Wednesday, October 14, 2020

ಹೆಂಡತಿಯ ಬಹುವಚನ


ಹೆಂಡತಿಯ ಬಹುವಚನವೆಂದರೆ "ರೀ..." ಎಂಬ ರಾಗವೆಂದು ಅರ್ಥೈಸಿಕೊಳ್ಳಬೇಡಿ - ರಾಗವೇ ಅದು?  ಸ್ವರ - ಶುದ್ಧರಿಷಭ, ಸಂದರ್ಭಾನುಸಾರ ಚತುಶ್ರುತಿರಿಷಭವೂ ರೇಗಿದರೆ ಷಟ್ಶ್ರುತಿರಿಷಭವೂ ಆಗಬಲ್ಲುದು (ಕರ್ಣಪ್ರಮಾಣಿಗಳಾದ ಹಿಂದುಸ್ತಾನಿ ಸಂಗೀತದವರು ಈ ಸ್ವರಪ್ರಭೇದಗಳನ್ನು ಸೊಗಸಾಗಿ ಕೋಮಲರಿಷಬ್, ಶುದ್ಧರಿಷಬ್ ಎಂದು ಕರೆಯುತ್ತಾರೆ), ತ್ರಿಸ್ಥಾಯಿವ್ಯಾಪ್ತಿಯುಳ್ಳ, ಷಟ್ಕಾಲಗಳಲ್ಲಿ ಸ್ಫುಟವಾಗಿಯೂ ಘಂಟಾಘೋಷವಾಗಿಯೂ ಸಕಲಗಮಕಯುಕ್ತವಾಗಿಯೂ ನುಡಿಯಬಲ್ಲ, ತ್ರಿಲೋಕಗಳಲ್ಲೂ ಮೊಳಗಬಲ್ಲ ಸ್ವರ ಅದು; ನಿಮಗೇನಾದರೂ ಅದು ಕೆಲವೊಮ್ಮ ಅಪಸ್ವರದಂತೆ ಕೇಳಿದರೆ, ಅದು ಕೇಳುವ ಕಿವಿಯ ದೋಷವೇ ಹೊರತು ಕರೆಯುವ ಕಂಠದ್ದು ಖಂಡಿತಾ ಅಲ್ಲ ಎಂಬುದು, ಆಡಿ ಅನುಭವಿಸಿದ ಎಲ್ಲ ಗಂಡಂದಿರ ಏಕಾಭಿಪ್ರಾಯ.  ಇರಲಿ, ನಾವಿಲ್ಲಿ ಈ ರಿಷಭಸ್ವರದ ಬಗೆಗೆ ಮಾತಾಡುತ್ತಿಲ್ಲ, ಅಸಲಿಗೆ ಸಂಗೀತದ ಬಗೆಗೇ ಮಾತಾಡುತ್ತಿಲ್ಲ, ಮಾತಾಡುತ್ತಿರುವುದು ವ್ಯಾಕರಣದ ಬಗ್ಗೆ - ಹೆಂಡತಿ'ಯಿಂದ' ಬರುವ ಬಹುವಚನದ ಬಗೆಗೂ ಅಲ್ಲ, ಹೆಂಡತಿ'ಗೆ' ಬಳಸುವ ಬಹುವಚನದ ಬಗ್ಗೆ, ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಹೆಂಡತಿ ಎಂಬ ಶಬ್ದದ ಬಹುವಚನರೂಪದ ಬಗೆಗೆ.  ಫೇಸ್ಬುಕ್ಕಿನಲ್ಲಿ ಮಿತ್ರ ಆನಂದವರ್ಧನರು ಕೇಳಿದ ಪ್ರಶ್ನೆಯೊಂದು ಈ ಲೇಖನಕ್ಕೆ ಕಾರಣ.  ಮಗ - ಮಗಂದಿರು, ಮಗಳು > ಮಗಳ್ದಿರು ಆದ ಹಾಗೆ ಹೆಂಡತಿಗೆ ಹೆಂಡಂದಿರು ಅಥವಾ ಹೆಂಡತಿಯಂದಿರು ಎಂದು ಹೇಳಬೇಕೇ ಎಂಬುದು ಅವರ ಪ್ರಶ್ನೆ.  ಪ್ರಶ್ನೆ ತಮಾಷೆಯಾಗಿದ್ದುದರಿಂದ ಅದಕ್ಕೆ ಉತ್ತರರೂಪವಾದ ಈ ಲೇಖನವೂ ಸಹಜವಾಗಿಯೇ ತುಸು ತಮಾಷೆಯ ಹಾದಿ ಹಿಡಿದಿದೆ.  ಶಾಸ್ತ್ರವಿಷಯದಲ್ಲಿ ಸಾಮಾನ್ಯವಾಗಿ ಅನುಸರಿಸಬೇಕಾದ ಗಾಂಭೀರ್ಯವಿಲ್ಲಿಲ್ಲ, ಒಪ್ಪುತ್ತೇನೆ, ಆದರೆ ವಿಷಯಸ್ಪಷ್ಟತೆಗೆ ಧಕ್ಕೆಯಾಗಿಲ್ಲವೆಂದುಕೊಂಡಿದ್ದೇನೆ.  ವ್ಯಾಕರಣವೆಂಬುದು ಯಾವಾಗಲೂ ಹುಬ್ಬುಗಂಟಿಕ್ಕಿಕೊಂಡು ಮಾಡುವ ಶ್ರಾದ್ಧಕರ್ಮವೇಕಾಗಬೇಕು?  ಆಗೀಗ ಹುಬ್ಬು ಸಡಿಲಿಸಿ ನಕ್ಕರಾಯ್ತಪ್ಪ.  ನಿಮ್ಮಲ್ಲಿ ಸಂಸ್ಕೃತ ಕಲಿತವರಿದ್ದರೆ, ಲತಾಶಬ್ದದ್ದೋ ಲುಂಡಕಶಬ್ದದ್ದೋ ಸಂಬೋಧನಪ್ರಥಮಾವಿಭಕ್ತಿರೂಪವನ್ನು ಹೇಳುವಾಗ ಎಷ್ಟು ಜನ ಹುಚ್ಚುಹುಚ್ಚಾಗಿ ನಗದೇ, ಮುಖವಿಕಾರ ಮಾಡದೇ, ಹುಬ್ಬು ಗಂಟಿಕ್ಕಿಕೊಂಡು, ಗುರುಗಳು ಮೆಚ್ಚುವಂತೆ ಘನವಾಗಿ ಗಂಭೀರವಾಗಿ ಒಪ್ಪಿಸಿದ್ದೀರಿ?  ಎದೆ ಮುಟ್ಟಿಕೊಂಡು ಹೇಳಿ ಮತ್ತೆ?  ನಗುನಗುತ್ತಲೇ ವಿಷಯವನ್ನು ತಿಳಿಸುವುದೇ ಕಾಂತಾಸಮ್ಮಿತವಷ್ಟೇ?  ಹಾಗಿದ್ದಾಗ ಕಾಂತೆಯ ವಿಷಯ ಮಾತಾಡುವಾಗಲೂ ತುಸು ನಗದಿದ್ದರೆ ಹೇಗೆ?

