳ್ಗೆ

ವೆಂಕಟಗಿರಿ:
ಸಿರಿಗನ್ನಡಂ...

ಎಲ್ಲರೂ:
ಬಾಳ್ಗೆ

[ಮೈಕುಗಳ ಗದ್ದಲ ಈ ಹೊತ್ತಿಗೆ ಸಂಪೂರ್ಣ ನಿಂತಿದೆ. ನೇಪಥ್ಯದಲ್ಲಿ "ಎಲ್ಲಾದರು ಇರು ಎಂತಾದರು ಇರು..." ಗೀತೆ ತೇಲಿ ಬರುತ್ತದೆ. ತೆರೆ]

10 comments:

Dr.Samir Kagalkar said...

as usual, manju rocks !!Hope all of us get this "sat abhimaana" about kannada.

Srikanth said...

ಸಿರಿಗನ್ನಡಂ ಗೆಲ್ಗೆ.

ಶ್ರೀಯುತ ಮಂಜುನಾಥ ಅವರು ಈ ಪ್ರಾಕಾರದಲ್ಲೂ ಕೈಯಾಡಿಸಿದ್ದಾರೆ ಎಂದು ತಿಳಿದಿರಲಿಲ್ಲ. ಬಹಳ ಚೆನ್ನಾಗಿ ಮೂಡಿಬಂದಿದೆ.

ಜಯಂತ ಬಾಬು said...

ನಿಮ್ಮ ಏಕ-ಅಂಕ ಸೊಗಸಾಗಿದೆ... ಸಮಯೋಚಿತ .

ಬಾಲು said...

ಏಕಾಂಕ ಚೆನ್ನಾಗಿದೆ. :) ಬಹಳಷ್ಟು ಮಾಹಿತಿ ಒಳಗೊಂಡಿದೆ.
ನಾನು ಇಗ ಮನೆಗೆ ಬರ್ತಾ ಹಲವಾರು ಕಡೆ ಆರ್ಕೆಸ್ಟ್ರ, ಮೈಕು ಗಳ ಹಾವಳಿ ನೋಡಿ ಅದರ ಬಗ್ಗೆನೇ ಯೋಚಿಸ್ತಾ ಇದ್ದೆ.

ಮನಸು said...

ತುಂಬಾ ಚೆನ್ನಾಗಿದೆ ಲೇಖನ... ಸಿರಿಗನ್ನಡಂ ಗೆಲ್ಗೆ

Manjunatha Kollegala said...

ಬಾಲು, ಧನ್ಯವಾದ, ಎಲ್ಲೋ ಆರೇಳು ವರ್ಷಗಳ ಹಿಂದಿನ ಬರಹವನ್ನು ಇವತ್ತು ಹೆಕ್ಕಿ ಹಂಚಿಕೊಂಡಿದ್ದಕ್ಕೆ.

ಮನಸು, ಧನ್ಯವಾದ. ಬರುತ್ತಿರಿ

Abdul Rehman Pasha said...

