Friday, August 5, 2016

ಸವಿಯಬಾರದ ಹಣ್ಣು...

ಇತ್ತೀಚಿಗೆ ಕನ್ನಡದ್ದೇ ಪದಗಳನ್ನು ಬಳಸಬೇಕೆಂಬ ಪ್ರಚಾರದಡಿಯಲ್ಲಿ ಟೊಮ್ಯಾಟೋ ಮತ್ತು ಕ್ಯಾರೆಟ್ ಗಳಿಗೆ ಗೂದೆಹಣ್ಣು ಮತ್ತು ಕೆಂಗೆಣಸು ಎಂಬ ಹೆಸರು ಬಳಸಿ ಎಂದು ಹೇಳಲಾಗುತ್ತಿದೆ.  ಹೀಗೆ ಕರೆಕೊಡುವ ವಿಡಿಯೋ ತುಣುಕೊಂದು ಇಲ್ಲಿದೆ. 

https://www.facebook.com/TheKachaguli/videos/1063052510445410/

ವಿಡಿಯೋ ಮಾಡಿದವರ ಆಶಯವೇನೋ ಮೆಚ್ಚತಕ್ಕದ್ದೇ.  ಅನಗತ್ಯವಾಗಿ ಇಂಗ್ಲಿಷ್, ಹಿಂದಿ, ಸಂಸ್ಕೃತಗಳನ್ನು ಕನ್ನಡದಲ್ಲಿ ತುರುಕಿದರೆ ಯಾರಿಗಿಷ್ಟವಾಗುತ್ತದೆ ಹೇಳಿ.  ಹಾಗೆಯೇ, ವಿಡಿಯೂ ಕೂಡ ಅಚ್ಚುಕಟ್ಟಾಗಿದೆ, ಅಭಿನಯವೂ ಚೆನ್ನಾಗಿದೆ.  ಆದರೆ ಹಾಗೆ ಚೆನ್ನಾಗಿರುವುದೇ ತಪ್ಪು ಅರಿವನ್ನು ಹರಡಲು ರಹದಾರಿಯಾಗಬಾರದಲ್ಲ, ಅದಕ್ಕಾಗಿ ಈ ಲೇಖನ.  ಗೂದೆ ಹಣ್ಣು ಮತ್ತು ಕೆಂಗೆಣಸು ಏಕೆ ಸರಿಯಲ್ಲ ಎಂಬುದನ್ನಷ್ಟು ನೋಡೋಣ.

ಮೊದಲಿಗೆ ನಾವು ಅಷ್ಟು ಬಾಯಿ ಚಪ್ಪರಿಸಿಕೊಂಡು ತಿನ್ನುವ ಅಚ್ಚುಮೆಚ್ಚಿನ ಟೊಮ್ಯಾಟೋ ಹಣ್ಣಿನ ಕತೆ ನೋಡೋಣ.  ಇದಕ್ಕೆ ಗೂದೆಹಣ್ಣು ಎಂದು ಹೆಸರಂತೆ.  ಹೌದು, ಕೆಲವು ಪ್ರದೇಶಗಳಲ್ಲಿ ಅದನ್ನು ಹಾಗೆ ಕರೆಯುತ್ತಾರೆ, ಆದರೆ ಪದಮೂಲವನ್ನೂ ಅರಿಯಬೇಕಷ್ಟೇ.

ಗೂದೆ ಎನ್ನುವ ಪದಕ್ಕೆ ಕನ್ನಡದಲ್ಲಿ ಅಷ್ಟು ಬಾಯಿಚಪ್ಪರಿಸುವ ಅರ್ಥವೇನಿಲ್ಲ.  ಕೆಲವೊಮ್ಮೆ ಮಲದ್ವಾರದಲ್ಲಿ ದುರ್ಮಾಂಸ ಬೆಳೆದು, ಮಲವಿಸರ್ಜನೆಯ ಸಮಯದಲ್ಲಿ ಹೊರಬಂದುಬಿಡುತ್ತದೆ; ಇದನ್ನು ಕೈಯಿಂದ ಒಳತಳ್ಳಬಹುದು - ಅಸಾಧ್ಯ ನೋವಾಗುತ್ತದೆಂಬುದು ಅನುಭವಿಸಿದವರ ನುಡಿ.  ಇದನ್ನು ಮೂಲವ್ಯಾಧಿ (anal prolapse/piles/fistula) ಎನ್ನುತ್ತಾರೆ.  ಹೀಗೆ ಹೊರಬರುವ ಕೆಂಪನೆಯ ಭಾಗವೇ ಗೂದೆ.  ಅದಕ್ಕೇ ಈ ರೋಗಕ್ಕೆ ಗೂದೆರೋಗ ಎಂದೂ ಹೆಸರು.  ಕೆಲವು ಜಾತಿಯ ಮಂಗಗಳಲ್ಲಿ ಪೃಷ್ಠಭಾಗವು ಕೆಂಪಗೆ ಊದಿ ಹೊರಚಾಚಿಕೊಂಡಂತಿರುತ್ತದೆ.  ಸಂಗಾತಿಯನ್ನು ಆಕರ್ಷಿಸಲು ಇದು ಸಹಕಾರಿ ಎಂದು ಪ್ರಾಣಿಶಾಸ್ತ್ರಜ್ಞರ ಅಂಬೋಣ.  ಇದನ್ನು ಮಂಗನಗೂದೆ ಎನ್ನುತ್ತಾರೆ. 

ಸೊಗಸಾಗಿ ರಸತುಂಬಿ ನಳನಳಿಸುವ ಟೊಮ್ಯಾಟೋ ವಿಷಯ ಬರೆಯಹೋಗಿ ಇದನ್ನು ವಿವರಿಸಬೇಕಾಯಿತು ನೋಡಿ, ಇರಲಿ, ಈಗ ಟೊಮ್ಯಾಟೋ ವಿಷಯಕ್ಕೆ ಬರೋಣ.  

ಟೊಮ್ಯಾಟೋ ಭಾರತದ ಸ್ಥಳೀಯ ಹಣ್ಣಲ್ಲ.  ಆದ್ದರಿಂದಲೇ ಇದಕ್ಕೊಂದು ಸ್ಥಳೀಯ ಹೆಸರಿಲ್ಲ.  ಇದನ್ನು ಭಾರತಕ್ಕೆ ತಂದಿದ್ದು ಪೋರ್ತುಗೀಸರು, ಹದಿನಾರು-ಹದಿನೇಳನೆಯ ಶತಮಾನದ ಸುಮಾರಿಗೆ.  ಎಲ್ಲ ವಿದೇಶೀ ವಸ್ತುಗಳ ವಿಷಯದಲ್ಲಾಗುವಂತೆ ಇದನ್ನೂ ಸ್ಥಳೀಯರು ಅನುಮಾನ ಅಸಹ್ಯಗಳಿಂದಲೇ ನೋಡಿದರು.  ಹೀಗಾಗಿ ತಿಪ್ಪೆಯ ಮೇಲೆ ಬೆಳೆಯುವ ಈ ಹಣ್ಣು ಅವರಿಗೆ ಪೃಷ್ಠದಿಂದ ಹೊರಚಾಚಿದ ದುರ್ಮಾಂಸದಂತೆ ಅಸಹ್ಯಕರವಾಗಿ ಕಂಡಿದ್ದರೆ ಆಶ್ಚರ್ಯವಿಲ್ಲ.  ಗೂದೆಹಣ್ಣು ಹೆಸರು ಪ್ರಚಾರ ಮಾಡುವವರಿಗೆ ಬಹುಶಃ ಇದರ ಅರಿವಿಲ್ಲವೇನೋ.  ಜನಪದಕ್ಕೆ ಹೊಸತಾದ ಯಾವುದೇ ವಸ್ತುವು ಹೊರಗಿನಿಂದ ಬಂದರೂ ಅದರ ಹೆಸರೂ ಅದರೊಂದಿಗೇ ಬರುತ್ತದೆ ಎಂಬುದು ಯಾವುದೇ ಭಾಷೆಗೂ ಸಹಜ.  ಉದಾಹರಣೆಗೆ ಇಡ್ಲಿಯನ್ನು rice cake, backed rice ball ಎಂಬ ಏನೇ ಹೆಸರಿನಿಂದ ಕರೆದರೂ ಅದು ಇಡ್ಲಿಯಾಗುವುದಿಲ್ಲ, ಇಡ್ಲಿ ಇಡ್ಲಿಯೇ.  ಹಾಗೆಯೇ ದ್ವಿಚಕ್ರವಾಹನವು ಸ್ಕೂಟರ್ ಆಗುವುದಿಲ್ಲ, ಅದು ಸೈಕಲ್ ಕೂಡ ಆಗಬಹುದು, ಆದರೆ ಸ್ಕೂಟರ್ ಸ್ಕೂಟರೇ, ಸೈಕಲ್ ಸೈಕಲೇ.  ತಮಿಳನ್ನು ಬಿಟ್ಟು ಭಾರತದ ಬೇರೆಲ್ಲ ಭಾಷೆಗಳಲ್ಲೂ ಈ ಹಣ್ಣಿಗೆ ಟೊಮ್ಯಾಟೋ ಅಥವ ಅದರ ವಿವಿಧ ರೂಪಗಳೇ ಹೆಸರು - ತಮೋಟ, ತಮಾಟ, ತಮಾಟರ್, ತಮೇಟೋ ಕಾಯಿ ಹೀಗೆ.  ತಮಿಳಿನಲ್ಲಿ ಇದನ್ನು ತಕ್ಕಾಳಿ ಎನ್ನುತ್ತಾರೆ ಆದರೆ ಅದೂ ಪ್ರಾಚೀನವಾದ ಹೆಸರೇನಲ್ಲ - ತಕ್+ಆಳ್+ಇ = ಆಳಿಗೆ ತಕ್ಕ ಪುಷ್ಠಿ ಕೊಡುವುದು ಎಂಬಂಥದ್ದೇನೋ ಅರ್ಥದಲ್ಲಿ ಅದನ್ನು ಹಾಗೆ ಕರೆಯುತ್ತಾರೆ.

