Saturday, January 19, 2019

ಉಪಮೆಯೆಂಬಿದರಂತೆವೋಲ್...

 

"ಉಪಮೆಯೆಂಬಿದರಂತೆವೋಲ್..." ಏನು? "ಪೆರತೊಂದಲಂಕಾರಮಿಲ್ಲಂ" ಎಂದು ಪೂರ್ಣಗೊಳಿಸೋಣವೇ?  "ಇರ್ಕುಂ ಪಲವುಂ ಅಲಂಕಾರಂಗಳ್" ಎನ್ನೋಣವೇ?

ಇದು ಅಲಂಕಾರವಿಷಯಕವಾದ ಲೇಖನವೇನೋ ಹೌದು, ಆದರೆ ಹೊಸದೇನಿಲ್ಲವೆಂದು ಸ್ಪಷ್ಟಪಡಿಸಿಬಿಡುತ್ತೇನೆ.  ಕಾವ್ಯಾಲಂಕಾರಗಳ ಅತಿಪ್ರಾಥಮಿಕ ಪರಿಚಯವುಳ್ಳವರೂ ಕೊನೆಯ ಪಕ್ಷ ಕೇಳಿಯೇ ಇರಬಹುದಾದ ಅಲಂಕಾರ, ಉಪಮಾಲಂಕಾರ.  ಈ ಅತಿಪರಿಚಯದ ಕಾರಣದಿಂದಲೇ (ಅಥವಾ ಇತರ ಅಲಂಕಾರಗಳ ಅತ್ಯಲ್ಪ ಪರಿಚಯದ ಕಾರಣದಿಂದಲೇ) ಉಪಮಾಲಂಕಾರವು ತಪ್ಪಾಗಿ ಗುರುತಿಸಲ್ಪಡುವುದೂ, ಇತರ ಅಲಂಕಾರಗಳು ಅದಾವುದೋ ದೂರದ ಸಾದೃಶ್ಯದಿಂದ ಉಪಮೆಯೆಂದು ಗುರುತಿಸಲ್ಪಡುವುದೂ ಸಾಮಾನ್ಯರಲ್ಲಿ ಸಾಮಾನ್ಯ.  ಆ ಗೊಂದಲವನ್ನು ನಿವಾರಿಸುವುದಷ್ಟೇ ಈ ಲೇಖನದ ಗುರಿ.  ಈ ಲೇಖನದ ಸಂದರ್ಭವೆಂದರೆ ’ವಾಗರ್ಥ’ದಲ್ಲಿ ಬಂದ ಒಂದು ಪ್ರಶ್ನೆ - "ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು?" ಇಲ್ಲಿರುವ ಅಲಂಕಾರ ಯಾವುದೆಂಬುದು ಪ್ರಶ್ನೆ.  ಪಂಪಭಾರತದ ದ್ವಿತೀಯಾಶ್ವಾಸದಲ್ಲಿ ಬರುವ ಈ ಸಾಲಿನಲ್ಲಿ (ಅರ್ಥದ ಹರಿವಿನಲ್ಲಿ ಸ್ವಲ್ಪ ಶೈಥಿಲ್ಯವಿದೆ, ಆದರೆ ಅದು ಆ ಸಂದರ್ಭಕ್ಕೆ ತಕ್ಕಂತೆಯೇ ಇದೆ, ಅದನ್ನು ಮುಂದೆ ವಿವರಿಸುತ್ತೇನೆ) "ನೊಳವಿಂಗೆ ಕುಪ್ಪೆ ವರಂ" ಎಂಬ ಲೋಕೋಕ್ತಿಯನ್ನು ಆಧರಿಸಿದ ಈ ಮಾತು, ಲೋಕೋಕ್ತ್ಯಲಂಕಾರವೆಂದು ಗುರುತಿಸಲ್ಪಡುತ್ತದೆ.  ಆದರೆ ಚರ್ಚೆಯಲ್ಲಿ ಇದನ್ನು ನೋಡಿದವರಲ್ಲಿ ಬಹುತೇಕ ಎಲ್ಲರೂ ಇದನ್ನು ಉಪಮಾಲಂಕಾರವೆಂದೇ ಭಾವಿಸಿದ್ದು ಕಂಡುಬಂದಿತು - ಇಲ್ಲಿ "ವೊಲ್" ಎಂಬ ’ಉಪಮಾವಾಚಕ’ ಬಂದಿದೆಯೆಂಬ ಕಾರಣಕ್ಕೆ.  ಈ ಗೊಂದಲದ ನಿವಾರಣೆಗಾಗಿ ಅಲ್ಲಿ ಬರೆದದ್ದನ್ನು ಮತ್ತೆ ಪರಿಷ್ಕರಿಸಿ ಇಲ್ಲಿ ಲೇಖನರೂಪದಲ್ಲಿ ಕೊಡುತ್ತಿದ್ದೇನೆ.

ಉಪಮಾನ ಉಪಮೇಯ ಉಪಮಾವಾಚಕ ಮತ್ತು ಸಮಾನಧರ್ಮಗಳು ಉಪಮಾಲಂಕಾರದ ಮುಖ್ಯಲಕ್ಷಣಗಳೆಂಬುದೇನೋ ನಿಜ, ಆದರೆ ಅಂತೆ/ವೋಲ್/ತೆರದಿ ಎಂದು ಬಂದದ್ದೆಲ್ಲಾ ಉಪಮಾಲಂಕಾರವಾಗುವುದಿಲ್ಲ, ಏಕೆಂದರೆ ಅಲಂಕಾರವು ಅರ್ಥಾನುಸಾರಿಯಾದದ್ದು, ಸಂದರ್ಭಾನುಸಾರಿಯಾದದ್ದು, ಮತ್ತು ಒಂದಷ್ಟು ಕಲ್ಪನೆಗೂ ಕೆಲಸ ಕೊಡುವಂಥದ್ದು (ಸ್ವಾರಸ್ಯವೇ ಇಲ್ಲದ, ಕಲ್ಪನೆಗೆ ಅವಕಾಶವೇ ಇಲ್ಲದ ನೇರ ’ವಾಸ್ತವ’ವಾದರೆ ಅಂತೆ/ವೋಲ್/ತೆರದಿ ಇದ್ದಾಗ್ಯೂ ಅವು ಅಲಂಕಾರವೇ ಆಗದೆಯೂ ಇರಬಹುದು).  ಜೊತೆಗೆ ಅಂತೆ/ವೋಲ್ ಎಂಬುದನ್ನು ಎರಡು ವಸ್ತು/ವಿಷಯಗಳ ಹೋಲಿಕೆಗಷ್ಟೇ ಬಳಸುವುದಿಲ್ಲ, ಎರಡು ಕ್ರಿಯೆಗಳು, ಎರಡು ಸನ್ನಿವೇಶಗಳು, ದೃಷ್ಟಾಂತ, ಗಾದೆ ಮೊದಲಾದ ಹಲವು ಕಡೆ ಬಳಸುತ್ತೇವೆ, ಆದರೆ ಅವೆಲ್ಲವೂ ಉಪಮೆಯಾಗುವುದಿಲ್ಲ, ಬೇರೆಬೇರೆ ಅಲಂಕಾರಗಳಾಗುತ್ತವೆ.  ಮತ್ತು ಉಪಮೆಗೆ ಅಂತೆ/ವೋಲ್ ಬರಲೇಬೇಕೆಂದೂ ಇಲ್ಲ, ಅದಿಲ್ಲದೆಯೂ ಉಪಮಾಲಂಕಾರಯುಕ್ತ ವಾಕ್ಯಗಳು ಸಾಧ್ಯ.  ಇವುಗಳನ್ನೊಂದಷ್ಟನ್ನು ಈ ಲೇಖನದಲ್ಲಿ ನೋಡಬಹುದು.  ಅಲಂಕಾರಗಳು ವ್ಯಾಕರಣವಿಷಯದಂತೆ ನಿಸ್ಸಂದಿಗ್ಧವಾದುವಲ್ಲ, ಸುಮಾರು ನೂರು-ನೂರಿಪ್ಪತ್ತು ಅಲಂಕಾರಗಳನ್ನೂ, ಒಂದೊಂದರಲ್ಲೂ ಹಲವು ಉಪಪ್ರಭೇದಗಳನ್ನೂ ಲಾಕ್ಷಣಿಕರು ಗುರುತಿಸುತ್ತಾರೆ, ವ್ಯತ್ಯಾಸಗಳು ಬಹು ಸೂಕ್ಷ್ಮ - ಒಂದೇ ಸನ್ನಿವೇಶದಲ್ಲಿ ಇಬ್ಬರು ಲಾಕ್ಷಣಿಕರಿಗೆ ಬೇರೆಬೇರೆ ಸೂಕ್ಷ್ಮಗಳು ಗೋಚರಿಸಿದರೆ, ಮತ್ತು ಅವರದನ್ನು ಬೇರೆ ಬೇರೆಯಾಗಿ ನಿರ್ದೇಶಿಸಿದರೆ ಅಚ್ಚರಿಯೇನಲ್ಲ, ಆದ್ದರಿಂದ ಅಲಂಕಾರಗಳ ವಿಷಯದಲ್ಲಿ ಇದಮಿತ್ಥಂ ಎನ್ನುವಂತೆ ಹೇಳುವುದು ಕಷ್ಟ - ಹೀಗಾಗಿ ಸ್ಥೂಲವಾಗಿ, ಈ ಮೇಲಿನ ಸಂದರ್ಭಕ್ಕೆ ಪ್ರಸ್ತುತವೆನಿಸುವಷ್ಟನ್ನು ಮಾತ್ರ ವಿವರಿಸಲೆತ್ನಿಸುತ್ತೇನೆ.

