Monday, January 9, 2012

ಚೊಚ್ಚಿಲ ಕಂದನನ್ನು ಕಾಯುತ್ತಾ

"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapaana.com) ವಿವಿಧ ಛಂದಸ್ಸುಗಳಲ್ಲಿ "ಚೊಚ್ಚಿಲ ಬಸಿರಿನ" ಬಗ್ಗೆ ಪದ್ಯಗಳನ್ನು ರಚಿಸುವ ಆಹ್ವಾನವಿತ್ತು. ಕವಯಿತ್ರಿಗಿರುವ ಅನುಭವ ಸಂಪತ್ತು ಈ ವಿಷಯದಲ್ಲಿ ಕವಿಗಿಲ್ಲವೆನ್ನುವುದೇನೋ ನಿಜ. ಆದರೂ ಕವಿಗಿರುವ ಕಲ್ಪನಾಸ್ವಾತಂತ್ರ್ಯವನ್ನು ತುಸು (ದುರ್)ಉಪಯೋಗ ಪಡಿಸಿಕೊಂಡಿದ್ದೇನೆ. ಇದರಲ್ಲಿ ’ಬುರುಡೆ-ಬುಡುಬುಡಿಕೆ’ಕಂಡುಬಂದರೆ ತಾಯಂದಿರು ಮನ್ನಿಸಿ.
ಪಂಚಮಾತ್ರಾ ಚೌಪದಿ
ಮುಗಿಲ ಮೊದಲನೆ ಮಳೆಗೆ ನೆನೆದ ಮಣ್ಣಿನ ಕಂಪು
ಮುಗಿದ ಹಚ್ಚನೆ ಮೊಗ್ಗು ಬಿರಿವ ಕೆಂಪು
ಬಗೆ-ಮೈಗಳುಬ್ಬೆ ಮೊದಲಬ್ಬೆತನದಾ ಪೆಂಪು
ನಗೆಸೂಸಿ ಹರಡುತಿದೆ ಮನೆಗೆ ತಂಪು.

ಉತ್ಫಲಮಾಲಾ
ಬೆಚ್ಚನೆ ರಾತ್ರೆಯೊಳ್ ಮನದಿ ಶಂಕೆಯು ಹಿಗ್ಗುತ ಚುಚ್ಚಿ ಕಾಡಿರಲ್
ಬೆಚ್ಚುತ ಚಿಂತಿಪಳ್ ಮಗುವಿದೇಂ ಮಲಗಿಪ್ಪುದೊ ಸತ್ತುದೊ ಕಾಣೆನೇ ಶಿವಾ
ಮುಚ್ಚಿದ ಕಂಗಳೊಳ್ ನಿದಿರೆ ಬಾರದೆ ಬೇಗುದಿ ಭಾರವಾಗಿರಲ್
ಕೆಚ್ಚನೆ ಕಾಲೊಳೊದ್ದು ಬಸಿರಂ ತನಯಂ ಹಿರಿ ಚಿಂತೆನೀಗುವಂ

ಕಂದ
ಕಂದಂ ಬಸಿರೊದೆವಂದಂ
ಬಂಧುರಮೀ ತಾಯ್ ಕುಲಾವಿಗನಸಿನ ಚಂದಂ
ಕಂದಂ ನಸುನಗುವೋಲ್ ಮೇಣ್
ಮುಂದೋಡುತ ಬಿಳ್ದು ಭೋರಿಡುವವೋಲ್ ನೆನೆವಳ್

ಮತ್ತೇಭವಿಕ್ರೀಡಿತ
ಮೆರೆವಳ್ ಮೋದದಿ ಮತ್ತೆ ಮೈಯ ಮರೆವಳ್ ಮತ್ತಾಲಸಂ ಬಾಧಿಸಲ್
ಒರಗುತ್ತುಂ ಕಿರು ಮಂಚದೊಳ್ ನಲುಮೆ ತೋಳ್ ಸಾಂಗತ್ಯಮಂ ಧೇನಿಪಳ್
ಕಿರಿದೊಂದೇ ಕ್ಷಣದೊಳ್ ಮನೋನಯನದೊಳ್ ಕಂದಂ ನಗುತ್ತೈತರಲ್
ಸಿರಿಯಂ ಕಂಡವೊಲಾಗಿ ಕಂಡ ಕನಸೊಳ್ ತೇಲುತ್ತಲಾನಂದಿಪಳ್

