Showing posts with label ೧೧. ವಿಚಾರ. Show all posts
Showing posts with label ೧೧. ವಿಚಾರ. Show all posts

Thursday, September 21, 2017

ಹೊಸಕಾಲದ ಕನ್ನಡ ಮಾಧ್ಯಮ - ಕೇಳುವರಾರು ಮಕ್ಕಳ ಗೋಳು

ಖ್ಯಾತ ವಿಜ್ಞಾನಿ ಭಾರತರತ್ನ ಪ್ರೊ. ಸಿ ಎನ್ ಆರ್ ರಾಯರು ತಮ್ಮ ಕನ್ನಡಮಾಧ್ಯಮಶಾಲೆಯ ಪ್ರಾಥಮಿಕ ವ್ಯಾಸಂಗವನ್ನು ಎಂದು ಬಹು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ.  "ಕಲಿಕೆ ಯಶಸ್ವಿಯಾಗಬೇಕಾದರೆ ಅದು ಮಾತೃಭಾಷೆಯಲ್ಲೇ ಆಗಬೇಕು" ಎಂಬುದು ಅವರ ದೃಢ ನಿಲುವು. ಸಾಧಕರ ಈ ನುಡಿ ಅನೇಕ ಕನ್ನಡಿಗರಿಗೆ ಸ್ಫೂರ್ತಿದಾಯಕ.  ಅವರದ್ದು ವಿದ್ಯೆಯ ದೃಷ್ಟಿಯಿಂದ ಸ್ವರ್ಣಯುಗವೆನ್ನಬೇಕು.  ಆಗ ಕೆಲವು ಪಟ್ಟಣಗಳಲ್ಲಿ ಬಿಟ್ಟರೆ ಉಳಿದಂತೆ ಸರ್ಕಾರೀ ಕನ್ನಡ ಶಾಲೆ ಬಿಟ್ಟು ಬೇರೆ ಯೋಚನೆಯೂ ಪೋಷಕರಿಗೆ ಬರುತ್ತಿರಲಿಲ್ಲ, ಮತ್ತು ಕನ್ನಡ ಶಾಲೆಗೆ ಹೋಗುವುದು ಈಗಿನಂತೆ ಹೀನಾಯವೆನಿಸಿರಲಿಲ್ಲ.  ಮನೆಯಿಂದ ಶಾಲೆಗೆ ಹೋಗುವ ಮಕ್ಕಳಿಗೆ ಭಾಷೆಯಲ್ಲಿ ಕಾಣುತ್ತಿದ್ದ ಬಹುದೊಡ್ಡ ಬದಲಾವಣೆಯಿಂದರೆ ಕನ್ನಡದ ಗ್ರಾಂಥಿಕ ಭಾಷೆಯಷ್ಟೇ.   ಆಡುಮಾತಿಗಿಂತ ಗ್ರಾಂಥಿಕ ಭಾಷೆ ಹೆಚ್ಚು ಔಪಚಾರಿಕವಾಗಿ, ಹೆಚ್ಚು ’ಶುದ್ಧ’ವಾಗಿ ಕಾಣುತ್ತಿತ್ತೇ ವಿನಾ, ತೀರ ಅಪರಿಚಿತವಾಗೇನು ಇರಲಿಲ್ಲ.  "ದ್ಯುತಿಸಂಶ್ಲೇಶಣ", "ಪೀನಮಸೂರ", "ಸರಳಾಧಿಕಕೋನ"ಗಳು ಆಗಲೂ ಆಗೀಗ ಕಾಡಿದರೂ ಮಳೆ ಮಳೆಯಾಗಿ, ನೀರಾವಿ ನೀರಾವಿಯಾಗಿ, ಮಣ್ಣು ಮಣ್ಣಾಗಿಯೇ ಪುಸ್ತಕದಲ್ಲಿ ಕಾಣುತ್ತಿದ್ದುದರಿಂದ ಪಠ್ಯಪುಸ್ತಕದ ಭಾಷೆ ನಮ್ಮ ಭಾಷೆಯಂತೆಯೇ ತೋರುತ್ತಿತ್ತು.  ಕನ್ನಡದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಹೋದಾಗ ಕಾಣುವ ಪರಕೀಯಭಾವನೆ ಮಕ್ಕಳಿಗೆ ಕನ್ನಡ ಪಠ್ಯಗಳಲ್ಲಿ ಯಾವತ್ತೂ ಕಂಡಿದ್ದಿಲ್ಲ.  ಆದರೆ ಇವತ್ತಿನ ಕನ್ನಡ ಮಾಧ್ಯಮದ ಪಠ್ಯಗಳ ಸ್ಥಿತಿ ಹಾಗಲ್ಲ.  ಮೊದಲನೆಯದಾಗಿ, ಆಂಗ್ಲಮಾಧ್ಯಮವು ಮೋಹವೆನ್ನುವುದಕ್ಕಿಂತ ಅನಿವಾರ್ಯವೆನ್ನುವ ಸ್ಥಿತಿಯುಂಟಾಗಿರುವಾಗ, ಕನ್ನಡಮಾಧ್ಯಮ ಕೇವಲ ಅಭಿಮಾನದ ವಿಷಯವಾಗಷ್ಟೇ ಉಳಿದಿರುವಾಗ, ಅಭಿಮಾನಕ್ಕಿಂತ ಅವಕಾಶದ್ದೇ ಮೇಲುಗೈಯೆಂಬಂತೆ ತೋರುತ್ತಿರುವಾಗ ಕನ್ನಡ ಮಾಧ್ಯಮಕ್ಕೆ ಉಳಿಯುವುದು ಒಂದೇ ಆಕರ್ಷಣೆ - "ಉತ್ತಮ ಕಲಿಕೆ ಮಾತೃಭಾಷೆಯೊಂದರಿಂದಲೇ ಸಾಧ್ಯ" ಎನ್ನುವುದು.  ಆದರೆ ಇವತ್ತಿನ ಪರಿಸ್ಥಿತಿ ನೋಡಿದರೆ ಆ ಆಶೆಯನ್ನೂ ಮಣ್ಣುಗೂಡಿಸುವಂತಿದೆ. 

ಕರ್ನಾಟಕ ಶಿಕ್ಷಣ ಇಲಾಖೆಯ ಟೆಕ್ಸ್ಟ್ ಬುಕ್ ಹಳವಂಡಗಳು ಈ ದಿನಗಳಲ್ಲಿ ಬಹುಚರ್ಚಿತವಾದ ವಿಷಯ - ಕಣ್ತಪ್ಪಿನ ದೋಷಗಳು, ಭಾಷಾದೋಷಗಳು, ನಿರೂಪಣೆಯ ಎಡವಟ್ಟುಗಳು, ತಪ್ಪು ಮಾಹಿತಿ, ವಿಷಯಸ್ಪಷ್ಟತೆಯ ಕೊರತೆ, ಪರಿಕಲ್ಪನೆಯ ಪ್ರಮಾದಗಳು, ಏಕಪಕ್ಷೀಯ ನಿಲುವುಗಳು ಹೀಗೆ ಪಟ್ಟಿ ಮಾಡುತ್ತ ಹೋದರೆ, ಪಠ್ಯಪುಸ್ತಕಕ್ಕಿಂತ ದೊಡ್ಡ ಪುಸ್ತಕವೇ ಆದೀತೇನೋ.  ಆದರೆ ಈಗಾಗಲೇ ಚರ್ಚೆಯಲ್ಲಿರುವ ಅದನ್ನು ಸಧ್ಯಕ್ಕೆ ಬಿಡೋಣ; ಈ ಹಳವಂಡಗಳು ಕನ್ನಡ ಮಾಧ್ಯಮಕ್ಕೇ ಹೇಗೆ ಸಂಚಕಾರ ತರುತ್ತಿವೆಯೆಂಬಷ್ಟನ್ನು ನೋಡೋಣ.  ಇಷ್ಟಕ್ಕೂ ನಮ್ಮ ಮಾತೃಭಾಷೆ ಯಾವುದು?  "ಕನ್ನಡ" ಎನ್ನುವುದು ಸುಲಭದ ಉತ್ತರ.  ಆದರೆ ಪ್ರಾಂತ್ಯಕ್ಕೊಂದು ಕಾಲಕ್ಕೊಂದು ಜಾತಿಗೊಂದು ವೃತ್ತಿಗೊಂದು ಮನೆಗೊಂದು ಇರುವ ಕನ್ನಡದಲ್ಲಿ ನಮ್ಮ ’ಮಾತೃಭಾಷೆ’ಯಾದ ಕನ್ನಡ ಯಾವುದೆಂಬುದು ಸ್ಪಷ್ಟವಾಗಬೇಕಲ್ಲ.  ಉದಾಹರಣೆಗೆ, ನಿಮ್ಮ ಎರಡು ವರ್ಷದ ಮಗುವಿಗೆ ಊಟ ಮಾಡಿಸಬೇಕಾದರೆ "ಮಮ್ಮಮ್ ತಿನ್ನು ಬಾಮ್ಮಾ" ಎನ್ನುತ್ತೀರಿ.  ಆ ಮಗುವಿಗೆ ಅದೇ ಮಾತೃಭಾಷೆ.  ಅದೇ ಆರೇಳು ವರ್ಷದ ಹುಡುಗನೋ ಹುಡುಗಿಯೋ ಆಗಿದ್ದರೆ "ಉಣ್ಣು ಬಾ" ಎಂದೋ "ಊಟ ಮಾಡ್ ಬಾ" ಎನ್ನುತ್ತೀರಿ.  ತೀರ ಅದನ್ನೇ ಬರಹದಲ್ಲಿ ತಿಳಿಸಬೇಕೆಂದರೂ "ಊಟ ಮಾಡುವೆಯಂತೆ ಬಾ" ಎನ್ನುತ್ತೀರೇನೋ, ಆದರೆ "ಭೋಜನಸ್ವೀಕರಿಸು ಬಾ" ಎಂದೋ ಅಥವಾ ಅಚ್ಚಗನ್ನಡದಲ್ಲಿ "ಬೋನವನಾರೋಗಿಸು ಬಾ" ಎಂದೋ ಕರೆಯುವುದಿಲ್ಲ, ಅಲ್ಲವೇ?  "ಟವೆಲ್ ತೊಗೊಂಡ್ ಸ್ನಾನಕ್ಹೋಗು" ಎನ್ನುವುದು ಹೆಚ್ಚೆಂದರೆ "ಟವೆಲು ತೆಗೆದುಕೊಂಡು ಸ್ನಾನಕ್ಕೆ ಹೋಗು" ಎಂದಾದೀತೇ ಹೊರತು "ಅಂಗವಸ್ತ್ರವನ್ನು ತೆಗೆದುಕೊಂಡು ಸ್ನಾನಕ್ಕೆ ದಯಮಾಡಿಸು" ಎಂದು ಖಂಡಿತಾ ಹೇಳುವುದಿಲ್ಲ.  ಹಾಗೆ ಹೇಳಿದರೆ ನಿಮ್ಮ ಮಗುವಿಗೆ ಅರ್ಥವೂ ಆಗಬಹುದು, ಆದರೆ ಹೇಳುವ ರೀತಿಯಂತೂ ಅದಲ್ಲ, ಅಲ್ಲವೇ?  ಎಂದ ಮೇಲೆ ಶಾಲೆಯಲ್ಲಿ ಬಳಸುವ ಕನ್ನಡ ಆ ಔಪಚಾರಿಕ ಮಟ್ಟವನ್ನೂ ಮೀರಿ ಪರಕೀಯವೇ ಆಗಿಬಿಟ್ಟರೆ?

ಗಣಿತವಿಜ್ಞಾನಗಳಂಥಾ ಶಾಸ್ತ್ರವಿಷಯಗಳಲ್ಲಿ ಭಾಷೆ ಸ್ವಲ್ಪ ನಿಖರವಾಗಿರಬೇಕೆಂಬುದೇನೋ ನಿಜವೇ, ಆದರೆ ಅದು ಪಾರಿಭಾಷಿಕ ಪದಗಳಿಗೆ ಮಾತ್ರ ಸೀಮಿತವಷ್ಟೇ?  ಆದರೆ ಉಳಿದಂತೆ ಆದರೂ ಪಠ್ಯ ಓದಿಸಿಕೊಂಡು ಹೋಗಬೇಕಲ್ಲವೇ?  ಉದಾಹರಣೆಗೆ ಹೊಸ ಪಠ್ಯದಲ್ಲಿರುವ ಈ ಸೂಚನೆ ನೋಡಿ: 

"ಶಾಬ್ದಿಕ ಸಮಸ್ಯೆಗಳು - ಕೆಳಗಿನ ಲೆಕ್ಕಗಳನ್ನು ಓದು, ಸಂಖ್ಯೆಯ ಲೆಕ್ಕಗಳನ್ನು ಬಿಡಿಸುವುದು ಹೇಗೆಂದು ಕಲಿ" (Verbal Problems - Read the problems given below, Understand how to solve verbal problems). 

ಗಮನಿಸಿ, ಇದು ಯಾವುದೋ ದೊಡ್ಡ ತರಗತಿಯ ಪಠ್ಯವಲ್ಲ - ಮೂರನೆಯ ತರಗತಿಯ (ಎಂಟೊಂಬತ್ತು ವರ್ಷದ) ಮಕ್ಕಳಿಗೆ ಗಣಿತ ಪಠ್ಯದಲ್ಲಿ ಕೊಟ್ಟಿರುವ ಸೂಚನೆ.  ಇದೇ ಲೆಕ್ಕವನ್ನು ನಾವೂ ಮಾಡುತ್ತಿದ್ದೆವು, ಇದೇ ವಯಸ್ಸಿನಲ್ಲಿ.  ಇದಕ್ಕೆ "ಬಾಯಿಲೆಕ್ಕ ಅಥವಾ ದಾರಿ ಲೆಕ್ಕ" ಎಂದು ಹೇಳುತ್ತಿದ್ದರು ಆಗ.  ಈಗಿನ ತಲೆಮಾರಿನ ಮಕ್ಕಳು ಎಷ್ಟೇ ’ಸ್ಮಾರ್ಟ್’ ಆಗಿರುತ್ತಾರೆಂದುಕೊಂಡರೂ ಕನ್ನಡವನ್ನು ಮರೆತು ಸಂಸ್ಕೃತ ಪಂಡಿತರಾಗಿಬಿಟ್ಟಿರುತ್ತಾರೆಂದು ಹೇಗೆ ತಿಳಿಯುವುದು?  ಈಗ ಮಗು ಲೆಕ್ಕ ಕಲಿಯಬೇಕೋ ಇವರ ಭಾಷೆಯನ್ನು ಅರ್ಥಮಾಡಿಕೊಳ್ಳಲು ಹೆಣಗಬೇಕೋ?  ಒಂದು ಪದವಾದರೆ ಸರಿ, ನಕ್ಕು ಸುಮ್ಮನಾಗಬಹುದು, ಆದರೆ ಪಠ್ಯದುದ್ದಕ್ಕೂ ಇಂಥದ್ದೇ ಆದರೆ?!  ಇನ್ನೊಂದು ಉದಾಹರಣೆ ನೋಡಿ, ಏಳನೆಯ ತರಗತಿಯ ಗಣಿತದಿಂದ:

"ಇಲ್ಲಿ ಛಾಯೀಕರಿಸಿರುವ ಒಟ್ಟು ಭಾಗಗಳೆಷ್ಟು (how many parts of each circle are shaded?). 