ಟೊಮ್ಯಾಟೋ ನಮಗೆ ಟೊಮ್ಯಾಟೋ ಎಂದೇ ಪರಿಚಿತವಾದ ವಿದೇಶೀ ತರಕಾರಿ, ಅದು ಹಾಗಿರುವುದೇ ಚೆನ್ನ.  ನಮ್ಮವರೂ ಮೊದಮೊದಲು ಗೂದೆಹಣ್ಣು ಎಂಬ ಅಸಹ್ಯ ಹೆಸರನ್ನಿಟ್ಟು ಅಪಹಾಸ್ಯ ಮಾಡಿದರೂ ಆಮೇಲಾಮೇಲೆ ಅದನ್ನು ಅಪ್ಪಿ-ಕೊಂಡಿಲ್ಲವೇ?  ಈಗಂತೂ ಟೊಮ್ಯಾಟೋ ಯಾವುದೇ ಅಡುಗೆ ಮನೆಯ ಬಹುಮುಖ್ಯ ತರಕಾರಿಗಳಲ್ಲೊಂದು.  ಸೊಗಸಾದ ಟೊಮ್ಯಾಟೋ ಗೊಜ್ಜನ್ನು ಗೂದೆಹಣ್ಣಿನ ಗೊಜ್ಜು ಎಂದು ಕಲ್ಪಿಸಲಾದರೂ ಆಗುತ್ತದೆಯೇ, ಹಾಗೆ ಕಲ್ಪಿಸಿದರೆ ಆ ಗೊಜ್ಜು ಗಂಟಲಲ್ಲಿ ಇಳಿಯಬಹುದೇ?

ಇನ್ನು ಕೆಂಗೆಣಸು (carrot) ಎನ್ನುವುದೂ ಇತ್ತೀಚಿಗೆ ಕನ್ನಡ ಉತ್ಸಾಹಿಗಳು ಕಟ್ಟಿದ ಪದವಷ್ಟೇ.  ಪ್ರಾಚೀನಸಾಹಿತ್ಯದಲ್ಲಾಗಲೀ ಅಥವ ಜನಬಳಕೆಯಲ್ಲಾಗಲೀ carrot ಎಂಬುದಕ್ಕೆ ಕೆಂಗೆಣಸು ಎಂಬ ಬಳಕೆಯಿಲ್ಲ.  ಹೊಸ ಪದ ಕಟ್ಟುವುದರಲ್ಲಿ ತಪ್ಪಿಲ್ಲ, ಆದರೆ ಅದಕ್ಕೆ ಅರ್ಥವನ್ನೂ ನೋಡಬೇಕಲ್ಲ?  ಕೆಂಪು + ಗೆಣಸು = ಕೆಂಗೆಣಸು; ಆದರೆ, ಕ್ಯಾರಟನ್ನು ಯಾವುದಕ್ಕಾದರೂ ಹೋಲಿಸುವುದೇ ಆದರೆ, ಅದು ಗೆಣಸಿಗಿಂತಾ ಮೂಲಂಗಿಗೇ ಹತ್ತಿರ.  carrot ನೋಡಲು ಕೆಂಪಾಗಿದ್ದ ಮಾತ್ರಕ್ಕೆ ಅದನ್ನು ಕೆಂಗೆಣಸು ಎನ್ನಲು ಆಗುವುದಿಲ್ಲ, ಗೆಣಸಿಗೂ ಕ್ಯಾರಟಿಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ - ರೂಪ, ಗುಣ, ಸ್ವಭಾವ ಎಲ್ಲದರಲ್ಲೂ. ಅದೇನೇ ಇರಲಿ ಕ್ಯಾರಟ್ ಭಾರತದ ಸ್ಥಳೀಯ ತರಕಾರಿಯೇ, ಹೊರಗಿನದೇನಲ್ಲ.  ಭಾರತದ ವಿವಿಧಭಾಗಗಳಲ್ಲಿ ಇದರ ಬೇರೆಬೇರೆ ಜಾತಿಗಳು ಬೆಳೆಯುತ್ತವೆ.  ಸಂಸ್ಕೃತದಲ್ಲಿ ಇದಕ್ಕೆ ಗರ್ಜರ ಎನ್ನುತ್ತಾರೆ.  ಅದೇ ಪ್ರಾಕೃತದಲ್ಲಿ ಗಜ್ಜರ ಆಗಿ, ಹಿಂದೀ ಮುಂತಾದ ಉತ್ತರ ಭಾಷೆಗಳಲ್ಲಿ ಗಾಜರ್ ಆಗಿಯೂ ಮತ್ತೆ ಕನ್ನಡದಲ್ಲಿ ಗಜ್ಜರಿ ಆಗೂ ಬಳಕೆಯಲ್ಲಿದೆ.  ಹಾಗೇ ನೆಲದೊಳಗೆ ಬೇರಿನ ರೂಪದಲ್ಲಿ ಬೆಳೆಯುವ ತರಕಾರಿಗಳನ್ನೆಲ್ಲಾ ಸಂಸ್ಕೃತದಲ್ಲಿ ಮೂಲ/ಮೂಲಕ ಎಂಬ ಹೆಸರಿನಿಂದ ಗುರುತಿಸುವುದು ವಾಡಿಕೆ - ಮೂಲಕ, ಚಾಣಕ್ಯಮೂಲಕ, ದೀರ್ಘಮೂಲಕ, ನೇಪಾಳಮೂಲಕ - ಹೀಗೆ, ಕ್ಯಾರಟು, ಮೂಲಂಗಿ, ಗೆಣಸು, ಎಲ್ಲವೂ ಒಂದಿಲ್ಲೊಂದು ’ಮೂಲ’ಕವೇ.  ಇದೇ ಹಿಂದಿಯಲ್ಲಿ ಮೂಲೀ ಆಗಿ ಬರಬರುತ್ತಾ ಕೇವಲ ಮೂಲಂಗಿ ಎಂಬ ಒಂದು ತರಕಾರಿಗೆ ಮಾತ್ರ ಹೆಸರಾಗಿ ನಿಂತಿತು.  ಹಾಗೇ ಮೂಲಕ ಎನ್ನುವುದು ದ್ರಾವಿಡದಲ್ಲಿ ಮೂಲಗೈ ಆಗಿ ಮೂಳಂಗಿ ಆಗಿ (ಇಟ್ಟಿಗೆ > ಇಟ್ಟಂಗಿ; ಹಚ್ಚಿಗೆ > ಹಚ್ಚಂಗಿ ಆದಹಾಗೆ) - ಕೊನೆಗೆ ಮೈಯುದ್ದಕ್ಕೂ ಮುಳ್ಳಿನಂತೆ ಸಣ್ಣಸಣ್ಣ ಬೇರುಗಳಿರುವುದರಿಂದ ಮುಳ್ಳಂಗಿ ಆಯಿತು.  ಆಮೇಲೆ ಅದೇ ಹಿಂದಿಯ ಮೂಲೀ ಪ್ರಭಾವದಿಂದ ಮೂಲಂಗಿಯಾಗಿ ಬಳಕೆಗೆ ಬಂತು.  ಮುಳ್ಳಂಗಿ ದ್ರಾವಿಡಭಾಷೆಗಳಲ್ಲಿ ಬಹುಕಾಲದಿಂದ ಬಳಕೆಯಲ್ಲಿರುವ ಪದ.  ವಿಶಾಲಾರ್ಥದಿಂದ ಅರ್ಥವು ಕುಗ್ಗಿ ಒಂದು ವಸ್ತುವಿಗೇ ಸೀಮಿತವಾಗುವ ಉದಾಹರಣೆಯಿದು.