ಉಪಮೆಯ ಮುಖ್ಯ ಲಕ್ಷಣವೇನು?  ಒಂದು ಉಪಮಾನವಿರಬೇಕು (ಯಾವುದಕ್ಕೆ ಹೋಲಿಸುತ್ತೇವೋ ಅದು, ಪ್ರಸಿದ್ಧವಸ್ತು), ಒಂದು ಉಪಮೇಯ (ವರ್ಣಿಸಲ್ಪಡುತ್ತಿರುವ, ಹೋಲಿಸಲ್ಪಡುವ, ಪ್ರಸ್ತುತವಸ್ತು), ಉಪಮಾವಾಚಕ (ಅಂತೆ/ವೋಲ್/ತೆರದಿ ಇತ್ಯಾದಿ) ಮತ್ತು ಸಮಾನಧರ್ಮ (ಉಪಮಾನ ಮತ್ತು ಉಪಮೇಯ ಎರಡರ ನಡುವಿನ ಸಮಾನಧರ್ಮ).  ಉದಾಹರಣೆಗೆ "ಮಗುವಿನ ಪಾದವು ಗುಲಾಬಿಯ ದಳದಂತೆ ಕೆಂಪಗಿದೆ" ಎನ್ನುವುದನ್ನು ನೋಡಿ.  ಇಲ್ಲಿ ಗುಲಾಬಿಯ ದಳವು ಪ್ರಸಿದ್ಧವಸ್ತು, ಹೋಲಿಕೆಗೆ ಬಳಸಿದ್ದು, ಉಪಮಾನ.  ಮಗುವಿನ ಪಾದ ವರ್ಣಿಸಲ್ಪಡುತ್ತಿರುವ ಪ್ರಸ್ತುತವಸ್ತು, ಉಪಮೇಯ.  "ಅಂತೆ" ಎನ್ನುವುದು ಉಪಮಾವಾಚಕ, ಮತ್ತು ಕೆಂಪು ಎರಡೂ ವಸ್ತುಗಳಲ್ಲಿರುವ ಸಮಾನಧರ್ಮ.  ಇದು ಉಪಮಾಲಂಕಾರ.  ಇಲ್ಲಿ ಮಗುವಿನ ಪಾದದ ಕೆಂಪನ್ನು ಗುಲಾಬಿ ದಳದ ಕೆಂಪಿಗೆ ಹೋಲಿಸಲಾಗಿದೆ.  ಇದು ಕೇವಲ ಹೋಲಿಕೆಯೇ ಹೊರತು ತದ್ವತ್ ಅದೇ ಅಲ್ಲ.  ಗುಲಾಬಿ ದಳದ ಕೆಂಪು ಹಲವು ಛಾಯೆಗಳಲ್ಲಿರಬಹುದು, ಹಾಗೆಯೇ ಮಗುವಿನ ಪಾದದ ಕೆಂಪೂ.  ಈ ಎರಡರ ನಡುವಣ ವ್ಯತ್ಯಾಸವನ್ನು ನಮ್ಮ ಕಲ್ಪನೆ ತುಂಬುತ್ತದೆ - ಕೆಲವೊಮ್ಮೆ ಇದು ಸುಳ್ಳುಸುಳ್ಳೇ ಹೋಲಿಕೆಯೂ ಇರಬಹುದು, ಆದರೆ ಕವಿಯ ಕಲ್ಪನೆಯಲ್ಲಿ ಇದು ನಿಜ.  ಇದು ಅಲಂಕಾರದ ಕೆಲಸ.  ಬದಲಿಗೆ, "ಅವನ ರಕ್ತದಂತೆಯೇ ನನ್ನ ರಕ್ತವೂ ಕೆಂಪಗಿದೆ" ಎನ್ನುವ ಮಾತನ್ನು ನೋಡಿ.  ಇಲ್ಲಿಯೂ "ಅಂತೆ" ಎಂಬ ಉಪಮಾವಾಚಕವನ್ನೂ ಒಳಗೊಂಡು ಉಪಮಾಲಂಕಾರದ ನಾಲ್ಕೂ ಅಂಶಗಳೂ ಇವೆಯಲ್ಲವೇ?.  ಹಾಗಿದ್ದರೆ ಇದನ್ನೂ ಉಪಮಾಲಂಕಾರವೆನ್ನಬಹುದೇ?  ಇಲ್ಲ, ಇದು ಅಲಂಕಾರವೇ ಅಲ್ಲ.  ಏಕೆಂದರೆ ರಕ್ತದ ಬಣ್ಣವು ಕೆಂಪೇ ಎಂಬುದೂ ಇಬ್ಬರ ರಕ್ತದಲ್ಲಿ ಯಾವ ವ್ಯತ್ಯಾಸವೂ ಇಲ್ಲವೆಂಬುದೂ (ಪ್ರಯೋಗಾಲಯದಲ್ಲಿ ಕಂಡುಹಿಡಿಯುವ ವ್ಯತ್ಯಾಸ ಬೇರೆ) ಸರ್ವವಿದಿತ.  ಹೋಲಿಸುತ್ತಿರುವ ಎರಡೂ ವಸ್ತುಗಳೂ ಒಂದೇ ಆದ್ದರಿಂದ ಅಲ್ಲಿ ಹೋಲಿಕೆಗೆ ಅವಕಾಶವೇ ಇಲ್ಲ - ಆದ್ದರಿಂದ ಅದೊಂದು ವಾಸ್ತವಿಕ ಸ್ಥಿತಿಯ ಹೇಳಿಕೆಯಷ್ಟೇ, ಇಲ್ಲಿ ಕವಿಯ/ಸಹ್ರ‍್ದಯನ ಕಲ್ಪನೆಗೆ ಯಾವ ಅವಕಾಶವೂ ಇಲ್ಲ, ಅದೇ "ಸಂಜೆಯ ಸೂರ್ಯ ರಕ್ತದಂತೆ ಕೆಂಪಗಿದ್ದಾನೆ" ಎಂದರೆ?  ಇದೀಗ ಅಲಂಕಾರ, ಏಕೆಂದರೆ ರಕ್ತ ಮತ್ತು ಸೂರ್ಯನ ಕೆಂಪು ಸಮಾನಧರ್ಮ, ಹೌದು, ಆದರೆ ಎರಡೂ ತದ್ವತ್ ಒಂದೇ ಅಲ್ಲ, ಸೂರ್ಯನ ಕೆಂಪು ರಕ್ತವರ್ಣವೂ ಇರಬಹುದು, ಗುಲಾಬಿ ರಂಗಿರಬಹುದು, ಕಿತ್ತಳೆಯ ಬಣ್ಣವೂ ಇರಬಹುದು, ಆದರೆ ಸುಮಾರು ಹತ್ತಿರವೆನ್ನಿಸುವ ಸಾಮ್ಯವಿದೆ, ಆದ್ದರಿಂದ ಹೋಲಿಸಲು ಅವಕಾಶವಿದೆ, ಇದು ಅಲಂಕಾರ, ಉಪಮಾಲಂಕಾರ.  ಇವನು ನಾಯಿಯಂತೆ ಬೊಗಳುತ್ತಾನೆ" ಎನ್ನುವಲ್ಲಿ ಇವನ ಮಾತು ಮತ್ತು ನಾಯಿಯ ಬೊಗಳಿಕೆ ಒಂದೇ ಅಲ್ಲ, ಆದರೆ ಹೋಲಿಕೆಯಿದೆ, ಆದ್ದರಿಂದ ಇದು ಉಪಮಾಲಂಕಾರ. 

ಮೇಲೆ ತೋರಿಸಿದ ಉದಾಹರಣೆಗಳಲ್ಲಿ ಉಪಮಾಲಂಕಾರದ ನಾಲ್ಕೂ ಅಂಶಗಳೂ (ಉಪಮಾನ, ಉಪಮೇಯ, ಉಪಮಾವಾಚಕ ಮತ್ತು ಸಮಾನಧರ್ಮ) ಸ್ಪಷ್ಟವಾಗಿರುವುದರಿಂದ ಇಂಥವನ್ನು ಪೂರ್ಣೋಪಮೆಯೆನ್ನುತ್ತಾರೆ.  ಅಲಂಕಾರವಾದರೂ ಹೀಗೆ ವಾಕ್ಯದ ಎಲ್ಲ ಅಂಶಗಳನ್ನೂ ಬಿಡಿಸಿಬಿಡಿಸಿ ಹೇಳಿದರೆ ಅದು ರುಚಿಸುವುದೇ?  "ಗುಂಡನ ಮುಖ ಇಂಗುತಿಂದ ಮಂಗನ ಮುಖದಂತಾಯಿತು" ಎಂದರೆ ಒಂದಷ್ಟು ನಗೆ ಬರುತ್ತದೆ, ಅದೇ "ಮಂಗವು ಇಂಗನ್ನು ತಿಂದಾಗ ಅದರ ಒಗಚಿಗೆ ಮಂಗವು ಮುಖವನ್ನು ಹುಳ್ಳಗೆ ಕಿವುಚಿಕೊಳ್ಳುತ್ತದೆ.  ಮಂಗದ ಮುಖವೇ ಹಾಸ್ಯಾಸ್ಪದ, ಇನ್ನು ಅದು ಹಾಗೆ ಕಿವುಚಿಕೊಂಡಾಗ ಇನ್ನೆಷ್ಟು ಹಾಸ್ಯಾಸ್ಪದವಿರಬಹುದು; ಗುಂಡನೂ ಮುಖ ಕಿವುಚಿದಾಗ ಅದು ಆ ಇಂಗು ತಿಂದ ಮಂಗನ ಮುಖದಂತೆಯೇ ಹಾಸ್ಯಾಸ್ಪದವಾಯಿತು" ಎಂದು ವಿವರಿಸಿದರೆ ಹೇಗಾದೀತು?  ನಗುವಿನ ಜಾಗೆಯಲ್ಲಿ ಅಳು ಬಂದೀತು.  ಒಂದಷ್ಟು ಹೇಳಿ ಉಳಿದದ್ದನ್ನು ಕೇಳುಗರ ಕಲ್ಪನೆಗೆ ಬಿಡುವುದೇ ಹೆಚ್ಚು ರುಚಿ.  ಉದಾಹರಣೆಗೆ "ಇವಳ ಮುಖ ಚಂದ್ರನಂತೆ ಕಾಂತಿಯುಕ್ತವಾಗಿದೆ" ಎಂದು ಬಿಡಿಸಿಬಿಡಿಸಿ ಹೇಳುವ ಬದಲು "ಇವಳ ಮುಖ ಚಂದ್ರನಂತಿದೆ" ಎಂದು ನೋಡಿ.  ಇವಳು ಮತ್ತು ಚಂದ್ರ ಉಪಮಾನ ಉಪಮೇಯಗಳಾದುವು, ಅಂತೆ ಎಂಬ ಉಪಮಾವಾಚಕವೂ ಬಂತು.  ಆದರೆ ಇವಳ ಮುಖಕ್ಕೂ ಚಂದ್ರನಿಗೂ ಏನು ಸಮಾನಧರ್ಮ?  ಅದು ಈ ವಾಕ್ಯದಲ್ಲಿ ಬಂದಿಲ್ಲ.  ಆದರೆ ಕೇಳುವವರು, ಚಂದ್ರನಲ್ಲಿ ಎದ್ದು ಕಾಣುವ ಲೋಕಪ್ರಸಿದ್ಧವಾದ ಸೌಂದರ್ಯವನ್ನು ಇಲ್ಲಿ ಅರ್ಥೈಸಿಕೊಳ್ಳುತ್ತಾರೆ - ಚಂದ್ರನಂತೆ ಗುಂಡಗಿದೆ, ಚಂದ್ರನಂತೆ ಕಾಂತಿಯುಕ್ತವಾಗಿದೆ, ಚಂದ್ರನಂತೆ ತಂಪಾಗಿದೆ ಇತ್ಯಾದಿ (ಕಿಡಿಗೇಡಿಗಳು "ಚಂದ್ರನಂತೆ ಕಲೆಗಳಿಂದ ತುಂಬಿದೆ, ಮುಳ್ಳುಮುಖ" ಎಂದೂ ಅರ್ಥೈಸಬಹುದು ಎಂಬುದನ್ನು ಗಮನಿಸಿ - "ಈಕೆ ಸಾಕ್ಷಾತ್ ಕೋಗಿಲೆಯೇ" ಎಂದರೆ ಕೋಕಿಲಕಂಠವುಳ್ಳವಳು ಎಂಬುದು ನಾವು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುವ ರೀತಿ.  ಆದರೆ ಕೋಗಿಲೆಯ ಬಣ್ಣದವಳು ಎಂದೂ ಆಗಬಹುದಲ್ಲ)  ಹೀಗೆ ಹಲವು ವ್ಯಾಖ್ಯಾನಗಳಿಗೆಡೆಗೊಡುವುದರಿಂದ ಈ ವಾಕ್ಯದ ರುಚಿ ಹೆಚ್ಚು.  ಹೀಗೆ ಸಮಾನಧರ್ಮವನ್ನು ಬಚ್ಚಿಟ್ಟು ಹೇಳಿದಂತೆಯೇ ಉಪಮಾವಾಚಕವನ್ನೂ ಮುಚ್ಚಿಟ್ಟು ಹೇಳಬಹುದು - "ಇವಳ ಮುಖದ್ದು ಚಂದ್ರಕಾಂತಿ".  ಇಲ್ಲಿ ಇವಳ ಮುಖ ಎಂಬ ಉಪಮೇಯವಿದೆ, ಚಂದ್ರ ಎಂಬ ಉಪಮಾನವಿದೆ, ಕಾಂತಿ ಎಂಬ ಸಮಾನಧರ್ಮವಿವೆ, ಆದರೆ "ಅಂತೆ" ಎಂಬ ಉಪಮಾವಾಚಕವೇ ಇಲ್ಲ.  ಉಪಮಾವಾಚಕವಿಲ್ಲದಿದ್ದರೂ ಎರಡು ವಸ್ತುಗಳ ನಡುವಣ ಹೋಲಿಕೆಯಿರುವುದರಿಂದ ಇದು ಉಪಮಾಲಂಕಾರವೇ.  ಹೀಗೆ ಉಪಮಾವಾಕ್ಯದಲ್ಲಿ ಸಮಾನಧರ್ಮವನ್ನೋ, ಉಪಮಾವಾಚಕವನ್ನೋ ಕೈಬಿಟ್ಟು ಹೇಳಿದರೆ ಅಂಥವನ್ನು ಲುಪ್ತೋಪಮೆ ಎನ್ನುತ್ತಾರೆ - ಅದೇನೇ ಇರಲಿ, ಹೋಲಿಕೆಯಿರುವುದು ಮುಖ್ಯ (ಹಾಗೆ ಹೋಲಿಕೆಯನ್ನೇ ಕೈಬಿಟ್ಟು ಎರಡೂ ಒಂದೇ ಎಂಬಂತೆ ಹೇಳಿದರೆ, ಅದು ರೂಪಕಾಲಂಕಾರವಾಗಿಬಿಡುತ್ತದೆ  - ಇವಳದ್ದು ಚಂದರ್ಮುಖ, ಅವನದ್ದು ಕಿನ್ನರಕಂಠ ಇತ್ಯಾದಿ - ಇಲ್ಲಿ ಮುಖವೂ ಚಂದ್ರನೂ ಒಂದೇ ಎಂಬಂತೆ, ಅವನ ದನಿಯೂ ಕಿನ್ನರಧ್ವನಿಯೂ ಒಂದೇ ಎಂಬಂತೆ ಹೇಳಲಾಗಿದೆ).

