Wednesday, March 31, 2021

(Like+Comment) = Lament

ಇದೊಂದು ವಿಶಿಷ್ಟರೀತಿಯ ಪ್ರಬಂಧ - ಲಲಿತಪ್ರಬಂಧವೇನೋ ಹೌದು (ಯಾವುದನ್ನು ಒರಟರು ಹರಟೆಯೆಂಬ ರೂಕ್ಷನಾಮದಿಂದ ಕರೆಯುತ್ತಾರೋ ಅದು), ಆದರೆ ಸ್ವಲ್ಪ ಟೆಕ್ನಿಕಲ್ ಜಾತಿಯದು.  ಟೆಕ್ನಿಕಲ್ ಏನೆಂದಿರಾ?  ಈ ಪ್ರಬಂಧ ಅರ್ಥವಾಗಬೇಕಾದರೆ ನಿಮಗೆ ಸ್ವಲ್ಪವಾದರೂ ಟೆಕ್ನಾಲಜಿಯ, ಅರ್ಥಾತ್, ಫೇಸ್ಬುಕ್ಕಿನ ಪರಿಚಯವಿರಬೇಕು.  ಫೇಸ್ಬುಕ್ ಯಾವ ಮಹಾ ಟೆಕ್ನಾಲಜಿ ಎಂದು ಮೂಗು ಮುರಿಯಬೇಡಿ, ನೀವೇನೋ ಫೇಸ್ಬುಕ್ಕಿನಲ್ಲಿ 'ಪಂಟ'ರೇ ಇರಬಹುದು.  ಆದರೆ ಕಂಪ್ಯೂಟರಿನ ಪರಿಚಯವೂ ಇರದ 'ರಿಪ್ ವ್ಯಾನ್ ವಿಂಕಲು'ಗಳೂ ಈ ಪ್ರಬಂಧವನ್ನೋದಬಹುದೆಂಬ ಭ್ರಮೆಯಿಂದ ಇದೊಂದು ಪೂರ್ವಸೂಚನೆಯನ್ನು ಕೊಡಬೇಕಾಯಿತು.  ನೋಡಿ, 'ರಿಪ್ ವ್ಯಾನ್ ವಿಂಕಲ'ರು ಎಂದು ವ್ಯಕ್ತಿವಾಚಕ ಬಹುವಚನ ಹಾಕಬೇಕಿತ್ತು.  ಫೇಸ್ಬುಕ್ಕಿಗರು, ಫೇಸ್ಬುಕ್ಕಿನಲ್ಲಿಲ್ಲದವರನ್ನು ಮನುಷ್ಯರೆಂದು ಪರಿಗಣಿಸುವ ಸಂಪ್ರದಾಯವೇ ಇಲ್ಲವಷ್ಟೇ - ನಾನೂ ಫೇಸ್ಬುಕ್ಕಿನಲ್ಲೇ ಏಗಿ ಏಗಿ ಅಭ್ಯಾಸದಿಂದ ವಸ್ತುವಾಚಕವನ್ನೇ ಬಳಸಿಬಿಟ್ಟೆ.  ಸಜ್ಜನರಾದ 'ರಿಪ್ ವ್ಯಾನ್ ವಿಂಕಲ'ರು ಕ್ಷಮಿಸುತ್ತಾರೆಂಬ ಗಟ್ಟಿ ನಂಬಿಕೆ ನನ್ನದು.
 
ಹಳೆಯಕಾಲದ್ದೊಂದು ರಿವಾಜು ನೆನಪಾಗುತ್ತದೆ.  ಮೊದಲೆಲ್ಲಾ ಮದುವೆ ಇತ್ಯಾದಿಗಳಿಗೆ ಲಗ್ನಪತ್ರಿಕೆ ಕೊಡುವುದರ ಜೊತೆ ಇನ್ನೊಂದು ವಿಚಿತ್ರ ಸಂಪ್ರದಾಯ ಬೆಳೆದುಬಂದಿತ್ತು - ಒಂದು ವೈಯಕ್ತಿಕ ಪತ್ರವನ್ನೂ ಅದರ ಜೊತೆ ಇಡುವುದು.  ಲಗ್ನಪತ್ರಿಕೆ 'ಸಾಮಾನ್ಯ' ಒಕ್ಕಣೆ - ಆಹ್ವಾನಿತರನ್ನು ನಿರ್ದಿಷ್ಟವಾಗಿ ಕುರಿತದ್ದಲ್ಲ.  ಆದ್ದರಿಂದ, ಲಗ್ನಪತ್ರಿಕೆಯನ್ನು ತೆಗೆದುಕೊಂಡು ಹೋಗಿ ವೈಯಕ್ತಿಕವಾಗಿ ಬಂಧುಮಿತ್ರರಿಗೆ ಕೊಟ್ಟು ಮುಖತಃ ಕರೆದು ಬರುವುದು ವಾಡಿಕೆ - ನೀವೇ ಹೋಗಿ ಕರೆಯದೇ ಲಗ್ನಪತ್ರಿಕೆಗೆ ಬೆಲೆಯಿಲ್ಲ (ಹಾಗೆಂದು ವೈಯಕ್ತಿಕ ಭೇಟಿಯನ್ನೇ ನಂಬಿಕೊಂಡು ಲಗ್ನಪತ್ರಿಕೆಯಿಲ್ಲದೇ ಕೈಯಲ್ಲಾಡಿಸಿಕೊಂಡು ಹೋದಿರೋ, ನೀವು ಬದುಕಿರುವ ಪರ್ಯಂತ ನಿಮಗೆ ಮೂತಿ ತಿವಿತ ಗ್ಯಾರಂಟಿ - "ನೋಡು, ಅಷ್ಟು ದೊಡ್ಡದಾಗಿ ಮದುವೆ ಮಾಡಿದ, ಯೋಗ್ಯತೆಗೆ ಒಂದು ಲಗ್ನಪತ್ರಿಕೆ ಪ್ರಿಂಟ್ ಹಾಕಿಸಲಿಲ್ಲ").  ಹೀಗಾಗಿ ಲಗ್ನಪತ್ರಿಕೆ ಪ್ರಿಂಟ್ ಹಾಕಿಸಿ, ಮುಖತಃ ಹೋಗಿ ಲಗ್ನಪತ್ರಿಕೆ ಕೊಟ್ಟು ಕರೆದು ಬರುವುದು ಕ್ರಮ.  ಆದರೆ ಒಂದೊಂದು ಬಡಾವಣೆಗೆ ಹೋಗುವುದು ಒಂದೊಂದು ಊರಿಗೆ ಹೋಗಿ ಬಂದಂತಾಗುವ ಕಾಲದಲ್ಲಿ ಒಬ್ಬರೋ ಇಬ್ಬರೋ ಎಷ್ಟೆಂದು ಓಡಾಡಲಾಗುವುದು.  ಹೀಗೆ ಕೆಲವೆಡೆ ಹೋಗಲಾಗದಿದ್ದಾಗ ಈ ವೈಯಕ್ತಿಕಪತ್ರಗಳು ವೈಯಕ್ತಿಕಭೇಟಿಯ ಕೆಲಸವನ್ನು ಸ್ವಲ್ಪಮಟ್ಟಿಗೆ ಮಾಡುತ್ತಿದ್ದುವು - "ನಾವೇ ಬರಲಾಗಲಿಲ್ಲ, ಕ್ಷಮಿಸಿ, ಒಂದು ವಾರ ಮುಂಚಿತವಾಗಿ ಬಂದು ಮುಂದೆ ನಿಂತು ಮದುವೆ ನಡೆಸಿಕೊಡಬೇಕು" ಇತ್ಯಾದಿ ಇತ್ಯಾದಿ.  ಅಷ್ಟಾದರೂ "ನೋಡಿದೆಯಾ, ಬಂದು ಕರೆಯೋಕ್ಕಾಗಲಿಲ್ಲ, ಒಂದು ಲೆಟರ್ ಬರೆದು ಬಿಸಾಕಿದ್ದಾನೆ" ಎನ್ನುವ ಕೊಂಕುಗಳೂ ಬರುತ್ತಿದ್ದುವು, ಇರಲಿ.  ಆಮೇಲಾಮೇಲೆ ಈ ವೈಯಕ್ತಿಕಪತ್ರಗಳು ಲಗ್ನಪತ್ರಿಕೆಯ ಅವಿಭಾಜ್ಯ ಅಂಗವಾಗತೊಡಗಿದುವು - ಪೋಸ್ಟಿನಲ್ಲೇ ಕಳಿಸಲಿ, ಎದುರಿಗೇ ಕರೆಯಲಿ ಲಗ್ನಪತ್ರಿಕೆಯ ಜೊತೆಗೆ ವೈಯಕ್ತಿಕಪತ್ರವೂ ಇರಬೇಕು.  ಅದಿಲ್ಲದೇ ಬರೀ ಲಗ್ನಪತ್ರಿಕೆ ಕೊಟ್ಟರೆ 'ಅವಮಾನ' - ಹೀಗೆಲ್ಲ ಆಗತೊಡಗಿತು.  ಆಮೇಲಾಮೇಲೆ ಈ ವೈಯಕ್ತಿಕಪತ್ರ ಎಂಬುದು ಎಷ್ಟೊಂದು ದೊಡ್ಡ ಫಾರ್ಮಾಲಿಟಿ ಆಗಿಬಿಟ್ಟಿತೆಂದರೆ, ಅದನ್ನೂ ಕೈಬರಹದ ಅಚ್ಚಿನಲ್ಲೇ ಪ್ರಿಂಟ್ ಮಾಡಿಸಿ ಆಹ್ವಾನಿತರ ಹೆಸರನ್ನು ಮಾತ್ರ ಕೈಯಲ್ಲಿ ಬರೆದು ಲಗ್ನಪತ್ರಿಕೆಯ ಜೊತೆ ಇಟ್ಟು ಕಳುಹಿಸಿದ್ದನ್ನೂ ನಾನು ನೋಡಿದ್ದೇನೆ (ತೀರ 'ಮರ್ಯಾದೆ'ಯುಳ್ಳವರಿಗೆ ಆ ಅಚ್ಚಾದ ಕೈಬರಹದ ಪತ್ರದ ಜೊತೆಗೆ ಇನ್ನೊಂದು ಕೈಬರಹದ ಪತ್ರ - ಲಗ್ನಪತ್ರಿಕೆಯೊಡನೆ ಎರಡೆರಡು ಪತ್ರ).
 
ನಾನು ಮದುವೆಗಳಿಗೆ ಕರೆಸಿಕೊಳ್ಳುವುದು, ಕರೆಯುವುದು, ಹೋಗುವುದು ಎಲ್ಲವೂ ಇತ್ತೀಚಿಗೆ ತೀರ ಕಡಿಮೆಯಾಗಿಬಿಟ್ಟಿರುವುದರಿಂದ ಆ ಸಾಮಾಜಿಕ ರಿವಾಜುಗಳಿಗೆ ನಾನೇ 'ರಿಪ್ ವ್ಯಾನ್ ವಿಂಕಲ್' ಆಗಿಬಿಟ್ಟಿದ್ದೇನೆ.  ಈಗ ಈ ಪದ್ಧತಿ ಇದೆಯೋ ಇಲ್ಲವೋ ಗೊತ್ತಿಲ್ಲ - ಇಲ್ಲದಿದ್ದರೆ ಭಾರ ಕಳೆಯಿತು.  ಇರಲಿ, ಈಗ ಈ ವಿಷಯ ಬಂದದ್ದೇಕೆಂದರೆ, ಈ ಫೇಸ್ಬುಕ್ಕಿನ ಲೈಕು ಕಾಮೆಂಟುಗಳೂ ಫೇಸ್ಬುಕ್ ಬಂಧುಮಿತ್ರರ ನಡುವೆ ಅಂಥದ್ದೇ ಒಂದು ಗಂಭೀರವಾದ ರಿವಾಜಾಗಿಬಿಟ್ಟಿದೆ ಎಂದು ಹೇಳುವುದಕ್ಕೆ.
 
ಇಷ್ಟಕ್ಕೂ 'ಲೈಕ್' ಎಂದರೇನು?  ಇಷ್ಟ ಎಂದು ತಾನೆ?  ಒಂದು ಪೋಸ್ಟನ್ನೋ ಕಾಮೆಂಟನ್ನೋ ನೋಡಿ ಲೈಕೊತ್ತಿದರೆ ಅದು ನಮಗೆ ಇಷ್ಟವಾಯಿತು ಎಂದರ್ಥ.  ಆದ್ದರಿಂದ ಇಷ್ಟವಾದ್ದಕ್ಕೆ ಮಾತ್ರ ಲೈಕೊತ್ತುತ್ತೇನೆ, ಇಲ್ಲವೆಂದುದಕ್ಕೆ ಲೈಕೊತ್ತುವ ಜುಲುಮೆ ಏಕೋ ಎನ್ನುತ್ತೀರಾ?  ನೀವು ಫೇಸ್ಬುಕ್ ಎಂಬ 'ಸೊಫೆಸ್ಟಿಕೇಟೆಡ್' ಸಮಾಜದಲ್ಲಿ ಇರಲಿಕ್ಕೇ ನಾಲಾಯಕು - ನನಗೇನಾದರೂ ಅಧಿಕಾರವಿದ್ದಿದ್ದರೆ ನಿಮ್ಮನ್ನು ಫೇಸ್ಬುಕ್ ಸಾಮ್ರಾಜ್ಯದಿಂದಲೇ ಗಡೀಪಾರು ಮಾಡಿಬಿಡುತ್ತಿದ್ದೆ.  ನೀವು ಇಷ್ಟವಾದದ್ದಕ್ಕೆ ಮಾತ್ರ ಲೈಕೊತ್ತುತ್ತೇನೆ ಎಂದರೆ, ನೀವು ಲೈಕೊತ್ತದುದು ನಿಮಗೆ ಇಷ್ಟವಾಗಲಿಲ್ಲ ಎಂದು ತಾನೆ ಅರ್ಥ?  ಹಾಗೆ ನಿಮಗಿಷ್ಟವಾಗಲಿಲ್ಲವೆಂಬ ವಿಷಯವನ್ನು ಇನ್ನೊಬ್ಬರ ಮುಖಕ್ಕೇ ಹೇಳಲು ನಿಮಗಿರುವ ಅರ್ಹತೆಯಾದರೂ ಏನು?  ಅದು ಹೇಗೆ ನೀವು ಇನ್ನೊಬ್ಬರನ್ನು 'ಜಡ್ಜ್' ಮಾಡುತ್ತೀರಿ?  ನಾವು ನಮ್ಮ ಸುಖಕ್ಕೆ ಬರೆಯುವವರು, ನಿಮ್ಮನ್ನು ಮೆಚ್ಚಿಸಲು ಅಲ್ಲ.  ಒಂದು ಪೋಸ್ಟ್ ಹಾಕಲು ಎಷ್ಟು ಪರಿಶ್ರಮವಿರುತ್ತದೆ ಗೊತ್ತಾ?  ನಿಮ್ಮದೊಂದು ಜುಜುಬಿ ಲೈಕಿನಿಂದ ಅದಕ್ಕೆ ಕಿಂಚಿತ್ ಗೌರವವನ್ನಾದರೂ ಸೂಚಿಸಿದಂತಾದೀತೇ?  ಲೈಕೊತ್ತುವುದು ಕೇವಲ ಸೌಜನ್ಯವಷ್ಟೇ.  ಅದನ್ನೂ ಮಾಡದವರು ಫೇಸ್ಬುಕ್ಕಿನಲ್ಲಿ ಇರಬೇಕೇಕೆ?
 
