Sunday, July 22, 2007

ಕಾವ್ಯ ಎಂದರೆ...

ಶತಮಾನಗಳಿಂದ ಕನ್ನಡ ಕಾವ್ಯ ನಡೆದುಬಂದ ದಾರಿಯನ್ನು ಸುಮ್ಮನೆ ಸ್ಥೂಲವಾಗಿ ಗುರುತಿಸುವ ಪ್ರಯತ್ನ ಈ ಕವನ. ಹಾಗೆಂದು ಎಲ್ಲ ಕಾಲಘಟ್ಟದಲ್ಲಿ ಬರುವ ಎಲ್ಲ ಪ್ರಾತಿನಿಧಿಕ ಮಾದರಿಗಳನ್ನು/ಕವಿಗಳನ್ನು ಈ ಕವನ ಒಳಗೊಳ್ಳುವುದಿಲ್ಲ, ಅದು ಈ ಕವನದ ಉದ್ದೇಶವೂ ಅಲ್ಲ. ಕೇವಲ, ಕಾವ್ಯ ನಡೆದು ಬಂದ ದಾರಿಯನ್ನು ನನಗೆ ತೋರಿದಂತೆ ಚಿತ್ರಿಸುವುದಷ್ಟೇ ಈ ಕವನದ ಉದ್ದೇಶ.

ಆಯಾ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ ಭಾಷೆ, ಶೈಲಿ, ಪ್ರತಿಮೆಗಳ ಮಾದರಿಯನ್ನೇ ಬಳಸಿಕೊಳ್ಳುವ, ಹಾಗೂ ಆಯಾ ಕಾಲಘಟ್ಟದಲ್ಲಿ ಅತಿಯೆನ್ನಿಸುವಷ್ಟು ಎದ್ದು ಕಾಣುವ ಅಂಶಗಳನ್ನು ಬಳಸುವ ಮೂಲಕ ಆಯಾ ಕಾಲದ ಕಾವ್ಯವನ್ನು ಗುರುತಿಸುವ ಪ್ರಯತ್ನ ಇಲ್ಲಿದೆ. ಇದು ಕೆಲವೊಮ್ಮೆ ವಿಡಂಬನೆಯ ರೂಪವನ್ನು ತಳೆದಿರುವುದೂ ಇದೆ. ಆದರೆ ಇದರ ಅರ್ಥ ಆ ಕಾಲಘಟ್ಟದಲ್ಲಿ ಬಂದ ಕಾವ್ಯ ಜೊಳ್ಳು ಅಥವ ಹಾಸ್ಯಾಸ್ಪದ ಎಂದಲ್ಲ; ನಮಗೆ ತೀರ ಪ್ರಿಯರಾದವರ ಅಂಕು ಡೊಂಕುಗಳನ್ನು ಎತ್ತಿ ತೋರಿಸಿ ತಮಾಷೆ ಮಾಡುವ ರೀತಿ ಎಂದಿಟ್ಟುಕೊಳ್ಳಬಹುದು.

=========
ಕಾವ್ಯ ಎಂದರೆ...
=========
(೧)
ಕವಿರಾಜಮಾರ್ಗಮೆಸೆದಿರೆ,
ಕವಿಕುಳಾಶ್ರಯ ಕಲ್ಪತರುವೆನಿಪ
ಭೂಪಾಲ ಕುಳಮಿರಲ್,
ಕವಿ ಮೇಘ ಸಂಘರ್ಷಣೋಜ್ಜನಿತ
ಕಾವ್ಯ ವಿದ್ಯುಲ್ಲತಾ ಪ್ರಭಾವಳಯಂ;
ಕಾವ್ಯ ವರ್ಷಂ;
ಕವಿಮತ್ತವಾರಣ ಪರಸ್ಪರಾಭಿಸಂಘಟ್ಟನೋತ್ಪಾದಿತಾರುಣ ಸಲಿಲ ಸಮ್ಮಿಶ್ರಿತ
ಕಾವ್ಯ ಸರಸ್ವತೀ ಸರಿತ್ಪ್ರವಾಹಂ.

(೨)
ಕಾವ್ಯಪ್ರಯೋಜನಂ
ವಾರ್ಧಕಮನೈದಿ ಬರಲೊಂದು ಸೊಗಂ;
ಕಂದನ ರಗಳೆಯದೊಂದು ಮುದಂ;
ಭಾಮಿನಿಯ ನಲ್ವಾತಿನ ಸೊಗಕೇಂ ಸಮನೈ?
ಕೇಳದೋ,
ವೀರನಾರಯಣಕುವರಂ ಪೇಳುತಿಹ
ಭಾರತದ ಚಾರು ಕತೆಯಂ.

(೩)
ಅನುಭವದ ಮಂಟಪದಿ
ನುಡಿಯ ಸ್ಫಟಿಕ ಶಲಾಕೆಯಲುಗೆ
ತೊಳಗಿದ ಮಾಣಿಕದ ದೀಪ್ತಿ
ತೋರಿದ್ದು
ಶೂನ್ಯ
ಸಿಂಹಾಸನ.
ಕೊನೆಗುಳಿದದ್ದು
ಸಿಂಹಾಸನವೂ ಅಲ್ಲ!
ಮಾಡು ಸಿಕ್ಕಲಿಲ್ಲ,
ಮಾಡಿನ ಗೂಡೂ ದಕ್ಕಲಿಲ್ಲ;
ನಾಮ
ಸಂಕೀರ್ತನೆಗೆ ಆದಿಕೇಶವ - ವಿಠಲ.

