Thursday, May 2, 2019

ಬೈದು ಬೈದೇ ಹೃದಯದಲ್ಲಿ ಮನೆಮಾಡಿದ ಕಲ್ಚರ್ಡ್ ಕಮೆಡಿಯನ್

























"ಈ ಊರಲ್ಲಿ, ಸಾವ್ಕಾರ್ರ್ ಮನೆ ಎಷ್ಟದಾವೆ...?"

"ಅಗೋ... ಅಲ್ ಕಾಣ್ತಾದಲ್ಲ, ಆ ಬೀದಿ..."

"ಹೂ, ಅದೇ ಬೀದಿ? ನಾವ್ ಬಂದಿದ್ದು..."

"ಅದೇ ಬೀದೀಲ್ ಬಂದ್ರೇನು?... ಆ ಬೀದೀಲಿರೋರೆಲ್ಲಾ ಸಾವ್ಕಾರ್ರೇ ವೋಗತ್ಲಾಗೆ..."

"ಮತ್ತೆ, ಆ ಬೀದೀಗೆ ಪುರುಂದರದಾಸರ ಬೀದಿ ಅಂತ ಹೆಸ್ರಿಟ್ಟಿದಾರೆ..."

"ನಿನ್ ಹೆಣಾ, ಅಯೋಗ್ಯ್ **ಮಗ್ನೇ... ಆ ಬೀದೀಲಿ ಈವಾಗಿರೋ ಶ್ರೀಮಂತ್ರೆಲ್ಲಾ ಬೀದೀಗ್ ಬಂದಾಗ, ದಾಸ್ರು ಬಂದ್ಹಾಂಗ್ ಬಂದ್ರು... ಆಮೇಲೆ ಅದೇನ್ ಮಾಡಿದ್ರೋ ಯೆಂಗ್ ಮಾಡಿದ್ರೋ, ಅಂತ್ಕೂ ಎಲ್ಲಾ ಶ್ರೀಮಂತ್ರಾಗಿ ಮಾಡೀಮೇಲೆ ಮಾಡಿ ಕಟ್ಟಿಸ್ಕೊಂಡು, ಮಾಡಿ ವಳಕ್ಕೆ... ಅವ್ರ್ ಹೋದ್ರು, ದಾಸರಿಗೆ ಬೀದಿ ತಿರ್ಗಾಡಾಕ್ ಬಿಟ್ರು"

"ಬೀದಿ ಮಾತ್ರಾ ದಾಸ್ರುದ್ದು, ಮನೆಯೆಲ್ಲಾ ಶ್ರೀಮಂತ್ರುದ್ದು"

****************************************************************************************************
"ಅಲ್ರೀ, ಬಿಕ್ಸಾ ಬೇಡುದ್ರೆ, ಕೆಲ್ಸಾ ಮಾಡ್ಕಂಡ್ ತಿನ್ನೂ ಅಂತೀರ, ಕೆಲ್ಸಾ ಕೇಳುದ್ರೆ ಬಿಕ್ಸಾ ಬೇಡ್ಕಂಡ್ ತಿನ್ನೂ ಅಂತೀರ; ಕೆಲ್ಸಾ ಕೊಡಲ್ಲಾ, ಬಿಕ್ಸಾ ಆಕಲ್ಲ... ಬಡಬಗ್ರು ಹೊಟ್ಗೇನ್ ಮಣ್ ತಿನ್ಬೇಕೇನ್ರೀ?"

*****************************************************************************************************

ಪಶ್ಚಾತ್ತಾಪ ನಾಟಕದ ಈ ಡಯಲಾಗುಗಳಿಂದ ನನಗೆ ಪರಿಚಿತರಾದವರು ಮಾಸ್ಟರ್ ಹಿರಣ್ಣಯ್ಯ. ಕೇಳಿದ ಸುಮಾರು ಮೂವತ್ತು ಮೂವತ್ತೆರಡು ವರ್ಷಗಳ ಮೇಲೂ ಈ ಸಂಭಾಷಣೆಗಳು ಮನಸ್ಸಿನಲ್ಲಿ ಅಚ್ಚೊತ್ತಿವೆ. ಕ್ಯಾಸೆಟ್ ರೆಕಾರ್ಡರಿನ ಕಾಲ ಅದು. ಒಂಬತ್ತನೆಯದೋ ಹತ್ತನೆಯದೋ ತರಗತಿ ಓದುತ್ತಿದ್ದೆ. ಈ ಕ್ಯಾಸೆಟ್ ನಾಟಕವನ್ನು ನಾವು ಎಷ್ಟು ಬಾರಿ ಕೇಳಿದ್ದೆವೆಂದರೆ, ಆಗೆಲ್ಲಾ ಇಡೀ ಪಶ್ಚಾತ್ತಾಪ ನಾಟಕ ಬಾಯಿಗೇ ಬರುತ್ತಿತ್ತು.