ಈ ವಾಗ್ದಾಳಿಯಿಂದ ಬೆಚ್ಚಿ ಬೆವೆತು ಸುಧಾರಿಸಿಕೊಳ್ಳುತ್ತಿದ್ದೀರಾ?  ಸುಧಾರಿಸಿಕೊಳ್ಳುತ್ತಾ ಕೇಳಿ, ಸಮಾಧಾನವಾಗಿ ಹೇಳುತ್ತೇನೆ.  ಲೈಕೆಂದರೆ ಕೇವಲ ಇಷ್ಟಮುದ್ರೆಯಲ್ಲ, ಅದರ ಪರಿಣಾಮಗಳು ಎಷ್ಟೋ ಇವೆ.  ನೀವು ಲೈಕೊತ್ತಿದರೆ ಫೇಸ್ಬುಕ್ ನೀವು ಲೈಕೊತ್ತಿದ ವಿಷಯವನ್ನು ನಿಮ್ಮ ಮಿತ್ರವಲಯದಲ್ಲಿ ಟಾಂ ಟಾಂ ಹೊಡೆಯುತ್ತದೆ.  ಅದರಿಂದ ನಿಮ್ಮ ಮಿತ್ರರೂ ಆ ಪೋಸ್ಟನ್ನು ಓದುತ್ತಾರೆ.  ಅವರು ಲೈಕೊತ್ತಿದರೆ ಮತ್ತೆ ಟಾಂ ಟಾಂ.  ಹೀಗೆ ಆ ಪೋಸ್ಟೋ ಕಾಮೆಂಟೋ ಹೆಚ್ಚು ಚಾಲ್ತಿಗೆ ಬರುತ್ತದೆ.  ಅನೇಕರು ಅದನ್ನು ಶೇರ್ ಮಾಡಲೂ ಬಹುದು.  ಅದು ವ್ಯಾಪಾರವ್ಯವಹಾರಕ್ಕೆ ಸಂಬಂಧಿಸಿದ ಪೋಸ್ಟಾಗಿದ್ದರೆ ಹಾಕಿದವನಿಗೆ ವ್ಯಾಪಾರಲಾಭ, ಯಾವುದಾದರೂ ಸ್ಪರ್ಧೆಗೆ ಸಂಬಂಧಿಸಿದ್ದಾಗಿದ್ದರೆ ಆತ/ಆಕೆ ಅದರಲ್ಲಿ ಗೆಲ್ಲಬಹುದು, ಇನ್ನೇನಿಲ್ಲದಿದ್ದರೂ ಆ ಪೋಸ್ಟು ಹತ್ತು ಜನರ ಕಣ್ಣಿಗೆ ಬಿದ್ದು ಪ್ರಸಿದ್ಧವಾಗಬಹುದು - "ಏನಕೇನಪ್ರಕಾರೇಣ (ಏನೇನೋ ಮಾಡಿ) ಪ್ರಸಿದ್ಧಪುರುಷೋ ಭವ" ಎಂಬ ಸುಭಾಷಿತವೇ ಇರುವಾಗ, ನಿಮ್ಮ ಲೈಕಿನಿಂದ ಕೂತಹಾಗೇ ಒಬ್ಬರ ಪ್ರಸಿದ್ಧಿ ಹೆಚ್ಚಾಗುವುದಾದರೆ ಒಂದು ಲೈಕು ಬಿಚ್ಚಿದರೆ ನಿಮ್ಮ ಗಂಟೇನು ಹೋಗುತ್ತದೆ?  ಈ ಮೇಲೆ ಹೇಳಿದ ಲಾಭವೇನೂ ಇಲ್ಲದಿದ್ದರೂ 'ತುಂಬಾ' ಲೈಕು ಅದೊಂದು ರೀತಿ ಖುಷಿಕೊಡುವ ವಿಷಯ.  ನಾವೆಲ್ಲಾ ಮಕ್ಕಳಾಗಿದ್ದಾಗ 'ಟಿಕ್ಕಿ' ಆಟ ಆಡುತ್ತಿದ್ದೆವು.  ಸಿಗರೇಟು ಪ್ಯಾಕನ್ನು ಹರಿದು ಪಕ್ಕಗಳನ್ನು ತೆಗೆದುಹಾಕಿ, ಉಳಿದ ಎರಡು ತುಂಡುಗಳನ್ನು ಒಂದರಮೇಲೊಂದು ಅಡ್ಡಡ್ಡ ಮಡಚಿ ಒಂದರೊಳಗೊಂದು ಸಿಕ್ಕಿಸಿ ಬಿಲ್ಲೆ ಮಾಡುವುದು.  ಬಚ್ಚಿಯೋ ಪಚ್ಚಿಯೋ ಏನೋ ಒಂದು ಆಟದಲ್ಲಿ ಅದನ್ನೇ ಪಣವಾಗಿಟ್ಟು ಆಡುವುದು.  ಯಾರ ಬಳಿ ಹೆಚ್ಚು ಹೆಚ್ಚು ಟಿಕ್ಕಿಯಿರುತ್ತದೋ ಅವನೇ ಬೀದಿಗೆಲ್ಲಾ ಸಾಹುಕಾರ.  ಬೇರೆ ಬೀದಿಯ ಸಾಹುಕಾರರು ಈ ಸಾಹುಕಾರನನ್ನು ಹುಡುಕಿ ಬರುತ್ತಿದ್ದರು, ವಿಶೇಷಗೌರವದಿಂದ ಮಾತಾಡಿಸುತ್ತಿದ್ದರು.  ಈ ಶ್ರೀಮಂತವರ್ಗದ ಅಟಾಟೋಪವೇನು, ಚೊಣ್ಣವನ್ನು ಬಿಗಿದು ಕಟ್ಟಿ ಟೊಂಕದ ಮೇಲೆ ಕೈಯಿಟ್ಟು ಮೊಗವೆತ್ತಿ ನಿಲ್ಲುವ ಭಂಗಿಯೇನು?  ಟಿಕ್ಕಿಯಿಲ್ಲದ 'ಬಡವ'ರು ಇವರ ಕಣ್ಣಿಗೇ ಬೀಳುತ್ತಿರಲಿಲ್ಲ.  ತಾವೂ ಈ ಟಿಕ್ಕಿ ಸಂಗ್ರಹಿಸಿ 'ಧನಿಕ'ರಾಗಲು, ನಾಲ್ಕು ಜನರ ನಡುವೆ ತಲೆಯೆತ್ತಿ "ನಾವು ಸಮ ನಿಮಗೆಂಬ" ಹಮ್ಮು ತೋರಲು, ಬಳಸಿ ಬಿಸಾಕಿದ ಸಿಗರೇಟು ಪ್ಯಾಕಿಗಾಗಿ 'ಬಡ'ಹುಡುಗರು ಅಲೆಯದ ಬೀದಿಯಿಲ್ಲ (ಇರಲಿ, ನಾನೂ ಒಂದು ಕಾಲಕ್ಕೆ ಈ ಬಡತನದ ಬೇಗೆಯನ್ನು ಅನುಭವಿಸಿದವನೇ).  ಅದೇನೇ ಇರಲಿ, ಈ ಟಿಕ್ಕಿಸಂಪತ್ತು ಕೊಡುತ್ತಿದ್ದ ಧನ್ಯತೆ, ಆತ್ಮವಿಶ್ವಾಸ ಅಷ್ಟಿಷ್ಟಲ್ಲ.  ಅದೇ ರೀತಿ ಈ ಲೈಕ್ ಸಂಪತ್ತು ಕೂಡ.  ದಿನದ ಕೊನೆಯಲ್ಲಿ ನಾನೂ ಇಷ್ಟು ಲೈಕ್ ಸಂಪಾದಿಸಿದೆ ನೋಡು ಎಂಬ ಧನ್ಯತೆಯಂಥದ್ದೇನೋ ಬರುತ್ತದಂತೆ - ಅಂತೆ ಕಂತೆ ಏಕೆ? ಬರುತ್ತದೆ, ನನಗೂ - ಸುಳ್ಳೇಕಾಡಬೇಕು?  ಆದರೆ ಲೈಕುಗಳ ರಾಶಿ ನನಗೂ ಸಂತಸವನ್ನೇ ತರುತ್ತದಾದರೂ ಅದರ ಬಗ್ಗೆ ನನಗೆ ಲೋಭವೇನೂ ಇಲ್ಲ.  ಲಕ್ಷಗಟ್ಟಲೆ ಹಣವನ್ನೇ ಕೊಟ್ಟು ಕಳೆದುಕೊಂಡಿರುವ ನನಗೆ ಲೈಕು 'ಕೊಟ್ಟು' ಕಳೆದುಕೊಳ್ಳುವೆನೆಂಬ ಭಯವಿಲ್ಲ.  ಆದರೆ ಅದನ್ನು ನಾನು ಸಾಬೀತುಗೊಳಿಸಲಾರೆ, ಏಕೆಂದರೆ ನನ್ನ ಬಳಿ ಹಣ ಸಾಲಪಡೆದು ಪಂಗನಾಮ ತಿದ್ದಿದಂಥವರಾರೂ ಇದುವರೆಗೂ ಲೈಕುಗಳ ಸಾಲ ಕೇಳಿಲ್ಲ.  ಕೇಳಿದ್ದಿದ್ದರೆ ನನ್ನ ಬಳಿ ಸಂಗ್ರಹವಾದದ್ದನ್ನು ಮೊಗೆಮೊಗೆದು ಕೊಟ್ಟೇನು, ನಾನೂ ಅಲೋಭಿಯೆಂದು ತೋರಿಸಿಯೇನು - ನಾಮ ಬೀಳುತ್ತದೆಂಬ ಭಯ ನನಗಿಲ್ಲ.  ಕುಮಾರವ್ಯಾಸನೇ ಹೇಳಿಲ್ಲವೇ? "ನಾಮಧಾರಿಗಳತುಳಬಲರೆಂದ"; ಅಷ್ಟೇಕೆ, ದಾಸರೂ ಹಾಡಿಲ್ಲವೇ - "ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ".  ಲೈಕಿನ ಸಂಚಯದಿಂದ ಬರುವ ಧನ್ಯತೆಯೇ, ಲೈಕಿನ ಭಾರೀ ಕಡಕೊಟ್ಟು ನಾಮ ತಿದ್ದಿಸಿಕೊಳ್ಳುವುದರಿಂದಲೂ ಬರಬಹುದೇನೋ - ದಾಸರು ಬಲ್ಲರು, ಕುಮಾರವ್ಯಾಸ ಬಲ್ಲ.
 
ಇರಲಿ, ಲೈಕುಗಳ ವಿಷಯದಲ್ಲಿ ಕೆಲವರಾದರೂ ನನ್ನಷ್ಟು ಸ್ಥಿತಪ್ರಜ್ಞರಲ್ಲ ಎಂದು ಹೇಳಲೇ ಬೇಕಾಗಿದೆ.  ಕೆಲವರಿಗೆ ಲೈಕೆನ್ನುವುದು ತಮ್ಮ ಹಕ್ಕು - ಸ್ನೇಹದ ಪಟ್ಟಿಯಲ್ಲಿ ನೀವಿರುವುದಕ್ಕಾಗಿ ಅವರಿಗೆ ನೀವು ಕೊಡುವ ಬಾಡಿಗೆ - ಲೈಕು ಹಾಕದವರನ್ನು ಸ್ನೇಹದ ಪಟ್ಟಿಯಿಂದ ತೆಗೆದುಬಿಡುತ್ತೇನೆ ಎಂದು ಬಾರಿಬಾರಿಗೂ ಧಮಕಿ ಹಾಕುತ್ತಲೇ ಇರುತ್ತಾರೆ.  ತಡೆಯಿರಿ, ಅವರೂ ನಿಮ್ಮ ಸ್ನೇಹದ ಪಟ್ಟಿಯಲ್ಲಿದ್ದಾರಲ್ಲ - ಹೌದು, ಅವರು ಆ ವಿಷಯದಲ್ಲಿ ನಿಸೂರು.  ನಿಮ್ಮ ಲೈಕಿನ ಋಣ ಮಡಗಿಕೊಳ್ಳುವವರಲ್ಲ.  ನೀವು ಸ್ನೇಹಿತರ ಪಟ್ಟಿಯಲ್ಲಿದ್ದೂ ಲೈಕಿನ ಕಪ್ಪ ಸಲ್ಲಿಸದಿದ್ದರೆ ನೀವೂ ಲೈಕಿನಿಂದ ವಂಚಿತರಾಗುತ್ತೀರಷ್ಟೇ.  ಹೀಗೆ ಕೊಡುಕೊಳ್ಳುವಿಕೆಯಿಲ್ಲದ ನಿಸ್ಸಾರಸಂಬಂಧದಿಂದ ಪ್ರಯೋಜನವಾದರೂ ಏನು.  ಆದ್ದರಿಂದ ನೀವು ಒಂದಾನೊಂದು ದಿನ ಸ್ನೇಹದ ಪಟ್ಟಿಯಿಂದ ಕಿತ್ತೊಗೆಯಲ್ಪಡಬಹುದು ಕೂಡ.  ಕೆಲವರಂತೂ ದಿನದ ಕೊನೆಯಲ್ಲಿ ಬಂದ ಲೈಕುಗಳಷ್ಟನ್ನೂ ಕೊಂಡೊಯ್ದು ಬ್ಯಾಂಕಿಗೆ ಜಮೆ ಮಾಡುತ್ತಾರೆ ಎಂದು ಮಿತ್ರರೊಬ್ಬರ ಅಂಬೋಣ.  ಯಾವಾಗಲೂ ಹಣದ ಲೆಕ್ಕದಲ್ಲೇ ತೊಡಗಿರುವವರನ್ನು Money-minded ಎನ್ನುತ್ತಾರೆ.  ನೀವು ಈ ಜನರನ್ನು Like-minded ಎಂದು ಕರೆದರೆ ಅವರೇನೂ ಬೇಸರಿಸಲಾರರು - "ಸಮಾನದುಃಖವ್ಯಸನೇಷು ಸಖ್ಯಮ್" ಅಲ್ಲವೇ?  ನಿಮ್ಮ like-mindednessಗೆ ಸಂತಸವನ್ನೇ ಪಟ್ಟಾರು.  ವ್ಯಕ್ತಿಗಳಿರಲಿ, ಕೆಲವು ಗ್ರೂಪುಗಳಲ್ಲಿ ಅಡ್ಮಿನ್ನುಗಳೇ ಸದಸ್ಯರ ಪರವಾಗಿ ಲೈಕುಗಳ ಯಾಚನೆಯಲ್ಲಿ ತೊಡಗಿರುವುದೂ ಬಹುಸಾಮಾನ್ಯ ನೋಟ.  ಯಾರಿಗಾದರೂ ಒಂದು ನೂರು ಲೈಕು ಬಂತೋ - ಅಡ್ಮಿನ್ನುಗಳು ಧುತ್ತನೆ ಪ್ರತ್ಯಕ್ಷ - "ನೀವೂ ಉಳಿದವರ ಪೋಸ್ಟು ನೋಡಿ, ಲೈಕು ಮಾಡಿ.  ನೀವೊಬ್ಬರೇ ಲೈಕು ಹಾಕಿಸಿಕೊಂಡರೆ ಹೇಗೆ" - ಎಗ್ಗಿಲ್ಲದ ಉಪದೇಶ ನಿಮ್ಮ ಲೈಕುಗಳ ತಟ್ಟೆಗೆ ಬೀಳುತ್ತದೆ.  ಏನು ಮಾಡುತ್ತೀರಿ?  ಸವಿಯುವಂತಿಲ್ಲ ಬಿಡುವಂತಿಲ್ಲ - ಆ ಕ್ಷಣಕ್ಕೆ ನಿಮಗೆ "ಈ ಫೇಸ್ಬುಕ್ಕಿನವರು ಲೈಕಾಟನೆಯನ್ನು ಕೂಡಲೇ ಬ್ಯಾನ್ ಮಾಡಬೇಕು" ಎನಿಸಿದರೆ ಅಚ್ಚರಿಯೇನಲ್ಲ.  
 
