Tuesday, April 7, 2015

ದಕ್ಷಿಣಾಯಣ

(೨೦೧೪ರ  ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ)
 *********

ಛೇ ಛೇ, ಇದೇನು? ಲಲಿತಪ್ರಬಂಧ ಅಂತ ಬರೆಯಲು ಹೋಗಿ ದಕ್ಷಿಣಾಯಣದಂಥ "ಅನಿಷ್ಟ"ದ ವಿಷಯ ಹೇಳ್ತಿದಾನಲ್ಲ ಅಂತ ಮೂಗು ಮುರಿಯಬೇಡಿ.  ಅದೂ ನಿಜವೇ ಅನ್ನಿ.  ಉತ್ತರಾಯಣವಾದರೆ ಅದೊಂದುರೀತಿ - ಪುಣ್ಯಕಾಲ - ಸತ್ತರೆ ಸ್ವರ್ಗಪ್ರಾಪ್ತಿ.  ರಾಜ್ಯ-ಸಂಸಾರಗಳ ವ್ಯಾಮೋಹಗಳನ್ನೇ ಗೆದ್ದ ಭೀಷ್ಮನಂಥಾ ಭೀಷ್ಮನೇ "ಅದೇನೇ ಆಗಲಿ, ಸತ್ತರೆ ಮಾತ್ರ ಉತ್ತರಾಯಣ ಪುಣ್ಯಕಾಲದಲ್ಲೇ" ಅಂತ, ಮೈಯೆಲ್ಲಾ ಚುಚ್ಚಿಕೊಂಡ ಬಾಣಗಳು ಜೀವ ತೆಗೆಯುತ್ತಿದ್ದರೂ ಹಲ್ಲು ಕಚ್ಚಿ (ಅದರೊಡನೆ ಜೀವವನ್ನೂ ಕಚ್ಚಿ ಹಿಡಿದು) ಉತ್ತರಾಯಣ ಪುಣ್ಯಕಾಲಕ್ಕಾಗಿ ಕಾಯಲಿಲ್ಲವೇ ಪಾಪ, ಸಾಯೋದಿಕ್ಕೆ - ಹದಿನೆಂಟು ದಿನ!  ಉತ್ತರಾಯಣ ಪುಣ್ಯಕಾಲದಲ್ಲಿ ಸಾಯೋ ಗಮ್ಮತ್ತೇ ಅದು ಅಂತಾರಪ್ಪ, ಬದುಕಿರುವವರು.  ಸ್ವರ್ಗದ ಬಾಗಿಲು ತೆಗೆದಿರುತ್ತೆ.  ಇಲ್ಲಿಂದ ರೊಯ್ಯನೆ ಹಾರಿದರೆ ನೇರ ಸ್ವರ್ಗದ ತೆರೆದಬಾಗಿಲ ಮೂಲಕ ತೂರಿ ಒಳಹೋಗಿಬಿಡಬಹುದು.  ಅಪ್ಪಿತಪ್ಪಿ ಇಂದ್ರನೇನಾದರೂ ಸಿಂಹಾಸನ ಬಿಟ್ಟು ಯಾತಕ್ಕಾದರೂ ಎದ್ದು ಹೋಗಿದ್ದರೆ ನೇರ ಸಿಂಹಾಸನದ ಮೇಲೇ ಕುಕ್ಕರಿಸಿದರೂ ಸೈಯೇ.  ಒಮ್ಮೆ ಸಿಂಹಾಸನ ಸಿಕ್ಕಮೇಲೆ ಮುಗೀತಲ್ಲ.  ಆಮೇಲೆ ಇಂದ್ರ ವಾಪಸು ಬಂದಾಗ ನೋಡಿಕೊಳ್ಳೋಣ.  ಖುರ್ಚಿ ಬಿಡಿಸುವುದೇನು ಹುಡುಗಾಟವೇ?  ನಮ್ಮ ಆಂಧ್ರದಲ್ಲೇ ಹಿಂದೊಂದು ಕಾಲದಲ್ಲಿ ಎಂ ಟಿ ರಾಮರಾವುಗಾರು ಪಾಪ ಅದೇಕೋ ಅಮೇರಿಕಾಕ್ಕೆ ಹೀಗೆ ಹೋಗಿ ಹಾಗೆ ಬರೋವಷ್ಟರಲ್ಲಿ ಅವರ ಮುಖ್ಯಮಂತ್ರಿ ಸೀಟೇ ಗುಳುಂ ಆಗಿರಲಿಲ್ಲವೇ?  ಆಮೇಲೆ ಎಷ್ಟೆಷ್ಟು ತಿಪ್ಪರಲಾಗ ಹಾಕಿದರೂ ಅಂಥಾ ಕೃಷ್ಣವೇಷಧಾರೀ ರಾಮನಿಗೇ ಏನೂ ಮಾಡಲು ಆಗಲಿಲ್ಲವೆಂದಮೇಲೆ ಒಬ್ಬ ಯಃಕಶ್ಚಿತ್ ಇಂದ್ರ, ಏನು ಮಾಡಾನು!  ಅಲ್ಲದೇ, ಅದೇನೋ ಮಾನವರ ಕಾಲಪ್ರಮಾಣಕ್ಕಿಂತ ದೇವತೆಗಳ ಕಾಲಪ್ರಮಾಣ ನೂರಾರು ಪಟ್ಟು ಹೆಚ್ಚಂತೆ.  "ಬ್ರಹ್ಮಶೌಚ" ಅನ್ನೋ ಮಾತೇ ಇದೆಯಲ್ಲ - ನಿಮಗೆ ಅದರ ಕತೆ ಗೊತ್ತಿಲ್ಲವೆಂದರೆ ಅದನ್ನೂ ಕೇಳಿಬಿಡಿ.  ಬ್ರಹ್ಮದೇವನು ಒಮ್ಮೆ ಶೌಚಕ್ಕೆ ಹೋಗಬೇಕಾಯಿತಂತೆ, ಇನ್ನೇನು ಬಾಗಿಲು ತೆರೆದು ಒಳಹೋಗಬೇಕು, ಆಗ ವರದಿಗಾರನೊಬ್ಬ ಬಂದು ಒಪ್ಪಿಸಿದನಂತೆ "ಸ್ವಾಮಿ, ರಾವಣ ಜನನವಾಯಿತು"  ಸರಿ ಎಂದ ಬ್ರಹ್ಮದೇವನು ಒಳಗೆ ಹೋದನಂತೆ, ಮತ್ತೆ ಎಲ್ಲಾ ಮುಗಿಸಿ ಹೊರಬರುವ ಹೊತ್ತಿಗೆ ಮತ್ತೆ ವರದಿಗಾರ ಪ್ರತ್ಯಕ್ಷ - "ಸ್ವಾಮೀ, ರಾವಣ ಸಂಹಾರವಾಯಿತು".  ಇದು ನೋಡಿ ಬ್ರಹ್ಮಶೌಚದ ಕಾಲಪ್ರಮಾಣ.  