Thursday, January 9, 2020

ಚಳಿಗಾಲದ ಚುರುಬಿಸಿಲಿಗೂ ಸೈ, ಸೊಂಪಾದ ರಾತ್ರಿಯೂಟಕ್ಕೂ ಸೈ - ಮಜ್ಜಿಗೇಹುಳಿಗೊಜ್ಜು

ಅಪರೂಪಕ್ಕೆ ಸಮಯ ಸಾಧಿಸಿ ಅಡುಗೆಮನೆಗೆ ನುಗ್ಗುವ ನಮ್ಮಂತಹ ಹವ್ಯಾಸಿ ಅಡುಗೆಕೋರರಿಗೆ ಸಿದ್ಧ ರೆಸಿಪಿಗಳಿರುವುದಿಲ್ಲ (ಏನು? ರೆಸಿಪಿ ನೋಡಿಕೊಂಡು ಅಡುಗೆ ಮಾಡುವುದೇ!) ನಮಗೆ ಅಡುಗೆಯೆನ್ನುವುದೇನಿದ್ದರೂ ಆ ಕ್ಷಣದ ಸ್ಫೂರ್ತಿಯಿಂದ ಉದಿಸುವ ಕಾವ್ಯದಂತೆ, ಮನೋಧರ್ಮಸಂಗೀತವೇ ಎನ್ನೋಣ.  ಅವತ್ತಿನ ವಿನಿಕೆ ಯಾ ಉಣಿಕೆ ಅವತ್ತಿಗೆ ಕಳೆಗಟ್ಟಿದರೆ ಕಟ್ಟಿತು ಇಲ್ಲದಿದ್ದರಿಲ್ಲ, ಇವತ್ತು ಮಾಡಿದ್ದು ನಾಳೆಗೆ ಮತ್ತೆ ಹಾಗೆಯೇ ಮೂಡುವ ಭರವಸೆಯಿಲ್ಲ.  ಆದ್ದರಿಂದ ಇಂದು ಚೆಂದ ಕಂಡದ್ದನ್ನು ಬರೆದಿಟ್ಟುಬಿಡುವ ಪ್ರಯತ್ನವಷ್ಟೇ ಇದು.  "ಅಯ್ಯೋ, ಇದೇನು ಹೊಸದು, ನಾವು ಮಾಡಿಲ್ಲದ ಅಡುಗೆಯೇ?" ಎಂದು ಪಾಕಪ್ರವೀಣರು ಮೂಗು ಮುರಿಯಬೇಡಿ, ಈ 'ರೆಸಿಪಿ' ನಿಮಗಲ್ಲ.  ಕಾಫಿಗೆ ಎಷ್ಟು ಟೇಬಲ್ ಸ್ಪೂನ್ ಉಪ್ಪು ಹಾಕಬೇಕೆಂದರಿಯದ, ಅನ್ನ ಮಾಡಲು ರೆಸಿಪಿ ಕೇಳುವ, "ಒಲೆ ಹೊತ್ತಿಸಿ" ಎಂಬ ಸಾಲನ್ನು ರೆಸಿಪಿಯಲ್ಲಿ ಹುಡುಕುವ ನೂರಾರು ಮುಗ್ಧ ಜೀವಗಳು, ಮನೆಯಿಂದ ದೂರದಲ್ಲೆಲ್ಲೆಲ್ಲೋ ಬದುಕುತ್ತಾ ಇದ್ದಾವೆ, ಅವರಿಗೂ ಹೊಟ್ಟೆಯಿದೆ, ಬಾರದ ಅಡುಗೆಯಿಂದ ಆ ಹೊಟ್ಟೆತುಂಬಿಸಿಕೊಳ್ಳುವ ಅನಿವಾರ್ಯತೆಯೂ ಇದೆ ಎಂಬುದನ್ನು ಅನುಭವದಿಂದ ಬಲ್ಲೆ.  ಆ ಒಂಟಿ ಜೀವಗಳ ಊಟ ಕಿಂಚಿತ್ತು ರಸಮಯವಾಗುವುವಾದರೆ ಆಗಲಿ ಬಿಡಿ, ಅಲ್ಲವೇ?  ನೀವೂ ಬೇಕಿದ್ದರೆ ಮನೆಯಲ್ಲಿ ಇದನ್ನು ಪ್ರಯತ್ನಿಸಬಹುದು - ಪರಿಣಾಮಗಳಿಗೆ ನೀವೇ ಹೊಣೆಯಷ್ಟೇ.