ಇನ್ನು ಮೈಯೆಲ್ಲಾ ಗಂಟುಗಂಟಾಗಿರುವ (ಗೆಣ್ಣುಗಳಿಂದ ತುಂಬಿರುವ)ದಕ್ಕೆ ಗೆಣಸು (ಗಿಣ್ > ಗೆಣ್ > ಗೆಣಸು).  ಉರುಟುರುಟಾಗಿ ಗೆಣ್ಣುಗಳಿಂದ ತುಂಬಿರುವ ಗೆಣಸಿನ ರೂಪವೇ ಬೇರೆ, ಸಪೂರವಾಗಿ ನೇರವಾಗಿರುವ ಕ್ಯಾರಟ್ಟಿನ ರೂಪವೇ ಬೇರೆ.  ಅದು ರೂಪದಲ್ಲಿ ಗೆಣಸಿಗಿಂತ ಮೂಲಂಗಿಗೇ ಹತ್ತಿರ.  ನೆಲದಲ್ಲಿ ಬೆಳೆಯುವ ಹಲವು ’ಮೂಲಂಗಿ’ಗಳಲ್ಲಿ (ಮೂಲ ಅಥವಾ ಬೇರಿನ ರೂಪದಲ್ಲಿ ಬೆಳೆಯುವ ತರಕಾರಿಗಳಲ್ಲಿ) ಗರ್ಜರ (ಗಜ್ಜರಿ) ಸಹ ಒಂದು.  ಆದ್ದರಿಂದ ’ಮೂಲ’ಸಂಬಂಧದ ಹೆಸರು ಇದಕ್ಕೂ ಹತ್ತುತ್ತದೆ.  ಆದ್ದರಿಂದಲೇ ತಮಿಳಿನಲ್ಲಿ ಕ್ಯಾರೆಟ್ಟಿಗೆ ಮಂಜಳ್ ಮೂಲಂಗಿ (ಹಳದಿ/ಕೇಸರಿ ಮೂಲಂಗಿ) ಎಂಬ ನಿರ್ದೇಶನವೂ ಇದೆ.  ಕ್ಯಾರೆಟ್ಟಿಗೂ ಮೂಲಂಗಿಗೂ ಎಷ್ಟೋ ವ್ಯತ್ಯಾಸವಿದ್ದರೂ ಆ ವ್ಯತ್ಯಾಸವು ತೀರ ಕ್ಯಾರೆಟ್ಟು ಗೆಣಸುಗಳ ನಡುವಿನಷ್ಟಲ್ಲ.  ಆದ್ದರಿಂದ ಕರೆಯುವುದೇ ಆದರೆ, ಕೆಂಗೆಣಸು ಎಂದು ತಪ್ಪಾಗಿ ಕರೆಯುವುದಕ್ಕಿಂತ ಕೆಂಪುಮೂಲಂಗಿ ಎನ್ನುವುದು ಎಷ್ಟೋ ವಾಸಿ, ಆದರೆ ಮೂಲಂಗಿಯಲ್ಲೇ ಕೆಂಪುಮೂಲಂಗಿ ಕೂಡ ಈಗಾಗಲೇ ಇದೆ!  ಇಷ್ಟೆಲ್ಲಾ ತಾಪತ್ರಯಗಳ ಬದಲು ಈಗಾಗಲೇ ಇರುವ ಗಜ್ಜರಿ ಎನ್ನುವ ಹೆಸರೇ ಸೊಗಸಾಗಿದೆಯಲ್ಲವೇ, ಮೊದಲೇ ಹೇಳಿದಂತೆ ಜನಪದಕ್ಕೆ ಹೊಸತಾದ ಯಾವುದೇ ವಸ್ತುವು ಹೊರಗಿನಿಂದ ಬಂದರೂ ಅದರ ಹೆಸರೂ ಅದರೊಂದಿಗೇ ಬರುತ್ತದೆ ಎಂಬುದು ಯಾವುದೇ ಭಾಷೆಗೂ ಸಹಜ.  ಅದು ಇಲ್ಲಿ ಬಂದು, ಈ ಭಾಷೆಯ ಜಾಯಮಾನಕ್ಕೆ ಹೊಂದಿಕೊಂಡು ನೆಲೆಯೂರುತ್ತದೆ.  ಕ್ಯಾರಟ್ ಕೂಡ ಬಳಸುತ್ತಾ ಬಳಸುತ್ತಾ ಕನ್ನಡದ ಪದವೇ ಆಗಿದೆ.

Monday, June 6, 2016

ಔಚಿತ್ಯಪ್ರಜ್ಞೆ

ಈ ದಿನ ಶ್ರೀ Raghavendra Hebbalalu ಅವರ ಗೋಡೆಯಲ್ಲಿ ಕಂಡ ಕ್ಷೇಮೇಂದ್ರನ ಒಂದು ಉಕ್ತಿ, ಔಚಿತ್ಯಪ್ರಜ್ಞೆಯನ್ನು ಕುರಿತದ್ದು:

कण्ठॆ मॆखलया नितम्बफलकॆ तारॆण हारॆण वा
पाणौ नूपुरबन्धनॆन चरणॆ कॆयूरपाशॆन वा
शौर्यॆण प्रणतॆ रिपौ करुणया नायान्ति कॆ हास्यताम्
औचित्यॆन विना रुचिं प्रतनुतॆ नालङ्कृतीर्नॊ गुणाः

ಕಂಠೇ ಮೇಖಲಯಾ ನಿತಂಬಫಲಕೇ ತಾರೇಣ ಹಾರೇಣ ವಾ
ಪಾಣೌ ನೂಪುರಬಂಧನೇನ ಚರಣೇ ಕೇಯೂರಪಾಶೇನ ವಾ
ಶೌರ್ಯೇಣ ಪ್ರಣತೇ ರಿಪೌ ಕರುಣಯಾ ನಾಯಾನ್ತಿ ಕೇ ಹಾಸ್ಯತಾಮ್
ಔಚಿತ್ಯೇನ ವಿನಾ ರುಚಿಂ ಪ್ರತನುತೇ ನಾಲಂಕೃತೀರ್ನೋ ಗುಣಾಃ

ಔಚಿತ್ಯಪ್ರಜ್ಞೆಯನ್ನು ಇದಕ್ಕಿಂತ ಸೊಗಸಾಗಿ ಪ್ರಸ್ತುತಪಡಿಸಲು ಸಾಧ್ಯವೇ? ನನ್ನ ಕನ್ನಡಾನುವಾದ ಇಲ್ಲಿದೆ:

