Wednesday, December 21, 2011

ಹಾಯ್ಕುಗಳು

ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ - ಅರ್ಥದ, ಭಾವದ ಮಿಂಚು, ಮಿಂಚಿ ಮರೆಯಾಗುವ ಒಂದು ಕ್ಷಣದ ಸ್ತಬ್ಧಚಿತ್ರ. ತೀರ ಚಿಕ್ಕ ಪದ್ಯವಾದ್ದರಿಂದ ಈ ಅರ್ಥದ ಮಿಂಚು ಬಹಳ ಮುಖ್ಯ. ಅರ್ಥದ ಸೊಗಸು ಪದೇಪದೇ ಮನಸ್ಸಿನಲ್ಲಿ ಮೂಡುವಂತಿರಬೇಕು. ಈ ಅರ್ಥದ ಮಿಂಚು ಎಂದೆನಲ್ಲ, ಅದು ಯಾವುದೋ ಒಂದು ಕಳೆದೇಹೋಗುವಂತಿರುವ ಕ್ಷಣವನ್ನು ಕಟ್ಟಿಕೊಡಬೇಕು - ಅದೊಂದು ಸಾರ್ಥಕಕ್ಷಣ, ಮಿಂಚಿ ಮರೆಯಾಗಿಬಿಡುವ ಆ ಕ್ಷಣ ಚಿತ್ರಪಟದಂತೆ ಹಾಯ್ಕಿನ ಆ ಸಾಲಿನಲ್ಲಿ ನಿಂತುಬಿಟ್ಟಿದೆ.  ಆ ಕ್ಷಣದ ಆಳ, ಆಧ್ಯಾತ್ಮಿಕತೆ ಹೆಚ್ಚಿದ್ದಷ್ಟೂ ಹಾಯ್ಕು ಹೆಚ್ಚು ಪರಿಣಾಮಕಾರಿ.  ಇರಲಿ, ಇದು ವಿವರಿಸಿ ತಿಳಿಸುವಂಥದ್ದಲ್ಲ, ಅವರವರ ಕಾವ್ಯದೃಷ್ಟಿಗೆ ಬಿಟ್ಟ ವಿಷಯ, ಅವರವರು ಕಂಡುಕೊಳ್ಳಬೇಕಾದ್ದು.  ಆದ್ದರಿಂದ ನಾವಿಲ್ಲಿ ಅದನ್ನು ಒಂದು ಪಂಚ್ ಲೈನ್ ಎನ್ನೋಣ, ಮತ್ತು ಹಾಯ್ಕಿನ ಭೌತಿಕ ಅಂಶಗಳಿಗಷ್ಟೇ ಗಮನ ಕೊಡೋಣ.


ನಮ್ಮ ಹನಿಗವನಗಳಂತೆ ಅಂದೆ, ಆದರೆ ನಮ್ಮ ಹನಿಗವನಗಳಂತೆ ಅಳತೆಯಿಲ್ಲದ ಕವನಗಳಲ್ಲ ಇವು. ನಮ್ಮ ಹಳೆಗನ್ನಡದ ಕಂದಪದ್ಯಗಳಂತೆ ಚುಟುಕು, ಆದರೆ ಲೆಕ್ಕಾಚಾರದಿಂದ ಕೂಡಿದ ಪದ್ಯಗಳು. ಆದರೆ ನಮ್ಮ ಕಂದಪದ್ಯಗಳಲ್ಲಿ ಮಾತ್ರಾಕಾಲವನ್ನು ಪರಿಗಣಿಸುತ್ತೇವೆ, ಹಾಯ್ಕುಗಳಲ್ಲಿ ಅಕ್ಷರಗಳನ್ನು.

