Wednesday, December 29, 2021

ಮಾತೆಂಬ ಜ್ಯೋತಿರ್ಲಿಂಗ

ಬಹಳ ಕಾಲ ಇದರ ಬಗ್ಗೆ ಬರೆಯಬೇಕೆಂದು ಯೋಚಿಸುತ್ತಿದ್ದೆ.  ಹಂಸಲೇಖ ಬಿರುದಾಂಕಿತರಾದ ಶ್ರೀಮಾನ್ ಗಂಗರಾಜು ಅವರು ಮೊನ್ನೆ ಈ ವಚನವನ್ನು ತಮ್ಮ ಸಮರ್ಥನೆಗೆ ಬಳಸಿಕೊಂಡ ರೀತಿ ನೋಡಿ ಬರೆಯಲೇಬೇಕೆಂಬ ಒತ್ತಡ ಮೂಡಿತು. 

ಅವರೇನೋ ಮುತ್ತಿನ ಹಾರದಂತಿರಬೇಕು ಎಂದು ಮಾತಾಡತೊಡಗಿದರೆ (ಬರೆದುಕೊಂಡು ಬಂದಿಲ್ಲದುದರಿಂದ) ಏನೇನೋ ಆಗಿ, ಅದರೊಳಗಿನ ಮಾಣಿಕ್ಯದ ದೀಪ್ತಿ, ಸ್ಫಟಿಕದ (ಸತ್ಯದ) ಸಲಾಕಿಗಳೆಲ್ಲ ಕಂಡುಬಿಟ್ಟುವಂತೆ - ಅದೇ, ವಯೋವೃದ್ಧ ದಿವಂಗತ ಸನ್ಯಾಸಿಯೊಬ್ಬರ ಆಹಾರಕ್ರಮದ ಬಗ್ಗೆ ಕೆಲದಿನಗಳ ಹಿಂದೆ ಲೇವಡಿ ಮಾಡಿದ್ದ ವಿಷಯ ಅವರು ಹೇಳಿದ್ದು.  ಆ ವಿಷಯಕ್ಕಾಗಲೀ, ಅವರ ಮಾಲುಬಾಲು ಸಾಹಿತ್ಯಕ್ಕಾಗಲೀ 'ಅಹುದಹುದು' ಎಂದು ತಲೆಹಾಕುವ ಲಿಂಗ ಯಾವುದೋ ನಮಗೆ ತಿಳಿಯದು.  ಆದರೆ ವಚನದಲ್ಲಿ ಬಸವಣ್ಣನವರು ನಿರ್ದೇಶಿಸಿದ 'ಅಹುದಹುದೆ'ನ್ನುವ ಲಿಂಗ ಮಾತ್ರ ಆ ಲಿಂಗವಲ್ಲವೆಂಬುದು ನಮ್ಮ ಅರಿವು.  ಅದೇನೇ ಇರಲಿ, ಈ ನೆಪದಲ್ಲಾದರೂ ಈ ಉಜ್ವಲವಾದ ವಚನವನ್ನೊಮ್ಮೆ ಮತ್ತೆ ಮನನ ಮಾಡಿಕೊಳ್ಳಬಹುದಾದರೆ ಅದು ಒಳ್ಳೆಯದೇ ಅಲ್ಲವೇ?  ಅದಕ್ಕಾಗಿ ಗಂಗರಾಜರಿಗೆ ನಮ್ಮ ಕೃತಜ್ಞತೆ ಸಲ್ಲಲೇಬೇಕು.

ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕದ ದೀಪ್ತಿಯಂತಿರಬೇಕು. ನುಡಿದಡೆ ಸ್ಫಟಿಕದ ಶಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯಾ.

ಅಣ್ಣನವರ ಈ ಸುಪ್ರಸಿದ್ಧವಚನವನ್ನು ಕೇಳದವರಾರು?  ಅದನ್ನು ಉದಾಹರಿಸದ ಹಿರಿಯರಿಲ್ಲ, ತಮ್ಮ ಮಾತಿನಲ್ಲಿ ಬಳಸಿ ಟೀಆರ್ಪಿ ಬೇಳೆ ಬೇಯಿಸಿಕೊಳ್ಳದ ಸಾಹಿತಿ-ರಾಜಕಾರಣಿಯಿಲ್ಲ.  ಮಹಾಜ್ಞಾನಿಗಳಿಂದ ಹಿಡಿದು ಅಪಾಪೋಲಿಗಳವರೆಗೆ ಎಲ್ಲರಲ್ಲೂ ಅವರವರದೇ ಕಾರಣಗಳಿಗಾಗಿ ಜನಪ್ರಿಯವಾದ ವಚನವಿದು.  ಆದರೆ ಇದರ ತಾಕತ್ತು ನೋಡಿ - ಬಳಸಿದವರು ಯಾರೇ ಇರಲಿ, ಯಾವ ಗದ್ದಲದೊಡನೆಯೇ ಬಳಸಿರಲಿ, ಆ ಗದ್ದಲವನ್ನೂ ಮೀರಿ ಪ್ರಜ್ಞೆಯನ್ನು ತಟ್ಟುತ್ತದೆ, ಅದರ ಉಜ್ವಲಪ್ರಭೆ ಕಣ್ಸೆಳೆಯುತ್ತದೆ - ಏಕೆಂದರೆ "ಮಾತೆಂಬುದು ಜ್ಯೋತಿರ್ಲಿಂಗ" ಎಂಬ ಹಿರಿಯರಿವಿನಿಂದ ಬಂದ ಕಾಣ್ಕೆ ಅದು, ಸ್ವಯಂಪ್ರಕಾಶವುಳ್ಳದ್ದು, ಸ್ವಯಂಪಾವಿತ್ರ್ಯವುಳ್ಳದ್ದು.  ಅದಕ್ಕೇ ಎಂತಹ ನಾಲಿಗೆಯ ಮೇಲೇ ನಲಿದರೂ ಅದರ ತೇಜ ಮಸಗುವುದಿಲ್ಲ, ಚುರುಕು ಕುಂದುವುದಿಲ್ಲ.   ಬದಲಿಗೆ ಹಲವರನ್ನು ಚಿಂತನೆಗೆ ಹಚ್ಚುತ್ತದೆ, ಹಲವು ಪ್ರಜ್ಞೆಗಳಲ್ಲಿ ಪ್ರತಿಫಲಿಸುತ್ತದೆ, ಪ್ರಜ್ವಲಿಸುತ್ತದೆ.

ಈ ವಚನದ ಸೊಗಸನ್ನು ನೋಡಿ.  ಒಂದು ನುಡಿ - ಅದು ಹೇಗಿರಬೇಕೆಂಬುದಕ್ಕೆ ಹಲವು ಉಪಮೆಗಳು, ಸೋಪಾನಕ್ರಮದಲ್ಲಿ ಒಂದು ಇನ್ನೊಂದಕ್ಕಿಂತ ಉಜ್ವಲಗೊಳ್ಳುತ್ತಾ ಹೋಗಿ ಕೊನೆಗೆ ಅತ್ಯುನ್ನತವಾದ ಪರಿಣಾಮದಲ್ಲಿ ವಿಶ್ರಾಂತಿ ಹೊಂದುತ್ತದೆ.  ಒಂದು ವಾಕ್ಯವನ್ನೋ ಪದವನ್ನೋ ಅಕ್ಷರವನ್ನೋ ತೆಗೆದು ಹಾಕುವಂತಿಲ್ಲ - ವಚನಗಳ ಸೊಗಸೇ ಹಾಗೆ.  ಅದರಲ್ಲೂ ಈ ವಚನವಂತೂ ಸ್ವೋಪಜ್ಞವಾದುದು, ತನ್ನ ಮಾತಿಗೆ ತಾನೇ ಉದಾಹರಣೆಯಾಗಿ ನಿಲ್ಲುವಂಥದು.

ಅಣ್ಣನವರ ಈ ವಚನವನ್ನು ಪರಿಭಾವಿಸುವುದಕ್ಕೂ ಮುಂಚೆ, ಆ ವಚನ ನಮ್ಮ ಮುಂದಿಡುವ ಪ್ರಶ್ನೆಯನ್ನು ಮೊದಲು ಗಮನಿಸಬೇಕು.  ಈ ವಚನ ಹೇಳುತ್ತಿರುವುದು "ನುಡಿದರೆ" ಹೇಗಿರಬೇಕು ಎಂಬುದನ್ನು ಕುರಿತು ತಾನೆ?  ನುಡಿದರೆ - ನುಡಿ ಹೀಗಿರಲು ಸಾಧ್ಯವಿಲ್ಲದಿದ್ದರೆ?  ಈ ವಿಷಯದಲ್ಲಿ ವಚನದ್ದು ದಿವ್ಯಮೌನ.  ಆ ಮೌನವೇ ಆ ಪ್ರಶ್ನೆಗೆ ಉತ್ತರ - ಸಾಧ್ಯವಿಲ್ಲದಿದ್ದರೆ? ತೆಪ್ಪಗಿರು.  ಒಂದರ್ಥದಲ್ಲಿ ಈ ವಚನವು ಆಡಿ ತೋರಿಸಿರುವುದಕ್ಕಿಂತ ಆಡದೇ ತೋರಿಸಿರುವುದೇ ಅಗಾಧವಾದದ್ದು - ಅದನ್ನರಿಯದೇ ವಚನ 'ಆಡಿದ್ದನ್ನು' ಮಾತ್ರ ವಿಶ್ಲೇಷಿಸುವುದು ಮೂರ್ಖತನವೇ ಸರಿ.  ಅಲ್ಲಮ ಒಂದೆಡೆ ಹೇಳುತ್ತಾನಲ್ಲ "ಅರಿಯಬಾರದ ಘನವನರಿತವರು ಅರಿಯದಂತಿಪ್ಪರು" - ಏಕೆಂದರೆ ಅದು ಮಾತಿಗೆ ಮೀರಿದ್ದು, ಹೇಳುವುದಕ್ಕೂ ಕೇಳುವುದಕ್ಕೂ ಅದು ಸಂದರ್ಭವೇ ಅಲ್ಲ. ಇದೇ ಅಲ್ಲಮಪ್ರಭುದೇವರು ಇನ್ನೊಂದು ಕಡೆ ಹೇಳುತ್ತಾರೆ "ವಾಕಿನಿಂ ಪರಬ್ರಹ್ಮವ ನುಡಿವ ಕುತರ್ಕಿಗಳೆಡೆಯಲ್ಲಿ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು" 

ಇದು ಅರಿತವರ ಮಾತಾಯಿತು; ಇನ್ನು ಅರಿಯದವರೋ?  ಅಲ್ಲಿ ಮಾತಿಗೆ ಕೆಲಸವೇ ಇಲ್ಲ.  ಬಾಯಿಬಿಟ್ಟು ಬಣ್ಣಗೇಡಾದರೆ ಪ್ರಯೋಜನವೇನು?  ತುಂಬಿದ ಕೊಡ ತುಳುಕುವುದಿಲ್ಲ, ಬರಿಗೊಡಗಳೂ ತುಳುಕುವುದಿಲ್ಲವಷ್ಟೇ? ಒಂದು ಹಳೆಯ ಜೋಕ್ ನೆನಪಾಗುತ್ತದೆ - I know only my mother tongue but I can keep shut in ten other languages (ನನಗೆ ನನ್ನ ತಾಯ್ನುಡಿಯಷ್ಟೇ ಗೊತ್ತು, ಆದರೆ ಇನ್ನೂ ಹತ್ತು ಭಾಷೆಗಳಲ್ಲಿ ನಾನು ತೆಪ್ಪಗಿರಬಲ್ಲೆ).  ಹೀಗೆ ತೆಪ್ಪಗಿದ್ದುಬಿಡುವುದೇ ಅನೇಕವೇಳೆ ಘನತೆಯನ್ನು ತಂದು ಕೊಡುತ್ತದೆ.  ತೆಲುಗಿನಲ್ಲಿ ಒಂದು ಗಾದೆಯಿದೆ - "ಅಯ್ಯವಾರಿಕಿ ಜ್ಞಾನಮೂ ಲೇದು ಗರ್ವಮೂ ಲೇದು" - ಜ್ಞಾನಮು ಲೇಕಪೋತೆ ಏಮಿ, ಗರ್ವಮು ಲೇದು ಕಾದಾ? (ಜ್ಞಾನವಿಲ್ಲದಿದ್ದರೆ ಏನು, ಗರ್ವವಂತೂ ಇಲ್ಲವಲ್ಲ) ಎಂದು ಸಮಾಧಾನಪಟ್ಟುಕೊಳ್ಳಬಹುದಲ್ಲ.  ಇಷ್ಟಕ್ಕೂ ಕೊಡದ ಖಾಲಿತನ ಹೀನಾಯವೇನಲ್ಲ.  ಖಾಲಿಯಾಗುವುದೇ ತುಂಬಿಸುವುದರ ಮೊದಲ ಹೆಜ್ಜೆ - ಖಾಲಿಯಿದ್ದೇನೆಂಬ ಅರಿವು ಇದಕ್ಕೆ ಸಾಧಕ.  ಆದರೆ ಆ ಅರಿವು ಕೀಳರಿಮೆಯಾದರೆ ಮಾತ್ರ ಮಹಾಕಷ್ಟ.  ಖಾಲಿ ಕೊಡವನ್ನು ನೀರಿಗೊಯ್ಯಬೇಕು, ನೀರು ಸದ್ದಿಲ್ಲದೇ ಒಳತುಂಬುತ್ತಿದ್ದರೆ ಒಳಗಿನ ಗಾಳಿ ಸದ್ದಿಲ್ಲದೇ ಇನ್ನೊಂದು ಬದಿಯಿಂದ ಹೊರಹೋಗಬೇಕು - ಆಗ ಆ ಕೊಡ ಖಾಲಿಯಿದ್ದಾಗಲೂ ತುಂಬಿದ ಮೇಲೂ ತುಳುಕದೇ ಉಳಿದೀತು.  ಕೊಡದ ಬಾಯಿ ಬಹಳ ಚಿಕ್ಕದಾದರೆ ನೀರು ತುಂಬುವಾಗಲೂ ಡುಬುಡುಬು ಸದ್ದು ತಪ್ಪಿದ್ದಲ್ಲ.  ಎಷ್ಟೋ ವೇಳೆ ಪೂರ್ತಿ ತುಂಬುವುದೂ ಇಲ್ಲ.  ಈ ನೀರುತುಂಬುವುದಕ್ಕಿಂತ ಸುಲಭವೆಂದು ಖಾಲಿ ಕೊಡದೊಳಗೆ ಕಲ್ಲು ಹಾಕಿ ಆಡಿಸಿದರೆ?  ತುಂಬಿದ ಕೊಡದ ನೀರು ಕೊಡದೊಳಗೇ ಅಲ್ಲಾಡುತ್ತಾ ಹೊರಡಿಸುವ ಮೃದುಮಧುರವಾದ ಸಪ್ಪಳವೆಲ್ಲಿ, ಖಾಲಿ ಕೊಡದೊಳಗೆ ಕಲ್ಲಾಡಿಸುವ ಗಲಗಲ ಗಡಗಡ ಶಬ್ದವೆಲ್ಲಿ?  ಬಹುಶಃ ಈ ಎರಡನೆಯದು ಬಸವಣ್ಣನವರನ್ನು ಬಹಳ ಹೈರಾಣಗೊಳಿಸಿರಬಹುದು.  ಆ ಖಾಲಿ ಕೊಡಗಳ ಗದ್ದಲದ ಸಂತೆಯಲ್ಲಿ ಮೌನವನ್ನ, ಮೌನ ಮಥಿಸಿ ಹೊರಬಿದ್ದ ಮುತ್ತಿನ ಹಾರದಂತಹ ಮಾತಿನ ಬೆರಗನ್ನು ಕುರಿತು ಧ್ಯಾನಿಸುತ್ತಾರೆ ಬಸವಣ್ಣ. 

ಈ ಹೋಲಿಕೆಗಳು ಸೋಪಾನಕ್ರಮದಲ್ಲಿ (ಮೆಟ್ಟಿಲುಮೆಟ್ಟಿಲಾಗಿ) ಹೋಗುತ್ತವೆಂದು ನಾನು ಮೊದಲಲ್ಲಿ ಹೇಳಿದೆ.  ಅದನ್ನು ಈಗ ಗಮನಿಸೋಣ.