ಕನ್ನಡದ ವಚನ, ಸಂಧಿ, ಸಮಾಸಗಳನ್ನು ಬಿಡಿಸಿ ಮೂಲಪದಗಳ ಮಟ್ಟದಲ್ಲಿ ಅರ್ಥ ಮಾಡಿಕೊಳ್ಳಬೇಕಾದರೆ ಒಂದಿಷ್ಟೇ ಇಷ್ಟು ಹಳಗನ್ನಡದ ಅರಿವು ಬಹಳ ಉಪಯುಕ್ತ.  ಏಕೆಂದರೆ, ನಾನು ಈ ಹಿಂದೆ ಹಲವು ಬಾರಿ ಹೇಳಿದ್ದಂತೆ, ನಾವಿವತ್ತು ಬಳಸುವ ಅನೇಕ ಸಾಧಿತಪದಗಳು, ಸಂಯುಕ್ತಪದಗಳು (compound words, ಸಂಧಿ, ಸಮಾಸ, ಪ್ರತ್ಯಯಯುಕ್ತಪದಗಳು ಇತ್ಯಾದಿ) ಬಹುತೇಕ ಹಳಗನ್ನಡದ ಕಾಲದಲ್ಲೇ ರೂಪುಗೊಂಡಿದ್ದು.  ಹೀಗೆ ರೂಪುಗೊಂಡ ಪದದ ಕೊನೆಯಲ್ಲಿ ಕೊಂಬೋ ಗುಡಿಸೋ ಸೇರಿಸಿ ಚಿಕ್ಕಪುಟ್ಟ ಬದಲಾವಣೆ ಮಾಡಿಕೊಂಡು ಈಗ ಬಳಸುತ್ತಿದ್ದೇವಷ್ಟೇ - ಪದಗಳ ಮೂಲರೂಪ, ಸಂಧಿ/ಸಮಾಸಪ್ರಕ್ರಿಯೆ ಮೊದಲಾದುವುಗಳು ಹಾಗೇ ಉಳಿದುಕೊಂಡು ಬಂದಿರುತ್ತವೆ.  ಆದ್ದರಿಂದ ಅವನ್ನು ಬಿಡಿಸಿ ನೋಡಿದರೆ ನಮಗೆ ಸಿಗುವುದು ಹಳಗನ್ನಡ ರೂಪಗಳೇ, ಅವನ್ನ ಹಾಗೆಯೇ ಅರ್ಥ ಮಾಡಿಕೊಂಡರೆ, ಇಂದಿನ ರೂಪವನ್ನರಿಯಲು ಸಹಾಯವಾಗುತ್ತದೆ.

ಹೆಂಡತಿ ಅನ್ನೋ ಪದಕ್ಕೆ ಬಹುವಚನ ಸೇರಿಸುವುದು ಹೇಗೆ? ಹೆಂಡತಿಗಳು/ಹೆಂಡಂದಿರು/ಹೆಂಡಿತಿಯಂದಿರು/ಹೆಂಡತಿಯರು ಇದರಲ್ಲಿ ಯಾವುದು ಸರಿ ಎಂಬುದು ನಮ್ಮ ಮಿತ್ರರ ಪ್ರಶ್ನೆ.  ಈ ವಿವಿಧರೂಪಗಳನ್ನು ಒಂದೊಂದಾಗಿ ಪರಿಶೀಲಿಸೋಣ.

ಇಲಿಗಳು, ಬೆಕ್ಕುಗಳು ಎನ್ನುವ ರೀತಿ ಹೆಂಡತಿಗಳು ಎಂದರೆ ಹೆಂಡತಿಯ ಆಗ್ರಹಕ್ಕೆ ಪಾತ್ರವಾಗಬೇಕಾದೀತು, ಆ 'ಹೆಂಡತಿಯರು' ಬಹುಸಂಖ್ಯೆಯಲ್ಲಿದ್ದರಂತೂ ಇನ್ನೂ ಫಜೀತಿ (ಲಟ್ಟಣಿಗೆಗಳು ಎಂಬುದೂ ಅಂತಹ ಬಹುವಚನವೇ, ನೆನಪಿರಲಿ), ಆದ್ದರಿಂದ ಹೆಂಡತಿಗಳು ಎಂಬುದು ಸರಿಯೋ ತಪ್ಪೋ, ಕ್ಷೇಮವಂತೂ ಅಲ್ಲವೆಂದು ತಿಳಿಯಬಹುದು, ಸದ್ಯಕ್ಕೆ.  ಇದನ್ನು ಮುಂದೆ, ಪರಿಸ್ಥಿತಿ ತಿಳಿಯಾದ ಮೇಲೆ, ಪರಿಶೀಲಿಸೋಣ.  ಇನ್ನು ಹೆಂಡಂದಿರು, ಹೆಂಡತಿಯಂದಿರು, ಹೆಂಡತಿಯರು - ಈ ಮೂರು ರೂಪಗಳಲ್ಲಿ ಯಾವುದು ಸರಿ ಎನ್ನುವ ಪ್ರಶ್ನೆ ಉಳಿಯುತ್ತದೆ.  