ಪಠ್ಯಪುಸ್ತಕಸಮಿತಿಯ ಸರ್ವಾಧ್ಯಕ್ಷ ಶ್ರೀ ಬರಗೂರು ರಾಮಚಂದ್ರಪ್ಪನವರು ಈ ಹಿಂದೆ "ತಾಯೀಕರಣ" ಎಂಬ ಪದ ಸೃಷ್ಟಿಸಿ ಖ್ಯಾತರಾಗಿದ್ದುದು ನೆನಪಿಗೆ ಬಂತೇ?  ಪಠ್ಯಪುಸ್ತಕಗಳಲ್ಲಿ ಅಂಥಾ ನಿಷ್ಕಾರಣ ’ಕರಣ’ಗಳು ಬೇಕಾದಷ್ಟಿವೆ.  ಹೀಗೇ ಪಠ್ಯದ ತುಂಬೆಲ್ಲ ಬಹುಶಃ ಬರೆದವರಿಗೇ ಅರ್ಥವಾಗದ ಸಂಸ್ಕೃತ, ಅರೆಸಂಸ್ಕೃತ, ಅಸಂಸ್ಕೃತ ಪದಗಳೇ ತುಂಬಿವೆ - ಅರ್ಥವಾಗದ್ದು ಎಂಬುದು ಮುಖ್ಯ.  ನಾನಿಲ್ಲಿ ವಿವಿಧ ಪಠ್ಯಗಳಲ್ಲಿ ಕಂಡುಬಂದ ಆಣಿಮುತ್ತುಗಳನ್ನೂ ಬ್ರಾಕೆಟ್ಟಿನಲ್ಲಿ ಅವುಗಳ ’ನಮ್ಮ ಕನ್ನಡ’ದ ಅನುವಾದವನ್ನೂ ಕೊಡುತ್ತೇನೆ, ಒಮ್ಮೆ ನೋಡಿ: 
  • ವ್ಯುತ್ಕ್ರಮ ಅಥವಾ ವಿಲೋಮರೂಪ (Reciprocal or Inverse form) - ಭಿನ್ನರಾಶಿಯ ಅಂಶ ಛೇದ-ಗಳನ್ನು ಅದಲುಬದಲು ಮಾಡಿ ಬರೆದಾಗ ಆ ಭಿನ್ನರಾಶಿಯ ವ್ಯುತ್ಕ್ರಮ ರೂಪ ದೊರೆಯುತ್ತದೆ [ವ್ಯುತ್ಕ್ರಮ ಅಥವಾ ವಿಲೋಮ ಯಾರಿಗೆ ಅರ್ಥವಾಗುತ್ತದೆ?  ಅದರ ಬದಲು ಸರಳವಾಗಿ ಅದಲುಬದಲು ಅಥವಾ ತಿರುವುಮುರುವು ರೂಪ ಎಂದೇ ಹೇಳಬಹುದಿತ್ತಲ್ಲವೇ?];
  • ಪ್ರಚ್ಛನ್ನಶಕ್ತಿ (potential energy).  [ಅಡಗಿರುವ ಶಕ್ತಿ ಎಂದಿದ್ದರೆ ಆಗಿತ್ತಲ್ಲವೇ.  ಇನ್ನಿದಲ್ಲದೇ "ಪ್ರಚ್ಛನ್ನ (potential) ಎಂಬ ಶಬ್ದ ಲ್ಯಾಟಿನ್ ಮೂಲದಿಂದ ಬಂದದ್ದು" ಎಂಬ ಒಗ್ಗರಣೆ ಬೇರೆ?  ಲ್ಯಾಟಿನ್ ಮೂಲದಿಂದ ಬಂದದ್ದು "ಪ್ರಚ್ಛನ್ನ" ಪದವೋ "Potential" ಪದವೋ?  ವಾಕ್ಯರಚನೆಯ ದೋಷ!];
  • ವಿದ್ಯುತ್ಪ್ರವಾಹದ ರಾಸಾಯನಿಕ ಪರಿಣಾಮದ ಅನ್ವಯಗಳು (Applications of chemical effect of electric current).  [ಇಲ್ಲಿ Applications ಎನ್ನುವ ಪದಕ್ಕೆ ಅನ್ವಯ ಎಂದು ಅನುವಾದ ಮಾಡಿರುವುದು ಸ್ಪಷ್ಟ.  Application ಎಂಬ ಪದಕ್ಕೆ ಅರ್ಜಿ, ಅನ್ವಯ, ಬಳಕೆ ಮುಂತಾದ ಅರ್ಥಗಳಿವೆ.  ಹಾಗೆಯೇ ಅನ್ವಯ ಎಂಬ ಪದಕ್ಕೆ ವಂಶ, ಅರ್ಥ, ಹೊಂದುವಿಕೆ, ಮೊದಲಾದ ಅರ್ಥಗಳಿವೆ, ಆದರೆ ಬಳಕೆ, ಉಪಯೋಗ ಮೊದಲಾದ ಅರ್ಥಗಳು ಅನ್ವಯ ಎಂಬ ಪದಕ್ಕಿಲ್ಲ.  ನಿಘಂಟು ನೋಡಿಕೊಂಡು ಕುರುಡುಕುರುಡಾಗಿ ಅನುವಾದಿಸುವ ಬದಲು ಸಹಜವಾಗಿ, ಸರಳವಾಗಿ "ವಿದ್ಯುತ್ಪ್ರವಾಹದ ರಾಸಾಯನಿಕ ಪರಿಣಾಮದ ಉಪಯೋಗಗಳು" ಎನ್ನಬಹುದಿತ್ತಲ್ಲ!];
  • ಲೋಹಾಭಗಳು ಬಿಧುರವಾಗಿವೆ (ಪದಸಹಾಯ: ಬಿಧುರ = ಬಲಪ್ರಯೋಗದಿಂದ ತುಂಡಾಗುವುದು) [ಬಿಧುರ ಎಂಬ ಪದ ಯಾವ ಮಗುವಿಗೆ ಅರ್ಥವಾದೀತು ಸ್ವಾಮಿ, ಕೊನೆಯ ಪಕ್ಷ ಟೀಚರುಗಳಿಗಾದರೂ! ಅರ್ಥವಾಗದ್ದೊಂದು ಪದ ಹಾಕಿ, ಪದಸಹಾಯ ಎಂದು ಬೇರೆ ಕೊಡುವ ಬದಲು, ಸರಳವಾಗಿ "ಪೆಡಸಾಗಿವೆ, ಒಡೆಯುವ ಗುಣ ಹೊಂದಿವೆ" ಎನ್ನಬಾರದೇ?];
  • ಅವು ತನ್ಯವಾಗಿದ್ದು ಸುರುಳಿಯಾಕಾರದಲ್ಲಿ ಬಗ್ಗಿಸಬಹುದು [ಬಾಗುವ ಗುಣ ಹೊಂದಿದೆ];
  • ನೀರನ್ನು ಕಾಯಿಸಿದಾಗ ಎನಾಗುತ್ತದೆ?  ಇಲ್ಲಿ ನೋಡಿ: "ನೀರನ್ನು ೦ ಡಿಗ್ರಿಯಿಂದ ೪ ಡಿಗ್ರಿಯವರೆಗೆ ಕಾಯಿಸಿದಾಗ ಸಂಕುಚಿಸುತ್ತದೆ.  ೪ ಡಿಗ್ರಿಯನಂತರ ವ್ಯಾಕೋಚಿಸುತ್ತದೆ.  ನೀರಿನ ಈ ಲಕ್ಷಣವನ್ನು ನೀರಿನ ಅಸಂಗತ ವ್ಯಾಕೋಚನ (anomalous expansion) ಎನ್ನುವರು"! [ಎನ್ನುವವರು ಯಾರು? ಈ ಅಸಂಗತವ್ಯಾಕೋಚನ ಎಂಬ ಪದ ಎಲ್ಲಾದರೂ ಕೇಳಿದ್ದಿದೆಯಾ?  ಮಕ್ಕಳು ಅರ್ಥ ಮಾಡಿಕೊಂಡು ನೆನಪಿನಲ್ಲಿಟ್ಟುಕೊಳ್ಳಬಲ್ಲರಾ?  ಇದೇ ವಾಕ್ಯವನ್ನೇ ""ನೀರನ್ನು ೦ ಡಿಗ್ರಿಯಿಂದ ೪ ಡಿಗ್ರಿಯವರೆಗೆ ಕಾಯಿಸಿದಾಗ ಕುಗ್ಗುತ್ತದೆ.  ೪ ಡಿಗ್ರಿಯನಂತರ ಹಿಗ್ಗುತ್ತದೆ.  ನೀರಿನ ಈ ಲಕ್ಷಣವನ್ನು ನೀರಿನ ವಿಚಿತ್ರ ಹಿಗ್ಗುವಿಕೆ (anomalous expansion) ಎನ್ನುವರು" ಎಂದಿದ್ದರೆ ಸಂಸ್ಕೃತಕ್ಕೆ ದ್ರೋಹ ಬಗೆದಂತಾಗುತ್ತಿತ್ತೇ?];
  • ಭೂಸವೆತಕ್ಕೆ ಕಾರಣಗಳ ಪಟ್ಟಿಯಲ್ಲಿ ಕಂಡದ್ದು - "ಮಿತಿಮೀರಿದ ಮೇಯುವಿಕೆ" [ಬೆಚ್ಚದಿರಿ, ಭೂಮಿಯನ್ನು ಯಾರೂ ಮೇಯಲಿಲ್ಲ, ಅದು ಮೇಯಿಸುವಿಕೆ - ಜಾನುವಾರುಗಳು ವಿಪರೀತ ಹುಲ್ಲು ಮೇಯುವುದರಿಂದ ಮಣ್ಣು ಸವೆಯುತ್ತದೆ ಎಂದು ಭಾವ - overgrazing ಎಂಬುದರ ಪದಶಃ ಅನುವಾದ!];
  • ಗೋಲೀಯಕಾಯವಾದ ಚಂದ್ರ ಭೂಮಿಯ ಏಕಮಾತ್ರ ಸ್ವಾಭಾವಿಕ ಉಪಗ್ರಹ [Moon is a spherical body which is the only natural satellite of our planet ಎಂಬುದರ ಪದಶಃ ಅನುವಾದ.  ಇಂಗ್ಲಿಷಿಗೆ ಸಹಜವಾದ ವಾಕ್ಯರಚನೆ ಕನ್ನಡಕ್ಕೂ ಸರಿಹೊಂದಬಹುದೇ?];
  • ಇನ್ನು ಈ ಚಂದ್ರನ ಪುರಾಣ ಅಷ್ಟಕ್ಕೇ ಮುಗಿಯುವುದಿಲ್ಲ.  ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ಚಂದ್ರನ ೮ ಅವಸ್ಥೆಗಳನ್ನು ಗುರುತಿಸಿ ಅವುಗಳನ್ನು ಹೀಗೆ ಹೆಸರಿಸುತ್ತಾರೆ - ಅಮಾವಾಸ್ಯೆ, ವೃದ್ಧಿಬಾಲಚಂದ್ರ, ಅರ್ಧಚಂದ್ರ, ವೃದ್ಧಿಪೀನಚಂದ್ರ, ಹುಣ್ಣಿಮೆ, ಕ್ಷೀಣಪೀನಚಂದ್ರ, ಅರ್ಧಚಂದ್ರ, ಕ್ಷೀಣಬಾಲಚಂದ್ರ!  ಇಲ್ಲಿ ಹುಣ್ಣಿಮೆ, ಅಮಾವಾಸ್ಯೆ ಮತ್ತು ಚಂದ್ರ (ಹೆಚ್ಚೆಂದರೆ ಅರ್ಧಚಂದ್ರ) ಇಷ್ಟು ಬಿಟ್ಟರೆ ಇನ್ನು ಯಾವ ಪದವೂ ಮಕ್ಕಳಿಗೆ ಪರಿಚಯವಿಲ್ಲ - ವೃದ್ಧಿ, ಕ್ಷೀಣ, ಬಾಲ, ಪೀನ!  ಇವು ಇಂಗ್ಲಿಷಿನ waxing, waning, crescent, gibbousಗಳಿಗಿಂತ ಎಷ್ಟು ಮಟ್ಟಿಗೆ ಹೆಚ್ಚು ಪರಿಚಯ ಮಕ್ಕಳಿಗೆ? ಮೊದಲನೆಯದಾಗಿ, Waxing crescent, waxing gibbous, waning gibbous, waning crescent ಎಂದು ಮುಂತಾಗಿ ಚಂದ್ರನ ೮ ಅವಸ್ಥೆಗಳನ್ನು ಗುರುತಿಸುವ ಕ್ರಮವೇ ನಮ್ಮದಲ್ಲ.  ನಮ್ಮಲ್ಲಿ ಅದನ್ನು ಇನ್ನೂ ವಿವರವಾಗಿ ಪಾಡ್ಯ, ಬಿದಿಗೆ ಮೊದಲಾದ ೧೫ ತಿಥಿಗಳ ಮೂಲಕ, ೧೬ ಕಲೆಗಳ ಮೂಲಕ ಗುರುತಿಸುತ್ತೇವೆ.  ಮಕ್ಕಳಿಗೆ ಅದನ್ನೇ ಹೇಳಿದ್ದರಾಗಿತ್ತು.  ಅಥವಾ ಪಠ್ಯಪುಸ್ತಕಸಮಿತಿಯ ಸಾಮಾನ್ಯ ನಿಲುವು ಸಾರಿ ಹೇಳುವಂತೆ ಭಾರತೀಯವಾದ್ದು ನಿಕೃಷ್ಟ ಎಂಬ ಭಾವನೆಯೇ ಇದ್ದರೆ, ಈ ಪಾಶ್ಚಾತ್ಯ ಕ್ರಮದಲ್ಲಿ ಗುರುತಿಸಿದ ೮ ಅವಸ್ಥೆಗಳನ್ನೇ, ಅವುಗಳ ಮೂಲ ಹೆಸರಿನಲ್ಲೇ ವಿವರಿಸಬಹುದಿತ್ತು.  ಪದಕ್ಕೊಂದು ಪದ ಅನುವಾದಿಸಿ, ನಮ್ಮಲ್ಲಿ ಎಂದೂ ಉಪಯೋಗಿಸದ, ಮಕ್ಕಳೂ ಮುಂದೆಂದೂ ಉಪಯೋಗಿಸದ ಪಾರಿಭಾಷಿಕಗಳನ್ನು ಸೃಷ್ಟಿಸಿ ಮಕ್ಕಳನ್ನು ದಾರಿತಪ್ಪಿಸಲೇಬೇಕೆಂಬ ಹಠವೇಕೆ? 
  • ನೋಡಿ, ನಿಮ್ಮ ಬಳಿ ಹನ್ನೊಂದು ಮಾವಿನ ಹಣ್ಣು ಇದೆ.  ಅದನ್ನು ಕತ್ತರಿಸದೇ ಐದು ಜನಕ್ಕೆ ಹಂಚಬೇಕು - ಇದು ಭಾಗಾಕಾರದ ಲೆಕ್ಕ.  ಐದನ್ನು ಭಾಜಕ (ಭಾಗಿಸುವ ಸಂಖ್ಯೆ) ಎಂದೂ ಹತ್ತನ್ನು ಭಾಜ್ಯ (ಭಾಗಿಸಿಕೊಳ್ಳುವ ಸಂಖ್ಯೆ) ಎಂದೂ, ಎರಡನ್ನು ಭಾಗಲಬ್ಧ (ಒಬ್ಬೊಬ್ಬರಿಗೂ ಎಷ್ಟೆಷ್ಟು ಬಂತು) ಎಂದೂ, ಉಳಿದ ಒಂದನ್ನು ಶೇಷ (ಉಳಿದದ್ದು) ಎಂದೂ ಕರೆಯುತ್ತೇವೆ.  ಇದಕ್ಕೆ ಈ ಹೆಸರೇಕೆ ಬೇಕು?  ಏಕೆಂದರೆ ಮುಂದೆ ಭಾಜಕ, ಭಾಜ್ಯ ಮುಂತಾದುವುಗಳ ಪ್ರಸ್ತಾಪ ಉದ್ದಕ್ಕೂ ಬರುತ್ತಾ ಹೋಗುತ್ತದೆ, ಆದ್ದರಿಂದ ಇಲ್ಲಿ ಈ ರೀತಿಯ ಪಾರಿಭಾಷಿಕವ್ಯಾಖ್ಯೆ ಅಗತ್ಯ.  ಅದೇ, ನಿಮ್ಮ ಬಳಿ ಹತ್ತು ರುಪಾಯಿ ಇದ್ದು ಅದರಲ್ಲಿ ೩ ರುಪಾಯಿ ಕಳೆದು ಹೋಯಿತು, ಉಳಿದದ್ದೆಷ್ಟು ಎಂದರೆ? ಏಳು ಎಂದು ಉತ್ತರ ಹೇಳಿ ಮುಂದುವರೆಯಬಹುದು.  ದೊಡ್ಡ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ಕಳೆದು ಉಳಿದದ್ದನ್ನು ಉತ್ತರವೆಂದು ಹೇಳುತ್ತೇವೆ, ಇದು ಸಾಮಾನ್ಯಜ್ಞಾನ.  ಇಲ್ಲಿ ವಿವಿಧ ಅಂಶಗಳಿಗೆ ಹೆಸರು ಕೊಡುವ ಅಗತ್ಯವೇ ಇಲ್ಲ (ಇಂಗ್ಲಿಷಿನಲ್ಲಿ ಇವಕ್ಕೆ minuend (ಕಳೆದುಕೊಳ್ಳುವ ಸಂಖ್ಯೆ), subtrahend (ಕಳೆಯುವ ಸಂಖ್ಯೆ) ಮತ್ತು difference (ವ್ಯತ್ಯಾಸ) ಎನ್ನುತ್ತಾರೆ, ಆದರೆ ಕನ್ನಡದಲ್ಲಿ, ಮಕ್ಕಳ ಈ ಹಂತಕ್ಕೆ ಆ ಹೆಸರು ಕಟ್ಟಿಕೊಂಡು ಏನು ಮಾಡಬೇಕು?  ಕಳೆಯಲು ಬಂದರೆ ಸಾಕಲ್ಲವೇ?  ಆದರೆ ಪಠ್ಯವಿದ್ವಾಂಸರು ಅದನ್ನು ಅಲ್ಲಿಗೆ ಬಿಡುವುದಿಲ್ಲ.  ಈ ಪದಗಳನ್ನು ವ್ಯವಕಲ್ಯ, ವ್ಯವಕಲಕ, ಮತ್ತು ವ್ಯತ್ಯಾಸ ಎಂದು ಅನುವಾದಿಸಿಯೇ ಸಿದ್ಧ!  ಮಗು, ಕಲಿಯುವುದನ್ನು ಬಿಟ್ಟು ಈ ಪದಗಳ ಅರ್ಥ ತಿಳಿಯಲು ಯಾವ ನಿಘಂಟು ಹುಡುಕಿ ಹೋಗಬೇಕು?
ಹೀಗೆ ಒಂದೆಡೆ ಮಕ್ಕಳಿಗೆ ಅರ್ಥವೇ ಆಗದ ಪದಗಳನ್ನು ತುರುಕುವುದು ಒಂದೆಡೆಯಾದರೆ, ಮಕ್ಕಳಿಗೆ ಸಹಜವಾಗಿಯೇ ಅರ್ಥವಾಗುವ ಪದಗಳಿಗೂ ಪರ್ಯಾಯ ಇಂಗ್ಲಿಷ್ ಪದಗಳನ್ನು ಸೂಚಿಸುವುದು ಇನ್ನೊಂದು ಜಾಡ್ಯ.  ಉದಾಹರಣೆಗೆ ಈ ವಾಕ್ಯವನ್ನು ನೋಡಿ -

"ದೊಡ್ಡದಾದ ಭಾರವಾಗಿರುವ ಹನಿಗಳು ಮಳೆ (Rain)ಯಾಗಿ ಬರುತ್ತವೆ.  ಮೋಡಗಳ ಸುತ್ತಲೂ ಇರುವ ಗಾಳಿ ಇನ್ನೂ ತಣ್ಣಗಾದಾಗ ಈ ಹನಿಗಳು ಹಿಮ (snow) ರೂಪದಲ್ಲಿ ಬೀಳುತ್ತವೆ" [ಸಂಸ್ಕೃತವೇ ಬರದ ಮಕ್ಕಳಿಗೆ ಮಳೆ, ಹಿಮ ಮೊದಲಾದ ಕನ್ನಡ ಪದಗಳೆಲ್ಲಿ ಬಂದೀತು ಎಂಬ ಊಹೆಯಿರಬಹುದೇ!]. 

ಇನ್ನು "ಕೋಶದ ಎರಡೂ ತುದಿಗಳಿಗೆ ಒಂದು ಬಲ್ಬ್ (bulb)ನ ಮೂಲಕ ಜೋಡಿಸಿ" ಎಂಬ ವಾಕ್ಯದಲ್ಲಂತೂ ಬಳಸಿರುವುದು ಬಲ್ಬ್ ಎಂಬ ಇಂಗ್ಲಿಷ್ ಪದವನ್ನೇ!  ಅದನ್ನು ಮಕ್ಕಳಿಗೆ ಕನ್ನಡ ಲಿಪಿಯಲ್ಲಿ ಓದಲು ಬರುವುದಿಲ್ಲವೋ ಎಂಬಂತೆ ಬ್ರಾಕೆಟ್ಟಿನಲ್ಲಿ ಅದೇ ಪದ ಇಂಗ್ಲಿಷ್ ಲಿಪಿಯಲ್ಲಿ ಹಾಕಲಾಗಿದೆ! 

ಇದೆಲ್ಲದರಿಂದ ಒಂದು ವಿಷಯ ಸ್ಪಷ್ಟವಾಗುವುದೇನೆಂದರೆ, ಪಠ್ಯ ಸಿದ್ಧಪಡಿಸಿದವರಿಗೆ ಕನ್ನಡದ ಸಹಜ ಬಳಕೆ ಬರುವುದಿಲ್ಲ; ಮಕ್ಕಳ ಭಾಷೆ ಬರುವುದಿಲ್ಲ, ಕನ್ನಡದ ಆಡುನುಡಿಯಾಗಲೀ ಲಿಖಿತ ಭಾಷೆಯಾಗಲೀ ಸ್ಪಷ್ಟವಾಗಿ ಬರುವುದಿಲ್ಲ.  ಯಾವ ಮಾತು/ಪದ ಎಲ್ಲರಿಗೂ ಅರ್ಥವಾಗುತ್ತದೆ, ಯಾವುದು ಎಲ್ಲರಿಗೂ ಅರ್ಥವಾಗುವುದಿಲ್ಲ ಎಂಬ ಪರಿಜ್ಞಾನ ಕಿಂಚಿತ್ತೂ ಇಲ್ಲ!  ಹೋಗಲಿ ಸಂಸ್ಕೃತದ ಹುಚ್ಚಿಗೆ ಬಿದ್ದವರಂತೆ ಸಂಸ್ಕೃತ ಪದಗಳನ್ನು ತುರುಕುತ್ತಾರಲ್ಲ, ಆ ಜ್ಞಾನವಾದರೂ ಸ್ಪಷ್ಟವಿದೆಯೇ ಎಂದರೆ ಉಹುಂ.  ಸಂಧಿಪ್ರಕ್ರಿಯೆಯ ಪರಿಚಯವಿಲ್ಲ, ಪ್ರತ್ಯಯಗಳನ್ನು ಹಚ್ಚುವ ಬಗೆ ತಿಳಿದಿಲ್ಲ, ಕನ್ನಡ-ಸಂಸ್ಕೃತದ ಯಾವ ಪದಗಳನ್ನು ಬೆರೆಸಿದರೆ ಅಸಹ್ಯವಾಗಿ ಒಡ್ಡೊಡ್ಡಾಗಿರುತ್ತದೆ (ಇವಕ್ಕೆ ಪರಿಭಾಷೆಯಲ್ಲಿ ಅರಿಸಮಾಸ ಎನ್ನುತ್ತಾರೆ) - ಇದಾವುದರ ಪರಿವೆಯೂ ಇಲ್ಲ - ಆದರೆ ಹೊಸ ಪದಗಳನ್ನು ಕಟ್ಟೆ ಬಿಡುವ ಹುಕ್ಕಿಗೆ ಮಾತ್ರ ಮಿತಿಯಿಲ್ಲ.  ಇವರು ಕಟ್ಟಿದ ಕೆಲವು ಪದಗಳನ್ನು ನೋಡಿ: 
  • ಪರಮಾಣ್ವಕಗಳು (ಪರಮಾಣು + ಕ = ಪರಮಾಣ್ವಕ!!);
  • ರಕ್ತಹೀರುಕ (ರಕ್ತಾಹಾರಿ ಎನ್ನುವ ಪದ ಹೊಳೆಯಲಾರದು);
  • ಸಮಜಾತ್ಯಮಿಶ್ರಣ (ಸಮಜಾತಿ+ಅಮಿಶ್ರಣ? - homogenous mixture ಎನ್ನಲಿಕ್ಕೆ);
  • ಅಸವಿತ ನೀರು (distilled water ಅಂತೆ.  ಬ್ರಾಕೆಟ್ಟಿನಲ್ಲೇ ಭಟ್ಟಿಯಿಳಿಸಿದ ನೀರು ಎಂದೂ ಹೇಳಿದ್ದಾರೆ, ಆದರೂ ಇದೊಂದು ತಪ್ಪುತಪ್ಪಾದ ಹೊಸ ಪದ ಬೇಕೇ ಬೇಕು - ’ಅಸವಿತ’ ಪದದ ವ್ಯುತ್ಪತ್ತಿ ದೇವರೇ ಬಲ್ಲ!);
  • ವಿದ್ಯುದಾಗ್ರ (ವಿದ್ಯುತ್ + ಅಗ್ರ = ವಿದ್ಯುದಗ್ರ ಎನ್ನುತ್ತದೆ ವ್ಯಾಕರಣ.  ಆದರೆ ಪಠ್ಯಪುಸ್ತಕದ ವಿಜ್ಞಾನಲೇಖಕರು ವ್ಯಾಕರಣಾತೀತರು);
  • ಅವಪಾತ (precipitation!);
  • ಕಾರ್ಬನಿಕ ದ್ರಾವಕ (Organic solvent! - ಈ ಅನುವಾದ ಹೇಗೋ, ’ಕಾರ್ಬನಿಕ’ ಎಂಬ ಪದದ ವ್ಯುತ್ಪತ್ತಿಯೇನೋ, ದೇವರೇ ಬಲ್ಲ);
  • ಸಾಂದ್ರೀಕರಣ,
  • ಆವೀಕರಣ ("ಆವಿ" ಕನ್ನಡ, "ಕರಣ" ಸಂಸ್ಕೃತ.  ಅಲ್ಲದೇ ಕರಣ ಎಂದರೆ ಮಾಡುವಿಕೆ ಎಂದರ್ಥವೇ ಹೊರತು ಆಗುವಿಕೆ ಎಂದಲ್ಲ - ಆದರೆ ವಿಜ್ಞಾನಲೇಖಕರು ಅದಕ್ಕೆಲ್ಲ ಸೊಪ್ಪು ಹಾಕುವವರಲ್ಲ - ಕರಣಸರಣಿಗೆ ಹೊಸ ಸೇರ್ಪಡೆಯಾದರೆ ಆಯಿತು). 
ಇನ್ನಿಷ್ಟು ಹೇಳಿದ ಮೇಲೆ ಬಹು ಗಂಭೀರವಾದ ಪ್ರಮಾದವನ್ನು ಹೇಳದಿದ್ದರೆ ಲೇಖನ ಪೂರ್ಣಗೊಳ್ಳದು.  ಗಣಿತ ವಿಜ್ಞಾನ ಮೊದಲಾದ ಶಾಸ್ತ್ರವಿಷಯಗಳಲ್ಲಿ ಪಾರಿಭಾಷಿಕಗಳ ಮಹತ್ವ ಎಂಥದ್ದೆಂಬುದು ಎಲ್ಲರಿಗೂ ತಿಳಿದದ್ದೇ.  ಚಾಲ್ತಿಯಲ್ಲಿರುವ ಇಂಗ್ಲಿಷಿನ ಪಾರಿಭಾಷಿಕ ಪದಕ್ಕೆ ಕನ್ನಡದಲ್ಲಿ ಒಂದು ಪಾರಿಭಾಷಿಕ ಬೇಕೇ, ಇದ್ದರೆ ಅದು ಸಂಸ್ಕೃತಪದವಾಗಿರಬೇಕೆ, ಕನ್ನಡದ್ದಾಗಿರಬೇಕೇ, ಅಥವ ಇಂಗ್ಲಿಷಿನದನ್ನೇ ಉಳಿಸಿಕೊಳ್ಳಬೇಕೇ ಇದು ಬಹು ದೊಡ್ಡ ಚರ್ಚೆಯ ವಿಷಯ.  ಅದೇನೇ ಇರಲಿ, ಪಾರಿಭಾಷಿಕಗಳು ಶಿಕ್ಷಣಕ್ರಮದುದ್ದಕ್ಕೂ ಒಂದೇ ಆಗಿ, ಯಾವುದೇ ಗಲಿಬಿಲಿಗೆಡೆಗೊಡದಂತಿರಬೇಕಾದ್ದು ಅತ್ಯವಶ್ಯ.  ಏಕೆಂದರೆ ಈ ಒಂದು ಪಾರಿಭಾಷಿಕ ಪದದ ಮೇಲೆ ಇಡೀ ಪರಿಕಲ್ಪನೆಯನ್ನು ಕಟ್ಟಿ ವಿವರಿಸಿ ಬಳಸಲಾಗುತ್ತದೆ.  ಮೂಲಭೂತ ಮಟ್ಟದಲ್ಲಿ ವಿದ್ಯಾರ್ಥಿ ಇದನ್ನು ಗ್ರಹಿಸದೆ ಹೋದರೆ ಮುಂದಿನದೆಲ್ಲವೂ ಗಲಿಬಿಲಿಯ ಕೊಂಪೆಯೇ.  ಆದರೆ ಇಲ್ಲಿ ಪಾರಿಭಾಷಿಕಗಳ ಮಹತ್ವವನ್ನೇ ಅರಿಯದೇ ಒಂದೊಂದು ಕಡೆ ಒಂದೊಂದರಂತೆ ಯದ್ವಾತದ್ವಾ ಬಳಸಿರುವುದು ಗಮನಕ್ಕೆ ಬರುತ್ತದೆ.  ಕೆಲವು ಉದಾಹರಣೆಗಳನ್ನು ನೋಡಿ: 



ನಾಲ್ಕನೆಯ ತರಗತಿಯಲ್ಲಿ ಭಾಗಾಕಾರದ ಪಾರಿಭಾಷಿಕ ಪದಗಳನ್ನು ವಿವರಿಸುತ್ತಾ ತಿಳಿಸುತ್ತಾರೆ "ಯಾವ ಸಂಖ್ಯೆಯನ್ನು ಭಾಗಿಸಬೇಕಾಗಿದೆಯೋ ಅದು ಭಾಜ್ಯ; ಯಾವ ಸಂಖ್ಯೆಯಿಂದ ಭಾಜ್ಯವನ್ನು ಭಾಗಿಸಲಾಗುತ್ತಿದೆಯೋ ಅದು ಭಾಜಕ; ಭಾಗಾಕಾರದ ಫಲಿತಾಂಶವನ್ನು ಭಾಗಲಬ್ದ ಎನ್ನುತ್ತಾರೆ (ಇಂಗ್ಲಿಷಿನಲ್ಲಿ ಇದಕ್ಕೆ ಕ್ರಮವಾಗಿ Dividend, Divisor, ಮತ್ತು Quotient ಎಂದರು)".  ಇದು ನಾವೆಲ್ಲರೂ ಕಲಿತು ಬಂದಿರುವುದೇ.  ಆದರೆ ಏಳನೆಯ ತರಗತಿಗೆ ಬಂದರೆ, Rational Number ಎಂಬುದನ್ನು ಭಾಗಲಬ್ಧಸಂಖ್ಯೆ ಎಂದು ಅನುವಾದಿಸಿಬಿಟ್ಟರು ("ಭಾಗಲಬ್ಧ" ನಾಲ್ಕನೆಯ ತರಗತಿಯ ವಿವರಣೆ ನೋಡಿ)!  ಮತ್ತು ಆ ಅನುವಾದದಮೇಲೆಯೇ ಇಡೀ Rational Numbers ಅಧ್ಯಾಯವನ್ನು ನಡೆಸಿದ್ದಾರೆ.  ಅಧ್ಯಾಯದೊಳಗೇ ಇಂಗ್ಲಿಷಿನ ವಿವರಣೆಗೂ ಕನ್ನಡದ ವಿವರಣೆಗೂ ಸಂಬಂಧವಿಲ್ಲ, ಇಡೀ ಅಧ್ಯಾಯ ಗೊಂದಲದ ಗೂಡಾಗಿದೆ!

