Showing posts with label ೧೦. ಚುಚ್ಚಿದ್ದು - ಕಚ್ಚಿದ್ದು. Show all posts
Showing posts with label ೧೦. ಚುಚ್ಚಿದ್ದು - ಕಚ್ಚಿದ್ದು. Show all posts

Friday, April 1, 2022

ಮನುಷ್ಯಜಾತಿ ತಾನೊಂದೆ ವಲಂ...

ಆದಿಕವಿ ಪಂಪನೇ ಹೀಗೆ ಹೇಳಿದ್ದಾನೆ, ಆದ್ದರಿಂದ ಮನುಷ್ಯರೆಲ್ಲ ಒಂದೇ, ನಮ್ಮಲ್ಲಿ ಭೇದಭಾವ ಸಲ್ಲ ಎಂಬರ್ಥದ ಅಭಿಪ್ರಾಯವೊಂದನ್ನು ಫೇಸ್ಬುಕ್ಕಿನಲ್ಲಿ ನೋಡಿದೆ.  ಈ ಅಭಿಪ್ರಾಯದ ಬಗೆಗೆ ನಮ್ಮ ತಕರಾರಿಲ್ಲ; ಅಥವಾ ಮೇಲಿನ ಮಾತುಗಳು ಪಂಪನವೇ ಎಂಬಲ್ಲಿ ಕೂಡ ತಕರಾರಿಲ್ಲ.  ಆದರೆ ಮೇಲಿನ ಮಾತುಗಳು ಈ ಅಭಿಪ್ರಾಯವನ್ನು ಸೂಚಿಸುತ್ತವೆ ಎಂಬ 'ಮೂಢನಂಬಿಕೆ'ಯ ಬಗೆಗಷ್ಟೇ ತಕರಾರು.

ಇದು ಹೊಸದೇನಲ್ಲ.  ಪಂಪ "ಮನುಷ್ಯರೆಲ್ಲ ಒಂದೇ" ಎಂದೇ ಹೇಳಿದ್ದಾನೆ ಎಂಬ ಅಭಿಪ್ರಾಯ ಬಹಳವಾಗಿ ಚಾಲ್ತಿಯಲ್ಲಿದೆ.  ಕೆಲವು ಹಿರಿಯ ವಿಮರ್ಶಕರು (ತಿಳಿಯದವರೇನಲ್ಲ), ಅದಾವುದೋ ತಮಗಷ್ಟೇ ತಿಳಿದಿರಬಹುದಾದ ಕಾರಣಕ್ಕೆ ಇಂಥದ್ದೊಂದು ವ್ಯಾಖ್ಯಾನವನ್ನು ಹರಿಯಬಿಟ್ಟಿದ್ದಾರೆ, ಸಾವಿರ ವರ್ಷದ ಹಿಂದೆಯೇ ಜಾತಿಪದ್ಧತಿಯನ್ನು ವಿರೋಧಿಸಿದ ಪ್ರಗತಿಪರಕವಿಯದೊಂದು ಇಮೇಜ್ ಸಿದ್ಧವಾಗಿಬಿಟ್ಟಿದೆ, ಮತ್ತು ಪಂಪನಿಗೆ ತಾನು ಕನಸುಮನಸಿನಲ್ಲಿಯೂ ಊಹಿಸಿರದ ಜಾತ್ಯತೀತ ವಿಶ್ವಮಾನವಕವಿಯ ಪಟ್ಟ ದಕ್ಕಿಬಿಟ್ಟಿದೆ.  ಜಾತಿಯನ್ನು ಖಂಡಿಸುವವರು (ಅದಕ್ಕಾಗಿ ಬ್ರಾಹ್ಮಣರ ಮೂತಿ ದೆಬ್ಬುವವರು), ಪಂಪನನ್ನು ಓದಿಕೊಂಡಿದ್ದೇನೆಂದು ತೋರಿಸಿಕೊಳ್ಳುವವರು, ಪಂಪನನ್ನು ಅರೆಬರೆ ಓದಿಕೊಂಡವರು, ಪಂಪನ ಹೆಸರನ್ನು ಎಲ್ಲೋ ಕೇಳಿದವರು, ಪುಡಾರಿಗಳು, ಪುಡಿಸಾಹಿತಿಗಳು, ಧಡಿಸಾಹಿತಿಗಳು, ಮಾನವತಾವಾದದ ಉದ್ಯಮವನ್ನು ನಡೆಸುವವರು ಎಲ್ಲರಿಗೂ ಪಂಪನ ಇದೊಂದು ವಾಕ್ಯ, ಅಲ್ಲಲ್ಲ, ವಾಕ್ಯಖಂಡ ಬಹಳ ಅನುಕೂಲಕರವಾದ ಕೈಹಿಡಿಯಾಗಿ ಪರಿಣಮಿಸಿಬಿಟ್ಟಿದೆ.  ಇದೊಂದು ಸಾಲನ್ನು ಪಂಪನ 'ವಿಶ್ವಮಾನವದೃಷ್ಟಿ'ಗೆ ದ್ಯೋತಕವಾಗಿ ಎಲ್ಲೆಲ್ಲಿ ಎಷ್ಟೆಷ್ಟು ಹೇಗೆಹೇಗೆ ಬರೆದರೂ ಸಾಲದು.  ಅಷ್ಟೇಕೆ, ಸ್ವತಃ ಕನ್ನಡಸಾಹಿತ್ಯಪರಿಷತ್ತೇ ತನ್ನ ಪುಸ್ತಕಸರಣಿಯಲ್ಲಿ ಇದನ್ನು ಘೋಷವಾಕ್ಯವಾಗಿ ಮುದ್ರಿಸಿಕೊಂಡಿದೆ.  ಹೀಗಾಗಿ ಈ ವಾಕ್ಯದ ಹಿಂದುಮುಂದು ತಿಳಿಯದೇ, ಈ ಮಾತಿನ ಮೂಲಕ "ಮನುಷ್ಯಜಾತಿ ಒಂದೇ" ಎಂಬ ಏಕತ್ವದ ಸಂದೇಶವನ್ನು ಪಂಪ ಸಾರುತ್ತಿದ್ದಾನೆ ಎಂದು ಮುಗ್ಧವಾಗಿ ನಂಬಿದವರೂ ಕಡಿಮೆಯಿಲ್ಲ.

ಇರಲಿ, ಕೆಟ್ಟ ಅಪಾರ್ಥಗಳಿಗಿಂತ ಒಳ್ಳೆಯ ಅಪಾರ್ಥ ಯಾವಾಗಲೂ ಒಳ್ಳೆಯದೇ.  ಈ ವಾಕ್ಯದ ಅಭಿಪ್ರಾಯವೇನೇ ಇರಲಿ, ಮನುಷ್ಯಜಾತಿಯೊಂದೇ ಎಂಬುದರಲ್ಲಿ ಎರಡು ಮಾತಿಲ್ಲವೇ ಇಲ್ಲ.  ಬಸವಣ್ಣನವರೇ ಹೇಳಿಲ್ಲವೇ - "ನೆಲನೊಂದೆ ಹೊಲಗೇರಿ ಶಿವಾಲಯಕೆ"; ಅದಕ್ಕೆ ಸರ್ವಜ್ಞನೂ ದನಿಗೂಡಿಸಿದ್ದಾನಲ್ಲ - "ನಡೆವುದೊಂದೇ ಭೂಮಿ ಕುಡಿವುದೊಂದೇ ನೀರು ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ ನಡುವೆ ಎತ್ತಣದು"; ಕನಕದಾಸರೂ ಅದನ್ನೇ ಹೇಳುತ್ತಾರೆ - "ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?"  ಅಷ್ಟೇಕೆ ಪಂಪನೂ ಕುಲಾಚಾರಗಳನ್ನು ಗೌರವಿಸಿದರೂ ಅದು ಅತಿರೇಕಕ್ಕೆ ಹೋದರೆ ಸಹಿಸುವವನಲ್ಲ.   ಉದಾಹರಣೆಗೆ ವಿಕ್ರಮಾರ್ಜುನವಿಜಯದಲ್ಲಿ ಕರ್ಣನ ಬಾಯಲ್ಲಿ ಆತ ಹೇಳಿಸುವ ಮಾತುಗಳನ್ನು ಕೇಳಿ:

"ಕುಲಮನೆ ಮುನ್ನಮುಗ್ಗಡಿಪಿರೇಂ ಗಳ, ನಿಮ್ಮ ಕುಲಂಗಳಾಂತು ಮಾರ್ಮಲೆವನನಟ್ಟಿ ತಿಂಬುವೆ? ಕುಲಂ ಕುಲಮಲ್ತು - ಚಲಂ ಕುಲಂ, ಗುಣಂ ಕುಲಂ, ಅಭಿಮಾನಮೊಂದೆ ಕುಲಂ, ಅಣ್ಮು ಕುಲಂ.  ಬಗೆವಾಗಳ್ ಈಗಳ್ ಈ ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ" (ಕುಲವನ್ನೇ ಎತ್ತೆತ್ತೆತ್ತಿ ಆಡುವಿರಲ್ಲ, ನಿಮ್ಮ ಕುಲಗಳೇನು ಏರಿಬರುವ ಶತ್ರುಗಳನ್ನು ಅಟ್ಟಿ ತಿನ್ನುತ್ತವೆಯೇ?  ಕುಲ ಕುಲವಲ್ಲಪ್ಪಾ, ಛಲ ಕುಲ, ಗುಣ ಕುಲ, ಅಭಿಮಾನವೊಂದೇ ಕುಲ, ವೀರ್ಯವೇ ಕುಲ.  ನೋಡಿದರೆ ಈಗ ಈ ಕಲಹದಲ್ಲಿ, ಅಣ್ಣಾ, ನಿಮ್ಮ ಕುಲವೇ ನಿಮಗೆ ಆಕುಲವನ್ನು (ದುಃಖವನ್ನು) ತಂದೀತು).

ಪಂಪನ ಶಾಸ್ತ್ರದೃಷ್ಟಿಯೇನೇ ಇರಲಿ, ಮೇಲೆ ಕರ್ಣ ಹೇಳುವ ಮಾತು ಕೆಲಮಟ್ಟಿಗೆ ಪಂಪನ ಜೀವನದೃಷ್ಟಿಯನ್ನೂ ಧ್ವನಿಸುತ್ತದೆಂದಿಟ್ಟುಕೊಳ್ಳಬಹುದು. ಮಾನವಧರ್ಮವೇ ಸರ್ವಶ್ರೇಷ್ಠವೆಂಬ ಮಾತಿನಲ್ಲಿ ಅನುಮಾನವಿಲ್ಲ; ಮಾನವತೆಯೆಂಬುದು ದಯೆ-ಕರುಣೆ ಎಂದು ಅರ್ಥೈಸುವುದಾದರೆ ಸ್ವತಃ ಜೈನಮತಾವಲಂಬಿಯಾದ ಪಂಪನೂ ಮಾನವಧರ್ಮದಲ್ಲಿ ನಂಬಿಕೆಯಿಟ್ಟವನೇ ಎಂದರೂ ತಪ್ಪಾಗಲಾರದು.  ಆದರೆ ಪಂಪನ 'ಮಾನವತೆ' ನಮ್ಮ ಆಧುನಿಕಬುದ್ಧಿಜೀವಿಗಳ ಬ್ರಾಂಡಿನ ಮಾನವತೆಯಲ್ಲ.  ಅವನ ಮಾನವತೆಯು ಜಾತಿ-ಕುಲ-ನಂಬಿಕೆಗಳಿಗೆ, ಅದರಿಂದ ಹೊಮ್ಮಬಹುದಾದ ಸಹಜವಾದ ಹೆಮ್ಮೆಗೆ, ಸ್ವಾಭಿಮಾನಕ್ಕೆ, ಶ್ರೇಷ್ಠತೆಯ ಪ್ರಜ್ಞೆಗೆ ಎಂದೂ ವಿರುದ್ಧವಾದದ್ದಲ್ಲ.  ಅಷ್ಟೇಕೆ?  ಸ್ವತಃ ಪಂಪ ಧರ್ಮದಿಂದ ಜೈನನಾದರೂ ಜಾತಿಯಿಂದ ಬ್ರಾಹ್ಮಣ, ಮತ್ತು ಅವನಿಗೆ ತನ್ನ ಜಾತಿಯ ಬಗ್ಗೆ ಅಪಾರವಾದ ಹೆಮ್ಮೆಯಿದೆ.  'ವಿಪ್ರಶ್ರೇಷ್ಠ'ನಾದ ತನ್ನ ತಂದೆ ಅಭಿರಾಮದೇವರಾಯ (ಭೀಮಪಯ್ಯ)ನು ಜೈನಧರ್ಮವನ್ನು ಪರಿಗ್ರಹಿಸಿದ ಘಟನೆಯನ್ನು ಹೆಮ್ಮೆಯಿಂದ ವಿವರಿಸುತ್ತಾ ಪಂಪ ಹೀಗೆ ಹೇಳುತ್ತಾನೆ:

ಜಾತಿಯೊಳೆಲ್ಲಮುತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇ

ಮಾತೊ ಜಿನೇಂದ್ರಧರ್ಮಮೆ ವಲಂ ದೊರೆ ಧರ್ಮದೊಳೆಂದು ನಂಬಿ ತ

ಜ್ಜಾತಿಯನುತ್ತರೋತ್ತರಮೆ ಮಾಡಿ ನೆಗೞ್ಚಿದನಿಂತಿರಾತ್ಮವಿ

ಖ್ಯಾತಿಯನಾತನಾತನ ಮಗಂ ನೆಗೞ್ದಂ ಕವಿತಾಗುಣಾರ್ಣವಂ

 - ವಿಕ್ರಮಾರ್ಜುನವಿಜಯ 14/48

(ಜಾತಿಗಳಲ್ಲಿ ಉತ್ತಮಜಾತಿಯವನಾದ ವಿಪ್ರನಿಗೆ ಧರ್ಮಗಳಲ್ಲಿ ಉನ್ನತವಾದ ಜಿನೇಂದ್ರಧರ್ಮವೇ ಸರಿಯಾದ ಧರ್ಮವೆಂದು ನಂಬಿ, ಅದರಿಂದ ಆ (ಬ್ರಾಹ್ಮಣ)ಜಾತಿಯನ್ನೇ ಉತ್ತರೋತ್ತರವನ್ನಾಗಿಸಿ (ತನ್ನ ಜಾತಿಯ ಪೆರ್ಮೆಯನ್ನು ಇನ್ನೂ ಹಿರಿದಾಗಿಸಿ) ತನ್ನ ಖ್ಯಾತಿಯನ್ನೂ ಹೆಚ್ಚಿಸಿಕೊಂಡನು; ಆತನ (ಅಂತಹ ಅಭಿರಾಮದೇವರಾಯನ) ಮಗನೇ ಈ ಕವಿತಾಗುಣಾರ್ಣವನಾದ ಪಂಪ)

ಮುಂದುವರೆದು ತನ್ನ ಬಗ್ಗೆ ಪಂಪ ಹೇಳಿಕೊಳ್ಳುವ ಪರಾಕುಗಳನ್ನೂ ನೋಡಿ - 

ಪಂಪಂ ಧಾತ್ರೀವಳಯನಿ

ಳಿಂಪಂ ಚತುರಂಗಬಳಭಯಂಕರಣಂ ನಿ

ಷ್ಕಂಪಂ ಲಲಿತಾಲಂಕರ

ಣಂ ಪಂಚಶರೈಕರೂಪನಪಗತಪಾಪಂ

 - ವಿಕ್ರಮಾರ್ಜುನವಿಜಯ 14/49

(ಪಂಪ, ಧಾತ್ರೀವಳಯನಿಳಿಂಪ (ಭೂಲೋಕದ ದೇವತೆ - ಭೂಸುರ - ಬ್ರಾಹ್ಮಣ), ಚತುರಂಗಬಲಭಯಂಕರ, ಎಂದೂ ನಡುಗದವನು, ಲಲಿತವಾಗಿ ಅಲಂಕರಿಸಿಕೊಂಡ ಮನ್ಮಥರೂಪ, ಪಾಪರಹಿತ).

ಮತ್ತೆ, ತನ್ನ ದೊರೆಯಾದ ಅರಿಕೇಸರಿಯು ತನಗೆ ಮೆಚ್ಚುಗೆಯಾಗಿ ಕೊಡಮಾಡಿದ ಧರ್ಮಪುರವೆಂಬ ಅಗ್ರಹಾರವನ್ನು ಪಂಪನು ವರ್ಣಿಸುವ ಬಗೆ ನೋಡಿ:

ದೆಸೆ ಮಖಧೂಮದಿಂ ದ್ವಿಜರ ಹೋಮದಿನೊಳ್ಗೆಱೆ ಹಂಸಕೋಕಸಾ

ರಸಕಳನಾದದಿಂದೊಳಗೆ ವೇದನಿನಾದದಿನೆತ್ತಮೆಯ್ದೆ ಶೋ

ಭಿಸೆ ಸುರಮಥ್ಯಮಾನವನಧಿಕ್ಷುಭಿತಾರ್ಣವಘೋಷದಂತೆ ಘೂ

ರ್ಣಿಸುತಿರಲೀ ಗುಣಾರ್ಣವನ ಧರ್ಮದ ಧರ್ಮವುರಂ ಮನೋಹರಂ

 - ವಿಕ್ರಮಾರ್ಜುನವಿಜಯ 14/57

(ದಿಕ್ಕುಗಳು ಬ್ರಾಹ್ಮಣರ ಹೋಮಧೂಮದಿಂದಲೂ, ಒಳ್ಳೆಯ ಕೆರೆಗಳು ಹಂಸಕೋಕಸಾರಸಪಕ್ಷಿಗಳ ಕಳಕಳನಾದದಿಂದಲೂ, ಊರಿನ ಒಳಭಾಗವು ವೇದನಿನಾದದಿಂದಲೂ ಶೋಭಿಸುತ್ತಿರಲು, ಗುಣಾರ್ಣವನ ಧರ್ಮದ ಈ ಧರ್ಮಪುರವು ದೇವತೆಗಳಿಂದ ಕಡೆಯಲ್ಪಟ್ಟ ಸಮುದ್ರದಂತೆ ಘೂರ್ಣಿಸುತ್ತಾ ಮನೋಹರವಾಗಿತ್ತು) 

ಇದನ್ನೋದಿ ಪಂಪನಿಗೆ ಬ್ರಾಹ್ಮಣ್ಯದ, ಶ್ರೇಷ್ಠತೆಯ ವ್ಯಸನವಿತ್ತೆಂದು ನಾನಂತೂ ಹುಯಿಲೆಬ್ಬಿಸುವುದಿಲ್ಲ.  "ಮನುಷ್ಯಜಾತಿ ತಾನೊಂದೆವಲಂ" ಎಂಬ ಅರ್ಧವಾಕ್ಯವನ್ನು ಹಿಡಿದು ಪಂಪನನ್ನು ಆಧುನಿಕ ಬ್ರಾಂಡ್ ಮಾನವತಾವಾದಿಯಾಗಿಸಿ ಮೆರೆಸಿದವರು ಈಗ ಇದನ್ನೋದಿ ನಿಲುವು ಬದಲಿಸಿಕೊಂಡರೆ, ಪಂಪನ 'ಶ್ರೇಷ್ಠತೆಯ ವ್ಯಸನದ ಬಗ್ಗೆ, ಎದ್ದು ಕಾಣುವ 'ಬ್ರಾಹ್ಮಣ್ಯ'ದ ಬಗ್ಗೆ ಹುಯಿಲೆಬ್ಬಿಸಿದರೆ ನಾನು ಪಂಪನನ್ನು ರಕ್ಷಿಸಲೂ ಹೋಗುವುದಿಲ್ಲ.  ಏಕೆಂದರೆ ಸ್ವಪ್ರಶಂಸೆ ಪ್ರಾಚೀನಕವಿಗಳ ಶೈಲಿಯೇ ಆಗಿದೆ.  ಅದು ತಪ್ಪೂ ಅಲ್ಲ, ಮತ್ತು ಪಂಪನಂತಹ ಸಿದ್ಧಕವಿಗಳಿಗೆ ಅದು ಕೇವಲ ವ್ಯಸನವೂ ಅಲ್ಲ.  ಆದ್ದರಿಂದ ಅದರ ವೈಖರಿಯನ್ನು ಆಸ್ವಾದಿಸುತ್ತಾ ತಲೆದೂಗುತ್ತೇನಷ್ಟೇ.  ಬ್ರಾಹ್ಮಣ್ಯದ ಹೆಮ್ಮೆ ಪಂಪನಿಗಿರಬಹುದು, ಆದರೆ ನಮ್ಮ ಹೆಮ್ಮೆ ಪಂಪನ ಬ್ರಾಹ್ಮಣ್ಯಲ್ಲ, ಸ್ವತಃ ಪಂಪನೇ.

ಇರಲಿ, ಇಲ್ಲಿ ವಿವರಿಸಹೊರಟದ್ದು "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಸಾಲನ್ನಷ್ಟೇ?  ಇದು ಬರುವುದು ಆದಿಪುರಾಣದಲ್ಲಿ, ಭರತಚಕ್ರವರ್ತಿಯ ರಾಜ್ಯಭಾರವನ್ನು ವರ್ಣಿಸುವ ಹದಿನೈದನೆಯ ಆಶ್ವಾಸದಲ್ಲಿ.  ರಾಜ್ಯದಲ್ಲಿ ತಂತಮ್ಮ ಜಾತಿಧರ್ಮಗಳನ್ನು ನಿಷ್ಠೆಯಿಂದ ಪಾಲಿಸದವರನ್ನು ಬೇರಿರಿಸಿ, ಪಾಲಿಸುವವರನ್ನು ಸನ್ಮಾನಿಸುವ ಮೂಲಕ ಧರ್ಮವ್ರತಗಳನ್ನು ಬಿಟ್ಟವರೂ ಮತ್ತೆ ಅದನ್ನು ಹಿಡಿಯುವಂತೆ ಮಾಡುತ್ತಿದ್ದ ಎಂದು ವಿವರಿಸುವ ಭಾಗ.  ಹೀಗೆ ಸ್ವಧರ್ಮವ್ರತಗಳಲ್ಲಿ ನಿರತರಾದ ಕೃಷಿ, ವಾಣಿಜ್ಯ, ಶಿಲ್ಪ, ಮೊದಲಾದ ಕಸುಬುದಾರರನ್ನೂ, ಶ್ರಾವಕರನ್ನೂ, ಉಪಾಸನೆ ಅಧ್ಯಯನ ಅಧ್ಯಾಪನ ಮೊದಲಾದವುಗಳಲ್ಲಿ ನಿರತರಾದ ಬ್ರಾಹ್ಮಣರನ್ನೂ ಯಾವಯಾವ ರೀತಿ ಸನ್ಮಾನಿಸುತ್ತಿದ್ದನೆಂದು ವಿವರಿಸುವ ಈ ಭಾಗದಲ್ಲಿ, ಬ್ರಾಹ್ಮಣರನ್ನು ಕುರಿತು ಬರುವ ಮಾತುಗಳು ಹೀಗಿವೆ:

"ಉಪಾಸಕಾಧ್ಯಯನಾಧ್ಯಾಪನಾನಂತರಂ ಸಕಳಶಾಸ್ತ್ರಂಗಳನೋದುವೋದಿಸುವ ನೆನೆವ ಬರೆವ ಪರಮಸ್ವಾಧ್ಯಾಯಮುಂ, ಪಂಚಾಣುವ್ರತಾದಿಪ್ರವರ್ತನಸ್ವಭಾವಸಂಯಮಮುಮನ್ ಅನಶನವೃತ್ಯಾದಿ ತಪೋನುಷ್ಠಾನಮುಂಬೆರಸು ಆರ್ಯಷಟ್ಕರ್ಮಂಗಳಂ ನಿಮಗಿವು ಕುಲಾಚಾರಂಗಳೆಂದಱಿಯೆ ಪೇೞ್ದು ಕೈಕೊಳಿಸಿ,

ಆಱುಂ ವೃತ್ತಿಗಳನಿವಂ

ಮೀಱಿದರಲ್ಲರ್ ದ್ವಿಜನ್ಮರೀವೃತ್ತಿಗಳಿಂ

ಬೇಱಾದರ್ ದ್ವಿಜರುಂತೇಂ

ಬೇಱುಂಟೆ ಮನುಷ್ಯಜಾತಿ ತಾನೊಂದೆ ವಲಂ"

 - ಆದಿಪುರಾಣ 15/14

ಇಲ್ಲಿ ಬರುವುದು "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಮಾತು.  ಇದರರ್ಥ ಸ್ಥೂಲವಾಗಿ ಹೀಗೆ:

ಉಪಾಸನೆ, ಅಧ್ಯಯನ, ಅಧ್ಯಾಪನ, ಶಾಸ್ತ್ರಗಳನ್ನು ಓದುವುದು, ಓದಿಸುವುದು, ಚಿಂತಿಸುವುದು, ಬರೆಯುವುದು ಮೊದಲಾದ ಚಟುವಟಿಕೆಗಳನ್ನೂ, ಪಂಚಾಣುವ್ರತವೇ ಮೊದಲಾದ ಸಂಯಮವನ್ನೂ, ಉಪವಾಸವೇ ಮೊದಲಾದ ತಪೋನುಷ್ಠಾನಗಳಿಂದ ಕೂಡಿದ ಆರ್ಯರ ಆರು ಕರ್ಮಗಳನ್ನೂ "ನಿಮಗಿದು ಕುಲಾಚಾರ" ಎಂದು ತಿಳಿಯಹೇಳಿ, "ಈ ಆರು ವೃತ್ತಿಗಳನ್ನು ದ್ವಿಜರು (ಬ್ರಾಹ್ಮಣರು) ಎಂದಿಗೂ ಮೀರುವುದಿಲ್ಲ, ಏಕೆಂದರೆ ಈ ವೃತ್ತಿಗಳೇ ಅವರನ್ನು ಇತರರಿಂದ ಬೇರಾಗಿಸಿರುವುದು (ವಿಶಿಷ್ಟವಾಗಿಸಿರುವುದು).  ಅದು ಬಿಟ್ಟರೆ ಅವರು ಕೇವಲ ಮನುಷ್ಯಜಾತಿ ಒಂದೇ ಆಗಿ (ಮನುಷ್ಯಜಾತಿಯಷ್ಟೇ ಆಗಿ) ಉಳಿಯುತ್ತಾರಲ್ಲವೇ? (ಅವರನ್ನು ದ್ವಿಜರೆನ್ನಲಾಗುತ್ತದೆಯೇ?)

ಎಂದರೆ ಮನುಷ್ಯಜಾತಿ ಒಂದು ಪದರ, ಅದರ ಮೇಲೆ ದ್ವಿಜರು ತಮ್ಮ ಈ ಷಟ್ಕರ್ಮಗಳಿಂದ ಎರಡನೆಯ ಜನ್ಮ ತಳೆಯುತ್ತಾರೆ, ಉಳಿದ ಮನುಷ್ಯಜಾತಿಯಿಂದ ಒಂದು ಮೆಟ್ಟಿಲು ಮೇಲೇರುತ್ತಾರೆ.  ಈ ಕರ್ಮಗಳನ್ನು ಬಿಟ್ಟರೆ ದ್ವಿಜತ್ವವನ್ನು ಕಳೆದುಕೊಂಡ ಅವರು ಕೇವಲ ಮನುಷ್ಯರೊಂದೇ ಆಗಿ ಉಳಿಯುತ್ತಾರೆ ಎಂಬುದು ಇಲ್ಲಿ ಕವಿಯ ಭಾವ.  ಅದನ್ನೇ ಮುಂದಿನ ಪದ್ಯದಲ್ಲಿ ಇನ್ನಷ್ಟು ಸ್ಪಷ್ಟಪಡಿಸುತ್ತಾನೆ:

ವ್ರತಸಂಸ್ಕಾರದಿನಾದರ್ವಿ

ತತಗುಣರ್ ಬ್ರಾಹ್ಮಣರ್ ಕ್ರಿಯಾಸಂತತಿಸಂ

ಯುತರುಚಿತಸತ್ಕ್ರಿಯಾವಿರ

ಹಿತನಾತಂ ನಾಮಧಾರಕಂ ದ್ವಿಜನಲ್ಲಂ

 - ಆದಿಪುರಾಣ 15/15

ಹುಟ್ಟುತ್ತ ಸಾಮಾನ್ಯಮನುಷ್ಯರಾದ ಬ್ರಾಹ್ಮಣರು ಈ ವ್ರತಸಂಸ್ಕಾರಗಳಿಂದ, ಅದಕ್ಕನುಗುಣವಾದ ಕ್ರಿಯಾಕರ್ಮಗಳಿಂದ ವಿತತಗುಣರಾಗುತ್ತಾರೆ (ವಿಸ್ತರಿಸಿದ, ಉತ್ತಮಗುಣವನ್ನು ಸಂಪಾದಿಸುತ್ತಾರೆ).  ಈ ಸತ್ಕ್ರಿಯಾಸಂಸ್ಕಾರಗಳನ್ನು ಬಿಟ್ಟ ಬ್ರಾಹ್ಮಣ ಕೇವಲ ಹೆಸರಿಗೆ ಬ್ರಾಹ್ಮಣನೆನಿಸುತ್ತಾನಷ್ಟೇ, ಅವನು ದ್ವಿಜನಲ್ಲ.

ಮೇಲಿನ ಎರಡೂ ಪದ್ಯಗಳನ್ನು ವಿವರವಾಗಿ ಓದಿದರೆ, "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಮಾತಿನಲ್ಲಿರುವ "ಒಂದೇ" ಎಂಬುದನ್ನು ಯಾವ ಅರ್ಥದಲ್ಲಿ ಬಳಸಿದ್ದೆಂಬುದು ಸ್ಪಷ್ಟವಾಗುತ್ತದೆ.  "ಒಂದೇ" ಎಂಬುದನ್ನು ಎರಡರ್ಥದಲ್ಲಿ ಬಳಸಬಹುದಷ್ಟೇ? 

1) "ಎಲ್ಲರೂ ಒಂದೇ" ಎಂಬ ಸಮಷ್ಟಿ ಅರ್ಥದಲ್ಲಿ (ನಾವೆಲ್ಲರೂ ಒಂದೇ, ಮನುಷ್ಯಜಾತಿ ಒಂದೇ, ಇತ್ಯಾದಿ); 

2) "ಒಂದೇ, ಅಷ್ಟೇ, only" ಎಂಬ ಅರ್ಥದಲ್ಲಿ (ನನ್ನ ಬಳಿ ಒಂದೇ ಪುಸ್ತಕವಿದೆ, ಒಂದೇ ನಾಯಿಯಿದೆ ಇತ್ಯಾದಿ).  

ಇಲ್ಲಿ ಒಂದೇ ಎಂಬ ಪದವನ್ನು ಬಳಸಿರುವುದು ಈ ಎರಡನೆಯ ಅರ್ಥದಲ್ಲಿ - ದ್ವಿಜಸಂಸ್ಕಾರವನ್ನು ಬಿಟ್ಟ ಬ್ರಾಹ್ಮಣನಲ್ಲಿ ಉಳಿಯುವುದು "ಮನುಷ್ಯಜಾತಿಯೊಂದೇ (ಮತ್ತೇನು ಇಲ್ಲ)" ಎಂಬ ಅರ್ಥದಲ್ಲಿ.  ಬ್ರಾಹ್ಮಣನ ಕುಲಾಚಾರವೇನು, ಅವನು ಇತರ ಮನುಷ್ಯರಿಗಿಂತ ಹೇಗೆ ಬೇರಾಗುತ್ತಾನೆ, ತನ್ನ ಕುಲಾಚಾರಗಳನ್ನು ಬಿಟ್ಟ ಬ್ರಾಹ್ಮಣ ಹೇಗೆ ಕೇವಲ ಮನುಷ್ಯನಾಗಿಯಷ್ಟೇ ಉಳಿಯುತ್ತಾನೆ, ಹೇಗೆ ಹೆಸರಿಗಷ್ಟೇ ಬ್ರಾಹ್ಮಣನಾಗಿರುತ್ತಾನೆ, ಅದರ ಮೇಲಿನ 'ದ್ವಿಜ' ಎಂಬ ಎರಡನೆಯ ಪದರವನ್ನು ಕಳೆದುಕೊಂಡು ಮನುಷ್ಯ ಎಂಬ 'ಒಂದೇ' ಪದರದಲ್ಲಿ ಉಳಿದುಬಿಡುತ್ತಾನೆ ಎಂಬ ವಿವರಣೆಯಷ್ಟೇ ಇಲ್ಲಿರುವುದು.  ಇಲ್ಲಿ "ಒಂದೇ" ತತ್ತ್ವದ ವಿಶ್ವಮಾನವದೃಷ್ಟಿಯನ್ನು ಹುಡುಕುವ ವ್ಯರ್ಥಪ್ರಯತ್ನ ಬೇಡವೇನೋ.

ಕೊನೆಯದಾಗಿ, ಇಲ್ಲಿ ವಿವರಿಸಿರುವುದು ಪಂಪನ ಮತ್ತು ಅವನ ಪಾತ್ರಗಳ ಅಭಿಪ್ರಾಯವೇ ಹೊರತು ನನ್ನದಲ್ಲ.  ಈ ವಿಷಯದ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿ ಅಪ್ರಸ್ತುತ.