ಹೆಂಡಂದಿರು ಎಂಬ ಪದ ಬಂದುದರಿಂದ ಹೇಳುತ್ತೇನೆ, ಹೆಂಡಕ್ಕೂ ಹೆಂಡತಿಗೂ ಯಾವ ಸಂಬಂಧವೂ ಇಲ್ಲ (ಜಿ ಪಿ ರಾಜರತ್ನಂ ಏನಾದರೂ ಹೇಳಲಿ!) -  ಭಾಷಿಕಸಂಬಂಧವಂತೂ ಇಲ್ಲವೇ ಇಲ್ಲ.  ಹೆಂಡವು ಪೆಂಢಾ ಎಂಬ ಪ್ರಾಕೃತರೂಪದಿಂದ ಬಂದದ್ದು (ಅದರ ಮೂಲಸಂಸ್ಕೃತರೂಪ ಫೇನಕ್ಕೆ (ನೊರೆಗೆ) ಸಂಬಂಧಿಸಿದ ಯಾವುದೋ ಪದವಿದ್ದೀತು, ಪರಿಶೀಲಿಸಿ ತಿಳಿಯಬೇಕು); ಆದರೆ ಹೆಂಡತಿ ಮಾತ್ರ ದ್ರಾವಿಡಭಾಷೆಯ ಪಾಲ್ಗಡಲಲ್ಲೇ ಹುಟ್ಟಿ ಬಂದವಳು - ಪೆಣ್ ಎಂಬ ಆದಿದ್ರಾವಿಡಪದವೇ ಈಕೆಯ ಮೂಲರೂಪ.  ಹೆಂಡದ ಬಹುವಚನವಾದರೋ, "ಹೆಂಡಗಳು" (ಹೆಂಡವನ್ನೇ ವ್ಯಕ್ತಿಯಾಗಿ, 'ಅಣ್ತಮ್ಮ'ನಾಗಿ ಭಾವಿಸಿದವರು ಬೇಕಿದ್ದರೆ ಹಲವು ಹೆಂಡಗಳನ್ನುದ್ದೇಶಿಸಿ ಹೆಂಡಂದಿರು ಎಂದು ಕೈಮುಗಿಯಬಹುದೇನೋ, ಅದು ಅವರವರ ಭಾವಕ್ಕೆ ಸಂಬಂಧಿಸಿದ ವಿಷಯ, ಆದರೆ ವ್ಯಾಕರಣವಂತೂ ಅದನ್ನೊಪ್ಪುವುದಿಲ್ಲ). ಹೀಗಿರುವಾಗ, ಹೆಂಡಪುರುಷನಿಗೆ ಬಹುವಚನದಂತೆ ಕಾಣುವ ಈ ಪದ ಹೆಂಡತಿಗಂತೂ ಖಂಡಿತಾ ಒಪ್ಪುವುದಿಲ್ಲ.  ಸಾಮಾಜಿಕವಾಗಿಯೂ ಹೆಂಡಕ್ಕೂ ಹೆಂಡತಿಗೂ ಎಣ್ಣೆಸೀಗೆಯ ಸಂಬಂಧ ತಾನೆ? (ವಿಸ್ಕಿ-ಸೋಡಾದ ಸಂಬಂಧವಿರಬಾರದಿತ್ತೇ ಎಂದು ಕೆಲವರು ಹೆಂಡತಿಪ್ರಿಯ (ಹೆಂಡ+ಅತಿಪ್ರಿಯ) ಗಂಡಂದಿರು ಹಲುಬಬಹುದು.  ಬಿಡಿ, ಅವರಷ್ಟಕ್ಕವರು "ಯೆಂಡಾ ಯೆಂಡ್ತಿ ಕನ್ನಡ್ ಪದ್ಗೋಳ್" ಎಂದು ತೂರಾಡಿಕೊಂಡಿರಲಿ, ಆ ಭಂಡಂದಿರ (ಅರ್ಥಾತ್, ಭಂಡಗಂಡಂದಿರ) ಗೊಡವೆ ನಮಗೇಕೆ?  ಹೆಂಡತಿಮೀಮಾಂಸೆಯಲ್ಲಿ ಹೆಂಡಕ್ಕೇನು ಕೆಲಸ?), ಆದ್ದರಿಂದ ಹೆಂಡವನ್ನು ಪಕ್ಕಕ್ಕಿಟ್ಟು ಸದ್ಯಕ್ಕೆ ಹೆಂಡತಿಯ ಕಡೆ ಗಮನ ಹರಿಸೋಣ.  ಹೆಂಡಂದಿರು ಸರಿಯಲ್ಲ ಎಂದ ಮೇಲೆ, ಇನ್ನುಳಿದದ್ದು ಹೆಂಡತಿಯಂದಿರು ಮತ್ತು ಹೆಂಡತಿಯರು - ಈ ಎರಡು ರೂಪಗಳಲ್ಲಿ ಯಾವುದು ಸರಿ ಎನ್ನುವ ಪ್ರಶ್ನೆ ಉಳಿಯುತ್ತದೆ.

ಇಷ್ಟಕ್ಕೂ ಹೆಂಡತಿಯ ಬಹುವಚನವನ್ನು ತಿಳಿಯಬೇಕಾದರೆ ಹೆಂಡತಿಯ ಸ್ವರೂಪವನ್ನು (ಎಂದರೆ ಹೆಂಡತಿಯೆಂಬ ಆ ಪದದ ಸ್ವರೂಪವನ್ನು) ಅರಿಯಬೇಕಲ್ಲವೇ?  ನಾನು ಮೊದಲೇ ತಿಳಿಸಿದಂತೆ, ಇವತ್ತು ಬಳಸುವ ಅನೇಕ ರೂಪಗಳು ಹಳಗನ್ನಡದಿಂದಲೇ ಬಂದುವು, ಆದ್ದರಿಂದ ಹೆಂಡತಿಯ ಹಳೆಯ ರೂಪವನ್ನು ಪರಿಶೀಲಿಸುವುದು ಒಳ್ಳೆಯದು.