ಕೊರಳೊಳ್ ಮೇಖಲೆಯಾ ನಿತಂಬಮದರೊಳ್ ರಾಜಿಪ್ಪ ಹಾರಂಗಳುಂ
ಕರಮಂ ಜಗ್ಗಿಪ ಕಾಲ ಗೆಜ್ಜೆ, ನಡೆಯಂ ಬಂಧಿಪ್ಪ ತೋಳ್ವಂದಿಗಳ್
ಶರಣೆಂದುಂ ಮಿಗೆ ಶೌರ್ಯ, ಶತ್ರುದಯೆಗಳ್ ಹಾಸ್ಯಕ್ಕೆ ಠಾವಲ್ತೆ ಸಿಂ-
ಗರದಿಂ ಮೇಣ್ ಗುಣದಿಂದಲೇಂ ಸೊಗಮೆ ತಾನೌಚಿತ್ಯಮಂ ಮೀರಿರಲ್

ಕೊರಳಿನಲ್ಲಿ ಒಡ್ಯಾಣವೂ; ನಿತಂಬದ ಮೇಲೆ ಓಲಾಡುವ ಹಾರವೂ, ಕೈಗಳನ್ನು ಜಗ್ಗುವ ಕಾಲ್ಗೆಜ್ಜೆಗಳೂ, ಕಾಲನ್ನು ಬಂಧಿಸುವ ತೋಳಬಂದಿಗಳೂ, ಶರಣಾಗತರ ಮೇಲೆ ಶೌರ್ಯವೂ, ಹೊಡೆಯಬಂದ ಶತ್ರುವಿನ ಮೇಲೆ ದಯೆಯೂ ನಗೆಯುಕ್ಕಿಸುವುದಿಲ್ಲವೇನು? ಯಾವ ಅಲಂಕಾರವೂ ಯಾವ ಸದ್ಗುಣವೂ ಔಚಿತ್ಯವನ್ನು ಮೀರಿದರೆ ರುಚಿಯಾಗವು.

ಅರಿಯುವವರಿಗೆ ನೂರು ಅರ್ಥ - ಅರಿಯದವರಿಗೆ ವಿವರಿಸುವುದೇ ವ್ಯರ್ಥ - ಆ ಅನೌಚಿತ್ಯ ನಮಗೇಕೆ?

Tuesday, April 12, 2016

ಕೇಶಿರಾಜನ ಕನ್ನಡವರ್ಣಮಾಲೆ

ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ"
ಕೆಲದಿನಗಳ ಹಿಂದೆ ಪದಾರ್ಥಚಿಂತಾಮಣಿಯಲ್ಲಿ ಕೇಶಿರಾಜನ “ಅಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ” ಎಂಬ ಸಾಲು ಚರ್ಚೆಗೆ ಬಂತು.  ಕೇಶಿರಾಜನು ಶಬ್ದಮಣಿದರ್ಪಣದ ಸಂಜ್ಞಾಪ್ರಕರಣದಲ್ಲಿ ಅಚ್ಚಗನ್ನಡದ ವರ್ಣಮಾಲೆಯನ್ನು ಹೀಗೆ ವಿವರಿಸುತ್ತಾನೆ.

ತಿಳಿ ದೇಶೀಯಮಮೈದಂ
ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪ
ಕ್ಷಳನಂ ನಾಲ್ವತ್ತೇೞಾ
ಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ

ಇದು ಪದ್ಯ. ಪ್ರಸಿದ್ಧವಾದ ಸಂಸ್ಕೃತವರ್ಣಮಾಲೆಯಿಂದ ಯಾವಯಾವ ಅಕ್ಷರಗಳನ್ನು ಕಳೆದು, ಅಚ್ಚಗನ್ನಡದ ಯಾವಯಾವ ಅಕ್ಷರಗಳನ್ನು ಅದಕ್ಕೆ ಕೂಡಿಸಿದರೆ ಅಚ್ಚಗನ್ನಡದ ವರ್ಣಮಾಲೆ ಸಿದ್ಧವಾಗುತ್ತದೆ ಎಂದು ಕೇಶಿರಾಜನು ಮೇಲಿನ ಪದ್ಯದಲ್ಲಿ ತಿಳಿಸುತ್ತಾನೆ, ಹೀಗೆ:

(ಐವತ್ತೆರಡು ಅಕ್ಷರಗಳಿರುವ ಸಂಸ್ಕೃತವರ್ಣಮಾಲೆಯನ್ನು ಹಿಡಿದು) ಅದಕ್ಕೆ -  
  1. ತಿಳಿ ದೇಶೀಯಮಮೈದಂ (ಸಂಸ್ಕೃತವರ್ಣಮಾಲೆಯಲ್ಲಿಲ್ಲದ, ಆದರೆ ಅಚ್ಚಗನ್ನಡದಲ್ಲಿರುವ ಎಒಱೞಳ ಎಂಬ ಐದಕ್ಷರಗಳನ್ನು ಸೇರಿಸು)
  2. ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪ ಕ್ಷಳನಂ (ಸಂಸ್ಕೃತದಲ್ಲಿ ಮಾತ್ರ ಬಳಕೆಯಲ್ಲಿರುವ, ಆದರೆ ಕನ್ನಡದಲ್ಲಿಲ್ಲದ ಋೠಲೃಲೄಶಷಳ ಅಕ್ಷರಗಳನ್ನೂ, ವಿಸರ್ಗ (ಅಃ), ಜಿಹ್ವಾಮೂಲೀಯ (ೱಕ), ಉಪಧ್ಮಾನೀಯ (ೲಪ) - ಈ ಹತ್ತು ಅಕ್ಷರಗಳನ್ನು ಕಳೆ)
ನಾಲ್ವತ್ತೇೞಾಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ - ಹೀಗೆ ಅಚ್ಚಗನ್ನಡದ ಶುದ್ಧವರ್ಣಮಾಲೆಯನ್ನು ನಲವತ್ತೇಳೆಂದು ಅಳೆ - ಇದು ಈ ಪದ್ಯದ ಅರ್ಥ.

ಮೇಲಿನ ಪದ್ಯದಲ್ಲಿ ಸೂಚಿಸಿರುವ ೱ ಮತ್ತು ೲ ಎಂಬ ಎರಡಕ್ಷರಗಳ ಬಗ್ಗೆ ಒಂದು ಕಿರುಟಿಪ್ಪಣಿ: ಇವು ಕ್ರಮವಾಗಿ ಜಿಹ್ವಾಮೂಲೀಯ ಮತ್ತು ಉಪಧ್ಮಾನೀಯಗಳೆಂದು ಕರೆಯಲ್ಪಡುತ್ತವೆ. ಇವು ಸಂಸ್ಕೃತದಲ್ಲಿ ಕ ಮತ್ತು ಪ ಅಕ್ಷರಗಳ ಹಿಂದೆ ಬರುವ ವಿಶೇಷ ವಿಸರ್ಗಗಳಷ್ಟೇ, ಆದರೆ ಉಚ್ಚಾರಣೆ ವಿಸರ್ಗಕ್ಕಿಂತ ತುಸು ಭಿನ್ನ - ಉಪಧ್ಮಾನೀಯ(ೲ)ದ ಉಚ್ಚಾರವು ಸರಿಸುಮಾರು ಇಂಗ್ಲಿಷಿನ f ಅಕ್ಷರದಂತೆ ಬರುತ್ತದೆ (ಉದಾ: ಮನಃಪರಿವರ್ತನೆ > ಮನfಪರಿವರ್ತನೆ); ಜಿಹ್ವಾಮೂಲೀಯ(ೱ)ದ ಉಚ್ಚಾರವು ಕ ಮತ್ತು ಗ ನಡುವಿನ ಉಚ್ಚಾರವಾಗಿ, ತೆಳುವಾದ ಹಕಾರದೊಂದಿಗೆ (ಮುರುಘಾ, ಮಹೇಶ್ವರಿ, ಮೊಳಗಾ ಈ ಪದಗಳಲ್ಲಿ ಬರುವ ಘ, ಹ, ಗ ಅಕ್ಷರಗಳನ್ನು ತಮಿಳರು ಉಚ್ಚರಿಸುವಂತೆ) ಬರುತ್ತದೆ (ಉದಾ: ಮನಃಕ್ಲೇಶ ಎಂಬುದು ಮನhkhಕ್ಲೇಶ ಎಂದು ಉಚ್ಚರಿಸಲ್ಪಡುತ್ತದೆ) – ಆದರೆ ಕನ್ನಡದಲ್ಲಿ ಇವುಗಳ ಬಳಕೆಯಿಲ್ಲ – ಇಲ್ಲಿ ಉಪಧ್ಮಾನೀಯ ಮತ್ತು ಜಿಹ್ವಾಮೂಲೀಯಗಳನ್ನೂ ವಿಸರ್ಗಾಕ್ಷರಗಳಾಗಿಯೇ ಉಚ್ಚರಿಸುವುದು ರೂಢಿ (ಮನಃಪರಿವರ್ತನೆ ಮನಃಕ್ಲೇಶಗಳನ್ನು ಮನಃಪರಿವರ್ತನೆ, ಮನಃಕ್ಲೇಶ ಎಂದೇ ಉಚ್ಚರಿಸಲಾಗುತ್ತದೆ).

