Tuesday, May 26, 2020

ಪಂಡಿತಸಮಾರಾಧನೆಗೆ ಕೃತಜ್ಞತಾಸಮರ್ಪಣೆ

ಈ ಲೇಖನವನ್ನು ಬ್ಲಾಗಿನಲ್ಲಿ ಹಾಕುವ ಉದ್ದೇಶವಿರಲಿಲ್ಲ, ಏಕೆಂದರೆ ಇದು ಫೇಸ್ಬುಕ್ಕಿನಲ್ಲಿ ಒಂದೂವರೆ ವರ್ಷದ ಹಿಂದೆ (09/10/2018) 'ದಂಪತಿ' ಶಬ್ದದ ವಿಚಾರದಲ್ಲಿ ನಡೆದ ಚರ್ಚೆಯೊಂದಕ್ಕೆ ಪ್ರತಿಕ್ರಿಯಾರೂಪದ ಲೇಖನ.  ಈ ವಿಷಯಕ್ಕೆ ಸಂಬಂಧಿಸಿದ ನನ್ನ ಮೂಲಲೇಖನವನ್ನು ಹಿಂದೊಮ್ಮೆ ಬ್ಲಾಗಿನಲ್ಲೇ ಪ್ರಕಟಿಸಿದ್ದೆ (ಆಸಕ್ತರು ಅದನ್ನು ಇಲ್ಲಿ ಓದಬಹುದು). ಅದೂ ಅಂಕಣಕಾರರಾದ ಶ್ರೀ ಶ್ರೀವತ್ಸಜೋಷಿಯವರ ಫೇಸ್ಬುಕ್ ಲೇಖನಕ್ಕೆ ಪ್ರತಿಕ್ರಿಯೆಯೇ, ಆದರೆ ಅದು ಪೂರ್ಣಪ್ರಮಾಣದ ಲೇಖನ.  ಆಮೇಲೆ ಫೇಸ್ಬುಕ್ಕಿನಲ್ಲಿ ಇದರ ಬಗ್ಗೆ ಸಾಕಷ್ಟು ವಾದವಿವಾದಗಳು ನಡೆದು ಅದಕ್ಕೆ ಶ್ರೀ ಜೋಶಿಯವರಿಂದ ಅತ್ಯುಗ್ರರೂಪದ ಖಂಡನೆಯೊದಗಿತ್ತು.  ಆ ಖಂಡನೆಗೆ ಪ್ರತಿಕ್ರಿಯೆಯಾಗಿ ಬರೆದದ್ದು ಈ ಕೆಳಕಂಡ ಲೇಖನ.  ವಿಷಯವೇನೋ ವಿದ್ವದ್ವಿಷಯವೇ ಆಗಿದ್ದರೂ, ಖಂಡನೆಯೊಂದಕ್ಕೆ ಬರೆದ ಪ್ರತಿಕ್ರಿಯೆ ಇದಾದ್ದರಿಂದ ವಿಷಯಮಂಡನೆಗಿಂತ ಘಾತುಕವಾದ ಖಂಡನವಾದಗಳೇ ಇಲ್ಲಿ ಹೆಚ್ಚಿರುವುದು ಸಹಜವೇ - ಅದೇ ಕಾರಣಕ್ಕೇ ಬ್ಲಾಗಿನಲ್ಲಿ ಬರುವ ಯೋಗ್ಯತೆ ಈ ಲೇಖನಕ್ಕಿಲ್ಲವೆಂದು ತರ್ಕಿಸಿ ಫೇಸ್ಬುಕ್ಕಿನಲ್ಲಷ್ಟೇ ಈ ಪ್ರತಿಕ್ರಿಯೆಯನ್ನು ಹಾಕಿ ಸುಮ್ಮನಾಗಿದ್ದೆ.  ಆದರೆ ಅದೇನೋ ಕಾರಣದಿಂದ ಫೇಸ್ಬುಕ್ಕಿನಿಂದ ಈ ಲೇಖನ ಮಾಯವಾಗಿತ್ತು.  ಶ್ರೀ ಜೋಶಿಯವರ ಖಂಡನಲೇಖನಕ್ಕೆ ಅದರಡಿಯಲ್ಲೇ ಹಾಕಿದ್ದ ಪ್ರತ್ಯುತ್ತರಗಳನ್ನು ಸೇರಿಸಿ ತಯಾರಿಸಿದ ಲೇಖನವೇ ಇದಾಗಿದ್ದರೂ, ಅದನ್ನು ಫೇಸ್ಬುಕ್ಕಿನ ನನ್ನ ಗೋಡೆಯ ಮೇಲೆ ಪ್ರಕಟಿಸಿದನಂತರ ಅದಕ್ಕೆ ಅನೇಕ ತಿದ್ದುಪಡಿಗಳನ್ನು ಮಾಡಿ ಲೇಖನವನ್ನು ಬಹುವಾಗಿ ಬೆಳೆಸಿದ್ದೆನಾದ್ದರಿಂದ, ಲೇಖನವು ಮಾಯವಾದಾಗ ಅದೆಲ್ಲವೂ ಮಾಯವಾಯ್ತು.  ಅದೃಷ್ಟವಶಾತ್ ಈ ಲೇಖನವು ಫೇಸ್ಬುಕ್ಕಿನ ನನ್ನ ಗೋಡೆಯ ಮೇಲೆ ಮರಳಿ ಕಾಣಿಸಿಕೊಂಡದ್ದನ್ನು ಇವತ್ತಷ್ಟೇ ಗಮನಿಸಿದೆ.  ಮತ್ತೆ ಕಳೆದುಹೋಗಬಾರದೆಂದು ಈಗ ಈ ಲೇಖನವನ್ನು ಬ್ಲಾಗಿನಲ್ಲೂ ಪ್ರಕಟಿಸುತ್ತಿದ್ದೇನಷ್ಟೇ.  ಇದರ ಫೇಸ್ಬುಕ್ ಅವತರಣಿಕೆ ಇಲ್ಲಿದೆ:

ಈಗ ಲೇಖನಕ್ಕೆ:
===========
ಮಾನ್ಯ Srivathsa Joshiಯವರೇ, ತಾವು ದಿನಾಂಕ ೮ ಅಕ್ಟೋಬರ್ ೨೦೧೮ರಂದು "‘ವಚನ’ಭ್ರಷ್ಟ ‘ವಿದ್ವಾಂಸ’ರಿಗೆ ಸಾಮೂಹಿಕ ಸಮಾರಾಧನೆ" ಎಂಬ ಶೀರ್ಷಿಕೆಯಡಿಯಲ್ಲಿ ಹಲವು ಪಂಡಿತರೊಡನೆ ನನ್ನನ್ನೂ ಕೂರಿಸಿ ಸಮಾರಾಧನೆ ಮಾಡಿದಿರಿ (https://www.facebook.com/srivathsa.joshi/posts/10156050311074403). 'ವಿದ್ವಾಂಸ'ರ ಸಾಲಿನಲ್ಲಿ ಕೂರಲು ನಾನು ಸರ್ವಥಾ ಅನರ್ಹನಾದರೂ, ನಿರ್ದಿಷ್ಟವಾಗಿ ನನ್ನನ್ನೇ ಟ್ಯಾಗ್ ಮಾಡಿ, ನನ್ನನ್ನು ಆ ಸಾಲಿನಲ್ಲಿ ಕೂರಿಸಿದ ತಮ್ಮ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ಅದಕ್ಕೆ ಕೃತಜ್ಞತಾಪೂರ್ವಕವಾದ ಧನ್ಯವಾದಗಳನ್ನು ಇದೋ ಸ್ವೀಕರಿಸಿ.

ಮೊದಲಿಗೆ, ನಮಸ್ಕಾರಗಳು. ಪರಸ್ಪರ ಸಂಭಾಷಣೆಯಲ್ಲಿ ಸುಸಂಸ್ಕೃತಿಯ ಮಿತಿಯಲ್ಲಿ ನಾನು ತಿರುಗಿ ಕೊಡಬಹುದಾದದ್ದೆಂದರೆ ಇದೊಂದೇ ನೋಡಿ - ಪ್ರತಿನಮಸ್ಕಾರ. ಉಳಿದದ್ದನ್ನು ತಿರುಗಿ ಕೊಡಲಾರೆ - ಏಕೆಂದರೆ ಸಂಸ್ಕೃತಿಯ ಮಿತಿಮೀರಿದ ದನಿ ಮನುಷ್ಯರ ದನಿಯಂತಿರುವುದಿಲ್ಲವೆಂಬುದನ್ನು ನಾನು ನೋಡಿ, ಕೇಳಿ ಬಲ್ಲೆ - ಅಷ್ಟು ಮಟ್ಟಿಗೆ ನಾನು ಸೋತೆ, ಗೆಲುವು ನಿಮ್ಮದೇ 🙏. ಆದ್ದರಿಂದ ವಿಷಯ-ವಸ್ತುವಿನ ಚರ್ಚೆಗೆ ಹೊರತಾದ ನಿಮ್ಮ ಮಾತುಗಳೊಂದನ್ನೂ ನಾನು ಸ್ವೀಕರಿಸಿಲ್ಲ. ಸ್ವೀಕರಿಸದ ವಸ್ತು ತಮಗೆ ಮರಳುವುದು ಸಹಜವೇ, ಸ್ವೀಕರಿಸಿ.