ಉಪಮಾವಾಚಕವಿದ್ದುದೆಲ್ಲಾ ಅಲಂಕಾರವಾಗಲಾರದೆಂಬುದನ್ನೂ, ಉಪಮಾಲಂಕಾರವೆಂದರೆ ಅಂತೆ/ವೋಲ್ ಇರಲೇಬೇಕೆಂದಿಲ್ಲವೆಂಬುದನ್ನೂ ನೋಡಿದೆವಲ್ಲ.  ಈಗ ಅಂತೆ/ವೋಲ್ ಇದ್ದೂ ಅದು ಉಪಮಾಲಂಕಾರವಾಗದೇ ಬೇರೊಂದು ಅಲಂಕಾರವಾಗಬಹುದೇ ಎಂಬುದನ್ನೂ ನೋಡೋಣ. ಉಪಮಾಲಂಕಾರದಲ್ಲಿ ಹೋಲಿಕೆ ಎರಡು ವಸ್ತು/ಕ್ರಿಯೆ/ವಿಷಯಗಳ ಬಗೆಗಿರುತ್ತದೆ.  ಬದಲಿಗೆ ಆ ಹೋಲಿಕೆ ಯಾವುದೋ ದೃಷ್ಟಾಂತಕ್ಕೋ, ಗಾದೆಗೋ ಇದ್ದರೆ?  ಅಲ್ಲಿ ಹೋಲಿಕೆಯಿದ್ದರೂ ಅದು ಉಪಮಾಲಂಕಾರವಾಗುವುದಿಲ್ಲ ಇನ್ನೇನೋ ಅಲಂಕಾರವಾಗುತ್ತದೆ - ಉದಾಹರಣೆಗೆ "ಈ ವೈಭವವೆಲ್ಲಾ ನೀರ ಮೇಲಣ ಗುಳ್ಳೆಯಂತೆ" ಎನ್ನುವ ಮಾತನ್ನು ಗಮನಿಸಿ.  ಇಲ್ಲಿಯೂ ಉಪಮಾನ ಉಪಮೇಯ ಉಪಮಾವಾಚಕಗಳಿವೆ, ಎರಡರ ನಡುವಣ ಸಮಾನಧರ್ಮವಾದ 'ನಶ್ವರತೆ' ಊಹೆಯಿಂದ ದಕ್ಕುತ್ತದೆ.  ಉಪಮಾವಾಚಕವಾದ "ಅಂತೆ" ಇದೆ, ಸಮಾನಧರ್ಮ ಲೋಪವಾಗಿದೆ, ಆದ್ದರಿಂದ ಇದು ಲುಪ್ತೋಪಮೆ ಎನ್ನಬಹುದೇ?  ಅಲ್ಲ, ಹೋಲಿಕೆ ಎರಡು ವಸ್ತು/ವಿಷಯಗಳ ಬಗೆಗಲ್ಲ, ಬದಲಿಗೆ ಒಂದು ಹೋಲಿಕೆಗೊಳಪಟ್ಟ ವಿಷಯ ಮತ್ತೊಂದು, ಹೋಲಿಸಲು ಬಳಸುತ್ತಿರುವ ಲೋಕಪ್ರಸಿದ್ಧವಾದ ಒಂದು ದೃಷ್ಟಾಂತ - ನೀರಮೇಲಣ ಗುಳ್ಳೆ ಎನ್ನುವುದು ನಮಗೆಲ್ಲರಿಗೂ ತಿಳಿದ ದೃಷ್ಟಾಂತ - ಅದು ಶಾಶ್ವತವಲ್ಲ ಎನ್ನುವುದು ಲೋಕಾನುಭವ.  ನೀರಮೇಲಣ ಗುಳ್ಳೆಯ ದೃಷ್ಟಾಂತವನ್ನು ಬಳಸಿ, ವೈಭವದ ನಶ್ವರತೆಯನ್ನು ತಿಳಿಸಲು ಯತ್ನಿಸುತ್ತಿದೆ ಈ ವಾಕ್ಯ.  ಆದ್ದರಿಂದ ಇದು ದೃಷ್ಟಾಂತಾಲಂಕಾರ.  ಇದೇ ರೀತಿ "ಕನ್ನಡಕ್ಕೆ ಯತಿಯಿಲ್ಲ, ಕೋಣನಿಗೆ ಮತಿಯಿಲ್ಲ", ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ" ಈ ವಾಕ್ಯಗಳನ್ನು ನೋಡಬಹುದು.  ಇಲ್ಲಿ ಕೋಣನಿಗೆ ಮತಿಯಿಲ್ಲದ ಲೋಕಾನುಭವದೊಂದಿಗೆ ಕನ್ನಡಕ್ಕೆ ಯತಿಯಿಲ್ಲದ ಸಂಗತಿಯನ್ನು ಹೋಲಿಸಲಾಗಿದೆ, ಉಪ್ಪಿಗಿಂತ ರುಚಿಯಿಲ್ಲವೆಂಬ ಲೋಕಾನುಭವದೊಂದಿಗೆ ತಾಯಿಗಿಂತ ಬಂಧುವಿಲ್ಲವೆಂಬ ಸಂಗತಿಯನ್ನು ಹೋಲಿಸಲಾಗಿದೆ.  ಎರಡೂ ವಾಕ್ಯಗಳಲ್ಲಿ ಉಪಮೇಯವು ಪ್ರಸಿದ್ಧವಾದ ಒಂದು ದೃಷ್ಟಾಂತವಾಗಿದೆ.