ಈ ಹೆಂಡತಿಯ ಹಳೆಯ ರೂಪ, ಪೆಂಡತಿ (ಕನ್ನಡದ ಪೆಣ್ ( = ಹೆಣ್ಣು), ತಮಿಳಿನ ಪೊಣ್; ಕನ್ನಡದ ಪೆಂಡತಿಯೇ ತಮಿಳಿನ ಪೊಣ್ಡಾಟ್ಟಿ).  ಈ ಪೆಂಡತಿ ಕೂಡ, ಪೆಂಡಿತಿ ಎಂಬುದರ ಬದಲಾದ ರೂಪವೆಂದು ತಿಳಿಸುವ ನಿಘಂಟು, ಪೆಣ್ ಎಂಬುದಕ್ಕೆ 'ಇತಿ' ಪ್ರತ್ಯಯ ಸೇರಿ ಪೆಂಡಿತಿಯೆಂದಾಯಿತೆಂದು ಸೂಚಿಸುತ್ತದೆ.  ಆದರೆ ಪೆಣ್+ಇತಿ ಎನ್ನುವುದು ಪೆಣಿತಿ/ಪೆಣ್ಣಿತಿ/ಪೇಣಿತಿ ಎಂದಾಗಬಹುದೇ ಹೊರತು ಅಲ್ಲಿ ಡಕಾರ ಬಂದದ್ದು ಹೇಗೆ?  ಆದ್ದರಿಂದ ಇದು 'ಇತಿ' ಪ್ರತ್ಯಯವಿರಲಾರದೆಂದು ನನ್ನ ಅನಿಸಿಕೆ; ಬದಲಿಗೆ ಪೆಂಡಿರ್ ಎಂಬ ಪದಕ್ಕೆ 'ತಿ' ಪ್ರತ್ಯಯ ಸೇರಿ, ಪೆಂಡಿರ್ + ತಿ = ಪೆಂಡಿರ್ತಿ (ರಕಾರಶಿಥಿಲ) > ಪೆಂಡಿತಿ ಹೀಗಾಗಿರಲು ಸಾಕು.  ಇದರ ಅರ್ಥವಿವರಣೆಯನ್ನು ಆಮೇಲೆ ನೋಡೋಣ, ಇಲ್ಲಿ ನಾವು ಗಮನಿಸಬೇಕಾದ್ದು, ಪೆಂಡಿರ್ ಎಂಬ ಬಹುವಚನವನ್ನು.  'ಇರ್' ಎಂಬ ಬಹುವಚನಪ್ರತ್ಯಯಕ್ಕೆ ಉದಾಹರಣೆ ಕೊಡುತ್ತಾ ಕೇಶಿರಾಜನು ಪೆಣ್ + ಇರ್ = ಪೆಂಡಿರ್ ಎಂದು ತಿಳಿಸುತ್ತಾನೆ (ಶಬ್ದಮಣಿದರ್ಪಣ, ನಾಮಪ್ರಕರಣ - ಸೂತ್ರ 107ರ ಪ್ರಯೋಗಭಾಗ).  ಆದರೆ ದರ್ಪಣಕಾರನಾಗಲೀ, ವ್ಯಾಖ್ಯಾನಕಾರರಾಗಲೀ, ವಿವರಣಕಾರರಾಗಲೀ ಪೆಣ್ + ಇರ್ ಎಂಬುದು ಪೆಣಿರ್/ಪೆಣ್ಣಿರ್/ಪೇಣಿರ್ ಆಗದೇ ಪೆಂಡಿರ್ ಹೇಗಾಗುತ್ತದೆ - ಅಲ್ಲಿ ಡಕಾರ ಹೇಗೆ ಬಂತು ಎಂಬುದರ ವಿವರಣೆ ನೀಡಿಲ್ಲ (ಮತ್ತೆ ಇದು ಮೇಲೆ ವಿವರಿಸಿದ ಪೆಣ್+ಇತಿ ಎಂಬಲ್ಲಿನ ತೊಡಕೇ - ಡಕಾರ ಬಂದದ್ದು ಹೇಗೆ?).  ಆದ್ದರಿಂದ ಇಲ್ಲಿ 'ಇರ್' ಪ್ರತ್ಯಯವಿರಲಾರದು, ಬದಲಿಗೆ ಪೆಣ್ ಎಂಬ ನಾಮಪದಕ್ಕೆ ದಿರ್ ಎಂಬ ಪ್ರತ್ಯಯ ಸೇರಿ ಪೆಣ್ + ದಿರ್ = ಪೆಣ್ದಿರ್ ಎಂದಾಗಿರಬೇಕೆಂಬುದು ನನ್ನ ಊಹೆ.  ಅಲ್ಲಿಂದ ಪೆಣ್ದಿರ್ > ಪೆಣ್ಡಿರ್ > ಪೆಂಡಿರ್ ಎಂಬ ರೂಪ ಸಾಧ್ಯ.  ಅದೇನೇ ಇರಲಿ, ಪೆಂಡಿರ್ ಎನ್ನುವುದು ಬಹುವಚನವೆಂದಂತೂ ಆಯಿತಲ್ಲ.  ಯಾವುದರ ಬಹುವಚನ?  ಪೆಣ್ (ಹೆಣ್ಣು) ಎಂಬುದರ ಬಹುವಚನ.  ಪೆಣ್ (ಹೆಣ್ಣು) ಎಂದರೆ ಸಾಮಾನ್ಯಾರ್ಥದಲ್ಲಿ ಸ್ತ್ರೀ ಎಂದು ತಾನೆ ಅರ್ಥ?  ಆದ್ದರಿಂದ ಪೆಂಡಿರ್ ಎಂಬುದು ಮೂಲಾರ್ಥದಲ್ಲಿ ಸ್ತ್ರೀಯರು ಎಂಬ ಬಹುವಚನಾರ್ಥ ಕೊಡುವಂಥದ್ದು - ಆದ್ದರಿಂದ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಸ್ತ್ರೀಯರಿದ್ದರೆ (ವಿವಾಹಿತರಿರಲಿ, ಅವಿವಾಹಿತರಿರಲಿ) ಅವರಿಗೆ ಪೆಂಡಿರ್ ಅಥವಾ ಹೆಂಡಿರು ಎಂಬುದು ಅನ್ವಯಿಸೀತು (ಇರಿ, ಹಾಗೆಂದು ಸಿಕ್ಕಸಿಕ್ಕವರನ್ನೆಲ್ಲಾ ಹೆಂಡಿರೆಂದುಬಿಡುವುದಕ್ಕಾಗುತ್ತದೆಯೇ? ಅನಾಹುತವೇ ಆದೀತು).  