ಹೀಗೇ ’ಒಂದೈದು ನಿಮಿಷ’ ಎಲ್ಲೋ ಹೊರಹೋಗಿರುವ ಇಂದ್ರ ವಾಪಸು ಬರಬೇಕಾದರೆ ನಮ್ಮ ಅಳತೆಯಲ್ಲಿ ಅದೆಷ್ಟು ವರ್ಷ ಲೆಕ್ಕ ಹಾಕಿಕೊಳ್ಳಿ ಆ ಐದು ನಿಮಿಷಕ್ಕೆ.  ಅಷ್ಟು ವರ್ಷವಂತೂ ಇಂದ್ರನ ಖುರ್ಚಿ ನಿಮ್ಮದಾಯಿತಲ್ಲ.  ಆ ಇಂದ್ರಪದವಿ, ಅಪ್ಸರೆಯರ ನೃತ್ಯ, ಸೋಮಪಾನ, ದೇವಗುರು ಬೃಹಸ್ಪತಿಯಿಂದ ಸ್ವಸ್ತಿವಾಚನ, ಅಷ್ಟದಿಕ್ಪಾಲಕರೆಲ್ಲ ನಿಮ್ಮ ಮುಷ್ಠಿಯಲ್ಲಿ!  ಇಂದ್ರ ತಿರುಗಿ ಬಂದಮೇಲೆ ನೋಡಿಕೊಳ್ಳೋಣ ಬಿಡಿ.  ಬಂದಮೇಲೂ ಅವನೇನು ಮಾಡಲು ಸಾಧ್ಯ?  ನೀವೇನು ಬ್ರಹ್ಮನೋ ಶಿವನೋ ಕೊಟ್ಟ ಮೋಸದ ವರದ ಬಲದಿಂದ ಅಲ್ಲಿ ಹೋಗಿ ಕುಳಿತಿಲ್ಲವಲ್ಲ - ಅದರ ಲೂಪ್ ಹೋಲುಗಳನ್ನು ಹಿಡಿದು ನಿಮ್ಮನ್ನ ಮಟ್ಟಹಾಕಲಿಕ್ಕೆ;  ಅಥವಾ ನೀವೇನು ಆ ಅವಿವೇಕಿ ರಾಕ್ಷರಂತೆ ದೇವರಾಜನ ಮೇಲೆ ದಂಡೆತ್ತಿ ಹೋಗಿಲ್ಲ, ಬಲಪ್ರಯೋಗ ಮಾಡಲಿಲ್ಲ.  ನೀವು ಭೂಲೋಕದಿಂದ ತೂರಿ ಬಂದಾಗ ಅಲ್ಲಿ ಸೀಟು ಖಾಲಿಯಿತ್ತು, ಹೋಗಿ ಕುಳಿತಿರಿ - ಅದೇನು ಸರ್ವೀಸು ಬಸ್ಸು ಕೆಟ್ಟುಹೋಯಿತೇ, ಟವಲು ಹಾಸಿ ಸೀಟು ಹಿಡಿದಿಡಲಿಕ್ಕೆ; ಯಾರಿಗೆ ಸಿಗುತ್ತೋ ಅವರು ಕೂರುತ್ತಾರಪ್ಪ.  ಅಲ್ಲದೇ ನೀವಲ್ಲಿ ಹೋಗಿ ಕುಳಿತಿದ್ದು ಸ್ವತಃ ನಿಮ್ಮದೇ ಪುಣ್ಯಫಲದಿಂದ - ಮತ್ತೆ? ಮೊದಲಾಗಿ ಸಾಯುವುದೇ ಅತ್ಯಂತ ಪುಣ್ಯದ ಕೆಲಸ ಈ ಕಾಲಕ್ಕೆ, ಇನ್ನು ಉತ್ತರಾಯಣ ಪುಣ್ಯಕಾಲದಲ್ಲಿ ಸಾಯುವುದೇನು ಕಡಿಮೆ ಪುಣ್ಯವೇ?  ಶ್ರೀ ಕೃಷ್ಣಪರಮಾತ್ಮನೇ ಹೇಳಿಲ್ಲವೇ?  "ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ" - ನೀವು ನಿಮ್ಮ ಪುಣ್ಯದ ಫಲವನ್ನು ಅನುಭವಿಸಿಯೇ ತೀರಬೇಕು; ಅದನ್ನು ಇಂದ್ರನೂ ತಡೆಯುವಂತಿಲ್ಲ, ಹರಿಹರಬ್ರಹ್ಮರೂ ತಡೆಯುವಂತಿಲ್ಲ. ಹಾಗೆಯೇ ಇಂದ್ರನೂ ತನ್ನ ಕರ್ಮಫಲವನ್ನು ಅನುಭವಿಸಬೇಕಲ್ಲ!  ಅಲ್ಲ, ಹೇಳಿ ಕೇಳಿ ಇದು ಉತ್ತರಾಯಣ ಪುಣ್ಯಕಾಲ, ಸ್ವರ್ಗದ ಬಾಗಿಲು ಹಾಗೆ ಹಾರಹೊಡೆದಿದೆ; ಭೂಮಿಯಿಂದ ಯಾವ ಪುಣ್ಯಜೀವಿಯಾದರೂ ಯಾವಾಗಲಾದರೂ ಉಲ್ಕೆಯಂತೆ ರೊಯ್ಯನೆ ಬಂದು ತನ್ನ ಸಿಂಹಾಸನದಲ್ಲಿ ಕುಕ್ಕರಿಸಿಬಿಡಬಹುದು, ಈಗ ಮೈಯೆಲ್ಲಾ (ಸಾವಿರ) ಕಣ್ಣಾಗಿ ಸಿಂಹಾಸನ ಕಾಪಾಡಿಕೊಳ್ಳುವುದು ಬಹು ಮುಖ್ಯ ಎಂಬ ಪರಿಜ್ಞಾನವೇ ಇಲ್ಲದೇ ತನ್ನ ಸೀಟು ಬಿಟ್ಟು ಎದ್ದು ಹೋಗಿದ್ದು ಅವನ ಕರ್ಮವಲ್ಲದೇ ಮತ್ತೇನು?  ಆಕ್ಸಿಡೆಂಟುಗಳು ಆಗಲು ಒಂದು ಕ್ಷಣ ಸಾಕು ಸ್ವಾಮಿ - ಒಂದು ಮಾನವಕ್ಷಣ, ದೇವಕ್ಷಣವಲ್ಲ.  ಅಂಥಾದ್ದರಲ್ಲಿ ದೇವಲೆಕ್ಕದಲ್ಲಿ ನಿಮಿಷಗಟ್ಟಲೆ ಸೀಟು ಬಿಟ್ಟುಹೋಗುವುದೆಂದರೆ, ಬೇಜವಾಬ್ದಾರಿಯ ಪರಮಾವಧಿಯಲ್ಲವೇ.  ನಮ್ಮಲ್ಲಿ ಯಾವ ಮಂತ್ರಿಯಾದರೂ ಆ ಮೂರ್ಖತನ ಮಾಡುತ್ತಾನೆಯೇ? ಅದಕ್ಕೇ ಇಂದ್ರನಿಗೂ "ಅವಶ್ಯಮನುಭೋಕ್ತವ್ಯಂ... ".  ಅಥವಾ ಅವನಿಗೆ ಕನ್ನಡ ಅರ್ಥವಾಗುವುದಾದರೆ "ಮಾಡಿದ್ದುಣ್ಣೋ ಮಹರಾಯ" ಅನ್ನಲೂ ಬಹುದು.

ತಡೀರಿ, ದಕ್ಷಿಣಾಯಣದ ಬಗ್ಗೆ ಹೇಳಹೊರಟು ಉತ್ತರಾಯಣದ ಬಗೆಗೇ ಹೇಳುತ್ತಿದ್ದಾನಲ್ಲ ಎಂದು ನೀವು ಮೂಗು (ನಿಮ್ಮದೇ) ಮುರಿಯುತ್ತಿದ್ದೀರೆಂದು ನನಗೆ ಗೊತ್ತು.  ಅದ್ಯಾರೋ ಒಬ್ಬ ಹುಡುಗ ಪರೀಕ್ಷೆಗೆ ಹೋದನಂತೆ.  ತೆಂಗಿನ ಮರದ ಬಗ್ಗೆ ಪ್ರಬಂಧ ಉರುಹಚ್ಚಿಕೊಂಡು ಹೋಗಿದ್ದ.  ಆದರೆ ಅವನ ದುರದೃಷ್ಟಕ್ಕೆ ಅಲ್ಲಿ ಕೇಳಿದ್ದು ಹಸುವಿನ ಬಗ್ಗೆ ಪ್ರಬಂಧ.  ಏನು ಮಾಡುವುದು.  ಪ್ರಬಂಧವನ್ನಂತೂ ಬರೆಯಬೇಕಲ್ಲ.  ಸುಮ್ಮನೇ ಹಸುವಿಗೆ ಎರಡು ಕಣ್ಣು, ಎರಡು ಕಿವಿ, ಕೊಂಬು, ನಾಲ್ಕು ಕಾಲು, ಕೆಚ್ಚಲು, ಹಾಲು ಕರೆಯುತ್ತೆ ಎಂದರೆ ಮುಗಿಯಿತೇ, ಪೇಜು ತುಂಬಬೇಕಲ್ಲ.  ಲಕ್ಷಣವಾಗಿ ಎರಡು ಪೇಜು ತಾನು ಉರುಹಚ್ಚಿಕೊಂಡು ಹೋದ ತೆಂಗಿನ ಮರದ ಪ್ರಬಂಧವನ್ನೇ ಬರೆದ.  ಕೊನೆಯಲ್ಲಿ "ಇಂಥ ಅದ್ಭುತವಾದ ಕಲ್ಪವೃಕ್ಷದಂಥ ತೆಂಗಿನ ಮರಕ್ಕೆ ಹಸುವನ್ನು ಕಟ್ಟಿ ಹಾಲು ಕರೆಯುತ್ತಾರೆ.  ಇದು ಹಸುವಿನ ಪ್ರಬಂಧ" ಎಂದು ಬರೆದ.  ನನ್ನ ಪ್ರಬಂಧದ ಕತೆಯೂ ಇಷ್ಟೇ ಎಂದು ನೀವು ಯೋಚಿಸುತ್ತಿರಲಿಕ್ಕೆ ಸಾಕು.  ಅಲ್ಲವೇ ಮತ್ತೆ, ಉತ್ತರಾಯಣದಲ್ಲಾದರೆ ಮೇಲೆ ಹೇಳಿದ ಮಹಿಮೆಯೆಲ್ಲಾ ಇದೆ.  ಪುರಾಣಗಳೇ ಇದನ್ನು ಸಾರುತ್ತಿವೆ.  ದಕ್ಷಿಣಾಯಣದಲ್ಲೇನಿದೆ.  ದಕ್ಷಿಣಾಯಣದಲ್ಲಿ ಸತ್ತರೆ ನೇರ ನರಕವೇ ಗಟ್ಟಿ.  ಅದರಲ್ಲೂ ಈ ಕಲಿಗಾಲದಲ್ಲಂತೂ, ಸಾಯುವವರು ಮತ್ತು ಪಾಪಿಗಳ ಸಂಖ್ಯೆಗಳೆರಡೂ ಮುಗಿಲುಮುಟ್ಟಿರುವುದರಿಂದ ನರಕಕ್ಕೆ ಹೋಗುವ ದಾರಿ ಮೊದಲಿನಷ್ಟು ಸಲೀಸಲ್ಲವಂತೆ.  ಆ ಟ್ರಾಫಿಕ್ ಜಾಮಿನಲ್ಲಿ ತೆವಳಿಕೊಂಡು (ಮೊದಲೇ ದಕ್ಷಿಣಾಯಣ, ಮಳೆ ಛಳಿ ಬೇರೆ), ಆ ಮಳೆಯಲ್ಲಿ ನೆನೆದುಕೊಂಡು - ಬೇಡಾ ಫಜೀತಿ.  ಕೊನೆಯಲ್ಲಿ ಸಿಕ್ಕುವ ಆ ನರಕವನ್ನು ರಸ್ತೆಯಲ್ಲೇ ತೋರಿಸಿಬಿಡುತ್ತಾರೆ.  ಬೆಂಗಳೂರಿನ ರಸ್ತೆಗಳಲ್ಲಿ ಪೀಕ್ ಅವರಿನಲ್ಲಿ ತೆವಳಿ ಅಭ್ಯಾಸವಿರುವ ಸುಮಾರು ಆತ್ಮಗಳು ಹಾಗೂ ಹೀಗೂ ಈ ದಾರಿಯನ್ನು ಸವೆಸಿ ಯಶಸ್ವಿಯಾಗಿ ನರಕವನ್ನು ಸೇರಿಬಿಡುತ್ತವಾದರೂ ಈ ಅಭ್ಯಾಸವಿಲ್ಲದ ಅದೆಷ್ಟೋ ಆತ್ಮಗಳು ಪಾಪ, ಈ ಕೊನೆಗಾಣದ ಹಾದಿ ಸವೆಸಲಾಗದೇ ಅತ್ತ ನರಕವೂ ಇಲ್ಲದೇ ಇತ್ತ ಭೂಮಿಯೂ ಇಲ್ಲದೇ ಬೆಂತರಗಳಾಗಿ ಅಲೆದಾಡುತ್ತವಂತೆ.  ಅಂದಮೇಲೆ ಯಾರಿಗೆ ಬೇಕು ಹೇಳಿ ದಕ್ಷಿಣಾಯಣದ ಸಹವಾಸ.  