ಅದಾಯಿತಲ್ಲ, ನಿಮ್ಮ ಫೋಟೋ ಆಲ್ಬಮಿಗೆ "ವಸ್ತುನಿಷ್ಠವಾಗಿ" ಉತ್ತರಿಸುವುದಕ್ಕೆ ಮೊದಲು ತಮಗೂ ಮತ್ತು ತಮ್ಮ ಜೋರುಬಾಯಿನ ಗತ್ತಿಗೆ ಬೆಚ್ಚಿ ಮೆಚ್ಚಿ (ಹಿನ್ನೆಲೆಯನ್ನು ಮಾತ್ರ ಅರಿಯುವ ಗೋಜಿಗೆ ಹೋಗದೇ) ಆನಂದತುಂದಿಲರಾಗಿರುವ ತಮ್ಮ ಹಲವು ಹಿಂಬಾಲಕರಿಗೂ ಕೆಲವು ಸ್ಪಷ್ಟನೆ/ಪ್ರಶ್ನೆ (ಅದು ಪ್ರಯೋಜನವಿಲ್ಲ, ಆದರೂ ದಾಖಲೆಯಲ್ಲಿರಲಿ ಎಂಬ ಉದ್ದೇಶವಷ್ಟೇ). ಮೊದಲನೆಯದಾಗಿ, ತಾವು ಹೀಗೆ ವಾಚಾಮಗೋಚರವಾಗಿ ಬೈದಾಡಿ ಬರೆಯುವುದೇ ತಕ್ಕ ಪ್ರತಿಕ್ರಿಯೆಯೆನಿಸುವಷ್ಟು ನಿಮ್ಮನ್ನು ಪ್ರಚೋದಿಸಿದ ಒಂದೇ ಒಂದು ವಾಕ್ಯವನ್ನಾದರೂ ನನ್ನ ಕಾಮೆಂಟಿನಲ್ಲಾಗಲೀ, ನಿಮ್ಮ ಅಂಚೆಗೆ ಪ್ರತಿಕ್ರಿಯೆಯಾಗಿ ಬರೆದ ನನ್ನ ಲೇಖನದಿಂದಲಾಗಲೀ ಎತ್ತಿ ತೋರಿಸುವಿರಾ? ವ್ಯಾಖ್ಯಾನ ಬೇಡ, ನೀವೀಗ ತೋರಿಸಿದಿರಲ್ಲ 'ಡಿಜಿಡಿಜೈನ್' ಫೋಟೋ ಆಲ್ಬಮ್ ಅಂಥದ್ದಲ್ಲದಿದ್ದರೂ ಒಂದೋ ಎರಡೋ ಫೋಟೋಗಳನ್ನಾದರೂ ತೋರಿಸಿ. ಮೊನ್ನೆ ನನ್ನ ವಾಲ್ ಮೇಲೆ ನೀವು ಇದೇ ಧಾಟಿಯಲ್ಲಿ ಮಾತಾಡಿದಾಗಲೂ ನಾನು ತಮ್ಮನ್ನು ಸಮಾಧಾನದಿಂದಲೇ ಇದೇ ಪ್ರಶ್ನೆ ಕೇಳಿದೆ - ನನ್ನ ಲೇಖನದಲ್ಲಿ ದುರ್ವಾದವನ್ನಾಗಲೀ, ನೀವೀಗ ಮಾಡಿದಂತೆ ವೈಯಕ್ತಿಕ ನಿಂದನೆಯನ್ನಾಗಲೀ ಕಂಡಿರಾ? ಕಂಡಿದ್ದರೆ ಹೇಳಿ, ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ ಎಂದು ನೆನ್ನೆಯೇ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ - ನಿಮ್ಮ ಈ ಅಸಹ್ಯ ಪ್ರತಿಕ್ರಿಯೆಗೆ ನನ್ನ ಯಾವ ಮಾತು ಕಾರಣವಾಗಿದ್ದೀತು? ಸರಿ-ತಪ್ಪನ್ನೇ ಕುರಿತಾದ ನಿಮ್ಮ ಲೇಖನದಲ್ಲಿ ಸರಿತಪ್ಪುಗಳ ಚರ್ಚೆಯನ್ನೆತ್ತಿದ್ದೇ ಕಾರಣವೇ? ನಾನು ಹೇಳಿದ್ದೆಲ್ಲಾ ಏನು? "ದಂಪತಿ ಏಕವಚನವೆಂದು ಹೇಳುತ್ತಿದ್ದೀರಿ, ಆದರೆ ಅದು ಏಕವಚನವಲ್ಲ, ಬಹುವಚನ - ತಪ್ಪು ಮಾಹಿತಿ ಹರಡದಿರಲಿ" ಎಂದೆನಷ್ಟೇ? ಇದು ಕೋಲುಮಾಸ್ತರಿಕೆಯೋ, "ದಂಪತಿ ಏಕವಚನ; ಬಹುವಚನ ಬಳಸಬೇಡಿ" ಎಂದು ತಾಕೀತು ಮಾಡುವುದು ಕೋಲುಮಾಸ್ತರಿಕೆಯೋ? ಅದೂ ತಮ್ಮ ಲೇಖನ ಸಾರ್ವಜನಿಕವಾಗಿದ್ದುದರಿಂದ, ನನ್ನ ಕಣ್ಣಿಗೂ ಬಿದ್ದುದರಿಂದ ಭಾಷೆಯ ಬಗೆಗಿನ ಕಳಕಳಿಯಿಂದಲೇ ಇದನ್ನಾದರೂ ಹೇಳಬೇಕಾಯಿತೇ ವಿನಾ, ನೀವು ಅದನ್ನು ನಿಮ್ಮ ಹಿಂಬಾಲಕರ ಗುಂಪಿನಲ್ಲಿ ಹಂಚಿಕೊಂಡಿದ್ದರೆ ನಾವು ಇಣುಕಿ ನೋಡಲಾದರೂ ಬರುತ್ತಿದ್ದೆವೇ? ಇಷ್ಟಕ್ಕೂ ನಾನೇನು ನನ್ನ ಮಾತನ್ನು ಗಾಳಿಯಲ್ಲಿ ಹೇಳಲಿಲ್ಲವಲ್ಲ ಸ್ವಾಮಿ, ಆಧಾರಗಳ ಮೂಲಕ ನಿರೂಪಿಸಿದ್ದೇನಷ್ಟೇ? ಆ ನನ್ನ ಇಡೀ ಬರಹದಲ್ಲಿ ನೀವೀಗ ತೋರುತ್ತಿರುವುದರ ಒಂದಂಶವಾದರೂ ದುರ್ವರ್ತನೆಯನ್ನು ಕಂಡಿರಾ? ಕಂಡಿದ್ದರೆ ತೋರಿಸಿ - ನೀವೇ ಬೇಕಿಲ್ಲ, ಯಾರು ತೋರಿಸಿದರೂ ಸರಿ, ದಯವಿಟ್ಟು ತೋರಿಸಿ. ಮತ್ತೂ ನನ್ನ ಲೇಖನ ಹೇಗೆ ಆರಂಭವಾಗಿದೆ ನೋಡಿ (ಚಿತ್ರ ೧ ನೋಡಿ)
 

ಈಗಲೂ ಪೂರ್ಣಲೇಖನ ಓದಿ ಅಭಿಪ್ರಾಯವನ್ನು ರೂಪಿಸಿಕೊಳ್ಳುವ ಆಸಕ್ತಿಯುಳ್ಳವರು ಅದನ್ನಿಲ್ಲಿ ನೋಡಬಹುದು (ಹಿನ್ನೆಲೆಯನ್ನರಿಯದೆಯೇ ಬಡಬಡಿಸುವವರ ವಿಷಯ ಬೇರೆ):

https://nannabaraha.blogspot.com/2018/10/blog-post.html

ತಾವಾಗಲೀ, ವಿಷಯದ ಹಿನ್ನೆಲೆಯರಿಯದೇ ಕೇವಲ ತಮ್ಮ ದೊಣ್ಣೆವರಸೆಯನ್ನು ನೋಡಿಯೇ ಉಘೇ ಎನ್ನುತ್ತಿರುವ ಇತರರಾಗಲೀ ಈ ಲೇಖನವನ್ನೊಮ್ಮೆ ನೋಡಿ, ನಿಮ್ಮ ದೊಣ್ಣೆ ಬೀಸಾಟಕ್ಕೆ ಏನಾದರೂ ಅಲ್ಲಿ ಕಾರಣವಿದೆಯೇ ತೋರಿಸಿದರೆ ನಾನು ಕೃತಜ್ಞ (ಇಲ್ಲಿ ನಿಮ್ಮ ಪ್ರತಿಕ್ರಿಯೆ ಸಮರ್ಥಿಸಿಕೊಳ್ಳಲು ಹಲವರು, ಇನ್ನಾರದೋ ಬರಹಗಳನ್ನು ಹಾಕಿ "ಇದು ತಪ್ಪಲ್ಲವಾ" ಎಂದು ಕೇಳುತ್ತಿದ್ದಾರೆ, ನನ್ನ ಉತ್ತರವಿಷ್ಟೇ - ಅದು ನಾನಲ್ಲ. ನನ್ನ ತಪ್ಪಿದ್ದರೆ ಮಾತ್ರ ತೋರಿಸಿ - ಇತರರ ಮಾತು ಇತರರಿಗೆ).