ಹಾಗೆಯೇ ಇಂತಹ ಹೋಲಿಕೆಯು ಸಾರ್ವಜನಿಕವಾಗಿ ಪ್ರಸಿದ್ಧವಾದ ಒಂದು ಗಾದೆ/ಲೋಕೋಕ್ತಿಯೊಡನೆ ಬಂದರೆ ಅದು ಲೋಕೋಕ್ತ್ಯಲಂಕಾರವೆನಿಸುತ್ತದೆ.  ಉದಾಹರಣೆಗೆ "ಕೇಡುಗಾಲಕ್ಕೆ ನಾಯಿ ಮೊಟ್ಟೆಯಿಕ್ಕಿತಂತೆ, ಹಾಗಾಯ್ತು ನಿನ್ನ ಕೆಲಸ" ಎನ್ನುವ ಮಾತನ್ನು ನೋಡಿ.  ಇಲ್ಲಿ ಎದುರಾಳಿಯ ಯಾವುದೋ ಕೆಲಸ (ಆತನಿಗೆ ಸಹಜವಲ್ಲದ ಕೆಲಸ) ನಮ್ಮ ದೃಷ್ಟಿಯಲ್ಲಿದೆ.  ಅದು ಉಪಮೇಯ.  ಅದಕ್ಕೆ ಉಪಮಾನ "ಕೇಡುಗಾಲಕ್ಕೆ ನಾಯಿ ಮೊಟ್ಟೆಯಿಕ್ಕಿತು" ಎನ್ನುವ ಗಾದೆ/ಲೋಕೋಕ್ತಿ.  "ಹಾಗೆ" ಎನ್ನುವ ಉಪಮಾವಾಚಕವೂ, ಅಸಹಜತೆಯ/ಅಕಾಲಿಕತೆಯ ಸಮಾನಧರ್ಮವೂ ಇದೆ.  ಆದರೆ ಇಲ್ಲಿ ಉಪಮಾನವು ಒಂದು ಲೋಕೋಕ್ತಿ(ಗಾದೆ)ಯಾಗಿರುವುದರಿಂದ ಇದು ಲೋಕೋಕ್ತ್ಯಲಂಕಾರ.  ನಮ್ಮ ಉದಾಹರಣೆಯಲ್ಲಿರುವ ವಾಕ್ಯ "ನೊಳವಿಂಗೆ ಕುಪ್ಪೆ ವರಮೆಂಬವೊಲ್" (ನೊಣಕ್ಕೆ ಕುಪ್ಪೆಯೇ ವರವೆಂಬಂತೆ) ಎಂಬುದೂ ಒಂದು ಲೋಕಪ್ರಸಿದ್ಧವಾದ ಗಾದೆಯನ್ನು ಹೋಲಿಕೆಗಾಗಿ ತೆಗೆದುಕೊಳ್ಳುವುದರಿಂದ ಇದು ಲೋಕೋಕ್ತ್ಯಲಂಕಾರ (ಈ ಸಾಲಿನ ಇನ್ನೊಂದು ಸ್ವಾರಸ್ಯವನ್ನು ಆನಂತರ ವಿವರಿಸುತ್ತೇನೆ).

ಮೇಲಿನ ಉದಾಹರಣೆಯಲ್ಲಿ ಲೋಕದಲ್ಲಿ ಪ್ರಚಲಿತವಾದ ಗಾದೆಯೊಂದನ್ನು ಬಳಸಿದ್ದರಿಂದ ಅದು ಲೋಕೋಕ್ತ್ಯಲಂಕಾರವಾಯಿತು.  ಅದೇ, ಗಾದೆಯ ಬದಲಿಗೆ ಲೋಕಪ್ರಸಿದ್ಧವಾದ ಯಾವುದಾದರೂ ವಿದ್ಯಮಾನವನ್ನು ಗಾದೆಯಂತೆ ಕವಿ ಬಳಸಿದ್ದಿದ್ದರೆ, ಅದು ಅರ್ಥಾಂತರನ್ಯಾಸಾಲಂಕಾರವಾಗುತ್ತಿತ್ತು.  ಉದಾಹರಣೆಗೆ "ಅಂಥಾ ಸೊಗಸಾದ ಸಂಗೀತ, ಇವನು ಮಾತ್ರ ಹೇಗೆ ಜಪ್ಪೆಂದು ಕೂತಿದ್ದ ಅಂತೀನಿ - ಗುಂಡುಕಲ್ಲು ಎಲ್ಲಾದರೂ ತಲೆದೂಗುತ್ಯೇ?" ಇದು ಅರ್ಥಾಂತರನ್ಯಾಸ.  ಅದೇ "ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ" ಎಂದಿದ್ದರೆ ಅದು ಲೋಕೋಕ್ತ್ಯಲಂಕಾರವಾಗುತ್ತಿತ್ತು.  ಅರ್ಥಾಂತರನ್ಯಾಸಕ್ಕೆ ಇನ್ನೊಂದು ಸೊಗಸಾದ ಉದಾಹರಣೆ ನೀಡಬಹುದು, ನಾಗಚಂದ್ರನ ಪಂಪರಾಮಾಯಣದಲ್ಲಿ ಈ ಸಾಲು ಬರುತ್ತದೆ "ಅನ್ಯಾಂಗನಾಸ್ಮೃಹೆಯಂ ತಾಳ್ದಿದನಲ್ತೆ ಕಾಲವಶದಿಂ ಲಂಕೇಶ್ವರಂ ವಿಸ್ಮಯಾವಹಮಲ್ತು ಅಬ್ಧಿಯುಂ ಒರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ?" (ಲಂಕೇಶ್ವರನು ಕಾಲವಶದಿಂದ ಪರಸ್ತ್ರೀಯಲ್ಲಿ ಮೋಹಿತನಾದನಲ್ಲವೇ?  ಸಮುದ್ರವೂ ಒಮ್ಮೊಮ್ಮೆ ಕಾಲವಶದಿಂದ ತನ್ನ ಮೇರೆ ಮೀರುತ್ತದಲ್ಲ ಹಾಗೆ).  ಇಲ್ಲಿ ರಾವಣನು ಸಮುದ್ರದಂಥವನು, ಗಂಭೀರ, ತನ್ನ ಮಿತಿಯನ್ನು ಮೀರದವನು, ಪರಸ್ತ್ರೀಯರ ಕಡೆಗೆ ಕಣ್ಣೆತ್ತಿಯೂ ನೋಡದವನು.  ರಾವಣನ ಸ್ವಭಾವವು ಉಪಮೇಯ, ಸಮುದ್ರದ ಸ್ವಭಾವವು ಉಪಮಾನ.  ಆದರೆ ಸಮುದ್ರ ಕೆಲವೊಮ್ಮೆ ತನ್ನ ಸ್ವಭಾವವನ್ನು ಹೇಗೆ ಮೀರುತ್ತದೆಯೋ ಹಾಗೆಯೇ ರಾವಣನು ತನ್ನ ಸ್ವಭಾವವನ್ನು ಮೀರಿದ್ದಾನೆ (ಅಲ್ಲಿಯೂ ಹೋಲಿಕೆಯನ್ನು ಬಿಟ್ಟುಕೊಟ್ಟಿಲ್ಲ).  ಇಲ್ಲಿ ಸಮುದ್ರಸ್ವಭಾವದ ಲೋಕಪ್ರಸಿದ್ಧ ವಿದ್ಯಮಾನವನ್ನು ರಾವಣಸ್ವಭಾವದ ಚಿತ್ರಣಕ್ಕೆ ಬಳಸಿಕೊಂಡಿರುವುದರಿಂದ ಇದು ಅರ್ಥಾಂತರನ್ಯಾಸ.  ಅನ್ವೀಕ್ಷಿಕೀ ವಿದ್ಯೆಯು ಅವನಿಗೆ ಪರಿಪರಿಯಾಗಿ ಬುದ್ಧಿ ಹೇಳಿದರೂ ಕೇಳದೇ ರಾವಣನು ಈ ಕಾರ್ಯವನ್ನು ಕೈಗೊಂಡನೆನ್ನುತ್ತದೆ ಪದ್ಯ.  ಆದ್ದರಿಂದ ಆ ಸನ್ನಿವೇಶವನ್ನು ವಿವರಿಸಲು ಕವಿ "ಗೋರ್ಕಲ್ಲ ಮೇಲೆ ಮಳೆವೊಯ್ದಂತೆ ಅನ್ವೀಕ್ಷಿಕೆಯ ಬುದ್ಧಿವಾದ ವಿಫಲವಾಯಿತು" ಎನ್ನಬಹುದಿತ್ತು.  ಹಾಗೆಂದಿದ್ದರೆ, ಗೋರ್ಕಲ್ಲ ಮೇಲೆ ಮಳೆವೊಯ್ದಂತೆ ಎಂಬ ಗಾದೆಯನ್ನು ಬಳಸಿದ್ದರಿಂದ ಅದು ಲೋಕೋಕ್ತ್ಯಲಂಕಾರವಾಗುತ್ತಿತ್ತೇ? "ಗೋರ್ಕಲ್ಲ ಮೇಲೆ ಮಳೆ ಸುರಿದಂತೆ" ಎನ್ನುವುದು ಸರ್ವಜ್ಞನ ಮಾತು, ನಾಗಚಂದ್ರನ ಕಾಲಕ್ಕೆ ಆ ಲೋಕೋಕ್ತಿಯಿತ್ತೋ ಇರಲಿಲ್ಲವೋ ತಿಳಿಯದು.  ಆದ್ದರಿಂದ ಒಂದುವೇಳೆ ನಾಗಚಂದ್ರನು ಅದನ್ನು ತಾನಾಗೆಯೇ ಬಳಸಿದ್ದರೂ ಅದು ಅರ್ಥಾಂತರನ್ಯಾಸವಾಗಿಯೇ ಉಳಿಯುತ್ತಿತ್ತೇನೋ, ಸರ್ವಜ್ಞನಲ್ಲಿಯೂ ಅದು ಅರ್ಥಾಂತರನ್ಯಾಸವೇ.  ಅದೇ ವಾಕ್ಯವನ್ನು ಈಗ ನಾನು ಬಳಸಿದರೆ, ಅದು ಲೋಕೋಕ್ತ್ಯಲಂಕಾರವಾಗುತ್ತದೆ, ಏಕೆಂದರೆ ಸಧ್ಯಕ್ಕೆ ಅದೊಂದು ಗಾದೆಯಾಗಿಯೇ ಪ್ರಸಿದ್ಧವಾಗಿದೆ.

ಇದಿಷ್ಟು ಅಲಂಕಾರದ ವಿಷಯವಾಯಿತು.  ಈಗ ನಮ್ಮ ಉದಾಹರಣೆಯ ಸಾಲಿನಲ್ಲೊಂದು ಸ್ವಾರಸ್ಯವಿದೆಯೆಂದೆನಲ್ಲ, ಅದಕ್ಕೆ ಮರಳೋಣ.  ಇದು ಪಂಪಭಾರತದ ದ್ವಿತೀಯಾಶ್ವಾಸದ್ದು.  ಪೂರ್ಣಪದ್ಯ ಇಲ್ಲಿದೆ:

ಖಳ ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂ
ದಳವೊಡನೋದಿದೊಂದು ಬೆರಗಿಂಗೆ ಕೊಲಲ್ಕೆನಗಾಗದೀ ಸಭಾ
ವಳಯದೊಳೆನ್ನನೇಱಿಸಿದ ನಿನ್ನನನಾಕುಳಮೆನ್ನ ಚಟ್ಟರಿಂ
ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆವೊತ್ತೆನೇ

