Wednesday, October 24, 2018

ದೇವೇಗೌಡರಿಗೆ ವಾಲ್ಮೀಕಿಪ್ರಶಸ್ತಿ


ಅಲ್ಲಾ, ಗೌಡರು ಕಾಲಕಾಲಕ್ಕೆ ಹಲವು 'ರಾಮಾಯಣ'ಗಳನ್ನು ಮಾಡಿದ್ದಾರೆ ಇಲ್ಲವೆಂದಲ್ಲ, ತಮ್ಮ ಅರವತ್ತೈದು ವರ್ಷಗಳ ಸುದೀರ್ಘ ರಾಜಕೀಯವೃತ್ತದಲ್ಲಿ ಅವರು ರಚಿಸಿದ ರಾಮಾಯಣದ ಒಟ್ಟು ಮೊತ್ತವೇನು ಕಡಿಮೆಯೇ? - ಎಪಿಕ್ ಪ್ರಮಾಣದ್ದು! ಹಾಗೆಂದ ಮಾತ್ರಕ್ಕೆ, ಈ ಪ್ರಶಸ್ತಿಯನ್ನು ಈ 'ರಾಮಾಯಣ'ಪ್ರತಿಭೆಗಾಗಿ ನೀಡಿದ್ದೆಂದು ನೀವು ಭಾವಿಸಿದ್ದರೆ, ಅಲ್ಲ, ಅಲ್ಲ, ಖಂಡಿತಾ ಅಲ್ಲ. ರಾಜಕೀಯದಲ್ಲೇನು ರಾಮಾಯಣಕ್ಕೆ ಕಡಿಮೆಯೇ - ಇತ್ತೀಚಿನ ಸಮೀಕ್ಷೆಯ ಪ್ರಕಾರ ದಿನಕ್ಕೊಂದು ರಾಮಾಯಣ ಹುಟ್ಟಿಕೊಳ್ಳುತ್ತಿದೆ (ಕ್ಷಣಕ್ಕೊಂದು ಎಂದರೂ ನಡೆದೀತು). ನಮ್ಮ ದೇಶದಲ್ಲಿ ರಾಮಾಯಣದ ಪರಂಪರೆ ಬಹಳ ದೊಡ್ಡದು - ಕಾವ್ಯದಲ್ಲೂ ರಾಜಕೀಯದಲ್ಲೂ. ಹಾಗೆಂದು ಎಲ್ಲಕ್ಕೂ ಪ್ರಶಸ್ತಿ ಕೊಡುತ್ತಾ ಹೋದರೆ ಮುಜರಾಯಿ, ಅಬಕಾರಿ ಎರಡೂ ಇಲಾಖೆಗಳ ಆದಾಯ ಬರಿದಾದೀತು, ಎಷ್ಟೋ ನೌಕರರಿಗೆ ಪಾಕೆಟ್ ಮನಿ ನೀಡಲು ಕಾಸಿಲ್ಲದೇ ಸರ್ಕಾರಕ್ಕೆ ಸರ್ಕಾರವೇ ನಿಮ್ಮ ಮನೆಯ ಮುಂದೆ ಭಿಕ್ಷೆಗೆ ಬಂದು ಕುಳಿತೀತು. ಇನ್ನೆಷ್ಟೆಷ್ಟೋ ದೇವಸ್ಥಾನಗಳು ಮುಜರಾಯಿ ತೆಕ್ಕೆಗೆ ಬಂದಾವು, ಹೆಂಡ ಸಾರಾಯಿ ಚಿನ್ನಕ್ಕಿಂತ ತುಟ್ಟಿಯಾದೀತು, ಮಹಾವಿಪ್ಲವವೇ ಆದೀತು. ಹಾಗೆಲ್ಲಾ ರಾಮಾಯಣಕ್ಕೆ ಪ್ರಶಸ್ತಿ ಕೊಡುವ ಕಾಲ ಯಾವತ್ತೋ ಹೋಯಿತು. ಐನೂರು ವರ್ಷದ ಹಿಂದೆಯೇ ಕುಮಾರವ್ಯಾಸನೇ ಹೇಳಲಿಲ್ಲವೇ "ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ".  ನೆನಪಿಡಿ, ಆತ ಹೇಳಿದ್ದು ಕೇವಲ ರಾಮಾಯಣದ ಕವಿಗಳ ವಿಷಯ. ಇನ್ನು ಮೇಲೆ ಹೇಳಿದ 'ರಾಮಾಯಣ'ಗಳು ಇನ್ನೆನಿತೋ, ಅದರ ಕರ್ತೃಗಳೆನಿತೋ - ಐನೂರು ವರ್ಷವಾದ ಮೇಲೆ ಈಗ ಇನ್ನೂ ಇನ್ನೆನಿತೋ! ಭೂಮಿ ಬಿರಿಯದಿರುವುದು ಹೆಚ್ಚು - ಆಕೆಯ ತಾಳಿಕೆ ಅಮೋಘವಾದದ್ದು. ಹೀಗೆ ಭೂಮಿಗೆ ಭಾರವಾದ ರಾಮಾಯಣದ ಕರ್ತೃಗಳಿಗೆ ಎಲ್ಲಾದರೂ ಪ್ರಶಸ್ತಿ ಕೊಡುವುದುಂಟೇ - ಅದೂ "ರಾಮಾಯಣವನ್ನು ಸುಡಿ" "ರಾಮನಿಗೆ ಚಾವಟಿಯಲ್ಲಿ ಹೊಡೆಯಿರಿ" ಮೊದಲಾದ 'ಭೂಭಾರವನ್ನಿಳಿಸುವ' ಅಭಿಯಾನಗಳು ಜೋರಾಗಿ ನಡೆಯುತ್ತಿರುವ ಈ ಕಾಲದಲ್ಲಿ! ಎಲ್ಲೋ ಭ್ರಾಂತು. ಅದಕ್ಕೇ ಹೇಳಿದ್ದು, ದೇವೇಗೌಡರಿಗೆ ಈ ಪ್ರಶಸ್ತಿ ಸಂದದ್ದು ಅವರ 'ರಾಮಾಯಣ'ಕೃತಿಸರಣಿಗೆ ಅಲ್ಲ, ಅಲ್ಲ, ಖಂಡಿತಾ ಅಲ್ಲ ಎಂದು.
ಹಾಗಿದ್ದರೆ ಕುಶೀಲವರಂತಹ ಇಬ್ಬರು ಮುದ್ದು ಮಕ್ಕಳನ್ನು ಹೆತ್ತುದಕ್ಕೋ? ಅದಕ್ಕೂ ಇರಲಾರದು. ಈ ದೇಶದಲ್ಲಿ ಮಕ್ಕಳ ಸಂಖ್ಯೆಯಂತೂ ರಾಮಾಯಣದ ಕವಿಗಳ ಸಾವಿರಪಟ್ಟು ಹೆಚ್ಚು. ಮಕ್ಕಳ ಹೆತ್ತುದಕ್ಕೆ ಪ್ರಶಸ್ತಿ ಕೊಡಲು ಇದೇನು ಆಸ್ಟ್ರೇಲಿಯಾ ಕೆಟ್ಟುಹೋಯಿತೇ?