ರಗಳೆ
ಮೊದಲಿನ ಹಿಗ್ಗದು ಆಗಸಮುಟ್ಟಲ್
ಬೆದರಿಪ ಭಯವದು ಮೈ ಮನ ತಟ್ಟಲ್
ಬಗೆಬಗೆ ಬಯಕೆಯ ತೆನೆಯೊಡೆಯುತಿರಲ್
ಚಿಗುರುವ ಲತೆಯೊಲ್ ಬಸಿರದು ಬೆಳೆಯಲ್
ತೆಗೆವಾ ನೋವದು ಬೆಳೆದಿರೆ ಒಡಲೊಳ್
ಬಗೆಯೊಳ್ ಕಂದಂ ನೋವ ಮರೆಸಿರಲ್
ಬೆವರುತ ಸುಖದೊಳ್ ಬೆದರುತ ಭಯದೊಳ್
ನವೆವಳ್ ಬೆಳೆವಳ್ ಚೊಚ್ಚಲ ಬಸಿರೊಳ್
ಕೊ: ಗೆಳೆಯ ಚಂದ್ರಮೌಳಿಯವರು ಮೇಲಿನ ಉತ್ಫಲಮಾಲಾ ವೃತ್ತದ ಎರಡನೆಯ ಸಾಲಿನಲ್ಲಿ ಮೂರಕ್ಷರ ಹೆಚ್ಚಾಗಿ ಬಂದಿದೆಯೆಂಬುದನ್ನು ಗಮನಿಸಿದರು. ಇದನ್ನು ಸರಳವಾಗಿ ಸರಿಪಡಿಸಬಹುದಾದರೂ, ಅದೇಕೋ ಇದನ್ನು ಸರಿಪಡಿಸಲು ಮನಸ್ಸೊಪ್ಪುತ್ತಿಲ್ಲ. ಈ ಹೆಚ್ಚಿನ ಗಣವನ್ನು ಗರ್ಭಸ್ಥ ಶಿಶುವಿನ ಪ್ರತೀಕವೆಂದು ಹಾಗೆಯೇ ಉಳಿಸಿಕೊಳ್ಳುತ್ತೇನೆ:

ಆರರ ಮೇಲಿನೊಂದು ಗಣ ದೋಷಮದುತ್ಫಲ ಮಾಲೆಗೆಂದಪರ್
ಮೀರಿರೆ ಪದ್ಯದಂದಗಿಡುಗುಂ ಸರಿ ತೋರದು ಛಂದಕೆಂದಿರಲ್
ಆರನೆ ಕಾಲ್ವೆರಲ್ ದೊರೆಯ ಕಂದನ ಚಂದವ ಕೀಳುಗಟ್ಟಿತೇಂ
ಮೀರಿದ ಭಾರಮುತ್ಫಲಿತ ಗರ್ಭಕೆ ಶೋಭೆಯ ತರ್ಪುದೇ ದಿಟಂ

ಮರೆಯಲ್ ಭಾವದದೊಂದು ಜೋರ ಸೆಳೆಯೊಳ್ ಮೇಲಾಗಿ ಮೂರಕ್ಕರಂ
ನೆರೆಯಲ್ ತಾಳವು ತಪ್ಪಿ ಮುಗ್ಗರಿಸಲುಂ ಛಂದಸ್ಸದೇಂ ಬೇರೆಯೇಂ?
ಸರಿಯೈದೇವೆರಲಿದ್ದೊಡಂ ಮನುಜಗಾರಾಯ್ತೆಂದು ಬೇರಾದನೇಂ?
ಮರೆವೀ ಮಾನವ ಜನ್ಮಜಾತ ಗುಣವೈ ಬ್ರಹ್ಮಾದಿಗಳ್ ಮೀರರೇಂ?

ಪದ್ಯದಲ್ಲೊಂದು ಗಣ ಮೀರಿದರೆ ಛಂದಸ್ಸು ಕೆಡುವುದು, ನಿಜ. ಕಾಲಿಗೆ ಐದೇ ಬೆರಳಾದರೂ ಅಪರೂಪಕ್ಕೆ ಆರು ಬೆರಳಿರುವುದಿಲ್ಲವೇ? ಅದೇನು ಚಂದ್ರಹಾಸನ ಅಂದಗೆಡಿಸಿತೇ? ಮೀರಿದ ಭಾರವು ಬಸಿರಿನ ಶೋಭೆಯನ್ನು ಹೆಚ್ಚಿಸುವುದಲ್ಲದೇ ಕೆಡಿಸುವುದೇ? ಬ್ರಹ್ಮಾದಿಗಳೇ ಮರೆತು ಬೆರಳಿನ ಲೆಕ್ಕವನ್ನು ಹೆಚ್ಚು ಕಡಿಮೆ ಮಾಡುವಾಗ ಮರೆವು ಮನುಜನಿಗೆ ಸಹಜವಲ್ಲವೇ? :)