Sunday, October 2, 2011

ಸ್ತನ ದೊಡ್ಡತನದಲ್ಲಿ ಶೋಭಿಸಿಹುದು


"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬಳಸಿ ಸಮಸ್ಯೆಯನ್ನು ಪೂರ್ತಿಗೊಳಿಸುವ  ಸವಾಲಿತ್ತು.  ಅದಕ್ಕಾಗಿ ರಚಿಸಿದ್ದು ಈ ಚೌಪದಿಗಳು:

ಮನೆಗಲ್ಲದೆಯೆ ನೆಂಟ ಮಠಕೆ ಬರುವನೆ ಪೇಳು
ಒಣಮರಕೆ ಬಹುದೆ ಕೋಗಿಲೆಯು ಗಿಳಿವಿಂಡು
ಮನದಣಿಯೆ ಉಣಬಡಿಪ ಸಿರಿವನೆಯು ಮನೆತನ-
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ಇನಸುತಗೆ ತಿಳಿದೊಡೇಂ ತನ್ನ ಹುಟ್ಟಿನ ಹಿರಿಮೆ
ಅನುಮಾನವಿನಿತಿಲ್ಲ ಜೀಯನೊಲವಿನೊಳು
ಧನವದುವೆ ಕೌರವನ ಮಾನಧನ ನಂಬಿಕ-
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ವನಕೆ ಹೆಮ್ಮರ ಸೊಗಸು ಗಿರಿಗಾ ಶಿಖರ ಸೊಗಸು
ಮನೆಗೆ ಹಿರಿಗಂಬದಾಲಂಬ ಸೊಗಸು
ಇನಿವೆಣ್ಣಿನೊಡಲಿಗಾಲಂಬವೆನೆ ಚೆಲುವಿನಾ
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ಜನಕಗಲ್ಲದೆ ಶುನಕಕಹುದೆ ರಾಮನ ನಂಟು
ಘನಶೈಲಿ ಶೂಲಿ ಹುಲು ಮೊರಡಿ ಬಯಸುವನೇ
ವನಮಾಲಿಯಲ್ತೆ ಸಾಗರನಳಿಯ?ಹಿರಿನಂಟ-
ತನ ದೊಡ್ಡತನದಲ್ಲಿ ಶೋಭಿಸಿಹುದು

ಕೊನೆಯ ಚೌಪದಿ “ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” ಎಂದು ಬಳಸಿದರೆ ಮೂರನೆಯ ಸಾಲಿನ ಛಂದಸ್ಸು ಕೆಡುತ್ತದೆಯಾದ್ದರಿಂದ ಅದು ಸಮಸ್ಯೆಯನ್ನು ಯಥಾವತ್ತಾಗಿ ಪೂರೈಸುವುದಿಲ್ಲ, ಆದರೂ ಉಳಿದ ಸಾಲುಗಳು ಬಂದುವಲ್ಲ ಎಂದು ಪೋಸ್ಟಿಸಿದೆ ಅಷ್ಟೇ.