Wednesday, August 13, 2008

ಗೌಳೀಪತನ...

ಎರಡು ತಿಂಗಳು ಮನೆ ಬೀಗ ಹಾಕಿದ್ದು, ಮತ್ತೆ ಬಂದು ಕಸ ಕುಪ್ಪೆ ಹೊಡೆದು ಮನೆಯನ್ನು ಒಂದು ಹದಕ್ಕೆ ತರುವ ಹೊತ್ತಿಗೆ ಎರಡು ದಿನವೇ ಕಳೆದವು. ಆದರೂ ಸಾರ್ಥಕ ಶ್ರಮ, ಮನೆ ಮೂಲೆ ಮೂಲೆಯೂ ಸ್ವಚ್ಛವಾಯಿತು. ನಿರಾಳ ನಿದ್ದೆ ಮಾಡಿ ಬೆಳಗ್ಗೆ ತಡವಾಗೇ ಎದ್ದೆ. ಸಧ್ಯಕ್ಕೆ ಮನೆಯಲ್ಲಿ ಒಬ್ಬನೇ ಆದ್ದರಿಂದ ಅಡುಗೆ ಮನೆಗೆ ಹೋಗುವ ಅಗತ್ಯ ಹೆಚ್ಚು ಬೀಳುವುದಿಲ್ಲ. ಸರಿ, ಎದ್ದವನೇ ಆತುರಾತುರವಾಗಿ ಸ್ನಾನ ಇತ್ಯಾದಿ ಮುಗಿಸಿ, ಆಫೀಸಿಗೆ ಹೊರಡುವ ಮುನ್ನ ಒಂದು ಲೋಟ ಮಾವಿನ ಜ್ಯೂಸ್ ಕುಡಿದು ಲೋಟವನ್ನು ಸಿಂಕಿಗೆ ಹಾಕಲು ಹೋದೆ. ಲೋಟವನ್ನು ಸಿಂಕಿನಲ್ಲಿ ಹಾಕುತ್ತಿದ್ದಂತೆ ಅದೇನೋ ಕೈಯ ಬಳಿಯೇ ಚಂಗನೆ ಜಿಗಿದು ಕೈಯನ್ನು ತಣ್ಣಗೆ ಸೋಕಿ, ತೊಪ್ಪನೆ ಮತ್ತೆ ಸಿಂಕಿನಲ್ಲೇ ಬಿತ್ತು. ಆಡುಗೆ ಮನೆ ಸ್ವಲ್ಪ ಕತ್ತಲು, ದೀಪವನ್ನು ಹಾಕಿರಲಿಲ್ಲ. ಬೆಚ್ಚಿ ಸರಕ್ಕನೆ ಕೈಯನ್ನು ಹಿಂದಕ್ಕೆಳಕೊಂಡೆ. ಊರಲ್ಲಾದರೆ ಹಲ್ಲಿಯೋ ಕಪ್ಪೆಯೋ ಕೊನೆಗೆ ಹಾವೋ ಚೇಳೋ ಸಹಜವಾಗಿತ್ತು. ಆದರೆ ಆ ಬಳಕೆ ತಪ್ಪಿ ಇಪ್ಪತ್ತು ವರ್ಷವಾಯಿತಲ್ಲ. ಆ ಥ್ರಿಲ್ಲುಗಳೆಲ್ಲಾ ಈ ಪಟ್ಟಣದ ಶುಷ್ಕ-ಸ್ವಚ್ಛ ನಿವಾಸಗಳಲ್ಲೆಲ್ಲಿ ಬರಬೇಕು. ಹಾಗಾಗಿ ಈ ಕ್ಷಣ ಇಲ್ಲಿ ಇದೇನು ಎಂದು ತಲೆಗೆ ಹೊಳೆಯುವುದಕ್ಕೆ ಕೆಲವು ಕ್ಷಣ ಬೇಕಾಯಿತು. ಅಡುಗೆ ಮನೆ ದೀಪ ಹಾಕಿ ನೋಡಿದರೆ ಮತ್ತೇನೂ ಅಲ್ಲ, ನಮ್ಮ ಬಹು ಕಾಲದ ಮಿತ್ರ, ಅದೇ ರಾಕ್ಷಸ ಹಲ್ಲಿ! (ರಾಕ್ಷಸ ಹಲ್ಲಿ ಅಂದರೆ dinosorous ಎಂದೂ, ಅದು ಬಂದು ಬೀಳುವಷ್ಟು ದೊಡ್ಡ ಸಿಂಕ್ ಇಟ್ಟುಕೊಂಡಿರುವ ನಾವು ದೈತ್ಯರೆಂದೂ ತಿಳಿಯಬೇಡಿ ಮತ್ತೆ; ಇದೂ ಸಾಮಾನ್ಯ ಮನೆ ಹಲ್ಲಿ(house lizard)ಯೇ, ಆದರೆ ಸ್ವಲ್ಪ ಗಾತ್ರದಲ್ಲಿ ದೊಡ್ಡದಾಗಿ ಭಯ ಹುಟ್ಟಿಸುವಂತಿದ್ದುದರಿಂದ ನನ್ನ ಮಡದಿ ಮಾಡಿದ ನಾಮಕರಣ). ನಮ್ಮ ಮನೆಗಳಲ್ಲಿ ನೋಡುವ ಸಾಮಾನ್ಯ ಹಲ್ಲಿಯ ಸುಮಾರು ಎರಡು-ಎರಡೂವರೆಯಷ್ಟು ದೊಡ್ಡ ಗಾತ್ರದ ಈ ಹಲ್ಲಿಯ ಬಣ್ಣ ಕೂಡ ಸಾಮಾನ್ಯ ಹಲ್ಲಿಗಿಂತ ಸ್ವಲ್ಪ ಕಡು, ಒರಟು. ಬಹುಶಃ ಅದೂ ಭಯ ಹುಟ್ಟಿಸುವ ಅಂಶಗಳಲ್ಲೊಂದಿರಬೇಕು. ನನ್ನ ಮಡದಿ ಮನೆಯಲ್ಲಿರುವಾಗೆಲ್ಲ ದಿನಕ್ಕೊಮ್ಮೆಯಾದರೂ ಅದೆಲ್ಲಿಂದಲೋ ಧುತ್ತನೆ ಪ್ರತ್ಯಕ್ಷವಾಗಿ (ಅಥವಾ ಮೇಲೆ ನೆಗೆದು, ಕಾಲಮೇಲೆ ಹರಿದು) ಆಕೆಯಿಂದ ಕಿಟಾರನೆ ಚೀರಿಸದಿದ್ದರೆ ಅದಕ್ಕೆ ತಿಂದ ಸೊಳ್ಳೆ ಜೀರ್ಣವಾಗುತ್ತಿರಲಿಲ್ಲ. ಸಾಧಾರಣವಾಗಿ ನಿಶ್ಶಬ್ದವಾಗಿರುವ ಮನೆಯಲ್ಲಿ ಯಾರೋ ಇದ್ದಾರೆ ಎಂಬುದಕ್ಕೆ ಅವಳ ಕೂಗು ಗುರುತಾಗಿರುತ್ತದೆ. ಎಲ್ಲೋ ಆಟವಾಡುತ್ತಿರುವ ನನ್ನ ಮಗನಿಗೋ, ಈ ತೆರೆ ಮರೆಯ (ಅಥವಾ ಕಾಲ್ಕೆಳಗಿನ) ನಾಟಕ ಅರ್ಥವಾಗದು. ಅಮ್ಮ ತನ್ನನ್ನು ನಗಿಸಲೆಂದೇ ಹೀಗೆ ಕೂಗುತ್ತಿದ್ದಾಳೆ ಎಂದೆಣಿಸಿ ಅಮ್ಮನಿಗೆ ಇನ್ನೊಮ್ಮೆ ಅರಚುವಂತೆ ದುಂಬಾಲು ಬೀಳುತ್ತಿದ್ದ. ಅಂತೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಜೊತೆಯಲ್ಲೇ ವಾಸಿಸುತ್ತಿದ್ದ ಈ ಹಲ್ಲಿ ನಿತ್ಯ ಮನರಂಜನೆ ಒದಗಿಸುತ್ತಿತ್ತು. ಆದರೆ ನಮ್ಮ ಚಲ್ಲಾಟ ಅವಳಿಗೆ ಎಂಥಾ ಪ್ರಾಣಸಂಕಟ ತರುತ್ತಿದ್ದಿತೆಂದು ನನಗೆ ಮನದಟ್ಟಾದದ್ದು ಇವತ್ತು ಈ ಮಿತ್ರ ನನ್ನ ಮೇಲೇ "ದಾಳಿ" ಮಾಡಿದಾಗಲೇ!

ದೀಪ ಹಾಕಿ, ಅದು ಹಲ್ಲಿಯೆಂದು ತಿಳಿದ ತಕ್ಷಣ ಮೊದಲು ಮನಸ್ಸಿಗೆ ಬಂದ ಯೋಚನೆ (urge, ಅನ್ನೋಣ), ಅದರ ಮೇಲೆ ಕ್ರಿಮಿ ನಾಶಕವನ್ನೋ ಮತ್ತೇನನ್ನೋ ಸಿಂಪಡಿಸಿ ಅದರ ಕಥೆ ಮುಗಿಸಿಬಿಡಬೇಕೆಂದು; ಹೀಗೆ ಎಲ್ಲೆಂದರೆ ಅಲ್ಲಿ ಅಡಗಿದ್ದು ಸಿಕ್ಕವರ ಮೇಲೆ ಎಗರಿ ಅವರ ಎದೆಬಡಿತ ನಿಲ್ಲಿಸುವುದೆಂದರೆ!
.
ಮೊದಲ ಕ್ಷಣಗಳ ಶಾಕ್ ಮುಗಿದ ನಂತರ ಯೋಚಿಸಲಾರಂಭಿಸಿದೆ. ಈ ಹಲ್ಲಿ ಈ ಸಿಂಕಿನೊಳಗೆ ಏನು ಮಾಡುತ್ತಿದೆ? ಅಲ್ಲಿಂದ ಓಡಿಸೋಣವೆಂದು ಅದರ ಬಳಿ ಸ್ವಲ್ಪ ಸದ್ದು ಮಾಡಿದೆ. ಮತ್ತದೇ ಪುನರಾವರ್ತನೆ. ಅದು ಸಿಂಕಿನೊಳಗಿಂದ ನೆಗೆದು ತಪ್ಪಿಸಿಕೊಳ್ಳಲೆತ್ನಿಸಿತು, ಆದರೆ ಸಿಂಕಿನ ನುಣುಪಾದ ವರ್ತುಲಾಕಾರದ ಗೋಡೆಯ ಮೇಲೆ ಹಿಡಿತ ಸಿಕ್ಕದೇ ಮತ್ತೆ ಅಲ್ಲೇ ಬಿತ್ತು. ತಪ್ಪಿಸಿಕೊಳ್ಳಲು ಪ್ರಾಮಾಣಿಕ ಯತ್ನ ನಡೆಸುತ್ತಿದ್ದ ಹಲ್ಲಿಯನ್ನಂತೂ ಈಗ ದೂರುವಂತೆಯೇ ಇರಲಿಲ್ಲ. ಈಗ ಇದನ್ನು ಸಿಂಕಿನಿಂದ ಬಚಾವು ಮಾಡುವ ಹೊಣೆ ನನ್ನ ಮೇಲೆ ಬಿತ್ತು. ಹೊರ ಹೊರಡಿಸುವುದಾದರೂ ಹೇಗೆ? ಕೋಲನ್ನೋ ಕಡ್ಡಿಯನ್ನೋ ಹಿಡಿದು ತಳ್ಳೋಣವೆಂದರೆ, ಅದು ಸೋಕುವುದೇ ತಡ ಅದು ಹೆದರಿ ಮೇಲೆ ನೆಗೆಯುತ್ತಿತ್ತು. ಅಥವಾ ಪೊರಕೆಯನ್ನೋ ಏನನ್ನಾದರೂ ಅದರ ಮೇಲೆ ಒತ್ತಿ ಹಿಡಿದು ಮೇಲೆ ಸಾಗಿಸೋಣವೆಂದರೆ, ಸಿಂಕು ಮತ್ತು ಅದರಲ್ಲಿ ಹಲ್ಲಿ ಕುಳಿತಿದ್ದ ಕೋನ ಈ ಕೆಲಸಕ್ಕೆ ಎಳ್ಳಷ್ಟೂ ಸಹಾಯಕವಾಗಿರಲಿಲ್ಲ. ಬದಲಾಗಿ ಪೊರಕೆಯ ಕಡ್ಡಿಗಳು ಅದರ ಬೆನ್ನಿಗೆ ನಾಟಿ, ಪರಿಸ್ಥಿತಿ ಇನ್ನೂ ಗಂಭೀರವಾಗುವ ಸಾಧ್ಯತೆ ಇತ್ತು. ನನಗೋ ಆಫೀಸಿಗೆ ತಡವಾಗುತ್ತಿತ್ತು. ಅದೇನಾದರೂ ಮಾಡಿಕೊಂಡು ಹಾಳಾಗಿಹೋಗಲಿ, ಸಧ್ಯಕ್ಕಂತೂ ಇದನ್ನಿಲ್ಲಿಗೆ ಬಿಡೋಣವೆಂದು ನಿರ್ಧರಿಸಿ ಆಫೀಸಿಗೆ ಹೋದೆ.
.
ಆಫೀಸಿನಿಂದ ಮರಳಿ ಬಂದು ನೋಡಿದರೆ, ಈ ಮಹಾಶಯ ಕುಳಿತಲ್ಲಿಂದ ಒಂದಿನಿತೂ ಅಲುಗಿಲ್ಲ. ಹಸಿವಿನಂದ ಸತ್ತೇನಾದರೂ ಹೋಗಿದೆಯೋ ಎಂದು ನೋಡಿದರೆ, ಕಡ್ಡಿ ಅಲುಗಿದೊಡನೆಯೇ ಮೊದಲಷ್ಟೇ ಚುರುಕಾಗಿ ನೆಗೆಯುವ ಪ್ರಯತ್ನವನ್ನು ಪುನರಾವರ್ತಿಸಿತು. ನೆಗೆದು ಇಲ್ಲಿಂದ ತಪ್ಪಿಸಿಕೊಂಡು ಹೋಗಲು ತನ್ನ ಅಭ್ಯಂತರವೇನೂ ಇಲ್ಲ ಎಂದು ಈಗಾಗಲೇ ನನಗೆ ತೋರಿಸಿದ್ದಾಗಿದೆ; ನೆಗೆಯುವ ಪ್ರಯತ್ನವನ್ನೂ ಮಾಡಿ ಅದು ಅಸಾಧ್ಯವೆಂಬುದನ್ನೂ ನನಗೆ ತೋರಿಸಿದ್ದಾಗಿದೆ; ಇಷ್ಟಾದ ಮೇಲೆ ತನ್ನನ್ನು ಪಾರಗಾಣಿಸುವ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಸಂಪೂರ್ಣ ವರ್ಗಾಯಿಸಿ ತಾನು ನಿಶ್ಚಿಂತವಾಗಿ ಕುಳಿತಂತಿತ್ತು ಅದರ ನಿಲುವು. ಎಲಾ ಇದರ, ಒಂದೆರಡು ಬಾರಿ ನೆಗೆದು ತೋರಿಸಿದ ಮಾತ್ರಕ್ಕೆ ತನ್ನ ಕೆಲಸ ಮುಗಿಯಿತೆಂಬಂತೆ ಕುಳಿತಿದೆಯಲ್ಲ! ಬೆಳಗಿನಿಂದ ಸಂಜೆಯ ವರಗೂ ಅಷ್ಟೇನೂ seriousಆಗಿ ಪ್ರಯತ್ನಿಸಿದಂತೇನೂ ಕಾಣಲಿಲ್ಲ ಅದು. ಇಲ್ಲದಿದ್ದರೆ ಒಂದೇ ಒಂದು ಬಾರಿಯಾದರೂ ಅದು ಸಫಲವಾಗುತ್ತಿರಲಿಲ್ಲವೇ! ಒಂದು ಹಲ್ಲಿಯಾದ ಹಲ್ಲಿಗೇ ಇಷ್ಟೊಂದು ಧಿಮಾಕು ಇರಬೇಕಾದರೆ ಇನ್ನು ನಾನು ಮನುಷ್ಯ, ನನಗೆಷ್ಟಿರಬೇಕು. ಅದಕ್ಕೆ ಬೇಕಾದರೆ ನೆಗೆದು ಹೋಗಲಿ, ಇಲ್ಲದಿದ್ದರೆ ಹಸಿದುಕೊಂಡು ಬಿದ್ದಿರಲಿ, ನಾನಂತೂ ಅದಕ್ಕೆ ಸಹಾಯ ಮಾಡುವುದಿಲ್ಲ (ಹೇಗೆ ಮಾಡುವುದು ಗೊತ್ತಿಲ್ಲ, ಅದು ಬೇರೆ ವಿಷಯ) ಅಂದುಕೊಂಡು ಸುಮ್ಮನಾದೆ. ಹಲ್ಲಿಯೂ ಮುಷ್ಕರ ಹಿಡಿದವರಂತೆ ಸುಮ್ಮನೇ ಕೂತಿತ್ತು.
.
ರಾತ್ರಿಯಾಯಿತು, ಉಹ್ಹೂಂ, ಕದಲಲಿಲ್ಲ! ರಾತ್ರಿಗೆ ಅಡುಗೆ ಮಾಡಬೇಕಾದರೆ ಪಾತ್ರೆ ತೊಳೆಯಬೇಕು, ಅದಕ್ಕೆ ಸಿಂಕ್ ಬೇಕು. ಈಗ ನಾನೇನಾದರೂ ಮಾಡದೇ ವಿಧಿಯೇ ಇರಲಿಲ್ಲ. ಅದು ಹತ್ತಿಕೊಂಡು ಮೇಲೆ ಬರಲು ಅನುಕೂಲವಾಗುವಂತೆ ಒಂದು ಬಲವಾದ ಕಡ್ಡಿಯನ್ನಿಡಬಹುದೆಂದು ಹೊಳೆಯಿತು. ಹುಡುಕಿದರೆ ಸಿಂಕಿನ ಎತ್ತರಕ್ಕಿಂತಲೂ ಉದ್ದವಾದ ಕಡ್ಡಿಯೇ ಸಿಗಲಿಲ್ಲ. ಸಿಕ್ಕ ಒಂದು ತುಂಡು ಕಡ್ಡಿಯನ್ನೇ ಸಿಂಕಿನ ಗೋಡೆಯುದ್ದಕ್ಕೂ ನಿಲ್ಲಿಸೋಣವೆಂದರೆ, ಈ ಹಲ್ಲಿ ಯಾವ ಆಯಕಟ್ಟಿನ ಸ್ಥಳದಲ್ಲಿ ಕುಳಿತಿತ್ತೆಂದರೆ, ಅದು ಹೇಗೇ ನಿಲ್ಲಿಸಿದರೂ ಕಡ್ಡಿ ಜರುಗಿ ಸಿಂಕಿನೊಳಗ್ಗೇ ಬೀಳುವಂತಿತ್ತು. ಹೆಚ್ಚು ಪ್ರಯತ್ನ ಪಟ್ಟರೆ ಹಲ್ಲಿ ಮೈಮೇಲೆ ಎಗರುತ್ತಿತ್ತು. ಈ ಗಲಿಬಿಲಿಯಲ್ಲಿ ಕಡ್ಡಿ ಕೊನೆಗೂ ಸಿಂಕಿನೊಳಗೇ ಬಿತ್ತು. ಹಲ್ಲಿ ಆದರಡಿ ಸಿಕ್ಕಿ ಮಿಸುಕಹತ್ತಿತು. ಈಗ ಆ ಕಡ್ಡಿಯನ್ನು ಎತ್ತಲು ಇನ್ನೊಂದು ಕಡ್ಡಿಯನ್ನು ಎಲ್ಲಿಂದ ತರಲಿ? ಕೊನೆಗೂ ಹಾಗೂ ಹೀಗೂ ಮಾಡಿ ಹಲ್ಲಿಯನ್ನು ಏಮಾರಿಸಿ ಕಡ್ಡಿಯನ್ನು ಮೇಲೆತ್ತಿದ್ದಾಯಿತು. ಈಗ ಈ ಹಲ್ಲಿಯನ್ನೇನು ಮಾಡುವುದು? ಅದನ್ನು ಅಲ್ಲಿಂದ ಎತ್ತಂಗಡಿ ಮಾಡದೇ ನಾನು ಪಾತ್ರೆ ತೊಳೆಯುವಂತಿಲಿಲ್ಲ, ಒಲೆ ಹಚ್ಚುವಂತಿಲ್ಲ! ಹೊಟ್ಟೆ ಬೇರೆ ಹಪಹಪಿಸುತ್ತಿತ್ತು. ಕೊನೆಗೊಂದು ಉಪಾಯ ಹೊಳೆಯಿತು. ರಟ್ಟಿನ carton ಒಂದರ ಮುಚ್ಚಳವನ್ನು ಕಿತ್ತಿ, ಅದರ ನುಣುಪಾದ ಮೇಲು ಕಾಗದವನ್ನು ಹರಿದು ತೆಗೆದು, ಅದರ ಮೆಟ್ಟಿಲು ಮೆಟ್ಟಿಲಾದ ಭಾಗ ಮೇಲೆ ಬರುವಂತೆ ಅಣಿಗೊಳಿಸಿದೆ. ಅನಂತರ ಅದನ್ನು ಬೇಕಾದ ಉದ್ದಕ್ಕೆ ಕತ್ತರಿಸಿಕೊಂಡು ಸ್ವಲ್ಪ ಬಾಗಿಸಿ ನಮ್ಮ ಹಲ್ಲಿ ದೊರೆ ಮೇಲೇರಿ ಬರಲು ಒಂದು ನಿಚ್ಚಣಿಕೆ ನಿರ್ಮಿಸಿದೆ. ಹಲ್ಲಿಯನ್ನು ಏಮಾರಿಸಿ ಈ ಏಣಿಯನ್ನು ಸಿಂಕಿನ ಗೋಡೆಗೆ ಆನಿಸಿಟ್ಟೆ. ಇಷ್ಟರಲ್ಲಿ ನಾನು ನಿರಪಾಯಕಾರಿ ಎಂದು ಹಲ್ಲಿಯ ಗಮನಕ್ಕೂ ಬಂದಿತ್ತೇನೋ, ಈಗ ಅದೂ ಸ್ವಲ್ಪ ಸಹಕರಿಸತೊಡಗಿತು. ನಾನು ಏಣಿ ಇಟ್ಟಾಗ ಅದು ಮೈಮೇಲೆ ಹಾರಲಿಲ್ಲ, ಬದಲಾಗಿ ತುಸು ಪಕ್ಕಕ್ಕೆ ಸರಿದು ಏಣಿ ಇಡಲು ಜಾಗ ಮಾಡಿಕೊಟ್ಟಿತು.

ಹಲ್ಲಿಯ ಇಚ್ಚೆ ಪ್ರಾಮಾಣಿಕವಾಗಿದ್ದರೆ, ಈಗ ತಪ್ಪಿಸಿಕೊಳ್ಳುವ ದಾರಿ ಕಂಡೊಡನೆ ಥಟ್ಟನೆ ಅದನ್ನು ಏರಿ ಹಾರಿ ಮರೆಯಾಗಬೇಕೆಂದು ನನ್ನೆಣಿಕೆ. ಆದ್ದರಿಂದ ಅದು ನನ್ನ ಮೈಮೇಲೆ ಹಾರದಂತೆ ಎಚ್ಚರ ವಹಿಸಿ ತುಸು ದೂರ ನಿಂತು ಗಮನಿಸತೊಡಗಿದೆ. ಆದರೆ ನನ್ನ ಸಹಾಯದ ದಿಕ್ಕನ್ನು ಹಲ್ಲಿ ತಪ್ಪಾಗಿ ಅರ್ಥೈಸಿಕೊಂಡಿತ್ತು. ನಾನು ಹಾಕಿದ್ದು ಏಣಿ; ಆದರೆ ಅದು ನಾನೊಂದು ಚಪ್ಪರ ಹಾಕಿ ಕೊಟ್ಟಿದ್ದೇನೆಂದು ತಿಳಿಯಿತೇನೋ, ಆ ರಟ್ಟಿನ ಅಡಿಗೆ ಹೋಗಿ ಸೇರಿಕೊಂಡು ಬಿಟ್ಟಿತು. ಅದನ್ನು ಅಲ್ಲಿಂದ ಹೊರ ಹೊರಡಿಸುವ ಪ್ರಯತ್ನಗಳೊಂದೂ ಫಲ ಕೊಡಲಿಲ್ಲ!

ಆಗಲೇ ಸಮಯ ರಾತ್ರಿ ಹನ್ನೆರಡು. ಇನ್ನು ಈ ಹಲ್ಲಿಯನ್ನು ಓಡಿಸಿ, ಪಾತ್ರೆ ತೊಳೆದು ಅಡುಗೆ ಮಾಡುವ ಅಸೆಯನ್ನು ಕೈಬಿಟ್ಟೆ. ಹೊಟ್ಟೆ ಹಾಕುತ್ತಿದ್ದ ತಾಳಕ್ಕಂತೂ ಒಂದು ನಿಲುಗಡೆ ಬೇಕಲ್ಲ. ಸರಿ, ಮತ್ತಷ್ಟು ಮಾವಿನ ರಸವನ್ನೇ ಕುಡಿದು, ಲೋಟವನ್ನು ಕಟ್ಟೆಯ ಮೇಲೆ ಇಟ್ಟು, ಹಸಿದ ಹೊಟ್ಟೆಗೆ ಸಮಾಧಾನ ಹೇಳುತ್ತಾ ದೀಪ ಆರಿಸಿ ಮಲಗಿದೆ. ತನ್ನ ಮೂರ್ಖತನದಿಂದ ತಾನು ಉಪವಾಸ ಬಿದ್ದಿರುವುದಲ್ಲದೇ ನನ್ನನ್ನೂ ಉಪವಾಸ ಕೆಡವಿದ ಆ ಕ್ಷುದ್ರ ಜಂತುವಿನ ಮೇಲೆ ಕೆಟ್ಟ ಸಿಟ್ಟು ಉಕ್ಕಿ ಬರುತ್ತಿತ್ತು. ಆದರೇನು! ಅದೇ ಅರ್ಥ ಮಾಡಿಕೊಂಡು ಮೇಲೆ ಬಂದ ಹೊರತು ನಾನಂತೂ ಅದನ್ನು ಉದ್ಧರಿಸಲು ಸಾಧ್ಯವೇ ಇರಲಿಲ್ಲ.

