Tuesday, November 2, 2010

ಸ್ತಬ್ಧ ಚಿತ್ರ

ನಿನ್ನ ಕಣ್ಣಿನ ಮಿಂಚಿನಂಚಿನೊಳಗಿಂದೇನೊ
ಹೊಸ ಹೊಳಪು ಹೊಳೆಯುತಿಹುದು;
ಬೀಸುಗತ್ತಿಯು ಕೂಡ ಕೂರಲಗ ಮೊನೆಯಿಂದ
ಹೂಮಿಂಚನೆಸೆಯುತಿಹುದು.

ಇರುಳಿಡೀ ಸೋನೆಯಲಿ ಮಿಂದು ಚಳಿಹಿಡಿದ ಮುಂ-
ಜಾವೀಗ ನಗುತಲಿಹುದು;
ಎಳೆಬಿಸಿಲ ಕಾಯಿಸುತ ಮಿಡಿಯ ನಾಗರವೊಂದು
ಹೆಡೆಬಿಚ್ಚಿ ತೂಗುತಿಹುದು.

ಹೊಡೆಯುವುದೆ, ಬೇಡ ಬಿಡು; ಎಷ್ಟು ಚೆನ್ನಿದೆ ನೋಡು,
ಕಾಣಿಸದು ರೋಷ ಲೇಶ;
ಏಕೆ ಬಂದಿತೊ ಏನೊ ಸರಿದುಹೋಗಲಿ ತಾನೆ
ನಮಗೇಕೆ ನಾಗದೋಷ.

ಹರಿದ ಹಾದಿಯನಳೆದ ಸೌರಮಾನಗಳೆಷ್ಟೊ
ಸಪ್ತಪದಬಂಧದೊಳಗೆ;
ವೈಶಾಖದಿರುಳುಗಳ ಚಂದಿರನು ಕೂಡೆ ಬೆಳ
ದಿಂಗಳೊಂಭತ್ತರೊಳಗೆ.

ಇಬ್ಬರೊಳಗೊಂದಾಗಿ ಕೂಡಿದೆವು ಕಾಡಿದೆವು
ಬೇಡಿದೆವು ದೇವನಲ್ಲಿ;
ಚೆಂಗುಲಾಬಿಯ ಮೇಲೆ ಇಬ್ಬನಿಯು ನಗುತಿತ್ತು
ಕಂಪೊಡನೆ ತಂಪ ಚೆಲ್ಲಿ.

ಇಲ್ಲಿಬಾ, ತುಸುಹೊತ್ತು ಕೂರೋಣ ನಾವಿಲ್ಲಿ
ಹಚ್ಚಿ ಗಲ್ಲಕ್ಕೆ ಗಲ್ಲ;
ಅಮೃತಗಳಿಗೆಯನಿಂತು ಕಳೆಯುವುದು ತರವಲ್ಲ
ನಲ್ಲೆ ನಾ ನಿನ್ನ ನಲ್ಲ