ಒಂದು ಲೈಕಿಗೆ ಇಷ್ಟೊಂದೇ?  ಅಡೇಂಗಪ್ಪ, ಒಂದು ಲೈಕ್ ತಾನೆ, ಹೋದರೆ ಹೋಗಲಿ ಬಿಡು, ಕೊಟ್ಟುಬಿಡೋಣ ಎಂಬ ನಿಲುವಿಗೆ ಬರುತ್ತೀರೆನ್ನಿ, ಕೊನೆಗೆ - ವಚನೇ ಕಾ ದರಿದ್ರತಾ ಎಂದ ಸುಭಾಷಿತಕಾರ ಈಗಿದ್ದಿದ್ದರೆ ವಚನಕ್ಕಿಂತ ಸುಲಭವಾದ ಲೈಕಿನ ಕುರಿತು ಧಾರಾಳವಾಗಿ "ಲೈಕೇ ಕಾ ದರಿದ್ರತಾ" ಎನ್ನುತ್ತಿದ್ದನೇನೋ.  ಆದರೆ ತಡೆಯಿರಿ, ಹೀಗೆ ಮುಗುಮ್ಮಾಗಿ ಲೈಕೊತ್ತಿ ಪಾರಾಗಲೆಳಸುವ ಅತಿಬುದ್ಧಿವಂತರು ನೀವೊಬ್ಬರೇ ಅಲ್ಲ.  ಅಂತಹ ಲೈಕುಗಳು ಎಷ್ಟೋ ಬರುತ್ತವೆ - ಹೀಗಾಗಿ ಲೈಕೆಂದರೆ "ಇಷ್ಟವಾಯಿತು" ಎನ್ನುವ ಅರ್ಥ ಹೋಗಿ, "ನೋಡಿದೆ" ಎನ್ನುವ ಮುಗುಂ ಅರ್ಥ ಬಂದುಬಿಟ್ಟಿದೆ.  "ನೋಡಿದೆ, ಇದಕ್ಕೆ ನನ್ನ ಮಾತಿಲ್ಲ - ನಿನ್ನಂತಹ ಮೂರ್ಖರ ಜೊತೆ ಮಾತು ತಾನೆ ಏಕೆ" ಎಂದು ಮುಂತಾಗಿ ಹಿಗ್ಗಲಿಸಿದ ಅರ್ಥಗಳೂ ಇವೆ.  ಅದು ಇಷ್ಟಪಟ್ಟಿದ್ದರ ತದ್ವಿರುದ್ಧ, ಒಂದು ರೀತಿ ಶೀತಲವಾದ ಪ್ರತಿಕ್ರಿಯೆ.  ಹೀಗಾಗಿ, ನೀವೇನಾದರೂ ಲೈಕೊತ್ತಿ ಸುಮ್ಮನಾದರೆ, ಇಷ್ಟವಾಯಿತೆನ್ನುವುಕ್ಕಿಂತ ಇಷ್ಟವಾಗಲಿಲ್ಲ ಎಂಬ ಸಂದೇಶವನ್ನೇ ರವಾನಿಸುತ್ತೀರಿ, ನೆನಪಿರಲಿ.  (ಅದು ಹಾಳಾಗಲೆಂದರೆ, ನಿಮ್ಮನ್ನು ಮೀರಿಸಿದ ಎಷ್ಟೋ ಜನ ಬೃಹಸ್ಪತಿಗಳು ಲೈಕೊತ್ತಿ, ಕಾಮೆಂಟೂ ಮಾಡಿ ಅದು ನಮ್ಮ ಗಮನಕ್ಕೆ ಬಂತೆಂಬುದನ್ನು ಖಾತ್ರಿಪಡಿಸಿಕೊಂಡ ಮೇಲೆ ಲೈಕ್ ಮತ್ತು ಕಾಮೆಂಟ್ ಎರಡನ್ನೂ 'ಗಾಯಬ್' ಮಾಡಿ ಲೈಕ್ ಈಸಿಕೊಂಡ ನಮ್ಮನ್ನೇ ಕೋಡಂಗಿಯನ್ನಾಗಿಸಿ, ತಾವು ಮಾತ್ರ ಕೊಟ್ಟು ಕಿತ್ತುಕೊಂಡ ವೀರಭದ್ರರಾಗಿಬಿಡುತ್ತಾರೆ).  ಇನ್ನೆಷ್ಟೋ ಜನ ಈ ಲೈಕೊತ್ತುವ ಕ್ರಿಯೆಗೆ ಅದೆಷ್ಟು ಒಗ್ಗಿಹೋಗಿದ್ದಾರೆಂದರೆ ಸತ್ತ ಸುದ್ದಿಗೂ ಶಿವಾ ಎಂದು ಲೈಕೊತ್ತಿಬಿಡುತ್ತಾರೆ.  ಆದ್ದರಿಂದ ತಿಳಿದುಕೊಂಡುಬಿಡಿ, ಲೈಕ್ ಎನ್ನುವುದು ಒಂದು ರೀತಿ 'ನಾಮ್ ಕೇ ವಾಸ್ತೇ' ಲಗ್ನಪತ್ರಿಕೆಯಿದ್ದಂತೆ.  ಅದಕ್ಕೆ ಬೆಲೆ ಬರಬೇಕಾದರೆ ಅದರೊಂದಿಗೆ ಕಾಮೆಂಟಿನ ಒಗ್ಗರಣೆಯಿರಲೇ ಬೇಕು.
 
ಸರಿ, ಒಂದು ಲೈಕು ಒಂದು ಕಾಮೆಂಟು ಇಷ್ಟೇ ತಾನೆ ಎಂದು ಹೊರಟುಬಿಡಬೇಡಿ - ಒಕ ಪಾಟ್ಟು ಒಕ ಫೈಟ್ಟು ಎಂಬ ಫಾರ್ಮ್ಯುಲ ಹಾಕೋಕ್ಕೆ ಇದೇನು ಮಸಾಲೆ ಸಿನಿಮಾ ಕೆಟ್ಟುಹೋಯಿತೇ?  ನಿಮ್ಮ ಲೈಕು ಯಾರಿಗೆ, ಕಾಮೆಂಟು ಯಾರಿಗೆ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಿ.  ನಿಮ್ಮ ಲೈಕು-ಕಾಮೆಂಟುಗಳ ಮೊದಲ ಹಕ್ಕುದಾರರು ಪೋಸ್ಟನ್ನು ಹಾಕಿದವರು, ಆಮೇಲೆ ಕಾಮೆಂಟು ಹಾಕಿದವರು.  ನೀವೇನಾದರೂ ಕಾಮೆಂಟಿಗೆ ಲೈಕು ಹಾಕಿ ಪೋಸ್ಟಿಗೆ ಲೈಕು ಹಾಕಲಿಲ್ಲವೋ, ಅದನ್ನು ಪೋಸ್ಟುದಾರರು ಕಂಡುಹಿಡಿದರೋ ಮುಗಿಯಿತು ನಿಮ್ಮ ಕತೆ (ಎಷ್ಟೋ ವೇಳೆ ಮೂಲ ಪೋಸ್ಟಿಗಿಂತ ಕಾಮೆಂಟಿಗೆ ಹೆಚ್ಚು ಲೈಕುಗಳು, ಪ್ರತಿಕ್ರಿಯೆಗಳು ಬಂದುಬಿಡುತ್ತವೆ.  ಆಗಿನ ಸನ್ನಿವೇಶ ನೋಡುವಂತಿರುತ್ತದೆ).  ಆದ್ದರಿಂದ, ನಿಮ್ಮ 'ಲೈಕಾಮೆಂಟ್' (ಲೈಕ್+ಕಾಮೆಂಟ್) ಕಾರ್ಯಕ್ರಮ ಹೀಗಿರಲಿ - ಮೊದಲು ಪೋಸ್ಟಿಗೆ ಲೈಕು, ಆಮೇಲೆ ಪೋಸ್ಟಿಗೆ ಕಾಮೆಂಟು, ಆಮೇಲೆ ಪೋಸ್ಟುದಾರರು ಮೆಚ್ಚಿರುವ ಕಾಮೆಂಟುಗಳಿಗೆ ಲೈಕು, ಆಮೇಲೆ ಆ ಕಾಮೆಂಟುಗಳಿಗೆ ಕಾಮೆಂಟು (ಉತ್ತರ) - ಆಮೇಲೆ ಪೋಸ್ಟುದಾರರು ಲೈಕಿಸದ ಕಾಮೆಂಟುಗಳಿಗೆ ಲೈಕು ಹಾಕುವುದೋ, ಕಾಮೆಂಟು ಹಾಕುವುದೋ ನಿಮ್ಮ ಒಲವಿಗೆ ಬಿಟ್ಟಿದ್ದು.  "ಆಯ್ತು, ಇನ್ನು ಮೇಲೆ ಹಾಗೇ ಮಾಡುತ್ತೇನೆ" ಎಂದಿರಾ?  ಈ ಫೇಸ್ಬುಕ್ ಎನ್ನುವ ವ್ಯವಸ್ಥೆ ನಿಮ್ಮನ್ನು ಅಷ್ಟು ನಿಸೂರಾಗಿರಲು ಬಿಡುವುದಿಲ್ಲ, ತಿಳಿದುಕೊಳ್ಳಿ.  ನೀವು ಲೈಕು ಕಾಮೆಂಟು ಹಾಕಬೇಕಾದರೆ ಆ ಪೋಸ್ಟುಗಳು ನಿಮ್ಮ ಫೀಡಿನಲ್ಲಿ ಕಾಣಬೇಕಷ್ಟೆ?  ನಿಮ್ಮ ಫೀಡಿನಲ್ಲಿ ನೀವು ಯಾವುದನ್ನು ಮೊದಲು ನೋಡಬೇಕು, ಯಾವುದನ್ನು ಆಮೇಲೆ ಎಂದು ನಿರ್ಧರಿಸಲು ಫೇಸ್ಬುಕ್ ನಿಮಗೊಂದು ಆಯ್ಕೆಯನ್ನೇನೋ ಕೊಡುತ್ತದೆ.  ಆದರೆ ನೀವು ಎಲ್ಲ ಅಂಶಗಳನ್ನೂ ಆಯ್ಕೆ ಮಾಡಲಾಗುವುದಿಲ್ಲ.  ಅಂತಿಮವಾಗಿ ನೀವು ಏನನ್ನು ಎಷ್ಟು ಕಾಲಕ್ಕೊಮ್ಮೆ ಎಷ್ಟು ನೋಡುತ್ತೀರೆಂಬುದನ್ನು ನಿರ್ಧರಿಸುವುದು ಫೇಸ್ಬುಕ್ಕೇ.  ನಿಮ್ಮ ದುರದೃಷ್ಟಕ್ಕೆ ಈ 'ಲೈಕಾಶಿ'ಗಳ (ಲೈಕನ್ನು ಆಶಿಸುವವರ) ಪೋಸ್ಟನ್ನು ನಿಮಗೆ ಹುಣ್ಣಿಮೆ ಅಮಾವಾಸ್ಯೆಗೊಂದು ಸಲ ಮಾತ್ರ ತೋರಿಸಬೇಕೆಂದು ಫೇಸ್ಬುಕ್ಕು ನಿರ್ಧರಿಸಿದ್ದರೆ, ಆ ಹುಣ್ಣಿಮೆ ಅಮಾವಾಸ್ಯೆಯಂದು ಅಂತಹ ನೂರಾರು ಜನರ ಪೋಸ್ಟನ್ನು ಯಾವುದೋ ಕ್ರಮದಲ್ಲಿ ಅದು ನಿಮ್ಮ ಮುಂದೊಡ್ಡಿದರೆ, ನೀವು ಲೈಕಿನ ಕಪ್ಪ ಸಲ್ಲಿಸಬೇಕಾದ ಪೋಸ್ಟು ನಿಮ್ಮ ಕಣ್ಣಿಗೆ ಬೀಳದಿರುವ ಅಪಾಯವೇ ಹೆಚ್ಚು.  ಅದರಲ್ಲಿ ನಿಮ್ಮದೇನೂ ತಪ್ಪಿಲ್ಲ, ಆದರೂ ನಿಮಗೆ 'ದುರಹಂಕಾರಿ', 'ಸ್ವಪ್ರತಿಷ್ಠ', 'ಉನ್ನತಭ್ರೂ', 'ಊರ್ಧ್ವನಾಸಿ' ಮೊದಲಾದ ಬಿರುದುಗಳು ತಪ್ಪಿದ್ದಲ್ಲ.  ಇಷ್ಟಾಯ್ತು, ಅಕಸ್ಮಾತ್ ಆ ಪೋಸ್ಟು ನಿಮ್ಮ ಕಣ್ಣಿಗೆ ಬಿತ್ತು, ಓದಿ ನಿಜಕ್ಕೂ ಖುಶಿಯಾಯಿತು, ಆ ಆನಂದಾತಿರೇಕವನ್ನು ಅವರೊಂದಿಗೇ ನೇರವಾಗಿ ಹಂಚಿಕೊಳ್ಳೋಣ ಎಂದು ಇನ್ ಬಾಕ್ಸಿಗೆ ಹೊರಟಿರೋ, ಎಚ್ಚರ!  ಇನ್ಬಾಕ್ಸಿಗೆ ಹೋಗುವ ಮೊದಲು, ಪಬ್ಲಿಕ್ಕಾಗಿ ಆ ಪೋಸ್ಟಿಗೆ ಲೈಕು ಕಾಮೆಂಟುಗಳ ಶಿಷ್ಟಾಚಾರ ಪೂರೈಸಿದ್ದೀರೋ ಮೊದಲು ನೋಡಿಕೊಳ್ಳಿ.  ನೀವು ಅಲ್ಲಿ ಹೊರಗೆ ಹಾಕಿರುವ ಕಾಮೆಂಟು, ಇಲ್ಲಿ ಇನ್ಬಾಕ್ಸಿನಲ್ಲಿ ಕೊಡಮಾಡಲಿರುವ ಕಾಂಪ್ಲಿಮೆಂಟಿಗಿಂತ ಯಾವ ರೀತಿಯಲ್ಲೂ ಕಡಿಮೆಯಿರದಿರಲಿ.  ಇಲ್ಲದಿದ್ದರೆ "ಹೊರಗೆ ಮಾತ್ರ ಪೋಸ್ಟನ್ನ ನೋಡೇ ಇಲ್ಲ ಅಂತ ತೋರಿಸಿಕೊಳ್ಳುವುದು, ನೋಡಿದರೂ ಏನೋ ಕಾಟಾಚಾರಕ್ಕೆ ಕಾಮೆಂಟ್ ಹಾಕುವುದು, ಇನ್ಬಾಕ್ಸಿನಲ್ಲಿ ಮಾತ್ರ ಹಾಡುವುದೇನು, ಹೊಗಳುವುದೇನು..." ಎಂಬ ಭರ್ಜಿ ಸಳ್ಳನೆ ನಿಮಗಾಗಿ ಕಾದಿರುತ್ತದೆ.  ಈ ಭರ್ಜಿಗಳು ಒಂದು ರೀತಿ ಕಟ್ಟುಹಾವಿನ ಕಡಿತವಿದ್ದಂತೆ - ಕಡಿದದ್ದು ನಿಮಗೇ ಆದರೂ, ಕಂಡಲ್ಲದೇ ವಿಷವೇರುವವರೆಗೂ ಗೊತ್ತೇ ಆಗುವುದಿಲ್ಲ,
 
ಇವಿಷ್ಟು, ನೀವು ಬೇರೆಯವರ ಪೋಸ್ಟುಗಳಿಗೆ ಹಾಕಬೇಕಾದ ಲೈಕು ಕಾಮೆಂಟುಗಳ ವಿಷಯವಾದರೆ, ಇನ್ನು ನಿಮ್ಮದೇ ಪೋಸ್ಟುಗಳಿಗೆ ಬರುವ ಲೈಕು ಕಾಮೆಂಟುಗಳನ್ನು ಹೇಗೆ 'ಸ್ವೀಕರಿಸ'ಬೇಕೆಂಬುದು ಬೇರೆಯದೇ ಪಾಠ.  ಅದರಲ್ಲೇನಿದೆ?  ನಾನದನ್ನು ಸಂತೋಷದಿಂದಲೇ ಸ್ವೀಕರಿಸುತ್ತೇನಲ್ಲ ಎಂದು ಹೇಳಿ ಮತ್ತೊಮ್ಮೆ ಫೇಸ್ಬುಕ್ ಎಟಿಕೆಟ್ಟುಗಳ ಕುರಿತ ನಿಮ್ಮ ಅಜ್ಞಾನವನ್ನು ಬಯಲಾಗಿಸದಿರಿ.  ನೀವು ನಿಮ್ಮೊಳಗೆ ಹೇಗೆ ಸ್ವೀಕರಿಸುತ್ತೀರೆಂಬುದು ಮುಖ್ಯವಲ್ಲ.  ಅದನ್ನು ಸಾರ್ವಜನಿಕವಾಗಿ ಹೇಗೆ ಅಭಿವ್ಯಕ್ತಿಸುತ್ತೀರೆಂಬುದು ಮುಖ್ಯ.  ಈಗಾಗಲೇ ನಿಮಗೆ ಅರ್ಥವಾಗಿರಬಹುದಾದಂತೆ (ಅರ್ಥವಾಗಿಲ್ಲದಿದ್ದರೆ ದೇವರು ನಿಮ್ಮನ್ನು ಕಾಪಾಡಲಿ), ಲೈಕೆಂಬುದು ಸೌಜನ್ಯ, ಕಾಮೆಂಟೆಂಬುದು ಔದಾರ್ಯ - ನಿಮಗೆ ಬರುವ ಅಮೂಲ್ಯವಾದ ಉಡುಗೊರೆ.  ಅದಕ್ಕೆ ಪ್ರತಿಯಾಗಿ ಒಂದು ಲೈಕೆನ್ನುವುದು ನೀವು ತೋರಬಹುದಾದ ಕನಿಷ್ಟತಮ ಸೌಜನ್ಯ (ನೆನಪಿರಲಿ, ಲೈಕೆಂದರೆ ಇಷ್ಟವೆಂದಲ್ಲ, ನೋಡಿದ್ದೇನೆ ಎಂದಷ್ಟೇ).  ನೀವು ನೋಡಿಯೂ ಲೈಕಿಸದಿದ್ದರೆ, ನೋಡಿಯೂ ನೋಡದಂತಿರುವುದರಷ್ಟೇ ಅವಮಾನ.  ಅದರಲ್ಲೂ ಹಿಂದಿನ ಮುಂದಿನ ಕಾಮೆಂಟುಗಳಿಗೆ ಲೈಕೊತ್ತಿ ಮಧ್ಯದ್ದೊಂದು ಕಾಮೆಂಟನ್ನು ಗಮನಿಸದಿರುವುದು ಅಕ್ಷಮ್ಯ.  ಕಣ್ತಪ್ಪಿತು ಎನ್ನುವುದು ಕುಂಟುನೆವವಷ್ಟೇ.  ಆದ್ದರಿಂದ ನಿಮಗೆ ಬಂದ ಕಾಮೆಂಟು ಅದೇನೇ ಇರಲಿ - ನೀವು ಪರಬ್ರಹ್ಮವಸ್ತುವಿನ ಬಗ್ಗೆ ಗಂಭೀರವಾಗಿ ಬರೆದ ಪೋಸ್ಟಿಗೆ, ಕುಡುಕನೊಬ್ಬ ಬಾಟ್ಲಿಯುದ್ದಕ್ಕೂ ಮೈಬೊಗ್ಗಿಸುತ್ತಿರುವ ಇಮೋಜಿಯೇ ಬರಲಿ - ಮೊದಲು ಅದಕ್ಕೊಂದು ಲೈಕೊತ್ತಿಬಿಡಿ.  ಕೆಲವೊಮ್ಮೆ ಹೀಗೂ ಆಗುತ್ತದೆ.  ಎಷ್ಟೋ ಬಾರಿ ಕಾಮೆಂಟೊಂದನ್ನು ನೋಡಿ ಅದಕ್ಕೆ ಉತ್ತರಿಸುವ ಹುಕಿಯಲ್ಲಿ ಉತ್ತರಿಸಿಬಿಡುತ್ತೀರಿ, ಲೈಕೊತ್ತುವುದನ್ನು ಮರೆತುಬಿಡುತ್ತೀರಿ.  ಅದೂ ಅಕ್ಷಮ್ಯವೇ - ನೆನಪಿರಲಿ, ಕಾಮೆಂಟಿಲ್ಲದ ಲೈಕು ಖಾಲಿ ಲಗ್ನಪತ್ರಿಕೆಯಾದರೆ, ಲೈಕಿಲ್ಲದ ಕಾಮೆಂಟು ಲಗ್ನಪತ್ರಿಕೆಯಿಲ್ಲದೇ ಬೇಕಾಬಿಟ್ಟಿ ಕರೆದು ಬಂದಂತೆ.  ಅದನ್ನು ಎಂದಿಗೂ ಮಾಡಬೇಡಿ.
 