ಹೊಸದೇನೂ ಇಲ್ಲ, ವಾಸ್ತವದಲ್ಲಿ ಇದು ಮಜ್ಜಿಗೆಹುಳಿ ಮತ್ತು ಗೊಜ್ಜು ಇವೆರಡರ ಮಿಶ್ರಣ - ಮೈನಸ್ ಕೆಲವಂಶಗಳು ಪ್ಲಸ್ ಕೆಲವಂಶಗಳು ಎಂದಿಟ್ಟುಕೊಂಡರಾದೀತು.  ಇದನ್ನು ಅನ್ನಕ್ಕೆ ಕಲಸಿದರೆ ಮೊಸರನ್ನದ ಪರಿಷ್ಕೃತ ಆವೃತ್ತಿ, ಆದರೆ ಅನ್ನಕ್ಕೆ ಕಲಸಲೇಬೇಕೆಂದಿಲ್ಲ, ಬೇರೆಬೇರೆ ತಿಂಡಿಗಳಿಗೆ ನೆಂಜಿಕೊಳ್ಳಲು ಬಳಸಬಹುದು, ಹಾಗೆಯೇ ತಿನ್ನಲೂ ರುಚಿಯೇ.  

ಮೊಸರನ್ನದ ಹದದಲ್ಲಿ ಒಂದು ಪಾವಿನ ಅನ್ನ ಕಲಸುವಷ್ಟು ಮಜ್ಜಿಗೆಹುಳಿಗೊಜ್ಜಿಗೆ ಬೇಕಾಗುವ ಸಾಮಗ್ರಿ:
  1. ಕಾಲು ಲೀಟರು ಚೆನ್ನಾಗಿ ಹುಳಿ ಬಂದ ಮೊಸರು (ಗಂಟುಗಳಿಲ್ಲದಂತೆ ಗೊಟಾಯಿಸಿಟ್ಟುಕೊಳ್ಳಿ)
  2. ಅರ್ಧ ಲೀಟರು ಹೊಸದಾದ ಸಿಹಿ ಮೊಸರು, ಅನ್ನಕ್ಕೆ ಕಲಸುವುದಿದ್ದರೆ ಮಾತ್ರ (ಗಂಟುಗಳಿಲ್ಲದಂತೆ ಗೊಟಾಯಿಸಿಟ್ಟುಕೊಳ್ಳಿ)
  3. ಒಂದೂವರೆ ಟೇಬಲ್ ಚಮಚೆಯಷ್ಟು ಅಕ್ಕಿ ಹಿಟ್ಟು
  4. ಒಂದು ಚಮಚೆ ಕಡಲೆ ಹಿಟ್ಟು
  5. ನಾಲ್ಕು ದೊಡ್ಡದಾದ ಹಸಿಮೆಣಸಿನ ಕಾಯಿ
  6. ಒಂದು ದೊಡ್ಡ ಈರುಳ್ಳಿ
  7. ಎರಡು ದೊಡ್ಡ, ಕೆಂಪಗೆ ಹಣ್ಣಾದ ಟೊಮ್ಯಾಟೋ
  8. ಒಂದು ದೊಡ್ಡ ನಿಂಬೆ ಹಣ್ಣು
  9. ಒಂದು ಟೇಬಲ್ ಚಮಚೆಯಷ್ಟು ತುಪ್ಪ
  10. ಒಗ್ಗರಣೆಯ ವಸ್ತುಗಳು - ಸಾಸಿವೆ, ಕಡಲೇಬೇಳೆ, ಉದ್ದಿನಬೇಳೆ, ಮೆಂತ್ಯ, ಇಂಗು, ಕರಿಬೇವು/ಕೊತ್ತಂಬರಿ ಸೊಪ್ಪು
