Friday, September 6, 2019

ಪ್ರಾದೇಶಮಾತ್ರವಸನಂ

ಯಾವುದೋ ತರಲೆ ಚರ್ಚೆಯ ನಡುವೆ, ವಿದ್ವನ್ಮಿತ್ರರಾದ ಶ್ರೀ ರಂಗನಾಥಪ್ರಸಾದರಿಗೆ "ನೀವು ದೇಶದ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಂತೆ ಕಾಣುತ್ತದೆ" ಎಂದೆ.  ಅದು ಬೇರೆಯೇ ತಮಾಷೆಯ ಹಿನ್ನೆಲೆ, ಸದ್ಯಕ್ಕಿಲ್ಲಿ ಅಪ್ರಸ್ತುತ.  ಅದಕ್ಕವರು ಹೀಗೆ ಹೇಳಿದರು - "ದೇಶ ಎಂದರೆ ಪ್ರದೇಶ ಎಂಬ ಅರ್ಥವೂ ಇದೆ. ಪ್ರದೇಶದಿಂದ ಪ್ರಾದೇಶ! ಈಚೆಗೆ ನೀವು ಪದ್ಯಪಾನಕ್ಕೆ ಬಂದಿಲ್ಲ. ಅಲ್ಲೊಂದು ಸಮಸ್ಯೆ ಹೀಗಿತ್ತು: "ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ" - ತಾಕತ್ತಿದ್ದರೆ ಪರಿಹರಿಸಿ ನೋಡೋಣ"  ಈ ಬಗೆಯ ಹಾಸ್ಯಸಲ್ಲಾಪಗಳು ನಮ್ಮಲ್ಲಿ ಆಗಾಗ್ಗೆ ನಡೆಯುತ್ತಿರುತ್ತವೆ.