ಇಷ್ಟಾಗಿ ಒಟ್ಟಾರೆ ಏನು?  ಮೊದಲು ಲೈಕು, ಆಮೇಲೆ ತಪ್ಪದೇ ಕಾಮೆಂಟು, ಫೀಡಿನಲ್ಲಿ ಬರದಿದ್ದರೂ ಆಯಾ ಪ್ರೊಫೈಲುಗಳಿಗೆ ಹುಡುಕಿಕೊಂಡು ಹೋಗಿ ಅದನ್ನು ಮಾಡಿಬಂದರಾಯಿತು ಎನ್ನಬಹುದು.  "ಸಾಲದ ಕಣಿವೆಗೆ ನೀಲದ ಬಾವಿ" ಎಂಬ ವೇದವಾಕ್ಯದಂತೆ (ಇದು ವೇದವಾಕ್ಯವೇ ಎಂಬುದಕ್ಕೆ, "ಗಾದೆಮಾತು ವೇದಕ್ಕೆ ಸಮ" ಎಂಬ ಇನ್ನೊಂದು ವೇದವಾಕ್ಯವೇ ಪ್ರಮಾಣ), ಮೊದಲು ಒಂದು ಲೈಕ್ ಇದ್ದ ಜಾಗದಲ್ಲಿ ಈಗ ಲೈಕು, ಲವ್ವು, ಅಪ್ಪುಗೆ, ನಗೆ, 'ವಾವ್'ಕಾರ, ದುಃಖ, ಕೋಪ ಹೀಗೆ ಏಳು ಆಯ್ಕೆಗಳು - ಅಗ್ನಿಗೆ ಸಪ್ತಜಿಹ್ವನೆಂಬುದೊಂದು ಹೆಸರು.  ಈ ಏಳು ಉರಿನಾಲಿಗೆಗಳಲ್ಲಿ ಯಾವುದು ನಿಮ್ಮನ್ನು ನೆಕ್ಕುತ್ತದೆಯೋ ತಿಳಿಯುವುದಿಲ್ಲ.  ಯಾರಾದರೂ ಹೊಸ ಕಾರು ಕೊಂಡೆನೆಂದು ಹಾಕಿದಾಗ ನೀವು ದುಃಖದ ಪ್ರತಿಕ್ರಿಯೆ ಹಾಕಿದರೆ ಹೇಗಿರುತ್ತದೆ?  ಅಥವಾ ಬಿದ್ದೆನೆಂದು ಹೇಳಿಕೊಂಡಾಗ ನೀವು ಹಹ ಎಂದು ಹಲ್ಲು ಕಿರಿದರೆ?  ಅಷ್ಟೆಲ್ಲ ತಲೆಕೆಡಿಸಿಕೊಳ್ಳುವುದೇಕೆ, ಲೈಕ್ ಎಂದರೆ ನೋಡಿದ್ದೇನೆ ಎಂದು ಅರ್ಥ ತಾನೇ, ಇತರ ಪ್ರತಿಕ್ರಿಯೆಗಳ ಗೋಜಿಗೆ ಹೋಗದೇ ಲೈಕ್ ಹಾಕುವುದು ಸೇಫು ಎಂದಿರಾ?  ಬಹಳಷ್ಟು ಜನ ಹಾಗೇ ಅಂದುಕೊಂಡು, ಯಾರಾದರೂ ಸತ್ತ ಸುದ್ದಿಗೂ ಲೈಕ್ ಒತ್ತುತ್ತಾರೆ.  ಲವ್ ಒತ್ತಿ ಕೆಳಗಡೆ ಓಂ ಶಾಂತಿ ಎಂದೋ ಹರಿ ಓಂ ಎಂದೋ ಕಾಮೆಂಟಿಸಿದವರಿದ್ದಾರೆ.  ಪೋಸ್ಟುಗಳೂ ಕೆಲವೊಮ್ಮೆ ಅಂಥದ್ದೇ ಬರುತ್ತವೆನ್ನಿ.  ಯಾರೋ ಒಬ್ಬ ಭೂಪ, ಶವಯಾತ್ರೆಯಲ್ಲಿ ಚಟ್ಟಕ್ಕೆ ಹೆಗಲು ಕೊಟ್ಟ ಸೆಲ್ಫೀ ತೆಗೆದು ಹಾಕಿದ್ದ.  ಅದಕ್ಕೆ ಲವ್ ಒತ್ತಿ ಕೆಳಗಡೆ "Congratulations" ಎಂದು ಹಾಕಿದ್ದ ಒಬ್ಬ ಸನ್ಮಿತ್ರ - ಅವನ ತಪ್ಪೇ?  ಇವೆಲ್ಲಾ ತಮಾಷೆಯ ಪ್ರಸಂಗಗಳಾದುವು.  ಕೆಲವೊಮ್ಮೆ ನೀವು ಎಷ್ಟೇ ಗಂಭೀರವಾಗಿದ್ದರೂ ನೇಣುಹಾಕಿಕೊಂಡ (hang ಆದ) ನಿಮ್ಮ ಕಂಪ್ಯೂಟರೋ, ಆಮೆಯ ಭೂತ ಮೈಹೊಕ್ಕ ನಿಮ್ಮ ಇಂಟರ್ನೆಟ್ಟೋ ನಿಮ್ಮನ್ನು ಇನ್ನಿಲ್ಲದ ಪೇಚಿಗೆ ಸಿಕ್ಕಿಸಿಬಿಡುತ್ತದೆ.  ನನಗೇ ಒಮ್ಮೆ ಹಾಗಾಯಿತು.  ಯಾರೋ ಸತ್ತ ಸುದ್ದಿ ಬಂತು - ಪಾಪ ಹಿರಿಯರು.  ವಾಡಿಕೆಯಂತೆ ದುಃಖದ ಮುದ್ರೆ ಹಾಕಿ ಕೆಳಗೆ ಕಾಮೆಂಟು ಮಾಡಬೇಕೆಂದು ಹೋದೆ.  ಕರ್ಸರು "ಹಹ್ಹಾ" ಎನ್ನುವ ಮುದ್ರೆಯ ಬಳಿ ಬರುತ್ತಿದ್ದಂತೆಯೇ ನನ್ನ ಹೆಗಲ ಮೇಲೆ ಕೂತಿದ್ದ ಶನಿಗೆ ಅದೇನೆನ್ನಿಸಿತೋ, ಬೆರಳನ್ನು ಅಲ್ಲೇ ಕುಕ್ಕಿಸಿಬಿಡುವುದೇ?  ಕಣ್ಣೀರಿಳಿಸುವ ಮುದ್ರೆಯ ಜಾಗದಲ್ಲಿ ಪಕಪಕನೆ ನಗುವ ಮುದ್ರೆ ಕಂಡೊಡನೆ ಅಯ್ಯಯ್ಯೋ ಎಂದು ಮತ್ತೆ ಸರಿಮಾಡಲು ಹೋಗುತ್ತೇನೆ, ಬ್ರೌಸರ್ ಜಪ್ಪಯ್ಯ ಎನ್ನದೇ ಹಾಗೇ ಪಕಪಕನೆ ನಗುತ್ತಾ ನಿಂತೇ ಬಿಟ್ಟಿದೆ.  ಸತ್ತವರೋ ಹಿರಿಯರು.  ನಾನೂ ಹಾಗೆಲ್ಲಾ ಸತ್ತದ್ದಕ್ಕೆ ಪಕಪಕ ನಗುವಷ್ಟು ಕಿರಿಯನೇನಲ್ಲ.  ಪೋಸ್ಟ್ ಹಾಕಿದವರು ನನಗೆ ಅಷ್ಟೇನು ಸಲುಗೆಯವರೂ ಅಲ್ಲ.  ಎಂತಹ ಸನ್ನಿವೇಶ!  ಸರಿ, ಮತ್ತೆ ಟಾಸ್ಕ್ ಮ್ಯಾನೇಜರಿಗೆ ಹೋಗಿ ಆ ದರಿದ್ರ ಬ್ರೌಸರನ್ನು ಕೊಂದುಹಾಕಿ ಮತ್ತೆ ಹೊಸ ಬ್ರೌಸರ್ ತೆರೆದು, ಫೇಸ್ಬುಕ್ಕಿಗೆ ಲಾಗಿನ್ ಆಗಿ, ನನ್ನ ಆಕ್ಟಿವಿಟಿ ಲಾಗಿಗೆ ಹೋಗಿ ಆ ಪಕಪಕ ಪ್ರತಿಕ್ರಿಯೆಯನ್ನು ಹುಡುಕಿ ಸರಿಮಾಡುವ ಹೊತ್ತಿಗೆ ನನಗೆ ನಾನೇ ಹರಿ ಓಂ ಹಾಕಿಕೊಳ್ಳುವಂತಾಗಿಬಿಟ್ಟಿತ್ತು.
 
ಇಷ್ಟೆಲ್ಲ ಕೇಳಿ, ಈ ಲೈಕು ಕಾಮೆಂಟುಗಳ ಸಹವಾಸವಷ್ಟೇ ಏಕೆ, ಫೇಸ್ಬುಕ್ಕಿನ ಸಹವಾಸವೇ ಬೇಡ, ಹೋಗಿಬಿಡುತ್ತೇನೆ ಎಂದಿರಾ?  ನಿಮಗೆ "ಈಸಬೇಕು ಇದ್ದು ಜೈಸಬೇಕು" ಎಂಬ ದಾಸವಾಣಿಯಲ್ಲಿ ನಂಬಿಕೆಯಿಲ್ಲ.  ಎಲ್ಲಕ್ಕೂ ಆತ್ಮಹತ್ಯೆಯೊಂದೇ ಪರಿಹಾರವಲ್ಲ.  ಸರಿ, ಆಯಿತು, ಹೋಗುವುದೇ ಆದರೆ ಹೋಗುತ್ತೇನೆ ಹೋಗುತ್ತೇನೆ ಎಂದು ನೂರು ಬಾರಿ ಹೇಳದೇ ಸದ್ದಿಲ್ಲದೇ ಹೋಗಿಬಿಡಿ, ನೀವು ಇದ್ದದ್ದು ಹೇಗೋ ಹೋದದ್ದೂ ಯಾರಿಗೂ ತಿಳಿಯುವುದಿಲ್ಲ - 'ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ ದಕ್ಕುವುದೆ ನಿನಗೆ ಜಸ' ಎಂದ ಮಂಕುತಿಮ್ಮನ ಮಾತು ನೆನಪಿದೆಯಷ್ಟೇ?  ನಾನಂತೂ ಹಾಗೆಲ್ಲ ಹೇಳುವುದೂ ಇಲ್ಲ, ಹೋಗುವುದೂ ಇಲ್ಲ - ಅಯ್ಯೋ, "ಇದಕಾರಂಜುವರು ಇದಕಾರಳುಕುವರು"?  ಇಷ್ಟಕ್ಕೂ ಹೋಗಿ ಮಾಡುವುದೇನಿದೆ ಹೇಳಿ?  ಮತ್ತೊಂದು ಅವತಾರದಲ್ಲಿ ಮರಳಿ ಬರುವುದಷ್ಟೇ?  ಬದಲಿಗೆ ಇಲ್ಲೇ ಇದ್ದು ಹೋರಾಡಿ ಜೈಸೋಣ.  ಹೋರಾಟ ಏನೆಂದಿರಾ?  ನಾನೂ ಮೊದಲೆಲ್ಲ ಈ ಲೈಕು ಕಾಮೆಂಟುಗಳ ರಾಜಕೀಯದ ಬಗ್ಗೆ ಬಹುವಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.  ನನ್ನ ಲೈಕು ಕಾಮೆಂಟುಗಳನ್ನು, ಅವುಗಳ ಅನುಪಸ್ಥಿತಿಯನ್ನು ಸಮಾಜ ಹೇಗೆ ತೆಗೆದುಕೊಳ್ಳುತ್ತದೆ ಎಂಬ ಅರಿವಿರಲಿಲ್ಲ, ಅಂಥದ್ದನ್ನು ನಾನು ಹೇಗೆ ತೆಗೆದುಕೊಳ್ಳಬೇಕು ಎಂಬುದೂ ಗೊತ್ತಿರಲಿಲ್ಲ.  ಆಮೇಲೆ ಗಮನಿಸತೊಡಗಿದೆ.  ನನ್ನದೇ ಕೆಲವರು ಸನ್ಮಿತ್ರರಿದ್ದಾರೆ.  ಕೆಲವರು ನಾನು ಹಾಕುವ ಯಾವ ಪೋಸ್ಟಿಗೂ ಲವ್ವೋ ಲೈಕೋ ಒತ್ತುತ್ತಾರೆಯೇ ಹೊರತು ಜಪ್ಪಯ್ಯ ಎಂದರೂ ಕಾಮೆಂಟು ಹಾಕುವುದಿಲ್ಲ.  ಇನ್ನು ಕೆಲವರಿದ್ದಾರೆ, ಲೈಕು ಹಾಕುತ್ತಾರೆಯೇ ಶಿವಾಯಿ ಅದರಾಚಿಗಿನ ಯಾವ ಭಾವವನ್ನೂ ತೋರಿಸುವುದೇ ಇಲ್ಲ.  ಅಲ್ಲಪ್ಪಾ, ಇವರು ಲವ್ ಹಾಕುವುದು ಬೇಡ ಪಕಪಕನೆ ನಕ್ಕಾದರೂ ಬಿಡಬಾರದೇ ಅತ್ಲಾಗೆ ಎನ್ನಿಸುತ್ತದೆ - "ನಕ್ಕಾರ ನಕ್ಕುಬಿಡು ಹೊನಲು ಬರಲಿ" ಎಂದು ಹಾಡೋಣವೆನಿಸುತ್ತದೆ.  ಆದರೇನು ಅದಕ್ಕೂ ಸತ್ತ ಮೋರೆಯ ಲೈಕೇ ಬರುವುದು ತಾನೆ? ಅದಕ್ಕೆ ಹಾಡು ಬೇರೆ ಕೇಡು ಎನಿಸಿ ಸುಮ್ಮನಾಗುತ್ತೇನೆ.  ಆದರೂ ಎಷ್ಟು ದಿನ ಸುಮ್ಮನಿರುವುದು, ಫೇಸ್ಬುಕ್ ಸಮಾಜವೇ ತಂತಮ್ಮ ಲೈಕಿಗಾಗಿ ಹೋರಾಡುತ್ತಿರುವಾಗ ನಾವೂ ಜಾಗೃತರಾಗಬೇಡವೇ?  ನಾನೂ ಈ ಸನ್ಮಿತ್ರರುಗಳ ಮೇಲೆ ಫೇಸ್ಬುಕ್ ನ್ಯಾಯಾಲಯದಲ್ಲಿ ದಾವೆ ಹೂಡಬೇಕೆಂದಿದ್ದೇನೆ.  ನನ್ನ ಫಿರ್ಯಾದಿಗೆ, ಈ ಬರಹಕ್ಕೆ ಬೀಳುವ ನಿಮ್ಮ ಲೈಕು ಕಾಮೆಂಟುಗಳ ಬೆಂಬಲವೇ ಆಧಾರ.  ಎಲ್ಲರೂ ಧಾರಾಳವಾಗಿ ಲೈಕುಗಳನ್ನು ನೀಡಿ ಈ ಕೇಸನ್ನು ಗೆಲ್ಲಿಸಿ, ಫೇಸ್ಬುಕ್ ಸಮಾಜದ ಶ್ರೇಯಸ್ಸಿಗೆ ಕಾರಣರಾಗಬೇಕೆಂದು ಈ ಮೂಲಕ ತಮ್ಮಲ್ಲಿ ಪ್ರಾರ್ಥಿಸುತ್ತೇನೆ.

