Thursday, October 29, 2009

ಕನ್ಯಾಕುಮಾರಿ

(೧)
ಸಂಜೆ ಎಂಟಕೆ ಬಿಡುವ
ಲೌಡ್ ಸ್ಪೀಕರಿನ
someಗೀತ
ಟ್ರಾವೆಲ್ ಬಸ್ಸು;
ಬೆಂಗಳೂರಿಂದ ಹದಿನೆಂಟು ತ್ರಾಸು
ರೆಪ್ಪೆಯಿಲ್ಲದ ಕಿವಿಯ ಮುಚ್ಚಲಾರದ ದಿಟಕೆ
ಕಣ್ಮುಚ್ಚಿ ಕೂತ
ಚಿತ್-
ಭಂಗಿ, ನಿದ್ರಾಯೋಗ
ನಟಿಸಿ, ವಟವಟಿಸಿ ಚಡಪಡಿಸಿ ಸಿಡಿವುದರೊಳಗೆ
ಕನ್ಯಾ
ಕು
ಮಾರಿ
ಬಿಸಿಲು-ಅಂಟು
ಮೈಯೆಲ್ಲ ಉಪ್ಪು
ಕಾರುವ ಕಡಲು
ಅಲೆ
ಯುವ ಮಂದೆ-
ಮಂದಿ

ದ ಒಳ ಹೊರಗೆ
ಕಡಲ ತಡಿಯಡಿಗಡಿಗೆ
ಕಾಗದ ಚೂರು
ಪ್ಲಾಸ್ಟೀಕು ಕವರು
ಕಚಪಚ ಕೆಸರು
ಚೆಲ್ಲುವ ವಿವೇಕ
ಸಾಗರದ
ನಡುವೆ ತಲೆಯೆತ್ತಿದ
ವಿವೇಕ
ಶಿಲೆಗೆ
ಲಾಂಚರು
ಕಾದುನಿಂತ ಮೈಲುದ್ದ ಕ್ಯೂ!

(೨)
ವಿವೇಕ ಮಂದಿರದಿ
ಧ್ಯಾನದಾನಂದದಾರಾಮ;
ತಂಪೆರೆವ ನಿಃಶಬ್ದ ನಿರ್ವಾತ ಧಾಮ;
ಗದ್ದಲದ ವಾಕ್ಯದಲಿದೊಂದು
ಅಲ್ಪ ವಿರಾಮ.

(೩)
ದಿನವೆಲ್ಲ ಉರಿದು ಸುಸ್ತಾಗಿ
ಪಡುಗಡಲಲ್ಲಿ ಮಲಗಲೆಳಸುವ ಸೂರ್ಯ;
ಕಡಲ ಹೊನ್ನೀರ್ ತುಳುಕಿ
ಸುತ್ತೆಲ್ಲ ಬಣ್ಣವೋ ಬಣ್ಣ;
ಸಂಜೆಬಾನಿನ ಕಾಂತಿ,
ಶಿಲೆಯ ನೆಲೆಯಿಂ ಹೊರಟು
ದಿಕ್ಕ ತುಂಬಿದ ಶಾಂತಿ -
ಶ್ರೀ ವಿವೇಕಾನಂದ ಚಿತ್ಛಾಂತಿ

(೪)
ಮುಂಜಾವಿನರುಣೋದಯದ
ಹೊನ್ನ ಕಿರಣದಲಿ
ತೀಡುತಿಹ ತಂಗಾಳಿ,
ದೇವಿಯ ಕೃಪೆಯ ಸುಯ್ಯುತಿಹ
ಉದಯರಾಗ;
ವರ್ಣಮಯವೀ ಬಾನು
ವರ್ಣಮಯವೀ ಕಡಲು
ವರ್ಣಮಯವದರ ಮಳಲು.
ಮುಂಜಾವ ಸಿಹಿಗನಸಲಿನ್ನೂ ಮಿಸುಗುವ ಸೂರ್ಯ
ಮೈತಿಳಿದು ಕಣ್ಹೊಸಕಿ ಉರಿಯ ಕೆದರುವ ಮುನ್ನ
ಕಟ್ಟುತ್ತೇನೆ ಜೋಳಿಗೆಯ,
ಮುಂದಿನೂರಿಗೆ ಪಯಣ.

Wednesday, October 21, 2009

ಮಾತು ಒಡೆದರೆ...

ಮೊನ್ನೆ ಸುಮ್ಮನೇ ಟಿ.ವಿ. ಚಾನೆಲ್ಲುಗಳನ್ನು ತಿರುಗಿಸುತ್ತಿರಬೇಕಾದರೆ ಚಾನೆಲ್ಲೊಂದರಲ್ಲಿ ಬಭ್ರುವಾಹನ ಚಿತ್ರದ ಹಾಡೊಂದು ಬರುತ್ತಿತ್ತು - ರಾಜಕುಮಾರ್ ಜಯಮಾಲಾ ಅಭಿನಯದ ಜನಪ್ರಿಯ ಗೀತೆ, "ಆರಾಧಿಸುವೇ ಮದನಾರಿ". ನಿಮ್ಮಲ್ಲಿ ಅನೇಕರಿಗೆ ಅರಿವಿರುವಂತೆ ಅದೊಂದು ಪ್ರಣಯಸನ್ನಿವೇಶ. ಅರ್ಜುನ ಸನ್ಯಾಸಿ ತನ್ನ ಪೂಜಾ-ಕೈಂಕರ್ಯಗಳಿಗೆಂದು ನಿಯಮಿಸಿದ್ದ ಸುಭದ್ರೆಯೊಡನೆ ಸರಸವಾಡುತ್ತಾ, ಪೂಜೆಯ ನೆವದಲ್ಲಿ ಅವಳೊಡನೆ flirt ಮಾಡುವ ಹಾಡು ಅದು. ಈ ಹಾಡನ್ನು ನಾನು ಮೊದಲು ನೋಡಿದ್ದು ಬಹುಶಃ ಸಿನಿಮಾದಲ್ಲೇ. "ಬಭ್ರುವಾಹನ" ನಮ್ಮೂರಿಗೆ ಬಂದದ್ದು ೭೭ರಲ್ಲೋ ೭೮ರಲ್ಲೋ. ನನಗಾಗ ೮-೧೦ ವಯಸ್ಸಿರಬೇಕು. ಖುಶಿ ಕೊಡುವ ಸಂಗೀತದ ಜೊತೆಗೆ ಸಿನಿಮಾದ ಶ್ರೀಮಂತ ಸೆಟ್, ರಾಜಕುಮಾರರ ಶೃಂಗಾರಭರಿತ ಅಭಿನಯ, 'ಮದನಾರಿ' ಸುಭದ್ರೆಯ ಮದವೇರಿಸುವ ಸೌಂದರ್ಯ, ಒನಪು-ವಯ್ಯಾರ ಇವು ನನ್ನ ಎಳೆಗಣ್ಣಿಗೆ ಕಟ್ಟಿದ್ದ ಅಂಶಗಳು. ಆಮೇಲೆ ಈ ಚಿತ್ರವನ್ನು ಎಷ್ಟೋ ಬಾರಿ ನೋಡಿದ್ದೇನೆ, ಹಾಡನ್ನು ಅದೆಷ್ಟೋ ಬಾರಿ ನೋಡಿದ್ದೇನೆ-ಕೇಳಿದ್ದೇನೆ. ತಲೆಚಿಟ್ಟು ಹಿಡಿಸುವ ಟಿ.ವಿ ಕಾರ್ಯಕ್ರಮಗಳ ನಡುವೆ ಆಗೊಮ್ಮೆ ಈಗೊಮ್ಮೆ ಇಂಥ ಮುದಕೊಡುವ ಹಾಡುಗಳು ಸುಳಿಯುವುದುಂಟು. ಮೊನ್ನೆ ಈ ಹಾಡು ಕೇಳುತ್ತಿದ್ದಾಗ ಮೂವತ್ತು ವರ್ಷಗಳ ಹಿಂದೆ ಇದಕ್ಕೆ ಸಂಬಂಧಿಸಿದ ಮೋಜಿನ ಪ್ರಸಂಗ ನೆನಪಿಗೆ ಬಂತು.

ಬೆಳಗ್ಗೆ ಎಲ್ಲೋ ಯಾರೋ ರೇಡಿಯೋ ಹಾಕಿದ್ದರು (ಯಾರಾದರೂ ಕೇಳುತ್ತಿದ್ದರೆಂದಲ್ಲ, ಯಾರಾದರು ಕೇಳಲಿ ಕೇಳದಿರಲಿ, ರೇಡಿಯೋ ಮಾತ್ರ ಅರಚುತ್ತಿರಬೇಕು; ಆಗೆಲ್ಲ ರೇಡಿಯೋ ನಮ್ಮ ದಿನಚರಿಯನ್ನು ನಿಯಂತ್ರಿಸುವ calender ಆಗಿತ್ತು). ವಿವಿಧಭಾರತಿ ಇರಬೇಕು, ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಈ ಹಾಡು ಪ್ರಸಾರವಾಗುತ್ತಿತ್ತು. ಅಲ್ಲೆಲ್ಲೋ ಜಗುಲಿಯ ಮೇಲೆ ಕುಳಿತಿದ್ದ ನಮ್ಮ ತಾತನವರು (ಆಗ ಅವರಿಗೆ ಸುಮಾರು ಎಂಬತ್ತು ವರ್ಷ) ಆ ಹಾಡನ್ನು ಆಸ್ವಾದಿಸುತ್ತಾ ತಲೆದೂಗುತ್ತಿದ್ದರು; ಬಾಯಿಂದ "ಭೇಷ್ ಭೇಷ್..." ಎಂಬ ಉದ್ಗಾರ ಬೇರೆ. ಇದನ್ನು ಕಂಡ ನಮ್ಮ ತಾಯಿ, ನಮ್ಮ ಸೋದರತ್ತೆಗೆ (ನಮ್ಮ ತಾತನವರ ಮಗಳಿಗೆ) ಅದನ್ನು ತೋರಿಸಿ ನಗುತ್ತಿದ್ದರು. ನಮ್ಮತ್ತೆಗೋ ಒಂದು ರೀತಿ ಇರುಸುಮುರುಸು, ಮುಜುಗರ. ಸಾತ್ವಿಕರಾದ, ಋಜುಸ್ವಭಾವದವರಾದ, ಸಿನಿಮಾ ಮುಖವನ್ನೇ ನೋಡಿಲ್ಲದ ನಮ್ಮ ತಾತ ಈ ವಯಸ್ಸಿನಲ್ಲಿ ಅದಾವುದೋ ಶೃಂಗಾರದ ಹಾಡನ್ನು ಅಷ್ಟು public ಆಗಿ ಮೆಚ್ಚುವುದೆಂದರೇನು, ತಲೆದೂಗುವುದೆಂದರೇನು!