ಇಲ್ಲ, ನೀವು ಅಪ್ಪೀತಪ್ಪಿ ಪುಣ್ಯವನ್ನೇ ಗಂಟುಕಟ್ಟಿಕೊಂಡಿದ್ದೀರೆನ್ನಿ; ಅದಕ್ಕೇ ನಿಮಗೆ ಸ್ವರ್ಗಕ್ಕೇ ಟಿಕೇಟೂ ಸಿಕ್ಕಿದೆಯೆನ್ನಿ.  ಆ ದಾರಿಯಲ್ಲೇನೋ ಈ ಪರಿಯ ಟ್ರಾಫಿಕ್ ಜಾಮ್ ಇಲ್ಲ.  ಹೇಳಿದೆನಲ್ಲ, ಇಲ್ಲಿಂದ ಜೀವ ಎಗರಿದರೆ ರೊಯ್ಯನೇ ನೇರ ಸ್ವರ್ಗಕ್ಕೇ!  ಆದರೇನು?  ಹಾಳು ದಕ್ಷಿಣಾಯಣ, ಸ್ವರ್ಗದ ಬಾಗಿಲು ಮುಚ್ಚಿದೆ.  ಹಾಗಾಗಿ, ಇಲ್ಲಿಂದ ಬಿಟ್ಟ ಬಾಣದಂತೆ ಹೊರಟ ನೀವು ಹೋಗಿ ಸ್ವರ್ಗದ ಮುಚ್ಚಿದ ಬಾಗಿಲಿಗೆ ಅಪ್ಪಳಿಸುವುದೂ, ಮತ್ತೆ ತ್ರಿಶಂಕುವಿನಂತೆ ಭೋಂಕನೆ ತಲೆ ಕೆಳಗಾಗಿ ಭುವಿಗೆ ಬೀಳುವುದೂ ತಪ್ಪದೇ ತಪ್ಪದು.  ಅಂತರಾಳದಲ್ಲೇ ನಿಮಗಾಗಿ ಒಂದು ಬದಲೀ ಸ್ವರ್ಗ ನಿರ್ಮಿಸಿಕೊಡಲು ಈ ಕಾಲದಲ್ಲಿ ವಿಶ್ವಾಮಿತ್ರನೂ ಇಲ್ಲ, ನೀವು ತ್ರಿಶಂಕುವೂ ಅಲ್ಲ!

ಸರಿಹೋಯ್ತು.  ಹರಟೆಯ ಭರದಲ್ಲಿ ನಾವೀಗಾಲೇ ಪರಲೋಕಯಾತ್ರೆ ಕೈಗೊಂಡೇ ಬಿಟ್ಟಿದ್ದೇವೆಂಬ ಹುರುಪಿನಲ್ಲಿ ಮಾತಾಡುತ್ತಿದ್ದೇನೆ ನೋಡಿ.  ಪರಲೋಕಯಾತ್ರೆಯ ಗಡಿಬಿಡಿಯಲ್ಲಿರುವವರು ಯಾರಾದರೂ ಹೀಗೆ ಲೋಕಾಭಿರಾಮ ಹರಟುತ್ತಿರಲು ಸಾಧ್ಯವೇ?  ಅಥವ ಲೋಕಾಭಿರಾಮವಾದ ಹರಟೆ ಹೊಡೆಯುವ ಮನಸ್ಥಿತಿಯುಳ್ಳವರು ಪರಲೋಕಯಾತ್ರೆಯ ಬಗೆಗೆ ಯೋಚಿಸುವುದಾದರೂ ಸಾಧ್ಯವೇ?  ಅಂಥವರು ಎಲ್ಲೋ ಎಂದೋ ಒಬ್ಬಿಬ್ಬರಿರಬಹುದು, ವೇದಕಾಲದ ನಚಿಕೇತನಂಥವರು.  ಇತರರು, ಸತ್ತಮೇಲೂ ಸ್ವರ್ಗಭೋಗಕ್ಕಾಗಿ ಉತ್ತರದಿಕ್ಕಿನ ಕನಸು ಕಾಣುತ್ತಿದ್ದರೆ, ಈ ಹುಚ್ಚು ಹುಡುಗ ಜ್ಞಾನ ಸಂಪಾದನೆ ಮಾಡಬೇಕೆಂದು, ಬದುಕಿದ್ದಾಗಲೇ ದಕ್ಷಿಣ ದಿಕ್ಕಿನೆಡೆ ನಡೆದ.  ಅತ್ತಕಡೆ ಯಮಧರ್ಮರಾಯ ಅವಧಿಮೀರಿದ ಆತ್ಮಗಳನ್ನು ದಸ್ತಗಿರಿ ಮಾಡಿಕೊಂಡು ಬರಲು ಹುಡುಕಿಕೊಂಡು ಭೂಲೋಕದಲ್ಲಿ ಅಲೆದಾಡುತ್ತಿದ್ದರೆ, ಈ ಪುಣ್ಯಾತ್ಮ ಯಮನನ್ನೇ ಹುಡುಕಿಕೊಂಡು ಯಮಸದನಕ್ಕೇ ಬಂದ; ಮೂರು ದಿನ ಮನೆಯ ಬಾಗಿಲಲ್ಲೇ ಝಂಡಾ ಹಾಕಿದ.  ಎದೆಗಾರಿಕೆ ಎಂದರೆ ಇದಪ್ಪ - ಯಮಧರ್ಮನೇ ಅಲುಗಿಹೋದನಲ್ಲ!  ನಿನಗೆ ಬೇಕಾದಷ್ಟು ಸಂಪತ್ತು ಕೊಡುತ್ತೇನೆ, ತೆಗೆದುಕೊಂಡು ಜಾಗ ಖಾಲಿ ಮಾಡು ಅಂದರೂ, ಉಹ್ಹೂಂ... ಹುಡುಗನದು ಒಂದೇ ಹಟ.  "ನಿನ್ನ ಸಂಪತ್ತೂ ಬೇಡ ಏನೂ ಬೇಡ, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು, ಸಾಕು" - ಪಟ್ಟು ಎಂದರೆ ಪಟ್ಟು, ನಕ್ಷತ್ರಿಕಂದೇ ಪಟ್ಟು ಅಂತಾರಲ್ಲ ಹಾಗೆ.  