Wednesday, March 24, 2021

ನಾಯಟ್ಟಿರೆ ಜೀವ ಬಾಯ್ಗೆ ಬಂದಂತಕ್ಕುಂ

ನಾನು ನಮ್ಮ ಬೀದಿ ಕೊನೆಯಲ್ಲಿರುವ ಟೈಲರ್ ಅಂಗಡಿ ಹಾಸಿ ಹೋಗುವುದನ್ನು ಬಿಟ್ಟು ಐದಾರು ವರ್ಷಗಳೇ ಆಯಿತು.  ಕಾರಣವೇನೋ ಬಲು ದೊಡ್ಡದೇ - ಆ ಅಂಗಡಿಯ ಎದುರಿಗೆ ಯಾವಾಗಲೂ ಒಂದು ಕರೀ ನಾಯಿ ಕುಳಿತಿರುತ್ತದೆ.  ನೀವೇನಾದರೂ ಆ ದಾರಿಯಾಗಿ ಬೈಕಿನಲ್ಲಿ ಹೋದರೆ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತದೆ.  ಸುಮಾರು ಒಂದು ಮುನ್ನೂರು ಅಡಿ ದೂರದಿಂದಲೇ ಗಮನಿಸತೊಡಗುವ ಅದು, ನೀವು ಒಂದು ಸರಿಯಾದ ಅಳವಿಗೆ ಬರುವವರೆಗೆ ಕಾದಿದ್ದು, ಅಳವಿಗೆ ಬಂದ ಕೂಡಲೇ ಎದ್ದು ಅಟ್ಟಿಸಿಕೊಂಡು ಬರುತ್ತದೆ.  ಎಷ್ಟೋ ವೇಳೆ ಅವಿತು ಕುಳಿತಿದ್ದು ಅನಿರೀಕ್ಷಿತ ದಾಳಿ ಮಾಡುತ್ತದೆ.  ಅರರೇ ಇದೇನಿದು ಎಂದು ನೀವು ಸಾವರಿಸಿಕೊಂಡು ಏಯ್ಯೇಯ್ಯೇಯ್ಯೇಯ್ ಎನ್ನುತ್ತಾ ಕಾಲುಗಳನ್ನು ಮೇಲೆತ್ತಿಕೊಂಡು ಥಕಥೈ ಮಾಡುತ್ತಾ ವೇಗವಾಗಿ ಬೀದಿ ಕೊನೆ ಸೇರುವವರೆಗೂ ಅಟ್ಟಿಯೇ ಅಟ್ಟುತ್ತದೆ.  ಎಷ್ಟೋ ಬಾರಿ ಇನ್ನೇನು ನಿಮ್ಮ ಕಾಲಿಗೆ ಬಾಯಿ ಹಾಕಿಯೇ ಬಿಟ್ಟಿತು ಎನಿಸಿ ಜೀವ ಬಾಯಿಗೆ ಬರುತ್ತದೆ.  

ಅದು ವಾಸ್ತವದಲ್ಲಿ ಒಂದು ನಾಯಿಯಲ್ಲ, ನಾಯಿಪರಂಪರೆ.  ಮೊದಲು ಅಟ್ಟಾಡಿಸುತ್ತಿದ್ದ ಕರೀ ನಾಯಿ ಈಗಿಲ್ಲ, ಹೀಗೇ ಯಾವುದೋ ಕಾರನ್ನು ಅಟ್ಟಿಸಿಕೊಂಡು ಹೋಗಿ ಅದರ ಚಕ್ರಕ್ಕೆ ಸಿಕ್ಕಿ ಸತ್ತಿತು.  ಈಗ ಅದರ ಮಗನೋ ಮಗಳೋ ಆ ಕೆಲಸವನ್ನು ವಂಶಪಾರಂಪರ್ಯವಾಗಿ ಮುಂದುವರೆಸುತ್ತಿದೆ.  ಇದು ಆ ಹಿಂದಿನ ನಾಯಿಯದೇ ಪಡಿಯಚ್ಚು, ತಕ್ಷಣಕ್ಕೆ ನೋಡಿದರೆ ಅದೇ ನಾಯಿ ಅನಾದಿಕಾಲದಿಂದ ಇದೆ ಎನ್ನಿಸುವುದು ಸಹಜ.

ಓಡುವ ವಸ್ತುಗಳನ್ನು ಅಟ್ಟಿಸಿಕೊಂಡು ಬರುವ ಸ್ವಭಾವ ಕೆಲವು ಪ್ರಾಣಿಗಳಲ್ಲಿ ಸಹಜವಾಗಿಯೇ ಬಂದಿರುತ್ತದೆ, it is an instinct. ಹಾಗೆಯೇ ಯಾವುದಾದರೂ ಅಟ್ಟಿಸಿಕೊಂಡು ಬಂದಾಗ ಎದ್ದುಬಿದ್ದು ಓಡುವುದೂ ಎಲ್ಲ ಪ್ರಾಣಿಗಳಿಗೆ ಸಹಜವಾಗಿ ಬರುವ instinctಏ. ನೀವು ಅನಿಮಲ್ ಪ್ಲಾನೆಟ್ಟಿನಲ್ಲಿ ನೋಡಿರಬಹುದು - ಎಷ್ಟೋ ಬಾರಿ ಅದು ಅಟ್ಟಿದ್ದಕ್ಕೆ ಇದು ಓಡುತ್ತಿದೆಯೋ ಇದು ಓಡಿದ್ದಕ್ಕೆ ಅದು ಅಟ್ಟುತ್ತಿದೆಯೋ ಗೊತ್ತಾಗುವುದೇ ಇಲ್ಲ. ನಾಯಿಗಳ ವಿಷಯದಲ್ಲಂತೂ ಇದು ಕುರಿತೇಟು. ನೀವು ಎಷ್ಟೇ ಶಿಸ್ತಾಗಿ, ಡೀಸೆಂಟಾಗಿ, ಟ್ರಿಮ್ಮಾಗಿ ಅಲಂಕರಿಸಿಕೊಂಡು ಎಷ್ಟೇ ಘನವಾಗಿ ಬೈಕ್ ಓಡಿಸಿಕೊಂಡು ಹೋಗುತ್ತಿದ್ದರೂ ಒಂದು ನಾಯಿ ಭೌಗುಟ್ಟಿ ಅಟ್ಟಿಸಿಕೊಂಡು ಬಂದಿತೆನ್ನಿ, ಹತ್ತು ನಾಯಿಗಳು ಅನುಸರಿಸುತ್ತವೆ. ನಿಮ್ಮ ಘನಗಂಭೀರಗಳು ಹಾರಿಹೋಗಿ, ನಿಮ್ಮ ಬಾಯಿಂದ "ಏಯ್ ಏಯ್ ಏಯ್" ಎಂಬ ಗಾಬರಿಯ ಉದ್ಗಾರ ಹೊಮ್ಮತೊಡಗುತ್ತದೆ, ಬೈಕಿನ ವೇಗ ನಿಮಗರಿಯದಂತೆಯೇ ವಿಪರೀತ ಹೆಚ್ಚುತ್ತದೆ, ನಿಮ್ಮ ಕಾಲುಗಳು ತಾವಾಗೇ ಮೇಲೆದ್ದು, ಬೈಕ್ ಓಡಿಸುತ್ತಿದ್ದಂತೆಯೇ ಥಕಥೈ ಮಾಡತೊಡಗುತ್ತೀರಿ. ಹಾಗೂ ಹೀಗೂ ಒಂದು ವೇಗದಲ್ಲಿ ಅದರ ಏರಿಯಾದಿಂದ ಪಾರಾಗಿಬಿಟ್ಟರೆ ಅದು ಇನ್ನು ಅಟ್ಟುವುದಿಲ್ಲ, ನೀವು ಬಚಾವ್. ಆದರೆ ಒಂದು ಸಲ ಅದರಿಂದ ಪಾರಾದ ಮೇಲೆ ಕ್ಷಣಕಾಲ ನಿಮ್ಮ ಮೇಲೆ ನಿಮಗೇ ಅಸಹ್ಯ ಹುಟ್ಟಿಬಿಡುತ್ತದೆ - ನಿಮಗಿಲ್ಲಿ ಪ್ರಾಣಸಂಕಟವಾದರೆ ಅಲ್ಲೆಲ್ಲೋ ದೂರದಿಂದ ನಿಮ್ಮ ಪಜೀತಿಯನ್ನು ನೋಡಿದವರು ನಗುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ. (ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಜೊತೆಗಾರ ರಘುವನ್ನು ಬೀದಿ ನಾಯಿಯೊಂದು ಹೀಗೇ ಅಟ್ಟಾಡಿಸುತ್ತಾ ಬರಲು ಅವನು ಥೇಟ್ ನಾಟಕಶೈಲಿಯಲ್ಲಿ "ಕಾಪಾಡೀ, ಯಾರಾದ್ರೂ ಕಾಪಾಡೀ" ಎಂದು ಕೂಗುತ್ತಾ ಓಡುತ್ತಿದ್ದುದನ್ನು ನೋಡಿ ಸಿಕ್ಕಾಪಟ್ಟೆ ನಕ್ಕು ಮಜಾ ತೆಗೆದುಕೊಂಡಿದ್ದೇವೆ; ಮುಂದೊಮ್ಮೆ ನಮ್ಮ ನೆಂಟರ ಮನೆಯ ನಾಯಿಯೊಂದು, ಪಾಪ, ಸ್ನೇಹದಿಂದ ಹತ್ತಿರ ಬಂದದ್ದಕ್ಕೆ ನಾನು ಹೆದರಿ ಓಡಿ, ಅದು ನನ್ನನ್ನು ಕಳ್ಳನೆಂದೇ ತಿಳಿದು, ಅವರ ಮೂರೂ ಮಹಡಿಯ ಮೂಲೋಕದಲ್ಲೂ ನನ್ನನ್ನು ಅಟ್ಟಾಡಿಸಿ ಕೊನೆಗೆ ನಾನು ಅಡುಗೆಮನೆಯ ವೈಕುಂಠದ ಮರೆಹೊಕ್ಕು ಬಚಾಯಿಸಿಕೊಂಡಾಗಲೇ ಆ ಪ್ರಾಣಸಂಕಟ ಹೇಗಿರುತ್ತೆ ಎಂಬುದು ಅರಿವಿಗೆ ಬಂದದ್ದು). ಇರಲಿ, ನಿಮ್ಮನ್ನು ಬೈಕಿನಲ್ಲಿ ಅಟ್ಟಿಸಿಕೊಂಡು ಬಂದ (ಅಲ್ಲಲ್ಲ, ಬೈಕಿನಲ್ಲಿದ್ದ ನಿಮ್ಮನ್ನು ಅಟ್ಟಿಸಿಕೊಂಡು ಬಂದ) ಆ ನಾಯಿಯಿಂದ ಪಾರಾದ ಮೇಲೆ ನಿಮ್ಮಲ್ಲಿ ಬರುವ ಮೊದಲ ಯೋಚನೆ - ಥತ್ ದರಿದ್ರದ್ದು ನನ್ನನ್ನೇ ಹೀಗೆ ಅಟ್ಟಾಡಿಸಿಬಿಟ್ಟಿತಲ್ಲ, ಎಷ್ಟು ಘನವಾಗಿ ನನ್ನಷ್ಟಕ್ಕೆ ನಾನು ಹೋಗುತ್ತಿದ್ದೆ, ನನ್ನನ್ನೇ ಬೆದರಿಸಿಬಿಟ್ಟಿತಲ್ಲ, ಹೀಗೆ ತಕಥೈ ಮಾಡಿಸಿ ನನ್ನ ಮರ್ಯಾದೆ ತೆಗೀತಲ್ಲ - ಎಷ್ಟೋ ಸಲ ಆ ಸಮಯದಲ್ಲಿ ಕೈಯಲ್ಲೊಂದು ಕವಣೆ ಕಲ್ಲಿರಬಾರದಿತ್ತೇ ಎನಿಸಿದ್ದಿದೆ. ತೆಗೆದು ಒಂದು ಬೀರಿದರೆ ಬಡ್ಡಿಮಗಂದು ಇನ್ನೊಂದ್ ಸಲ ಇನ್ನೊಬ್ಬರನ್ನ ಅಟ್ಟಬಾರದು; ಅಥವಾ ಹಾಗೆ ಅಟ್ಟಿಸಿಕೊಂಡು ಬಂದ ತಕ್ಷಣ ಬೈಕ್ ನಿಲ್ಲಿಸಿ ಅದರ ಮೇಲೇ ತಳ್ಳಿಬಿಡಬೇಕು, ಸಿಕ್ಕಿ ಸಾಯಲಿ - ಹೀಗೆಲ್ಲಾ ಕ್ರೂರ ಯೋಚನೆಗಳು ಹರಿಯುತ್ತವೆ. ಆದರೆ ಏನೇ ಆಗಲಿ ಅವೆಲ್ಲಾ ಆ ಕ್ಷಣದಲ್ಲಿ ಉಕ್ಕುವ ಯೋಚನೆಗಳಷ್ಟೇ. ಹಾಗೆಲ್ಲ ನಾಯಿಗಳಿಗೆ ಹೊಡೆಯಲು ಮನಸ್ಸೂ ಬರುವುದಿಲ್ಲ - ಅವು ಎಷ್ಟೇ ಅಟ್ಟಾಡಿಸಲಿ ಅವು ಬೀದಿಯಲ್ಲಿದ್ದರೆ ಒಂದು ಬಗೆಯ ಧೈರ್ಯ. ಕಳ್ಳರನ್ನು ಹಿಡಿಯುತ್ತವೋ ಅವರ ಬಿಸ್ಕೆಟ್ಟಿಗೆ ಬಾಲ ಅಲ್ಲಾಡಿಸುತ್ತವೋ ಒಟ್ಟಿನಲ್ಲಿ ಬೊಗಳುತ್ತವೆ, ಎಚ್ಚರ ಕೊಡುತ್ತವೆ, ಅದೇ ಒಂದು ಭರವಸೆ ಮನಸ್ಸಿಗೆ. ಅಲ್ಲದೇ ನಿಮ್ಮ ಕ್ರೂರ ಆಲೋಚನೆಗಳೆಲ್ಲಾ ಪ್ರಾಯೋಗಿಕವಾಗಿ ಸಾಧ್ಯವಾಗುವಂಥವೂ ಅಲ್ಲ. ಹಾಗೊಂದು ವೇಳೆ ನೀವೇನಾದರೂ ಮಾಡಿದರೆ ಕ್ರುಯೆಲ್ಟಿ ಫಾರ್ ಅನಿಮಲ್ಸ್ ಎಂದು ನಿಮ್ಮನ್ನು ಒಳತಳ್ಳಿದರೂ ಅಚ್ಚರಿಯಿಲ್ಲ.  

ನಿಮ್ಮ ಚಿಂತನೆಯೇನೇ ಇರಲಿ, ಹೀಗೆ ಅಟ್ಟಿಸಿಕೊಂಡು ಬಂದಾಗ ಗಾಬರಿಯಾಗಿ ಬೈಕಿನ ಮೇಲೇ ತಕಥೈ ಮಾಡುವುದಿದೆಯಲ್ಲ, ಅದು ಬಹಳ ಅಪಾಯ - ನಿಮ್ಮ ತಕ್ಷಣದ instinctನಿಂದಾಗಿ ನಿಮ್ಮ ಗಮನವೆಲ್ಲಾ ನಾಯಿಯಿಂದ ತಪ್ಪಿಸಿಕೊಳ್ಳುವುದರ ಕಡೆಯೇ ಇರುವುದರಿಂದ ಹಿಂದೆ ಮುಂದೆ ಏನು ಬರುತ್ತಿದೆ ಎಂಬುದರ ಅರಿವು ತಪ್ಪಿ ಹೋಗಿರುತ್ತದೆ, ಬೈಕಿನ ಆಯ ತಪ್ಪಿ ಬೀಳಬಹುದು, ಹಿಂದಿನಿಂದ ಟಿಪ್ಪರೊಂದು ನಿಮ್ಮ ಮೈಮೇಲೆ ಹರಿದು ಸಾವೇ ಸಂಭವಿಸಬಹುದು.  ಅಟ್ಟುತ್ತಿದ್ದ ನಾಯಿಗಳೇನೋ ಓಡಿಹೋಗಿಬಿಡುತ್ತವೆ, ಅಥವಾ ಸುತ್ತಲ ಜನ ಸೇರಿ ಕಲ್ಲು ಹೊಡೆದು ಓಡಿಸಲೂ ಬಹುದು.  ಆದರೆ ಹೋದ ಜೀವವಂತೂ ಮರಳಿ ಬರುವುದಿಲ್ಲವಷ್ಟೇ?  ತಾವು ಹೀಗೆ ಮಾಡುವುದರಿಂದ ನಿಮ್ಮ ಜೀವ ಹೋಗಬಹುದೆಂದು ಅವಕ್ಕೆ ತಿಳಿದಿರುವುದಿಲ್ಲ ಕೂಡ.  ಮೊದಲೇ ಹೇಳಿದಂತೆ ಅಟ್ಟುವುದು ಅವುಗಳ ಸ್ವಭಾವ - ಅಪಾಯದ ಅರಿವಿರಬೇಕಾದ್ದು ನಿಮಗೆ, ನಿಮ್ಮ ಜೀವ ನಿಮ್ಮ ಕೈಯಲ್ಲಿ, ಅಲ್ಲವೇ?  ಈಗಂತೂ ಕಾರ್ಪೊರೇಷನ್ನಿನವರ ಬೇಜವಾಬ್ದಾರಿಯಿಂದಾಗಿ ಎಲ್ಲೆಂದರಲ್ಲಿ ಹಿಂಡುಗಟ್ಟಿ ಅಟ್ಟಾಡಿಸಿ ದಾಳಿಮಾಡುವ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ.  ಆದ್ದರಿಂದ ಈ ಕೆಳಗಿನ ಕೆಲವು ಅಭ್ಯಾಸಗಳನ್ನು ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳಿ:

1) ನೀವು ಹೋಗುವುದು ನಿಮ್ಮ ಮಾಮೂಲು ರಸ್ತೆಯಾಗಿದ್ದರೆ ಎಲ್ಲಿ ನಾಯಿಯಿರುತ್ತದೆ ಅನ್ನೋದು ನಿಮಗೆ ಗೊತ್ತಿರಲೇ ಬೇಕು.  ಆ ರಸ್ತೆ ಬಿಟ್ಟು ಪಕ್ಕದ ರಸ್ತೆಯಲ್ಲಿ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ.

2) ಸಾಮಾನ್ಯವಾಗಿ ನೀವು ಆಕಡೆ ಈಕಡೆ ಹೊರಳಿ ತಪ್ಪಿಸಿಕೊಳ್ಳಬಾರದು, ಅಂತಹ ಆಯಕಟ್ಟಿನ ಜಾಗದಲ್ಲೇ ಅವು ಹೊಂಚಿ ನಿಲ್ಲುತ್ತವೆಂಬುದನ್ನು ಗಮನದಲ್ಲಿಡಿ.  ಅಂತಹ ದಾರಿಗಳನ್ನು ಅವಾಯ್ಡ್ ಮಾಡಿ (ನಮ್ಮ ಬೀದಿಯ ಟೈಲರಂಗಡಿಯಿಂದ ರಸ್ತೆಯ ಕೊನೆ ಸುಮಾರು ಇನ್ನೂರು ಅಡಿ; ಆ ಅಂಗಡಿಗೆ ಇನ್ನೂರು ಅಡಿ ಮೊದಲು ಪಕ್ಕದ ರಸ್ತೆಗೆ ತಿರುಗುವ ದಾರಿ.  ಇಲ್ಲಿಂದ ಅಲ್ಲಿಗೆ ಸುಮಾರು ನಾನೂರು ಅಡಿ ಎಲ್ಲಿಯೂ ಹೊರಳಲು ದಾರಿಯಿಲ್ಲ.  ಈ ನಾನೂರು ಅಡಿಯಲ್ಲೇನಾದರೂ ಸಿಕ್ಕಿದಿರೋ, ದಾಳಿ ಗ್ಯಾರಂಟಿ)

3) ನೀವು ಆ ರಸ್ತೆಯಲ್ಲೇ ಹೋಗಬೇಕೆಂದಿಟ್ಟುಕೊಳ್ಳಿ, ಅಥವಾ ಅದು ಅಪರಿಚಿತ ರಸ್ತೆ.  ಅಲ್ಲೆಲ್ಲಾದರೂ ನಾಯಿಯಿದೆಯೇ, ಒಂದು 300-350 ಅಡಿ ದೂರದಿಂದಲೇ ಗುರುತಿಸಲು ಪ್ರಯತ್ನಿಸಿ.  ಇದ್ದರೆ, ಉಪಾಯವಾಗಿ ಪಕ್ಕದ ರಸ್ತೆಗೆ ಜಾರಿಕೊಳ್ಳಿ.

4) ಪಕ್ಕದಲ್ಲೆಲ್ಲೂ ರಸ್ತೆಯಿಲ್ಲವೇ?  ಏಕಾಯೇಕಿ ಅದರ ಕಣ್ಣಿಗೆ ಕಾಣುವಂತೆ ನುಗ್ಗಬೇಡಿ.  ಬೇರೊಂದು ದೊಡ್ಡ ವಾಹನ ಬರುತ್ತಿದ್ದರೆ ಅದರ ಮರೆಯಲ್ಲೇ ಸಾಗಿ, ಬಚಾವಾಗಿ.

5) ಅದರ ಮುಂದೆಯೇ ಹೋಗಬೇಕೇ?  ಉದ್ವೇಗಕ್ಕೊಳಗಾಗಬೇಡಿ.  ದೂರದಿಂದಲೇ ನಿಮ್ಮ ವಾಹನವನ್ನು ನಿಧಾನಗೊಳಿಸಿ, ಹಗೂರವಾಗಿ ಎಡಬದಿಗೆ ತೆಗೆದುಕೊಳ್ಳಿ.  ನೀವು ಹೆದರಿಲ್ಲ, ಓಡುತ್ತಿಲ್ಲ ಎಂದು ಅದಕ್ಕೆ ಮನದಟ್ಟಾಗುವುದು ಮುಖ್ಯ.  ಅದರ ಗಮನಸೆಳೆಯುವ ಯಾವ ಚಲನೆಯನ್ನೂ ಮಾಡದೇ ಆತ್ಮವಿಶ್ವಾಸದಿಂದ ನಿಮ್ಮಷ್ಟಕ್ಕೆ ನೀವು ಮುಂದುವರೆಯಿರಿ, ಅನೇಕ ಬಾರಿ ಅದು ನಿಮ್ಮನ್ನು ಅಟ್ಟದೇ ಸುಮ್ಮನಿದ್ದುಬಿಡುತ್ತದೆ.  ನೀವು ಬಚಾವು.

6) ಹಾಗೂ ಒಂದು ವೇಳೆ ಅಟ್ಟಲು ತಯಾರಾಗುತ್ತಿದೆಯೇ? ಗಾಡಿಯನ್ನು ನಿಧಾನಗೊಳಿಸಿ ಅದರ ಮುಂದೆ ನಿಲ್ಲಿಸಿಬಿಡಿ.  ಎಷ್ಟೋ ಬಾರಿ "ಏಯ್, ರಾಮೂ, ಚುಚ್ಚುಚ್ಚುಚ್ಚೂ..." ಎಂಬ ಪರಿಚಯದ ಉದ್ಗಾರವೋ, ಒಂದೆರಡು ಬಿಸ್ಕಿಟೋ ನಿಮಗದರ ವಿಶ್ವಾಸವನ್ನು ಸಂಪಾದಿಸಿಕೊಡಬಲ್ಲುದು.  ಅದಕ್ಕೆ ಸಲ್ಲಬೇಕಾದ್ದನ್ನು ಸಲ್ಲಿಸಿ ನಿರಾಳವಾಗಿ ಮುಂದುವರೆಯಿರಿ.

ಇವಿಷ್ಟು, ನಾಯಿಗಳ ವಿಷಯದಲ್ಲಂತೂ ಸತ್ಯಸ್ಯಸತ್ಯ.  ಬೇರೆ ಪ್ರಾಣಿಗಳಿಗೂ ಇದೇ ಅನ್ವಯಿಸುತ್ತದೋ ಏನೋ.  ಸಿಂಹಗಳ ವಿಷಯ ಗೊತ್ತಿಲ್ಲ.

ಕೊನೆಯದಾಗಿ ಒಂದು ಮಾತು - ಹೆಲ್ಮೆಟ್ಟಿಲ್ಲದೇ ರಸ್ತೆಗಿಳಿಯಲೇ ಬೇಡಿ.  ಮೇಲಿನಂತಹ ಸಂದರ್ಭದಲ್ಲಿ ಹೆಲ್ಮೆಟ್ಟಿಲ್ಲದೇ ನೀವೇನಾದರೂ ಕೆಳಕ್ಕೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.  ಕಾನೂನಿಗಾಗಿ ಅಲ್ಲ, ಹಿಡಿದು ದಂಡ ಹಾಕುವ ಪೋಲೀಸರಿಗಾಗಿ ಅಲ್ಲ, ನಿಮಗಾಗಿ, ನಿಮ್ಮ ರಕ್ಷಣೆಗಾಗಿ ಯಾವಾಗಲೂ ಹೆಲ್ಮೆಟ್ ಧರಿಸಿ.


