Tuesday, November 2, 2010

ಸ್ತಬ್ಧ ಚಿತ್ರ

ನಿನ್ನ ಕಣ್ಣಿನ ಮಿಂಚಿನಂಚಿನೊಳಗಿಂದೇನೊ
ಹೊಸ ಹೊಳಪು ಹೊಳೆಯುತಿಹುದು;
ಬೀಸುಗತ್ತಿಯು ಕೂಡ ಕೂರಲಗ ಮೊನೆಯಿಂದ
ಹೂಮಿಂಚನೆಸೆಯುತಿಹುದು.

ಇರುಳಿಡೀ ಸೋನೆಯಲಿ ಮಿಂದು ಚಳಿಹಿಡಿದ ಮುಂ-
ಜಾವೀಗ ನಗುತಲಿಹುದು;
ಎಳೆಬಿಸಿಲ ಕಾಯಿಸುತ ಮಿಡಿಯ ನಾಗರವೊಂದು
ಹೆಡೆಬಿಚ್ಚಿ ತೂಗುತಿಹುದು.

ಹೊಡೆಯುವುದೆ, ಬೇಡ ಬಿಡು; ಎಷ್ಟು ಚೆನ್ನಿದೆ ನೋಡು,
ಕಾಣಿಸದು ರೋಷ ಲೇಶ;
ಏಕೆ ಬಂದಿತೊ ಏನೊ ಸರಿದುಹೋಗಲಿ ತಾನೆ
ನಮಗೇಕೆ ನಾಗದೋಷ.

ಹರಿದ ಹಾದಿಯನಳೆದ ಸೌರಮಾನಗಳೆಷ್ಟೊ
ಸಪ್ತಪದಬಂಧದೊಳಗೆ;
ವೈಶಾಖದಿರುಳುಗಳ ಚಂದಿರನು ಕೂಡೆ ಬೆಳ
ದಿಂಗಳೊಂಭತ್ತರೊಳಗೆ.

ಇಬ್ಬರೊಳಗೊಂದಾಗಿ ಕೂಡಿದೆವು ಕಾಡಿದೆವು
ಬೇಡಿದೆವು ದೇವನಲ್ಲಿ;
ಚೆಂಗುಲಾಬಿಯ ಮೇಲೆ ಇಬ್ಬನಿಯು ನಗುತಿತ್ತು
ಕಂಪೊಡನೆ ತಂಪ ಚೆಲ್ಲಿ.

ಇಲ್ಲಿಬಾ, ತುಸುಹೊತ್ತು ಕೂರೋಣ ನಾವಿಲ್ಲಿ
ಹಚ್ಚಿ ಗಲ್ಲಕ್ಕೆ ಗಲ್ಲ;
ಅಮೃತಗಳಿಗೆಯನಿಂತು ಕಳೆಯುವುದು ತರವಲ್ಲ
ನಲ್ಲೆ ನಾ ನಿನ್ನ ನಲ್ಲ

23 comments:

ಚುಕ್ಕಿಚಿತ್ತಾರ said...

ಸು೦ದರವಾಗಿದೆ ಕವಿತೆ.

”ಹರಿದ ಹಾದಿಯನಳೆದ ಸೌರಮಾನಗಳೆಷ್ಟೊ
ಸಪ್ತಪದಬಂಧದೊಳಗೆ;
ವೈಶಾಖದಿರುಳುಗಳ ಚಂದಿರನು ಕೂಡೆ ಬೆಳ
ದಿಂಗಳೊಂಭತ್ತರೊಳಗೆ.”
ಈ ಸಾಲುಗಳು ತು೦ಬಾ ಹಿಡಿಸಿತು..

sunaath said...

ಮಂಜುನಾಥರೆ,
Very romantic poem!

V.R.BHAT said...

ಹರೆಯ ಉಕ್ಕಿ ಹರಿಯುತ್ತಿದೆಯೇ ? ಬಹಳ ಒಳ್ಳೆಯಕವನ, ಅಂತೂ ಆಗಾಗ ಗಲ್ಲಕ್ಕೆ ಕೊಟ್ಟ ಕೈ ತೆಗೆದು ಬರೆಯುತ್ತೀರಿ ಎಂದಾಯಿತು!