ಹಾಗಿದ್ದರೆ ಮತ್ತೇತಕ್ಕೆ ಈ ಪ್ರಶಸ್ತಿ? ಊಹಾಪೋಹಗಳನ್ನು ಪಕ್ಕಕ್ಕಿಡಿ - ಕೆಳಗಿನ ನ್ಯೂಸ್ ಐಟಮ್ ನೋಡಿ - ಈ ಪ್ರಶಸ್ತಿಯನ್ನು ಕೊಡಮಾಡಿದ್ದು "ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿ"ದ್ದಕ್ಕಾಗಿ - ರಾಮಾಯಣಕ್ಕಾಗಿ ಅಲ್ಲ - ವಾಲ್ಮೀಕಿಯೆಂದರೆ ರಾಮಾಯಣವೊಂದನ್ನೇ ಕಾಣುವುದು ನಿಮ್ಮದೇ ದೃಷ್ಟಿದೋಷವೆನ್ನದೇ ವಿಧಿಯಿಲ್ಲ. ಅದಿರಲಿ, ಸ್ವತಃ ರಾಮನಿಂದ ಶೂದ್ರತಪಸ್ವಿಯ ಕೊಲೆ ಮಾಡಿಸಿದ, ಅಸಹಾಯಕ ಹೆಣ್ಣುಮಗಳಾದ ಸೀತೆಯನ್ನು ಗರ್ಭಿಣಿಯೆಂಬುದನ್ನೂ ನೋಡದೇ ಕಾಡಿಗಟ್ಟಿಸಿದ, ದಿಟ್ಟತೆಯಿಂದ 'ಬ್ರಾಹ್ಮಣ್ಯ'ವನ್ನು ತೊರೆದು ಪ್ರಗತಿಪರತೆಯ ದೀಕ್ಷೆತೊಟ್ಟ ರಾವಣೇಶ್ವರನನ್ನೂ ಕೊಲ್ಲಿಸಿದ, ಕಬಂಧ ಮಾರೀಚ ಸುಬಾಹುಗಳೇ ಮೊದಲಾದ ಈ ನೆಲದ ಜನಪ್ರಿಯ ದ್ರಾವಿಡರಾಜರನ್ನು ಬರ್ಬರವಾಗಿ ಕೊಲ್ಲಿಸಿದ, ಪ್ರೇಮಭಿಕ್ಷೆ ಬೇಡಿ ಬಂದ ಶೂರ್ಪಣಖಿಯ ಕಿವಿಮೂಗು ಕೊಯ್ಸಿದ ವಾಲ್ಮೀಕಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದು ಯಾವಾಗ ಎಂದು ನೀವು ಕೇಳಿದರೆ, ಅದು ನಿಮ್ಮ ಅಜ್ಞಾನದ ಪ್ರಶ್ನೆ, ಏಕೆಂದರೆ ಅದು ಕೇವಲ ಕಾವ್ಯ, ಕಟ್ಟುಕತೆ. ಗೊತ್ತಿಲ್ಲವೇ? "ಸೇತುಬಂಧ ಮಾಡಿಸಿದ ರಾಮ ಯಾವ ಯೂನಿವರ್ಸಿಟಿಯಿಂದ ಎಂಜಿನಿಯರಿಂಗ್ ಡಿಗ್ರೀ ಪಡೆದ" ಎನ್ನುವ ದಿವಂಗತ ರಾಜಕಾರಣಿಯೊಬ್ಬರ ಪ್ರಶ್ನೆಗೆ ಪುರಾವೆಯೊದಗಿಸಲು ಇನ್ನೂ ನಮ್ಮಿಂದ ಆಗಿಲ್ಲ. ರಾವಣನಿಗೆ ಹತ್ತು ತಲೆಯಿತ್ತೆಂಬುದೂ ನಂಬಲಾಗದ ವಿಷಯವೇ, ಒಂದು ತಲೆಯೇ ಅಚ್ಚರಿಯ ವಿಷಯವಾದ ಈ ಕಾಲದಲ್ಲಿ.