Sunday, March 7, 2021

ಸರಸ್ವತೀಪ್ರಸಾದ

ಆಚಾರ್ಯರಾದ ಪ್ರೊ. ವೆಂಕಟಾಚಲಶಾಸ್ತ್ರಿಗಳು ಮೊನ್ನೆ ಇದ್ದಕ್ಕಿದ್ದಂತೆ ಕರೆಮಾಡಿ "ಹೇಗೆ ನಡೆದಿದೆ ಅಭ್ಯಾಸ?" ಎಂದರು. ದಿನದ ಇಪ್ಪತ್ನಾಲ್ಕು ಗಂಟೆಗಳ ಒಂದೊಂದು ಗಂಟೆಯ ಸ್ಲಾಟಿನಲ್ಲಿ ಒಂದೊಂದು ಅಭ್ಯಾಸ-ಅಭಾಸಗಳಲ್ಲಿ ಮುಳುಗಿರುವ ನಾನು, ಇವರು ಯಾವ ಅಭ್ಯಾಸದ ಬಗೆಗೆ ಕೇಳುತ್ತಿದ್ದಾರೆಂದು ತಿಳಿಯದೇ ಕ್ಷಣಕಾಲ ತಬ್ಬಿಬ್ಬಾದೆ - ಏಕೆಂದರೆ ಆ ಕ್ಷಣಕ್ಕೆ ನಾನು ಬ್ಯಾಂಕ್ ಸಾಲಕ್ಕೆ ಏನೇನು ಡಾಕ್ಯುಮೆಂಟುಗಳನ್ನು ಕೊಡಬೇಕೆಂಬುದರ ಅಭ್ಯಾಸದಲ್ಲಿ ಮುಳುಗಿದ್ದೆ. ಇನ್ನೊಂದು ಗಂಟೆಯಲ್ಲಿ ಕಛೇರಿ ಕರೆಯೊಂದರಲ್ಲಿ ಪ್ರಾಜೆಕ್ಟ್ ಡೆಡ್ಲೈನ್ ಮೀರಿದ್ದಕ್ಕಾಗಿ ಗ್ರಾಹಕನಿಗೆ ಏನೇನು ಸಬೂಬು ಹೇಳಬೇಕೆನ್ನುವ ಅಭ್ಯಾಸ ಆರಂಭವಾಗಬೇಕಿತ್ತು. ಯಾವ ಅಭ್ಯಾಸದ ಬಗೆಗೆ ಕೇಳುತ್ತಿರಬಹುದು ಎಂಬ ಗೊಂದಲದಲ್ಲೇ "ಯಾವ ಅಭ್ಯಾಸ ಸಾರ್" ಎಂದು ಕೇಳಿದೆ. "ನಿಮ್ಮ ರನ್ನನ ಅಭ್ಯಾಸ ಹೇಗೆ ಸಾಗಿದೆಯಪ್ಪಾ?" ಎಂದು ಕೇಳಿದರು. ಹಳಗನ್ನಡಪದ್ಯಗಳನ್ನು ಛಂದೋಬದ್ಧವಾಗಿ, ಆದರೆ ರಸ ಕೆಡದಂತೆ, ಕೂಡಿದಮಟ್ಟಿಗೂ ರಸಸ್ಫುರಣೆಯಾಗುವಂತೆ ಓದುವ ಬಗೆಯನ್ನು ಕುರಿತು ಬರೆಯಬೇಕೆಂಬುದು ನನ್ನ ಬಹುದಿನಗಳ ಆಶೆ. ಇದ್ದುದರಲ್ಲಿ ಸ್ವಲ್ಪ ಚಿಕ್ಕದಾಗಿರುವ, ರುಚಿಯಾಗಿಯೂ ಇರುವ ರನ್ನನ ಗದಾಯುದ್ಧವನ್ನೇ ಇದಕ್ಕಾಗಿ ಆರಿಸಿಕೊಳ್ಳಬಾರದೇಕೆ ಎನ್ನುವ ಹುಚ್ಚು ಆಲೋಚನೆಯನ್ನು ಶಾಸ್ತ್ರಿಗಳೂ ಸೇರಿದಂತೆ ಗುರುಸಮಾನರಾದ ಒಂದಿಬ್ಬರು ಹಿರಿಯರೊಡನೆ ಹಂಚಿಕೊಂಡೂ ಇದ್ದೆ. ಅದನ್ನವರು ಮೆಚ್ಚಿ ಪ್ರೋತ್ಸಾಹಿಸಿದ್ದಲ್ಲದೇ ಅದು ಕಷ್ಟದ ಕೆಲಸವೆಂದು ಎಚ್ಚರಿಸಿ, "ಒಂದು ಆಶ್ವಾಸವನ್ನು ಬರೆದುಕೊಂಡು ಬನ್ನಿ, ಹೇಗಾಗುತ್ತದೆ ನೋಡೋಣ" ಎಂದು ಹೇಳಿದ್ದರು. ಈ 'ಕಷ್ಟದ ಕೆಲಸ'ಕ್ಕಾಗಿ ನಾನು ಗಂಭೀರ ಅಭ್ಯಾಸದಲ್ಲಿ ತೊಡಗಿದ್ದೇನೆಂದು ಅವರ ಭಾವನೆ. ನಾವೋ, ಲೀಲಾಮಾತ್ರಜೀವರಷ್ಟೇ? "ಇಂದು ಇಂದಿಗೆ ನೆನ್ನೆ ನೆನ್ನೆಗೆ ಇರಲಿ ನಾಳೆಯು ನಾಳೆಗೆ" ಎಂಬ ಲೆಕ್ಕದಲ್ಲಿ ಇದ್ದುಬಿಡುವವರು.  ಆಗಾಗ್ಗೆ ಇಂತಹ ಎಚ್ಚರಿಕೆಗಳು ಬರದಿದ್ದರೆ ಲೀಲೆಯಲ್ಲೇ ಮುಳುಗಿ ತೂಕಡಿಕೆ ಆವರಿಸಿಬಿಡುತ್ತದೆ, ಕೈಲಾಸಂ ಹೇಳುವಂತೆ "ಬ್ರಹ್ಮನಿಗಪ್ನಾನೇ, ಸರಸ್ವತಿ ನನ್ ಸೊಸೆ" ಎಂಬ ಭ್ರಮೆ ಮುಸುಕಿದರೂ ಅಚ್ಚರಿಯಿಲ್ಲ. ಸಂಕೋಚದಿಂದಲೇ "ಕೆಲವು ಟಿಪ್ಪಣಿಗಳನ್ನು ಮಾಡಿಕೊಂಡಿದ್ದೇನೆ ಸಾರ್, ತಮ್ಮೊಂದಿಗೆ ಚರ್ಚಿಸಿಯೇ ತೀರ್ಮಾನಿಸಬೇಕಾದ್ದು ಹಲವಿವೆ. ಒಮ್ಮೆ ಒಂದಷ್ಟು ತಯಾರಿಸಿಕೊಂಡು ಬರುತ್ತೇನೆ" ಎಂದೆ. "ಆಗಲಿ ಆಗಲಿ ಮಾಡಿ, ನಿಧಾನಿಸಬೇಡಿ ಇವೆಲ್ಲಾ ಹಿಡಿದ ಉತ್ಸಾಹದಲ್ಲೇ ಮಾಡಬೇಕಾದಂಥವು" ಎಂದವರು "(ರನ್ನನ ಪದ್ಯವೊಂದನ್ನು ನೆನಪಿಸಿ) ಆ ಪದ್ಯದ ಬಗ್ಗೆ ನೀವು ಹೇಳಿದ ವ್ಯಾಖ್ಯಾನ ಸರಿಯಲ್ಲ, ಈ ವಿಷಯವನ್ನ ಹಲವರು ವಿದ್ವಾಂಸರು ಚಿಂತಿಸಿದ್ದಾರೆ, ನಾನೂ ಆಮೇಲೆ ಅದರ ಬಗ್ಗೆ ಮತ್ತೆ ಸಾಕಷ್ಟು ಪರಿಶೀಲಿಸಿದೆ, ನೀವೊಮ್ಮೆ ಬನ್ನಿ ಸಾವಕಾಶವಾಗಿ ವಿವರಿಸುತ್ತೇನೆ" ಎಂದರು. ಯಾವಾಗಲೋ, ತಿಂಗಳ ಹಿಂದೆ ಯಾವುದೋ ಓದಿನ ಮಧ್ಯೆ, ರನ್ನನ ಪದ್ಯವೊಂದಕ್ಕೆ ಇದುವರೆಗೆ ಬಂದ ವ್ಯಾಖ್ಯಾನ ಸಮರ್ಪಕವಾಗಿಲ್ಲವೆನಿಸಿತ್ತು. ಅದನ್ನೇ ಹಿಂದೆಮುಂದೆ ನೋಡದೇ ಅವರೆದುರಿಗೂ ಒದರಿಬಿಟ್ಟಿದ್ದೆ. ಅದಕ್ಕವರು ನನ್ನ ಅಭಿಪ್ರಾಯ ಹೇಗೆ ಸರಿಯಲ್ಲವೆಂಬುದನ್ನು ಅಲ್ಲಿಯೇ ಸಮಾಧಾನವಾಗಿ ವಿವರಿಸಿದ್ದರು ಕೂಡ. ಅದಾದ ಮೇಲೆ ನಾನದನ್ನು ಮರೆತೇಬಿಟ್ಟಿದ್ದೆ. ಆದರೆ ಆ ಪ್ರಶ್ನೆಯನ್ನು ಬಹುಗಂಭೀರವಾಗಿ ತೆಗೆದುಕೊಂಡಿದ್ದ ಅವರು ಮತ್ತಷ್ಟು ಅಧ್ಯಯನದೊಂದಿಗೆ ಇನ್ನಷ್ಟು ವಿವರಣೆಗಳನ್ನು ನೀಡಲು ಕಾದಿದ್ದರು. ಮತ್ತೆ ಮುಂದುವರೆದು "ತೀನಂಶ್ರೀಯವರ ಅಪ್ರಕಟಿತಬರಹಗಳ ಸಂಕಲನವೊಂದು ಹೊರಬಂದಿದೆ ನೋಡಿ, 'ಮಾತು-ಮಥನ" ಅಂತ; ಅದರಲ್ಲಿ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಅವರು ಬರೆಯಬೇಕೆಂದು ಟಿಪ್ಪಣಿ ಮಾಡಿಕೊಂಡು, ತಮಗೇ ತೃಪ್ತಿಯಾಗಲಿಲ್ಲವೆಂದು ಬರೆಯದೇ ಬಿಟ್ಟ ಬರಹಗಳ ಸಂಕಲನವಿದು; ಅವರು ಸಂಪೂರ್ಣ ಆಧಾರವಿಲ್ಲದೇ ಎಂದೂ ಏನನ್ನೂ ಪ್ರಕಟಿಸಿದವರಲ್ಲ, ಹಾಗಾಗಿ ಅವರು ಬರೆದದ್ದೇ ಕಡಿಮೆ, ಅದಕ್ಕೇ ಅದೆಷ್ಟೋ ನಿಜಕ್ಕೂ ಉತ್ಕೃಷ್ಟ ಬರಹಗಳು ನಮ್ಮ ಕೈತಪ್ಪಿ ಹೋದುವು. ಅವರ ಕಾಲಾನಂತರ ಅವರ ಮಕ್ಕಳು ಅವನ್ನೆಲ್ಲಾ ಒಗ್ಗೂಡಿಸಿ ಪ್ರಕಟಿಸಿ ಉಪಕಾರ ಮಾಡಿದ್ದಾರೆ. ನಾನೀಗ ಅದನ್ನೇ ಓದುತ್ತಿದ್ದೆ, ನಿಮ್ಮ ನೆನಪಾಯಿತು. ಇದನ್ನು ನೀವು ಓದತಕ್ಕದ್ದು. ಅಂಗಡಿಗಳಲ್ಲಿ ಸಿಗುತ್ತೆ, ವಿಚಾರಿಸಿ. ಸಿಗದಿದ್ದರೆ ನನ್ನ ಹತ್ತಿರ ಬನ್ನಿ, ಜೆರಾಕ್ಸ್ ಮಾಡಿಸಿಕೊಂಡು ಕೊಡುವಿರಂತೆ. ಇದನ್ನು ಓದುವ ಸುಖ, ಕಳೆದುಕೊಳ್ಳಬಾರದ್ದು" ಎಂದರು. ಇಂಥದ್ದೊಂದು ಕೃಪೆಗೆ ಹಿಗ್ಗಾಗದಿದ್ದೀತೇ? "ಆಗಲಿ ಸಾರ್, ಈ ಪುಸ್ತಕವನ್ನು ಅಂಗಡಿಯಲ್ಲಿ ವಿಚಾರಿಸುತ್ತೇನೆ, ಸಿಗದಿದ್ದರೆ ತಮ್ಮಲ್ಲಿಗೆ ಬಂದು ಪ್ರತಿಮಾಡಿಕೊಳ್ಳುತ್ತೇನೆ" ಎಂದೆ. "ಆಗಲಿ, ಹೇಗಿದ್ದರೂ ಬಂದಂತೂ ಬನ್ನಿ, ನಿಮಗೆ ಇನ್ನೊಂದು ಪುಸ್ತಕ ಕೊಡುತ್ತೇನೆಂದು ತುಂಬಾ ಹಿಂದೆಯೇ ಪ್ರಾಮಿಸ್ ಮಾಡಿದ್ದೆ, ಮುಧೋಳದ ರನ್ನಪ್ರತಿಷ್ಠಾನದವರು ಪ್ರಕಟಿಸಿದ್ದು, ಅದು ನನ್ನ ಕಡೆಯೇ ಬಾಕಿ ಉಳಿದುಹೋಗಿದೆ. ಅದನ್ನು ತೆಗೆದುಕೊಂಡ ಹಾಗೂ ಆಯಿತು, ಒಮ್ಮೆ ಬಂದು ಹೋಗಿ" ಎಂದರು.
 
ಮರುದಿನ ಸಂಜೆ ಆರೂವರೆಗೆ ಕರೆಮಾಡಿ, "ಪುಸ್ತಕ ಎಲ್ಲೂ ಸಿಗಲಿಲ್ಲ.  ನಿಮ್ಮಲ್ಲಿಗೇ ಬಂದು ತೆಗೆದುಕೊಳ್ಳುವೆ, ಈಗ ಬರಲೇ" ಎಂದೆ. "ಇಷ್ಟುಹೊತ್ತಿನ ಮೇಲೆ ಹೇಗಪ್ಪಾ, ವಿರಾಮವಾಗಿ ಮಾತಾಡಲು ಒಂದಷ್ಟು ಸಮಯವಿಟ್ಟುಕೊಂಡು ಬನ್ನಿ.  ಆರಕ್ಕೇ ಬಂದರೆ ಒಳ್ಳೆಯದು" ಎಂದರು. ಸರಿ, ಮರುದಿನ ಸಂಜೆ ಆರಕ್ಕೆ ನಾನು ಅವರ ಮನೆಯಲ್ಲಿರುವುದೆಂದು ಆಯಿತು.  ಅವರು ಆರೆಂದರೆ ಸರಿಯಾಗಿ ಆರಕ್ಕೆ ತಯಾರಾಗಿ ಕಾದು ಕುಳ್ಳಿರುವವರೇ. ನನಗೋ, ಎಂದಿನಂತೆ ಮರುದಿನ ಹೊರಗೆ ಯಾವುದೋ ಕೆಲಸದ ಒತ್ತಡದಲ್ಲಿ ಸಿಲುಕಿ, ಆರುಗಂಟೆಗೆ ಅಲ್ಲಿರುವುದಾಗಲಿಲ್ಲ. ಆರೂಕಾಲಕ್ಕೆ ಕರೆಮಾಡಿ, ಬಲುಸಂಕೋಚದಿಂದ 'ಹೀಗೆ ಏನೋ ತೊಂದರೆಯಾಗಿದೆ, ಸಮಯಕ್ಕೆ ಬರುವುದಾಗುತ್ತಿಲ್ಲ, ತುಂಬ ತಡವಾಗಬಹುದು...' ಎನ್ನುತ್ತಿದ್ದಂತೆ ಅವರು ನಕ್ಕು "ಹಹ್ಹ... 'ಶ್ರೇಯಾಂಸಿ ಬಹುವಿಘ್ನಾನಿ', ಆಯ್ತು, ಎಲ್ಲಾ ಮುಗಿಸಿಕೊಂಡೇ ಬನ್ನಿ" ಎಂದರು. ನಮಗೆ ಈ ಸೂಕ್ಷ್ಮಗಳು ಎಲ್ಲಿ ಅರ್ಥವಾಗಬೇಕು?  "ಇವತ್ತಾಗದಿದ್ದರೆ ನಾಳೆ ಬರಬಹುದೇ" ಎಂದೆ. ಮನಸ್ಸಿಲ್ಲದೇ "ನಾಳೆ ಬರುತ್ತೀರಾ... ಸ್ಸರಿ, ಬನ್ನಿ" ಎಂದರು. ಫೋನೇನೋ ಇಟ್ಟೆ. ಆದರೆ "ಶ್ರೇಯಾಂಸಿ ಬಹುವಿಘ್ನಾನಿ" ಎಂಬ ಮಾತು ಬಲು ಕೊರೆಯತೊಡಗಿತು. ಅದನ್ನವರು ಸುಮ್ಮನೇ ತಮಾಷೆಯ ಪ್ರತಿಕ್ರಿಯೆಯಾಗಿ ಹೇಳಿದ್ದರೂ, ಯಾರೋ ಹೇಗೋ ಮಾತಿನಲ್ಲಿ ಉರುಳಿಬಿಡುವ ಸುಭಾಷಿತದ ತುಂಡಾಗಿರಲಿಲ್ಲ ಆ ಮಾತು. ಹಿರಿಯರ ಅಪ್ರಜ್ಞಾಪೂರ್ವಕವಾದ ಮಾತಿನಲ್ಲೂ ಒಂದು ಪ್ರಜ್ಞೆ ಕೆಲಸ ಮಾಡುತ್ತಿರುತ್ತದೆನ್ನುವುದು ನನ್ನ ಅನುಭವ.  ಇಲ್ಲಿ 'ಶ್ರೇಯಸ್ಸು' ಯಾರದು? ಅದಕ್ಕೆ ವಿಘ್ನಗಳನ್ನು ತಂದೊಡ್ಡಿಕೊಳ್ಳುತ್ತಿರುವವನು ಯಾರು? ಬಂದದ್ದನ್ನು ನಿವಾರಿಸಿಕೊಳ್ಳುವ ಮನಸ್ಸು ಮಾಡದವನು ಯಾರು, ದೈವ ಒಲಿದು ಬಾಗಿಲಮುಂದೆ ನಿಂತು "ನಿನ್ನ ಶ್ರೇಯಸ್ಸಿಗಾಗಿ ಏನೋ ತಂದಿದ್ದೇನೆ ತೊಗೋ" ಎಂದರೆ 'ನಾಳೆ ಬಾ' ಎನ್ನುವುದಕ್ಕಿಂತ ಮೂರ್ಖತನವಿದೆಯೇ? ಇದ್ದ ಕಡೆಯಿಂದ ಬಿಟ್ಟ ಬಾಣದಂತೆ ಮನೆಸೇರುವವರೆಗೆ ಇಷ್ಟು ಆಲೋಚನೆಗಳು. ಮನೆಗೆ ಬಂದೊಡನೆ ಮುಖತೊಳೆದುಕೊಂಡು ಅವರ ಮನೆಗೆ ಹೊರಟೆ. ತಡವಾಗಿದೆ, ಹಿರಿಯರಿಗೆ ತೊಂದರೆಯಾಗಬಹುದು, ಆದರೆ ಅದನ್ನವರು ತೆಗೆದುಕೊಳ್ಳುತ್ತಾರೆ ಎಂಬ ಭಂಡತನದೊಂದಿಗೆ ಮತ್ತೊಮ್ಮೆ ಕರೆ ಮಾಡಿ ಹೇಳಿದೆ "ಸಾರ್ ವಿಘ್ನನಿವಾರಣೆಯಾಯಿತು ಇನ್ನು ಹತ್ತು ನಿಮಿಷದಲ್ಲಿ ನಿಮ್ಮ ಮನೆಯಲ್ಲಿರುತ್ತೇನೆ". ಅದಕ್ಕವರು "ಓಹೋ ಬರುತ್ತಿದ್ದೀರಾ, ಒಳ್ಳೇದು ಹಾಗಿದ್ದರೆ, ಬನ್ನಿ ಬನ್ನಿ. ನಾನು ವಾಕಿಂಗಿಗೆ ಬಂದಿದ್ದೇನೆ, ಇನ್ನು ಹತ್ತು ನಿಮಿಷದಲ್ಲಿ ಮನೆಯಲ್ಲೇ ಇರುತ್ತೇನೆ ಬನ್ನಿ" ಎಂದರು. "ಅಯ್ಯೋ ವಾಕಿಂಗಿಗೆ ಹೊರಟಿರಾ?  ಹಾಗಿದ್ದರೆ ತೊಂದರೆ ಬೇಡ ಸಾರ್, ನಿಧಾನಕ್ಕೆ ಬನ್ನಿ, ನಾನು..." ಎನ್ನುತ್ತಿದ್ದಂತೆಯೇ ನನ್ನ ಮಾತನ್ನು ಅರ್ಧಕ್ಕೇ ತುಂಡರಿಸಿದ ಅವರು "ಇಲ್ಲ ಇಲ್ಲ, ಬಂದುಬಿಡಿ, ಕಾಯುವುದು ಬೇಡ. An assignment taken is an assignment to be finished; it must be finished promptly; ಇವತ್ತು ಇವತ್ತಿಗೆ, ನಾಳೆ ಹೇಗೋ ಯಾರಿಗೆ ಗೊತ್ತು? ಇದು ಮುಗಿದುಬಿಡಲಿ, ನೀವು ಬಂದುಬಿಡಿ" ಎಂದರು.
 