ಅಂಥಾ ಯಮನಿಗೂ ಒಂದು ಕ್ಷಣ ಸಾಕಾಗಿಹೋಗಿರಬೇಕು.  ಕೊನೆಗೂ ಯಮನಿಂದ ಸಾವಿನ ರಹಸ್ಯ ತಿಳಿದು, ಬದುಕಿಗೆ ಹಿಂದಿರುಗಿದ ಹುಡುಗ, ಬರಿಗೈಯಲ್ಲಿ!  ಈ ಹುಚ್ಚಿಗೇನು ಹೇಳೋಣ ಸ್ವಾಮಿ?  ಅಲ್ಲಾ, ಬದುಕು ಬದುಕಲು ಸಾವಿನ ರಹಸ್ಯ ಬೇಕೇ?  ನಾವಾಗಿದ್ದರೆ ಯಮನ ಮೊದಲನೇ ಆಫರನ್ನೇ ಒಪ್ಪಿಕೊಂಡು ಕೈತುಂಬಾ ಸಂಪತ್ತಿನ ದಕ್ಷಿಣೆ ಹೊತ್ತು ಮರಳುತ್ತಿರಲಿಲ್ಲವೇ? 

ಈ ಕತೆ ಹೇಳುತ್ತಿರುವಾಗಲೇ ನನಗನ್ನಿಸಿದ್ದು, ನಾವು ದಿನನಿತ್ಯ ಬಳಸುವ ’ದಕ್ಷಿಣೆ’ ಅನ್ನೋ ಪದದ ಮೂಲ ಈ ಕತೆಯೇ ಇರಬಹುದೇ?  ಮನೆಗೆ ಬಂದ ಬ್ರಾಹ್ಮಣ ವಟುವನ್ನು ಮೂರುದಿನ ಕಾಯಿಸಿದ್ದಕ್ಕಾಗಿ ಯಮನಿಗೆ ತುಂಬ ಪಶ್ಚಾತ್ತಾಪವಾಯಿತಂತೆ.  ಅದಕ್ಕೆ ಪ್ರತಿಯಾಗಿ ಮೂರು ವರಗಳನ್ನು ಕೋರಿಕೋ ಎಂದನಂತೆ.  ಮೊದಲ ಎರಡು ವರ ಹೇಗೋ ಸಂದಿತು, ಆದರೆ ಕೊನೆಯ ವರವಾಗಿ ಇವನು ಹುಟ್ಟು ಸಾವಿನ ರಹಸ್ಯ ತಿಳಿಸು ಎಂದು ಕೇಳಿದಾಗ ಮಾತ್ರ ಯಮನಿಗೆ ತೀರ ಪೇಚಾಟಕ್ಕಿಟ್ಟುಕೊಂಡಿತಂತೆ.  ಮಾನವಮಾತ್ರನಿಗೆ ಈ ರಹಸ್ಯವನ್ನು ಹೇಳಿಬಿಟ್ಟರೆ ಅದು ರಹಸ್ಯವಾಗಿ ಉಳಿಯುವುದೆಂತು?  ವರವನ್ನಂತೂ ಕೊಟ್ಟಾಗಿದೆ, ಕೊಟ್ಟ ಮಾತಿನಿಂದ ಹಿಂದೆಗೆಯುವಂತಿಲ್ಲ, ಅದರಲ್ಲೂ ಸಾಕ್ಷಾತ್ ಧರ್ಮದೇವತೆ!  ಅದಕ್ಕೇ ಅದನ್ನು ಮರೆಯಿಸಲು ಹುಡುಗನನ್ನು ಹೇಗೋ ಪುಸಲಾಯಿಸಿ ಕಳಿಸಲು ಅಪಾರ ಸಂಪತ್ತಿನ ದಕ್ಷಿಣೆಯನ್ನಿಟ್ಟನಂತೆ.  ಆದರೆ ಈ ಹುಡುಗ ಮೊಂಡು ಆಸಾಮಿ - ನಮ್ಮಲ್ಲಿರುವ ಹಲವು ಖಡಕ್ ಆಫೀಸರುಗಳಂತೆ.  ದಕ್ಷಿಣೆಯನ್ನು ಕೈಯಿಂದಲೂ ಮುಟ್ಟ; ಕಿಸೆಯಲ್ಲೂ ಹಾಕಗೊಡ!  ಕೊನೆಗೂ ವಿಧಿಯಿಲ್ಲದೇ ಯಮ ಬಾಯಿಬಿಡಬೇಕಾಯಿತು (ಬಾಯ್ಬಾಯಿ ಬಿಡಬೇಕಾಯಿತೆನ್ನುವುದು ಪಾಠಾಂತರ).  ಅದೇನೇ ಇರಲಿ, ಕಾಂಚಾಣದಿಂದ ಕಾರ್ಯಸಿದ್ಧಿ - ಕೆಲಸವನ್ನು ಆಗಮಾಡಿಕೊಳ್ಳಲು ಆಗಲೂ ದಕ್ಷಿಣೆಯಿಡುತ್ತಿದ್ದರು ಅನ್ನೋದಂತೂ ಸಾಬೀತಾಯಿತಲ್ಲ!  ಬಹುಶಃ ದಕ್ಷಿಣದಿಂದ ಹುಟ್ಟಿದ್ದಾದ್ದರಿಂದ ಈ ಸುವಿಧಾ ದ್ರವ್ಯಕ್ಕೆ ದಕ್ಷಿಣೆಯೆಂಬ ಹೆಸರು ಬಂದಿರಬೇಕು.  ಇದು ಕೆಲಸಮಾಡುವ ರೀತಿಯೂ ಹಾಗೇ.  ಮೊದಲು ದಕ್ಷಿಣೆ, ಆಮೇಲೆ ಸಂಬಂಧಪಟ್ಟವರಿಂದ ಅದಕ್ಕೆ ’ಉತ್ತರ’; ಮತ್ತದರಿಂದಲೇ ತಾನೇ, ದಕ್ಷಿಣೆ ನೀಡಿದವನ ಉತ್ತರೋತ್ತರ ಅಭಿವೃದ್ಧಿ?  ಮತ್ತೆ ಈ ದಕ್ಷಿಣೆಯ ಪ್ರಭಾವವೂ ಅಷ್ಟೇ, ಅಲೌಕಿಕ.  ದಕ್ಷಿಣೆ ಪಡೆದವರ ಮೈಭಾಷೆಯನ್ನೊಮ್ಮೆ ನೀವು ಅವಲೋಕಿಸಬೇಕು.  ಸಾಮಾನ್ಯವಾಗಿ ಜಡ ಸಂಪನ್ನವಾಗಿರುವ ಮೈಮನಗಳ ಕಣಕಣವೂ ನೀವು ಹನಿಸಿದ ದಕ್ಷಿಣೆಯ ಕಾಯಕಲ್ಪದಿಂದ ಹುರಿಗೊಳ್ಳುತ್ತದೆ, ಕಾರ್ಯೋತ್ಸಾಹ ಪುಟಿದೇಳುತ್ತಿರುತ್ತದೆ.  ದಕ್ಷಿಣಾದರ್ಶನದ ಮುಂಚೆ ಆ ಅರೆಮುಚ್ಚಿದ ಕಣ್ಣುಗಳಲ್ಲಿ ತುಂಬಿ ತೊನೆಯುತ್ತಿದ್ದ ನಿಮ್ಮ ಬಗೆಗಿನ ದಿವ್ಯನಿರ್ಲಕ್ಷ್ಯ ಈಗ ಮಂಗಮಾಯವಾಗಿ ಅದರ ಜಾಗದಲ್ಲಿ ದಾಕ್ಷಿಣ್ಯಪರತೆ (ದಕ್ಷಿಣೆಯು ತುಂಬಿದ ಧನ್ಯತಾ ಭಾವ) ತುಂಬಿ ತುಳುಕುತ್ತಿರುತ್ತದೆ.  ಕಿರಿದ ಹಲ್ಲುಗಳ ಕಾಂತಿ ಎಲ್ಲೆಲ್ಲೂ ಹರಡುತ್ತದೆ (ಅದನ್ನು ನೋಡಿ "ವದಸಿ ಯದಿ ಕಿಂಚಿದಪಿ ದಂತ ರುಚಿ ಕೌಮುದೀ ಹರತಿ ಧರ ತಿಮಿರಮತಿ ಘೋರಂ" ಎಂದು ನೀವು ಹಾಡಿದರೂ ತಪ್ಪಿಲ್ಲ).  ಅದುವರೆಗೂ ಮೌನಕಠೋರವಾಗಿದ್ದ ಆತನ ದನಿ, ಈಗ ಕೋಕಿಲಧ್ವನಿಯಾಗಿದೆ.  ಮಹಿಷಗಮನಕ್ಕೀಗ ನವಿಲಿನ ನಾಟ್ಯದ ಕಸುವು ದಕ್ಕಿದೆ.  ಆ ಅರಳಿದ ಮೊಗದಾವರೆಯನ್ನು ನೋಡಿ ಅದನ್ನು ಅರಳಿಸಿದ ಬಾಲ ಸೂರ್ಯ ನೀವೇನೋ ಎಂದು ಒಂದು ಕ್ಷಣ ನೀವು ವಿವಂಚನೆಗೊಳಗಾಗುತ್ತೀರಿ, ಆದರೆ ನಿಮಗೆ ತಿಳಿದಿರಲಿ, ಅದು ನೀವಲ್ಲ, ನಿಮ್ಮ ಪರ್ಸು.  ಅದರ ತಾಖತ್ತು ನಿಮಗೇ ಇಷ್ಟುದಿನ ತಿಳಿದಿರಲಿಕ್ಕಿಲ್ಲ.  ಕೇವಲ ಅದರ ಸಾನ್ನಿಧ್ಯದಿಂದಲೇ ನಿಮ್ಮ ಫೈಲುಗಳಿಗೆ ಎಂದಿಲ್ಲದ ಸಂಚಲನೆ ದೊರಕುತ್ತದೆ.  ಭಾಗ್ಯವಂತನ ಮನೆಯಲ್ಲಿ ಒಂದರೆಕ್ಷಣವೂ ಇರಲೊಲ್ಲದ ದರಿದ್ರ ಲಕ್ಷ್ಮಿಯಂತೆ ಹರಿದು ಜೀರ್ಣಗೊಂಡ ಆ ನಿಮ್ಮ ಫೈಲು ಆತನ ಟೇಬಲನ್ನು ಬಿಟ್ಟು ತೊಲಗುತ್ತದೆ.  ಆದರೆ ಮರೆಯದಿರಿ.  ಈ ಹಳೇ ಫೈಲುಗಳ ಮೈಲೇಜು ಹಳೇ ಗಾಡಿಗಳ ಮೈಲೇಜಿಗಿಂತಲೂ ತೀರ ಕಡಿಮೆ.  ಟೇಬಲ್ಲು ಟೇಬಲ್ಲಿನಲ್ಲೂ ನಿಂತು ನಿಮ್ಮತ್ತ ತಿರುಗಿ ಕೈಯಲ್ಲಾಡಿಸಿಬಿಡುತ್ತದೆ.  ನಿಮ್ಮ ಪರ್ಸಿನಲ್ಲಡಗಿದ ಆ ಬಾಲಸೂರ್ಯ, ಇಂಥಾ ಹಲವಾರು ತಾವರೆಗಳನ್ನರಳಿಸಬೇಕು - ನಿಮ್ಮ ಪರ್ಸು ಹತ್ತಾರು ನಿಲುಗಡೆಗಳಲ್ಲಿ ನಿಮ್ಮ ಆಯಾಸಗೊಂಡ ಫೈಲಿಗೆ ಊರುಗೋಲಾಗಬೇಕು.  ಹೀಗೆ ನಿಂತೂ ನಿಂತೂ ಅಂತೂ ಇಂತೂ ಕೊನೆಯ ಘಟ್ಟ ಮುಟ್ಟಿದಮೇಲಷ್ಟೇ ನಿಮ್ಮ ಫೈಲಿಗೆ ಮುಕ್ತಿ, ನಿಮ್ಮ ಕಾರ್ಯಸಿದ್ಧಿ.  ಇದಕ್ಕಾಗಿ ನೀವು ಈ ದಕ್ಷಿಣೆಯೆಂಬ ದೇವಕಾರ್ಯಕ್ಕೆ ಅದೆಷ್ಟು ಕೃತಜ್ಞರಾಗಿದ್ದರೂ ಸಾಲದು.

