Sunday, March 22, 2020

ಧರ್ಮ-ವಿಜ್ಞಾನ-ವೈಜ್ಜಾನಿಕದೃಷ್ಟಿ


ಸನಾತನಧರ್ಮವೆಂಬುದು ