Friday, March 24, 2017

ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ

 
ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ.  ಆದರೆ ಪಂಪನ ದುರ್ಯೋಧನ?  ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರಸಂಗ, ತನ್ನ ಹಲವು ಅಂತರ್ಧ್ವನಿಗಳಿಂದಾಗಿ ಪಂಪಭಾರತದ ಬಹು ಶಕ್ತವಾದ ಚಿತ್ರಣಗಳಲ್ಲೊಂದಾಗಿದೆ.  ಅದನ್ನೊಂದಿಷ್ಟು ನೋಡೋಣ.

ಕುರುಕ್ಷೇತ್ರದ ಯುದ್ಧ ಕೊನೆಯ ಹಂತಕ್ಕೆ ಬಂದಿದೆ.  ತನ್ನವರೆಲ್ಲರನ್ನೂ ಕಳೆದುಕೊಂಡು ಒಂಟಿಯಾಗಿರುವ ದುರ್ಯೋಧನನೀಗ ಪಾಂಡವರನ್ನು ಇದಿರಿಸಬೇಕಿದೆ.  ಅಳಿದುಳಿದ ಶತ್ರುಗಳನ್ನು ಹುಡುಕಿ ಹುಡುಕಿ ಬೇಟೆಯಾಡುತ್ತಿರುವ ಪಾಂಡವರು ದುರ್ಯೋಧನನ್ನು ಕಣ್ಣಲ್ಲಿ ಕಣ್ಣಿಟ್ಟು ಹುಡುಕುತ್ತಿದ್ದಾರೆ.  ಇತ್ತ ಅಶ್ವತ್ಥಾಮ ಕೃಪ ಕೃತವರ್ಮರೂ ಯುದ್ಧರಂಗದಿಂದ ಮರೆಯಾದ ಸ್ವಾಮಿಯನ್ನು ಸೇರಲು ಆತನಿಗಾಗಿ ಹುಡುಕುತ್ತಿದ್ದಾರೆ.  ಕೊನೆಯದಾಗೊಮ್ಮೆ ಭೀಷ್ಮರನ್ನು ಕಂಡು ಹೋಗಬೇಕೆಂಬ ಉದ್ದೇಶದಿಂದ, ಭೀಕರವಾದ ರಣಭೂಮಿಯಲ್ಲಿ ಎಡವುತ್ತಾ ತೊಡರುತ್ತಾ ಸಂಜಯನೊಡನೆ ಭೀಷ್ಮನನ್ನು ಹುಡುಕಿಕೊಂಡು ಬಂದಿದ್ದಾನೆ ದುರ್ಯೋಧನ.  ಒಬ್ಬೊಂಟಿಯಾದ ದುರ್ಯೋಧನಿಗೆ ಪಾಂಡವರಿಂದ ಉಳಿಗಾಲವಿಲ್ಲವೆಂದರಿತ ಭೀಷ್ಮರು ಅವನನ್ನು ಸಂಧಿಗೊಡಂಬಡುವಂತೆ ಅನುನಯಿಸುತ್ತಾರೆ.  ಸಹಜವಾಗಿಯೇ ದುರ್ಯೋಧನನು ಅದಕ್ಕೊಪ್ಪದಿದ್ದಾಗ - ಕೊನೆಯ ಪಕ್ಷ ಎಲ್ಲೋ ಇವನನ್ನರಸುತ್ತಿರುವ ಅಶ್ವತ್ಥಾಮ ಕೃಪ ಕೃತವರ್ಮರು ಇವನನ್ನು ಕಂಡು ಸೇರುವವರೆಗಾದರೂ - ರಕ್ಷಿಸಬೇಕೆಂದು ಹವಣಿಸುತ್ತಾರೆ.  ಆದರೆ ಅಡಗಿರಲು ಅಭಿಮಾನಧನನಾದ ದುರ್ಯೋಧನನು ಒಪ್ಪುವನೇ?  ಅದಕ್ಕಾಗಿಯೇ "ಕಾಲಾಗ್ನಿರುದ್ರಂ ರಸಾತಳದೊಳಡಂಗಿರ್ಪಂತೆ" ವೈಶಂಪಾಯನ ಸರೋವರಲ್ಲಡಗಿದ್ದು, ನಾಳೆ ಬಲದೇವ, ಅಶ್ವತ್ಥಾಮ ಕೃಪ ಕೃತವರ್ಮರು ಬಂದೊದಗಿದೊಡನೆ ಶತ್ರುಗಳ ಮೇಲೆ ಬಿದ್ದು ಗೆಲ್ಲುವೆಯಂತೆ ಎಂದು ಅವನ ಮನವೊಲಿಸಿ ಜಲಮಂತ್ರವನ್ನುಪದೇಶಿಸಿ ಅವನನ್ನು ವೈಶಂಪಾಯನಕ್ಕೆ ಕಳಿಸುತ್ತಾರೆ.

ಅವನಲ್ಲಿಗೆ ಹೋಗುವ ದಾರಿಯಲ್ಲಿ ಯುದ್ಧಭೂಮಿಯನ್ನು ಹಾದು ಹೋಗಬೇಕಲ್ಲ - ಹೀಗೆ ಹೋಗುವಾಗ ದುರ್ಯೋಧನನ ಯುದ್ಧದ ಘೋರವನ್ನು ಅವನಿಗೇ ಕಾಣಿಸುತ್ತಾನೆ ಕವಿ:

ಕ್ರಂದತ್ಸ್ಯಂದನಜಾತನಿರ್ಗತಶಿಖಿಜ್ವಾಳಾಸಹಸ್ರಂಗಳಾ
ಟಂದೆತ್ತಂ ಕವಿದೞ್ವೆ ಬೇವ ಶವಸಂಘಾತಂಗಳಂ ಚಕ್ಕಮೊ|
ಕ್ಕೆಂದಾಗಳ್ ಕಡಿದುಗ್ರಭೂತನಿಕರಂ ಕೆಯ್ ಬೇಯೆ ಬಾಯ್ ಬೇಯೆ ತಿಂ
ಬಂದಂ ತನ್ನ ಮನಕ್ಕಗುರ್ವಿಸುವಿನಂ ದುರ್ಯೋಧನಂ ನೋಡಿದಂ

ಯುದ್ಧಭೂಮಿಯಲ್ಲಿ ಸುಟ್ಟುರಿಯುತ್ತಿರುವ ರಥಗಳಿಂದ ಹೊರಟ ಬೆಂಕಿ ತನ್ನ ಸಾವಿರ ಕೆನ್ನಾಲಗೆಗಳನ್ನು ಸುತ್ತೆಲ್ಲ ಹರಡಿರಲು ಭೀಕರ ರಣಪಿಶಾಚಿಗಳು ಆ ಬೆಂಕಿಯಲ್ಲಿ ಸಿಕ್ಕಿ ಬೇಯುತ್ತಿರುವ ಹೆಣಗಳ ರಾಶಿಯಿಂದ ಬೇಯಬೇಯುತ್ತಿರುವಂತೆಯೇ ಕೈಕಾಲುಗಳನ್ನು ಚಕ್ಕಮೊಕ್ಕೆಂದು ಕಿತ್ತು ತಿನ್ನುತ್ತಿರುವ ಭಯಾನಕವಾದ ದೃಶ್ಯವನ್ನು ದುರ್ಯೋಧನನು ಕಾಣುತ್ತಾನೆ.  ಅಷ್ಟೇ ಅಲ್ಲದೇ "ನೋಡಿ ಕನಲ್ವ ಕೆಂಡದ ಮೇಲೆ ಪೞೆಯ ಬೇವಿನೆಣ್ಣೆಯೊಳ್ ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ ಬಳ್ಳುವಿನ ಬಾಯೊಳಳುರ್ವ ಕೆಂಡಂಗಳೊಳ್ ಸುೞದು ಬೇವ ಪೆಣಂಗಳ ಕಂಪು ನಾಱುವುದರ್ಕೆ ಸೈರಿಸಲಾಱದೆ (ಇನ್ನೂ ಸುಟ್ಟುರಿಯುತ್ತಿರುವ ಹೆಣಗಳನ್ನು ನರಿಗಳು ತಮ್ಮ ಬಾಯಲ್ಲಿ ಕಚ್ಚಿಕೊಂಡಿದ್ದರೆ, ಹಳೆಯ ಬೇವಿನೆಣ್ಣೆಯಲ್ಲಿ ನೆನೆಸಿದ ಬೆಳ್ಳುಳ್ಳಿ ಸುಟ್ಟಂತೆ ನಾರುವ ಅದರ ವಾಸನೆಯನ್ನು ಸಹಿಸಲಾಗದೇ) ದಾಪುಗಾಲಿಡುತ್ತಾ ಆ ಯುದ್ಧಭೂಮಿಯನ್ನು ಬೇಗಬೇಗ ದಾಟಿ ದುರ್ಯೋಧನ ವೈಶಂಪಾಯನ ಸರೋವರಕ್ಕೆ ಬರುತ್ತಾನೆ.