ರಾಜ್ಯೋತ್ಸವವನ್ನು ಹೇಗೆ ಆಚರಿಸಬೇಕು ಎನ್ನುವುದನ್ನು ಹೇಳುವ ನೆಪದಲ್ಲಿ ಕನ್ನಡ ಭಾಷೆಯ ಭವ್ಯ ಇತಿಹಾಸ, ಸಂಸ್ಕೃತಿ ಇತ್ಯಾದಿಗಳನ್ನು ಸೊಗಸಾಗಿ ಬಣ್ಣಿಸಿದ್ದೀರಿ, ಧನ್ಯವಾದ. ಆದರೆ ಇಲ್ಲೆಲ್ಲಾ ನವೆಂಬರ್ ೧ನೇ ತಾರೀಖು ನಾವು ಆದರಿಸಬೇಕಾದದ್ದು ಕನ್ನಡ ರಾಜ್ಯೋತ್ಸವವಲ್ಲ "ಕರ್ನಾಟಕ ರಾಜ್ಯೋತ್ಸವ" ಎಂಬ ಪರಿಕಲ್ಪನೆ ತಪ್ಪಿಹೋಗಿದೆ.
ನವೆಂಬರ್ ೧, ೧೯೫೬ರಲ್ಲಿ ಮರುಸಂಘಟನೆಯಾಗಿದ್ದು (ಮೈಸೂರು) ಕರ್ನಾಟಕ ಎಂಬ ರಾಜ್ಯ. ಆದಿನ ನಾವು ಸಂಭ್ರಮಿಸುವುದು ಕರ್ನಾಟಕದ ಉದಯದ ಸಂತೋಷವನ್ನು. ಆ ಕಾರಣಕ್ಕೆ ಅದು ಕರ್ನಾಟಕ ರಾಜ್ಯೋತ್ಸವವಾಗಬೇಕು, ಕನ್ನಡ ರಾಜ್ಯೋತ್ಸವವಲ್ಲ. ಕನ್ನಡ ರಾಜ್ಯ ಎಂದು ಭಾರತ ಸಂವಿಧಾನದಲ್ಲಿ ಯಾವುದೂ ಇಲ್ಲ. ಕರ್ನಾಟಕ ಎಂದಿದೆ. ಇದರಲ್ಲಿ ಅನೇಕ ಧರ್ಮ, ಜಾತಿ, ಸಂಸ್ಕೃತಿ, ಭಾಷೆ ಇತ್ಯಾದಿಗಳ ಜನ ವಾಸಿಸುತ್ತಾರೆ. ನವೆಂಬರ್ ೧ ಇವರೆಲ್ಲರನ್ನೂ ಒಳಗೊಂಡಂತೆ ಉತ್ಸವಿಸಬೇಕು. ಭಾಷೆಯನ್ನು, ಅದರಲ್ಲಿ ಒಂದು ಭಾಷೆಯನ್ನು ಆಧರಿಸಿ ರಾಜ್ಯೋತ್ಸವವನ್ನು ಹೈಜ್ಯಾಕ್ ಮಾಡಿಬಿಟ್ಟರೆ, ಉಳಿದ ಭಾಷೆ, ಸಂಸ್ಕೃತಿ, ಧರ್ಮ ಇತ್ಯಾದಿಗಳನ್ನು ಹೊರಗಿಟ್ಟ ಹಾಗೆ ಆಗುತ್ತದೆ, ಸಂಕುಚಿತ ದೃಷ್ಟಿಯಾಗುತ್ತದೆ.
ಕನ್ನಡದ ಖುಷಿಗಾಗಿ ನಾವು ಪ್ರತಿವರ್ಷ ಒಂದು "ಭಾಷೋತ್ಸವ", "ಕನ್ನಡೋತ್ಸವ" ಮಾಡೋಣ. ಆಗ ಕನ್ನಡದ ಹಿರಿಮೆ ಗರಿಮೆಯನ್ನು ನೆನೆದು ಸಂಭ್ರಮಿಸಬಹುದು. ಕನ್ನಡ ಭಾಷೆಯ ಕಲಿಕೆ, ಬೋಧನೆ, ಮಾಧ್ಯಮ ಇತ್ಯಾದಿಗಳ ಕುರಿತು ಚಿಂತನೆಯನ್ನು ಮಾಡಬಹುದು.

ಆದರೆ, ನವೆಂಬರ್ ೧ರಂದು ನಾವು "ಕನ್ನಡ ರಾಜ್ಯೋತ್ಸವ" ಆಚರಿಸೋಣ.
ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ

Manjunatha Kollegala said...

ಅಬ್ದುಲ್ ರೆಹ್ಮಾನ್ ಪಾಷಾ ಅವರೇ, ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಇದು ಬಹಳ ಹಳೆಯ ಲೇಖನ, ಹದಿನಾರು ಹದಿನೇಳು ವರ್ಷಗಳ ಹಿಂದೆ ಬರೆದದ್ದು. ಆಗ್ಗೆ ನನಗಿನ್ನೂ ಈಗಿನ ಸಮಗ್ರದೃಷ್ಟಿ ದಕ್ಕಿರಲಿಲ್ಲವೆಂಬುದನ್ನು ಒಪ್ಪುವೆ. ಕರ್ನಾಟಕದಲ್ಲಿ ಕನ್ನಡದ ಸೋದರಭಾಷೆಗಳಾದ ತುಳು, ಕೊಡವ, ಕೊಂಕಣಿಗಳಿಗೂ ಗೌರವದ ಸ್ಥಾನ ಸಲ್ಲಬೇಕೆಂಬುದರಲ್ಲಿ ಎರಡು ಮಾತಿಲ್ಲ, ಈ ದಿಸೆಯಲ್ಲಿ ಕರ್ನಾಟಕದ ಆಡಳಿತವು ಮಾಡಿರುವ ಸಾಧನೆ ನಿರುತ್ಸಾಹಕರವೆಂಬುದನ್ನು ಬೇಸರದಿಂದಲೇ ಒಪ್ಪಬೇಕಾಗಿದೆ.