ಹಾಗೂ ಹೀಗೂ ಬೆಳಗಾಯಿತು. ಕಣ್ಣುಜ್ಜಿಕೊಂಡು ಮೇಲೆದ್ದು ಅಡುಗೆ ಮನೆಗೆ ಹೋಗಿ ನೋಡಿದೆ. ಹಲ್ಲಿ ತನಗೆ ಹಾಕಿದ್ದ ನಿಚ್ಚಣಿಕೆಯ ಮೇಲೇರಿ ಪರಾರಿಯಾಗಿತ್ತು. ಸಧ್ಯ, ಬದುಕಿದೆ ಎಂದುಕೊಂಡು ಸ್ನಾನ ಇತ್ಯಾದಿ ಮುಗಿಸಿ, ಇದ್ದ ಅಲ್ಪ ಸ್ವಲ್ಪ ಪಾತ್ರೆಗಳನ್ನು ತೊಳೆದಿಟ್ಟು, ಆಗಲೇ ಆಫೀಸಿಗೆ ತಡವಾಗಿದ್ದರಿಂದ ಪೇಪರ್ ಡಬ್ಬದಲ್ಲಿದ್ದ ಕೊನೇ ಗುಟುಕು ಮಾವಿನ ರಸವನ್ನು ಆತುರಾತುರವಾಗಿ ಕುಡಿದು ಖಾಲಿ ಡಬ್ಬವನ್ನು ಅಲ್ಲಿದ್ದ ಕಸದ ಬುಟ್ಟಿಗೆ ಹಾಕಿದೆ. ಅಗೋ, ಕಸದ ಬುಟ್ಟಿಯಿಂದ ಅದೇನೋ ಚಂಗನೆ ನೆಗೆದು ನನ್ನ ಬಲಗಾಲ ಮೇಲೆ ಹರಿದುಕೊಂಡು ಮಾಯವಾಯಿತು. ಅದರೊಡನೆ ನಾನೂ ಚಂಗನೆ ನೆಗೆದದ್ದರಿಂದ ಪಕ್ಕದ ಬಾಗಿಲ ತುದಿಗೆ ಬಡಿದ ಕೈ ಬೆರಳಿಗೆ ಅಸಾಧ್ಯ ಪೆಟ್ಟು ಬಿತ್ತು. ಅಷ್ಟರಲ್ಲಿ ಕಾಲನ್ನೂ ಎತ್ತಿ ಎಡಗಾಲನ್ನೂ ನೆಲಕ್ಕೆ ಅಪ್ಪಳಿಸಿದ್ದರಿಂದ, ಇನ್ನೂ ಎಡಗಾಲ ಅಳವಿನಲ್ಲೇ ಇದ್ದ ಹಲ್ಲಿಯ ಬಾಲ ಜಜ್ಜಿ ಹೋಯಿತು. ಬಾಲವನ್ನು ಅಲ್ಲೇ ಕಳಚಿದ ಹಲ್ಲಿ ಪರಾರಿಯಾಯಿತು. ವಿಲಿವಿಲಿ ಒದ್ದಾಡುತ್ತಿದ್ದ ಬಾಲವನ್ನೇ ನೋಡುತ್ತಾ ಅಪ್ರತಿಭನಾಗಿ ನಿಂತೆ.

ಪಂಚಾಂಗದಲ್ಲಿ ಗೌಳೀಪತನ ಫಲ ಏನು ಬರೆದಿದೆಯೋ ನೋಡಬೇಕು, ಪಾಪ!