Friday, April 9, 2021

ಬಿಲ್ಡರ್ ಬೊಂಬೇಶಪ್ಪನವರಿಗೆ ಕಾಡೋಜಪ್ರಶಸ್ತಿ


ಬಿಲ್ಡರ್ ಬೊಂಬೇಶಪ್ಪ ಮಣ್ಣೆಪ್ಪಾ ಕಲ್ಲಿಟಗಿಯವರು ನಾಡಿನ ಪ್ರತಿಷ್ಠಿತ ಕಾಡೋಜ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂಬ ವಿಷಯವನ್ನು ತಿಳಿದು ಸುದ್ದಿಮನೆ ಸುಬ್ಬಣ್ಣನಿಗೆ ಶಾಕ್ ಏನೂ ಆಗದಿದ್ದರೂ ಒಳಗೆಲ್ಲಾ ಏನೋ ಒಂದು ರೀತಿ ಕಲಮಲವುಂಟಾಯಿತು.  ಸುಬ್ಬಣ್ಣನಿಗೇನು ಈ ಪ್ರಶಸ್ತಿಗಳ ವಿಶೇಷ ಪರಿಚಯವಿರಲಿಲ್ಲ.  ಕೊಂಪೀ ನಗರದ ಯಾವುದೋ ಮೂಲೆ ಗಲ್ಲಿಯಲ್ಲಿ ಬಾಡಿಗೆ ಗೂಡಿನಲ್ಲಿ ಕಾಲ್ಚಾಚಿಕೊಂಡೇ, ಹೇಗೋ ಇರುವುದಕ್ಕೊಂದು ಸ್ವಂತ ನೆಲ, ತಲೆಯ ಮೇಲೊಂದು ಸ್ವಂತ ಸೂರಿನ ಕನಸು ಕಾಣುತ್ತಿದ್ದ ಸುಬ್ಬಣ್ಣನಿಗೆ ಕಾಡು ಬೆಳೆಸುವುದಿರಲಿ, ಉಳಿಸುವ ಬಗೆಗೂ ವಿಶೇಷ ಆಸ್ಥೆಯೂ ಇರಲಿಲ್ಲ, ಬದಲಿಗೆ ಕಾಡೊಂದನ್ನು ಸವರಿ ಹೊಸದೊಂದು ಲೇಔಟ್ ಆಗಿ ಅದರಲ್ಲೊಂದು ಸೈಟು ತನಗೆ ಸಿಕ್ಕರೆ ಅವನೇನು ಬೇಡವೆನ್ನುತ್ತಿರಲಿಲ್ಲ.  ಆದರೂ ನಾಡು ಬೆಳೆಯುವುದೆಂದರೆ ಕಾಡು ನಾಶವಾಗುವುದೆಂಬ ಸಾಮಾನ್ಯಜ್ಞಾನವನ್ನು ಪಡೆದಿದ್ದ ಸುಬ್ಬಣ್ಣನಿಗೆ, ನಾಡು ಬೆಳೆಸುವವರ ಪ್ರತಿನಿಧಿಯಂತಿದ್ದ ಆಧುನಿಕವಿಶ್ವಕರ್ಮ ಸಿವಿಲ್ ಕಂತ್ರಾಟುದಾರನೊಬ್ಬನಿಗೆ, ಕೊನೆಯ ಪಕ್ಷ ನಾಡೋಜ ಪ್ರಶಸ್ತಿಯನ್ನಾದರೂ ನೀಡುವ ಬದಲು ಹೋಗಿ ಹೋಗಿ ಕಾಡೋಜ ಪ್ರಶಸ್ತಿ ನೀಡಿದ್ದು ಅಚ್ಚರಿಯನ್ನುಂಟುಮಾಡಿತ್ತು.  ಆ ಪ್ರಶಸ್ತಿ ಕಾಡು ಉಳಿಸಿ ಬೆಳೆಸಲು ವಿಶೇಷ ಶ್ರಮಪಟ್ಟವರಿಗೆ, ಆ ಮೂಲಕ ಅರಣ್ಯಸಂರಕ್ಷಣೆಯ ವಿಷಯದಲ್ಲಿ ಇಡೀ ನಾಡಿಗೆ ಮಾದರಿಯಾದವರಿಗೆ ನೀಡುವ ಪ್ರಶಸ್ತಿಯೆಂಬ ವಿಷಯ ತಿಳಿದಿತ್ತು - ಆ ಪ್ರಶಸ್ತಿಯಲ್ಲಿ ಪ್ರಶಸ್ತಿಫಲಕ, ಶಾಲು, ಹಾರ, ಒಂದು ಹತ್ತೋ ಇಪ್ಪತ್ತೋ ಲಕ್ಷ ಪುಡಿಗಾಸಿನ ಜೊತೆಗೆ, ಮರದ ನೆರಳಲ್ಲಿ ಕಲ್ಲಿನ ಮೇಲೊಂದು ಕಾಲಿಟ್ಟುಕೊಂಡು ನಾಲಿಗೆ ಚಾಚಿಕೊಂಡು ಡೊಳ್ಳು ಹೊಟ್ಟೆ ಬಿಟ್ಟುಕೊಂಡು ಒಂದು ಕೈಯಲ್ಲಿ ಭರ್ಜಿ, ಇನ್ನೊಂದು ಕೈಯಲ್ಲಿ ಸುತ್ತ ನೆರೆದಿದ್ದ ಹುಲಿ, ಸಿಂಹ, ಜಿಂಕೆಗಳ ತಲೆ ಸವರುವ ಕಾಡವ್ವದೇವಿಯ ವಿಗ್ರಹವೂ ಇರುವುದೆಂಬ ವಿಷಯ ತಿಳಿದಿತ್ತು.  ಇಂಥದ್ದೊಂದು ಪ್ರಶಸ್ತಿಯನ್ನು ಸಿವಿಲ್ ಕಂತ್ರಾಟಿನೊಟ್ಟಿಗೆ ಅನಫೀಶಿಯಲ್ಲಾಗಿ ಮರಸಾಗಾಣಿಕೆ ಕಂತ್ರಾಟನ್ನೂ ಹೊಂದಿದ್ದ ಬೊಂಬೇಶಪ್ಪನಿಗೆ ನೀಡುವ ವಿಷಯ ಸುಬ್ಬಣ್ಣನಂತಹ ಸುಬ್ಬಣ್ಣನಿಗೂ ಬಲುದೊಡ್ಡ ಅಸಂಗತನಾಟಕದ ದೃಶ್ಯದಂತೆ, ಅರೆನಿದ್ದೆಯಲ್ಲಿ ಬೀಳುವ ಸಿಲ್ಲಿ ಸಿಲ್ಲಿ ಕನಸಿನಂತೆ ಕಂಡಿತು. 