ಹೀಗೆ, ಕೇಶಿರಾಜನ ಪ್ರಕಾರ ಅಚ್ಚಗನ್ನಡದ ವರ್ಣಮಾಲೆ:
ಅಆಇಈಉಊಎಏಐಒಓಔ (=೧೨)
ಂ (ಅನುಸ್ವಾರ - ಅಂ) (=೧)
ಕಖಗಘಙ ಚಛಜಝಞ ಟಠಡಢಣ ತಥದಧನ ಪಫಬಭಮ (=೨೫)
ಯಱರಲವಸಹೞಳ (=೯)

ಒಟ್ಟು ೪೭ ಅಕ್ಷರಗಳು.

ಕೇಶಿರಾಜನೇನೋ "’ಅಚ್ಚ’ಕನ್ನಡದಲ್ಲಿ ಬಳಕೆಯಲ್ಲಿಲ್ಲ"ವೆಂದು ಹಲವು ಅಕ್ಷರಗಳನ್ನು ತೆಗೆದುಹಾಕಿದ. ಸಂಸ್ಕೃತದಲ್ಲೇ ತೀರ ಕಡಿಮೆ ಉಪಯೋಗವಿದ್ದು, ಕನ್ನಡದಲ್ಲಿ ಬಳಕೆಯಲ್ಲೇ ಇಲ್ಲದ ೠ, ಲೃ, ಲೄ, ೱ, ೲ ಗಳನ್ನು ತೆಗೆದದ್ದೇನೋ ಸರಿ, ಆದರೆ ನಾವು ಇವತ್ತು ವ್ಯಾಪಕವಾಗಿ ಬಳಸುತ್ತಿರುವ ಋ, ಶ, ಷ ಮತ್ತು ವಿಸರ್ಗಗಳನ್ನೂ ತೆಗೆದುಬಿಟ್ಟ. ಅದಕ್ಕೆ ಆತನ ತರ್ಕ ಹೀಗೆ: ಅಚ್ಚಗನ್ನಡದಲ್ಲಿ ಈ ಅಕ್ಷರಗಳು ಬಳಕೆಯಲ್ಲಿಲ್ಲ; ಸಂಸ್ಕೃತ ಪದಗಳಲ್ಲಿದ್ದರೂ ಅವು ಕನ್ನಡದಲ್ಲಿ ತದ್ಭವವಾಗುವಾಗ ಆ ಅಕ್ಷರಗಳು ದೇಸೀ ಅಕ್ಷರಗಳಿಗೆ ಬದಲಾಗುತ್ತವೆ (ಉದಾಹರಣೆಗೆ, ಋಷಿ > ರಿಸಿ, ಪಶು > ಪಸು/ಹಸು, ದುಃಖ > ದುಕ್ಕ ಹೀಗೆ) - ಆದ್ದರಿಂದ ಅಚ್ಚಗನ್ನಡ ವರ್ಣಮಾಲೆಯಲ್ಲಿ ಈ ಅಕ್ಷರಗಳ ಅಗತ್ಯವಿಲ್ಲ.  ಆದರೆ ಈ ತರ್ಕಕ್ಕೆ ಕೊನೆಯೆಲ್ಲಿ?  ಇದೇ ದಾರಿಯಲ್ಲಿ ಮುನ್ನೆಡೆದರೆ ಮಹಾಪ್ರಾಣಗಳೂ ಹೀಗೇ ಅಲ್ಲವೇ? ಅಚ್ಚಗನ್ನಡದಲ್ಲಿ ಮಹಾಪ್ರಾಣವೆಲ್ಲಿದೆ? ಸಂಸ್ಕೃತದ ಮಹಾಪ್ರಾಣಶಬ್ದಗಳೂ ಕನ್ನಡಕ್ಕೆ ಬರುವಾಗ ತದ್ಭವವಾಗಿಯೇ ಬರುತ್ತವೆ (ಹಠ > ಹಟ; ಘಂಟಾ > ಗಂಟೆ; ದುಃಖ > ದುಕ್ಕ ಹೀಗೆ). ಇನ್ನು ಙ ಮತ್ತು ಞಗಳ ಕೆಲಸವನ್ನು ಅನುಸ್ವಾರ (೦) ಮಾಡುತ್ತದೆ;  ಐಔ ಎಂಬುದು ಅ+ಏ ಮತ್ತು ಅ+ಓ ಅಕ್ಷರಗಳ ಸಂಯುಕ್ತ - ಕನ್ನಡದಲ್ಲಿ ಇದನ್ನೇ ಅಯ್ ಮತ್ತು ಅವ್ ಎಂದು ಬಳಸಬಹುದಾದ್ದರಿಂದ ಆ ಎರಡು ಸ್ವರಗಳ ಅಗತ್ಯವೂ ಇಲ್ಲ. ಆದ್ದರಿಂದ ಹತ್ತು ಮಹಾಪ್ರಾಣಗಳನ್ನೂ ಙಞಗಳನ್ನೂ ಐಔ ಸಂಯುಕ್ತ ಸ್ವರಗಳನ್ನೂ ತೆಗೆದರೆ ’ಅಚ್ಚಗನ್ನಡ’ ವರ್ಣಮಾಲೆಯ ಅಕ್ಷರಗಳ ಸಂಖ್ಯೆ ಮೂವತ್ಮೂರಕ್ಕಿಳಿಯುತ್ತದೆ, ಹೀಗೆ:

ಅಆಇಈಉಊಎಏಒಓ (=೧೦)
ಂ (ಅನುಸ್ವಾರ - ಅಂ) (=೧)
ಕಗ ಚಜ ಟಡಣ ತದನ ಪಬಮ (=೧೩)
ಯರಱಲವಸಹಳೞ (=೯)

ಒಟ್ಟು ೩೩ ಅಕ್ಷರಗಳು.