Srikanth said...

a fresh air of poetry from Manju after a haitus. all that i can say is 'matte haaditu (koLLegaalada) kOgile'

ಅಮೃತಗಳಿಗೆಯನಿಂತು ಕಳೆಯುವುದು ತರವಲ್ಲ
ನಲ್ಲೆ ನಾ ನಿನ್ನ ನಲ್ಲ --
this line evokes the 'Carpe Diem' theme very effectively. 'seize the day', life is short -- pleasure should be enjoyed while still there is some time.

Enjoyed reading it. Keep the flow (pun intended)

Arun ಅರುಣ್ said...

Manju, nice to see some romantic poem from you after a long time. Please keep writing :).

It also has some very nice rithem in it.

Arun

Dr.D.T.Krishna Murthy. said...

ಸುಂದರ ಕವನ.ಕೊನೆಯ ನಾಲಕ್ಕು ಸಾಲುಗಳು ಇಷ್ಟವಾದವು.ನನ್ನ ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

Manjunatha Kollegala said...

ಧನ್ಯವಾದ ಚುಕ್ಕಿ ಚಿತ್ತಾರ, ಬರುತ್ತಿರಿ

Manjunatha Kollegala said...

ಸುನಾಥರೇ, I intended it to be a little deeper than just being romantic. ಧನ್ಯವಾದ

Manjunatha Kollegala said...

ಭಟ್ಟರೇ, ಹರಯಕ್ಕೂ ರೊಮ್ಯಾಂಟಿಕ್ ಮನೋವೃತ್ತಿಗೂ ಅಷ್ಟೊಂದು ಸಂಬಂಧವಿದೆಯೇ? ಕವನವನ್ನು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ

Manjunatha Kollegala said...

ಶ್ರೀಕಾಂತ್,

ಬಹುದಿನದ ನಂತರ ಇಂಗ್ಲಿಷ್ ತರಗತಿಯಲ್ಲಿ ಕುಳಿತು ಸಾಹಿತ್ಯವಿಮರ್ಶೆ ಕೇಳಿದಂತಾಯಿತು ;) ಧನ್ಯವಾದ

Manjunatha Kollegala said...

Arun, thanks that you observed this poem

Manjunatha Kollegala said...

ಡಾಕ್ಟರೇ, ಕವನ ತಮಗಿಷ್ಟವಾದದ್ದಕ್ಕೆ ಸಂತೋಷ. ನಿಮ್ಮ ಬ್ಲಾಗಿಗೆ ಭೇಟಿಕೊಟ್ಟಿದ್ದೆ. ಸೊಗಸಾದ ಬರಹಗಳು. Your blog is going to be a habit for me

Unknown said...

ಕವಿತೆಯ ಭಾವನೆಗಳು ನೀಟಾಗಿವೆ,ಓದಿ ಮನಸು ಉಲ್ಲಸಿತವಾಯಿತು.......

ಜಯಂತ ಬಾಬು said...

Saar sorry for not writing in kannada.. idannu Odida takshaNa romanchanavaagi takshana comment haakuttiddene. bahaLa dinadinda nannalli idda ondu prashnege uttara ivattu sikkide.."Manjunath yaake yavudu romantic padya baredilla" .. :) , I am smiling as I am typing this .. good to see such a nice piece of your poetry and sensitive side of you.. ..nanage tumba hiDisida saalugaLu "ಹೊಡೆಯುವುದೆ, ಬೇಡ ಬಿಡು; ಎಷ್ಟು ಚೆನ್ನಿದೆ ನೋಡು,
ಕಾಣಿಸದು ರೋಷ ಲೇಶ;
ಏಕೆ ಬಂದಿತೊ ಏನೊ ಸರಿದುಹೋಗಲಿ ತಾನೆ
ನಮಗೇಕೆ ನಾಗದೋಷ. "

you just made my day saar .. thank you and keep writing MORE and MORE...

ಜಯಂತ ಬಾಬು said...

anda haage dayaviTTu idannu namma orkut community ge haaki saar .. it needs fresh AIR :)

Manjunatha Kollegala said...

ಪಾರ್ಥಸಾರಥಿ, ಕವನ ತಮಗಿಷ್ಟವಾದದ್ದು ನನ್ನ ಸಂತೋಷ. ಬರುತ್ತಿರಿ.

Manjunatha Kollegala said...