ಗಮನಿಸಿ, ಮೇಲೆ ಹೇಳಿದ ಅಷ್ಟೂ ಮಾತು ನಿಮ್ಮ ವೈಯಕ್ತಿಕ ಧಾಳಿಗೆ ಪ್ರತಿಕ್ರಿಯೆಯಷ್ಟೇ ನೀವು 'ಸಾಧಾರ'ವಾಗಿ ಉತ್ತರ ನೀಡಿದ್ದಕ್ಕಲ್ಲ. ನಿಮ್ಮ ’ಆಧಾರ’ಗಳಿಗೆ ಈಗ, ಈ ಮುಂದೆ ಉತ್ತರಿಸುತ್ತೇನೆ, ದಯವಿಟ್ಟು ನೋಡಿ:

ಮೊದಲಿಗೆ ತಾವು ಸರಿಯಾಗಿಯೇ ಗಮನಿಸಿದಂತೆ ೧೫ ಮತ್ತು ೧೬ನೇ ಪಾಯಿಂಟಿನ ಕಪ್ಪುಬಿಳುಪು ಚಿತ್ರಗಳು ನನ್ನ ನೆಚ್ಚಿನ ಆಸಕ್ತಿಯವು; ಅವನ್ನು ಒಮ್ಮೆ ನೋಡಿಬಿಡೋಣ, ಏಕೆಂದರೆ ಅದೊಂದೇ ನಾನು ತಮಗೆ ನೀಡಬಹುದಾದ ಗಂಭೀರ ಉತ್ತರ. ಉಳಿದದ್ದೆಲ್ಲಾ ’ಮಝಾಕ್’ ಪಾಯಿಂಟುಗಳು, ಅವಕ್ಕೆ ’ಮಝಾಕ್’ ಉತ್ತರಗಳಷ್ಟೇ. ಇರಲಿ, ಈಗ ಪಂಪನನ್ನು ನೋಡೋಣ. ನೀವು ನೀಡಿದ ಉದಾಹರಣೆ ಇದು "ನೆಱೆದತ್ತೆತ್ತಾನುಮೀ ದಂಪತಿಯ ಬಯಕೆ ಸಂಪೂರ್ಣಮಾದತ್ತು" (... ಎತ್ತೆತ್ತಲೂ ನೆರೆಯಿತು, ಈ ದಂಪತಿಯ ಬಯಕೆ ಸಂಪೂರ್ಣವಾಯಿತು). ಇದು ತಾನೆ ತಾವು ಕೊಟ್ಟ ಪ್ರಮಾಣ? "ದಂಪತಿಯ" ಎಂಬ ಏಕವಚನವಿಭಕ್ತಿ ಬಳಸಿದ್ದಾನೆಂಬುದು ನಿಮ್ಮ ಮಾತು; ಆದರೆ ದಂಪತಿ ವಿಷಯದಲ್ಲಿ ಏಕವಚನವಿಭಕ್ತಿಯಿದ್ದರೂ ಅರ್ಥದಲ್ಲಿ ಅದು ಏಕವಚನವಲ್ಲವೇ ಅಲ್ಲ, ಬಹುವಚನ ಎಂಬುದನ್ನು ನಾನು ಈಗಾಗಲೇ ನನ್ನ ಲೇಖನದಲ್ಲಿ ಪರಿಪರಿಯಾಗಿ ವಿವರಿಸಿದ್ದೇನಲ್ಲವೇ? ನಾನು ಕೊಟ್ಟ ಉದಾಹರಣೆಗಳಲ್ಲೇ ಅದನ್ನು ನೀಡಿದ್ದೇನಲ್ಲ, "ರೈಟ್" ಮಾರ್ಕಿನೊಂದಿಗೆ - ದಂಪತಿ ಕುಣಿಯುತ್ತಿದ್ದಾರೆ, ದಂಪತಿ ಮಲಗಿದ್ದಾರೆ ಇತ್ಯಾದಿ (ಮೇಲಿನ ಚಿತ್ರವನ್ನೊಮ್ಮೆ - ಚಿತ್ರ೧ - ದಯವಿಟ್ಟು ನೋಡಿ). ದಂಪತಿಯು/ಗಳು, ದಂಪತಿಯನ್ನು/ಗಳನ್ನು, ದಂಪತಿಯಿಂದ/ಗಳಿಂದ, ದಂಪತಿಗೆ/ಗಳಿಗೆ, ದಂಪತಿಯ/ಗಳ, ದಂಪತಿಯಲ್ಲಿ/ಗಳಲ್ಲಿ - ಯಾವ ವಿಭಕ್ತಿಯನ್ನೇ ಬಳಸಿದರೂ ಅದು ಅರ್ಥದಲ್ಲಿ ಬಹುವಚನವೇ, ಅವಕ್ಕೆ ಹತ್ತುವುದು ಬಹುವಚನಕ್ರಿಯಾಪದ ಮಾತ್ರ. ಇದು ಅರ್ಥವಾಗಬೇಕಾದರೆ ಅದಕ್ಕೊಂದು ಕ್ರಿಯಾಪದವನ್ನು ಬಳಸಿ ನೋಡಿ - ದಂಪತಿ ಕುಣಿಯುತ್ತಿದೆ, ದಂಪತಿ ಮಲಗಿದೆ ಇಂಥವು ರೂಢಿಯಲ್ಲೂ ಅಸಹ್ಯ, ಕವಿಪ್ರಯೋಗದಲ್ಲಿಯೂ ಇಲ್ಲ; ಏಕವಚನದ ವಿಭಕ್ತಿಯೇ ಇದ್ದರೂ ಅದರ ಕ್ರಿಯಾಪದವು ಬಹುವಚನವೇ ಆಗಿರುತ್ತದೆ - ದಂಪತಿ/ಗಳು ಕುಣಿಯುತ್ತಿದ್ದಾರೆ ದಂಪತಿ/ಗಳು ಮಲಗಿದ್ದಾರೆ. ನಾನು ಇದನ್ನು ತಾನೇ ನನ್ನ ಲೇಖನದಲ್ಲೂ ವಿವರಿಸಿದ್ದು? ನನ್ನ ಲೇಖನವನ್ನು ಇನ್ನೊಮ್ಮೆ ನೋಡಿ. ನನಗೆ ಅಂದಾಜಿದೆ, ನಿಮ್ಮ ಸಹನೆಯನ್ನು ಪರೀಕ್ಷಿಸುವುದಿಲ್ಲ. ನಾನು ಹಾಗೆ ಹೇಳಿದ ಲೇಖನದ ಭಾಗವನ್ನು ಇಲ್ಲಿ ಚಿತ್ರರೂಪದಲ್ಲಿ ಕೊಟ್ಟಿದ್ದೇನೆ ನೋಡಿ - ಅದರಲ್ಲಿ ಪ್ರೊ. ವೆಂಕಟಾಚಲಶಾಸ್ತ್ರಿಗಳ ದರ್ಪಣವಿವರಣದಿಂದಲೂ ಉದಾಹರಣೆಗಳನ್ನು ಕೊಟ್ಟಿದ್ದೇನೆ (ಚಿತ್ರ ೨ ನೋಡಿ):

ಇಷ್ಟಾಗಿಯೂ ದಂಪತಿ ಏಕವಚನವೇ ಎಂದು ನೀವು ಸಾಧಿಸುವುದಾದರೆ ಯಾವ ಉದಾಹರಣೆ ತೋರಿಸಬೇಕು? ದಂಪತಿ ಎಂಬುದಕ್ಕೆ ಏಕವಚನದ ಕ್ರಿಯಾಪದವಿರುವ ಪ್ರಯೋಗವನ್ನು ತಾನೆ? ಎಲ್ಲಿದೆ? ನೀವು ಕೊಟ್ಟ ಪ್ರಮಾಣದಲ್ಲಂತೂ "ದಂಪತಿಯ" ಎಂಬಷ್ಟೇ ಇರುವುದು - ಅಷ್ಟರಿಂದ ಅದು ಏಕವಚನವೆಂದು ಸಿದ್ಧವಾಯಿತೇ? ಅದನ್ನು ಹೇಗೆ ಬೆಳೆಸಬಹುದು ನೋಡಿದಿರಾ? "ದಂಪತಿಯ ಬಯಕೆ ನೆರವೇರಿತು" ಎಂಬುದನ್ನು "ಅವರು ಅದರಿಂದ ಸಂತೋಷಿಸಿದರು" ಎಂದು ಬೆಳೆಸಬಹುದೇ ಹೊರತು "ಅದು ಅದರಿಂದ ಸಂತೋಷಿಸಿತು" ಎಂದು ಬೆಳೆಸಬಹುದೇ? ಪಂಪ ಹಾಗೇನಾದರೂ ಬೆಳೆಸಿದ್ದಾನೆಯೇ ಎಲ್ಲಾದರೂ? - ದಂಪತಿಗೆ ಬಂದಿತು,ಹೋಯಿತು ಇತ್ಯಾದಿ ಏಕವಚನ ನಪುಂಸಕಲಿಂಗದ ಉದಾಹರಣೆಯಿದೆಯೇ ಪಂಪನಲ್ಲಿ? (ಗೂಗಲ್ ಮಾಡಿ ನೋಡಿ, ಸಿಕ್ಕೀತೋ). ಬದಲಿಗೆ ಅನೇಕ ಕವಿಗಳಿಂದ ಬಹುವಚನದ ಉದಾಹರಣೆಗಳನ್ನು ನೀಡಿದ್ದೇವೆ, ನಾನಿಲ್ಲಿ ಪಂಪನನ್ನೂ ಸೇರಿದಂತೆ ಅಂಥವು ಇನ್ನೂ ಹಲವನ್ನು ಕೊಡುತ್ತೇನೆ ನೋಡಿ (ಚಿತ್ರ ೩)
ಎಲ್ಲೆಡೆಯೂ ಒಂದೋ ದಂಪತಿಗೆ ಬಹುವಚನವಿಭಕ್ತಿ ಸೇರಿದೆ, ಅಥವಾ ಕ್ರಿಯಾಪದವು ಬಹುವಚನವಾಗಿದೆ. ವಿವರಣೆ ಇಲ್ಲಿದೆ:

೧) ಇದು ಪಂಪನ ವಿಕ್ರಮಾರ್ಜುನವಿಜಯದ ತೃತೀಯಾಶ್ವಾಸದ ೭೫ನೆ ಪದ್ಯವಾದಮೇಲೆ ಬರುವ ವಚನ. ಇಲ್ಲಿ ಸ್ವಾರಸ್ಯವೆಂದರೆ, ದಂಪತಿ ಪದ ಎರಡು ಬಾರಿ ಬಂದಿದೆ. ಮೊದಲನೆಯದು ಪತಂಗದಂಪತಿ - "ಪತಂಗದಂಪತಿಯಂತೆ" ಎನ್ನುತ್ತಾನೆ. ಇದಕ್ಕೆ ಏಕವಚನವಿಭಕ್ತಿಯಿದೆ, ಆದರೆ ಕ್ರಿಯಾಪದದ ಸಂಸರ್ಗವಿಲ್ಲದಿರುವುದರಿಂದ ಇದನ್ನು ಏಕವಚನವೆಂದು ಸಾಧಿಸಬರುವುದಿಲ್ಲ. ಇನ್ನೊಂದು "ಆ ದಂಪತಿಗಳ್" ಇಲ್ಲಿ ನಾಮಪದಕ್ಕೇ ಬಹುವಚನವಿಭಕ್ತಿಯಿರುವುದರಿಂದ ಅದು ನಿಸ್ಸಂದೇಹವಾಗಿ ಬಹುವಚನ - ಇಲ್ಲಿ ಏಕವಚನವಿಲ್ಲ.

೨) ಪಂಪನಿಂದಲೇ ಇನ್ನೊಂದು ಪದ್ಯ - ವಿಕ್ರಮಾರ್ಜುನದ ಪಂಚಮಾಶ್ವಾಸದ ೮೦ನೆಯ ಪದ್ಯ - "ನಿಳಿಂಪದಂಪತಿಗಳಿಂದ" ಎಂದು ಸ್ಪಷ್ಟವಾಗಿಯೇ ಬಹುವಚನವಿದೆ - ಏಕವಚನವಿಲ್ಲ

೩) ರನ್ನನ ಅಜಿತತೀರ್ಥಕರಪುರಾಣದ ದ್ವಿತೀಯಾಶ್ವಾಸದ ೧೪ನೆಯ ಪದ್ಯ - "ಅಂತಿರ್ಪುವು ಅಗಲದೆ ಆ ವನಲತೆಯ ಜೊಂಪದೊಳ್ ದಂಪತಿಗಳ್" ಎಂಬುದು ಪ್ರಯೋಗ. ಇಲ್ಲಿ ಹಲವು ಜೋಡಿಗಳಿರುವುದರಿಂದ ಸಹಜವಾಗಿಯೇ ಬಹುವಚನ, ವಿವಾದವಿಲ್ಲ - ಆದರೆ ಏಕವಚನಪ್ರಯೋಗ ಇಲ್ಲೂ ಕಾಣಲಿಲ್ಲ

೪ ಮತ್ತು ೫) ಇವು ಕ್ರಮವಾಗಿ ಲಕ್ಷ್ಮೀಶನ ಜೈಮಿನಿ ಭಾರತ (೩೧ನೆಯ ಸಂಧಿ - ೨೩ನೆಯ ಪದ್ಯ) ಮತ್ತು ಕುಮಾರವ್ಯಾಸನ ವಿರಾಟಪರ್ವದ ೧೦ನೆಯ ಸಂಧಿಯ ೮೧ನೆಯ ಪದ್ಯ). ಎರಡರಲ್ಲೂ ಇರುವುದು ಒಂದು ದಂಪತಿಯ ಜೋಡಿ, ಆದರೆ ಬಹುವಚನದ ಬಳಕೆ "ದಂಪತಿಗಳೊಪ್ಪಿದರ್" ಮತ್ತು "ಮೆರೆದರು ದಂಪತಿವರರು"- ಏಕವಚನವಿಲ್ಲ:

೬) ಇದು ನಮ್ಮದೇ ಕಾಲದ ಮಹಾಕವಿ, ರಾಷ್ಟ್ರಕವಿ ಕುವೆಂಪು ಅವರ "ಭೈರ" ಪದ್ಯದಿಂದ. ಭೈರನು ಹುಟ್ಟಿದಾಗ ಆತನ ತಾಯ್ತಂದೆಗಳ ಸಂತಸವನ್ನು ವರ್ಣಿಸುವ, ಭೈರನ ಬೆಳವಣಿಗೆಯನ್ನು ವರ್ಣಿಸುವ ಭಾಗ. "ದಂಪತಿಗಳುಲ್ಲಸದಿ ಹಿಗ್ಗಿದರು" ಇಲ್ಲಿ ಹಲವು ದಂಪತಿಗಳಿಲ್ಲ, ಇರುವುದು ಒಂದೇ ಜೋಡಿ, ಆದರೆ ಉಪಯೋಗಿಸಿದ್ದು ಬಹುವಚನ.

೭) ಗದ್ಯದಿಂದಲೂ ಒಂದು ಉದಾಹರಣೆಯಿರಲಿ. ಇದು ಕನ್ನಡದ ಆಚಾರ್ಯಪುರುಷರಲ್ಲೊಬ್ಬರಾದ ಸೇಡಿಯಾಪು ಕೃಷ್ಣಭಟ್ಟರ "ಸೇಡಿಯಾಪು ವಿಚಾರಪ್ರಪಂಚ"ದ ಒಂದು ಲೇಖನ. ಅಂದಹಾಗೆ ಸೇಡಿಯಾಪು ಬಹುದೊಡ್ಡ ಪಂಡಿತರೆಂದು ಬೇರೆ ಹೇಳಬೇಕಿಲ್ಲವಲ್ಲ. ಅವರನ್ನು ಪಂಡಿತಪರಮೇಷ್ಠಿ ಎಂದು ಕೊಂಡಾಡಿದವರು ಬೇರಾರೂ ಅಲ್ಲ, ಶತಾವಧಾನಿ ಶ್ರೀ ಆರ್ ಗಣೇಶರು (ಅವರೂ ಪಂಡಿತರೇ!)

ಹೀಗೆ ದಂಪತಿ ಬಹುವಚನಶಬ್ದವೆಂಬುದಕ್ಕೆ ದಂಡಿಯಾಗಿ ಉದಾಹರಣೆಗಳನ್ನು ಕೊಡುತ್ತಲೇ ಹೋಗಬಹುದು (ಗೂಗಲ್ ನೆರವು ಬೇಕಿಲ್ಲ), ಆದರೆ ನಿಮಗೆ ಬೇಕಾದ ಆಕರಗಳ ಪರಿ ಅದಲ್ಲ ಎಂಬುದು ಸ್ಪಷ್ಟವಾಗಿದೆಯಲ್ಲ, ಆಗಲಿ, ನಿಮ್ಮ 'ಟೈಪ್'ನ ಆಕರಗಳನ್ನೇ ಮುಂದೆ ಕೊಡುವುದಾಗಲಿ. ಅದಕ್ಕೆ ಮೊದಲು ನೀವು ತೋರಿದ ಇತರ ಪಾಯಿಂಟುಗಳನ್ನು ಮೊದಲು ಉತ್ತರಿಸಿಬಿಡುತ್ತೇನೆ:

ಪಾಯಿಂಟ್ ೧)
"ಡಾ. ಶಾಲಿನಿ ರಜನೀಶ್ ನಿಮಗೆ ಗೊತ್ತೇ ಇದ್ದಾರೆ" - ಇಲ್ಲ ಸಾರ್, ಅವರು ಯಾರೋ ನನಗೆ ಗೊತ್ತಿಲ್ಲ, ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಅವರ ಸಾಧನೆಗೆ ನನ್ನ ನಮನ, ಆದರೆ ಭಾಷೆಯ ವಿಷಯದಲ್ಲಿ ನಾಗವರ್ಮ-ಕೇಶಿರಾಜನಿಂದ ಹಿಡಿದು ಸೇಡಿಯಾಪು-ವೆಂಕಟಾಚಲಶಾಸ್ತ್ರಿಗಳವರೆಗಿನ ವಿದ್ವಾಂಸರಿಗಿಂತ ಅವರು ಹೇಗೆ ಹೆಚ್ಚಿನ ಪ್ರಮಾಣವಾದರೋ ತಿಳಿಯುವ ಉತ್ಸುಕತೆಯಿದೆ. ತಿಳಿಸಿದರೆ, ಅರಿತು ತಿದ್ದಿಕೊಳ್ಳುತ್ತೇನೆ.