ತರ್ಕವೇನೋ ಸರಿಯೇ, ಆದರೆ ಕೇಶಿರಾಜನು ಈ ದಿಕ್ಕಿನಲ್ಲಿ ಮುಂದುವರೆಯದಿದ್ದುದಕ್ಕೆ ಕಾರಣವಿದೆ.  ಮೊದಲಿಗೆ ಸಂಸ್ಕೃತಪದಗಳೆಲ್ಲವೂ ಕನ್ನಡಕ್ಕೆ ತದ್ಭವವಾಗಿಯೇ ಬರುತ್ತವೆ/ಬರಬೇಕು ಎನ್ನುವ ಮಾತೇ ಪ್ರಾಯೋಗಿಕವಲ್ಲ. ರಿಸಿ ಪಸು ದುಕ್ಕ ಮುಂತಾಗಿ ಜನಬಳಕೆಯಲ್ಲಿ ಬಿದ್ದು ಸಹಜವಾಗಿ ಬದಲಾಗುವ ಪದಗಳಷ್ಟೇ ತದ್ಭವಗಳಾಗುತ್ತವೆಯೇ ಹೊರತು ಕನ್ನಡದಲ್ಲಿ ಬಳಸಲ್ಪಡುವ ಎಲ್ಲ ಸಂಸ್ಕೃತ ಪದಗಳೂ ಅಲ್ಲ. ಉದಾಹರಣೆಗೆ, ಶಂಕರ, ಅಘೋರ, ದರ್ಶನ ಇತ್ಯಾದಿ ಪದಗಳು ಜನಬಳಕೆಯದ್ದಲ್ಲ, ಆದರೆ ಗ್ರಾಂಥಿಕ ಕನ್ನಡದಲ್ಲೂ, ಅದನ್ನನುಸರಿಸುವ ಶಿಷ್ಟ ಕನ್ನಡದಲ್ಲೂ ಬಳಕೆಯಲ್ಲಿವೆ.  ಆದ್ದರಿಂದ ಮಹಾಪ್ರಾಣಯುಕ್ತ ಸಂಸ್ಕೃತ ಪದಗಳೂ ಕನ್ನಡದ ಅವಿಭಾಜ್ಯ ಅಂಗವೇ.  ಇವಿಲ್ಲದ ಕಾವ್ಯವನ್ನೂ ಶಾಸ್ತ್ರೀಯ ಸಾಹಿತ್ಯವನ್ನೂ ಊಹಿಸಿಕೊಳ್ಳಲೂ ಸಾಧ್ಯವಿಲ್ಲ.  ಎಂದಮೇಲೆ ಈ ಪದಗಳನ್ನು ಬಳಸುವ ಅಗತ್ಯಕ್ಕೆ ತಕ್ಕಂತೆ ಹಾಗೆಯೇ ಬರೆಯುವ ಸೌಲಭ್ಯ ಕನ್ನಡದಲ್ಲಿ ಉಳಿದಿರಬೇಕಾದದ್ದು ಸಹಜವೇ ತಾನೇ? ಹೀಗಾಗಿ ಕೇಶಿರಾಜನು ಮಹಾಪ್ರಾಣಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಳ್ಳಬೇಕಾಯಿತು. ಹಾಗೆಯೇ ಐಔ ಗಳನ್ನು ಅಯ್ ಮತ್ತು ಅವ್ ಗಳು ನಿಭಾಯಿಸಬಲ್ಲುವಾದರೂ ಉಚ್ಚಾರಣೆಯಲ್ಲಿ ಸೂಕ್ಷ್ಮ ವ್ಯತ್ಯಾಸವಿದ್ದೇ ಇದೆ. ಬಳಕೆಯಲ್ಲಿರುವ ಸಂಸ್ಕೃತ ಪದಗಳನ್ನು ವಿಕಾರವಿಲ್ಲದೇ ಹಾಗೇ ಬಳಸಬಹುದಾದರೆ ಐಔಗಳನ್ನು ಮಾತ್ರ ಏಕೆ ವಿಕಾರಮಾಡಬೇಕು? ಅದಕ್ಕೆ ಬಲಗೊಡುವ ಯಾವ ಪ್ರಯೋಗವೂ ಇಲ್ಲವಲ್ಲ! ಅದಕ್ಕೇ ಐಔಗಳೂ ಉಳಿದುವು.  ಹೀಗೆ ವಿಪರೀತಕ್ರಾಂತಿಯ ಗೊಡವೆಗೆ ಹೋಗದೇ ಕೇವಲ ಪ್ರಯೋಗಸಾಧುವಾದ ’ಶುದ್ಧಗೆ’ಯ ಪ್ರಸ್ತುತ ಪಡಿಸುವಲ್ಲಿಗೆ ಕೇಶಿರಾಜ ನಿಂತ.

ಇದಿಷ್ಟು ಕೇಶರಾಜನ ವಿಷಯವಾಯಿತು, ಆದರೆ ನಮ್ಮ ಆಧುನಿಕ ಕನ್ನಡ ವರ್ಣಮಾಲೆಯು, ಕೇಶಿರಾಜನು ಸೂಚಿಸಿದ ’ಶುದ್ಧಗೆ’ಯಿಂದ ಸಾಕಷ್ಟು ಬದಲಾವಣೆ ಹೊಂದಿದೆ, ಪರಿಷ್ಕೃತಗೊಂಡಿದೆ.  ಹಾಗಾದರೆ ಈ ಪುನಃಪರಿಷ್ಕರಣಗಳ ಅಗತ್ಯವಾದರೂ ಏಕೆ ಬಿದ್ದಿತೆಂಬುದನ್ನು ನೋಡೋಣ.  ಈ ಹಿಂದೆ ನೋಡಿದಂತೆ ಜನಬಳಕೆಗೆ ಬಿದ್ದ ಹಲವು ಸಂಸ್ಕೃತ ಪದಗಳು ಕನ್ನಡಕ್ಕೆ ತದ್ಭವವಾಗಿ ಬರುವುದು ನಿಜವಾದರೂ, ಅಷ್ಟುಮಾತ್ರಕ್ಕೆ ಮೂಲ ತತ್ಸಮದ ಬಳಕೆಯೇ ಇಲ್ಲವೆನ್ನುವಂತಿಲ್ಲ, ಈ ತದ್ಭವಗಳ ಜೊತೆಜೊತೆಗೇ ಅವುಗಳ ತತ್ಸಮರೂಪಗಳೂ ಬಳಕೆಯಲ್ಲಿದ್ದೇಯಿವೆ.  ಉದಾಹರಣೆಗೆ ರಿಸಿ ಪಸು ದುಕ್ಕ ಮುಂತಾದುವು ತದ್ಭವಗಳಾದರೂ, ಅವುಗಳ ತತ್ಸಮರೂಪಗಳಾದ ಋಷಿ, ಪಶು, ದುಃಖಗಳೂ ಅಷ್ಟೇ ವ್ಯಾಪಕವಾಗಿ ಬಳಕೆಯಲ್ಲಿವೆ. ಪದವೊಂದನ್ನು ತದ್ಭವವಾಗಿ ಬಳಸಬೇಕೋ ತತ್ಸಮವಾಗಿಯೋ ಎಂದು ನಿರ್ಧರಿಸುವಲ್ಲಿ ಬಳಕೆಯ ಸಂದರ್ಭ, ಇತರ ಕನ್ನಡ ಹಾಗೂ ಸಂಸ್ಕೃತ ಪದಗಳೊಡನೆ ಅವಕ್ಕಿರುವ ಸಂಧಿ/ಸಮಾಸ ಸೌಲಭ್ಯ, ಇದರಿಂದ ಬರವಣಿಗೆಗೆ ದಕ್ಕುವ ಬಾಗು-ಬಳುಕುಗಳು, ನಿಖರತೆ, ತೇಜಸ್ಸು, ಶ್ರೀಮಂತಿಕೆ ಮುಂತಾದುವು ಪ್ರಮುಖ ಪಾತ್ರವಹಿಸುತ್ತವೆ. ಅದೇನೇ ಇರಲಿ, ಅಗತ್ಯ ಬಿದ್ದಾಗ ಎರಡೂ ರೂಪಗಳನ್ನು ಕೈತಡೆಯದೇ ಬಳಸುವ ಸ್ವಾತಂತ್ರ್ಯವು ಬಳಸುವವನಿಗೆ ಇರಬೇಕಾಗುತ್ತದೆ.  ಆದ್ದರಿಂದ ಮಹಾಪ್ರಾಣಗಳನ್ನು ಉಳಿಸಿಕೊಂಡಂತೆಯೇ ರಿಸಿ ಪಸು ದುಕ್ಕ ಮುಂತಾದುಗಳ ತತ್ಸಮರೂಪಗಳಾದ ಋಷಿ, ಪಶು, ದುಃಖಗಳಲ್ಲಿರುವ ಋಶಷ ಮತ್ತು ವಿಸರ್ಗಗಳನ್ನೂ ಉಳಿಸಿಕೊಳ್ಳುವ ಅಗತ್ ಬೀಳುತ್ತದೆ.  ಆದ್ದರಿಂದಲೇ ಕನ್ನಡದ್ದಲ್ಲವೆಂದು ಕೇಶಿರಾಜನು ಓಡಿಸಿದ್ದ ಋಶಷ ಮತ್ತು ವಿಸರ್ಗಗಳೂ ಹಿಂದಿರುಗಿದುವು.