ಕನ್ನಡದಲ್ಲಿ ವಿವಾಹದಿಂದ ಏರ್ಪಟ್ಟ ಗಂಡುಹೆಣ್ಣುಗಳ ನಿರ್ದಿಷ್ಟ ಸಂಬಂಧಕ್ಕೆ ಅದರದೇ ಆದ ಪದವೇ ಇದ್ದಂತಿಲ್ಲ.  ಅಯ್ಯೋ, ಗಂಡ-ಹೆಂಡತಿ ಎಂಬುದು ಇದೆಯಲ್ಲ ಎನ್ನುತ್ತೀರಾ?  ಅವು ಮೂಲತಃ ಬೇರೆಬೇರೆ ಅರ್ಥವುಳ್ಳವು, ನಾವು ಆ ವೈವಾಹಿಕಸಂಬಂಧ ಸೂಚಿಸುವ ಬೇರೆ ಪದಗಳಿಲ್ಲದ ಕಾರಣಕ್ಕೆ ಬಳಕೆಯಲ್ಲಿ ತಂದುಕೊಂಡಿರುವ ಪದಗಳು.  ಗಂಡ ಎನ್ನುವ ಪದ ಮೂಲತಃ ಶೂರ, ಸ್ವಾಮಿ, ಒಡೆಯ ಇತ್ಯಾದಿ ಅರ್ಥವುಳ್ಳದ್ದು, ವಿವಾಹದಲ್ಲಾತ ಕನ್ಯಾದಾನ ಪಡೆದು (ಅಥವಾ ಹೇಗೋ ಹೆಣ್ಣನ್ನು 'ಗೆದ್ದೋ, ಕದ್ದೋ, ಹೊತ್ತೊಯ್ದೋ') ಆಕೆಗೆ 'ಒಡೆಯ'ನಾಗುವುದರಿಂದ ಸಂಸಾರದಲ್ಲವನು ಗಂಡ (ಹಾಗೇ ಯಜಮಾನ, ಪತಿ, ಭರ್ತಾ, ವಲ್ಲಭ, ಕಾಂತ ಇವೆಲ್ಲವೂ ಸಾಂದರ್ಭಿಕವಾಗಿ ಬೇರೆಬೇರೆ ಅರ್ಥವುಳ್ಳವು, ಗಂಡ ಎಂಬ ವಿಶೇಷಾರ್ಥ ಹೊಂದಿವೆಯಷ್ಟೇ).  ಅದೇ ರೀತಿ ಯಜಮಾನಿತಿ, ಪತ್ನಿ, ದಾರಾ, ಭಾರ್ಯಾ, ಮಡದಿ, ಕಾಂತೆ ಇತ್ಯಾದಿಗಳೂ ಸಾಂದರ್ಭಿಕವಾಗಿ ಬೇರೆಬೇರೆ ಅರ್ಥವುಳ್ಳವು, ಹೆಂಡತಿ ಎಂಬ ವಿಶೇಷಾರ್ಥ ಹೊಂದಿವೆಯಷ್ಟೇ.  ಇನ್ನು ಹೆಂಡತಿ ಎಂಬುದರ ರೂಪವಿಕಾಸವನ್ನೂ ಅರ್ಥವ್ಯಾಪ್ತಿಯನ್ನೂ ಮೇಲೇ ನೋಡಿದೆವಲ್ಲ - ಹೆಂಡತಿ (ಹೆಂಡಿರ್ + ತಿ) ಎಂಬುದರ ಮೂಲಭಾಗ ಹೆಂಡಿರ್ ಎಂಬುದು ಯಾವ ಸ್ತ್ರೀಸಮೂಹಕ್ಕೂ ಅನ್ವಯಿಸುವುದೆಂದು ತಿಳಿದೆವಲ್ಲ.  ಹೆಂಡಿರ್ ಎಂಬುದೂ ವಿವಾಹಸಂದರ್ಭದಲ್ಲಿ ಮಾತ್ರ ಪತ್ನಿಯರು ಎಂಬ ವಿಶೇಷಾರ್ಥ ಹೊಂದಿತಷ್ಟೇ.  ಹೇಗೆಂದರೆ, ಪೆಣ್/ಹೆಣ್ಣು ಎಂಬ ಸಾಮಾನ್ಯಪದವು, "ಅವನಿಗೆ (ಆ ಗಂಡನಿಗೆ) ಸೇರಿದ ಪೆಣ್/ಹೆಣ್ಣು ಎಂಬ ಸಂಬಂಧಸೂಚಕವಿಶೇಷಾರ್ಥ ಪಡೆದುಕೊಳ್ಳುತ್ತದೆ ('ನಿನ್ನ ಹೆಂಗುಸು, ನಿನ್ನ ಹೆಣ್ಣು, ನಮ್ ಹೆಂಗಸ್ರು ಇತ್ಯಾದಿ ಪ್ರಯೋಗಗಳು ಈಗಲೂ ಬಳಕೆಯಲ್ಲಿವೆಯಲ್ಲ).  ಒಬ್ಬನಿಗೆ ಅಂತಹ ಹಲವು ಪೆಣ್ಗಳ್/ಹೆಣ್ಣುಗಳು ಇದ್ದಲ್ಲಿ ಅವರು ಬಹುವಚನವಾಗಿ ಪೆಂಡಿರ್/ಹೆಂಡಿರ್/ಹೆಂಡಿರು ಆಗುತ್ತಾರೆ (ಎಂದರೆ ಆ ಎಲ್ಲರೂ ಆ ಗಂಡನಿಗೆ ಸೇರಿದ ಹೆಂಗಸರು, ಪತ್ನಿಯರು).  ಸ್ತ್ರೀಯರು ಎಂಬ ಸಾಮಾನ್ಯಾರ್ಥ ಹೊಂದಿದ್ದ ಹೆಂಡಿರ್, ಪತ್ನಿಯರು ಎಂಬ ವಿಶೇಷಾರ್ಥ ಪಡೆದದ್ದು ಹೀಗೆ.