೨ ರಿಂದ ೧೩)
ತಪ್ಪು ಕನ್ನಡ ಬಳಸಿ ಕನ್ನಡವನ್ನು ಕೊಲ್ಲುತ್ತಿವೆ ಎಂದು ತಾವೇ ದಿನಬೆಳಗಾದರೆ ಜಾಡಿಸುತ್ತಿದ್ದ ಕನ್ನಡ ಪತ್ರಿಕೆಗಳೇ ಇವತ್ತು ತಮ್ಮ ವಾದಕ್ಕೆ ಪ್ರಮಾಣವಾಗಬೇಕಾಗಿ ಬಂದದ್ದು ಮಾತ್ರ ಚೋದ್ಯವೇ ಸರಿ. ಇದಕ್ಕೂ ಮೇಲಿನ ಪ್ರಶ್ನೆಯೇ ಸಲ್ಲುತ್ತದೆ - ಭಾಷೆಯ ವಿಷಯದಲ್ಲಿ ನಾಗವರ್ಮ-ಕೇಶಿರಾಜನಿಂದ ಹಿಡಿದು ಸೇಡಿಯಾಪು-ವೆಂಕಟಾಚಲಶಾಸ್ತ್ರಿಗಳವರೆಗಿನ ವಿದ್ವಾಂಸರಿಗಿಂತ, ಭಾಷೆಯನ್ನು ಚಪ್ಪಲಿ ಸ್ಟ್ಯಾಂಡಿನಂತೆ ಬಳಸಿ ಕುಲಗೆಡಿಸುವ ಪತ್ರಿಕೆಗಳು ಹೇಗೆ ಹೆಚ್ಚಿನ ಪ್ರಮಾಣವಾದವೋ ದಯವಿಟ್ಟು ತಿಳಿಸಿಕೊಡಬೇಕು, ಅದರಲ್ಲೂ ನ್ಯೂಸಿಗೇ ಪ್ರಮಾಣವಾಗದ ಬಷೀರರ ವಾರ್ತಾಭಾರತಿ ತಮಗೆ ಭಾಷೆಗೆ ಪ್ರಮಾಣವಾಗಿಬಿಟ್ಟಿತು :o

ಅಂದಹಾಗೆ, "ದಂಪತಿಗಳು" ಕುರಿತಾದ ನಿಮ್ಮ ಆಕ್ಷೇಪ ಆರಂಭವಾಗುವುದೇ "ಕನ್ನಡದ ದೊಡ್ಡ ಪತ್ರಿಕೆಗಳಲ್ಲಿ ಪ್ರಕಟವಾದ" ಸುದ್ದಿ ಶೀರ್ಷಿಕೆಗಳಲ್ಲಿ ಕಂಡುಬಂದ ದಂಪತಿಗಳು ಎಂಬ ಬಹುವಚನದ ಉದಾಹರಣೆಗಳೊಂದಿಗೆ. ಯಾವ ಆಕರಗಳಲ್ಲಿ 'ತಪ್ಪು' ಪ್ರಕಟವಾಗಲು ಸಾಧ್ಯವೋ ಅವೇ ಆಕರಗಳನ್ನು ’ಸರಿ’ಗೂ ಪ್ರಮಾಣವೆಂದರೆ ಅದು ಯಾವ ಸೀಮೆಯ ಪ್ರಮಾಣ?

ಪಾಯಿಂಟ್ ೧೪)
ಎಲ್ಲಕ್ಕಿಂತ ಗಮ್ಮತ್ತಿನದ್ದು ಎಂದರೆ ತಾವು ನೀಡಿರುವ ಈ ಆಧಾರ. "ಸ್ವಯಮೇವಪ್ರಮಾಣಃ" ಎಂಬ ಪ್ರತೀತಿ ವೇದಗಳ ವಿಷಯದಲ್ಲಿ ಮಾತ್ರ ಇದೆಯೆಂದಿದ್ದೆ, ಈಗ ತಮ್ಮ ಪ್ರಯೋಗಕ್ಕೆ ತಮ್ಮದೇ ತಿಳಿರುತೋರಣದ ಪ್ರಮಾಣ ನೀಡಿದ್ದು ನೋಡಿ, ತಮ್ಮ ವಾಕ್ಯವೂ ವೇದವಾಕ್ಯದಂತೆ ಸ್ವಯಮೇವಪ್ರಮಾಣವಾದದ್ದು ಎಂದು ತಿಳಿಯಿತು. ಹದಿನೇಳನೆಯ ಶತಮಾನದ ಲಾಕ್ಷಣಿಕನಾದ ಪಂಡಿತರಾಜ ಜಗನ್ನಾಥಪಂಡಿತನು ತನ್ನ ಗ್ರಂಥಗಳಲ್ಲಿ ಪ್ರವಚನಗಳಲ್ಲಿ ಬೇರಾರ ಉದಾಹರಣೆಗಳನ್ನೂ ಕೊಡದೇ ತನ್ನದೇ ಕಾವ್ಯದಿಂದ ಉದಾಹರಣೆಗಳನ್ನು ಕೊಡುತ್ತಿದ್ದನಂತೆ - ಅವನ ವಿದ್ವತ್ತು ಅಂಥದ್ದು ಬಿಡಿ. ಇದೀಗ ಅಭಿನವಜಗನ್ನಾಥಪಂಡಿತನನ್ನು ನೋಡಿದಷ್ಟು ಸಂತಸವಾಯಿತು.

ಹೋಗಲಿ, ಪಂಪನಲ್ಲಂತೂ ಕಾಣಲಿಲ್ಲ, ನೀವು ಹುಡುಹುಡುಕಿ ದೈನಿಕಗಳಿಂದ, ಟ್ಯಾಬ್ಲಾಯ್ಡುಗಳಿಂದ, ಅರೆ-ಅಶ್ಲೀಲ ಪೋರ್ಟಲುಗಳಿಂದ ಕೊಟ್ಟಿರುವ ಉದಾಹರಣೆಗಳಲ್ಲಾದರೂ, ಒಂದಾದರೂ ಏಕವಚನಕ್ರಿಯಾಪದದ ಬಳಕೆಯಿರುವ ವಾಕ್ಯವಿದೆಯೇ? ಇಲ್ಲವೆಂದ ಮೇಲೆ ಅದು ನನ್ನ ಪ್ರಶ್ನೆಗೆ ಉತ್ತರ ಹೇಗಾಗುತ್ತದೆ ಸಾರ್? ಮೊದಲಿಗೆ, ಆಯ್ದುಕೊಂಡ ಆಕರವೇ ಮೂರು ಕಾಸಿನದ್ದು. ಅದರಿಂದ ಕೊಟ್ಟಿರುವ ಪ್ರಮಾಣವಂತೂ ಪ್ರಶ್ನೆಗೆ ಸಂಬಂಧವೇ ಇಲ್ಲದ್ದು. ಒಂದೊಂದು ಪ್ರಮಾಣಕ್ಕೂ "ಅವರು ಐ ಎ ಎಸ್ ದಂಪತಿಗಳು" "ಇದು ವಿಶ್ವಾಸಾರ್ಹ ದಿನಪತ್ರಿಕೆ" "ಅದು ಕರಾವಳಿಯ ಹೆಮ್ಮೆ" "ಇಲ್ಲಿ ನೆಚ್ಚಿನ ನಾಯಕ ಮೋದಿಯವರ ಚಿತ್ರಗಳಿವೆ" ಎಂಬ ಭೋಪರಾಕುಗಳು ಧಾರಾಳ. ಪರಾಕುಗಳೇ ಪ್ರಮಾಣವಾಗತೊಡಗಿದ್ದು ಎಂದಿನಿಂದ?