ತಲೆಕೊಡವಿಕೊಂಡವನೇ ಎದ್ದು, ಹಲ್ಲುಜ್ಜಿ, ಮೈಮೇಲೊಂದಷ್ಟು ನೀರು ಸುರುವಿಕೊಂಡು, ಅಂಗಿ ಪ್ಯಾಂಟು ನೇತುಹಾಕಿಕೊಂಡು ಸೀದಾ ಪತ್ರಿಕಾಕಛೇರಿಗೆ ಬಂದ.  ಹಳೇ ಕಡತಗಳನ್ನು ಹುಡುಕಿದವನಿಗೆ, ಅಕ್ರಮವಾಗಿ ಕಡವೆ ಚರ್ಮ ಸಾಗಿಸುತ್ತಿದ್ದ ವಾಹನವೊಂದು ಸೀಜ್ ಆಗಿದ್ದ ಸುದ್ದಿ ಕಣ್ಣಿಗೆ ಬಿತ್ತು.  ಆ ವಾಹನ ನಗರದ ಬೊಂಬೇಶಪ್ಪ ಕಲ್ಲಿಟಗಿ ಎನ್ನುವಾತನಿಗೆ ಸೇರಿದ್ದೆಂಬ ಸುದ್ದಿ ವಿಶೇಷವಾಗಿ ಗಮನ ಸೆಳೆಯಿತು.  ಮುಂದೇನಾಗಿರಬೇಹುದೆಂದು ಆಮೇಲಿನ ಕಡತಗಳನ್ನು ಬಹುವಾಗಿ ಹುಡುಕಿದರೂ, ಸಾಮಾನ್ಯವಾಗಿ ಇಂತಹ ಸುದ್ದಿಗಳಲ್ಲಾಗುವಂತೆ ಮುಂದಿನ ಯಾವ ಸುದ್ದಿಯೂ ಸಿಗಲಿಲ್ಲ. ಅಲ್ಲಿಗೆ ಆ ಸುದ್ದಿ ಮುಗಿದಿತ್ತು, ಆದರೆ ಆಮೇಲಿನ ದಿನಗಳಲ್ಲಿ ಬೊಂಬೇಶಪ್ಪನವರು ಸಾಕಷ್ಟು ಗಣ್ಯರಾಗಿ ಬೆಳೆದಿದ್ದರು, ಹಲವು ದೊಡ್ಡದೊಡ್ಡ ಮಂತ್ರಿಗಳೊಟ್ಟಿಗೆ ಗುರುತಿಸಿಕೊಂಡಿದ್ದರು, ಆಡಳಿತಪಕ್ಷದ ಸದಸ್ಯರಾಗಿದ್ದರು, ಪಕ್ಷದ ಟಿಕೇಟಿನ ಮೇಲೆ ಎಲೆಕ್ಷನ್ನಿಗೆ ನಿಂತು ಸೋತೂ ಇದ್ದರು.  ಅವರ "ಬೊಂಬೇಶ್ ಕನ್ಸ್ಟ್ರಕ್ಷನ್ ಕಂಪನಿ" ಬಡಜನರಿಗೆ ನೆರಳಾಗುವ ಮನೆಭಾಗ್ಯ ಯೋಜನೆಯಲ್ಲಿ ಮನೆ ಕಟ್ಟಿಕೊಡುವ ಸರ್ಕಾರೀ ಯೋಜನೆಯ ಕಂತ್ರಾಟು ಹಿಡಿದಿತ್ತು.  ಅಷ್ಟೇನೂ ಒಳ್ಳೆಯ ಗುಣಮಟ್ಟದ್ದಲ್ಲದ ಅನೇಕ ಮನೆಗಳು ಕುಸಿದು ಒಂದಿಬ್ಬರು ಗೊಟಕ್ ಅಂದ ಸುದ್ದಿಗಳೂ ಪತ್ರಿಕೆಯ ಮೂಲೆಯಲ್ಲೆಲ್ಲೋ ಅಲ್ಲಿಲ್ಲಿ ವರದಿಯಾಗಿದ್ದುವು.  ಒಟ್ಟಿನಲ್ಲಿ ಬಿಲ್ಡರ್ ಬೊಂಬೇಶಪ್ಪಣ್ಣಾರು ಇವೆಲ್ಲವನ್ನೂ ಮೀರಿದ ಆಢ್ಯರಾಗಿದ್ದರು.   ಈಗ ಈ ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾಗಿದ್ದು ಅವರ ವರ್ಚಸ್ಸನ್ನು ಇನ್ನಷ್ಟು ವಿಸ್ತರಿಸಲಿತ್ತು.  ಹೀಗಿರುವಾಗ, ಇವರದ್ದೊಂದು ಸಂದರ್ಶನ "ನಮ್ಮಲ್ಲೇ ಮೊದಲು" ಎಂದು ಪತ್ರಿಕೆಯಲ್ಲಿ ಪ್ರಕಟವಾದರೆ ಯಜಮಾನರು ಸುಪ್ರೀತರಾಗಿ ತನಗೂ ಸ್ವಲ್ಪ ಭಡ್ತಿ ವಗೈರೆ ಸಿಗಬಹುದೆಂಬ ಕನಸು ಕಾಣುತ್ತಾ ಬೊಂಬೇಶಪ್ಪನವರನ್ನು ಸಂದರ್ಶಿಸಲು ಕೈನೆಟಿಕ್ ಹೋಂಡಾ ಹತ್ತಿದ ಸುಬ್ಬಣ್ಣ.