ಮೊದಲನೆಯದಾಗಿ ಮುತ್ತು ಅಪರೂಪದ ವಸ್ತು (ಕೃತಕ ಮುತ್ತುಗಳ ವಿಷಯ ಬಿಡಿ, ಹಾಗೆಯೇ ಬಣ್ಣದ ಮಾತುಗಳನ್ನೂ ಬಿಡಿ, ಅವು ನೋಡಿದೊಡನೆ ತಿಳಿದುಬಿಡುತ್ತದೆ).  ಎಲ್ಲೋ ಲಕ್ಷಾಂತರ ಹನಿಗಳಲ್ಲಿ ಒಂದು ಮುತ್ತಾಗುತ್ತದೆ.  ಇಂತಹ ಮುತ್ತುಗಳ ಹಾರವೊಂದನ್ನು ಮಾಡಬೇಕಾದರೆ ಒಂದೊಂದೇ ಮುತ್ತನ್ನು ಹೆಕ್ಕಿ ತರಬೇಕು.  ಇನ್ನು ಮುತ್ತಿನಲ್ಲಿ ಹಲವು ಬಣ್ಣಗಳಿರಬಹುದು, ಆದರೆ ಮುತ್ತಿನ ಹಾರವೆಂದರೆ ಕಣ್ಣಿಗೆ ಬರುವುದು ಶುಭ್ರವಾದ ಬಿಳಿಯ ಮುತ್ತೇ.  ಈ 'ಶುಭ್ರ'ತೆಯೇ ಮಾತಿನ ಮುಖ್ಯಗುಣ.  ಅದಕ್ಕೇ ವಾಗ್ದೇವಿಯನ್ನು "ಸರ್ವಶುಕ್ಲಾ" ಎಂದಿದ್ದಾನೆ ಲಾಕ್ಷಣಿಕ ದಂಡಿ; ಕವಿರಾಜಮಾರ್ಗಕಾರನ ಪ್ರಕಾರ ಆಕೆ "ವಿಶದವರ್ಣೆ" - ಸ್ವಚ್ಛವಾದ (ಬಿಳೀ) ಬಣ್ಣದವಳು.  "ಕುಂದೇಂದುತುಷಾರಹಾರಧವಳಾ" ಎಂದೇ ನಾವು ಸರಸ್ವತಿಯನ್ನು ಧ್ಯಾನಿಸುವುದು.  ಆಡುವ ಮಾತು ಆಕೆಯ ಪ್ರತೀಕವಾಗಿಲ್ಲದಿದ್ದರೆ ಹೇಗೆ?  ಆಡಬೇಕೇ ಅಂತಹ ಮಾತನ್ನು?  ಇನ್ನು ಮುತ್ತಿನ ಇನ್ನೊಂದು ಲಕ್ಷಣ ದುಂಡು - ದುಂಡೆಂದರೆ ದುಂಡೇ, ಒಂದಿನಿತೂ ಓರೆಕೋರೆಗಳಿಲ್ಲ.  ಆಡಿದ ಮಾತು ಹೀಗೆ ಸ್ಫುಟವಾಗಿರಬೇಕೆಂಬುದು ಒಂದು.  ಮತ್ತೆ, ಇಲ್ಲಿ ಅಣ್ಣನವರು ಮುತ್ತಿನಂತಹ ಮಾತಿನ ಬಗೆಗೆ ಹೇಳುತ್ತಿಲ್ಲ, ಮುತ್ತಿನ ಹಾರದಂತಹ ಮಾತಿನ ಬಗ್ಗೆ.  ಮಾತು ಮುತ್ತಿನಂತಿದ್ದರೇನಾಯಿತು, ಅದಕ್ಕೊಂದು ಸಂಬದ್ಧತೆ, ಪ್ರಮಾಣವಿಲ್ಲದಿದ್ದರೆ? ಮುತ್ತಿನಲ್ಲಿ ಬೇರೆಬೇರೆ ಗಾತ್ರದವಿವೆ.  ಅದನ್ನು ಸಮಂಜಸವಾಗಿ ಕಟ್ಟುವುದು ಅಕ್ಕಸಾಲಿಯ ಕೌಶಲ.  ಯಾವಯಾವುದೋ ಗಾತ್ರದ ಮುತ್ತುಗಳನ್ನು ಪೋಣಿಸಿ ಕೊರಳಿಗೆ ಹಾಕಿದರೆ ಅದು ಹಾರವಾಗುವುದಿಲ್ಲ, ಕೊರಳಿಗೆ ಭಾರವಾಗುತ್ತದಷ್ಟೇ.  ಉತ್ತಮವಾದ ಕೈಬರಹವನ್ನು "ಮುತ್ತು ಪೋಣಿಸಿದಂತೆ" ಎನ್ನುತ್ತೇವೆ.  ಮುತ್ತು ಪೋಣಿಸಿದ ಹಾರದ ಹೋಲಿಕೆಯೂ ಇದೇ ಆಶಯವನ್ನು ಹೊಂದಿದಂಥದ್ದು - ಮಾತಿನಲ್ಲಿ ಶುಭ್ರತೆ, ಹೊಳಪು, ಸಮಂಜಸತೆ, ಸಂಬದ್ಧತೆ. 