ಆದರೆ ನನಗೆ ಆಶ್ಚರ್ಯ, ಅವರು ಆ ಹಾಡನ್ನು ಮೆಚ್ಚಿದರೆ ಇವರಿಗೇನು? ಆ ಹಾಡಿನ ಸಂಗೀತ ಎಷ್ಟು ಸೊಗಸಾಗಿತ್ತೆಂದರೆ, ಸ್ವತಃ ಹಾಡುಗಾರರಾಗಿದ್ದ ನಮ್ಮ ತಾತನವರು ಅದನ್ನು ಮೆಚ್ಚಿ ತಲೆದೂಗದಿರಲು ಸಾಧ್ಯವೇ ಇರಲಿಲ್ಲ. ನಮ್ಮ ಅತ್ತೆ ಮತ್ತು ನಮ್ಮ ತಾತನವರ ಸಂಭಾಷಣೆ ಹೆಚ್ಚು ಕಡಿಮೆ ಹೀಗಿತ್ತು:

ನಮ್ಮತ್ತೆ: (ಇರುಸುಮುರುಸಿನಿಂದ, ಅಪ್ಪನ ಬಳಿ ಸಾರಿ) ಏನಪ್ಪ ಇದು ಅಸಹ್ಯ, ಹೋಗಿ ಹೋಗಿ ಈ ಹಾಡಿಗೆ ತಲೆತೂಗುತ್ತ ಇದೀಯಲ್ಲ
ತಾತ: ಯಾಕೇ ಪುಟ್ಟಾ, ಅದರ ಸಾಹಿತ್ಯ ನೋಡು, ಎಷ್ಟು ಸೊಗಸಾಗಿದೆ (ನನ್ನ ಸ್ವಗತ, ಅರೇ, ಸಾಹಿತ್ಯವೇ? ಅಥವಾ ಸಂಗೀತವೋ? ಸಾಹಿತ್ಯದಲ್ಲೇನಿದೆ!)
ನಮ್ಮತ್ತೆ: (ತಲೆ ಚಚ್ಚಿಕೊಳ್ಳುತ್ತಾ), ಬಡುಕೋಬೇಕು, ಅದರಲ್ಲೇನಿದೆಯಪ್ಪಾ ಅಂಥಾದ್ದು... ನೀನಂತೂ...

ನಮ್ಮ ತಾತ ಅದಕ್ಕೇನೂ ಉತ್ತರ ಕೊಡುವ ಗೋಜಿಗೆ ಹೋಗಲಿಲ್ಲ. ನಕ್ಕುಕೊಂಡು ಸುಮ್ಮನಾದರೆಂದು ನೆನಪು.

ಆಮೇಲೂ ಸುಮಾರು ಸಲ ಆ ಹಾಡನ್ನು ನೋಡಿದಾಗೆಲ್ಲ/ಕೇಳಿದಾಗೆಲ್ಲ ನಮ್ಮ ತಾಯಿ-ತಂದೆ ಆ ಘಟನೆಯನ್ನು ನೆನಪಿಸಿಕೊಂಡು ನಕ್ಕದ್ದಿದೆ; ಹಾಗೇ ಆ ಸಾಹಿತ್ಯದಲ್ಲಿ ತಾತನವರು ಮೆಚ್ಚಿದ್ದು ಏನಿದೆಯೆಂದು ನಾನು ತಲೆಕೆಡಿಸಿಕೊಂಡಿದ್ದೂ. ಆಮೇಲೊಂದುದಿನ, (ತಲೆಯಲ್ಲಿ ಕುಳಿತಿದ್ದ ಮದ'ನಾರಿ' ಕ್ಷಣಕಾಲ ಮರೆಯಾದಾಗ) ಇದ್ದಕ್ಕಿದ್ದಂತೆ ಹೊಳೆಯಿತು; ಅರೇ, ಮದನಾರಿಯೆಂದರೆ ಶಿವನಲ್ಲವೇ (ಮದನ + ಅರಿ)! ಜೊತೆಗೇ ನೆನಪಿಗೆ ಬಂತು, ತೆರೆಯಮೇಲೆ ಆ ಮದ'ನಾರಿ'ಯ ಮುಂದೆಯೇ ಕುಳಿತಿದ್ದ ಶಿವನ ಮೂರ್ತಿ; ಅರ್ಜುನ ಪೂಜಿಸುವಂತೆ ಅಭಿನಯಿಸುತ್ತಿದ್ದುದು ಆ ಮದನಾರಿಯನ್ನೇ! ಆಗ ಆ ಹಾಡಿನ ಪೂರ್ಣ ಸ್ವಾರಸ್ಯ ಅರಿವಿಗೆ ಬಂತು. ಈಗ ಮೊನ್ನೆ ಆ ಹಾಡನ್ನು ಮತ್ತೆ ನೋಡಿದಾಗ ಈ ಬಗ್ಗೆ ಬರೆಯಬೇಕೆನ್ನಿಸಿತು. ಕೇವಲ ಅದೊಂದು ಅರ್ಥಪಲ್ಲಟದಿಂದ ಇಡೀ ಹಾಡಿನ ರಸವೇ ಅದುಹೇಗೆ ಶೃಂಗಾರದಿಂದ ಭಕ್ತಿಗೆ ಬದಲಾಗುತ್ತದೆ ನೋಡಿ:

ಆರಾಧಿಸುವೇ ಮದನಾರಿ ಆದರಿಸು ನೀ ದಯ ತೋರಿ

ಅಂತರಂಗದಲಿ ನೆಲೆಸಿರುವೆ ಆಂತರ್ಯ ತಿಳಿಯದೆ ಏಕಿರುವೆ
ಸಂತತ ನಿನ್ನ ಸಹವಾಸ ನೀಡಿ ಸಂತೋಷದಿಂದೆನ್ನ ನಲಿಸೆಂದು ಕೋರುವೆ

ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೆ ಪರಿಹರಿಸು
ಪ್ರೇಮಾಮೃತವನು ನೀನುಣಿಸು ತನ್ಮಯಗೊಳಿಸು ಮೈಮರೆಸು
ಚಿನ್ಮಯ ಭಾವ ತುಂಬುತ ಜೀವ ಆನಂದ ಆನಂದ ಆನಂದವಾಗಲಿ

ಇಡೀ ಹಾಡಿನ ಸಾಹಿತ್ಯ, ಎರಡು ಅರ್ಥಗಳಿಗೂ ಸಂಪೂರ್ಣ ಹೊಂದುತ್ತದೆ. ಬಳಸುವುದು ಒಂದೇ ಪದ, ಕೊಡುವುದು ಎರಡು ಅರ್ಥ (ಅದು ನೀವು ಈಗ ನೋಡುವ double-meaning ಅಲ್ಲ!). ಹೀಗೆ ಒಂದೇ ಪದ ಅಥವಾ ಪದಪುಂಜಗಳನ್ನು ಬಳಸಿ ವಿವಿದಾರ್ಥಗಳನ್ನು ಸೂಚಿಸುವುದಕ್ಕೆ ಅಲಂಕಾರದ ಪರಿಭಾಷೆಯಲ್ಲಿ ಶ್ಲೇಷೆಯೆನ್ನುತ್ತಾರೆ.

ಶ್ಲೇಷಾಲಂಕಾರ ಪ್ರತಿಭಾವಂತ ಕವಿಯೊಬ್ಬನ ಕೈಯಲ್ಲಿ ಉತ್ತಮ ಸಾಧನ. ಪ್ರಾಚೀನ-ಆಧುನಿಕ ಕವಿಗಳು ನಾಟಕಕಾರರು ಶ್ಲೇಷೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಸುತ್ತಲೇ ಬಂದಿದ್ದಾರೆ. ಉದಾಹರಣೆಗೆ ಭಾಸನ "ಪ್ರತಿಜ್ಞಾಯೌಗಂಧರಾಯಣ" ನಾಟಕದ ನಾಂದಿ ಪದ್ಯವನ್ನು ನೋಡಿ:

ಪಾಂತು ವಾಸವದತ್ತಾಯೋ ಮಹಾಸೇನೋತಿ ವೀರ್ಯವಾನ್
ವತ್ಸರಾಜಸ್ತು ನಾಮ್ನಾ ಸ ಶಕ್ತಿರ್ಯೌಗಂಧರಾಯಣಃ

(ವಾಸವದತ್ತಾಭ್ಯುದಯ ಮಹಾಸೇನ ಬಹುವೀರ್ಯಯುತ ವತ್ಸರಾಜ
ಶಕ್ತಿಯ ತಳೆದಿಹ ಯೌಗಂಧರಾಯಣ ಕರುಣದಿ ಕಾಪಾಡಲೆಮ್ಮ - ಅನು: ಸಿ.ಪಿ.ಕೆ)

ಸ್ಥೂಲವಾಗಿ ಅದರ ಅರ್ಥ ಹೀಗೆ. ವಾಸವ (ಇಂದ್ರ)ನಿಗೆ ಜೀವನವನ್ನು (ಆಯು = ಜೀವನ, ಅಭ್ಯುದಯ) ನೀಡಿದ, ಅತಿ ವೀರ್ಯವಂತನೂ ವತ್ಸರಾಜನೆಂಬ ಹೆಸರುಳ್ಳವನೂ, ಮಹಾಸೇನನೂ ಆದ ಶಕ್ತಿಯುತನಾದ (ಅಥವ ಶಕ್ತ್ಯಾಯುಧ - ವೇಲಾಯುಧವನ್ನು ತಳೆದ) ಯೌಗಂಧರಾಯಣನು (ಕುಮಾರಸ್ವಾಮಿಯು) ನಮ್ಮನ್ನು ಕಾಪಾಡಲಿ (ಕುಮಾರಸ್ವಾಮಿಗೆ ವತ್ಸರಾಜನೆಂದೂ ಹೆಸರಿದೆ - ಗಣಪತಿಯು ಜ್ಯೇಷ್ಠರಾಜನಾದರೆ, ಅವನ ತಮ್ಮ ಸುಬ್ರಹ್ಮಣ್ಯನು ವತ್ಸರಾಜ; ಹಾಗೆಯೇ ದೇವಸೇನಾನಿಯಾದ ಈತ ಮಹಾಸೇನ; ಅಂತೆಯೇ ಯುಗಂಧರ (ಶಿವ)ನ ಮಗನಾದ್ದರಿಂದ ಯೌಗಂಧರಾಯಣ)

ಇದು ಕುಮಾರಸ್ವಾಮಿಯನ್ನು ಕುರಿತ ಸ್ತುತಿಯಾದರೆ, ನಾಟಕದ ಮಟ್ಟದಲ್ಲಿ ಅದರ ಮುಖ್ಯಪಾತ್ರಗಳ ಸ್ತುತಿಯೂ ಹೌದು, ಹಾಗೆಯೇ ನಾಟಕದ ಸ್ಥೂಲ ಪೂರ್ವಸೂಚಿಕೆಯೂ ಹೌದು - ವಾಸವದತ್ತೆ (ಮತ್ತವಳ ಅಭ್ಯುದಯ - ವಿವಾಹವೇ ಈ ನಾಟಕದ ವಸ್ತು), ಆಕೆಯ ತಂದೆ ಮಹಾಸೇನ (ಪ್ರದ್ಯೋತ); ವೀರಶ್ರೇಷ್ಠನಾದ ವತ್ಸರಾಜ (ಉದಯನ); ಇವೆಲ್ಲದರ ಜೊತೆಗೆ ಈ ನಾಟಕದ ನಾಯಕ, ಚತುರನೂ ಶಕ್ತಿಯುತನೂ ಆದ ಮಂತ್ರಿ ಯೌಗಂಧರಾಯಣ; ವಾಸವದತ್ತೆಯ ನವಜೀವನಕ್ಕೆ ಕಾರಣವಾಗುವ ಅವನ ಯುಕ್ತಿ-ಚಾತುರ್ಯಗಳು - ಇವನ್ನು ಸೂತ್ರಧಾರ ಸ್ತುತಿಸುತ್ತಾ ನಾಟಕವನ್ನು ಪ್ರಾರಂಭಿಸುತ್ತಾನೆ.