ಮನೆಗೆ ಹೋಗುವ ಹೊತ್ತಿಗೆ ಗುರುಗಳು ಮೇಜಿನ ಮುಂದೆ ಕೂತು ಏನನ್ನೋ ಬರೆಯುತ್ತಿದ್ದರು. ನಮಸ್ಕಾರ ಸಾರ್ ಎಂದೆ. ತಲೆಯನ್ನೂ ಎತ್ತದೇ "ಬನ್ನಿ ಬನ್ನಿ, ಇದೇನೋ ಕರಡು ತಿದ್ದುವುದು ಅನಿರೀಕ್ಷಿತವಾಗಿ ಬಂತು, ಹತ್ತೇ ನಿಮಿಷದಲ್ಲಿ ಮುಗಿಸಿಬಿಡುತ್ತೇನೆ ಕುಳಿತುಕೊಳ್ಳಿ" ಎಂದರು. ನಮಸ್ಕರಿಸಿ ಕೂರುತ್ತಿದ್ದಂತೆ ಏನೋ ನೆನೆದುಕೊಂಡವರಂತೆ ಪೆನ್ನನ್ನು ಕೆಳಗಿಟ್ಟು ಎದ್ದು ಒಳನಡೆದರು. ಹೊರಬರುತ್ತಾ ಅವರ "ರನ್ನಕವಿ ಕೃತಿಗಳು" ಪುಸ್ತಕವನ್ನು ತಂದು ಕೈಲಿಟ್ಟು "ಇಗೊಳ್ಳಿ, ಇದನ್ನು ನಿಮಗೆ ಕೊಡಬೇಕೆಂದು ಯಾವತ್ತೋ ಎತ್ತಿಟ್ಟಿದ್ದೆ; ನೋಡುತ್ತಿರಿ, ಬಂದೆ" ಎಂದು ಹೇಳಿ ದೊಡ್ಡ ಭಾರ ಕಳೆದವರಂತೆ ಬರೆಯಲು ಕುಳಿತರು.
 
ಇಗೊಳ್ಳಿ, ಇದನ್ನು ನಿಮಗೆ ಕೊಡಬೇಕೆಂದು ಯಾವತ್ತೋ ಎತ್ತಿಟ್ಟಿದ್ದೆ
 
ಹೇಳಿದಂತೆ ಹತ್ತೇ ನಿಮಿಷದಲ್ಲಿ ಬರೆದು ಮುಗಿಸಿ ತಲೆಯೆತ್ತಿ ಹಸನ್ಮುಖಿಯಾಗಿ ಆರಾಮವಾಗಿ ಕೂರುತ್ತಾ ಹೇಳಿದರು "ಮತ್ತೇನು ಸಮಾಚಾರ? ನೀವು ಆ ಪದ್ಯದ ಬಗೆಗೆ ಹೇಳಿದಮೇಲೆ ನಾನೂ ಮತ್ತೊಮ್ಮೆ ಪರಿಶೀಲಿಸಿದೆ, ಈಗಲೂ ಅದನ್ನೇ ಓದುತ್ತಿದ್ದೆ."  ತಮ್ಮ ಮೇಜಿನ ಕಡೆ ಕೈ ತೋರಿಸಿದರು. ಅಲ್ಲಿ ರನ್ನನ ಹಲವು ಆವೃತ್ತಿಗಳು, ಅದರ ಬಗೆಗೆ ಬಂದ ಹಲವು ಲೇಖನ/ಕೃತಿಗಳನ್ನೊಳಗೊಂಡ ಎಂಟು ಹತ್ತು ಪುಸ್ತಕಗಳಿದ್ದುವು - ಅಷ್ಟೂ, ನಾನು ಸುಮ್ಮನೇ ಸಂದೇಹವಾಗಿ ಕೇಳಿದ ಒಂದು ಪದ್ಯದ ಅರ್ಧ ಸಾಲಿಗಾಗಿ! ಅಧ್ಯಯನವೆಂದರೇನು, ಅದರ ಗಂಭೀರತೆಯೇನೆಂಬುದನ್ನು ಕುರಿತು ಪಾಠ ಹೇಳುವಂತಿತ್ತು ಆ ದೃಶ್ಯ. "ತೀನಂಶ್ರೀಯವರ ಮಾತು-ಮಥನ ನೋಡಿ ಇಲ್ಲಿದೆ.  ಅವರು ಬರೆದಿಟ್ಟುಕೊಂಡು ಪ್ರಕಟಿಸದೇ ಬಿಟ್ಟ ಟಿಪ್ಪಣಿಗಳು ಇವು.  ತೊಗೊಳ್ಳಿ but you must return it to me, ಯಾಕೆ ಅಂದ್ರೆ ಇದನ್ನು ನಾನು ಬಹಳ ಓದುತ್ತೇನೆ, ನನ್ನ ಮೇಜಿನ ಮೇಲೇ ಇರುತ್ತೆ ಇದು; ಇದನ್ನು ಓದುವ ಸುಖ ಬಹಳ ದೊಡ್ಡದು" ಎಂದು ಹೇಳಿ ತೀನಂಶ್ರೀಯವರ ಪುಸ್ತಕವನ್ನು ಕೊಟ್ಟರು.  
 
ಇದನ್ನು ಓದುವ ಸುಖ ಬಹಳ ದೊಡ್ಡದು


ಆಮೇಲೆ ಆ ಪದ್ಯ ಕುರಿತು, ಮತ್ತೆ ಇನ್ನೂ ಹಲವು ವಿಷಯ ಕುರಿತು ಸುಮಾರು ಅರ್ಧ ಗಂಟೆ ಮಾತಾಯಿತು. ಮಾತಿನ ಮಧ್ಯೆ ಅದೆಷ್ಟು ಬಾರಿ ಎದ್ದು ಲೈಬ್ರರಿಗೆ ಹೋದರೋ, ಅದೆಷ್ಟು ಪುಸ್ತಕಗಳನ್ನು ತಂದು ತಂದು ತೋರಿಸಿದರೋ. "ಅಂದ ಹಾಗೆ ನೀವು ಅವತ್ತು ಒತ್ತು ಇಳಿ ದೀರ್ಘಗಳ ಬಗೆಗೆ ಕೇಳಿದ್ದಿರಲ್ಲ? ಇರಿ ಬಂದೆ" ಎಂದು ಮತ್ತೊಮ್ಮೆ ಲೈಬ್ರರಿಗೆ ಹೋಗಿ ಪುಸ್ತಕವೊಂದನ್ನು ಹಿಡಿದು ಬಂದು, "ಇಲ್ಲಿ ನೋಡಿ, ನಿಮಗೋಸ್ಕರವೇ ಎತ್ತಿಟ್ಟಿದ್ದೆ ಈ ಪುಸ್ತಕವನ್ನ (ಟಿ ಕೇಶವಭಟ್ಟರು ಬರೆದ 'ಸಂಶೋಧನರತ್ನಮಾಲಿಕೆ') ಸ್ವತಃ ಲೇಖಕರು ಎಸ್ ವಿ ಪರಮೇಶ್ವರಭಟ್ಟರಿಗೆ ಕೊಟ್ಟದ್ದು, ಅದನ್ನವರು ನನಗೆ ಪ್ರೀತಿಪೂರ್ವಕವಾಗಿ ಕೊಟ್ಟರು. ಇದರಲ್ಲಿ ಮುಖ್ಯವಾಗಿ 'ಅಕ್ಷರಸಂಜ್ಞಾಕಾರ'ದ ಅಧ್ಯಾಯವನ್ನು ಜೆರಾಕ್ಸ್ ತೆಗೆಸಿಕೊಂಡು ಪುಸ್ತಕವನ್ನು ನನಗೆ ವಾಪಸು ಕೊಡಿ" ಎಂದರು. 
 
ಸ್ವತಃ ಲೇಖಕರು ಎಸ್ ವಿ ಪರಮೇಶ್ವರಭಟ್ಟರಿಗೆ ಕೊಟ್ಟದ್ದು, ಅದನ್ನವರು ನನಗೆ ಪ್ರೀತಿಪೂರ್ವಕವಾಗಿ ಕೊಟ್ಟರು

"ಅನಂತರಂಗಾಚಾರ್ಯರೂ ಈ ಬಗ್ಗೆ ಬಹುವಿಸ್ತಾರವಾಗಿ ಬರೆದಿದ್ದಾರೆ. ಲೋಚನ ಪತ್ರಿಕೆಯಲ್ಲಿ ಬಲು ಹಿಂದೆ ಪ್ರಕಟವಾಗಿತ್ತು. ನನ್ನ ಬಳಿ ಅದರ ಕಟ್ಟೇ ಇದೆ. ಲೇಖನದ ಸಂಚಿಕೆಗಳನ್ನ ಹುಡುಕಿ ಎತ್ತಿಟ್ಟಿರುತ್ತೇನೆ, ನೀವು ಇನ್ನೊಮ್ಮೆ ಬಂದಾಗ ಕೊಡುತ್ತೇನೆ" ಎಂದರು. ಮತ್ತಿನ್ನೊಂದು ಬಾರಿ ಒಳಗೆದ್ದು ಹೋಗಿ ಪುಸ್ತಕವೊಂದನ್ನು ಹಿಡಿದು ಬಂದಾಗ ನಾನು ತಡೆಯಲಾಗದೇ ಸಂಕೋಚದಿಂದ "ಸಾರ್ ನಿಮ್ಮನ್ನು ತುಂಬಾ ಓಡಾಡಿಸುತ್ತಿದ್ದೇನೆನಿಸುತ್ತಿದೆ" ಎಂದೆ. "ಛೇ, ಹಾಗೇನಿಲ್ಲ" ಎನ್ನುತ್ತಾ ತಾವು ತಂದಿದ್ದ ಡೈರಿಯನ್ನು ಬಿಡಿಸಿ "ಎಲ್ಲಿ, ಯಾವಯಾವ ಪುಸ್ತಕ ಕೊಟ್ಟಿದ್ದೇನೆ ಹೇಳಿ" ಎಂದು ಕೇಳಿ ಕೊಟ್ಟ ಪುಸ್ತಕಗಳ ಹೆಸರು ಬರೆದುಕೊಂಡು, ದಿನಾಂಕ ಬರೆದುಕೊಂಡು "ರನ್ನನದು ಮಾತ್ರ ನಿಮಗೇ.  ಉಳಿದೆರಡನ್ನು ಒಂದು ವಾರ ಇಟ್ಟುಕೊಳ್ಳಿ ಪರವಾಗಿಲ್ಲ, ಆಮೇಲೆ ತಂದುಕೊಟ್ಟುಬಿಡಿ" ಎಂದು ಮತ್ತೊಮ್ಮೆ ಹೇಳಿದರು. ಆ ಹಳೆಯಕಾಲದ ಕಟ್ಟುನಿಟ್ಟು, ಸರಳತೆ, ಅಕ್ಕರೆ, ಉತ್ಸಾಹ, ಹಕ್ಕಿನಿಂದ ಕರೆದು ಬಡಿಸುವ ವಾತ್ಸಲ್ಯ, ಬೆರಳು ತೋರಿಸಿ ಕಟ್ಟು ಮಾಡುವ ಅಧಿಕಾರ - ಪ್ರೊ. ನಿಸಾರರು ಮಾಸ್ತಿಯವರನ್ನು ಕುರಿತು ಹೇಳಿದ "ಸಂದ ಜೀವನದೊಂದು ರೀತಿ" ಕಣ್ಣಮುಂದೆಯೇ ಕಾಣಿಸಿ ಹನಿಗಣ್ಣಾಯಿತು.
 
ಕೊನೆಗೆ ಹೊರಟು ನಿಂತು ರಾಘವಾಂಕ ನಮಸ್ಕರಿಸಿದಾಗ "ರಾಘವಾಂಕ, ಹೇಗಿದ್ದೀಯೋ ಅಣ್ಣ, ಚೆನ್ನಾಗಿ ಓದು, ಬರಿ" ಎಂದು ನನ್ನೆಡೆಗೆ ತಿರುಗಿ "ಮಗನಿಗೆ ಒಳ್ಳೆಯ ಸಂಸ್ಕಾರ ಕೊಡುತ್ತಿದ್ದೀರಿ, ಅದು ಸಂತೋಷ" ಎಂದರು. ನಾನು ಸಂಕೋಚದೊಡನೆ "ನನ್ನದೇನಿಲ್ಲ ಸಾರ್, ಅವನು ಆಯ್ಕೆ ಅವನ ಬದುಕು ಅಷ್ಟೇ" ಎಂದರೆ "ಇಲ್ಲ ಇಲ್ಲ ಹಾಗೆನ್ನಬೇಡಿ, ನೀವು ಪ್ರಯತ್ನಪಟ್ಟು ಕೊಡುವುದೇನು ಇಲ್ಲ. ಅದು ತಾನಾಗೇ ನಿಮ್ಮಿಂದ ಬರುವಂಥದ್ದು. ನನ್ನ ಚಿಕ್ಕಂದಿನಲ್ಲೂ ನಮ್ಮ ತಂದೆಯವರು ತಮ್ಮಷ್ಟಕ್ಕೆ ಪದ್ಯಗಳನ್ನು ಹೇಳುತ್ತಿದ್ದರು, ನನ್ನಿಂದಲೂ ಆಗೀಗ ಹೇಳಿಸುತ್ತಿದ್ದರು. ನನಗೆ ತಾನಾಗೇ ಭಾಷೆಯಲ್ಲಿ ಆಸಕ್ತಿ ಬಂತು. ಆಮೇಲೆ ಮೈಸೂರಿಗೆ ಬಂದಮೇಲಂತೂ ಎಂತೆಂತಹ ಮೇಷ್ಟ್ರುಗಳು - ಕುವೆಂಪು, ತೀನಂಶ್ರೀ, ಡಿಎಲ್ಲೆನ್ - ಇವರಿಂದ ಪಾಠ ಕೇಳುವುದೇನು ಸಾಮಾನ್ಯದ ಮಾತೇ? ಬಲುದೊಡ್ಡ ಭಾಗ್ಯ, ಸುವರ್ಣಯುಗ ಅದು" ಎನ್ನುತ್ತಾ ಹನಿಗಣ್ಣಾದರು.  ಭಾರತೀಯ ಅಳತೆಯಲ್ಲಿ ಇಪ್ಪತ್ನಾಲ್ಕು ನಿಮಿಷಕ್ಕೆ ಒಂದು ಗಳಿಗೆಯೆನ್ನುತ್ತಾರೆ. ಆ ಲೆಕ್ಕದಲ್ಲಿ ನಾವಂದು ಕಳೆದ ಆ ಎರಡು ಗಳಿಗೆಗಳು ಬದುಕಿನ ಅಮೃತಗಳಿಗೆಗಳು. ಎಂದೂ ಇಲ್ಲದ ಧನ್ಯತೆಯೊಡನೆ ಬೀಳ್ಕೊಂಡೆವು.
 
ರನ್ನ ಒಂದುಕಡೆ "ಸಹಸ್ರಮುಖಪ್ರಸಾರಿತಸರಸ್ವತೀಸರಿತ್ಪ್ರವಾಹನಿವಹ"ದ ಬಗೆಗೆ ಹೇಳುತ್ತಾನೆ. ಆದರೆ ಆತ ಆ ಹೋಲಿಕೆಯನ್ನು ತರುವುದು ರಣಭೂಮಿಯಲ್ಲಿ ಸಹಸ್ರಮುಖದಿಂದ ಹರಿಯುತ್ತಿರುವ ರಕ್ತಪ್ರವಾಹದ ಭೀಭತ್ಸವನ್ನು ತೋರಿಸುವ ಸಲುವಾಗಿ. ಆದರೆ ಜ್ಞಾನವಾಹಿನಿ ಸರಸ್ವತಿ ಸ್ವಭಾವತಃ ಸಹಸ್ರಮುಖಿಯೇ "ಪಯಃಪಾರಾವಾರಃ ಪರಿವಹತಿ ಸಾರಸ್ವತಮಿವ" - ಆಕೆಗೆ ಸಾವಿರಾರು ಮೊಲೆಗಳು, ಸಾವಿರಾರು ಧಾರೆಗಳು. ಒಂದೊಂದು ಧಾರೆಯದು ಒಂದೊಂದು ಸ್ವಾದ. ಅದಾವುದೋ ಪ್ರಸನ್ನತೆಯಿಂದ ಒಮ್ಮೊಮ್ಮೆ ವಾತ್ಸಲ್ಯವುಕ್ಕಿ, ತನ್ನ ಸುತ್ತಲೇ ಹರಿಯುವ ಅಮೃತಧಾರೆಗಳ ಪರಿವೆಯಿಲ್ಲದೇ ಅಲ್ಲೆಲ್ಲೋ ಮಣ್ಣಾಟದಲ್ಲಿ ಮೈಮರೆತಿರುವ ಪಾಮರಶಿಶುವನ್ನೂ ಆಕೆ ಬರಸೆಳೆದು ಅಂಥವು ಒಂದೆರಡು ಧಾರೆಗಳನ್ನು ಮಗುವಿನೆಡೆಗೆ ಹರಿಸುವುದುಂಟು. ಪುಟ್ಟ ಹೊಟ್ಟೆಗೆಷ್ಟು ತಾನೆ ಬೇಕು?  ಅದು ಸರಸ್ವತೀಪ್ರಸಾದ - ಅಯಾಚಿತ, ಅದೃಷ್ಟ, ಆಸ್ವಾದ್ಯ.