ಅಕ್ಷರಗಳು ಮರಳಿ ಬಂದದ್ದೇನೋ ಸರಿ, ಆದರೆ ಕೇಶಿರಾಜನು ಕನ್ನಡದ್ದೇ ಎಂದು ನಿರ್ದಿಷ್ಟವಾಗಿ ಉಳಿಸಿಕೊಂಡಿದ್ದ ಱೞ ವರ್ಣಗಳು ಮರೆಯಾದದ್ದೇಕೆ?  ಮಹಾಪ್ರಾಣ, ಋಶಷ ಮತ್ತು ವಿಸರ್ಗಗಳಿಗೆ ಅನ್ವಯಿಸುವ ತರ್ಕವೇ ಇಲ್ಲೂ ಅನ್ವಯವಾಗಬೇಕಿತ್ತಲ್ಲವೇ?  ಬಳಸುವ ಅಗತ್ಯ ಬಿದ್ದಾಗ ಅಕ್ಷರವಿಲ್ಲದಿದ್ದರೆ ಹೇಗೆ?  ಅದಕ್ಕೇ ಅಲ್ಲವೇ ಕೇಶಿರಾಜನು ಅವುಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಂಡದ್ದು?  ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಱೞ ವರ್ಣಗಳು ಕೇಶಿರಾಜನ ಕಾಲಕ್ಕೇ ನಿಧಾನಕ್ಕೆ ರಳ ಅಕ್ಷರಗಳ ಜೊತೆ ಬೆರೆತುಹೋಗುತ್ತಿದ್ದು, ನಡುಗನ್ನಡದ ಕಾಲಕ್ಕಾಗಲೇ ಆ ವ್ಯತ್ಯಾಸ ಅಳಿದುಹೋಗಿತ್ತು; ವಿದ್ವಾಂಸರಲ್ಲೇ ಈ ಬಗೆಗಿನ ಗೊಂದಲಗಳಿತ್ತು. ಹನ್ನೆರಡನೇ ಶತಮಾನದ ಶರಣಸಾಹಿತ್ಯದಲ್ಲೂ ಱೞಗಳ ಬಳಕೆ ಕ್ವಚಿತ್ತಾಗಿ ಮಾತ್ರ ಕಂಡುಬರುತ್ತದೆ.  ಕೇಶಿರಾಜನಿಗಿಂತ ಅರ್ಧಶತಮಾನದಷ್ಟಾದರೂ ಹಿಂದಿನವನಾದ ಹರಿಹರನೇ - "ಕವಿತತಿ ವಿಚಾರಿಸಬೇಡದರಿಂ ಱೞಕುಳಕ್ಷಳಂಗಳನಿದರೊಳ್" ಎಂದು ತನ್ನ ಗಿರಿಜಾಕಲ್ಯಾಣದಲ್ಲಿ ಹೇಳಿದ್ದಾನೆ (ಕಾವ್ಯಸೌಷ್ಟವಕ್ಕೆ ಗಮನ ಕೊಡಬೇಕಾದ ಕವಿಗಳು ಅರ್ಥವಿಲ್ಲದ ಱೞಕುಳಕ್ಷಳಗಳ ಚರ್ಚೆಯ ಗೊಡವೆಗೆ ಹೋಗದಿರುವುದೇ ಲೇಸು ಎಂದು ಅವನ ಅಭಿಪ್ರಾಯ).  ಹರಿಹರನೂ ರಾಘವಾಂಕನೂ ಱೞಗಳನ್ನು ಹಠ ಹಿಡಿದಂತೆ ಬಳಸಿದರೂ ಆಮೇಲಾಮೇಲೆ ಬಂದ ಕುಮಾರವ್ಯಾಸನಲ್ಲಿ ಹಾಗೂ ದಾಸರ ಪದಗಳಲ್ಲಿ ಅವು ಸಂಪೂರ್ಣ ಮರೆಯಾಗಿರುವುದನ್ನು ನೋಡುತ್ತೇವೆ.  ಹೀಗೆ ದಿನಬಳಕೆಯಿಂದ ತನ್ನ ಕಾಲಕ್ಕಾಗಲೇ ಹೊರನಡೆದಿದ್ದ ಱೞ ಅಕ್ಷರಗಳಿಗೆ ವರ್ಣಮಾಲೆಯಲ್ಲಾದರೂ, ಶಾಸ್ತ್ರಕ್ಕಾದರೂ ಒಂದು ಆಶ್ರಯ ಕಲ್ಪಿಸುವ ಕೇಶಿರಾಜನ ಪ್ರಯತ್ನವು ಫಲಿಸದೇ ಅವು ಕ್ರಮೇಣ ಕಣ್ಮರೆಯೇ ಆದುವು.  ಹೀಗಾಗಿ ಕೇಶಿರಾಜನ ’ಅಚ್ಚಗನ್ನಡ’ ವರ್ಣಮಾಲೆಯಿಂದ, ಬದಲಾದ ಆಧುನಿಕ ಕನ್ನಡವರ್ಣಮಾಲೆಗೆ ಮತ್ತೊಂದು ತಾಳೆ ಪಟ್ಟಿ ಬರೆಯುವುದಾದರೆ ಅದು ಹೀಗಿರುತ್ತದೆ:

ಕೇಶಿರಾಜನ ’ಅಚ್ಚಗನ್ನಡ’ ವರ್ಣಮಾಲೆಯ ಅಕ್ಷರಗಳು - ೪೭
ಅದರಿಂದ ಕೈಬಿಟ್ಟ, ಇಂದಿಗೆ ಬಳಕೆಯಲ್ಲಿಲ್ಲದ ಅಕ್ಷರಗಳು - ೨ (ಱೞ)
ಮತ್ತೆ ಸೇರಿಸಿಕೊಂಡ ಸಂಸ್ಕೃತಮೂಲದ ಅಕ್ಷರಗಳು - ೪ (ಋಶಷ ಮತ್ತು ವಿಸರ್ಗ )
ಹೊಸಗನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳು - ೪೯

ಹೀಗೆ, ಸಧ್ಯ ಬಳಕೆಯಲ್ಲಿರುವ ಆಧುನಿಕ ಕನ್ನಡದ ವರ್ಣಮಾಲೆ:
ಅಆಇಈಉಊಋಎಏಐಒಓಔ (=೧೩)
ಂ (ಅನುಸ್ವಾರ - ಅಂ) ಃ (ವಿಸರ್ಗ - ಅಃ) (=೨)
ಕಖಗಘಙ ಚಛಜಝಞ ಟಠಡಢಣ ತಥದಧನ ಪಫಬಭಮ (=೨೫)
ಯರಲವಶಷಸಹಳ (=೯)

ಒಟ್ಟು ೪೯ ಅಕ್ಷರಗಳು.  ನಾವು ಓದುತ್ತಿದ್ದ ಕಾಲದಲ್ಲಿ ೠ ಅಕ್ಷರವನ್ನೂ ಕನ್ನಡ ವರ್ಣಮಾಲೆಯ ಭಾಗವಾಗಿಸಿ ಒಟ್ಟು ಐವತ್ತು ಅಕ್ಷರಗಳಾಗಿ ಹೇಳಿಕೊಡುತ್ತಿದ್ದರು.  ಈಗ ಆಧುನಿಕ ಕನ್ನಡ ವರ್ಣಮಾಲೆಯು ೠಕಾರದಿಂದ ಮುಕ್ತಿಪಡೆದಿದೆ.

ಇನ್ನು ಈ ಲೇಖನದಲ್ಲಿ ಹೇಳಿದ ಱೞ ಕುೞ ಕ್ಷಳಗಳ ವಿಷಯ ಮತ್ತೊಂದು ದೊಡ್ಡ ಕತೆ.  ಮತ್ತೆಂದಾದರೂ ಬರೆಯುತ್ತೇನೆ.