ಇದನ್ನು ಸ್ಪಷ್ಟಪಡಿಸಿದ ಮೇಲೆ ನಿಮ್ಮ 'ಕರ್ನಾಟಕ-ಕನ್ನಡ' ವಿಷಯದ ಬಗ್ಗೆ ಸ್ವಲ್ಪ ವಿವರಣೆ ಅಗತ್ಯವೆನಿಸುತ್ತದೆ. ಭಾರತವು ರಾಜ್ಯಗಳಾಗಿ ವಿಭಜನೆಗೊಂಡದ್ದೇ ಭಾಷಾವಾರು ಆಧಾರದ ಮೇಲೆ ಎಂಬುದು ತಿಳಿದ ವಿಷಯವೇ. ಎಂದ ಮೇಲೆ "ಕನ್ನಡ ರಾಜ್ಯ ಎಂದು ಭಾರತ ಸಂವಿಧಾನದಲ್ಲಿ ಯಾವುದೂ ಇಲ್ಲ. ಕರ್ನಾಟಕ ಎಂದಿದೆ" ಎನ್ನುವ ತಕರಾರಿಗೆ ಏನರ್ಥ? ಸಂವಿಧಾನದಲ್ಲಿ ಯಾವ ರಾಜ್ಯಕ್ಕೂ ಅದರ ಅಧಿಕೃತಭಾಷೆ ಇಂಥದ್ದು ಎಂದು ನಮೂದಿಸಿಲ್ಲ. ಹಾಗಿದ್ದರೆ ತಮಿಳುನಾಡಿನಲ್ಲಿ ಸಂವಿಧಾನದ ಪ್ರಕಾರ ತಮಿಳು ಅಧಿಕೃತಭಾಷೆಯಲ್ಲ ಎನ್ನೋಣವೇ? ರಾಜ್ಯವೊಂದು ತನ್ನ ಅಧಿಕೃತಭಾಷೆಯನ್ನು ತನ್ನ ರಾಜ್ಯದಲ್ಲಿ ಇರುವ ಭಾಷಾಸಮುದಾಯದ ಬಾಹುಳ್ಯದ ಮೇಲೆ ನಿರ್ಧರಿಸುತ್ತದೆ. ತಮಿಳುನಾಡು ತಮಿಳನ್ನು ಅಧಿಕೃತಭಾಷೆಯಾಗಿ ಮಾಡಿಕೊಂಡಿದೆ, ಆಂಧ್ರ (ಮತ್ತು ತೆಲಂಗಾಣ) ತೆಲುಗನ್ನು, ಕೇರಳ ಮಲಯಾಳವನ್ನು, ಹಾಗೇ ಕರ್ನಾಟಕವೂ ತನ್ನ ರಾಜ್ಯದಲ್ಲಿ ಕನ್ನಡಿಗರ ಸಂಖ್ಯಾಬಾಹುಳ್ಯವನ್ನಾಧರಿಸಿ ಕನ್ನಡವನ್ನು ಅಧಿಕೃತಭಾಷೆಯನ್ನಾಗಿಸಿಕೊಂಡಿದೆ. ಭಾಷಾವಾರು ಪ್ರಾಂತ್ಯದ ಉದ್ದೇಶವೇ ಇದು. ಅಥವಾ ಸಂವಿಧಾನದಲ್ಲಿ 'ತಮಿಳು'ನಾಡು ಇದೆ, 'ಕನ್ನಡ'ನಾಡು ಇಲ್ಲ ಬದಲಿಗೆ ಕರ್ನಾಟಕ ಎಂದಿದೆ ಎಂಬುದು ನಿಮ್ಮ ವಾದವಾದರೆ ಅದು ಖಂಡಿತಾ ಆಧಾರವಿಲ್ಲದ ವಾದ. ತಮಗೆ ತಿಳಿದಿರಬೇಕು, ಕರ್ನಾಟಕವೆಂಬ ಹೆಸರೇ ಕನ್ನಡ ಎಂಬುದರಿಂದ ಬಂದದ್ದು. ಕರ್+ನಾಡು/ನಾಟ್ಟ್ = ಕನ್ನಾಡು/ಕನ್ನಾಟ್ಟ್ (ಆದಿದ್ರಾವಿಡದಲ್ಲಿ ಟ ಡ ವ್ಯತ್ಯಾಸ ಕಡಿಮೆ, ತಮಿಳಿನಲ್ಲಿ ಈಗಲೂ ಅದನ್ನು ನೋಡುತ್ತೇವೆ), ಈ ಕನ್ನಾಡಿನಲ್ಲಿ ಆಡುವ ನುಡಿ ಕನ್ನಾಡ/ಕನ್ನಡ. ಕರ್ನಾಡಿನವರು