ಇನ್ನು ಅದೇ ಅಧ್ಯಾಯದಲ್ಲಿ Natural numbers, Whole Numbers ಮತ್ತು Integers ಎನ್ನುವುದನ್ನು ಕ್ರಮವಾಗಿ ಸ್ವಾಭಾವಿಕ ಸಂಖ್ಯೆಗಳು, ಪೂರ್ಣಸಂಖ್ಯೆಗಳು ಮತ್ತು ಪೂರ್ಣಾಂಕಗಳು ಎಂದು ಅನುವಾದಿಸಿದ್ದಾರೆ.  ಪೂರ್ಣಸಂಖ್ಯೆ ಎಂದರೇನು ಪೂರ್ಣಾಂಕ ಎಂದರೇನು?  ಅಂಕ (ಅಂಕಿ) ಎಂದರೆ ಸೊನ್ನೆಯಿಂದ ಒಂಬತ್ತರವರೆಗಿನ ಒಂದು ಸ್ಥಾನದ ಸಂಖ್ಯೆ, ಮತ್ತು ಸಂಖ್ಯೆ ಎಂದರೆ ಇಂಥಾ ಹಲವು ಸ್ಥಾನಗಳನ್ನೂ, ದಶಮಾಂಶಗಳನ್ನೂ ಒಳಗೊಂಡ ಸಂಖ್ಯೆ ಎಂಬುದು ಮಕ್ಕಳಿಗೆ ಮೊದಲಿನಿಂದಲೂ ಕಲಿಸಿದ ವಿಷಯ.  ಈಗ ಇದ್ದಕ್ಕಿದ್ದಹಾಗೆ ಪೂರ್ಣಾಂಕ ಎಂದರೆ Integer ಎಂದುಬಿಟ್ಟರೆ, ಮಕ್ಕಳ ಗ್ರಹಿಕೆಗೆ ಏನಾಗಬೇಕು?  ಅದರಲ್ಲೂ ಇಡೀ Rational Number ಎಂಬ ಅಧ್ಯಾಯವನ್ನು ಅರಿಯಲು ಈ ಮೂರು ರೀತಿಯ ಸಂಖ್ಯೆಗಳ ಅರಿವು ಬಹು ಮುಖ್ಯವಾದದ್ದು. 

ಮುಂದುವರೆದು Rational Numberನ ವ್ಯಾಖ್ಯೆಯಲ್ಲೂ ಭಾರೀ ಎಡವಟ್ಟು ಮಾಡಿದ್ದಾರೆ.  ಇಂಗ್ಲಿಷಿನ ಮೂಲ ಹೀಗಿದೆ "All numbers of the form p/q are rational numbers. In p/q, q is not equal to 0 and p,q are integer"  ಇದರ ವ್ಯಾಕರಣ ಏನೇ ಇರಲಿ, ಈ ಸಾಲು ಹೇಳುವುದಿಷ್ಟು - p/q ಎನ್ನುವ ಸಂಖ್ಯೆ Rational number (ಭಾಗಲಬ್ಧ ಸಂಖ್ಯೆ!) ಆಗಬೇಕಾದರೆ, ಅದರಲ್ಲಿ q ಎನ್ನುವುದು ಸೊನ್ನೆಯಾಗಿರಬಾರದು, ಮತ್ತು p ಮತ್ತು q ಎರಡೂ Integer (ಪೂರ್ಣಾಂಕ!)ಗಳಾಗಿರಬೇಕು.  ಇದು ತಾನೆ ವಿವರಣೆ?  ಕನ್ನಡ ಪಠ್ಯದಲ್ಲಿ ಕೊಟ್ಟಿರುವ ವಿವರಣೆ ದಿಕ್ಕೆಡಿಸುವಂತಿದೆ.  "a/b ರೂಪದಲ್ಲಿರುವ ಎಲ್ಲಾ ಸಂಖ್ಯೆಗಳು ಭಾಗಲಬ್ಧ ಸಂಖ್ಯೆಗಳಾಗಿರಲು, a/b ಇದರಲ್ಲಿ a ಪೂರ್ಣಾಂಕ ಹಾಗೂ b ಸೊನ್ನೆಯಲ್ಲದ ಸಂಖ್ಯೆಯಾಗಿರುತ್ತದೆ.  ಭಾಗಲಬ್ಧ ಸಂಖ್ಯೆಯ ಛೇದವು ಯಾವಾಗಲೂ ಸ್ವಾಭಾವಿಕ ಸಂಖ್ಯೆ ಆಗಿರುತ್ತದೆ"!!!  ಇಂಗ್ಲಿಷಿನಲ್ಲಿ ಅಂಶ ಛೇದಗಳೆರಡೂ Integer (ಪೂರ್ಣಾಂಕ) ಆಗಿರಬೇಕೆಂದಿದೆ.  ಕನ್ನಡದಲ್ಲಿ ಛೇದವು ಸ್ವಾಭಾವಿಕ ಸಂಖ್ಯೆ (Natural Number) ಆಗಿರಬೇಕೆಂದಿದೆ!

ಈ ಅಧ್ಯಾಯವನ್ನು ಪೂರ್ಣ ನೋಡಿದ ಯಾರಿಗಾದರೂ, ಇಲ್ಲಿಯ ವಿಷಯ ವಿವರಿಸುವವರಿಗೇ ಸ್ಪಷ್ಟವಿಲ್ಲವೆಂಬುದು ಬಹು ನಿಚ್ಚಳವಾಗಿ ಗೋಚರಿಸುತ್ತದೆ. ಹಾಗಿದ್ದರೆ ಮಕ್ಕಳ ಗತಿಯೇನು?  ಕನ್ನಡಾಭಿಮಾನ, ಕನ್ನಡಮ್ಮನ ಸೇವೆ ಎಂದೆಲ್ಲಾ ಚಿಂತಿಸುವವರ ತಪ್ಪಿಗೆ ಇದು ಶಿಕ್ಷೆಯೇ?  ದುಬಾರಿ ಹಣ ತೆತ್ತು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಲಾಗದೇ, ಬೇರೆ ಗತಿಯಿಲ್ಲದೇ ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ನೀಡುವ ಬಳುವಳಿಯೇ?  ಮಕ್ಕಳು ಹೊಸ ವಿದ್ಯೆ ಕಲಿತು ಬರುವ ಬದಲು ತಮಗೆ ಬರುವ ಕನ್ನಡವನ್ನೂ ಮರೆತು ಬರಬೇಕೇ?  ಅರ್ಥವೇ ಇಲ್ಲದ ಪದಗಳಿಗಾಗಿ ನಿಘಂಟು ತಡಕುವುದೇ ಗಣಿತ-ವಿಜ್ಞಾನಗಳ ಪಾಠವಾಯಿತೇ?  ಈ ಅಜ್ಞಾನದ ಕೊಂಪೆಗಳಿಗಿಂತ ಮಕ್ಕಳಿಗೆ ಮನೆಯೇ ಉತ್ತಮ ಪಾಠಶಾಲೆಯಾಗಬೇಕಾದ ಅಗತ್ಯವೊದಗಿದೆಯೇ? ಗಂಭೀರವಾಗಿ ಚಿಂತಿಸುವ ಕಾಲ ಬಂದಿದೆ.

ಸೂ: ಈ ಲೇಖನವು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ದಿನಾಂಕ ೨೩-೦೭-೨೦೧೭ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದೆ:


 

Friday, September 9, 2011

ದ್ವೈತ - ಅದ್ವೈತ: ಒಂದು ಚಿಂತನೆ

ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ಬಗ್ಗೆ ಒಂದು ಲೇಖನವಿದೆ. ಅಲ್ಲಿ ಬಂದಿರುವ ದ್ವೈತ-ಅದ್ವೈತ-ವಿಶಿಷ್ಟಾದ್ವೈತಗಳ ತುಲನೆಯ ವಿಷಯದಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ಬರೆಯುತ್ತಿದ್ದಾಗ ಅದು ತೀರ ಬೆಳೆದು ತಾನೇ ಒಂದು ಸ್ವತಂತ್ರ ಬರಹವಾಗಬಹುದೆನ್ನಿಸಿತು. ಅದರ ಪರಿಣಾಮವೇ ಈ ಲೇಖನ.

ಇದು ಮೂಲತಃ ದ್ವೈತವು ಸರಿಯೋ ಅದ್ವೈತವೋ ಎಂಬ ಚರ್ಚೆಯಲ್ಲ (ಏಕೆಂದರೆ ಶಂಕರರ ಸಿದ್ಧಾಂತದ ಬಗೆಗೆ ಹೇಗೋ ಹಾಗೆ ಮಧ್ವರ ಸಿದ್ಧಾಂತಗಳ ಬಗೆಗೂ ನನ್ನದೇ ಅನೇಕ ಪ್ರಶ್ನೆಗಳಿದ್ದು ಅದರ ನಿವಾರಣೆಗೆ ಬೇಕಾದ ಬುದ್ಧಿ/ಜ್ಞಾನ ಸಾಮಗ್ರಿ ನನ್ನಲ್ಲಿಲ್ಲ). ಆದ್ದರಿಂದ ಇವು ಮೇಲಿನ ಲೇಖನದಲ್ಲಿ ಕಂಡ ವಿವಿಧ ಸಿದ್ಧಾಂತಗಳ ತುಲನೆಯ ಬಗೆಗಿನ ನನ್ನ ಅನಿಸಿಕೆಗಳು ಮಾತ್ರ. ಇದು ಮೇಲಿನ ಲೇಖನಕ್ಕೆ ಪ್ರತಿಕ್ರಿಯೆಯಾದ್ದರಿಂದ ಆ ಲೇಖನವನ್ನು ಓದದೇ ಇದು ಪೂರ್ಣವಾಗುವುದಿಲ್ಲ. ಆದ್ದರಿಂದ ಮೂಲ ಲೇಖನವನ್ನು ಮೊದಲು ಓದಬೇಕಾಗಿ ಕೋರಿಕೆ (ದಯವಿಟ್ಟು ರೈಟ್ ಕ್ಲಿಕ್ ಮಾಡಿ ಬೇರೊಂದು ಕಿಟಕಿಯಲ್ಲಿ ತೆರೆದಿಟ್ಟುಕೊಳ್ಳಿ).

ಮೊದಲಿಗೆ ದ್ವೈತ-ಅದ್ವೈತ ಎನ್ನುವ ಪದಗಳು ಆಯಾ ಆಚಾರ್ಯರು ಚಾಲ್ತಿಗೆ ತಂದದ್ದಲ್ಲ. ಉದಾಹರಣೆಗೆ ನಾವು ಅದ್ವೈತವೆಂದು ಕರೆಯುವ ತತ್ವವನ್ನು ಸ್ವತಃ ಶಂಕರರು "ಔಪನಿಷದ ದರ್ಶನ"ವೆಂದು ಕರೆಯುತ್ತಾರೆ ("ತಸ್ಮಾತ್ ಸಮಂಜಸಮಿದಂ ಔಪನಿಷದಂ ದರ್ಶನಂ" - ಸೂತ್ರ ಭಾಷ್ಯ.೨.೧.೯) - ವೇದಾಂತದ (ಉಪನಿಷತ್ತುಗಳ) ಪಾರಮಾರ್ಥಿಕ ದೃಷ್ಟಿ ಮತ್ತು ಬ್ರಹ್ಮೈಕತ್ವವನ್ನು ಎತ್ತಿಹಿಡಿಯುವುದರಿಂದ ಇದು ಔಪನಿಷದ ದರ್ಶನ. ಗೌಡಪಾದಕಾರಿಕೆಯಲ್ಲಿ "ಮಾಯಾಮಾತ್ರಮಿದಂ ದ್ವೈತಂ ಅದ್ವೈತಂ ಪರಮಾರ್ಥತಃ" ಎಂಬ ಮಾತು ಬರುತ್ತದೆ. ಆದರೆ ಇಲ್ಲಿ ಬರುವ ದ್ವೈತ ಅದ್ವೈತ ಪದಗಳು ಒಂದು ಸಿದ್ಧಾಂತವನ್ನು ಸೂಚಿಸದೇ ಕೇವಲ ಎರಡು ಸ್ಥಿತಿಗಳನ್ನಷ್ಟೇ ಸೂಚಿಸುತ್ತದೆ (ಏಕೆಂದರೆ ಶಂಕರಾಚಾರ್ಯರ ಕಾಲಕ್ಕೆ ನಾವೀಗ ನೋಡುವ "ದ್ವೈತಸಿದ್ಧಾಂತ"ದ ಪ್ರತಿಪಾದನೆಯೇ ಆಗಿರಲಿಲ್ಲ!). ಇದಕ್ಕೆ ಅದ್ವೈತಸಿದ್ಧಾಂತವೆಂಬ ಹೆಸರು ಬಿದ್ದದ್ದೇ ಬಹುಶಃ ೧೩ನೆಯ ಶತಮಾನದ ಆಸುಪಾಸಿನಲ್ಲಿ (ಮಧ್ವಾಚಾರ್ಯರ ಕಾಲದ ಸರಿಸುಮಾರಿನಲ್ಲಿ).  ಸುಮಾರು ಹದಿನೈದನೆಯ ಶತಮಾನದ "ಅದ್ವೈತದೀಪಿಕೆ", "ಅದ್ವೈತಬೋಧ", "ಭೇದ ಧಿಕ್ಕಾರ" ಇತ್ಯಾದಿ ಗ್ರಂಥಗಳು, ಮತ್ತು ಮುಂದೆ ಮಧುಸೂದನ ಸರಸ್ವತಿಗಳ "ಅದ್ವೈತಸಿದ್ಧಿ" ಇತ್ಯಾದಿ ಗ್ರಂಥಗಳಲ್ಲಿ ಸ್ಪಷ್ಟವಾಗಿ ಕಂಡುಬರುವ ದ್ವೈತ-ಅದ್ವೈತ ಸೈದ್ಧಾಂತಿಕ ಚರ್ಚೆಗಳನ್ನು ಉದಹರಿಸುವ ಸಾಕೃ ರಾಮಚಂದ್ರರಾಯರು, ಶಂಕರರ ಔಪನಿಶದ ದರ್ಶನಕ್ಕೆ ಅದ್ವೈತ ಸಿದ್ಧಾಂತವೆಂಬ ವ್ಯವಹಾರ ಬಂದದ್ದು ಬಹುಶಃ ಹದಿನೈದನೆಯ ಶತಮಾನದಿಂದೀಚಿಗಿರಬಹುದು ಎಂದು ಅಭಿಪ್ರಾಯ ಪಡುತ್ತಾರೆ (ದರ್ಶನ ಪ್ರಬಂಧ - ಅದ್ವೈತ ಸಿದ್ಧಾಂತ: ಸಾ.ಕೃ.ರಾ).  ಆದ್ದರಿಂದ ಶಾಂಕರದರ್ಶನಕ್ಕೆ ಅದ್ವೈತ ಸಿದ್ಧಾಂತವೆಂಬ ವ್ಯವಹಾರವು ಮಧ್ವಾಚಾರ್ಯರ ಕಾಲಕ್ಕೆ ಆರಂಭವಾಗಿ ಬಹುಶಃ ಹದಿನೈದನೆಯ ಶತಮಾನದ ಹೊತ್ತಿಗೆ ಭದ್ರವಾಗಿ ನೆಲೆಯೂರಿತ್ತೆನ್ನಬಹುದು.

ವಿಶಿಷ್ಟಾದ್ವೈತವೆಂಬ ನಿರ್ದೇಶನವೂ ರಾಮಾನುಜರು ಬಳಕೆಗೆ ತಂದದ್ದಲ್ಲ, ಏಕೆಂದರೆ ರಾಮಾನುಜರ ಮತಕ್ಕೆ ಶ್ರೀವೈಷ್ಣವ ಮತವೆಂದೇ ಬಳಕೆ. ಈ ವೈಷ್ಣವ ಮತದಲ್ಲಿ ಹರಿಗಷ್ಟೇ ಅಲ್ಲ, ಲಕ್ಷ್ಮಿಗೂ ಬಹಳಷ್ಟು ಪ್ರಾಮುಖ್ಯವಿರುವುದರಿಂದ ಇದು ಶ್ರೀ-ವೈಷ್ಣವ. ಆಳ್ವಾರರ ಭಕ್ತಿಪಂಥ ಮತ್ತು ನಾಥ-ಯಾಮುನರ ವೈದಿಕ ವಿಚಾರಧಾರೆಗಳನ್ನು ಕ್ರೋಢೀಕರಿಸಿ ಅದಕ್ಕೊಂದು ವೈದಿಕ ದರ್ಶನದ ಅಂತಸ್ತು ನೀಡಿದ ಹೆಗ್ಗಳಿಕೆ ರಾಮಾನುಜರದು. ಬ್ರಹ್ಮ-ಚಿತ್-ಅಚಿತ್ ಸಂಬಂಧವನ್ನು ದೇಹಿ-ದೇಹ (ಶೇಷಿ-ಶೇಷ)ದ ಪರಿಭಾಷೆಯಲ್ಲಿ ನಿರೂಪಿಸುವುದರ ಮೂಲಕ (ಬ್ರಹ್ಮವು ದೇಹಿ, ಜಗತ್ತು ದೇಹ; ಜಗತ್ತಿನ ಪ್ರತಿಯೊಂದು ಚಿದಚಿದ್ವಸ್ತುವೂ ಈ ಬ್ರಹ್ಮನ ಒಂದು ಭಾಗ/ಅಂಶ) ಬ್ರಹ್ಮವೂ ಜಗತ್ತೂ ಹೇಗೆ ಬೇರೆಬೇರೆ ಮತ್ತು ಅದೇ ಸಮಯದಲ್ಲಿ ಹೇಗೆ ಒಂದೇ ಎಂಬುದನ್ನು ಪ್ರತಿಪಾದಿಸುವುದರಿಂದ ಇದಕ್ಕೆ ಮುಂದೆ ವಿಶಿಷ್ಟಾದ್ವೈತವೆಂಬ ಹೆಸರು ದೊರಕೊಂಡಿರುವಂತೆ ತೋರುತ್ತದೆ. ಈ ಹೆಸರಿನ ಬಳಕೆ ವೇದಾಂತದೇಶಿಕರಲ್ಲಿ ಮತ್ತು ಸುದರ್ಶನ ಸೂರಿಗಳಲ್ಲಿ ಮೊದಲಿಗೆ ಬಳಕೆಗೆ ಬಂದಂತೆ ಕಂಡುಬರುತ್ತದೆ (ಕ್ರಿ.ಶ.೧೩-೧೪ - ಮಧ್ವಾಚಾರ್ಯರ ಕಾಲದ ಸರಿಸುಮಾರಿನಲ್ಲೇ). ಮೇಲೆ ತಿಳಿಸಿದಂತೆ ಈ ಹೊತ್ತಿಗಾಲೇ ಶಂಕರರ ಔಪನಿಶದ ದರ್ಶನವು "ಅದ್ವೈತ"ವೆಂಬ ಹೆಸರಿನಲ್ಲಿ ಬಳಕೆಗೆ ಬಂದಿತ್ತು (ಶಂಕರರ ಅದ್ವೈತದಿಂದ ತಮ್ಮದನ್ನು ಪ್ರತ್ಯೇಕವಾಗಿ ಗುರುತಿಸಲಿಕ್ಕಾಗಿ ವಿಶಿಷ್ಟಾದ್ವೈತಿಗಳು ಶಂಕರರ ಅದ್ವೈತವನ್ನು "ಕೇವಲಾದ್ವೈತ" ಎಂದು ನಿರ್ದೇಶಿಸುತ್ತಾರೆ).