ಹೀಗೆಯೇ ಈ ನಾಟಕದ ಮುಂದುವರಿಕೆಯಾದ "ಸ್ವಪ್ನವಾಸದತ್ತಾ" ನಾಟಕದಲ್ಲೂ ಇಂಥದ್ದೇ ಶ್ಲೇಷೆಯನ್ನು ಬಳಸುತ್ತಾನೆ ಕವಿ (ಅದು ಬಲರಾಮನ ಬಗ್ಗೆ ಹಾಗೂ ನಾಟಕದ ಪಾತ್ರಗಳ ಬಗ್ಗೆ - ಶ್ಲೋಕ ನೆನಪಿಲ್ಲ)

ಇನ್ನು ಕಾಳಿದಾಸನ ಬಹು ಪರಿಚಿತ ಸಾಲು <em><span style="font-size:85%;">"ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ"

ಜಗನ್ಮಾತಾಪಿತರಾದ (ಪಿತರೌ = ತಂದೆ-ತಾಯಿಯ ಜೋಡಿಯನ್ನು ಒಟ್ಟಾಗಿ ಸೂಚಿಸಿದಾಗ) ಪಾರ್ವತೀ ಪರಮೇಶ್ವರನ್ನು ವಂದಿಸುತ್ತೇನೆ, ಇದು ಒಂದು ಅರ್ಥವಾದರೆ, ಜಗಜ್ಜನಕರಾದ ಪಾರ್ವತೀಪ (ಪಾರ್ವತೀ ಪತಿ = ಶಿವ) ಹಾಗೂ ರಮೇಶ್ವರ (ರಮಾಪತಿ = ವಿಷ್ಣು) ಇವರನ್ನು ವಂದಿಸುತ್ತೇನೆ (ಇಲ್ಲಿ ಕವಿ "ಪಿತರೌ" ಎಂಬ ದ್ವಿ ವಚನವನ್ನು ಎಷ್ಟು ಚಾತುರ್ಯದಿಂದ ಬಳಸಿದ್ದಾನೆ ಎಂಬುದನ್ನು ಗಮನಿಸಬಹುದು)

ಅಡಿಟಿಪ್ಪಣಿ: "ಪಾರ್ವತೀಪ + ರಮೇಶ್ವರೌ" ಎಂದು ಬಿಡಿಸುವುದು "ಜಗತಃ ಪಿತರೌ" ಎಂಬ ದ್ವಿವಚನದ ಸಂದರ್ಭದಲ್ಲಿ ಅಸಾಧುವೆಂದೂ, "ವಾಕ್" ಎಂಬ ಸ್ತ್ರೀಲಿಂಗಪದಕ್ಕೂ "ಅರ್ಥ" ಎಂಬ ಪುಲ್ಲಿಂಗಪದಕ್ಕೂ ಸಂವಾದಿಯಾಗಿ "ಪಾರ್ವತೀ ಪರಮೇಶ್ವರೌ" ಎಂಬ ಹೋಲಿಕೆ ಬರುವುದರಿಂದ, ಪಾರ್ವತೀಪ ಹಾಗೂ ರಮೇಶ್ವರ ಎಂಬ ದ್ವಿ ಪುಲ್ಲಿಂಗ ಪದಗಳ ಬಳಕೆ ಆಲಂಕಾರಿಕವಾಗೂ ಅನುಚಿತವೆಂದೂ, ತನ್ನ ಕಾವ್ಯಗಳಲ್ಲೆಲ್ಲಾ ಅಸಾಧಾರಣ ಔಚಿತ್ಯಪ್ರಜ್ಞೆ, ವ್ಯಾಕರಣಪ್ರಜ್ಞೆ ಮೆರೆಯುವ ಕಾಳಿದಾಸ ಕೇವಲ ಸಣ್ಣ ಕಾವ್ಯಪ್ರಯೋಜನಕ್ಕೆ ಇಂಧಾ ವ್ಯಾಕರಣದೋಷಕ್ಕೆಡೆಗೊಡುವುದು ಅಸಂಭವವೆಂದೂ ಆದ್ದರಿಂದ ಇಲ್ಲಿ ಶ್ಲೇಷೆಯನ್ನು ಹುಡುಕಹೊರಡುವುದು ವ್ಯರ್ಥವೆಂದೂ ಕೆಲವಿದ್ವಾಂಸರ ಅಭಿಪ್ರಾಯ.  ಹೆಚ್ಚಿನ ವಿವರಗಳಿಗೆ ಶ್ರೀ ವಿವೇಕರ ಪ್ರತಿಕ್ರಿಯಾರೂಪದ ಲೇಖನವನ್ನು ನೋಡಿ, ಕಾಮೆಂಟಿನಲ್ಲಿ]

ಇನ್ನು ಕನ್ನಡಕ್ಕೆ ಬಂದರೆ, "ಕವಿರಾಜಮಾರ್ಗ"ದ ಈ ಮಂಗಲಾಚರಣೆಯ ಪದ್ಯವನ್ನು ನೋಡಿ:

ಶ್ರೀವಿಶದವರ್ಣೆ ಮಧುರಾ
ರಾವೋಚಿತೆ ಚತುರ ರುಚಿರ ಪದರಚನೆ ಚಿರಂ
ದೇವಿ ಸರಸ್ವತಿ ಹಂಸೀ
ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್

  ಶ್ರೀ ವಿಶದವರ್ಣೆ (ಮಂಗಳಕರವಾದ, ಶುಭ್ರವಾದ ಬಿಳೀ ಬಣ್ಣವುಳ್ಳವಳು), ಮಧುರಾರಾವೋಚಿತೆ (ಮಧುರವಾದ ಸ್ತುತಿಗೆ ಅರ್ಹಳು), ಚತುರ ರುಚಿರ ಪದರಚನೆ (ಸುಂದರವಾದ ಸುಲಲಿತವಾದ ನಡೆಯುಳ್ಳವಳು) ಚಿರಂದೇವಿ (ಶಾಶ್ವತಿ - "ಚಿರಂಜೀವಿ"ಯಂತೆ, ಚಿರಂದೇವಿ) ಸರಸ್ವತಿ, ಹಂಸೀ ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್ (ಹಂಸವು ಮಾನಸ ಸರೋವರದಲ್ಲಿ ನೆಲೆಗೊಳ್ಳುವಂತೆ, ನೀನು ನನ್ನ ಮನಸ್ಸಿನಲ್ಲಿ ನೆಲೆಸು);

ಮತ್ತೆ, ಶ್ರೀ ವಿಶದವರ್ಣೆ (ಮಂಗಳಕರವಾದ ಸ್ಫುಟವಾದ ಅಕ್ಷರಗಳನ್ನುಳ್ಳವಳು - ವರ್ಣ = ಅಕ್ಷರ), ಮಧುರಾರಾವೋಚಿತೆ (ಮಧುರವಾದ ನುಡಿಯನ್ನು ಹೊಂದಿದವಳು = ಭಾಷೆ ಮಧುರವಾಗಿದೆ ಎಂಬ ಅಭಿಪ್ರಾಯ), ಚತುರ ರುಚಿರ ಪದರಚನೆ (ಸುಂದರವಾದ ಸುಲಲಿತವಾದ ಪದರಚನೆಯ ಸಾಮರ್ಥ್ಯವುಳ್ಳವಳು) ಚಿರಂದೇವಿ (ಶಾಶ್ವತಿ - ಅಕ್ಷರ ಶಾಶ್ವತ "ಅ+ಕ್ಷರ = ನಾಶವಿಲ್ಲದ್ದು) ಸರಸ್ವತಿ (ಭಾಷೆಗೆ ಸರಸ್ವತಿ ಎಂದೂ ಪರ್ಯಾಯವುಂಟು) ಹಂಸೀ ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್ (ಹಂಸವು ಮಾನಸ ಸರೋವರದಲ್ಲಿ ನೆಲೆಗೊಳ್ಳುವಂತೆ, ನೀನು ನನ್ನ ಮನಸ್ಸಿನಲ್ಲಿ ನೆಲೆಸು) - ಇದು ಮಾತಿನ ಅಧಿದೇವಿಯಾದ ವಾಗ್ದೇವಿಯನ್ನು (ವಾಗ್ದೇವಿ = ಸರಸ್ವತಿ, ಮತ್ತೆ) ಕುರಿತ ಅರ್ಥ. ಮೊದಲ ಅರ್ಥದಲ್ಲಿ ಸರಸ್ವತಿಯ ದೈವೀ ಸ್ವರೂಪದ ವರ್ಣನೆಯಿದ್ದರೆ, ಎರಡನೆಯ ಅರ್ಥದಲ್ಲಿ ಆಕೆಯ ವಾಕ್ ಸ್ವರೂಪದ ವರ್ಣನೆಯಿದೆ. ಈ ರೀತಿ ವಿವಿಧಾರ್ಥಗಳನ್ನು ಹೊಳೆಸುವುದೂ ಮಾತಿನ ಶಕ್ತಿಯೇ ತಾನೆ? ಇದು ವಾಗ್ದೇವಿಯನ್ನು ಸ್ತುತಿಸುವ ಈ ಶ್ಲೋಕದ ಚಮತ್ಕಾರ.

ಇದೇ ಬಗೆಯ ಶ್ಲೇಷೆಯನ್ನು ಕವಿ ಮುದ್ದಣ ಹೇಗೆ ತರುತ್ತಾನೆ ನೋಡಿ ("ಶ್ರೀರಾಮ ಪಟ್ಟಾಭಿಷೇಕ" ಕಾವ್ಯದ ಮಂಗಲಾಚರಣೆಯಿಂದ):

ಹರಿಗೆರಗಿ ಸೋಮನಂ ನುತಿಸುತೆ ಮನಂದಣಿಯೆ
ಹರಿವಾಹನನ ಬಲಂಗೊಂಡು ಹರಿಪುತ್ರರಂ
ಹರಿಸುತಾದ್ಯರ್ಗೆ ತಲೆವಾಗಿ ಗುರು ಕವಿ ಬುಧರ ಪದಕಮಲಮಂ ಧ್ಯಾನಿಸಿ
ಹರಿಗೆರಗಿ ಸೋಮನಂ ನುತಿಸುತೆ ಮನಂದಣಿಯೆ
ಹರಿವಾಹನನ ಬಲಂಗೊಂಡು ಹರಿಪುತ್ರರಂ
ಹರಿಸುತಾದ್ಯರ್ಗೆ ತಲೆವಾಗಿ ಗುರು ಕವಿ ಬುಧರ ಪದಕಮಲಮಂ ಧ್ಯಾನಿಪೆಂ

ಹರಿ (ವಿಷ್ಣು)ಗೆರಗಿ, ಸೋಮ (ಶಿವ)ನಂ ನುತಿಸುತೆ ಮನಂದಣಿಯೆ, ಹರಿವಾಹನನ (ಗರುಡ?) ಬಲಂಗೊಂಡು ಹರಿಪುತ್ರರಂ (ಬ್ರಹ್ಮ) ಹರಿಸುತಾದ್ಯರ್ಗೆ (ಹನುಮನೇ ಮೊದಲಾದ ಕಪಿಶ್ರೇಷ್ಠರಿಗೆ - ಹರಿ = ಕಪಿ) ತಲೆವಾಗಿ ಗುರು (ಗುರುಗಳು) ಕವಿ (ಕವಿಗಳು/ಸಹೃದಯರು) ಬುಧ (ಪಂಡಿತ/ಜ್ಞಾನಿ)ರ ಪದಕಮಲಮಂ ಧ್ಯಾನಿಸಿ; ಮತ್ತೆ ಹರಿ (ಸೂರ್ಯ)ಗೆರಗಿ, ಸೋಮ (ಚಂದ್ರ)ನಂ ನುತಿಸುತೆ, ಮನಂದಣಿಯೆ ಹರಿವಾಹನ (ಮೇಷವಾಹನ = ಮಂಗಳ) ನ ಬಲಂಗೊಂಡು, ಹರಿಪುತ್ರರಂ (ಹರಿ(ಸೂರ್ಯ)ಪುತ್ರ = ಶನಿ) ಹರಿಸುತಾದ್ಯರ್ಗೆ (ಹರಿ=ಹಾವು; ಹಾವಿನಿಂದ ಹುಟ್ಟಿದವರು (?) ರಾಹುಕೇತು) ತಲೆವಾಗಿ, ಗುರು (ಗುರು) ಕವಿ (ಶುಕ್ರ) ಬುಧ (ಕವಿ = ಬುಧ)ರ ಪದಕಮಲಮಂ ಧ್ಯಾನಿಸುವೆ.