ಹಾಯ್ಕುಗಳು ಮೂರುಸಾಲಿನವು. ಮೊದಲನೆಯ ಸಾಲಿನಲ್ಲಿ ೫, ಎರಡನೆಯ ಸಾಲಿನಲ್ಲಿ ೭ ಮತ್ತು ಮೂರನೆಯ ಸಾಲಿನಲ್ಲಿ ೫ ಅಕ್ಷರಗಳು. ಜಪಾನೀಯರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ಹಾಯ್ಕುಗಳ ಅಕ್ಷರವಿನ್ಯಾಸದ ಬಗ್ಗೆ ಹೇಳಿದ್ದೆ (ಮೊದಲ, ಎರಡನೆಯ ಮತ್ತು ಮೂರನೆಯ ಸಾಲುಗಳಲ್ಲಿ ಕ್ರಮವಾಗಿ ೫,೭ ಮತ್ತು ೫ ಅಕ್ಷರಗಳು). ಆದರೆ ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜಪಾನೀ ಭಾಷೆ ಕನ್ನಡದಂತಲ್ಲ. It is a highly phonetic language (ಅಂದರೆ ಸ್ವರಬದ್ಧವಾದ ಭಾಷೆ). ಆದ್ದರಿಂದ ಅಲ್ಲಿನ ಅಕ್ಷರಗಳ ಎಣಿಕೆ ನಮ್ಮ ಕನ್ನಡದ ಅಕ್ಷರದ ಎಣಿಕೆಯಂತಲ್ಲ. ನಾವು ಕಣ್ಣಿಗೆ ಕಾಣುವ ಅಕ್ಷರಗಳನ್ನು ಎಣಿಸಿದರೆ ಅವರು ಉಚ್ಛಾರಣೆಯಲ್ಲಿ ಬರುವ ಘಟಕಗಳನ್ನು (syllableಗಳನ್ನು) ಎಣಿಸುತ್ತಾರೆ. Syllable ಎಂದರೆ ಒಂದೇ ಉಚ್ಚಾರಣೆಯ ಪ್ರಯತ್ನದಲ್ಲಿ ಉಚ್ಚರಿಸಲ್ಪಡುವ ಶಬ್ದ. ಅದು ಒಂದೇ ಅಕ್ಷರವಿರಬಹುದು, ಅಥವ ಒಂದಕ್ಕಿಂತ ಹೆಚ್ಚು ಅಕ್ಷರಗಳ ಗುಂಪೂ ಇರಬಹುದು. ಇದನ್ನು ಕೆಲವು ಉದಾಹರಣೆಗಳೊಂದಿಗೆ ಹೀಗೆ ವಿವರಿಸೋಣ:

"ಲವ್ (love)" ಇಲ್ಲಿ ಕಣ್ಣಿಗೆ ಕಾಣುವುದು ಕನ್ನಡದಲ್ಲಿ ಎರಡು ಅಕ್ಷರಗಳು, ಇಂಗ್ಲಿಷಿನಲ್ಲಿ ನಾಲ್ಕು ಅಕ್ಷರಗಳು. ಆದರೆ ಉಚ್ಚಾರಣೆಯ unit (syllable) ಕೇವಲ ಒಂದೇ (ಲೌ). ಆದ್ದರಿಂದ ಹಾಯ್ಕುಗಳ ವಿಷಯದಲ್ಲಿ ಇದನ್ನು ಒಂದು ಎಂದು ಎಣಿಸಬೇಕು.

"ಕಣ್" ಇದೂ ಹಾಗೆಯೇ, ಎರಡು ಅಕ್ಷರಗಳು ಕಂಡರೂ ಉಚ್ಚಾರಣೆಯ syllable ಒಂದೇ. ಆದ್ದರಿಂದ ಹಾಯ್ಕಿನಲ್ಲಿ ಇದು ಒಂದೇ ಅಕ್ಷರವೆಂದಾಗುತ್ತದೆ.

"ಜಂಪ್" ಎನ್ನುವುದೂ ಹಾಗೇ. ಆದರೆ "ಜಂಪು" ಎಂದಾಗ ಮಾತ್ರ ಅಲ್ಲಿ ಎರಡು syllables ಬರುತ್ತವೆ, ಜಂ ಮತ್ತು ಪು.

ಹಾಗೆಯೇ "ಬಂಪರ್ (bumper)" ಎನ್ನುವುದರಲ್ಲಿ 3 (ಇಂಗ್ಲಿಷಿನ 6) ಅಕ್ಷರಗಳು ಆದರೆ ಎರಡೇ syllableಗಳು (ಬಂ + ಪರ್), ಆದರೆ "ಬಂಪರು" ಎನ್ನುವುದರಲ್ಲಿ ಮೂರು syllables ಮತ್ತು ಮೂರು ಅಕ್ಷರಗಳು.

"ಕಾವೇರಿ" ಇಲ್ಲಿ ಕಣ್ಣಿಗೆ ಕಾಣುವುದೂ ಮೂರು ಅಕ್ಷರ, ಉಚ್ಚಾರಣೆಯಲ್ಲೂ ಮೂರು ಅಕ್ಷರ (3 letters and 3 syllables).

ಆದ್ದರಿಂದ ಹಾಯ್ಕುಗಳನ್ನು ಬರೆಯುವಾಗ ೧,೨ ಮತ್ತು ೩ನೆಯ ಸಾಲುಗಳಲ್ಲಿ ೫,೭ ಮತ್ತು ೫ ಅಕ್ಷರಗಳನ್ನು ಎಣಿಸುವ ಬದಲಿಗೆ ೫,೭ ಮತ್ತು ೫ ಸಿಲೆಬಲ್ಲುಗಳನ್ನು ಎಣಿಸುವುದು ಸೂಕ್ತ.