ಇನ್ನು ದ್ವೈತದ ವಿಷಯಕ್ಕೆ ಬಂದರೆ, ಇದೂ ಮೂಲತಃ ದ್ವೈತಸಿದ್ಧಾಂತವೆಂದು ಕರೆಯಲ್ಪಟ್ಟದ್ದಲ್ಲ. ಇದರ ಮೂಲ ಹೆಸರು "ತತ್ವವಾದ". ದ್ವೈತಿಗಳು ಅದ್ವೈತ ಸಿದ್ಧಾಂತವನ್ನು ಮಾಯಾವಾದವೆಂದು ನಿರ್ದೇಶಿಸುತ್ತಾರೆ (ಜಗತ್ತು ಮಾಯೆಯೆಂಬುದರಿಂದ). ಅದಕ್ಕೆ ಪ್ರತಿಯಾಗಿ ಈ ವಾದದ ಮುಖ್ಯನಿಲುವು ಸತ್ಯತ್ವ. ಬ್ರಹ್ಮನಷ್ಟೇ ಅಲ್ಲ, ಬ್ರಹ್ಮನಿಂದ ನಿರ್ಮಿತವಾದ ಜಗತ್ತೂ, ಅವುಗಳ ನಡುವಿನ ಸಾಮ್ಯ, ವೈಷಮ್ಯ, ತಾರತಮ್ಯಗಳೂ, ಸ್ವರೂಪ-ಸ್ವಭಾವಗಳೂ ಸತ್ಯ ಹಾಗೂ ನಿತ್ಯವೆಂದೇ ಸಾರುವುದರಿಂದ ಇದು ತತ್ವವಾದ. ಈ ತತ್ತ್ವವಾದವೇ ಆರ್ಷೇಯದರ್ಶನವೆಂದೂ, ಕಾಲಕ್ರಮದಲ್ಲಿ ಬೇರೆಬೇರೆ ಸಿದ್ಧಾಂತಗಳ ವಿಜೃಂಭಣೆಯಿಂದ ತತ್ವವಾದದ ಬೆಳಕು ಮರೆಯಾಯಿತೆಂದೂ, ಮುಂದೆ ಹದಿಮೂರನೆಯ ಶತಮಾನದಲ್ಲಿ ಬಂದ ಮಧ್ವಾಚಾರ್ಯರು (ಇವರ ಆಶ್ರಮನಾಮ ಪೂರ್ಣಪ್ರಜ್ಞತೀರ್ಥರು; ಬಳಿತ್ಥಾಸೂಕ್ತದ ಮಧ್ವ ಆಧವೇ ಎಂಬ ವಾಕ್ಯದಿಂದ ಮಧ್ವಾಚಾರ್ಯರೆಂದು ಪ್ರಸಿದ್ಧಿ - "ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸಂತಂ ಮಾತರಿಶ್ವಾ ಮಥಾಯತಿ") ಈ ಮರೆಯಾಗಿದ್ದ ತತ್ವವಾದವನ್ನು ಪುನರುಜ್ಜೀವಿಸಿ ಪ್ರಚುರಗೊಳಿಸಿದರೆಂದೂ ದ್ವೈತ ಸಂಪ್ರದಾಯ ನಂಬುತ್ತದೆ. ಆದ್ದರಿಂದ ಇದಕ್ಕೆ ಪೂರ್ಣಪ್ರಜ್ಞದರ್ಶನವೆಂದೂ ಹೆಸರು. ೧೩-೧೪ನೆಯ ಶತಮಾನದ ಮಾಧವಾಚಾರ್ಯರ "ಸರ್ವದರ್ಶನ ಸಂಗ್ರಹ"ದಲ್ಲೂ ಈ ದರ್ಶನ ಪೂರ್ಣಪ್ರಜ್ಞದರ್ಶನವೆಂದೇ ಕರೆಯಲ್ಪಟ್ಟಿದೆ. ದ್ವೈತಸಿದ್ಧಾಂತವೆಂಬ ಹೆಸರು ಮೇಲಿನ ಆತ್ಮೈಕತ್ವದ (ಅದ್ವೈತದ) ಪ್ರತಿಯಾಗಿ ಬಳಕೆಗೆ ಬಂದ ವ್ಯವಹಾರವಿರಬೇಕು. ಶಂಕರರ ಸೂತ್ರಭಾಷ್ಯಗಳಲ್ಲೂ ದ್ವೈತಿಗಳ ಉಲ್ಲೇಖ ಬಂದಿದ್ದರೂ ಸ್ಪಷ್ಟವಾಗಿಯೇ ಅದು ಮಧ್ವಸಿದ್ಧಾಂತದ ಉಲ್ಲೇಖವಲ್ಲ, ಬದಲಿಗೆ ಅದು ಸಾಂಖ್ಯ ಮತ್ತು ಯೋಗದರ್ಶನಗಳನ್ನು ಕುರಿತದ್ದು (ದ್ವೈತಿನೋ ಹಿ ತೇ ಸಾಂಖ್ಯಾ ಯೋಗಾಶ್ಚ - ಸೂತ್ರ ಭಾಷ್ಯ.೨.೧.೩). ದ್ವೈತವೆಂಬಲ್ಲಿ ಒತ್ತು ಎರಡು ಎಂಬ ಸಂಖ್ಯೆಯ ಮೇಲಲ್ಲ, ಬದಲಿಗೆ ನಾನಾತ್ವದ ಮೇಲೆ.

ಅದೇನೇ ಇದ್ದರೂ ಈ ಮೂರೂ ದರ್ಶನಗಳು ಸಮನ್ವಯಿಸಲೇ ಸಾಧ್ಯವಿಲ್ಲದಷ್ಟು ವಿಭಿನ್ನ ಧೋರಣೆಯನ್ನು ತಳೆದದ್ದು.  ಆದರೆ ಪ್ರಸ್ತುತ ಲೇಖನವನ್ನು ಓದುವಾಗ ಅದು ಎಲ್ಲೋ ಒಂದೆಡೆ ಈ ಮೂರೂ ಮತಗಳನ್ನು ಸಮನ್ವಯಿಸಲೆಳಸುತ್ತದೆಯೆನ್ನಿಸಿತು.ಉದಾಹರಣೆಗೆ ಇದನ್ನು ನೋಡಿ:

"ರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೂ ಅದ್ವೈತಕ್ಕೂ ಹೆಚ್ಚೇನೂ ಭಿನ್ನತೆಯಿಲ್ಲದಿದ್ದರೂ "ವಿಶ್ವಮಾನವರೆಲ್ಲರೂ ಪರಮಾತ್ಮನ ಸ್ವರೂಪರೇ" ಎನ್ನುವ ಅದ್ವೈತವನ್ನು ಬಿಟ್ಟು ಎಲ್ಲವೂ ಶ್ರೀ ಹರಿಯೇ , ಅವನೊಬ್ಬನೇ ಶೇಷಿ ಮಿಕ್ಕದ್ದೆಲ್ಲಾ ಶೇಷ ಎಂದು ಹೇಳುತ್ತಾರೆ"

- ಆದರೆ "ವಿಶ್ವಮಾನವರೆಲ್ಲರೂ ಪರಮಾತ್ಮನ ಸ್ವರೂಪರೇ" ಎನ್ನುವುದಕ್ಕೂ "ಶ್ರೀಹರಿಯು ಶೇಷಿ, ಮಿಕ್ಕದ್ದೆಲ್ಲಾ ಶೇಷ" ಎನ್ನುವುದಕ್ಕೂ ಅಗಾಧವಾದ ಅಂತರವುಂಟು. ಆದ್ದರಿಂದ "ವಿಶಿಷ್ಟಾದ್ವೈತಕ್ಕೂ ಅದ್ವೈತಕ್ಕೂ ಹೆಚ್ಚೇನೂ ಭಿನ್ನತೆಯಿಲ್ಲ"ವೆಂಬ ಸಮನ್ವಯ ತುಸು ಕಷ್ಟದ್ದೆನಿಸುತ್ತದೆ. ಜಗತ್ತು ಮಿಥ್ಯೆ, ಮಾಯೆ; ಈ ಮಾಯಾಪ್ರಪಂಚದಲ್ಲಿ ಸಿಲುಕಿರುವ ಜೀವನ ನಿಜಸ್ವರೂಪವೆಂದರೆ ಪರಮಾತ್ಮನೇ; ಜೀವನಿಗೂ ಪರಮಾತ್ಮನಿಗೂ ಕಾಣಬರುವ ಭೇದ ಕೇವಲ ಪರಮಾತ್ಮನ ಮಾಯಾವಿಕಾರ; ಹೀಗೆಂಬ ತಿಳಿವೇ ಮುಕ್ತಿ (ಸ್ವಸರೂಪದರ್ಶನ, ಯಥಾರ್ಥ ಜ್ಞಾನ) - ಇದು ಸ್ಥೂಲವಾಗಿ ಶಂಕರರ ನಿಲುವು.

ಆದರೆ ರಾಮಾನುಜರ ಶೇಷಿ-ಶೇಷ ಪರಿಕಲ್ಪನೆ ಹಾಗಲ್ಲ. ಇಲ್ಲಿ ಮೂರು ಮುಖ್ಯ ಅಂಶಗಳಿವೆ: ಆತ್ಮ, ಚೇತನ (ಚಿದ್ವಸ್ತು) ಮತ್ತು ಅಚೇತನ (ಅಚಿದ್ವಸ್ತು). ವೇದಪ್ರತಿಪಾದ್ಯವಾದ ಆತ್ಮವೆನ್ನುವುದು ಒಂದೇ - ಅದೇ ಬ್ರಹ್ಮ, ಅದೇ ಸತ್ಯ. ವಿವಿಧಜೀವಿಗಳಲ್ಲಿ ಬೇರೆಬೇರೆ ತೋರುವುದು ವಿವಿಧ ಆತ್ಮಗಳಲ್ಲ, ಬದಲಿಗೆ ಈ ಪರಮಾತ್ಮನದೇ ಒಂದು ಅಂಶವಷ್ಟೇ. ಅದು ಚೇತನ (ಚಿದ್ವಸ್ತು - ಆತ್ಮನ ಒಂದು ತುಣುಕು). ಇನ್ನು ಈ ಇಡೀ ಜಗತ್ತು (ಅಚೇತನ-ಅಚಿದ್ವಸ್ತುಗಳ ಮೊತ್ತ) ಪರಮಾತ್ಮನ ದೇಹ. ಅದಕ್ಕೆಂದೇ ಪರಮಪುರುಷನು ಸಹಸ್ರಪಾದ, ಸಹಸ್ರಾಕ್ಷ, ಸಹಸ್ರಶಿರ, ಸಹಸ್ರೋರು ಮತ್ತು ಸಹಸ್ರಬಾಹುವೆನ್ನಿಸಿಕೊಳ್ಳುತ್ತಾನೆ. ಹೀಗೆ ಆತ್ಮ-ಪರಮಾತ್ಮರ ಭೇದವನ್ನೂ, ಆತ್ಮದ ಬಹುತ್ವವನ್ನೂ ನಿರಾಕರಿಸಿ, ಪ್ರತಿಯೊಂದು ಜೀವಿಯಲ್ಲಿರುವುದು ಒಂದೇ ಪರಮಾತ್ಮನ ಅಂಶ(ಶೇಷ)ವೆಂದೂ, ಆತ್ಮ(ಶೇಷಿ)ವೊಂದೇ ಎಂದೂ ಆತ್ಮೈಕತ್ವವನ್ನು ಪ್ರತಿಪಾದಿಸುವುದರಿಂದ ಅದು "ಅದ್ವೈತ"; ಆದರೆ ಕಾಣಬರುವ ವಿವಿಧ ಆತ್ಮಗಳ ಭೇದವನ್ನು ಮಾಯೆಯೆನ್ನದೇ ಅದು ಸತ್ಯವೆಂದೂ ವಿರಾಟ್ ಆತ್ಮದ ಅಂಶಮಾತ್ರವೆಂದೂ ಪ್ರತಿಪಾದಿಸುವುದರಿಂದ ಅದು "ವಿಶಿಷ್ಟಾದ್ವೈತ". ಇದಕ್ಕೂ, ಬ್ರಹ್ಮನನ್ನುಳಿದು ಮಿಕ್ಕದ್ದೆಲ್ಲವೂ ಮಾಯೆಯೆನ್ನುವ ಅದ್ವೈತದ ನಿಲುವಿಗೂ ಅಜಗಜಾಂತರ ವ್ಯತ್ಯಾಸವಿದೆ.

ಇನ್ನು ಶಂಕರರ ಸಿದ್ಧಾಂತಕ್ಕೂ ಮಧ್ವಸಿದ್ಧಾಂತಕ್ಕೂ ಮೇಲಿನಷ್ಟು ಸಾಮ್ಯವೂ ಇಲ್ಲ - ಭೂಮ್ಯಾಕಾಶಗಳ ಅಂತರ. ಎರಡೂ ಪಕ್ಷಗಳು ಒಪ್ಪುವ ಒಂದೇ ವಾಕ್ಯವೆಂದರೆ "ಬ್ರಹ್ಮ ಸತ್ಯ" ಅದು ಬಿಟ್ಟರೆ ಮಿಕ್ಕಿದ್ದೆಲ್ಲವೂ ತದ್ವಿರುದ್ಧವೇ! ಆದರೆ ಈ ಎರಡು ಸಿದ್ಧಾಂತಗಳನ್ನು ಹೋಲಿಸುತ್ತಾ, ಲೇಖನ ಹೀಗೆ ಹೇಳುತ್ತದೆ:

"ದ್ವೈತದಲ್ಲಿಯೂ ಸಹ 'ಹರಿ ಸರ್ವೋತ್ತಮ' ಎನ್ನುವುದು ಅಂತಿಮ ನಿಶ್ಚಯ. ಬ್ರಹ್ಮವೆಂದರೆ ಬೇರೇನೂ ಅಲ್ಲ, ಜಗತ್ತಿನ ನಿಯಾಮಕನೂ ಸರ್ವಶಕ್ತನೂ ಆದ ಶ್ರೀಹರಿಯೇ ಮತ್ತು ಅವನೊಬ್ಬನೇ ಎಂದು ನಿರೂಪಿಸುತ್ತಾರೆ. ಹರಿಯೊಬ್ಬನೆ ಸ್ವತಂತ್ರ ಸತ್ಯ ಇನ್ನುಳಿದದ್ದೆಲ್ಲಾ ಅಧೀನ ಸತ್ಯ ಎನ್ನುವ ಪ್ರತಿಪಾದನೆಯನ್ನು ಕಾಣಬಹುದಾಗಿರುತ್ತದೆ. ಇಲ್ಲಾದರೂ ಸಹ ನಾವು ಶಂಕರರ ತತ್ವವನ್ನೇ ಕಾಣಬಹುದಾಗಿರುತ್ತದೆ. ಬ್ರಹ್ಮವೊಂದೇ ಸತ್ಯ ಜಗತ್ತು ಮಿಥ್ಯೆ ಎನ್ನುವ ಶಂಕರರ ಅದ್ವೈತಕ್ಕೂ ಹರಿಯೊಬ್ಬನೇ (ಸಗುಣ ಬ್ರಹ್ಮ) ಸತ್ಯ ಉಳಿದುದೆಲ್ಲವೂ ಅನಿತ್ಯ ಅಥವಾ ಅಧೀನ ಸತ್ಯ (ಅಸ್ವತಂತ್ರ ಸತ್ಯ) ಮತ್ತು ಹರಿಯಿಂದಲೇ ಜಗತ್ತು ನೆಡೆಯುವುದು ಎನ್ನುವಾಗ 'ಜಗತ್ತು' ಕೂಡಾ ಹರಿಯ ಮಾಯೆಯೇ ಎನ್ನುವುದು ನಿರೂಪಿತವಾಗುತ್ತದೆ ಮತ್ತು ಹೆಚ್ಚು ವ್ಯತ್ಯಾಸವೂ ಕಾಣದಾಗುತ್ತದೆ. ಇದು ನಿತ್ಯ ಅದು ಅನಿತ್ಯ ಎನ್ನುವ ಪೃಥಃಕರಣ ಎನ್ನಬಹುದು. (ಅರ್ಜುನನ ಗುರಿಯು ಪಕ್ಷಿಯ ಅಕ್ಷಿಯೊಂದೇ ಆಗಿದ್ದಾಗ ಉಳಿದ ಅಂಗಗಳೆಲ್ಲಾ ಆತನಿಗೆ ನಿಮಿತ್ತವಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬಹುದು)"

- ಇಲ್ಲಿ ಉಭಯಮತಸಮನ್ವಯದ ಪ್ರಯತ್ನ ಕಾಣುತ್ತದೆ, ಆದರೆ ತಾತ್ವಿಕವಾಗಿಯಾದರೂ ಈ ಸಮನ್ವಯ ಸಾಧ್ಯವೇ ನೋಡೋಣ.

"ದ್ವೈತದಲ್ಲಿಯೂ ಸಹ 'ಹರಿ ಸರ್ವೋತ್ತಮ' ಎನ್ನುವುದು ಅಂತಿಮ ನಿಶ್ಚಯ. ಬ್ರಹ್ಮವೆಂದರೆ ಬೇರೇನೂ ಅಲ್ಲ, ಜಗತ್ತಿನ ನಿಯಾಮಕನೂ ಸರ್ವಶಕ್ತನೂ ಆದ ಶ್ರೀಹರಿಯೇ ಮತ್ತು ಅವನೊಬ್ಬನೇ ಎಂದು ನಿರೂಪಿಸುತ್ತಾರೆ" - ಇದರಲ್ಲಿ ಎರಡು ಮಾತಿಲ್ಲ.

ಮುಂದೆ "ಹರಿಯೊಬ್ಬನೆ ಸ್ವತಂತ್ರ ಸತ್ಯ ಇನ್ನುಳಿದದ್ದೆಲ್ಲಾ ಅಧೀನ ಸತ್ಯ ಎನ್ನುವ ಪ್ರತಿಪಾದನೆಯನ್ನು ಕಾಣಬಹುದಾಗಿರುತ್ತದೆ" ಇಲ್ಲಿ ಸ್ವತಂತ್ರ ಸತ್ಯ ಮತ್ತು ಅಧೀನ ಸತ್ಯ ಎಂಬುವು ತತ್ವವಾದದ ಪರಿಭಾಷೆಯಲ್ಲವಾದರೂ ಅದರ ಆಶಯಕ್ಕೆ ಮುಕ್ಕಾಗಿಲ್ಲವಾದ್ದರಿಂದ ಒಪ್ಪಿ ಮುಂದುವರೆಯಬಹುದು. ಅದನ್ನೇ ತತ್ವವಾದದ ಪರಿಭಾಷೆಯಲ್ಲಿ ಹೇಳುವುದಾದರೆ "ಹರಿಯೊಬ್ಬನೇ ಸ್ವತಂತ್ರ, ಮಿಕ್ಕೆಲ್ಲಾ ಹರಿಯ ಅಧೀನ; ಬ್ರಹ್ಮನೂ, ಅವನಿಂದ ಸೃಷ್ಟಿಸಲ್ಪಟ್ಟ ಜಗತ್ತೂ, ಅದರ ಭೇದವೂ ತಾರತಮ್ಯವೂ ಸತ್ಯ." ಇದನ್ನು ಹೀಗೇಕೆ ಮಾರ್ಪಡಿಸಬೇಕಾಯಿತೆಂದರೆ, ಮೇಲಿನ ವಾಕ್ಯದ ಆಶಯ ಅದೇ ಆದರೂ ಸ್ವತಂತ್ರ ಸತ್ಯ ಮತ್ತು ಅಧೀನ ಸತ್ಯವೆಂಬ ಪರಿಭಾಷೆ ತತ್ವವಾದವನ್ನು ಅದ್ವೈತವಾದದತ್ತ ತುಯ್ಯುತ್ತದೆ. ಏಕೆಂದರೆ "ಹರಿ ಸ್ವತಂತ್ರ, ಮಿಕ್ಕಿದ್ದು ಅಧೀನ, ಮತ್ತು ಎರಡೂ ಸತ್ಯ" ಎನ್ನುವುದಕ್ಕೂ "ಹರಿಯು ಸ್ವತಂತ್ರ ಸತ್ಯ, ಮಿಕ್ಕಿದ್ದು ಅಧೀನ ಸತ್ಯ" ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ. ಮೊದಲ ಸಾಲಿನಲ್ಲಿ ನಾವು ವಸ್ತುವಿನ ಸ್ವಾತಂತ್ರ್ಯದ ಬಗೆಗೆ ಮಾತಾಡುತ್ತೇವೆ, ಎರಡನೆಯದರಲ್ಲಿ ಸತ್ಯದ ಸ್ವಾತಂತ್ರ್ಯದ ಬಗ್ಗೆ. ಮಿಕ್ಕಿದ್ದು ಅಧೀನಸತ್ಯ (dependent/conditional truth) ಎಂದುಬಿಟ್ಟರೆ ಸ್ವತಂತ್ರ ಸತ್ಯದ ಮರ್ಜಿಯಲ್ಲಿ ಅಧೀನ ಸತ್ಯವೂ ಮಿಥ್ಯೆಯಾಗಿಬಿಡಬಹುದೆನ್ನುವ ಅಭಿಪ್ರಾಯ ಬಂದುಬಿಡುತ್ತದೆ (ಜಗತ್ತು ಬ್ರಹ್ಮದ ಮಾಯೆ, ಅದರೊಳಗಿರುವವರಿಗೆ ಮಾತ್ರ ಅದು ಸತ್ಯ (ವ್ಯಾವಹಾರಿಕ-ಅಧೀನ ಸತ್ಯ), ಬ್ರಹ್ಮನಿಗಲ್ಲ). ಇದು ಖಂಡಿತಾ ತತ್ವವಾದದ ನಿಲುವಲ್ಲ. ಇಷ್ಟು ಹೇಳಿ ಮುಂದೆ ನೋಡೋಣ:

"ಬ್ರಹ್ಮವೊಂದೇ ಸತ್ಯ ಜಗತ್ತು ಮಿಥ್ಯೆ ಎನ್ನುವ ಶಂಕರರ ಅದ್ವೈತಕ್ಕೂ ಹರಿಯೊಬ್ಬನೇ (ಸಗುಣ ಬ್ರಹ್ಮ) ಸತ್ಯ ಉಳಿದುದೆಲ್ಲವೂ ಅನಿತ್ಯ ಅಥವಾ ಅಧೀನ ಸತ್ಯ (ಅಸ್ವತಂತ್ರ ಸತ್ಯ) ಮತ್ತು ಹರಿಯಿಂದಲೇ ಜಗತ್ತು ನೆಡೆಯುವುದು ಎನ್ನುವಾಗ 'ಜಗತ್ತು' ಕೂಡಾ ಹರಿಯ ಮಾಯೆಯೇ ಎನ್ನುವುದು ನಿರೂಪಿತವಾಗುತ್ತದೆ ಮತ್ತು ಹೆಚ್ಚು ವ್ಯತ್ಯಾಸವೂ ಕಾಣದಾಗುತ್ತದೆ" - ಇದು ಹೇಗೆ?

"ಹರಿಯೊಬ್ಬನೇ (ಸಗುಣಬ್ರಹ್ಮದ ವಿಷಯವನ್ನು ಮುಂದೆ ಮಾತಾಡೋಣ) ಸತ್ಯ, ಉಳಿದುದೆಲ್ಲವೂ ಅನಿತ್ಯ (ಹಿಂದಿನ ಅಧೀನಸತ್ಯವು ಇಲ್ಲಿ ಅನಿತ್ಯವೆಂದು ಕರೆಯಲ್ಪಟ್ಟಿತು)" ಎಂದಾಗ ಅದು ಹರಿಯ ಮಾಯೆಯೆಂದು ಎಲ್ಲಿ ನಿರೂಪಿತವಾಯಿತು? ಅನಿತ್ಯವೆಂದರೆ ಕ್ಷಣಿಕ (not-eternal, but mortal); ಕ್ಷಣಿಕ ಹೌದು, ಆದರೆ ಮಾಯೆಯೇ? ನಡೆಯುವಾಗ ಎಡವಿ ಬಿದ್ದರೆ ನೋವು ಕ್ಷಣಿಕ, ಅನಿತ್ಯ, ಆದರೆ ಅದು ಮಾಯೆಯಲ್ಲವಲ್ಲ!

ಮತ್ತೆ ಹರಿಯಿಂದಲೇ ಜಗತ್ತು ನಡೆಯುವುದು ಎನ್ನುವಾಗ ಜಗತ್ತು ಹರಿಯ ಮಾಯೆಯೆಂದು ನಿರೂಪಿತವಾಗದು? ಹೆಚ್ಚೆಂದರೆ ಅದನ್ನು ಹರಿಯ ಲೀಲೆಯೆನ್ನಬಹುದಲ್ಲವೇ? ಬ್ರಹ್ಮನ ಲೀಲಾಮಾತ್ರದಿಂದ ಜಗತ್ತು ಸೃಷ್ಟಿಯಾಯಿತು ಎನ್ನುವುದು ಉಭಯ ದರ್ಶನಗಳೂ ಒಪ್ಪುವ ವಿಚಾರ. ಆದರೆ ಈ ಲೀಲಾಮಾತ್ರ ಸೃಷ್ಟಿ ಮಾಯಾಸೃಷ್ಟಿಯೋ ನೈಜವೋ ಎಂಬಲ್ಲಿಯೇ ತಕರಾರು. ಇಲ್ಲಿ ಜಗನ್ನಾಥದಾಸರ ಹರಿಕಥಾಮೃತಸಾರದಿಂದ ಒಂದು ಸಾಲು ನೆನಪಿಗೆ ಬರುತ್ತದೆ "ಏನು ಕರುಣಾನಿಧಿಯೊ ಹರಿ ಮತ್ತೇನು ಭಕ್ತಾಧೀನನೋ ಇನ್ನೇನು ಈತನ ಲೀಲೆ ಇಚ್ಛಾಮಾತ್ರದಲೆ ಜಗವ ತಾನೆ ಸೃಜಿಸುವ ಪಾಲಿಸುವ ನಿರ್ಮಾಣ ಮೊದಲಾದಖಿಲ ಲೋಕಸ್ಥಾನದಲಿ ತನ್ನವರನಿಟ್ಟಾನಂದ ಪಡಿಸುವನು"

ಜಗತ್ಸತ್ಯತ್ವವನ್ನು ವ್ಯಾವಹಾರಿಕ ಸ್ತರದಲ್ಲಿ ಶಂಕರರರೂ ಒಪ್ಪುವರಾದರೂ ಪರಮಾರ್ಥದಲ್ಲಿ ಅದು ಮಾಯೆಯೇ ಸರಿ. ಆದರೆ ಮಧ್ವರ ನಿಲುವೋ, ಜಗತ್ತು ಸತ್ಯವಷ್ಟೇ ಅಲ್ಲ, ನಿತ್ಯವೂ - ಅದರ ರೂಪ ಬದಲಾಗಬಹುದು, ಎಲ್ಲವೂ ನಾಶಹೊಂದಿ ಪರಮಾತ್ಮನಲ್ಲಿ ಅಡಗಬಹುದು, ಆದರೆ ಮಾಯವಾಗದು. ಬೀಜರೂಪದಲ್ಲಾದರೂ ಅದರ ಅಸ್ತಿತ್ವವಿದ್ದೇ ಇರುತ್ತದೆ. ಎಂದಮೇಲೆ ಜಗನ್ಮಿಥ್ಯಾತ್ವ ಮತ್ತು ಸತ್ಯತ್ವಗಳ ನಡುವಿನ ಸಮನ್ವಯವಿರಲಿ, ಹೋಲಿಕೆಯಾದರೂ ಹೇಗೆ?

ಇನ್ನು ಆಚಾರ್ಯರಿಬ್ಬರೂ "ಒಪ್ಪುವ" ಬ್ರಹ್ಮಸತ್ಯತ್ವದ ವಿಷಯವನ್ನೊಂದಿಷ್ಟು ನೋಡೋಣ. ಅದಾದರೂ ನಿರ್ವಿವಾದವೇ ಎಂದರೆ, ಅಲ್ಲವೆಂದೇ ಹೇಳಬೇಕಾಗುವುದು. "ಒಪ್ಪಿಗೆ" ವಾಕ್ಯದ ಮಟ್ಟದಲ್ಲಷ್ಟೇ! ವಾಕ್ಯಾರ್ಥದ ಮಟ್ಟಕ್ಕಿಳಿದರೆ ಅಲ್ಲೂ ತಕರಾರೇ! ಶಂಕರರ ಪ್ರಕಾರ ಬ್ರಹ್ಮನು ನಿರ್ಗುಣ, ನಿರಾಕಾರ, ನಿರುಪಾಧಿಕ. ಗುಣ, ಆಕಾರ, ಉಪಾಧಿ ಎಲ್ಲವೂ ಜೀವಕ್ಕೆ ಮಾತ್ರ. ಆದರೆ ಈಗಾಗಲೇ ಜೀವನು ಪರಬ್ರಹ್ಮಸ್ವರೂಪಿಯೆಂದೂ ಪರಬ್ರಹ್ಮನು ನಿರ್ಗುಣ, ನಿರಾಕಾರ, ನಿರುಪಾಧಿಕನೆಂದೂ ಒಪ್ಪಿಬಿಟ್ಟಿರುವುದರಿಂದ, ಜೀವನಲ್ಲಿ ಕಾಣುವ ಈ ಗುಣ, ಆಕಾರ, ಉಪಾಧಿಗಳೆಲ್ಲಾ ಬರೀ ತೋರಿಕೆಯೆಂದೂ ಮಾಯೆಯೆಂದೂ ಹೇಳಬೇಕಾಗುವುದು - ಇದು ತರ್ಕ. ಹಾಗೆಂದಮಾತ್ರಕ್ಕೆ ಅದ್ವೈತಸಾಧನೆಯಲ್ಲಿ ಬ್ರಹ್ಮನ ಸಗುಣೌಪಾಸನೆಯಿಲ್ಲವೆಂದಲ್ಲ. ಗುಣ, ಆಕಾರ, ಉಪಾಧಿಭರಿತವಾದ ಜೀವಕ್ಕೆ ಅವೆಲ್ಲಾ ಮಾಯೆಯೆಂಬ ಜ್ಞಾನವಾಗದೆ ನಿರ್ಗುಣದ ಅರಿವು ಸಾಧ್ಯವಿಲ್ಲ. ಅದುವರೆಗೂ ಜೀವಕ್ಕೆ ತನ್ನ ಉಪಾಧಿಗನುಗುಣವಾಗಿ ಸಗುಣೌಪಾಸನೆಯೇ ಮಾರ್ಗ. ಭಕ್ತಿ ಇದಕ್ಕೆ ಸಾಧನ. ಇದರಿಂದ ಚಿತ್ತಶುದ್ಧಿ, ತನ್ಮೂಲಕ ಜ್ಞಾನಾರ್ಹತೆ, ಜ್ಞಾನ, ಮುಂದೆ ನಿರ್ಗುಣೋಪಾಸನೆ - ಇದು ಶಂಕರರ ಮಾರ್ಗ. ಇದಕ್ಕೆ ಮಧ್ವರ ಆಕ್ಷೇಪಣೆಯೋ ಎಂದರೆ, ಗುಣ, ಆಕಾರ, ಉಪಾಧಿಗಳೇನೂ ಇಲ್ಲದ ಬ್ರಹ್ಮನನ್ನು ಏನೆಂದು ನಿರ್ದೇಶಿಸುವುದು? "ಇಲ್ಲ"ವೆಂದೇ? ಇದು ಆತ್ಯಂತಿಕವಾಗಿ ಬ್ರಹ್ಮನೂ ಇಲ್ಲವೆಂದೇ ಹೇಳಿದಂತಲ್ಲವೇ? ಇದಕ್ಕೆ ಪ್ರತಿಯಾಗಿ ಮಧ್ವರ ಪರಿಕಲ್ಪನೆಯೆಂದರೆ, ಬ್ರಹ್ಮ ಗುಣರಹಿತನಲ್ಲ, ನಿರಾಕಾರನಲ್ಲ, ಉಪಾಧಿರಹಿತನಲ್ಲ; ಹಾಗೆಯೇ ಆತ್ಮನೂ ಗುಣ/ಆಕಾರ/ಉಪಾಧಿರಹಿತನಲ್ಲ. ಹಾಗಿದ್ದರೆ ಬ್ರಹ್ಮನಿಗೂ ಜೀವನಿಗೂ ವ್ಯತ್ಯಾಸವೇನು? ಜೀವನ ಗುಣ/ಆಕಾರ/ಉಪಾಧಿಗಳು ಸಂಪೂರ್ಣವೂ ಕಳಂಕರಹಿತವೂ ಅಲ್ಲ. ಅದಕ್ಕೆ ಅಪೂರ್ಣತ್ವವಿದೆ, ದೋಷಬಾಧೆಯಿದೆ. ಆದರೆ ಬ್ರಹ್ಮನೋ, ಸರ್ವದೋಷವಿವರ್ಜಿತ. "ಅನಂತಕಲ್ಯಾಣಗುಣ ಪರಿಪೂರ್ಣ, ಕ್ಷೀರಾಬ್ಧಿಶಾಯಿ, ನಿರ್ದೋಷ ಜ್ಞಾನಾನಂದಾತ್ಮಕ ವಿಷ್ಣುರ್ಮೇ ಸ್ವಾಮಿನ್" ಎಂದೇ ನಿರ್ದೇಶನ. ಗುಣಪೂರ್ಣನಾದ್ದರಿಂದ ಈತನಿಗೊಂದು ಹೆಸರಿದೆ, ಅದೇ ಹರಿ; ಅವನಿಗೊಂದು ರೂಪ ಕೂಡ ಇದೆ. ಹರಿಯ ರೂಪಾತಿಶಯಗಳ, ದೇಹದ ಅಂಗಾಂಗಗಳ ವರ್ಣನೆಗೆಂದೇ ಮಧ್ವಾಚಾರ್ಯರು ತಮ್ಮ ದ್ವಾದಶಸ್ತೋತ್ರದ ಇಡೀ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ.

ಆದ್ದರಿಂದ ಕೇವಲ ಕೆಲವೇ ಕೆಲವು ಗೌಣ ವಿಷಯಗಳ ಬಗೆಗೆ ಬಿಟ್ಟರೆ ಆಚಾರ್ಯದ್ವಯರಲ್ಲಿ (ಅಥವ ಆಚಾರ್ಯತ್ರಯರಲ್ಲಿಯೂ) ಕಂಡುಬರುವುದು ಅಡಿಯಿಂದ ಮುಡಿಯವರೆಗೂ ಭಿನ್ನತೆಯೇ! ಇದರರ್ಥ ಯಾರು ಸರಿ ಯಾರು ತಪ್ಪೆಂದು ಚರ್ಚಿಸಬೇಕೆಂದೋ ನಿರ್ಧರಿಸಬೇಕೆಂದೋ ಅಲ್ಲ, ಕೇವಲ ಹೋಲಿಕೆಗಳ ಸ್ಪಷ್ಟತೆಗಾಗಿಯಷ್ಟೇ ಈ ಚರ್ಚೆ.

ಇದು ಲೇಖನದಲ್ಲಿನ ಹೋಲಿಕೆಗಳ ವಿಷಯದ ಮಾತಾಯಿತು. ಇನ್ನು ಲೇಖನದಲ್ಲೇ ಒಡಮೂಡಿರುವ ಮತ್ತೊಂದು ವಿಚಾರದ ಬಗ್ಗೆ ನನ್ನ ಅನಿಸಿಕೆಗಳನ್ನು ಮಂಡಿಸುವೆ. ಅದೆಂದರೆ ಅನಿತ್ಯ-ಮಿಥ್ಯ ವಿಚಾರ. ಮೊದಲೇ ಚರ್ಚಿಸಿದಂತೆ ಅನಿತ್ಯವು ಮಿಥ್ಯೆಯಾಗಬೇಕಿಲ್ಲ ಅಲ್ಲವೇ? ಲೇಖನವೂ "'ಅನಿತ್ಯ' ಎನ್ನುವುದೇನೋ ಸರಿ ಆದರೆ, ಮಿಥ್ಯೆ ಎನ್ನುವುದು ಎಷ್ಟು ಸರಿ?" ಎಂದು ಪ್ರಶ್ನೆಯನ್ನೇನೋ ಕೈಗೆತ್ತಿಕೊಳ್ಳುತ್ತದೆ, ಆದರೆ ಉತ್ತರ ಮನದಟ್ಟಾಗಲಿಲ್ಲ.

"ಆತ್ಮಾಭ್ಯಾಸಿಯು ಅನಿತ್ಯವಾದ ಜಗತ್ತನ್ನು ನೆಚ್ಚಿ ಕುಳಿತರೆ ತನ್ನ ಪರಮಾರ್ಥದ ಉದ್ದೇಶವನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗದು. ಆತನ ಲಕ್ಷ್ಯವೇನಿದ್ದರೂ ಬ್ರಹ್ಮದೆಡೆಗೆ ಮಾತ್ರ ಇರಬೇಕಾಗುತ್ತದೆ. ಹೀಗೆ ಗಟ್ಟಿಯಾಗುತ್ತಾ ಸಾಗಿದಂತೆ ಮೊಟ್ಟಮೊದಲ ವೈರಾಗ್ಯವು(=ಅನಾಸಕ್ತಿ, ತಟಸ್ಥ ಭಾವ) ಹುಟ್ಟುತ್ತದೆ... ಮಿಥ್ಯಾಪ್ರಂಪಚದ ಗೊಡವೆಯಿಂದ ಪರಮಾರ್ಥ ಚಿಂತನೆಯು ಸಾಧ್ಯವಾಗುವುದಿಲ್ಲ ಎಂಬ ಭಾವವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ ಎಂದುಕೊಳ್ಳಬಹುದು. "ವೈರಾಗ್ಯವು ತಪ್ಪದೆ ಹುಟ್ಟುವುದಕ್ಕಾಗಿ ಬ್ರಹ್ಮವು ನಿತ್ಯ ಜಗತ್ತು ಅನಿತ್ಯ ಎಂದು ಹೇಳದೆ ಬ್ರಹ್ಮವು ಸತ್ಯ ಜಗತ್ತು ಮಿಥ್ಯೆ ಎಂದು ಹೇಳಿದ್ದಾರೆ " ಎಂಬುದು ಸದ್ಗುರು ಚಂದ್ರಶೇಖರ ಭಾರತಿಗಳ ವಿವರಣೆ." ಇದು ಅಷ್ಟು ಸಮರ್ಪಕವೆನಿಸುವುದಿಲ್ಲ. ಕೇವಲ ವೈರಾಗ್ಯವು ತಪ್ಪದೇ ಹುಟ್ಟಬೇಕೆಂಬ ಕಾರಣಕ್ಕಾಗಿ ಅನಿತ್ಯವನ್ನು ಮಿಥ್ಯೆಯೆಂದು ಹೇಳುತ್ತಾರೆಯೇ? ಹಾಗಿದ್ದರೆ ಸತ್ಯವನ್ನೂ ಮಿಥ್ಯೆಯೆಂದೇ ಹೇಳಿಬಿಡಬಹುದಲ್ಲವೇ? ಯಥಾರ್ಥಜ್ಞಾನವೇ ಪರಮಾರ್ಥವೆಂದು ಸಾಧಿಸುವ ಬೋಧಿಸುವ ಮಹಾಮನೀಷಿಗಳು ಕೇವಲ ಮುಮುಕ್ಷುಗಳ ವೈರಾಗ್ಯಲಾಭಕ್ಕಾದರೂ ಅನಿತ್ಯವನ್ನು ಮಿಥ್ಯೆಯೆನ್ನುವ ಆಮಿಷವೊಡ್ಡುವರೇ? ಶ್ರೀ ಶಂಕರರ ವಿಷಯದಲ್ಲಿ ನನಗೇನೋ ಇದು ಮನಸ್ಸಿಗೊಪ್ಪುವ ಮಾತಲ್ಲ. ಬದಲಿಗೆ ಇದರ ಸಮನ್ವಯ ಹೀಗಿರಬಹುದು:

ಸಾಧನಚತುಷ್ಟಯದ ಮೊದಲ ಸಾಧನ, ನಿತ್ಯಾನಿತ್ಯವಸ್ತುವಿವೇಕ. ಯಾವುದು ನಿತ್ಯ (eternal) ಮತ್ತು ಯಾವುದು ಅನಿತ್ಯ (mortal). ಬ್ರಹ್ಮನೇನೋ ಸತ್ಯವೂ, ನಿತ್ಯವೂ ಹೌದು (ಸತ್ಯ, ಮತ್ತು ಅನಾದ್ಯನಂತ). ಇದಕ್ಕೆ ವಿರುದ್ಧವಾಗಿ ಜಗತ್ತು ಮಿಥ್ಯೆ, ಮತ್ತು ಅನಿತ್ಯ. ಆದರೆ ಇಲ್ಲಿ ಮಿಥ್ಯೆಯೆಂದುಬಿಟ್ಟಮೇಲೆ ನಿತ್ಯಾನಿತ್ಯದ ಪ್ರಶ್ನೆಯೇ ಏಳುವುದಿಲ್ಲವಲ್ಲ! ಏಕೆಂದರೆ "ಇಲ್ಲ"ದಿದ್ದುದು ನಿತ್ಯವೋ ಅನಿತ್ಯವೋ ಆಗುವುದಾದರೂ ಹೇಗೆ? ಅದೇನಿದ್ದರೂ ಸತ್ಯವಸ್ತುವಿನ ಗೊಡವೆಯಲ್ಲವೇ? ಹೌದು. ಮತ್ತಿದರ ಪರಿಹಾರ? ಜಗತ್ತು ಪರಮಾರ್ಥದಲ್ಲಿ ಮಿಥ್ಯವೇನೋ ಸರಿ, ಆದರೆ ವ್ಯಾವಹಾರಿಕ ಸ್ತರದಲ್ಲಿ (ಜೀವನಿಗೆ ಯಥಾರ್ಥಜ್ಞಾನವಾಗುವವರೆಗಾದರೂ) ಸತ್ಯವೇ ತಾನೆ? ಅಂದಮೇಲೆ ಆ "ಸತ್ಯ"ದ ಪರಿಧಿಯಲ್ಲಿ ವಸ್ತುವು ನಿತ್ಯವೋ ಅನಿತ್ಯವೋ ಎಂಬ ಪ್ರಶ್ನೆಬಂದೇಬರುತ್ತದೆ. ಜೀವನ ಆತ್ಯಂತಿಕ ಗುರಿ ಪರಮಾರ್ಥವಾದ್ದರಿಂದ, ಯಥಾರ್ಥಜ್ಞಾನವಾದೊಡನೆ ಜಗತ್ತಿನ ವ್ಯಾವಹಾರಿಕ ಸತ್ಯದ ಪೊರೆ ಹರಿಯುವುದರಿಂದ ಈ ವ್ಯಾವಹಾರಿಕ ಜಗತ್ತು ನಿತ್ಯವಲ್ಲ, ಬದಲಿಗೆ ಅನಿತ್ಯ. ಬಹುಶಃ ಇದು ಆಚಾರ್ಯ ಶಂಕರರ ನಿಲುವು. ಆದ್ದರಿಂದ ಇದನ್ನು ಹೀಗೆ ಸಂಗ್ರಹಿಸಬಹುದು: ಬ್ರಹ್ಮವು ಸತ್ಯ, ಮತ್ತು ನಿತ್ಯ; ಜಗತ್ತು, ಪರಮಾರ್ಥದಲ್ಲಿ ಮಿಥ್ಯೆಯಾದರೂ ವ್ಯವಹಾರದಲ್ಲಿ ಸತ್ಯ ಆದರೆ ಈ ವ್ಯಾವಹಾರಿಕತೆಯೇ ಮಿಥ್ಯೆಯಾದ್ದರಿಂದ, ಎಂದಿದ್ದರೂ ಹರಿದುಹೋಗುವುದರಿಂದ ಈ ಜಗತ್ತು ಅನಿತ್ಯ. ಆದ್ದರಿಂದ ಈ ಸಂದರ್ಭದಲ್ಲಿ ನಿಜಕ್ಕೂ ಶ್ರೀ ಶಂಕರರ ಉದ್ದೇಶ ನಿತ್ಯಾನಿತ್ಯವಸ್ತುವಿನ ಬಗ್ಗೆ ತಿಳಿಯಪಡಿಸುವುದೇ ಹೊರತು ಮಿಥ್ಯೆಯ ಬಗೆಗಲ್ಲ (ಅದರ ಸಂದರ್ಭವೇ ಬೇರೆ). "ಜಗತ್ತು ಅನಿತ್ಯವೆಂಬುದನ್ನು ಮೊದಲು ಅರಿತುಕೋ, ಮುಂದಿನ ಅರಿವು ಆಮೇಲಾಗಲಿ" ಇದು ಶಂಕರರ ಆಶಯವಿರಬೇಕು; ಆದ್ದರಿಂದಲೇ ಇದನ್ನು "ನಿತ್ಯಾನಿತ್ಯವಸ್ತುವಿವೇಕ"ವೆಂದಿದ್ದಾರೆ, ತಪ್ಪಿದ್ದರೆ ದಯವಿಟ್ಟು ತಿಳಿಯಪಡಿಸಬೇಕೆಂದು ಕೋರುತ್ತೇನೆ.