ಅಂದ ಹಾಗೆ, "ಬೇಱಾದರ್ ದ್ವಿಜರುಂತೇಂ ಬೇಱುಂಟೆ ಮನುಷ್ಯಜಾತಿ ತಾನೊಂದೆ ವಲಂ" ಎಂಬುದೂ ಪಂಪನೇ ಸ್ವತಃ ಮಾಡಿಕೊಂಡ ಅಭಿಪ್ರಾಯವೂ ಅಲ್ಲ. ಪಂಪನ ಆದಿಪುರಾಣದ ಆಕರವಾದ ಜಿನಸೇನಾಚಾರ್ಯರ ಮಹಾಪುರಾಣದ (ಪೂರ್ವಪುರಾಣ/ಆದಿಪುರಾಣ) 38ನೆಯ ಅಧ್ಯಾಯದ ಈ ಕೆಳಗಿನ ಶ್ಲೋಕಗಳನ್ನು ಗಮನಿಸಬಹುದು (ಬ್ರಾಕೆಟ್ಟಿನಲ್ಲಿ ಅದರ ಸ್ಥೂಲ ಅರ್ಥವನ್ನೂ ವಿವರಿಸಿದ್ದೇನೆ - ಪಂಪನು ತನ್ನ ಆದಿಪುರಾಣದಲ್ಲೂ ಇದೇ ಅಭಿಪ್ರಾಯವನ್ನೇ ಯಥಾವತ್ತಾಗಿ ತಂದಿದ್ದಾನೆ ):

ವಿಶುದ್ಧಾ ವೃತ್ತಿರೇವೈಷಾಂ ಷಟ್ತಯೋಷ್ಟಾ ದ್ವಿಜನ್ಮನಾಂ

ಯೋऽತಿಕ್ರಾಮೇದಿಮಾಂ ಸೋऽಜ್ಞೋ ನಾಮ್ನೈವ ನ ಗುಣೈರ್ದ್ವಿಜಃ ||42||

(ಮೇಲೆ ಹೇಳಿದ ಷಟ್ಕರ್ಮಗಳು (ಪೂಜಾ, ದಾನ, ಸ್ವಾಧ್ಯಾಯ, ಇತ್ಯಾದಿ) ದ್ವಿಜರಿಗೆ ಆಚರಣೀಯ.  ಇವನ್ನು ಅತಿಕ್ರಮಿಸುವ ಅಜ್ಞನು ಕೇವಲ ಹೆಸರಿಗಷ್ಟೇ ದ್ವಿಜನಾಗಿರುತ್ತಾನೆ, ಗುಣದಿಂದಲ್ಲ)

ತಪಃ ಶ್ರುತಂಚ ಜಾತಿಶ್ಚ ತ್ರಯಂ ಬ್ರಾಹ್ಮಣ್ಯಕಾರಣಮ್

ತಪಶ್ರುತಾಭ್ಯಾಂ ಯೋ ಹೀನೋ ಜಾತಿಬ್ರಾಹ್ಮಣ ಏವ ಸಃ ||43||

(ತಪಸ್ಸು, ಶಾಸ್ತ್ರಜ್ಞಾನ ಮತ್ತು ಜಾತಿ ಇವು ಮೂರು ಬ್ರಾಹ್ಮಣ್ಯಕ್ಕೆ ಕಾರಣಗಳು.  ತಪಸ್ಸು ಮತ್ತು ಶಾಸ್ತ್ರಜ್ಞಾನವಿಲ್ಲದಾತ ಕೇವಲ ಜಾತಿಬ್ರಾಹ್ಮಣನಷ್ಟೇ)

ಮನುಷ್ಯಜಾತಿರೇಕೈವ ಜಾತಿನಾಮೋದಯೋದ್ಭವಾ

ವೃತ್ತಿಭೇದಾಹಿತಾದ್ಭೇದಾಚ್ಚಾತುರ್ವಿಧ್ಯಮಿಹಾಶ್ನುತೇ ||45||

(ಮೂಲತಃ ಮನುಷ್ಯಜಾತಿಯೊಂದೇ, ಆದರೆ ಜೀವನೋಪಾಯಕ್ಕಾಗಿ ಮಾಡುವ ನಾಲ್ಕು ವಿಧದ ಕರ್ಮಗಳಿಂದಾಗಿ ಅದು ನಾಲ್ಕು ವಿಧದ ಜಾತಿಯಾಗಿ ಪರಿಣಮಿಸುತ್ತದೆ)

ಬ್ರಾಹ್ಮಣಾ ವ್ರತಸಂಸ್ಕಾರಾತ್ ಕ್ಷತ್ರಿಯಾಃ ಶಸ್ತ್ರಧಾರಣಾತ್

ವಣಿಜೋಽರ್ಥಾರ್ಜನಾನ್ಯಾಯಾಚ್ಛೂದ್ರಾನ್ಯಗ್ವೃತ್ತಿಸಂಶ್ರಯಾತ್ ||46||

(ವ್ರತಸಂಸ್ಕಾರದಿಂದ ಬ್ರಾಹ್ಮಣ, ಶಸ್ತ್ರಧಾರಣದಿಂದ ಕ್ಷತ್ರಿಯ, ನ್ಯಾಯಬದ್ಧವಾದ ಧನಾರ್ಜನದಿಂದ ವೈಶ್ಯ ಮತ್ತು ಇತರ ವೃತ್ತಿಗಳಿಂದ ಶೂದ್ರ - ಹೀಗಾಗುತ್ತದೆ).

ದ್ವಿರ್ಜಾತೋ ಹಿ ದ್ವಿಜನ್ಮೇಷ್ಟಃ ಕ್ರಿಯಾತೋ ಗರ್ಭತಶ್ಚ ಯಃ

ಕ್ರಿಯಾಮಂತ್ರವಿಹೀನಸ್ತು ಕೇವಲಂ ನಾಮಧಾರಕಃ ||48||

(ದ್ವಿಜನೆಂದರೆ ಎರಡು ಜನ್ಮ ತಾಳಿದವನು - ಗರ್ಭದಿಂದ ಮೊದಲನೆಯ ಜನ್ಮ, ಕ್ರಿಯೆಯಿಂದ (ಸಂಸ್ಕಾರದಿಂದ) ಎರಡನೆಯದು.  ಕ್ರಿಯಾಮಂತ್ರವಿಹೀನನಾದ ಬ್ರಾಹ್ಮಣನು ಕೇವಲ ಹೆಸರಿಗಷ್ಟೇ ಬ್ರಾಹ್ಮಣನಾಗಿರುತ್ತಾನೆ)

ನೆನಪಿರಲಿ, ಮೇಲಿನ ಯಾವ ಉಲ್ಲೇಖಗಳೂ ವೈದಿಕ ಉಲ್ಲೇಖಗಳಲ್ಲ, ಸ್ವತಃ ಪಂಪನೇ ಆಕರವಾಗಿರಿಸಿಕೊಂಡಿರುವ ಜೈನರ ಪವಿತ್ರಗ್ರಂಥವಾದ ಮಹಾಪುರಾಣದ್ದು.  ಆದರೆ ಇವನ್ನು ನೋಡಿದಾಗ, ವೈದಿಕವಲಯದಿಂದ ಈ ಕೆಳಕಂಡ ಶ್ಲೋಕಗಳೂ ನೆನಪಾದರೆ ಅದು ಅಸಹಜವಲ್ಲ:

ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ

ವೇದಜ್ಞಾನೇನ ವಿಪ್ರತ್ವಂ ಬ್ರಹ್ಮಜ್ಞಾನೇನ ಬ್ರಾಹ್ಮಣಃ

(ಹುಟ್ಟುವಾಗ ಎಲ್ಲರೂ ಶೂದ್ರರಿರುತ್ತಾರೆ, ಉಪನಯನಸಂಸ್ಕಾರದಿಂದ ದ್ವಿಜರೆನಿಸಿಕೊಳ್ಳುತ್ತಾರೆ, ವೇದಜ್ಞಾನದಿಂದ ವಿಪ್ರರಾಗುತ್ತಾರೆ, ಬ್ರಹ್ಮಜ್ಞಾನದಿಂದ ಬ್ರಾಹ್ಮಣರಾಗುತ್ತಾರೆ)

ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ (ಭಗವದ್ಗೀತಾ)

(ಗುಣಕರ್ಮವಿಶೇಷಗಳಿಗನುಗುಣವಾಗಿ ನಾಲ್ಕು ವರ್ಣಗಳು ನನ್ನಿಂದ ಸೃಷ್ಟಿಸಲ್ಪಟ್ಟಿವೆ)

ಶೂದ್ರೇಣ ಹಿ ಸಮಸ್ತಾವತ್ ಯಾವದ್ವೇದೇ ನ ಜಾಯತೇ (ಮನುಸ್ಮೃತಿ)

ಉಪನಯನವೇ ಮೊದಲಾದ ದ್ವಿಜಸಂಸ್ಕಾರಗಳಾಗುವವರೆಗೆ ಎಲ್ಲರೂ ಶೂದ್ರರೇ.

ಈ ಕೊನೆಯ ಮೂರು ಉಲ್ಲೇಖಗಳನ್ನು ನೋಡಿದ ಮೇಲೆ, ಇದುವರೆಗೆ ಮಹಾನ್ ಮಾನವತಾವಾದಿಯಾಗಿದ್ದ ಪಂಪನೂ ಇದ್ದಕ್ಕಿದ್ದಂತೆ ವೈದಿಕವಾದಿ, ಬ್ರಾಹ್ಮಣವಾದಿ, ಭಗವದ್ಗೀತಾವಾದಿ, ಮನುವಾದಿ ಹೀಗೆಲ್ಲ ಕಾಣತೊಡಗಿದರೆ ತಪ್ಪು ನನ್ನದಲ್ಲ.  ನಮಗಂತೂ "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ" - ಆವಗಂ!!!

Wednesday, December 29, 2021

ಮಾತೆಂಬ ಜ್ಯೋತಿರ್ಲಿಂಗ

ಬಹಳ ಕಾಲ ಇದರ ಬಗ್ಗೆ ಬರೆಯಬೇಕೆಂದು ಯೋಚಿಸುತ್ತಿದ್ದೆ.  ಹಂಸಲೇಖ ಬಿರುದಾಂಕಿತರಾದ ಶ್ರೀಮಾನ್ ಗಂಗರಾಜು ಅವರು ಮೊನ್ನೆ ಈ ವಚನವನ್ನು ತಮ್ಮ ಸಮರ್ಥನೆಗೆ ಬಳಸಿಕೊಂಡ ರೀತಿ ನೋಡಿ ಬರೆಯಲೇಬೇಕೆಂಬ ಒತ್ತಡ ಮೂಡಿತು. 

ಅವರೇನೋ ಮುತ್ತಿನ ಹಾರದಂತಿರಬೇಕು ಎಂದು ಮಾತಾಡತೊಡಗಿದರೆ (ಬರೆದುಕೊಂಡು ಬಂದಿಲ್ಲದುದರಿಂದ) ಏನೇನೋ ಆಗಿ, ಅದರೊಳಗಿನ ಮಾಣಿಕ್ಯದ ದೀಪ್ತಿ, ಸ್ಫಟಿಕದ (ಸತ್ಯದ) ಸಲಾಕಿಗಳೆಲ್ಲ ಕಂಡುಬಿಟ್ಟುವಂತೆ - ಅದೇ, ವಯೋವೃದ್ಧ ದಿವಂಗತ ಸನ್ಯಾಸಿಯೊಬ್ಬರ ಆಹಾರಕ್ರಮದ ಬಗ್ಗೆ ಕೆಲದಿನಗಳ ಹಿಂದೆ ಲೇವಡಿ ಮಾಡಿದ್ದ ವಿಷಯ ಅವರು ಹೇಳಿದ್ದು.  ಆ ವಿಷಯಕ್ಕಾಗಲೀ, ಅವರ ಮಾಲುಬಾಲು ಸಾಹಿತ್ಯಕ್ಕಾಗಲೀ 'ಅಹುದಹುದು' ಎಂದು ತಲೆಹಾಕುವ ಲಿಂಗ ಯಾವುದೋ ನಮಗೆ ತಿಳಿಯದು.  ಆದರೆ ವಚನದಲ್ಲಿ ಬಸವಣ್ಣನವರು ನಿರ್ದೇಶಿಸಿದ 'ಅಹುದಹುದೆ'ನ್ನುವ ಲಿಂಗ ಮಾತ್ರ ಆ ಲಿಂಗವಲ್ಲವೆಂಬುದು ನಮ್ಮ ಅರಿವು.  ಅದೇನೇ ಇರಲಿ, ಈ ನೆಪದಲ್ಲಾದರೂ ಈ ಉಜ್ವಲವಾದ ವಚನವನ್ನೊಮ್ಮೆ ಮತ್ತೆ ಮನನ ಮಾಡಿಕೊಳ್ಳಬಹುದಾದರೆ ಅದು ಒಳ್ಳೆಯದೇ ಅಲ್ಲವೇ?  ಅದಕ್ಕಾಗಿ ಗಂಗರಾಜರಿಗೆ ನಮ್ಮ ಕೃತಜ್ಞತೆ ಸಲ್ಲಲೇಬೇಕು.

ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕದ ದೀಪ್ತಿಯಂತಿರಬೇಕು. ನುಡಿದಡೆ ಸ್ಫಟಿಕದ ಶಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯಾ.

ಅಣ್ಣನವರ ಈ ಸುಪ್ರಸಿದ್ಧವಚನವನ್ನು ಕೇಳದವರಾರು?  ಅದನ್ನು ಉದಾಹರಿಸದ ಹಿರಿಯರಿಲ್ಲ, ತಮ್ಮ ಮಾತಿನಲ್ಲಿ ಬಳಸಿ ಟೀಆರ್ಪಿ ಬೇಳೆ ಬೇಯಿಸಿಕೊಳ್ಳದ ಸಾಹಿತಿ-ರಾಜಕಾರಣಿಯಿಲ್ಲ.  ಮಹಾಜ್ಞಾನಿಗಳಿಂದ ಹಿಡಿದು ಅಪಾಪೋಲಿಗಳವರೆಗೆ ಎಲ್ಲರಲ್ಲೂ ಅವರವರದೇ ಕಾರಣಗಳಿಗಾಗಿ ಜನಪ್ರಿಯವಾದ ವಚನವಿದು.  ಆದರೆ ಇದರ ತಾಕತ್ತು ನೋಡಿ - ಬಳಸಿದವರು ಯಾರೇ ಇರಲಿ, ಯಾವ ಗದ್ದಲದೊಡನೆಯೇ ಬಳಸಿರಲಿ, ಆ ಗದ್ದಲವನ್ನೂ ಮೀರಿ ಪ್ರಜ್ಞೆಯನ್ನು ತಟ್ಟುತ್ತದೆ, ಅದರ ಉಜ್ವಲಪ್ರಭೆ ಕಣ್ಸೆಳೆಯುತ್ತದೆ - ಏಕೆಂದರೆ "ಮಾತೆಂಬುದು ಜ್ಯೋತಿರ್ಲಿಂಗ" ಎಂಬ ಹಿರಿಯರಿವಿನಿಂದ ಬಂದ ಕಾಣ್ಕೆ ಅದು, ಸ್ವಯಂಪ್ರಕಾಶವುಳ್ಳದ್ದು, ಸ್ವಯಂಪಾವಿತ್ರ್ಯವುಳ್ಳದ್ದು.  ಅದಕ್ಕೇ ಎಂತಹ ನಾಲಿಗೆಯ ಮೇಲೇ ನಲಿದರೂ ಅದರ ತೇಜ ಮಸಗುವುದಿಲ್ಲ, ಚುರುಕು ಕುಂದುವುದಿಲ್ಲ.   ಬದಲಿಗೆ ಹಲವರನ್ನು ಚಿಂತನೆಗೆ ಹಚ್ಚುತ್ತದೆ, ಹಲವು ಪ್ರಜ್ಞೆಗಳಲ್ಲಿ ಪ್ರತಿಫಲಿಸುತ್ತದೆ, ಪ್ರಜ್ವಲಿಸುತ್ತದೆ.

ಈ ವಚನದ ಸೊಗಸನ್ನು ನೋಡಿ.  ಒಂದು ನುಡಿ - ಅದು ಹೇಗಿರಬೇಕೆಂಬುದಕ್ಕೆ ಹಲವು ಉಪಮೆಗಳು, ಸೋಪಾನಕ್ರಮದಲ್ಲಿ ಒಂದು ಇನ್ನೊಂದಕ್ಕಿಂತ ಉಜ್ವಲಗೊಳ್ಳುತ್ತಾ ಹೋಗಿ ಕೊನೆಗೆ ಅತ್ಯುನ್ನತವಾದ ಪರಿಣಾಮದಲ್ಲಿ ವಿಶ್ರಾಂತಿ ಹೊಂದುತ್ತದೆ.  ಒಂದು ವಾಕ್ಯವನ್ನೋ ಪದವನ್ನೋ ಅಕ್ಷರವನ್ನೋ ತೆಗೆದು ಹಾಕುವಂತಿಲ್ಲ - ವಚನಗಳ ಸೊಗಸೇ ಹಾಗೆ.  ಅದರಲ್ಲೂ ಈ ವಚನವಂತೂ ಸ್ವೋಪಜ್ಞವಾದುದು, ತನ್ನ ಮಾತಿಗೆ ತಾನೇ ಉದಾಹರಣೆಯಾಗಿ ನಿಲ್ಲುವಂಥದು.

ಅಣ್ಣನವರ ಈ ವಚನವನ್ನು ಪರಿಭಾವಿಸುವುದಕ್ಕೂ ಮುಂಚೆ, ಆ ವಚನ ನಮ್ಮ ಮುಂದಿಡುವ ಪ್ರಶ್ನೆಯನ್ನು ಮೊದಲು ಗಮನಿಸಬೇಕು.  ಈ ವಚನ ಹೇಳುತ್ತಿರುವುದು "ನುಡಿದರೆ" ಹೇಗಿರಬೇಕು ಎಂಬುದನ್ನು ಕುರಿತು ತಾನೆ?  ನುಡಿದರೆ - ನುಡಿ ಹೀಗಿರಲು ಸಾಧ್ಯವಿಲ್ಲದಿದ್ದರೆ?  ಈ ವಿಷಯದಲ್ಲಿ ವಚನದ್ದು ದಿವ್ಯಮೌನ.  ಆ ಮೌನವೇ ಆ ಪ್ರಶ್ನೆಗೆ ಉತ್ತರ - ಸಾಧ್ಯವಿಲ್ಲದಿದ್ದರೆ? ತೆಪ್ಪಗಿರು.  ಒಂದರ್ಥದಲ್ಲಿ ಈ ವಚನವು ಆಡಿ ತೋರಿಸಿರುವುದಕ್ಕಿಂತ ಆಡದೇ ತೋರಿಸಿರುವುದೇ ಅಗಾಧವಾದದ್ದು - ಅದನ್ನರಿಯದೇ ವಚನ 'ಆಡಿದ್ದನ್ನು' ಮಾತ್ರ ವಿಶ್ಲೇಷಿಸುವುದು ಮೂರ್ಖತನವೇ ಸರಿ.  ಅಲ್ಲಮ ಒಂದೆಡೆ ಹೇಳುತ್ತಾನಲ್ಲ "ಅರಿಯಬಾರದ ಘನವನರಿತವರು ಅರಿಯದಂತಿಪ್ಪರು" - ಏಕೆಂದರೆ ಅದು ಮಾತಿಗೆ ಮೀರಿದ್ದು, ಹೇಳುವುದಕ್ಕೂ ಕೇಳುವುದಕ್ಕೂ ಅದು ಸಂದರ್ಭವೇ ಅಲ್ಲ. ಇದೇ ಅಲ್ಲಮಪ್ರಭುದೇವರು ಇನ್ನೊಂದು ಕಡೆ ಹೇಳುತ್ತಾರೆ "ವಾಕಿನಿಂ ಪರಬ್ರಹ್ಮವ ನುಡಿವ ಕುತರ್ಕಿಗಳೆಡೆಯಲ್ಲಿ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು" 

ಇದು ಅರಿತವರ ಮಾತಾಯಿತು; ಇನ್ನು ಅರಿಯದವರೋ?  ಅಲ್ಲಿ ಮಾತಿಗೆ ಕೆಲಸವೇ ಇಲ್ಲ.  ಬಾಯಿಬಿಟ್ಟು ಬಣ್ಣಗೇಡಾದರೆ ಪ್ರಯೋಜನವೇನು?  ತುಂಬಿದ ಕೊಡ ತುಳುಕುವುದಿಲ್ಲ, ಬರಿಗೊಡಗಳೂ ತುಳುಕುವುದಿಲ್ಲವಷ್ಟೇ? ಒಂದು ಹಳೆಯ ಜೋಕ್ ನೆನಪಾಗುತ್ತದೆ - I know only my mother tongue but I can keep shut in ten other languages (ನನಗೆ ನನ್ನ ತಾಯ್ನುಡಿಯಷ್ಟೇ ಗೊತ್ತು, ಆದರೆ ಇನ್ನೂ ಹತ್ತು ಭಾಷೆಗಳಲ್ಲಿ ನಾನು ತೆಪ್ಪಗಿರಬಲ್ಲೆ).  ಹೀಗೆ ತೆಪ್ಪಗಿದ್ದುಬಿಡುವುದೇ ಅನೇಕವೇಳೆ ಘನತೆಯನ್ನು ತಂದು ಕೊಡುತ್ತದೆ.  ತೆಲುಗಿನಲ್ಲಿ ಒಂದು ಗಾದೆಯಿದೆ - "ಅಯ್ಯವಾರಿಕಿ ಜ್ಞಾನಮೂ ಲೇದು ಗರ್ವಮೂ ಲೇದು" - ಜ್ಞಾನಮು ಲೇಕಪೋತೆ ಏಮಿ, ಗರ್ವಮು ಲೇದು ಕಾದಾ? (ಜ್ಞಾನವಿಲ್ಲದಿದ್ದರೆ ಏನು, ಗರ್ವವಂತೂ ಇಲ್ಲವಲ್ಲ) ಎಂದು ಸಮಾಧಾನಪಟ್ಟುಕೊಳ್ಳಬಹುದಲ್ಲ.  ಇಷ್ಟಕ್ಕೂ ಕೊಡದ ಖಾಲಿತನ ಹೀನಾಯವೇನಲ್ಲ.  ಖಾಲಿಯಾಗುವುದೇ ತುಂಬಿಸುವುದರ ಮೊದಲ ಹೆಜ್ಜೆ - ಖಾಲಿಯಿದ್ದೇನೆಂಬ ಅರಿವು ಇದಕ್ಕೆ ಸಾಧಕ.  ಆದರೆ ಆ ಅರಿವು ಕೀಳರಿಮೆಯಾದರೆ ಮಾತ್ರ ಮಹಾಕಷ್ಟ.  ಖಾಲಿ ಕೊಡವನ್ನು ನೀರಿಗೊಯ್ಯಬೇಕು, ನೀರು ಸದ್ದಿಲ್ಲದೇ ಒಳತುಂಬುತ್ತಿದ್ದರೆ ಒಳಗಿನ ಗಾಳಿ ಸದ್ದಿಲ್ಲದೇ ಇನ್ನೊಂದು ಬದಿಯಿಂದ ಹೊರಹೋಗಬೇಕು - ಆಗ ಆ ಕೊಡ ಖಾಲಿಯಿದ್ದಾಗಲೂ ತುಂಬಿದ ಮೇಲೂ ತುಳುಕದೇ ಉಳಿದೀತು.  ಕೊಡದ ಬಾಯಿ ಬಹಳ ಚಿಕ್ಕದಾದರೆ ನೀರು ತುಂಬುವಾಗಲೂ ಡುಬುಡುಬು ಸದ್ದು ತಪ್ಪಿದ್ದಲ್ಲ.  ಎಷ್ಟೋ ವೇಳೆ ಪೂರ್ತಿ ತುಂಬುವುದೂ ಇಲ್ಲ.  ಈ ನೀರುತುಂಬುವುದಕ್ಕಿಂತ ಸುಲಭವೆಂದು ಖಾಲಿ ಕೊಡದೊಳಗೆ ಕಲ್ಲು ಹಾಕಿ ಆಡಿಸಿದರೆ?  ತುಂಬಿದ ಕೊಡದ ನೀರು ಕೊಡದೊಳಗೇ ಅಲ್ಲಾಡುತ್ತಾ ಹೊರಡಿಸುವ ಮೃದುಮಧುರವಾದ ಸಪ್ಪಳವೆಲ್ಲಿ, ಖಾಲಿ ಕೊಡದೊಳಗೆ ಕಲ್ಲಾಡಿಸುವ ಗಲಗಲ ಗಡಗಡ ಶಬ್ದವೆಲ್ಲಿ?  ಬಹುಶಃ ಈ ಎರಡನೆಯದು ಬಸವಣ್ಣನವರನ್ನು ಬಹಳ ಹೈರಾಣಗೊಳಿಸಿರಬಹುದು.  ಆ ಖಾಲಿ ಕೊಡಗಳ ಗದ್ದಲದ ಸಂತೆಯಲ್ಲಿ ಮೌನವನ್ನ, ಮೌನ ಮಥಿಸಿ ಹೊರಬಿದ್ದ ಮುತ್ತಿನ ಹಾರದಂತಹ ಮಾತಿನ ಬೆರಗನ್ನು ಕುರಿತು ಧ್ಯಾನಿಸುತ್ತಾರೆ ಬಸವಣ್ಣ. 

ಈ ಹೋಲಿಕೆಗಳು ಸೋಪಾನಕ್ರಮದಲ್ಲಿ (ಮೆಟ್ಟಿಲುಮೆಟ್ಟಿಲಾಗಿ) ಹೋಗುತ್ತವೆಂದು ನಾನು ಮೊದಲಲ್ಲಿ ಹೇಳಿದೆ.  ಅದನ್ನು ಈಗ ಗಮನಿಸೋಣ.

ಮೊದಲನೆಯದಾಗಿ ಮುತ್ತು ಅಪರೂಪದ ವಸ್ತು (ಕೃತಕ ಮುತ್ತುಗಳ ವಿಷಯ ಬಿಡಿ, ಹಾಗೆಯೇ ಬಣ್ಣದ ಮಾತುಗಳನ್ನೂ ಬಿಡಿ, ಅವು ನೋಡಿದೊಡನೆ ತಿಳಿದುಬಿಡುತ್ತದೆ).  ಎಲ್ಲೋ ಲಕ್ಷಾಂತರ ಹನಿಗಳಲ್ಲಿ ಒಂದು ಮುತ್ತಾಗುತ್ತದೆ.  ಇಂತಹ ಮುತ್ತುಗಳ ಹಾರವೊಂದನ್ನು ಮಾಡಬೇಕಾದರೆ ಒಂದೊಂದೇ ಮುತ್ತನ್ನು ಹೆಕ್ಕಿ ತರಬೇಕು.  ಇನ್ನು ಮುತ್ತಿನಲ್ಲಿ ಹಲವು ಬಣ್ಣಗಳಿರಬಹುದು, ಆದರೆ ಮುತ್ತಿನ ಹಾರವೆಂದರೆ ಕಣ್ಣಿಗೆ ಬರುವುದು ಶುಭ್ರವಾದ ಬಿಳಿಯ ಮುತ್ತೇ.  ಈ 'ಶುಭ್ರ'ತೆಯೇ ಮಾತಿನ ಮುಖ್ಯಗುಣ.  ಅದಕ್ಕೇ ವಾಗ್ದೇವಿಯನ್ನು "ಸರ್ವಶುಕ್ಲಾ" ಎಂದಿದ್ದಾನೆ ಲಾಕ್ಷಣಿಕ ದಂಡಿ; ಕವಿರಾಜಮಾರ್ಗಕಾರನ ಪ್ರಕಾರ ಆಕೆ "ವಿಶದವರ್ಣೆ" - ಸ್ವಚ್ಛವಾದ (ಬಿಳೀ) ಬಣ್ಣದವಳು.  "ಕುಂದೇಂದುತುಷಾರಹಾರಧವಳಾ" ಎಂದೇ ನಾವು ಸರಸ್ವತಿಯನ್ನು ಧ್ಯಾನಿಸುವುದು.  ಆಡುವ ಮಾತು ಆಕೆಯ ಪ್ರತೀಕವಾಗಿಲ್ಲದಿದ್ದರೆ ಹೇಗೆ?  ಆಡಬೇಕೇ ಅಂತಹ ಮಾತನ್ನು?  ಇನ್ನು ಮುತ್ತಿನ ಇನ್ನೊಂದು ಲಕ್ಷಣ ದುಂಡು - ದುಂಡೆಂದರೆ ದುಂಡೇ, ಒಂದಿನಿತೂ ಓರೆಕೋರೆಗಳಿಲ್ಲ.  ಆಡಿದ ಮಾತು ಹೀಗೆ ಸ್ಫುಟವಾಗಿರಬೇಕೆಂಬುದು ಒಂದು.  ಮತ್ತೆ, ಇಲ್ಲಿ ಅಣ್ಣನವರು ಮುತ್ತಿನಂತಹ ಮಾತಿನ ಬಗೆಗೆ ಹೇಳುತ್ತಿಲ್ಲ, ಮುತ್ತಿನ ಹಾರದಂತಹ ಮಾತಿನ ಬಗ್ಗೆ.  ಮಾತು ಮುತ್ತಿನಂತಿದ್ದರೇನಾಯಿತು, ಅದಕ್ಕೊಂದು ಸಂಬದ್ಧತೆ, ಪ್ರಮಾಣವಿಲ್ಲದಿದ್ದರೆ? ಮುತ್ತಿನಲ್ಲಿ ಬೇರೆಬೇರೆ ಗಾತ್ರದವಿವೆ.  ಅದನ್ನು ಸಮಂಜಸವಾಗಿ ಕಟ್ಟುವುದು ಅಕ್ಕಸಾಲಿಯ ಕೌಶಲ.  ಯಾವಯಾವುದೋ ಗಾತ್ರದ ಮುತ್ತುಗಳನ್ನು ಪೋಣಿಸಿ ಕೊರಳಿಗೆ ಹಾಕಿದರೆ ಅದು ಹಾರವಾಗುವುದಿಲ್ಲ, ಕೊರಳಿಗೆ ಭಾರವಾಗುತ್ತದಷ್ಟೇ.  ಉತ್ತಮವಾದ ಕೈಬರಹವನ್ನು "ಮುತ್ತು ಪೋಣಿಸಿದಂತೆ" ಎನ್ನುತ್ತೇವೆ.  ಮುತ್ತು ಪೋಣಿಸಿದ ಹಾರದ ಹೋಲಿಕೆಯೂ ಇದೇ ಆಶಯವನ್ನು ಹೊಂದಿದಂಥದ್ದು - ಮಾತಿನಲ್ಲಿ ಶುಭ್ರತೆ, ಹೊಳಪು, ಸಮಂಜಸತೆ, ಸಂಬದ್ಧತೆ. 

ಆಯಿತು, ಇಷ್ಟಿದ್ದರೆ ಸಾಕೇ?  ಇಂತಹ ಮುತ್ತಿನ ಹಾರದಂತಹ ಮಾತುಗಳನ್ನು ಯಾವುದೇ ಮಾತಿನ ಕಲೆಗಾರನೂ ಪಂಡಿತನೂ ನೂರು ಆಡಿಯಾನು.  ಅದನ್ನು ಆಭರಣದಂತೆ ಧರಿಸಿ ಮೆರೆಯಬಹುದಷ್ಟೇ - ಪ್ರಯೋಜನವೇನು?  ಮುತ್ತಿನಂತೆ ಮುದ್ದುಮುದ್ದಾದ ನೂರು ಪದಗಳನ್ನು ಜೋಡಿಸಿದರೆ ಏನು ಫಲ?  ಅರ್ಥದ ಬೆಳಕಿಲ್ಲದ ಬರೀ ಮಾತು ಎಷ್ಟು ಸುಂದರವಾಗಿದ್ದರೆ ಏನು ಪ್ರಯೋಜನ?  ಮಾಣಿಕದ ದೀಪ್ತಿಯಂತೆ ಅರ್ಥವನ್ನು ಬೆಳಗಿ ತೋರಿಸಬಲ್ಲುದಾದರೆ, ಅದೀಗ ಮಾತು.

ಮಾತು ಬೆಳಗಿ ಅರ್ಥದ ಬೆಳಕು ಹೊಮ್ಮುವುದೇನೋ ಸರಿಯೇ.  ಆ ಬೆಳಕಿನಲ್ಲಿ ಕಣ್ಣಿಗೆ ಕಾಣುವುದು ಕಂಡಿತು.  ಕಾಣದ್ದು? ಅಡಗಿದ್ದು?  ಹೊರಗಿನದನ್ನು ಬೆಳಗುವ ಮಾತಿಗೆ ತನ್ನನ್ನು ತಾನೇ ಬೆಳಗಿಸಿಕೊಳ್ಳುವ, ತನ್ನ ಒಳಗನ್ನು ತೆರೆದು ತೋರುವ ಶಕ್ತಿಯೂ ಇರಬೇಕಲ್ಲವೇ?  "ಮಾತು ಅರ್ಥ ಎರಡು ವ್ಯರ್ಥ ಸ್ವಯಂ ಅರ್ಥವಿರದಿರೆ" ಅಲ್ಲವೇ?  ಹಾಗೆ ಸ್ವಯಂ ಅರ್ಥವನ್ನು ಹೊಂದಿದ ಮಾತಿಗೆ ವಿವರಣೆ ಬೇಕಿಲ್ಲ, ಸಂಪೂರ್ಣ ಪಾರದರ್ಶಕವಾಗಿರುತ್ತದೆ.  ಇಲ್ಲಿ ಅಣ್ಣನವರು ಸ್ಫಟಿಕದ ಶಲಾಕೆ ಎಂಬ ಮಾತನ್ನು ಬಳಸುತ್ತಾರೆ.  ಇದೊಂದು ಮಾತಿನಲ್ಲಿ ಅದೆಷ್ಟು ಅರ್ಥಗಳು ಹುದುಗಿವೆ ನೋಡಿ - ಸ್ಪಟಿಕ ಶುಭ್ರತೆಯ, ಪಾರದರ್ಶಕತೆಯ ಸಂಕೇತ.  ಆಡಿದ ಮಾತು ನಿಚ್ಚಳವಾಗಿರಬೇಕು, ಅದರ ಹೊರ ಅರ್ಥ ಒಳ ಅರ್ಥಗಳೆಲ್ಲ ಮನದಟ್ಟಾಗಬೇಕು, ಅಷ್ಟಾದರೆ ಸಾಕೇ?  ಮಾತು ಕೇವಲ ಸ್ಫಟಿಕವಾದರೆ ಸಾಲದು, ಸ್ಫಟಿಕದ ಶಲಾಕೆಯಾಗಬೇಕು.  ಶಲಾಕೆಯೆಂದರೆ ಕಿಟಕಿಗೆ ಹಾಕುವ ಕಬ್ಬಿಣದ ಸಲಾಕೆಯಲ್ಲ, ಮೊನೆಯಾದ, ದೃಢವಾದ, ಹಗುರಾದ ಕಡ್ಡಿ.  ಅದನ್ನು ಹಿಡಿದು ತೋರಿದರೆ, ಅದರ ಮೊನೆ ಗಮ್ಯವನ್ನು ಮುಟ್ಟಬೇಕು, ತೋರಿದ ಅರಿವಾಗಬೇಕು, ಆದರೆ ತೋರುವ ಶಲಾಕೆ ಕಾಣಬಾರದು - ಅರ್ಥವಷ್ಟೇ ಉಳಿಯಬೇಕು, ಮಾತು ನಿಲ್ಲಬಾರದು.  ದಿ. ಮೈಸೂರು ವಾಸುದೇವಾಚಾರ್ಯರು ವೀಣೆ ಶೇಷಣ್ಣನವರು ಯಾವಾಗಲೂ ಹೇಳುತ್ತಿದ್ದ ಒಂದು ಮಾತನ್ನು ನೆನೆಯುತ್ತಾರೆ - ವೀಣೆ ನುಡಿಸಿದರೆ, ಆ ತಂತಿ ಮಿಡಿಯುವ ಉಗುರಿನ ಕಟಪಟ ಶಬ್ದ ಒಂದಿನಿತೂ ಕೇಳಬಾರದು, ಕೇವಲ ಮಿದುವಾದ, ಹದವಾದ ನಾದವಷ್ಟೇ ಹೊರಹೊಮ್ಮಬೇಕು - ಅದೇ ಆಶಯ ಇಲ್ಲೂ.  ಆಡಿದ ಮಾತು, ತಾನು ಹೇಳಬೇಕಾದ ಭಾವವನ್ನಷ್ಟೇ ತೋರಿ ತಾನು ಮರೆಯಾಗಬೇಕು.  ಅದು ಬಹಳ ಕಷ್ಟಸಾಧ್ಯ.  ಬಹಳ ತಪಸ್ಸನ್ನು ಬೇಡುವಂಥದ್ದು.  ಅದಕ್ಕೇ ಕವಿ ಶಿವರುದ್ರಪ್ಪನವರು "ಮನದ ಭಾವ ಹೊಮ್ಮಿಸಲಿಕೆ ಭಾಷೆ ಒರಟು ಯಾನ" ಎನ್ನುತ್ತಾರೆ.  ಹೀಗೆ ಕಷ್ಟವಾದ್ದರಿಂದಲೇ ಮಾತು ಹೀಗಿರಬೇಕೆಂಬುದು ಒಂದು ಆದರ್ಶ.  ಶಲಾಕೆಗೆ ಬಾಣ, ಭರ್ಜಿ ಮೊದಲಾದ ಅರ್ಥಗಳೂ ಇವೆ - ಅವೂ ಮೊನೆಯುಳ್ಳವೇ.  ಆಡಿದ ಮಾತು ಗುರಿತಪ್ಪದೇ ಹೋಗಿ ಗಮ್ಯದಲ್ಲಿ ನೆಡಬೇಕು - ನೆಟ್ಟ ಮಾತು ಮರೆಯಾಗಬೇಕು, ನೆಟ್ಟ ಅನುಭವ ಮಾತ್ರ ಉಳಿಯಬೇಕು - ಇದು ಸ್ಫಟಿಕದ ಶಲಾಕೆ. 

ಹೀಗೆ, ಒಂದು ಆಡಲೇಬೇಕಾದ ಮಾತು ಹೇಗಿರಬೇಕೆಂದು ವಿವರಿಸುತ್ತಲೇ ಹೋಗಬಹುದು - ಎಷ್ಟೆಂದು ವಿವರಿಸುವುದು.  ಅದೇ ಒಂದು ಮಾತಿನ ಹೋರಟೆಯಾಗಬಾರದಷ್ಟೇ.  ಅದಕ್ಕೇ ಏನೋ ಮಾತಿನ ಕೊನೆಯಲ್ಲಿ "ಇತ್ಯಾದಿ" ಎಂದು ಹೇಳಿ ಮುಗಿಸುವಂತೆ ಬಸವಣ್ಣನವರು ಇದೆಲ್ಲ ಲಕ್ಷಣಗಳ ಒಟ್ಟಾರೆ ಗಮ್ಯವನ್ನು ತಿಳಿಸಿ ಮುಗಿಸುತ್ತಾರೆ - "ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು" ಎಂದುಬಿಡುತ್ತಾರೆ.  ಲಿಂಗವೆಂದರೆ ಅಲ್ಲೆಲ್ಲೋ ಹೊರಗೆ ಕುಳಿತ ಕಲ್ಲುಬಂಡೆಯಲ್ಲ - ನನ್ನದೇ ಒಳಗಿನ ಒಳಗು, ಯಾವುದನ್ನು ಬಿಟ್ಟು ನಾನಿಲ್ಲವೋ ಅದು - ನೀವು ಅದನ್ನು ಇಷ್ಟಲಿಂಗವೆನ್ನಿ, ಪರಶಿವನೆನ್ನಿ, ಮತ್ತೊಂದೆನ್ನಿ - ಅದು ನಿಮ್ಮ ಪ್ರಜ್ಞೆಯ, ಅಸ್ತಿತ್ವದ ಒಂದು ಭಾಗವೇ ಆಗಿರದಿದ್ದರೆ ಅದು ಕೇವಲ ಕಲ್ಲು.  ಈ ನಿಮ್ಮೊಳಗಿನ ಲಿಂಗ ನಿಮ್ಮ ಮಾತನ್ನು ಮೆಚ್ಚಬೇಕು, ಮೆಚ್ಚಿ ಅಹುದಹುದೆನಬೇಕು.  ಅದು ಅಹುದೆನ್ನುತ್ತದೆಯೋ ಅಲ್ಲದೆನುತ್ತದೆಯೋ ಎಂಬುದು ಹೊರಗಿನವರಿಗಿಂತ ನಿಮಗೇ ಅರಿವಾಗುವಂಥದ್ದು. 

ಮಾತೆಂಬುದು ಜ್ಯೋತಿರ್ಲಿಂಗವೆಂಬ ಪ್ರಜ್ಞೆಯಿರುವವನು ಸಿಕ್ಕಸಿಕ್ಕಂತೆ ಆಡಿ ಅದನ್ನು ಮೈಲಿಗೆ ಮಾಡಲಾರ.  ಅದನ್ನೇ ಅಲ್ಲಮಪ್ರಭುವಿನ ಮಾತಿನಲ್ಲಿ ಹೇಳುವುದಾದರೆ "ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ; ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ. ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರುಳೆ"  

ಇಷ್ಟಾಗಿಯೂ ನುಡಿಯಲೇ ಬೇಕೆಂದರೆ, ನುಡಿಯ ಸೂತಕವನ್ನೊಲ್ಲದ ನಿಚ್ಚಟನು ಆ ನುಡಿಗೆ 'ನಡೆ'ಯ ಮುಡಿ ಹಾಸುತ್ತಾನೆ, ಏಕೆಂದರೆ ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನು ಒಲಿಯನೆಂಬ ಪ್ರಜ್ಞೆ ಅವನಿಗಿದ್ದೇಯಿದೆ.  ಈ ಪ್ರಜ್ಞೆ ತಪ್ಪಿದರೆ, ಮಾತೆಂಬುದು ತೂತುಮಡಕೆಯಿಂದ ಸೋರುವ ಹೊಲಸಾಗುತ್ತದೆ.  ಅದನ್ನು ಹೊನ್ನಿನ ಧಾರೆಯೆನ್ನಲಾಗದಷ್ಟೇ?

Friday, April 9, 2021

ಬಿಲ್ಡರ್ ಬೊಂಬೇಶಪ್ಪನವರಿಗೆ ಕಾಡೋಜಪ್ರಶಸ್ತಿ


ಬಿಲ್ಡರ್ ಬೊಂಬೇಶಪ್ಪ ಮಣ್ಣೆಪ್ಪಾ ಕಲ್ಲಿಟಗಿಯವರು ನಾಡಿನ ಪ್ರತಿಷ್ಠಿತ ಕಾಡೋಜ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂಬ ವಿಷಯವನ್ನು ತಿಳಿದು ಸುದ್ದಿಮನೆ ಸುಬ್ಬಣ್ಣನಿಗೆ ಶಾಕ್ ಏನೂ ಆಗದಿದ್ದರೂ ಒಳಗೆಲ್ಲಾ ಏನೋ ಒಂದು ರೀತಿ ಕಲಮಲವುಂಟಾಯಿತು.  ಸುಬ್ಬಣ್ಣನಿಗೇನು ಈ ಪ್ರಶಸ್ತಿಗಳ ವಿಶೇಷ ಪರಿಚಯವಿರಲಿಲ್ಲ.  ಕೊಂಪೀ ನಗರದ ಯಾವುದೋ ಮೂಲೆ ಗಲ್ಲಿಯಲ್ಲಿ ಬಾಡಿಗೆ ಗೂಡಿನಲ್ಲಿ ಕಾಲ್ಚಾಚಿಕೊಂಡೇ, ಹೇಗೋ ಇರುವುದಕ್ಕೊಂದು ಸ್ವಂತ ನೆಲ, ತಲೆಯ ಮೇಲೊಂದು ಸ್ವಂತ ಸೂರಿನ ಕನಸು ಕಾಣುತ್ತಿದ್ದ ಸುಬ್ಬಣ್ಣನಿಗೆ ಕಾಡು ಬೆಳೆಸುವುದಿರಲಿ, ಉಳಿಸುವ ಬಗೆಗೂ ವಿಶೇಷ ಆಸ್ಥೆಯೂ ಇರಲಿಲ್ಲ, ಬದಲಿಗೆ ಕಾಡೊಂದನ್ನು ಸವರಿ ಹೊಸದೊಂದು ಲೇಔಟ್ ಆಗಿ ಅದರಲ್ಲೊಂದು ಸೈಟು ತನಗೆ ಸಿಕ್ಕರೆ ಅವನೇನು ಬೇಡವೆನ್ನುತ್ತಿರಲಿಲ್ಲ.  ಆದರೂ ನಾಡು ಬೆಳೆಯುವುದೆಂದರೆ ಕಾಡು ನಾಶವಾಗುವುದೆಂಬ ಸಾಮಾನ್ಯಜ್ಞಾನವನ್ನು ಪಡೆದಿದ್ದ ಸುಬ್ಬಣ್ಣನಿಗೆ, ನಾಡು ಬೆಳೆಸುವವರ ಪ್ರತಿನಿಧಿಯಂತಿದ್ದ ಆಧುನಿಕವಿಶ್ವಕರ್ಮ ಸಿವಿಲ್ ಕಂತ್ರಾಟುದಾರನೊಬ್ಬನಿಗೆ, ಕೊನೆಯ ಪಕ್ಷ ನಾಡೋಜ ಪ್ರಶಸ್ತಿಯನ್ನಾದರೂ ನೀಡುವ ಬದಲು ಹೋಗಿ ಹೋಗಿ ಕಾಡೋಜ ಪ್ರಶಸ್ತಿ ನೀಡಿದ್ದು ಅಚ್ಚರಿಯನ್ನುಂಟುಮಾಡಿತ್ತು.  ಆ ಪ್ರಶಸ್ತಿ ಕಾಡು ಉಳಿಸಿ ಬೆಳೆಸಲು ವಿಶೇಷ ಶ್ರಮಪಟ್ಟವರಿಗೆ, ಆ ಮೂಲಕ ಅರಣ್ಯಸಂರಕ್ಷಣೆಯ ವಿಷಯದಲ್ಲಿ ಇಡೀ ನಾಡಿಗೆ ಮಾದರಿಯಾದವರಿಗೆ ನೀಡುವ ಪ್ರಶಸ್ತಿಯೆಂಬ ವಿಷಯ ತಿಳಿದಿತ್ತು - ಆ ಪ್ರಶಸ್ತಿಯಲ್ಲಿ ಪ್ರಶಸ್ತಿಫಲಕ, ಶಾಲು, ಹಾರ, ಒಂದು ಹತ್ತೋ ಇಪ್ಪತ್ತೋ ಲಕ್ಷ ಪುಡಿಗಾಸಿನ ಜೊತೆಗೆ, ಮರದ ನೆರಳಲ್ಲಿ ಕಲ್ಲಿನ ಮೇಲೊಂದು ಕಾಲಿಟ್ಟುಕೊಂಡು ನಾಲಿಗೆ ಚಾಚಿಕೊಂಡು ಡೊಳ್ಳು ಹೊಟ್ಟೆ ಬಿಟ್ಟುಕೊಂಡು ಒಂದು ಕೈಯಲ್ಲಿ ಭರ್ಜಿ, ಇನ್ನೊಂದು ಕೈಯಲ್ಲಿ ಸುತ್ತ ನೆರೆದಿದ್ದ ಹುಲಿ, ಸಿಂಹ, ಜಿಂಕೆಗಳ ತಲೆ ಸವರುವ ಕಾಡವ್ವದೇವಿಯ ವಿಗ್ರಹವೂ ಇರುವುದೆಂಬ ವಿಷಯ ತಿಳಿದಿತ್ತು.  ಇಂಥದ್ದೊಂದು ಪ್ರಶಸ್ತಿಯನ್ನು ಸಿವಿಲ್ ಕಂತ್ರಾಟಿನೊಟ್ಟಿಗೆ ಅನಫೀಶಿಯಲ್ಲಾಗಿ ಮರಸಾಗಾಣಿಕೆ ಕಂತ್ರಾಟನ್ನೂ ಹೊಂದಿದ್ದ ಬೊಂಬೇಶಪ್ಪನಿಗೆ ನೀಡುವ ವಿಷಯ ಸುಬ್ಬಣ್ಣನಂತಹ ಸುಬ್ಬಣ್ಣನಿಗೂ ಬಲುದೊಡ್ಡ ಅಸಂಗತನಾಟಕದ ದೃಶ್ಯದಂತೆ, ಅರೆನಿದ್ದೆಯಲ್ಲಿ ಬೀಳುವ ಸಿಲ್ಲಿ ಸಿಲ್ಲಿ ಕನಸಿನಂತೆ ಕಂಡಿತು. 

ತಲೆಕೊಡವಿಕೊಂಡವನೇ ಎದ್ದು, ಹಲ್ಲುಜ್ಜಿ, ಮೈಮೇಲೊಂದಷ್ಟು ನೀರು ಸುರುವಿಕೊಂಡು, ಅಂಗಿ ಪ್ಯಾಂಟು ನೇತುಹಾಕಿಕೊಂಡು ಸೀದಾ ಪತ್ರಿಕಾಕಛೇರಿಗೆ ಬಂದ.  ಹಳೇ ಕಡತಗಳನ್ನು ಹುಡುಕಿದವನಿಗೆ, ಅಕ್ರಮವಾಗಿ ಕಡವೆ ಚರ್ಮ ಸಾಗಿಸುತ್ತಿದ್ದ ವಾಹನವೊಂದು ಸೀಜ್ ಆಗಿದ್ದ ಸುದ್ದಿ ಕಣ್ಣಿಗೆ ಬಿತ್ತು.  ಆ ವಾಹನ ನಗರದ ಬೊಂಬೇಶಪ್ಪ ಕಲ್ಲಿಟಗಿ ಎನ್ನುವಾತನಿಗೆ ಸೇರಿದ್ದೆಂಬ ಸುದ್ದಿ ವಿಶೇಷವಾಗಿ ಗಮನ ಸೆಳೆಯಿತು.  ಮುಂದೇನಾಗಿರಬೇಹುದೆಂದು ಆಮೇಲಿನ ಕಡತಗಳನ್ನು ಬಹುವಾಗಿ ಹುಡುಕಿದರೂ, ಸಾಮಾನ್ಯವಾಗಿ ಇಂತಹ ಸುದ್ದಿಗಳಲ್ಲಾಗುವಂತೆ ಮುಂದಿನ ಯಾವ ಸುದ್ದಿಯೂ ಸಿಗಲಿಲ್ಲ. ಅಲ್ಲಿಗೆ ಆ ಸುದ್ದಿ ಮುಗಿದಿತ್ತು, ಆದರೆ ಆಮೇಲಿನ ದಿನಗಳಲ್ಲಿ ಬೊಂಬೇಶಪ್ಪನವರು ಸಾಕಷ್ಟು ಗಣ್ಯರಾಗಿ ಬೆಳೆದಿದ್ದರು, ಹಲವು ದೊಡ್ಡದೊಡ್ಡ ಮಂತ್ರಿಗಳೊಟ್ಟಿಗೆ ಗುರುತಿಸಿಕೊಂಡಿದ್ದರು, ಆಡಳಿತಪಕ್ಷದ ಸದಸ್ಯರಾಗಿದ್ದರು, ಪಕ್ಷದ ಟಿಕೇಟಿನ ಮೇಲೆ ಎಲೆಕ್ಷನ್ನಿಗೆ ನಿಂತು ಸೋತೂ ಇದ್ದರು.  ಅವರ "ಬೊಂಬೇಶ್ ಕನ್ಸ್ಟ್ರಕ್ಷನ್ ಕಂಪನಿ" ಬಡಜನರಿಗೆ ನೆರಳಾಗುವ ಮನೆಭಾಗ್ಯ ಯೋಜನೆಯಲ್ಲಿ ಮನೆ ಕಟ್ಟಿಕೊಡುವ ಸರ್ಕಾರೀ ಯೋಜನೆಯ ಕಂತ್ರಾಟು ಹಿಡಿದಿತ್ತು.  ಅಷ್ಟೇನೂ ಒಳ್ಳೆಯ ಗುಣಮಟ್ಟದ್ದಲ್ಲದ ಅನೇಕ ಮನೆಗಳು ಕುಸಿದು ಒಂದಿಬ್ಬರು ಗೊಟಕ್ ಅಂದ ಸುದ್ದಿಗಳೂ ಪತ್ರಿಕೆಯ ಮೂಲೆಯಲ್ಲೆಲ್ಲೋ ಅಲ್ಲಿಲ್ಲಿ ವರದಿಯಾಗಿದ್ದುವು.  ಒಟ್ಟಿನಲ್ಲಿ ಬಿಲ್ಡರ್ ಬೊಂಬೇಶಪ್ಪಣ್ಣಾರು ಇವೆಲ್ಲವನ್ನೂ ಮೀರಿದ ಆಢ್ಯರಾಗಿದ್ದರು.   ಈಗ ಈ ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾಗಿದ್ದು ಅವರ ವರ್ಚಸ್ಸನ್ನು ಇನ್ನಷ್ಟು ವಿಸ್ತರಿಸಲಿತ್ತು.  ಹೀಗಿರುವಾಗ, ಇವರದ್ದೊಂದು ಸಂದರ್ಶನ "ನಮ್ಮಲ್ಲೇ ಮೊದಲು" ಎಂದು ಪತ್ರಿಕೆಯಲ್ಲಿ ಪ್ರಕಟವಾದರೆ ಯಜಮಾನರು ಸುಪ್ರೀತರಾಗಿ ತನಗೂ ಸ್ವಲ್ಪ ಭಡ್ತಿ ವಗೈರೆ ಸಿಗಬಹುದೆಂಬ ಕನಸು ಕಾಣುತ್ತಾ ಬೊಂಬೇಶಪ್ಪನವರನ್ನು ಸಂದರ್ಶಿಸಲು ಕೈನೆಟಿಕ್ ಹೋಂಡಾ ಹತ್ತಿದ ಸುಬ್ಬಣ್ಣ.

ಹೋಗುತ್ತಾ ಹೋಗುತ್ತಾ, ಪ್ರಶಸ್ತಿಯನ್ನು ವಿಧಾಯಿಸುವ ಕೊಂಪೀ ಗುರುಕುಲವೂ ಸ್ವಲ್ಪ ದೂರದಲ್ಲೇ ಇರುವ ವಿಷಯ ಹೊಳೆದು, ಕುಲಪತಿಗಳಾದ ಹ ಛೀ ಸುರೇಶರನ್ನೂ ಸಂದರ್ಶಿಸಿದರೆ ಚೆನ್ನಾಗಿರುತ್ತದೆಂದು ಪ್ರೇರಣೆಯಾಗಿ ಗಾಡಿ ತಿರುಗಿಸಿದ.   ಎಸ್ಸೆಸ್ಸೆಲ್ಸಿಯಲ್ಲೇ ಐದು ಬಾರಿ ಪಲ್ಟೀ ಹೊಡೆದು, ಆಮೇಲೆ ಈ ಕುಲಗೆಟ್ಟ ಎಜುಕೇಷನ್ ಸಿಸ್ಟಮ್ಮಿನ ಮೇಲೇ ಅಸಹ್ಯ ಬಂದು ಶಾಲೆಗೆ ಶರಣು ಹೊಡೆದು ಮುಂದೆ ಹೇಗೋ ಬಡೇಬಾಯಿಯಿಂದಲೇ ಇಷ್ಟಾದರೂ ಮೇಲೆ ಬಂದಿದ್ದ ಸುಬ್ಬಣ್ಣ ಬದುಕಿನಲ್ಲೇ ಎಂದೂ ಗುರುಕುಲಗಳ ಕಡೆ ತಲೆ ಹಾಕಿದವನಲ್ಲ.  ಗೂಗಲ್ ಮ್ಯಾಪ್ ಹಾಕಿಕೊಂಡು ಗುರುಕುಲದ ಮಹಾದ್ವಾರಕ್ಕೆ ತಲುಪಿದ ಸುಬ್ಬಣ್ಣನನ್ನು ರಸ್ತೆಯ ಇಕ್ಕೆಲಗಳಲ್ಲೂ ಬೆಳೆದು ವಿಸ್ತಾರವಾಗಿ ಹರಡಿದ್ದ ಜಾಲಿಯ ಮೆಳೆ ಸ್ವಾಗತಿಸಿತು.  ವಸಂತಕಾಲವಾದ್ದರಿಂದ ಜಾಲಿಯೂ ಚಿಗುರೊಡೆದು ನಯನಮನೋಹರವಾಗಿತ್ತು.  ನಡುನಡುವೆ ಅಲ್ಲಲ್ಲಿ ಪಾಪಾಸುಕಳ್ಳಿಯೇ ಮೊದಲಾದ ವಿವಿಧ ಬಗೆಯ ಕ್ಯಾಕ್ಟಸುಗಳೂ, ಎಕ್ಕದ ಗಿಡ, ದತ್ತೂರಿ ಗಿಡ, ತುರಿಕೆ ಗಿಡವೇ ಮೊದಲಾದ ಚಿಕ್ಕಚಿಕ್ಕ ಗಿಡಗಳೂ, ನೆಗ್ಗಿಲುಮುಳ್ಳು, ನೆಲಮುಳ್ಳು, ಮುಟ್ಟಿದರೆ ಮುನಿ ಮೊದಲಾದ ನೆಲಗಿಡಗಳೂ ವಿಪುಲವಾಗಿ ಹಬ್ಬಿತ್ತು.  ಅಲ್ಲೇ ನಡುನಡುವೆ ಪೊದೆಗಳ ಸಂದುಗೊಂದುಗಳಲ್ಲಿ ಕುಳಿತು ನಿಂತು ಅರೆಮಲಗಿ ವಿಶೇಷಾಧ್ಯಯನ ನಡೆಸುತ್ತಿದ್ದ ವಿದ್ಯಾರ್ಥಿ ಜೋಡಿಗಳು ಗುರುಕುಲದ ಪವಿತ್ರತಾಣಕ್ಕೊಂದು ವಿಶೇಷಶೋಭೆ ನೀಡಿದ್ದುವು.  ಹತ್ತಕ್ಕೇ ಸಾಲಿಗೆ ಶರಣು ಹೊಡೆದು ಇಂಥದ್ದೊಂದು ಸ್ವರ್ಗದಿಂದ ವಂಚಿತನಾದುದಕ್ಕೆ ತನ್ನನ್ನು ತಾನೇ ಹಳಿದುಕೊಳ್ಳುತ್ತಾ ಸುಬ್ಬಣ್ಣ ಕುಲಪತಿಗಳ ಕುಟೀರವನ್ನು ಸಮೀಪಿಸಿದ.  ಕುಟೀರವಿನ್ನೂ ಫರ್ಲಾಂಗೆರಡು ಫರ್ಲಾಂಗಿರುವಂತೆಯೇ ಕಮ್ಮನೆ ವಾಸನೆಯಾಗಿ ಆರಂಭವಾದದ್ದು ಗಬ್ಬನೆಯ ವಾಸನೆಯಾಗಿ ಮೂಗಿಗಡರತೊಡಗಿದೊಡನೆ ಇದು ಪುರಾತನತೆಯ ವಿಕೃತಸಂಕೇತವಾದ ಮುಗ್ಗಲು ವಾಸನೆಯೆಂಬುದನ್ನು ಆತನ ಚಾಣಾಕ್ಷ ಮೂಗು ಕಂಡುಹಿಡಿದುಬಿಟ್ಟಿತ್ತು.  ಗುರುಕುಟೀರದ ಸುತ್ತ ನೆಲದಲ್ಲಿ ಹಲವು ದೊಗರುಗಳು ಬಿಲಗಳಾಗಿ ಹೊಕ್ಕು, ಕುಟೀರದ ಗೋಡೆಗಳಲ್ಲಿ ಹೊರಟಿದ್ದುವು.  ಅಲ್ಲೇ ಪಕ್ಕದಲ್ಲಿ ಮಣ್ಣುಗುಡ್ಡೆಯ ಮೇಲೆ ತೂಕಡಿಸುತ್ತಿದ್ದ ಕಂತ್ರಿನಾಯೊಂದು ಇವನನ್ನು ಕತ್ತೆತ್ತಿ ನೋಡಿ, ಬೊಗಳಲು ಬೇಕಾದ ಆಮಿಷವನ್ನೇನೂ ಕಾಣದೇ ಸುಮ್ಮನೇ "ಲೊಳ್" ಎಂದು ಹೇಳಿ, ಬಾಲವನ್ನು ಗುಂಡಾಡಿಸಿ ಮತ್ತೆ ತೂಕಡಿಕೆಗೆ ಜಾರಿತು.  ಜಗುಲಿಯೇರಿದಂತೆ, ಬೆಟ್ಟದಂತೆ ಬಿದ್ದಿದ್ದ ಗ್ರಂಥರಾಶಿಗಳು, ಅಷ್ಟೇನೂ ಪುರಾತನವಲ್ಲದಿದ್ದರೂ ದೂಳು ಗೆದ್ದಲುಗಳ ಹೊಡೆತಕ್ಕೆ ಜರ್ಜರಿತವಾಗಿ ಬಿದ್ದಿದ್ದುವು.  ಬೇಡಬೇಡವೆಂದರೂ "ಆಹಾ, ಇಲ್ಲಿ ಸರಸ್ವತಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆ" ಎಂಬ ಆಲೋಚನೆ ಹೊರಟು ತೆಳುನಗೆ ಮೂಡಿತು ಸುಬ್ಬಣ್ಣನ ಮೊಗದಲ್ಲಿ.  ಸವರ್ಣಚಿತ್ರೆಯಾಗಿ ಕಂಗೊಳಿಸುತ್ತಿದ್ದ ಸರಸ್ವತಿಯೊಬ್ಬಳನ್ನು ಕೈಗೆತ್ತಿಕೊಂಡು, ಮೇಲೆ ಕುಳಿತಿದ್ದ ದೂಳು ಜಾಡಿಸಲು ತನ್ನ ಪೃಷ್ಟಭಾಗಕ್ಕೆ ಬಡಿದುಕೊಳ್ಳುತ್ತಿದ್ದಂತೆ, ಅದರಿಂದ ಹೊಮ್ಮಿದ ದೂಳಿನ ಮೋಡ ಆತನ ನಾಸಿಕಸುರಂಗಕ್ಕಡರಿ, ಆತನ ಜನ್ಮಜನ್ಮಾಂತರದ ಅಜ್ಞಾನವೇ ಕರಗಿ ಹೊರಚಿಮ್ಮಿತೋ ಎಂಬಂತೆ ಸಾಲುಸಾಲು ಸೀನುಗಳು ಢೇಂಕರಿಸಿಕೊಂಡು ಹೊರಬಿದ್ದುವು.  ಆ ಢೇಂಕಾರಕ್ಕೆ ಬೆಚ್ಚಿ ಪುಸ್ತಕರಾಶಿಯಡಿಯಿಂದ ಒಂದೆರಡು ಹೆಗ್ಗಣಗಳು ಬುದುಗ್ಗನೆ ಹೊರಚಿಮ್ಮಿ ಅವನ ಕಾಲನ್ನೇ ಪರಚಿಕೊಂಡು ಓಡಿ ಹೋದುವು. ಇದ್ದಕ್ಕಿದ್ದಂತೆ ಸಂಭವಿಸಿದ ಮಹಾಮೂಷಕಾಘಾತದಿಂದ ಬೆಚ್ಚಿ, "ಅರೆ ಬಡ್ಡೀದೇ" ಎಂದು ಚೀತ್ಕರಿಸಿ, ಕ್ಷಣಕಾಲ ಭಯತಾಂಡವವಾಡಿ, ಸಾವರಿಸಿಕೊಂಡು, ಕೈಲಿದ್ದ ಸರಸ್ವತಿಯನ್ನು ದಬಕ್ಕನೆ ಅಲ್ಲೇ ಬೀಳಿಸಿ, ಕ್ಷಣಕಾಲ ಸಾವರಿಸಿಕೊಂಡನಂತರ ಎದುರಿಗಿದ್ದ ಗುರುವಾಗಿಲನ್ನು (ಗುರುಗಳ ಕೋಣೆಯ ಬಾಗಿಲನ್ನು) ತಳ್ಳಿಕೊಂಡು ಒಳನುಗ್ಗಿದ.  ಕುಲಪತಿಗಳಿಗೋ ಆಗಷ್ಟೇ ಭೋಜನವಿರಾಮ - ಉಣ್ಣುವುದರಿಂದ ತುಸು ವಿಶ್ರಾಂತಿ ತೆಗೆದುಕೊಳ್ಳುವ ಸಮಯ.  ಅರ್ಧ ಕಚ್ಚಿ ಬಿಟ್ಟಿದ್ದ ತುಂಡು, ಇನ್ನೂ ಅರ್ಧ ಉಳಿದಿದ್ದ ಗುಂಡು ಹಾಗೇ ಡೆಸ್ಕಿನ ಮೇಲಿದ್ದುವು.  ಜೊತೆಗೆ ಯಾರೋ ಶಿಷ್ಯೋತ್ತಮರು ತಂದಿಟ್ಟಿದ್ದ ಗುರುದಕ್ಷಿಣೆಯ ಪ್ಯಾಕೆಟ್ ಬೇರೆ, ಎಣಿಸಲು ಆಗಷ್ಟೇ ಬಿಚ್ಚಿದ್ದು.  ಸುಳಿವನ್ನೇ ಕೊಡದೇ ಇದ್ದಕ್ಕಿದ್ದಂತೆ ಎಬಡನಂತೆ ನುಗ್ಗಿದ ಸುಬ್ಬಣ್ಣನನ್ನು ಕಂಡು ಗುರುಗಳು ಬೆಚ್ಚಿ, ಕ್ಷಣದಲ್ಲೇ ಸಾವರಿಸಿಕೊಂಡು, ಅಭ್ಯಾಸಬಲದಿಂದಲೋ ಎಂಬಂತೆ ಮಿಂಚಿನ ವೇಗದಲ್ಲಿ ಅವೆಲ್ಲವನ್ನೂ ಡೆಸ್ಕಿನಡಿ ತಳ್ಳಿ ಕ್ಷಣಮಾತ್ರದಲ್ಲಿ ನಿಟಾರಾದರು.  ಇದ್ದಕ್ಕಿದ್ದಂತೆ ನುಗ್ಗಿದ್ದರಿಂದ ಆದ ಮುಜುಗರಕ್ಕೆ ಕ್ಷಮೆ ಕೇಳುವವನಂತೆ ಹಲ್ಲು ಗಿಂಜುತ್ತಾ ದೇಶಾವರಿ ನಗೆ ಬೀರುತ್ತಾ ಸುಬ್ಬಣ್ಣ "ನಮಸ್ಕಾರ್ರೀ ಸರ, ನಾ ಸುದ್ದೀಮನಿ ಸುಬ್ಬಣ್ಣ ಅದೀನ್ರೀ" ಎಂದು ಕೈಮುಗಿದ.  ಸುದ್ದೀಮನಿ ಹೆಸರು ಕೇಳಿದಂತೆ ಗುರುಗಳ ಹುಬ್ಬಿನ ಗಂಟುಗಳು ಸಡಿಲಗೊಂಡು, ಮುಖದಲ್ಲಿ ಸ್ನೇಹದ ನಗೆ ಹರಡಿತು.  "ಓಹೋಹೋ... ಬರ್ರೀ ಬರ್ರೀ, ಏನ್ ಸಮಾಚಾರ? ಬಕವಾಜ್ ಬೊಗಳೇಶಪ್ಪಾರು ಆರಾಮೇನ್ರೀ? ಕುಂದರ್ ರೀ ನಿಂತೇ ಅದೀರೆಲಾ" ಎಂದು ಕೂರಲು ಸನ್ನೆ ಮಾಡಿದರು ಗುರುಗಳು.  ಕೂರುತ್ತಾ ತಾನು ಬಂದಿರುವ ಉದ್ದೇಶ ತಿಳಿಸಿ ಮೊದಲ ಪ್ರಶ್ನೆಯ ಬಾಣ ಬಿಟ್ಟ ಸುಬ್ಬಣ್ಣ - 

"ಸರ, ಇವತ್ತ ಈ ಬಿಲ್ಡರ್ ಬೊಂಬೇಶಪ್ಪ ಮಣ್ಣೆಪ್ಪಾ ಕಲ್ಲಿಟಗಿಯವರಿಗೆ ಕಾಡೋಜ ಪ್ರಶಸ್ತಿಗ ಆಯ್ಕಿ ಮಾಡೀರಿ ಅಂತ ಸುದ್ದಿ ಬಂತು.  ನಿಜವೇನ್ರೀ?"