"ಪ್ರಾದೇಶಮಾತ್ರವಸನ" ಎಂದರೆ ದೇಹದ 'ಆ' ಪ್ರದೇಶವನ್ನಷ್ಟೇ ಮುಚ್ಚುವಷ್ಟು ಚಿಕ್ಕ ಬಟ್ಟೆ ಎಂದು ವಿಶೇಷಾರ್ಥ - "ಆ ಸತಿಯು 'ಪ್ರದೇಶ'ವನ್ನಷ್ಟೇ ಮುಚ್ಚುವಷ್ಟು ಬಟ್ಟೆಯನ್ನು ಧರಿಸಿದಳಲ್ಲವೇ?" ಎಂಬುದು ಈ ಸಾಲಿನ ಅರ್ಥ.  ಕ್ಷಮಿಸಿ, ಸ್ವಲ್ಪ ಮಡಿಯವರಿದ್ದರೆ ಇನ್ನು ಮುಂದೆ ಓದುವ ಅಗತ್ಯವಿಲ್ಲ, ಆದರಿದು ವಿದ್ವದ್ವಿನೋದ ಎಂಬ ದೃಷ್ಟಿಯುಳ್ಳವರು ಮುಂದುವರೆಯಬಹುದು :) ಇದೊಂದು ಸಮಸ್ಯಾಪೂರಣದ ಪ್ರಶ್ನೆ.  ಸಮಸ್ಯಾಪೂರಣದ ಹಿನ್ನೆಲೆ ಅರಿಯದವರಿಗಾಗಿ ಇದೊಂದು ಚಿಕ್ಕ ವಿವರಣೆ.  ಅವಧಾನಕಲೆಯಲ್ಲಿ ಸಮಸ್ಯಾಪೂರಣವೆನ್ನುವುದು ಒಂದು ವಿಭಾಗ.  ಇಲ್ಲಿ ಅವಧಾನಿಗೆ ಪೃಚ್ಛಕನು (ಅವಧಾನಿಗೆ ಸರದಿಯ ಮೇಲೆ ಪ್ರಶ್ನೆ ಕೇಳುವ ಎಂಟೋ ಹತ್ತೋ ನೂರೋ ಸಾವಿರವೋ ಮಂದಿಯಲ್ಲಿ ಒಬ್ಬ) ತಾನು ರಚಿಸಿದ/ರಚಿಸಲೆಳಸುವ ಪದ್ಯದ ಸಾಲೊಂದನ್ನು  ಕೊಡುತ್ತಾನೆ.  ಈ ಸಾಲು ಸಾಮಾನ್ಯವಾಗಿ ಅರ್ಥಹೀನವೋ ಅಸಂಬದ್ಧವೋ ಅಸಂಭವವವೋ ಕೆಲವೊಮ್ಮೆ ಅಶ್ಲೀಲವೋ ಆಗಿದ್ದು, ಇದನ್ನು 'ಸಮಸ್ಯೆ' ಎನ್ನುತ್ತಾರೆ - ಉದಾ: "ಸತ್ತವಳೆದ್ದೋಡಿ ಪೋದಳ್"; "ದನಮಂ ಕಡಿಕಡಿದು ಬಸದಿಗೆಳೆಯುತ್ತಿರ್ದರ್"; ಅಥವಾ "ಬ್ರಾಹ್ಮಣ ಕಾಗೆಮಾಂಸವ ತಿಂಬುದೇನಾಶ್ಚರ್ಯಂ" ಹೀಗೆ.  ನಿರ್ದಿಷ್ಟ ಛಂದಸ್ಸಿನಲ್ಲಿರುವ ಆ ಪದ್ಯದ ಉಳಿದ ಮೂರೋ ನಾಲ್ಕೋ ಐದೋ ಸಾಲುಗಳನ್ನು ಛಂದೋನಿಯಮಗಳಿಗೆ ಭಂಗವಾಗದಂತೆ ರಚಿಸಿ, ಪದ್ಯ ಪೂರ್ಣಗೊಳಿಸಿ, ಈ 'ಸಮಸ್ಯೆ'ಯ ಸಾಲಿಗೆ ಒಂದು ಸುಸಂಬದ್ಧತೆಯನ್ನ, ಅರ್ಥವನ್ನ ತಂದುಕೊಟ್ಟು, ಅದರಲ್ಲಿ ಮೇಲ್ನೋಟಕ್ಕೆ ಕಾಣುವ ಅಶ್ಲೀಲತೆಯನ್ನು ತೊಡೆದು ಹಾಕುವುದು ಅವಧಾನಿಯ ಕೆಲಸ.  ಅದನ್ನಾತ ಸುತ್ತಿಗೊಂದು ಸಾಲಿನಂತೆ ಮೂರೋ ನಾಲ್ಕೋ ಸುತ್ತುಗಳಲ್ಲಿ ಮಾಡಿ ಮುಗಿಸುವುದಲ್ಲದೇ, ಕೊನೆಯಲ್ಲಿ ಇಡೀ ಪದ್ಯವನ್ನು ನೆನಪಿನಿಂದ ಹೇಳುತ್ತಾನೆ, ಅದಾದಮೇಲೆ ಪೃಚ್ಛಕ ಅದೇ ಸಮಸ್ಯೆಯ ಸಾಲನ್ನೊಳಗೊಂಡ ತನ್ನ ಪದ್ಯವನ್ನೂ ಹೇಳುತ್ತಾನೆ.  ಮೇಲಿನ ಉದಾಹರಣೆಯಲ್ಲಿ, ಸತ್ತವಳು ಎದ್ದೋಡಿಹೋಗಲು ಹೇಗೆ ಸಾಧ್ಯ.  ಆದರೆ "ಅತ್ತೆಯ ಕಾಟಕೆ ಬೇಸತ್ತವಳೆದ್ದೋಡಿ ಪೋಗಲು" ಸಾಧ್ಯವಲ್ಲವೇ?  ಹಾಗೆಯೇ ಪರಮ ಅಹಿಂಸಾವಾದಿಗಳಾದ ಜೈನರು "ದನಮಂ ಕಡಿಕಡಿದು ಬಸದಿಗೆಳೆ"ಯುವುದು ಅಸಾಧ್ಯವಿರಬಹುದು, ಆದರೆ "ಚಂದನಮಂ ಕಡಿಕಡಿದು ಬಸದಿಗೆಳೆ"ಯುವುದು ಸಾಧ್ಯ.  ಸಮಸ್ಯಾಪೂರಣವು ಹೀಗಿರುತ್ತದೆ.  ಪ್ರಖ್ಯಾತವಾದ ಕವಿರತ್ನಕಾಳಿದಾಸ ಸಿನಿಮಾದಲ್ಲಿ ಡಿಂಡಿಮನೆಂಬ ಕವಿ ಒಂದು ಸಾಲು ಹೇಳುತ್ತಾನಲ್ಲ - "ಕಮಲೇ ಕಮಲೋತ್ಪತ್ತಿಃ" - ಇದು ಅಂಥದ್ದೊಂದು ಸಮಸ್ಯೆಯ ಸಾಲು.  ಅದನ್ನು ಆಮೇಲೆ ಕಾಳಿದಾಸನು ಹೇಗೆ ಪೂರೈಸುತ್ತಾನೆಂಬುದನ್ನು ನೀವು ಬಲ್ಲಿರಿ.