ಆದ್ದರಿಂದ ರಾಮಾಯಣವು ಸತ್ಯಕತೆಯೆನ್ನುವ ಮೌಢ್ಯಕ್ಕೆ ಬೀಳದಿರಿ (ಮೌಢ್ಯವಿರೋಧಿ ಕಾನೂನು ಜಾರಿಯಲ್ಲಿದೆಯೆಂಬುದನ್ನು ಮರೆಯದಿರಿ). ರಾಮನೆಂಬ ಆರ್ಯರಾಜನ ದುಷ್ಟಗುಣವನ್ನು ಚಿತ್ರಿಸಲು ವಾಲ್ಮೀಕಿ ರಚಿಸಿದ ಕಟ್ಟುಕತೆಯಿದು (ಅಲ್ಲದೇ ಸುಮಾರು ಭಾಗಗಳನ್ನು ಆಮೇಲೆ ಬ್ರಾಮಣರು ಸೇರಿಸಿದರೆಂಬ ವಾದವೂ ಇದೆ). ಆದ್ದರಿಂದ ಇವೆಲ್ಲಕ್ಕೂ ವಾಲ್ಮೀಕಿಯ ಬೆಂಬಲವಿತ್ತೆಂದು ಭಾವಿಸದಿರಿ. ನಿಜವಾದ ಕತೆಯಲ್ಲಿ ಆಮೇಲೆ ನೋಡಿ, ಅದೇ ವಾಲ್ಮೀಕಿ ಅಸಹಾಯಕ ಹೆಣ್ಣುಮಗಳಾದ ಸೀತೆಯನ್ನು ಆಶ್ರಮದಲ್ಲಿರಿಸಿಕೊಂಡು ತಂದೆಯಂತೆ ಪೊರೆಯುತ್ತಾನೆ; ಆಕೆಯ ಮಕ್ಕಳನ್ನು ತಾತನಂತೆ ಸಾಕುತ್ತಾನೆ; ಅವರಿಗೆ ತಾನು ರಚಿಸಿದ ರಾಮಕಥೆಯನ್ನು ಕಲಿಸಿ, ರಾಮನ ಬಳಿಗೇ ಕಳಿಸಿ ಅವನಿಗೆ ಬುದ್ಧಿ ಕಲಿಸುತ್ತಾನೆ. ಹೀಗೆ ವಾಲ್ಮೀಕಿ ಕೇವಲ ತನ್ನ ಜನಾಂಗಕ್ಕಲ್ಲ ಇಡೀ ತುಳಿತಕ್ಕೊಳಗಾದ ಎಲ್ಲರ ಸೆಕ್ಯುಲರ್ ಪ್ರತಿನಿಧಿಯಾಗಿ ನಿಲ್ಲುತ್ತಾನೆ.