ಆ ವೈಶಂಪಾಯನಸರೋವರವಾದರೂ ಹೇಗೆ ಕಾಣುತ್ತಿದೆ - ಪ್ರಳಯಕಾಲದ ಹೊಡೆತಕ್ಕೆ ಅಷ್ಟದಿಕ್ಕುಗಳ ಕೀಲುಗಳೇ ಕಳಚಿ ಆಕಾಶವೇ ಭೂಮಿಯ ಮೇಲೆ ಜರಿದು ಬಿದ್ದಿದೆಯೋ; ಆದಿವರಾಹನು ಸಮುದ್ರಮುದ್ರಿತಧರಾಮಂಡಳವನ್ನು ರಸಾತಳದಿಂದ ಮೇಲೆತ್ತಿದಾಗ ಆಕಾಶವೇ ಜಲಾವೃತವಾಗಿಬಿಟ್ಟಿತೋ (ಅಷ್ಟು ವಿಸ್ತಾರವಾಗಿ, ಕಣ್ಣು ಹರಿಯುವಷ್ಟು ದೂರಕ್ಕೂ ಗಗನವನ್ನು ಪ್ರತಿಫಲಿಸುತ್ತಿದ್ದ ಸರೋವರ)!  ಅಂಥಾ ವೈಶಂಪಾಯನ ಸರೋವರವನ್ನು ಕವಿ ವರ್ಣಿಸುವ ರೀತಿಯಿದು:

ಇದು ಪಾತಾಳಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪೆಱತಲ್ತಿದುಗ್ರಲಯಕಾಳಾಂಭೋಧರಚ್ಛಾಯೆ ತಾ
ನೆ ದಲೆಂಬಂತಿರೆ ಕಾಚಮೇಚಕಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿದಿರ್ದತ್ತು ಸರೋವರಂ ಬಕ ಬಳಾಕಾನೀಕ ರಾವಾಕುಳಂ

ಇದು ಪಾತಾಳಬಿಲಕ್ಕೆ ಬಾಗಿಲೋ, ಘೋರಾಂಧಕಾರವು ವಾಸಿಸಲಿಕ್ಕಾಗಿಯೇ ಮಾಡಿದ ಭಾವಿಯೋ, ಪ್ರಳಯಕಾಲದ ಭೀಕರ ಕಪ್ಪುಮೋಡಗಳ ನೆರಳೋ ಎಂಬಂತೆ ಕಡುಗಪ್ಪು-ನೀಲಿಯ ಗಾಜಿನಂತಿದ್ದ ನೀರಿಂದ ತುಂಬಿ, ಆಳವಾಗಿ, ಬಕಬಲಾಕಗಳ ಅರಚುವಿಕೆಯಿಂದ ಗಿಜಿಗುಟ್ಟಿಹೋಗಿತ್ತು ವೈಶಂಪಾಯನ ಸರೋವರ!

ಸರೋವರವೊಂದನ್ನು ಇಷ್ಟು ಗಾಢವಾಗಿ, ಅನಿಷ್ಟಕರವಾಗಿ ವರ್ಣಿಸಲು ಸಾಧ್ಯವೇ?  ಸಾಮಾನ್ಯವಾಗಿ ಸರೋವರವರ್ಣನೆಯೆಂದರೆ ಕವಿಗಳು ಅದರ ಸೌಂದರ್ಯವನ್ನು ವರ್ಣಿಸುತ್ತಾರೆ - ಅದರ ಅಂದಚಂದ, ಅದರ ನೀರು, ಅದರ ಬಿಳ್ಪು, ತೆಳ್ಪು, ತಂಪು, ಅದರಲ್ಲರಳಿದ ಹೂವುಗಳು, ಪಕ್ಷಿಸಂಕುಲ, ಸುತ್ತಲ ವನರಾಜಿ, ಹೀಗೆ, ಆ ಸರೋವರಗಳೂ ಆಳವಾಗಿ, ವಿಶಾಲವಾಗಿ, ಕಡುಸಂಜೆ ಸಮಯವಾದರೆ ನೀರೂ ಕಪ್ಪಾಗಿಯೇ ಇದ್ದೀತು.  ಆದರೂ ಕವಿಯ ವರ್ಣನೆಯಲ್ಲಿ ಅದು ಸರ್ವಾಂಗಸುಂದರವಾಗಿಯೇ ಹೊರಹೊಮ್ಮುತ್ತದೆ.  ಹಾಗೆಯೇ ಈ ವೈಶಂಪಾಯನಸರೋವರದಲ್ಲಿಯೂ ವಿಶಾಲತೆಯಿದೆ, ಆಳವಿದೆ, ತಂಪಿದೆ, ಬಕಬಲಾಕಾದಿ ಪಕ್ಷಿಗಳೂ ಇದೆ - ಸೌಂದರ್ಯವರ್ಣನೆಗೆ ಬೇಕಾದ ಅಂಶಗಳೆಲ್ಲವೂ ಇದೆ.  ಆದರೆ ಸೌಂದರ್ಯವನ್ನು ಕಾಣಲು ಬೇಕಿರುವ ಕಣ್ಣು ಮಾತ್ರ ಇಲ್ಲ - ದುರ್ಯೋಧನನಲ್ಲಿ.  ಅವನೀಗ ಯುದ್ಧದಲ್ಲಿ ಬಹುತೇಕ ಸೋತಿದ್ದಾನೆ, ಎಲ್ಲರನ್ನೂ ಕಳೆದುಕೊಂಡಿದ್ದಾನೆ, ಇವನಿಗಾಗಿಯೇ ಹುಡುಕುತ್ತಿರುವ ಪಾಂಡವರು ಯಾವ ಗಳಿಗೆಯಲ್ಲಾದರೂ ಬಂದೆರಗಬಹುದು.  ಆ ಭಯವನ್ನೂ ಮೀರಿದ ಭಯಂಕರವಾದ ಅಪಮಾನದ ಕೆಲಸವನ್ನೀಗ ಕೈಗೊಳ್ಳಲಿದ್ದಾನೆ ಈಗ, ಭೀಷ್ಮನ ಬಲವಂತಕ್ಕೆ ಕಟ್ಟುಬಿದ್ದು,  ಇಂತಿರುವಲ್ಲಿ ಸರೋವರದ ಸೌಂದರ್ಯವರ್ಣನೆಯನ್ನು ಮಾಡುವ ರಸಾಭಾಸಕ್ಕೆ ಕವಿ ಎಳಸಬಾರದು.  ಆದ್ದರಿಂದಲೇ ಸರೋವರದ ಸೌಂದರ್ಯಕ್ಕಿಂತ ಅದು ಆ ಕ್ಷಣಕ್ಕೆ ತೋರುತ್ತಿರುವ ಬೀಭತ್ಸತೆಯನ್ನೇ ಕವಿ ಕಟ್ಟಿಕೊಡುತ್ತಾನೆ - ಅದಕ್ಕೇ ಗಗನವೇ ಜರಿದು ಬಿದ್ದಿದೆಯೋ, ಸಮುದ್ರವೇ ಆಕಾಶವನ್ನು ತುಂಬಿದೆಯೋ ಎಂಬಂತಿರುವ ವಿಸ್ತಾರವಾದ ಜಲರಾಶಿಯು ಪಾತಾಳದ ಬಾಗಿಲಿನಂತೆ, ಘೋರಾಂಧಕಾರಕ್ಕೆ ಮಾಡಿದ ಕೂಪದಂತೆ, ಪ್ರಳಯಕಾಲದ ಮೋಡಗಳ ಕರಿನೆರಳಂತೆ ಕಾಣುತ್ತದೆ.  ಬರೀ ಕಾಣುತ್ತದೆಯೇ?  ಕೇಳುತ್ತದೆ - ಕಿವಿಗಡಚಿಕ್ಕುತ್ತದೆ ಕೂಡ - ಆ ಸರೋವರವನ್ನು ತುಂಬಿದ್ದ ಜಲಪಕ್ಷಿಗಳ ಅರಚುವಿಕೆ - ಅದು ಕೇವಲ ಕಲರವಲ್ಲ, ರೌರವ!  ಅದಕ್ಕೆ ಕವಿ ಬಳಸಿಕೊಳ್ಳುವ ಪದವೂ ಅದೇ ಛಾಯೆಯನ್ನು ಕೊಡುವಂತಿದೆ - "ರಾವಾಕುಳಂ".  ರವ ಎಂದರೆ ಶಬ್ದ.  ಆಕುಲ/ಳ ಎಂದರೆ ತುಂಬಿಹೋದ, ಕೆದರಿಹೋದ, ಕದಡಿಹೋದ, ಕ್ಷೋಭೆಗೊಂಡ - ಆ ಸರೋವರ ಆ ಸಂಜೆ, ಪಕ್ಷಿಗಳ ಕೂಗಿನಿಂದ ಕ್ಷೋಭೆಗೊಂಡಿದೆ, ಕದಡಿಹೋಗಿದೆ.