ವಿಷಯ ಗಂಭೀರವಾದದ್ದನ್ನು ಕಂಡು ಮತ್ತಷ್ಟು ನಿಟಾರಾಗಿ ಕೂತ ಗುರುಗಳು, ಎಂದೂ ಇಲ್ಲದ ಗಾಂಭೀರ್ಯವನ್ನೂ, ಎಂದೂ ಇದ್ದಿರದ ಅಕ್ಯಾಡೆಮಿಕ್ ಲುಕ್ಕನ್ನೂ ಮೋರೆಯ ಮೇಲೆಳೆದುಕೊಂಡು ಸಂಪ್ರದಾಯದಂತೆ ಒಮ್ಮೆ ಕೆಮ್ಮಿ, ಕ್ಷಣಕಾಲ ಧ್ಯಾನಾಸಕ್ತರಾಗಿ, ಇದ್ದಕ್ಕಿದ್ದಂತೆ ಗ್ರಾಂಥಿಕಭಾಷೆಗೆ ಹೊರಳಿಕೊಂಡು ಮಾತಾಡತೊಡಗಿದರು - 

"ನೋಡಿ ಸುಬ್ಬಣ್ಣನವರೇ, ನಿಮಗೇಕೆ ಈ ಅನುಮಾನ ಬಂತೋ ತಿಳಿಯಲಿಲ್ಲ.  ಹೌದು, ಬೊಂಬೇಶಪ್ಪನವರು ಪ್ರಶಸ್ತಿಗೆ ಆಯ್ಕೆಯಾಗಿರುವುದು ನಿಜವೇ"

ಆ ಉತ್ತರದಲ್ಲಿನ "ಏನೀಗ" ಎಂಬ ಧ್ವನಿಯನ್ನು ಗುರುತಿಸಿ ಮರುಪ್ರಶ್ನೆ ಕೇಳಿದ ಸುಬ್ಬಣ್ಣ - "ಅಲ್ರೀ ಸರ, ಕಾಡೋಜ ಪ್ರಶಸ್ತಿ ಇರೂದು ಕಾಡು ಉಳಿಸಿ ಬೆಳೆಸೋದ್ರಾಗ ಸಾಧನಾ ಮಾಡ್ದವರಿಗೆ ಹೌದಿಲ್ಲೋ, ಇವ್ರು ನೋಡಿದ್ರ ಕಾಡ ಕಡಿದು ನಾಡು ಮಾಡೋ ಮಂದಿ.  ನಾಡ ಬೆಳಸೋರಿಗೆ ನಾಡೋಜ ಪ್ರಶಸ್ತಿ ನೀಡಿದ್ರೊಂದು ಸಮಾ ಹೌದಿಲ್ರೀ ಸರ?  ಕಾಡೋಜ ಪ್ರಶಸ್ತಿ ಯಾಕಂತ..."

ಮುಂದುವರೆಯುತ್ತಿದ್ದ ಅವನ ಮಾತನ್ನು ಅಲ್ಲಿಗೇ ತುಂಡರಿಸಿ ನಿಸೂರಾಗಿ ಹೇಳಿದರು ಗುರುಗಳು - "ನೋಡಿ ಇವರೇ, ಕಾಡು ಬೆಳೆಸುವವರಿಗೇ ಕಾಡೋಜ ಪ್ರಶಸ್ತಿ ಕೊಡಬೇಕೆಂದು ಎಲ್ಲಿದೆ?  ಕಾಡು ಮರ ಗಿಡ ಪ್ರಾಣಿಗಳಿಗೆ ಸಂಬಂಧಿಸಿದಂತೆ ಯಾರಿಗೆ ಬೇಕಾದರೂ ಕಾಡೋಜ ಪ್ರಶಸ್ತಿಯನ್ನು ಕೊಡಬಹುದು.  ಈ ಹಿಂದೆಯೂ ಕಾಡನ್ನು ಹೊರತುಪಡಿಸಿ ಅನ್ಯಕ್ಷೇತ್ರಗಳವರಿಗೂ ಪ್ರಶಸ್ತಿ ಕೊಟ್ಟ ನಿದರ್ಶನಗಳಿವೆ.  ಅಲ್ಲದೇ ಇವರೇನು ಕಾಡಿಗೆ ಹೊರಗಿನವರಲ್ಲ.  ಈ ಭಾಗದ ಕಾಡಿನ ಇಂಚಿಂಚೂ ಇವರಿಗೆ ಗೊತ್ತು, ಅರಣ್ಯಸಂಪತ್ತಿನ ಬಹಳ ಆಳ ಪರಿಚಯವಿದೆ.  ಕಾಡಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಕೂಡ.  ಇಷ್ಟಕ್ಕೂ ಕಾಡೋಜ ಎಂದರೆ ಏನು?  ಜ ಎಂದರೆ ಹುಟ್ಟಿದವನು.  ಕಾಡೋಜ ಎಂದರೆ ಕಾಡಿನಲ್ಲಿ ಹುಟ್ಟಿದವನು (ಮನೋಜ = ಮನಸ್ಸಿನಲ್ಲಿ ಹುಟ್ಟಿದವನು, ವಕ್ಷೋಜ = ಎದೆಯಲ್ಲಿ ಹುಟ್ಟಿದ್ದು, ಹೀಗೆ).  ಇವರು ಕಾಡಿನಲ್ಲಿ ಹುಟ್ಟಿದವರೇ ಎನ್ನುವುದು ಅವರನ್ನು ನೋಡಿದರೇ ತಿಳಿಯುತ್ತದಲ್ಲವೇ?  ಎಂದ ಮೇಲೆ ಕಾಡೋಜ ಪ್ರಶಸ್ತಿ ಇವರಿಗಲ್ಲದೇ ಇನ್ನಾರಿಗೆ ಕೊಡಬೇಕು ಹೇಳಿ?"  ಸುಬ್ಬಣ್ಣ ಏನೋ ಹೇಳಲು ಬಾಯಿ ಬಿಡುತ್ತಿದ್ದಂತೆ ಸುಮ್ಮನಿರುವಂತೆ ಸನ್ನೆ ಮಾಡಿದ ಗುರುಗಳು ಮತ್ತೂ ಮುಂದುವರೆಸಿದರು.  "ಇವರಿಗೆ ನಾಡೋಜ ಪ್ರಶಸ್ತಿ ಏಕೆ ಕೊಡಲಿಲ್ಲ ಎಂದು ನಿಮ್ಮ ಪ್ರಶ್ನೆ.  ನೋಡೀಪ್ಪಾ, ಇಂಥವರಿಗೆ ಇಂಥದ್ದೇ ಪ್ರಶಸ್ತಿ ಕೊಡಬೇಕೆಂದು ಎಲ್ಲಿದೆ ಹೇಳಿ?  ಅವರು ಬಹಳ ಮನೆಗಳನ್ನು ಕಟ್ಟಿ ಬಡಜನರಿಗೆ ನೆರಳಾಗಿದ್ದಾರೆ, ನಾಡು ಕಟ್ಟುವ ಕೆಲಸ ಮಾಡಿದ್ದಾರೆ, ಅವರಿಗೆ ನಾಡೋಜ ಪ್ರಶಸ್ತಿ ಕೊಡಬೇಕಾಗಿತ್ತು ನಿಜ.  ಆದರೆ ನಾಡೋಜ ಪ್ರಶಸ್ತಿಗೆ ಈಗಾಗಲೇ ಇನ್ನೊಬ್ಬರಿಗೆ ಹಂಚಿದ್ದಾಗಿದೆ.  ಅವರೂ ಸಾಧಕರು, ಭಾರೀ ಕುಳ, ನಾಡಿನಾದ್ಯಂತ ಸಕ್ಕರೆ ಪ್ಯಾಕ್ಟರಿಗಳನ್ನು ತೆರೆದು ನಾಡಿನ ಜನರ ಬಾಯಿ ಸಿಹಿ ಮಾಡಿದವರು.  ಅನೇಕ ರೈತರಿಗೆ ವ್ಯಾಪಾರ ಕೊಟ್ಟವರು.  ರೈತರ ಉದ್ಧಾರಕ್ಕಾಗಿ ತುಂಬಾ ಬಂಡವಾಳ ಹಾಕಿದವರು.  ಅವರ ಸೇವೆಯನ್ನೂ ನಾವು ಪರಿಗಣಿಸಬೇಕಲ್ಲವೇ?  ಅಲ್ಲದೇ ಬೊಂಬೇಶಪ್ಪನವರು ಸಾವಿರಾರು ಮನೆಗಳನ್ನು ಕಟ್ಟಿ, ಮನೆಯಿಲ್ಲದೇ ಜನ ಕಾಡುಬೀಳುವುದನ್ನು ತಪ್ಪಿಸುವುದರ ಮೂಲಕ ಕಾಡನ್ನು ಉಳಿಸಲು ಬಹಳ ದೊಡ್ಡ ಸೇವೆ ಸಲ್ಲಿಸಿದ್ದಾರೆ.  ಇಂಥದ್ದನ್ನೆಲ್ಲ ನೀವು ಬರೆಯಬೇಕು, ನಾನು ಬೊಗಳೇಶಪ್ಪನವರಿಗೆ ಹೇಳುತ್ತೇನೆ.  ನೀವಿನ್ನು ಹೊರಡಿ.  ಸಂದರ್ಶನ ಚೆನ್ನಾಗಿ ಬರಲಿ" - ಇಷ್ಟು ಹೇಳಿ ಮರುಮಾತಿಗೆ ಅವಕಾಶ ಕೊಡದೇ ಕಣ್ಣು ಮುಚ್ಚಿ ಮತ್ತೆ ತುಂಡು ಕಡಿಯುವುದರಲ್ಲಿ ನಿರತರಾದರು, ಭೋಜನವಿರಾಮ ಮುಗಿಯಿತೆಂಬ ಸೂಚನೆ ಸಿಕ್ಕಿತು.  ಬಂದದ್ದಕ್ಕೆ ಇಷ್ಟೇ ಲಾಭವೆಂದುಕೊಂಡು ಸುಬ್ಬಣ್ಣ ಬೊಂಬೇಶಪ್ಪನವರ ಮನೆ ಕಡೆ ಪಾದ ಬೆಳೆಸಿದ.

ಸುಮಾರು ಒಂದೆಕರೆ ಜಾಗದಲ್ಲಿ ಹರಡಿಕೊಂಡಿದ್ದ ಬೊಂಬೇಶಪ್ಪನವರ ಸೌಧ, ಬೆಂಗಾಡಿನ ನಡುವಣ ಅರಣ್ಯದಂತೆ ಕಂಗೊಳಿಸುತ್ತಿತ್ತು.  ಗೇಟಿನಲ್ಲೇ ಇದ್ದ ಸೆಕ್ಯೂರಿಟಿ ಆಫೀಸಿನಲ್ಲಿ ಹೆಸರು ಬರೆದು ಅಪ್ಪಣೆ ಪಡೆದು ಒಳಹೊರಟ ಸುಬ್ಬಣ್ಣನಿಗೆ ಕಾಡು ಹೊಕ್ಕಂಥದ್ದೇ ಅನುಭವ.  ಇಕ್ಕೆಲಗಳಲ್ಲೂ ಬೊಂಬೇಶಪ್ಪನವರ ಹೆಸರಿಗೆ ತಕ್ಕಂತೆ ಬೊಂಬಿನ ಮೆಳೆ, ಅದರಾಚೆಗೆ ವಿವಿಧಜಾತಿಯ ಮರಗಳು, ನಡುನಡುವೆ ಕೃತಕ ಜಲಪಾತಗಳು, ಪುಟ್ಟಪುಟ್ಟ ಸರೋವರಗಳು, ಅದರಲ್ಲಿ ತೇಲುತ್ತಿದ್ದ ಹಂಸ ಇತ್ಯಾದಿಗಳು.  ಕಲ್ಲಿನ ಮಹಲಿನೊಳಹೊಕ್ಕು ಹಜಾರ ದಾಟಿದೊಡನೆ ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಬಂದಂತಾಯಿತು - ಗೋಡೆಯ ತುಂಬೆಲ್ಲ ಕೆಕ್ಕರಿಸಿಕೊಂಡು ನೋಡುವ ಚಿರತೆ, ಜಿಂಕೆ, ಕಾಡುಕೋಣಗಳು - ಅಲ್ಲೇ ಸ್ವಾಗತಖಾನೆಯಲ್ಲಿ ಸ್ವತಃ ಬೊಂಬೇಶಪ್ಪನವರು ಆಸೀನರಾಗಿದ್ದರು.  ವಿಶಾಲವಾದ ಸಿಂಹಾಸನದಂತಹ ಸೋಫಾ ಮೇಲೆ ಪಟಮರಿಸಿದ್ದ ದೈತ್ಯದೇಹ, ಏಸಿಯಿದ್ದರೂ ಸೆಖೆ ತಡೆಯದೇನೋ ಎಂಬಂತೆ ನಾಲ್ಕು ಗುಂಡಿ ಬಿಚ್ಚಿ ಸರಿಸಿದ್ದ ಶರಟು, ಅದರೊಳಗಿನಿಂದ ಕಂಡ ಕಪ್ಪು ಎದೆ, ಅದರ ಮೇಲೆ  ಬೆವರಿಗೆ ಅಂಟಿನಿಂತು ಅದಿರಿನ ನಡುವೆ ಕಂಗೊಳಿಸುವ ಕನಕರೇಖೆಯೋ ಎಂಬಂತೆ ಚಿತ್ರವಿಚಿತ್ರವಾಗಿ ಹರಡಿ ಬಿದ್ದಿದ್ದ ಹೆಬ್ಬೆರಳ ಗಾತ್ರದ ಹೊಳೆಹೊಳೆವ ಚಿನ್ನದ ಸರಗಳು, ಅದರ ತುದಿಗೆ ನೇತಾಡುತ್ತಿದ್ದ ಹುಲಿಯುಗುರು, ಅದರ ಇಕ್ಕೆಲಗಳಲ್ಲಿ ಎದೆಗೇ ಕಣ್ಣು ಬಂತೋ ಎಂಬಂತೆ ಪಿಳಿಪಿಳಿಸುತ್ತಿದ್ದ ಇಷ್ಟಗಲ ಕೆಂಪು ಹಸಿರು ಕಲ್ಲುಗಳ ಪದಕಗಳು - ಅರಣ್ಯದ ಸಿರಿ ಸಾರ್ಥಕವಾಗಿ ಬೊಂಬೇಶಪ್ಪನವರ ಮೈಯ್ಯೇರಿತ್ತು.

"ಬರ್ರೀ ಬರ್ರೀ ಸುದ್ದೀಮನಿಯಾರ, ನನ್ನ ಸಂದರ್ಶಿಸಾಕ ಬಂದೀರಿ ಹೌದಿಲ್ಲೋ" ಎನ್ನುತ್ತಾ ಸ್ವಾಗತಿಸಿದರು ಬೊಂಬೇಶಪ್ಪನವರು.

ನಮಸ್ಕರಿಸಿ ಅಭಿನಂದನೆ ಸಲ್ಲಿಸಿ ಕುಳಿತುಕೊಳ್ಳುತ್ತಾ ಕೇಳಿದ ಸುಬ್ಬಣ್ಣ "ಹೌದ್ರೀ ಸರ, ಆದ್ರಾ ಮನೀ ಕಟ್ಟೂ ಕೆಲಸಾ ಮಾಡೋ ನಿಮಗ ಕಾಡೋಜ ಪ್ರಶಸ್ತೀ... " ಮೂಗೆಳೆಯುತ್ತಿದ್ದ ಸುಬ್ಬಣ್ಣನ ಮಾತನ್ನು ಅಲ್ಲಿಯೇ ತುಂಡರಿಸಿ ನುಡಿದರು ಬೊಂಬೇಶಪ್ಪನವರು.  

"ಏ ಮನೀ ಕಟ್ಟೋ ಕೆಲಸದ ಬಗ್ಗೆ ಅಷ್ಟ ಹಗೂರ ಮಾತಾಡಬ್ಯಾಡ್ರೀ, ಈ ಮನೀ ಕಟ್ಟೋ ಕೆಲಸಾ ಏನೈತಿ ಅದು ಅಗ್ದೀ ನಾಡು ಕಟ್ಟೋ ಕೆಲಸ ಐತಿ ತಿಳಕೋರಿ"

"ಅದು ಸರೀರಿ ಸರ, ಆದ್ರಾ ನಾಡು ಕಟ್ಟೋ ನಿಮಗೆ ಕಾಡಿನ ಪ್ರಶಸ್ತೀ..." ತಡವರಿಸಿದ ಸುಬ್ಬಣ್ಣ.

"ಹಾಂಗ ಕೇಳ್ರೀ ಮತ್ತ... ಈಗ, ನಾಡು ಕಟ್ಟೋ ಕೆಲಸದಿಂದ ಏನಾಗ್ತತಿ?  ಜನಕ್ಕ ನೆಳ್ಳಾಗ್ತತಿ.  ಮತ್ತ ನೆಳ್ಳ ಹುಡುಕ್ಕೋತ ಕಾಡಿಗೆ ಹೋಗೂದು ತಪ್ತತಿ ಹೌದಿಲ್ಲೋ?  ಅರಣ್ಯಸಂರಕ್ಷಣೆ ಆತಲ್ಲಪ?  ಅಂದ್ ಹಂಗ, ನಾನೇನು ಕಾಡಿನ್ ಕೆಲಸ ಮಾಡಿಲ್ಲ ಅನ್ನಂಗಿಲ್ಲ್ ನೋಡ್ರಿ ಮತ್ತ - ನೀವೀಗ ನಮ್ಮನೀಗಿ ಬರುವಾಗ ನೋಡಿದ್ರಿಲ್ಲೋ ಕಾಡು ಹ್ಯಂಗಿತ್ತು.  ಅದು ನಾವs ಬೆಳಸಿದ್ರೀಯಪಾ.  ಮತ್ತ, ಈ 'ನಾಡೋಜ'ದಾಗಣ "ಓಜ" ಅಂತ ಯಾರ್ಗಂತಾರ್ರೀ?  ಗುರುಗಳಿಗೆ ಹೌದಿಲ್ಲೋ?  ನಾನ್ ನೋಡಿ, ಅಲ್ಲಿ ಕಾಡು ಉಳಿಸಿದೆ, ಇಲ್ಲಿ ಕಾಡು ಬೆಳೆಸಿದೆ.  ಕಾಡು ಉಳಿಸೋದು ಬೆಳಸೋದು ಹ್ಯಂಗೆ ಅಂತ ಜನಕ್ಕ ಬೋಧಿಸಿದೆ, ನಾಲ್ಕು ಜನಕ್ಕ ಉತ್ತಮ ಮೇಲ್ಪಂಕ್ತಿಯಾಗಿ ಬಾಳಿ ಬದುಕಿದೆ.  ನಾನು ಕಾಡೋಜ ಹೌದಿಲ್ಲೊ ಹೇಳ್ರಿ ಮತ್ತ" ಎದೆಯ ಮೇಲಿನ ಹಗ್ಗದಂತಹ ಚಿನ್ನದ ಸರಗಳು, ಪಚ್ಚೆಮಾಣಿಕದ ಬಂಡೆಗಳು ಹೊರಳಾಡಿ ಢಿಕ್ಕೀ ಹೊಡೆದುಕೊಳ್ಳುವಂತೆ ಕುಲುಕಿ ಕುಲುಕಿ ನಕ್ಕರು ಬೊಂಬೇಶಪ್ಪನವರು.

ಬೊಂಬೇಶಪ್ಪನವರ ವಾಗ್ಝರಿಯಲ್ಲಿ ತೊಯ್ದು ತೊಪ್ಪೆಯಾದ ಸುಬ್ಬಣ್ಣನಿಗೆ, ಹೊರಗೆ ಬೊಂಬೇಶಪ್ಪನವರು ಬೆಳೆಸಿದ್ದ ಕಾಡಿನ ಮರವೊಂದರ ಮೇಲೆ ವಾಸಿಸುತ್ತಿದ್ದ ಕಾರಣಕ್ಕೆ ಕಾಡಕಪಿಯೆನ್ನಬಹುದಾದ ನಾಡಕಪಿಯೊಂದು ತನ್ನ ಕಡೆ ನೋಡಿ ಹಲ್ಲು ಕಿರಿದದ್ದು ಕಂಡು ಬಂತು.  ಅದನ್ನೇ ಅನುಕರಿಸಿ ತಾನೂ ಬೊಂಬೇಶಪ್ಪನವರನ್ನು ನೋಡಿ ಹಲ್ಲು ಕಿರಿದು, ಕೈಮುಗಿದು ಹೊರಬಂದ.

ಸೀದಾ ಆಫೀಸಿಗೆ ಬಂದು ಟೀವಿ ಹಚ್ಚಿದರೆ ಅಲ್ಲಿ ನೂತನ ನಾಡೋಜರ ಭಾಷಣ ಬರುತ್ತಿತ್ತು, ಕನ್ನಡಸಾಹಿತ್ಯಕ್ಕೆ ತಾವು ಮಾಡಿದ ಸೇವೆಗಳನ್ನೂ, ಕನ್ನಡ ಸಾಹಿತ್ಯವನ್ನು ಉದ್ಧಾರಮಾಡುವ ದಾರಿಗಳನ್ನೂ ಕುರಿತು ಅಪ್ಪಣೆ ಕೊಡಿಸುತ್ತಿದ್ದರು - ಮುಂದೆ ಹತ್ತು ವಾಹಿನಿಗಳ ಮೈಕುಗಳು "ನೋಡಿ, ನಾನು ಓದಿದವನಲ್ಲ ಬರೆದವನಲ್ಲ, ಆದರೆ ಸಾಹಿತ್ಯಸೇವೆಗಾಗಿ ಟೊಂಕ ಕಟ್ಟಿ ನಿಂತಿದ್ದೇನೆ, ಈ ಪ್ರಶಸ್ತಿ ನನ್ನ ಮೇಲೆ ಬಹಳ ದೊಡ್ಡ ಜವಾಬ್ದಾರಿಯನ್ನು ಹೊರೆಸಿದೆ.  ಈ ಸಾಹಿತಿಗಳ ಒಣವೇದಾಂತ, ಮಣ್ಣಿನ ವಾಸನೆ ಇವು ಜನರನ್ನ ಸಾಹಿತ್ಯದಿಂದ ದೂರ ಕೊಂಡೊಯ್ದಿದೆ.  ಜನರನ್ನು ಸೆಳೆಯಲು ಕನ್ನಡಸಾಹಿತ್ಯವನ್ನು ಹೆಚ್ಚುಹೆಚ್ಚು ಸಿಹಿಯಾಗಿಸಬೇಕಾಗಿದೆ.  ಕನ್ನಡಸಾಹಿತ್ಯವನ್ನು ಮುದ್ರಿಸುವ ಪೇಪರಿಗೆ ಇನ್ನು ಮೇಲೆ ಸಕ್ಕರೆ ಸವರುವುದು ಕಡ್ಡಾಯವಾಗಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ.  ಅದಕ್ಕಾಗಿ ನಾವು ಸಕ್ಕರೆಯನ್ನು ಉತ್ಪಾದಿಸಿ ಸರ್ಕಾರಕ್ಕೆ ಸರಬರಾಜು ಮಾಡುತ್ತೇವೆ... ಸರ್ಕಾರ ಟೆಂಡರು ಕರೆದ ತಕ್ಷಣ ಟೆಂಡರು ಸಬ್ಮಿಟ್ ಮಾಡಲು ಎಲ್ಲ ಸಿದ್ಧತೆಗಳೂ ಆಗಿವೆ, ಇನ್ನು ಮುಂದೆ ಕನ್ನಡಸಾಹಿತ್ಯ ಹೆಚ್ಚು ಸಿಹಿಯಾಗಲಿವೆ, ಕನ್ನಡ ಪುಸ್ತಕಗಳಿಗಾಗಿ ಜನ ಇರುವೆಯಂತೆ ಮುತ್ತಿಕೊಳ್ಳಲಿದ್ದಾರೆ..." ಹೀಗೇ ಮಾತು ಮುಂದುವರೆದಿತ್ತು.  ಥತ್ ಎಂದು ಚಾನಲ್ ಬದಲಿಸಿದರೆ ಇನ್ನೊಂದು ಚಾನಲ್ಲಿನಲ್ಲಿ, ಆಗಲೇ ಕಾಡೋಜ ಬೊಂಬೇಶಪ್ಪನವರು - ತಮ್ಮ ಕಾಡಿನ ಮರದಡಿಯಲ್ಲಿ ಕೂತು, ಹೊಳೆಹೊಳೆಯುವ ಚಿನ್ನದ ಸರ ಮತ್ತು ಬೆಳ್ಳಿಯ ದಂತಪಂಕ್ತಿಮಾತ್ರದಿಂದ ಸೂಚಿಸಲ್ಪಟ್ಟವರಾಗಿ ಮಾತಾಡುತ್ತಿದ್ದರು - "ಸರ್ಕಾರದ ಈ ನಿರ್ಧಾರ ಭಾಳ ಛೊಲೋದೈತಿ ನೋಡ್ರಿ, ಇದರಿಂದ ಪ್ರಶಸ್ತಿಗಳ ಪ್ರಜಾಪ್ರಭುತ್ವೀಕರಣ, ಜನಸಾಮಾನ್ಯೀಕರಣ ಅನ್ತಕ್ಕಂಥಾದ್ದೇನೈತಿ ಅದು ಆಗ್ತೈತಿ.  ಯಾರೋ ಪೆನ್ನು ಹಿಡಿದು ಏನೋ ಗೀಚಿದವರಿಗೆ ಮಾತ್ರ ಪ್ರಶಸ್ತಿ ಅನ್ನೋ ಪರಿಸ್ಥಿತಿ ಹೋಗಿ ನನ್ನಂಥಾ ಜನಸಾಮಾನ್ಯರೂ ಸೇವೆ ಸಲ್ಲಿಸಿ ಪ್ರಶಸ್ತಿ ಪಡೀಬೋದು ಅನ್ನೋ ಭರವಸೆ ಸರ್ಕಾರ ನೀಡಿದೆ.  ಇದಕ್ಕಾಗಿ ನಾನು ಯಾವೊಂದು ಸರ್ಕಾರ ಇದೆ ಅದಕ್ಕೆ ಆಭಾರಿಯಾಗಿದ್ದೇನೆ ಅನ್ತಕ್ಕಂಥದ್ದನ್ನ ಹೇಳ್ಲಿಕ್ಕೆ ಇಷ್ಟಪಡ್ತೇನೆ...".  ಮತ್ತೊಂದು ಚಾನಲ್ಲಿನಲ್ಲಿ ಈ ಪ್ರಶಸ್ತಿಯ ಬಗ್ಗೆ ಗಣ್ಯರ ಸಂದರ್ಶನ/ಅಭಿಪ್ರಾಯ ಬರುತ್ತಿತ್ತು.  ಸರ್ಕಾರದ ಈ ಕ್ರಾಂತಿಕಾರಿ ನಿರ್ಧಾರದಿಂದ ಸಮಸಮಾಜದ ಹೊಸ ಯುಗವೇ ಆರಂಭವಾಗುತ್ತಿದೆಯೆಂದು ಯಾವುದೋ ಪಕ್ಷದ ಪುಡಾರಿಯೊಬ್ಬ ಕುಟ್ಟುತ್ತಿದ್ದ.  

"ಇದರಿಂದ ನಮಗೂ ಒಂದು ಹೊಸ ಆಶಾಭಾವನೆ ಬಂದಿದೆ.  ನಾವೂ ದಶಕಗಳಿಂದ ರಾಜ್ಯದ ಜನಗಳಿಗೆ ಶೆರೆ ಕುಡಿಸುತ್ತಾ, ರಾಜ್ಯವನ್ನು ಆನಂದದಲ್ಲಿ ತೇಲಾಡಿಸುತ್ತಾ ಬಂದಿದ್ದೇವೆ, ಮುಂದಿನ ಬಾರಿ ಸರ್ಕಾರ ನಮ್ಮ ಸೇವೆಯನ್ನೂ ಪರಿಗಣಿಸಿ ಪುರಸ್ಕರಿಸ್ತದೆ ಅಂತ ನಂಬಿದ್ದೇನೆ" - ಅಖಿಲಕರ್ನಾಟಕ ಶೇಂದಿ ವಿತರಕರ ಸಂಘದ ಅಧ್ಯಕ್ಷ ಶೇಂದಿ ಕಂಟ್ರಾಕ್ಟರ್ ಶಿದ್ದಪ್ಪನವರು ತೊದಲುತ್ತಿದ್ದರು.  ಜನರನ್ನು ಕಾಡುವಲ್ಲಿ ಕುಖ್ಯಾತವಾದ ಕೆಲವು ಸರ್ಕಾರೀ ಇಲಾಖೆಗಳ ನೌಕರರ ಸಂಘಗಳಂತೂ ಕಾಡೋಜ ಪ್ರಶಸ್ತಿಯು ಜನರನ್ನು ಕಾಡುವವರಿಗೋಸ್ಕರವೇ ಇರುವ ಪ್ರಶಸ್ತಿಯೆಂದು ಬಗೆದು, ಆ ಪ್ರಶಸ್ತಿಗೆ ತಾವೇ ಹೇಗೆ ಹೆಚ್ಚು ಹಕ್ಕುದಾರರು ಎಂದು ವಿವರಿಸುತ್ತಾ, ತಾವು ಜನರನ್ನು ಹೇಗೆಲ್ಲಾ ಕಾಡುತ್ತೇವೆ ಕಣ್ಣೀರ್ಗರೆಸುತ್ತೇವೆ ಎಂದು ವಿವರವಿವರವಾಗಿ ವರ್ಣಿಸುತ್ತಾ ಪ್ರಶಸ್ತಿಗಾಗಿ ಹಕ್ಕೊತ್ತಾಯ ಮಂಡಿಸಿದ್ದುವು. ಹಾಗೆಯೇ ಲಂಚಕೋರರ ಸಂಘದವರು, ಜೂಜುಕೋರರ ಸಂಘದವರು, ತಲೆಹಿಡುಕರ ಸಂಘದವರು, ಕಳ್ಳರ ಸಂಘದವರು, ಪುಂಡರ, ಪೋಲಿಪಟಿಂಗರ ಸಂಘದವರು, ಕೊನೆಗೆ ಸೋಮಾರಿಗಳ ಸಂಘದವರೂ ಪ್ರಶಸ್ತಿಗಾಗಿ ತಂತಮ್ಮ ಹಕ್ಕು-ಸಾಧನೆಗಳನ್ನು ಮುಂದಿಡುತ್ತಿದ್ದರು, ತಂತಮ್ಮ ಕಸುಬುಗಳಲ್ಲಿ ತಾವು ಹೇಗೆ ನಿಜಕ್ಕೂ ನಾಡಿಗೆ ಓಜರಾಗಿದ್ದೇವೆ ಎಂಬುದನ್ನು ಮೇಜುಕುಟ್ಟಿ ವಿವರಿಸುತ್ತಿದ್ದರು.  ಜೊತೆಗೇ ಪ್ರಾದೇಶಿಕಪ್ರಾತಿನಿಧ್ಯ, ಜಾತಿಪ್ರಾತಿನಿಧ್ಯ, ಒಳಜಾತಿಪ್ರಾತಿನಿಧ್ಯ, ಲಿಂಗಪ್ರಾತಿನಿಧ್ಯ, ನಿರ್ಲಿಂಗಪ್ರಾತಿನಿಧ್ಯ ಎಲ್ಲವೂ ಸೇರಿ ಗಿಜಿಗಿಜಿ ಆರಂಭವಾಗಿತ್ತು.  ತಲೆ ಕೆಟ್ಟು ಮತ್ತೊಮ್ಮೆ ಚಾನಲ್ ಬದಲಿಸಿದ ಸುಬ್ಬಣ್ಣ. 

ಯಾವುದೋ ಹೆಸರಿಲ್ಲದ ಚಾನಲ್ಲೊಂದು, ವಾಕಿಂಗ್ ಮುಗಿಸಿ ಮರಳುತ್ತಿದ್ದ ಒಬ್ಬರು ವೃದ್ಧರನ್ನು ಅಟಕಾಯಿಸಿಕೊಂಡಿತ್ತು.  ನೋಡಲು ವಯೋವೃದ್ಧರೂ ಜ್ಞಾನವೃದ್ಧರೂ ಆಗಿ ಕಾಣುತ್ತಿದ್ದ, ನಮಗರ್ಥವಾಗದ ವಿಚಿತ್ರ ಕನ್ನಡದಲ್ಲಿ ಓದಿದಂತೆ ಮಾತಾಡುತ್ತಿದ್ದ ಆ ವೃದ್ಧರ ಮುಂದೆ ಹೆಸರಿಲ್ಲದ ಒಂದೇ ಒಂದು ಮೈಕು - "ನೀವು ಕನ್ನಡಸಾಹಿತ್ಯಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದೀರಿ, ಆದರೆ ನಿಮಗೆ ಈ ಬಾರಿಯೂ ನಾಡೋಜ ಪ್ರಶಸ್ತಿ ಬರಲಿಲ್ಲ.  ಈ ಬಗ್ಗೆ ನಿಮಗೆ ಬೇಸರವಿದೆಯೇ?" ಎಂಬ ಸಂದರ್ಶಕಿಯ ಕಿಡಿಗೇಡಿ ಪ್ರಶ್ನೆ ತಮಗೆ ಪ್ರಸ್ತುತವಲ್ಲವೆಂಬಂತೆ ಮುಗುಳ್ನಕ್ಕು, ತಮ್ಮ ಮುದಿಗಂಗಳಲ್ಲಿ ಹಳೆಯ ಬೆಳಕನ್ನು ಕಾಣುತ್ತಾ ಗಗನಕ್ಕೆ ದೃಷ್ಟಿ ನೆಟ್ಟ ಆ ವೃದ್ಧರು ಉತ್ತರಿಸುತ್ತಿದ್ದರು "ಅಯ್ಯೋ, ಈಗೆಲ್ಲಾ ಪ್ರಶಸ್ತಿಗಳ ಹೆಸರಿನಲ್ಲಿ ಬರುವುದು ಕಸಕುಪ್ಪೆಗಳೇ ತಾಯಿ.  ಈ ಪ್ರಶಸ್ತಿಗಳಿಗೆ ನನ್ನ ಮನೆಯಲ್ಲಿ ಜಾಗವೇ ಉಳಿದಿಲ್ಲಮ್ಮ, ಎಲ್ಲಿ ಅಂತ ಇಡಲಿ?  ನನಗೆ ಪ್ರಶಸ್ತಿ ಕೊಡಬಹುದಾದವರೆಲ್ಲರೂ ಅದನ್ನು ಎಂದೋ ದಯಪಾಲಿಸಿ ಹೊರಟುಹೋಗಿದ್ದಾರೆ, ಅವು ನಿಜವಾದ ಪ್ರಶಸ್ತಿಗಳು, ಇರಬೇಕಾದೆಡೆ ಭದ್ರವಾಗಿವೆ.  ಇನ್ನು ಈ ಕುಪ್ಪೆಯನ್ನು ಎಷ್ಟೂ ಅಂತ ತಂದಿಟ್ಟುಕೊಳ್ಳುವುದು.  ನಾನು ಬರೆದದ್ದೆಲ್ಲಾ ನನ್ನ ಸಂತೋಷಕ್ಕೆ, ಅರಿಯುವ ಸಂತೋಷಕ್ಕೆ, ತಿಳಿಸುವ ಆನಂದಕ್ಕೆ.  ಅದನ್ನ ನೀವೆಲ್ಲ ಓದಿ, ತಿಳಿಯಿರಿ, ನನ್ನ ನೆನೆಸಿಕೊಳ್ಳಿ, ನಾನೀಗ ನನ್ನ ಗುರುಗಳನ್ನ ನೆನೆಸಿಕೊಳ್ಳುವಂತೆ - ಅದೇ ನನಗೆ ಪ್ರಶಸ್ತಿ - "ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ", ಅಲ್ಲವೇ?" - ಇಷ್ಟು ಹೇಳಿ ಸಂದರ್ಶಕಿಯನ್ನು ಅಲ್ಲೇ ಬಿಟ್ಟು, ಕ್ಯಾಮರಾಗೆ ಬೆನ್ನು ಹಾಕಿ ನಿಧಾನವಾಗಿ ಮನೆಯ ಕಡೆ ನಡೆಯತೊಡಗಿದರು.  ಲಾಂಗ್ ಶಾಟಿನಲ್ಲಿ ಕೆಲಕಾಲ ಅವರನ್ನು ಹಿಂಬಾಲಿಸಿದ ಕ್ಯಾಮರಾ ಕಣ್ಣಿಗೆ, ಈಗಲೂ ಅವರನ್ನು ಓಲೈಸುತ್ತಾ ಅವರಿಂದ ಸಾಧ್ಯವಾದಷ್ಟು ಕಲಿತುಬಿಡುವ ಹಂಬಲದಿಂದ ಮನೆಯ ಒಳಭಾಗದಲ್ಲಿ ಕಾದಿದ್ದ ಹೊಸವಿದ್ಯಾರ್ಥಿಗಳ ಗುಂಪು ಕಂಡಿತು.  

ಈ ವೃದ್ಧರನ್ನು ಸುಬ್ಬಣ್ಣ ಎಂದೂ ನೋಡಿರಲಿಲ್ಲ.  ಆದರೂ ಆ ಮುಖದಲ್ಲಿ, ಕಣ್ಣಿನಲ್ಲಿ, ನಿಲುವಿನಲ್ಲಿ, ನಡೆಯಲ್ಲಿ ತನಗರ್ಥವಾಗದ, ಆದರೆ ಮನೋಗಮ್ಯವಾದ ಒಂದು ಬಗೆಯ ಕಾಂತಿ, ಓಜಸ್ಸು, ಘನತೆ, ತಾನಾಗಿಯೇ ಕೈ ಮುಗಿಯುವಂತೆ ಪ್ರೇರೇಪಿಸಿತು.  ಕೈಮುಗಿದು, ಟೀವಿ ಆರಿಸಿ, ಭೂಮಿಗಿಳಿದು ಬಂದ ಸುಬ್ಬಣ್ಣ, ಅಚ್ಚಿಗೆ ಕಳಿಸುವುದಕ್ಕಾಗಿ ಬೊಂಬೇಶಪ್ಪನವರ ಸಂದರ್ಶನವನ್ನು ಅರೆಯಲು ಕೂತ.

Wednesday, March 24, 2021

ನಾಯಟ್ಟಿರೆ ಜೀವ ಬಾಯ್ಗೆ ಬಂದಂತಕ್ಕುಂ

ನಾನು ನಮ್ಮ ಬೀದಿ ಕೊನೆಯಲ್ಲಿರುವ ಟೈಲರ್ ಅಂಗಡಿ ಹಾಸಿ ಹೋಗುವುದನ್ನು ಬಿಟ್ಟು ಐದಾರು ವರ್ಷಗಳೇ ಆಯಿತು.  ಕಾರಣವೇನೋ ಬಲು ದೊಡ್ಡದೇ - ಆ ಅಂಗಡಿಯ ಎದುರಿಗೆ ಯಾವಾಗಲೂ ಒಂದು ಕರೀ ನಾಯಿ ಕುಳಿತಿರುತ್ತದೆ.  ನೀವೇನಾದರೂ ಆ ದಾರಿಯಾಗಿ ಬೈಕಿನಲ್ಲಿ ಹೋದರೆ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತದೆ.  ಸುಮಾರು ಒಂದು ಮುನ್ನೂರು ಅಡಿ ದೂರದಿಂದಲೇ ಗಮನಿಸತೊಡಗುವ ಅದು, ನೀವು ಒಂದು ಸರಿಯಾದ ಅಳವಿಗೆ ಬರುವವರೆಗೆ ಕಾದಿದ್ದು, ಅಳವಿಗೆ ಬಂದ ಕೂಡಲೇ ಎದ್ದು ಅಟ್ಟಿಸಿಕೊಂಡು ಬರುತ್ತದೆ.  ಎಷ್ಟೋ ವೇಳೆ ಅವಿತು ಕುಳಿತಿದ್ದು ಅನಿರೀಕ್ಷಿತ ದಾಳಿ ಮಾಡುತ್ತದೆ.  ಅರರೇ ಇದೇನಿದು ಎಂದು ನೀವು ಸಾವರಿಸಿಕೊಂಡು ಏಯ್ಯೇಯ್ಯೇಯ್ಯೇಯ್ ಎನ್ನುತ್ತಾ ಕಾಲುಗಳನ್ನು ಮೇಲೆತ್ತಿಕೊಂಡು ಥಕಥೈ ಮಾಡುತ್ತಾ ವೇಗವಾಗಿ ಬೀದಿ ಕೊನೆ ಸೇರುವವರೆಗೂ ಅಟ್ಟಿಯೇ ಅಟ್ಟುತ್ತದೆ.  ಎಷ್ಟೋ ಬಾರಿ ಇನ್ನೇನು ನಿಮ್ಮ ಕಾಲಿಗೆ ಬಾಯಿ ಹಾಕಿಯೇ ಬಿಟ್ಟಿತು ಎನಿಸಿ ಜೀವ ಬಾಯಿಗೆ ಬರುತ್ತದೆ.  

ಅದು ವಾಸ್ತವದಲ್ಲಿ ಒಂದು ನಾಯಿಯಲ್ಲ, ನಾಯಿಪರಂಪರೆ.  ಮೊದಲು ಅಟ್ಟಾಡಿಸುತ್ತಿದ್ದ ಕರೀ ನಾಯಿ ಈಗಿಲ್ಲ, ಹೀಗೇ ಯಾವುದೋ ಕಾರನ್ನು ಅಟ್ಟಿಸಿಕೊಂಡು ಹೋಗಿ ಅದರ ಚಕ್ರಕ್ಕೆ ಸಿಕ್ಕಿ ಸತ್ತಿತು.  ಈಗ ಅದರ ಮಗನೋ ಮಗಳೋ ಆ ಕೆಲಸವನ್ನು ವಂಶಪಾರಂಪರ್ಯವಾಗಿ ಮುಂದುವರೆಸುತ್ತಿದೆ.  ಇದು ಆ ಹಿಂದಿನ ನಾಯಿಯದೇ ಪಡಿಯಚ್ಚು, ತಕ್ಷಣಕ್ಕೆ ನೋಡಿದರೆ ಅದೇ ನಾಯಿ ಅನಾದಿಕಾಲದಿಂದ ಇದೆ ಎನ್ನಿಸುವುದು ಸಹಜ.

ಓಡುವ ವಸ್ತುಗಳನ್ನು ಅಟ್ಟಿಸಿಕೊಂಡು ಬರುವ ಸ್ವಭಾವ ಕೆಲವು ಪ್ರಾಣಿಗಳಲ್ಲಿ ಸಹಜವಾಗಿಯೇ ಬಂದಿರುತ್ತದೆ, it is an instinct. ಹಾಗೆಯೇ ಯಾವುದಾದರೂ ಅಟ್ಟಿಸಿಕೊಂಡು ಬಂದಾಗ ಎದ್ದುಬಿದ್ದು ಓಡುವುದೂ ಎಲ್ಲ ಪ್ರಾಣಿಗಳಿಗೆ ಸಹಜವಾಗಿ ಬರುವ instinctಏ. ನೀವು ಅನಿಮಲ್ ಪ್ಲಾನೆಟ್ಟಿನಲ್ಲಿ ನೋಡಿರಬಹುದು - ಎಷ್ಟೋ ಬಾರಿ ಅದು ಅಟ್ಟಿದ್ದಕ್ಕೆ ಇದು ಓಡುತ್ತಿದೆಯೋ ಇದು ಓಡಿದ್ದಕ್ಕೆ ಅದು ಅಟ್ಟುತ್ತಿದೆಯೋ ಗೊತ್ತಾಗುವುದೇ ಇಲ್ಲ. ನಾಯಿಗಳ ವಿಷಯದಲ್ಲಂತೂ ಇದು ಕುರಿತೇಟು. ನೀವು ಎಷ್ಟೇ ಶಿಸ್ತಾಗಿ, ಡೀಸೆಂಟಾಗಿ, ಟ್ರಿಮ್ಮಾಗಿ ಅಲಂಕರಿಸಿಕೊಂಡು ಎಷ್ಟೇ ಘನವಾಗಿ ಬೈಕ್ ಓಡಿಸಿಕೊಂಡು ಹೋಗುತ್ತಿದ್ದರೂ ಒಂದು ನಾಯಿ ಭೌಗುಟ್ಟಿ ಅಟ್ಟಿಸಿಕೊಂಡು ಬಂದಿತೆನ್ನಿ, ಹತ್ತು ನಾಯಿಗಳು ಅನುಸರಿಸುತ್ತವೆ. ನಿಮ್ಮ ಘನಗಂಭೀರಗಳು ಹಾರಿಹೋಗಿ, ನಿಮ್ಮ ಬಾಯಿಂದ "ಏಯ್ ಏಯ್ ಏಯ್" ಎಂಬ ಗಾಬರಿಯ ಉದ್ಗಾರ ಹೊಮ್ಮತೊಡಗುತ್ತದೆ, ಬೈಕಿನ ವೇಗ ನಿಮಗರಿಯದಂತೆಯೇ ವಿಪರೀತ ಹೆಚ್ಚುತ್ತದೆ, ನಿಮ್ಮ ಕಾಲುಗಳು ತಾವಾಗೇ ಮೇಲೆದ್ದು, ಬೈಕ್ ಓಡಿಸುತ್ತಿದ್ದಂತೆಯೇ ಥಕಥೈ ಮಾಡತೊಡಗುತ್ತೀರಿ. ಹಾಗೂ ಹೀಗೂ ಒಂದು ವೇಗದಲ್ಲಿ ಅದರ ಏರಿಯಾದಿಂದ ಪಾರಾಗಿಬಿಟ್ಟರೆ ಅದು ಇನ್ನು ಅಟ್ಟುವುದಿಲ್ಲ, ನೀವು ಬಚಾವ್. ಆದರೆ ಒಂದು ಸಲ ಅದರಿಂದ ಪಾರಾದ ಮೇಲೆ ಕ್ಷಣಕಾಲ ನಿಮ್ಮ ಮೇಲೆ ನಿಮಗೇ ಅಸಹ್ಯ ಹುಟ್ಟಿಬಿಡುತ್ತದೆ - ನಿಮಗಿಲ್ಲಿ ಪ್ರಾಣಸಂಕಟವಾದರೆ ಅಲ್ಲೆಲ್ಲೋ ದೂರದಿಂದ ನಿಮ್ಮ ಪಜೀತಿಯನ್ನು ನೋಡಿದವರು ನಗುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ. (ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಜೊತೆಗಾರ ರಘುವನ್ನು ಬೀದಿ ನಾಯಿಯೊಂದು ಹೀಗೇ ಅಟ್ಟಾಡಿಸುತ್ತಾ ಬರಲು ಅವನು ಥೇಟ್ ನಾಟಕಶೈಲಿಯಲ್ಲಿ "ಕಾಪಾಡೀ, ಯಾರಾದ್ರೂ ಕಾಪಾಡೀ" ಎಂದು ಕೂಗುತ್ತಾ ಓಡುತ್ತಿದ್ದುದನ್ನು ನೋಡಿ ಸಿಕ್ಕಾಪಟ್ಟೆ ನಕ್ಕು ಮಜಾ ತೆಗೆದುಕೊಂಡಿದ್ದೇವೆ; ಮುಂದೊಮ್ಮೆ ನಮ್ಮ ನೆಂಟರ ಮನೆಯ ನಾಯಿಯೊಂದು, ಪಾಪ, ಸ್ನೇಹದಿಂದ ಹತ್ತಿರ ಬಂದದ್ದಕ್ಕೆ ನಾನು ಹೆದರಿ ಓಡಿ, ಅದು ನನ್ನನ್ನು ಕಳ್ಳನೆಂದೇ ತಿಳಿದು, ಅವರ ಮೂರೂ ಮಹಡಿಯ ಮೂಲೋಕದಲ್ಲೂ ನನ್ನನ್ನು ಅಟ್ಟಾಡಿಸಿ ಕೊನೆಗೆ ನಾನು ಅಡುಗೆಮನೆಯ ವೈಕುಂಠದ ಮರೆಹೊಕ್ಕು ಬಚಾಯಿಸಿಕೊಂಡಾಗಲೇ ಆ ಪ್ರಾಣಸಂಕಟ ಹೇಗಿರುತ್ತೆ ಎಂಬುದು ಅರಿವಿಗೆ ಬಂದದ್ದು). ಇರಲಿ, ನಿಮ್ಮನ್ನು ಬೈಕಿನಲ್ಲಿ ಅಟ್ಟಿಸಿಕೊಂಡು ಬಂದ (ಅಲ್ಲಲ್ಲ, ಬೈಕಿನಲ್ಲಿದ್ದ ನಿಮ್ಮನ್ನು ಅಟ್ಟಿಸಿಕೊಂಡು ಬಂದ) ಆ ನಾಯಿಯಿಂದ ಪಾರಾದ ಮೇಲೆ ನಿಮ್ಮಲ್ಲಿ ಬರುವ ಮೊದಲ ಯೋಚನೆ - ಥತ್ ದರಿದ್ರದ್ದು ನನ್ನನ್ನೇ ಹೀಗೆ ಅಟ್ಟಾಡಿಸಿಬಿಟ್ಟಿತಲ್ಲ, ಎಷ್ಟು ಘನವಾಗಿ ನನ್ನಷ್ಟಕ್ಕೆ ನಾನು ಹೋಗುತ್ತಿದ್ದೆ, ನನ್ನನ್ನೇ ಬೆದರಿಸಿಬಿಟ್ಟಿತಲ್ಲ, ಹೀಗೆ ತಕಥೈ ಮಾಡಿಸಿ ನನ್ನ ಮರ್ಯಾದೆ ತೆಗೀತಲ್ಲ - ಎಷ್ಟೋ ಸಲ ಆ ಸಮಯದಲ್ಲಿ ಕೈಯಲ್ಲೊಂದು ಕವಣೆ ಕಲ್ಲಿರಬಾರದಿತ್ತೇ ಎನಿಸಿದ್ದಿದೆ. ತೆಗೆದು ಒಂದು ಬೀರಿದರೆ ಬಡ್ಡಿಮಗಂದು ಇನ್ನೊಂದ್ ಸಲ ಇನ್ನೊಬ್ಬರನ್ನ ಅಟ್ಟಬಾರದು; ಅಥವಾ ಹಾಗೆ ಅಟ್ಟಿಸಿಕೊಂಡು ಬಂದ ತಕ್ಷಣ ಬೈಕ್ ನಿಲ್ಲಿಸಿ ಅದರ ಮೇಲೇ ತಳ್ಳಿಬಿಡಬೇಕು, ಸಿಕ್ಕಿ ಸಾಯಲಿ - ಹೀಗೆಲ್ಲಾ ಕ್ರೂರ ಯೋಚನೆಗಳು ಹರಿಯುತ್ತವೆ. ಆದರೆ ಏನೇ ಆಗಲಿ ಅವೆಲ್ಲಾ ಆ ಕ್ಷಣದಲ್ಲಿ ಉಕ್ಕುವ ಯೋಚನೆಗಳಷ್ಟೇ. ಹಾಗೆಲ್ಲ ನಾಯಿಗಳಿಗೆ ಹೊಡೆಯಲು ಮನಸ್ಸೂ ಬರುವುದಿಲ್ಲ - ಅವು ಎಷ್ಟೇ ಅಟ್ಟಾಡಿಸಲಿ ಅವು ಬೀದಿಯಲ್ಲಿದ್ದರೆ ಒಂದು ಬಗೆಯ ಧೈರ್ಯ. ಕಳ್ಳರನ್ನು ಹಿಡಿಯುತ್ತವೋ ಅವರ ಬಿಸ್ಕೆಟ್ಟಿಗೆ ಬಾಲ ಅಲ್ಲಾಡಿಸುತ್ತವೋ ಒಟ್ಟಿನಲ್ಲಿ ಬೊಗಳುತ್ತವೆ, ಎಚ್ಚರ ಕೊಡುತ್ತವೆ, ಅದೇ ಒಂದು ಭರವಸೆ ಮನಸ್ಸಿಗೆ. ಅಲ್ಲದೇ ನಿಮ್ಮ ಕ್ರೂರ ಆಲೋಚನೆಗಳೆಲ್ಲಾ ಪ್ರಾಯೋಗಿಕವಾಗಿ ಸಾಧ್ಯವಾಗುವಂಥವೂ ಅಲ್ಲ. ಹಾಗೊಂದು ವೇಳೆ ನೀವೇನಾದರೂ ಮಾಡಿದರೆ ಕ್ರುಯೆಲ್ಟಿ ಫಾರ್ ಅನಿಮಲ್ಸ್ ಎಂದು ನಿಮ್ಮನ್ನು ಒಳತಳ್ಳಿದರೂ ಅಚ್ಚರಿಯಿಲ್ಲ.  

ನಿಮ್ಮ ಚಿಂತನೆಯೇನೇ ಇರಲಿ, ಹೀಗೆ ಅಟ್ಟಿಸಿಕೊಂಡು ಬಂದಾಗ ಗಾಬರಿಯಾಗಿ ಬೈಕಿನ ಮೇಲೇ ತಕಥೈ ಮಾಡುವುದಿದೆಯಲ್ಲ, ಅದು ಬಹಳ ಅಪಾಯ - ನಿಮ್ಮ ತಕ್ಷಣದ instinctನಿಂದಾಗಿ ನಿಮ್ಮ ಗಮನವೆಲ್ಲಾ ನಾಯಿಯಿಂದ ತಪ್ಪಿಸಿಕೊಳ್ಳುವುದರ ಕಡೆಯೇ ಇರುವುದರಿಂದ ಹಿಂದೆ ಮುಂದೆ ಏನು ಬರುತ್ತಿದೆ ಎಂಬುದರ ಅರಿವು ತಪ್ಪಿ ಹೋಗಿರುತ್ತದೆ, ಬೈಕಿನ ಆಯ ತಪ್ಪಿ ಬೀಳಬಹುದು, ಹಿಂದಿನಿಂದ ಟಿಪ್ಪರೊಂದು ನಿಮ್ಮ ಮೈಮೇಲೆ ಹರಿದು ಸಾವೇ ಸಂಭವಿಸಬಹುದು.  ಅಟ್ಟುತ್ತಿದ್ದ ನಾಯಿಗಳೇನೋ ಓಡಿಹೋಗಿಬಿಡುತ್ತವೆ, ಅಥವಾ ಸುತ್ತಲ ಜನ ಸೇರಿ ಕಲ್ಲು ಹೊಡೆದು ಓಡಿಸಲೂ ಬಹುದು.  ಆದರೆ ಹೋದ ಜೀವವಂತೂ ಮರಳಿ ಬರುವುದಿಲ್ಲವಷ್ಟೇ?  ತಾವು ಹೀಗೆ ಮಾಡುವುದರಿಂದ ನಿಮ್ಮ ಜೀವ ಹೋಗಬಹುದೆಂದು ಅವಕ್ಕೆ ತಿಳಿದಿರುವುದಿಲ್ಲ ಕೂಡ.  ಮೊದಲೇ ಹೇಳಿದಂತೆ ಅಟ್ಟುವುದು ಅವುಗಳ ಸ್ವಭಾವ - ಅಪಾಯದ ಅರಿವಿರಬೇಕಾದ್ದು ನಿಮಗೆ, ನಿಮ್ಮ ಜೀವ ನಿಮ್ಮ ಕೈಯಲ್ಲಿ, ಅಲ್ಲವೇ?  ಈಗಂತೂ ಕಾರ್ಪೊರೇಷನ್ನಿನವರ ಬೇಜವಾಬ್ದಾರಿಯಿಂದಾಗಿ ಎಲ್ಲೆಂದರಲ್ಲಿ ಹಿಂಡುಗಟ್ಟಿ ಅಟ್ಟಾಡಿಸಿ ದಾಳಿಮಾಡುವ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ.  ಆದ್ದರಿಂದ ಈ ಕೆಳಗಿನ ಕೆಲವು ಅಭ್ಯಾಸಗಳನ್ನು ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳಿ:

1) ನೀವು ಹೋಗುವುದು ನಿಮ್ಮ ಮಾಮೂಲು ರಸ್ತೆಯಾಗಿದ್ದರೆ ಎಲ್ಲಿ ನಾಯಿಯಿರುತ್ತದೆ ಅನ್ನೋದು ನಿಮಗೆ ಗೊತ್ತಿರಲೇ ಬೇಕು.  ಆ ರಸ್ತೆ ಬಿಟ್ಟು ಪಕ್ಕದ ರಸ್ತೆಯಲ್ಲಿ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ.

2) ಸಾಮಾನ್ಯವಾಗಿ ನೀವು ಆಕಡೆ ಈಕಡೆ ಹೊರಳಿ ತಪ್ಪಿಸಿಕೊಳ್ಳಬಾರದು, ಅಂತಹ ಆಯಕಟ್ಟಿನ ಜಾಗದಲ್ಲೇ ಅವು ಹೊಂಚಿ ನಿಲ್ಲುತ್ತವೆಂಬುದನ್ನು ಗಮನದಲ್ಲಿಡಿ.  ಅಂತಹ ದಾರಿಗಳನ್ನು ಅವಾಯ್ಡ್ ಮಾಡಿ (ನಮ್ಮ ಬೀದಿಯ ಟೈಲರಂಗಡಿಯಿಂದ ರಸ್ತೆಯ ಕೊನೆ ಸುಮಾರು ಇನ್ನೂರು ಅಡಿ; ಆ ಅಂಗಡಿಗೆ ಇನ್ನೂರು ಅಡಿ ಮೊದಲು ಪಕ್ಕದ ರಸ್ತೆಗೆ ತಿರುಗುವ ದಾರಿ.  ಇಲ್ಲಿಂದ ಅಲ್ಲಿಗೆ ಸುಮಾರು ನಾನೂರು ಅಡಿ ಎಲ್ಲಿಯೂ ಹೊರಳಲು ದಾರಿಯಿಲ್ಲ.  ಈ ನಾನೂರು ಅಡಿಯಲ್ಲೇನಾದರೂ ಸಿಕ್ಕಿದಿರೋ, ದಾಳಿ ಗ್ಯಾರಂಟಿ)

3) ನೀವು ಆ ರಸ್ತೆಯಲ್ಲೇ ಹೋಗಬೇಕೆಂದಿಟ್ಟುಕೊಳ್ಳಿ, ಅಥವಾ ಅದು ಅಪರಿಚಿತ ರಸ್ತೆ.  ಅಲ್ಲೆಲ್ಲಾದರೂ ನಾಯಿಯಿದೆಯೇ, ಒಂದು 300-350 ಅಡಿ ದೂರದಿಂದಲೇ ಗುರುತಿಸಲು ಪ್ರಯತ್ನಿಸಿ.  ಇದ್ದರೆ, ಉಪಾಯವಾಗಿ ಪಕ್ಕದ ರಸ್ತೆಗೆ ಜಾರಿಕೊಳ್ಳಿ.

4) ಪಕ್ಕದಲ್ಲೆಲ್ಲೂ ರಸ್ತೆಯಿಲ್ಲವೇ?  ಏಕಾಯೇಕಿ ಅದರ ಕಣ್ಣಿಗೆ ಕಾಣುವಂತೆ ನುಗ್ಗಬೇಡಿ.  ಬೇರೊಂದು ದೊಡ್ಡ ವಾಹನ ಬರುತ್ತಿದ್ದರೆ ಅದರ ಮರೆಯಲ್ಲೇ ಸಾಗಿ, ಬಚಾವಾಗಿ.

5) ಅದರ ಮುಂದೆಯೇ ಹೋಗಬೇಕೇ?  ಉದ್ವೇಗಕ್ಕೊಳಗಾಗಬೇಡಿ.  ದೂರದಿಂದಲೇ ನಿಮ್ಮ ವಾಹನವನ್ನು ನಿಧಾನಗೊಳಿಸಿ, ಹಗೂರವಾಗಿ ಎಡಬದಿಗೆ ತೆಗೆದುಕೊಳ್ಳಿ.  ನೀವು ಹೆದರಿಲ್ಲ, ಓಡುತ್ತಿಲ್ಲ ಎಂದು ಅದಕ್ಕೆ ಮನದಟ್ಟಾಗುವುದು ಮುಖ್ಯ.  ಅದರ ಗಮನಸೆಳೆಯುವ ಯಾವ ಚಲನೆಯನ್ನೂ ಮಾಡದೇ ಆತ್ಮವಿಶ್ವಾಸದಿಂದ ನಿಮ್ಮಷ್ಟಕ್ಕೆ ನೀವು ಮುಂದುವರೆಯಿರಿ, ಅನೇಕ ಬಾರಿ ಅದು ನಿಮ್ಮನ್ನು ಅಟ್ಟದೇ ಸುಮ್ಮನಿದ್ದುಬಿಡುತ್ತದೆ.  ನೀವು ಬಚಾವು.

6) ಹಾಗೂ ಒಂದು ವೇಳೆ ಅಟ್ಟಲು ತಯಾರಾಗುತ್ತಿದೆಯೇ? ಗಾಡಿಯನ್ನು ನಿಧಾನಗೊಳಿಸಿ ಅದರ ಮುಂದೆ ನಿಲ್ಲಿಸಿಬಿಡಿ.  ಎಷ್ಟೋ ಬಾರಿ "ಏಯ್, ರಾಮೂ, ಚುಚ್ಚುಚ್ಚುಚ್ಚೂ..." ಎಂಬ ಪರಿಚಯದ ಉದ್ಗಾರವೋ, ಒಂದೆರಡು ಬಿಸ್ಕಿಟೋ ನಿಮಗದರ ವಿಶ್ವಾಸವನ್ನು ಸಂಪಾದಿಸಿಕೊಡಬಲ್ಲುದು.  ಅದಕ್ಕೆ ಸಲ್ಲಬೇಕಾದ್ದನ್ನು ಸಲ್ಲಿಸಿ ನಿರಾಳವಾಗಿ ಮುಂದುವರೆಯಿರಿ.

ಇವಿಷ್ಟು, ನಾಯಿಗಳ ವಿಷಯದಲ್ಲಂತೂ ಸತ್ಯಸ್ಯಸತ್ಯ.  ಬೇರೆ ಪ್ರಾಣಿಗಳಿಗೂ ಇದೇ ಅನ್ವಯಿಸುತ್ತದೋ ಏನೋ.  ಸಿಂಹಗಳ ವಿಷಯ ಗೊತ್ತಿಲ್ಲ.

ಕೊನೆಯದಾಗಿ ಒಂದು ಮಾತು - ಹೆಲ್ಮೆಟ್ಟಿಲ್ಲದೇ ರಸ್ತೆಗಿಳಿಯಲೇ ಬೇಡಿ.  ಮೇಲಿನಂತಹ ಸಂದರ್ಭದಲ್ಲಿ ಹೆಲ್ಮೆಟ್ಟಿಲ್ಲದೇ ನೀವೇನಾದರೂ ಕೆಳಕ್ಕೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.  ಕಾನೂನಿಗಾಗಿ ಅಲ್ಲ, ಹಿಡಿದು ದಂಡ ಹಾಕುವ ಪೋಲೀಸರಿಗಾಗಿ ಅಲ್ಲ, ನಿಮಗಾಗಿ, ನಿಮ್ಮ ರಕ್ಷಣೆಗಾಗಿ ಯಾವಾಗಲೂ ಹೆಲ್ಮೆಟ್ ಧರಿಸಿ.