ಹೋಗುತ್ತಾ ಹೋಗುತ್ತಾ, ಪ್ರಶಸ್ತಿಯನ್ನು ವಿಧಾಯಿಸುವ ಕೊಂಪೀ ಗುರುಕುಲವೂ ಸ್ವಲ್ಪ ದೂರದಲ್ಲೇ ಇರುವ ವಿಷಯ ಹೊಳೆದು, ಕುಲಪತಿಗಳಾದ ಹ ಛೀ ಸುರೇಶರನ್ನೂ ಸಂದರ್ಶಿಸಿದರೆ ಚೆನ್ನಾಗಿರುತ್ತದೆಂದು ಪ್ರೇರಣೆಯಾಗಿ ಗಾಡಿ ತಿರುಗಿಸಿದ.   ಎಸ್ಸೆಸ್ಸೆಲ್ಸಿಯಲ್ಲೇ ಐದು ಬಾರಿ ಪಲ್ಟೀ ಹೊಡೆದು, ಆಮೇಲೆ ಈ ಕುಲಗೆಟ್ಟ ಎಜುಕೇಷನ್ ಸಿಸ್ಟಮ್ಮಿನ ಮೇಲೇ ಅಸಹ್ಯ ಬಂದು ಶಾಲೆಗೆ ಶರಣು ಹೊಡೆದು ಮುಂದೆ ಹೇಗೋ ಬಡೇಬಾಯಿಯಿಂದಲೇ ಇಷ್ಟಾದರೂ ಮೇಲೆ ಬಂದಿದ್ದ ಸುಬ್ಬಣ್ಣ ಬದುಕಿನಲ್ಲೇ ಎಂದೂ ಗುರುಕುಲಗಳ ಕಡೆ ತಲೆ ಹಾಕಿದವನಲ್ಲ.  ಗೂಗಲ್ ಮ್ಯಾಪ್ ಹಾಕಿಕೊಂಡು ಗುರುಕುಲದ ಮಹಾದ್ವಾರಕ್ಕೆ ತಲುಪಿದ ಸುಬ್ಬಣ್ಣನನ್ನು ರಸ್ತೆಯ ಇಕ್ಕೆಲಗಳಲ್ಲೂ ಬೆಳೆದು ವಿಸ್ತಾರವಾಗಿ ಹರಡಿದ್ದ ಜಾಲಿಯ ಮೆಳೆ ಸ್ವಾಗತಿಸಿತು.  ವಸಂತಕಾಲವಾದ್ದರಿಂದ ಜಾಲಿಯೂ ಚಿಗುರೊಡೆದು ನಯನಮನೋಹರವಾಗಿತ್ತು.  ನಡುನಡುವೆ ಅಲ್ಲಲ್ಲಿ ಪಾಪಾಸುಕಳ್ಳಿಯೇ ಮೊದಲಾದ ವಿವಿಧ ಬಗೆಯ ಕ್ಯಾಕ್ಟಸುಗಳೂ, ಎಕ್ಕದ ಗಿಡ, ದತ್ತೂರಿ ಗಿಡ, ತುರಿಕೆ ಗಿಡವೇ ಮೊದಲಾದ ಚಿಕ್ಕಚಿಕ್ಕ ಗಿಡಗಳೂ, ನೆಗ್ಗಿಲುಮುಳ್ಳು, ನೆಲಮುಳ್ಳು, ಮುಟ್ಟಿದರೆ ಮುನಿ ಮೊದಲಾದ ನೆಲಗಿಡಗಳೂ ವಿಪುಲವಾಗಿ ಹಬ್ಬಿತ್ತು.  ಅಲ್ಲೇ ನಡುನಡುವೆ ಪೊದೆಗಳ ಸಂದುಗೊಂದುಗಳಲ್ಲಿ ಕುಳಿತು ನಿಂತು ಅರೆಮಲಗಿ ವಿಶೇಷಾಧ್ಯಯನ ನಡೆಸುತ್ತಿದ್ದ ವಿದ್ಯಾರ್ಥಿ ಜೋಡಿಗಳು ಗುರುಕುಲದ ಪವಿತ್ರತಾಣಕ್ಕೊಂದು ವಿಶೇಷಶೋಭೆ ನೀಡಿದ್ದುವು.  ಹತ್ತಕ್ಕೇ ಸಾಲಿಗೆ ಶರಣು ಹೊಡೆದು ಇಂಥದ್ದೊಂದು ಸ್ವರ್ಗದಿಂದ ವಂಚಿತನಾದುದಕ್ಕೆ ತನ್ನನ್ನು ತಾನೇ ಹಳಿದುಕೊಳ್ಳುತ್ತಾ ಸುಬ್ಬಣ್ಣ ಕುಲಪತಿಗಳ ಕುಟೀರವನ್ನು ಸಮೀಪಿಸಿದ.  ಕುಟೀರವಿನ್ನೂ ಫರ್ಲಾಂಗೆರಡು ಫರ್ಲಾಂಗಿರುವಂತೆಯೇ ಕಮ್ಮನೆ ವಾಸನೆಯಾಗಿ ಆರಂಭವಾದದ್ದು ಗಬ್ಬನೆಯ ವಾಸನೆಯಾಗಿ ಮೂಗಿಗಡರತೊಡಗಿದೊಡನೆ ಇದು ಪುರಾತನತೆಯ ವಿಕೃತಸಂಕೇತವಾದ ಮುಗ್ಗಲು ವಾಸನೆಯೆಂಬುದನ್ನು ಆತನ ಚಾಣಾಕ್ಷ ಮೂಗು ಕಂಡುಹಿಡಿದುಬಿಟ್ಟಿತ್ತು.  ಗುರುಕುಟೀರದ ಸುತ್ತ ನೆಲದಲ್ಲಿ ಹಲವು ದೊಗರುಗಳು ಬಿಲಗಳಾಗಿ ಹೊಕ್ಕು, ಕುಟೀರದ ಗೋಡೆಗಳಲ್ಲಿ ಹೊರಟಿದ್ದುವು.  ಅಲ್ಲೇ ಪಕ್ಕದಲ್ಲಿ ಮಣ್ಣುಗುಡ್ಡೆಯ ಮೇಲೆ ತೂಕಡಿಸುತ್ತಿದ್ದ ಕಂತ್ರಿನಾಯೊಂದು ಇವನನ್ನು ಕತ್ತೆತ್ತಿ ನೋಡಿ, ಬೊಗಳಲು ಬೇಕಾದ ಆಮಿಷವನ್ನೇನೂ ಕಾಣದೇ ಸುಮ್ಮನೇ "ಲೊಳ್" ಎಂದು ಹೇಳಿ, ಬಾಲವನ್ನು ಗುಂಡಾಡಿಸಿ ಮತ್ತೆ ತೂಕಡಿಕೆಗೆ ಜಾರಿತು.  ಜಗುಲಿಯೇರಿದಂತೆ, ಬೆಟ್ಟದಂತೆ ಬಿದ್ದಿದ್ದ ಗ್ರಂಥರಾಶಿಗಳು, ಅಷ್ಟೇನೂ ಪುರಾತನವಲ್ಲದಿದ್ದರೂ ದೂಳು ಗೆದ್ದಲುಗಳ ಹೊಡೆತಕ್ಕೆ ಜರ್ಜರಿತವಾಗಿ ಬಿದ್ದಿದ್ದುವು.  ಬೇಡಬೇಡವೆಂದರೂ "ಆಹಾ, ಇಲ್ಲಿ ಸರಸ್ವತಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆ" ಎಂಬ ಆಲೋಚನೆ ಹೊರಟು ತೆಳುನಗೆ ಮೂಡಿತು ಸುಬ್ಬಣ್ಣನ ಮೊಗದಲ್ಲಿ.  ಸವರ್ಣಚಿತ್ರೆಯಾಗಿ ಕಂಗೊಳಿಸುತ್ತಿದ್ದ ಸರಸ್ವತಿಯೊಬ್ಬಳನ್ನು ಕೈಗೆತ್ತಿಕೊಂಡು, ಮೇಲೆ ಕುಳಿತಿದ್ದ ದೂಳು ಜಾಡಿಸಲು ತನ್ನ ಪೃಷ್ಟಭಾಗಕ್ಕೆ ಬಡಿದುಕೊಳ್ಳುತ್ತಿದ್ದಂತೆ, ಅದರಿಂದ ಹೊಮ್ಮಿದ ದೂಳಿನ ಮೋಡ ಆತನ ನಾಸಿಕಸುರಂಗಕ್ಕಡರಿ, ಆತನ ಜನ್ಮಜನ್ಮಾಂತರದ ಅಜ್ಞಾನವೇ ಕರಗಿ ಹೊರಚಿಮ್ಮಿತೋ ಎಂಬಂತೆ ಸಾಲುಸಾಲು ಸೀನುಗಳು ಢೇಂಕರಿಸಿಕೊಂಡು ಹೊರಬಿದ್ದುವು.  ಆ ಢೇಂಕಾರಕ್ಕೆ ಬೆಚ್ಚಿ ಪುಸ್ತಕರಾಶಿಯಡಿಯಿಂದ ಒಂದೆರಡು ಹೆಗ್ಗಣಗಳು ಬುದುಗ್ಗನೆ ಹೊರಚಿಮ್ಮಿ ಅವನ ಕಾಲನ್ನೇ ಪರಚಿಕೊಂಡು ಓಡಿ ಹೋದುವು. ಇದ್ದಕ್ಕಿದ್ದಂತೆ ಸಂಭವಿಸಿದ ಮಹಾಮೂಷಕಾಘಾತದಿಂದ ಬೆಚ್ಚಿ, "ಅರೆ ಬಡ್ಡೀದೇ" ಎಂದು ಚೀತ್ಕರಿಸಿ, ಕ್ಷಣಕಾಲ ಭಯತಾಂಡವವಾಡಿ, ಸಾವರಿಸಿಕೊಂಡು, ಕೈಲಿದ್ದ ಸರಸ್ವತಿಯನ್ನು ದಬಕ್ಕನೆ ಅಲ್ಲೇ ಬೀಳಿಸಿ, ಕ್ಷಣಕಾಲ ಸಾವರಿಸಿಕೊಂಡನಂತರ ಎದುರಿಗಿದ್ದ ಗುರುವಾಗಿಲನ್ನು (ಗುರುಗಳ ಕೋಣೆಯ ಬಾಗಿಲನ್ನು) ತಳ್ಳಿಕೊಂಡು ಒಳನುಗ್ಗಿದ.  ಕುಲಪತಿಗಳಿಗೋ ಆಗಷ್ಟೇ ಭೋಜನವಿರಾಮ - ಉಣ್ಣುವುದರಿಂದ ತುಸು ವಿಶ್ರಾಂತಿ ತೆಗೆದುಕೊಳ್ಳುವ ಸಮಯ.  ಅರ್ಧ ಕಚ್ಚಿ ಬಿಟ್ಟಿದ್ದ ತುಂಡು, ಇನ್ನೂ ಅರ್ಧ ಉಳಿದಿದ್ದ ಗುಂಡು ಹಾಗೇ ಡೆಸ್ಕಿನ ಮೇಲಿದ್ದುವು.  ಜೊತೆಗೆ ಯಾರೋ ಶಿಷ್ಯೋತ್ತಮರು ತಂದಿಟ್ಟಿದ್ದ ಗುರುದಕ್ಷಿಣೆಯ ಪ್ಯಾಕೆಟ್ ಬೇರೆ, ಎಣಿಸಲು ಆಗಷ್ಟೇ ಬಿಚ್ಚಿದ್ದು.  ಸುಳಿವನ್ನೇ ಕೊಡದೇ ಇದ್ದಕ್ಕಿದ್ದಂತೆ ಎಬಡನಂತೆ ನುಗ್ಗಿದ ಸುಬ್ಬಣ್ಣನನ್ನು ಕಂಡು ಗುರುಗಳು ಬೆಚ್ಚಿ, ಕ್ಷಣದಲ್ಲೇ ಸಾವರಿಸಿಕೊಂಡು, ಅಭ್ಯಾಸಬಲದಿಂದಲೋ ಎಂಬಂತೆ ಮಿಂಚಿನ ವೇಗದಲ್ಲಿ ಅವೆಲ್ಲವನ್ನೂ ಡೆಸ್ಕಿನಡಿ ತಳ್ಳಿ ಕ್ಷಣಮಾತ್ರದಲ್ಲಿ ನಿಟಾರಾದರು.  ಇದ್ದಕ್ಕಿದ್ದಂತೆ ನುಗ್ಗಿದ್ದರಿಂದ ಆದ ಮುಜುಗರಕ್ಕೆ ಕ್ಷಮೆ ಕೇಳುವವನಂತೆ ಹಲ್ಲು ಗಿಂಜುತ್ತಾ ದೇಶಾವರಿ ನಗೆ ಬೀರುತ್ತಾ ಸುಬ್ಬಣ್ಣ "ನಮಸ್ಕಾರ್ರೀ ಸರ, ನಾ ಸುದ್ದೀಮನಿ ಸುಬ್ಬಣ್ಣ ಅದೀನ್ರೀ" ಎಂದು ಕೈಮುಗಿದ.  ಸುದ್ದೀಮನಿ ಹೆಸರು ಕೇಳಿದಂತೆ ಗುರುಗಳ ಹುಬ್ಬಿನ ಗಂಟುಗಳು ಸಡಿಲಗೊಂಡು, ಮುಖದಲ್ಲಿ ಸ್ನೇಹದ ನಗೆ ಹರಡಿತು.  "ಓಹೋಹೋ... ಬರ್ರೀ ಬರ್ರೀ, ಏನ್ ಸಮಾಚಾರ? ಬಕವಾಜ್ ಬೊಗಳೇಶಪ್ಪಾರು ಆರಾಮೇನ್ರೀ? ಕುಂದರ್ ರೀ ನಿಂತೇ ಅದೀರೆಲಾ" ಎಂದು ಕೂರಲು ಸನ್ನೆ ಮಾಡಿದರು ಗುರುಗಳು.  ಕೂರುತ್ತಾ ತಾನು ಬಂದಿರುವ ಉದ್ದೇಶ ತಿಳಿಸಿ ಮೊದಲ ಪ್ರಶ್ನೆಯ ಬಾಣ ಬಿಟ್ಟ ಸುಬ್ಬಣ್ಣ - 