ಕರ್ನಾಡರು. ನಾಡು>ನಾಟ್ಟ್ ಆದ್ದರಿಂದ ಕರ್ನಾಡ > ಕರ್ನಾಟ. ಇದೇ ಸಂಸ್ಕೃತದಲ್ಲಿ ಕರ್ಣಾಟವಾಗಿರುವುದು (ರಕಾರದ ಮುಂದಿನ ನಕಾರವು ಣಕಾರವಾಗುವುದು ಸಂಸ್ಕೃತದ ಭಾಷಾನಿಯಮ). ಈ ಭಾಗದ ಜನರಿಗೆ ಕರ್ಣಾಟಾಃ ಎಂಬ ನಿರ್ದೇಶನ ಮಹಾಭಾರತದಲ್ಲೂ ಸಿಗುತ್ತದೆ (ಅದಕ್ಕೆ 'ಕರ್ಣೇಷು ಅಟತಿ ಇತಿ ಕರ್ಣಾಟಃ' ಎನ್ನುವ ವ್ಯುತ್ಪತ್ತಿಯನ್ನು ಆಮೇಲೆ ಹೊಸೆದದ್ದು, ಅದು ಅನಗತ್ಯ). ಆದ್ದರಿಂದ ಪದದ ಅರ್ಥದ ದೃಷ್ಟಿಯಿಂದ ಕರ್ನಾಟಕ ಎಂಬುದು ಕನ್ನಡನಾಡೇ, ಅದರಲ್ಲಿ ಅನುಮಾನ ಬೇಡ. ಮತ್ತಿದು ಇವತ್ತು ನೆನ್ನೆಯ ಪರಿಕಲ್ಪನೆಯೂ ಅಲ್ಲ, "ಕಾವೇರಿಯಿಂದಮಾ ಗೋದಾವರಿವರವಿರ್ದ ನಾಡದಾ ಕನ್ನಡದೊಳ್" ಎಂದು ಸಾವಿರ ವರ್ಷಗಳ ಹಿಂದೆ ಕನ್ನಡನಾಡಿನ ಎಲ್ಲೆಯನ್ನು ಗುರುತಿಸಿದ ಕವಿರಾಜಮಾರ್ಗಕಾರನೇ ತನ್ನ ಕಾಲಕ್ಕೇ ಪ್ರಾಚೀನವಾಗಿದ್ದ ಅವನಕಾಲದ 'ಹಳಗನ್ನಡ'ವನ್ನೂ, ತನ್ನ ಕಾಲದ 'ಪಲವುಂ ಕನ್ನಡಂಗಳ'ನ್ನೂ ವರ್ಣಿಸಿದ್ದಾನೆ. ಕರ್ನಾಟಕವು 'ಕನ್ನಡ ನಾಡು' ಎಂಬುದಕ್ಕೆ ಇನ್ನೂ ಪುರಾವೆಯ ಅಗತ್ಯವಿಲ್ಲ. ಈ 'ಕನ್ನಡನಾಡು' ಕೇವಲ ಭಾಷಿಕಪ್ರಾಂತ್ಯವೇ ಹೊರತು ರಾಜಕೀಯಪ್ರಾಂತ್ಯವಾಗಿರಲಿಲ್ಲವೆಂಬುದೇನೋ ನಿಜ - ರಾಜಕೀಯವಾಗಿ, ಕಾಲದಿಂದ ಕಾಲಕ್ಕೆ ನಾಡಿನ ಬೇರೆಬೇರೆ ಭಾಗಗಳನ್ನು ಬೇರೆ ಬೇರೆ ದೊರೆಗಳು ಆಳಿಕೊಂಡು ಬಂದಿದ್ದಾರೆ, ಮತ್ತು ಆಯಾ ಪ್ರಾಂತ್ಯಗಳ ಭಾಷಾಪ್ರಭೇದಗಳಿಗೆ ತಕ್ಕ ಪ್ರಾಮುಖ್ಯ ಕೊಡುತ್ತಲೇ ಬಂದಿದ್ದಾರೆ - ತುಳು, ಕೊಡವ ಮುಂತಾದ ಭಾಷೆಗಳಿಗೂ ಆಯಾ ನಾಡುಗಳ ಪ್ರಭುತ್ವದಿಂದ ಸಲ್ಲಬೇಕಾದ ಪ್ರಾಶಸ್ತ್ಯ ಸಲ್ಲುತ್ತಲೇ ಬಂದಿದೆ. ತುಳು-ಕೊಡವ-ಕೊಂಕಣಿಗಳೂ ಸೇರಿದಂತೆ ಇಡೀ ಕನ್ನಡ ತಬ್ಬಲಿಯಾದದ್ದು ಬ್ರಿಟಿಷರ ಕಾಲದಲ್ಲಿ, ವಿವಿಧ ಭಾಷಾಪ್ರಾಂತ್ಯಗಳ ಅಡಿಯಲ್ಲಿ ಹಂಚಿಹೋದಾಗ. ಮುಂಬಯಿ ಕನ್ನಡವನ್ನು ಮುಂಬಯಿ ಆಡಳಿತ ಅರೆಜೀವ ಗೊಳಿಸಿತು, ಹೈದರಾಬಾದು ಕನ್ನಡವನ್ನು ನಿಜಾಮನ ಆಡಳಿತ ನಿತ್ರಾಣಗೊಳಿಸಿತು, ತಮಿಳುಗನ್ನಡವನ್ನು ಮದ್ರಾಸು ಆಡಳಿತ ಮಲಗಿಸಿ ಹಾಕಿತು. ಮೈಸೂರು ಕನ್ನಡವೊಂದು ಮೈಸೂರು ದೊರೆಗಳ ಆಶ್ರಯದಲ್ಲಿ ಬಾಳಿ ಬದುಕಿತು. ಈಗ ಇವೆಲ್ಲವೂ ಒಂದು ಆಡಳಿತದಡಿಯಲ್ಲಿ ಬಂದಿರುವುದರಿಂದ, ತುಳು-ಕೊಡವ-ಕೊಂಕಣಿಗಳೂ ಸೇರಿದಂತೆ ಈ ನೆಲದ ಎಲ್ಲ ಭಾಷೆಗಳೂ ತಂತಮ್ಮ ಪ್ರಾಂತ್ಯಗಳಲ್ಲಿ ಗೌರವದಿಂದ ಬಾಳುವ ಅವಕಾಶವಿರಬೇಕೆಂಬುದರಲ್ಲಿ ಅನುಮಾನವಿಲ್ಲ. ಆದರೆ ನನ್ನ ತಕರಾರಿರುವುದು "ಕನ್ನಡ ರಾಜ್ಯ ಎಂಬುದೇ ಯಾವುದೂ ಇಲ್ಲ. ಕರ್ನಾಟಕ ಎಂದಿದೆ" ಎಂಬ ನಿಮ್ಮ ಅಭಿಪ್ರಾಯಕ್ಕಷ್ಟೇ. ತೊಂದರೆಯಿರುವುದು ಕನ್ನಡ ಎಂಬುದನ್ನು "ಒಂದು ಭಾಷೆ" ಎಂದು ನೋಡುವ ಸಂಕುಚಿತ ದೃಷ್ಟಿಕೋನದಲ್ಲಿ. ಹಾಗಾದಾಗ ಮಾತ್ರ ಕನ್ನಡರಾಜ್ಯೋತ್ಸವವು ಕನ್ನಡವೆಂಬ ಒಂದು ಭಾಷೆಯ ಉತ್ಸವವಾಗಿಬಿಡುತ್ತದೆ. ಅಲ್ಲ - ಕನ್ನಡವೆಂಬುದು ಕೇವಲ ಭಾಷೆಯಲ್ಲ, ಅದು ಸ್ವತಃ ಈ ನೆಲವೇ. ಕನ್ನಡದ ಹಲವು ಪ್ರಕಾರಗಳು ಹೇಗೆ ಈ ನೆಲದ್ದೇ ಭಾಷೆಯೋ ಹಾಗೇ ತುಳು ಕೊಂಕಣಿಗಳೂ ಈ ಕನ್ನಡನೆಲದ್ದೇ ಭಾಷೆಗಳು, ಈ ಸಂಸಾರದ್ದೇ ಭಾಗಗಳು. ಈ ದೃಷ್ಟಿಯಿದ್ದಾಗ ಮಾತ್ರ ಕನ್ನಡ, ತುಳು, ಕೊಡವ, ಕೊಂಕಣಿ ಎಲ್ಲವೂ ನಮ್ಮದೇ ಎಂಬ ಭಾವ ಬರಲು ಸಾಧ್ಯ. ಮತ್ತು ಅದು ಕೇವಲ ಬಾಯಿಮಾತಿನಲ್ಲಿದ್ದರೆ ಸಾಲದು, ಕರ್ನಾಟಕದ ಆಡಳಿತಗಳು ಕಾಲದಿಂದ ಕಾಲಕ್ಕೆ ಈ ಭಾಷೆಗಳಿಗೆ ತೋರುತ್ತ ಬಂದಿರುವ ಮಲತಾಯಿ ಧೋರಣೆ ತೊಲಗಬೇಕು, ಇದನ್ನು ಯಾವ ಅಭಿಮಾನಿ ಕನ್ನಡಿಗ ಕೂಡ ಬೆಂಬಲಿಸುತ್ತಾನೆ.