ಈ ಪೆಂಡಿರ್ ಎಂಬ ಬಹುವಚನಕ್ಕೆ 'ತಿ' ಪ್ರತ್ಯಯ ಸೇರಿದಾಗ ಪೆಂಡಿರ್ತಿ>ಪೆಂಡಿತಿ > ಹೆಂಡಿತಿ > ಹೆಂಡತಿ ಆದದ್ದೆಂಬುದನ್ನು ಮೇಲೆಯೇ ನೋಡಿದೆವಷ್ಟೇ?  ಕನ್ನಡದಲ್ಲಿ 'ತಿ' ಪ್ರತ್ಯಯ ಸಾಮಾನ್ಯವಾಗಿ ವೃತ್ತಿಸೂಚಕವಾಗಿರಬಹುದು (ಬೋಯಿತಿ, ಅಗಸಿತಿ, ಕುಂಬಾರ್ತಿ ಇತ್ಯಾದಿ) ಅಥವಾ ವೃತ್ತಿಸೂಚಕಪುಲ್ಲಿಂಗಪದದ ಸ್ತ್ರೀಲಿಂಗರೂಪವಾಗಿರಬಹುದು (ಬ್ರಾಹ್ಮಣತಿ, ಕನ್ನಡತಿ, ಇತ್ಯಾದಿ), ಅಥವಾ ಸ್ವಭಾವಸೂಚಕವಾಗಿರಬಹುದು (ಅಂದಗಾತಿ, ಮಾತುಗಾತಿ, ಕಲೆಗಾತಿ ಇತ್ಯಾದಿ), ಅಥವಾ ಒಡೆತನವನ್ನು, ಅಧಿಕಾರವನ್ನು ಸೂಚಿಸುವಂಥದ್ದು ಆಗಿರಬಹುದು (ಗೌಡಿತಿ, ಹೆಗ್ಗಡಿತಿ).  ಆದ್ದರಿಂದ 'ತಿ' ಪ್ರತ್ಯಯ ಪಡೆದ ಈ ಪೆಂಡಿರ್ತಿ/ಪೆಂಡಿತಿ/ಹೆಂಡಿತಿ ಹಲವು ಹೆಂಡಿರಲ್ಲಿ ಮುಖ್ಯಳಾಗಿರಬೇಕು - ಪ್ರಧಾನಪತ್ನಿ, ಮುಖ್ಯಪತ್ನಿ ಇತ್ಯಾದಿ.  ಒಂದು ಸಂಸಾರದಲ್ಲಿ ಪೆಂಡಿರು/ಹೆಂಡಿರು ಹಲವರಿರಬಹುದು, ಅವರಲ್ಲಿ ಮುಖ್ಯಳಾದ ಪೆಂಡಿತಿ/ಹೆಂಡಿತಿ ಒಬ್ಬಳೇ ತಾನೇ ಇರಲು ಸಾಧ್ಯ?  ಆದ್ದರಿಂದ ಸಂಸಾರದ ಮಟ್ಟದಲ್ಲಿ ಇದಕ್ಕೆ ಬಹುವಚನ ಪ್ರಾಯೋಗಿಕವಾಗಿ ಸಾಧ್ಯವಿಲ್ಲ (ಗಂಡ ಒಬ್ಬರಿನ್ನೊಬ್ಬರಿಗೆ ಕಾಣದಂತೆ ಎರಡು ಸಂಸಾರ ನಡೆಸುತ್ತಿದ್ದರೆ ಅದು ಬೇರೆಯ ವಿಷಯ).  ಈಗಂತೂ ಏಕಪತ್ನೀತ್ವವೇ ಸಾಮಾನ್ಯವಾದ್ದರಿಂದ ಹೆಣ್ಣು, ಹೆಂಡಿರು, ಹೆಂಡತಿ ಎಲ್ಲಾ ಒಂದೇ ವ್ಯಕ್ತಿಗೆ, ಏಕವಚನದಲ್ಲೇ ಅನ್ವಯಿಸುವಂಥದ್ದು - ಬಹುವಚನವಿದ್ದರೆ ಮರ್ಯಾದೆಗಾಗಿ ಇರಬೇಕಷ್ಟೇ.  ಇರಲಿ ಮರ್ಯಾದೆಗಾದರೂ ಯಾವ ಬಹುವಚನ ಉಪಯೋಗಿಸಬೇಕು?  ಹಾಗೇ ಹಲವು ಬೇರೆಬೇರೆ ಹೆಂಡತಿಯರನ್ನು (ಬೇರೆಬೇರೆ ಕುಟುಂಬದ ಮುಖ್ಯಪತ್ನಿಯರನ್ನು) ಉದ್ದೇಶಿಸುವಾಗಲೂ ಬಹುವಚನ ಬೇಕಷ್ಟೇ? ಆಗ ಯಾವ ಬಹುವಚನ? ಈ ಲೇಖನದ ಆರಂಭದಲ್ಲಿ ಹೆಂಡತಿಗಳು/ಹೆಂಡಂದಿರು/ಹೆಂಡಿತಿಯಂದಿರು/ಹೆಂಡತಿಯರು - ಈ ನಾಲ್ಕು ರೂಪಗಳನ್ನು ಗಮನಿಸಿದೆವು, ಹೆಂಡಂದಿರು ಎನ್ನುವುದು ಸರಿಯಲ್ಲವೆಂದು ನಿರ್ಧರಿಸಿ ಕೈಬಿಟ್ಟೆವು, ಹೆಂಡತಿಗಳು ಎನ್ನಲು ಭಯಪಟ್ಟು ಅದನ್ನೂ ಕೈಬಿಟ್ಟಿದ್ದೆವು ಅಲ್ಲವೇ?  ಸದ್ಯಕ್ಕಿನ್ನೂ ಹೆಂಡತಿಗಳ ಸಹವಾಸ ಬೇಡ - ಹೆಂಡಿತಿಯಂದಿರು ಮತ್ತು ಹೆಂಡತಿಯರು ಈ ಎರಡು ರೂಪಗಳಲ್ಲಿ ಯಾವುದು ಸರಿಹೋಗಬಹುದೆಂಬುದನ್ನೀಗ ಮತ್ತೆ ಪರಿಶೀಲಿಸೋಣ.

ಹೆಂಡತಿಯಂದಿರ್ ಸಾಧ್ಯವಿಲ್ಲ, ಏಕೆಂದರೆ ಅಂದಿರ್ ಎಂಬ ಪ್ರತ್ಯಯವೇ ಇಲ್ಲ.  ನಾಮಪದವು ನ್ ಅಥವಾ ಮ್ ಅರ್ಧಾಕ್ಷರಗಳಿಂದ ಕೊನೆಗೊಂಡಿದ್ದಾಗ ಅದಕ್ಕೆ ದಿರ್ ಪ್ರತ್ಯಯ ಸೇರಿ ಅಂದಿರ್ ಎಂದು ಕಾಣುತ್ತದಷ್ಟೇ, ಆದರೆ ಅದು ವಾಸ್ತವದಲ್ಲಿ ದಿರ್ ಪ್ರತ್ಯಯವೇ ಹೊರತು ಅಂದಿರ್ ಅಲ್ಲ (ಉದಾ: ಮಗನ್+ದಿರ್=ಮಗಂದಿರ್) - ಹಾಗೆಯೇ  ಹೆಣ್ ಎಂಬುದಕ್ಕೆ ದಿರ್ ಪ್ರತ್ಯಯ ಸೇರಿಸಿದಾಗ ಹೆಣ್ಡಿರ್/ಹೆಂಡಿರ್ ಆಗುತ್ತದೆಯೇ ಹೊರತು ಹೆಣಂದಿರ್ ಅಥವಾ ಹೆಣ್ಣಂದಿರ್ ಆಗುವುದಿಲ್ಲ ಅಲ್ಲವೇ?  ಆದ್ದರಿಂದ ಹೆಂಡತಿಯಂದಿರ್ ಎಂಬುದು ಸಾಧುವಲ್ಲ.  ಹೆಂಡತಿಗೇ 'ದಿರ್' ಪ್ರತ್ಯಯ ಸೇರಿಸಿ ಹೆಂಡತಿದಿರ್ ಎಂಬುದು ಆದೀತು ಆದರೆ ಹಾಗೆ ಬಳಕೆಯಲ್ಲಿಲ್ಲ.  ಆದ್ದರಿಂದ ಹೆಂಡತಿಯಂದಿರ್/ಹೆಂಡತಿದಿರ್ ಇವನ್ನು ಕೈಬಿಡೋಣ.

ಇನ್ನೊಂದಿದೆ - ಪೆಂಡತಿ ಎಂಬುದಕ್ಕೆ ವಿರ್ ಅಥವಾ ಅರ್ ಪ್ರತ್ಯಯಗಳು ಸೇರಿ ಪೆಂಡತಿವಿರ್ ಅಥವಾ ಪೆಂಡತಿಯರ್ ಎಂಬ ಹಳಗನ್ನಡರೂಪಗಳು ಸಾಧ್ಯ.  ಪೆಂಡತಿವಿರ್ ಎನ್ನುವುದು, ಹೊಸಗನ್ನಡದಲ್ಲಿ ಹೆಂಡತಿವಿರು ಎಂದಾಗುತ್ತದೆ.  ಹೆಂಡತಿಯರನ್ನು ಹಾಗೆ ಕರೆಯಲು ಬರುವುದೇ? "ನಾನೆಲ್ಲಿ ತಿವಿದೆ? ನಿಮಗೇನು ತಿಮಿರು" ಎಂಬ ಗರ್ಜನೆ ಬರುತ್ತದಷ್ಟೇ (ತಿವಿದುಬಿಡಲೂ ಬಹುದು).  ಆದ್ದರಿಂದ ಅದು ಬೇಡವೆಂದರೆ, ಉಳಿದುದು, ಸುರಕ್ಷಿತವಾಗಿ, ಪೆಂಡತಿಯರ್ > ಹೆಂಡತಿಯರು ಎಂಬ ರೂಪ ಮಾತ್ರ.  ಹೀಗಾಗಿ ಹೆಂಡತಿ ಎನ್ನುವುದರ ಸಂಖ್ಯಾಬಹುವಚನಕ್ಕೆ ಹೆಂಡತಿಯರು ಎನ್ನುವುದೇ ಸರಿ.