ಇದು, ದ್ರುಪದನಿಂದ ಅಪಮಾನಿತನಾದ ದ್ರೋಣನು ರೋಷದಿಂದ ನುಡಿಯುವ ಮಾತು.  "ಖಳನೇ, ನೊಣಕ್ಕೆ ಕುಪ್ಪೆಯೇ ವರವೆಂಬಂತೆ (ನಿನ್ನ ಯೋಗ್ಯತೆಯಾಯ್ತು), ನಿನ್ನ ಅಳವು (ಶಕ್ತಿ) ನನ್ನವರೆಗೂ (ನನ್ನಷ್ಟು) ಉಂಟೋ?  ಒಡನೆ ಓದಿದೆವೆಂಬ ಕಾರಣಕ್ಕೆ ನಿನ್ನನ್ನು ಕೊಲ್ಲಲಿಚ್ಛಿಸುವುದಿಲ್ಲ, ಆದರೆ ಹೀಗೆ ಸಭಾಮಧ್ಯದಲ್ಲಿ ನನ್ನನ್ನು ಅಪಮಾನಿಸಿದ ನಿನ್ನನ್ನು ನಿರಾಯಾಸವಾಗಿ ನನ್ನ ಶಿಷ್ಯರಿಂದ ಕಟ್ಟಿಹಾಕಿಸದಿದ್ದರೆ ನಾನು ಮೀಸೆ ಹೊತ್ತೇನು ಪ್ರಯೋಜನ"  ಇದು ಈ ಪದ್ಯದ ಭಾವಾರ್ಥ.  ಅಲಂಕಾರವಿಷಯಕವಾಗಿ ಈ ಸಾಲಿನಲ್ಲಿರುವ ಸ್ವಾರಸ್ಯವನ್ನು ಗಮನಿಸಿ.  "ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು?" ಇದು ನಮ್ಮ ಅವಗಾಹನೆಗೆ ಬೇಕಾದ ಭಾಗ. ಇಲ್ಲಿ ಎರಡು ಭಾಗಗಳಿವೆ.  ಮೊದಲನೆಯದು "ನೊಳವಿಂಗೆ ಕುಪ್ಪೆ ವರಮೆಂಬವೊಲ್" (ನೊಣಕ್ಕೆ ಕುಪ್ಪೆಯೇ ವರ ಎಂಬಂತೆ).  ಇನ್ನೊಂದು ಭಾಗ "ಆಂಬರಮುಂಟೆ ನಿನ್ನದೊಂದಳವು?" (ಆಂಬರಂ = ನನ್ನವರೆಗೂ, ನನ್ನಷ್ಟು, ನನ್ನ ಮಟ್ಟಕ್ಕೆ - ಉಂಟೇ ನಿನ್ನ ಅಳವು (ಶಕ್ತಿ)?).  ಇಲ್ಲಿ ಹೋಲಿಸುತ್ತಿರುವುದು (ಉಪಮೇಯ) ಯಾವುದಕ್ಕೆ? "ನೊಳವಿಂಗೆ ಕುಪ್ಪೆ ವರಂ" (ನೊಣಕ್ಕೆ ಕುಪ್ಪೆಯೇ ವರ) ಎಂಬ ಗಾದೆಗೆ.  ಉಪಮಾವಾಚಕವೂ ಬಂದಿದೆ "ಎಂಬವೊಲ್" (ಎನ್ನುವಂತೆ).  ಸಮಾನಧರ್ಮ (ಕುಪ್ಪೆಯಲ್ಲಿ ವಿವರಿಸುವ ಕೀಳು ಬುದ್ಧಿ), ಇಲ್ಲಿ ಕಾಣಿಸುವುದಿಲ್ಲ, ಹೋಲಿಕೆಯಿಂದ ನಾವೇ ಅರಿಯಬೇಕು.  ಸರಿ, ಆದರೆ ಹೋಲಿಕೆಯಲ್ಲಿ ಮುಖ್ಯ ಭಾಗವಾದ ಉಪಮೇಯ ಎಲ್ಲಿ? ಮುಂದಿನ ಭಾಗವನ್ನು ಉಪಮೇಯವೆನ್ನಲಾಗುವುದಿಲ್ಲ - ನೊಣಕ್ಕೆ ಕುಪ್ಪೆಯೇ ವರ ಎಂಬ ಮಾತಿಗೂ, ನಿನ್ನ ಶಕ್ತಿ ನನ್ನಷ್ಟಿದೆಯೇ ಎಂಬ ಮಾತಿಗೂ ಎಲ್ಲಿಯ ಸಂಬಂಧ?  ನೊಣಕ್ಕೆ ಕುಪ್ಪೆಯೇ ವರ ಎಂದರೆ ಅದರ ಮುಂದೆ "ನೀನು ಅಂಥವನು" ಎಂದೋ "ನಿನ್ನ ಯೋಗ್ಯತೆಯೇ ಅಷ್ಟು" ಎಂದೋ ಬರಬೇಕಿತ್ತು.  ಅಂಥವನಾದ ನೀನು ನನ್ನ ಸಮವೆಂದು ಭಾವಿಸಿದೆಯಾ ಎನ್ನುವುದು ಆಮೇಲಿನ ಮಾತು.  ಆದರೆ ಹೋಲಿಕೆಯ ಮುಖ್ಯಭಾಗವಾದ ಉಪಮೇಯವೇ ಇಲ್ಲಿಂದ ಎಗರಿಹೋಗಿದೆ.  ಮಾತಿನ ಬಂಧ ಶಿಥಿಲವಾಗಿದೆ.  ಇದೇನಿದು?  ಪಂಪ ಇಲ್ಲಿ ಎಡವಿದನೇ?  ಅಲ್ಲ, ಪಂಪ ಹಾರಿದ್ದಾನೆ, ಅದು ಆತನ ದೌರ್ಬಲ್ಯವಲ್ಲ, ಮಹತ್ತು.  ಅಲ್ಲಿನ ಸನ್ನಿವೇಶ ನೋಡಿ.  ದ್ರುಪದನಿಂದ ಭಾರೀ ದೊಡ್ಡ ಅಪಮಾನಕ್ಕೀಡಾಗಿದ್ದಾನೆ ದ್ರೋಣ, ಅನಿರೀಕ್ಷಿತವಾದ, ಊಹೆಗೇ ದಕ್ಕದ ಅಪಮಾನ ಅದು.  ಈ ಹಟಾತ್ ಅಪಮಾನದಿಂದ ಅವನ ರಕ್ತ ಕುದಿಯುತ್ತಿದೆ, ಹಲ್ಲುಗಳು ಕಟಕಟಿಸುತ್ತಿದೆ, ಮಾತು ತೊದಲುತ್ತಿದೆ.  ಇನ್ನು ವಾಕ್ಯಗಳು ಸುಸಂಬದ್ಧವಾಗಿ ಬರುವುದುಂಟೇ?  ಒಂದು ಮಾತು ಬಂದರೆ ಸಾಕು, ಉಳಿದದ್ದನ್ನು ಎದುರಾಳಿ ಅರ್ಥಮಾಡಿಕೊಳ್ಳಬೇಕು.  ಬದಲಿಗೆ ಆ ಸನ್ನಿವೇಶದಲ್ಲಿ ಸುಸಂಬದ್ಧವಾಗಿ ಮಾತಾಡುವುದೇ ಕೃತಕ, ಇದನ್ನು ಸೂಕ್ಷ್ಮಜ್ಞನಾದ ಕವಿ ಬಲ್ಲ.  ಅದಕ್ಕೇ ಸಿಟ್ಟಿನಿಂದ ಏದುಸಿರುಬಿಡುತ್ತಿದ್ದ ದ್ರೋಣನಿಂದ "ನೊಳವಿಂಗೆ ಕುಪ್ಪೆ ವರಮೆಂಬವೊಲ್" (ನೊಣಕ್ಕೆ ಕುಪ್ಪೆಯೇ ವರ ಎಂಬಂತೆ) ಎಂದು ಹೇಳಿಸಿ ಉಳಿದದ್ದನ್ನು ನಮಗೇ ಬಿಟ್ಟುಬಿಡುತ್ತಾನೆ.  ಆದ್ದರಿಂದ "ನೊಳವಿಂಗೆ ಕುಪ್ಪೆ ವರಮೆಂಬವೊಲ್" ಎಂಬುದಕ್ಕೆ "ನಿನ್ನ ಕೊಳೆತನಮಾಯ್ತು" ಎಂದು ನಾವೇ ಸೇರಿಸಿ ಓದಿಕೊಂಡರೆ ಅಲ್ಲಿಗೆ ಲೋಕೋಕ್ತ್ಯಲಂಕಾರವು ಪೂರ್ಣವಾಯಿತು.  "ಆಂಬರಮುಂಟೆ ನಿನ್ನದೊಂದಳವು?" ಎನ್ನುವುದೇನಿದ್ದರೂ ಮುಂದಿನ ಮಾತು, ಮೇಲೆ ಹೇಳಿದ ಲೋಕೋಕ್ತ್ಯಲಂಕಾರದ ಒಂದು ಭಾಗವಲ್ಲ.  ಓದುವಾಗ, ದ್ರೋಣನ ಮನಸ್ಥಿತಿಯ ಉದ್ವೇಗವು ನಮಗೆ ಅರ್ಥವಾಗಬೇಕಾದರೆ "ನೊಳವಿಂಗೆ ಕುಪ್ಪೆ ವರಮೆಂಬವೊಲ್" ಎಂದಮೇಲೆ ಅಲ್ಲೊಂದೆರಡು ಕ್ಷಣ ವಿರಾಮ ಕೊಟ್ಟು, ಉಸಿರು ಸಂಬಾಳಿಸಿಕೊಂಡು (ಸ್ವಲ್ಪ ಸಮಾಧಾನವೂ ಮಾಡಿಕೊಂಡು :) )ಮುಂದಿನ ಭಾಗ "ಆಂಬರಮುಂಟೆ ನಿನ್ನದೊಂದಳವು?" ಎಂಬುದನ್ನೋದಬೇಕು - ಆಗ ಪದ್ಯದ ಭಾವ ನಮಗೆ ದಕ್ಕುತ್ತದೆ.