ಷಟ್ಪದಿಯ ಎರಡೂ ಅರ್ಧಗಳಲ್ಲಿ ಒಂದೇ ಪದಗಳನ್ನು ಬಳಸಿದರೂ ಮೊದಲ ಅರ್ಧದಲ್ಲಿ ತ್ರಿಮೂರ್ತಿಗಳು, ಗುರು-ಹಿರಿಯರನ್ನು ವಂದಿಸುವ ಕವಿ, ಎರಡನೇ ಅರ್ಧದಲ್ಲಿ ಅದೇ ಪದಗಳನ್ನು ಬಳಸಿ ನವಗ್ರಹಗಳನ್ನು ವಂದಿಸುತ್ತಾನೆ. ಈ ಷಟ್ಪದಿಯಲ್ಲಿ ವಿಷಯದ ಹರಿವಿನಲ್ಲಿ, ಅನ್ವಯದಲ್ಲಿ ಅಷ್ಟು ಸ್ಪಷ್ಟತೆ ಕಾಣುವುದಿಲ್ಲ, ಆದರೂ ಶ್ಲೇಷೆಗೆ ಇದೊಂದು ಉದಾಹರಣೆಯೆಂದು ಇಲ್ಲಿ ಕೊಟ್ಟಿದ್ದೇನೆ.

ಇದೆಲ್ಲಾ ಬುದ್ಧಿಯ ಚಮತ್ಕಾರವಾಯಿತು; ಪ್ರಯತ್ನ ಪಟ್ಟು ಬರೆಯದೇ ಬಂದದ್ದಲ್ಲ, ಪ್ರಯತ್ನ ಪಟ್ಟು ಅರಿಯದೇ ಅರ್ಥವಾಗುವುದಲ್ಲ. ಆದರೆ ಸ್ವಯಂಪ್ರಭೆಯಿರುವ ಕಾವ್ಯದ ಮಿಂಚಿಲ್ಲದಿದ್ದರೆ ಅದಾವ ಅಲಂಕಾರ ತಾನೆ ಮಿನುಗೀತು? ಶ್ರೀ ಎನ್ಕೆಯವರು ಬೇಂದ್ರೆಯರ ಬಗ್ಗೆ ಆಗಾಗ ಹೇಳುತ್ತಿದ್ದ ಘಟನೆಯೊಂದು ನೆನಪಿಗೆ ಬರುತ್ತದೆ. ಬೇಂದ್ರೆಯವರು ಕೆಲ ಮಿತ್ರರೊಡನೆ ಇನ್ನೊಬ್ಬ ಮಿತ್ರರ ಮನೆಗೆ ಹೋಗಿದ್ದರಂತೆ. ಮಿತ್ರರು ಹೊರಗೆಲ್ಲೋ ಹೋಗಿದ್ದರಿಂದ, ಸ್ವಲ್ಪ ಕಾಯಬೇಕಾಯಿತು. ಅವರು ಬರುವವರೆಗೆ ಹೀಗೇ ಸ್ವಲ್ಪ ಸುತ್ತಾಡಿ ಬರೋಣ ಎಂದ ಮಿತ್ರರ ಸಲಹೆಗೆ ಒಪ್ಪದ ಬೇಂದ್ರೆ, ಇತರರನ್ನು ಸುತ್ತಲು ಕಳುಹಿಸಿ ಮನೆಯಲ್ಲೇ ಉಳಿದರಂತೆ. ಅವರನ್ನು ಉಪಚರಿಸಲು ಮನೆಯೊಡತಿ ಒಂದು ತಟ್ಟೆಯಲ್ಲಿ ದೊಡ್ಡ ತಂಬಿಟ್ಟು ತಂದಿತ್ತರಂತೆ. ಅದನ್ನು ತಿಂದು ಮುಗಿಸುವ ವೇಳೆಗೆ ಹಿಂದಿರುಗಿದ ಇತರ ಮಿತ್ರರು, ತಮ್ಮನ್ನೆಲ್ಲಾ ಬಿಟ್ಟು ಬೇಂದ್ರೆ ತಂಬಿಟ್ಟು ತಿಂದರು ಎಂದು ಆಕ್ಷೇಪಿಸಿದಾಗ ಬೇಂದ್ರೆ ಉತ್ತರ "ನೀವ್ ನಂಬಿಟ್ ಹ್ವಾದ್ರಿ, ನಾವ್ ತಂಬಿಟ್ ತಿಂದ್ವಿ" (ನೀವು ನಮ್ಮನ್ನ ಬಿಟ್ಟು ಹೋದಿರಿ, ನಾವು ತಮ್ಮನ್ನ ಬಿಟ್ಟು ತಿಂದೆವು)

ಅ.ರಾ.ಮಿತ್ರರು ಶ್ಲೇಷಾಲಂಕಾರಕ್ಕೆ ಬಹು ಸೊಗಸಾದ ಉದಾಹರಣೆಯೊಂದನ್ನು ರಚಿಸಿ ಕೊಟ್ಟಿದ್ದಾರೆ, ತಮ್ಮ "ಛಂದೋಮಿತ್ರ" ಪುಸ್ತಕದಲ್ಲಿ:

ೀತವರ್ಣಪ್ರೀತೆ ಗೃಹಪತ್ರಕರ್ತೆ
ದೋಷದ ಕರಡು ತಿದ್ದದ ಮನೆಯ ಸಂಪಾದಕ
ಇಬ್ಬರಿಂ ಹಾಳಾಯ್ತು ಮನೆಯಚ್ಚುಕೂಟ
ಬತ್ತಿ ಹೋಯಿತು ಕೇಳು ಅರ್ಥ ಜೀವನದಿ

ಪೀತ = ಹಳದಿ ಪತ್ರಿಕೋದ್ಯಮ (yellow press - useless gossip), ಚಿನ್ನ ಕೂಡ
ಗೃಹಪತ್ರಕರ್ತೆ = ಗೃಹಿಣಿಯೆಂಬ ಪತ್ರಕರ್ತೆ, ಗೃಹಪತ್ರ (ಮನೆಯ ಖರ್ಚುವೆಚ್ಚ) ನೋಡುವವಳು ಕೂಡ
ಸಂಪಾದಕ = ಪತ್ರಿಕಾ ಸಂಪಾದಕ, ಹಣ ಸಂಪಾದಿಸುವವನು (ಯಜಮಾನ) ಎಂದು ಕೂಡ
ಅರ್ಥ = ಸ್ವಾರಸ್ಯ, ಹಣ ಕೂಡ
ಜೀವನದಿ = ಜೀವನದಲ್ಲಿ, ಜೀವ-ನದಿ ಕೂಡ (ಅರ್ಥ (ಹಣ)ವೆಂಬ ಜೀವನದಿ ಈ ದುಂದುವೆಚ್ಚದಿಂದ ಬತ್ತಿಹೋಯಿತು ಎಂದೂ ಅರ್ಥ)

ಶ್ಲೇಷೆಯ ಶುದ್ಧ ರೂಪದಲ್ಲಿ, ಒಂದೇ ಪದಕ್ಕೆ ಸಹಜವಾಗೇ ವಿವಿಧ ಅರ್ಥಗಳಿರುತ್ತವೆ. ಈ ಅರ್ಥಗಳು ಸಹಜ ನಿಘಂಟು ಅರ್ಥಗಳೇ ಹೊರತು ಸಾಧಿತ (ವ್ಯಂಗ್ಯ) ಅರ್ಥಗಳಲ್ಲ. ಉದಾ: ಅತ್ತೆ, ನಿನ್ನಿಂದ ನಾನತ್ತೆ.  ಇಲ್ಲಿ ಅತ್ತೆ (ಗಂಡನ ಅಥವ ಹೆಂಡತಿಯ ತಾಯಿ) ಮತ್ತು (ಅತ್ತೆ, ಅಳುವುದರ ಭೂತಕಾಲ) ಎರಡೂ ನಿಘಂಟಿನ ಅರ್ಥಗಳೇ.  ಹೀಗೆ ಪದಗಳನ್ನು ಒಡೆಯದೆಯೇ ಅದರ ವಿವಿಧಾರ್ಥಗಳನ್ನು ಚಮತ್ಕಾರಿಕವಾಗಿ ಬಳಸಿಕೊಳ್ಳುವುದಕ್ಕೆ ಅಭಂಗಶ್ಲೇಷೆ ಎನ್ನುತ್ತಾರೆ.  ದುಂಡಿರಾಜರ ಈ ಹನಿ ನೋಡಿ:

ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೆ ಇರಬೇಕು
ಹಾಕಿದ್ದಾರೆ ಬೋರ್ಡು
"ನಗದು"

ಒಂದೇ ಪದವನ್ನು ಚಮತ್ಕಾರಿಕವಾಗಿ ಒಡೆಯುವುದರ ಮೂಲಕವೂ ಶ್ಲೇಷೆ ಉದಿಸುತ್ತದೆ. ಇದನ್ನು ಸಭಂಗ ಶ್ಲೇಷೆ ಎನ್ನುತ್ತಾರೆ ಉದಾ: ಭೀಮ"ನ ಗದೆ"ಯೆತ್ತುವ ನಿನ್ನ ಸಾಹಸಕೆ ಅವ "ನಗದೆ" ಇರಲು ಹೇಗೆ ಸಾಧ್ಯ?  ಈ ಕೆಳಗಿನ ಸುಂದರ ಸಾಲುಗಳನ್ನು ನೋಡಿ:

ಯಥಾ ನಯತಿ ಕೈಲಾಸಂ ನಗಂ ಗಾನ ಸರಸ್ವತೀ
ತಥಾ ನಯತಿ ಕೈಲಾಸಂ ನ ಗಂಗಾ ನ ಸರಸ್ವತೀ ||

ಇಲ್ಲಿನ "ನಗಂ ಗಾನ" ಹಾಗೂ "ನ ಗಂಗಾ ನ" ಎಂಬ ಒಡೆಯುವಿಕೆಯನ್ನು ಗಮನಿಸಿ.

ಮಾತಿನಲ್ಲಿ ಅಲ್ಲಲ್ಲಿ ಹೀಗೆ ಮಿಂಚಿ ಮರೆಯಾಗುವ ಶ್ಲೇಷೆ ಮನಸ್ಸಿಗೆ ಹಿತವೆನ್ನಿಸಿದರೂ, ಅದು ಅತಿಯಾದರೆ ತಲೆಚಿಟ್ಟು ಹಿಡಿಯಬಹುದಲ್ಲವೇ?  ಶ್ಲೇಷೆಯ ಅತಿ ಬಳಕೆ ಚಿತ್ರಕವಿತ್ವವೆಂಬ ಅಧಮ ಕಾವ್ಯಪ್ರಕಾರವಾಗಿಬಿಡುತ್ತದೆಂದು ಆಲಂಕಾರಿಕರ ಮತ.  ಆದ್ದರಿಂದ ಇದನ್ನು ಸೂಕ್ಷ್ಮವಾಗಿ, ರಸಪೂರ್ಣವಾಗಿ ಬಳಸುವ ಔಚಿತ್ಯಪ್ರಜ್ಞೆ ಅತಿ ಅವಶ್ಯಕ.