ಅದೇನೋ ಸರಿ, ಆದರೆ ವಾಲ್ಮೀಕಿ ಪ್ರಶಸ್ತಿ ಪಡೆಯಲು ದೇವೇಗೌಡರು ವಾಲ್ಮೀಕಿ ಜನಾಂಗಕ್ಕಾದರೂ ಏನು ಮಾಡಿದರು ಎಂದು ಕೇಳಬೇಡಿ. ಅವರೂ ಬಹಳ ಸೆಕ್ಯುಲರ್ ಆಗಿ ಹಿಂದುಳಿದವರನ್ನು ಮುಂದೆ ತರಲು, ಕೆಳಗೆ ಬಿದ್ದವರನ್ನು ಮೇಲೆತ್ತಲು ಶ್ರಮಿಸಿದ್ದಾರೆ. ಏನೂ ಏನೇನೂ ಏನೇನೇನೂ ಇಲ್ಲದವರೆಷ್ಟೋ ಜನ ಅವರ ಕೃಪಾಕಟಾಕ್ಷದಿಂದ ಇಂದು ಲಕ್ಷ್ಮೀಪುತ್ರರಾಗಿ ಸುಖಜೀವನ ನಡೆಸುತ್ತಿದ್ದಾರೆ. ಎಂದ ಮೇಲೆ ಈ ಪ್ರಶಸ್ತಿಗೆ ಅವರಿಗಿಂತ ಹೆಚ್ಚಿನವರಾರು ಯೋಗ್ಯರಿದ್ದಾರು? ಆದ್ದರಿಂದ ಇದು ಖಂಡಿತಾ ಸರಿಯಾದ ಆಯ್ಕೆ ಎಂದು ನನ್ನ ಅನಿಸಿಕೆ.

ಅಂದ ಹಾಗೆ ವಾಲ್ಮೀಕಿಯ ಜನ್ಮದಿನವನ್ನು ಅದಾವ ಇತಿಹಾಸಕಾರರು ಅದು ಹೇಗೆ ಲೆಕ್ಕ ಹಾಕಿದರೋ ತಿಳಿಯದು - ಹೇಗಿದ್ದರೇನು? ಪುಣ್ಯಸ್ಮರಣೆಗೊಂದು ನೆಪ ಸಾಕಲ್ಲವೇ? ಈ ಜಗತ್ತಿಗೆ ರಾಮಾಯಣವೆಂಬ ಬಹುದೊಡ್ಡ ಉಡುಗೊರೆಯನ್ನಿತ್ತ ಮಹರ್ಷಿ ವಾಲ್ಮೀಕಿಯ ದಿವ್ಯಚೇತನ ನಮ್ಮೆಲ್ಲರನ್ನೂ ಪೊರೆಯಲಿ, "ಸೀತಾಯಾಶ್ಚರಿತಂ ಮಹತ್" ಆದ ರಾಮಾಯಣಕಾವ್ಯವು ನಮ್ಮೆಲ್ಲರ ಹೃದಯಗಳನ್ನು ಹದಗೊಳಿಸಲಿ, ಮೆದುಗೊಳಿಸಲಿ, ನಮ್ಮ ಭಾವದಾರಿದ್ರ್ಯವನ್ನು ಹಿಂಗಿಸಲಿ, "ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ" ಎಂದು ನವನಿಷಾದರನ್ನು ಶಪಿಸಬೇಕಾದ ದೌರ್ಭಾಗ್ಯವು ಶೀಘ್ರವಾಗಿ ತಪ್ಪಲಿ ಎಂದು ಈ ಸಂದರ್ಭದಲ್ಲಿ ಆಶಿಸೋಣ.

ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್

(ಈ ಲೇಖನವನ್ನು ಫೇಸ್ಬುಕ್ಕಿನಲ್ಲಿಯೂ ನೋಡಬಹುದು)