ಕೊ: ಇಷ್ಟು ವಿವರಿಸಿದ ಮೇಲೆ, "ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು?" ಎಂಬ ಮೇಲಿನ ವಾಕ್ಯವು ಹೀನೋಪಮೆಯಿರಬಹುದೇ ಎಂಬ ಪ್ರಶ್ನೆ ಬಂತು.  ಇದು ಲೋಕೋಕ್ತ್ಯಲಂಕಾರವೆಂಬುದನ್ನು ಮೇಲೆಯೇ ವಿವರಿಸಿದೆ.  ಆದರೆ ಪ್ರಶ್ನೆಯೆದ್ದಿರುವುದರಿಂದ ಹೀನೋಪಮೆಯೆಂದರೇನೆಂಬುದನ್ನೂ ಒಮ್ಮೆ ತಿಳಿದುಬಿಡೋಣ.  ಹೀನೋಪಮೆ ಎನ್ನುವುದು ಒಂದು ರೀತಿ ವಿಫಲವಾದ ಉಪಮೆಯೆನ್ನಬಹುದು - ಸಾಮಾನ್ಯವಾಗಿ ಚಿರಪರಿಚಿತವಾದ ಮತ್ತು ಮಹತ್ತಾದ ಒಂದಕ್ಕೆ, ಅಪರಿಚಿತವಾದ ಮಹತ್ತಲ್ಲದ ಇನ್ನೊಂದನ್ನು ಹೋಲಿಸಿ ಹೇಳುವುದು, ಚಿಕ್ಕದನ್ನು ದೊಡ್ಡದರ ಮಟ್ಟಕ್ಕೇರಿಸುವುದು ಉಪಮಾಲಂಕಾರದ ಲಕ್ಷಣವಲ್ಲವೇ? ಉದಾಹರಣೆಗೆ, ಅಮೆಜಾನ್ ನದಿಯನ್ನು ಕುರಿತು ಹೇಳುವಾಗ, "ಈ ನದಿ ಸಾಗರದಂತಿದೆ" ಎನ್ನುತ್ತೇವೆ, ಇದು ಸಾಮಾನ್ಯವಾದ ಉಪಮಾಲಂಕಾರ, ನದಿಯ ’ದೊಡ್ಡ’ತನವನ್ನು ಹಿಗ್ಗಿಸಿ ಸಾಗರದ ದೊಡ್ಡತನದೊಂದಿಗೆ ಹೋಲಿಸುವುದು. ಆದರೆ ಅದೇ ನದಿಯನ್ನು ಕುರಿತು ಹೇಳುತ್ತಾ "ಸಾಗರವು ಈ ನದಿಯಂತೆಯೇ ಇದೆ" ಎಂದರೆ ಏನಾಗುತ್ತದೆ? ವಾಕ್ಯದ ಭೌತಿಕಾರ್ಥದಲ್ಲಿ ಎರಡೂ ಒಂದೇ, ಎರಡರಲ್ಲೂ ನದಿ ಮತ್ತು ಸಾಗರದ ಗಾತ್ರವೇ ಹೋಲಿಕೆಗೆ ಬಂದದ್ದು.  ಆದರೆ ಮೊದಲ ವಾಕ್ಯದಲ್ಲಿ ನದಿಯ ’ದೊಡ್ಡ’ತನವು ಸಾಗರದೊಂದಿಗೆ ಹೋಲಿಸಲ್ಪಟ್ಟು ಹಿಗ್ಗಿದರೆ, ಇಲ್ಲಿ ಸಾಗರದ ಗಾತ್ರವೇ ನದಿಯ ಗಾತ್ರಕ್ಕೆ ಹೋಲಿಸಲ್ಪಟ್ಟು ಕುಗ್ಗಿಯೋಯಿತು.  ಮೊದಲಾಗಿ ನದಿಯ ಮುಂದೆಯೇ ನಿಂತು, ಅದರ ಮಹತ್ವದ ಬಗೆಗೆ ಮಾತಾಡುವುದು ಬಿಟ್ಟು, ಸಾಗರದ ಬಗೆಗೆ ಮಾತಾಡುತ್ತಿದ್ದೇವೆ (ಎಂದರೆ ಆ ನದಿಯ ಮಹತ್ವವನ್ನೇ ಅಲ್ಲಗಳೆದೆವು), ಮತ್ತು ಸಾಗರವನ್ನು ಕೇವಲ ಒಂದು ನದಿಗೆ ಹೋಲಿಸುವುದರ ಮೂಲಕ ಆ ಸಾಗರದ ಮಹತ್ತನ್ನೂ ಅಲ್ಲಗಳೆದೆವು. ಹೀಗೆ ಉಪಮೆಯು ವೈಭವೀಕರಿಸುವ ತನ್ನ ಉದ್ದೇಶವನ್ನು ಕಳೆದುಕೊಂಡು, ಅದರ ವಿರುದ್ಧ ಪರಿಣಾಮವನ್ನು ನೀಡುತ್ತದೆ, ಉಪಮಾನ ಉಪಮೇಯಗಳೆರಡರ ಮಹತ್ವವನ್ನೂ ಕುಗ್ಗಿಸುತ್ತದೆ. ಇದು ಹೀನೋಪಮೆ.

ಆದರೆ ಯಾರನ್ನಾದರೂ/ಯಾವುದನ್ನಾದರೂ ಅತಿಯಾಗಿ ವೈಭವೀಕರಿಸುವ ಉದ್ದೇಶದಿಂದಲೂ ಮೇಲಿನಂತೆ ವ್ಯತಿರಿಕ್ತವಾದ ಉಪಮೆಯನ್ನು ಬಳಸುವುದುಂಟು - ನಿನ್ನ ದನಿ ಕೋಗಿಲೆಯಂತಿದೆ ಎನ್ನುವುದರ ಬದಲು, ಕೋಗಿಲೆಯ ದನಿಯೇ ನಿನ್ನದರಂತೆ ಇದೆ ಎನ್ನುವುದು (ಇಲ್ಲಿ ನಿನ್ನ ದನಿ ಕೋಗಿಲೆಯದ್ದಕ್ಕಿಂತ ಪ್ರಸಿದ್ಧವಾದುದು ಆದ್ದರಿಂದ ನಿನ್ನ ದನಿಯನ್ನೇ ಉಪಮಾನವಾಗಿ ಬಳಸುವುದು ಸೂಕ್ತ ಎನ್ನುವ ಭಾವವಿದ್ದು, ಅದು ಆ ದನಿಯನ್ನು ಕೋಗಿಲೆಯದ್ದಕ್ಕಿಂತ ಮೇಲಕ್ಕೇರಿಸುತ್ತದೆ); ಹಾಗೆಯೇ "ನೋಡು, ಆ ಆನೆ ನಿನ್ನಂತೆಯೇ ಇದೆ (ಗಾತ್ರದಲ್ಲಿ ನೀನು ಆನೆಗಿಂತಲೂ ಮಿಗಿಲು ಎನ್ನುವ ಧ್ವನಿ), ಆ ಕೋತಿ ನಿನ್ನಂತೆಯೇ ಆಡುತ್ತಿದೆ ಇತ್ಯಾದಿ. ಈ ವಿಪರೀತ ಉಪಮೆಯನ್ನು ಪ್ರತೀಪಾಲಂಕಾರ ಎಂದು ಕರೆಯುತ್ತಾರೆ.  ಇದಕ್ಕೆ ಪ್ರಖ್ಯಾತವಾದ ಇನ್ನೊಂದು ಉದಾಹರಣೆಯನ್ನು ಕೊಡಬಹುದು.  ರಾಮಾಯಣದ ಬಾಲಕಾಂಡದಲ್ಲಿ ಒಂದು ಮಾತು ಬರುತ್ತದೆ.  ಸ್ವಚ್ಛವಾಗಿ ಹರಿಯುತ್ತಿರುವ ತಮಸಾನದಿಯನ್ನು ಕಂಡ ವಾಲ್ಮೀಕಿಗಳು ಶಿಷ್ಯನಾದ ಭರದ್ವಾಜನಿಗೆ ಹೇಳುತ್ತಾರೆ - "ಅಕರ್ದಮಮಿದಂ ತೀರ್ಥಂ ಭರದ್ವಾಜ ನಿಶಾಮಯ | ರಮಣೀಯಂ ಪ್ರಸನ್ನಾಂಬು ಸನ್ಮನುಷ್ಯಮನೋ ಯಥಾ" (ಭರದ್ವಾಜಾ, ಸ್ವಚ್ಛವಾದ ತಿಳಿನೀರಿನಿಂದ ತುಂಬಿದ ಈ ತೀರ್ಥವನ್ನು ನೋಡು, ಸಜ್ಜನರ ಮನಸ್ಸಿನಂತೆ ಎಷ್ಟು ರಮಣೀಯವಾಗಿದೆ).  ಸಜ್ಜನರ ಮನಸ್ಸು ತಿಳಿನೀರಿನಂತೆ ನಿರ್ಮಲವಾಗಿರುತ್ತದೆ ಎನ್ನುವುದು ಸಾಮಾನ್ಯವಾದ ಉಪಮಾಲಂಕಾರ.  ಸಜ್ಜನರ ಮನಸ್ಸನ್ನು ನಾವರಿಯೆಯು, ಆದರೆ ತಿಳಿನೀರನ್ನು ಬಲ್ಲೆವು.  ಆದ್ದರಿಂದ ಇದರ ಸಹಾಯದಿಂದ ಅದನ್ನು ವರ್ಣಿಸುವುದು ಸಾಮಾನ್ಯ.  ಆದರೆ ಇಲ್ಲಿ ಕವಿ ತಿಳಿನೀರಿನ ಬದಲು ಸಜ್ಜನರ ಮನಸ್ಸನ್ನೇ ಉಪಮಾನವಾಗಿ ಬಳಸಿಕೊಂಡು, ಅದರ ಸಹಾಯ ನದಿಯ ತಿಳಿನೀರನ್ನು ವರ್ಣಿಸುವ ಮೂಲಕ ಸಜ್ಜನರ ಮನಸ್ಸು ಆ ನೀರಿಗಿಂತ ಹೆಚ್ಚು ನಿರ್ಮಲವಾದದ್ದೆಂದೂ, ಹೆಚ್ಚು ಪ್ರಸಿದ್ಧವೆಂದೂ ಬಿಂಬಿಸುತ್ತಾನೆ.  ಇದು ಪ್ರತೀಪಾಲಂಕಾರಕ್ಕೆ ಸೊಗಸಾದ ಉದಾಹರಣೆ.  ಹಾಗೆಯೇ, ಮುತ್ತುಸ್ವಾಮಿ ದೀಕ್ಷಿತರ ಸುಪ್ರಸಿದ್ಧ ನವಗ್ರಹ ಕೃತಿಯೊಂದರ "ಚಂದ್ರಂ ಭಜ ಮಾನಸ ಸಾಧುಹೃದಯ ಸದೃಶಂ" ಎಂಬ ಸಾಲನ್ನೂ ಗಮನಿಸಬಹುದು.  ಇಲ್ಲಿಯೂ ಸುಪ್ರಸಿದ್ಧನಾದ ಚಂದ್ರನನ್ನು ಸಾಧುಹೃದಯಕ್ಕೆ ಹೋಲಿಸುವುದರ ಮೂಲಕ ಪ್ರಕಾರಾಂತರವಾಗಿ ಸಾಧುಹೃದಯದ ಮಹತ್ವವನ್ನೇ ಎತ್ತಿ ಹಿಡಿಯುತ್ತಾರೆ, ಮತ್ತು ಚಂದ್ರನು ಆ ಸಾಧುಹೃದಯದಷ್ಟು ಆಹ್ಲಾದಕರ ಎಂದು ಸೂಚಿಸುವ ಮೂಲಕ ಚಂದ್ರನ ಆಹ್ಲಾದಕಾರಕತ್ವವನ್ನೇ ಒಂದು ಮೆಟ್ಟಿಲು ಮೇಲೇರಿಸುತ್ತಾರೆ.