ಮೇಲಿನ ಚರ್ಚೆಯಲ್ಲಿ ನಾವು ಗಮನಿಸಿದ ಮುಖ್ಯ ಅಂಶವೆಂದರೆ, ಶ್ಲೇಷೆಯಲ್ಲಿ ಪದವೊಂದನ್ನು ವಿವಿಧಾರ್ಥಗಳಲ್ಲಿ ಬಳಸಿದರೂ, ಆ ವಿವಿಧಾರ್ಥಗಳು ಆ ಪದಕ್ಕೆ ಸಹಜವಾಗಿಯೇ ನಿಘಂಟಿನಲ್ಲಿ ದೊರಕೊಂಡಿರುವುದು; ಅವಾವುವೂ ಸಾಧಿತ ಅಥವ ವ್ಯಂಗ್ಯಾರ್ಥಗಳಲ್ಲ.  ಉದಾಹರಣೆಗೆ ಮಾಮೂಲು ಎಂಬ ಪದಕ್ಕೆ ಇರುವ ಅರ್ಥ, ಸಾಧಾರಣವಾಗಿ, ಸಾಮಾನ್ಯವಾಗಿ, routine, customary ಇತ್ಯಾದಿ.  ಆದರೆ ಅದೇ ಲಂಚವೆಂಬ ವಿಶೇಷಾರ್ಥದಲ್ಲೂ ಬಳಕೆಯಲ್ಲಿದೆ.  ಆದ್ದರಿಂದ ಬಳಕೆಯಲ್ಲಿ ಮಾಮೂಲು ಎನ್ನುವ ಪದವನ್ನು ಹೀಗೆ ಎರಡರ್ಥದಲ್ಲಿ ಬಳಸಿದರೆ, ಅದು ಶ್ಲೇಷೆಯಾಗುವುದಲ್ಲ, ಬದಲಿಗೆ ವ್ಯಂಜನಾವೃತ್ತಿಯೆಂಬ ಮತ್ತೊಂದು ಅಲಂಕಾರವಾಗುತ್ತದೆ.  ವ್ಯಂಜನಾವೃತ್ತಿಯ ಮಿತಿಯೆಂದರೆ, ಈ ವ್ಯಂಗ್ಯಾರ್ಥ ಎಷ್ಟೆಂದರೂ ಸಂದರ್ಭದ ಚಮತ್ಕಾರದಿಂದ ಮೂಡಿರುವ ಅರ್ಥವಾದ್ದರಿಂದ, ಮೊದಲ ಕೆಲವು ಪ್ರಯೋಗಗಳಲ್ಲಿ ಚಮತ್ಕಾರಿಕವಾಗಿ ಸೊಗಸೆನ್ನಿಸಿದರೂ, ಅದರ ಮಿತಿಮೀರಿದ ಬಳಕೆ ತನ್ನ ಹೊಳಪು ಕಳೆದುಕೊಳ್ಳುತ್ತದೆ.  "ಯಡಿಯೂರಪ್ಪನವರ ಸರ್ಕಾರ ’ಶೋಭಾ’ಯಮಾನವಾಗಿ ಮಿನುಗುತ್ತದೆ" ಎಂದಂತೆ!


"Pun" ಎನ್ನುವುದು ಶ್ಲೇಷೆ ಮತ್ತು ವ್ಯಂಜನಾವೃತ್ತಿಗಳ ನಡುವೆ ಸಂಚರಿಸುವ ಇಂಗ್ಲಿಷ್ ಸಮಾನಾಂತರ.  Ogden Nash ಪನ್ನಿನ ಅನಂತ ಸಾಧ್ಯತೆಗಳನ್ನು ಪರಿಚಯಿಸಿದ ಕವಿ. ಅವನ ಈ ಸಾಲುಗಳನ್ನು ನೋಡಿ:

There was an old man in the trunk
Who inquired of his wife, "Am I drunk?"
She replied with regret
"I'm afraid so, my pet"
And he answered, "It's just as I thunk."
 
ಕುುಡುಕ ಗಂಡ ಹೆಂಡತಿಯನ್ನು ಕೇಳುತ್ತಾನೆ, "ನಾನು ಕುಡಿದಿದ್ದೀನಾ?" ಅವಳು ಉತ್ತರಿಸುತ್ತಾಳೆ, "ಹೌದು ಮುದ್ದೂ". ಅದಕ್ಕವನು ಹೇಳುತ್ತಾನೆ, "ಅದೇ ನಾನೂ ಯೋಚಿಸಿದ್ದು". ಇದು ಭಾಷಾಂತರಕ್ಕೆ ಸಿಕ್ಕುವ pun ಅಲ್ಲ. ಇಲ್ಲಿ ಸ್ವಾರಸ್ಯವಿರುವುದು ಕೊನೇ ಸಾಲಿನ "thunk" ಎನ್ನುವ ಪದದಲ್ಲಿ. Drink ಎನ್ನುವುದು Drunk ಆದಂತೆ, ಕುಡುಕನ ಬಾಯಲ್ಲಿ Think ಅನ್ನುವುದು Thunk (Thought ಬದಲಿಗೆ). ಅದೇ ಇಲ್ಲಿನ Pun. ಪದವನ್ನು ತಿರುಚಿ Pun ಉತ್ಪಾದಿಸುವುದಕ್ಕೆ ಇದು ಉದಾಹರಣೆ. ಮತ್ತೆ ಅವ ಅದೆಷ್ಟು ಕುಡುಕನಾಗಿಬಿಟ್ಟಿದ್ದಾನೆಂದರೆ, ಅವನ ಹೆಂಡತಿಯ ಪಾಲಿಗೆ ಅವನೊಂದು ಪೆಟ್ಟಿಗೆಯಲ್ಲಿ ಹೊತ್ತೊಯ್ಯುವ ಸಾಕುಪ್ರಾಣಿಯಂತೆ (trunk ಮತ್ತು pet ಅನ್ನುವುದರ pun ಇದು). ಅದಕ್ಕೇ ಅವನು "honey" ಅಲ್ಲ, "sweetheart" ಅಲ್ಲ, "pet". ಮತ್ತೆ Trunk - Drunk; (Re)gret - Pet ಈ ಪ್ರಾಸಗಳ ಜೊತೆಗೆ ಕೊನೆಯ ಸಾಲಿನಲ್ಲಿ Thunk ಎನ್ನುವ ವಿಲಕ್ಷಣ ಪ್ರಾಸವೂ ಸೇರಿ ಅದಕ್ಕೆ ಮತ್ತಷ್ಟು ಹಾಸ್ಯದ ಲೇಪ ಕೊಡುತ್ತದೆ.

ಇದೇ ಉಸಿರಿನಲ್ಲಿ ವೈಯೆನ್ಕೆಯವರ ಒಂದು ಹನಿ ನೆನಪಿಗೆ ಬರುತ್ತದೆ:

ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈ ಹಿಡಿದು ಕುಡಿಸೆನ್ನನು

ಸುಪ್ರಸಿದ್ಧವಾದ ಸಾಲೊಂದನ್ನು ತೆಗೆದುಕೊಂಡು ಅದಕ್ಕೆ ವಿಲಕ್ಷಣ ತಿರುವನ್ನು ಕೊಡುವುದು ಇಲ್ಲಿನ pun; ಹಾಗೆಯೇ ನಡೆಯುವನಿಗೆಂತೋ ಅಂತೆಯೇ ಕುಡಿಯುವವನಿಗೂ ಬೇಕು ಬೆಳಕು (ಅವನಿಗೆ ಹೆಚ್ಚೇ ಬೇಕು, ಏಕೆಂದರೆ ಅವನ "ಮಬ್ಬು" ಹೆಚ್ಚು) ಅನ್ನುವುದು ಕೂಡ; ಪಬ್ಬೇ ಮಬ್ಬಾಗುವ pun ಕೂಡ ಇಲ್ಲಿದೆ

Pun ಸಾಹಿತ್ಯದ ಬೆಳೆ ಆಧುನಿಕ ಕನ್ನಡದಲ್ಲಿ ಸಾಕಷ್ಟು ಹುಲುಸಾಗಿಯೇ ಬೆಳೆದಿದೆ. ಕೈಲಾಸಂರಿಂದ ಹಿಡಿದು ದುಂಡಿರಾಜರವರೆಗೂ ಅನೇಕ punಡಿತರು ನಮ್ಮಲ್ಲಿದ್ದಾರೆ (ಕ್ಷಮಿಸಿ, ಈ punಡಿತ ಎನ್ನುವ ಶ್ಲೇಷೆಯೇ (ಹಾಗನ್ನಬಹುದೇ) ತನ್ನ ಅತಿ ಬಳಕೆಯಿಂದ ಕ್ಲೀಷೆ (cliche)ಯಾಗಿ ಹೋಗಿದೆ)

Punನ್ನಿನ ವಿಷಯಕ್ಕೆ ಬಂದರೆ ದುಂಡಿರಾಜರನ್ನು ಮರೆಯಲು ಸಾಧ್ಯವೇ ಇಲ್ಲ, ಆದರೆ ಸಮಸ್ಯೆಯೆಂದರೆ ಅವರ ಯಾವ ಹನಿಯನ್ನು ಉದಾಹರಿಸುವುದು ಯಾವುದನ್ನು ಬಿಡುವುದು? ಕಾವ್ಯ ಮಿಂಚಲು ಭಾಮಿನಿಯೇ ಆಗಬೇಕೇ, ಮಿನಿ ಆಗದೇ? ಅವರು ಹೇಳುತ್ತಾರೆ:

ಅಯ್ಯಾ ಕುಮಾರವ್ಯಾಸ
ನಾನು ನಿನ್ನ ದಾಸ
ನೀನು ಬರೆದದ್ದು ಭಾಮಿನಿ
ನನ್ನದೋ ಬರೀ 'ಮಿನಿ'
 
ಹಾಗೆಯೇ ಇನ್ನೊಂದು:

ಬ್ಯಾಂಕ್ ಜೀವನದ
ಏಕತಾನದಿಂದ
ರೋಸಿ ಹೋಗಿ
ಎಲ್ಲ ಮರೆತು ಹಾಯಾಗಿ
ಸುತ್ತಾಡಿ ಬರಲೆಂದು
ರೈಲು ಹತ್ತಿದರೆ ಅಲ್ಲೂ
ಅದೇ ಸೊಲ್ಲು
ಚೆಕ್ ಬುಕ್ ಚೆಕ್ ಬುಕ್ ಚೆಕ್ ಬುಕ್
ಶ್ಲೇಷೆ ಅಥವ ಪನ್ನು ಬರೀ ಕಾವ್ಯದ ಪುಸ್ತಕಗಳಲ್ಲಿ ಮಾತ್ರ ಇರುವುದೆಂದು ತಿಳಿಯಬೇಡಿ ಮತ್ತೆ. ಬಹುಶಃ ಯಾವುದೇ ಪದಕ್ಕೂ ಬಳಕೆಯ ಬಲದಿಂದ ಶ್ಲೇಷೆಯ ಅಥವ ಪನ್ನಿನ 'ದಮ್' ಕೊಡಬಹುದೆನ್ನಿಸುತ್ತದೆ. ನಾ. ಕಸ್ತೂರಿಯವರು ಈ ಶ್ಲೇಷಾರ್ಥ ವ್ಯಂಗ್ಯಾರ್ಥಗಳನ್ನು ಸಂಗ್ರಹಿಸಿ ಒಂದು ಅರ್ಥಕೋಶವನ್ನೇ ರಚಿಸಿದ್ದಾರೆ, ಹೆಸರು "ಅನರ್ಥಕೋಶ"! ಅದರ ಒಂದೆರಡು ಎಂಟ್ರಿಗಳನ್ನು ನೋಡಿ:

ತುಪ್ಪ = ಪಾತ್ರೆಗೆ ಚಮಚೆಯಿಂದ ಬಡಿದಾಗ ಉಂಟಾಗುವ ಶಬ್ದವಿಶೇಷ
ಕೃದಂತ = ಕೃತಕ ಹಲ್ಲಿನ ಸೆಟ್ಟು

ಯಾರನ್ನಾದರೂ ಮೇಧಾವಿಗಳೆಂದು ಹೇಳಬೇಕಾದರೆ "ಬೃಹಸ್ಪತಿ" ಎನ್ನುತ್ತೇವೆ; ಹೀಯಾಳಿಸಬೇಕಾದರೆ ಕೂಡ! ನಮ್ಮಲ್ಲೊಬ್ಬರು "ಮೇಧಾವಿ" ಎಂಬ ಪದವನ್ನು ಅಪಭ್ರಂಶಿಸಿ "ಮೇದಾವಿ" ಎಂದೇ ಬಳಸುತ್ತಿದ್ದರು. ಈ ಅಪಭ್ರಂಶ ಉದ್ದೇಶಪೂರ್ವಕವೆಂದೇ ನನ್ನ ಗುಮಾನಿ; ಏಕೆಂದರೆ ಈ ಮಾರ್ಪಾಡು ಅವರಿಗೆ ಬೇಕಾದಾಗ ಅದನ್ನು ಶ್ಲೇಷೆಯಾಗಿಯೂ ಬಳಸುವ ಅನುಕೂಲವನ್ನಿತ್ತಿತ್ತು. ಯಾರನ್ನಾದರೂ "ಮೇದಾವಿ" ಎಂದು ಹೊಗಳುವಾಗ ಅದೊಂದು ನಿಷ್ಪಾಪಿ ಕಾಗುಣಿತದ ತಪ್ಪಾಗಿ ಕಾಣುತ್ತಿದ್ದರೂ, ಯಾರನ್ನಾದರೂ ತೆಗಳಬೇಕಾದಾಗ ಅವರು ಅದಕ್ಕಿಡುತ್ತಿದ್ದ ಅರ್ಥ "ಮೇದಾವಿ = ಮೇದುಕೊಂಡು ತಿರುಗುವವನು"

ಮತ್ತೆ ಕುಡುಕ ಅಪ್ಪನಿಗೆ ಮಗ ಬರೆಯುತ್ತಿದ್ದ ಪತ್ರದ ಒಕ್ಕಣೆ "’ತೀರ್ಥರೂಪು’ ತಂದೆಯವರಿಗೆ..."

ನನಗೆ ತಿಳಿದ ವಯೋವೃದ್ಧ ಪುರೋಹಿತರೊಬ್ಬರು ಪೌರೋಹಿತ್ಯಕ್ಕಾಗಿ ತಮ್ಮ ಬಳಿ ಬರುತ್ತಿದ್ದ ಕಕ್ಷಿದಾರರನ್ನು ಕೇಳುತ್ತಿದ್ದರು "ಮರ್ಯಾದೆ ಎಷ್ಟು ಕೊಡುತ್ತೀರಿ?" ಇಲ್ಲಿ "ಮರ್ಯಾದೆ" ಎಂದರೆ ದಕ್ಷಿಣೆ ಎಂದರ್ಥ.

ಎಷ್ಟೊಂದು ಪದಗಳು, ಬಳಸುವವರ ಪ್ರತಿಭಾಚಾತುರ್ಯದಿಂದ, ಬಳಕೆಯ ಸಾಮಾನ್ಯತೆಯಿಂದ ಪನ್ ಆಗಿ ಮಾರ್ಪಟ್ಟಿವೆ ನೋಡಿ - ಮಾಮೂಲು, ದಕ್ಷಿಣೆ, ಸಮಾಜ ಸೇವೆ, ಸತ್ಯಾಗ್ರಹ, ಅಹಿಂಸಾತ್ಮಕ ಹೋರಾಟ... ಅಷ್ಟೇಕೆ, "ಮಣ್ಣಿನ ಮಗ" ಎಂಬುದಕ್ಕಿಂತ ಉತ್ತಮ ಪನ್ ಬೇಕೆ!

Sunday, October 4, 2009

ದ್ವೈತಮು ಸುಖಮಾ...

ಸ್ನೇಹಿತರ ವಲಯದಲ್ಲಿ ಈ ವಿಷಯ ಒಮ್ಮೆ ಚರ್ಚೆಗೆ ಬಂತು. ತ್ಯಾಗರಾಜರು ಜನ್ಮತಃ ಅದ್ವೈತಿಗಳಾಗಿದ್ದಾಗ್ಯೂ ತಮ್ಮ ಕೃತಿಗಳಲ್ಲಿ ದ್ವೈತವನ್ನೇ ಎತ್ತಿ ಹಿಡಿದಿದ್ದಾರೆಯೇ?

ಮೊದಲಿಗೆ, ದ್ವೈತ-ಅದ್ವೈತಗಳ ಚರ್ಚೆಯೇ ಆಧ್ಯಾತ್ಮದ ಅತ್ಯುನ್ನತ ಸ್ತರಕ್ಕೆ ಸಂಬಂಧಿಸಿದ್ದು. ಸಾಧಕನು ಆ ಸ್ತರವನ್ನು ಮುಟ್ಟುವವರೆಗೂ, ಅದರಲ್ಲೂ ವ್ಯಾವಹಾರಿಕ ಸ್ತರದಲ್ಲಂತೂ ಇವರಡರ ನಿಲುವಿನಲ್ಲೂ ಆತನಿಗೆ ಹೆಚ್ಚೇನು ವ್ಯತ್ಯಾಸ ಕಾಣದು. ಶಂಕರರು "ಭಜಗೋವಿಂದಂ" ಎಂದರೂ, ಮಧ್ವರು "ಪ್ರೀಣಯಾಮೋ ವಾಸುದೇವಂ" ಎಂದರೂ ಆ ನಮನವು ಮುಟ್ಟುವುದು ಕೇಶವನನ್ನೇ. ಅನುಸಂಧಾನವು ಬೇರೆಯಿರಬಹುದು, ಗಮ್ಯದೃಷ್ಟಿ ಬೇರೆಯಿರಬಹುದು, ಆದರೆ ಇವು ಸಾಧಕನಿಗೆ ಬಿಟ್ಟಿದ್ದಲ್ಲವೇ? ಹೀಗಾಗಿ, ಇನ್ನೂ ಆಧ್ಯಾತ್ಮಸಾಧನೆಯ ತಳದ ಮೆಟ್ಟಿಲಲ್ಲೆಲ್ಲೋ ಇರುವ, ಅಥವ ಶ್ರೀ ರಾಮಾನುಜರು ಹೇಳುವಂತೆ "ಅನಾದಿ ಪಾಪವಾಸನಾಮಹಾರ್ಣವಾಂತರ್ನಿಮಗ್ನ"ರಾದ, "ಕರ್ಮಪಾಶಪ್ರಗ್ರಥಿತ"ರಾದ ನಮಗೆ, ನಮ್ಮ ಈಗಿನ ಮಟ್ಟದಲ್ಲಿ ಈ ಚರ್ಚೆ ಎಷ್ಟು ಪ್ರಸ್ತುತ ಎಂಬ ಬಗ್ಗೆಯೇ ನನಗೆ ಸಂದೇಹವಿದೆ.

ಇದು ಒಂದುಕಡೆಗಾದರೆ, ತ್ಯಾಗರಾಜಸ್ವಾಮಿಗಳಂಥ ಅನುಭಾವಿಗಳ, ಜೀವನ್ಮುಕ್ತರ ವಿಷಯದಲ್ಲೂ ಈ ಚರ್ಚೆ ಅಪ್ರಸ್ತುತವೆಂದೇ ನನ್ನ ಅನಿಸಿಕೆ. ತ್ಯಾಗರಾಜರಂತೂ ತಮ್ಮ ಕೃತಿಗಳಲ್ಲೆಲ್ಲೂ 'ತತ್ತ್ವ' ವಿಚಾರವನ್ನು ಚರ್ಚಿಸಿದ್ದಾಗಲಿ, ದ್ವೈತವೋ ಅದ್ವೈತವೋ ಅಥವ ಮತ್ತಾವುದೋ ಒಂದು ನಿಲುವನ್ನು ತಳೆದಿದ್ದಾಗಲಿ ಕಾಣೆ. ತಮ್ಮ ಕೃತಿಗಳುದ್ದಕ್ಕೂ ಅವರು ಪ್ರತಿಪಾದಿಸುವ ಏಕೈಕ ನಿಲುವೆಂದರೆ ಭಕ್ತಿ - ಅದಕ್ಕೆ ಸಂವಾದಿಯಾಗಿ ಬರುವ ಆತ್ಮನಿವೇದನೆ. ಈ ಭಕ್ತಿಕೂಡ ಭಾವಪ್ರಪಂಚದಿಂದ ಹೆಕ್ಕಿ ತೆಗೆದ ರತ್ನವೇ ಹೊರತು ಶಾಸ್ತ್ರದ ಮೊಸರು ಕಡೆದು ಪಡೆದ ನವನೀತವಲ್ಲ. ಆ ಭಕ್ತಿಯೂ ಅದೆಷ್ಟು ಉತ್ಕೃಷ್ಟ ಮಟ್ಟದ್ದೆಂದರೆ, ಅವರ ಕೃತಿಗಳಲ್ಲಿ ಎದ್ದು ಕಾಣುವ ಭಕ್ತಿಭಾವವನ್ನು ಮರೆತು ಇತರರ ಸಂಗೀತರಚನೆಗಳಂತೆ ಕೇವಲ ಸಂಗೀತದ ಸೊಬಗನ್ನು ಆಸ್ವಾದಿಸುವುದು ಸಾಧ್ಯವೇ ಇಲ್ಲ ಎನ್ನಬಹುದು.

ಭಕ್ತಿಯ ಮೂಲ ಅಗತ್ಯವೇ ದ್ವೈತದ ಸ್ಥಿತಿ, ಒಪ್ಪೋಣ. ಆದರೆ ಅದು ಶ್ರೀ ಮಧ್ವರ ಸಂಪೂರ್ಣ, ಅವಿಚ್ಛಿನ್ನ ದ್ವೈತದ ಪ್ರತಿಪಾದನೆಯಲ್ಲ. ತ್ಯಾಗರಾಜರು ಭಕ್ತಿಯನ್ನು ಪ್ರತಿಪಾದಿಸಿದರೂ ಮಾಧ್ವ ಮಹಾಪ್ರಮೇಯಗಳಾದ ಹರಿಸರ್ವೋತ್ತಮತ್ವ, ಜಗತ್ಸತ್ಯತ್ವ, ಪಂಚಭೇದ, ತಾರತಮ್ಯ, ಮೋಕ್ಷದಲ್ಲೂ ನಿರ್ಬಾಧಿತವಾಗಿ ಉಳಿಯುವ ಜೀವೇಶಭೇದದ ಸ್ಥಿತಿ ಇತ್ಯಾದಿ ತಾಂತ್ರಿಕ ವಿವರ (jargon)ಗಳನ್ನು ಎಲ್ಲೂ ಒಪ್ಪಿ ಪ್ರತಿಪಾದಿಸಿದಂತೆ ಕಾಣೆ. ಬದಲಿಗೆ ಈ ಕೆಳಗಿನ ಸಾಲುಗಳನ್ನು ನೋಡಿ

ಅನ್ನಿ ನೀವನುಚು ಎಂಚಿನವಾಣಿಕಿ ಆಶ್ರಮಭೇದಮುಲೇಲ
ಕನ್ನುಕಟ್ಟು ಮಾಯಲನಿ ಎಂಚುವಾಣಿಕಿ ಕಾಂತಲ ಭ್ರಮಲೇಲ ದಶರಥ ಬಾಲ ೧

(ಎಲ್ಲಾ ನೀನೇ ಎಂದು ತಿಳಿದವನಿಗೆ ಆಶ್ರಮಭೇದವೇಕೆ, (ಸರ್ವವೂ) ಕಣ್ಣುಕಟ್ಟು, ಮಾಯೆ ಎಂದು ಅರಿತವನಿಗೆ ಹೆಣ್ಣಿನ ಭ್ರಮೆಯೇಕೆ)

ಇರಲಿ, ಚರ್ಚೆಯಂತೂ ಬಂತು. ಪ್ರಶ್ನೆಯನ್ನೆತ್ತಿದ ಮಿತ್ರರು ತಮ್ಮ ಅಭಿಪ್ರಾಯಕ್ಕೆ ಉದಾಹರಣೆಯಾಗಿ ಪ್ರಸ್ತುತ ಪಡಿಸಿದ್ದು "ದ್ವೈತಮು ಸುಖಮಾ..." ಎಂಬ ಕೃತಿಯನ್ನು. ರೀತಿಗೌಳ ರಾಗದಲ್ಲಿರುವ ಈ ಕೃತಿ ಹೀಗಿದೆ:

ದ್ವೈತಮು ಸುಖಮಾ ಅದ್ವೈತಮು ಸುಖಮಾ ಪ
ಚೈತನ್ಯಮಾ ವಿನು ಸರ್ವ ಸಾಕ್ಷಿ ವಿಸ್ತಾರಮುಗಾನು ದೆಲ್ಪುಮು ನಾತೋ ಅ.ಪ

ಗಗನ ಪವನ ತಪನ ಭುವನ ದ್ಯಾವಾನಿಲಲೋ ನಗಧರಾಜ ಶಿವೇಂದ್ರಾದಿ ಸುರುಲಲೋ
ಭಗವದ್ಭಕ್ತವರಾಗ್ರೇಸರುಲಲೋ ಬಾಗ ರಮಿಂಚೇ ತ್ಯಾಗರಾಜಾರ್ಚಿತ ೧

ಈ ಪ್ರಶ್ನೆಯನ್ನೆತ್ತುವವರೆಲ್ಲ ಸಾಮಾನ್ಯವಾಗಿ ಮುಂದೊಡ್ಡುವ ಕೃತಿಯೇ ಇದು. ಸ್ವಯಂಸ್ಪಷ್ಟವಾಗಿರುವ ಈ ಕೃತಿಯನ್ನು ಮತ್ತಷ್ಟು ತಿಳಿಗೊಳಿಸಿ ಹೇಳಬೇಕಾದರೆ, ಪಂಚಭೂತಗಳಲ್ಲೂ ತ್ರಿಮೂರ್ತಿಗಳಲ್ಲೂ ಭಕ್ತಶಿಖಾಮಣಿಗಳಲ್ಲೂ ಚೈತನ್ಯವಾಗಿ ನಲಿಯುವ ಸರ್ವಸಾಕ್ಷಿಯಾದ ಪರಮಾತ್ಮನನ್ನು ಕೇಳುತ್ತಾರೆ ತ್ಯಾಗರಾಜರು, "ದ್ವೈತವು ಸುಖವೋ ಅದ್ವೈತವೋ, ವಿಸ್ತಾರವಾಗಿ ತಿಳಿಸು"

"ಪಂಚಭೂತಗಳಲ್ಲೂ ತ್ರಿಮೂರ್ತಿಗಳಲ್ಲೂ ಭಕ್ತಶಿಖಾಮಣಿಗಳಲ್ಲೂ ಚೈತನ್ಯವಾಗಿ ನಲಿಯುವ ಸರ್ವಸಾಕ್ಷಿ"ಯೊಂದು ಜೀವಾತ್ಮಕ್ಕಿಂತ ಪ್ರತ್ಯೇಕ ಅಸ್ಥಿತ್ವಹೊಂದಿದೆಯಿಂದು ಹೇಳಿದಂತಾಯಿತಲ್ಲವೇ? ಅದರಲ್ಲೂ "ದ್ವೈತಮು ಸುಖಮಾ, ಅದ್ವೈತಮು ಸುಖಮಾ" ಎಂಬ ಪಲ್ಲವಿಯ ಹಿನ್ನೆಲೆಯಲ್ಲಿ ಈ ಚರಣ ವ್ಯಂಗ್ಯಾತ್ಮಕವಾಗಿ ದ್ವೈತವನ್ನೇ ಧ್ವನಿಸುವುದಿಲ್ಲವೇ - ಇದು ಸಾಹಿತ್ಯದಲ್ಲೂ ಪ್ರವೃತ್ತಿಯಿರುವ ಮಿತ್ರರ ಪ್ರಶ್ನೆ.

ಇರಬಹುದು, ತ್ಯಾಗರಾಜರು ದ್ವೈತವನ್ನೇ ಸರಿಯೆಂದಲ್ಲಿ ಅಚ್ಚರಿಯೇನಿದೆ? ಅವರು ಅಷ್ಟು ತೀವ್ರವಾಗಿ ಪ್ರತಿಪಾದಿಸುವ ಭಕ್ತಿ, ದ್ವೈತಚಿಂತನೆಯಲ್ಲದೇ ಮತ್ತೇನು? ದ್ವೈತಭಾವವಿಲ್ಲದೆ ಭಕ್ತಿ ಸಾಧ್ಯವೇ?

ಆದರೆ ಹೀಗೆ ಅವರು ದ್ವೈತವನ್ನೋ ಅದ್ವೈತವನ್ನೋ ಪ್ರತಿಪಾದಿಸಿದ್ದಾರೆಂದು ಸಾಧಿಸುವಮೊದಲು ಪಲ್ಲವಿಯಯನ್ನು ಮತ್ತೊಮ್ಮೆ ಗಮನಿಸುವುದು ಸೂಕ್ತ. ಅದರ ಸೂಕ್ಷ್ಮ ಅವಗಾಹನೆ ಮತ್ತೊಂದು ದೃಷ್ಟಿಕೋನವನ್ನು ತೆರೆದಿಡುತ್ತದೆ. "ದ್ವೈತಮು ಸುಖಮಾ, ಅದ್ವೈತಮು ಸುಖಮಾ" - ಗಮನಿಸಬೇಕಾದ ಅಂಶವೆಂದರೆ, "ಸುಖಮಾ" ಎನ್ನುವ ಪ್ರಯೋಗ. ದ್ವೈತವು ಸರಿಯೋ ಅದ್ವೈತವೋ ಎಂಬುದನ್ನು ಸಾಧಿಸುವ ಇರಾದೆ ತ್ಯಾಗರಾಜರಿಗಿದ್ದಲ್ಲಿ, "ದ್ವೈತಮು ತರಮಾ, ಅದ್ವೈತಮು ತರಮಾ" (ಅಥವಾ "ನಿಜಮಾ") ಎಂದು ಬಳಸುತ್ತಿದ್ದರೇನೋ! ಆಗ, ಮುಂದೆ ಬರುವ ಚರಣ ದ್ವೈತವೇ ಸತ್ಯವೆಂಬ ನಿಲುವನ್ನು ಮತ್ತಷ್ಟು ಪುಷ್ಟಿಗೊಳಿಸುತ್ತಿತ್ತು. ಆದರೆ "ಸುಖಮಾ" ಎಂಬ ಬಳಕೆಯಿಂದ, ಸರಿ-ತಪ್ಪಿನ ಪ್ರಶ್ನೆಗಿಂತ, ರಾಮಭಕ್ತಿಗೆ ಯಾವ ಭಾವ ಹೆಚ್ಚು ಸುಖ ಎಂಬ ಚಿಂತನೆಯಷ್ಟೇ ಸ್ಫುಟಗೊಳ್ಳುತ್ತದೆ. ಕೇವಲ ಇದೊಂದು ಪದವನ್ನು ಬಳಸುವ ಮುನ್ನ ತ್ಯಾಗರಾಜರು ಇಷ್ಟೆಲ್ಲ ಯೋಚಿಸಿದ್ದಿರಬೇಕೆಂದು ನಾನು ಹೇಳಹೊರಟಿಲ್ಲ. ಆದರೆ ಭಾವವು ಭಾಷೆಯಲ್ಲಿ ರೂಪುಗೊಳ್ಳುವ ಪರಿಯನ್ನಷ್ಟೇ ವಿವರಿಸಹೊರಟಿದ್ದು. ಕವಿಯೊಬ್ಬ ತನ್ನ ಭಾವಲಹರಿಗೆ ಮಾತಿನ ರೂಪ ಕೊಡುವಾಗ ಭಾವಕ್ಕೆ ತಕ್ಕುದಾದ ಹಲವು ಪದಗಳು ಮೂಡಿ ನಿಲ್ಲುತ್ತವೆ. ಮನದಲ್ಲಿ ಮೂಡಿದ ಭಾವಕ್ಕೆ ಅತ್ಯುಚಿತವಾದ ಪದದ ಆಯ್ಕೆ ಕವಿಯಲ್ಲಿ ತಾನೇ ತಾನಾಗಿ ನಡೆಯುತ್ತದೆ - ಇದೊಂದು ಭಾವದ ವ್ಯಾಪಾರ, ಬುದ್ಧಿಯದಲ್ಲ. ಈ ಸಂದರ್ಭಕ್ಕೆ "ಸುಖಮಾ" ಮತ್ತು "ತರಮಾ" ಎರಡೂ ಪದಗಳು ಒಂದೇ ಭಾವದ ಸೂಚಕ ಖಂಡಿತಾ ಅಲ್ಲ. ಆದ್ದರಿಂದ ಕವಿಗೆ ಇಷ್ಟು ಸಹಜವಾಗಿ "ಸುಖಮಾ" ಎಂಬ ಪದ ಮನದಲ್ಲಿ ಹೊಳೆದಿರಬೇಕಾದರೆ, ಅವರ ಮನದಲ್ಲಿ ದ್ವೈತಾದ್ವೈತಗಳ ಸರಿ-ತಪ್ಪುಗಳ ವಿಮರ್ಶೆಗಿಂತಾ ಆ ನಿಲುವುಗಳ ಭಕ್ತಿಸೌಖ್ಯವೇ ಚಿಂತನೆಯ ವಸ್ತುವಾಗಿದ್ದಿರಬೇಕೆನ್ನುವುದು ಸಹಜ. ಅಂತಿಮವಾಗಿ ದ್ವೈತವು ನಿಜವೋ ಅದ್ವೈತವೋ ಅದು ತ್ಯಾಗರಾಜರಿಗೆ ಮುಖ್ಯವಲ್ಲ. ಬದಲಿಗೆ, ಯಾವ ಮಾರ್ಗದಲ್ಲಿ ಭಕ್ತಿ ಹೆಚ್ಚು ತೀವ್ರ, ನಿಶ್ಕಲ್ಮಶ, ಸುಖ - ಇದು ಅವರ ಪ್ರಶ್ನೆಯೆನಿಸುತ್ತದೆ.