ಹೀಗೆ ಹಾಯ್ಕುಗಳ ಸಾಮಾನ್ಯ format ಹೀಗಿರಬಹುದು:

ನನ ನನನ
ನನ ನನ ನನನ
ನನ ನನನ

(ಮೇಲೆ ಹೇಳಿದಂತೆ ಅದು ಹ್ರಸ್ವಾಕ್ಷರವೇ ಆಗಬೇಕಿಲ್ಲ, "ನ" ಅನ್ನುವುದರ ಬದಲು "ನಾ" ಎಂದು ಕೂಡ ಆಗಬಹುದು, ಅಥವ "ನನ್" ಕೂಡ ಆಗಬಹುದು)

ಮತ್ತೆ, ಮೊದಲೇ ಹೇಳಿದಂತೆ ಜಪಾನೀ ನುಡಿ ಕನ್ನಡಕ್ಕಿಂತ ಹೆಚ್ಚು phonetic ನುಡಿಯಾದ್ದರಿಂದ ಅವರು ಈ ಎಣಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಕನ್ನಡದ ಜಾಯಮಾನ ಹಾಗಲ್ಲವಾದ್ದರಿಂದ ನಾವು ಅದನ್ನು ಅಷ್ಟು ಕಟ್ಟುನಿಟ್ಟಾಗಿ ಅನುಸರಿಸಬೇಕಿಲ್ಲವೆಂಬುದು ನನ್ನ ಅನಿಸಿಕೆ. ಆದರೂ ಆದಷ್ಟು ಈ ಲಕ್ಷಣಗಳನ್ನು ಅನುಸರಿಸುವುದು ಒಳ್ಳೆಯದು. ಒಂದೋ ಎರಡೋ ಸಿಲೆಬಲ್ಲುಗಳು ಹೆಚ್ಚು ಕಡಿಮೆಯಾದರೆ ಪರವಾಗಿಲ್ಲ, ಆದರೆ ತೀರ ಎಣಿಕೆಗೇ ಸಿಗದಂತಿರಬಾರದೆಂಬುದು ನನ್ನ ನಿಲುವು.

ಮತ್ತೆ, ಪ್ರಾಸದ ಬಗ್ಗೆ ಯಾವ ನಿಯಮವೂ ಇದ್ದಂತಿಲ್ಲ, ಆದರೆ ಪ್ರಾಸವಿರಬಾರದೆಂದೇನೂ ಇಲ್ಲ. ಅರ್ಥದ ಮಿಂಚಿಗೆ ಮತ್ತಷ್ಟು ಹೊಳಪು ಸೇರಿಸುವುದಾದರೆ ಏಕಿರಬಾರದು? ಹೀಗೇ ಗೀಚಿದ ಕೆಲವು ಹಾಯ್ಕುಗಳು ಇಲ್ಲಿವೆ (ಮತ್ತೆ ಮೊದಲೇ ಹೇಳಿದಂತೆ, ಇವನ್ನು ನಿಜಾರ್ಥದಲ್ಲಿ ಹಾಯ್ಕು ಎನ್ನಲಾಗುವುದಿಲ್ಲ, ಏಕೆಂದರೆ ಹಾಯ್ಕೊಂದರಲ್ಲಿ ಮುಖ್ಯವಾಗಿ ಇರಲೇ ಬೇಕಾದ ಆ ಒಂದು ಕ್ಷಣವನ್ನು, ಸಾರ್ಥಕಕ್ಷಣವನ್ನು ಚಿತ್ರಪಟದಂತೆ ಹಿಡಿದಿಡುವ ಪಂಚ್ ಲೈನ್ ಇಲ್ಲಿಲ್ಲ - ಕೇವಲ ಹಾಯ್ಕಿನ ಭೌತಿಕ ರೂಪವನ್ನಷ್ಟೇ ಗಮನಿಸುವುದು):

ಐದು ಏಳರ
ಮೇಲೈದುಲಿಯಂ ಹಾಕು
ಬಂದಿತು ಹಾಯ್ಕು

ಬಂಪರ್ ಟು ಬಂಪರ್
ಜೋರಾಗಿ ಗುದ್ದಿದರೆ
ಬಂಪರ್ ಹೊಡೆತ

ನಿನ್ನ ನಗೆ ಹೂ
ಮೊಲ್ಲೆಯ ಚೆಲ್ಲಿಬಿಡು
ಹೂಮಂಚವೇಕೆ?

ಆ ಕಣ್ಣು ತುಟಿ
ಹೀರಿ ತೂರಾಡುವನು
ಇವ, ಕುಡುಕ!

ನಗೆಯ ಮಿಂಚ
ಮುಂದೆ ಮಳೆಯ ಮಿಂಚು
ಮಂಕಾಯಿತಲ್ಲ!

ಮಳೆ ಗುಡುಗು
ಮಿಂಚಿ ತೋರಿಸಿದ್ದೇನು?
ಊಳಿಡೋ ದೆವ್ವ!