Monday, January 7, 2019

ಆಲೂಗಡ್ಡೆ ಈರುಳ್ಳಿ ಹುಳಿ

ಯಾವಾಗಲೂ ಗಂಭೀರ ವಿಷಯವನ್ನೇ ಏಕೆ ಬರೆಯಬೇಕೆಂದು ನಾನು ವಾದಿಸುವುದಿಲ್ಲ, ಆದರೆ ತಿನ್ನುವುದು ಗಂಭೀರ ವಿಷಯವಲ್ಲವೆಂದು ಯಾರು ಹೇಳಿದರು.  ಒಂದು ದಿನ ಏಕಾದಶಿ ನಿಟ್ಟುಪವಾಸ ಮಾಡಿ, ಮರುದಿನ ಪಾರಣೆ, ಇನ್ನೇನು ತುತ್ತು ಬಾಯಿಗಿಡಬೇಕೆಂದಾಗ ಯಾರೋ ದೂರದ ಬಂಧುವೊಬ್ಬರು ಶಿವನಪಾದ ಸೇರಿದ ಸುದ್ದಿ ಬಂತೆನ್ನಿ, ಅಥವಾ ಅಡುಗೆ ಮಾಡುವವರೊಡನೆ (ಅದು ನಿಮ್ಮ ಪತ್ನಿಯಿರಬಹುದು, ಪತಿಯೇ ಇರಬಹುದು) ಸ್ವಲ್ಪ ಕಿರೀಕ್ ಮಾಡಿಕೊಂಡು ನೋಡಿ - ಸಾರಿಗೋ ಪಲ್ಯಕ್ಕೋ ಒಂದು ಹಿಡಿ ಉಪ್ಪೋ ಮೆಣಸಿನಪುಡಿಯೋ ಹೆಚ್ಚು ಬೀಳಲಿ, ಆಗ, ಆಹಾರ ಎಷ್ಟು ಗಂಭೀರ ವಿಷಯವೆಂಬುದು ಮನದಟ್ಟಾಗುತ್ತದೆ - ಅಷ್ಟಲ್ಲದೇ ವೇದಗಳು ಸಾರಿದುವೇ? "ಅನ್ನಂ ಬ್ರಹ್ಮೇತಿವ್ಯಜಾನಾತ್"

ಇರಲಿ, ಒಂದು ಆಲೂಗೆಡ್ಡೆ ಈರುಳ್ಳಿ ಹುಳಿಯ ರೆಸಿಪಿ ಹಾಕಲಿಕ್ಕೆ ಇಷ್ಟೊಂದು ಜಸ್ಟಿಫಿಕೇಶನ್ ಏಕೆ ಎಂದಿರಾ?  ಅದೇ ನನಗೂ ಅರ್ಥವಾಗುತ್ತಿಲ್ಲ.  ಅಡುಗೆಯ ಘನತೆಯ ಬಗೆಗೆ ಇಷ್ಟು ಕೀಳರಿಮೆಯಿದ್ದಿದ್ದರೆ ಮಂಗರಸನು ಸೂಪಶಾಸ್ತ್ರವನ್ನು ಬರೆಯುತ್ತಲೇ ಇರಲಿಲ್ಲ, ಇರಲಿ.  ನಾನಾದರೂ ಕುಗ್ಗಲಿ ಏಕೆ, ದಿಟ್ಟತನದಿಂದಲೇ ಹೇಳುತ್ತೇನೆ.  ಫೇಸ್ಬುಕ್ಕಿನಲ್ಲಿ ಸ್ನೇಹಿತರೊಬ್ಬರು ಕೇಳಿದರು.  ಹಲವು ವರ್ಷಗಳಿಂದ ಮಾಡಿಕೊಂಡು ಬಂದ ಸ್ವಯಂಪಾಕ - ಹೇಳಿದೆ.  ಮರೆತುಹೋಗಬಾರದೆಂದು ಇಲ್ಲಿ ಬರೆದಿಟ್ಟುಕೊಂಡಿದ್ದೇನೆ - ಬರೆದಿಟ್ಟದ್ದು ಒಂದಷ್ಟು ಜನಕ್ಕಾದರೂ ಉಪಯೋಗವಾಗುವುದಾದರೆ ಆಗಿಯೇ ಹೋಗಲಿ ಎಂದು ಇಲ್ಲಿ ಹಾಕುತ್ತಿದ್ದೇನೆ.  ಮತ್ತೆ, "ಉಪಯೋಗವೇ ಆಗುತ್ತೆ ಎಂದು ಹೇಗೆ ಹೇಳುತ್ತೀ?" ಎಂದು ಕೇಳಬೇಡಿ - ಸುಮಾರು ವರ್ಷಗಳು ಹಸಿಯಗೊಡದೇ ಈ ಸ್ವಯಂಪಾಕವು ನನ್ನನ್ನು ಪೊರೆದಿದೆಯೆಂಬ ಧೈರ್ಯದ ಮೇಲೆ ಹೇಳುತ್ತಿದ್ದೇನೆ :) Take it with a pinch/bag of salt as required.

1) ಒಲೆ ಹೊತ್ತಿಸಿ (ತುಂಬಾ ಮುಖ್ಯ - ಅನುಭವದಿಂದ ಕಲಿತದ್ದು)

೨) ಎರಡು ಕಪ್ ತೊಗರೀಬೇಳೆ ಬೇಯಲಿಕ್ಕೆ ಇಡಿ (ಮುಚ್ಚಿಡುವ ಮೊದಲು ಮೇಲೊಂದು ಚಮಚೆ ಎಣ್ಣೆ ಹಾಕಿ ಅರಿಸಿನ ಉದುರಿಸಿ)

೩) ರುಚಿಗೆ ತಕ್ಕಷ್ಟು ಹುಣಸೇ ಹಣ್ಣು ನೆನೆಹಾಕಿಕೊಳ್ಳಿ

೪) ಎರಡು ಚಮಚೆ ಹುಳಿ ಪುಡಿ, ಒಂದಷ್ಟು ಶುಂಠಿ, ಒಂದು ಹಿಡಿಯಷ್ಟು ತೆಂಗಿನಕಾಯಿ ತುರಿ, ಒಂದು ಅರ್ಧ ಹಿಡಿ ಹುರಿಗಡಲೆ, ಇಷ್ಟನ್ನು ಮಿಕ್ಸಿಯಲ್ಲಿ ಹಾಕಿಕೊಳ್ಳಿ (ನಾನು ಇದರ ಜೊತೆಗೆ ಈರುಳ್ಳಿ ಟೊಮ್ಯಾಟೋ ಕೂಡ ರುಬ್ಬಿ ಹಾಕಿಬಿಡುತ್ತೇನೆ, ಸಾಮಾನ್ಯವಾಗಿ ನೇರ ಹುಳಿಗೆ ಹಾಕುತ್ತಾರೆ, ಹೋಳು ಸಿಕ್ಕುವ ಹಾಗೆ. ಹೇಗಾದರೂ ಮಾಡಬಹುದು - ಸಣ್ಣೀರುಳ್ಳಿ (ಸಾಂಬಾರ್ ಈರುಳ್ಳಿ) ಸಿಕ್ಕರೆ ಅದರ ರುಚಿಯೇ ಬೇರೆ).

೫) ಇಷ್ಟು ಹೊತ್ತಿಗೆ ಕುಕ್ಕರ್ ಕೂಗಿರಬೇಕು, ಆರಲು ಬಿಟ್ಟು, ದೊಡ್ಡದಾಗಿ ಹೆಚ್ಚಿದ ಆಲೂ ತೆರೆದ ಪಾತ್ರೆಯಲ್ಲಿ ಬೇಯಲು ಇಡಿ. ಹುಳಿಗೆ ಹಾಕಬೇಕಾದಷ್ಟು ಉಪ್ಪಿನಲ್ಲಿ ಅರ್ಧವನ್ನು ಈಗಲೇ ಹಾಕಿಬಿಡಿ.

೬) ಮೇಲೆ ರುಬ್ಬಲು ತಯಾರಾದ ಮಿಶ್ರಣಕ್ಕೆ, ನೆನೆಹಾಕಿದ ಹುಣಸೇಹಣ್ಣು ಕಿವುಚಿ ಹಾಕಿ, ಮಿಕ್ಸಿ ಮಾಡಿಟ್ಟುಕೊಳ್ಳಿ

೭) ಕುಕ್ಕರ್ ತೆಗೆದು ಬೆಂದ ಬೇಳೆಯನ್ನು ಚೆನ್ನಾಗಿ ಮಿದ್ದು, ಬೇಯುತ್ತಿರುವ ಆಲೂ ಜೊತೆಗೆ ಹಾಕಿ. ಈರುಳ್ಳಿ ಮತ್ತು ಟೊಮ್ಯಾಟೋ ಹೆಚ್ಚಿ ಹಾಕಿ (ಮೇಲಿನಂತೆ ಈಗಾಗಲೇ ರುಬ್ಬಿ ಹಾಕಿಲ್ಲದಿದ್ದರೆ).

೮) ಇಷ್ಟು ಹೊತ್ತಿಗೆ ಆಲೂ ಒಂದರ್ಧ ಬೆಂದಿರಬೇಕು. ಮೇಲೆ ಮಿಕ್ಸಿ ಮಾಡಿಟ್ಟುಕೊಂಡ ಮಿಶ್ರಣವನ್ನು ಅದಕ್ಕೆ ಹಾಕಿ.

೯) ಇದಾದಮೇಲೆ ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಿರುವುದು ಒಳ್ಳೆಯದು. ಒಂದು ಕುದಿ ಬಂದನಂತರ ಒಂದೆರಡು ದೊಡ್ಡ ಹಸಿ ಮೆಣಸಿನ ಕಾಯನ್ನು ಉದ್ದುದ್ದಕ್ಕೆ ಸೀಳಿ ಅದಕ್ಕೆ ಹಾಕಿಬಿಡಿ, ಹಾಗೇ ಒಂದು ನಿಂಬೇಹಣ್ಣು ಹಿಂಡಿ (ಸಾಂಬಾರು ಒಂದು ಸ್ವಲ್ಪ ಹುಳಿ ಮುಂದಾಗಿದ್ದರೆ ಚೆನ್ನ ಎಂಬುದಕ್ಕಾಗಿ ಇದು, ಇಲ್ಲದಿದ್ದರೆ ಅರ್ಧ ನಿಂಬೇಹಣ್ಣು ಸಾಕು), ಜೊತೆಗೆ ಅರ್ಧ ನಿಂಬೆಯ ಗಾತ್ರದ ಬೆಲ್ಲ.