"ಸರ, ಇವತ್ತ ಈ ಬಿಲ್ಡರ್ ಬೊಂಬೇಶಪ್ಪ ಮಣ್ಣೆಪ್ಪಾ ಕಲ್ಲಿಟಗಿಯವರಿಗೆ ಕಾಡೋಜ ಪ್ರಶಸ್ತಿಗ ಆಯ್ಕಿ ಮಾಡೀರಿ ಅಂತ ಸುದ್ದಿ ಬಂತು.  ನಿಜವೇನ್ರೀ?"

ವಿಷಯ ಗಂಭೀರವಾದದ್ದನ್ನು ಕಂಡು ಮತ್ತಷ್ಟು ನಿಟಾರಾಗಿ ಕೂತ ಗುರುಗಳು, ಎಂದೂ ಇಲ್ಲದ ಗಾಂಭೀರ್ಯವನ್ನೂ, ಎಂದೂ ಇದ್ದಿರದ ಅಕ್ಯಾಡೆಮಿಕ್ ಲುಕ್ಕನ್ನೂ ಮೋರೆಯ ಮೇಲೆಳೆದುಕೊಂಡು ಸಂಪ್ರದಾಯದಂತೆ ಒಮ್ಮೆ ಕೆಮ್ಮಿ, ಕ್ಷಣಕಾಲ ಧ್ಯಾನಾಸಕ್ತರಾಗಿ, ಇದ್ದಕ್ಕಿದ್ದಂತೆ ಗ್ರಾಂಥಿಕಭಾಷೆಗೆ ಹೊರಳಿಕೊಂಡು ಮಾತಾಡತೊಡಗಿದರು - 

"ನೋಡಿ ಸುಬ್ಬಣ್ಣನವರೇ, ನಿಮಗೇಕೆ ಈ ಅನುಮಾನ ಬಂತೋ ತಿಳಿಯಲಿಲ್ಲ.  ಹೌದು, ಬೊಂಬೇಶಪ್ಪನವರು ಪ್ರಶಸ್ತಿಗೆ ಆಯ್ಕೆಯಾಗಿರುವುದು ನಿಜವೇ"

ಆ ಉತ್ತರದಲ್ಲಿನ "ಏನೀಗ" ಎಂಬ ಧ್ವನಿಯನ್ನು ಗುರುತಿಸಿ ಮರುಪ್ರಶ್ನೆ ಕೇಳಿದ ಸುಬ್ಬಣ್ಣ - "ಅಲ್ರೀ ಸರ, ಕಾಡೋಜ ಪ್ರಶಸ್ತಿ ಇರೂದು ಕಾಡು ಉಳಿಸಿ ಬೆಳೆಸೋದ್ರಾಗ ಸಾಧನಾ ಮಾಡ್ದವರಿಗೆ ಹೌದಿಲ್ಲೋ, ಇವ್ರು ನೋಡಿದ್ರ ಕಾಡ ಕಡಿದು ನಾಡು ಮಾಡೋ ಮಂದಿ.  ನಾಡ ಬೆಳಸೋರಿಗೆ ನಾಡೋಜ ಪ್ರಶಸ್ತಿ ನೀಡಿದ್ರೊಂದು ಸಮಾ ಹೌದಿಲ್ರೀ ಸರ?  ಕಾಡೋಜ ಪ್ರಶಸ್ತಿ ಯಾಕಂತ..."

