ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ್ಳುತ್ತಿದ್ದುದುಂಟು. ಮೊನ್ನೆ ಹಂಪಿಯ ಆನೆಗೊಂದಿಯಲ್ಲಾದ ಘಟನೆ ಈ ಮೇಲೆ ಹೇಳಿದ ಕಪ್ಪು ಪ್ರೊಫೈಲ್ ಘಟನೆಗಳಿಗಿಂತ ಏನೂ ಕಡಿಮೆಯಿರಲಿಲ್ಲ, ಅಥವಾ ಅವಕ್ಕಿಂತ ಒಂದೋ ಎರಡೋ ಹತ್ತೋ ಪಾಲು ಹೆಚ್ಚಿನದೇ ಎಂದರೂ ತಡೆದೀತು. ಆದರೂ ಪ್ರೊಫೈಲನ್ನು ಕಪ್ಪು ಮಾಡಿಕೊಳ್ಳಲಿಲ್ಲವೇ? ಹೀಗೆ ಯೋಚಿಸಿದಾಗ ಹೊಳೆದ ಉತ್ತರ, ನಾವೇಕೆ ಮುಖ ಕಪ್ಪು ಮಾಡಿಕೊಳ್ಳಬೇಕು, ನಾಚುವ ಕೆಲಸ ಮಾಡಿದವರು ಮುಖ ಕಪ್ಪುಮಾಡಿಕೊಳ್ಳಬೇಕಾದ್ದು. ವ್ಯಾಸರಾಜರು ನಮ್ಮ ಹೆಮ್ಮೆ, ಅದನ್ನು ಮೆರೆಸುವುದೇ ಆದದ್ದಕ್ಕೆ ಸರಿಯಾದ ಪ್ರತಿಭಟನೆ. ನನ್ನ ಈ ಹಮ್ಮಿಗೆ, ಹೆಮ್ಮೆಗೆ ಮೊನ್ನೆ ಜುಲೈ ೧೮ರಂದು ನಡೆದ ಅನಾಚಾರವನ್ನು ಮಾಧ್ವಸಮುದಾಯವು ನಿಭಾಯಿಸಿದ ರೀತಿ ಪುಷ್ಟಿಯನ್ನೊದಗಿಸಿದೆ.
೨೦೧೯ರ ಜುಲೈ ೧೯ ಒಂದು ಅವಿಸ್ಮರಣೀಯ ದಿನ. ಸಾವಿರವೆರಡುಸಾವಿರ ಜನದ ಇಚ್ಛಾಶಕ್ತಿ, ಆರಂಭದಲ್ಲಿ ಅಸಾಧ್ಯವೆನಿಸಿದ್ದನ್ನು ಸಾಧ್ಯವೆನಿಸಿದ ದಿನ - ಹಿಂದಿನ ದಿನವಷ್ಟೇ ನಾಮಾವಶೇಷವಾಗಿದ್ದ ಐತಿಹಾಸಿಕಸ್ಮಾರಕವೊಂದನ್ನು (ಉದ್ದೇಶಪೂರ್ವಕವಾಗಿ ನಾನದನ್ನು ಬೃಂದಾವನವೆನ್ನುವ ಬದಲು ಸ್ಮಾರಕವೆಂದೇ ಕರೆಯುತ್ತೇನೆ) ಹಿಂದಿದ್ದಂತೆಯೇ ಯಥಾವತ್ತಾಗಿ ಕಟ್ಟಿ ನಿಲ್ಲಿಸಿದ ದಿನ. ಭಾವನೆಗಳ ತೀವ್ರತೆಯು ಕ್ರಿಯೆಯಾಗಿ ಮಾರ್ಪಟ್ಟಾಗ ಅದು ಕೇವಲ Destructive ಆಗಿ ಮಾತ್ರವಲ್ಲ, ನಿಜವಾದ ಅರ್ಥದಲ್ಲಿ Constructive ಆಗಿ ಕೂಡ ಕೆಲಸ ಮಾಡಬಲ್ಲುದೆಂದು ತೋರಿಸಿಕೊಟ್ಟ ದಿನ. ಹಲವು ಭ್ರಮೆಗಳು, ಹಲವು ಮುಖವಾಡಗಳು ಕಳಚಿಬಿದ್ದ ದಿನ, ಹಾಗೆಯೇ ಹಲವು ಆಶಾಕಿರಣಗಳು ಮೂಡಿದ ದಿನವೂ ಹೌದು.
ಈ ಅಕಾರ್ಯವನ್ನು ಮಾಡಿದ್ದು ನಿಧಿಗಾಗಿಯೋ, ರಾಜಕೀಯಕಾರಣಕ್ಕೋ, ಅಥವಾ ಇನ್ನಾವುದಕ್ಕೋ ಎಂಬುದನ್ನು ಚರ್ಚಿಸಲು ಇದು ಸಮಯವಲ್ಲ, ಅದೇನಿದ್ದರೂ ತನಿಖೆಗೆ ಬಿಟ್ಟ ವಿಷಯ - ಅಂಥದ್ದೊಂದು ನಡೆದರೆ. ಆದರೆ ಮನಸ್ಸನ್ನು ಕಾಡುವುದು ಅದಲ್ಲ. ಹದಿನೆಂಟನೆಯ ತಾರೀಖು ಬೆಳಬೆಳಗ್ಗೆ ಈ ಸುದ್ದಿ ಬಂದಾಗ ಒಂದು ಕ್ಷಣ ಅದುರಿ ಹೋಗಿಬಿಟ್ಟೆ. ಆಣೆ ಮಾಡಿ ಹೇಳುತ್ತೇನೆ, ವ್ಯಾಸರಾಯರು ’ನಮ್ಮ ಜಾತಿ’ಯವರು, ಮಾಧ್ವಗುರುಗಳು, ಧಾರ್ಮಿಕ ಆಚಾರ್ಯರು ಎಂಬ ಕಾರಣಕ್ಕಾದ ದಿಗ್ಭ್ರಮೆಯಲ್ಲ ಅದು (ಜಾತಿಯ ವಿಷಯವನ್ನು ನಾನು ಇವತ್ತಿನಷ್ಟು ಯಾವತ್ತೂ ತಲೆ ಕೆಡಿಸಿಕೊಂಡದ್ದೇ ಇಲ್ಲ) - ಯಾರೋ ಪಾರ್ಲಿಮೆಂಟನ್ನೋ ವಿಧಾನಸೌಧವನ್ನೋ ಮಹಾತ್ಮರ ಸಮಾಧಿಯನ್ನೋ ಇನ್ನಾವುದೋ ಮಹತ್ವದ ಸ್ಮಾರಕವನ್ನೋ ಉಡಾಯಿಸಿಬಿಟ್ಟಿದ್ದಾರೆಂಬ ಸುದ್ದಿ ಬಂದಿದ್ದರೆ ಆಗುತ್ತಿದ್ದಷ್ಟೇ ದಿಗ್ಭ್ರಮೆಯದು. ಒಬ್ಬ ತಾರ್ಕಿಕರಾಗಿ, ದಾರ್ಶನಿಕರಾಗಿ ವಿದ್ವಲ್ಲೋಕದಲ್ಲಿ ವ್ಯಾಸತೀರ್ಥರ ಮಹತ್ತ್ವವೇನೆಂಬುದನ್ನು ವಿದ್ವಲ್ಲೋಕವು ಬಲ್ಲುದು, ಅದರ ಚರ್ಚೆ ಇಲ್ಲಿ ಅಗತ್ಯವಿಲ್ಲ. ಆದರೆ ಕರ್ನಾಟಕದ ಸಾಂಸ್ಕೃತಿಕ ಸಾಹಿತ್ಯಕ ಲೋಕಕ್ಕೆ ಶ್ರೀ ವ್ಯಾಸರಾಜರ ಕೊಡುಗೆಯೇನೆಂಬುದು ಕನ್ನಡಿಗರೆಂದುಕೊಳ್ಳುವವರೆಲ್ಲರ ಹೆಮ್ಮೆಯ ವಿಷಯವಾಗಬೇಕಿತ್ತು. ಸ್ವತಃ ಹರಿದಾಸರಾಗಿ, ಕನಕಪುರಂದರರ ಗುರುಗಳಾಗಿ ವ್ಯಾಸರಾಜರು ಕರ್ನಾಟಕದ ಭಕ್ತಿಪಂಥಕ್ಕೆ ಹರಿದಾಸಪಂಥಕ್ಕೆ ನೀಡಿದ ಮಾರ್ಗದರ್ಶನ, ಕರ್ನಾಟಕಸಾಮ್ರಾಜ್ಯ ವಿಜಯನಗರದ ಉಚ್ಛ್ರಾಯಸ್ಥಿತಿಯಲ್ಲಿ ರಾಜಗುರುವಾಗಿ, ಧಾರ್ಮಿಕನಾಯಕನಾಗಿ ಸಮಾಜವನ್ನು ಮುನ್ನೆಡೆಸುವಲ್ಲಿ ವ್ಯಾಸರಾಜರು ವಹಿಸಿದ ಪಾತ್ರ, ಅನ್ಯಾದೃಶ. ಇಂತಿರುವಾಗ, ಹದಿನಾರನೆಯ ಶತಮಾನದ ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ರಾಜಕೀಯಕ್ಷೇತ್ರಗಳಲ್ಲಿ ಆಢ್ಯರಾದ ವ್ಯಾಸರಾಜರ ಬೃಂದಾವನ ಐನೂರು ವರ್ಷಗಳಿಂದ ಮಳೆ ಬಿಸಿಲು ಗಾಳಿಗಳಿಗೆ ತನ್ನನ್ನೊಡ್ಡಿಕೊಂಡು ಬಟಾಬಯಲಿನಲ್ಲಿ, ಕೇಳುವವರಿಲ್ಲದ ಕಾಡಿನಲ್ಲಿ ನಿಂತಿದೆ. ಇದರ ಬಗ್ಗೆ ನಮಗಾರಿಗೂ ದುಃಖವಿಲ್ಲ, ಏಕೆಂದರೆ ಸನ್ಯಾಸಿಗೆ ಬದುಕಿನಲ್ಲಾಗಲೀ ಸಾವಿನಲ್ಲಾಗಲೀ ಯಾವ ವೈಭವವೂ ಹೇಳಿದ್ದಲ್ಲ - ಆಗೆಲ್ಲಾ ಬೃಂದಾವನಗಳನ್ನು ಹೀಗೆ ಬಯಲಿನಲ್ಲಿ ಕಟ್ಟಿ ಬಿಟ್ಟುಬಿಡುತ್ತಿದುದೇ ಪರಿಪಾಠ - ವಿಜಯನಗರದ ಪತನವಾಗಿ ದಕ್ಷಿಣದಲ್ಲಿ ಅನ್ಯಧರ್ಮೀಯರ ದಾಳಿ ಹೆಚ್ಚಾಗುವವರೆಗೂ ಬೃಂದಾವನಗಳಿಗೊಂದು ಕಟ್ಟಡ, ಮೇಲ್ಛಾವಣಿ ಕಟ್ಟುವ ಪರಿಪಾಠವೇ ಇರಲಿಲ್ಲ. ವ್ಯಾಸರಾಜರದ್ದೂ ಈ ರೂಢಿಗೆ ಹೊರತಲ್ಲ. ಅನಂತವೈಭವಗಳ ನಡುವೆಯೂ ವೈರಾಗ್ಯದ, ಶುದ್ಧಸನ್ಯಾಸದ ಬದುಕನ್ನು ಬದುಕಿದವರು ವ್ಯಾಸರಾಜರು - ಅದೇನು ಇಂದಿನಂತೆ ಕಾವಿಯ ಮರೆಯಲ್ಲಿ ಕಚ್ಚೆಹರಿಯುವ ಢೋಂಗಿ ಸನ್ಯಾಸವಲ್ಲ; "ಮೂತ್ರದ ಮನೆಗಾಗಿ ಗಾತ್ರ ಬಳಲಿಸಿ, ಮದನಸೂತ್ರಬೊಂಬೆಯು ಎನಿಸಿ, ನೇತ್ರದಿಂದ ಪಾತ್ರದವಳನು ನೋಡಿ ಸ್ತೋತ್ರಮಾಡುತ ಹಿಗ್ಗಿ, ರಾತ್ರಿ ಹಗಲೂ ಕೆಟ್ಟ ವಾರ್ತೆಯಲ್ಲಿರುವ" ಸನ್ಯಾಸವಲ್ಲ ಅವರದ್ದು - "ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು ವ್ಯಾಸಮುನಿರಾಯರ ಸನ್ಯಾಸತ್ವದಿರವ" ಎಂದು ಗುರುಗಳಾದ ಶ್ರೀಪಾದರಾಜರಿಂದಲೇ ಹೊಗಳಿಸಿಕೊಂಡ ಸನ್ಯಾಸವದು. ಹೀಗಾಗಿ, ಬದುಕಿನುದ್ದಕ್ಕೂ ಬಂದ ಸನ್ಯಾಸ ಸಾವಿನಲ್ಲೂ ಕಂಡರೆ ಅಸಹಜವೇನಲ್ಲ. ಅದಕ್ಕಾಗಿಯೇ ವ್ಯಾಸರಾಜರದ್ದೂ ಬಯಲ ಬೃಂದಾವನ. ರಾಜಗುರುಗಳೆಂಬ ಹೆಗ್ಗಳಿಕೆಯ ಒಂದೇ ಸಂಕೇತವಾಗಿ ಇದೊಂದು ಬೃಂದಾವನದ ಮುಂದೆ ಮಾತ್ರ ಎರಡು ಕಂಬಗಳದ್ದೊಂದು ಚಪ್ಪರ, ಉಳಿದ ಬೃಂದಾವನಗಳಿಗಿಲ್ಲದ್ದು (ಅದೂ ಬೃಂದಾವನದ ಮೇಲಲ್ಲ, ಮುಂದೆ!) - ಅದು ಬಿಟ್ಟರೆ ಉಳಿದದ್ದು ಬಯಲು. ಇಂತಿರುವ ಬೃಂದಾವನವು ಕಳೆದ ಐನೂರು ವರ್ಷಗಳಲ್ಲಿ, ಅದೂ ಅನ್ಯಧರ್ಮೀಯರ ದಾಳಿಗಳ ಉತ್ತುಂಗ ಸ್ಥಿತಿಯಲ್ಲೂ ಯಾವ ಸಣ್ಣ ದಾಳಿಗೂ ಒಳಗಾಗದೇ ನಿಂತಿರುವುದು ಅಚ್ಚರಿಯೇನಲ್ಲ - ಒಬ್ಬ ಸನ್ಯಾಸಿಯ ಸಮಾದಿಯಲ್ಲಿ ದುಡ್ಡು ಕಾಸು ಏನೂ ಸಿಗುವುದಿಲ್ಲ, ಅಲ್ಲಿ ಸಿಗುವುದೆಲ್ಲಾ ಸಾಲಿಗ್ರಾಮಗಳೆಂಬ ’ಕೆಲಸಕ್ಕೆ ಬಾರದ’ ಕಲ್ಲಿನ ಚೂರುಗಳು ಎಂಬ ವಿಷಯ ಆಗಿನ ದಾಳಿಕೋರರಿಗೆ ತಿಳಿದಿತ್ತು (ಅಷ್ಟರಮಟ್ಟಿಗೆ ಅವರೂ ಒಂದು ರೀತಿ ಸಂಸ್ಕೃತಿವಂತರಾಗಿದ್ದರು, ತಿಳಿದವರಾಗಿದ್ದರು), ಈಗಿನ ದಾಳಿಕೋರರಿಗೆ ತಿಳಿದಿಲ್ಲ ಅಷ್ಟೇ ವ್ಯತ್ಯಾಸ.