ಜಯಂತ್, ನೀವು ನಗುವುದು ಕಂಡು ನನಗೂ ನಗು ಬಂತು. ರೊಮ್ಯಾಂಟಿಸಂ ಅನ್ನುವುದು ನೋಡುವ ದೃಷ್ಟಿಯಲ್ಲಿದೆ ಅಂತ ನನ್ನ ಅನಿಸಿಕೆ. ಇದನ್ನು ರೊಮ್ಯಾಂಟಿಕ್ ಕವನ ಅನ್ನುವವರಷ್ಟೇ ಮಂದಿ, ಅದರ ಇಲ್ಲದಿರುವಿಕೆಯಿಂದುಂಟಾದ ತಹತಹಿಕೆ ಅಂದವರೂ ಇದ್ದಾರೆ. ವಿವಿಧ ದೃಷ್ಟಿಕೋನಗಳಲ್ಲಿ ಬೇರೆಬೇರೆಯಾಗಿ ಕಾಣುವುದೇ ಕಾವ್ಯದ ಯಶಸ್ಸು ಅಂತ ನಂಬಿರುವ ನನಗೆ ಇವೆರಡೂ ದೃಷ್ಟಿಗಳೂ ಖುಶಿಕೊಡುತ್ತವೆ. ಇನ್ನು ನನಗೇ ಒಂದು ವೈಯಕ್ತಿಕ ದೃಷ್ಟಿಯಿದೆಯೇ ಇದರ ಬಗ್ಗೆ ಅಂದರೆ, ಅದಿದ್ದರೆ ಇದು ಕವನವಾಗುತ್ತಿರಲಿಲ್ಲ, ಒಂದು ವಸ್ತುಪ್ರಬಂಧವಾಗುತ್ತಿತ್ತು :) ಹಾಗಾಗಿಲ್ಲ ಸಧ್ಯ ;) ;)

ನಿಮ್ಮ ಆಪ್ತ ಪ್ರತಿಕ್ರಿಯೆಗೆ thanks.

ಚಾರ್ವಾಕ ವೆಂಕಟರಮಣ ಭಾಗವತ said...

ಉತ್ತಮ ಒಳಹರಿವುಗಳಿಂದ ಕೂಡಿದ ಕವನ. ಸುಂದರ ರಮ್ಯ ಮುಂಜಾವಿನ ಕ್ಷಣಿಕತೆಯೇ ಮೈನಡುಗಿಸುವುದಲ್ಲವೇ?

ಬೆಳಗಿನ ಬಿಸಿಲುಕಾಯಿಸುತ್ತಾ ತೂಗುವ ಸುಂದರ ಮಿಡಿನಾಗರ,
ಹರಿದ ಹಾದಿಯನಳೆದ "ಸೌರಮಾನ"; ಸಪ್ತಪದಬಂಧ;
"ವೈಶಾಖದಿರುಳುಗಳ ಚಂದಿರ"; ಚೆಂಗುಲಾಬಿಯಮೇಲೆ ನಗುವ ಇಬ್ಬನಿ; ಅಮೃತ "ಗಳಿಗೆ" ಇತ್ಯಾದಿ ಪ್ರತಿಮೆಗಳು ಈ ಕ್ಷಣಿಕತೆಯ ಭಾವವನ್ನು ದಟ್ಟಗೊಳಿಸುತ್ತವೆ.

ಬೆಳ
ದಿಂಗಳೊಂಭತ್ತು - ಈ ಪ್ರಯೋಗ ಸೊಗಸಾಗಿದೆ

Pradeep Rao said...

tumbaa chandada kavana..

Manjunatha Kollegala said...

ಧನ್ಯವಾದ ಚಾರ್ವಾಕರೇ

ಪ್ರದೀಪ್, ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಬರುತ್ತಿರಿ

maanasa saarovra said...

ಚಂದದ ಕವಿತೆ ಮಂಜುನಾಥ್ ಅವರೆ ಓದಿ ಖುಶಿ ಆಯ್ತು...

Ranjita said...

ತುಂಬಾ ಚೆನ್ನಾಗಿದೆ ..ಚಂದದ ಕವನಕ್ಕೆ ಅಭಿನಂದನೆಗಳು ..

Manjunatha Kollegala said...

ಧನ್ಯವಾದ, ಮಾನಸೀ ಮತ್ತು ರಂಜಿತಾ ಅವರೆ