ಇರಲಿ, ಆದರೆ ಒಂದು ವಿಷಯಕ್ಕೆ ತಮಗೆ ಧನ್ಯವಾದ ಸಲ್ಲಿಸಲೇ ಬೇಕು. ಅದೆಂದರೆ ಗೂಗಲ್ ಸರ್ಚ್ ಮಾಡಲು ತಾವು ಕೊಟ್ಟ ಸಲಹೆ. ಮೇಲೆ ನಾನು ನೀಡಿದ ಪಿಂಡದ ಪಂಡಿತರ ಉದಾಹರಣೆಗಳ ಬದಲು ನಿಮಗೆ ಒಪ್ಪಿಗೆಯಾಗುವ ಆಕರಗಳಿಂದಲೇ ಆಧಾರ ಸಂಗ್ರಹಿಸಲು ಗೂಗಲ್ ಸರ್ಚ್ ನಿಜಕ್ಕೂ ಸಹಕಾರಿಯಾಯಿತು. ಇದೋ, ದಂಪತಿ ಏಕವಚನವಲ್ಲ, ಬಹುವಚನ ಎನ್ನುವುದಕ್ಕೆ, ತಾವು ಸೂಚಿಸಿದ ಆಕರಗಳಿಂದಲೇ ಆಧಾರಗಳನ್ನು ಹೆಕ್ಕಿ ತೆಗೆದಿದ್ದೇನೆ. ತಾವು ಹೇಳಿದಂತೆ ಚಿತ್ರಗಳ ಸಂಪುಟ ಮಾಡುವಷ್ಟು ವ್ಯವಧಾನವಿರಲಿಲ್ಲ. ಅದಕ್ಕೇ ಎಲ್ಲವನ್ನೂ ಒಂದೇ ಫ್ರೇಮಿನಲ್ಲಿ ಅಳವಡಿಸಿದ್ದೇನೆ (ಚಿತ್ರ ೪ ನೋಡಿ). 
ಇದರಲ್ಲಿ ನಿಮ್ಮ "ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ ‘ಪ್ರಜಾವಾಣಿ’" ಇದೆ, "ಕರಾವಳಿಯ ಹೆಮ್ಮೆಯೆನಿಸಿದ, ಕನ್ನಡದ ಅತ್ಯಂತ ಸುಂದರ ದೈನಿಕ, ‘ಉದಯವಾಣಿ’" ಇದೆ, ಒನ್ ಇಂಡಿಯಾ ಪತ್ರಿಕೆಯಿದೆ, ಅದರಲ್ಲಿ ನಮ್ಮನಿಮ್ಮೆಲ್ಲರ ಅಚ್ಚುಮೆಚ್ಚಿನ ಜನನಾಯಕರಾದ ಮೋದಿಯೊಬ್ಬರೇ ಏಕೆ ಅಮಿತ್ ಶಾ ಇದ್ದಾರೆ, ಬಂಗಾಳದ ದೀದಿ ಇದ್ದಾರೆ, ಜೊತೆಗೆ ರಾಹುಲ್ ಗಾಂಧಿ ಕೂಡ - if that can be any proof; ಜೊತೆಗೆ ವಿಜಯವಾಣಿಯಲ್ಲಿ ಡಾ. ಕೆ ಎಸ್ ನಾರಾಯಣಾಚಾರ್ಯರ ಲೇಖನವೂ ಇದೆ (ಅಂದಹಾಗೆ ಇವರೂ ಪಂಡಿತರೇ); ಅಷ್ಟೇಕೆ, ಭಾಷಾಪ್ರಶ್ನೆಗಳಿಗೆ ಅಂತಿಮಪರಿಹಾರವೆನಿಸಬಲ್ಲ, ತಾವೇ ಕೋಟ್ ಮಾಡಿದ ಬಶೀರರ ವಾರ್ತಾಭಾರತಿಯೂ ಇಲ್ಲಿದೆ, ಇವರೆಲ್ಲರೂ ದಂಪತಿಗಳು ಎಂಬ ಬಹುವಚನ ಬಳಸಿದ್ದಲ್ಲದೇ ಕ್ರಿಯಾಪದದಲ್ಲಿ ಸ್ಪಷ್ಟವಾಗಿ ಬಹುವಚನ ಬಳಸಿದ್ದಾರೆ.

ಹೀಗೆ ತಾವೇ ವಿರೋಧಿಸುತ್ತಿದ್ದ ಪತ್ರಿಕೆಗಳೇ ಈಗ ಭಾಷಾಶುದ್ಧತೆಗೆ ಪ್ರಮಾಣವಾಗಬಹುದಾದರೆ, ಅದೇ ವರಸೆಯಲ್ಲಿ ಜಾಲತಾಣಗಳೂ ಏಕೆ ಪ್ರಮಾಣವಾಗಬಾರದೆನ್ನಿಸಿತು. ಹುಡುಕಿ ನೋಡಿದರೆ, ಫೇಸ್ಬುಕ್, ಯೂಟ್ಯೂಬ್, ವಿಕಿಪೀಡಿಯಾ, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಎಲ್ಲೆಡೆಯೂ ದಂಪತಿ’ಗಳು’ ರಾರಾಜಿಸುತ್ತಿದ್ದಾರೆ!! ಕೊನೆಗೆ ಒಂದು ಗೋಡೆ ಪೋಸ್ಟರು ಕೂಡ ಪ್ರಮಾಣವಾಗಿ ಸಿಕ್ಕಿಬಿಟ್ಟಿತು. ಅದನ್ನೂ ಇಲ್ಲಿ ಹಾಕಿದ್ದೇನೆ ನೋಡಿ (ಚಿತ್ರ ೫). ಪಂಡಿತಪರಮೇಷ್ಠಿಗಳಿಗೆಲ್ಲಾ ಪಿಂಡಪ್ರದಾನ ಮಾಡಿಬಿಟ್ಟಿರುವುದರಿಂದ ಬಹುಶಃ ಇನ್ನು ಮುಂದೆ ಇವೇ ತಾನೆ ಆಧಾರಗಳು :o 


ಇರಲಿ ಬಿಡಿ, ಬೂಸಿ ಪೋರ್ಟಲುಗಳ ಜೊತೆ ಕುಳಿತು ಬೇಸನ್ ಲಾಡು ತಿನ್ನುವುದಕ್ಕಿಂತ ಪಂಡಿತರ ಜೊತೆ ಕುಳಿತು ಪಿಂಡ ಸ್ವೀಕರಿಸುವುದೇ ಶ್ರೇಯಸ್ಕರವೆನಿಸುತ್ತದೆ ನನಗೆ. ಆದ್ದರಿಂದಲೇ ಅದನ್ನು ಸಂತೋಷದಿಂದ ಸ್ವೀಕರಿಸಿ, ಈಗ ತುಂಬಿದ ಮನದಿಂದ (ತುಂಬಿದ ಹೊಟ್ಟೆಯಿಂದಲೂ) ಹಾರೈಸುತ್ತಿದ್ದೇನೆ, ತಮಗೆ ಸದ್ಗತಿ ದೊರೆಯಲಿ.

ಅಂದ ಹಾಗೆ ಒಂದು ವಿಷಯ, ಮೇಲೆ ನನ್ನ ಪಾಯಿಂಟ್ ಬೈ ಪಾಯಿಂಟ್ ಉತ್ತರದಲ್ಲೇ ಬರಬೇಕಿತ್ತು ಬಿಟ್ಟುಹೋಯಿತು. ನೀವು ಹದಿಮೂರನೆಯ ಪಾಯಿಂಟಿನಲ್ಲಿ ಕೊಟ್ಟ ಬೋಲ್ಡ್ ಸ್ಕೈ ಕನ್ನಡ ಎಂಬುದನ್ನು ಹುಡುಕಿದಾಗ ಅದು ನನ್ನನ್ನು kannada. boldsky . com ಎಂಬ ಜಾಲತಾಣಕ್ಕೆ ಕೊಂಡೊಯ್ದಿತು. ನೀವು "ದಂಪತಿ" ಹುಡುಕಿದಂತೆ ನಾನೂ "ದಂಪತಿಗಳು" ಶಬ್ದಕ್ಕಾಗಿ ಹುಡುಕಿದೆ ( https://kannada.boldsky.com/search/results.html?q=ದಂಪತಿಗಳು ), ಬಂದದ್ದನ್ನು ದಿನಾಂಕಕ್ರಮದಲ್ಲಿ ಸಾರ್ಟ್ ಮಾಡಿದೆ. ಬಂದ ರಿಸಲ್ಟನ್ನು ಕಂಡು ದಿಗ್ಭ್ರಾಂತನಾದೆ (ಚಿತ್ರ ೬). ಹಲವು ಮಂದಿ ಸದ್ಗೃಹಸ್ಥ-ಗೃಹಿಣಿಯರು ಸಂಭಾವಿತರು ಓದುತ್ತಿರಬಹುದಾದ ಈ ಚರ್ಚೆಯಲ್ಲಿ ಅದನ್ನು ’ಬೋಲ್ಡ್’ ಆಗಿ ಹಂಚಿಕೊಳ್ಳಲು ಹೇಸುತ್ತೇನೆ. 