ಮುಂದುವರೆಯುತ್ತಿದ್ದ ಅವನ ಮಾತನ್ನು ಅಲ್ಲಿಗೇ ತುಂಡರಿಸಿ ನಿಸೂರಾಗಿ ಹೇಳಿದರು ಗುರುಗಳು - "ನೋಡಿ ಇವರೇ, ಕಾಡು ಬೆಳೆಸುವವರಿಗೇ ಕಾಡೋಜ ಪ್ರಶಸ್ತಿ ಕೊಡಬೇಕೆಂದು ಎಲ್ಲಿದೆ?  ಕಾಡು ಮರ ಗಿಡ ಪ್ರಾಣಿಗಳಿಗೆ ಸಂಬಂಧಿಸಿದಂತೆ ಯಾರಿಗೆ ಬೇಕಾದರೂ ಕಾಡೋಜ ಪ್ರಶಸ್ತಿಯನ್ನು ಕೊಡಬಹುದು.  ಈ ಹಿಂದೆಯೂ ಕಾಡನ್ನು ಹೊರತುಪಡಿಸಿ ಅನ್ಯಕ್ಷೇತ್ರಗಳವರಿಗೂ ಪ್ರಶಸ್ತಿ ಕೊಟ್ಟ ನಿದರ್ಶನಗಳಿವೆ.  ಅಲ್ಲದೇ ಇವರೇನು ಕಾಡಿಗೆ ಹೊರಗಿನವರಲ್ಲ.  ಈ ಭಾಗದ ಕಾಡಿನ ಇಂಚಿಂಚೂ ಇವರಿಗೆ ಗೊತ್ತು, ಅರಣ್ಯಸಂಪತ್ತಿನ ಬಹಳ ಆಳ ಪರಿಚಯವಿದೆ.  ಕಾಡಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಕೂಡ.  ಇಷ್ಟಕ್ಕೂ ಕಾಡೋಜ ಎಂದರೆ ಏನು?  ಜ ಎಂದರೆ ಹುಟ್ಟಿದವನು.  ಕಾಡೋಜ ಎಂದರೆ ಕಾಡಿನಲ್ಲಿ ಹುಟ್ಟಿದವನು (ಮನೋಜ = ಮನಸ್ಸಿನಲ್ಲಿ ಹುಟ್ಟಿದವನು, ವಕ್ಷೋಜ = ಎದೆಯಲ್ಲಿ ಹುಟ್ಟಿದ್ದು, ಹೀಗೆ).  ಇವರು ಕಾಡಿನಲ್ಲಿ ಹುಟ್ಟಿದವರೇ ಎನ್ನುವುದು ಅವರನ್ನು ನೋಡಿದರೇ ತಿಳಿಯುತ್ತದಲ್ಲವೇ?  ಎಂದ ಮೇಲೆ ಕಾಡೋಜ ಪ್ರಶಸ್ತಿ ಇವರಿಗಲ್ಲದೇ ಇನ್ನಾರಿಗೆ ಕೊಡಬೇಕು ಹೇಳಿ?"  ಸುಬ್ಬಣ್ಣ ಏನೋ ಹೇಳಲು ಬಾಯಿ ಬಿಡುತ್ತಿದ್ದಂತೆ ಸುಮ್ಮನಿರುವಂತೆ ಸನ್ನೆ ಮಾಡಿದ ಗುರುಗಳು ಮತ್ತೂ ಮುಂದುವರೆಸಿದರು.  "ಇವರಿಗೆ ನಾಡೋಜ ಪ್ರಶಸ್ತಿ ಏಕೆ ಕೊಡಲಿಲ್ಲ ಎಂದು ನಿಮ್ಮ ಪ್ರಶ್ನೆ.  ನೋಡೀಪ್ಪಾ, ಇಂಥವರಿಗೆ ಇಂಥದ್ದೇ ಪ್ರಶಸ್ತಿ ಕೊಡಬೇಕೆಂದು ಎಲ್ಲಿದೆ ಹೇಳಿ?  ಅವರು ಬಹಳ ಮನೆಗಳನ್ನು ಕಟ್ಟಿ ಬಡಜನರಿಗೆ ನೆರಳಾಗಿದ್ದಾರೆ, ನಾಡು ಕಟ್ಟುವ ಕೆಲಸ ಮಾಡಿದ್ದಾರೆ, ಅವರಿಗೆ ನಾಡೋಜ ಪ್ರಶಸ್ತಿ ಕೊಡಬೇಕಾಗಿತ್ತು ನಿಜ.  ಆದರೆ ನಾಡೋಜ ಪ್ರಶಸ್ತಿಗೆ ಈಗಾಗಲೇ ಇನ್ನೊಬ್ಬರಿಗೆ ಹಂಚಿದ್ದಾಗಿದೆ.  ಅವರೂ ಸಾಧಕರು, ಭಾರೀ ಕುಳ, ನಾಡಿನಾದ್ಯಂತ ಸಕ್ಕರೆ ಪ್ಯಾಕ್ಟರಿಗಳನ್ನು ತೆರೆದು ನಾಡಿನ ಜನರ ಬಾಯಿ ಸಿಹಿ ಮಾಡಿದವರು.  ಅನೇಕ ರೈತರಿಗೆ ವ್ಯಾಪಾರ ಕೊಟ್ಟವರು.  ರೈತರ ಉದ್ಧಾರಕ್ಕಾಗಿ ತುಂಬಾ ಬಂಡವಾಳ ಹಾಕಿದವರು.  ಅವರ ಸೇವೆಯನ್ನೂ ನಾವು ಪರಿಗಣಿಸಬೇಕಲ್ಲವೇ?  ಅಲ್ಲದೇ ಬೊಂಬೇಶಪ್ಪನವರು ಸಾವಿರಾರು ಮನೆಗಳನ್ನು ಕಟ್ಟಿ, ಮನೆಯಿಲ್ಲದೇ ಜನ ಕಾಡುಬೀಳುವುದನ್ನು ತಪ್ಪಿಸುವುದರ ಮೂಲಕ ಕಾಡನ್ನು ಉಳಿಸಲು ಬಹಳ ದೊಡ್ಡ ಸೇವೆ ಸಲ್ಲಿಸಿದ್ದಾರೆ.  ಇಂಥದ್ದನ್ನೆಲ್ಲ ನೀವು ಬರೆಯಬೇಕು, ನಾನು ಬೊಗಳೇಶಪ್ಪನವರಿಗೆ ಹೇಳುತ್ತೇನೆ.  ನೀವಿನ್ನು ಹೊರಡಿ.  ಸಂದರ್ಶನ ಚೆನ್ನಾಗಿ ಬರಲಿ" - ಇಷ್ಟು ಹೇಳಿ ಮರುಮಾತಿಗೆ ಅವಕಾಶ ಕೊಡದೇ ಕಣ್ಣು ಮುಚ್ಚಿ ಮತ್ತೆ ತುಂಡು ಕಡಿಯುವುದರಲ್ಲಿ ನಿರತರಾದರು, ಭೋಜನವಿರಾಮ ಮುಗಿಯಿತೆಂಬ ಸೂಚನೆ ಸಿಕ್ಕಿತು.  ಬಂದದ್ದಕ್ಕೆ ಇಷ್ಟೇ ಲಾಭವೆಂದುಕೊಂಡು ಸುಬ್ಬಣ್ಣ ಬೊಂಬೇಶಪ್ಪನವರ ಮನೆ ಕಡೆ ಪಾದ ಬೆಳೆಸಿದ.

ಸುಮಾರು ಒಂದೆಕರೆ ಜಾಗದಲ್ಲಿ ಹರಡಿಕೊಂಡಿದ್ದ ಬೊಂಬೇಶಪ್ಪನವರ ಸೌಧ, ಬೆಂಗಾಡಿನ ನಡುವಣ ಅರಣ್ಯದಂತೆ ಕಂಗೊಳಿಸುತ್ತಿತ್ತು.  ಗೇಟಿನಲ್ಲೇ ಇದ್ದ ಸೆಕ್ಯೂರಿಟಿ ಆಫೀಸಿನಲ್ಲಿ ಹೆಸರು ಬರೆದು ಅಪ್ಪಣೆ ಪಡೆದು ಒಳಹೊರಟ ಸುಬ್ಬಣ್ಣನಿಗೆ ಕಾಡು ಹೊಕ್ಕಂಥದ್ದೇ ಅನುಭವ.  ಇಕ್ಕೆಲಗಳಲ್ಲೂ ಬೊಂಬೇಶಪ್ಪನವರ ಹೆಸರಿಗೆ ತಕ್ಕಂತೆ ಬೊಂಬಿನ ಮೆಳೆ, ಅದರಾಚೆಗೆ ವಿವಿಧಜಾತಿಯ ಮರಗಳು, ನಡುನಡುವೆ ಕೃತಕ ಜಲಪಾತಗಳು, ಪುಟ್ಟಪುಟ್ಟ ಸರೋವರಗಳು, ಅದರಲ್ಲಿ ತೇಲುತ್ತಿದ್ದ ಹಂಸ ಇತ್ಯಾದಿಗಳು.  ಕಲ್ಲಿನ ಮಹಲಿನೊಳಹೊಕ್ಕು ಹಜಾರ ದಾಟಿದೊಡನೆ ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಬಂದಂತಾಯಿತು - ಗೋಡೆಯ ತುಂಬೆಲ್ಲ ಕೆಕ್ಕರಿಸಿಕೊಂಡು ನೋಡುವ ಚಿರತೆ, ಜಿಂಕೆ, ಕಾಡುಕೋಣಗಳು - ಅಲ್ಲೇ ಸ್ವಾಗತಖಾನೆಯಲ್ಲಿ ಸ್ವತಃ ಬೊಂಬೇಶಪ್ಪನವರು ಆಸೀನರಾಗಿದ್ದರು.  ವಿಶಾಲವಾದ ಸಿಂಹಾಸನದಂತಹ ಸೋಫಾ ಮೇಲೆ ಪಟಮರಿಸಿದ್ದ ದೈತ್ಯದೇಹ, ಏಸಿಯಿದ್ದರೂ ಸೆಖೆ ತಡೆಯದೇನೋ ಎಂಬಂತೆ ನಾಲ್ಕು ಗುಂಡಿ ಬಿಚ್ಚಿ ಸರಿಸಿದ್ದ ಶರಟು, ಅದರೊಳಗಿನಿಂದ ಕಂಡ ಕಪ್ಪು ಎದೆ, ಅದರ ಮೇಲೆ  ಬೆವರಿಗೆ ಅಂಟಿನಿಂತು ಅದಿರಿನ ನಡುವೆ ಕಂಗೊಳಿಸುವ ಕನಕರೇಖೆಯೋ ಎಂಬಂತೆ ಚಿತ್ರವಿಚಿತ್ರವಾಗಿ ಹರಡಿ ಬಿದ್ದಿದ್ದ ಹೆಬ್ಬೆರಳ ಗಾತ್ರದ ಹೊಳೆಹೊಳೆವ ಚಿನ್ನದ ಸರಗಳು, ಅದರ ತುದಿಗೆ ನೇತಾಡುತ್ತಿದ್ದ ಹುಲಿಯುಗುರು, ಅದರ ಇಕ್ಕೆಲಗಳಲ್ಲಿ ಎದೆಗೇ ಕಣ್ಣು ಬಂತೋ ಎಂಬಂತೆ ಪಿಳಿಪಿಳಿಸುತ್ತಿದ್ದ ಇಷ್ಟಗಲ ಕೆಂಪು ಹಸಿರು ಕಲ್ಲುಗಳ ಪದಕಗಳು - ಅರಣ್ಯದ ಸಿರಿ ಸಾರ್ಥಕವಾಗಿ ಬೊಂಬೇಶಪ್ಪನವರ ಮೈಯ್ಯೇರಿತ್ತು.