ಆ ಪಕ್ಷಿಗಳಾದರೂ ಏಕೆ ಕೂಗುತ್ತಿವೆ, ಏನೆಂದು ಕೂಗುತ್ತಿವೆ?  ಈ ದುರ್ಯೋಧನನೀಗ ಪಾಂಡವರ, ಅದರಲ್ಲೂ ಭೀಮಾರ್ಜುನರ ಕೋಪಕ್ಕೆ ಪಕ್ಕಾಗಿದ್ದಾನೆ.  ಅವರ ಕ್ರೋಧಾಗ್ನಿ ಇವನನ್ನು ಎಲ್ಲಿದ್ದರೂ ಬಿಡದು; ಇವನಿಲ್ಲಿ ಬಂದರೆ, ಇವನೊಡನೆ ನಮ್ಮನ್ನೂ ಸುಟ್ಟು ಬೂದಿಮಾಡದೇ ಬಿಡದು.  ಆದ್ದರಿಂದ "ಇಲ್ಲಿ ಕದಡಬೇಡ, ಬರಬೇಡ ಬರಬೇಡ" ಎಂದು ದುರ್ಯೋಧನನಿಗೆ ಎಚ್ಚರಿಕೆಕೊಡುತ್ತಾ ಅಲ್ಲಿನ ಪಕ್ಷಿಗಳೆಲ್ಲಾ ಒಗ್ಗೊರಲಿನಿಂದ ಕೂಗುತ್ತಿದ್ದುವಂತೆ:

ಅದಟಿನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪ ಪಾವಕಂ
ಪುದಿದಳುರ್ದೞ್ವಿ ಕೊಳ್ಳದಿರದಿಲ್ಲಿಯುಮೆಮ್ಮುಮನಿಲ್ಲಿ ಬಾೞ್ವರಂ|
ಕದಡದಿರಿತ್ತ ಬಾರದಿರು ಸಾರದಿರೆಂಬವೊಲಾದುದೆತ್ತಮು
ನ್ಮದಕಳಹಂಸಕೋಕನಿಕರದ್ವನಿ ರುಂದ್ರಫಣೀಂದ್ರಕೇತುವಂ

ಇಲ್ಲಿ ಕವಿ, ದುರ್ಯೋಧನನನ್ನು "ರುಂದ್ರಫಣೀಂದ್ರಕೇತು" ಎಂದು ನಿರ್ದೇಶಿಸುತ್ತಾನೆ.  ದುರ್ಯೋಧನನು ಫಣಿಕೇತನ (ಹಾವಿನ ಬಾವುಟವುಳ್ಳವನು) ಹೌದು.  ಆದರೆ ಕವಿ, ರುಂದ್ರಫಣೀಂದ್ರಕೇತು (ರುಂದ್ರ = ವಿಶಾಲವಾದ, ಅಗಲವಾದ, ಹರಡಿದ) ಎಂದು ನಿರ್ದೇಶಿಸಿರುವುದು ವಿಶಿಷ್ಟವಾಗಿದೆ.  ಈ "ರುಂದ್ರ" ವಿಶೇಷಣವು "ರುಂದ್ರಫಣೀಂದ್ರ"ನಾಗಿ ವಿಶಾಲವಾಗಿ ಹೆಡೆಬಿಚ್ಚಿದ ಹಾವನ್ನೂ ಸೂಚಿಸಬಹುದು, "ರುಂದ್ರಕೇತನ"ವಾಗಿ ಹರಡಿದ ಬಾವುಟವನ್ನೂ ಸೂಚಿಸಬಹುದು ಅಥವಾ "ರುಂದ್ರ ಫಣೀಂದ್ರಕೇತನ"ನಾಗಿ ಸ್ವತಃ ದುರ್ಯೋಧನನನ್ನೇ ಸೂಚಿಸಬಹುದು.  ಇದಾವುದರಿಂದಲೂ (ಅಥವಾ ಇದೆಲ್ಲದರಿಂದಲೂ), ಅದೀಗ ಕ್ರೋಧದಿಂದ ಹೆಡೆಯಗಲಿಸಿದ ಸರ್ಪದಂತೆ ಕೆರಳಿದ, ಕೆರಳಿ ಅರಳಿದ ದುರ್ಯೋಧನನ ಇರವನ್ನು "ರುಂದ್ರಫಣೀಂದ್ರಕೇತು" ಎಂಬ ಒಂದೇ ಮಾತಿನಲ್ಲಿ ಸೂಚಿಸಿಬಿಡುತ್ತಾನೆ ಕವಿ.  ಸರೋವರದ ಪಕ್ಷಿಗಳು ಕಂಡು ಬೆದರಿ, ಬೇಡಬೇಡವೆಂದು ಚೀರಲಿಕ್ಕೆ ಇದಕ್ಕಿಂತ ಕಾರಣ ಬೇಕೇ?  ಹೀಗೆ, ಸರೋವರವನ್ನು ಕಂಡಾಗ ದುರ್ಯೋಧನನ ಮನದಲ್ಲುಂಟಾದ ಭಾವದ ಪ್ರತಿಫಲನವನ್ನು, ಸ್ವತಃ ದುರ್ಯೋಧನನನ್ನು ಕಂಡು ಪಕ್ಷಿಗಳಲ್ಲುಂಟಾದ ಭಾವದಲ್ಲಿ ಕಟ್ಟಿಕೊಡುತ್ತಾನೆ.