ಇದು ಬಹುಸಂಖ್ಯೆಯ ಹೆಂಡತಿಯರಿದ್ದಾಗ ಆಯಿತಲ್ಲ.  ನಿಮ್ಮ ಒಬ್ಬಳೇ ಹೆಂಡತಿಯನ್ನು ಮರ್ಯಾದೆಯಿಂದ ಸೂಚಿಸಬೇಕೆನ್ನಿ.  ಆಗ? ಇರುವ ಒಬ್ಬಳೇ ಹೆಂಡತಿಯನ್ನು ಹೆಂಡತಿಯರು ಎನ್ನಲಾಗುತ್ತದೆಯೇ? (ಆಕೆ ಎಷ್ಟು ಜನರ ಸಮಾನವಾಗಿಯಾದರೂ ಇರಲಿ - ಸಾಮರ್ಥ್ಯದಲ್ಲಿ ಅಥವಾ ಗಾತ್ರದಲ್ಲಿ).  "ಅದಕ್ಕೇನು? ಹೆಂಡತಿಯವರು" ಎಂದರಾಯಿತು ಎನ್ನುತ್ತೀರೇನೋ.  ಅದೆಂತಹ ಚೆಂದ? ಮಹಾಸ್ವಾಮಿಯವರು, ಮಹಾಸನ್ನಿಧಾನದವರು ಎನ್ನುವಂತೆ?  ಅತಿವಿನಯಂ ಧೂರ್ತಲಕ್ಷಣಂ, ನೆನಪಿಡಿ, ಅದು ಆಕೆಗೆ ಚೆನ್ನಾಗಿ ಗೊತ್ತು.  ಸ್ವಲ್ಪ ಸಹಜವಾದ ಬಹುವಚನ ಉಪಯೋಗಿಸಿ, ಕೊಡುವ ಮರ್ಯಾದೆಯೂ ಸಹಜವಾಗಿರಲಿ, ನಂಬುವಂತಿರಲಿ.  ಹಳಗನ್ನಡದಲ್ಲಿ, ಬುದ್ಧಿಯಿಲ್ಲದ, ಜೀವವಿಲ್ಲದ ನಪುಂಸಕವಸ್ತುಗಳಿಗೆ ಹೇಗೋ ವ್ಯಕ್ತಿಗಳಿಗೆ ಮರ್ಯಾದೆ ಕೊಡಲೂ ನಪುಂಸಕಲಿಂಗಬಹುವಚನವನ್ನುಪಯೋಗಿಸುವುದೇ ರೂಢಿ - ಕಲ್ಗಳ್, ಕೈಗಳ್, ಪಕ್ಷಿಗಳ್ ಎಂಬಂತೆಯೇ ತಂದೆಗಳ್, ತಾಯ್ಗಳ್, ಅಣ್ಣಗಳ್, ತಮ್ಮಗಳ್, ಆತಗಳ್, ಈತಗಳ್ (ಗಮನಿಸಿ, ಇದು ಸಂಖ್ಯಾಬಹುವಚನವಲ್ಲ, ಮರ್ಯಾದಾಬಹುವಚನ).  ಇದೇ ದಾರಿಯನ್ನನುಸರಿಸಿ ಹೆಂಡತಿಗೆ ಮರ್ಯಾದೆ ಕೊಡುವವರು ಪೆಂಡಿತಿಗಳ್ ಎನ್ನಬಹುದು, ಅದನ್ನು ಹೊಸಗನ್ನಡಕ್ಕೆ ತಂದರೆ... ಕ್ಷಮಿಸಿ, ಹೆಂಡತಿಗಳು ಎಂದೇ ಆಗಬೇಕು - ಹೇಗೋ ಧೈರ್ಯ ಮಾಡದೇ ನಿಮಗೆ ಬೇರೆ ದಾರಿಯಿಲ್ಲ! ಅದು ಇಲಿಗಳು, ಬೆಕ್ಕುಗಳು ಎನ್ನುವಂತಲ್ಲ, ಮರ್ಯಾದಾಬಹುವಚನ ಎಂದು ನಿಮ್ಮ ಪತ್ನಿಗೆ ಮನದಟ್ಟು ಮಾಡಿಕೊಡುವ ಹೊಣೆಗಾರಿಕೆಯನ್ನು ನೀವು ಹೊರಲೇಬೇಕಾಗುತ್ತದೆ (ಬೇಕಿದ್ದರೆ ಈ ಲೇಖನವನ್ನಾಕೆಗೆ ಓದಿ ಹೇಳಬಹುದು, ಕೇಳಿಸಿಕೊಂಡರೆ).  ಇಲ್ಲದಿದ್ದರೆ, ನೆನಪಿದೆಯಲ್ಲ, ಲಟ್ಟಣಿಗೆಗಳು ಎನ್ನುವುದೂ ಬಹುವಚನವೇ!