ಎರಡೇ ದಶಕಗಳ ಹಿಂದೆ, ಸಂಸಾರದ ಜೊತೆ ಮಕ್ಕಳ ಜೊತೆ ಕೂತು ಕೇಳಲು/ನೋಡಲು ತುಸು ಮುಜುಗರವೆನಿಸುವಷ್ಟು ಎಗ್ಗುಸಿಗ್ಗಿಲ್ಲದ ಬೈಗಳ ಮಾಸ್ಟರ್ ಹಿರಣ್ಣಯ್ಯ ಸಹ, ಆಮೇಲಾಮೇಲೆ ರಂಗಭೂಮಿ/ಸಿನಿಮಾರಂಗಗಳು ತಳೆದ ಅಸಹ್ಯ ಅವತಾರಗಳ ಹಿನ್ನೆಲೆಯಲ್ಲಿ ಎಷ್ಟೋ ಮೇಲೆನಿಸತೊಡಗಿ, ನಿಜಕ್ಕೂ ನಿಜಕ್ಕೂ ಕಲ್ಚರ್ಡ್ ಕಮೆಡಿಯನ್ ಎನಿಸತೊಡಗಿದ್ದು ಕನ್ನಡ ಕಲಾರಂಗದ ವಿಪರ್ಯಾಸವೇ ಸರಿ. ಆದರೆ ಇವೆಲ್ಲ ತಕರಾರುಗಳಾಚೆಗೂ - ಅನೇಕವೇಳೆ ಏಕತಾನವೆನಿಸುವಷ್ಟು ಬಡಬಡ ಮಾತಿನ ಶೈಲಿಯಲ್ಲೇ - ತಮಗನ್ನಿಸಿದ ಸತ್ಯವನ್ನು ನಿರ್ಭೀತಿಯಿಂದ ಹೇಳುತ್ತಾ, ತಮ್ಮದೇ ರೀತಿಯಲ್ಲಿ ಸಮಾಜದ, ಸರ್ಕಾರಗಳ ಓರೆಕೋರೆಗಳನ್ನು ಕಲಾಮಾಧ್ಯಮದ ಮೂಲಕ ತಿದ್ದುವ ಪ್ರಯತ್ನ ನಡೆಸಿದ ಹಿರಣ್ಣಯ್ಯ ತಮ್ಮ ಆ ದಾರಿಯಲ್ಲಿ ಜನರ ಹೃದಯದಲ್ಲಿ ಒಂದು ವಿಚಿತ್ರ ಪ್ರೀತಿಯನ್ನು ಗಳಿಸಿಕೊಂಡುಬಿಟ್ಟರು. ಇದರಿಂದ ಸರ್ಕಾರ ಸಮಾಜಗಳು ಎಷ್ಟು ಎಚ್ಚೆತ್ತುಕೊಂಡುವೋ, ಆದರೆ ಸರ್ಕಾರವನ್ನೇ ಎದುರುಹಾಕಿಕೊಂಡು ದಕ್ಕಿಸಿಕೊಳ್ಳುವ ಕೆಚ್ಚೆದೆ, ಫ್ರೀಪಾಸುಗಳನ್ನು ನೀಡಿ ಗಣ್ಯ-ಪ್ರಭಾವಿಗಳನ್ನು ಮುಂದಿನ ಸಾಲುಗಳಲ್ಲೇ ಕೂರಿಸಿಕೊಂಡು ಉಗಿದು ಉಪ್ಪುಹಾಕುವ ಭಂಡಧೈರ್ಯದ ಹಿರಣ್ಣಯ್ಯ ಒಂದು ರೀತಿಯಲ್ಲಿ ಜನರ ಹತಾಶೆಯ, ಸಿಟ್ಟಿನ, ಬೇಸರಿಕೆಯ, ಬೈಗಳಿಗೆ ದನಿಯಾದರು, ಬಹುಶಃ ಆ ಕಾರಣಕ್ಕೇ ಜನಕ್ಕೆ ಅಚ್ಚುಮೆಚ್ಚಾದರು. "ಹದಿನಾರ್ ಜೊತೆ ಸೊಲ್ಲಾಪುರದ್ ಚಪ್ಲಿ ಅರಿಯೋವರ್ಗೂ ಹೊಡೆ"ಯುವ ಅವರದೇ ನಾಲಿಗೆಯಲ್ಲಿ "ಎಲೆ ಅಡಿಕೆ ಸುಣ್ಣ ಹೊಗೆಸೊಪ್ಪು ಎಲ್ಲಾ ಹಾಕ್ಕೊಂಡು ಕ್ಯಾಕರಿಸಿ ಅಗಿದು ಉಗಿ"ಯುವ ಮಾತಿನ ಶೈಲಿ ಅದು. "ಮಾಸ್ಟರ್ ಹಿರಣ್ಣಯ್ಯ ಕಣಯ್ಯ, ಹ್ಯಾಗ್ ಬೈತಾನೆ ಗೊತ್ತಾ, ಅಯ್ಯಪ್ಪಾ... ಮಾನವಿದ್ದೋರು ಯಾರಾದ್ರೂ ನೇಣ್ಹಾಕ್ಕೋಬೇಕು ಬಡ್ಡಿಮಗಂದು..." ಎಂಬ ತಮಾಷೆ ತುಂಬಿದ ಮೆಚ್ಚುಗೆಗೆ ಪಾತ್ರರಾದವರು ಹಿರಣ್ಣಯ್ಯ. ಸುಶಿಕ್ಷಿತ ರಂಗಾಸಕ್ತರಿಂದ ಹವ್ಯಾಸೀ ರಂಗಭೂಮಿ ಚಾಲನೆಗೊಂಡು, ಹವ್ಯಾಸೀ ರಂಗಪ್ರಯೋಗಗಳು ಸುಶಿಕ್ಷಿತರ ನಡುವೆ ಜನಪ್ರಿಯಗೊಳ್ಳುತ್ತಾ ವೃತ್ತಿರಂಗಭೂಮಿ ಅಸಾಧ್ಯ ಟೀಕೆಗೆ, ಹೀಗಳಿಕೆಗೆ, ಅಪಹಾಸ್ಯಕ್ಕೆ ಒಳಗಾಗಿ, ಇನ್ನೊಂದೆಡೆ ಸಿನಿಮಾ ಮಾಧ್ಯಮದ ಅಬ್ಬರದಿಂದ ಇಡೀ ವೃತ್ತಿರಂಗಭೂಮಿಯೇ ನಿತ್ರಾಣಗೊಂಡು ನೆಲಕಚ್ಚಿದ್ದ ಕಾಲದಲ್ಲಿ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ವಿನೂತನ ಸಾಮಾಜಿಕ ರಾಜಕೀಯ ಪ್ರಯೋಗಗಳಿಂದ ವೃತ್ತಿರಂಗಭೂಮಿಗೆ ಒಂದಷ್ಟು ಜೀವ, ಒಂದಷ್ಟು ಪ್ರಸ್ತುತತೆ ತುಂಬಿದರು. ರಂಗಪ್ರಯೋಗಗಳಿಗಷ್ಟೇ ಸೀಮಿತಗೊಂಡಿದ್ದ ಅನೇಕ ಹಳೆಯ ಹೊಸ ನಾಟಕಗಳನ್ನು ಧ್ವನಿಸುರುಳಿಯ ಮೂಲಕ ಮತ್ತೆ ಜನಪ್ರಿಯಗೊಳಿಸಿದರು.