ಆಯಿತು, ಇಷ್ಟಿದ್ದರೆ ಸಾಕೇ?  ಇಂತಹ ಮುತ್ತಿನ ಹಾರದಂತಹ ಮಾತುಗಳನ್ನು ಯಾವುದೇ ಮಾತಿನ ಕಲೆಗಾರನೂ ಪಂಡಿತನೂ ನೂರು ಆಡಿಯಾನು.  ಅದನ್ನು ಆಭರಣದಂತೆ ಧರಿಸಿ ಮೆರೆಯಬಹುದಷ್ಟೇ - ಪ್ರಯೋಜನವೇನು?  ಮುತ್ತಿನಂತೆ ಮುದ್ದುಮುದ್ದಾದ ನೂರು ಪದಗಳನ್ನು ಜೋಡಿಸಿದರೆ ಏನು ಫಲ?  ಅರ್ಥದ ಬೆಳಕಿಲ್ಲದ ಬರೀ ಮಾತು ಎಷ್ಟು ಸುಂದರವಾಗಿದ್ದರೆ ಏನು ಪ್ರಯೋಜನ?  ಮಾಣಿಕದ ದೀಪ್ತಿಯಂತೆ ಅರ್ಥವನ್ನು ಬೆಳಗಿ ತೋರಿಸಬಲ್ಲುದಾದರೆ, ಅದೀಗ ಮಾತು.