ಇರಲಿ, ಇಂಥದ್ದೊಂದು ಸುದ್ದಿ ಬೆಳಬೆಳಗ್ಗೆ ಬಂದು ಬಡಿದಾಗ ಇಡೀ ನಾಡು ದಿಗ್ಭ್ರಮೆಗೊಳಗಾಗಬಹುದೆಂದೆಣಿಸಿದ್ದೆ, ಸುದ್ದಿಮಾಧ್ಯಮಗಳು ಈ ಬಗ್ಗೆ ದಪ್ಪ ದನಿಯಲಿ ಬಿತ್ತರಿಸಿ, ವಿಶೇಷ ಪ್ಯಾನಲ್ ಡಿಸ್ಕಶನ್ನುಗಳನ್ನೇರ್ಪಡಿಸಬಹುದೆಂದೆಣಿಸಿದ್ದೆ, ಪತ್ರಿಕೆಗಳು ಈ ಸುದ್ದಿಯನ್ನು ದಪ್ಪಕ್ಷರಗಳಲ್ಲಿ ಛಾಪಿಸಿ ಸಂಪಾದಕೀಯ ಬರೆಯಬಹುದೆಂದೆಣಿಸಿದ್ದೆ, ಸರ್ಕಾರವು ತಕ್ಷಣ ಕಾರ್ಯಪ್ರವೃತ್ತವಾಗಿ ಸ್ಥಳವನ್ನು ತೆರವುಗೊಳಿಸಿ, ಕಾಯಲು ಪೋಲೀಸರನ್ನು ನಿಯಮಿಸಿ, ಉನ್ನತಮಟ್ಟದ ತನಿಖೆಯ ದಳವನ್ನು ರೂಪಿಸಿ, ಎರಡು ದಿನದೊಳಗೆ ದುಷ್ಕರ್ಮಿಗಳನ್ನು ಹೆಡಮುರಿಗೆ ಕಟ್ಟಿ ತರುತ್ತಾರೆಂದೆಣಿಸಿದ್ದೆ, ತಾನೇ ನಿಂತು, ಪುರಾತತ್ತ್ವ ಇಲಾಖೆಯೊಡನೆ ಕೈಜೋಡಿಸಿ, ನಶಿಸಿಹೋದ ಸ್ಮಾರಕವನ್ನು ಪುನಾರೂಪಿಸುತ್ತಾರೆಂದೆಣಿಸಿದ್ದೆ, ಹಿಂದೂಧರ್ಮದ ಪರಮಾಶ್ರಯವೆಂದು ಬಿಂಬಿಸಿಕೊಳ್ಳುವ ಪಕ್ಷದ ಆಡಳಿತವಿರುವ ಕೇಂದ್ರಸರ್ಕಾರವು ಈ ಸಂಬಂಧ ತಕ್ಕರೀತಿಯಲ್ಲಿ ರಾಜ್ಯಸರ್ಕಾರಕ್ಕೆ ಸ್ಪಂದಿಸಿ ತನಿಖೆಯ, ಪುನರ್ನಿರ್ಮಾಣದ ಮೇಲುಸ್ತುವಾರಿ ವಹಿಸಬಹುದೆಂದೆಣಿಸಿದ್ದೆ (ನಾವು ಆಶಿಸಿದ್ದ ’ರಾಮರಾಜ್ಯ’ದ ಒಂದು ಸೆಳಕಲ್ಲವೇ ಅದು). ಅಯ್ಯೋ, ಇಲ್ಲ - ಅದಾವುದೂ ಆಗಲಿಲ್ಲ. ನಾನೇ ಕೆಲಶತಮಾನಗಳ ಕಾಲ ಬಂಡೆಯಡಿಯಲ್ಲಿದ್ದೆನೆಂದು (having lived under the rock) ನಿಧಾನಕ್ಕೆ ಅರಿವಿಗೆ ಬಂದಿತು. ಎಂದೂ ಟೀವಿಯನ್ನೇ ನೋಡದವನು ಟೀವಿಯ ಮುಂದೆ ಕುಳಿತರೆ, ದಿನವಿಡೀ ರಿಸಾರ್ಟುಗಳಲ್ಲಿ ಕಳೆದುಹೋಗಿರುವ ಜನಪ್ರತಿನಿಧಿಗಳ ಬಗ್ಗೆ ’ಸ್ಪೀಕರು’ ಕಿತ್ತುಹೋಗುವಂತೆ ಬಡಕೊಳ್ಳುತ್ತಿದ್ದುವೇ ಶಿವಾಯಿ, ಹಂಪಿಯಲ್ಲಾದ ಘಟನೆಯ ಬಗ್ಗೆ ಒಂದು ಚಕಾರವಿಲ್ಲ! ಯಾವುದೋ ಒಂದು ಚಾನಲ್ ಮಾತ್ರ "ಉತ್ತರಾಧಿ ಮತ್ತು ರಾಯರ ಮಠಗಳ ನಡುವೆ ಕಾದಾಟ, ವ್ಯಾಸರಾಜರ ಸಮಾಧಿ ಧ್ವಂಸ" ಎಂಬ ತಲೆಬುಡವಿಲ್ಲದ, ಅಸಂಬದ್ಧ ನ್ಯೂಸ್ ಕ್ಯಾಪ್ಸೂಲನ್ನು ಸ್ಕ್ರೀನಿನ ಕೆಳಭಾಗದಲ್ಲಿ ಬಿತ್ತರಿಸುತ್ತಿತ್ತು. ಆಮೇಲೇಕೋ ಅದರಲ್ಲಿ ಸಾಕಷ್ಟು ಟಿ ಆರ್ ಪಿ ಕಮಾಯಿ ಕಾಣದ್ದರಿಂದ ಅದನ್ನು ಕೈಬಿಟ್ಟಿತು. ಮರುದಿನ ವೃತ್ತಪತ್ರಿಕೆಗಳಲ್ಲಿ ಕಣ್ಣೊಡೆಯುವಷ್ಟು ದಪ್ಪಕ್ಷರಗಳಲ್ಲಿ, ಕಣ್ಣಿಗೆ ರಾಚುವ ಬಣ್ಣಗಳಲ್ಲಿ ಪ್ರಕಟವಾಗಿತ್ತು ಸುದ್ದಿ - ರಾಜ್ಯಸರ್ಕಾರದ ಕ್ಷಣಗಣನೆ, ಜನಪ್ರತಿನಿಧಿಗಳ ನಂಗಾನಾಚ್, ಸ್ಪೀಕರ್ ತಿಪ್ಪರಲಾಗ ಇತ್ಯಾದಿ ಇತ್ಯಾದಿ. ಅದು ಬಿಟ್ಟರೆ ಇನ್ನೆಲ್ಲೋ ಆದ ತ್ರಿವಳಿ ಕೊಲೆ, ಕಲ್ಲು ಎತ್ತಿ ಹಾಕಿ ಕೊಲೆ, ಸರಗಳ್ಳತನ, ಅಪಹರಣ, ಅತ್ಯಾಚಾರ ಇತ್ಯಾದಿ ಇತ್ಯಾದಿಗಳಿಂದ ಯಥಾಪ್ರಕಾರ ಪತ್ರಿಕೆಗಳು ತುಂಬಿಹೋಗಿ, ಕೆಲವು ಪತ್ರಿಕೆಗಳಲ್ಲಿ ಮಾತ್ರ ವ್ಯಾಸರಾಜರ ಈ ಪ್ರಕರಣ ಅಂತಹ ಇತರ ಹಲವು ಕ್ರೈಮ್ ಸುದ್ದಿಗಳೊಂದಿಗೆ ಫುಟ್ ಬೋರ್ಡಿನಲ್ಲಿ ಅರೆಕಾಲೂರಿ ಪಯಣಿಸುತ್ತಿತ್ತು.
ಇನ್ನು ಸರ್ಕಾರದ ಕಡೆ ನೋಡಿದರೆ, ಸರ್ಕಾರವೇ ಕೋಮಾದಲ್ಲಿದೆ, ಅದರ ವಾರಸುದಾರರು ನನಗಿಷ್ಟು ನಿನಗಿಷ್ಟು ಎಂಬ, ಬೆಂದಮನೆಯ ಗಳ ಹಿರಿಯುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ಅದ್ಯಾವಾಗಲೋ ಸತ್ತ ಬ್ರಾಹ್ಮಣ ಸನ್ಯಾಸಿಯ ಸಮಾದಿಯ ಬಗ್ಗೆ ಅಳಲು ಯಾರಿಗೆ ಬಿಡುವು? ಸರಿ, ರಾಜ್ಯಸರ್ಕಾರವನ್ನು ದೂಷಿಸಿ ಫಲವಿಲ್ಲ, ಹೋಗಲಿ, ಕೇಂದ್ರದಲ್ಲಾದರೂ 'ನಮ್ಮದೇ' ಸರ್ಕಾರವಿದೆಯಲ್ಲ (ಕಣ್ಣಿಗೆ ಮಸಗಿದ್ದ ಸೆಕ್ಯುಲರ್ ಪೊರೆ ಬಲವಂತವಾಗಿ ಕಳಚಿದ್ದರಿಂದ ಹಿಂದೂವಾದಿಯಾಗಿಬಿಟ್ಟಿದ್ದೆ ನೋಡಿ), ಹೀಗೆಂದುಕೊಂಡು ಕೇಂದ್ರಸರ್ಕಾರದೆಡೆ ನೋಡಿದರೆ, ಆಯಾಯಾ ಸಂದರ್ಭಕ್ಕೆ ತಕ್ಕಂತೆ ಬಸವಣ್ಣನವರ ಬಗ್ಗೆ, ರಾಮಾನುಜರ ಬಗ್ಗೆ, ಮಧ್ವಾಚಾರ್ಯರ ಬಗ್ಗೆ ಹೇಳಿಕೊಟ್ಟ ಮಾತುಗಳನ್ನು ಗಿಣಿಪಾಠವೊಪ್ಪಿಸುವ ಕೇಂದ್ರನಾಯಕರಾರೂ ಕೊನೆಯ ಪಕ್ಷ ತಲೆಯೆತ್ತಿಯೂ ನೋಡುತ್ತಿರಲಿಲ್ಲ. ಯಾರಾದರೂ ತೇಜಸ್ವಿ ಸೂರ್ಯನಿಗೆ ತಿಳಿಸಿ ಸಹಾಯ ಮಾಡಲು ಕೇಳಿ, ಯಾರಾದರೂ ಪರಿಚಯವಿರುವವರು ಸುಬ್ರಮಣ್ಯಂ ಸ್ವಾಮಿಗೆ ತಿಳಿಸಿ, ಪೇಜಾವರರು ತಮ್ಮ ಪ್ರಭಾವವುಪಯೋಗಿಸಿ ಮೋದಿಯವರೊಡನೆ ಮಾತಾಡಲಿ ಎಂದು 'ನಮ್ಮವರು' ಹೊಯ್ಕೊಂಡದ್ದೇ ಬಂತು. ಇಂಥದ್ದೊಂದು ಘಟನೆಯನ್ನು ಯಾರಾದರೂ ಯಾರಿಗಾದರೂ ತಿಳಿಸಬೇಕೇ, ಅವರಿಗೆ ತಿಳಿದಿರುವುದಿಲ್ಲವೇ, ಅವರ ಮೌನಕ್ಕೆ ಏನರ್ಥ ಇವನ್ನು ಅರಿಯಲಾರದ ನಮ್ಮದೇ ಮುಗ್ಧತೆಗೆ ಸಂಕಟವಾಯಿತು. ಅನ್ಯಾಯವಾಗಿರುವುದು ನಮಗೆ, ನಾವು ಸಹಾಯ ಯಾಚಿಸಬೇಕಿಲ್ಲ, ಆಗಬೇಕಾದ್ದನ್ನು ಡಿಮ್ಯಾಂಡ್ ಮಾಡಿ ಪಡೆಯಬೇಕಾದ್ದು, ವ್ಯವಸ್ಥೆ ಯಾರಪ್ಪನ ಆಸ್ತಿಯೂ ಅಲ್ಲ ಎಂಬ ಅರಿವೇ ನಮ್ಮಿಂದ ಎಗರಿಹೋಗಿರುವುದು ಕಂಡು ದುಃಖವಾಯಿತು. ಅಷ್ಟಾದಮೇಲೂ ಏನು? ನಮ್ಮ ದಕ್ಷಿಣ ಬೆಂಗಳೂರಿನ ಸಂಸದರೊಬ್ಬರು ಸಂಸತ್ತಿನಲ್ಲಿ ಎದ್ದು ನಿಂತು "ಕರ್ನಾಟಕದ ಹದಿನಾರನೆಯ ಶತಮಾನದ ಸಂತರೊಬ್ಬರ" ಬಗ್ಗೆ ಒಂದು ಸಾಲಿನ ಪರಿಚಯ ಹೇಳಿ, ಇನ್ನೊಂದು ಸಾಲಿನಲ್ಲಿ, ಅವರ ಬೃಂದಾವನವು ನಾಶವಾಗಿರುವುದರ ಕುರಿತು ತಿಳಿಸಿ, ಮೂರನೆಯ ಸಾಲಿನಲ್ಲಿ ಇದಕ್ಕೆ ತಕ್ಕ ಪರಿಹಾರ ಬೇಕೆಂದು ಒಪ್ಪಿಸಿದರು. ಮಂತ್ರಿಯೊಬ್ಬರು "ಸೂಕ್ತಕ್ರಮ ಕೈಗೊಳ್ಳಲಾಗುವುದು" ಎಂಬ ಒಂದು ಸಾಲಿನ ರೊಟೀನ್ ಭರವಸೆಯನ್ನು ನೀಡಿದರು. ಹೇಳಿದವರಲ್ಲಾಗಲೀ, ಕೇಳಿದವರಲ್ಲಾಗಲೀ, ಉತ್ತರಿಸಿದವರಲ್ಲಾಗಲೀ ನಡೆದ ಘಟನೆಯ ಗಂಭೀರತೆಯ ಕಿಂಚಿತ್ತು ನೆರಳೂ ಕಾಣಲಿಲ್ಲ. ಆ ರೊಟೀನ್ ಭರವಸೆ ಕೊನೆಗೇನಾಯಿತೆಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದರೆ ಸಂಸತ್ತಿನಲ್ಲಿ ನಮ್ಮ ಬಗೆಗೂ ಒಂದು ಸಾಲನ್ನಾದರೂ ಹೇಳಿದ ಈ ಅಮೋಘ ಸಾಧನೆಯ ಬಗೆಗೆ ನಮ್ಮವರು ಆ ತರುಣಸಂಸದರನ್ನು ಇನ್ನಿಲ್ಲದಂತೆ ಕೊಂಡಾಡಿದರು.
ಇವೆಲ್ಲಾ ಸರ್ಕಾರ, ಮಾಧ್ಯಮ, ವ್ಯವಸ್ಥೆಗಳ ವಿಷಯವಾಯಿತಲ್ಲ. ಫೇಸ್ಬುಕ್ಕು ಟ್ವಿಟರುಗಳಾದರೂ ಈ ಸುದ್ಧಿಯಿಂದ ತುಂಬಿಹೋಗಬಹುದೆಂದೆಣಿಸಿದ್ದೆ - ಅದೂ ಇಲ್ಲ! ಫೇಸ್ಬುಕ್ಕಿನಲ್ಲೂ ಈ ಸುದ್ದಿ ಅಂತಹ ಸಂಚಲನವನ್ನುಂಟುಮಾಡಿದಂತೆ ಕಾಣಲಿಲ್ಲ - ಕೊನೆಗೆ "ಕೃಷ್ಣಾ ನೀ ಬೇಗನೆ ಬಾರೋ" ಎಂಬ ಹಾಡಿಗೆ ತಲೆದೂಗುವ ಮನಸ್ಸುಗಳೂ ಈ ದುರಂತಕ್ಕೆ ಬಹುದೊಡ್ಡ ರೀತಿ ಸ್ಪಂದಿಸಿದ್ದು ಕಾಣಲಿಲ್ಲ.
ಇಷ್ಟಾಗುವಾಗ ಇತ್ತ, ಮಹಾತ್ಮರಾದ ವ್ಯಾಸರಾಜರ ಬೃಂದಾವನ ಕಳಚಿಕೊಂಡು, ಒಳಗಿನ ಕುಣಿ ತೋಡಿಸಿಕೊಂಡು ಬಿದ್ದಿತ್ತಲ್ಲ, ಅದನ್ನು ನೋಡಿ ವಿಲಗುಟ್ಟಿದವರು, ಅನ್ನ ಬಿಟ್ಟವರು, ಕಣ್ಣೀರಿಟ್ಟವರು, ಬಿಟ್ಟ ಕೆಲಸ ಬಿಟ್ಟು ಸ್ಥಳಕ್ಕೆ ದೌಡಾಯಿಸಿದವರು ಇದೇ ಸೋ ಕಾಲ್ಡ್ 'ಜಗಳಗಂಟ' ಮಾಧ್ವರು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅಂದು ಹಲವು ಸಂಪ್ರದಾಯಸ್ಥ ಮಾಧ್ವಕುಟುಂಬಗಳಲ್ಲಿ ಒಲೆ ಹಚ್ಚಿಲ್ಲ. ಸುದ್ದಿ ಕೇಳಿ ನಂಬಲಾರದೇ ತತ್ತರಿಸಿದವರೆಷ್ಟೋ, ದಿಗ್ಭ್ರಮೆಯಿಂದ ಕುಸಿದು ಕುಳಿತವರೆಷ್ಟೋ! ಅಲ್ಲಿಗೆ ಧಾವಿಸಲಾಗದವರು ಮನೆಯಲ್ಲಿ ತುಪ್ಪದ ದೀಪ ಹಚ್ಚಿ ಅಖಂಡ ಪಾರಾಯಣ, ಸಚ್ಛಾಸ್ತ್ರಶ್ರವಣಗಳಲ್ಲಿ ತೊಡಗಿದರು. ಮನೆಮನೆಯಲ್ಲೂ ಸೂತಕದ ಛಾಯೆ, ಆತಂಕ, ದುಗುಡ. ಇವರ ಪಾಲಿಗೆ ಅಲ್ಲಿ ಉರುಳಿದುದು ಕೇವಲ ಜುಜುಬಿ "ಕರ್ನಾಟಕದ ಸಾಂಸ್ಕೃತಿಕಸ್ಮಾರಕ"ವಾಗಿರಲಿಲ್ಲ, ಸಮಸ್ತಮಾಧ್ವರ ಶ್ರದ್ಧಾಕೇಂದ್ರದ ಗೋಪುರವಾಗಿತ್ತು, ಅವರ ಅಸ್ಮಿತೆಯ ಪ್ರತೀಕವಾಗಿತ್ತು; ಇವತ್ತಿಗೂ ವ್ಯಾಸರಾಜರ ಪರಂಪರೆಯ ಸ್ವಾಮಿಗಳು ವ್ಯಾಸರಾಜರ ಪ್ರತಿನಿಧಿಗಳಾಗಿ ಒಂದು ಮುಹೂರ್ತಕಾಲ ಪರಂಪರಾಗತ ’ಸಿಂಹಾಸನ’ದ ಮೇಲೆ ಕುಳಿತು ’ರಾಜದರ್ಬಾರು’ ನೀಡುತ್ತಾರೆ. ವಂದಿಮಾಗಧರು "ರಾಜಾಧಿರಾಜ... ಗಜಗಹ್ವರ ಕರ್ಣಾಟಕಸಿಂಹಾಸನಗತಪ್ರಭೋ" ಎಂದು ಪರಾಕು ಕೂಗುತ್ತಾರೆ. ಇಂದಿನ ಅನೇಕ ಜಗದ್ಗುರುಗಳ ಆಧುನಿಕ ಅಡ್ಡಪಲ್ಲಕ್ಕಿ ಉತ್ಸವದಂಥದ್ದಲ್ಲ ಇದು - ವಿಜಯನಗರದ ಕಾಲದಿಂದ ಬೆಳೆದುಬಂದ ಸಂಪ್ರದಾಯ. ಇದು ಮಾಧ್ವಸಮುದಾಯದ ಹೆಮ್ಮೆ. ಆದ್ದರಿಂದ ಅಲ್ಲಿನ ಘಟನೆ ಇಡೀ ಮಾಧ್ವಸಮುದಾಯದ ಎದೆಗೆ ಬಿದ್ದ ಏಟಾಗಿತ್ತು. ಮೊದಲ ಕೆಲಗಂಟೆಗಳ ದಿಗ್ಭ್ರಮೆ, ಯಾರು ಮಾಡಿದರು, ಏಕೆ, ಹೇಗೆ ಇತ್ಯಾದಿ ಪ್ರಶ್ನೆಗಳು ಸುಳಿದು ನೆಲ ಕಚ್ಚಿದಮೇಲೆ, ಕಂಡಕಂಡ ಕಲ್ಲುಗಳಿಗೆಲ್ಲಾ (ರಾಜಕಾರಣಿಗಳಿಗೆ, ಅಧಿಕಾರಸ್ಥರಿಗೆ ಎಂದು ಓದಿಕೊಳ್ಳಿ) ಮೊರೆಯಿಟ್ಟು, ಮೌನದ ಪ್ರತ್ಯುತ್ತರ ಸಿಕ್ಕಮೇಲೆ ಮೇಲೆ ಆದ ಜ್ಞಾನೋದಯ, ಇದು ತಮ್ಮದೇ, ಕೇವಲ ತಮ್ಮದೇ ನಷ್ಟ, ಇನ್ನಾರೂ ಇದರ ಬಗ್ಗೆ ತಲೆ ಕೆಡೆಸಿಕೊಳ್ಳುವುದಿಲ್ಲ ಎಂಬುದು.
ವಿಕಾರವಾಗಿ ಗುಳಿ ತೆರೆದುಕೊಂಡು ಬಿದ್ದಿದ್ದ ಬೃಂದಾವನದ ಅವಶೇಷ ತಮ್ಮದೇ ಎದೆಬಗೆದು ಕಿತ್ತಿಟ್ಟಂತೆ, ಉಸಿರಿಗೆ ಹಪಹಪಿಸುವಂತೆ ಮಾಡಿತ್ತು. ಸುಮಾರು ಸಾವಿರ ಎರಡುಸಾವಿರ ಜನ ಮಾಧ್ವಬಂಧುಗಳು (ಆರು ಸಾವಿರ ಎಂಬ ವರದಿಯಿದೆ, ತಿಳಿಯದು) ಅಲ್ಲಿ ಸೇರಿ ಬೃಂದಾವನ ಪುನರ್ನಿರ್ಮಾಣ ಮಾಡುತ್ತೇವೆಂದು ಘೋಷಿಸಿದಾಗ ಮೊದಲು ನನಗೆ ಗಾಬರಿಯಾಯಿತು - ಎಲಾ ಇಂತಹ ಒಂದು ದುಷ್ಕೃತ್ಯ ನಡೆದಿದೆ, ಪೋಲೀಸರು ಇನ್ನೂ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ, ಇಷ್ಟೊಂದು ಜನ ಇಲ್ಲಿ ಸೇರಿ ಹೀಗೆ ಸರಿದಾಡಿದರೆ ಸಾಕ್ಷಿಗಳು ನಾಶವಾಗುವುದಿಲ್ಲವೇ, ಬೃಂದಾವನ ಕಟ್ಟಿಬಿಟ್ಟರೆ ತನಿಖೆಗೆ ಏನು ಕುರುಹು ಉಳಿಯುತ್ತದೆ, ತಪ್ಪಿತಸ್ಥರು ಆರಾಮವಾಗಿ ತಪ್ಪಿಸಿಕೊಂಡುಬಿಡುವುದಿಲ್ಲವೇ ಎಂಬುದು ನನ್ನ ಚಿಂತೆ. ಆದರೆ ಬೃಂದಾವನದ ನಿರ್ಮಾಣಕಾರ್ಯ ಆರಂಭವಾಗಿ ಮೊದಲ ಸುತ್ತು ಮುಗಿಯುತ್ತಿದ್ದಂತೆ ಒಂದು ವಿಷಯ ಮನದಟ್ಟಾಯಿತು - ಇದು ಆಗಬೇಕಾದ್ದೇ ಹೀಗೆ. ಇದು ಇಡೀ ಸಮುದಾಯದ ನೋವಿನ ಪ್ರಶ್ನೆ - ಅದು ತನ್ನ ಎದೆಯಲ್ಲಾದ ಬಹುದೊಡ್ಡ ದೊಗರನ್ನು ತುರ್ತಾಗಿ ಸರಿಪಡಿಸಿಕೊಳ್ಳುತ್ತಿದೆ - ಅಂತಿಮವಾಗಿ ಇದೇ ಸತ್ಯ - ಇದರ ಮುಂದೆ ಯಾವುದೋ ಸಂಸ್ಕೃತಿ, ಐತಿಹಾಸಿಕ ಸ್ಮಾರಕ ಈ ಮಾತೆಲ್ಲಾ ಬರೀ ಮಣ್ಣಂಗಟ್ಟಿ. ಇದು ಬಗೆಹರಿಯುತ್ತಿದ್ದಂತೆ ನನ್ನಲ್ಲೆದ್ದಿದ್ದ ಪ್ರಶ್ನೆಗಳು ಅದೆಷ್ಟು ಬಾಲಿಶವೆಂದು ಮನದಟ್ಟಾಯಿತು - ಏಕೆಂದರೆ ತನಿಖೆ ಯಾವ ಹಾದಿ ಹಿಡಿಯುತ್ತದೆಂಬುದು ಎಲ್ಲರಿಗೂ ತಿಳಿದ ವಿಷಯ, ಅದಕ್ಕೋಸ್ಕರ, ಧ್ವಂಸಗೊಂಡ ಈ ದೊಗರನ್ನು ತೆರೆದಿಟ್ಟುಕೊಂಡು ಕಾಯುವುದು ಅಪಾರ ನೋವಿನ ವಿಷಯ. ಇನ್ನು ಈ 'ಸಾಂಸ್ಕೃತಿಕ' ಆಘಾತವನ್ನು ಇಡೀ ನಾಡು 'ಸಹಿಸಿ'ಕೊಂಡ ರೀತಿ ಕಣ್ಣಮುಂದೆಯೇ ಇದೆ. ಇನ್ನುಳಿದದ್ದೇನು? ನಮ್ಮ ನೋವು, ಅದು ನಮಗೆ ಹೆಚ್ಚು - ನಾವು ಸರಿಪಡಿಸಿಕೊಳ್ಳಬೇಕಾದ್ದು ಅದನ್ನೇ, ಮತ್ತು ಅದನ್ನು ಸರಿಪಡಿಸಿಕೊಳ್ಳಬೇಕಾದವರೂ ನಾವೇ - ಅದಷ್ಟೇ ಸತ್ಯ. ಇದಾದಮೇಲೆ ಇನ್ನೂ ಒಂದು ಪ್ರಶ್ನೆ, ಆತಂಕ ಕಾಡಿತು. ಈಗೆಲ್ಲಾ ಭಕ್ತಿಯ ಅಬ್ಬರವೆಂದರೆ ಅತಿರೇಕದ ಪ್ರತಿಕ್ರಿಯೆಯಷ್ಟೇ. ಆಗಲೇ "ವ್ಯಾಸರಾಜರಿಗೆ ವೈಭವೋಪೇತವಾದ ಬೃಂದಾವನವನ್ನು ನಿರ್ಮಾಣ ಮಾಡೋಣ" ಎಂಬಂತಹ ಮಾತುಗಳು ಕೇಳಿಬಂದಾಗ, ’ವೈಭವೋಪೇತ’ ಬೃಂದಾವನದ ಹೆಸರಿನಲ್ಲಿ ಇವರೆಲ್ಲ ಸೇರಿ ಕಣ್ಣಿಗೆ ರಾಚುವಂತೆ ಆಧುನಿಕ ಡಬ್ಬವನ್ನೆಲ್ಲಿ ನಿರ್ಮಿಸಿಬಿಡುತ್ತಾರೋ, ಅದರ ಪಾವಿತ್ರ್ಯಕ್ಕೆ, ಹಳಮೆಗೆ, ಐತಿಹಾಸಿಕತೆಗೆ ಎಲ್ಲಿ ಧಕ್ಕೆಯಾಗಿಬಿಡುತ್ತದೆಯೋ ಎಂಬ ಚಿಂತೆಯಿದ್ದಿತು. ಆದರೆ ಪುನರ್ನಿರ್ಮಾಣಕಾರ್ಯ ಮುಂದುವರೆದಂತೆ, ನನ್ನ ಚಿಂತೆ ಎಷ್ಟು ನಿರಾಧಾರವಾದುದೆಂದು ಅರಿವಾಯಿತು.
ಎಷ್ಟು ಅಚ್ಚುಕಟ್ಟಾಗಿ, ಯಾವ ಪುರಾತತ್ವ ಇಲಾಖೆಯ ಕೆಲಸಕ್ಕೂ ಕಡಿಮೆಯಿಲ್ಲದಂತೆ, ಚೆಲ್ಲಿಬಿದ್ದಿದ್ದ ಕಲ್ಲುಗಳನ್ನು ಅದದೇ ಕ್ರಮದಲ್ಲಿ ಎತ್ತಿ ಜೋಡಿಸಿ, ಭಗ್ನವಾಗಿದ್ದೆಡೆ ಅದರ ಮೂಲವಾಸ್ತುವಿಗೆ ಒಂದಿನಿತೂ ಧಕ್ಕೆ ಬರದಂತೆ ಪುನರ್ನಿರ್ಮಿಸಿದ್ದಾರೆ. ಭಕ್ತಿಯ ಭರದಲ್ಲಿ 'ವೈಭವೋಪೇತವಾದ' ಹೊಸದೊಂದು ಬೃಂದಾವನವನ್ನೇ ನಿರ್ಮಿಸಿದ್ದರೆ ಯಾರೂ ತಡೆಯುತ್ತಿರಲಿಲ್ಲ, "ಪುರಾತನ ಸ್ಮಾರಕ"ವೊಂದು ನಾಶವಾಗಿದ್ದಕ್ಕೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆ ಎದೆಬಗೆವ ನೋವಿನಲ್ಲೂ ಸ್ಮಾರಕದ ಪುರಾತನತೆಯನ್ನೂ, ಆ ಹಳೆಮೆಯ ಪಾವಿತ್ರ್ಯವನ್ನೂ ಮನಸ್ಸಿನಲ್ಲಿಟ್ಟುಕೊಂಡು ಪೊರೆದದ್ದು, ಇದ್ದುದನ್ನು ಇದ್ದಂತೆಯೇ ಪುನರ್ನಿರ್ಮಿಸಿದ್ದು ನಮ್ಮದೇ ಸಾಂಪ್ರದಾಯಿಕ ವಿವೇಕ.