ಕಣ್ಣ ಮುಚ್ಚಿದೆ
ನಿದ್ದೆಯಲೂ ನೀ ಬಂದೆ
ನಿದ್ದೆ ಬಿಟ್ಟೆದ್ದೆ

ಕಾಡದಿರು ನೀ
ಗೆಳತಿ, ನೋಡುವಳು
ನಿನ್ನ ಸವತಿ!

ಕಾಡೆ ನೀ ಹೀಗೆ,
ಬೇಜಾರುಗೊಳ್ಳುವನು
ಶನಿರಾಯನು

ಎಕ್ಸಾಮಂದ್ರಿಷ್ಟೇ,
ಜಸ್ಟ್ ಕಾಪಿ ಪೇಸ್ಟ್, ಕಾಪಿ ಪೇಸ್ಟ್
ಓದೋದೆಲ್ಲಾ ವೇಸ್ಟ್

ದೆವ್ವದ್ ಕತೇಲೇ
ಹೆದ್ರುಸ್ತಿದ್ದಾ ನಂ ತಾತ
ಈಗವ್ನೇ ಭೂತಾ!

ಎತ್ತಣ ಮಾವೋ
ಎತ್ತಣ ಕೋಗಿಲೆಯೋ
ಬಂದೂಕು ಶಬ್ದ!

ಹೊಟ್ಗಿಲ್ಲ ಅನ್ನಾ
ತಿರ್ಕೊಂಡ್ ತಿನ್ನೋದ್ ಏನ್ ಚೆನ್ನ?
ಹಾಕ್ತೀನಿ ಕನ್ನ

ಹಾಯ್ಕುವಿನ ಗಮ್ಮತ್ತೇ ಅದು. ಸುಮ್ನೇ ಚಾಟ್ ಮಾಡಿದಹಾಗೆ ಬರೀತಾನೇ ಹೋಗಬಹುದು.

ಈ ಮಾತೇ ಮುತ್ತು
ಮಾತೇ ಮತ್ತು, ಮಾತಲ್ಲೇ
ಕಾಣೋ ಗಮ್ಮತ್ತು

ಚಾಟ್ ಮಾಡ್ದಾಗೆ, ಚಾಟ್
ತಿಂದ್ ಹಾಗೆ, ಚಾಟೀ ಹಾಯ್ಕೊಂಡ್
ಬಂದ್ ಹಾಗ್ ಮಾತು

ನೀನಾಡೋ ಮಾತ್ನೇ
ಕಟ್ ಕಟ್ ಮಾಡು, ಹಾಯ್ಕೊಂದಲ್
ಬಂದಯ್ತೆ ನೋಡು

ಒಂದಷ್ಟು ಸೀರಿಯಸ್ ಹಾಯ್ಕುಗಳು:
ಎಲೆ ಹುಳಕೆ
ಕಪ್ಪೆ ಹಾರಲು ತಡೆ
ಆಡುವ ಹೆಡೆ

ತುಟಿ ಚಾಚಿದೆ
ಮುತ್ತೆಲ್ಲೋ ಉದುರಿದೆ
ಮೆದೆಯ ಸೂಜಿ

ಒಂದು ಎರಡು
ಬಾಳೆಲೆಯ ಹರಡು
ಚುರುಗುಟ್ಟಿದೆ

ಹುಲಿ ಹಸಿದು
ನೆಗೆದಿದೆ; ಗೋವಿಗೋ
ಕರು ಯೋಚನೆ

ರವಿ ಮುಳುಗಿ
ಗಡಂಗು ಕರೆದಿದೆ
ಖಾಲಿ ಜೇಬು

ನೇಣೆತ್ತುವ ಕೈ
ಕಾಣುತ್ತಿಲ್ಲ ಕೈಮರ
ಕಣ್ಣೊರಸಿದೆ

ನೇಣೆತ್ತುವ ಕೈ
ಕಾಣುತ್ತಿಲ್ಲ ಕೈಮರ
ಕಣ್ಣರಸಿದೆ

ಎಂಜಲು ರೊಟ್ಟಿ
ತುಪ್ಪದೊಳಗೆ ಬಿತ್ತು
ಕೇಜಿ ಐನೂರು
44 comments:

ರಾಘವೇಂದ್ರ ಜೋಶಿ said...

ಮಂಜುನಾಥರೇ,
ಹಾಯ್ಕುಗಳ ಬಗ್ಗೆ ನೀವು ಬರೆದಿದ್ದು ಅವಶ್ಯಕವಾಗಿತ್ತು.
ಹಿಂದೊಮ್ಮೆ ಹಾಯ್ಕುಗಳ ಬಗ್ಗೆ ನಾನೊಂದಿಷ್ಟು ಕವಿತೆ
ಬರೆದು "ತಲೆಕೆಟ್ಟ ಹಾಯ್ಕುಗಳು" ಅಂತ ಹೆಸರು ಕೊಟ್ಟಿದ್ದೆ.
ನಿಮ್ಮ ಈ ಬರಹ ಮತ್ತು ಕವಿತೆ ಓದಿದ ಮೇಲೆ ನನಗೇ ನಾಚಿಕೆಯೆನಿಸಿತು!
ಹಾಯ್ಕುಗಳ ಬಗ್ಗೆ ಇದಕ್ಕಿಂತ ಸರಳವಾಗಿ ವಿವರಿಸಲಾಗದು ಅನಿಸುತ್ತೆ.