Manjunatha Kollegala said...

ಇವಿಷ್ಟು ಭಾಷೆಯ ವಿಷಯವಾಯಿತಲ್ಲ, ಆದರೆ "ಒಂದು ಭಾಷೆಯನ್ನು ಆಧರಿಸಿ ರಾಜ್ಯೋತ್ಸವವನ್ನು ಹೈಜ್ಯಾಕ್ ಮಾಡಿಬಿಟ್ಟರೆ, ಉಳಿದ ಭಾಷೆ, ಸಂಸ್ಕೃತಿ, ಧರ್ಮ ಇತ್ಯಾದಿಗಳನ್ನು ಹೊರಗಿಟ್ಟ ಹಾಗೆ ಆಗುತ್ತದೆ" ಎನ್ನುವ ನಿಮ್ಮ ಮಾತು ನನಗೆ ಅರ್ಥವಾಗಲೇ ಇಲ್ಲ. ಇಡೀ ಲೇಖನವನ್ನು ಮತ್ತೊಮ್ಮೆ ಓದಿದೆ, ಆದರೆ ಇಲ್ಲಿ ಧರ್ಮ ಸಂಸ್ಕೃತಿಗಳಿಂದ ಹೈಜ್ಯಾಕ್ ಮಾಡಿದ್ದೆಲ್ಲಿ ಎಂಬುದು ನನಗೆ ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಕನ್ನಡರಾಜ್ಯೋತ್ಸವ ಕನ್ನಡನಾಡಿನ ಉತ್ಸವವೇ ಹೊರತು ಯಾವುದೋ ಜಾತಿ-ಧರ್ಮ ಮತ್ತವುಗಳಿಗೆ ಸಂಬಂಧಿಸಿದ ಸಂಸ್ಕೃತಿಯ ಆಚರಣೆ ಅಲ್ಲ, ಮತ್ತು ನಾನು ಹಾಗೆಲ್ಲೂ ಬಿಂಬಿಸಿಯೂ ಇಲ್ಲ. ಶಂಕರ-ರಾಮಾನುಜ-ಮಧ್ವರಾಗಲೀ, ಬಹಮನಿ-ಹೈದರ್-ಟಿಪ್ಪೂ ಆಗಲೀ ಕನ್ನಡನಾಡಿನ ಕಲೆ, ಸಂಸ್ಕೃತಿ, ಭಾಷೆಯ ಶ್ರೀಮಂತಿಕೆಗೆ ಏನಾದರೂ ಕೊಡುಗೆ ನೀಡಿದ್ದಿದ್ದರೆ ದಯವಿಟ್ಟು ತಿಳಿಸಿ, ಅವನ್ನೂ ಸ್ಮರಿಸೋಣ.

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ said...

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.