ಇವೆಲ್ಲ ಕೇವಲ ಅಲಂಕಾರಗಳೆಂದೂ ಕವಿಚಮತ್ಕಾರಗಳೆಂದೂ ಓದಿ ಬಿಡುವಂಥದ್ದಲ್ಲ.  ಶಕ್ತಕವಿಯೊಬ್ಬ ಕೇವಲ ಚಪಲಕ್ಕಾಗಿ ಚಮತ್ಕಾರ ಪ್ರದರ್ಶಿಸಲಾರ.  ದುರ್ಯೋಧನನ ಆಗಿನ ಮನಸ್ಥಿತಿಯ ಪ್ರತಿಬಿಂಬವಾಗಿ ಚಿತ್ರಿತವಾಗುವ ವೈಶಂಪಾಯನ, ಇತರ ಸರೋವರ, ನದಿ, ಬೆಟ್ಟಗುಡ್ಡಗಳಂತಲ್ಲದೇ ಸ್ವತಃ ಒಂದು ಪಾತ್ರವಾಗಿಬಿಡುತ್ತದೆ.  ಭೀಷ್ಮರಿಂದ ಬೀಳ್ಕೊಂಡು ಉದ್ವಿಗ್ನಮನನಾಗಿ ಹೊರಡುವ ದುರ್ಯೋಧನನು ರಣಭೂಮಿಯಲ್ಲಿ ಕಂಡ ಬೀಭತ್ಸಗಳನ್ನು ಈಗಾಗಲೇ ನೋಡಿದೆವು.  ಅವೆಲ್ಲವೂ ಅವನ ಮನಸ್ಸಿನಲ್ಲಿ ಭಯಂಕರ ತುಮುಲವನ್ನೂ, ಭಯವನ್ನೂ, ಅಸಹ್ಯವನ್ನೂ, ಖಿನ್ನತೆಯನ್ನೂ ಹುಟ್ಟಿಸಿವೆ.  ಅಭಿಮಾನಧನನಾದ ದುರ್ಯೋಧನನು, ತನಗಿಷ್ಟವಿಲ್ಲದಿದ್ದರೂ ಭೀಷ್ಮನ ಬಲವಂತಕ್ಕೆ ಕಟ್ಟುಬಿದ್ದು ತನ್ನ ವ್ಯಕ್ತಿತ್ವಕ್ಕೆ ಒಂದಿನಿತೂ ಒಗ್ಗದ ಕಾರ್ಯ ಮಾಡಲು ಇಲ್ಲಿಗೆ ಬಂದಿದ್ದಾನೆ.  ಶತ್ರುಗಳಿಗೆ ಹೆದರಿ ಹೇಡಿಯಂತೆ ನೀರಿನಲ್ಲಿ ಅವಿತುಕೊಳ್ಳುವುದು ದುರ್ಯೋಧನನಂಥಾ ವೀರನಿಗೆ ಸಾವಿಗಿಂತಲೂ ಕೆಟ್ಟದ್ದು, ಅದು ಆತನ ವ್ಯಕ್ತಿತ್ವ ಕಾಣುತ್ತಿರುವ ಅಧಃಪಾತ - ಆದ್ದರಿಂದಲೇ ತಾನೀಗ ಹೊಗಲಿರುವ ಸರೋವರ, ತನ್ನ ವ್ಯಕ್ತಿತ್ವವನ್ನೂ ಕೀರ್ತಿಯಶಸ್ಸುಗಳನ್ನೂ ಪಾತಾಳಕ್ಕೆ ಕೊಂಡೊಯ್ಯುವ ಬಾಗಿಲಿನಂತೆ ತೋರುತ್ತದೆ; ಸೂರ್ಯನಂತೆ ಬೆಳಗಿದ್ದ ತನ್ನ ಕೀರ್ತಿ ಅಡಗಲಿರುವ ಘೋರಾಂಧಕಾರದ ಕೂಪದಂತೆ ಕಾಣುತ್ತದೆ; ಇದಾದಮೇಲೆ ಘೋರ ಅಪಮಾನ ಅಪಕೀರ್ತಿಗಳಲ್ಲದೇ ಇನ್ನೇನುಳಿಯಿತು ದುರ್ಯೋಧನನಿಗೆ?  ಅದು ಆತನ ಪಾಲಿಗೆ ಪ್ರಳಯವೇ - ಮಹಾದುರಂತ!  ಆದ್ದರಿಂದಲೇ ಈ ಸರೋವರ ಪ್ರಳಯಮೇಘದ ಕರಿನೆರಳಂತೆ ಕಂಡರೆ ಆಶ್ಚರ್ಯವೇನು?  ಇನ್ನು ದುರ್ಯೋಧನನ ಅಪಯಶಸ್ಸನ್ನೇ ಕಿವಿಗಡಚಿಕ್ಕುತ್ತಿರುವ ಜಲಪಕ್ಷಿಗಳ ಕೂಗನ್ನು ಮೇಲೇ ವರ್ಣಿಸಿದೆ. 
ಕೊನೆಗೆ, ಗಾಯಗಳಿಂದ ರಕ್ತವೊಸರುತ್ತಿದ್ದ ಮೈಯನ್ನು ಒರೆಸಿ ತೊಳೆದು, ಜಲಾಭಿಮಂತ್ರಣಪೂರ್ವಕವಾಗಿ ಸರೋವರದಲ್ಲಿಳಿಯುವ ದುರ್ಯೋಧನನನ್ನು ಪಂಪ ಬಣ್ಣಿಸುವ ಕವಿ, "ತನ್ನ ತೇಜದಿಂದ ಸಮಸ್ತಭೂವಲಯವನ್ನು ಬೆಳಗಿ, ದೈತ್ಯರೊಡನೆ ಹೋರಾಡಿ ಕಳೆಗುಂದಿ ಬಳಲಿ ಕೊನೆಗೆ ಪಡುಗಡಲಲ್ಲಿ ಮುಳುಗುವ ಸೂರ್ಯನಂತೆ ಫಣಿರಾಜಕೇತನನು ಕೊಳದಲ್ಲಿ ಮುಳುಗಿದನು - ವಿಧಿ ಕಟ್ಟಿಟ್ಟದ್ದನ್ನು ಕಳೆಯುವವರಾರು!" ಎಂದು ನಿಟ್ಟುಸಿರಿಡುತ್ತಾನೆ - "ಕುರುಕುಲಾರ್ಕನುಮ್ ಅರ್ಕನುಮ್ ಅಸ್ತಮನೆಯ್ದಿದರ್" ಎಂದು ರನ್ನನು ಕಟ್ಟಿಕೊಡುವ ದುರ್ಯೋಧನನ ಅವಸಾನದ ಚಿತ್ರಣವನ್ನು ಪಂಪ ಈಗಲೇ - ದುರ್ಯೋಧನನ ವೈಶಂಪಾಯನಪ್ರವೇಶದ ಸಂದರ್ಭದಲ್ಲೇ ಕೊಟ್ಟುಬಿಡುವುದು ವಿಶಿಷ್ಟವಾಗಿದೆ.  ದುರ್ಯೋಧನನ ತೇಜಸ್ಸಿನ ಅವಸಾನಕ್ಕೆ ಇದೇ ಶ್ರದ್ಧಾಂಜಲಿಯಂತೆ ಕೇಳುತ್ತದೆ.

ಕಲ್ಪನೆಯಲ್ಲೂ ಪ್ರಸ್ತುತಿಯಲ್ಲೂ ಕೊನೆಗೆ ಭಾಷೆಯಲ್ಲೂ ಅನೇಕ ಬಾರಿ ಪಂಪನನ್ನು ಪಡಿನೆಳಲಂತೆ ಅನುಸರಿಸುವ ರನ್ನನು ಇದೇ ವೈಶಂಪಾಯನಪ್ರಸಂಗವನ್ನು ವರ್ಣಿಸುವ ಬಗೆ ಬೇರೆ.  ಪಂಪನಲ್ಲಿ ದುರಂತವೆಂಬಂತೆ ಚಿತ್ರಿತವಾಗಿರುವ ಈ ಭಾಗವನ್ನು ರನ್ನನು ಅದೂ ಸುಯೋಧನನ ವೈಭವವೋ ಎಂಬಂತೆಯೇ ಚಿತ್ರಿಸುತ್ತಾನೆ - "ನರಲೋಕವನ್ನು ಅನುಭವಿಸಿ, ಸ್ವರ್ಗಸುಖವನ್ನೂ ವೈಭವದಿಂದ ಅನುಭವಿಸಿ ಅನಂತರ ನಾಗಲೋಕವನ್ನು ಹೊಗುವಂತೆ ಕುರುಪತಿಯು ವೈಶಂಪಾಯನವನ್ನು ಹೊಕ್ಕನು (ನರಲೋಕಮನುಪಭೋಗಿಸಿ ಸುರಲೋಕದ ಸುಖಮನಾತ್ಮವಿಭವದೆ ತಳೆದಾ ಕುರುಪತಿ ವೈಶಂಪಾಯನ ಸರಮಂ ಪುಗುವಂತೆ ನಾಗಲೋಕವ ಪೊಕ್ಕಂ) ಎನ್ನುತ್ತಾನೆ.  ಮುಂದೆ ದುರ್ಯೋಧನನು ಹತನಾದಾಗಲೂ "ಕುರುಕುಲಾರ್ಕನುಮ್ ಅರ್ಕನುಮ್ ಅಸ್ತಮನೆಯ್ದಿದರ್" ಎಂದು ಭಾವಪೂರ್ಣವಾಗಿ ಬೀಳ್ಕೊಡುತ್ತಾನೆ.