ಹಾಯ್ಕು ಗೊತ್ತಿಲ್ಲ
ಆದರೂ ಬರೀತೇನೆ
ಉಳೀಬೇಕಲ್ಲ?
:-)

ಬಾಲು said...

ಈ ಹಾಯ್ಕು ಗಳ ವಿಚಾರ ಹಿಂಗೋ? ಗೊತ್ತಿರಲಿಲ್ಲ.
ಎಲ್ಲೋ ವಿಜಯಕರ್ನಾಟಕ ದಲ್ಲಿ ಹಾಯ್ಕು ಗಳು ಅನ್ನೋ ಕೆಲವು ಸಾಲು ಓದಿದ್ದೆ. ಅವಾಗ ಈಗ ಅದನ್ನ ಓದಿದರೆ ಏನಾದ್ರು ಗೊತ್ತಾಗ್ತಾ ಇತ್ತೋ ಏನೋ.

Manjunatha Kollegala said...

ಜೋಶಿಯವರೇ, thanks. ತಲೆಕೆಟ್ಟ ಹಾಯ್ಕುಗಳ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಡಿ :)

ಗೊತ್ತೋ ಗೊತ್ತಿಲ್ವೋ
ಬರೆದಂತೂ ಹಾಕು, ನೀ
ಬರ್ದಿದ್ದೇ ಹಾಯ್ಕು ;) ;)

Manjunatha Kollegala said...

ಬಾಲು, thanks. ಅದಕ್ಕೇನಂತೆ ಮತ್ತೊಮ್ಮೆ ಓದಿದರಾಯ್ತು. ಹಾಯ್ಕನ್ನು ಓದೋದಕ್ಕಿಂತಾ ಬರೆಯೋದೇ ಚೆನ್ನ :)

ಓದ್ನಾಗೇನೈತೋ
ಚಿನ್ನಾ, ನೀ ಬರೆಯಣ್ಣಾ
ಬರ್ಯೋದೇ ಚೆನ್ನಾ

sunaath said...

ಮುಂದೆ ಬಂದರೆ
ಹಾಯ್ಕು, ಮತ್ತೆ ಹಿಂದೆ
ಹೋದರು ಹಾಯ್ಕು!

ಹಾಯ್ಕುಗಳ ತಾಂತ್ರಿಕ ಮಾಹಿತಿ ಹಾಗು ಕೆಲವು ಸುಂದರ ಹಾಯ್ಕುಗಳಿಗಾಗಿ ಧನ್ಯವಾದಗಳು/

V.R.BHAT said...

ನಂಗೆ ಗೊತ್ತಿಲ್ಲ
ಹಾಯ್ಕುಪಾಯ್ಕೆಲ್ಲ, ಜಪಾನಲ್ಲ
ನಮ್ದೂಕಿ ಕನ್ನಡ !

ನಿಮ್ಗೂ ಗೊತ್ತಲ್ಲ
ನಾನದ್ಕೆಲ್ಲಾ ಲಾಯ್ಕಿಲ್ಲ,
ನಮ್ದೂಕಿ ’ಉತ್ತರ’ಕನ್ನಡ

ಚೆನ್ನಾಗಿದೆ ಸ್ವಾಮೀ ನಿಮ್ಮ ಹಾಯ್ಕಾಯಣ

prabhamani nagaraja said...

ಹಾಯ್ಕು ಬಗ್ಗೆ
ನೀವಿತ್ತ ವಿವರಣೆ ಮನಕೆ
ಹಾಕಿತು ಲಗ್ಗೆ!
ಧನ್ಯವಾದಗಳು.

Manjunatha Kollegala said...

ವಾಹ್ ಸುನಾಥರೇ ಒಂದೇಟಿಗೇ ಹಿಡಿದಿರಲ್ಲಾ ಹಾಯ್ಕಿನ ಚಾಟಿ :) ಸೊಗಸಾಗಿದೆ.

ಕತ್ತೆ ಒದ್ಯುತ್ತೆ,
ಕುದ್ರೆ ಕೆನ್ಯುತ್ತೆ ಹಾಗೇ
ಹಾಯ್ಕೂ ಹಾಯುತ್ತೆ

ಹಿಂದಾದ್ರೂ ಸರ್ಯೇ
ಮುಂದಾದ್ರೂ ಸರ್ಯೇ ಹ್ಯಾಗೋ
ಹಾಯ್(ಕಾ)ಗಿದ್ರಾತು.