ಇಪ್ಪತ್ನಾಲ್ಕಕ್ಕೂ ಹೆಚ್ಚು ಗಂಟೆ ಅನ್ನ ನಿದ್ರೆಯ ಹಂಗು ತೊರೆದು ಕೈಗೊಂಡ ಕೆಲಸ ಪೂರ್ತಿಗೊಂಡನಂತರ ಮರುದಿನ ಸಂಜೆಯ ಹೊತ್ತಿಗೆ ಊಟಕ್ಕೆ ಕುಳಿತ ಆ ಮೊಗಗಳಲ್ಲಿ ಅರಳಿದ್ದ ಸಂತಸ, ಸಂತೃಪ್ತಿ, ಧನ್ಯತೆ ಅದಾವ ಬೆಲೆ ಕೊಟ್ಟರೆ ತಾನೆ ಸಿಕ್ಕೀತು? ಬಹುಕಾಲದನಂತರ ಆ ಮುಖಗಳಲ್ಲಿ ಕಂಡುಬಂದ ಒಮ್ಮತದ ಭಾವ, ಆ ಒಗ್ಗಟ್ಟು ಹೀಗೇ ಇದ್ದರೆ ಸಾಕು. ಈ ಸರ್ಕಾರಗಳಾಗಲೀ, ವ್ಯವಸ್ಥೆಯಾಗಲೀ, ಸಮಾಜವಾಗಲೀ ನಮ್ಮನ್ನು ಲೆಕ್ಕಕ್ಕೇ ಇಡದಿದ್ದರೂ ಅವರಾರ ಹಂಗೂ ಇಲ್ಲದೇ ನಾವು ಮೇಲೇಳಬಲ್ಲೆವು, ಬಾಳಬಲ್ಲೆವು ಎಂಬುದನ್ನು ಇಂದು ಮತ್ತೊಮ್ಮೆ ಪ್ರಪಂಚಕ್ಕೆ ತೋರಿದರು ಇಲ್ಲಿ ನೆರೆದ ಜನ - ಒಂದು ಹೋರಾಟವಿಲ್ಲ, ಕೂಗಾಟ ಚೀರಾಟಗಳಿಲ್ಲ, ಒಂದು ಕಟ್ಟಡಕ್ಕೆ ಕಲ್ಲು ಬೀಳಲಿಲ್ಲ, ಒಂದು ಸಾರ್ವಜನಿಕ ಆಸ್ತಿ ಧ್ವಂಸವಾಗಲಿಲ್ಲ (ಯಾರೋ ಒಬ್ಬರು ’ಮಾನವತಾವಾದಿಗಳು’ "ಬ್ರಾಹ್ಮಣ್ಯದ ಹೇರಿಕೆ" ಎನ್ನುತ್ತಿದ್ದರು. ಅದು ಇದೇ ಇರಬೇಕು ಬಹುಶಃ!), ಸರ್ಕಾರದ ನೆರವಿಗೆ ಕಾಯಲಿಲ್ಲ - ನಮ್ಮ ನಷ್ಟ, ನಮ್ಮ ನೋವು, ನಮ್ಮ ಪರಿಹಾರ, ನಾವು ಕಂಡುಕೊಂಡೆವಷ್ಟೇ. "ನೋಡಿದಿರಾ, ಇದೇ ಹಿಂದೂ ಸಂಸ್ಕೃತಿಯ ಮಹತ್ತು" ಎಂದು ಒಬ್ಬರು ಮಹಿಳಾರಾಜಕಾರಣಿ ಉಬ್ಬುತ್ತಿದುದೂ ಗಮನಕ್ಕೆ ಬಂತು. ಅವರಿಗೆ ವಿನಮ್ರನಾಗಿ ಹೇಳುವುದಿಷ್ಟೇ "ತಮ್ಮ ಶ್ಲಾಘನೆಗೆ ಧನ್ಯವಾದಗಳು, ಆದರೆ ಕ್ಷಮಿಸಿ ಮೇಡಂ, ನೀವು ಹೇಳಿದ ಹಿಂದೂ ಸಂಸ್ಕೃತಿಯ ಮಹತ್ತಾಗಲೀ ಅಥವಾ ಆ ಇನ್ನೊಬ್ಬರು ಹೇಳುವ ವಿಶ್ವಮಾನವತ್ವ/ಭ್ರಾತೃತ್ವಗಳಾಗಲೀ ನಮ್ಮ ಸಹಾಯಕ್ಕೆ ಬರಲಿಲ್ಲ, ಬದಲಿಗೆ ಎರಡೂ ಸುರಕ್ಷಿತ ದೂರದಲ್ಲಿ ನಿಂತು ತಮಾಷೆ ನೋಡುತ್ತಿದ್ದುವು; ನಮ್ಮ ಮನೆಯ ದುರಂತವನ್ನು ನಾವು ತೆಪ್ಪಗೆ, ನಮಗೆ ತಿಳಿದಂತೆ ನಿಭಾಯಿಸಿಕೊಂಡೆವಷ್ಟೇ - ಇದಕ್ಕೆ ಇಷ್ಟಕ್ಕಿಂತ ಹೆಚ್ಚಿನ ಬಣ್ಣ ಬೇಡ" ಇನ್ನೇನು, ವಿಶ್ವಭ್ರಾತೃತ್ವದ ಬಗ್ಗೆ, ಹಿಂದೂ ಏಕತೆಯ ಬಗ್ಗೆ, ಬ್ರಾಹ್ಮಣರ ಒಗ್ಗಟ್ಟಿನ ಬಗ್ಗೆ, ಕನ್ನಡತನದ ಬಗ್ಗೆ ಬೇಕಷ್ಟು ರಾಜಕೀಯ ಭಾಷಣ ಕುಟ್ಟಬಹುದು, ಬೇಡವೆಂದವರಾರು, ಆದರೆ ವ್ಯಾಸರಾಯರನ್ನು ದಯವಿಟ್ಟು ಅದರಿಂದ ದೂರವಿಟ್ಟುಬಿಡಿ - ಏಕೆಂದರೆ ಅವರು ನಮ್ಮವರು, ಕೇವಲ ನಮ್ಮವರು, ಮಾಧ್ವರ ಗುರುಗಳು. ನಮ್ಮ ಗುರುಗಳು, ನಮ್ಮ ಹೆಮ್ಮೆ.
ಓ, ಈ ನಿಲುವು ನಮಗೆ ಜಾತಿವಾದಿಯ ಪಟ್ಟವನ್ನೋ, ಹಿಂದುತ್ವವಿರೋಧಿಯ ಪಟ್ಟವನ್ನೋ, ಬ್ರಾಹ್ಮಣ ಒಗ್ಗಟ್ಟಿನ ವಿರೋಧಿಯ ಪಟ್ಟವನ್ನೋ ತಂದೀಯಬಹುದು - ಅಡ್ಡಿಯೇನು? ನಾವು ಅದಾವುದೂ ಅಲ್ಲವೆಂಬುದು ನಮಗೆ ತಿಳಿದಿರುವಂತೆಯೇ, ಯಾವಯಾವುದೋ ಇಸಮ್ಮಿನ ಮುಸುಕಿನಡಿಯಲ್ಲಿ ಜಾತೀಯತೆಯ ಹೊಲಸುಣ್ಣುವುದಕ್ಕಿಂತ ಪ್ರಾಮಾಣಿಕವಾಗಿ ನೇರವಾಗಿ ನಮ್ಮ ಜಾತಿಯ ತಳಿಗೆಯಲ್ಲಿ ಅನ್ನವುಂಡು ಇತರರನ್ನು ಗೌರವಿಸುವುದು ಎಷ್ಟೋ ಮೇಲು. ಹೀಗಾಗಿ, "ಹೌದು, ನಾವು ಮಾಧ್ವರು... ಏನೀಗ?"
ಹಾಗೆಯೇ ಬೃಂದಾವನವನ್ನು ಒಡೆದ ಮನಸ್ಸುಗಳಿಗೊಂದು ಮಾತು. ಶ್ರೀ ವ್ಯಾಸರಾಜರಂತಹ ಮಹಾನ್ ಚೇತನಗಳು ಅವಿನಾಶಿ, ಅವರ ಚೇತನವಿರಲಿ, ಕೊನೆಗೆ ಅವರ ಬೃಂದಾವನದ ಒಂದು ಕಲ್ಲನ್ನೂ ನೀವು ಕೊಂಕಿಸಲಾಗಲಿಲ್ಲ. ವ್ಯಾಸರಾಜರಂತಹ ಪುಣ್ಯಜೀವರನ್ನು ಮುಟ್ಟಿದ ನಿಮ್ಮ ಕೈ ಪಾವನವಾಯಿತು, ಹೋಗಿಬನ್ನಿ.