ಆದರೆ ಈ ವೈಭವದ ಪ್ರಭಾವಳಿಯನ್ನೇನೂ ಹಚ್ಚದ ಪಂಪನಿಗೆ ದುರ್ಯೋಧನನು ವೈಶಂಪಾಯನದಲ್ಲಿಳಿಯುವ ಈ ಪ್ರಸಂಗ, ದುರ್ಯೋಧನನ ದುರಂತದಂತೆ, ಸ್ವತಃ ಅದೇ ಆತನ ಅವಸಾನದಂತೆ ಕಾಣುತ್ತದೆ - ಮಾನಧನನಿಗೆ ಅಪಮಾನಕ್ಕಿಂತ, ಅಪಕೀರ್ತಿ ಅಪಯಶಗಳಿಗಿಂತ ಬೇರೆ ಸಾವುಂಟೇ?  ಆದ್ದರಿಂದ ಈ ಪ್ರಸಂಗವನ್ನೇ ಆತನ ಅವಸಾನವೆಂಬಂತೆ ಚಿತ್ರಿಸುವ ಪಂಪ, ಮುಂದೆ ಆತನು ನಿಜವಾಗಿ ಯುದ್ಧದಲ್ಲಿ ಸತ್ತುದನ್ನು ಚಿತ್ರಿಸುವ ಗೋಜಿಗೇ ಹೋಗುವುದಿಲ್ಲ - ಕರ್ಣನ ಅವಸಾನವನ್ನು ಚಿತ್ರಿಸುವ ಅಥವಾ ಮುಂದೆ ರನ್ನನು ದುರ್ಯೋಧನನ ಅವಸಾನವನ್ನೇ ಚಿತ್ರಿಸುವ ವೈಭವ ಇಲ್ಲಿ ಕಾಣುವುದೇ ಇಲ್ಲ! ಅದು ಏನೇನೂ ಮುಖ್ಯವಲ್ಲವಂತೆ "ಎಮಗಂತ್ಯಕಾಲಮೆಂದು ದುರ್ಯೋಧನಂ ಪ್ರಾಣತ್ಯಾಗಂಗೈದಂ" ಎಂದು ಅರ್ಧವಾಕ್ಯದಲ್ಲಿ ಮುಗಿಸಿಬಿಡುತ್ತಾನೆ!  ನಿಜವೇ.  ವೈಶಂಪಾಯನವನ್ನು ಹೊಕ್ಕು ಅಡಗಿ ಕುಳಿತಾಗಲೇ ದುರ್ಯೋಧನನು ಸತ್ತಿದ್ದಾಯಿತು.  ಆಮೇಲೆ ಉಳಿದದ್ದು, ಊರುಭಂಗ ಮಕುಟಭಂಗಗಳ ಹೀನಾಯವನ್ನು ಅನುಭವಿಸಿದ್ದು, ಆಮೇಲೆ ಸತ್ತು ಬಿದ್ದದ್ದು ಕೇವಲ ಉಸಿರಾಡುತ್ತಿದ್ದ ಆತನ ಶರೀರವಷ್ಟೇ.

ಹೀಗಾಗಿ, ದುರ್ಯೋಧನನ ಉಗ್ರತೇಜದ ಅಂತಿಮ ಕ್ಷಣಗಳನ್ನು - ನಿಜಾರ್ಥದಲ್ಲಿ ಆತನ ಅವಸಾನವನ್ನು - ಈ ವೈಶಂಪಾಯನ ಪ್ರಸಂಗ ಬಹು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

ಬೆಳಗಿ ಸಮಸ್ತಭೂವಳಯಮಂ ನಿಜ ತೇಜದಿನಾಂತ ದೈತ್ಯರಂ
ತಳವೆಳಗಾಗೆ ಕಾದಿ ಚಳಿತೆಯ್ದಿ ಬೞಲ್ದಪರಾಂಬುರಾಶಿಯೊಳ್|
ಮುೞುಗುವ ತೀವ್ರದೀಧಿತಿವೊಲಾ ಕೊಳದೊಳ್ ಫಣಿರಾಜಕೇತನಂ
ಮುೞುಗಿದನಾರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ

(ಚಿತ್ರಕೃಪೆ: ಅಂತರ್ಜಾಲ)

Thursday, March 16, 2017

ಕಲೆಗೆ ಕಟ್ಟೆಲ್ಲಯ್ಯಾ...

ರೇಡಿಯೋ ನಮ್ಮ ದಿನಚರಿಯನ್ನು ನಿಯಂತ್ರಿಸುತ್ತಿದ್ದ ಕಾಲ ಅದು.  ನನ್ನ ಬಾಲ್ಯದ ಬೆಳಗುಗಳು ಶುರುವಾಗುತ್ತಿದ್ದುದೇ ನಮ್ಮ ತಂದೆಯವರ ರೇಡಿಯೋದಲ್ಲಿ ಬೆಳಗ್ಗೆ ಐದಕ್ಕೋ ಐದೂವರೆಗೋ ಅದಾವುದೋ ಸ್ಟೇಷನ್ನಿನಿಂದ ಮೊಳಗುತ್ತಿದ್ದ ಹಮ್ದ್ ಒ ನಾತ್ - ಇಸ್ಲಾಮ್ ಭಕ್ತಿಗೀತೆಗಳ ಕಾರ್ಯಕ್ರಮದಿಂದ. ಬೆಳಗಿನ ಮೌನವನ್ನು ಮೆಲ್ಲಮೆಲ್ಲಗೆ ಸರಿಸುತ್ತಾ, ಮಂದ್ರವೂ ಅಲ್ಲದ, ಕೀರಲೂ ಅಲ್ಲದ, ಸಹಜ ಧ್ವನಿಯಲ್ಲಿ ಹೊಮ್ಮುತ್ತಿದ್ದ ಗೀತೆಗಳು ವಾತಾವರಣದಲ್ಲಿ ಅದೊಂದು ರೀತಿಯ ಪ್ರಸನ್ನತೆಯನ್ನು ಪಸರಿಸುತ್ತಾ ಬೆಳಗಿನ ಸಕ್ಕರೆನಿದ್ದೆಯ ಸಿಹಿಯನ್ನು ಹೆಚ್ಚಿಸುತ್ತಿತ್ತು.  ಅದಾದಮೇಲೆ ಆರು ಗಂಟೆಗೆ ಬೆಂಗಳೂರು ಕೇಂದ್ರದ ಪ್ರಸಾರ ಶುರುವಾಗುತ್ತಿತ್ತು - ಒಂದೆರಡು ನಿಮಿಷ ನಾದಸ್ವರವಾದನ, ವಂದೇಮಾತರಂ, ಆಮೇಲೆ ಇಂಗ್ಲಿಷಿನಲ್ಲಿ ವಾರ್ತೆಗಳು, ಅನಂತರ ಗೀತಾರಾಧನ - ಭಕ್ತಿಗೀತೆಗಳ ಕಾರ್ಯಕ್ರಮ - ಹೀಗೆ ಸಾಗುತ್ತಿತ್ತು.  ಸಾಹಿತ್ಯ ಕಿವಿಗೆ ಬಿದ್ದರೂ ಅರ್ಥವಾಗದ ಕಾಲ, ಈ ಹಮ್ದ್ ನಾತ್ ಗೀತೆಗಳಲ್ಲಿ ಕೆಲವು - ಅಪ್ನಾ ಕ್ಯಾ ಹೈ, ತಮಾಮ್ ಉನ್ಕಾ ಹೈ; ಯೆಹ್ ಸಬ್ ತುಮ್ಹಾರಾ ಕರಮ್ ಹೈ ಆಕಾ ಮುಂತಾಗಿ ಹಲವು ಗೀತೆಗಳು ಇವತ್ತಿಗೂ ಕಿವಿಗಳಲ್ಲಿ ಅಚ್ಚೊತ್ತಿವೆ (ಹಾಡುತ್ತಿದ್ದ ಕಲಾವಿದರಾರೋ ಪರಿಚಯವಾಗದ ವಯಸ್ಸದು - ಆ ಮಾಧುರ್ಯವೂ ಆರ್ತತೆಯೂ ಸರಳತೆಯೂ ಮತ್ತೆ ಸಿಕ್ಕೀತೇ ಎಂದು ಇಂಟರ್ನೆಟ್ಟಿನಲ್ಲಿ ಹುಡುಕಿ ವಿಫಲನಾಗಿದ್ದೇನೆ).  ನಾದಮಾಧುರ್ಯವನ್ನು ಮೀರಿ ಹಾಡಿನಲ್ಲಿನ ’ಮಾತು’ ಸುಮಾರಾಗಿ ಅರ್ಥವಾಗತೊಡಗಿದ ಮೇಲೂ, ಭಾವವದಲ್ಲಾಗಲೀ ಭಕ್ತಿಯಾಗಲೀ ಈ ಗೀತೆಗಳು ನಮ್ಮದೇ ವಚನ-ದಾಸರ ಪದಗಳಿಂದ ಹೊರಗಿನವೆನಿಸಲಿಲ್ಲವೆನ್ನುವುದು ನನ್ನ ಅನುಭವ.   "ಕಿಸೀ ಕಾ ಎಹೆಸಾನ್ ಕ್ಯೂನ್ ಉಠಾಯೇನ್, ಕಿಸೀ ಕೊ ಹಾಲಾತ್ ಕ್ಯೂನ್ ಬತಾಯೇನ್; ತುಮ್ ಹಿ ಸೆ ಮಾಂಗೇಂಗೆ ತುಮ್ ಹೀ ದೋಗೇ (ಯಾರ ನೆರವನೋ ಕೇಳುವುದೇಕೆ, ಮತ್ತಾರೊಳೊ ಅಳಲನು ಪೇಳುವುದೇಕೆ; ಬೇಡುವೆವು ನಿನ್ನೊಬ್ಬನನೆ ನೀನೀವೆ ಬೇಡಿದ್ದೆಲ್ಲವ)" ಈ ಸಾಲು, "ಹಾಡಿದರೆ ಎನ್ನ ಒಡೆಯನ ಹಾಡುವೆ, ಬೇಡಿದರೆ ಎನ್ನ ಒಡೆಯನ ಬೇಡುವೆ, ಒಡೆಯಗೆ ಒಡಲನು ತೋರುವೆ ಎನ್ನ ಬಡತನ ಬಿನ್ನಹ ಮಾಡುವೆ" ಎಂಬ ದಾಸವಾಣಿಗಿಂತ ಬೇರೆನಿಸುವುದೇ?    ಈ ಶರಣಾಗತಿ, ಪ್ರಪತ್ತಿ, ಏಕದೈವಾರಾಧನೆ, ಇವೆಲ್ಲ ಈ ನೆಲದ ಪರಿಕಲ್ಪನೆಗಳೇ ತಾನೆ! 