  11. ಒಂದು ಚಮಚೆ ಉಪ್ಪಿನ ಕಾಯಿ - ನಿಂಬೆ/ಮಾವು ಇತ್ಯಾದಿ
  12. ಮಸಾಲೆಯ ಪುಡಿ (ಒಂದೊಂದು ಚಿಟಿಕೆ ಬೆರೆಸಿ ಇಟ್ಟುಕೊಳ್ಳುವುದು) - ಅಚ್ಚಕಾರದ ಪುಡಿ, ಕಾಳುಮೆಣಸಿನ ಪುಡಿ, ಇಂಗು, ಸಾರಿನಪುಡಿ/ಹುಳಿಪುಡಿ, ಅರಿಸಿನ, ಇದ್ದರೆ ಪಾನಿಪುರಿ/ಚಾಟ್ ಮಸಾಲೆ ಪುಡಿಯನ್ನೂ ಒಂದು ಚಿಟಿಕೆ ಬೆರೆಸಿಕೊಳ್ಳಬಹುದು
  13. ಎರಡು ಟೀ ಚಮಚೆ ಸಕ್ಕರೆ ಅಥವಾ ಬೆಲ್ಲದ ಪುಡಿ
  14. ರುಚಿಗೆ ತಕ್ಕಷ್ಟು ಉಪ್ಪು

ಹೀಗೆ ಮಾಡಿ:
  1. ಹಸಿ ಮೆಣಸಿನಕಾಯಿ, ಈರುಳ್ಳಿ, ಟೊಮ್ಯಾಟೋ, ಕೊತ್ತಂಬರಿ/ಕರಿಬೇವು ಇವುಗಳನ್ನು ಸಣ್ಣಗೆ, ಬೇರೆಬೇರೆಯಾಗಿ ಹೆಚ್ಚಿಟ್ಟುಕೊಳ್ಳಿ.
  2. ಒಂದು ಲೋಟ ನೀರಿಗೆ ಅಕ್ಕಿ ಹಿಟ್ಟು ಮತ್ತು ಕಡಲೆ ಹಿಟ್ಟುಗಳನ್ನು ಹಾಕಿ ಗಂಟುಗಳಿಲ್ಲದಂತೆ ಕದರಿ, ಹೆಚ್ಚಿರುವುದರಲ್ಲಿ ಸ್ವಲ್ಪ ಮೆಣಸಿನಕಾಯಿ ತುಂಡುಗಳನ್ನೂ ಹಾಕಿ ಒಲೆಯ ಮೇಲಿಡಿ (ಒಲೆ ಹೊತ್ತಿಸಿರಬೇಕೆಂದು ಬೇರೆ ಹೇಳಬೇಕಿಲ್ಲವಲ್ಲ)
  3. ಅದು ಕಾಯುತ್ತಿರುವಾಗ ಒಂದು ಚಿಟಿಕೆ ಅರಿಸಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
  4. ಒಂದು ಕುದಿ ಸಾಕು - ಮಿಶ್ರಣವು ನೀರಾದ ಅಂಬಲಿಯಂತಾದ ಮೇಲೆ, ಹುಳಿ ಮೊಸರನ್ನು ಹಾಕಿ, ತಕ್ಷಣ ಒಲೆಯ ಮೇಲಿಂದ ತೆಗೆದು, ಅರ್ಧ ನಿಂಬೆಹಣ್ಣು ಹಿಂಡಿ, ಚೆನ್ನಾಗಿ ಗೊಟಾಯಿಸಿ ಪಕ್ಕಕ್ಕಿಡಿ, ಆರಲಿ.