Tuesday, January 21, 2020

ಪತ್ರಿಕಾಶ್ವಾನ ಅಥವಾ ಪೇಪರ್ನಾಯಿ


ಲೆಟ್ ಅಸ್ ಮೇಕ್ ಒನ್ ಥಿಂಗ್ ವೆರಿ ಕ್ಲಿಯರ್ - ಶ್ವಾನ ಅಂಡ್ ಡಾಗ್ ಆರ್ ಒನ್ ಅಂಡ್ ದ ಸೇಮ್ - ದೇ ಆರ್ ನಾಟ್ ಡಿಫ್ರೆಂಟ್ ಫ್ರಮ್ ಈಚ್ ಅದರ್ ಅಟ್ ಆಲ್.

ಈ ಚಿತ್ರದಲ್ಲಿರುವ ಎರಡೂ ಪ್ರಾಣಿಗಳೂ ಬೇರೆಬೇರೆ ಪಂಗಡಗಳಿಗೆ ಸೇರಿದುವೇನೋ ಹೌದು - ಮೊದಲನೆಯದು ಕಂತ್ರಿನಾಯಿ ಮತ್ತು ಎರಡನೆಯದು ರಾಜನಾಯಿ ಎಂದಿಟ್ಟುಕೊಳ್ಳೋಣ (ಅಥವಾ, ರಾಜನಿಗೆ ಈ ಕಾಲದಲ್ಲಿ ಯಾವ ಕಿಮ್ಮತ್ತೂ ಇಲ್ಲದ್ದರಿಂದ, ಈ ಬೆಲೆಬಾಳುವ ನಾಯಿಯನ್ನು ಮಂತ್ರಿನಾಯಿ ಎಂದೇ ತಿಳಿಯಿರಿ, ಅಡ್ಡಿಯಿಲ್ಲ) - ಆದರೆ ಎರಡೂ ನಾಯಿಗಳೇ ಎಂಬುದರಲ್ಲಿ ನನಗಂತೂ ಸಂಶಯವಿಲ್ಲ. ನಾವು ಕನ್ನಡದಲ್ಲಿ ಯಾವುದನ್ನು ನಾಯಿ ಎಂದು ಕರೆಯುತ್ತೇವೋ ಅದನ್ನು ಸಂಸ್ಕೃತದಲ್ಲಿ ಶ್ವಾನವೆಂದು ಕರೆಯುತ್ತಾರಷ್ಟೇ (ಮತ್ತು ಆಲಂಕಾರಿಕವಾಗಿ ಗ್ರಾಮಸಿಂಹ ಎಂದು ಕರೆಯುತ್ತಾರೆ ಕೂಡ); ಕನ್ನಡದಲ್ಲಿ ನಾಯಿಯನ್ನು ಆಲಂಕಾರಿಕವಾಗಿ (ಕೆಲವು ಸಂದರ್ಭಗಳಲ್ಲಿ ಮಾತ್ರ) ಶ್ವಾನವೆಂಬ ಸಂಸ್ಕೃತ ಹೆಸರಿನಿಂದ ಕರೆಯಬಹುದು. ಹಾಗೆಂದ ಮಾತ್ರಕ್ಕೆ ನಾಯಿಯೆಂದರೆ ಗೌರವ ಕಡಿಮೆಯೇನೂ ಆಗುವುದಿಲ್ಲ, ಶ್ವಾನವೆಂದಾಕ್ಷಣ ಈ ಚಿತ್ರದಲ್ಲಿರುವಂತೆ ದಂಡಿಗೆಯ ಮೇಲೆ ಕೂರಿಸಬೇಕೆಂದೂ ಇಲ್ಲ.

ತೇಜಸ್ವಿಯವರ ಬಾಲ್ಯದ ನೆನಪುಗಳಲ್ಲಿ, ಒಬ್ಬ ತನ್ನ ವಿಲಾಯಿತಿ ನಾಯಿಗೆ ಇಂಗ್ಲಿಷೇ ಸರಿಯೆಂದು ತಿಳಿದು "ಕಮಾನ್ ಡಾಗ್" ಎಂದೇ ಕರೆಯುತ್ತಿದ್ದನಂತೆ, ಈ ಮಕ್ಕಳು ಇದೂ ಒಂದು ನಾಯಿಭಾಷೆಯಿರಬೇಕೆಂದು ತಿಳಿದು, ಅದರ ಅರ್ಥ ತಿಳಿಯುವ ಗೋಜಿಗೆ ಹೋಗದೇ ತಾವೂ "ಕಮಂಡಾ ಕಮಂಡಾ" ಎಂದು ಕರೆಯತೊಡಗಿದರಂತೆ. ಹಾಗೆಯೇ ನಮ್ಮ ಬಹುತೇಕ ಪತ್ರಕರ್ತರಿಗೆ (ಮತ್ತು ಅವರನ್ನು ಕಣ್ಣುಮುಚ್ಚಿ ಅನುಕರಿಸುವ ಇತರ ಹಲವರಿಗೆ) ನಾಯಿಯೆಂಬ ಪದ ಬಳಸಲು ಅದೇನೋ ಕೀಳರಿಮೆ, ಶ್ವಾನವೆನ್ನುವುದೇ ಫ್ಯಾಶನು.

ಇಲ್ಲ, ಇದು ಸಂಸ್ಕೃತವು ಸಾವಿರಾರು ವರ್ಷಗಳಿಂದ ನಮ್ಮಲ್ಲಿ ಬಿತ್ತಿ ಬೆಳೆಸಿರುವ ಕೀಳರಿಮೆ ಎಂದೇನೂ ನಾನು ಹೇಳುತ್ತಿಲ್ಲ, ಕೀಳರಿಮೆ ನಮ್ಮಲ್ಲೇ ಮನೆಮಾಡಿದ್ದರೆ ಪಾಪ ಸಂಸ್ಕೃತವೇನು ಮಾಡೀತು :)

"ಬಾಂಬ್ ಸ್ಫೋಟದ ಸ್ಥಳಕ್ಕೆ ಶ್ವಾನದಳದ ಭೇಟಿ"
"ಈ ದಿನ ನಗರದಲ್ಲಿ ಶ್ವಾನಗಳ ಪ್ರದರ್ಶನ"

ಇಂಥವುಗಳನ್ನು ಸಮಾಧಾನದಿಂದ ಓದಬಹುದು.

"ಕಳೆದು ಹೋದ ಪರ್ಸನ್ನು ಹುಡುಕಿಕೊಟ್ಟ ಶ್ವಾನ"
"ನಗರ್ತರ ಪೇಟೆಯ ಎರಡನೇ ಅಡ್ಡರಸ್ತೆಯಲ್ಲಿ ಶ್ವಾನಗಳ ಕಾಟ"

ಇಂಥವುಗಳನ್ನು ಓದಿದಾಗ ಗುರುಗುಟ್ಟುವಂತಾದರೂ ಹೇಗೋ ಸೈರಿಸಿಕೊಳ್ಳಬಹುದು. ಆದರೆ -

"ಬೀಡಾಡಿ ಶ್ವಾನಗಳ ನಿಯಂತ್ರಣಕ್ಕೆ ನಗರಪಾಲಿಕೆ ಸಜ್ಜು"
"ಶ್ವಾನಗಳ ಬೊಗಳುವಿಕೆಗೆ ಬೆದರಿ ಓಡಿಹೋದ ಕಳ್ಳರು"

ಇಂಥವುಗಳನ್ನು ನೋಡಿದಾಗ ಕೊರಲೆತ್ತಿ ಬೊಗಳಿಯೇಬಿಡೋಣವೆನಿಸುತ್ತದೋ ಇಲ್ಲವೋ? ಆದರೇನು, "ನಾಯಿ, ಅಲ್ಲಲ್ಲ, ಶ್ವಾನ ಬೊಗಳಿದರೆ ದೇವಲೋಕ ಹಾಳೇ" ಎಂದುಕೊಂಡು ತಮ್ಮ ಬರೆಯುವಿಕೆಯನ್ನು ಮುಂದುವರೆಸಿದರೆ ಏನು ಮಾಡುವುದು ಹೇಳಿ?

ಅದು ಹೋಗಲಿ ಸ್ವಾಮಿ "ಹುಚ್ಚುಶ್ವಾನದ ಕಡಿತಕ್ಕೆ ಬಾಲಕ ಅಸ್ವಸ್ಥ" ಈ ಶೀರ್ಷಿಕೆಯನ್ನು ಓದಿದರೆ ಹುಚ್ಚೇ ಹಿಡಿದು, ಹೋಗಿ ಕಚ್ಚಿಯೇ ಬಿಡಬೇಕೆನ್ನಿಸಿದರೆ ಅತಿಶಯವೇ?

ಕೆಲ ದಶಕಗಳ ಹಿಂದಿನ ದಿನಪತ್ರಿಕೆಯ ವರದಿಗಾರನೊಬ್ಬನ ಗಾರ್ದಭಪ್ರೇಮವನ್ನು ತುಂಬಾ ಹಿಂದೆ ಇಲ್ಲಿ ನೆನಪಿಸಿಕೊಂಡಿದ್ದೆ - ಗಾರ್ದಭವೆಂಬ ಹೆಸರು ಹೊರಳದಿದ್ದರೂ ಕತ್ತೆಯೆಂಬ ಮೈಲಿಗೆ ಪದವನ್ನು ಮಾತ್ರ ತಪ್ಪಿಯೂ ಉಚ್ಚರಿಸಬಾರದೆಂದು ಆತ ಪ್ರತಿಜ್ಞೆ ಮಾಡಿದಂತಿತ್ತು. ಪತ್ರಿಕಾವರದಿ ಹೀಗಿತ್ತು:

"ರಸ್ತೆ ಅಪಘಾತದಲ್ಲಿ ಗಾರ್ದಭ ಸಾವು:

ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಗಾದರ್ಭವೊಂದಕ್ಕೆ ಲಾರಿ ಡಿಕ್ಕಿ ಹೊಡೆದು ಗಾರ್ಬಧವು ಸ್ಥಳದಲ್ಲೇ ಅಸುನೀಗಿದ ಘಟನೆ ಸಂಭವಿಸಿದೆ. ತೀವ್ರ ಪೆಟ್ಟುತಿಂದಿದ್ದ ಗಾರ್ದಬವನ್ನು ರಕ್ಷಿಸಲು ಗ್ರಾಮಸ್ತರು ಧಾವಿಸಿದರಾದರೂ ಅವರ ಪ್ರಯತ್ನ ಫಲಕಾರಿಯಾಗದೇ ಗಾಬರ್ದವು ಅಸುನೀಗಿತೆನ್ನಲಾಗಿದೆ" :o

ಆಗಿನ ಗಾರ್ದಭಪ್ರೇಮವು ಈಗ ಶ್ವಾನಗಳ ಮೇಲೆ ವರ್ಗಾವಣೆಯಾಗಿದೆಯೋ ಏನೋ.

ಇರಲಿ, ಜೋಕ್ಸ್ ಅಪಾರ್ಟ್, ಕನ್ನಡದಲ್ಲಿ ಶ್ವಾನಶಬ್ದವನ್ನು ಬಳಸಲೇಬಾರದೆಂದು ನನ್ನ ವಾದವಲ್ಲ, ಕೆಲಸಂದರ್ಭಗಳಲ್ಲಿ ಅದೇ ಸರಿಯಾದ ಬಳಕೆ ಕೂಡ. ಉದಾಹರಣೆಗೆ "ಕೊಲೆಯಾದ ಸ್ಥಳಕ್ಕೆ ಧಾವಿಸಿದ ನಾಯಿಹಿಂಡು/ನಾಯಿಮಂದೆ/ನಾಯಿಗುಂಪು" ಎನ್ನಲಾಗುತ್ತದೆಯೇ? ಪೋಲೀಸ್ ನಾಯಿಗಳು ಎಗರಿ ಕಚ್ಚಿಯೇ ಬಿಟ್ಟಾವು, ಅಥವಾ ಪೋಲೀಸ್ ಭಾಷೆಯಲ್ಲೇ ಬೊಗಳಿಯಾವು. ಅಲ್ಲಿ ಶ್ವಾನದಳ/ಶ್ವಾನಪಡೆ ಎಂದೇ ಬಳಸಬೇಕಾದ್ದು (ಅದೇನೇ ಇರಲಿ, ಶ್ವಾನದಳದಲ್ಲಿ ಶ್ವಾನವೇ ಉಚಿತವಾದರೂ ಪೋಲೀಸ್ ನಾಯಿಗೆ ಪೋಲೀಸ್ ಶ್ವಾನ ಎನ್ನುವುದು ತಾಂತ್ರಿಕವಾಗಿ ಸ್ವಲ್ಪ ತೊಡಕಿನ ವಿಷಯ, ಏಕೆಂದರೆ ಪೋಲೀಸ್+ಶ್ವಾನ ಎನ್ನುವುದು ಪೋಲೀಶ್ವಾನ ಎಂಬುದಾಗಿ ಸಕಾರಲೋಪಸಂಧಿಯಾಗಿ, ಅವಕ್ಕೆ ಪೋಲಿನಾಯಿಗಳ ಪಟ್ಟವನ್ನೇ ಕಟ್ಟಿಬಿಡುವ ಅಪಾಯವಿದೆ, ಇದು ಕೇವಲ ತಾಂತ್ರಿಕ ತೊಡಕಲ್ಲ, ರಾಜತಾಂತ್ರಿಕ ತೊಡಕೇ ಸರಿ).

ಇರಲಿ, ಪೋಲೀಸು ಶ್ವಾನದಳದ್ದಾಯಿತಲ್ಲ, ಅದೇ ಬೇರೊಂದು ಸಂದರ್ಭದಲ್ಲಿ, "ಕೊಲೆಯಾದವನ ಶವವನ್ನು ಕಚ್ಚಿ ಎಳೆದಾಡುತ್ತಿರುವ ಶ್ವಾನದಳ" ಎಂದು ಬಳಸಬಹುದೇ? ಅದು ಆ ನಾಯಿಗಳಿಗಾಗಲೀ, ಅನಾಥ ಹೆಣಕ್ಕಾಗಲೀ, ಅಥವಾ ಶ್ವಾನದಳಕ್ಕಾಗಲೀ ಮರ್ಯಾದೆ ತರುವಂತಹ ವಿಷಯವೇ?. ಅಲ್ಲಿ "ಕೊಲೆಯಾದವನ ಶವವನ್ನು ಕಚ್ಚಿ ಎಳೆದಾಡುತ್ತಿರುವ ನಾಯಿಹಿಂಡು/ಗುಂಪು" ಎಂದು ಹೇಳುವುದೇ ಉಚಿತ. "ಬೀಡಾಡಿ ನಾಯಿಗಳ ಗುಂಪು" ಎಂದರೆ ಇನ್ನೂ ಪರಿಣಾಮಕಾರಿ.

ಇನ್ನು ನಾಯಿ ಸಾಕಿದವರು ಅದನ್ನು ತಮ್ಮ ಮನೆಯ ಸದಸ್ಯ/ಸ್ಯೆಯಂತೆಯೇ ಪ್ರೀತಿಸುತ್ತಾರಾದರೂ ("ನಿಮ್ಮ ನಾಯಿ ತುಂಬಾ ಚೆನ್ನಾಗಿದೆ" ಎಂದರೆ ನಿಮ್ಮನ್ನೇ ನಾಯಿಯಂತೆ ಕಾಣಬಹುದಾದರೂ) "ನಿಮ್ಮ ಶ್ವಾನ ತುಂಬಾ ಚೆನ್ನಾಗಿದೆ" ಎಂದ ಮಾತ್ರಕ್ಕೆ ಹೆಚ್ಚುವರಿ ಮರ್ಯಾದೆಯನ್ನೇನೂ ಮಾಡಲಾರರು. ಅಲ್ಲಿ "ನಿಮ್ಮ ರಾಮು, ಅಲ್ಲಲ್ಲ ಡ್ಯಾನಿ ತುಂಬಾ ಚೂಟಿಯಾಗಿದ್ದಾನೆ" ಎಂದೋ "ನಿಮ್ಮ ರಿಂಕಿ ಮುದ್ದಾಗಿದ್ದಾಳೆ" ಎಂದೋ ಹೇಳಿದರೆ, ಕಾಲನ್ನು ಮೂಸಿನೋಡಲು ತಣ್ಣನೆಯ ಮೂಗು ಸೋಕಿಸುವ ಅದನ್ನು, ಜೀವ ಪುಕಪುಕವೆನ್ನುತ್ತಿದ್ದರೂ ಎದೆಯ ಧೈರ್ಯವನ್ನೆಲ್ಲಾ ಕೈಗೆ ರವಾನಿಸಿ ತಲೆಸವರಿದ ಶಾಸ್ತ್ರ ಮಾಡಿದರೆ, ಎರಡು ಹೆಚ್ಚುವರಿ ಬಿಸ್ಕಿಟ್ (ನಾಯಿ ಬಿಸ್ಕೆಟ್ ಅಲ್ಲ ಮತ್ತೆ) ದಕ್ಕಬಹುದು.

ಹೀಗೆ ಸಿಕ್ಕಸಿಕ್ಕಲ್ಲೆಲ್ಲಾ ಶ್ವಾನಗಳನ್ನು ನುಗ್ಗಿಸುವ ಪತ್ರಕರ್ತಮಿತ್ರರು, ಮತ್ತು ಅವರನ್ನನುಕರಿಸುವ ಇತರ ಮಿತ್ರರು, ಈ 'ಶ್ವಾನೌಚಿತ್ಯ'ವನ್ನು ತುಸು ಬೆಳೆಸಿಕೊಂಡರೆ ಓದುಗನ ಬದುಕು ನಾಯಿಪಾಡಾಗುವುದು, ಅಲ್ಲಲ್ಲ, ಶ್ವಾನಪಾಡಾಗುವುದು ತಪ್ಪಬಹುದೇನೋ. ಅಥವಾ ಶ್ವಾನಕ್ಕಿಂತ ಹೆಚ್ಚು 'ಮರ್ಯಾದೆ'ಯದಾದ ಗ್ರಾಮಸಿಂಹವೆಂಬ ಪದವು ಇನ್ನೂ ಇವರ ಬತ್ತಳಿಕೆ ಸೇರಿಲ್ಲವೆಂದು ನೆಮ್ಮದಿಯ ನಿಟ್ಟುಸಿರಿಡಬೇಕೋ

Monday, July 31, 2017

ಅಥಾತೋ ಭೂತ ಜಿಜ್ಞಾಸಾ...

ಧೂರ್ತಲಕ್ಷಣವನ್ನು ವಿವರಿಸುವ ಸಂಸ್ಕೃತ ಸುಭಾಷಿತವೊಂದಿದೆ:

ಮುಖಂಪದ್ಮದಲಾಕಾರಂ ವಚಶ್ಚನ್ದನ ಶೀತಲಮ್
ಹೃತ್ ಕರ್ತರಿಸಮಂ ಚಾತಿವಿನಯಂ ಧೂರ್ತಲಕ್ಷಣಮ್

(ಮೊಗವು ತಾವರೆಯೆಸಳು ನುಡಿ ಚಂದನದ ತಂಪು
ಚಗಮೊಗನೆ ಮಸೆವ ಕತ್ತರಿಯೆದೆಯೊಳು
ಮಿಗುವ ಅತಿವಿನಯವೆಂಬೀ ನಾಲ್ಕು ಲಕ್ಷಣಗ
ಳೊಗೆದಿರಲು ಧೂರ್ತಲಕ್ಷಣವದೆಂಬರ್ 
    - ಅನುವಾದ ನನ್ನದೇ)

ಈ ಲಕ್ಷಣಗಳು ಸಾರ್ವಕಾಲಿಕವಷ್ಟೇ ಅಲ್ಲ, ಸಾರ್ವದೇಶಿಕವೂ ಹೌದು.  ಚಾರ್ಲ್ಸ್ ಡಿಕನ್ಸ್ ತನ್ನ ಅಮರಕೃತಿ ಡೇವಿಡ್ ಕಾಪರ್ ಫೀಲ್ಡ್ ಕಾದಂಬರಿಯಲ್ಲಿ ಉರಯ್ಯ ಹೀಪ್ (Uriah Heep) ಎಂಬ ಧೂರ್ತಶಿಖಾಮಣಿಯ ಪಾತ್ರವನ್ನು ಕಟ್ಟಿ ಕೊಡುತ್ತಾನೆ.  ಆತನ ಕೃತಕಾತಿಕೃತಕ ನಯ-ವಿನಯ, ಹಾವು ಬಳುಕಿದಂತೆ ಮೈಕೈ ಡೊಂಕಿಸಿಕೊಂಡು ಬಳಕುವ, ಹಾವಭಾವ ತುಂಬಿದ ಆತನ ನಲಿತ ನುಲಿತ, ಅದರ ಕೆಳಪದರದಲ್ಲಿ ಥಣ್ಣನೆ ಹರಿಯುವ, ಮಿಣ್ಣನೆ ಕತ್ತು ಕೊಯ್ಯಬಲ್ಲ ಕಪಟಾನುಸಂಧಾನ, ಅದನ್ನು ಮುಚ್ಚುವ ಸುಳಿನಗೆ, ಜೇನು-ಸಕ್ಕರೆ ಸವರಿದ ಮಾತು - ಈ ಪಾತ್ರ, ಮೇಲಿನ ಸುಭಾಷಿತಕ್ಕೆ ಲಕ್ಷ್ಯದಂತಿದೆ.  ತನ್ನ ಲಕ್ಷ್ಯಸಾಧನೆಗೆ ಈತ ಯಾವ ಸುಳ್ಳನ್ನು ಯಾರಿಗಾದರೂ ಹೇಳಬಲ್ಲ, ಯಾರ ಹಿತವನ್ನಾದರೂ ಬಲಿಗೊಡಬಲ್ಲ, ಶಿಕ್ಷೆಗೊಳಗಾದಾಗಲೂ ಶಿಕ್ಷೆಯನ್ನು ಅದೊಂದು ಮಹಾಪ್ರಾಯಶ್ಚಿತ್ತವೆಂಬಂತೆ ಪ್ರದರ್ಶಿಸುತ್ತಾ, ಮಹಾಧಾರ್ಮಿಕನಂತೆ ಧರ್ಮಗ್ರಂಥಗಳನ್ನು ಪಠಿಸುತ್ತಾ, ಪರಮಧಾರ್ಮಿಕನೇ ಆಗಿಬಿಡಬಲ್ಲ.  ಅಡಿಗಡಿಗೆ ಧರ್ಮಗ್ರಂಥಗಳಿಂದ ಉದ್ಧರಿಸುತ್ತಾ, ಸ್ವತಃ ತಾನೇ ನಂಬದ, ನೆಚ್ಚದ, ಆಚರಿಸದ ನೀತಿಯ ಪಾಠ ಮಾಡುತ್ತಾ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಬಲ್ಲ.  ಆ ಮೆಚ್ಚುಗೆಯನ್ನೇ ತನ್ನ ಚಿಮ್ಮುಗಲ್ಲಾಗಿ ಬಳಸಿಕೊಳ್ಳಬಲ್ಲ.

ಇಂಥಾ ಕಪಟಧರ್ಮಶ್ರವಣವನ್ನು Devil quoting from the scripture ಎನ್ನುತ್ತಾರೆ.  ಬಹುಶಃ ಈ ನಾಣ್ನುಡಿಗೆ ಮೂಲವಾಗಿರಬಹುದಾದ ಶೇಕ್ಸ್ಪಿಯರ್ ಮಹಾಕವಿಯ ಈ ಮಾತುಗಳನ್ನು ನೋಡಿ:
The devil can cite Scripture for his purpose.
An evil soul producing holy witness
Is like a villain with a smiling cheek,
A goodly apple rotten at the heart.
Oh, what a goodly outside falsehood hath!
    - Antonio to Shylack in Shakespere's "The Merchant of Venice"

ತನಗನುಕೂಲವೆನ್ನುವುದಾದರೆ ದೆವ್ವವೂ ದೈವವಾಕ್ಯಗಳನುದ್ಧರಿಸಿ ಕೊಟ್ಟೀತು
ದೇವರಾಣೆಯಿಡುವ ದುರಾತ್ಮ
ನಗೆಮೊಗದ ಖಳ
ಒಳಗೇ ಕೊಳೆತಿರುವ ದೈವೀ ಫಲ.
ಓಹ್, ಸುಳ್ಳತನಕೆಂತಹ ಸಾತ್ತ್ವಿಕತೆಯ ಮೊಗವಾಡ!
    - ಅಂತೋನಿಯೋ, ಶೈಲಾಕನಿಗೆ, ಶೇಕ್ಸ್ಪಿಯರನ "ದ ಮರ್ಚೆಂಟ್ಸ್ ಆಫ್ ವೆನಿಸ್" ನಾಟಕದಲ್ಲಿ

ಬಹುಶಃ ಇದೇ ನಾಣ್ನುಡಿಯಿಂದ ಪ್ರೇರಿತವಾದ ಹೊಸಗಾಲದ ಕನ್ನಡ ನಾಣ್ನುಡಿಯೊಂದು ಬಹು ಪ್ರಸಿದ್ಧವಾಗಿದೆ - "ಭೂತದ ಬಾಯಲ್ಲಿ ಭಗವದ್ಗೀತೆ"  ಭಗವದ್ಗೀತೆಯೂ ಭೂತವೂ ಸ್ವಭಾವತಃ ಪರಸ್ಪರ ವಿರುದ್ಧ ವಿಷಯಗಳು.  ಭಗವದ್ಗೀತೆಯು ಧರ್ಮವನ್ನು ಬೋಧಿಸಿದರೆ, ಅಧರ್ಮವೇ ಭೂತದ ಧರ್ಮ.  ಹೀಗೆ ಅಧರ್ಮಗಾಮಿಯಾದ ಭೂತವು ತನ್ನ ಬಲಿಪಶುವನ್ನು ನಂಬಿಸಿ ಸೆಳೆದೊಯ್ಯಲು ಭಗವದ್ಗೀತೆಯ ಅಗತ್ಯವಿದ್ದರೆ, ಅದನ್ನು ಬಳಸಲೂ ಹಿಂಜರಿಯದು.  ಅದಕ್ಕೆ ತಕ್ಕಂಥದ್ದೊಂದು ವೇಷ, ಭಾಷೆ, ಪರಿಭಾಷೆ ಹೊಂದಿಸಿಕೊಂಡರಾಯಿತು - ಭೂತವು ಇದರಲ್ಲೆಲ್ಲ ಎತ್ತಿದ ಕೈ.  ಭೂತದ ಮಾರುವೇಷ-ಭಾಷೆಗಳಿಗೆ ಮಾರುವೋದರೆ ಅದು ಹೇಗೆ ನಿಮ್ಮ ನೈತಿಕತೆಯ ಕತ್ತು ಹಿಸುಗಿ ನಿಮ್ಮಮೇಲೇ ಸವಾರಿ ಮಾಡಬಹುದು ಎಂಬುದನ್ನು ಪ್ರೊ. ಎನ್ ಎಸ್ ಲಕ್ಷ್ಮೀನಾರಾಯಣಭಟ್ಟರ ಈ ಕವನ ಸೊಗಸಾಗಿ ಚಿತ್ರಿಸುತ್ತದೆ:

ನಡುರಾತ್ರಿ ದೆವ್ವಗಳು
ಬಾಗಿಲನ್ನು ಬಡಿದವು,
ಯಾರೋ ಎಂದು ತೆರೆದೆ.
ಕಾಲಮೇಲೆ ಬಿದ್ದು
ಮುಳುಮುಳನೆ ಅತ್ತವು,
ಪಾಪ ! ಒಳಕ್ಕೆ ಕರೆದೆ.
ದೀನಮುಖ ಮಾಡಿ
ಕೈ ಹಿಡಿದು ಬೇಡಿದವು,
ಜೊತೆ ಹೋಗಲೊಪ್ಪಿದೆ.

ಅವು
ಇಟ್ಟ ಬೀದಿಗಳಲ್ಲಿ
ಬೀಗಿ ನಡೆದೆ,
ತೆರೆದ ಹಳ್ಳಗಳನ್ನು ಕೂಡಿ ಜಿಗಿದೆ.
ಕೊಟ್ಟ ತೀರ್ಥ ಕುಡಿದೆ
ಬಿಟ್ಟ ಹೆಣ್ಣನ್ನು ಮಿಡಿದೆ,
ಆಕಾಶಕ್ಕೆ ಮುಖ ಮಾಡಿ
ಸೂರ‍್ಯನಿಗೇ ಉಗಿದೆ.
ನೆಗೆದೆ.

ದೆವ್ವಗಳು ಕಲಿಸಿದ್ದೆಲ್ಲ
ಬಲು ವಿಚಿತ್ರ
ನಾಲ್ಕರಲ್ಲಿ ಎಂಟು ಕಳೆಯಬಹುದು,
ದಶಕದ ನೆರವಿಲ್ಲದೆ.
ಹೆಜ್ಜೆ ಊರದೆ ನೆಲಕ್ಕೆ ನಡೆಯಬಹುದು,
ಭಾರದ ಅರಿವಿಲ್ಲದೆ.
ಬೆಟ್ಟವನ್ನೇ ಬಗೆದು
ಗಾಳಿಯನ್ನೇ ಸಿಗಿದು
ಹೊಳೆಯಲ್ಲೂ ಮುಳುಗಬಹುದು,
ಕೂದಲೇ ನೆನೆಯದೆ.

ಆದರೆ ಒಂದು ವಿಷಯ;
ನೊಂದ ಜೀವಕ್ಕೆ ಮರುಗಿ
ಕಂಬನಿಯೊಂದ ಹಾಕಲು,
ತನ್ನ ಬೆವರೇ ಹರಿಸಿ
ತಿನ್ನುವ ಅನ್ನ ಬೇಯಿಸಲು,
ತರ್ಕ ಬಿಟ್ಟು ದೇವಾಲಯಕ್ಕೆ
ಸುತ್ತೊಂದನ್ನು ಹಾಕಲು
ಆಗುವುದೇ ಇಲ್ಲ.
ಬಲು ವಿಚಿತ್ರ ಎಂದರೆ
ಒಳಗಡೆ ಮಗು ಚೀರಿತೆನ್ನಿ,
ಕತ್ತು ಹಿಸುಕಿ ಕೊಂದಲ್ಲದೆ
ನಿದ್ದೆ ಬರುವುದಿಲ್ಲ!

ಅಂದಹಾಗೆ, ದೆವ್ವ-ಭೂತ ಮೂಢನಂಬಿಕೆಗಳನ್ನು ಹರಡುವ ಪ್ರಯತ್ನವೆಂದು ಮೂಗು ಮುರಿಯದಿರಿ - ಆ ನಂಬಿಕೆಯೇ ನನ್ನದಲ್ಲ.  ದೆವ್ವವಿದೆಯೆಂದು ಹೇಳಲಾಗುತ್ತಿದ್ದ ನಮ್ಮೂರ ನಾರಾಯಣಸ್ವಾಮಿಯ ರಥದ ಒಳಹೊರಗನ್ನೆಲ್ಲಾ ಹೊಕ್ಕು ನೋಡಿದ್ದೇನೆ, ಬಾಲ್ಯಕಾಲದಲ್ಲಿ.  ಹೆಸರಿಗಾದರೂ ಒಂದು ಪಿಳ್ಳೆ ದೆವ್ವವನ್ನು ಕಾಣಲಿಲ್ಲ.  ಆದ್ದರಿಂದ ಇಲ್ಲಿ ದೆವ್ವವೊಂದು ಸಂಕೇತವಷ್ಟೇ.  "ಎಲ್ಲಾ ಗುಣಗಳು ನಿನ್ನಲೆ ಅಡಗಿ ಕಾಳಗ ಮಾಡುತಿವೆ" ಎಂದು ನಮ್ಮ ರಾಜ್ ಕುಮಾರರು ಹಾಡಿಲ್ಲವೇ, ಬಹದ್ದೂರ್ ಗಂಡು ಸಿನಿಮಾದಲ್ಲಿ?  ಹಾಗೆ ದೈವ ದೆವ್ವಗಳೆರಡೂ ನಮ್ಮಲ್ಲಿಯೇ, ನಮ್ಮ ನಡುವೆಯೇ ಇವೆ - ಯಾವುದು ಏನು ಎಂದು ಒರೆಹಚ್ಚಿ ನಂಬುವ ಎಚ್ಚರ ಮಾತ್ರ ಅಗತ್ಯ; ಅದರಲ್ಲೂ ಭೂತಗಳೇ ಭಗವದ್ಗೀತೆಯನ್ನು ಜೋರೊಜೋರಾಗಿ ಪಠಿಸುವ ಈ ಕಾಲದಲ್ಲಂತೂ ಈ ಎಚ್ಚರ ಅತ್ಯವಶ್ಯ.  ಈ ಸುಭಾಷಿತ ಎಚ್ಚರದ ಗುಳಿಗೆಯಂತೆ ಕೆಲಸ ಮಾಡಬಹುದೇನೋ, ದಿನಕ್ಕೆ ಮೂರು ಬಾರಿ ಪಠಿಸಿದರೆ:

ಅಹೋ ದುರ್ಜನಸಂಸರ್ಗಾತ್ ಮಾನಹಾನಿಃ ಪದೇ ಪದೇ ।
ಪಾವಕೋ ಲೋಹಸಂಗೇನ ಮುದ್ಗರೈರಭಿತಾಡ್ಯತೇ
(ಆಹಾ! ದುರ್ಜನಸಂಸರ್ಗದಿಂದ ಪದೇಪದೇ ಮಾನಹಾನಿಯೇ ಕಟ್ಟಿಟ್ಟ ಬುತ್ತಿ; ಲೋಹದ ಸಂಗದಿಂದ ಅಗ್ನಿಗೂ ಸುತ್ತಿಗೆ ಪೆಟ್ಟು ಬೀಳುವಂತೆ)


Wednesday, May 5, 2010

ಹೀಗೊಂದು ಬಿಕರೀ ನೋಟೀಸು

ಮೊನ್ನೆ ಸತ್ಯ ಇದ್ದಕ್ಕಿದ್ದಹಾಗೆ ಫೋನಾಯಿಸಿ "ನನ್ನ ಲೈಬ್ರರಿ sale ಮಾಡಬೇಕು ಅಂತಿದೀನಿ ಮಂಜು" ಅಂದಾಗ ಒಂದು ಕ್ಷಣ ಅವರು ಜೋಕ್ ಮಾಡುತ್ತಿದ್ದಾರೆನ್ನಿಸಿತು. ಕೂಲಾಗಿ "ಸರಿ ಮಾಡಿ, ಎಷ್ಟು ಬೇಕು ಹೇಳಿ ಕೊಡೋಣ" ಎಂದೆ. ನಾವು ಆಗಾಗ ಭೆಟ್ಟಿಯಾದಾಗೆಲ್ಲಾ ಅದೂ ಇದು ಕಾಡುಹರಟೆಯ ನಡುವೆ ಏನಾದರೂ ಹಣಕಾಸಿನ ಕಷ್ಟ-ಸುಖದ ವಿಷಯ ಬಂದರೆ "ನನ್ನ ಲೈಬ್ರರಿ ತಗೊಂಡು ಎರಡು ಸಾವಿರ ಕೊಡಿ ಮಂಜು" ಎನ್ನುವುದು, ನಾನು "ಅದು ತುಂಬಾ ಜಾಸ್ತಿಯಾಯಿತು" ಎಂದು ನಗೆಯಾಡುವುದು ವಾಡಿಕೆ. ಒಂದು ಕ್ಷಣ ಮೌನದ ನಂತರ ಹೇಳಿದರು "ಇಲ್ಲ ಮಂಜು, ನಾನು serious ಆಗಿ ಹೇಳ್ತಾ ಇದೀನಿ". ಅರೇ, ಹೌದಲ್ಲ. ಮೊನ್ನೆ ತಾನೆ ಹಠಾತ್ತಾಗಿ ತಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದ ಸತ್ಯ ಜೋಕ್ ಮಾಡುವ ಮನಸ್ಥಿತಿಯಲ್ಲೇನೂ ಇಲ್ಲ ಎಂದು ಹೊಳೆಯಿತು. ಮತ್ತೆ? ನಿಜಕ್ಕೂ ಲೈಬ್ರರಿ ಮಾರಿಬಿಡುತ್ತಿದ್ದಾರೆಯೇ? ಕ್ಷಣ ನಂಬಲಾಗಲಿಲ್ಲ. ಹಾಗೊಂದುವೇಳೆ ಇದು ಜೋಕ್ ಅಲ್ಲವೆಂದಾದರೆ, ಈ ಮಾತು ಸತ್ಯನ ಬಾಯಲ್ಲಿ ಬರಲು ಸಾಧ್ಯವೇ ಇರಲಿಲ್ಲ. ಏಕೆಂದರೆ ನಾನು ಬಾಲ್ಯದಿಂದಲೂ ಬಲ್ಲ ಈತ ತಮ್ಮ ಪುಟ್ಟ ಲೈಬ್ರರಿ ಕಟ್ಟಿ ಬೆಳೆಸಿಕೊಂಡಿದ್ದ ಪರಿಯನ್ನು ಕಣ್ಣಾರೆ ಕಂಡಿದ್ದೆ.

ಚಿಕ್ಕಂದಿನಲ್ಲೇ ಸಿನೆಮಾ-ನಾಟಕ-ಸಾಹಿತ್ಯಗಳ ಗೀಳು ಹತ್ತಿಸಿಕೊಂಡು, ಮುಂದೊಮ್ಮೆ ಅದೇನೋ ಸಾಧಿಸುವ ಕನಸು ಕಣ್ಣಲ್ಲಿಟ್ಟುಕೊಂಡು ಓದು ಬಿಟ್ಟು ಊರು ಬಿಟ್ಟು ಬೆಂಗಳೂರು ಸೇರಿದ ಹುಡುಗ, ಕಲಾವಿದನಾಗಿ ಸಾಕಷ್ಟು ಬೆಳೆಯುತ್ತಾ, ಸಿಜಿಕೆ, ಬಿ.ವಿ.ಕಾರಂತ ಇತ್ಯಾದಿ ಘಟಾನುಘಟಿಗಳೊಂದಿಗೆ ದುಡಿಯುತ್ತಾ ಕಲೆಯ ಬದುಕನ್ನು ರೂಪಿಸಿಕೊಂಡರು. ಹವ್ಯಾಸಿ ರಂಗಭೂಮಿ ವಲಯದಲ್ಲಿ "ಕತ್ಲು ಸತ್ಯ" ಎಂದೇ ಹೆಸರಾಗಿದ್ದ ಸತ್ಯನಾರಾಯಣ, "ಬಾವಿ", "ಡಾಂಬರು ಬಂದದ್ದು" ಇತ್ಯಾದಿ ಸ್ವತಃ ಕೆಲವು ನಾಟಕಗಳನ್ನೂ ರಚಿಸಿದ್ದಲ್ಲದೇ, ರಂಗಕರ್ಮಿ/ನಿರ್ದೇಶಕರಾಗಿ ಕೂಡ ಸಾಕಷ್ಟು ಹೆಸರು ಮಾಡಿದರು.

ಅರಸನ ಅಂಕೆಯಿಲ್ಲದೆ ದೆವ್ವದ ಕಾಟವಿಲ್ಲದೆ ಮನಸ್ಸಿಗೆ ಸರಿಕಂಡದ್ದನ್ನು ಮಾಡುತ್ತಾ, ತನಗಿಷ್ಟವಾದ ಬದುಕು ಬದುಕುವ, ಸರಳಾತಿಸರಳ ಜೀವನ ಶೈಲಿಯ ಸತ್ಯ ನಮಗೆಲ್ಲಾ ಒಂದುರೀತಿ ಅಸೂಯೆ ಹುಟ್ಟಿಸಿದ್ದ ವ್ಯಕ್ತಿ. ಈ ಸಿನಿಮಾ-ನಾಟಕಗಳ ಗೀಳಿಗೆ ಹತ್ತಿಕೊಂಡಂತೆ ಬಂದಿದ್ದ ಮತ್ತೊಂದು ಗೀಳು ಪುಸ್ತಕಗಳದು. ನಾವೆಲ್ಲಾ ಬೇಜಾರಾದಾಗ TV, ಸಿನೆಮಾ ನೋಡಿದರೆ ಈ ಮನುಷ್ಯ ಸುಳಿಯುತ್ತಿದ್ದುದು ಪುಸ್ತಕದ ಅಂಗಡಿಗಳ ಮುಂದೆ. ಊರಲ್ಲಿ ಎಲ್ಲಿ ಪುಸ್ತಕ ಮೇಳವಾದರೆ ಅಲ್ಲಿ ಸತ್ಯ ಹಾಜರು, ಕೈಗೊಂದು ಐದೋ ಆರೋ ಪುಸ್ತಕ ಖರೀದಿಸಿದ್ದೇ ಸೈ. ಕೊಳ್ಳಲು ಸೆಕೆಂಡ್ ಹ್ಯಾಂಡ್, ಫಸ್ಟ್ ಹ್ಯಾಂಡ್, ಅಗ್ಗ, ದುಬಾರಿಯ ಪ್ರಶ್ನೆ ಬರುತ್ತಲೇ ಇರಲಿಲ್ಲ. ಪುಸ್ತಕ ಅಪರೂಪದ್ದಾದರೆ, ಮೌಲಿಕವಾದದ್ದಾದರೆ ಅದು ಮನೆ ಸೇರಲೇಬೇಕು; ಪುಸ್ತಕದ ಆಯ್ಕೆಯಲ್ಲಿ, ಆಟದ ಸಾಮಾನು ಆಯ್ದುಕೊಳ್ಳುವ ಹುಡುಗನ ತನ್ಮಯತೆ ಇರುತ್ತಿತ್ತು. ತಂದದ್ದು ಅಲಂಕಾರಕ್ಕಲ್ಲ, ಮುಂದೆರಡು ಮೂರು ದಿನ ಪಟ್ಟು ಹಿಡಿದು ಅದನ್ನು ಓದಿ ಮುಗಿಸಬೇಕು. ಬಹಳಷ್ಟು ಪುಸ್ತಕಗಳನ್ನು ಪುಸ್ತಕಮೇಳಗಳಲ್ಲೇ ಖರೀದಿಸುತ್ತಿದ್ದುದರಿಂದ, ಅದರಲ್ಲಿ ಬಹಳಷ್ಟು "ಭಾರಿ" ಪುಸ್ತಕಗಳೇ ಆದ್ದರಿಂದ ಇದೊಂದು ದುಬಾರಿ ಹವ್ಯಾಸವಾಗಿ ಪರಿಣಮಿಸಿತ್ತು. ಇವತ್ತು ಒಂದು ನೂರು ರುಪಾಯಿ ಉಳಿದರೆ ಒಂದು ಪುಸ್ತಕ್ಕಾದರೂ ಆಗುತ್ತದೆ ಎಂದು ಯೋಚಿಸುತಿದ್ದ ಸತ್ಯ, ಗಳಿಸಿದ, ಉಳಿಸಿದ ಹಣವನ್ನೆಲ್ಲಾ ಪುಸ್ತಕ ಕೊಳ್ಳಲು ಸುರಿಯುತ್ತಿದ್ದರು. ಹೀಗಾಗಿ ಈ ಪುಟ್ಟ ಲೈಬ್ರರಿ ಕೇವಲ ಲೈಬ್ರರಿ ಆಗಿರದೆ ಅವರ ವ್ಯಕ್ತಿತ್ವದ ಒಂದು ಭಾಗವಾಗಿತ್ತು. ಸುಮಾರು ೨೫೦೦ ಪುಸ್ತಕಗಳಿರುವ ಆ ಲೈಬ್ರರಿಯಲ್ಲಿ ಒಂದೊಂದು ಪುಸ್ತಕವೂ ಎಲ್ಲೆಲ್ಲಿ ಇದೆ, ಯಾವಾಗ ಕೊಂಡದ್ದು, ಅದರ ಹೂರಣವೇನು, ಯಾವ ಪುಸ್ತಕದ ಅಟ್ಟೆ ಎಲ್ಲಿ, ಯಾವಾಗ, ಏಕೆ ಹರಿದಿದೆ ಇತ್ಯಾದಿ ವಿವರಗಳನ್ನೆಲ್ಲಾ ಕರಾರುವಾಕ್ಕಾಗಿ ತಿಳಿಸಬಲ್ಲಷ್ಟು ತಾದಾತ್ಮ್ಯ ಸಿದ್ಧಿಸಿತ್ತು ಆ ಪುಸ್ತಕಗಳ ಜೊತೆ. ಬಂದವರೆದುರು ಈ ಸಂಗ್ರಹವನ್ನು ಪ್ರದರ್ಶಿಸುವುದೇ ಹೆಮ್ಮೆ. ಅದು ನಿಜ ಕೂಡ. Afterall, the collection was an owner's pride.

ಇಂಥಾ ಮನುಷ್ಯ ತಾನು ಕಟ್ಟಿ ಬೆಳೆಸಿದ ಈ ಪುಟ್ಟ ಭಂಡಾರವನ್ನು ಮಾರಿಬಿಡಬೇಕೆಂದರೆ, ಬಂದಿರುವ ತುರ್ತು ಸಾಕಷ್ಟು serious ಆಗಿರಲೇ ಬೇಕೆನ್ನಿಸಿತು. ಈ ವೈಯಕ್ತಿಕ ಪ್ರಶ್ನೆಯನ್ನು ನಾನು ಕೇಳದಿದ್ದರೂ, ಅವರು ತಮ್ಮದೇ ಆಗಿ ಉಳಿದಿದ್ದ ಈ ಏಕಮಾತ್ರ "ಆಸ್ತಿ"ಯನ್ನು ಮಾರಿಬಿಡುವ ನಿರ್ಧಾರಕ್ಕೆ ಬರುವ ಮುನ್ನ ಸುಮಾರು ಎರಡು ತಿಂಗಳ ಕಾಲ ತೊಳಲಾಟವನ್ನನುಭವಿಸಿದ್ದರೆನ್ನುವುದು ತಿಳಿಯುತ್ತಿತ್ತು. ಬಂದ ಕುತ್ತು ಕ್ಷಣಿಕವೇ ಇರಬಹುದು, ಸ್ವಲ್ಪ ಉಸಿರು ಕಟ್ಟಿ ತಡೆದರೆ ಆ ಕುತ್ತು ಹೊರಟುಹೋಗಬಹುದು, ಆದರೆ ಇದು ಮಾತ್ರ ಖಂಡಿತ ಆಗಬಾರದು, ಏಕೆಂದರೆ ಇದು ವ್ಯಕ್ತಿತ್ವದ ಒಂದು ಭಾಗ, ಐಹಿಕ ಸಮಸ್ಯೆಗಳಿಗೋಸ್ಕರ ಮಾರಿಕೊಳ್ಳುವುದಲ್ಲ. ತಾತ್ಕಾಲಿಕವಾಗಿಯಾದರೂ ಏನಾದರೂ ಮಾಡಿ, ಈ ಪುಸ್ತಕಭಂಡಾರವನ್ನು ಉಳಿಸಿಕೊಡಲು ಸಾಧ್ಯವೇ ಇತ್ಯಾದಿ ಯೋಚಿಸಿದೆ. ಆದರೆ ನಾವು ಯಾರೂ ಏನೂ ಮಾಡಲು ಸಾಧ್ಯವಾಗದಷ್ಟು ದೊಡ್ಡದಿತ್ತು ಅವರ ಆರ್ಥಿಕ ಅಗತ್ಯಗಳು; ಮತ್ತೂ ಈ ಲೈಬ್ರರಿಯ ಮಾರಾಟ ಕೂಡ ಅವರ ಇಡೀ ಅಗತ್ಯದಲ್ಲಿ ಕೇವಲ ತುರ್ತಿನ ಅಗತ್ಯಗಳಿಗೆ ಮಾತ್ರ ಸರಿಹೊಂದುವಂತಿತ್ತು. ಲೈಬ್ರರಿ ಮಾರದೆ ಬೇರೆ ದಾರಿಯೇ ಇರಲಿಲ್ಲ. ನಾನು ಇಷ್ಟೆಲ್ಲಾ ಚಿಂತಿಸುತ್ತಿರುವಾಗ ಸತ್ಯ ಹೇಳಿದ ಮಾತು ಇದು. "ನೀವಿರುವ ಈ ಪರಿಸ್ಥಿತಿಯಲ್ಲಿ ಈ ಲೈಬ್ರರಿ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಗೊತ್ತು, ಆದರೆ ನಾನು ನಿಮ್ಮನ್ನು ಕೇಳುತ್ತಿರುವುದು ಈ ಬಗ್ಗೆ ಬರೆಯಿರಿ ಅಂತ ಮಾತ್ರ. ನನಗೆ ಗೊತ್ತು, ನನ್ನಷ್ಟೇ ಹುಚ್ಚರು ಯಾವಯಾವುದೋ ಮೂಲೆಯಲ್ಲಿ ಬಹಳಷ್ಟು ಜನ ಇರುತ್ತಾರೆ, ಅವರೊಂದಿಗೆ ಸಂಪರ್ಕ ಸಾಧಿಸುವುದು ಮಾತ್ರ ನಮ್ಮ ಸಧ್ಯದ ಕೆಲಸ; ನಿಮಗೂ ನನ್ನಂಥದೇ ಆಸಕ್ತಿಯಿರುವುದರಿಂದ ನಿಮ್ಮ ಮಿತ್ರರ ಗುಂಪಿನಲ್ಲಿ ಖಂಡಿತಾ ಸಮಾನ ವ್ಯಸನಿಗಳು ಇದ್ದಾರು ಎನ್ನುವುದು ನನ್ನ ನಂಬಿಕೆ"
ನನಗೆ ಹೌದೆನ್ನಿಸಿತು.

ಇನ್ನು ನೇರ ವ್ಯವಹಾರಕ್ಕೆ. ಪ್ರಾಚೀನ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ, ಪಾಶ್ಚಾತ್ಯದಿಂದ ಪೌರ್ವಾತ್ಯದವರೆಗೆ, ಕಾವ್ಯ, ನಾಟಕ, ಇತಿಹಾಸ, ಆಧ್ಯಾತ್ಮ, ವಿಜ್ಞಾನ, ಕಲೆ, ರಂಗಭೂಮಿ ಹೀಗೆ ಹತ್ತು ಹಲವು ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಈ ಲೈಬ್ರರಿಗೆ ಅವರು ನಿರೀಕ್ಷಿಸುವ ಒಟ್ಟಂದದ ಬೆಲೆ ಎರಡು ಲಕ್ಷ ರುಪಾಯಿಗಳು (ಸರಾಸರಿ ಪುಸ್ತಕವೊಂದಕ್ಕೆ ೮೦ ರುಪಾಯಿಗಳು). ಪುಸ್ತಕವೊಂದರ ಮೌಲ್ಯ ಯಾವಾಗಲೂ ಅದರ ಮುಖಬೆಲೆಗಿಂತ ಬಹು ಹೆಚ್ಚಿನದು, ಮತ್ತು ಒಂದೊಂದು ಪುಸ್ತಕಗಳ ಬೆಲೆಯ ಮೊತ್ತಕ್ಕಿಂತಾ ಇಡೀ ಪುಸ್ತಕ ಭಂಡಾರದ "ಸಂಗ್ರಹ" ಹೆಚ್ಚು ಬೆಲೆ ಬಾಳುವಂಥದ್ದು ಎಂಬುದು ಯಾವುದೇ ಪುಸ್ತಕಪ್ರೇಮಿಗೆ ತಿಳಿದ ವಿಷಯ. ಮಾರಾಟಕ್ಕಿರುವುದು ಇಡೀ ಲೈಬ್ರರಿಯೇ ಹೊರತು individual ಪುಸ್ತಕಗಳಲ್ಲ. ಒಬ್ಬ ವ್ಯಕ್ತಿ, ಅಲ್ಲದಿದ್ದರೆ ಒಂದು ಗುಂಪು ಕೂಡ ಇದನ್ನು ಖರೀದಿಸಬಹುದು, ಆದರೆ ಇಡೀ ಲೈಬ್ರರಿಯನ್ನು ಒಟ್ಟಿಗೆ ಖರೀದಿಸಬೇಕೆನ್ನುವುದಷ್ಟೇ ಷರತ್ತು, ಇಲ್ಲವೆಂದರೆ ಅದು ತಮ್ಮ ಹಣಕಾಸಿನ ಅಗತ್ಯವನ್ನು ಪೂರೈಸದು, ಹಾಗೂ ಪುಸ್ತಕಗಳನ್ನು ಹರಿದು ಹಂಚುವುದು ಭಾವನಾತ್ಮಕವಾಗಿ ನೋವಿನ ವಿಷಯ ಎಂದು ಅವರ ಅಭಿಪ್ರಾಯ. ಹಾಗೂ ಕೊಂಡವರು ಕೂಡ ಆ ಸಂಗ್ರಹವನ್ನು ಹಾಗೆಯೇ ನೋಡಿಕೊಂಡಾರೆನ್ನುವುದು ಆಶಯ ಕೂಡ.

ಪುಸ್ತಕ ಸಂಗ್ರಹದ ಕೆಲವು ಚಿತ್ರಗಳು http://picasaweb.google.co.in/ksmanjunatha/SatyaLibrary# ಇಲ್ಲಿವೆ.

ಆಸಕ್ತರು ಸತ್ಯನಾರಾಯಣರನ್ನು ನೇರವಾಗಿ ಸಂಪರ್ಕಿಸಬಹುದು ಮತ್ತು ಬೆಂಗಳೂರಿನಲ್ಲಿರುವ ಅವರ ಮನೆಗೆ ಭೇಟಿನೀಡಿ ಪುಸ್ತಕ ಸಂಗ್ರಹವನ್ನು ನೋಡಬಹುದು. ಅವರ ಮೊಬೈಲ್ ಸಂಖ್ಯೆ + ೯೧ ೯೪೪೮೭ ೦೩೮೬೪ (+ 91 94487 03864)

ಪುಸ್ತಕ ಸಂಗ್ರಹವನ್ನು ಮಾರುವ ನಿರ್ಧಾರವೇ ನೋವಿನ ನಿರ್ಧಾರ; ಕೊನೆಯ ಪಕ್ಷ ಅದನ್ನು ಮಾರುವ ಪ್ರಕ್ರಿಯೆ ಹೆಚ್ಚು ನೋವಿಲ್ಲದೆಯೇ ನಡೆಯಲೆಂಬುದು ವೈಯಕ್ತಿಕವಾಗಿ ನನ್ನ ಹಾರೈಕೆ. ಏಕೆಂದರೆ ಇದು ಕೇವಲ ಲೈಬ್ರರಿಯೊಂದನ್ನು ಮಾರುವ/ಕೊಳ್ಳುವ ಪ್ರಶ್ನೆಯಲ್ಲ, ಬದಲಿಗೆ ಜೀವನ ಶೈಲಿ/ಮೌಲ್ಯವೊಂದರ ಬಗೆಗಿನ ನಂಬಿಕೆಯ ಪ್ರಶ್ನೆ. ವ್ಯಕ್ತಿಯೊಬ್ಬ materialistic ಆಯಾಮಗಳಿಲ್ಲದೆಯೂ ಆತ್ಮಸಂತೋಷಕ್ಕೋಸ್ಕರವೇ ಬದುಕಬಹುದು ಎಂಬ ನಂಬಿಕೆಗೆ ಪೆಟ್ಟಾಗುವುದಾದರೆ ಅಂಥಾ ಜೀವನಶೈಲಿಯ ಬಗ್ಗೆ ನಾವು ಪುಟಗಟ್ಟಲೆ ಬರೆಯುವುದು, ವರ್ಷಗಟ್ಟಲೆ ಕನಸುವುದು ಎಲ್ಲ ವ್ಯರ್ಥವೆಂದೇ ನನ್ನ ನಂಬಿಕೆ.

Saturday, September 13, 2008

ತನ್ನಂತೆ ಪರರ ಬಗೆವೊಡೆ...

ಆವೊತ್ತು ಮುಸ್ಸಂಜೆ ನಸುಗತ್ತಲಲ್ಲಿ ಹಾಗೆ ಹಿಂದಿನಿಂದ ಬಂದು ಪ್ರಾಣಾಂತಿಕವಾಗಿ ಕೊರಳನ್ನು ಅಮುಕಿ ಹಿಡಿದು ಚೂರಿಯಿಂದ ತೊಡೆಯಿರಿದು ಓಡಿದ ಅವನಿಗೆ ನಾನಾರೆಂದು ಗೊತ್ತಿತ್ತೇ? ಇರಲಿಕ್ಕಿಲ್ಲ. ಇವತ್ತು ಪೋಲೀಸರೆದುರಿಗೆ ನನಗೆ ಅವನನ್ನು ಹೇಗೆ ಗುರುತಿಸಲು ಆಗುತ್ತಿಲ್ಲವೋ ಹಾಗೆ ಅವನಿಗೂ ನನ್ನನ್ನು ಗುರುತಿಸಲು ಆಗಿರಲಿಕ್ಕಿಲ್ಲ. ವ್ಯಾವಹಾರಿಕವಾಗಿ ನಾವು "ಶತ್ರು"ಗಳು, ಒಬ್ಬರನ್ನೊಬ್ಬರು ಕಾಣದ ಅಜ್ಞಾತ ಶತ್ರುಗಳು. ಆ ದೃಷ್ಟಿಯಿಂದ ಗುರುತಿಸಲಾಗದಿರುವುದು ಪರಸ್ಪರರಿಗೆ ಒಳ್ಳೆಯದೇ ಸೈ.
ಅವತ್ತು ಅವನಿಗೆ ನನ್ನಿಂದ ಬೇಕಾಗಿದ್ದೆಲ್ಲ ಹಣವೊಂದೇ; ನಾನು ಕಳೆದುಕೊಂಡೂ ಅವನಿಗೆ ಉಪಯೋಗವಾಗಬಹುದಾದದ್ದು ಅದೊಂದೇ ನನ್ನ ಬಳಿಯಿದ್ದದ್ದು, ಜುಜುಬಿ ಹಣ. ಬಹುಶಃ ಸುಮ್ಮನೆ ಕೇಳಿದ್ದರೆ ಕೊಟ್ಟುಬಿಡುತ್ತಿದ್ದೆನೇನೋ (?!). ಅಷ್ಟಕ್ಕೋಸ್ಕರ ಆತ ಅಮುಕಿ ಬಿಸಾಕಿದ್ದು ನನ್ನ ದನಿ, ಅದರಲ್ಲಿದ್ದ ಬನಿ! ಮತ್ತೆಂದೂ ಮೊದಲಿನಂತೆ ಹಾಡಲು ಸಾಧ್ಯವಿಲ್ಲವೇನೋ ಅನ್ನುವ ಭಯ ಬಿತ್ತಿ ಓಡಿಹೋದವನಿಗೆ ಅದರ ಬೆಲೆ ಗೊತ್ತಿತ್ತೇ?


ಬೆಂಗಳೂರಿನಲ್ಲಿ ನೂರು ಇನ್ನೂರು ರುಪಾಯಿಗೆಲ್ಲಾ ಕೊಲೆ ನೆಡೆಯುವ ಬಗ್ಗೆ ಕೇಳಿದ್ದೇವೆ; ಜೀವದ ಬೆಲೆ ಹೋಗಲಿ, ಕೊಲೆಗಾರ ತೆಗೆದುಕೊಳ್ಳುವ riskನ ಬೆಲೆ ಇಷ್ಟೇನೇ? ಬೇರೆಲ್ಲೆಡೆ ಕಾಣುವಂತೆ ಇಲ್ಲೂ ಮೌಲ್ಯಗಳು ತಳಕಂಡಿದೆ ಅನ್ನಲೇಬೇಕು. ತೀರ ನೆನ್ನೆ ಮೊನ್ನಿನ ಕಳ್ಳ/ಕೊಲೆಗಾರ ಕೂಡ ಕೊನೆಯ ಪಕ್ಷ ಆ ಸ್ಥೂಲ cost & benefit ಲೆಕ್ಕಾಚಾರವಾದರೂ ಹಾಕುತ್ತಿದ್ದನೆಂದು ಕಾಣುತ್ತದೆ. ಇವತ್ತು ಅದಿಲ್ಲ. ಜುಜುಬಿ ಇನ್ನೂರು ರುಪಾಯಿಗೆ ಒಬ್ಬನ ತಲೆ ಒಡೆಯವಷ್ಟು ದೊಡ್ಡ ಸಾಹಸ ಮಾಡಬೇಕೆಂದರೆ, ತಲೆಯೊಡೆಯುವ ಜೀವನವೂ ಅದೆಷ್ಟು ದುರ್ಭರವಲ್ಲವೇ?


ಯಾವುದೇ ಒಂದು ಕಾಯಕ ದಂಧೆಯಾಗಿ ಬೆಳೆಯಬೇಕೆಂದರೆ ಅದಕ್ಕೆ ವಿಶೇಷ ಪರಿಣತಿ, ತರಬೇತಿ ಬೇಕು! ಇವತ್ತು ಕ್ರೈಂ ಡೈರಿ, ಕ್ರೈಂ ಸ್ಟೋರಿ ಗಳಂಥ ತಲೆ ಮಾಸಿದ ಬೇಜವಾಬ್ದಾರಿ ಸೀರಿಯಲ್ಲುಗಳಾಗಲಿ ಓಂ ನಿಂದ ಹಿಡಿದು ಮಾದೇಶನ ವರೆಗೆ ಸಾಲು ಸಾಲಾಗಿ ಬರುತ್ತಿರುವ ರೌಡಿ ಪೂಜಕ ಸಿನಿಮಾಗಳಾಗಲಿ, ಅದನ್ನು ಕ್ಯೂ ಕಾದು ಬಾಯಿ ಚಪ್ಪರಿಸಿಕೊಂಡು ಸಾವಿರಗಟ್ಟಲೆ ಜನ ನೋಡುವುದು ನೋಡಿದರೆ ನಾವೆಲ್ಲಿ ಸಾಗುತ್ತಿದ್ದೇವೆ ಎಂದು ಭಯವಾಗುತ್ತದೆ. ಕೊಲೆ ಮಾಡಲು ಬೇಕಾದ್ದು ಬಹುಶಃ ಎರಡೇ: ಒಂದು, ರಕ್ತ ಮಾಂಸ ಚೆಲ್ಲಾಡಿದರೂ ಏನೂ ಅನ್ನಿಸದ insensitivity; ಎರಡು, ಕೊಲೆ ಮಾಡುವ urge (ಅದು ಅಗತ್ಯಕ್ಕಿರಬಹುದು, ಶೋಕಿಗಿರಬಹುದು!). ಇದೆರಡನ್ನೂ ದಂಡಿಯಾಗಿ ದಯಪಾಲಿಸುತ್ತವೆ, ಮೇಲೆ ಹೇಳಿದ "ಮನರಂಜನೆ"ಗಳು. ಒಬ್ಬಿಬ್ಬರು ರೌಡಿತನ ಮಾಡಿದರೆ ನಿಭಾಯಿಸಬಹುದು, ಆದರೆ ಅದೇ ಸರ್ವ ಮಾನ್ಯ ಮೌಲ್ಯವಾಗಿಬಿಟ್ಟರೆ?


ಒಂದುಕಡೆ ಇದನ್ನೇ ದಿನದಿನವೂ ಸಿನಿಮಾ ಟಿವಿಗಳಲ್ಲಿ ನೋಡಿ ಸ್ಪಂದಿಸುವುದನ್ನೇ ನಿಲ್ಲಿಸಿದ ನಾವು, ಇನ್ನೊಂದುಕಡೆ ಅದನ್ನು ದಿನದಿನವೂ ನೋಡಿ ಸ್ಪೂರ್ತಿಗೊಳ್ಳುವ ಪುಂಡ ಹುಡುಗರ ಪಡೆ! ಎಲ್ಲೋ ನಡೆದ ಭೀಕರ ಕೊಲೆ ಕೂಡ ಪತ್ರಿಕೆಯ "ಅಪರಾಧ ಸುದ್ದಿಯ" ಒಂದು ಮೂಲೆ ಬರಹವಾಗುತ್ತದೆ, ಅದೇ ತೆರೆಯಮೇಲಿನ ದೃಶ್ಯವೈಭವವಾಗುತ್ತದೆ ಕೂಡ. ತೆರೆಯ ಮೇಲೆ ನಾಯಕ ನಾಯಕಿಯ ತುಟಿ ಹಿಡಿದು ಮುತ್ತಿಟ್ಟೊಡನೆ ತಲೆಯೇ ಬಿದ್ದುಹೋದಂತೆ ಬೊಬ್ಬಿಡುವ so called ಸಮಾಜ ಸುಧಾರಕರು, ದೃಶ್ಯದ ಹಿಂದು-ಮುಂದಿನ ಹತ್ತು frameಗಳ ಮೇಲೆ ಕತ್ತರಿಯಾಡಿಸಿ ಕೈ ತೊಳೆದುಕೊಳ್ಳುವ censor ಮಂಡಲಿ, ಸಮಾಜದ ಸ್ವಾಸ್ಥ್ಯ ಕಾಯಬೇಕಾದ ಇಂಥ ಹತ್ತು ಹಲವು agencyಗಳು ಈ ತೆರೆಯ ಮೇಲಿನ ಹಿಂಸೆ-ಅತಿರಂಜಕತೆಯ ವಿಷಯದಲ್ಲಿ ಮಾತ್ರ ಅದಾವ ಕತ್ತೆಯನ್ನು ಕಾಯುತ್ತಿವೆಯೋ ಕಾಣೆ!

******

ಮತ್ತೊಂದು ಚಿತ್ರ. ಕುತ್ತಿಗೆಯಲ್ಲಿ ಉಸಿರು ಸಿಕ್ಕಿಸುವ ಊತ, ತೊಡೆ ಇಷ್ಟುದ್ದ ಹಿಸಿದು ಧಾರಾಳ ರಕ್ತ ಸುರಿಸುತ್ತ ಪೋಲೀಸು ಠಾಣೆಗೆ ಬಂದವನಿಗೆ ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸುವ ಕ್ರಮ ಕಾನೂನು ಕಟ್ಟಳೆಗಳಲ್ಲಿಲ್ಲವೇನೋ! ಬದಲಿಗೆ ಕಂಪ್ಲೇಂಟು, ಸ್ಪಾಟ್ ಇನ್ಸ್ಪೆಕ್ಷನ್ (ಎರಡೆರಡು ಬಾರಿ) ಇತ್ಯಾದಿ ಉಪದ್ವ್ಯಾಪಗಳಲ್ಲಿ ಈಡುಪಟ್ಟು ಕರ್ತವ್ಯ ತತ್ಪರತೆ ಮೆರೆವ ಪೋಲೀಸರು, procedure ಪ್ರಕಾರ ಅಳೆದೂ ಸುರಿದೂ, (ಸುರಿವ ಗಾಯವನ್ನು ಅಳೆದು ಆರಿಂಚು ಉದ್ದ ಅರ್ಧ ಇಂಚು ಆಳ ಎಂದು FIR ಬರೆದು), ಪ್ರಥಮ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ರಾತ್ರೆ ಹನ್ನೊಂದು. ಇಡೀ ಆರಿಂಚಿನ ಗಾಯ ಹೆಪ್ಪುಗಟ್ಟಿ ಪ್ರಕೃತಿಸಹಜವಾದ healing process ಆಗಲೇ ಶುರುವಾಗಿತ್ತು!

