ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ
ಇದು ಭಗವದ್ಗೀತೆಯಲ್ಲಿ ಪರಮಾತ್ಮನ ಭರವಸೆ - ಸಾಧುಗಳನ್ನು ರಕ್ಷಿಸಲು, ಕೆಟ್ಟದ್ದನ್ನು ನಾಶಮಾಡಲು, ಧರ್ಮಸ್ಥಾಪನೆ ಮಾಡಲು ಯುಗಯುಗದಲ್ಲೂ ಅವತರಿಸುತ್ತೇನೆ. ಮತ್ಸ್ಯಾವತಾರದಲ್ಲಿ ಸೋಮಕನನ್ನು ಸಂಹರಿಸಿದ, ಕೂರ್ಮಾವತಾರದಲ್ಲಿ ಮಂದರವನ್ನೆತ್ತಿ ಹಿಡಿದು ಅಮೃತಮಥನಕ್ಕೆ ಆಧಾರವಾದ, ವರಾಹ ನರಸಿಂಹಾವತಾರಗಳಲ್ಲಿ ದುಷ್ಟರಾದ ಹಿರಣ್ಯಾಕ್ಷ-ಹಿರಣ್ಯಕಶಿಪುಗಳನ್ನು ಸಂಹರಿಸಿ ಪ್ರಹ್ಲಾದನನ್ನು ಉದ್ಧರಿಸಿದ, ಪರಶುರಾಮನಾಗಿ ದುಷ್ಟಕ್ಷತ್ರಿಯರನ್ನು ಸಂಹರಿಸಿದ, ಇನ್ನು ರಾಮ-ಕೃಷ್ಣರ ಕತೆಯಂತೂ ತಿಳಿದದ್ದೇ. ಆದರೆ ವಾಮನಾವತಾರದ ಕತೆಯೇನು? ಪರಮಾತ್ಮನ ಅವತಾರವೆಂದರೆ ದುಷ್ಟಸಂಹಾರವಾಗಬೇಕು, ಅಥವಾ ಶಿಷ್ಟರಕ್ಷಣೆಯಾದರೂ ಆಗಬೇಕು. ಬಲಿಚಕ್ರವರ್ತಿ ರಾಕ್ಷಸನಿರಬಹುದು, ಆದರೆ ದುಷ್ಟನಿದ್ದಿಲ್ಲ - ಬದಲಿಗೆ ಮಹಾ ಧರ್ಮಾತ್ಮ, ದಾನಿ, ಪ್ರಜಾವತ್ಸಲ, ಪರಾಕ್ರಮಿ ಎಂದೇ ಭಾಗವತ ಹೇಳುತ್ತದೆ. ಸುಖಲೋಲುಪರಾದ ದೇವತೆಗಳು ಇವನ ಪರಾಕ್ರಮದ ಮುಂದೆ ನಿರ್ವೀರ್ಯರಾಗಿ ತಮ್ಮದೆಲ್ಲವನ್ನೂ ಕಳೆದುಕೊಂಡು ರಾಜ್ಯಭ್ರಷ್ಟರಾದದ್ದು ಸಹಜವೇ. ದೈತ್ಯರ ಉಪಟಳಕ್ಕೆ ಸಿಕ್ಕಿ ತನ್ನ ಮಕ್ಕಳು ಪಡುತ್ತಿದ್ದ ಪಾಡನ್ನು ನೋಡಿ ತಡೆಯಲಾರದೇ ತಾಯಿಯಾದ ಅದಿತಿ ಮಹಾವಿಷ್ಣುವನ್ನು ಪ್ರಾರ್ಥಿಸುತ್ತಾಳೆ. ಅವಳ ಮಗನಾಗಿ ಹುಟ್ಟಿ ದೈತ್ಯರನ್ನು ನಿಗ್ರಹಿಸಿ ದೇವತೆಗಳಿಗೆ ಅವರ ರಾಜ್ಯವನ್ನು ಸಂಪಾದಿಸಿಕೊಡುವುದಾಗಿ ವಿಷ್ಣು ಭರವಸೆ ನೀಡುತ್ತಾನೆ.