ಕೊನೆಯದಾಗಿ ಒಂದು ಮಾತು - ಸಾರಾಂಶಕ್ಕಾಗಿ ಹಾಗೂ ವಿಷಯಸ್ಪಷ್ಟನೆಗಾಗಿ. ನಿಮ್ಮ ವಿವರಣೆ ತಪ್ಪಾಗಿ ಕಂಡುದರಿಂದ ಅದು ಹೇಗೆ ತಪ್ಪೆಂದು ಆಧಾರಸಹಿತ ವಿವರಣೆ ನೀಡಿದೆನೇ ವಿನಾ ಮೊದಲಲ್ಲಿ ನಿಮ್ಮನ್ನು ವೈಯಕ್ತಿಕವಾಗಿ ಎಲ್ಲಿಯೂ ಟೀಕಿಸಿಲ್ಲ, ವ್ಯಂಗ್ಯವಿರಬಹುದು, ಆದರೆ ಅದು ಯಾವತ್ತೂ ವೈಯಕ್ತಿಕ ಮಟ್ಟ ಮುಟ್ಟಿದ್ದಿಲ್ಲ (ಅಂಥದ್ದೊಂದು ನನ್ನ ಕಡೆಯಿಂದ ಇದ್ದರೆ ತೋರಿಸಬಹುದೆಂದು ಈಗಾಗಲೇ ಹೇಳಿದ್ದೇನೆ - ಬೇರೆಯವರದ್ದಕ್ಕೆ ನಾನು ಹೊಣೆಯಲ್ಲ); ನನ್ನ ವಿವರಣೆಯನ್ನು ತಾವು ಕಂಡೂ ಕಾಣದಂತೆ ಸುಮ್ಮನಿದ್ದುದರಿಂದ ಮುಂದಿನ ಹಂತದಲ್ಲಿ ಸ್ಪಷ್ಟನೆ/ಚರ್ಚೆ ಬೇಡಿದೆನಷ್ಟೇ - ಶೈಕ್ಷಣಿಕ ವಿಷಯದಲ್ಲಿ ಅದು ಸಾಮಾನ್ಯ - ಅದು ನೀವು ಬಿಂಬಿಸಿದಂತೆ ನಿಮ್ಮ ಕಲಿಕೆ ಅಭಿಯಾನದ ಟೀಕೆಯಾಗಲೀ ಹೊಟ್ಟೆಯುರಿಯಾಗಲೀ ಮತ್ತೊಂದಾಗಲೀ ಅಲ್ಲ. ನನ್ನ ಪ್ರಶ್ನೆಗೆ ತಮ್ಮಿಂದ ಉತ್ತರ ಬರದಿದ್ದುದರಿಂದ ಅದೇ ಲೇಖನವನ್ನು ಬರೆದು ನನ್ನ ಗೋಡೆಯ ಮೇಲೆ ಪ್ರಕಟಿಸಿ ಸುಮ್ಮನಾದೆನಷ್ಟೇ - ಅದರಲ್ಲೂ ಎಲ್ಲಿಯೂ ವೈಯಕ್ತಿಕ ಟೀಕೆಯಿರಲಿಲ್ಲ, ಮತ್ತು ಹೇಗಿದ್ದರೂ ಉತ್ತರಿಸಲು ನೀವು ಆಸಕ್ತಿ ತೋರದಿದ್ದುದರಿಂದ ನಿಮ್ಮನ್ನು ನನ್ನ ಲೇಖನದಲ್ಲಿ ಟ್ಯಾಗ್ ಮಾಡುವ ಗೋಜಿಗೂ ಹೋಗಲಿಲ್ಲ. ತಾವದನ್ನು ಅಲ್ಲಿಗೆ ಬಿಟ್ಟಿದ್ದರಾಗಿತ್ತು - ನಾನಂತೂ ಬಿಟ್ಟು ಸುಮ್ಮನಿದ್ದೆ. ನನ್ನ ಲೇಖನಕ್ಕೆ ಕಾಮೆಂಟ್ ಮಾಡಿದ ಹಲವರು ನಿಮ್ಮನ್ನು ಕುರಿತು ವ್ಯಂಗ್ಯವಾಡಿರಬಹುದು, ಅದಕ್ಕೆ ನಾನು ಹೇಗೆ ಹೊಣೆಗಾರನಾದೇನು? ಅಂಥವು ನಿಮ್ಮ ಈ ಲೇಖನದಡಿಯೂ ಬಹಳಷ್ಟಿವೆ, ಅದಕ್ಕೆ ನಾನು ನಿಮ್ಮನ್ನುಹೊಣೆ ಮಾಡಿದರೆ ಹಾಸ್ಯಾಸ್ಪದವಷ್ಟೇ. ಕೊನೆಗೆ ಓದುಗರೊಬ್ಬರು ನಿಮ್ಮನ್ನು ಟ್ಯಾಗ್ ಮಾಡಿದಾಗ "ಎಲ್ಲರಿಗೂ ಒಮ್ಮೆಗೇ ಉತ್ತರಿಸಿದರಾಯಿತು" ಎಂಬ ಅಹಂಕಾರದ ಮಾತು ನಿಮ್ಮಿಂದ ಬಂತು (ಮತ್ತೆ, ಅದುವರೆಗೂ ನಾನು, I repeat ನಾನು, ನಿಮ್ಮ ಬಗ್ಗೆ ಎಲ್ಲಿಯಾದರೂ ಅಹಂಕಾರದ/ಭರ್ತ್ಸನೆಯ/ಕಟಕಿಯ ಮಾತಾಡಿದ್ದರೆ ತೋರಿಸಿ). ನಿಮ್ಮಿಂದ ಆ ಮಾತು ಬಂದಾಗ **ಮೊದಲ ಬಾರಿಗೆ** ತುಸು ವ್ಯಂಗ್ಯದಿಂದ ಉತ್ತರಿಸಿದ್ದು ನಿಜ - "ಇನ್ನು ಕಾಯುವ ಅಗತ್ಯವಿಲ್ಲ, ಇನ್ನು ಎದ್ದು ಬರುವವರು ಯಾರೂ ಇಲ್ಲ, ನೀವು ಉತ್ತರಿಸಬಹುದು" ಇದು ಸ್ವಲ್ಪಮಟ್ಟಿಗಿನ ವ್ಯಂಗ್ಯವಿದ್ದೀತು - ಕೇವಲ ವ್ಯಾಕರಣದ ಸರಿ-ತಪ್ಪಿನ ಪ್ರಶ್ನೆಯೆತ್ತಿದ್ದಕ್ಕೇ ಒರಟುತನದ ದುರಹಂಕಾರದ ಪ್ರತಿಕ್ರಿಯೆ ನಿಮ್ಮಿಂದ ಬರಬಹುದಾದರೆ, ತಮ್ಮ ದುರಹಂಕಾರದ ಪ್ರತಿಕ್ರಿಯೆಗೆ ಇಷ್ಟುಮಟ್ಟಿನ ವ್ಯಂಗ್ಯವಾದರೂ ಹೆಚ್ಚಲ್ಲವೆಂದು ನಾನು ಭಾವಿಸಿದರೆ ತಪ್ಪಲ್ಲವಲ್ಲ. ಆದರೆ ಅದಕ್ಕೆ ಪ್ರತಿಕ್ರಿಯೆಯಾಗಿ ತಾವು ಇಡೀ ಪಂಡಿತವರ್ಗದ 'ಸಮಾರಾಧನೆ'ಯನ್ನೇ ಮಾಡಿಬಿಟ್ಟಿರಿ :o

ಮರ್ಮಾಘಾತವಾಗುವುದು ಸಹಜವೇ (ಈಗ ಚೇತರಿಸಿಕೊಂಡಿದ್ದೇನೆ) - ಮರ್ಮಾಘಾತ ನಿಮ್ಮ ಮಾತಿನ ಜೋರಿನಿಂದಾಗಲೀ ನಿಮ್ಮ ಸಮಾರಾಧನೆಯಿಂದಾಗಲೀ ಅಲ್ಲ, ಬೇರೆಯದೇ ಕಾರಣಕ್ಕೆ - ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕಿಳಿಯಬಹುದು ಎಂಬುದರಿಂದ ಉಂಟಾದ ದಿಗ್ಭ್ರಾಂತಿ ಅದು! ನಾವೆಲ್ಲರೂ ಬಹುವಾಗಿ ಪ್ರೀತಿಸುವ ಗೌರವಿಸುವ ಮಹಾವಿದ್ವಾಂಸರೊಬ್ಬರು (ನೀವು ಹೋಲ್ ಸೇಲಾಗಿ ಪಂಡಿತರೆಲ್ಲರಿಗೂ ಪಿಂಡ ಹಾಕಿಬಿಟ್ಟಿರುವುದರಿಂದ ವಿನಾಕಾರಣ ಆ ಮಹನೀಯರ ಹೆಸರನ್ನು ಎಳೆತಂದು ಪಿಂಡಪಂಕ್ತಿಯಲ್ಲಿ ಕೂರಿಸಲಾರೆ) ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತಾರೆ. ಎದುರಾಳಿ ಜಟ್ಟಿಯು, ದಟ್ಟಿಚಲ್ಲಣಗಳನ್ನು ತೊಟ್ಟು ಬಂದರೆ, ಸೋಲೋ ಗೆಲುವೋ ಹೆಗಲೆಣೆಯಾಗಿ ನಿಂತು ಕುಸ್ತಿಯನ್ನಾದರೂ ಮಾಡಬಹುದು; ಅವನು ಅದನ್ನೂ ಬಿಚ್ಚಿ ಬಂದರೆ... !