(೪)
ಹೊಂಬಿಸಿಲು,
ಹೂ - ಹಣ್ಣು,
ಹೆಣ್ಣ ಕುರುಳಿನ ಲಾಸ್ಯ;
ಹಿತವಾಗಿ ಅಲ್ಲಲ್ಲಿ ಹೊಕ್ಕು ಹೊರಡುವ ಹಾಸ್ಯ;
ಕವಿಶೈಲದಲಿ ಕುಳಿತು ಧ್ಯಾನಿಸಿ ನೋಡೆ
ಬಾನಿನಲಿ ನರ್ತಿಸುವ ಹೊನ್ನ ನವಿಲು;
ಒಮ್ಮೊಮ್ಮೆ ಕಾರಿರುಳು,
ಜೀರಿಡುವ ಮಲೆ - ಕಾನು
ರುದ್ರ ಭೀಷಣ ಭೀಷ್ಮ ಸಹ್ಯಾದ್ರಿ;
ಮಹಾ ಮೇಘ ರಂಜಿತ ರುಂದ್ರ ಗಗನ, ಘನ ನೀಲ;
ಮರುಕ್ಷಣವೆ ಮಳೆ,
ಗುರುಕೃಪೆಯೆ ಇಳೆಗೆ ಸುರಿದಂತೆ;
ಮಲೆ ದೇವ ನಗುವಂತೆ
ತೀಡುತಿಹ ತಂಗಾಳಿ
ಯಲಿ
ಮಿಂದು ಪಾವನ
ಯದುಶೈಲ.

(೫)
ಯೋನಿತಳದಿಂದೆಳೆದು
ಎದೆಹೊಕ್ಕು ಹೊರಡುವ ನಾಳ,
ವೈತರಣಿ;
ಎದೆಯಾಳದುದ್ವೇಗ,
ಮತಿ ವಿಚಾರ - ವಿಕಾರ
ಕಲಮಲಿಸಿ
ತೊಳಸಿ
ಹೊರನುಗ್ಗಿರಲು
ಪೈಪಿನ ತುದಿಗೆ
ನವರಂಧ್ರ ಝಾಲರಿಯಿಟ್ಟು
ಕಾರಂಜಿ
ತೋರಿಸುವ ಕಸರತ್ತು;
ಕೆಲವೊಮ್ಮೆ
ಧಾತು ಸಾಲದೆ
ಹೊರಟ ಮಾತೂ ಹರಡಿ
ಜರಡಿ
ಬಿದ್ದ
ಪೈಪಿನ ತುದಿಗೆ
ಸೊರಗಿದ ಬುಗ್ಗೆ.

(೬)
ಧಿಕ್ಕಾರ...
ತಳೆದ ಮುಖವಾಡಕ್ಕೆ,
ಒಣಹುಲ್ಲ ಮಾಡಕ್ಕೆ,
ನನಗೆ, ನಿನಗೆ, ಅದಕೆ, ಇದಕೆ;
ನೂರು ಕಣ್ಣು ಮಣ್ಣಲ್ಲಿ ಹುದುಗಿರುವಾಗ,
ಕಾವ್ಯ?!
ಪುಟಗೋಸಿ, ಮಣ್ಣಂಗಟ್ಟಿ.
ಎಲ್ಲಿ ಹುಡುಕುವೆ ನೀನು?
ಕಾವ್ಯವಿರುವುದು ನಿನ್ನ ಪೆನ್ನಲಲ್ಲೋ ಅಣ್ಣ,
ಮಣ್ಣಿನಲ್ಲಿ.
ಎಸೆ ಪೆನ್ನು,
ಹಿಡಿ ಮಣ್ಣು;
ತೊಡೆ,
ಹಣೆಗೆ...
ಕಣ್ಣು ಬಸೆದಿರುವ ಬಿಸಿ
ನೆತ್ತರನೆ ಮಸಿ ಮಾಡಿ
ಬರೆ,
ಮುಟ್ಟಿ ನೋಡಿಕೊಳ್ಳೋಹಾಗೆ.
ಬಂಡೇಳು! ಬಂಡೇಳು!!
ಓ ಏಳು ಬಂಡೆಯೆ ಏಳು.
ಒಂದೆರಡಾದರೂ ಬೀಳದಿರೆ ತಲೆ,
ವ್ಯರ್ಥ ಕಾಣೋ ನಿನ್ನ ಲೇಖನ ಕಲೆ!

(೭)
ವರುಷ ವರುಷಗಳಿಂದ
ಹರಿದಿಹಳು ಕಾವ್ಯಧುನಿ,
ರಕ್ತೆ, ಶ್ಯಾಮಲೆ, ಅಮಲೆ,
ಮಲಿನೆ, ಶುದ್ಧಸ್ಫಟಿಕೆ,
ವಿವಿಧ ವರ್ಣೆ;
ಈ-ಮೈಲು ಎಸ್ಸೆಮ್ಮೆಸ್ಸುಗಳ
ವೇಗದಬ್ಬರದಲ್ಲೂ
ಕೆಲವೊಮ್ಮೆ ಸುವ್ಯಕ್ತೆ,
ಕೆಲವೊಮ್ಮೆ ಲುಪ್ತೆ.

- ೦೮/೦೫/೨೦೦೬