Manjunatha Kollegala said...

ಏನ್ ಸ್ವಾಮೀ ಭಟ್ರೆ
ನೀವೇ ಹೀಗಂತಂದ್ ಬುಟ್ರೆ
ಹಾಯ್ಕಂದೋರ್ ಕೆಟ್ರೇ!

Manjunatha Kollegala said...

ಪ್ರಭಾಮಣಿಯವರೇ ಧನ್ಯವಾದ

ಮನಕೆ ಲಗ್ಗೆ
ಬಿದ್ದ ಬಗ್ಗೆ ಚಿಮ್ಮಿತು
ಹಿಗ್ಗಿನ ಬುಗ್ಗೆ.

Dr.D.T.Krishna Murthy. said...

ಮಂಜುನಾಥ ರವರೆ;
ಹಾಯ್ಕು ಎಷ್ಟು ಚಂದಾರೀ!
ಕನ್ನಡಕ್ಕೂ ಬಂದಳಲ್ಲ!
ಈ ಜಪಾನ್ ಸುಂದರೀ!!
ಹಾಯ್ಕಿನ ಬಗ್ಗೆ ಸುಂದರ ಲೇಖನ.ಚೆಂದದ ಹಾಯ್ಕುಗಳು.ನನ್ನ ಬ್ಲಾಗಿಗೊಮ್ಮೆ ಬನ್ನಿ.ನಮಸ್ಕಾರ.

V.R.BHAT said...

ಅಲ್ಲಾ ಬುದ್ಧೀ
ನಾನೆಲ್ಲಂದ್ನೇ ಹಾಯ್ಕನ್ನೋರ್ಗೆಲ್ಲಾ ಗುದ್ದಿ ?
ಅಲ್ಲಲ್ಲಲ್ಲಲ್ಲಿ ಹಾಯ್ಕಿಂದೇ ಸುದ್ದಿ !

Anonymous said...

ಸರ್, ಧನ್ಯವಾದಗಳು ಬರಹಕ್ಕೆ.

ಹಾಯ್ಕು ಬಗ್ಗೆ ಸರಿಯಾಗಿ ತಿಳೀದೇ ಬೇಜಾನ್ ಗೀಚಿದೀನಿ.. ಈಗದನ್ನು ಬರೀ ಹನಿಗವಿತೆ ಅನ್ಬೇಕಿತ್ತು ಅನ್ನಿಸ್ತಿದೆ..

ಹನಿ ಗೀಚೋದೇ
ಹಾಯ್ಕು ಅನ್ಸಿತ್ತು, ಇದ
ಓದೋ ಮೊದಲು..

:)

Manjunatha Kollegala said...

ಡಾಕ್ಟರೇ, ಧನ್ಯವಾದ. ನಿಮ್ಮ ಬ್ಲಾಗು ಸೊಗಸಾಗಿದೆ, ಆಗೀಗ ಬರುತ್ತಿರುತ್ತೇನೆ. ಈಗಷ್ಟೇ ನಿಮ್ಮ ಬ್ಲಾಗನ್ನು ನೋಡಿದಾಗ ಹಿಂದೊಮ್ಮೆ ನಿಮ್ಮಲ್ಲಿ ಓದಿದ್ದ ಮನಮುಟ್ಟುವ ಲೇಖನವನ್ನು ಮತ್ತೊಮ್ಮೆ ಪ್ರಕಟಿಸಿದ್ದು ಕಂಡಿತು. ಮನಕಲಕುವ ಬರಹ.

Manjunatha Kollegala said...

ಅಡಿಗರೇ ಧನ್ಯವಾದ

Subrahmanya said...

ವೈವಿಧ್ಯಮಯ ಕವನಗಳನ್ನು ಮತ್ತು ಪೂರಕ ಮಾಹಿತಿಯನ್ನೂ ಕೊಟ್ಟು ತಿಳಿಸುತ್ತಿದ್ದೀರಿ, ಧನ್ಯವಾದ.
ಹಾಯ್ಕು ಅಂತಾ ಕೇಳಿದ್ದೆ ಈಗ ತಿಳಿದೆ. ನೀವು ಚೆನ್ನಾಗಿ ಹಾಯಿದಿದ್ದೀರಿ :).

Manjunatha Kollegala said...

ಧನ್ಯವಾದ ಸುಬ್ರಹ್ಮಣ್ಯ.

Badarinath Palavalli said...

ಹಾಯ್ಕುಗಳ ಬಗ್ಗೆ ಉತ್ತಮ ವಿವರಣೆ ಕೊಟ್ಟಿದ್ದೀರ ಸಾರ್. ಈಗ ನನ್ನಂತ ಕಾವ್ಯ ಗಮಾರನೂ ಹಾಯ್ಕಿಸಬಲ್ಲ!

Manjunatha Kollegala said...

