Saturday, August 11, 2007

ನೀನು ೨

ನೀ ಗಗನ ತಾರಾ,
ನಾ ಮಂದ್ರ
ಪಂಚಮ;
ನಡುವಿನಂತರ

ಗಾಂಧಾರ-
ದಾಚೆಯ ದಾರಿ
ಗಮನಶ್ರಮ.

ನೀ ಬಾಗಿ ಎನ್ನ ಸೋಂಕಿಸಬಾರದು,
ನಾ ಎಟುಕಿ ನಿನ್ನ ಪಿಡಿಯುವುದಾಗದು;
ಆದರೂ ಇದು ಸಾಧ್ಯ.
ಅಲ್ಲಿಂದ ನೀನಿಲ್ಲಿಗವತರಿಸಿ ಬರಬಹುದು,
ಅಥವ ಇಲ್ಲಿಂದೆನ್ನನುದ್ಧರಿಸಿಕೊಳಬಹುದು;
ಎರಡೂ ಪಾವನ!

ತಾನಗಳ ಗಮಕಿಸುವ
ದೇವಯಾನ ವಿಮಾನ
ವಿರೆ
ಯಾವುದಾಗದು ಹೇಳು
ಸ್ವರ್ಗ ಗಾನ?

- ೨೯/೦೧/೨೦೦೭

Sunday, August 5, 2007

ನೀನು ೧

ಅರೆ!
ನೀ ಯಾವಾಗ ಬಂದೆ?
ಬಂದದ್ದು ತಿಳಿಯಲೆ ಇಲ್ಲ!
ಬರುತಿರುವ ಸುದ್ದಿ ತಿಳಿಸುವುದಿರಲಿ,
ಕದವಾದರೂ ತಟ್ಟಿ ಬರಬಾರದೇ?
ತೆರೆದ ಬಾಗಿಲು ನಿಜ; ಹಾಗೆಂದು...
ಇರಲಿ ಬಿಡು, ತಮಾಷೆಗಂದೆ,
ನೀನು ಬಂದದ್ದೆ ಸಂತಸವೆನಗೆ.

ಹಗಲು ದುಡಿತದ
ನೆರಳು
ಕವಿದ ಕಾರಿರುಳಿನಲಿ
ಹೊರಳಾಟಳ ನಡುವೆ ಸಣ್ಣ ಜೊಂಪು;
ಕ್ಷಣದ ಸುಖ -
ನಿದ್ದೆ,
ಮಂಪರಲಿ ಹಿತ -
ವಾಗಿ ತೀಡುತ್ತಿರುವ ಮಲಯವಾತ
ಹೊತ್ತು ತಂದಿಹ ಪಾರಿಜಾತ
ಕುಸುಮದ ಕಂಪು;
ಚಿಲಪಿಲ ಹಕ್ಕಿಗೊರಳಿನ ಇಂಪು;
(ನಿನ್ನೊಡನೆ ತಂದುದೇನು?)
ದೂರದ ಮಸೀದಿಯಲಿ ಐದರ ನಮಾಜು,
ದೇಗುಲದಿ ಸುಬ್ಬಲಕ್ಷ್ಮಿಯು ಉಲಿವ
ಸುಪ್ರಭಾತ,
ದಿನವು ಆಗುವುದೆನಗೆ ಜೋಗುಳದ ಗೀತ.

ಕಣ್ತೆರೆದು ನೋಡೆ,
ನೀ
ಎಂದಿನಿಂದಲು ಇಲ್ಲೆ ಇದ್ದಂತೆ
ಸವ್ವಾರಿ ನಡೆಸಿದ್ದೆ ನನ್ನ ಮೇಲೆ;
ಹೊರಗೆ
ಬೀದಿಯ ತುಂಬ
ಹೊಸ ಚಿಗುರಿನೊಗರು,
ಹುರಿಯೆದ್ದ ಕಾಮನ ಬಿಲ್ಲು
ಮೆರವಣಿಗೆ ಹೊರಟಿತ್ತು ನೂರು ನೂರು;
ಮನೆಯ ಮುಂದೆಲ್ಲ
ನೂರ್ ಬಣ್ಣಗಳ ರಂಗೋಲೆ;
ಊರೆಲ್ಲ ಧರಿಸಿತ್ತು ಹಬ್ಬಗಳ ಮಾಲೆ.
ಈ ವಸಂತದ ಸಂತ -
ಸದ ಯಾವ ಕ್ಷಣದಲ್ಲಿ,
ಯಾವ ಮಾಯೆಯಲಿ ನೀ
ಹೊಕ್ಕು ಬಂದೆ?

ಎಂದಿನಿಂದಲು ನೀನಿಲ್ಲೆ
ಇದ್ದದ್ದೆ ನಿಜವಿರಬೇಕು;
ಇಲ್ಲದಿದ್ದರೆ,
ನೀನು ಕದ ದೂಡಿ ಒಳಬಂದರೂ
ಏಳದಿಹ ಕತ್ತೆ
ಆಸಾಮಿ ನಾನಲ್ಲ.
ಅಥವ
ನೀನು ಕಾಲಲಿ ಬೆಕ್ಕನಿಟ್ಟು ನಡೆದಿರಬೇಕು.