೧೦) ಈಗ ಹುಳಿಯ ಗಟ್ಟಿತನ ನೋಡಿಕೊಂಡು ಒಂದೋ ಎರಡೋ ಲೋಟ ನೀರು, ಇನ್ನೂ ಹಾಕಬೇಕಾದ ಉಳಿದ ಉಪ್ಪನ್ನು ಹಾಕಿಬಿಡಿ. ನೀರಿಗೆ ಒಂದು ಚಮಚ ಅಕ್ಕಿಪುಡಿಯನ್ನು ಕದರಿ ಹಾಕಿದರೆ ಇನ್ನೂ ರುಚಿ.

೧೧) ಎಲ್ಲಾ ಒಂದು ಕುದಿ ಕುದ್ದಮೇಲೆ, ಒಂದು ಜೊಂಪೆ ಬೇರು ಕಿತ್ತು ಶುದ್ಧಗೊಳಿಸಿದ ಕೊತ್ತಂಬರಿ ಸೊಪ್ಪನ್ನು ಹಾಗೆಯೇ ಹುಳಿಯಲ್ಲಿ ಮುಳುಗಿಸಿ ಮುಚ್ಚಿಟ್ಟುಬಿಡಿ - ಸಣ್ಣ ಉರಿಯಿರಲಿ.

೧೨) ಇನ್ನೊಂದು ಒಲೆಯ ಮೇಲೆ ಎರಡೋ ಮೂರೋ ಚಮಚೆ ಒಳ್ಳೆಯ ತುಪ್ಪ ಕಾಯಲಿಕ್ಕಿಟ್ಟು (ಎಣ್ಣೆಯೇ? ಅಡುಗೆಗೆ ತುಪ್ಪವಿಲ್ಲದಿದ್ದರೆ ಅದೆಂತಹ ಸಮೃದ್ಧಿ   ತುಪ್ಪವನ್ನೇ ಬಳಸಿ), ಅದಕ್ಕೆ ಸಾಸಿವೆ ಹಾಕಿ ಚಟಗುಟ್ಟಿಸಿ, ಆಮೇಲೆ ಒಂದು ಚಮಚೆಯಷ್ಟು ಕಡಲೆ ಬೇಳೆ, ಉದ್ದಿನಬೇಳೆ ಒಂದೆರಡು ಕಾಳು ಮೆಂತ್ಯ, ಒಂದು ಚಿಟುಕೆ ಇಂಗಿನ ಪುಡಿ, ಒಂದೆಸಳು ಕರಿಬೇವಿನ ಸೊಪ್ಪಿನ ಎಲೆಗಳು ಇಷ್ಟನ್ನೂ ಹಾಕಿ ಬಾಡಿಸಿ ಒಗ್ಗರಣೆ ಹಾಕಿ.

೧೩) ಒಳ್ಳೆಯ ಘಮಘಮ ಸಾಂಬಾರಿನ ಫೋಟೋ ತೆಗೆದು (ಇದು ಮುಖ್ಯ), ಒಲೆ ಆರಿಸಿ, ಮುಚ್ಚಿಟ್ಟುಬಿಡಿ (ಇದೂ ತುಂಬಾ ಮುಖ್ಯ)

೧೪) ಬಂದು ಫೇಸ್ಬುಕ್ಕಿಗೆ ಆ ಫೋಟೋ ಅಪ್ಲೋಡ್ ಮಾಡಿ, ಒಂದೈವತ್ತು ಅರವತ್ತು ಲೈಕ್ ಬರುವವರೆಗೆ ಕಾಯಿರಿ.

೧೫) ಇಷ್ಟುಹೊತ್ತಿಗೆ ಕೊತ್ತಂಬರಿ ಸೊಪ್ಪು ತನ್ನ ಘಮಲನ್ನು ಬಿಟ್ಟಿರುತ್ತದೆ. ಈಗ ಪಾತ್ರೆಯನ್ನು ನೇರ ಊಟದ ಟೇಬಲಿಗೆ ವರ್ಗಾಯಿಸಿ (ಅನ್ನ ಮಾಡಿದ್ದೀರಿ ತಾನೆ?); ಸೊಗಸಾದ ಸಾಂಬಾರ್-ಅನ್ನವನ್ನು ಸವಿಯಲು ಸಿದ್ಧರಾಗಿ.

ಸೂ: ಮೇಲೆ (೪) ರಲ್ಲಿ ಹುಳಿಪುಡಿಯ ಬಗ್ಗೆ ಹೇಳಿದೆ. ಹುಳಿಪುಡಿ - ಶಕ್ತಿ ಸಾಂಬಾರ್ ಪೌಡರನ್ನೋ ಇನ್ನಾವುದನ್ನೋ ಹಾಕಬಹುದು. ಮನೆಯಲ್ಲೇ ಮಾಡಿಕೊಳ್ಳುವುದಾದರೆ ಹೀಗೆ (ಅಳತೆ ಹೇಳಲು ಕಷ್ಟ, ಒಂದು ವಾರಕ್ಕಾಗುವಷ್ಟು ಹೀಗೆ ತಯಾರಿಸಿಕೊಳ್ಳಬಹುದು):

೧) ಕಾಲು ಕೆಜಿ ಒಣಮೆಣಸಿನ ಕಾಯಿ (ಗುಂಟೂರಿನದ್ದಾದರೆ ಒಂದು ಹಿಡಿ ಕಡಿಮೆ ಮಾಡಿ), ಒಂದು ಹಿಡಿ ಕೊತ್ತಂಬರಿ ಬೀಜ, ಒಂದು ಹಿಡಿ ಕಡಲೇಬೇಳೆ, ಒಂದು ಹಿಡಿ ಉದ್ದಿನ ಬೇಳೆ, ಒಂದರ್ಧ ಹಿಡಿ ಮೆಂತ್ಯ, ಎರಡು ಚಮಚ ಜೀರಿಗೆ, ಎರಡು ಚಮಚ ಮೆಣಸು, ಅರ್ಧ ಚಮಚ ಇಂಗಿನ ಪುಡಿ, ಅರ್ಧ ಗಿಟುಕು ಕೊಬ್ಬರಿ ತುರಿ - ಎಲ್ಲವನ್ನೂ ಬೇರೆಬೇರೆ ಹುರಿದಿಟ್ಟುಕೊಳ್ಳಿ (ಕೆಲವರು ಚಕ್ಕೆ, ಲವಂಗ ಎಲ್ಲಾ ಹಾಕುತ್ತಾರೆ, ನನಗೆ ಸೇರದು)

೨) ಆರಿದ ಮೇಲೆ, ಚೆನ್ನಾಗಿ ತೊಳೆದು ಒಣಗಿಸಿದ ಒಂದು ಹತ್ತೋ ಹದಿನೈದೋ ಎಸಳು ಕರಿಬೇವಿನ ಎಲೆಯನ್ನೂ ಹಾಕಿ ಮಿಕ್ಸಿ ಮಾಡಿಟ್ಟುಕೊಳ್ಳಿ

ಮೇಲಿನ ಅಳತೆ ಕೇವಲ ಕೈತೂಕದ್ದಷ್ಟೇ. ಮಾಡುವಾಗ ನೋಡಿಕೊಂಡು ಹದಕ್ಕೆ ತಕ್ಕಂತೆ ಹಾಕಬೇಕು.

ವಿ.ಸೂ: ರುಬ್ಬಿದ ಹುಳಿ ಮಾಡುವುದಾದರೆ ಇನ್ನೂ ರುಚಿಯಾಗಿರುತ್ತದೆ. ಹಾಗೆ ಮಾಡುವುದಾದರೆ, ಮೇಲೆ (೪)ರಲ್ಲಿರುವ ಸೂಚನೆಯ ಬದಲು ಹೀಗೆ ಮಾಡಿ:

೧) ಒಂದೆರಡು ಗುಂಟೂರು ಮೆಣಸಿನಕಾಯಿ (ಬೇರೆಯದಾದರೆ ನಾಲ್ಕು), ಒಂದರ್ಧ ಚಮಚ ಕೊತ್ತಂಬರಿ ಬೀಜ, ಅರ್ಧರ್ಧ ಚಮಚೆ ಕಡಲೇಬೇಳೆ, ಉದ್ದಿನ ಬೇಳೆ, ಎರಡೆರಡು ಕಾಳು ಮೆಂತ್ಯ, ಜೀರಿಗೆ, ಮೆಣಸು, ಚುಟುಕೆ ಇಂಗು ಇಷ್ಟನ್ನೂ ಹುರಿದುಕೊಳ್ಳಿ (ಹುರಿಯದೇ ಹಾಗೇ ಮಾಡುವುದೂ ಉಂಟು, ಅದೂ ಒಂದು ರೀತಿ ರುಚಿ - ಹಾಗೆ ಮಾಡುವುದಾದರೆ ಕಡಲೇಬೇಳೆ, ಉದ್ದಿನಬೇಳೆ ಮತ್ತು ಮೆಂತ್ಯವನ್ನು ಕೆಲಕಾಲ ನೀರಿನಲ್ಲಿ ನೆನೆ ಹಾಕಿಟ್ಟುಕೊಳ್ಳುವುದು ಒಳ್ಳೆಯದು)

೨) ಮೇಲೆ ಹೇಳಿದ ಮಿಶ್ರಣಕ್ಕೆ ಒಂದೆಸಳು ಕರಿಬೇವಿನ ಸೊಪ್ಪು, ಒಂದಷ್ಟು ಶುಂಠಿ, ಎರಡು ಹಿಡಿಯಷ್ಟು ತೆಂಗಿನಕಾಯಿ ತುರಿ, ಒಂದು ಅರ್ಧ ಹಿಡಿ ಹುರಿಗಡಲೆ ಸೇರಿಸಿ ರುಬ್ಬಿಕೊಳ್ಳಿ (ಮೇಲೆ ಹೇಳಿದಂತೆ, ಈರುಳ್ಳಿ ಮತ್ತು ಟೊಮ್ಯಾಟೋ ಕೂಡ ಸೇರಿಸಿ ರುಬ್ಬಿಕೊಳ್ಳಬಹುದು, ಅಥವಾ ಸಾಮಾನ್ಯವಾಗಿ ಮಾಡುವಂತೆ ಅದನ್ನ ಪ್ರತ್ಯೇಕವಾಗಿಯೂ ಹಾಕಬಹುದು). ರುಬ್ಬಲು ಮಿಕ್ಸಿಯ ಬದಲು ಒರಳಿದ್ದರೆ ಇನ್ನೂ ಚಂದ

ಐದನೇ ಪಾಯಿಂಟಿನಿಂದಾಚೆಗೆ ಮೇಲೆ ಹೇಳಿದಂತೆ ಮುಂದುವರೆಯಿರಿ.

ಚಿತ್ರಕೃಪೆ: ವಿಕಿಪೀಡಿಯಾ (Trimmed to fit the frame)