ಹಿರಣ್ಣಯ್ಯನವರನ್ನು ನೀವು ಇನ್ನಿಷ್ಟೇ ಟೀಕಿಸಬಹುದು, ವಿಮರ್ಶಿಸಬಹುದು, ಆದರೆ ಅವರ ನಾಟಕಗಳನ್ನು ಕೇಳಿ ನೋಡಿ ನಕ್ಕು ಮೆಚ್ಚಿ ಹಗುರಾಗದಿರಲು ಸಾಧ್ಯವೇ ಇಲ್ಲ.

ಇಷ್ಟಾಗಿಯೂ ನರಸಿಂಹಮೂರ್ತಿಗಳು (ಅವರ ಮೂಲನಾಮ), ತಮ್ಮ ಹೆಸರಿನಿಂದಲ್ಲ, ತಮ್ಮ ತಂದೆ ದಿ. ಕೆ ಹಿರಣ್ಣಯ್ಯನವರ ಹೆಸರಿನಿಂದ ತಮ್ಮ ಜನಪ್ರಿಯತೆಯನ್ನು ಕಟ್ಟಿಕೊಂಡದ್ದು, ತಂದೆಯವರ ಕೀರ್ತಿಯನ್ನೂ ಮೀರುವಷ್ಟು ಜನಪ್ರಿಯತೆಯನ್ನು ಸ್ವತಃ ಸಂಪಾದಿಸಿಕೊಂಡ ಮೇಲೂ "ಮಾಸ್ಟರ್ ಹಿರಣ್ಣಯ್ಯ"ನವರಾಗಿಯೇ ಉಳಿದದ್ದು ಕುತೂಹಲಕರ.

ಇಂಥದ್ದೊಂದು ಪ್ರತಿಭೆ ಇಂದು ನಮ್ಮೊಡನಿಲ್ಲವೆಂಬುದು ನೋವಿನ ವಿಷಯ, ವೃತ್ತಿರಂಗಭೂಮಿಯಲ್ಲಿ ಅವರು ಖಾಲಿ ಮಾಡಿ ಹೋದ ಜಾಗ ತುಂಬ ದೊಡ್ಡದು, ತುಂಬಲಾರದ್ದು.

ನಮ್ಮೆಲ್ಲರ ಅಚ್ಚುಮೆಚ್ಚಿನ ಕಲ್ಚರ್ಡ್ ಕಮೆಡಿಯನ್ ಗೆ ವಿದಾಯ

🙏🙏🙏