******

ಇನ್ನೊಂದು. ವಿಕ್ಟೋರಿಯಾ ಆಸ್ಪತ್ರೆ "ತುರ್ತು" ಚಿಕಿತ್ಸಾ ವಿಭಾಗ. ನಾವು ಹೋಗುವ ಹೊತ್ತಿಗೆ ಇನ್ನೂ ಹತ್ತು ನಿಜಕ್ಕೂ ತುರ್ತು ಕೇಸುಗಳು ಕ್ಯೂ ನಲ್ಲಿ ಕಾಯುತ್ತಿದ್ದವು, ಸಾಲಾಗಿ ನಿಂತ ಸ್ಟ್ರೆಚರುಗಳಲ್ಲಿ ಮಲಗಿ ನರಳುತ್ತಾ. ಒಬ್ಬನಿಗೆ ಲಾಂಗಿನಲ್ಲಿ ಸೊಂಟವನ್ನು ಕೊಚ್ಚಲಾಗಿತ್ತು; ಮತ್ತೊಬ್ಬನ ತಲೆ ಒಡೆದು ಒಳಗಿನ ಹೂರಣ ಹೊರಗಿಣುಕುತ್ತಿತ್ತು; ಮತ್ತೊಬ್ಬನ ಕಿವಿಯಿಂದ ಧಾರಾಕಾರ ರಕ್ತ ಹರಿಯುತ್ತಿತ್ತು. "ಬನ್ನಿ ಸಾರ್, ಇವತ್ತು week-end ಅಲ್ವಾ, assault ಕೇಸುಗಳು ಸ್ವಲ್ಪ ಜಾಸ್ತಿ ರಿಪೋರ್ಟ್ ಆಗವೆ, ನೀವು ಸ್ವಲ್ಪ ಕಾಯಬೇಕಾತದೆ" ಎಂದು ಸ್ವಾಗತಿಸಿದ ಪೋಲೀಸಪ್ಪನಿಗೆ ಪ್ರತಿ ನಮಿಸಿ ಹೋಗಿ ಅಲ್ಲೇ ಬೆಂಚಿನ ಮೇಲೆ ಕುಂತೆ. ಅಲ್ಲಿದ್ದ emergency ಕೇಸುಗಳಲ್ಲೆಲ್ಲಾ ಆರಾಮವಾಗಿ ನಡೆದುಕೊಂಡು ಬಂದಿದ್ದ ಕೇಸು ಇದೊಂದೇ, ಆತ್ಮ.

ಕಾಯುತ್ತಾ ಕೂತಿದ್ದಂತೆಯೇ ಅಲ್ಲಿ ಸ್ಟ್ರೆಚರುಗಳ ಮೇಲೆ ಮಲಗಿದ್ದ ಎರಡು ಕೇಸುಗಳ ಹೆಂಡಿರ ನಡುವೆ ಮಾತು ಹತ್ತಿತು. ನಂತರ ಕೈ ಕೈ ಹತ್ತಿತು. ಹೀಗೆ ಹತ್ತಿದ ಒಂದು ಕೈ ಮೇಲಾಗಿ ಇನ್ನೊಂದರ ತಲೆ ಜುಟ್ಟು ಹಿಡಿದದ್ದೇ ಆ ಕಲ್ಲಾಸ್ಪತ್ರೆಯ ಗೋಡೆಗೆ, ಕ್ಷಮಿಸಿ, ಆಸ್ಪತ್ರೆಯ ಕಲ್ಲು ಗೋಡೆಗೆ ಜಪ್ಪಿಸಿತು. ಹನ್ನೊಂದನೇ ಕೇಸು ತನಗಾಗಿ ರೆಡಿಯಾಗಿದ್ದ ಸ್ಟ್ರೆಚ್ಚರ್ ಮೇಲೆ ಮಲಗಿ ನರಳುತ್ತಾ ಕಾಯತೊಡಗಿತು.
ನಾವು ಕಾಯುತ್ತಲೇ ಹೋದೆವು. ಹತ್ತಾರು ಪೋಲೀಸರು ಅವರವರ "ಕೇಸು"ಗಳನ್ನು ಹಿಡಿದುಕೊಂಡು ಬಂದಿದ್ದರು; ಕೆಲವು ಕೇಸುಗಳಿಗೆ ಚೈನು, ಕೆಲವಕ್ಕೆ ಬೇಡಿ, ಖೈದಿಯಲ್ಲದೆ ಕೇವಲ ಫಿರ್ಯಾದಿಯಾಗಿದ್ದ ಕೇಸುಗಳಿಗೆ ಮಾತ್ರ ಈ ಮರ್ಯಾದೆಯಿಲ್ಲ. ಸುಮಾರು ಒಂದು ಗಂಟೆ ಕಾದು ಸುಸ್ತಾದ ಮೇಲೆ "ಸಾರ್, ಇಲ್ಲಿ ವ್ಯವಸ್ಥೆಯೇ ಹೀಗೆ, ಹೀಗೆ ಕೂತರೆ ಮುಗಿಯೊಲ್ಲ. ನಾವು O.T. ಒಳಗೇ ಹೋಗಿ ಕಾಯುವುದು ವಾಸಿ" ಎಂದ ನನ್ನ ಪೋಲಿಸು ಪೇದೆಯ ಸಲಹೆಯ ಮೇರೆಗೆ ಒಳಗೆ ಹೋದದ್ದಾಯಿತು.

ಸಾಕ್ಷಾತ್ ಧರ್ಮರಾಯನಿಗೆ ಅವನು ತಪ್ಪಿ ಒಂದು ಸುಳ್ಳು ಹೇಳಿದ್ದಕ್ಕಾಗಿ ಕ್ಷಣಮಾತ್ರದ ನರಕದರ್ಶನವಾಯಿತಂತೆ. ದಿನದಿನವೂ ಸುಳ್ಳನ್ನೇ ತಿಂದು ಸುಳ್ಳನ್ನೇ ಕುಡಿದು ಸುಳ್ಳನ್ನೇ ಉಸಿರಾಡಿ ಬದುಕುವ ನಮಗೆ ಕೆಲವು ಗಂಟೆಗಳಾದರೂ ನರಕದರ್ಶನವಾದರೆ ಅಚ್ಚರಿಯೇನಿಲ್ಲ. ಆದರೆ ಆ ದರ್ಶನಭಾಗ್ಯಕ್ಕೆ ಸಾಯುವವರೆಗೂ ಕಾಯಬೇಕಿಲ್ಲ ಎನ್ನುವುದೊಂದೇ ವ್ಯತ್ಯಾಸ. ಒಳಗೆ ಹೋದರೆ ಅಲ್ಲಿ ಸಾಲಾಗಿರಿಸಿದ್ದ ನಾಲ್ಕೈದು ಆಪರೇಶನ್ ಟೇಬಲ್ಲುಗಳ ಮೇಲೆ ಕೇಸುಗಳನ್ನು "ಹ್ಯಾಂಡಲ್" ಮಾಡುತ್ತಿತ್ತು ಡಾಕ್ಟರು/ಹೌಸ್ ಸರ್ಜನುಗಳ ಮಂದೆ. ಅರ್ಧ ಕತ್ತರಿಸಿದ್ದ ಸೊಂಟವನ್ನು ಹೊಲೆಯುತ್ತಿದ್ದ ದಬ್ಬಳವನ್ನು ತಡೆಯಲಾರದೇ ಬಡುಕೊಳ್ಳುವನೊಬ್ಬ; ಕಿವಿಯೊಳಗೆ ಮುಲಾಜಿಲ್ಲದೆ ಓಡಾಡುವ ಶಸ್ತ್ರದ ದಾಳಿಯನ್ನು ಭರಿಸಲಾಗದೆ ಚೀರಿಡುವನೊಬ್ಬ; ದನ ತಿವಿದು ಹೊಟ್ಟೆಯಿಂದ ಬೆನ್ನಿನವರೆಗೂ ತೂತಾದ ಮುದುಕಿಯೊಬ್ಬಳ ಕರುಳುಪಚ್ಚಿಯನ್ನು ಏನಾದರೂ damage ಇದೆಯೇ ಎಂದು ಬೆಳಕಿಗೆ ಹಿಡಿದು ಪರೀಕ್ಷಿಸಿ ನೋಡಿ ಮತ್ತೆ ಹೊಟ್ಟೆಗೆ ತುರುಕುತ್ತಿದ್ದರೆ ಆ ಕರುಳ ಬಳ್ಳಿಯ ನೋವನ್ನು ತಾಳಲಾರದೇ ಭೋರಿಡುತ್ತಿದ್ದ ಮುದುಕಿ; ಈ ಚಿಕಿತ್ಸೆಯ ಪರಿಯನ್ನು ನೋಡಿಯೇ ಮೂರ್ಛೆ ಹೋದವನೊಬ್ಬ (local anesthesia ಇಲ್ಲದಿದ್ದರೂ ನೋವಿಲ್ಲದೆಯೇ ಚಿಕಿತ್ಸೆ ಪಡೆದ ಪುಣ್ಯವಂತ!).

ನೋವೂ ಕೂಡ ತೀರ ಖಾಸಗಿ ವಿಷಯ, ಪರಸ್ಪರ ಅನುಮತಿಯಿಲ್ಲದೆ, ಅಥವ ಉಪಯೋಗವಿಲ್ಲದೆ ಅದರಲ್ಲಿ ತಲೆ ಹಾಕುವುದು ಸಲ್ಲ ಎಂದು ನಂಬಿಕೊಂಡು ಬದುಕುವವನು ನಾನು. ಆ ದೃಷ್ಟಿಯಿಂದ ರೋಗಿ-ವೈದ್ಯರ ಸಂಬಂಧ ಒಂದು ರೀತಿ confidential ಆದುದು ಎಂದು ನನ್ನ ನಿಲುವು. ಆದರೆ ಇಲ್ಲಿ ಆ "ಖಾಸಗಿ"ತನಕ್ಕೆ ಅರ್ಥವೇ ಇರಲಿಲ್ಲ.

ಕೇಸುಗಳು ಒಂದಾದ ಮೇಲೊಂದು ಬರುತ್ತಿದ್ದುವು, ಸ್ವಲ್ಪ ಹೊತ್ತು ಕಿರುಚಿ-ಅರಚಿ ನಂತರ ಬಟ್ಟೆ ಕಟ್ಟಿಸಿಕೊಂಡು ಎದ್ದು ಹೋಗುತ್ತಿದ್ದುವು. ಆಪರೇಶನ್ ಟೇಬಲ್ ಮೇಲಿನ ರಕ್ತವನ್ನು ಬಟ್ಟೆಯೊಂದು ಒರೆಸುತ್ತಿತ್ತು (ರಸ್ತೆ ಬದಿಯ ಕಾಕಾ ಹೋಟೆಲಿನ ಊಟದ ಟೇಬಲ್ ಒರೆಸುವಂತೆ), ಟೇಬಲು ಮತ್ತೊಂದು ಕೇಸಿಗೆ ರೆಡಿ.

ಆಪರೇಶನ್ನು, ಇಲಾಜು, ಟೇಬಲ್ ಒರೆಸುವುದು, ಮತ್ತೊಂದು ಕೇಸನ್ನು ಮುಟ್ಟುವುದು, prescription ಬರೆಯುವುದು ಎಲ್ಲಕ್ಕೂ ಒಂದೇ ಕೈ, ಶುದ್ಧ ಅನಾಚಾರ! Sterilization, clinical-cleansing ಇತ್ಯಾದಿ ಕ್ರಮಗಳೇನಾದರೂ ನಡೆಯುತ್ತಿದ್ದರೆ ನನ್ನ ಮಂದ ದೃಷ್ಟಿಗಂತೂ ಬೀಳಲಿಲ್ಲ. ಹೀಗೆಯೇ ಆತಂಕ ಪಡುತ್ತಿರುವಾಗ ನನ್ನ ಸರದಿ ಬಂತು. ನನ್ನ ಗಾಯವನ್ನು ಮುಟ್ಟಿ, ಎಳೆದು, ಹಿಸಿದು (of course, ನನ್ನ ಬೇಡಿಕೆಯಂತೆ ಕೈ ತೊಳೆದುಕೊಂಡು, ಗ್ಲೌಸ್ ಧರಿಸಿ) ಪರೀಕ್ಷಿಸಿ ನೋಡಿದ house surgeon ಎಂಬ ಹೆಸರಿನ ಪ್ರಾಣಿ "deep-cut ಆಗಿದೆ, ಹೊಲಿಗೆ ಹಾಕಬೇಕು" ಎಂದಾಗ ಎದೆ ಹಾರಿತು. ಆತ್ಮಹತ್ಯೆಯನ್ನು ಒಪ್ಪುತ್ತೇನೆ, ನನ್ನ ಪ್ರಯತ್ನವನ್ನು ಮೀರಿ ಯಾರಾದರೂ ನನ್ನ ಕೊಲೆ ಮಾಡುವರೆಂದರೆ ಅದನ್ನು ಸೈದ್ಧಾಂತಿಕವಾಗಿಯಾದರೂ ಒಪ್ಪಬಹುದು. ಆದರೆ ಸುಮ್ಮಸುಮ್ಮನೆ ಸೋಂಕಿನ ದಬ್ಬಳದಲ್ಲಿ ಹೊಲಿಸಿಕೊಂಡು ಯಾವುದೋ ಮರಣಾಂತಿಕ ಸೋಂಕು ಹತ್ತಿಸಿಕೊಂಡು ನಿಧಾನವಾಗಿ ಸಾಯುವುದರಲ್ಲಿ ನನಗಂತೂ ನಂಬಿಕೆಯಿಲ್ಲ. ಇಷ್ಟೆಲ್ಲಾ ಹೇಳಿ ದಬಾಯಿಸಿದ ಮೇಲೆ, ನನ್ನ ಸಹಿ ತೆಗೆದುಕೊಂಡು ನನ್ನೇನೂ ಮಾಡದೇ ಸುಮ್ಮನೇ ಬಿಡಲು ಒಪ್ಪಿತು ಪ್ರಾಣಿ. ಆಗಲೇ ಸುರಿದು ಮರಗಟ್ಟಿದ್ದ ಗಾಯವನ್ನು ಅಯೋಡಿನ್-ಟಿಂಕ್ಚರ್ ಹಾಕಿ ತೊಳೆದು ಒಂದು ಬಿಗಿ ಕಟ್ಟು ಹಾಕಿಸಿಕೊಂಡು ಹೊರಬೀಳುವ ಹೊತ್ತಿಗೆ ರಾತ್ರೆ ಒಂದು.

ಪೋಲೀಸು ಠಾಣೆಗೆ ವಾಪಸು ಬಂದಾಗ, ಠಾಣೆಯ ಸೂಚನಾ ಫಲಕದಲ್ಲಿ ರಾರಾಜಿಸುತ್ತಿದ್ದ ಅಪರಾಧಗಳ ಅಂಕಿ-ಅಂಶಗಳಲ್ಲಿ "ಹಲ್ಲೆ-ಡಕಾಯಿತಿ" ಕಲಮಿನಲ್ಲಿ ಒಂದು ಅಂಕಿ ಹೆಚ್ಚಾಗಿತ್ತು; ಮರುದಿನ ದಿನಪತ್ರಿಕೆಯ "ಅಪರಾಧ ಸುದ್ದಿ" ಭಾಗದ ಅಡಿ ಮೂಲೆಯಲ್ಲಿ ಸುದ್ದಿಯೊಂದು ವರದಿಯಾಗಿತ್ತು "ನಗರದ ಸಂಕಟಪುರ ಠಾಣೆ ವ್ಯಾಪ್ತಿಯಲ್ಲಿ ಐಟಿ ಉದ್ಯೋಗಿಯನ್ನು ಅಡ್ಡಗಟ್ಟಿ ಪರ್ಸ್ ಅಪಹರಣ"

ಟಿಪ್ಪಣಿ - 17/05/2020ರಂದು ಸೇರಿಸಿದ್ದು:
ಈ ಲೇಖನ ಬರೆದದ್ದು ಸುಮಾರು ಹನ್ನೆರಡು ವರ್ಷಗಳ ಹಿಂದೆ, ಬಹುಶಃ ಆ ಘಟನೆಯಾಗಿ ಒಂದೆರಡು ತಿಂಗಳಲ್ಲಿ - ಘಟನೆಯ ಆಘಾತ, ದಿಗ್ಭ್ರಮೆಗಳಿನ್ನೂ ಮನಸ್ಸಿನಲ್ಲಿ ಹಸಿಯಾಗಿದ್ದಾಗ. ಗಂಟಲನ್ನು ಬಲವಾಗಿ ಅದುಮಿ ಹಿಡಿದುದರಿಂದ ಗಂಟಲು ಯಾವ ಪರಿ ಇರುಕಿ ಹೋಗಿತ್ತೆಂದರೆ ಒಂದುವಾರ-ಹತ್ತು ದಿನ ಮಾತು ಹೊರಡುವುದಿರಲಿ, ಉಸಿರಾಡುವುದೂ ಪ್ರಯಾಸಕರವಾಗಿತ್ತು. ಕಷ್ಟಪಟ್ಟು ಗುಟ್ಟಾಗಿ ಮಾತಾಡಿದಂತೆ ಆಡುವುದಾಗುತ್ತಿತ್ತು. ಹಾಡುವುದಂತೂ ದೂರವೇ ಉಳಿಯಿತು. ಬದುಕಿನಲ್ಲಿ ಇನ್ನೊಮ್ಮೆ ಹಾಡುತ್ತೇನೋ ಇಲ್ಲವೋ ಎನ್ನುವ ಚಿಂತೆಗೆ ವಾರಗಟ್ಟಲೆ ನಿದ್ದೆಯೇ ಬರುತ್ತಿರಲಿಲ್ಲ. ಈ ಲೇಖನ ಬರೆಯುವ ಹೊತ್ತಿಗೆ ಇನ್ನೂ ಉಡುಗಿದ ದನಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿತ್ತು, ಮಾತಾಡುವುದು ಸರಾಗವಾಗಿತ್ತು ಆದರೆ ಕರ್ಕಶವಾಗಿತ್ತು. ಆ ಮನಸ್ಥಿತಿಯಲ್ಲಿ ಬರೆದದ್ದು ಈ ಲೇಖನ.

ಇಡೀ ಘಟನೆಯನ್ನು ಇವತ್ತು ಅವಲೋಕಿಸಿದರೆ, ಈ ದೂರಕ್ಕೆ, ಮೇಲೆ ನಾನು ವ್ಯಕ್ತಪಡಿಸಿದ ಅನಿಸಿಕೆಗಳು ಅಲ್ಲಲ್ಲಲ್ಲಿ ಸ್ವಲ್ಪ ಕಟುವಾಯಿತೇನೋ ಎನಿಸುತ್ತದೆ - ಅಥವಾ ಅದೇ ಸರಿಯಿರಬಹುದು, ಪೋಲೀಸು ಕೋರ್ಟು ಆಸ್ಪತ್ರೆಗಳ ನನ್ನ ಒಟ್ಟಾರೆ ಅನುಭವ ನನಗಂತೂ ಹಿತಕರವಾಗೇನು ಇರಲಿಲ್ಲ (ಕೆಲವಂಶಗಳನ್ನು ಬಿಟ್ಟರೆ). ಇನ್ನೂ ಹಲವರ ಅನುಭವವೂ ಇದೇ ಆಗಿದ್ದೀತು. ಆದರೂ ಅಲ್ಲಿ ಗಮನಿಸದೇ ಬಿಟ್ಟ ಕೆಲವು ಅಂಶಗಳನ್ನು ಹೇಳದಿದ್ದರೆ ಪ್ರಸ್ತುತ ಸಂದರ್ಭಕ್ಕೆ ಅನ್ಯಾಯವಾದೀತು. ಬರವಣಿಗೆಯ ಹಳಮೆಗೆ ಊನವಾಗದಿರಲೆಂದು ಈಗಿನ ಅನಿಸಿಕೆಯನ್ನು ಈ ಅಡಿಟಿಪ್ಪಣಿಯ ಮೂಲಕ ಪ್ರತ್ಯೇಕವಾಗಿಯೇ ದಾಖಲಿಸಿದ್ದೇನೆ.

ರಕ್ತ ಸುರಿಸುತ್ತಿದ್ದವನನ್ನು ಕರೆದುಕೊಂಡು ಹೋಗಿ ಪ್ರಥಮಚಿಕಿತ್ಸೆ ಕೊಡಿಸದೇ ಪೋಲೀಸರು ಪ್ರೊಸೀಜರುಗಳ ಬಗೆಗೇ ಹೆಚ್ಚಿನ ಗಮನ ಕೊಟ್ಟು ಎರಡೆರಡು ಬಾರಿ ಸ್ಪಾಟ್ ಇನ್ಸ್ಪೆಕ್ಷನ್ನಿಗೆ ಕರೆದುಕೊಂಡು ಹೋದರೆಂದು ಹೇಳಿದೆ. ಈಗ ಹಿಂದಿರುಗಿ ನೋಡಿದರೆ ಅದು ಅಷ್ಟು ದೊಡ್ಡ ವಿಷಯವಲ್ಲವೆನಿಸುತ್ತದೆ. ನಮ್ಮ ನೋವು, ಆಘಾತ, ಗಾಬರಿ ನಮಗೆ ಹೆಚ್ಚು, ಆದರೆ ದಿನರಾತ್ರಿಯಾದರೆ ಎಷ್ಟೆಷ್ಟೋ ಘೋರವಾದ ಅಪರಾಧಗಳನ್ನು ನೋಡುವ ಪೋಲೀಸರಿಗೆ ಇದು ನಿಜಕ್ಕೂ ಏನೇನೂ ಅಲ್ಲ. ಕಣ್ಣಿನಲ್ಲಿ ಹೊಕ್ಕ ದೂಳಿನ ಕಣ ಕಣ್ಣಿಗೆ ದೊಡ್ಡ ಬಂಡೆಯಂತೆಯೇ ಅನ್ನಿಸಬಹುದು, ಆದರೆ ವಾಸ್ತವದಲ್ಲಿ ಅದು ಕೇವಲ ದೂಳಿನ ಕಣವಷ್ಟೇ. ವಾಸ್ತವದಲ್ಲಿ ಅದು ತುರ್ತುಚಿಕಿತ್ಸೆ ಒದಗಿಸಬೇಕಾದ ಮಾರಣಾಂತಿಕವಾದ ಗಾಯವೇನಾಗಿರಲಿಲ್ಲ, ಮೇಲೇ ವಿವರಿಸಿದಂತೆ ಕೇವಲ ಅರ್ಧ ಇಂಚು ಆಳದ ಕಾಟಾಗಿತ್ತಷ್ಟೇ. ಹೀಗಿರುವಾಗ, ಪಿರ್ಯಾದಿ ಮಾತಾಡುವ, ಓಡಾಡುವ, ತೋರಿಸಿ ವಿವರಿಸುವ ಸ್ಥಿತಿಯಲ್ಲಿದ್ದರೆ ಕೂಡಲೇ ಆತನನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ಯುವುದು ದುಷ್ಕರ್ಮಿಗಳನ್ನು ಹಿಡಿಯಲು ಸಹಾಯಕವಾಗಬಹುದು. ಅಕಸ್ಮಾತ್ (ಅಂತಹ ಸಂದರ್ಭಗಳೂ ಇರುತ್ತವೆ) ದುಷ್ಕರ್ಮಿಗಳು ಅಲ್ಲೇ ಎಲ್ಲಾದರೂ ಅಡ್ಡಾಡುತ್ತಿದ್ದರೆ ಹಿಡಿಯುವ ಸಾಧ್ಯತೆಯೂ ಇರುತ್ತದೆ. ನನ್ನನ್ನು ಸ್ಥಳಕ್ಕೆ ಕರೆದೊಯ್ದ ಪೋಲೀಸರು ಸುಮಾರು ಒಂದು ಗಂಟೆಯ ಕಾಲ ಅಲ್ಲಿಲ್ಲಿ ಪತ್ತೆ ತರದೂದು ಮಾಡಿದರು ಕೂಡ. ಅದನ್ನು ಇಲ್ಲಿ ಕಾಣಿಸದಿದ್ದರೆ ಅನ್ಯಾಯವಾದೀತು.

ಇನ್ನು ಆಸ್ಪತ್ರೆಯ ವಿಷಯಕ್ಕೆ ಬಂದರೆ, ಕೆಲವು ಕೇಸುಗಳನ್ನು (ಉದಾಹರಣೆಗೆ ಕರುಳುಪಚ್ಚಿಯಲ್ಲಿ ಏನಾದರೂ ಡ್ಯಾಮೇಜ್ ಇದೆಯೇ ಎಂದು ನೋಡುತ್ತಿದ್ದ ವಿಷಯ) ನಿರ್ವಹಿಸಬೇಕಾದ್ದೇ ಹಾಗೆ ಎಂದು ಅದಾಗಿ ಕೆಲದಿನಗಳನಂತರ ವೈದ್ಯಮಿತ್ರರೊಬ್ಬರು ಹೇಳಿದರು. ಆಮೇಲೆ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಿರಬಹುದು, ನಾನರಿಯೆ. ಆಕೆಯನ್ನೂ ಸೇರಿದಂತೆ ಹಲವರಿಗೆ ಅರಿವಳಿಕೆ ಕೊಟ್ಟಿದ್ದಿರಬಹುದು, (ವಿಪರೀತ ಕಾಯುವಿಕೆಯಿಂದ) ಅದರ ಪ್ರಭಾವ ತಗ್ಗಿದ್ದಿರಬಹುದು (ಅರಿವಳಿಕೆಯ ಪ್ರಭಾವ ತಗ್ಗುವ ಯಾತನೆಯ ಅನುಭವ ಬೇರೆ ಒಂದೆರಡು ಸಂದರ್ಭದಲ್ಲಿ ನನಗೇ ಆಗಿದೆ). ಆದ್ದರಿಂದ ಅರಿವಳಿಕೆಯನ್ನೇ ಕೊಟ್ಟಿರಲಿಲ್ಲವೆಂದು ಹೇಳಲಾರೆ. ಹಾಗೆಯೇ ಸ್ವಚ್ಛತೆಯ ವಿಷಯ. ಅದರ ಕೊರತೆಯೇನೋ ಢಾಳಾಗಿಯೇ ಇತ್ತೆಂಬುದು ಸತ್ಯ, ಆದರೆ ಅದನ್ನು ವೈದ್ಯರು ನಿರ್ಲಕ್ಷ್ಯದಿಂದ ರೋಗಿಗಳ ದೇಹಕ್ಕೆ ರವಾನಿಸುತ್ತಿದ್ದರೆಂದು ಹೇಳುವುದು ಕಷ್ಟ. ಯಾವುದೋ ಮಟ್ಟದ sterilization ಇದ್ದಿರಬೇಕು, ನನ್ನ ಗಮನಕ್ಕೆ ಬಂದಿರಲಾರದು. ಆದರೆ ಆ ವೈದ್ಯವಿದ್ಯಾರ್ಥಿ ನನಗೆ ಹೊಲಿಗೆ ಹಾಕಲು ಬಂದಾಗ ನಾನದನ್ನು ನಿರಾಕರಿಸಿದ್ದು ನೋವಿನ ಭಯಕ್ಕಲ್ಲ, ಸ್ವಚ್ಛತೆಯ ಕಾರಣಕ್ಕೇ ಎಂಬುದನ್ನು ನಾನು ಅವರಿಗೇ ನೇರ ಹೇಳಿದ್ದು ನನಗೆ ಸ್ಪಷ್ಟವಾಗಿ ನೆನಪಿದೆ, ಮತ್ತು ನನ್ನ ಮಾತನ್ನು ಆತ ಅಲ್ಲಗಳೆಯಲೂ ಇಲ್ಲ. ಸುಮ್ಮನೇ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟರು (ಮತ್ತು ಮುಚ್ಚಳಿಕೆಯಲ್ಲಿ ನಾನು ಅದೇ ಕಾರಣವನ್ನೇ ಬರೆದನೆಂದೂ ನೆನಪು).

ಒಟ್ಟಿನಲ್ಲಿ ಹೇಳುವುದಾದರೆ, ಮೇಲಿನ ವಿವರಗಳನ್ನು 'ಕಂಡದ್ದು' ಆಗಷ್ಟೇ ಆಘಾತವನ್ನನುಭವಿಸಿ ಚೇತರಿಸಿಕೊಳ್ಳುತ್ತಿದ್ದ ಕಣ್ಣುಗಳೆಂಬುದನ್ನು ನೆನಪಿನಲ್ಲಿಡಬೇಕು, ಆದ್ದರಿಂದ ಅದರಲ್ಲಿ ಒಂದಿಷ್ಟೇ ಇಷ್ಟು ಉತ್ಪ್ರೇಕ್ಷೆಯೂ ಇದ್ದೀತು. ಆದರೆ ನನಗೆ ಈಗಲೂ ನೆನಪಿನಲ್ಲಿರುವಂತೆ ಮೇಲಿನ ವಿವರಗಳು ಕೂಡಿದ ಮಟ್ಟಿಗೂ ವಾಸ್ತವಕ್ಕೆ ಹತ್ತಿರವಾಗಿವೆಯೆಂದಷ್ಟು ಹೇಳಬಲ್ಲೆ. ಈ ಸಂಸ್ಥೆಗಳೊಡನೆ ನನ್ನ ಆಮೇಲಿನ ಹಲವು ಅನುಭವಗಳೂ ಈ ಭಾವನೆಯನ್ನೇ ದೃಢಪಡಿಸುತ್ತವೆ.

Wednesday, April 30, 2008

ಮೈಸೂರು ಅರಮನೆ - ಹೊಸ ಇತಿಹಾಸ

ಕಳೆದ ವಾರ, ಕಛೇರಿಯ ಕೆಲಸಕ್ಕಾಗಿ ಹೈದರಾಬಾದಿಗೆ ಹೋಗಿದ್ದೆ. ಹಿಂದಿರುಗುವಾಗ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಂಡ "ಐತಿಹಾಸಿಕ ಸ್ಮಾರಕ" ಇದು:


ನಾನು ಆಂಧ್ರಪ್ರದೇಶ ಪ್ರವಾಸೋದ್ಯಮಕ್ಕೆ ಬರೆದ ಈ-ಪತ್ರ:
Dear Sir,
Please see the attached photos of one of your displays at Hyderabad Airport taken on 25th April 2008. This is the picture of the world famous Mysore Palace. But shockingly enough, the caption reads "Tipu Sultan's Palace, Mysore"!!!
I had dropped a complaint in the airport complaint/suggession kiosk, but no response till now. For your information, here is a small piece of details about the said palace:
The construction of this palace was started in 1897 to replace the old palace which was destroyed due to fire.
The regent of Mysore at the time, Queen Kempananjammanni Vanivilasa
Sannidhana
, commissioned a British architect, Henry Irwin, to build yet another palace in its place. The construction was completed in 1912.
Not that the above piece of history may interest you, but this is just to insist that you please stand corrected and immediately remove or correct the display before many more visitors laugh at us.
That the tourism department which is supposed to guide and enlighten the tourists about our rich cultural heritage, forgets (or ignores) the history of just 95 years, is a matter of shame, more so when it is displayed in such a bold manner in front of the whole world !!!
Regards,
Manjunatha.K.S
ಈ ಬಗ್ಗೆ ನಿಮಗೂ ಏನಾದರೂ ಬರೆಯಬೇಕೆನ್ನಿಸಿದರೆ, ಆಂಧ್ರಪ್ರದೇಶ ಪ್ರವಾಸೋದ್ಯಮದ ಈ-ವಿಳಾಸ info@aptourism.in - ಹೆಚ್ಚೇನೂ ಉಪಯೋಗವಾಗದಿದ್ದರೂ, ದೇಶದ ಸಾಂಸ್ಕೃತಿಕ ಸಂಪತ್ತಿನ ವಿಷಯದಲ್ಲಿ ಬಾಯಿಗೆ ಬಂದದ್ದೆಲ್ಲಾ ಬಡಬಡಿಸ-ಬಾರದೆನ್ನುವ ಸಣ್ಣ ಎಚ್ಚರಿಕೆಯಾದರೂ ಸಂಬಂಧಪಟ್ಟವರಿಗೆ ಬಂದೀತೆನ್ನುವ ಆಶೆ.
ಸೂಚನೆ: ಇದಕ್ಕೂ ಸರಿಯಾದ ಈ-ವಿಳಾಸವೇನಾದರೂ ತಮಗೆ ತಿಳಿದಿದ್ದಲ್ಲಿ ನನ್ನೊಡನೆ ಹಂಚಿಕೊಳ್ಳಿ.