Monday, June 11, 2007

ಗೆಳೆತನ

[ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ]

"ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ತಣ್ಣೆಳಲ ತಂಪಿನಲಿ ತಂಗಿರುವೆನು"
ಬಿಳಿಲು ಕಟ್ಟಿಹ ನೆಳಲ ತೊಟ್ಟಿಲಲಿ ತೂಗುತಿರೆ
ಸವಿನಿದ್ದೆ - ಏನೇನೊ ಕನಸುತಿಹೆನು.
ನನ್ನ ನೆಚ್ಚಿನ ಮರದ ತುಂಬೆಲ್ಲ ಹಕ್ಕಿಗಳು
ಜೋಗುಳವ ಹಾಡುತಿರಲೆಷ್ಟು ಸೊಗಸು!

ಹೌದೋ ಮಾರಾಯ
ಆದರೊಂದ ಮರೆತಿಹೆ ನೀನು
(ಕವಿಯ ಮಾತನು ನೆಚ್ಚಿ ಕಣ್ಮುಚ್ಚಿ ಕುಳಿತವನು);
ಮರವೆಂದ ಮೇಲೆ ಹಕ್ಕಿಗಳಂತೆಯೇ ಅಲ್ಲಿ
ಹಾವೂ ಉಂಟು, ಹಲ್ಲಿಯೂ ಉಂಟು.
ಇರುವೆ ಗೆದ್ದಲಿಗಂತು ಲೆಕ್ಕವಿಲ್ಲ.
ಕೂತವನ ಬುಡಕೇ ಗೆದ್ದಲು ಹಿಡಿಯಬಹುದಂತೆ,
ಪುಟಗೋಸಿ ಮರವಿನ್ನು ಯಾವ ಲೆಕ್ಕ?
(ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ)
ನೀನಂತು ನಿದ್ದೆಯಲಿ ಮೈಮರೆತು ಬಿದ್ದಿರಲು
ಬೇರಿಗೇ ಗೆದ್ದಲಂಟಿದ್ದು ಗೊತ್ತಾದೀತಾದರೂ ಹೇಗೆ?

ಬೇರಳಿದ ಮರ ನಿನ್ನ ಮೇಲೇ ಧೊಪ್ಪನೆ ಬಿದ್ದು
ಮರದೊಡನೆಯೀ ನೀನೂ ಅ'ಮರ'ನಾಗುವ ಮುನ್ನ
ಎದ್ದೇಳೋ ಮಹನೀಯ!
ಗೆದ್ದಲ ಬಡಿ,
ಔಷಧ ಹೊಡಿ.

"ಗೆಳೆತನವೆ ಇಹಲೋಕಕಿರುವ ಅಮೃತ
ಅದನುಳಿದರೇನಿಹುದು ಜೀವನ್ಮೃತ"
ಮೃತಿಯನೈದುವ ಮುನ್ನ ಎಚ್ಚೆತ್ತು ಮೈ ಕೊಡಹು,
"ತಸ್ಮಾತ್ ಜಾಗ್ರತ ಜಾಗ್ರತ"

- ೧೬/೦೫/೧೯೯೭