ಖವ್ವಾಲಿಗಳ ಕಡೆ ನಮ್ಮ ತಂದೆಯವರಿಗಿದ್ದ ಸೆಳೆತ ಕೇವಲ ಸಂಗೀತದ ಗಮ್ಮತ್ತಿನ ಕುರುಡು ಸೆಳೆತವಾಗಿರಲಿಲ್ಲ, ಅಲ್ಲೊಂದು ಅನುಸಂಧಾನವೂ ಇತ್ತೆಂಬುದು ಹಿನ್ನೋಟದಲ್ಲಿ ನನಗನಿಸಿದೆ.  ಎಷ್ಟೋ ಬಾರಿ ಅಲ್ಲೊಂದು ಇಲ್ಲೊಂದು ಸಾಲುಗಳ ಅರ್ಥ ಕೇಳಿದಾಗ, ಅವರು ಅರ್ಥವನ್ನು ಕನ್ನಡದಲ್ಲಿ ಹೇಳುವುದಲ್ಲದೇ ಅದೇ ಭಾವಮುದ್ರೆಯನ್ನು ದಾಸರ ಪದಗಳಿಂದಲೋ ವಚನಗಳಿಂದಲೋ ತಂದೊದಗಿಸುತ್ತಿದ್ದುದೂ ಉಂಟು.  ಹೀಗಾಗಿ, ಕಲೆಯ ಮಟ್ಟದಲ್ಲಿರಲಿ, ಧರ್ಮದ, ಅನುಭಾವದ ಮಟ್ಟದಲ್ಲೂ ನಮಗಿವು ಹೊರಗಿನವೆಂದು ಅನ್ನಿಸಿರಲೇ ಇಲ್ಲ.  ಇವತ್ತು ಬಲವಂತವಾಗಿಯಾದರೂ ತಂದುಕೊಳ್ಳಬೇಕಾಗಿರುವ ’ಸರ್ವಧರ್ಮಸಮನ್ವಯ’, ಆ ಪದದ ಪರಿಚಯವೂ ಇಲ್ಲದ ಬಾಲ್ಯದಲ್ಲಿ, ಬೆಳಗಿನ ಸವಿ-ಅರೆನಿದ್ದೆಯ ರೂಪದಲ್ಲಿ ನನ್ನದಾಗಿದ್ದು, ನನಗೊದಗಿದ ಬಹು ದೊಡ್ಡ ಸಂಸ್ಕಾರವೆಂದೇ ನನ್ನೆಣಿಕೆ.