ಅನುಬಂಧ:
ಇನ್ನು ಕೊನೆಯದಾಗಿ, ಲೇಖನದಲ್ಲಿ ಪ್ರಾಸ್ತಾವಿಕವಾಗಿ ಮಾಧ್ವಪ್ರಮೇಯಗಳ ಬಗ್ಗೆ ವಿವರಿಸುವಲ್ಲಿ ಈ ಕೆಳಕಂಡ ಶ್ಲೋಕವನ್ನು ಉದಹರಿಸಲಾಗಿದೆ.

ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತ್ತ್ವತೋ
ಭೇದೋ ಜೀವಗಣಾಃ ಹರೇರನುಚರಾಃ ನೀಚೋಚ್ಛಭಾವಂ ಗತಾಃ|
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿ ತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ||

ಇದಕ್ಕೆ ತುಸು ವಿವರಣೆ ನೀಡಬೇಕೆನ್ನಿಸಿತು. ವಿವರಣೆ ಇಲ್ಲಿದೆ:

ಮಾಧ್ವತತ್ವದ ಒಂಬತ್ತೂ ಪ್ರಮೇಯಗಳನ್ನು ಸಾರಭೂತವಾಗಿ ಮಂಡಿಸುವ ಈ ಶ್ಲೋಕದ ಕರ್ತೃ ಹರಿದಾಸಸಾಹಿತ್ಯದ ಹರಿಕಾರರೂ, ಕವಿಗಳೂ ಸ್ವತಃ ಪ್ರಕಾಂಡ ಪಂಡಿತರೂ ಆದ ಶ್ರೀ ವ್ಯಾಸರಾಜರು. ಈ ಶ್ಲೋಕದ ಅರ್ಥ/ಅನ್ವಯ ಹೀಗಿದೆ:

ಶ್ರೀಮನ್ ಮಧ್ವಮತೇ;

  • ಹರಿಃ ಪರತರಃ
  • ಸತ್ಯಂ ಜಗತ್
  • ತತ್ತ್ವತೋ ಭೇದಃ
  • ಜೀವಗಣಾಃ ಹರೇರನುಚರಾಃ
  • ನೀಚೋಚ್ಛ ಭಾವಂ ಗತಾಃ
  • ಮುಕ್ತಿಃ ನೈಜ ಸುಖಾನುಭೂತಿಃ, ಅಮಲಾ
  • ಭಕ್ತಿಶ್ಚ ತತ್ಸಾಧನಂ
  • ಅಕ್ಷಾದಿ ತ್ರಿತಯಂ ಹಿ ಪ್ರಮಾಣಂ
  • ಅಖಿಲಾಮ್ನಾಯೈಕ ವೇದ್ಯೋ ಹರಿಃ

ಇದರ ಆಧಾರದಮೇಲೆ ಮಧ್ವಮತವನ್ನು ಸಂಗ್ರಹಿಸಿ ಹೇಳಬಹುದಾದರೆ,

  • ಹರಿಯೇ ಪರದೈವ;
  • ಜಗತ್ತು ಸತ್ಯ;
  • ಭೇದವು ಬ್ರಹ್ಮ-ಜಗತ್ತುಗಳ ಸ್ವಭಾವ (ತತ್ವ)ದಲ್ಲೇ ಇದೆ. ಆಚಾರ್ಯರು ಪಂಚಭೇದಗಳನ್ನು ನಿರೂಪಿಸುತ್ತಾರೆ ಬ್ರಹ್ಮ-ಜೀವ, ಬ್ರಹ್ಮ-ಜಡ, ಜೀವ-ಜೀವ, ಜೀವ-ಜಡ ಮತ್ತು ಜಡ-ಜಡ;
  • ಸಕಲಜೀವರೂ ಹರಿಯ ಅನುಚರರು (ಇಲ್ಲಿ ಅನುಚರ ಅನ್ನುವುದನ್ನು ಅದರ ನಿಜ ಅರ್ಥದಲ್ಲಿ ಬಳಸಲಾಗಿದೆ, ಹರಿಯ ಅನುವರ್ತಿ, ವಶವರ್ತಿ, ಅಧೀನ ಎಂಬ ಅರ್ಥದಲ್ಲಿ, ಜೊತೆಗಾರರು ಎಂಬರ್ಥದಲ್ಲಲ್ಲ);
  • ಮೇಲೆ ಹೇಳಿದ ಬ್ರಹ್ಮ-ಜೀವ, ಬ್ರಹ್ಮ-ಜಡ, ಜೀವ-ಜೀವ, ಜೀವ-ಜಡ ಮತ್ತು ಜಡ-ಜಡಗಳಲ್ಲಿ ಕೇವಲ ಭೇದವಷ್ಟೇ ಅಲ್ಲ ತಾರತಮ್ಯ ಕೂಡ ಇದೆ; ಒಂದು ಮತ್ತೊಂದಕ್ಕೆ ಸಮನಲ್ಲ (ಅಸಮಭವ ಕಾಗಿನೆಲೆಯಾದಿಕೇಶವರಾಯ - ಕನಕದಾಸರು);
  • ಕುಂದಿಲ್ಲದ (flawless) ನೈಜ ಸುಖಾನುಭೂತಿಯೇ ಮುಕ್ತಿ (ಇಲ್ಲಿ ನೈಜ ಎನ್ನುವುದನ್ನು ಜೀವದ ಸ್ವಭಾವಕ್ಕೆ ನಿಜವಾದ (ತಕ್ಕುದಾದ) ಎಂದು ಅರ್ಥೈಸಲಾಗುತ್ತದೆ. ಅಂದರೆ ಮುಕ್ತಿ ಸಹ ಎಲ್ಲ ಜೀವರಿಗೂ ಒಂದೇ ಅಲ್ಲ, ಬೇರ‍ೆಬೇರೆ - ಅದರ ನೆಲೆ ಬೇರೆ, ಆಳ-ಅಗಲಗಳು ಬೇರೆ, ತೀವ್ರತೆ ಬೇರೆ ಇತ್ಯಾದಿ) ಆದ್ದರಿಂದ ಮೇಲೆ ಹೇಳಿದ ಭೇದವೂ ತಾರತಮ್ಯವೂ ಮುಕ್ತಿಯಲ್ಲೂ ಇರುತ್ತದೆ. ಜೀವರು ಮಾತ್ರ ಮುಕ್ತಿಯೋಗ್ಯರು, ಜಡವಲ್ಲ. ಮತ್ತೆ ಜೀವರಲ್ಲಿ ಅವರವರ ಸ್ವಾಭಾವಿಕ ಭೇದಕ್ಕನುಗುಣವಾಗಿ (ತತ್ತ್ವತೋ ಭೇದಃ) ಅವರವರ ಮುಕ್ತಿಯೋಗ್ಯತೆಯೂ ನಿರ್ಧರಿತವಾಗುತ್ತದೆ. ಮತ್ತೆ ಇದರಲ್ಲಿ ಸತ್ವ, ರಜಸ್ ತಮೋಗುಣಗಳ ವರ್ಗೀಕರಣ ಬರುತ್ತದೆ, ಮತ್ತು ಅದಕ್ಕನುಗುಣವಾಗಿ ಜೀವವೊಂದು ತಮೋಯೋಗ್ಯವೋ, ನಿತ್ಯಸಂಸಾರಿಯೋ ಅಥವಾ ಮುಕ್ತಿಯೋಗ್ಯವೋ ಇರಬಹುದು ("ಸಾತ್ವರಿಗೆ ಸುಖ; ಸಂಸಾರ ಮಿಶ್ರರಿಗೆ; ಅಧಮ ಜನರಿಗಪಾರ ದುಃಖಗಳೀವ" - ಹರಿಕಥಾಮೃತಸಾರ, ಜಗನ್ನಾಥದಾಸರು);
  • ಹೀಗೆ ಮುಕ್ತಿಯೋಗ್ಯವಾದ ಜೀವಿಗೆ ಮುಕ್ತಿ ತಾನೇತಾನಾಗಿ ದೊರೆಯುವುದಿಲ್ಲ. ಅದಕ್ಕೆ ಹರಿಕೃಪೆ ಬೇಕು. ಅದಕ್ಕಿರುವ ಮಾರ್ಗವೆಂದರೆ, ಭಕ್ತಿ (ಹರಿಯ ಗುಣಗಳ ಜ್ಞಾನದಿಂದ ಭಕ್ತಿಯ ಹುಟ್ಟು - ಜ್ಞಾನಚಂದ್ರಿಕೆ ಬೆಳಗೆ ಭಕ್ತಿವಾರಿಧಿಯುಕ್ಕೆ ಮನಚಕೋರವು ವಿಷ್ಣುಪಥದಿ ನಲಿಯೆ; ದೀನಜನಭಯವಡಗೆ ತಾಪತ್ರಯಗಳೋಡೆ ಮಧ್ವೇಂದು ಶ್ರೀಕೃಷ್ಣ ನೋಡಿ ತಾ ನಲಿಯೆ - ವ್ಯಾಸರಾಜರು)
  • ಇದಕ್ಕೆ ಪ್ರಮಾಣವೇನು? ಅಕ್ಷಾದಿ ತ್ರಿತಯಂ ಹಿ. ಅಂದರೆ ಪ್ರತ್ಯಕ್ಷ, ಅನುಮಾನ ಮತ್ತು ಆಗಮಗಳೆಂಬ ಈ ಮೂರೇ ಪ್ರಮಾಣ. ಇಲ್ಲೂ ಆಗಮೈಕಪ್ರಮಾಣವೆನ್ನುವ ಬದಲು ಪ್ರತ್ಯಕ್ಷ ಮತ್ತು ಆಗಮಗಳಿಗೆ ಸಮಾನ ಪ್ರಾಮುಖ್ಯ ಕಲ್ಪಿಸಿದ್ದಾರೆ ಆಚಾರ್ಯರು. ಪ್ರತ್ಯಕ್ಷ ಮತ್ತು ಆಗಮಪ್ರಮಾಣಗಳಲ್ಲಿ ವಿರೋಧವಿರದು ಎಂದು ಅಭಿಪ್ರಾಯ. ಮತ್ತೂ ವಿರೋಧ ಕಂಡುಬಂದರೆ ಲೌಕಿಕ ವಿಷಯಗಳಲ್ಲಿ ಪ್ರತ್ಯಕ್ಷವೂ ಅಲೌಕಿಕ ವಿಷಯಗಳಲ್ಲಿ ಆಗಮವೂ ಪ್ರಾಮುಖ್ಯವನ್ನು ಪಡೆಯುವುದು (ಇದು ನನ್ನ ಊಹೆ, ತಿಳಿದವರು ತಿದ್ದಬೇಕು). ಹಾಗೆ ಯಾವುದೇ ಪ್ರತ್ಯಕ್ಷವಿಷಯವನ್ನೋ ಆಗಮವಾಕ್ಯವನ್ನೋ ಪ್ರಮಾಣವೆಂದು ಒಪ್ಪಿಕೊಳ್ಳುವ ಮೊದಲು ಆ "ಪ್ರಮಾಣ" ಶುದ್ಧವಿರಬೇಕು (ಬೇರೆಬೇರ‍ೆ ಪ್ರತ್ಯಕ್ಷ ಪ್ರಮಾಣಗಳಲ್ಲಿ ವಿರೋಧಾಭಾಸವಿರಬಾರದು; ಹಾಗೇ ಆಗಮವಾಕ್ಯಗಳ "ಪ್ರಮಾಣ"ಗಳಲ್ಲಿ ವಿರೋಧಾಭಾಸವಿರಬಾರದು. ಅಪೌರುಷೇಯವಾದ ವೇದವಾಕ್ಯಗಳಲ್ಲಿ ವಿರೋಧವಿರಲು ಸಾಧ್ಯವಿಲ್ಲ, ಆದರೆ ಮೇಲ್ನೋಟಕ್ಕೆ ಕಾಣಬರುವ ವಿರೋಧಾಭಾಸಗಳನ್ನು ಅನುಮಾನ ಮತ್ತು ಬೇರೆ ಪ್ರಮಾಣಗಳ ಮೂಲಕ ಸಮನ್ವಯಿಸಿಕೊಳ್ಳಬೇಕು, ಸಮನ್ವಯವೊದಗುವಂತೆ ಅರ್ಥೈಸಬೇಕು).
  • ಹರಿಯೇ ಸಕಲ ವೇದಪ್ರತಿಪಾದ್ಯನಾದ, ಸತ್ಯಸ್ವರೂಪನಾದ ಬ್ರಹ್ಮ.

Wednesday, May 11, 2011

ಅರಿವಿನ ದಾರಿ

ಚಿತ್ರಕೃಪೆ: ಅಂತರ್ಜಾಲ
ತೈತ್ತಿರೀಯೋಪನಿಷತ್ತಿನ ಭೃಗುವಲ್ಲಿಯೆಂಬ ಭಾಗದಲ್ಲಿ ಒಂದು ಸುಂದರ ಸಂವಾದವಿದೆ. ವರುಣನ ಮಗನಾದ ಭೃಗು, ಬ್ರಹ್ಮಜ್ಞಾನವನ್ನು ಹೊಂದುವ ಕುತೂಹಲದಿಂದ, ತಂದೆಯ ಬಳಿ ಸಾರಿ ಹೀಗೆ ಕೇಳುತ್ತಾನೆ:

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ" ಸಂಬಂಧದಿಂದ ತಂದೆಯೇ ಹೌದಾದರೂ ಕಾರ್ಯನಿಮಿತ್ತ ಗುರು, ವರುಣ. ಅದರಿಂದ ಗುರುವನ್ನು ಸಂಬೋಧಿಸುವ ರೀತಿ "ಭಗವನ್... "

ವಿಷಯವೋ ಅತಿ ಗಹನ. ಭೃಗುವಿನದ್ದು ಒಂದು ಸಾಲಿನ ಪ್ರಶ್ನೆ. ಆದರೆ ಉತ್ತರವೋ? ವರುಣನಾದರೋ ಅದು ಯಾವ ಸಿದ್ಧ ಉತ್ತರ ಹೇಳಿಯಾನು?

"ಮಗೂ, ಅನ್ನ, ಪ್ರಾಣ, ಕಣ್ಣು, ಕಿವಿ, ಮನಸ್ಸು ಮಾತು, ಇವು ಬ್ರಹ್ಮನನ್ನು ತಿಳಿಯುವ ಸಾಧನಗಳು" ಒಗಟಿನ ರೀತಿಯಲ್ಲಿ ನುಡಿಯುತ್ತಾನೆ ವರುಣ "ಯಾವುದರಿಂದ ಸಕಲಭೂತಗಳೂ ಜನಿಸುತ್ತವೆಯೋ, ಹೀಗೆ ಹುಟ್ಟಿದವು ಯಾವುದರಿಂದ ಜೀವಿಸುತ್ತವೆಯೋ, ಕೊನೆಗೆ ಯಾವುದನ್ನು ಸೇರಿ ಅದರಲ್ಲೇ ಲೀನವಾಗುತ್ತವೆಯೋ, ಅದನ್ನು ಕುರಿತು ಚಿಂತಿಸು; ಅದೇ ಬ್ರಹ್ಮ"

ಹೀಗೆ ಬ್ರಹ್ಮನನ್ನು ತಿಳಿಯುವ ಸಾಧನಗಳನ್ನೂ ಬ್ರಹ್ಮನ ಸುಳುಹನ್ನೂ ತಂದೆಯಿಂದ ಅರಿತ ಭೃಗು ಈ ಕುರಿತು ಚಿಂತಿಸಲು (ತಪಸ್ಸನ್ನಾಚರಿಸಲು) ನಿಶ್ಚಯಿಸಿ ಹಿಂದಿರುಗುತ್ತಾನೆ. ಕೆಲಕಾಲದ ತಪಸ್ಸಿನಿಂದ ಉತ್ತರವೊಂದು ಮನಸ್ಸಿನಲ್ಲಿ ಮೂಡುತ್ತದೆ: ಅನ್ನವೇ ಬ್ರಹ್ಮ. ಏಕೆಂದರೆ ಸಕಲಭೂತಗಳೂ ಕೇವಲ ಅನ್ನದಿಂದಲೇ ಜನಿಸುತ್ತವೆ, ಹೀಗೆ ಹುಟ್ಟಿದವು ಅನ್ನದಿಂದಲೇ ಜೀವಿಸುತ್ತವೆ. ಕೊನೆಗೆ ಅನ್ನವನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ (ಮತ್ತೊಂದಕ್ಕೆ ಅನ್ನವಾಗುತ್ತವೆ - ಆಹಾರ ಸರಪಳಿ ಅದೇ ಅಲ್ಲವೇ? ಅನ್ನವಿಲ್ಲದೇ ಜಗತ್ತಿಲ್ಲ; ಜಗತ್ತೇ ಅನ್ನಮಯ!). ಆದ್ದರಿಂದ ಅನ್ನವೇ ಬ್ರಹ್ಮ ಇರಬೇಕು. ಹೀಗೆ ತರ್ಕಿಸಿ ಭೃಗು ಮತ್ತೆ ತಂದೆಯ ಬಳಿ ಬರುತ್ತಾನೆ, ಅದೇ ಪ್ರಶ್ನೆ ಕೇಳುತ್ತಾನೆ:

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ"

ಅದಕ್ಕೆ ವರುಣನ ಉತ್ತರ "ಮಗೂ, ತಪಸ್ಸಿನಿಂದ ಬ್ರಹ್ಮನನ್ನು ತಿಳಿ, ತಪಸ್ಸೇ ಬ್ರಹ್ಮ"

ಭೃಗುವಿಗೆ ತನ್ನ ತರ್ಕದಲ್ಲೇನೋ ಕೊರತೆಯಿರಬಹುದೆಂದು ಅರಿವಾಗುತ್ತದೆ. ತಂದೆ ಹೇಳಿದ ಬ್ರಹ್ಮನ ಲಕ್ಷಣಗಳೆಲ್ಲಾ ಅನ್ನಕ್ಕಿದ್ದರೂ, ಅದಕ್ಕೆ ಹುಟ್ಟೂ ಇದೆಯಲ್ಲವೇ? ಆದರೆ ಬ್ರಹ್ಮನಾದರೋ ಅನಾದಿ! ಸರಿ, ಮತ್ತೆ ತಪಸ್ಸನ್ನು ಮುಂದುವರೆಸಲು ನಿಶ್ಚಯಿಸಿ ಹಿಂದಿರುಗುತ್ತಾನೆ ಭೃಗು.

ಕೆಲಕಾಲದ ತಪಸ್ಸಿನಿಂದ ಹೊಸದೊಂದು ಉತ್ತರ ಮೂಡುತ್ತದೆ: ಪ್ರಾಣವೇ ಬ್ರಹ್ಮ. ಏಕೆಂದರೆ ಸಕಲಭೂತಗಳೂ ಕೇವಲ ಪ್ರಾಣದಿಂದಲೇ ಜನಿಸುತ್ತವೆ, ಹೀಗೆ ಹುಟ್ಟಿದವು ಪ್ರಾಣದಿಂದಲೇ ಜೀವಿಸುತ್ತವೆ. ಕೊನೆಗೆ ಪ್ರಾಣವನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ. ಆದ್ದರಿಂದ ಪ್ರಾಣವೇ ಬ್ರಹ್ಮ ಇರಬೇಕು. (ಉಸಿರಿಲ್ಲದೇ ಜೀವವೊಂದು ಹುಟ್ಟುವುದು, ಬದುಕುವುದಾದರೂ ಹೇಗೆ? ಮತ್ತು ಕೊನೆಗೆ ಅದು ವಿರಾಟ್ ಸ್ವರೂಪಿಯಾದ ಪ್ರಾಣದಲ್ಲಲ್ಲವೇ ಲೀನವಾಗಬೇಕು?). ಈ ಹೊಸ ಉತ್ತರದೊಡನೆ ಭೃಗು ಮತ್ತೆ ತಂದೆಯ ಬಳಿ ಬರುತ್ತಾನೆ,

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ"

ಮತ್ತೆ ವರುಣನಿಂದ ಅದೇ ಉತ್ತರ "ಮಗೂ, ತಪಸ್ಸಿನಿಂದ ಬ್ರಹ್ಮನನ್ನು ತಿಳಿ, ತಪಸ್ಸೇ ಬ್ರಹ್ಮ" ಮತ್ತೆ ವರುಣನು ಹೀಗಂದದ್ದು ಕೇಳಿ, ಮತ್ತೂ ತಪಸ್ಸನ್ನು ಮುಂದುವರೆಸಲು ನಿಶ್ಚಯಿಸಿ ಹಿಂದಿರುಗುತ್ತಾನೆ ಭೃಗು.