ಮಾತು ಬೆಳಗಿ ಅರ್ಥದ ಬೆಳಕು ಹೊಮ್ಮುವುದೇನೋ ಸರಿಯೇ.  ಆ ಬೆಳಕಿನಲ್ಲಿ ಕಣ್ಣಿಗೆ ಕಾಣುವುದು ಕಂಡಿತು.  ಕಾಣದ್ದು? ಅಡಗಿದ್ದು?  ಹೊರಗಿನದನ್ನು ಬೆಳಗುವ ಮಾತಿಗೆ ತನ್ನನ್ನು ತಾನೇ ಬೆಳಗಿಸಿಕೊಳ್ಳುವ, ತನ್ನ ಒಳಗನ್ನು ತೆರೆದು ತೋರುವ ಶಕ್ತಿಯೂ ಇರಬೇಕಲ್ಲವೇ?  "ಮಾತು ಅರ್ಥ ಎರಡು ವ್ಯರ್ಥ ಸ್ವಯಂ ಅರ್ಥವಿರದಿರೆ" ಅಲ್ಲವೇ?  ಹಾಗೆ ಸ್ವಯಂ ಅರ್ಥವನ್ನು ಹೊಂದಿದ ಮಾತಿಗೆ ವಿವರಣೆ ಬೇಕಿಲ್ಲ, ಸಂಪೂರ್ಣ ಪಾರದರ್ಶಕವಾಗಿರುತ್ತದೆ.  ಇಲ್ಲಿ ಅಣ್ಣನವರು ಸ್ಫಟಿಕದ ಶಲಾಕೆ ಎಂಬ ಮಾತನ್ನು ಬಳಸುತ್ತಾರೆ.  ಇದೊಂದು ಮಾತಿನಲ್ಲಿ ಅದೆಷ್ಟು ಅರ್ಥಗಳು ಹುದುಗಿವೆ ನೋಡಿ - ಸ್ಪಟಿಕ ಶುಭ್ರತೆಯ, ಪಾರದರ್ಶಕತೆಯ ಸಂಕೇತ.  ಆಡಿದ ಮಾತು ನಿಚ್ಚಳವಾಗಿರಬೇಕು, ಅದರ ಹೊರ ಅರ್ಥ ಒಳ ಅರ್ಥಗಳೆಲ್ಲ ಮನದಟ್ಟಾಗಬೇಕು, ಅಷ್ಟಾದರೆ ಸಾಕೇ?  ಮಾತು ಕೇವಲ ಸ್ಫಟಿಕವಾದರೆ ಸಾಲದು, ಸ್ಫಟಿಕದ ಶಲಾಕೆಯಾಗಬೇಕು.  ಶಲಾಕೆಯೆಂದರೆ ಕಿಟಕಿಗೆ ಹಾಕುವ ಕಬ್ಬಿಣದ ಸಲಾಕೆಯಲ್ಲ, ಮೊನೆಯಾದ, ದೃಢವಾದ, ಹಗುರಾದ ಕಡ್ಡಿ.  ಅದನ್ನು ಹಿಡಿದು ತೋರಿದರೆ, ಅದರ ಮೊನೆ ಗಮ್ಯವನ್ನು ಮುಟ್ಟಬೇಕು, ತೋರಿದ ಅರಿವಾಗಬೇಕು, ಆದರೆ ತೋರುವ ಶಲಾಕೆ ಕಾಣಬಾರದು - ಅರ್ಥವಷ್ಟೇ ಉಳಿಯಬೇಕು, ಮಾತು ನಿಲ್ಲಬಾರದು.  ದಿ. ಮೈಸೂರು ವಾಸುದೇವಾಚಾರ್ಯರು ವೀಣೆ ಶೇಷಣ್ಣನವರು ಯಾವಾಗಲೂ ಹೇಳುತ್ತಿದ್ದ ಒಂದು ಮಾತನ್ನು ನೆನೆಯುತ್ತಾರೆ - ವೀಣೆ ನುಡಿಸಿದರೆ, ಆ ತಂತಿ ಮಿಡಿಯುವ ಉಗುರಿನ ಕಟಪಟ ಶಬ್ದ ಒಂದಿನಿತೂ ಕೇಳಬಾರದು, ಕೇವಲ ಮಿದುವಾದ, ಹದವಾದ ನಾದವಷ್ಟೇ ಹೊರಹೊಮ್ಮಬೇಕು - ಅದೇ ಆಶಯ ಇಲ್ಲೂ.  ಆಡಿದ ಮಾತು, ತಾನು ಹೇಳಬೇಕಾದ ಭಾವವನ್ನಷ್ಟೇ ತೋರಿ ತಾನು ಮರೆಯಾಗಬೇಕು.  ಅದು ಬಹಳ ಕಷ್ಟಸಾಧ್ಯ.  ಬಹಳ ತಪಸ್ಸನ್ನು ಬೇಡುವಂಥದ್ದು.  ಅದಕ್ಕೇ ಕವಿ ಶಿವರುದ್ರಪ್ಪನವರು "ಮನದ ಭಾವ ಹೊಮ್ಮಿಸಲಿಕೆ ಭಾಷೆ ಒರಟು ಯಾನ" ಎನ್ನುತ್ತಾರೆ.  ಹೀಗೆ ಕಷ್ಟವಾದ್ದರಿಂದಲೇ ಮಾತು ಹೀಗಿರಬೇಕೆಂಬುದು ಒಂದು ಆದರ್ಶ.  ಶಲಾಕೆಗೆ ಬಾಣ, ಭರ್ಜಿ ಮೊದಲಾದ ಅರ್ಥಗಳೂ ಇವೆ - ಅವೂ ಮೊನೆಯುಳ್ಳವೇ.  ಆಡಿದ ಮಾತು ಗುರಿತಪ್ಪದೇ ಹೋಗಿ ಗಮ್ಯದಲ್ಲಿ ನೆಡಬೇಕು - ನೆಟ್ಟ ಮಾತು ಮರೆಯಾಗಬೇಕು, ನೆಟ್ಟ ಅನುಭವ ಮಾತ್ರ ಉಳಿಯಬೇಕು - ಇದು ಸ್ಫಟಿಕದ ಶಲಾಕೆ. 

