Sunday, October 17, 2010

ಸಾಂಸ್ಕೃತಿಕ ಅನ್ವೇಷಣೆಯ ಸಾಹಿತಿ---ಎಸ್. ಎಲ್. ಭೈರಪ್ಪ?

ಇದು ಸುನಾಥರ "ಸಾಂಸ್ಕೃತಿಕ ಅನ್ವೇಷಣೆಯ ಸಾಹಿತಿ---ಎಸ್. ಎಲ್. ಭೈರಪ್ಪ" ಎಂಬ ಲೇಖನಕ್ಕೆ ನನ್ನ ಪ್ರತಿಕ್ರಿಯೆ. ಪ್ರತಿಕ್ರಿಯೆ ತುಸು ಉದ್ದವಾದ್ದರಿಂದ ಅವರ ಲೇಖನಕ್ಕೆ ಕಾಮೆಂಟಾಗಿ ಹಾಕುವ ಬದಲು ಇಲ್ಲಿ ಪ್ರಕಟಿಸುತ್ತಿದ್ದೇನೆ. ಈ ಲೇಖನದಲ್ಲಿ ಬರುವ ಅನೇಕ ಪ್ರಸ್ತಾಪಗಳು ಮೂಲ ಲೇಖನದ ಭಾಗಗಳನ್ನು ಸೂಚಿಸುವುದರಿಂದ, ಇದನ್ನು ಓದುವ ಮೊದಲು ಮೂಲ ಲೇಖನವನ್ನು ಓದಬೇಕೆಂದು ಕೋರಿಕೆ.

ಭೈರಪ್ಪನವರ ಕಾದಂಬರಿಗಳ ಪ್ರಾತಿನಿಧಿಕ ಸೊಗಸಾದ ಕಿರುಪರಿಚಯ ಮಾಡಿಕೊಡುತ್ತಾ ಕೊನೆಗೆ "ಅವರನ್ನು ನಮ್ಮ ಸಾಂಸ್ಕೃತಿಕ ಅನ್ವೇಷಕ" ಎಂದು ಕರೆಯುತ್ತಾರೆ ಲೇಖಕರು. ನಾನು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅವರನ್ನು ನಮ್ಮ ಸಾಂಸ್ಕೃತಿಕ ಪ್ರತಿಪಾದಕನೆಂದು ಕರೆಯುತ್ತೇನೆ. ಏಕೆಂದರೆ ಅನ್ವೇಷಣೆಯಲ್ಲಿ ನಮಗೆ ತಿಳಿಯದ/ಹೊಸದಾಗಿ ತಿಳಿಯುವ, ಹಾಗೆ ತಿಳಿದಿದ್ದನ್ನು ಮುಕ್ತವಾಗಿ ಒಪ್ಪುವ ಅಂಶವಿರುತ್ತದೆ, ಚಿಂತನೆಯ ಅಂಶವಿರುತ್ತದೆ. ಆದರೆ ಭೈರಪ್ಪನವರಿಗೆ ನಮ್ಮ (ಹಾಗೇ ಪರ)ಸಂಸ್ಕೃತಿಯಬಗ್ಗೆ ಈಗಾಗಲೇ ಪ್ರಬಲವಾದ ಅಭಿಪ್ರಾಯಗಳಿರುವುದರಿಂದ, ಅದರ ಬಗ್ಗೆ ಅನ್ವೇಷಣೆ/"ಚಿಂತನೆ" ಈಗಾಗಲೇ ಆಗಿಹೋಗಿದೆ. ಅದರ ಪ್ರತಿಪಾದನೆಯೇ ಅವರ (ಕೊನೆಯ ಪಕ್ಷ ಇತ್ತೀಚಿನ) ಕಾದಂಬರಿಗಳ ಗುರಿಯಾದಂತೆನಿಸುತ್ತದೆ. ಸುನಾಥರೇ ಮುಂದೊಂದುಕಡೆ ಬಳಸುವಂತೆ, "ವಕಾಲತ್ತು" ಎನ್ನುವ ಪದ ಹೆಚ್ಚು ಸೂಕ್ತವೆನಿಸುತ್ತದೆ. ವಕೀಲನಿಗೆ ಚಿಂತನೆಗಿಂತಾ ಪ್ರತಿಪಾದನೆಯೇ ಮುಖ್ಯವಾಗುತ್ತದೆ.

ಅದೇನೇ ಇರಲಿ ಕಾದಂಬರಿಯ ತಂತ್ರಗಾರಿಕೆ, ಕತೆ ಹೇಳುವ ಅನನ್ಯಶೈಲಿ, ಕತೆಯ ಓಟಕ್ಕೆ ಭಂಗತಾರದೆ ಪಾತ್ರಗಳ ತಾತ್ವಿಕ/ನೈತಿಕ ಒಳತೋಟಿಗಳಲ್ಲಿ ಓದುಗರನ್ನು ಒಳಗೊಳಿಸುವ ಪರಿ ಇತ್ಯಾದಿ ಕಾರಣಗಳಿಗಾಗಿ ಭೈರಪ್ಪ ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರು, ಇಂದಿಗೂ ಕೂಡ. ಅವರ ಈ ಹಿಂದಿನ ಕಾದಂಬರಿಗಳ ಬಗ್ಗೆ ನನ್ನ (ಮತ್ತು ನನ್ನಂತಹ ಇತರರ) ತಕರಾರೆಂದರೆ ಇದು: ಪ್ರಸ್ತುತ ವ್ಯವಸ್ಥೆಯೊಡನೆ ಬದಲಾದ ಪರಿಸ್ಥಿತಿಯ ಮುಖಾಮುಖಿ, ಅದು ಪಾತ್ರಗಳಲ್ಲಿ ತಂದೊಡ್ಡುವ ಸಂಘರ್ಷ, ಉಸಿರುಗಟ್ಟಿಸುವ ಪರಿಸ್ಥಿತಿ ಇವುಗಳನ್ನು ಭೈರಪ್ಪನವರು ವಸ್ತುವನ್ನಾಗಿಸಿಕೊಂಡರೂ, ಇಷ್ಟೆಲ್ಲಾ ತುಮುಲ/ಒಳತೋಟಿಗಳನ್ನನುಭವಿಸಿಯೂ ಅವರ ಪಾತ್ರಗಳು ಈ ಉಸಿರುಗಟ್ಟಿಸುವ ವ್ಯವಸ್ಥೆಯಿಂದ ಹರಿದುಕೊಂಡು ಹೊರಬರದೇ ಕೊನೆಗೆ ಅದಕ್ಕೇ ಜೋತುಬಿದ್ದುಬಿಡುತ್ತವೆಂಬುದು. ಆ ಕಾರಣಕ್ಕೇ ಭೈರಪ್ಪನವರು ಸನಾತನ ಜೀವನಶೈಲಿ ಎತ್ತಿಹಿಡಿಯುವ ಭರದಲ್ಲಿ ಹಳೆಯ ಕಂದಾಚಾರಕ್ಕೇ ಶರಣು ಹೊಡೆದುಬಿಡುತ್ತಾರೆಂಬುದು ಒಂದು ಅನಿಸಿಕೆಯಾಗಿತ್ತು. ಇಂಥದ್ದೊಂದು "ಕ್ರಾಂತಿ" ಆ ಪಾತ್ರ ಅನುಭವಿಸುವ ತುಮುಲಕ್ಕೆ ಅತಿ ಸಹಜವಾದ ಹೊರಹರಿವಾಗಿದ್ದರೂ ಕೊನೆಯ ಗಳಿಗೆಯಲ್ಲಿ ಅದು ಹಿಂದಿರುಗಿ ಬಂದುಬಿಡುತ್ತದೆ, ಮತ್ತು ಅದೊಂದು ರೀತಿಯ ರಸಾತ್ಮಕ ಅಸಮಾಧಾನ/ಅಸಂತುಷ್ಟಿಯನ್ನು ಓದುಗನಲ್ಲಿ ಉಳಿಸಿಬಿಡುತ್ತವೆ. ಹಾಗಿದ್ದಮೇಲೆ ಅಂಥದ್ದೊಂದು ಸಂಘರ್ಷವನ್ನು ಕಾದಂಬರಿಯ ಸಮಸ್ಯೆಯನ್ನಾಗಿ ತೆಗೆದುಕೊಳ್ಳುವ ಅಗತ್ಯವಾದರೂ ಏನು? ಆದರೆ ನಮ್ಮ ಈ ಭಿನ್ನಾಭಿಪ್ರಾಯವೇನಿದ್ದರೂ ತಾತ್ವಿಕ ಮಟ್ಟದಲ್ಲಿ ಮಾತ್ರವೇ ಹೊರತು, ಕಾದಂಬರಿಗಳ ಕಲಾದೃಷ್ಟಿಯ ಬಗ್ಗೆ ಮಾತ್ರ ಎರಡು ಮಾತಿರಲಿಲ್ಲ.

ಆದರೆ ಆವರಣದಿಂದೀಚಿನ ಕಾದಂಬರಿಗಳ ಬಗೆಗೆ ಇಷ್ಟೇ ಹೇಳಿ ಸುಮ್ಮನಾಗಲು ಬರುವುದಿಲ್ಲ. ಅವರ ಹಳೆಯ ಕಾದಂಬರಿಗಳ ಕಲಾದೃಷ್ಟಿ, ಸೂಕ್ಷ್ಮ ಪ್ರಬುದ್ಧ ಮಂಡನೆ ಇಲ್ಲಿ ಮರೆಯಾಗಿದೆ. ಪಾತ್ರಗಳ ಒಳತೋಟಿ, ಅದರ ವೈಯಕ್ತಿಕ ಸೂಕ್ಷ್ಮ ಕಳೆದುಕೊಂಡು ಎರಡು ಪಂಗಡಗಳ/ಜನಾಂಗಗಳ/ಸಮಾಜಗಳ/ಲಿಂಗಗಳ ಜೋರುಬಾಯಿಯಾಗಿ ಪರಿವರ್ತನೆಗೊಂಡಿದೆ. ಈ ಇಡೀ ಸಮಾಜಗಳ ಭಾರವನ್ನು ಕೇವಲ ಒಂದೆರಡು ದುರ್ಬಲ ಪಾತ್ರಗಳು ತಡೆದುಕೊಳ್ಳುವುದು ಸಾಧ್ಯವಾಗದೇ, ಪಾತ್ರಗಳಾಗಿ ಅವು ಕುಸಿದಿವೆ. ಪಾತ್ರವೊಂದು ಗುಣವೊಂದರ ಪ್ರತಿನಿಧಿಯಾಗಿ ಕೆಲಸಮಾಡುವುದು ಅಷ್ಟು ಸುಲಭವೂ ಅಲ್ಲ, ಮತ್ತು ಇದೇ ಮೊದಲೂ ಅಲ್ಲ. ವ್ಯಾಸರು ಇದನ್ನು ಬಹು ಯಶಸ್ವಿಯಾಗಿ ಮಾಡಿದ್ದಾರೆ; ರನ್ನ-ಪಂಪರು ಮಾಡಿದ್ದಾರೆ; ಅಷ್ಟೇಕೆ, ಸ್ವತಃ ಭೈರಪ್ಪನವರೇ ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಪರ್ವದಲ್ಲಿ. ಆದರೆ ಆವರಣದೀಚೆಯ ಅವರ ಕಾದಂಬರಿಗಳಲ್ಲಿ ಈ ಕೌಶಲ ಸಂಪೂರ್ಣ ಮರೆಯಾಗಿದೆಯೆಂದೇ ಹೇಳಬೇಕು. ಅಲ್ಲಿ ಪಾತ್ರಗಳು ಪಾತ್ರಗಳಾಗಿ ಉಳಿದಿಲ್ಲ. ಅಷ್ಟೇಕೆ, ರಾತ್ರಿ ಗಂಡಹೆಂಡಿರು ಪಕ್ಕಪಕ್ಕ ಮಲಗಿದಾಗಲೂ, ಮಿಲನದ ವೇಳೆಯಲ್ಲೂ ಮಾತಾಡುವುದು ಆ ಎರಡು ದೇಹಗಳಲ್ಲ, ಎರಡು ಮನಸ್ಸುಗಳಲ್ಲ, ಬದಲಿಗೆ ಎರಡು ಸಮಾಜಗಳು, ಎರಡು ಧರ್ಮಗಳು (ಆವರಣ)! ಕಾದಂಬರಿಯಲ್ಲಿ ಭೈರಪ್ಪನವರದ್ದೇ ಛಾಪು ಹೊತ್ತು ಮೂಡಿರುವ ತಲೆದೂಗಿಸುವ ಕಥನತಂತ್ರವೂ ಈ ಅಧ್ವಾನವನ್ನು ಮುಚ್ಚುವಲ್ಲಿ ಯಶಸ್ವಿಯಾಗುವುದಿಲ್ಲ.

"ನನ್ನ ದೃಷ್ಟಿ ಬಹುಜನದ ದೃಷ್ಟಿ, ಆದ್ದರಿಂದ ನನ್ನದು ಸರಿ, ಆದ್ದರಿಂದಲೇ ನಿನ್ನದು ತಪ್ಪು, ಆದ್ದರಿಂದಲೇ ನಿನ್ನದೆಂಬುದೆಲ್ಲವೂ ತಪ್ಪೇ, ನಿನ್ನ ಅಪ್ಪ, ತಾತ ಮುತ್ತಾತಂದಿರೆಲ್ಲಾ ತಪ್ಪು" ಮತ್ತು ಇನ್ನೊಂದು ರೀತಿಯಿಂದ "ನಿನ್ನ ಅಪ್ಪ, ತಾತ ಮುತ್ತಾತಂದಿರು ನಮಗೆ ಹೀಗೆ ಹೀಗೆ ಮಾಡಿದರು ( ಐತಿಹಾಸಿಕ ಪುರಾವೆ); ಆದ್ದರಿಂದ ನೀವೆಲ್ಲರೂ ನಮ್ಮೆಲ್ಲರನ್ನೂ ನಾಶ ಮಾಡಿದಿರಿ, ಮಾಡುತ್ತಿದ್ದೀರಿ, ಮಾಡುವಿರಿ; ಆದ್ದರಿಂದ ನಿಮ್ಮದೆಲ್ಲವೂ ತಪ್ಪೇ; ನಾನು ಸನಾತನ ಧರ್ಮದ ಪ್ರತಿನಿಧಿ, ನೀನು ನಮ್ಮನ್ನು ನಾಶಮಾಡಿದ ಪಾಶವೀ ಧರ್ಮದ ಪ್ರತಿನಿಧಿ" ಈ ರೀತಿಯ ವಾದಸರಣಿಗಳು ಚರ್ಚಾಸ್ಪರ್ಧೆಗೆ ಸರಿಹೊಂದಬಹುದೇ ಹೊರತು ಕಾದಂಬರಿಯಂಥ ಸೂಕ್ಷ್ಮ ವೈಯಕ್ತಿಕ ಬರವಣಿಗೆಗಲ್ಲ; ಮತ್ತು ಈ ವಾದಸರಣಿಯನ್ನು ಸಮರ್ಥಿಸಲೆಂದೇ ಸೃಷ್ಟಿಗೊಂಡ ಪಾತ್ರನಿರೂಪಣೆ ಘಟನಾವಳಿಗಳು. ಇತಿಹಾಸವೇ ಪ್ರಧಾನವಾದರೆ ಒಂದು ಸಂಶೋಧನ ಗ್ರಂಥವನ್ನು