ಅದ್ವೈತ ಚಿಂತನೆಯ ಪರಿಸರದಲ್ಲಿ ಹುಟ್ಟಿ ಬೆಳೆದ ತ್ಯಾಗರಾಜರಿಗೆ, ಅದ್ವೈತವೇ ಅಂತಿಮ ಸತ್ಯವೆಂಬ ಅರಿವಿದೆ. ಆದರೆ ಭಾವುಕ ಮನಸ್ಸೇಕೋ ಇದನ್ನೊಲ್ಲದು. ನಾನೀನೆಂಬ ಭೇದವಳಿದ ಅದ್ವೈತದ ಅರಿವಿನಲ್ಲಿ ಏನಿದೆ? ಏನೂ ಇಲ್ಲ. ಭಕ್ತನೂ ಇಲ್ಲ, ಭಕ್ತಿಯೂ ಇಲ್ಲ. "ರಾಮಭಕ್ತಿಸಾಮ್ರಾಜ್ಯ"ದಲ್ಲಿ ಓಲಾಡುವ ಕವಿಯ ಮನಸ್ಸಿಗೆ, ಈ ನಿರ್ಗುಣ ನಿರುಪಾಧಿಕ ನಿರ್ವೇದಕವಾದ ಅದ್ವೈತ ಸಿದ್ಧಿ ಹೇಗೆ ತಾನೇ ರುಚಿಸೀತು? ಈ ಪರಮಾತ್ಮ-ಜೀವಾತ್ಮ ಭೇದ ತೋರುವ ಮಾಯಾ ಪ್ರಪಂಚದಲ್ಲಿ ಭಕ್ತಿಯೂ ಮಾಯೆಯೇ ಹೌದು, ಉತ್ಕಟ ಭಕ್ತಿ, ಯಥಾರ್ಥ ಜ್ಞಾನಕ್ಕೆ, ತನ್ಮೂಲಕ ಅದ್ವೈತದ ಸಿದ್ಧಿಗೆ ದಾರಿ - ಇರಬಹುದು. ಆದರೆ ಭಕ್ತಿಯ ರಸವನ್ನೀಂಟಿದ ಮನಸ್ಸಿಗೆ, ಗಮ್ಯಕ್ಕಿಂತಾ ಮಾರ್ಗವೇ ರಮ್ಯ, ಅದೇ ಸುಖ. ಆದ್ದರಿಂದ ಭಕ್ತಿಯು ಮಾಯೆಯೆನ್ನುವುದಾದರೆ ಅದ್ವೈತದ 'ವಾಸ್ತವ'ಕ್ಕಿಂತ ದ್ವೈತಸ್ಥಿತಿಯ 'ಮಾಯೆ'ಯೇ ಸುಖವಲ್ಲವೇ? ಇದು, ನನಗನ್ನಿಸುವ ಮಟ್ಟಿಗೆ ಈ ರಚನೆಯ ಕವಿಸಮಯ.

ತ್ಯಾಗರಾಜರು ಅದೆಂಥಾ ಮೃದುಮನದ, ಹದನುಡಿಯ ಕವಿಯೆಂದರೆ, ಅವರೆಲ್ಲೂ ಈ ತತ್ತ್ವ-ಸಿದ್ಧಾಂತಗಳ ಒಣಚರ್ಚೆಯ ಗೊಡವೆಗೆ ಹೋಗುವುದೇ ಇಲ್ಲ. ಈ ರೀತಿಯ ತತ್ತ್ವದ ಇಬ್ಬಂದಿಗಳು ಎದುರಾದಾಗೆಲ್ಲಾ ಅವರು ಕಂಡುಕೊಳ್ಳುವುದು ತಾರ್ಕಿಕನ ಪರಿಹಾರವಲ್ಲ, ಕವಿಯ ಪರಿಹಾರವನ್ನು. ಈ ಸಾಲುಗಳನ್ನು ನೋಡಿ:

ಎವರನಿ ನಿರ್ಣಯಿಂಚಿರಿರಾ ನಿನ್ನೆಟ್ಲಾರಾಧಿಂಚಿರಿರಾ, ನರವರು ಪ
ಶಿವುಡನೋ ಮಾಧವುಡನೋ ಕಮಲ ಭವುಡನೋ ಪರಬ್ರಹ್ಮಮನೋ ನಿ ಅ.ಪ

ಶಿವಮಂತ್ರಮುನಕು ಮಾಜೀವಮು ಮಾಧವ ಮಂತ್ರಮುನಕು ರಾಜೀವಮು ಈ
ವಿವರಮುದೆಲಿಸಿನ ಘನುಲಕು ಮ್ರೋಕ್ಕೆದ ವಿತರಣಗುಣ ತ್ಯಾಗರಾಜವಿನುತ ನಿ ೧

(ನಿನ್ನನ್ನು ಯಾರೆಂದು ನಿರ್ಣಯಿಸಿದರು (ಕೊನೆಗೆ)? ಶಿವನೆಂದೋ, ಮಾಧವನೆಂದೋ, ಕಮಲಭವನೆಂದೋ ಅಥವಾ ಪರಬ್ರಹ್ಮವೆಂದೋ?

"ನಮಶ್ಶಿವಾಯ" ಎಂಬ ಶಿವಮಂತ್ರದ ಜೀವಾಕ್ಷರ "ಮ". ಹಾಗೇ "ನಮೋ ನಾರಾಯಣಾಯ" ಎಂಬ ನಾರಾಯಣಮಂತ್ರದ ಜೀವಾಕ್ಷರ "ರಾ" (ಈ ಅಕ್ಷರಗಳನ್ನು ತೆಗೆದರೆ ಆ ಮಂತ್ರಗಳು ವಿರುದ್ಧಾರ್ಥವನ್ನೇ ಕೊಡುತ್ತವೆ, ಆದ್ದರಿಂದ). ಈ ಎರಡು ಜೀವಾಕ್ಷರಗಳು ಕೂಡಿ ಆದದ್ದೇ "ರಾಮ". ಈ ಮರ್ಮವನ್ನು ತಿಳಿದ ಮಹಾತ್ಮರನ್ನು ವಂದಿಸುತ್ತೇನೆ)

ತಮ್ಮ ಮನೋರಾಜ್ಯಕ್ಕೆ ಪ್ರಸ್ತುತವಲ್ಲದ ಸೈದ್ಧಾಂತಿಕ ಚರ್ಚೆಗಳಿಂದ ಅದೆಷ್ಟು ಸೊಗಸಾಗಿ ತಮ್ಮನ್ನು ಹೊರಪಡಿಸಿಕೊಳ್ಳುತ್ತಾರೆ, ನೋಡಿ. ಭಕ್ತಿಯೋ, ಭಕ್ತನ ಉದ್ಧಾರವೋ ಅಲ್ಲದ ಬೇರಾವ ವಿಚಾರವೂ ಅವರಿಗೆ ಹೊಲ್ಲ. ತಾನಾಯಿತು, ರಾಮನಾಯಿತು, ರಾಮಭಕ್ತಿಯಾಯಿತು. ಆಗೀಗ ತನಗೆ ಸರಿಕಂಡ ಸರಳ ತತ್ತ್ವವನ್ನು ಜನಕ್ಕೆ ಬೋಧಿಸುವುದುಂಟು, ಅದೂ ಸ್ವಗತದ ಧಾಟಿಯಲ್ಲಿ. ಪುರಂಧರ-ಕನಕರೇ ಮೊದಲಾದವರಲ್ಲಿ ಕಾಣಬರುವ ತತ್ತ್ವಬೋಧನೆಯ ಬಿರುಸೂ ಕಟುವೂ ಕಾಣಬರುವುದಿಲ್ಲ ತ್ಯಾಗರಾಜರಲ್ಲಿ. ಬೋಧಿಸಿದ್ದೆಲ್ಲಾ ಸರಳ, ನೇರ, ಚಿಕ್ಕ-ಚೊಕ್ಕ. ಈ ಸಾಲುಗಳನ್ನು ನೋಡಿ:

"ತುರಕವೀದಿಲೋ ವಿಪ್ರುನಿಕಿ ಪಾನಕ ಪೂಜ ಚೇಸಿ ಏಮಿ ಚೇಯಕುಂಡಿ ಏಮಿ"

(ತುರಕಬೀದಿಯಲ್ಲಿ ವಿಪ್ರರಿಗೆ ಪಾನಕಪೂಜೆ ಮಾಡಿ ಏನು ಮಾಡದಿದ್ದರೆ ಏನು?)

ಮತ್ತೆ ಇದು;

"ಬಹುಜನ್ಮಂಬುನಿ ವಾಸನಯುತುಲೈ ಅಹಿವಿಷಸಮವಿಷಯಾಕೃಷ್ಟುಲೈ
ಬಹಿರಾನನುಲೈ ತ್ಯಾಗರಾಜು ಭಜಿಯಿಂಚೇ ಶ್ರೀ ರಾಮುನಿ ತೆಲಿಯಕ (ಯಜ್ಞಾದುಲು ಸುಖಮನುವಾರಿಕಿ ಸಮಮಜ್ಞಾನುಲು ಗನ ಲೇ)"

(ಬಹುಜನ್ಮದ ವಾಸನೆಹೊಂದಿ, ಹಾವಿನ ವಿಷದಂಥ ವಿಷಯಗಳಿಂದ ಆಕರ್ಷಿತರಾಗಿ, ಅಂತ್ರರ್ದೃಷ್ಟಿಯನ್ನು ಕಳೆದುಕೊಂಡು ಶ್ರೀ ರಾಮನನ್ನು ತಿಳಿಯದೇ, ಯಜ್ಞಾದಿಗಳೇ ಸುಖವೆನ್ನುವರಂಥ ಅಜ್ಞಾನಿಗಳು ಇಲ್ಲ)

ಇನ್ನು ಮಂತ್ರ-ತಂತ್ರ, ಶಾಸ್ತ್ರ-ಸಂಪ್ರದಾಯಗಳ ಗೋಜಲಂತೂ ದೂರವೇ ಉಳಿಯಿತು. ಈ ಗೋಜಿನ ಪ್ರಶ್ನೆಗೆ ತ್ಯಾಗರಾಜರ ಉತ್ತರ "ಮನಸು ಸ್ವಾಧೀನಮೈನ ಘನುನಿಕಿ ಮರಿ ಮಂತ್ರ ತಂತ್ರಮುಲೇಲ" (ಮನಸು ಸ್ವಾಧೀನವಿರುವ ಮಹಾತ್ಮನಿಗೆ ಮತ್ತೆ ಮಂತ್ರತಂತ್ರಗಳೇಕೆ)

ಆದ್ದರಿಂದ ತ್ಯಾಗರಾಜರ ಕೃತಿಗಳಲ್ಲಿ ಶಾಸ್ತ್ರ-ಸಿದ್ಧಾಂತಗಳ ಪ್ರತಿಪಾದನೆಯನ್ನರಸುವುದಕ್ಕಿಂತ ಅಮೃತಪ್ರಾಯವಾದ "ಸ್ವರರಾಗಸುಧಾರಸಯುತ ಭಕ್ತಿ"ಯ ಸೊಬಗನ್ನು ಆಸ್ವಾದಿಸುವುದೇ ಹೆಚ್ಚು ಸುಖವಲ್ಲವೇ?