ಹೀಗೆ, ಒಂದು ಆಡಲೇಬೇಕಾದ ಮಾತು ಹೇಗಿರಬೇಕೆಂದು ವಿವರಿಸುತ್ತಲೇ ಹೋಗಬಹುದು - ಎಷ್ಟೆಂದು ವಿವರಿಸುವುದು.  ಅದೇ ಒಂದು ಮಾತಿನ ಹೋರಟೆಯಾಗಬಾರದಷ್ಟೇ.  ಅದಕ್ಕೇ ಏನೋ ಮಾತಿನ ಕೊನೆಯಲ್ಲಿ "ಇತ್ಯಾದಿ" ಎಂದು ಹೇಳಿ ಮುಗಿಸುವಂತೆ ಬಸವಣ್ಣನವರು ಇದೆಲ್ಲ ಲಕ್ಷಣಗಳ ಒಟ್ಟಾರೆ ಗಮ್ಯವನ್ನು ತಿಳಿಸಿ ಮುಗಿಸುತ್ತಾರೆ - "ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು" ಎಂದುಬಿಡುತ್ತಾರೆ.  ಲಿಂಗವೆಂದರೆ ಅಲ್ಲೆಲ್ಲೋ ಹೊರಗೆ ಕುಳಿತ ಕಲ್ಲುಬಂಡೆಯಲ್ಲ - ನನ್ನದೇ ಒಳಗಿನ ಒಳಗು, ಯಾವುದನ್ನು ಬಿಟ್ಟು ನಾನಿಲ್ಲವೋ ಅದು - ನೀವು ಅದನ್ನು ಇಷ್ಟಲಿಂಗವೆನ್ನಿ, ಪರಶಿವನೆನ್ನಿ, ಮತ್ತೊಂದೆನ್ನಿ - ಅದು ನಿಮ್ಮ ಪ್ರಜ್ಞೆಯ, ಅಸ್ತಿತ್ವದ ಒಂದು ಭಾಗವೇ ಆಗಿರದಿದ್ದರೆ ಅದು ಕೇವಲ ಕಲ್ಲು.  ಈ ನಿಮ್ಮೊಳಗಿನ ಲಿಂಗ ನಿಮ್ಮ ಮಾತನ್ನು ಮೆಚ್ಚಬೇಕು, ಮೆಚ್ಚಿ ಅಹುದಹುದೆನಬೇಕು.  ಅದು ಅಹುದೆನ್ನುತ್ತದೆಯೋ ಅಲ್ಲದೆನುತ್ತದೆಯೋ ಎಂಬುದು ಹೊರಗಿನವರಿಗಿಂತ ನಿಮಗೇ ಅರಿವಾಗುವಂಥದ್ದು. 

ಮಾತೆಂಬುದು ಜ್ಯೋತಿರ್ಲಿಂಗವೆಂಬ ಪ್ರಜ್ಞೆಯಿರುವವನು ಸಿಕ್ಕಸಿಕ್ಕಂತೆ ಆಡಿ ಅದನ್ನು ಮೈಲಿಗೆ ಮಾಡಲಾರ.  ಅದನ್ನೇ ಅಲ್ಲಮಪ್ರಭುವಿನ ಮಾತಿನಲ್ಲಿ ಹೇಳುವುದಾದರೆ "ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ; ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ. ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರುಳೆ"  

ಇಷ್ಟಾಗಿಯೂ ನುಡಿಯಲೇ ಬೇಕೆಂದರೆ, ನುಡಿಯ ಸೂತಕವನ್ನೊಲ್ಲದ ನಿಚ್ಚಟನು ಆ ನುಡಿಗೆ 'ನಡೆ'ಯ ಮುಡಿ ಹಾಸುತ್ತಾನೆ, ಏಕೆಂದರೆ ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನು ಒಲಿಯನೆಂಬ ಪ್ರಜ್ಞೆ ಅವನಿಗಿದ್ದೇಯಿದೆ.  ಈ ಪ್ರಜ್ಞೆ ತಪ್ಪಿದರೆ, ಮಾತೆಂಬುದು ತೂತುಮಡಕೆಯಿಂದ ಸೋರುವ ಹೊಲಸಾಗುತ್ತದೆ.  ಅದನ್ನು ಹೊನ್ನಿನ ಧಾರೆಯೆನ್ನಲಾಗದಷ್ಟೇ?