ಬರೆದರೆ ಅದಕ್ಕೊಂದು ಗಾಂಭೀರ್ಯ; ಇಲ್ಲ ವೈಯಕ್ತಿಕ ದೃಷ್ಟಿಕೋನವೇ ಪ್ರಧಾನವಾದರೆ ಅದನ್ನು ಪ್ರತಿಪಾದಿಸಿ ಒಂದು ಲೇಖನ ಪ್ರಕಟಿಸಿದರೆ ಅದರ ಬಗ್ಗೆ ಚರ್ಚಿಸಬಹುದು; ಆದರೆ ಕಾದಂಬರಿ ಬರೆದಾಗ ಅದರ ಪ್ರಥಮ ಬದ್ಧತೆ ಕಲಾದೃಷ್ಟಿಗೇ ಹೊರತು ಮತ್ತಾವುದಕ್ಕೋ ಅಲ್ಲ, ಅಲ್ಲವೇ? ಅದು ಬಿಟ್ಟು ಕೇವಲ ವೈಯಕ್ತಿಕ ದೃಷ್ಟಿಕೋನವನ್ನು "ಎಲ್ಲರೂ ಒಪ್ಪುವಂತೆ" ಪ್ರತಿಪಾದಿಸಲು ಕಾದಂಬರಿಯ ಹೊದಿಕೆಯಲ್ಲಿ ಇತಿಹಾಸವನ್ನು ತುರುಕಿದರೆ, ಅಷ್ಟಾಗಿಯೂ ಅದು ಒಂದು ದೃಷ್ಟಿಕೋನದ ಲೇಖನವಾಗಿ ಉಳಿದೀತೇ ಹೊರತು ಕಾದಂಬರಿಯಾಗುವುದಿಲ್ಲ, ಅಲ್ಲವೇ? ಹಾಗೆ ಲೇಖನವಾಗಿಯೇ ಬರೆಯುವುದಾದರೆ ಅದನ್ನು ಸಾಫ ಸೀದಾ ಹೇಳುವುದರ ಬದಲು ಕಾದಂಬರಿಯೊಂದರ ಕಲಾತ್ಮಕ ಅಸ್ಪಷ್ಟತೆ, ಮಾಯದ ಮುಸುಕು (fictionality) ಏಕೆ? ಅಂದರೆ ನಮ್ಮ ತಾತ್ವಿಕ ವಿರೋಧ, ಧರ್ಮ ಮತ್ತು ಅದರ ಸಾಮಾಜಿಕ ಆಯಾಮಗಳ ಬಗೆಗಿನ ಭೈರಪ್ಪನವರ ನಿಲುವಿನ ಬಗೆಗಲ್ಲ, ಬದಲಿಗೆ ಅದನ್ನು ಅವರು "ಕಾದಂಬರಿ"ಯನ್ನಾಗಿಸಲೆತ್ನಿಸುವ ಪರಿಯ ಬಗೆಗೆ. ಇಂಥದ್ದೊಂದು ಇತಿಹಾಸ, ವಿಚಾರ ಮತ್ತು ಕತೆಯ ಅಂಶಗಳ ಕಲಸುಮೇಲೋಗರ, ಆ ಅಂಶಗಳ ಪರಸ್ಪರ ಮೈಲಿಗೆಯಿಂದಾಗಿಯೇ ಆ ಬರಹಕ್ಕೆ ಇತಿಹಾಸಗ್ರಂಥವೊಂದರ authenticityಯನ್ನಾಗಲೀ ವೈಚಾರಿಕ ಬರಹವೊಂದರ ಗಾಂಭೀರ್ಯವನ್ನಾಗಲಿ ಕತೆಯ ಸೌಂದರ್ಯ/ಕಲಾತ್ಮಕತೆಯನ್ನಾಗಲಿ ದೊರಕಿಸಲು ವಿಫಲವಾಗುತ್ತದೆ. ಇದಕ್ಕೆ ಸರಿದೊರೆಯಾದ ಉದಾಹರಣೆಯಾಗಿ ತರಾಸು ಅವರ ಐತಿಹಾಸಿಕ ಕಾದಂಬರಿಗಳನ್ನು ನೆನೆಯೋಣ. ಅಲ್ಲೆಲ್ಲೂ ಕಾದಂಬರಿಯ ಪಾತ್ರವೊಂದು ಇಷ್ಟೆಲ್ಲಾ "ಐತಿಹಾಸಿಕ ಸಂಶೋಧನೆ"ಗಳನ್ನು ಮಾಡಿ, ತನ್ನದೇ ಕತೆಯ ಕೊನೆಯಲ್ಲಿ ತನ್ನ ಐತಿಹಾಸಿಕ ಸಂಶೋಧನೆಗಳ bibliography ಕೊಟ್ಟದ್ದು ಕಾಣಬರುವುದಿಲ್ಲ. ಇಷ್ಟಕ್ಕೂ ಇದೆಲ್ಲಾ ಚರ್ಚೆ, ಈ ಕಾದಂಬರಿಗಳ "ಕಾದಂಬರಿತನ"ವನ್ನು ಕುರಿತದ್ದೇ ಹೊರತು ಭೈರಪ್ಪನವರ ನಿಲುವು/"ಪ್ರತಿಪಾದನೆ"ಗಳ ಕುರಿತದ್ದಲ್ಲ (ಅವು ಬೇರೆಯೇ ಚರ್ಚೆಯ ವಿಷಯ).

ಇನ್ನು ಅನಂತಮೂರ್ತಿಯವರ ಬಗ್ಗೆ ಬಂದರೆ, ಭೈರಪ್ಪನವರ ಬಗೆಗಿನ ಚರ್ಚೆಯಲ್ಲಿ ಅನಂತಮೂರ್ತಿಯ ಪ್ರಸ್ತಾಪ ಬರಬೇಕಾದ ಯಾವುದೇ ಸಾಹಿತ್ಯಕ ಕಾರಣಗಳೂ ನನಗಂತೂ ಕಾಣುವುದಿಲ್ಲ. ಇಬ್ಬರ ಬರಹಗಳ ದಿಕ್ಕು ದೆಸೆಗಳು ನೀತಿ-ನಿಲುವುಗಳು, ಸೊಗಸುಗಳು ಬೇರೆಯೇ. ಜಿಲೇಬಿಯೇ ರುಚಿ, ಖೀರು ಅಲ್ಲ ಎನ್ನಲಾದೀತೇ? ಭೈರಪ್ಪನವರ ನಿಲುವಿನಲ್ಲಿ ಅದೆಷ್ಟೇ ಕುಂದುಗಳಿದ್ದಾಗ್ಯೂ ನಮ್ಮ ಕನ್ನಡ ಕಾದಂಬರಿಯ ಸಂದರ್ಭದಲ್ಲಿ ಭೈರಪ್ಪನವರೊಂದು ಮೈಲಿಗಲ್ಲು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅಂತೆಯೇ ಸಣ್ಣ ಕತೆಗಳ ಸಂದರ್ಭದಲ್ಲಿ ಅನಂತಮೂರ್ತಿಯವರು. ಆದರೆ ಇಬ್ಬರಿಗೂ ಎಲ್ಲಿಂದೆಲ್ಲಿಯ ಹೋಲಿಕೆ? ಆನಂದಭೈರವಿಗೂ ಕಲ್ಯಾಣಿಗೂ ಹೋಲಿಕೆಯೇ? ಆದರೆ ಇವತ್ತು ಭೈರಪ್ಪನವರ ಚರ್ಚೆ ಅನಂತಮೂರ್ತಿಯವರ ಪ್ರಸ್ತಾಪವಿಲ್ಲದೇ ಪೂರ್ಣಗೊಳ್ಳುವುದೇ ಇಲ್ಲ. ಇದಕ್ಕೆ ನಾವು ಕಾಣುವ ಒಂದೇ ಅಸಾಹಿತ್ಯಕ ಕಾರಣವೆಂದರೆ, ಅನಂತಮೂರ್ತಿಯವರು ಭೈರಪ್ಪನವರ ಕಾದಂಬರಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು, ಅದು ವಿವಾದವಾಯಿತು, in retaliation, ಅನಂತಮೂರ್ತಿಯವರ ಸಾಹಿತ್ಯದ "ಪುನರ್ವಿಮರ್ಶೆ" ನಡೆಯಿತು, ಹೊಸ ದೃಷ್ಟಿಕೋನದಿಂದ! ಮತ್ತೆ ಎರಡೂ ಬಣಗಳೂ ವೈಯಕ್ತಿಕ ನಿಂದನೆಗಳಲ್ಲಿ ತೊಡಗಿದುವು. ಇದು ಎಷ್ಟರಮಟ್ಟಿಗೆ ಸರಿ?

ಇನ್ನು specific ಆಗಿ "ಸಂಸ್ಕಾರ"ದ ಬಗ್ಗೆ ಮಾತಾಡುವುದಾದರೆ, ಸಂಸ್ಕಾರದ ಕತೆ ಅಥವ ಅದರ "ಒಳಕತೆ"ಯಲ್ಲಿ, ಹಾಗೆ ಅದನ್ನು ಬಳಸುವ ತಂತ್ರಗಾರಿಕೆಯಲ್ಲಿ ಲೇಖಕರು ಹೇಳುವ ದೂರ್ತತನವಾಗಲೀ ಅಥವ ಆ ದೂರ್ತತನ ಮಾಡುವ ಅಗತ್ಯವಾಗಲೀ ಕಾಣಬರುವುದಿಲ್ಲ. ಕತೆಯ ರೀತಿಯೇ ಅದಲ್ಲವೇ? ಹೇಳುವುದನ್ನು ಸಾಫ ಸೀದಾ ಹೇಳಿಬಿಟ್ಟರೆ ಅದು ಕತೆಯಾಗುವುದಿಲ್ಲ, ಬದಲಿಗೆ ಲೇಖನವೋ ಭಾಷಣವೋ ಇನ್ನೇನೋ ಆಗುವುದು, ಅಲ್ಲವೇ? ಆದರೆ ಇಲ್ಲಿ ಕತೆಗಾರನ ಉದ್ದೇಶ ಇದನ್ನು ಲೇಖನವೋ ಭಾಷಣವೋ ಆಗಿಸುವುದಲ್ಲ, ಬದಲಿಗೆ ಕತೆಯಾಗಿಯೇ ಉಳಿಸಿಕೊಳ್ಳುವುದು. ಮತ್ತು ಇದರಲ್ಲಿ ದೂರ್ತತನವನ್ನು ಆರೋಪಿಸುವ ಮೊದಲು ಸಂಸ್ಕಾರದ ಕತೆ ಬಂದ ಕಾಲಘಟ್ಟವನ್ನು ಗಮನಿಸಬೇಕು. ಅವತ್ತಿನ ಸಮಾಜ ಇವತ್ತಿನಷ್ಟು liberal ಆಗಿರಲಿಲ್ಲ. ಸಂಸ್ಕಾರದ "ಪ್ರತಿಭಟನೆ" ಅವತ್ತಿನ ಕಾಲಘಟ್ಟಕ್ಕಂತೂ ಖಂಡಿತಾ ಪ್ರಸ್ತುತವಾಗಿತ್ತು. ವ್ಯವಸ್ಥೆಯೇ ಬಲವಾಗಿದ್ದಾಗ ಅದರ ಬಗೆಗಿನ ಪ್ರತಿಭಟನೆ "ಲೇವಡಿ"ಯೆನ್ನಿಸಿಕೊಳ್ಳುವುದೇ? ಆದರೆ ಇವತ್ತು ಕಾಲ ಬದಲಾಗಿದೆ. ಸಮಾಜ ಹೆಚ್ಚು liberal ಆಗಿದೆ, ವ್ಯವಸ್ಥೆ ಮೊದಲಿನಷ್ಟು ಬಲವಾಗಿಲ್ಲ. ಆದ್ದರಿಂದ ಅದೇ ಕತೆ ಇವತ್ತಿನ ಕಾಲಘಟ್ಟದಲ್ಲಿ ಬಂದರೆ, ಬದಲಾದ ಬ್ರಾಹ್ಮಣ ಸಮಾಜದ ಹಿನ್ನೆಯಲ್ಲಿ ಅನಂತಮೂರ್ತಿಯವರ ಅಂಥ ಪ್ರಯತ್ನ ದೂರ್ತತನವೂ ಬ್ರಾಹ್ಮಣ ಸಮಾಜದ ಲೇವಡಿಯೂ ಖಂಡಿತ ಆಗುತ್ತಿತ್ತು, ಆದರೆ ಸಂಸ್ಕಾರದ ಅವತ್ತಿನ ಕಾಲಘಟ್ಟದಲ್ಲಿ ಅಲ್ಲ.

ಇದರ ಅರ್ಥ ಅನಂತಮೂರ್ತಿಯವರ ಇಂದಿನ ಅನೇಕ ಸಾಹಿತ್ಯೇತರ ಸಾಮಾಜಿಕ ನಿಲುವುಗಳಲ್ಲಿ ದೂರ್ತತನವಿಲ್ಲವೆಂದಲ್ಲ, ಅದನ್ನು ನಾನು ಸಮರ್ಥಿಸುತ್ತೇನೆಂದೂ ಅಲ್ಲ. ಅವರ "ಅಲ್ಪಸಂಖ್ಯಾತ" ಧ್ವನಿಯನ್ನು ತಾತ್ವಿಕವಾಗಿ ನಾನು ಸಮರ್ಥಿಸಿದರೂ ಅದು ಅತಿರೇಕಕ್ಕೆ ಹೋದಾಗೆಲ್ಲಾ ಕಟುವಾಗಿ ವಿರೋಧಿಸಿದವರಲ್ಲಿ ನಾನೂ ಒಬ್ಬ. ಆದರೂ ವ್ಯಕ್ತಿಯೊಬ್ಬನಿಗೆ ಸಾರಾಸಗಟಾಗಿ ದೂರ್ತ/ಸರಳ ಎಂಬ ಹಣೆಪಟ್ಟಿ ಹಚ್ಚುವುದಾಗಲೀ ಆ "ದೂರ್ತತನ/ಸರಳತೆ"ಗಳನ್ನು ಅವನ ಎಲ್ಲಾ (ಕಾಲಘಟ್ಟಗಳ) ಬರವಣಿಗೆಗೂ ಸಾರಾಸಗಟಾಗಿ ಅನ್ವಯಿಸುವುದು ಸಾಹಿತ್ಯಕ್ಕೆ, ಸೃಜನಶೀಲತೆಗೆ ಅಪಚಾರವಲ್ಲವೇ? ಅಂಥ ಸಾಹಿತ್ಯ/ಸೃಜನಶೀಲತೆ ಅನಂತಮೂರ್ತಿಯವರದ್ದಿರಬಹುದು, ಅಥವ ಭೈರಪ್ಪನವರದ್ದಿರಬಹುದು ಅಥವ ಇನ್ನಾರದೇ ಇರಬಹುದು.