ಇರಲಿ, ಈಗ ಪ್ರಸ್ತುತ ಸಮಸ್ಯೆಗೆ ಬಂದರೆ, ಹಿರಿಯರಾದ ರಂಗನಾಥರು ಹೋಗಿ ಹೋಗಿ ನಮ್ಮಂತಹ ಚಿಕ್ಕವರಿಗೆ ಇಂಥದ್ದೊಂದು ಸಾಲನ್ನು ಕೊಟ್ಟು, ಬಿಡಿಸಿರೆಂದರೆ ಏನು ಹೇಳಬೇಕು?  ಆದರೆ ಹಿರಿಯರು 'ತಾಕತ್ತ'ನ್ನೇ ಚುಚ್ಚಿ ನುಡಿದ ಮೇಲೆ ಮಾನಿಸದಿರಲು ಸಾಧ್ಯವೇ? ಅದರಿಂದಾಗಿ ಈ ಕೆಳಗಣ ಪೂರಣವನ್ನು ಮಾಡಿದೆ:

ಆದೇಶ ಬಂದುದು ಕಣಾ ಪಿರಿಯಜ್ಜನಿಂದಂ
ವಾದಕ್ಕಣಂಗುಡದೆ ಪೂರಯಿಸೆಂದಿದಂ ಪೋ
ಬಾಧಿಪ್ಪ ಮಾರನುಡೆಯಂ ಸೆಳೆಯುತ್ತಿರಲ್ಕಾ
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ

('ಹಿರಿಯಜ್ಜ'ನಿಂದ ಆದೇಶ ಬಂದಿದೆ, ವಾದವಿಲ್ಲದೇ ಈ ಸಾಲನ್ನು ಪೂರೈಸೆಂದು - ಇದನ್ನು ಬಿಟ್ಟು ಇನ್ನೇನು ತಾನೆ ಹೇಳಲಿ (ಪೋ), ಬಾಧಿಸುವ ಮದನನು ಉಟ್ಟದ್ದನ್ನೇ ಸೆಳೆಯುತ್ತಿರಲು ಆ ಸತಿ ಮತ್ತೇನು ಮಾಡಿಯಾಳು... "ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ".  ಇದು ಪೂರಣ)

ಮೇಲಿನದ್ದನ್ನು ನಿಜಕ್ಕೂ ಸಮಸ್ಯಾಪೂರಣವೆನ್ನಲಾಗದು.  ಸಾಲಿನಲ್ಲಿರುವ ಅಸಂಬದ್ಧ ಅಶ್ಲೀಲತೆ ಹಾಗೆಯೇ ಇದೆ - ಪೃಚ್ಛಕರು ಹೇಳಿದ್ದನ್ನೇ ನಾನೂ ಒಪ್ಪಿ ಹೂಂಗುಟ್ಟಿದ್ದೇನಷ್ಟೇ; ಹೋಗಲಿ ಅದು ಪತಿಪತ್ನಿಯರ ಸಲ್ಲಾಪವರ್ಣನೆಯೆನ್ನೋಣವೇ, ಪದ್ಯದ ಸಂದರ್ಭವೂ ಹಾಗೆಂದು ಸೂಚಿಸದು.  ಆದ್ದರಿಂದ ಪದ್ಯವು ಆ ಅಶ್ಲೀಲತೆಯನ್ನು ತೊಡೆಯಲು ಏನೂ ಮಾಡಿಲ್ಲ.  ನಾನೇನು ಅವಧಾನಿಯೇ? ನೀವು ಹೇಗೆ ಕೊಟ್ಟಿರೋ ಹಾಗೇ ಹೇಳಿದ್ದೇನಪ್ಪಾ ಎನ್ನುವ ಧೋರಣೆ ಇಲ್ಲಿನದು.  ಆದರೆ ಸಮಸ್ಯೆಯೆಂದ ಮೇಲೆ ಅದು ಬಗೆಹರಿಯಬೇಕು ತಾನೆ?  'ಸತಿ' ಹಾಗೆ ಮಾಡಲು ತಕ್ಕ ಸಂದರ್ಭವಾದರೂ ಇದ್ದರೆ ಸತಿಯ ಆ ನಡುವಳಿಕೆಗೆ ತಕ್ಕ ಹಿನ್ನೆಲೆಯೊದಗಿ ಆ ಅಶ್ಲೀಲತೆ ಸ್ವಲ್ಪ ತೊಲಗಬಹುದಲ್ಲವೇ?  ಈ ದೃಷ್ಟಿಯ ಪೂರಣ ಈ ಕೆಳಗಿನದು:

ಆ ದೇಶದಿಂ ಮರಳಿ ಬಂದಿಹ ನಲ್ಲನಂ ಕಂ
ಡಾಮೋದದೊಳ್ ಮಿಗುತೆ ಪೆರ್ಚಿದ ನಲ್ಮೆ ಕಾಡಲ್
ಬಾಧಿಪ್ಪ ಮಾರನುಡೆಯಂ ಸೆಳೆಯುತ್ತಿರಲ್ಕಾ
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ

(ಯಾವುದೋ ದೇಶಕ್ಕೆ ಹೋಗಿದ್ದ ನಲ್ಲನು ಮನೆಗೆ ಮರಳಿದ್ದಾನೆ.  ಆತನನ್ನು ಕಂಡ ಸತಿಗೆ ಬಲು ಹಿಗ್ಗಾಗಿದೆ; ಅದುವರೆಗೆ ತಡೆದಿದ್ದ ಬಯಕೆಗಳು ಉಕ್ಕೇರಿ ಕಾಡತೊಡಗಿವೆ... ಮುಂದಿನದ್ದು ಮೇಲೇ ವಿವರಿಸಿದಂತೆ)

ಸಮಸ್ಯಾಪೂರಣಗಳು ಹೀಗಿರಬಾರದೆಂದೇನಿಲ್ಲ.  ಸಾಲಿನಲ್ಲಿ ಕಾಣುವ ಅಸಂಬದ್ಧತೆಯಿಲ್ಲದಿದ್ದರೆ ಆಯಿತು.  ಮೇಲಿನ ಪೂರಣದಲ್ಲಿ ಸತಿಯ ಆ ನಡುವಳಿಕೆಗೆ ಸಹಜವೆನಿಸಿದ ಒಂದು ಸಂದರ್ಭವೊದಗಿ, ಆ ಚೌಕಟ್ಟಿನಲ್ಲಿ ಕೊನೆಯ ಸಾಲು ಸುಸಂಬದ್ಧವೆನಿಸಿದೆ.  ಈ ದೃಷ್ಟಿಯಿಂದ ಮೇಲಿನದು ಒಪ್ಪಬಹುದಾದ ಸಮಸ್ಯಾಪೂರಣವೇ.  ಆದರೆ ಸಾಮಾನ್ಯವಾಗಿ ಸಮಸ್ಯಾಪೂರಣಗಳು ಇಷ್ಟು ಸೀದಾಸಾದಾ ಆಗಿ, ಪೇಲವವಾಗಿರುವುದಿಲ್ಲ, ಇನ್ನಷ್ಟು ಚಮತ್ಕಾರದಿಂದ ಕೂಡಿರುತ್ತದೆ.  ಸಮಸ್ಯೆಯ ಸಾಲಿನ ಮೊದಲ ಪದಕ್ಕೆ ಹಿಂದೆ ಒಂದೋ ಎರಡೋ ಅಕ್ಷರಗಳನ್ನು ಸೇರಿಸುವುದರ ಮೂಲಕ ಬಹುಚಮತ್ಕಾರವಾಗಿ ಇಡೀ ಸಾಲಿನ ಅರ್ಥವನ್ನೇ ಬದಲಿಸಿ, ಪದ್ಯದ ಸಂದರ್ಭವನ್ನೇ ಬದಲಿಸಿಬಿಡಬಹುದು (ಮೇಲಿನ ಉದಾಹರಣೆಯಲ್ಲಿ ಸತ್ತವಳ್-ಬೇಸತ್ತವಳ್; ದನಮಂ-ಚಂದನಮಂ ನೋಡಿದಿರಲ್ಲ).  ಹೀಗೆ ಬದಲಾವಣೆಗೊಳಗಾಗುವ ಪದಕ್ಕೆ ಕೀಲಕಪದವೆನ್ನುತ್ತಾರೆ.  ಇಡೀ ಪದ್ಯದ ಅರ್ಥಪಲ್ಲಟಕ್ಕೆ ಇದು ಕೀಲಿ ಕೈ ಇದ್ದಂತೆ.  ಇದೇ ಸಾಲನ್ನು ಬಳಸಿಕೊಂಡ ಕೆಳಗಿನ ಪೂರಣವನ್ನು ನೋಡಿ - ಮಡಿಮಡಿಯೆಂದರೆ ಅಚ್ಚ ಮಡಿ - ಸ್ನಾನಮಾಡಿಕೊಂಡು ಓದಬೇಕಾದ್ದು, ಈ ಪೂರಣ :)