ಮೊನ್ನೆ ದೂರದರ್ಶನ ವಾಹಿನಿಯೊಂದರಲ್ಲಿ ಸುಹಾನಾ ಎಂಬ ಹೆಣ್ಣುಮಗಳು ’ಹಿಂದೂ’ ಭಕ್ತಿಗೀತೆ ಹಾಡಿದ್ದನ್ನೇ ಒಂದು ಅದ್ಭುತವೆಂಬಂತೆ ಕಾರ್ಯಕ್ರಮ ನಿರ್ವಾಹಕರು ಹಿಗ್ಗಾಮುಗ್ಗಾ ಕೊಂಡಾಡಿದ್ದೂ, ಅದೇ ಕಾರಣಕ್ಕಾಗಿ ಆಕೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದದ್ದೂ, ನೋಡಿದಾಗ, ಕಳೆದುಹೋದ ಪ್ರಸನ್ನಬಾಲ್ಯ ನೆನಪಾಯಿತು.  ಘಟನೆಯೇ ಅಲ್ಲದ ಘಟನೆಗೆ ಇಷ್ಟು ಹುಯ್ಯಲೆಬ್ಬಿಸುವ ನಾವು, ಕಾಲದಿಂದ ನಮ್ಮನ್ನು ಬೆಸೆದಿರುವ ಧಾರ್ಮಿಕ ಸಾಮರಸ್ಯವನ್ನು ಕಾಣದೇ ಹೋಗುತ್ತಿದ್ದೇವೆಯೇ? ಎಷ್ಟು ಜನ ಮುಸ್ಲಿಮ್ ಭಕ್ತರು ಹಿಂದೂ ದೇವಾಲಯಗಳಿಗೆ ಹರಕೆ ಹೊರುತ್ತಾರೆ, ಹಿಂದೂಗಳು ದರ್ಗಾಗಳಿಗೆ ಹರಕೆ ಸಲ್ಲಿಸಿ ಸಕ್ಕರೆ ಪ್ರಸಾದ ಕೊಂಡು ಬರುತ್ತಾರೆ, ಎಷ್ಟು ಊರೊಟ್ಟಿನ ಹಿಂದೂ ದೇವಾಲಯಗಳ ಆಡಳಿತ ಮಂಡಲಿಯಲ್ಲಿ ಊರಿನ ಗಣ್ಯ ಮುಸ್ಲಿಮರಿರುತ್ತಾರೆ! ಇನ್ನು ಹಿಂದೂ ಮುಸ್ಲಿಂ ಭಾವೈಕ್ಯವನ್ನು ಸಾರಿದ, ನಮ್ಮೆಲ್ಲರ ಒಡೆಯನೊಬ್ಬನೇ ಎಂಬ ಸತ್ಯವನ್ನು ಪದೇಪದೇ ಎತ್ತಿಹಿಡಿದ ಅದೆಷ್ಟು ಸೂಫೀ ಸಂತರು ಈ ನೆಲದಲ್ಲಿ ಆಗಿಹೋಗಿಲ್ಲ!  ಇರಲಿ, ಧಾರ್ಮಿಕ-ಆಧ್ಯಾತ್ಮಿಕ ಸ್ತರದಲ್ಲೇ ಈ ಪರಿಯ ಸಾಮರಸ್ಯ ಸಾಧಿಸಿದ ಈ ಮಣ್ಣಿನ ಗುಣ, ಕಲೆಯಲ್ಲಿ ಧರ್ಮದ ಭೇದವನ್ನೆಣಿಸಿದ ಉದಾಹರಣೆಗಳಿವೆಯೇ? ಧರ್ಮವೊಂದು ಸಂಗೀತವನ್ನು ’ಹರಾಮ್’ ಎನ್ನುತ್ತದೆನ್ನುವುದು, ಸ್ವತಃ ಧಾರ್ಮಿಕರ ನಡುವೆಯೇ ವಿವಾದಕ್ಕೊಳಪಟ್ಟ ವಿಷಯ.  ಆದರೆ, ಕಲಾವಿದ, ಅದೊಂದಕ್ಕೂ ತಲೆ ಕೆಡಿಸಿಕೊಂಡದ್ದೇ ಇಲ್ಲ!  ಭಾರತೀಯ, ಅದರಲ್ಲೂ ಹಿಂದೂಸ್ತಾನೀ ಸಂಗೀತಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು ಮುಸ್ಲಿಮರೆಂಬುದನ್ನು ಮರೆಯುವಂತಿಲ್ಲ - ಸ್ವತಃ ತಾನ್ಸೇನನ ಮಕ್ಕಳಾದ ಬಿಲಾಸ್ ಖಾನ್, ತಾನತರಂಗ್ ಖಾನರಿಂದ ಹಿಡಿದು ತೀರ ಕಳೆದ ಶತಮಾನದ ಅಮೀರ್ ಖಾನರವರೆಗೆ ಎಷ್ಟು ಜನ!  ಅವರಲ್ಲಿ ಹಲವರು ಸ್ವತಃ ಘರಾನೆಗಳನ್ನು ಹುಟ್ಟುಹಾಕಿದವರು, ಹಲವರು ಕಳೆಗುಂದಿದ್ದ ಘರಾನೆಗಳನ್ನು ಉಜ್ಜಿ ಹೊಳಪು ನೀಡಿದವರು.  ಒಂದು ಕಾಲಕ್ಕೆ ಇದು ಎಷ್ಟು ಮುಸ್ಲಿಂ ಮಯವಾಗಿತ್ತೆಂದರೆ, ಉತ್ತರಾದಿ ಸಂಗೀತವೆಂದರೆ ಮುಸಲರ ಸಂಗೀತವೆನ್ನುವಷ್ಟು.  ಆದರೆ ಇವರೆಲ್ಲ ನೀಡಿದ್ದು ಅದೆಂಥಾ ದೈವೀ ಗಾನ!  ಇದನ್ನು ’ಹರಾಮ್’ ಎನ್ನಲಾದೀತೇ?  ಸಂಗೀತಕ್ಕೆ ಕಲೆಗೆ ಇನ್ನಿಲ್ಲದಂತೆ ಪ್ರೋತ್ಸಾಹ ನೀಡಿದ ಮುಘಲ್ ಅರಸರು ಸ್ವತಃ ಸಂಗೀತಕಲೆಯಲ್ಲಿ ನಿಷ್ಣಾತರಾಗಿದ್ದರೆಂಬುದನ್ನೂ ಮರೆಯುವಂತಿಲ್ಲ (ಕೆಲವು ಅಪವಾದಗಳನ್ನುಳಿದು).  ಧರ್ಮದ ಕಟ್ಟಿರಲಿ, ಸಂಗೀತಕ್ಕೆ ಲಿಂಗದ ಕಟ್ಟಾದರೂ ಇದೆಯೇ? ಉಹೂಂ!  ಸಾಂಪ್ರದಾಯಿಕವಾಗಿ ಸಂಗೀತನೃತ್ಯಗಳು ಸ್ತ್ರೀಯರದೇ ಭದ್ರಕೋಟೆ.  ಈಗ ಬಿಡಿ, ಈ ಹಿಂದೆಯೂ ಅದೆಷ್ಟು ಜನ ವಿದುಷಿಯರು ಆಗಿಹೋದವರು!   ಗೋಹರ್ ಜಾನ್, ಗೋಹರ್ ಬಾಯಿ ಕರ್ನಾಟಕಿ, ಅಮಿರ್ ಬಾಯಿ ಕರ್ನಾಟಕಿ, ಅಬ್ದುಲ್ ಕರೀಮ್ ಖಾನರ ಶಿಷ್ಯೆ ರೋಷನಾರಾ ಬೇಗಂ, ಮತ್ತೆ ನಮ್ಮವರೇ ಆದ ಬೆಂಗಳೂರು ನಾಗರತ್ನಮ್ಮ (ಈಕೆಯ ಪ್ರಸಿದ್ಧಿ ಸಂಗೀತವೊಂದಕ್ಕೇ ಅಲ್ಲ - ತಿರುವಯ್ಯಾರಿನಲ್ಲಿ ಪಾಳಾಗಿದ್ದ ಸಂತ ತ್ಯಾಗರಾಜರ ಸಮಾಧಿಸ್ಥಳವನ್ನು ಪತ್ತೆಹಚ್ಚಿ, ಅದಕ್ಕೊಂದು ಭವನವನ್ನು ನಿರ್ಮಾಣಮಾಡಿ ವರ್ಷವರ್ಷ ಆರಾಧನೆ ನಡೆಯುವಂತೆ ಅನುವುಗೊಳಿಸಿದ್ದು, ಅದಕ್ಕೋಸ್ಕರ ತನ್ನೆಲ್ಲ ಸಂಪತ್ತನ್ನೂ ಸುರಿದದ್ದು ಈ ಮಹಾನ್ ಚೇತನ.  ಇವತ್ತು ತಿರುವಯ್ಯಾರು ದಕ್ಷಿಣಾದಿ ಸಂಗೀತದ ಶ್ರದ್ಧಾಕೇಂದ್ರವಾಗಿದ್ದರೆ ಅದರ ಶ್ರೇಯಸ್ಸು ಶ್ರೀಮತಿ ನಾಗರತ್ನಮ್ಮನವರಿಗೆ ಸೇರತಕ್ಕದ್ದು).  ಒಂದು ಕಾಲಕ್ಕೆ ’ಕುಲೀನ’ಸ್ತ್ರೀಯರು ಸಂಗೀತ-ನೃತ್ಯಗಳಲ್ಲಿ ಈಡುಪಡುವುದಕ್ಕೆ ನಿಷೇಧವಿದ್ದದ್ದು ನಿಜ, ಆದರೆ ಅದು ಕೇವಲ ಒಂದು ಕಾಲಘಟ್ಟವಷ್ಟೇ.  ಈಗಂತೂ ಆ ’ನಿಷೇಧ’ ಹೇಳಹೆಸರಿಲ್ಲದಂತೆ ಮಾಯವಾಗಿದೆಯಲ್ಲವೇ?  ಉತ್ತರಾದಿ ಸಂಗೀತವಿರಲಿ, ಇಸ್ಲಾಮಿಕ್ ಭಕ್ತಿಸಂಗೀತದಲ್ಲೂ ಆ ಕಟ್ಟು ಎಲ್ಲಿದೆ ಇವೊತ್ತು?  ಸಂಗೀತ ಸಾಮ್ರಾಜ್ಞಿ ಪರ್ವಿನ್ ಸುಲ್ತಾನಾ, ಬೇಗಮ್ ಅಕ್ತರ್, ಅಬಿದಾ ಪರ್ವೀನ್ ಇವರಾರ ಹೆಸರನ್ನೂ ನಾವು ಕೇಳಿಲ್ಲವೇ? (ಹೆಸರುಗಳು ಪ್ರಾತಿನಿಧಿಕವಷ್ಟೇ, ಇಂದು ಖ್ಯಾತನಾಮರಾದ ವಿವಿಧ ಧರ್ಮಗಳ ಎಲ್ಲ ಸ್ತ್ರೀ ಪುರುಷ ಕಲಾಕಾರರ ಹೆಸರುಗಳನ್ನು ಬರೆದರೆ ಗ್ರಂಥವೇ ಬೇಕಾದೀತು).

ಸಂಗೀತವೇನೋ ಹೋಗಲಿ, ಆದರೆ ಅದರಲ್ಲಿ ’ಮಾತು’ ಇದೆಯಲ್ಲ, ಅದು ’ಅನ್ಯ’ ಧರ್ಮಕ್ಕೆ ಕಟ್ಟುಬಿದ್ದಿದೆಯಲ್ಲವೇ ಎನ್ನುವುದಾದರೆ, ಅದಕ್ಕೆ ಸಮಾಧಾನ ಈ ಲೇಖನದ ಮೊದಲಲ್ಲೇ ಇದೆ.  ಕಟ್ಟುಗಳಿರುವುದು ನೋಡುವವನ ಕಣ್ಣಿನಲ್ಲೇ ಹೊರತು ಗೀತೆಗಳಲ್ಲಲ್ಲ.  (ಅ)ಧಾರ್ಮಿಕ ಸಾಹಿತ್ಯವೆಂಬ ಕಾರಣಕ್ಕೆ ಮೇಲೆ ವಿವರಿಸಿದ ಮಹನೀಯ ಸಂಗೀತಗಾರರು ಯಾರೂ ತಾವು ಹಾಡುವ ಬಂದಿಶ್, ಠುಮ್ರಿಗಳಲ್ಲಿ ಸಾಹಿತ್ಯವನ್ನು ಬಿಟ್ಟು ಬರೀ ಸ್ವರವನ್ನೇ ಹಾಡಿದ್ದಿಲ್ಲ - ಅಂದ ಮಾತ್ರಕ್ಕೆ ಅವರು ಧರ್ಮಭ್ರಷ್ಟರಾಗಿದ್ದೂ ಇಲ್ಲ ಎಂಬುದನ್ನು ಗಮನಿಸಬೇಕು.  ಅಷ್ಟೇಕೆ, ಭಕ್ತಿಪ್ರಧಾನವೆಂದೇ ಹೆಸರಾದ ಕರ್ನಾಟಕಸಂಗೀತದಲ್ಲೇ ಸಾಧನೆಯ ಉತ್ತುಂಗಕ್ಕೇರಿದ ’ಹಿಂದು’ ಅಲ್ಲದ ಮಹನೀಯರಿದ್ದಾರೆ.  ಪಕ್ಕನೆ ಯಾರಿಗೂ ಹೊಳೆಯಬಹುದಾದ ಉದಾಹರಣೆ, ಡಾ. ಯೇಸುದಾಸರದು.  ಇನ್ನು ಹಿಗ್ಗಿನ್ಸ್ ಭಾಗವತರ್ ಎಂದೇ ಹೆಸರಾಗಿದ ಅಮೆರಿಕೆಯ ಶ್ರೀ ಜಾನ್ ಬಿ ಹಿಗಿನ್ಸ್ ಹೆಸರನ್ನು ಕರ್ನಾಟಕಸಂಗೀತ ರಸಿಕರು ಮರೆಯುವುದಕ್ಕಿಲ್ಲ.  ಅಂತೆಯೇ ಶೇಕ್ ಚಿನ್ನಾ ಮೌಲಾನ, ನಾಗೋರ್ ಎಸ್ ಎಮ್ ಎ ಖಾದಿರ್, ನಾಗೋರ್ ಯೂಸುಫ್, ದಾಸರ ಪದಗಳ ಕಂಪು ಹರಡುತ್ತಿರುವ ಹುಸೈನ್ ಸಾಬ್, ಫಯಾಜ್ ಖಾನ್, ಖಾನ್ ಸಹೋದರರೆಂದೇ ಹೆಸರಾದ ಉಸ್ತಾದ್ ರಾಯಿಸ್ ಬಲೇ ಖಾನ್ ಮತ್ತು ಹಫೀಜ಼್ ಬಲೇ ಖಾನ್... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.  ಅಷ್ಟೇಕೆ, ಸ್ವತಃ ಉಸ್ತಾದ್ ಅಬ್ದುಲ್ ಕರೀಮ್ ಖಾನರು ಕರ್ನಾಟಕ ಸಂಗೀತಕೃತಿಗಳಾದ ರಾಮ ನೀ ಸಮಾನಮೆವರು (ಖರಹರಪ್ರಿಯ) ಮತ್ತು ಎಂತನೇರ್ಚಿನ (ಸಾವೇರಿ) ಎಂಬ ಎರಡು ಕೃತಿಗಳನ್ನು ಹಾಡಿರುವ ಅಪರೂಪದ ಧ್ವನಿಮುದ್ರಣ ಲಭ್ಯವಿದೆ (ಇವು ’ಹಿಂದೂ’ ಭಕ್ತಿರಚನೆಗಳೆಂದು ಪ್ರತ್ಯೇಕ ಹೇಳಬೇಕಿಲ್ಲವಲ್ಲ). 

ಸಂಗೀತ, ಸಾಹಿತ್ಯ, ಕಲೆಗಳು ಅಭಿವ್ಯಕ್ತಿಸಾಧನಗಳು.  ಅಭಿವ್ಯಕ್ತಿಯ ಹೆಸರಿನಲ್ಲಿ ಬರುವ ವಿಕೃತಿಗಳನ್ನು, ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ತಡೆಗಟ್ಟಲು ಕಾನೂನು ಮಾಡಬಹುದು, ಧರ್ಮಶಾಸ್ತ್ರದ ಕಟ್ಟುಗಳನ್ನು ಹಾಕಬಹುದು.  ಆದರೆ ಹಾಗೆ ಸಮಾಜಕ್ಕೆ ಕೆಡಕುಂಟುಮಾಡದ ಶುದ್ಧ ಅಭಿವ್ಯಕ್ತಿಯನ್ನು ಯಾವ ಕಟ್ಟುಕಟ್ಟಲೆಗಳೂ ತಡೆಯಲು ಸಾಧ್ಯವಿಲ್ಲ - ಅದು ದೇಶ ಲಿಂಗ ಧರ್ಮಗಳಿಗೆ ಅತೀತವಾದುವು. 

ದೇಶ ಕಂಡ ಅತ್ಯುತ್ತಮ ಕಲಾವಿದರಲ್ಲೊಬ್ಬರಾದ ಶಹನಾಯ್ ಸಾಮ್ರಾಟ್ ಉಸ್ತಾದ್ ಬಿಸ್ಮಿಲ್ಲಾ ಖಾನರು ಈ ಸಂಗೀತವೆಂಬ ’ಹರಾಮ್’ ಬಿಟ್ಟುಬಿಡಿರೆಂದು ಬೋಧಿಸಿದ ಧರ್ಮಗುರುವೊಬ್ಬರಿಗೆ ನೀಡಿದ ಉತ್ತರ ಮಾರ್ಮಿಕವಾಗಿದೆ:  "ನಾನೀಗ "ಅಲ್ಲಾಹು ಅಲ್ಲಾಹ್" ಎಂದು ಭೈರವ್ ರಾಗದಲ್ಲಿ ಹಾಡ್ತೇನೆ ಎಂದುಕೊಳ್ಳಿ.  ನೀವು ಅದನ್ನ ಅಲ್ಲಾಹ್ ಎನ್ನುತ್ತೀರಿ, ಆದರೆ ಅದರ ರಾಗವಂತೂ ಭೈರವವೇ.  ಕೇಳುವವರು ರಾಗವನ್ನ ಕೇಳುತ್ತಾರೆ, ಸ್ಮರಿಸುವವರು ಭಗವಂತನನ್ನು ಸ್ಮರಿಸುತ್ತಾರೆ, ಇದರಲ್ಲಿ ಹರಾಮ್ ಏನು ಬಂತು?"

ಅದೂಂದು ಅಲೌಕಿಕ ಶಕ್ತಿ - ಅದನ್ನು ಅಲ್ಲಾಹ್ ಎನ್ನಿ, ರಾಮನೆನ್ನಿ, ಶಿವನೆನ್ನಿ - ಎದೆಯೆದೆಯಲ್ಲೂ ಒಂದು ಜ್ಯೋತಿಯನ್ನು ಹೊತ್ತಿಸಿ ಇಟ್ಟಿದೆ - ಅದೇ ಪ್ರೀತಿ.  ಅದನ್ನು ಉದ್ದೀಪಿಸುವ ಸಾಧನಗಳೇ ಕಲೆ, ಸಾಹಿತ್ಯ, ಸಂಗೀತಗಳು.  ಅವನ್ನು ಉಪಯೋಗಿಸಿಕೊಂಡು ಎದೆಯ ಬೆಳಕನ್ನು ಕಾಪಿಟ್ಟುಕೊಳ್ಳುವುದು ನಮ್ಮ ಕೈಲೇ ಇದೆಯಲ್ಲವೇ?

ಅಂಧೇರೇ ಮೆ ದಿಲ್ ಕೇ ಚಿರಾಗ್ ಏ ಮೊಹಬ್ಬತ್
ಏ ಕಿಸ್ ನೇ ಜಲಾಯಾ ಸವೇರೇ ಸವೇರೇ

(ಚಿತ್ರಕೃಪೆ: ಅಂತರ್ಜಾಲ)

ಸೂ:  ಈ ಲೇಖನ ಇಂದಿನ ವಿಶ್ವವಾಣಿ ಪತ್ರಿಕೆಯ ’ಗುರು’ ವಿಭಾಗದಲ್ಲಿ "ಕಟ್ಟುವಿರೋ ಕಟ್ಟಿ ಕಲಾಧರ್ಮ" ಎಂಬ ಶೀರ್ಷಿಕೆಯಡಿ ಪ್ರಕಟವಾಗಿದೆ.  ಪ್ರಕಟಿತ ಲೇಖನದ ಕೊಂಡಿ ಇಲ್ಲಿದೆ:
http://epaper.vishwavani.news/bng/e/bng/16-03-2017/15