ಬದರೀನಾಥರೇ, ನೀವೇ ಕಾವ್ಯಗಮಾರರಾದರೆ ನಾವಿನ್ನೇನು :)

ನಿಮ್ಮ ಮೆಚ್ಚುಗೆಗಾಗಿ ಥ್ಯಾಂಕ್ಸ್

VENU VINOD said...

ಮಂಜುನಾಥ್
ಈ ಹಾಯ್ಕುಗಳನ್ನು, ಝೆನ್‌ ಕಥೆಗಳನ್ನು ಓದಿದ್ದೇನೆ. ಹಾಯ್ಕುಗಳ ವ್ಯಾಕರಣ ಗೊತ್ತಿರಲಿಲ್ಲ..
ತಿಳಿಸಿದ್ದಕ್ಕೆ ವಂದನೆ, ನಿಮ್ಮ ಹಾಯ್ಕುಗಳೂ ಖುಷಿಕೊಟ್ಟವು..
ಒಂದಷ್ಟು ನವಿರುಸಾಲುಗಳು ನನ್ನ ಬ್ಲಾಗಲ್ಲಿವೆ, ಬಂದು ನೋಡಿ...
ವಂದನೆಗಳು
-ವೇಣು

Manjunatha Kollegala said...

ವೇಣು,

ಮೆಚ್ಚುಗೆಗೆ ಧನ್ಯವಾದಗಳು.

ನಿಜ, ನಿಮ್ಮ ಸಾಲುಗಳು ನಿಜಕ್ಕೂ ನವಿರು. ನಿಮ್ಮ ಎಲ್ಲಾ ಬ್ಲಾಗುಗಳಿಗೂ ಭೇಟಿಕೊಟ್ಟೆ; It is so rich. It is going to be my habit.

Ashok.V.Shetty, Kodlady said...

@ ಮಂಜು ಸರ್.....

ಹಾಯ್ಕು ಗಳ ಬಗ್ಗೆ ಇಷ್ಟೊಂದು ಉಪಯುಕ್ತ ಮಾಹಿತಿಗಳನ್ನು ಕೊಟ್ಟು 'ಹಾಯ್ಕು' ಗಳ ಬಗ್ಗೆ ಆಸಕ್ತಿ ಹುಟ್ಟಿಸಿದಿರಿ....ತುಂಬಾ ಧನ್ಯವಾದಗಳು ಸರ್....

ನೀವ್ ಬರೆದಿರಿ
ನಾ ಓದಿ ಕುಶಿಪಟ್ಟೆ
ಹಾಯ್ಕು ಇಷ್ಟೇನೇ......

ನಾ ಬರೆಯುವೆ
ನೀವು ಹೇಳಿಕೊಟ್ಟಂತೆ
ಹಾಯ್ಕು ಕಷ್ಟಾನೇ ??????

Manjunatha Kollegala said...

ತುಂಬಾನೇ ಥ್ಯಾಂಕ್ಸು
ಬಂದ್ ಹೋಗಿದ್ದಕ್ಕೆ ಮತ್ತೆ
ಬಂದೋದಿದ್ದಕ್ಕೆ

ಹಾಯ್ಕೋದೇನ್ ಕಷ್ಟ
ಹೊಯ್ಕೊಳ್ತಾನೆ ಅಂದ್ಕೊಂಡ್ರೆ
ತಾನೆ ಬೋ ಕಷ್ಟ

Santhoshkumar LM said...

Manjunath sir,
ಹಾಯ್ಕುಗಳ ಬಗ್ಗೆ ಹುಡುಕುತ್ತಿದ್ದವನಿಗೆ ಅರ್ಥಪೂರ್ಣವಾಗಿ ವಿವರಿಸಿದ ಲೇಖನ ದೊರೆಯಿತು. ತುಂಬಾ ಧನ್ಯವಾದಗಳು!

ಈಶ್ವರ said...

ಹಾಯ್ಕುವಿನ ಬಗ್ಗೆ ಒಳ್ಳೆಯ ಮಾಹಿತಿ ಮತ್ತು ಉಪಯುಕ್ತ ಲೇಖನ.. ಧನ್ಯವಾದ ಸರ್.

Anonymous said...

ಸರಳ ಸುಂದ್ರ
ನಿಂ ಹಾಯ್ಕ್ ವಿವರಣೆ
ಹಾಯ್ಕಾಯ್ತು (ನನ್) ಆಯ್ಕೆ

ತುಂಬಾ ಚೆನ್ನಾಗಿ ತಿಳಿಯುವಂತೆ "ಅದು" ಏನು ಎಂದು ವಿವರಿಸಿದ್ದೀರಿ.
"ಅದು", "ಅದಾಗದೆ" ಹಾಯ್ಕು ಪ್ರಯತ್ನಿಸುವ ಉತ್ಸಾಹ ತರುತ್ತಿದೆ ನಿಮ್ಮ ಲೇಖನದಿಂದ.
ಮೆಚ್ಚುಗೆಗಳು.

jp said...