"ಬರ್ರೀ ಬರ್ರೀ ಸುದ್ದೀಮನಿಯಾರ, ನನ್ನ ಸಂದರ್ಶಿಸಾಕ ಬಂದೀರಿ ಹೌದಿಲ್ಲೋ" ಎನ್ನುತ್ತಾ ಸ್ವಾಗತಿಸಿದರು ಬೊಂಬೇಶಪ್ಪನವರು.

ನಮಸ್ಕರಿಸಿ ಅಭಿನಂದನೆ ಸಲ್ಲಿಸಿ ಕುಳಿತುಕೊಳ್ಳುತ್ತಾ ಕೇಳಿದ ಸುಬ್ಬಣ್ಣ "ಹೌದ್ರೀ ಸರ, ಆದ್ರಾ ಮನೀ ಕಟ್ಟೂ ಕೆಲಸಾ ಮಾಡೋ ನಿಮಗ ಕಾಡೋಜ ಪ್ರಶಸ್ತೀ... " ಮೂಗೆಳೆಯುತ್ತಿದ್ದ ಸುಬ್ಬಣ್ಣನ ಮಾತನ್ನು ಅಲ್ಲಿಯೇ ತುಂಡರಿಸಿ ನುಡಿದರು ಬೊಂಬೇಶಪ್ಪನವರು.  

"ಏ ಮನೀ ಕಟ್ಟೋ ಕೆಲಸದ ಬಗ್ಗೆ ಅಷ್ಟ ಹಗೂರ ಮಾತಾಡಬ್ಯಾಡ್ರೀ, ಈ ಮನೀ ಕಟ್ಟೋ ಕೆಲಸಾ ಏನೈತಿ ಅದು ಅಗ್ದೀ ನಾಡು ಕಟ್ಟೋ ಕೆಲಸ ಐತಿ ತಿಳಕೋರಿ"

"ಅದು ಸರೀರಿ ಸರ, ಆದ್ರಾ ನಾಡು ಕಟ್ಟೋ ನಿಮಗೆ ಕಾಡಿನ ಪ್ರಶಸ್ತೀ..." ತಡವರಿಸಿದ ಸುಬ್ಬಣ್ಣ.

"ಹಾಂಗ ಕೇಳ್ರೀ ಮತ್ತ... ಈಗ, ನಾಡು ಕಟ್ಟೋ ಕೆಲಸದಿಂದ ಏನಾಗ್ತತಿ?  ಜನಕ್ಕ ನೆಳ್ಳಾಗ್ತತಿ.  ಮತ್ತ ನೆಳ್ಳ ಹುಡುಕ್ಕೋತ ಕಾಡಿಗೆ ಹೋಗೂದು ತಪ್ತತಿ ಹೌದಿಲ್ಲೋ?  ಅರಣ್ಯಸಂರಕ್ಷಣೆ ಆತಲ್ಲಪ?  ಅಂದ್ ಹಂಗ, ನಾನೇನು ಕಾಡಿನ್ ಕೆಲಸ ಮಾಡಿಲ್ಲ ಅನ್ನಂಗಿಲ್ಲ್ ನೋಡ್ರಿ ಮತ್ತ - ನೀವೀಗ ನಮ್ಮನೀಗಿ ಬರುವಾಗ ನೋಡಿದ್ರಿಲ್ಲೋ ಕಾಡು ಹ್ಯಂಗಿತ್ತು.  ಅದು ನಾವs ಬೆಳಸಿದ್ರೀಯಪಾ.  ಮತ್ತ, ಈ 'ನಾಡೋಜ'ದಾಗಣ "ಓಜ" ಅಂತ ಯಾರ್ಗಂತಾರ್ರೀ?  ಗುರುಗಳಿಗೆ ಹೌದಿಲ್ಲೋ?  ನಾನ್ ನೋಡಿ, ಅಲ್ಲಿ ಕಾಡು ಉಳಿಸಿದೆ, ಇಲ್ಲಿ ಕಾಡು ಬೆಳೆಸಿದೆ.  ಕಾಡು ಉಳಿಸೋದು ಬೆಳಸೋದು ಹ್ಯಂಗೆ ಅಂತ ಜನಕ್ಕ ಬೋಧಿಸಿದೆ, ನಾಲ್ಕು ಜನಕ್ಕ ಉತ್ತಮ ಮೇಲ್ಪಂಕ್ತಿಯಾಗಿ ಬಾಳಿ ಬದುಕಿದೆ.  ನಾನು ಕಾಡೋಜ ಹೌದಿಲ್ಲೊ ಹೇಳ್ರಿ ಮತ್ತ" ಎದೆಯ ಮೇಲಿನ ಹಗ್ಗದಂತಹ ಚಿನ್ನದ ಸರಗಳು, ಪಚ್ಚೆಮಾಣಿಕದ ಬಂಡೆಗಳು ಹೊರಳಾಡಿ ಢಿಕ್ಕೀ ಹೊಡೆದುಕೊಳ್ಳುವಂತೆ ಕುಲುಕಿ ಕುಲುಕಿ ನಕ್ಕರು ಬೊಂಬೇಶಪ್ಪನವರು.

ಬೊಂಬೇಶಪ್ಪನವರ ವಾಗ್ಝರಿಯಲ್ಲಿ ತೊಯ್ದು ತೊಪ್ಪೆಯಾದ ಸುಬ್ಬಣ್ಣನಿಗೆ, ಹೊರಗೆ ಬೊಂಬೇಶಪ್ಪನವರು ಬೆಳೆಸಿದ್ದ ಕಾಡಿನ ಮರವೊಂದರ ಮೇಲೆ ವಾಸಿಸುತ್ತಿದ್ದ ಕಾರಣಕ್ಕೆ ಕಾಡಕಪಿಯೆನ್ನಬಹುದಾದ ನಾಡಕಪಿಯೊಂದು ತನ್ನ ಕಡೆ ನೋಡಿ ಹಲ್ಲು ಕಿರಿದದ್ದು ಕಂಡು ಬಂತು.  ಅದನ್ನೇ ಅನುಕರಿಸಿ ತಾನೂ ಬೊಂಬೇಶಪ್ಪನವರನ್ನು ನೋಡಿ ಹಲ್ಲು ಕಿರಿದು, ಕೈಮುಗಿದು ಹೊರಬಂದ.

ಸೀದಾ ಆಫೀಸಿಗೆ ಬಂದು ಟೀವಿ ಹಚ್ಚಿದರೆ ಅಲ್ಲಿ ನೂತನ ನಾಡೋಜರ ಭಾಷಣ ಬರುತ್ತಿತ್ತು, ಕನ್ನಡಸಾಹಿತ್ಯಕ್ಕೆ ತಾವು ಮಾಡಿದ ಸೇವೆಗಳನ್ನೂ, ಕನ್ನಡ ಸಾಹಿತ್ಯವನ್ನು ಉದ್ಧಾರಮಾಡುವ ದಾರಿಗಳನ್ನೂ ಕುರಿತು ಅಪ್ಪಣೆ ಕೊಡಿಸುತ್ತಿದ್ದರು - ಮುಂದೆ ಹತ್ತು ವಾಹಿನಿಗಳ ಮೈಕುಗಳು "ನೋಡಿ, ನಾನು ಓದಿದವನಲ್ಲ ಬರೆದವನಲ್ಲ, ಆದರೆ ಸಾಹಿತ್ಯಸೇವೆಗಾಗಿ ಟೊಂಕ ಕಟ್ಟಿ ನಿಂತಿದ್ದೇನೆ, ಈ ಪ್ರಶಸ್ತಿ ನನ್ನ ಮೇಲೆ ಬಹಳ ದೊಡ್ಡ ಜವಾಬ್ದಾರಿಯನ್ನು ಹೊರೆಸಿದೆ.  ಈ ಸಾಹಿತಿಗಳ ಒಣವೇದಾಂತ, ಮಣ್ಣಿನ ವಾಸನೆ ಇವು ಜನರನ್ನ ಸಾಹಿತ್ಯದಿಂದ ದೂರ ಕೊಂಡೊಯ್ದಿದೆ.  ಜನರನ್ನು ಸೆಳೆಯಲು ಕನ್ನಡಸಾಹಿತ್ಯವನ್ನು ಹೆಚ್ಚುಹೆಚ್ಚು ಸಿಹಿಯಾಗಿಸಬೇಕಾಗಿದೆ.  ಕನ್ನಡಸಾಹಿತ್ಯವನ್ನು ಮುದ್ರಿಸುವ ಪೇಪರಿಗೆ ಇನ್ನು ಮೇಲೆ ಸಕ್ಕರೆ ಸವರುವುದು ಕಡ್ಡಾಯವಾಗಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ.  ಅದಕ್ಕಾಗಿ ನಾವು ಸಕ್ಕರೆಯನ್ನು ಉತ್ಪಾದಿಸಿ ಸರ್ಕಾರಕ್ಕೆ ಸರಬರಾಜು ಮಾಡುತ್ತೇವೆ... ಸರ್ಕಾರ ಟೆಂಡರು ಕರೆದ ತಕ್ಷಣ ಟೆಂಡರು ಸಬ್ಮಿಟ್ ಮಾಡಲು ಎಲ್ಲ ಸಿದ್ಧತೆಗಳೂ ಆಗಿವೆ, ಇನ್ನು ಮುಂದೆ ಕನ್ನಡಸಾಹಿತ್ಯ ಹೆಚ್ಚು ಸಿಹಿಯಾಗಲಿವೆ, ಕನ್ನಡ ಪುಸ್ತಕಗಳಿಗಾಗಿ ಜನ ಇರುವೆಯಂತೆ ಮುತ್ತಿಕೊಳ್ಳಲಿದ್ದಾರೆ..." ಹೀಗೇ ಮಾತು ಮುಂದುವರೆದಿತ್ತು.  ಥತ್ ಎಂದು ಚಾನಲ್ ಬದಲಿಸಿದರೆ ಇನ್ನೊಂದು ಚಾನಲ್ಲಿನಲ್ಲಿ, ಆಗಲೇ ಕಾಡೋಜ ಬೊಂಬೇಶಪ್ಪನವರು - ತಮ್ಮ ಕಾಡಿನ ಮರದಡಿಯಲ್ಲಿ ಕೂತು, ಹೊಳೆಹೊಳೆಯುವ ಚಿನ್ನದ ಸರ ಮತ್ತು ಬೆಳ್ಳಿಯ ದಂತಪಂಕ್ತಿಮಾತ್ರದಿಂದ ಸೂಚಿಸಲ್ಪಟ್ಟವರಾಗಿ ಮಾತಾಡುತ್ತಿದ್ದರು - "ಸರ್ಕಾರದ ಈ ನಿರ್ಧಾರ ಭಾಳ ಛೊಲೋದೈತಿ ನೋಡ್ರಿ, ಇದರಿಂದ ಪ್ರಶಸ್ತಿಗಳ ಪ್ರಜಾಪ್ರಭುತ್ವೀಕರಣ, ಜನಸಾಮಾನ್ಯೀಕರಣ ಅನ್ತಕ್ಕಂಥಾದ್ದೇನೈತಿ ಅದು ಆಗ್ತೈತಿ.  ಯಾರೋ ಪೆನ್ನು ಹಿಡಿದು ಏನೋ ಗೀಚಿದವರಿಗೆ ಮಾತ್ರ ಪ್ರಶಸ್ತಿ ಅನ್ನೋ ಪರಿಸ್ಥಿತಿ ಹೋಗಿ ನನ್ನಂಥಾ ಜನಸಾಮಾನ್ಯರೂ ಸೇವೆ ಸಲ್ಲಿಸಿ ಪ್ರಶಸ್ತಿ ಪಡೀಬೋದು ಅನ್ನೋ ಭರವಸೆ ಸರ್ಕಾರ ನೀಡಿದೆ.  ಇದಕ್ಕಾಗಿ ನಾನು ಯಾವೊಂದು ಸರ್ಕಾರ ಇದೆ ಅದಕ್ಕೆ ಆಭಾರಿಯಾಗಿದ್ದೇನೆ ಅನ್ತಕ್ಕಂಥದ್ದನ್ನ ಹೇಳ್ಲಿಕ್ಕೆ ಇಷ್ಟಪಡ್ತೇನೆ...".  ಮತ್ತೊಂದು ಚಾನಲ್ಲಿನಲ್ಲಿ ಈ ಪ್ರಶಸ್ತಿಯ ಬಗ್ಗೆ ಗಣ್ಯರ ಸಂದರ್ಶನ/ಅಭಿಪ್ರಾಯ ಬರುತ್ತಿತ್ತು.  ಸರ್ಕಾರದ ಈ ಕ್ರಾಂತಿಕಾರಿ ನಿರ್ಧಾರದಿಂದ ಸಮಸಮಾಜದ ಹೊಸ ಯುಗವೇ ಆರಂಭವಾಗುತ್ತಿದೆಯೆಂದು ಯಾವುದೋ ಪಕ್ಷದ ಪುಡಾರಿಯೊಬ್ಬ ಕುಟ್ಟುತ್ತಿದ್ದ.  

"ಇದರಿಂದ ನಮಗೂ ಒಂದು ಹೊಸ ಆಶಾಭಾವನೆ ಬಂದಿದೆ.  ನಾವೂ ದಶಕಗಳಿಂದ ರಾಜ್ಯದ ಜನಗಳಿಗೆ ಶೆರೆ ಕುಡಿಸುತ್ತಾ, ರಾಜ್ಯವನ್ನು ಆನಂದದಲ್ಲಿ ತೇಲಾಡಿಸುತ್ತಾ ಬಂದಿದ್ದೇವೆ, ಮುಂದಿನ ಬಾರಿ ಸರ್ಕಾರ ನಮ್ಮ ಸೇವೆಯನ್ನೂ ಪರಿಗಣಿಸಿ ಪುರಸ್ಕರಿಸ್ತದೆ ಅಂತ ನಂಬಿದ್ದೇನೆ" - ಅಖಿಲಕರ್ನಾಟಕ ಶೇಂದಿ ವಿತರಕರ ಸಂಘದ ಅಧ್ಯಕ್ಷ ಶೇಂದಿ ಕಂಟ್ರಾಕ್ಟರ್ ಶಿದ್ದಪ್ಪನವರು ತೊದಲುತ್ತಿದ್ದರು.  ಜನರನ್ನು ಕಾಡುವಲ್ಲಿ ಕುಖ್ಯಾತವಾದ ಕೆಲವು ಸರ್ಕಾರೀ ಇಲಾಖೆಗಳ ನೌಕರರ ಸಂಘಗಳಂತೂ ಕಾಡೋಜ ಪ್ರಶಸ್ತಿಯು ಜನರನ್ನು ಕಾಡುವವರಿಗೋಸ್ಕರವೇ ಇರುವ ಪ್ರಶಸ್ತಿಯೆಂದು ಬಗೆದು, ಆ ಪ್ರಶಸ್ತಿಗೆ ತಾವೇ ಹೇಗೆ ಹೆಚ್ಚು ಹಕ್ಕುದಾರರು ಎಂದು ವಿವರಿಸುತ್ತಾ, ತಾವು ಜನರನ್ನು ಹೇಗೆಲ್ಲಾ ಕಾಡುತ್ತೇವೆ ಕಣ್ಣೀರ್ಗರೆಸುತ್ತೇವೆ ಎಂದು ವಿವರವಿವರವಾಗಿ ವರ್ಣಿಸುತ್ತಾ ಪ್ರಶಸ್ತಿಗಾಗಿ ಹಕ್ಕೊತ್ತಾಯ ಮಂಡಿಸಿದ್ದುವು. ಹಾಗೆಯೇ ಲಂಚಕೋರರ ಸಂಘದವರು, ಜೂಜುಕೋರರ ಸಂಘದವರು, ತಲೆಹಿಡುಕರ ಸಂಘದವರು, ಕಳ್ಳರ ಸಂಘದವರು, ಪುಂಡರ, ಪೋಲಿಪಟಿಂಗರ ಸಂಘದವರು, ಕೊನೆಗೆ ಸೋಮಾರಿಗಳ ಸಂಘದವರೂ ಪ್ರಶಸ್ತಿಗಾಗಿ ತಂತಮ್ಮ ಹಕ್ಕು-ಸಾಧನೆಗಳನ್ನು ಮುಂದಿಡುತ್ತಿದ್ದರು, ತಂತಮ್ಮ ಕಸುಬುಗಳಲ್ಲಿ ತಾವು ಹೇಗೆ ನಿಜಕ್ಕೂ ನಾಡಿಗೆ ಓಜರಾಗಿದ್ದೇವೆ ಎಂಬುದನ್ನು ಮೇಜುಕುಟ್ಟಿ ವಿವರಿಸುತ್ತಿದ್ದರು.  ಜೊತೆಗೇ ಪ್ರಾದೇಶಿಕಪ್ರಾತಿನಿಧ್ಯ, ಜಾತಿಪ್ರಾತಿನಿಧ್ಯ, ಒಳಜಾತಿಪ್ರಾತಿನಿಧ್ಯ, ಲಿಂಗಪ್ರಾತಿನಿಧ್ಯ, ನಿರ್ಲಿಂಗಪ್ರಾತಿನಿಧ್ಯ ಎಲ್ಲವೂ ಸೇರಿ ಗಿಜಿಗಿಜಿ ಆರಂಭವಾಗಿತ್ತು.  ತಲೆ ಕೆಟ್ಟು ಮತ್ತೊಮ್ಮೆ ಚಾನಲ್ ಬದಲಿಸಿದ ಸುಬ್ಬಣ್ಣ. 