ನಮಸ್ಕಾರ

========
ಟಿಪ್ಪಣಿ:
========
ಮೇಲ್ಕಂಡ ಲೇಖನ ಮತ್ತು ಅಲ್ಲೇ ಕಾಣಿಸಿದ ಮತ್ತೊಂದೆರಡು ಲೇಖನಗಳು ಇಡೀ ಚರ್ಚೆಯ ಕೇವಲ ಒಂದೆರಡು ಭಾಗಗಳಷ್ಟೇ.  ಆದರೆ ದಂಪತಿ ಶಬ್ದದ ವ್ಯಾಕರಣವಿಚಾರದ ಬಗ್ಗೆ ಫೇಸ್ಬುಕ್ ಮತ್ತು ಕೆಲವು ಬ್ಲಾಗುಗಳಲ್ಲಿ ಬಹುವಿಸ್ತಾರವಾದ ಚರ್ಚೆಯೇ ನಡೆಯಿತು. ಶ್ರೀ ಶ್ರೀವತ್ಸಜೋಶಿಯವರಿಂದ ಮೊದಲುಗೊಂಡು ನನ್ನನ್ನೂ ಒಳಗೊಂಡು ವಿದ್ವನ್ಮಿತ್ರರಾದ ಶ್ರೀ Mahesh Bhat, ಶ್ರೀ ಗಣೇಶ ಕೊಪ್ಪಲತೋಟ, ಶ್ರೀ Ajakkala Girisha Bhat, ಶ್ರೀ Sharath Bhat Seraje ಮೊದಲಾದ ಹಲವು ವಿದ್ವಾಂಸರು ಭಾಗವಹಿಸಿದ್ದ ಈ ಚರ್ಚೆಯಲ್ಲಿ, ಕೆಲವು ವೈಯಕ್ತಿಕ ಚಕಮಕಿಗಳಾಚೆಗೂ ಅನೇಕ ವ್ಯಾಕರಣ-ಪ್ರಯೋಗವಿಷಯಗಳು, ಹಲವು ಭಾಷಾಸೂಕ್ಷ್ಮಗಳು ಹೊರಬಂದುವು; ಜೊತೆಗೆ ಹಿರಿಯವಿದ್ವಾಂಸರಾದ ಶತಾವಧಾನಿ ಶ್ರೀ ಆರ್ ಗಣೇಶರ ಅಮೂಲ್ಯವಾದ ಅಭಿಪ್ರಾಯವೂ ಮೂಡಿಬಂತು.

ಅಂತೆಯೇ, "ಕೇವಲ ಮೂರಕ್ಷರದ ಪದದ ಮೇಲೆ ಇಷ್ಟು ದೊಡ್ಡ ಚರ್ಚೆಯೇ? ಸಮಯವ್ಯರ್ಥ" ಎಂಬ 'ಅಕ್ಷರಲಕ್ಷ'ದ ಅಭಿಪ್ರಾಯದಿಂದ ಹಿಡಿದು "ಪಂಡಿತರಿಗೆ ಬೇರೆ ಕೆಲಸವಿಲ್ಲ", "ಒಣಪಾಂಡಿತ್ಯ", "ಅಜ್ಞಾನ-ಅರೆಜ್ಞಾನ", "ಬುದ್ಧಿಜೀವಿ vs ವಿದ್ವಜ್ಜೀವಿ" ಮೊದಲಾದ ನಿಸ್ಸಹಾಯಕ ನಿಸ್ಸಾರವ್ಯಾಖ್ಯಾನಗಳನ್ನೊಳಗೊಂಡಂತೆ, "ದಂಪತಿಗಳು ತಬ್ಬಿ ಮಲಗುವ ಹೊತ್ತಿನಲ್ಲಿ ದಂಪತಿ ಶಬ್ದದ ವ್ಯಾಕರಣವನ್ನು ಚಿಂತಿಸುತ್ತಿದ್ದರೆ ಹೆಂಡತಿ ಅಪಾರ್ಥಮಾಡಿಕೊಳ್ಳಳೇ" ಎಂಬರ್ಥದ ಚಟಾಕಿಗಳವರೆಗೆ ಹಲವು ಕುಶಾಲುತೋಪುಗಳೂ ಹಾರಾಡಿದುವು.

ಅದೇನೇ ಇರಲಿ, ಇಡೀ ಚರ್ಚೆ ಸ್ವಾರಸ್ಯಕರವೂ, ರಸಪೂರ್ಣವೂ, ಬೋಧಪ್ರದವೂ ಆಗಿದ್ದು, ವಿದ್ವಚ್ಚಿಂತನೆಯ ಹಲವು ಧಾರೆಗಳ ಪರಿಚಯ ಇದರಿಂದಾಗುತ್ತದೆಂಬುದರಲ್ಲಿ ಸಂಶಯವೇ ಇಲ್ಲ.  ಫೇಸ್ಬುಕ್ಕಿನ ಲೋಡುಗಟ್ಟಲೆ ಪೋಸ್ಟು ಕಾಮೆಂಟುಗಳ ಹೋರಿನಲ್ಲಿ ಕಳೆದೇಹೋಗಬಹುದಾದ ಇದು ಭಾಷಾಸಕ್ತರಿಗೆ ಒಂದು ಉತ್ತಮ ಸಾಹಿತ್ಯವಾಗಬಹುದೆಂಬ ಆಶಯದಿಂದ ಮಿತ್ರ ಶ್ರೀ HK Vadirajರು ಇಡೀ ಚರ್ಚೆಗೆ ಸಂಬಂಧಿಸಿದ ಎಲ್ಲ ಲೇಖನಗಳನ್ನೂ ಶ್ರಮಪಟ್ಟು ಹುಡುಕಿ ಸಂಕಲಿಸಿ ಮಹದುಪಕಾರ ಮಾಡಿದ್ದಾರೆ.  ಈ ಎಲ್ಲ ಚರ್ಚೆಗಳೂ ಅವು ಬಂದ ಕಾಲಕ್ರಮದಲ್ಲಿಯೇ ಈ ಕೆಳಗಿನ ಲಿಂಕುಗಳಲ್ಲಿ ಲಭ್ಯ:

ಮೊದಲಿಗೆ, ಅಂಕಣಕಾರರಾದ ಶ್ರೀವತ್ಸ ಜೋಶಿ ಅವರ "ಸ್ವಚ್ಛ ಭಾಷೆ ಅಭಿಯಾನ":
https://m.facebook.com/story.php?story_fbid=10156010284494403&id=702289402

ಇದಕ್ಕೆ ಪ್ರತಿಕ್ರಿಯೆಯಾಗಿ ಅವಧಾನಿ ಮಹೇಶ್ ಭಟ್ ಅವರ ಲೇಖನ:
https://m.facebook.com/story.php?story_fbid=1844384135611529&id=100001198802804

ಜೋಶಿಯವರ ಲೇಖನವನ್ನು ಪ್ರಶ್ನಿಸಿ ಮಂಜುನಾಥ ಕೊಳ್ಳೇಗಾಲರ ಲೇಖನ:
https://m.facebook.com/story.php?story_fbid=10156663102719500&id=594419499

ಅಷ್ಟಾವಧಾನಿ ಗಣೇಶ್ ಕೊಪ್ಪಲತೋಟ ಮತ್ತು ಮಹೇಶ್ ಭಟ್ ಅವರ ಲೇಖನಗಳು (ಮಂಜುನಾಥ ಜಿ.ಎಸ್ ಅವರ ಗೋಡೆಯಿಂದ):
https://m.facebook.com/story.php?story_fbid=2162966403754330&id=100001229739036

ಶ್ರೀವತ್ಸ ಜೋಶಿ ಅವರ ಉತ್ತರ:
https://m.facebook.com/story.php?story_fbid=10156050311074403&id=702289402

ಇದಕ್ಕೆ ಪ್ರತಿಕ್ರಿಯೆಯಾಗಿ ಮಹೇಶ್ ಭಟ್ ಅವರ ಲೇಖನ:
https://m.facebook.com/story.php?story_fbid=1852225824827360&id=100001198802804

 ಮಂಜುನಾಥ ಕೊಳ್ಳೇಗಾಲ ಅವರ ಲೇಖನ:
https://m.facebook.com/story.php?story_fbid=10156673637909500&id=594419499

ಶತಾವಧಾನಿ ಗಣೇಶ್ ಅವರ ಅಭಿಪ್ರಾಯರೂಪದ ಲೇಖನ (ಮಹೇಶ್ ಭಟ್ ಅವರ ಗೋಡೆಯಿಂದ):
https://m.facebook.com/story.php?story_fbid=1853298334720109&id=100001198802804

 ಅಜಕ್ಕಳ ಗಿರೀಶ್ ಭಟ್ ಅವರ ಲೇಖನ:
https://m.facebook.com/story.php?story_fbid=2139638819400319&id=100000626655367

ಪೂರಕ ಓದಿಗೆ ಶರತ್ ಭಟ್ ಸೆರಾಜೆ ಅವರ ಲೇಖನಗಳು
https://m.facebook.com/story.php?story_fbid=10160781971760167&id=590310166

ಮತ್ತೊಂದು:
https://m.facebook.com/story.php?story_fbid=10160785351870167&id=590310166

ಕೊನೆ ಕುಟುಕು:
https://m.facebook.com/story.php?story_fbid=1526535430823155&id=100004001390819