ಭರವಸೆ ನೀಡಿದ್ದಾಯಿತು, ಆದರೆ ಅದನ್ನು ಆಗಮಾಡಿಸುವುದು ಹೇಗೆ? ದುಷ್ಟರನ್ನು ಸಂಹರಿಸುವುದು ಪರಮಾತ್ಮನಿಗೆ ಕಷ್ಟವಲ್ಲ, ಆದರೆ ಮಹಾತ್ಮನಾದ, ಮೇಲಾಗಿ ವಿಷ್ಣುಭಕ್ತನೇ ಆದ ಬಲಿಯನ್ನು ಸಂಹರಿಸುವುದು ಹೇಗೆ? ಸಂಹರಿಸುವುದು ಏಕೆ? ಸಂಹರಿಸಿದರೆ ಅದು "ಧರ್ಮಸಂಸ್ಥಾಪನೆ" ಹೇಗಾದೀತು? ಇಂಥಲ್ಲಿ ಸ್ವತಃ ಪರಮಾತ್ಮನೂ ನಿಸ್ಸಹಾಯಕನಾಗಿಬಿಡುತ್ತಾನಲ್ಲ. ಅದಕ್ಕಾಗಿಯೇ ಇನ್ನಾವ ಅವತಾರದಲ್ಲೂ ಮಾಡದಂತೆ ಇಲ್ಲಿ ಯಾಚಕನಾಗಿ ಬರಬೇಕಾಯಿತು; ಮೂರಡಿ ಎತ್ತರದ ಕುಳ್ಳನಾಗಿ ಬರಬೇಕಾಯಿತು. "ಆರಡಿ ಎತ್ತರದ ಶರೀರವನ್ನು ಗೇಣುದ್ದ ಮಾಡಿಕೊಂಡು" ಎನ್ನುವ ಗಾದೆಯೇ ಇದೆಯಲ್ಲ - ಬೇಡಬೇಕಾದಲ್ಲಿ ಹಾಗೇ ತಾನೆ?
ಬಲಿ ಧರ್ಮಾತ್ಮನೇ ಇದ್ದರೂ ದಾನಿಯೆಂಬ ಹಮ್ಮು ಮಾತ್ರ ಸಹಜವಾಗಿಯೇ ಇತ್ತು. ಅದರಲ್ಲೂ ಬೇಡುವಾತ ಮೂರಡಿಯ ಕುಳ್ಳನಾದರೆ ನಮಗರಿವಿಲ್ಲದೇ ಎರಡಾಳೆತ್ತರಕ್ಕೆ ಹಿಗ್ಗಿಬಿಡುತ್ತೇವಷ್ಟೇ? ಜೊತೆಗೆ ತಾನು ಭಾಗವತೋತ್ತಮನಾದ ಪ್ರಹ್ಲಾದನ ಮೊಮ್ಮಗನೆಂಬ ಹೆಮ್ಮೆ ಬೇರೆ. ಬಂದ ವಟುವನ್ನು ಉಪಚರಿಸಿ ಸತ್ಕರಿಸಿ ಬಲಿ ಹೇಳಿದ, ನಿನಗೆ ಬೇಕಾದ್ದನ್ನು ಕೇಳಬಹುದು, ಕೊಡುತ್ತೇನೆ. ವಾಮನ ಹೇಳಿದ, ಹೆಚ್ಚೇನೂ ಬೇಡ, ಮೂರಡಿ ಜಾಗ ಕೊಡು ಸಾಕು. ಇದನ್ನು ಕೇಳಿ ಬಲಿಗೆ ತಡೆಯದಷ್ಟು ನಗೆ. ಎಲಾ, ಸಾಕ್ಷಾತ್ ಬಲಿಚಕ್ರವರ್ತಿ ಇಲ್ಲಿದ್ದೇನೆ, ಏನು ಬೇಕಾದರೂ ಕೊಡಲು ಸಿದ್ಧನಿದ್ದೇನೆ, ಬೇಕೆಂದರೆ ಒಂದಿಡೀ ದ್ವೀಪವನ್ನೇ ಕೊಡಬಲ್ಲೆ, ಈ ವಟು ಅವಿವೇಕಿ ಹುಡುಗನಂತೆ ತೋರುತ್ತಾನಲ್ಲ ಎಂಬುದು ಅವನ ಯೋಚನೆ. ಅದನ್ನೇನೂ ಮುಚ್ಚಿಟ್ಟುಕೊಳ್ಳದೇ ಹಾಗೇ ಹೇಳಿಯೂ ಬಿಡುತ್ತಾನೆ. ಅದಕ್ಕೆ ವಾಮನ ಕೊಡುವ ಉತ್ತರ ಮಾರ್ಮಿಕವಾಗಿದೆ - "ತ್ರಿಭಿಃ ಕ್ರಮೈರಸಂತುಷ್ಟೋ ದ್ವೀಪೇನಾಪಿ ನ ಪೂರ್ಯತೇ - ಮೂರು ಹೆಜ್ಜೆಯಿಂದ ಸಂತುಷ್ಟರಾಗದವರು ದ್ವೀಪದಿಂದಲೂ ಸಂತುಷ್ಟರಾಗುವುದಿಲ್ಲ".
ಬಲಿ ನಗುನಗುತ್ತಾ, ಸರಿ, ನಿನ್ನಿಷ್ಟ ಎಂದು ಹೇಳಿ ಮೂರು ಹೆಜ್ಜೆ ಭೂಮಿಯನ್ನು ಧಾರೆಯೆರೆದು ಕೊಡುತ್ತಾನೆ. ಬಂದವನು ಸಾಕ್ಷಾತ್ ಮಹಾವಿಷ್ಣುವೇ, ನಿನ್ನ ಸರ್ವಸ್ವವನ್ನೂ ಅಪಹರಿಸಿ ಶತ್ರುಗಳಾದ ದೇವತೆಗಳಿಗೆ ಕೊಟ್ಟುಬಿಡುತ್ತಾನೆ ಎಂದು ಶುಕ್ರಾಚಾರ್ಯರು ಹೇಳಿದರೂ ಬಲಿ ಕೊಟ್ಟ ಮಾತಿನಿಂದ ಹಿಂದೆಗೆಯುವುದಿಲ್ಲ. ಇವನು ವಿಷ್ಣುವೇ ಆದರೆ ನಿರಪರಾಧಿಯಾದ ನನ್ನನ್ನು ಮೋಸಗೊಳಿಸಿ ತನ್ನ ಕೀರ್ತಿಯನ್ನು ಕಳೆದುಕೊಳ್ಳಲಾರ ಎಂಬುದು ಬಲಿಯ ನಂಬಿಕೆ. ಆದರೆ ದಾನ ಪಡೆದ ವಾಮನ ನೋಡನೋಡುತ್ತಿದ್ದಂತೆ ಬೆಳೆದು ನಿಂತು ಭೂಮ್ಯಾಕಾಶಗಳನ್ನು ವ್ಯಾಪಿಸಿಬಿಡುತ್ತಾನೆ. ಒಂದು ಹೆಜ್ಜೆಯಿಂದ ಭೂಮಂಡಲವನ್ನೆಲ್ಲಾ ಅಳೆದು, ಮತ್ತೊಂದು ಹೆಜ್ಜೆಯಿಂದ ಮೇಲಿನ ಲೋಕಗಳನ್ನೆಲ್ಲಾ ಅಳೆದು ನಗುತ್ತಾ ಬಲಿಗೆ ಹೇಳುತ್ತಾನೆ - "ನಿನ್ನದೆಲ್ಲವನ್ನೂ ಎರಡು ಹೆಜ್ಜೆಯಿಂದ ಅಳೆದದ್ದಾಯಿತು, ನೀನು ಕೊಟ್ಟ ಮಾತನ್ನು ನಡೆಸಲಾಗದೇ ನನ್ನನ್ನು ವಂಚಿಸುತ್ತಿದ್ದೀಯೆ, ಆ ತಪ್ಪಿಗೆ ನರಕವೇ ಶಿಕ್ಷೆ, ಹೊರಡು". ಇದರಿಂದ ಒಂದಿನಿತೂ ವಿಚಲಿತನಾಗದ ಬಲಿ ಹೇಳುತ್ತಾನೆ - ಐಶ್ವರ್ಯದ ಮದದಿಂದ ಮುಚ್ಚಿದ್ದ ನನ್ನ ಕಣ್ಣನ್ನು ತೆರೆಸಿ ನೀನಿಂದು ನನಗೆ ಪರಮಗುರುವಾದೆ, ಇರಲಿ, ನಾನು ನಿನ್ನನ್ನು ಮೋಸಗೊಳಿಸುವುದು ಸಾಧ್ಯವೇ ಇಲ್ಲ. ಎರಡು ಹೆಜ್ಜೆಯಿಂದ ಲೋಕವನ್ನೆಲ್ಲ ಅಳೆದರೂ ಇನ್ನೊಂದು ಹೆಜ್ಜೆಗೆ ಜಾಗ ಉಳಿದೇ ಇದೆ - ನನ್ನ ತಲೆ. ಅದರ ಮೇಲೆ ನಿನ್ನ ಪಾದವನ್ನಿಟ್ಟು ದಾನವನ್ನು ಪೂರೈಸಿಕೋ. ಬಲಿಯ ಪ್ರಾರ್ಥನೆಯಿಂದ ಸಂತುಷ್ಟನಾದ ತ್ರಿವಿಕ್ರಮ ಹೇಳುತ್ತಾನೆ "ಯಾರ ಮೇಲೆ ನಾನು ಕೃಪೆದೋರಲು ನಿರ್ಧರಿಸುತ್ತೇನೋ ಅವನ ಸರ್ವಸ್ವವನ್ನೂ ಮೊದಲು ಕಸಿದುಕೊಳ್ಳುತ್ತೇನೆ, ಆಗಷ್ಟೇ ಅವನ ಕಣ್ಣು ಮುಸುಕಿದ ಪೊರೆ ಹರಿದು ಆತನಿಗೆ ನನ್ನನ್ನು ಕಾಣಲು ಸಾಧ್ಯ". ಹೀಗೆ ಹೇಳಿ ಬಲಿಯ ತಲೆಯ ಮೇಲೆ ಮತ್ತೊಂದು ಹೆಜ್ಜೆಯಿಟ್ಟು ತನ್ನ ದಾನವನ್ನು ಅಳೆದುಕೊಳ್ಳುತ್ತಾನೆ.
ಸಾಮಾನ್ಯವಾಗಿ ರಾಮಾಯಣಮಹಾಭಾರತಗಳನ್ನು ಇತಿಹಾಸ (ನಡೆದ ವಿಷಯಗಳು) ಎಂದು ನಮ್ಮ ಪರಂಪರೆ ವರ್ಗೀಕರಿಸುತ್ತವೆ. ಆದರೆ ಪುರಾಣಕತೆಗಳು ಇತಿಹಾಸವಲ್ಲ. ಪುರಾಣ, ಹಳೆಯ ಕತೆ, ಎಂದೋ ಎಷ್ಟೋ ಯುಗಗಳ ಹಿಂದೆ ಎಲ್ಲೋ ನಡೆಯಿತೆಂದು ಹೇಳಲಾಗುವ ಕತೆಗಳು - ರಮ್ಯಾತಿರಮ್ಯ ಕಲ್ಪನೆಗಳು, ವೈಭವೀಕರಿಸಿದ ವರ್ಣನೆಗಳು, ಕಲ್ಪನೆಗೂ ನಿಲುಕದ ವಿದ್ಯಮಾನಗಳು ಇಲ್ಲಿ ಸಾಮಾನ್ಯ. ಇದನ್ನು ಗ್ರಹಿಸಬೇಕಾದರೆ ವಸ್ತುನಿಷ್ಠವಾದ 