ಹಾಯ್ಕು ಓದಲು
ತಿಳುವಳಿಕೆ ಬಂತು
ಬರೆದದ್ ಹಾಯ್ಕ್ ಆತ್

ವಿವರಣೆ ಬಹಳ ಚೆನ್ನಾಗಿ ಇದೆ ಮಂಜುನಾಥ್ ಸರ್

ಹರೀಶ್ ಶೆಟ್ಟಿ, ಶಿರ್ವ said...

ಹಾಯ್ಕುಗಳ ಬಗ್ಗೆ ಚೆನ್ನಾಗಿ ತಿಳಿಸಿದ್ದಿರಿ ಸರ್, ನನ್ನ ಫೇಸ್ ಬುಕ್ ವಾಲ್ 'ಲ್ಲಿ ಶೇರ್ ಮಾಡಿದ್ದೇನೆ.

Unknown said...

ದನ್ಯವಾದಗಳು ಸರ್
ಹಾಯ್ಕು ಬಗ್ಗೆ ನಿಮ್ಮ ಬರಹ ತುಂಬಾ ಇಷ್ಟವಾಯಿತು

Unknown said...

ಜಾತಿಗೆ ಜನ
ಬೆಂಬಲ ನೀಡುವರು
ನೀತಿಗೆ ಇಲ್ಲ

(ಪ್ರತಿಕ್ರಿಯೆಗಳಿಗೆ ಸ್ವಾಗತ)

ಕನಸಿನ ಲೋಕ said...

ಗಣಕ
ಆಧುನಿಕ ಜಗಕೆ
ಅತ್ಯವಶ್ಯಕ.

ಕನಸಿನ ಲೋಕ said...

ಗಣಕಯಂತ್ರ
ಆಧುನಿಕ ಜಗಕೆ
ಅತ್ಯವಶ್ಯಕ

Girija Mali Patil said...

ಬಾಳಲ್ಲಿ ಬಸವಳಿದವನ ಮನಸ್ಸಿಗೆ
ಹನಿಸಲಿರುವ ಹಯ್ಕು

ನಾಗರತ್ನ ನಾರಾಯಣ್ said...

ನನ್ನದೊಂದು ಬರವಣಿಗೆ ಇತ್ತು ಆದ್ರೆ ಅಪ್ಲೋಡ್ ಮಾಡಿದ್ರೆ ಅಗ್ತಿಲ್ಲ ಹೇಗೆ ಮಾಡೋದು plzz ತಿಳಿಸಿ

ನಾಗರತ್ನ ನಾರಾಯಣ್ said...
This comment has been removed by the author.
ನಾಗರತ್ನ ನಾರಾಯಣ್ said...

ಮೊಬೈಲ್ ಇಲ್ಲದೆ
ನಮ್ ಜನ ಇರಲ್ಲ, ಈಗ್
ಮಾಸ್ಕ್ ಇರ್ಲೇಬೇಕು.
(ತಪ್ಪಿದ್ರೆ ತಿಳಿಸಿ )

ನಾಗರತ್ನ ನಾರಾಯಣ್ said...

ಎಲ್ಲರೆದುರು
ನೀ ಇನಿಯ, ಮನದಿ
ಮಾತ್ರ ಗೆಳೆಯ.
(ತಪ್ಪಿದ್ರೆ ತಿಳಿಸಿ )

Bharatitanuja said...

ಸುಂದರ ಬರಹ

Bh. Sir said...

ಸುಲಭವಾಗಿ
ಹಾಯ್ಕರ್ಥ ನೀಡಿದ್ದೀರಿ..
ವಂದನೆಗಳು..

Unknown said...

ತುಂಬ ಸರಳವಾಗಿ ಸುಂದರವಾಗಿ ವಿವರಿಸಿದ್ದೀರಿ.
ಧನ್ಯವಾದಗಳು

Ningamma said...

ಹಾಯ್ಕೇನೋ ಇಷ್ಟ
ಓದೋದೇನು ಓದ್ಬಿಟ್ಟೆ
ಅರ್ಥೈಸೋದ್ಕಷ್ಷ

Ningamma said...

ಝೆನ್ ಕಥೆಗಳ
ಬಗ್ಗೆ ವಿವರಿಸಿ ಸಾ
ಅದಂದ್ರೂನು ಬೋ ಇಷ್ಟ
NABHA Hunagunda

Savyasachi HP said...

ಮಾಹಿತಿಗೆ ಧನ್ಯವಾದಗಳು.🙏

Unknown said...

ಹಾಯ್ಕುಸುಂದರಿ
ಮನದೊಳಗೆನಿಂತು
ಕಾಡುತಿರುವೆ

ಮಾಹಿತಿಗೆ ಧನ್ಯವಾದಗಳು.