  5. ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿ ಒಲೆಯ ಮೇಲಿಡಿ, ಅದು ಕಾದ ಮೇಲೆ ಸಾಸಿವೆ ಹಾಕಿ, ಚಟಗುಟ್ಟಿದ ಮೇಲೆ ಉಳಿದ ಒಗ್ಗರಣೆಯ ವಸ್ತುಗಳನ್ನು ಹಾಕಿ, ಉರಿ ಕಡಿಮೆ ಮಾಡಿ
  6. ಉಳಿದ ಮೆಣಸಿನಕಾಯಿ ತುಂಡಿನಲ್ಲಿ ಅರ್ಧ, ಈರುಳ್ಳಿ ಮತ್ತು ಟೊಮ್ಯಾಟೋ ತುಂಡುಗಳಲ್ಲಿ ಅರ್ಧ ಹಾಕಿ
  7. ಬೆರೆಸಿಟ್ಟುಕೊಂಡ ಮಸಾಲೆ ಪುಡಿ, ಸಕ್ಕರೆ/ಬೆಲ್ಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಒಂದು ಚಮಚೆ ಉಪ್ಪಿನ ಕಾಯನ್ನು ಹಾಕಿ, ಚೆನ್ನಾಗಿ ಕಲಸಿ, ಕೈಯಾಡಿಸುತ್ತಾ ಎರಡು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.
  8. ಈರುಳ್ಳಿ ಮತ್ತು ಟೊಮ್ಯಾಟೋ ಸಾಕಷ್ಟು ಬೆಂದು ಗೊಜ್ಜಿನ ಹದಕ್ಕೆ ಬಂದ ಮೇಲೆ ಈಗಾಗಲೇ ಮಾಡಿಟ್ಟುಕೊಂಡ ಮಜ್ಜಿಗೆಹುಳಿಯ ಮಿಶ್ರಣವನ್ನು ಇದಕ್ಕೆ ಹಾಕಿ ಚೆನ್ನಾಗಿ ಕಲಕಿ, ಒಂದು ಕುದಿ ಬರುವ ಮೊದಲೇ ಒಲೆ ಆರಿಸಿಬಿಡಿ.
  9. ಈಗ ಅರ್ಧ ನಿಂಬೆಹಣ್ಣು ಹಿಂಡಿ, ಉಳಿದಿರುವ ಮೆಣಸಿನಕಾಯಿ, ಈರುಳ್ಳಿ ಮತ್ತು ಟೊಮ್ಯಾಟೋ ತುಂಡುಗಳನ್ನು ಹಾಕಿ ಚೆನ್ನಾಗಿ ಕಲಕಿ ಆರಲು ಎತ್ತಿಡಿ.
ರುಚಿರುಚಿಯಾದ ಮಜ್ಜಿಗೆಹುಳಿಗೊಜ್ಜು ತಯಾರಾಯಿತು.  ಇದನ್ನು ಹಾಗೆಯೇ ತಿನ್ನಲು ಬಳಸಬಹುದು, ಬೇರೆ ತಿಂಡಿಗಳೊಟ್ಟಿಗೆ ನೆಂಜಿಕೊಳ್ಳಲೂ ಬಳಸಬಹುದು ಅಥವಾ ಮೊಸರನ್ನದಂತೆ ಅನ್ನಕ್ಕೂ ಕಲಸಬಹುದು.  

ಅನ್ನಕ್ಕೆ ಕಲಸುವುದಾದರೆ, ಒಂದು ಪಾವಿನಷ್ಟು ಅನ್ನಕ್ಕೆ ಸೇರಿಸಿ ಚೆನ್ನಾಗಿ ಕಲಸಿ ಒಂದು ಹತ್ತು ನಿಮಿಷ ನೆನೆಯಲು ಬಿಡಿ.  ಸ್ವಲ್ಪ ಹೊತ್ತಾದ ಮೇಲೆ ಅನ್ನವು ಕಲಸಿದ ಹುಳಿಗೊಜ್ಜನ್ನು ಹೀರಿಕೊಂಡು ಸ್ವಲ್ಪ ಬಿಗಿಯಾಗುತ್ತದೆ.  ಈಗ ಹೊಸದಾದ ಸಿಹಿ ಮೊಸರು ಸೇರಿಸಿ ಮೊಸರನ್ನದ ಹದಕ್ಕೆ ಕಲಸಿ - ಮಜ್ಜಿಗೆಹುಳಿಗೊಜ್ಜಿನ ಅನ್ನ ಸವಿಯಲು ತಯಾರು.