ಮತ್ತೆ ಕೆಲಕಾಲದ ತಪಸ್ಸಿನಿಂದ ಅವನಿಗನ್ನಿಸುತ್ತದೆ; ಅರೆ, ಎಲ್ಲದರ ಹುಟ್ಟು ಬದುಕು ನಾಶಕ್ಕೆ ಮನಸ್ಸೇ ಕಾರಣವಲ್ಲವೇ? ಏಕೆಂದರೆ ಕೇವಲ ಮನಸ್ಸಿನ ಕಾರಣದಿಂದಲೇ ಸಕಲಭೂತಗಳೂ ಜನಿಸುತ್ತವೆ, ಹೀಗೆ ಹುಟ್ಟಿದವು ಮನೋಮಾತ್ರದಿಂದಲೇ ಜೀವಿಸುತ್ತವೆ. ಕೊನೆಗೆ ಮನಸ್ಸನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ. ಆದ್ದರಿಂದ ಮನಸ್ಸೇ ಬ್ರಹ್ಮ! (ಕೇವಲ ಅನ್ನ, ಪ್ರಾಣಗಳಿದ್ದು ಮನಸ್ಸಿನ ಸಂಕಲ್ಪವಿಲ್ಲದಿದ್ದರೆ ಯಾವುದು ಸಾಧ್ಯ!) ಮತ್ತೆ ತಂದೆಯ ಬಳಿ ಸಾರುತ್ತಾನೆ ಭೃಗು; ಮತ್ತೆ ಅದೇ ಪ್ರಶ್ನೆ:

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ"

ಆದರೆ ಉಹುಂ... ವರುಣನಿಂದ ಮತ್ತೆ ಅದೇ ಉತ್ತರ! "ಮಗೂ, ತಪಸ್ಸಿನಿಂದ ಬ್ರಹ್ಮನನ್ನು ತಿಳಿ, ತಪಸ್ಸೇ ಬ್ರಹ್ಮ"

ಮತ್ತೆ ತಪಸ್ಸು! ಸರಿ, ಮತ್ತೂ ತಪಸ್ಸನ್ನು ಮುಂದುವರೆಸಲು ನಿಶ್ಚಯಿಸಿ ಹಿಂದಿರುಗುತ್ತಾನೆ ಭೃಗು.

ಕೆಲಕಾಲದ ತಪಸ್ಸಿನನಂತರ ಮತ್ತೊಂದು ಹೊಳಹು: ಅನ್ನ, ಪ್ರಾಣ, ಮನಸ್ಸುಗಳಿದ್ದರೂ ತನ್ನ ಸುತ್ತೆಲ್ಲ ನಡೆಯುವ ವ್ಯಾಪಾರದ ಹಿಂದೆ ವಿಶೇಷವಾದ ಜ್ಞಾನವೊಂದಿರಲೇಬೇಕಲ್ಲವೇ? ಕೇವಲ ಈ ವಿಜ್ಞಾನದ ಕಾರಣದಿಂದಲೇ ಸಕಲಭೂತಗಳೂ ಜನಿಸುತ್ತವೆ, ಹೀಗೆ ಹುಟ್ಟಿದವು ವಿಜ್ಞಾನದ ಬಲದಿಂದಲೇ ಜೀವಿಸುತ್ತವೆ. ಕೊನೆಗೆ ವಿಜ್ಞಾನವನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ. (ಕೇವಲ ಸಂಕಲ್ಪಮಾತ್ರದಿಂದ ಎಲ್ಲವೂ ನಡೆಯುತ್ತವೆಯೇ? ಸೃಷ್ಟಿ, ಸ್ಥಿತಿ ಲಯಗಳಿಗೂ ಅದೊಂದು ಕ್ರಿಯೆಯಿದೆ, ಕ್ರಮವಿದೆ, ಅದರ ಹಿಂದೊಂದು ವಿಜ್ಞಾನವಿದೆಯಲ್ಲವೇ?) ಆದ್ದರಿಂದ ಬ್ರಹ್ಮನೆಂದರೆ ಸರ್ವವ್ಯಾಪಿಯಾದ ಈ ವಿಜ್ಞಾನವೇ ಹೌದು! ಹೀಗೆ ತಿಳಿದು ಭೃಗು ಮತ್ತೆ ತಂದೆಯ ಬಳಿ ಬರುತ್ತಾನೆ, ಮತ್ತೆ ಅದೇ ಪ್ರಶ್ನೆ!

ಇಲ್ಲ, ಈ ಬಾರಿಯೂ ವರುಣನ ಉತ್ತರ ಅದೇ!! ಬಂದದಾರಿಗೆ ಸುಂಕವಿಲ್ಲವೆಂಬಂತೆ ಮರಳುವ ಭೃಗು ಮತ್ತೆ ತಪಸ್ಸನ್ನು ಮುಂದುವರೆಸುತ್ತಾನೆ. ಸಾಕಷ್ಟು ತಪಸ್ಸಿನ ನಂತರ ಕೊನೆಗೊಮ್ಮೆ ಅವನಿಗೆ ಹೊಳೆಯುತ್ತದೆ, ಜಗತ್ತಿನ ಎಲ್ಲದರ ಮೂಲ, ಆಧಾರ, ಗಮ್ಯ ಏನು? ಆನಂದವಲ್ಲವೇ? ಕೇವಲ ಆನಂದದ ಕಾರಣದಿಂದಲೇ ಸಕಲಭೂತಗಳೂ ಜನಿಸುತ್ತವೆ. ಹೀಗೆ ಹುಟ್ಟಿದವು ಆನಂದಕ್ಕಾಗಿಯೇ ಜೀವಿಸುತ್ತವೆ, ಕೊನೆಗೆ ಪರಮಾನಂದದಲ್ಲಿ ಲೀನವಾಗುತ್ತವೆ ಅಲ್ಲವೇ? ಆನಂದದ ಅಪೇಕ್ಷೆಯಿಲ್ಲದೇ ಸೃಷ್ಟಿಕ್ರಿಯೆಯಿಲ್ಲ. ಅದರ ಅವಲಂಬನೆಯಿಲ್ಲದೆಯೇ ಬದುಕಿಲ್ಲ. ಇದೆಲ್ಲವನ್ನೂ ಒಳಗೊಂಡ ಪರಮಾನಂದ (eternal bliss ಅನ್ನೋಣ)ವೊಂದಿದೆ; ಅದು ಸರ್ವವ್ಯಾಪಿ, ಕೊನೆಗೆ ಎಲ್ಲವೂ ಅದರಲ್ಲೇ ಲೀನವಾಗಬೇಕು. ಆದ್ದರಿಂದ ಜಗತ್ತೆಲ್ಲವೂ ಆನಂದಮಯವಲ್ಲವೇ? ಆದ್ದರಿಂದ ಬ್ರಹ್ಮನೆಂದರೆ ಈ ಪರಮಾನಂದವಲ್ಲದೇ ಮತ್ತೇನು?

ಇದು, ವರುಣನಿಂದ ಪ್ರೇರಿತವಾದ, ಭೃಗುವು ಅರಿತ ವಿದ್ಯೆ ("ಸೈಷಾ ಭಾರ್ಗವೀ ವಾರುಣೀ ವಿದ್ಯಾ") ಎನ್ನುತ್ತದೆ ಉಪನಿಷತ್ತು. ಹೃದಯದ ಆಳದಲ್ಲಿ ಪ್ರತಿಷ್ಠಿತವಾದ ಈ "ಬ್ರಹ್ಮ"ನನ್ನು ಯಾವನು ಅರಿಯುತ್ತಾನೋ ಅವನು ಅದೇ ಬ್ರಹ್ಮನಲ್ಲಿ (ಪರಮಾನಂದದಲ್ಲಿ) ನೆಲೆನಿಲ್ಲುತ್ತಾನೆ; ಸ್ವಕೀಯವಾದ ಈ ಆನಂದದ ಹೊರಗುರುತಾಗಿ, ಇಹದಲ್ಲಿ ಅವನು ಅನ್ನವಂತನೂ ಅದನ್ನು ಭೋಗಿಸುವವನೂ ಆಗುತ್ತಾನೆ; ಜನಸಂಪತ್ತಿನಿಂದಲೂ, ಪಶುಸಂಪತ್ತಿನಿಂದಲೂ, ಬ್ರಹ್ಮವರ್ಚಸ್ಸಿನಿಂದಲೂ ಕೂಡಿ ಮಹಾ ಕೀರ್ತಿವಂತನಾಗುತ್ತಾನೆ ಎನ್ನುವುದು ಉಪನಿಷತ್ತಿನ ಮಾತು. ಮುಂದುವರೆಯುವ ಉಪನಿಷತ್ತು ಅನ್ನದ ವಿವಿಧ ಆಯಾಮಗಳನ್ನೂ, ಬ್ರಹ್ಮೌಪಾಸನೆಯ ವಿವಿಧ ರೂಪಗಳನ್ನೂ, ಆತ್ಮಸಾಕ್ಷಾತ್ಕಾರದ ವಿವಿಧ ಮಜಲುಗಳನ್ನೂ ವಿವರಿಸುತ್ತದೆ.

ಮೇಲಿನ ಸಂವಾದದಲ್ಲಿ ಗಮನಸೆಳೆಯುವ ಅಂಶವೆಂದರೆ ಜ್ಞಾನಸಾಧನೆಯಲ್ಲಿ ಚಿಂತನೆಗೆ/ತಪಕ್ಕೆ ಇರುವ ಮಹತ್ವ; ಆರ್ಷೇಯವಾಗಿ ಬಂದದ್ದು ಇದು. ಭೃಗುವು ವರುಣನಬಳಿ ಹೋದಾಗಲೆಲ್ಲಾ ಅವನಿಗೆ ಸಿಗುವ ಉತ್ತರ ಒಂದೇ? "ತಪಸಾ ಬ್ರಹ್ಮ ವಿಜಿಜ್ಞಾಸಸ್ವ..."; ಎಷ್ಟು? "ತಪಸ್ಸೇ ಬ್ರಹ್ಮ" ಎನ್ನುವಷ್ಟು. ಕೊನೆಯಲ್ಲಿ ಭೃಗು ಅರಿಯುವ ಸತ್ಯ ವರುಣನಿಗೆ ಮೊದಲೇ ತಿಳಿದಿದ್ದರೆ ಅದನ್ನು ಆಗಲೇ ಹೇಳಿಬಿಡಬಹುದಿತ್ತಲ್ಲವೇ? ಈ ಪ್ರಶ್ನೆ ಸಹಜ. "Why re-invent the wheel" ಅನ್ನುವ ಯುಗ ನಮ್ಮದು. ಆದರೆ ಸನಾತನ ವಿದ್ಯಾಭ್ಯಾಸದ ರೀತಿ ಅದಲ್ಲ. ಈ ಅಂತಿಮ ಸತ್ಯ ವರುಣನಿಗೇ ಗೊತ್ತಿತ್ತೋ ಅನ್ನುವುದೂ ಬೇರೆಯ ವಿಷಯ. ಹಾಗೊಂದುವೇಳೆ ಅವನಿಗೆ ಗೊತ್ತಿದ್ದೂ ಅದನ್ನು ಅವನೇ ಹೇಳಿದ್ದರೆ, ಅದು ಅವನದೇ ಸತ್ಯವಾಗಿ ಉಳಿಯುತ್ತಿತ್ತೇ ಹೊರತು ಭೃಗುವಿನದಾಗುತ್ತಿರಲಿಲ್ಲ. ಸತ್ಯದ ದಾರಿಯನ್ನಷ್ಟೇ ಗುರು ಸೂಚಿಸಬಲ್ಲ; ಸುಳುಹುಗಳನ್ನು ನೀಡಬಲ್ಲ, ದಾರಿ ತಪ್ಪುವಲ್ಲಿ ತಿದ್ದಬಲ್ಲ, ಆದರೆ ಆ ದಾರಿಯಲ್ಲಿ ಸ್ವತಃ ನಡೆದು ಸತ್ಯವನ್ನು ಕಂಡುಕೊಳ್ಳುವ ಜವಾಬ್ದಾರಿ ಶಿಷ್ಯನದೇ. ಸತ್ಯ ಅವನದಾಗುವುದು ಹಾಗೆ. ಈ ದಾರಿಯಲ್ಲಿ ಕಷ್ಟಗಳೇ ಅವನ ಆಹಾರ. ಬೆಂಬಿಡದ ಛಲ, ಸತ್ಯವಾದಿತ್ವ, ಕಷ್ಟಸಹಿಷ್ಣುತೆಗಳೇ ಅವನ ಕಾಪು. ಬದುಕು-ಸಾವುಗಳ ರಹಸ್ಯವನ್ನರಿಯಲು ಯಮನಿಗೇ ಬೆನ್ನು ಬಿದ್ದ ನಚಿಕೇತನಾಗಲಿ, ತನ್ನ ವಂಶವೇ ಗೊತ್ತಿಲ್ಲದೆಯೂ ಗೊತ್ತಿಲ್ಲವೆಂಬುದನ್ನೇ ನಿರ್ಭೀತಿಯಿಂದ ಹೇಳುವ ಸತ್ಯಕಾಮ ಜಾಬಾಲಿಯಾಗಲೀ, ಗುರುವಿನ ಮಾತಿಗಾಗಿ ತಮ್ಮನ್ನೇ ಕೊಟ್ಟುಕೊಳ್ಳುವ ಉಪಮನ್ಯು ಆರುಣಿಗಳಾಗಲೀ ನಮಗೆ ತಿಳಿಸುವುದು ಇದನ್ನೇ. ಇದು ವಿದ್ಯೆ ಗಳಿಕೆಗೆ ಅರ್ಹತೆ; ಇದು ಅರಿವಿನ ದಾರಿ, ಅನ್ವೇಷಿಗಳ ದಾರಿ, ಋಷಿಗಳ ದಾರಿ, ವೇದಗಳ ದಾರಿ. ಹಾಗೆ ಕಡುಕಷ್ಟದ ಹಾದಿಯಲ್ಲಿ ನಡೆದಾಗಲಷ್ಟೇ ಅವನಿಗೆ ಬ್ರಹ್ಮಸ್ವರೂಪದ ಆನಂದದ ಅನುಭೂತಿ ದೊರಕಬಹುದೇ ಹೊರತು, ಅದನ್ನು ಯಾರೋ ಹೇಳಿಕೊಟ್ಟಾಗಲ್ಲ. ಮರುಭೂಮಿಯಲ್ಲಿ ದೊರಕುವ ಓಯಸಿಸ್ಸಿನ ಬೆಲೆ ಕೂತಲ್ಲೇ ಕೈಚಾಚಿದಾಗ ಸಿಕ್ಕುವ ನೀರಿನ ಬಾಟಲಿಗಿಲ್ಲವಷ್ಟೆ? ಈ ವಿದ್ಯೆ/ಅರಿವು ಬ್ರಹ್ಮಜ್ಞಾನವಿರಬಹುದು, ವೈದ್ಯಕೀಯವಿರಬಹುದು, ವಿಜ್ಞಾನ, ಗಣಿತ, ಅರ್ಥ, ಮತ್ತಾವುದೇ ಶಾಸ್ತ್ರವಿರಬಹುದು, ಇಲ್ಲಿ short cuts, ಗೈಡು, ಟ್ಯುಟೋರಿಲ್ಲುಗಳಿಲ್ಲ, "100% results guaranteed" ಅನ್ನುವ ಬೋರ್ಡುಗಳಿಲ್ಲ, ಸೀಟು, ಡೊನೇಶನ್ನು ವ್ಯವಹಾರಗಳಿಲ್ಲ; ಇಲ್ಲಿ ಗುರು ರಾಜಕೀಯಮಾಡುವುದಿಲ್ಲ (ಕೈಚಾಚಿದರೆ ಅದು ಆಶೀರ್ವದಿಸುವುದಕ್ಕಷ್ಟೇ), ಶಿಷ್ಯ strike ಮಾಡುವುದಿಲ್ಲ, ಅಪ್ಪ-ಅಮ್ಮಂದಿರು ಗುರುಗಳನ್ನು ಜಬರಿಸುವುದೂ ಇಲ್ಲ! ಇರುವುದೆಲ್ಲಾ ಕೇವಲ ವಿದ್ಯೆ, ದಾನ, ಆದಾನ! "ಆಚಾರ್ಯಃ ಪೂರ್ವರೂಪಮ್, ಅಂತೇವಾಸ್ಯುತ್ತರ ರೂಪಮ್, ವಿದ್ಯಾ ಸಂಧಿಃ, ಪ್ರವಚನಗ್ಂ ಸಂಧಾನಮ್"

Sunday, October 4, 2009

ದ್ವೈತಮು ಸುಖಮಾ...

ಸ್ನೇಹಿತರ ವಲಯದಲ್ಲಿ ಈ ವಿಷಯ ಒಮ್ಮೆ ಚರ್ಚೆಗೆ ಬಂತು. ತ್ಯಾಗರಾಜರು ಜನ್ಮತಃ ಅದ್ವೈತಿಗಳಾಗಿದ್ದಾಗ್ಯೂ ತಮ್ಮ ಕೃತಿಗಳಲ್ಲಿ ದ್ವೈತವನ್ನೇ ಎತ್ತಿ ಹಿಡಿದಿದ್ದಾರೆಯೇ?

ಮೊದಲಿಗೆ, ದ್ವೈತ-ಅದ್ವೈತಗಳ ಚರ್ಚೆಯೇ ಆಧ್ಯಾತ್ಮದ ಅತ್ಯುನ್ನತ ಸ್ತರಕ್ಕೆ ಸಂಬಂಧಿಸಿದ್ದು. ಸಾಧಕನು ಆ ಸ್ತರವನ್ನು ಮುಟ್ಟುವವರೆಗೂ, ಅದರಲ್ಲೂ ವ್ಯಾವಹಾರಿಕ ಸ್ತರದಲ್ಲಂತೂ ಇವರಡರ ನಿಲುವಿನಲ್ಲೂ ಆತನಿಗೆ ಹೆಚ್ಚೇನು ವ್ಯತ್ಯಾಸ ಕಾಣದು. ಶಂಕರರು "ಭಜಗೋವಿಂದಂ" ಎಂದರೂ, ಮಧ್ವರು "ಪ್ರೀಣಯಾಮೋ ವಾಸುದೇವಂ" ಎಂದರೂ ಆ ನಮನವು ಮುಟ್ಟುವುದು ಕೇಶವನನ್ನೇ. ಅನುಸಂಧಾನವು ಬೇರೆಯಿರಬಹುದು, ಗಮ್ಯದೃಷ್ಟಿ ಬೇರೆಯಿರಬಹುದು, ಆದರೆ ಇವು ಸಾಧಕನಿಗೆ ಬಿಟ್ಟಿದ್ದಲ್ಲವೇ? ಹೀಗಾಗಿ, ಇನ್ನೂ ಆಧ್ಯಾತ್ಮಸಾಧನೆಯ ತಳದ ಮೆಟ್ಟಿಲಲ್ಲೆಲ್ಲೋ ಇರುವ, ಅಥವ ಶ್ರೀ ರಾಮಾನುಜರು ಹೇಳುವಂತೆ "ಅನಾದಿ ಪಾಪವಾಸನಾಮಹಾರ್ಣವಾಂತರ್ನಿಮಗ್ನ"ರಾದ, "ಕರ್ಮಪಾಶಪ್ರಗ್ರಥಿತ"ರಾದ ನಮಗೆ, ನಮ್ಮ ಈಗಿನ ಮಟ್ಟದಲ್ಲಿ ಈ ಚರ್ಚೆ ಎಷ್ಟು ಪ್ರಸ್ತುತ ಎಂಬ ಬಗ್ಗೆಯೇ ನನಗೆ ಸಂದೇಹವಿದೆ.

ಇದು ಒಂದುಕಡೆಗಾದರೆ, ತ್ಯಾಗರಾಜಸ್ವಾಮಿಗಳಂಥ ಅನುಭಾವಿಗಳ, ಜೀವನ್ಮುಕ್ತರ ವಿಷಯದಲ್ಲೂ ಈ ಚರ್ಚೆ ಅಪ್ರಸ್ತುತವೆಂದೇ ನನ್ನ ಅನಿಸಿಕೆ. ತ್ಯಾಗರಾಜರಂತೂ ತಮ್ಮ ಕೃತಿಗಳಲ್ಲೆಲ್ಲೂ 'ತತ್ತ್ವ' ವಿಚಾರವನ್ನು ಚರ್ಚಿಸಿದ್ದಾಗಲಿ, ದ್ವೈತವೋ ಅದ್ವೈತವೋ ಅಥವ ಮತ್ತಾವುದೋ ಒಂದು ನಿಲುವನ್ನು ತಳೆದಿದ್ದಾಗಲಿ ಕಾಣೆ. ತಮ್ಮ ಕೃತಿಗಳುದ್ದಕ್ಕೂ ಅವರು ಪ್ರತಿಪಾದಿಸುವ ಏಕೈಕ ನಿಲುವೆಂದರೆ ಭಕ್ತಿ - ಅದಕ್ಕೆ ಸಂವಾದಿಯಾಗಿ ಬರುವ ಆತ್ಮನಿವೇದನೆ. ಈ ಭಕ್ತಿಕೂಡ ಭಾವಪ್ರಪಂಚದಿಂದ ಹೆಕ್ಕಿ ತೆಗೆದ ರತ್ನವೇ ಹೊರತು ಶಾಸ್ತ್ರದ ಮೊಸರು ಕಡೆದು ಪಡೆದ ನವನೀತವಲ್ಲ. ಆ ಭಕ್ತಿಯೂ ಅದೆಷ್ಟು ಉತ್ಕೃಷ್ಟ ಮಟ್ಟದ್ದೆಂದರೆ, ಅವರ ಕೃತಿಗಳಲ್ಲಿ ಎದ್ದು ಕಾಣುವ ಭಕ್ತಿಭಾವವನ್ನು ಮರೆತು ಇತರರ ಸಂಗೀತರಚನೆಗಳಂತೆ ಕೇವಲ ಸಂಗೀತದ ಸೊಬಗನ್ನು ಆಸ್ವಾದಿಸುವುದು ಸಾಧ್ಯವೇ ಇಲ್ಲ ಎನ್ನಬಹುದು.