'Rational' ದೃಷ್ಟಿಕೋನಕ್ಕಿಂತ ವಿದ್ಯಮಾನದ ಹಿಂದೆ ಅಡಗಿರುವ ಸಾಂಕೇತಿಕೆಯನ್ನು ಅರಿಯುವ ಕಣ್ಣು ಅತ್ಯಗತ್ಯ. ಕುವೆಂಪು ಹೇಳುತ್ತಾರಲ್ಲ "ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ, ತನ್ನ ತಮದಿಂ ತಾಂ ಮುಕ್ತಮಪ್ಪುದು ದಿಟಂ" - ರಾವಣನೆಂಬೊಬ್ಬ ಹತ್ತು ತಲೆಯ ರಕ್ಕಸನಿದ್ದನೋ ಇಲ್ಲವೋ, ಅದು ನಮ್ಮಲ್ಲೇ ಮನೆಮಾಡಿರುವ 'ಅವಿದ್ಯೆ'ಯ ಸಂಕೇತವೆಂದು ಗ್ರಹಿಸಿದರೆ ಕತೆಗೊಂದು ಹೊಸ ಹೊಳಹು ದೊರೆಯುತ್ತದೆ. ಪುರಾಣಕತೆಗಳನ್ನು ನೋಡಲು ಬೇಕಾದ ದೃಷ್ಟಿ ಇದು. ವಿಷ್ಣುವು ನಿರಪರಾಧಿಯಾದ, ವಿಷ್ಣುಭಕ್ತನಾದ ಬಲಿಚಕ್ರವರ್ತಿಯನ್ನು ಓಡಿಸಿದ್ದು ತಪ್ಪಲ್ಲವೇ? ಸ್ವತಃ ವಿಷ್ಣುಭಕ್ತನೇ ಆಗಿದ್ದರೂ ರಾಕ್ಷಸನಾಗಿದ್ದ ಕಾರಣಕ್ಕೆ ಅವನಿಗೆ ಅನ್ಯಾಯವಾಯಿತಲ್ಲವೇ? ಈ ಬಗೆಯ 'Rational' ಪ್ರಶ್ನೆಗಳಿಗೆ ಇಲ್ಲಿ ಅವಕಾಶವೇ ಇಲ್ಲ, ಏಕೆಂದರೆ ಇದು ಇತಿಹಾಸವಲ್ಲ, ಕತೆ - ಇಲ್ಲಿ ಕತೆ ಏನು ಸಂಕೇತಿಸುತ್ತಿದೆ ಎನ್ನುವುದು ಮುಖ್ಯ. ರಾಕ್ಷಸನಾದ ಮಾತ್ರಕ್ಕೆ ಅನ್ಯಾಯವಾಗಬೇಕೆಂದಿದ್ದರೆ ಅದೇ ಅನ್ಯಾಯ ಪ್ರಹ್ಲಾದನಿಗೂ ಆಗಬೇಕಿತ್ತಲ್ಲ. ಅಥವಾ ಬಲಿಗೆ ಅನ್ಯಾಯವೇ ಆಗಬೇಕಿದ್ದರೆ ವಿಷ್ಣು ಬಲಿಯನ್ನು ಕೊಂದೇ ಬಿಡಬಹುದಿತ್ತಲ್ಲ - ಈ ಬಗೆಯ ಪ್ರಶ್ನೆಗಳೂ ಹುಟ್ಟಿಕೊಳ್ಳಬಹುದು. ಆದರೆ ಕತೆ ಹೇಗೆ ಬೆಳೆಯುತ್ತದೆಂಬುದನ್ನು ಗಮನಿಸಬೇಕು. ಬಲಿ ಮೂಲತಃ ಭಕ್ತ. ತನ್ನ ಕಣ್ಣನ್ನು ಮುಸುಕಿದ್ದ ಅಹಂಕಾರ ಹರಿಯುತ್ತಿದ್ದಂತೆಯೇ ಅವನಿಗೆ ತನ್ನ ನೆಲೆ, ಭಗವಂತನ ನೆಲೆ ಅರಿವಾಯಿತು. ಶರಣಾಗತನಾದ. ಹೀಗೆ ತನ್ನವನಾದ ಬಲಿಯ ಯೋಗಕ್ಷೇಮವೂ ತನಗೇ ಸೇರಿದ್ದಷ್ಟೇ? ತನ್ನ ಆದೇಶದಂತೆ ಸುತಲಲೋಕಕ್ಕೆ ಹೋಗಿ ನೆಲೆಸಿದ ಬಲಿಯ ಬಾಗಿಲನ್ನು ಕಾಯುವುದಕ್ಕೆ ಭಗವಂತ ಸ್ವತಃ ತಾನೇ ನಿಂತ. ಕುಮಾರವ್ಯಾಸ ಬೇರೊಂದು ಸಂದರ್ಭದಲ್ಲಿ ಹೇಳುತ್ತಾನೆ "ಕಿರೀಟಿಯ ಮನೆಯ ಬಂಡಿಯ ಬೋವನಾದನು ವೀರನಾರಯಣ" - ತನ್ನ ಭಕ್ತನಾದ ಅರ್ಜುನನ ಬಂಡಿಯ ಬೋವನಾದನಂತೆ ಕೃಷ್ಣ; ಇದು ಅಂಥದ್ದೇ ಇನ್ನೊಂದು ಉದಾಹರಣೆ, ಮೂರು ಹೆಜ್ಜೆ ಭೂಮಿಯನ್ನು ದಾನ ಪಡೆದ ಪರಮಾತ್ಮ, ದಾನ ಕೊಟ್ಟ ಮಹಾತ್ಮನಾದ ಬಲಿಯ ಮನೆಯ ಕಾವಲಿಗೆ ನಿಂತ ಕತೆ. ಈ ಅವತಾರದ ಉದ್ದೇಶ ಬಲಿಯ ನಿಗ್ರಹವಲ್ಲ, ಉದ್ಧಾರ ("ಪರಿತ್ರಾಣಾಯ ಸಾಧೂನಾಂ").
ಇರಲಿ, ಹೀಗೆ ಸುತಲದಲ್ಲಿ ನೆಲೆ ನಿಂತ ಬಲಿಚಕ್ರವರ್ತಿ ವರ್ಷಕ್ಕೊಮ್ಮೆ ಭೂಲೋಕಕ್ಕೆ ಬಂದು ತನ್ನ ರಾಜ್ಯವನ್ನು ನೋಡಿ ಹರಸಿ ಹೋಗುತ್ತಾನೆಂಬ ನಂಬಿಕೆ. ಅದೇ ಬಲಿಪಾಡ್ಯಮಿ, ಬಲಿಯ ತ್ಯಾಗವನ್ನು ನೆನೆಯುವ ದಿನ. ಈ ದಿನ ಅನೇಕ ಕಡೆಗಳಲ್ಲಿ ವಿವಿಧ ರೀತಿಗಳಲ್ಲಿ ಬಲೀಂದ್ರನ ಪೂಜೆ ನಡೆಯುತ್ತದೆ. ಸಪ್ತಚಿರಂಜೀವಿಗಳಲ್ಲೊಬ್ಬನಾದ ಬಲಿಚಕ್ರವರ್ತಿಯ ಹರಕೆ ನಮ್ಮೆಲ್ಲರ ಮೇಲಿರಲಿ. ಬಲಿಪಾಡ್ಯಮಿಯ ಈ ದಿನದಂದು ಅಹಂಕಾರದ ಅಂಧಕಾರ ತೊಲಗಿ ಅರಿವಿನ ದೀವಿಗೆ ಬೆಳಗಲಿ. ಎಲ್ಲರಿಗೂ ದೀಪಾವಳಿ-ಬಲಿಪಾಡ್ಯಮಿಯ ಶುಭಾಶಯಗಳು.