ಗೋದಾನ ವಸ್ತ್ರ ಧರಣೀ ಧನಧಾನ್ಯ ಮುಂಕೊಂ
ಡಾ ದಾನಕರ್ಮ ಮುಗಿಯಲ್ ಪತಿಪತ್ನಿಯರ್ ಮ
ತ್ತಾ ದೇವಗಂ ನಮಿಸಿ ಪೊನ್ನುಡೆಯುಟ್ಟೆನಲ್ ವಿ-
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ

(ಪತಿಪತ್ನಿಯರು ಯಾವುದೋ ಹೋಮವನ್ನೋ ವ್ರತ/ಪೂಜೆಯನ್ನೋ ಮಾಡುತ್ತಿದ್ದಾರೆ.  ಗೋದಾನ, ವಸ್ತ್ರದಾನವೇ ಮೊದಲಾದ ದಾನಕರ್ಮ ಮುಗಿದಿದೆ.  "ಈಗ ಪತಿಪತ್ನಿಯರು ಜರತಾರಿ ಬಟ್ಟೆ (ಪೊನ್ನುಡೆ)ಯನ್ನುಟ್ಟು ಬಂದು ದೇವರಿಗೆ ನಮಸ್ಕರಿಸಿ" ಎಂದು ಪುರೋಹಿತರು ಆದೇಶಿಸುತ್ತಾರೆ.  ಆ 'ವಿಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ?" - ಹಾಗೆ ವಿಪ್ರನು ಆದೇಶಿಸಿದ ವಸ್ತ್ರವನ್ನೇ (ವಿಪ್ರಾದೇಶಮಾತ್ರವಸನಂ) ಆ ಸತಿಯು ತೊಟ್ಟಳು - ಇಲ್ಲಿ ಪ್ರಾದೇಶವು ವಿಪ್ರಾದೇಶವಾಯಿತು)

ಸಾಮಾನ್ಯವಾಗಿ ಅವಧಾನದಲ್ಲಿ ಬರುವುದು ಇಂತಹ ಪೂರಣಗಳು.  

ಅಂದಹಾಗೆ, ಈ ಪದ್ಯವು ವಸಂತತಿಲಕ ಎಂಬ ಛಂದಸ್ಸಿನಲ್ಲಿದೆ - "ಶ್ರೀವೇಂಕಟಾಚಲಪತೇ ತವಸುಪ್ರಭಾತಂ" ವೆಂಕಟೇಶಸುಪ್ರಭಾತ ಕೇಳಿದ್ದೀರಲ್ಲ, ಅದೇ ಛಂದಸ್ಸು.  ಅಥವಾ ನೃಸಿಂಹನ ಭಕ್ತರಾದರೆ "ಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಂ" ಎನ್ನಿ, ಅದೂ ಇದೇ ಛಂದಸ್ಸು.  ಅಥವಾ ಶಿವಭಕ್ತರಾದರೆ "ವಾರಾಣಸೀಪುರಪತೇ ತವಸುಪ್ರಭಾತಂ" ಎಂದೂ ಹೇಳಬಹುದು.

ಚಿತ್ರಕೃಪೆ: ಅಂತರ್ಜಾಲ