ತಡೆಯಿರಿ, ಅಥವಾ ಇನ್ನೊಂದು ಮಾಡಬಹುದು - ಅರ್ ಮತ್ತು ಕಳ್ ಎರಡೂ ಪ್ರತ್ಯಯವನ್ನೂ ಸೇರಿಸಿ ಹೇಳುವ ಪರಿಪಾಠವೂ ಇದೆ - ಅವರ್+ಕಳ್>ಅವರ್ಗಳ್, ಪತ್ನಿಯರ್+ಕಳ್>ಪತ್ನಿಯರ್ಗಳ್ ಹೀಗೆ.  ಅದೇರೀತಿ ಪೆಂಡಿತಿಯರ್ಗಳ್ > ಹೆಂಡತಿಯರುಗಳು ಎನ್ನಬಹುದು.  ಇದು ಹಲವು ಗೌರವಾನ್ವಿತ ಹೆಂಡತಿಯರಿರುವ ಗುಂಪಿಗೆ ಮರ್ಯಾದೆಯಾಗಿ ಹೇಳುವ ಪದ - ಸಂಖ್ಯಾಮರ್ಯಾದಾಬಹುವಚನ.  ಆದರೇನಂತೆ? ಅದನ್ನೇ ಒಬ್ಬ ಪತ್ನಿಗೂ ಹೇಳಬಾರದೆಂದಿದೆಯೇ? ಒಬ್ಬ ಹೆಂಡತಿಗೆ ಇಡೀ ಗುಂಪಿನ ಮರ್ಯಾದೆ ಸಲ್ಲಬಾರದೆಂದಿದೆಯೇ?  ನೀನೊಬ್ಬಳು ನನಗೆ ಹಲವು ಹೆಂಡಿರ, ಅಲ್ಲಲ್ಲ ಹಲವು ಹೆಂಡತಿಯರ (ಅಂದರೆ ಹಲವು ಮುಖ್ಯಪತ್ನಿಯರ, ಪತ್ನೀರತ್ನರ) ಸಮ ಎಂದು ಹೇಳಿದಂತಾಗುವುದಿಲ್ಲವೇ?  "ಇವರು ನಮ್ಮ ಹೆಂಡತಿಯರುಗಳು" ಎಂದು ಯಾರಿಗಾದರೂ ಆಕೆಯನ್ನು ಪರಿಚಯಿಸಿ; ಆಗ ಅರಳುವ ಆಕೆಯ ಮೊಗವನ್ನು ನೋಡಿ, ವ್ಯಾಕರಣಸ್ವರ್ಗಕ್ಕೆ ಕಿಚ್ಚು ಹಚ್ಚಿ ಚಳಿ ಕಾಯಿಸಿಕೊಳ್ಳಿ!  "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರುಪಾಯಿ" ಎಂದಿಲ್ಲವೇ ಕವಿ?  ಅದನ್ನೇ ನೀವು ಬದಲಿಸಿ "ನನ್ಹೆಂಡತಿಯೊಬ್ಬಳು ಹತ್ತಿರವಿದ್ದರೆ ಹೆಂಡಿರು ನೂರೊ ಶಿವಾಯಿ" ಎಂದು ಹಾಡಬಹುದು.

ಇಷ್ಟು ವಿವರಿಸಿದಮೇಲೂ ಹೆಂಡತಿಯನ್ನು ಮರ್ಯಾದೆಯಾಗಿ ಹೆಂಡತಿಗಳು ಅಥವಾ ಹೆಂಡತಿಯರುಗಳು ಎಂದು ಕರೆಯಲು ನಿಮಗೆ 'ಒಂಥರಾ' ಎನ್ನಿಸಿದರೆ, ನಾನು ತಾನೆ ಏನು ಮಾಡಲಿ?  ಆಯ್ತು, ಎಲ್ಲರೂ ಒಪ್ಪುವಂತೆ ಹೆಂಡತಿಯವರು ಎಂದೇ ಕರೆಯಿರಿ, ಇನ್ನೇನು ಮಾಡಲಾದೀತು?

ಇರಲಿ, ತಮಾಷೆಯಲ್ಲಿ ಮೂಲವಿಷಯ ಕಳೆದುಹೋಗದಿರಲಿ:
ಪೆಣ್ > ಹೆಣ್ > ಹೆಣ್ಣು = ಸ್ತ್ರೀ (ಸಾಮಾನ್ಯಾರ್ಥ ಏಕವಚನ)
ಪೆಣ್+ದಿರ್=ಪೆಣ್ಡಿರ್ > ಹೆಂಡಿರು = ಸ್ತ್ರೀಯರು (ಸಾಮಾನ್ಯಾರ್ಥ ಬಹುವಚನ, ಆದರೆ ಈ ಅರ್ಥ ಬಳಕೆಯಲ್ಲಿಲ್ಲ)
ಹೆಣ್ಣು = ಪತ್ನಿ (ವಿಶೇಷಾರ್ಥ ಏಕವಚನ, ಆದರೆ ಈ ಅರ್ಥದಲ್ಲಿ ಬಳಕೆ ಕಡಿಮೆ)
ಹೆಂಡಿರು = ಪತ್ನಿಯರು (ವಿಶೇಷಾರ್ಥ ಬಹುವಚನ; ಆದರೆ ಇದು ಪತ್ನಿ ಎಂಬ ಏಕವಚನದಲ್ಲೂ ಬಳಕೆಯಲ್ಲಿದೆ)
ಪೆಂಡಿರ್+ತಿ = ಪೆಂಡಿತಿ > ಹೆಂಡತಿ = ಪ್ರಧಾನಪತ್ನಿ(ವಿಶೇಷಾರ್ಥ ಏಕವಚನ, ಆದರೆ ಈ ಅರ್ಥ ಬಳಕೆಯಲ್ಲಿಲ್ಲ)
ಹೆಂಡತಿ - ಪತ್ನಿ (ಸಾಮಾನ್ಯಾರ್ಥ, ಏಕವಚನ, ಇದು ಬಹುಬಳಕೆಯಲ್ಲಿರುವ ಅರ್ಥ)
ಹೆಂಡತಿಯರು = ಹಲವು ಪ್ರಧಾನಪತ್ನಿಯರು (ವಿಶೇಷಾರ್ಥ, ಸಂಖ್ಯಾಬಹುವಚನ, ಆದರೆ ಈ ಅರ್ಥ ಬಳಕೆಯಲ್ಲಿಲ್ಲ)
ಹೆಂಡತಿಯರು = ಪತ್ನಿಯರು (ಸಾಮಾನ್ಯಾರ್ಥ, ಸಂಖ್ಯಾಬಹುವಚನ)
ಹೆಂಡತಿಯವರು (ಮರ್ಯಾದಾಬಹುವಚನ - ಹೆಂಡತಿಗಳು ಎನ್ನಬೇಕಿತ್ತು, ನಿಮ್ಮ ಧೈರ್ಯ!)

ಮುಖ್ಯವಾಗಿ ಹೆಂಡತಿ ಎನ್ನುವುದರ ಬಹುವಚನವೇನು ಎಂಬ ಮೂಲಪ್ರಶ್ನೆಗೆ ಈ ಕೊನೆಯೆರಡು ಸಾಲುಗಳಷ್ಟೇ ಉತ್ತರ.  ಸುಮ್ಮನೇ ನೀವು ಇಷ್ಟೆಲ್ಲಾ ಓದುವಂತೆ ಮಾಡಿದ್ದಾಯ್ತು, ಕ್ಷಮೆಯಿರಲಿ!

ಅಷ್ಟಭಾರ್ಯೆಯರೊಡನೆ ಕೃಷ್ಣ
ಚಿತ್ರಕೃಪೆ:
Ramsons Kala Pratishtana (ವಿಕಿಪೀಡಿಯಾ ಮೂಲಕ)