ಯಾವುದೋ ಹೆಸರಿಲ್ಲದ ಚಾನಲ್ಲೊಂದು, ವಾಕಿಂಗ್ ಮುಗಿಸಿ ಮರಳುತ್ತಿದ್ದ ಒಬ್ಬರು ವೃದ್ಧರನ್ನು ಅಟಕಾಯಿಸಿಕೊಂಡಿತ್ತು.  ನೋಡಲು ವಯೋವೃದ್ಧರೂ ಜ್ಞಾನವೃದ್ಧರೂ ಆಗಿ ಕಾಣುತ್ತಿದ್ದ, ನಮಗರ್ಥವಾಗದ ವಿಚಿತ್ರ ಕನ್ನಡದಲ್ಲಿ ಓದಿದಂತೆ ಮಾತಾಡುತ್ತಿದ್ದ ಆ ವೃದ್ಧರ ಮುಂದೆ ಹೆಸರಿಲ್ಲದ ಒಂದೇ ಒಂದು ಮೈಕು - "ನೀವು ಕನ್ನಡಸಾಹಿತ್ಯಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದೀರಿ, ಆದರೆ ನಿಮಗೆ ಈ ಬಾರಿಯೂ ನಾಡೋಜ ಪ್ರಶಸ್ತಿ ಬರಲಿಲ್ಲ.  ಈ ಬಗ್ಗೆ ನಿಮಗೆ ಬೇಸರವಿದೆಯೇ?" ಎಂಬ ಸಂದರ್ಶಕಿಯ ಕಿಡಿಗೇಡಿ ಪ್ರಶ್ನೆ ತಮಗೆ ಪ್ರಸ್ತುತವಲ್ಲವೆಂಬಂತೆ ಮುಗುಳ್ನಕ್ಕು, ತಮ್ಮ ಮುದಿಗಂಗಳಲ್ಲಿ ಹಳೆಯ ಬೆಳಕನ್ನು ಕಾಣುತ್ತಾ ಗಗನಕ್ಕೆ ದೃಷ್ಟಿ ನೆಟ್ಟ ಆ ವೃದ್ಧರು ಉತ್ತರಿಸುತ್ತಿದ್ದರು "ಅಯ್ಯೋ, ಈಗೆಲ್ಲಾ ಪ್ರಶಸ್ತಿಗಳ ಹೆಸರಿನಲ್ಲಿ ಬರುವುದು ಕಸಕುಪ್ಪೆಗಳೇ ತಾಯಿ.  ಈ ಪ್ರಶಸ್ತಿಗಳಿಗೆ ನನ್ನ ಮನೆಯಲ್ಲಿ ಜಾಗವೇ ಉಳಿದಿಲ್ಲಮ್ಮ, ಎಲ್ಲಿ ಅಂತ ಇಡಲಿ?  ನನಗೆ ಪ್ರಶಸ್ತಿ ಕೊಡಬಹುದಾದವರೆಲ್ಲರೂ ಅದನ್ನು ಎಂದೋ ದಯಪಾಲಿಸಿ ಹೊರಟುಹೋಗಿದ್ದಾರೆ, ಅವು ನಿಜವಾದ ಪ್ರಶಸ್ತಿಗಳು, ಇರಬೇಕಾದೆಡೆ ಭದ್ರವಾಗಿವೆ.  ಇನ್ನು ಈ ಕುಪ್ಪೆಯನ್ನು ಎಷ್ಟೂ ಅಂತ ತಂದಿಟ್ಟುಕೊಳ್ಳುವುದು.  ನಾನು ಬರೆದದ್ದೆಲ್ಲಾ ನನ್ನ ಸಂತೋಷಕ್ಕೆ, ಅರಿಯುವ ಸಂತೋಷಕ್ಕೆ, ತಿಳಿಸುವ ಆನಂದಕ್ಕೆ.  ಅದನ್ನ ನೀವೆಲ್ಲ ಓದಿ, ತಿಳಿಯಿರಿ, ನನ್ನ ನೆನೆಸಿಕೊಳ್ಳಿ, ನಾನೀಗ ನನ್ನ ಗುರುಗಳನ್ನ ನೆನೆಸಿಕೊಳ್ಳುವಂತೆ - ಅದೇ ನನಗೆ ಪ್ರಶಸ್ತಿ - "ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ", ಅಲ್ಲವೇ?" - ಇಷ್ಟು ಹೇಳಿ ಸಂದರ್ಶಕಿಯನ್ನು ಅಲ್ಲೇ ಬಿಟ್ಟು, ಕ್ಯಾಮರಾಗೆ ಬೆನ್ನು ಹಾಕಿ ನಿಧಾನವಾಗಿ ಮನೆಯ ಕಡೆ ನಡೆಯತೊಡಗಿದರು.  ಲಾಂಗ್ ಶಾಟಿನಲ್ಲಿ ಕೆಲಕಾಲ ಅವರನ್ನು ಹಿಂಬಾಲಿಸಿದ ಕ್ಯಾಮರಾ ಕಣ್ಣಿಗೆ, ಈಗಲೂ ಅವರನ್ನು ಓಲೈಸುತ್ತಾ ಅವರಿಂದ ಸಾಧ್ಯವಾದಷ್ಟು ಕಲಿತುಬಿಡುವ ಹಂಬಲದಿಂದ ಮನೆಯ ಒಳಭಾಗದಲ್ಲಿ ಕಾದಿದ್ದ ಹೊಸವಿದ್ಯಾರ್ಥಿಗಳ ಗುಂಪು ಕಂಡಿತು.  

ಈ ವೃದ್ಧರನ್ನು ಸುಬ್ಬಣ್ಣ ಎಂದೂ ನೋಡಿರಲಿಲ್ಲ.  ಆದರೂ ಆ ಮುಖದಲ್ಲಿ, ಕಣ್ಣಿನಲ್ಲಿ, ನಿಲುವಿನಲ್ಲಿ, ನಡೆಯಲ್ಲಿ ತನಗರ್ಥವಾಗದ, ಆದರೆ ಮನೋಗಮ್ಯವಾದ ಒಂದು ಬಗೆಯ ಕಾಂತಿ, ಓಜಸ್ಸು, ಘನತೆ, ತಾನಾಗಿಯೇ ಕೈ ಮುಗಿಯುವಂತೆ ಪ್ರೇರೇಪಿಸಿತು.  ಕೈಮುಗಿದು, ಟೀವಿ ಆರಿಸಿ, ಭೂಮಿಗಿಳಿದು ಬಂದ ಸುಬ್ಬಣ್ಣ, ಅಚ್ಚಿಗೆ ಕಳಿಸುವುದಕ್ಕಾಗಿ ಬೊಂಬೇಶಪ್ಪನವರ ಸಂದರ್ಶನವನ್ನು ಅರೆಯಲು ಕೂತ.