ಹೀಗೆ ನಿಮ್ಮ ಸಕಲ ಕಾರ್ಯಗಳಿಗೂ ಉತ್ತರಮುಕ್ತಿದಾಯಕವಾದ ದಕ್ಷಿಣೆಗೆ ದಕ್ಕಬೇಕಾದ ನೈತಿಕ ಮಾನ ಸನ್ಮಾನಗಳು ಮಾತ್ರ ದಕ್ಕಲಿಲ್ಲವೆಂಬುದೇ ದುಃಖದ ವಿಷಯ.  ದಕ್ಷಿಣದಿಂದ ಉತ್ತರಕ್ಕೆ ಒಂದು ಹೈ-ಸ್ಪೀಡ್ ರಸ್ತೆಯಂತೆ ಕೆಲಸಮಾಡುವ ದಕ್ಷಿಣೆಗೆ "ಲಂಚ" ಎಂಬ ಕೆಟ್ಟ ಹೆಸರು ಬಂದು ಬಡಿದಿದೆ.  ಇದರ ಹೆಸರೆತ್ತಲೂ ಜನ ಹಿಂದುಮುಂದು ನೋಡುತ್ತಾರೆ - ಎಷ್ಟೆಂದರೆ ಕನ್ನಡದ ಹೋಟೆಲುಗಳಿಗೆ ಹೋಗಿ ರಾಜಾರೋಷವಾಗಿ ಲಂಚ್ ತಿಂದು ಬರುವವರೂ ಲಂಚದ ಹೆಸರನ್ನು ಮಾತ್ರ ಬಾಯಿಬಿಟ್ಟು ಹೇಳುವುದಿಲ್ಲ (ಕೈ ಚಾಚಿ ತೆಗೆದುಕೊಳ್ಳುವುದಿಲ್ಲ ಅಂತ ಹೇಳಲಾಗುವುದಿಲ್ಲ, ಅದು ಬೇರೆ ವಿಷಯ).  ಅದಕ್ಕೇ ಈ ’ಅನಿಷ್ಟ’ ಹೆಸರನ್ನು ವ್ಯವಹಾರದಿಂದ ಆದಷ್ಟೂ ದೂರವಿಡಲು ಮಾಮೂಲು, ಕೈಬೆಚ್ಚಗೆ, ’ನೋಡಿಕೊಳ್ಳುವುದು’, ಸುವಿಧಾ, ’ಮೇಲೆ’, ಟೇಬಲ್ ಕೆಳಗೆ, ಎಕ್ಸ್ಟ್ರಾ, ಚಿಲ್ಲರೆ ದಕ್ಷಿಣೆಯಾದರೆ ’ಕಾಫಿಗೆ’, ಭಾರೀ (ಪ್ರ)ದಕ್ಷಿಣೆಯಾದರೆ ’ಸ್ಕ್ಯಾಮ್’... ಹೀಗೆ ಏನೇನೋ ಹೆಸರುಗಳಿಂದ ಕರೆಯುತ್ತಾರೆ - ತಮ್ಮ ಭಾಗ್ಯದೇವತೆಯನ್ನೇ ಜರಿಯುತ್ತಾರೆ!  ಇನ್ನು ಗುರುದಕ್ಷಿಣೆಯ ವಿಷಯವಂತೂ ಕೇಳಲೇ ಬೇಡಿ.  ಫೀಸು, ಕ್ಯಾಪಿಟೇಶನ್ನು, ಬಿಲ್ಡಿಂಗ್ ಫಂಡು, ಡೆವಲಪ್ ಮೆಂಟ್, ಡೊನೇಶನ್ನು, ದೇಣಿಗೆ ಹೀಗೆ ನಾನಾ ವೇಷ ತಾಳಿ ಕಾಡುತ್ತದೆ.  ವರದಕ್ಷಿಣೆಯೋ, ಅದರ ಹೆಸರೆತ್ತಿದರೆ ನಿಮಗೆ ಜೈಲೇ ಗಟ್ಟಿ.  ಅದೆಲ್ಲ ಹೋಗಲಿ, ಪೌರೋಹಿತ್ಯಕ್ಕೆ ಸಹಜವಾಗಿಯೇ ಬರುವ ಸಂಭಾವನೆಯನ್ನೂ ದಕ್ಷಿಣೆಯೆಂದು ಕರೆಯಲು ಮುಜುಗರ ಪಡುತ್ತಿದ್ದ ಹಿರಿ ತಲೆಗಳನ್ನು ನೋಡಿದ್ದೇನೆ.  ನನಗೆ ತಿಳಿದ ವಯೋವೃದ್ಧ ಪುರೋಹಿತರೊಬ್ಬರು ಪೌರೋಹಿತ್ಯಕ್ಕಾಗಿ ತಮ್ಮ ಬಳಿ ಬರುತ್ತಿದ್ದ ಕಕ್ಷಿದಾರರನ್ನು ಕೇಳುತ್ತಿದ್ದರು "ಮರ್ಯಾದೆ ಎಷ್ಟು ಕೊಡುತ್ತೀರಿ?" ಅಥವ ಹಾಗಾದರೂ ಇವತ್ತು ದಕ್ಷಿಣೆಯೆಂಬ ಪದಕ್ಕೆ ಕಳೆದುಹೋದ ಮರ್ಯಾದೆಯನ್ನು ಸಂಪಾದಿಸಿಕೊಡುವ ಇರಾದೆಯಿದ್ದಿರಬಹುದು ಆ ಹಿರಿಯರಿಗೆ. 

ಆದರೇನು? ನೀವು ಎಷ್ಟೇ ಮುಜುಗರ ಪಟ್ಟರೂ, ಹೇವರಿಸಿಕೊಂಡರೂ, ಹೆಸರು ಮರೆಸಿದರೂ ಈ ಲಂಚತತ್ತ್ವ ಮಾತ್ರ ನಿಮ್ಮ ಕೈಬಿಡುವುದಿಲ್ಲ.  ನೀವದನ್ನು ದಕ್ಷಿಣೆಯೆನ್ನಿ, ಲಂಚವೆನ್ನಿ, ಮರ್ಯಾದೆಯೆನ್ನಿ ಅಥವಾ ಅದೊಂದು ಅಸಹ್ಯ ವಿಷಯವೆಂಬಂತೆ ಕೈಬಾಯಿ ಸನ್ನೆಯಲ್ಲೇ ಸೂಚಿಸಿ, ಅದು ಮಾತ್ರ ಕರ್ಮಯೋಗಿಯಂತೆ ನಿರ್ಲಿಪ್ತವಾಗಿ ತನ್ನ ಕೆಲಸವನ್ನು ತಾನು ಮಾಡುತ್ತಲೇ ಇರುತ್ತದೆ.  ಸ್ವತಃ ತಾನು ಯಾವುದಕ್ಕೂ ಅಂಟದಿದ್ದರೂ ಕೊಡುಕೊಳ್ಳುವರನ್ನು ಅಂಟಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತದೆ - ಲಂಚಗಾರ ಮತ್ತು ಲಂಚಿಗರ (ವೈಯಾಕರಣಿಗಳು ಮನ್ನಿಸಬೇಕು) ಮಧ್ಯೆ ಅದೊಂದು ಅವಿನಾಭಾವ ಸಂಬಂಧವನ್ನೇರ್ಪಡಿಸುತ್ತದೆ.  ಕೊಟ್ಟ ಮೇಲೆ ಕೆಲಸ ಮುಗಿಯುವವರೆಗೂ ಅವನನ್ನು ಇವನು ಬಿಡ, ಇವನನ್ನು ಅವನು ಬಿಡ.  ಹೀಗೆ ವ್ಯಕ್ತಿ ವ್ಯಕ್ತಿಗಳ ನಡುವೆ ಬಾಂಧವ್ಯ ಬೆಸೆಯುವ ದಿವ್ಯ ಬಂಧನವಾಗಿ ಕೆಲಸಮಾಡುತ್ತದೆ ಈ ದಕ್ಷಿಣೆ (ಮುಂದೆ ಅದು ಬೇರೆಯೇ ಬಂಧನವಾಗಬಹುದು, ಆದರೇನು).  ಕಾರ್ಯಸಾಧನೆಗೆ ಈ ಬಂಧ-ಬಾಂಧವ್ಯಗಳೇ ಅಲ್ಲವೇ ಮುಖ್ಯ? ಬಂಧನವಿಲ್ಲದೇ ಜಗತ್ತು ನಡೆಯುವುದುಂಟೇ.  ಆದ್ದರಿಂದ ಲಂಚವೆನ್ನುವುದು ಈ ಜಗತ್ತನ್ನು ಒಗ್ಗೂಡಿಸಿ ಮುನ್ನಡೆಸುವ ಅದ್ಭುತ ಶಕ್ತಿಯೆಂದರೆ ತಪ್ಪೇನು?  ಈ ಜಗದ್ಭವ್ಯ ಶಕ್ತಿಯನ್ನು ಕುರಿತು ಚಿಂತಿಸುವುದು ಬಿಟ್ಟು ಒಣವೇದಾಂತ, ಲೋಕಾಂತರಗಳ ಚಿಂತೆ ನಮಗೇಕೆ ಹೇಳಿ. ನಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳಿ.  ಸುಮ್ಮನೇ ಸ್ವರ್ಗ, ನರಕ, ಉತ್ತರ ದಕ್ಷಿಣ ಎಂದೆಲ್ಲಾ ಲೋಕದಿಂದ ಲೋಕಕ್ಕೆ ಅಲೆಯುತ್ತಿದ್ದ ನಮ್ಮ ಮಾತು, ದಕ್ಷಿಣೆ-ಲಂಚದ ವಿಷಯ ಬಂದ ಕೂಡಲೇ ಹೇಗೆ ಈ ನೆಲಕ್ಕೆ ಅಂಟಿ ನಿಂತಿತು ನೋಡಿ.  ಇಂಥಾ ಜೀವನ್ಮುಖೀ ಶಕ್ತಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೆ ತಾನೇ ತೀರೀತು?  ಅದಕ್ಕೇ ನಾನಂತೂ ನಿರ್ಧರಿಸಿಬಿಟ್ಟಿದ್ದೇನೆ - ಪರ(ಲೋಕ) ಚಿಂತೆ ನಮಗೆ ಏಕಯ್ಯಾ ನಮ್ಮ(ಲೋಕದ) ಚಿಂತೆ ನಮಗೆ ಸಾಲದೇ ಎಂದು ಇಹಲೋಕದ ಬಗ್ಗೆ ಚಿಂತಿಸುವುದೇ ಆದರೆ, ಮೊದಲು ಕೈಮುಗಿಯಬೇಕಾದ್ದು ಈ ಲೋಕದ ಸ್ಥಿತಿಕಾರಕ ಶಕ್ತಿಯಾದ ದಕ್ಷಿಣಾಮೂರ್ತಿಗೆ - ದಕ್ಷಿಣಾಮೂರ್ತಿಯೇ ಆದಿಗುರುವೇ!