Wednesday, January 27, 2016

ಬೆರಳೊಳು ಕುಟಿಲದಿ ಕದವನು ಬಡಿವವ

ಅಂಗುಲ್ಯಾ ಕಃ ಕವಾಟಂ ಪ್ರಹರತಿ ಕುಟಿಲೇ ಮಾಧವಃ ಕಿಂ ವಸಂತೋ|
ನೋ ಚಕ್ರೀ ಕಿಂ ಕುಲಾಲೋ ನಹಿ ಧರಣಿಧರಃ ಕಿಂ ದ್ವಿಜಿಹ್ನೂಃ ಫಣೀಂದ್ರಃ|
ನಾಹಂ ಘೋರಾಹಿಮರ್ದೀ ಖಗಪತಿರಸಿ ಕಿಂ ನೋ ಹರಿಃ, ಕಿಂ ಕಪೀಂದ್ರ
ಸ್ತ್ವಿತ್ಯೇವಂ ಗೋಪಕನ್ಯಾಪ್ರತಿವಚನಜಡಃ ಪಾತುಮಾಂ ಪದ್ಮನಾಭಃ

ಇದು ಶ್ರೀ ವಾದಿರಾಜರ ಉಕ್ತಿಪ್ರತ್ಯುಕ್ತಿಸ್ತೋತ್ರದ ಒಂದು ಶ್ಲೋಕ.  ತುಂಟ ಕೃಷ್ಣನು ಗೊಲ್ಲತಿಯೊಬ್ಬಳ ಮನೆಯ ಬಾಗಿಲು ತಟ್ಟುತ್ತಿದ್ದಾನೆ.  ಬೆರಳ ತುದಿಯಿಂದ ಇಷ್ಟು ಹಗುರವಾಗಿ ಕಳ್ಳನಂತೆ ಬಾಗಿಲು ತಟ್ಟುತ್ತಿರುವುದು ಈ ಕೃಷ್ಣನೇ ಎಂಬುದು ಗೋಪಿಕೆಗೆ ಗೊತ್ತು.  ಅವನನ್ನು ಕೆಲಕಾಲ ಹೊರಗೇ ನಿಲ್ಲಿಸಿ ಸತಾಯಿಸುವ ಇರಾದೆ ಆಕೆಯದು.  ಬಾಗಿಲು ತಟ್ಟುತ್ತಿರುವುದು ಯಾರೆಂದು ಕೇಳಿದಾಗ ಮಾಧವ, ಚಕ್ರೀ, ಧರಣಿಧರ ಹೀಗೆ ಆತ ಏನು ಉತ್ತರ ಹೇಳಿದರೂ ಅದಕ್ಕೆ ಕೃಷ್ಣನೆಂದೇ ಅಲ್ಲದೇ ಮತ್ತೊಂದು ಅರ್ಥವಿದ್ದೇ ಇದೆ - ಈಕೆ ಆ ಇನ್ನೊಂದು ಶ್ಲೇಷಾರ್ಥವನ್ನು ಬಳಸಿ, ನೀನು ಅವನೇ ಇವನೇ ಎಂದು ಕೇಳುತ್ತಾ, ಬಂದಿರುವುದು ಕೃಷ್ಣನೆಂಬ ವಿಷಯವು ತನಗೆ ತಿಳಿಯದಂತೆ ನಟಿಸುತ್ತಾಳೆ.  ಏನು ಹೇಳಿದರೂ ಅದಕ್ಕೆ ಬೇರೆಯದೇ ಅರ್ಥ ಕಲ್ಪಿಸುತ್ತಿರುವ ಗೋಪಿಕೆಯ ಮುಂದೆ ಸರ್ವಶಬ್ದವಾಚ್ಯನಾದ ಹರಿ ತನ್ನದೇ ಒಂದು ಹೆಸರಿಲ್ಲದಂತಾಗಿ ನಿರುತ್ತರನಾಗಿ ನಿಲ್ಲುವ ಸುಂದರ ಚಿತ್ರಣ ಇಲ್ಲಿದೆ.

ಈ ಕೆಳಗಿನದು ಅದರ ಕನ್ನಡಾನುವಾದ.  ಮೂಲದ ಶ್ಲೇಷಾರ್ಥಸೌಂದರ್ಯವನ್ನುಳಿಸಿಕೊಳ್ಳಲೋಸುಗ ಆದಿಪ್ರಾಸವನ್ನು ಕೈಬಿಟ್ಟಿದ್ದೇನೆ:

"ಬೆರಳೊಳಿನಿತು ಕುಟಿಲದಿ ಕದ ಬಡಿವರಾರು?" "ಮಾಧವಂ"
"ಮಾಧವಂ? ವಸಂತನೇಂ?" "ಅಲ್ತು, ಚಕ್ರಿಯೆಂಬುವನ್"
"ಚಕ್ರಿಯೆನೆ? ಕುಲಾಲನೇಂ?" "ಅಲ್ತು, ಧರಣಿಧರನಿವಂ"
"ಬಲ್ಲೆ, ಸೀಳುನಾಲಗೆಯವನಾದಿಶೇಷನಲ್ತೆ ನೀಂ?"

"ಅಲ್ತು, ಹಾವನಳುಪಿದಂ" "ಓಹೊ, ಗರುಡನೆಂಬೆಯಾ?"
"ಗರುಡನಲ್ತು, ಹರಿಯೆ ನಾಂ" "ಹರಿಯೆನಲ್? ಕಪೀಂದ್ರನೇಂ?"
ಇಂತು ಮಾತಿಗೊಂದು ಮಾತನೆಸೆಯುತಿರ್ಪ ಗೊಲ್ಲಹುಡುಗಿ-
ಗೆದುರುಸೋಲ್ತ ಪದುಮನಾಭ ಸಲಹಲೆಮ್ಮ ಸಂತತಂ

ವಾದಿರಾಜರು ಸ್ವತಃ ಹರಿದಾಸರು.  ಮೇಲಿನ ಸಂಸ್ಕೃತಶ್ಲೋಕವನ್ನೇ ಅವರು ಕೀರ್ತನೆಯ ರೂಪದಲ್ಲಿ ರಚಿಸಿದ್ದರೆ ಹೇಗಿದ್ದಿರಬಹುದು?  ಅಂಥದೊಂದು ಪ್ರಯತ್ನ ಇಲ್ಲಿದೆ.  ಇದು ವಾದಿರಾಜರ ಕೀರ್ತನೆಯಲ್ಲ, ಮೂಲಶ್ಲೋಕದ, ಕೀರ್ತನಾರೂಪದ ಭಾವಾನುವಾದವಷ್ಟೇ.  ಚಮತ್ಕಾರಯುಕ್ತವಾದ ಆ ಸಂಸ್ಕೃತಶ್ಲೋಕದಲ್ಲಿ ಕನ್ನಡದ ಹರಿದಾಸರಾದ ವಾದಿರಾಜರನ್ನು ಕಾಣುವ ಪ್ರಯತ್ನ:

ರಾಗ - ಶಂಕರಾಭರಣ; ತಾಳ - ಮಿಶ್ರಚಾಪು
ಬೆರಳೊಳು ಕುಟಿಲದಿ ಕದವನು ಬಡಿವವ-
ನಾರೋ ಪೇಳೆಲೊ ಬೇಗ ||ಪ||

ಮಾಧವನೆನಲು ವಸಂತನು ನೀನೇನೊ
ಚಕ್ರಿಯೆನಲು ಮಡಕೆ ಮಾಳ್ಪನೆ ನೀ ಪೇಳೋ ||ಅ.ಪ||

ಮೇದಿನಿಧರನೆನೆ ಸೀಳುನಾಲಗೆಯುಳ್ಳ
ಆದಿಶೇಷನೆ ನೀನೋ|
ಮೋದದಿ ಹಾವ ಭಂಜಿಸಿದವನೆನ್ನುವೆ-
ಯಾದೊಡೆ ಪೇಳೋ ನೀ ಗರುಡನೇನೋ ||೧||

ಹರಿಯೆನ್ನುತಿಹ ನೀನು ಕಪಿಯೋ ಏನೋ ಎನ-
ಗೊರೆಯೆನುತಲಿ ಕಾಡುವಾ|
ತರಳೆ ಗೊಲ್ಲತಿಗೆ ಬಾಯ್ಸೋತು ನಿಂತಿಹ ಸಿರಿ
ವರಪದ್ಮನಾಭನೇ ಸಲಹೆಲೊ ರಂಗಯ್ಯ ||೨||

(ಕೊನೆಯ ಸಾಲಿನ ಬದಲಿಗೆ "ವರಪದ್ಮನಾಭ ಹಯವದನ ಪಾಲಿಸೋ ಬೇಗ" - ಎಂದು ಮುದ್ರಿಕೆಯೂ ಬರುತ್ತಿದ್ದಿತೇನೋ)