ಭಕ್ತಿಯ ಮೂಲ ಅಗತ್ಯವೇ ದ್ವೈತದ ಸ್ಥಿತಿ, ಒಪ್ಪೋಣ. ಆದರೆ ಅದು ಶ್ರೀ ಮಧ್ವರ ಸಂಪೂರ್ಣ, ಅವಿಚ್ಛಿನ್ನ ದ್ವೈತದ ಪ್ರತಿಪಾದನೆಯಲ್ಲ. ತ್ಯಾಗರಾಜರು ಭಕ್ತಿಯನ್ನು ಪ್ರತಿಪಾದಿಸಿದರೂ ಮಾಧ್ವ ಮಹಾಪ್ರಮೇಯಗಳಾದ ಹರಿಸರ್ವೋತ್ತಮತ್ವ, ಜಗತ್ಸತ್ಯತ್ವ, ಪಂಚಭೇದ, ತಾರತಮ್ಯ, ಮೋಕ್ಷದಲ್ಲೂ ನಿರ್ಬಾಧಿತವಾಗಿ ಉಳಿಯುವ ಜೀವೇಶಭೇದದ ಸ್ಥಿತಿ ಇತ್ಯಾದಿ ತಾಂತ್ರಿಕ ವಿವರ (jargon)ಗಳನ್ನು ಎಲ್ಲೂ ಒಪ್ಪಿ ಪ್ರತಿಪಾದಿಸಿದಂತೆ ಕಾಣೆ. ಬದಲಿಗೆ ಈ ಕೆಳಗಿನ ಸಾಲುಗಳನ್ನು ನೋಡಿ

ಅನ್ನಿ ನೀವನುಚು ಎಂಚಿನವಾಣಿಕಿ ಆಶ್ರಮಭೇದಮುಲೇಲ
ಕನ್ನುಕಟ್ಟು ಮಾಯಲನಿ ಎಂಚುವಾಣಿಕಿ ಕಾಂತಲ ಭ್ರಮಲೇಲ ದಶರಥ ಬಾಲ ೧

(ಎಲ್ಲಾ ನೀನೇ ಎಂದು ತಿಳಿದವನಿಗೆ ಆಶ್ರಮಭೇದವೇಕೆ, (ಸರ್ವವೂ) ಕಣ್ಣುಕಟ್ಟು, ಮಾಯೆ ಎಂದು ಅರಿತವನಿಗೆ ಹೆಣ್ಣಿನ ಭ್ರಮೆಯೇಕೆ)

ಇರಲಿ, ಚರ್ಚೆಯಂತೂ ಬಂತು. ಪ್ರಶ್ನೆಯನ್ನೆತ್ತಿದ ಮಿತ್ರರು ತಮ್ಮ ಅಭಿಪ್ರಾಯಕ್ಕೆ ಉದಾಹರಣೆಯಾಗಿ ಪ್ರಸ್ತುತ ಪಡಿಸಿದ್ದು "ದ್ವೈತಮು ಸುಖಮಾ..." ಎಂಬ ಕೃತಿಯನ್ನು. ರೀತಿಗೌಳ ರಾಗದಲ್ಲಿರುವ ಈ ಕೃತಿ ಹೀಗಿದೆ:

ದ್ವೈತಮು ಸುಖಮಾ ಅದ್ವೈತಮು ಸುಖಮಾ ಪ
ಚೈತನ್ಯಮಾ ವಿನು ಸರ್ವ ಸಾಕ್ಷಿ ವಿಸ್ತಾರಮುಗಾನು ದೆಲ್ಪುಮು ನಾತೋ ಅ.ಪ

ಗಗನ ಪವನ ತಪನ ಭುವನ ದ್ಯಾವಾನಿಲಲೋ ನಗಧರಾಜ ಶಿವೇಂದ್ರಾದಿ ಸುರುಲಲೋ
ಭಗವದ್ಭಕ್ತವರಾಗ್ರೇಸರುಲಲೋ ಬಾಗ ರಮಿಂಚೇ ತ್ಯಾಗರಾಜಾರ್ಚಿತ ೧

ಈ ಪ್ರಶ್ನೆಯನ್ನೆತ್ತುವವರೆಲ್ಲ ಸಾಮಾನ್ಯವಾಗಿ ಮುಂದೊಡ್ಡುವ ಕೃತಿಯೇ ಇದು. ಸ್ವಯಂಸ್ಪಷ್ಟವಾಗಿರುವ ಈ ಕೃತಿಯನ್ನು ಮತ್ತಷ್ಟು ತಿಳಿಗೊಳಿಸಿ ಹೇಳಬೇಕಾದರೆ, ಪಂಚಭೂತಗಳಲ್ಲೂ ತ್ರಿಮೂರ್ತಿಗಳಲ್ಲೂ ಭಕ್ತಶಿಖಾಮಣಿಗಳಲ್ಲೂ ಚೈತನ್ಯವಾಗಿ ನಲಿಯುವ ಸರ್ವಸಾಕ್ಷಿಯಾದ ಪರಮಾತ್ಮನನ್ನು ಕೇಳುತ್ತಾರೆ ತ್ಯಾಗರಾಜರು, "ದ್ವೈತವು ಸುಖವೋ ಅದ್ವೈತವೋ, ವಿಸ್ತಾರವಾಗಿ ತಿಳಿಸು"

"ಪಂಚಭೂತಗಳಲ್ಲೂ ತ್ರಿಮೂರ್ತಿಗಳಲ್ಲೂ ಭಕ್ತಶಿಖಾಮಣಿಗಳಲ್ಲೂ ಚೈತನ್ಯವಾಗಿ ನಲಿಯುವ ಸರ್ವಸಾಕ್ಷಿ"ಯೊಂದು ಜೀವಾತ್ಮಕ್ಕಿಂತ ಪ್ರತ್ಯೇಕ ಅಸ್ಥಿತ್ವಹೊಂದಿದೆಯಿಂದು ಹೇಳಿದಂತಾಯಿತಲ್ಲವೇ? ಅದರಲ್ಲೂ "ದ್ವೈತಮು ಸುಖಮಾ, ಅದ್ವೈತಮು ಸುಖಮಾ" ಎಂಬ ಪಲ್ಲವಿಯ ಹಿನ್ನೆಲೆಯಲ್ಲಿ ಈ ಚರಣ ವ್ಯಂಗ್ಯಾತ್ಮಕವಾಗಿ ದ್ವೈತವನ್ನೇ ಧ್ವನಿಸುವುದಿಲ್ಲವೇ - ಇದು ಸಾಹಿತ್ಯದಲ್ಲೂ ಪ್ರವೃತ್ತಿಯಿರುವ ಮಿತ್ರರ ಪ್ರಶ್ನೆ.

ಇರಬಹುದು, ತ್ಯಾಗರಾಜರು ದ್ವೈತವನ್ನೇ ಸರಿಯೆಂದಲ್ಲಿ ಅಚ್ಚರಿಯೇನಿದೆ? ಅವರು ಅಷ್ಟು ತೀವ್ರವಾಗಿ ಪ್ರತಿಪಾದಿಸುವ ಭಕ್ತಿ, ದ್ವೈತಚಿಂತನೆಯಲ್ಲದೇ ಮತ್ತೇನು? ದ್ವೈತಭಾವವಿಲ್ಲದೆ ಭಕ್ತಿ ಸಾಧ್ಯವೇ?

ಆದರೆ ಹೀಗೆ ಅವರು ದ್ವೈತವನ್ನೋ ಅದ್ವೈತವನ್ನೋ ಪ್ರತಿಪಾದಿಸಿದ್ದಾರೆಂದು ಸಾಧಿಸುವಮೊದಲು ಪಲ್ಲವಿಯಯನ್ನು ಮತ್ತೊಮ್ಮೆ ಗಮನಿಸುವುದು ಸೂಕ್ತ. ಅದರ ಸೂಕ್ಷ್ಮ ಅವಗಾಹನೆ ಮತ್ತೊಂದು ದೃಷ್ಟಿಕೋನವನ್ನು ತೆರೆದಿಡುತ್ತದೆ. "ದ್ವೈತಮು ಸುಖಮಾ, ಅದ್ವೈತಮು ಸುಖಮಾ" - ಗಮನಿಸಬೇಕಾದ ಅಂಶವೆಂದರೆ, "ಸುಖಮಾ" ಎನ್ನುವ ಪ್ರಯೋಗ. ದ್ವೈತವು ಸರಿಯೋ ಅದ್ವೈತವೋ ಎಂಬುದನ್ನು ಸಾಧಿಸುವ ಇರಾದೆ ತ್ಯಾಗರಾಜರಿಗಿದ್ದಲ್ಲಿ, "ದ್ವೈತಮು ತರಮಾ, ಅದ್ವೈತಮು ತರಮಾ" (ಅಥವಾ "ನಿಜಮಾ") ಎಂದು ಬಳಸುತ್ತಿದ್ದರೇನೋ! ಆಗ, ಮುಂದೆ ಬರುವ ಚರಣ ದ್ವೈತವೇ ಸತ್ಯವೆಂಬ ನಿಲುವನ್ನು ಮತ್ತಷ್ಟು ಪುಷ್ಟಿಗೊಳಿಸುತ್ತಿತ್ತು. ಆದರೆ "ಸುಖಮಾ" ಎಂಬ ಬಳಕೆಯಿಂದ, ಸರಿ-ತಪ್ಪಿನ ಪ್ರಶ್ನೆಗಿಂತ, ರಾಮಭಕ್ತಿಗೆ ಯಾವ ಭಾವ ಹೆಚ್ಚು ಸುಖ ಎಂಬ ಚಿಂತನೆಯಷ್ಟೇ ಸ್ಫುಟಗೊಳ್ಳುತ್ತದೆ. ಕೇವಲ ಇದೊಂದು ಪದವನ್ನು ಬಳಸುವ ಮುನ್ನ ತ್ಯಾಗರಾಜರು ಇಷ್ಟೆಲ್ಲ ಯೋಚಿಸಿದ್ದಿರಬೇಕೆಂದು ನಾನು ಹೇಳಹೊರಟಿಲ್ಲ. ಆದರೆ ಭಾವವು ಭಾಷೆಯಲ್ಲಿ ರೂಪುಗೊಳ್ಳುವ ಪರಿಯನ್ನಷ್ಟೇ ವಿವರಿಸಹೊರಟಿದ್ದು. ಕವಿಯೊಬ್ಬ ತನ್ನ ಭಾವಲಹರಿಗೆ ಮಾತಿನ ರೂಪ ಕೊಡುವಾಗ ಭಾವಕ್ಕೆ ತಕ್ಕುದಾದ ಹಲವು ಪದಗಳು ಮೂಡಿ ನಿಲ್ಲುತ್ತವೆ. ಮನದಲ್ಲಿ ಮೂಡಿದ ಭಾವಕ್ಕೆ ಅತ್ಯುಚಿತವಾದ ಪದದ ಆಯ್ಕೆ ಕವಿಯಲ್ಲಿ ತಾನೇ ತಾನಾಗಿ ನಡೆಯುತ್ತದೆ - ಇದೊಂದು ಭಾವದ ವ್ಯಾಪಾರ, ಬುದ್ಧಿಯದಲ್ಲ. ಈ ಸಂದರ್ಭಕ್ಕೆ "ಸುಖಮಾ" ಮತ್ತು "ತರಮಾ" ಎರಡೂ ಪದಗಳು ಒಂದೇ ಭಾವದ ಸೂಚಕ ಖಂಡಿತಾ ಅಲ್ಲ. ಆದ್ದರಿಂದ ಕವಿಗೆ ಇಷ್ಟು ಸಹಜವಾಗಿ "ಸುಖಮಾ" ಎಂಬ ಪದ ಮನದಲ್ಲಿ ಹೊಳೆದಿರಬೇಕಾದರೆ, ಅವರ ಮನದಲ್ಲಿ ದ್ವೈತಾದ್ವೈತಗಳ ಸರಿ-ತಪ್ಪುಗಳ ವಿಮರ್ಶೆಗಿಂತಾ ಆ ನಿಲುವುಗಳ ಭಕ್ತಿಸೌಖ್ಯವೇ ಚಿಂತನೆಯ ವಸ್ತುವಾಗಿದ್ದಿರಬೇಕೆನ್ನುವುದು ಸಹಜ. ಅಂತಿಮವಾಗಿ ದ್ವೈತವು ನಿಜವೋ ಅದ್ವೈತವೋ ಅದು ತ್ಯಾಗರಾಜರಿಗೆ ಮುಖ್ಯವಲ್ಲ. ಬದಲಿಗೆ, ಯಾವ ಮಾರ್ಗದಲ್ಲಿ ಭಕ್ತಿ ಹೆಚ್ಚು ತೀವ್ರ, ನಿಶ್ಕಲ್ಮಶ, ಸುಖ - ಇದು ಅವರ ಪ್ರಶ್ನೆಯೆನಿಸುತ್ತದೆ.

ಅದ್ವೈತ ಚಿಂತನೆಯ ಪರಿಸರದಲ್ಲಿ ಹುಟ್ಟಿ ಬೆಳೆದ ತ್ಯಾಗರಾಜರಿಗೆ, ಅದ್ವೈತವೇ ಅಂತಿಮ ಸತ್ಯವೆಂಬ ಅರಿವಿದೆ. ಆದರೆ ಭಾವುಕ ಮನಸ್ಸೇಕೋ ಇದನ್ನೊಲ್ಲದು. ನಾನೀನೆಂಬ ಭೇದವಳಿದ ಅದ್ವೈತದ ಅರಿವಿನಲ್ಲಿ ಏನಿದೆ? ಏನೂ ಇಲ್ಲ. ಭಕ್ತನೂ ಇಲ್ಲ, ಭಕ್ತಿಯೂ ಇಲ್ಲ. "ರಾಮಭಕ್ತಿಸಾಮ್ರಾಜ್ಯ"ದಲ್ಲಿ ಓಲಾಡುವ ಕವಿಯ ಮನಸ್ಸಿಗೆ, ಈ ನಿರ್ಗುಣ ನಿರುಪಾಧಿಕ ನಿರ್ವೇದಕವಾದ ಅದ್ವೈತ ಸಿದ್ಧಿ ಹೇಗೆ ತಾನೇ ರುಚಿಸೀತು? ಈ ಪರಮಾತ್ಮ-ಜೀವಾತ್ಮ ಭೇದ ತೋರುವ ಮಾಯಾ ಪ್ರಪಂಚದಲ್ಲಿ ಭಕ್ತಿಯೂ ಮಾಯೆಯೇ ಹೌದು, ಉತ್ಕಟ ಭಕ್ತಿ, ಯಥಾರ್ಥ ಜ್ಞಾನಕ್ಕೆ, ತನ್ಮೂಲಕ ಅದ್ವೈತದ ಸಿದ್ಧಿಗೆ ದಾರಿ - ಇರಬಹುದು. ಆದರೆ ಭಕ್ತಿಯ ರಸವನ್ನೀಂಟಿದ ಮನಸ್ಸಿಗೆ, ಗಮ್ಯಕ್ಕಿಂತಾ ಮಾರ್ಗವೇ ರಮ್ಯ, ಅದೇ ಸುಖ. ಆದ್ದರಿಂದ ಭಕ್ತಿಯು ಮಾಯೆಯೆನ್ನುವುದಾದರೆ ಅದ್ವೈತದ 'ವಾಸ್ತವ'ಕ್ಕಿಂತ ದ್ವೈತಸ್ಥಿತಿಯ 'ಮಾಯೆ'ಯೇ ಸುಖವಲ್ಲವೇ? ಇದು, ನನಗನ್ನಿಸುವ ಮಟ್ಟಿಗೆ ಈ ರಚನೆಯ ಕವಿಸಮಯ.

ತ್ಯಾಗರಾಜರು ಅದೆಂಥಾ ಮೃದುಮನದ, ಹದನುಡಿಯ ಕವಿಯೆಂದರೆ, ಅವರೆಲ್ಲೂ ಈ ತತ್ತ್ವ-ಸಿದ್ಧಾಂತಗಳ ಒಣಚರ್ಚೆಯ ಗೊಡವೆಗೆ ಹೋಗುವುದೇ ಇಲ್ಲ. ಈ ರೀತಿಯ ತತ್ತ್ವದ ಇಬ್ಬಂದಿಗಳು ಎದುರಾದಾಗೆಲ್ಲಾ ಅವರು ಕಂಡುಕೊಳ್ಳುವುದು ತಾರ್ಕಿಕನ ಪರಿಹಾರವಲ್ಲ, ಕವಿಯ ಪರಿಹಾರವನ್ನು. ಈ ಸಾಲುಗಳನ್ನು ನೋಡಿ:

ಎವರನಿ ನಿರ್ಣಯಿಂಚಿರಿರಾ ನಿನ್ನೆಟ್ಲಾರಾಧಿಂಚಿರಿರಾ, ನರವರು ಪ
ಶಿವುಡನೋ ಮಾಧವುಡನೋ ಕಮಲ ಭವುಡನೋ ಪರಬ್ರಹ್ಮಮನೋ ನಿ ಅ.ಪ

ಶಿವಮಂತ್ರಮುನಕು ಮಾಜೀವಮು ಮಾಧವ ಮಂತ್ರಮುನಕು ರಾಜೀವಮು ಈ
ವಿವರಮುದೆಲಿಸಿನ ಘನುಲಕು ಮ್ರೋಕ್ಕೆದ ವಿತರಣಗುಣ ತ್ಯಾಗರಾಜವಿನುತ ನಿ ೧

(ನಿನ್ನನ್ನು ಯಾರೆಂದು ನಿರ್ಣಯಿಸಿದರು (ಕೊನೆಗೆ)? ಶಿವನೆಂದೋ, ಮಾಧವನೆಂದೋ, ಕಮಲಭವನೆಂದೋ ಅಥವಾ ಪರಬ್ರಹ್ಮವೆಂದೋ?

"ನಮಶ್ಶಿವಾಯ" ಎಂಬ ಶಿವಮಂತ್ರದ ಜೀವಾಕ್ಷರ "ಮ". ಹಾಗೇ "ನಮೋ ನಾರಾಯಣಾಯ" ಎಂಬ ನಾರಾಯಣಮಂತ್ರದ ಜೀವಾಕ್ಷರ "ರಾ" (ಈ ಅಕ್ಷರಗಳನ್ನು ತೆಗೆದರೆ ಆ ಮಂತ್ರಗಳು ವಿರುದ್ಧಾರ್ಥವನ್ನೇ ಕೊಡುತ್ತವೆ, ಆದ್ದರಿಂದ). ಈ ಎರಡು ಜೀವಾಕ್ಷರಗಳು ಕೂಡಿ ಆದದ್ದೇ "ರಾಮ". ಈ ಮರ್ಮವನ್ನು ತಿಳಿದ ಮಹಾತ್ಮರನ್ನು ವಂದಿಸುತ್ತೇನೆ)

ತಮ್ಮ ಮನೋರಾಜ್ಯಕ್ಕೆ ಪ್ರಸ್ತುತವಲ್ಲದ ಸೈದ್ಧಾಂತಿಕ ಚರ್ಚೆಗಳಿಂದ ಅದೆಷ್ಟು ಸೊಗಸಾಗಿ ತಮ್ಮನ್ನು ಹೊರಪಡಿಸಿಕೊಳ್ಳುತ್ತಾರೆ, ನೋಡಿ. ಭಕ್ತಿಯೋ, ಭಕ್ತನ ಉದ್ಧಾರವೋ ಅಲ್ಲದ ಬೇರಾವ ವಿಚಾರವೂ ಅವರಿಗೆ ಹೊಲ್ಲ. ತಾನಾಯಿತು, ರಾಮನಾಯಿತು, ರಾಮಭಕ್ತಿಯಾಯಿತು. ಆಗೀಗ ತನಗೆ ಸರಿಕಂಡ ಸರಳ ತತ್ತ್ವವನ್ನು ಜನಕ್ಕೆ ಬೋಧಿಸುವುದುಂಟು, ಅದೂ ಸ್ವಗತದ ಧಾಟಿಯಲ್ಲಿ. ಪುರಂಧರ-ಕನಕರೇ ಮೊದಲಾದವರಲ್ಲಿ ಕಾಣಬರುವ ತತ್ತ್ವಬೋಧನೆಯ ಬಿರುಸೂ ಕಟುವೂ ಕಾಣಬರುವುದಿಲ್ಲ ತ್ಯಾಗರಾಜರಲ್ಲಿ. ಬೋಧಿಸಿದ್ದೆಲ್ಲಾ ಸರಳ, ನೇರ, ಚಿಕ್ಕ-ಚೊಕ್ಕ. ಈ ಸಾಲುಗಳನ್ನು ನೋಡಿ:

"ತುರಕವೀದಿಲೋ ವಿಪ್ರುನಿಕಿ ಪಾನಕ ಪೂಜ ಚೇಸಿ ಏಮಿ ಚೇಯಕುಂಡಿ ಏಮಿ"

(ತುರಕಬೀದಿಯಲ್ಲಿ ವಿಪ್ರರಿಗೆ ಪಾನಕಪೂಜೆ ಮಾಡಿ ಏನು ಮಾಡದಿದ್ದರೆ ಏನು?)

ಮತ್ತೆ ಇದು;

"ಬಹುಜನ್ಮಂಬುನಿ ವಾಸನಯುತುಲೈ ಅಹಿವಿಷಸಮವಿಷಯಾಕೃಷ್ಟುಲೈ
ಬಹಿರಾನನುಲೈ ತ್ಯಾಗರಾಜು ಭಜಿಯಿಂಚೇ ಶ್ರೀ ರಾಮುನಿ ತೆಲಿಯಕ (ಯಜ್ಞಾದುಲು ಸುಖಮನುವಾರಿಕಿ ಸಮಮಜ್ಞಾನುಲು ಗನ ಲೇ)"

(ಬಹುಜನ್ಮದ ವಾಸನೆಹೊಂದಿ, ಹಾವಿನ ವಿಷದಂಥ ವಿಷಯಗಳಿಂದ ಆಕರ್ಷಿತರಾಗಿ, ಅಂತ್ರರ್ದೃಷ್ಟಿಯನ್ನು ಕಳೆದುಕೊಂಡು ಶ್ರೀ ರಾಮನನ್ನು ತಿಳಿಯದೇ, ಯಜ್ಞಾದಿಗಳೇ ಸುಖವೆನ್ನುವರಂಥ ಅಜ್ಞಾನಿಗಳು ಇಲ್ಲ)

ಇನ್ನು ಮಂತ್ರ-ತಂತ್ರ, ಶಾಸ್ತ್ರ-ಸಂಪ್ರದಾಯಗಳ ಗೋಜಲಂತೂ ದೂರವೇ ಉಳಿಯಿತು. ಈ ಗೋಜಿನ ಪ್ರಶ್ನೆಗೆ ತ್ಯಾಗರಾಜರ ಉತ್ತರ "ಮನಸು ಸ್ವಾಧೀನಮೈನ ಘನುನಿಕಿ ಮರಿ ಮಂತ್ರ ತಂತ್ರಮುಲೇಲ" (ಮನಸು ಸ್ವಾಧೀನವಿರುವ ಮಹಾತ್ಮನಿಗೆ ಮತ್ತೆ ಮಂತ್ರತಂತ್ರಗಳೇಕೆ)

ಆದ್ದರಿಂದ ತ್ಯಾಗರಾಜರ ಕೃತಿಗಳಲ್ಲಿ ಶಾಸ್ತ್ರ-ಸಿದ್ಧಾಂತಗಳ ಪ್ರತಿಪಾದನೆಯನ್ನರಸುವುದಕ್ಕಿಂತ ಅಮೃತಪ್ರಾಯವಾದ "ಸ್ವರರಾಗಸುಧಾರಸಯುತ ಭಕ್ತಿ"ಯ ಸೊಬಗನ್ನು ಆಸ್ವಾದಿಸುವುದೇ ಹೆಚ್ಚು ಸುಖವಲ್ಲವೇ?