ಇರಲಿ,
ನಿನಗೀ ಸವಾರಿ ಖುಶಿ ತಂದಿತಷ್ಟೆ?
ನೀ ಸುಖದ ಸವ್ವಾರಿ ನಡೆಸಿರಲು
ಮನದೊಳೊಸರಿದ ಬೆಚ್ಚನೆಯ
ಚೊಚ್ಚಲನುಭವಕೊಂದು ರೂಪವ ಕೊಡಲು
ಹುಡುಕಿರಲು
ಕಂಡಳಾ ಸೊಗಸುಗಾತಿ;
ಅವಳ ಕೆನ್ನೆಯ ಕೆಂಪು
ನುಡಿಯಿಂಪು, ಮೈಸೊಂಪು,
ಕಣ್ಣಂಗಳದ ತುಂಬ ಬೆಳದಿಂಗಳು.

ನೀನಂತು ಮತ್ತೇರಿ ತೂಗುತಿದ್ದೆ;
ಮರದೆದೆಯ ಹದಗೊಳಿಸಿ,
ಹೂವಂತೆ ಮಿದುಗೊಳಿಸಿ,
ಮಡಗಿಸಿದೆ ಅದನವಳ ಕಾಲಡಿಯಲಿ.
ನಿನ್ನ ಮಾಯೆಯೆ ಮಾಯೆ!
ಮಡಗಿದ್ದು, ಕಾಲಡಿಗೆ ಸಿಲುಕಿ ನಲುಗಿರುವಾಗ
ತಡೆವ ಕಡುಕಠೋರತೆ ಹನಿಸಿ ಹೂವೆದೆಗೆ,
ಕಾದೆ,
ಸುಮವಜ್ರಸಮವೆನ್ನಿಸಿ!
ಏನಿದೀ ಹುಡುಗಾಟ?
ಮಗುವನೂ ಜಿಗುಟಿ ತೊಟ್ಟಿಲ ತೂಗುವಾಟ!

ಪೊರೆಯಲಿನ್ನೊಂದು ಕೈ
ಮೈ-ಮನಗಳೊಡನಾಟ;
ಅಮೃತವಾಗಿತ್ತಿಲ್ಲಿ
ಕಾಳಕೂಟ!

ಅಂತೂ
(ನಾ ನಿನ್ನ ಹೊತ್ತೆನೋ, ನೀನೆನ್ನ ಹೊತ್ತೆಯೋ)
ಮುನ್ನೆಡೆದಿರಲು
ಹಾದಿಬದಿ ಮರವೆಲ್ಲ ಕೆಂದಳಿರು,
ಹೂ-ಹಸಿರು,
ಹಣ್ಣ ಸವಿದಿಹ ಹಕ್ಕಿ,
ಅಂಕದೊಳಗಾಡುತಿಹ ಹೂ ಮಕ್ಕಳು;
ಹಿಮ್ಮೇಳ - ಮುಮ್ಮೇಳ
ಬೆಳ್ಗೊಡೆಯ ನೆರಳಡಿಗೆ
ಮುಗಿದಿರಲು ಅರ್ಧ ದಾರಿ,
ಏಕೋ ಸಣ್ಣಗೆ ಸುಸ್ತು;
ನಿಂತೆ
ಒಂದರೆಗಳಗೆ;
ಮೇಳಗಳ ಸದ್ದಿಲ್ಲ,
ದೂರದಲಿ ಕೂಗಿತ್ತು ಒಂಟಿ ಕಾಗೆ.
ತಲೆಯೆತ್ತಿ ನೋಡಿದರೆ
ಮೇಲೆ ಬೆಳ್ಗೊಡೆ
ಬಿಸಿಲು,
ಮಧ್ಯಾಹ್ನ ಒಂದೊ ಎರಡೋ!
ಕುರಿತ ಊರಿನ್ನು ನಾಲ್ಕೈದು ತಾಸಿರಬೇಕು.
ಇದ್ದಕಿದ್ದಂತೆ ನೀನೆಲ್ಲಿ ಹೊರಟೆ?
ಅಥವ
ನೀನಿಲ್ಲೆಂದು ಹೇಳಬರುವುದೂ ಇಲ್ಲ;
ಇಲ್ಲೆ ನಗುತಿವೆ ಪಾರಿಜಾತದರಳು.

ಸರಿ, ಇನ್ನು ನಡೆಯೋಣ,
ತಾಸೆರಡು ತಾಸಿನಲಿ ಕಂತೀತು ಸುಡುಬಿಸಿಲು
ಹರಡೀತು ಹೊನ್ನ ಹೊನಲು.
ಹಾದಿಬದಿಯಲ್ಲೊಂದು ಹೊಂಗೆ ಮರವಿದೆಯಂತೆ
ಹಿತವಂತೆ ಅದರ ನೆರಳು.

- ೨೧/೦೧/೨೦೦೭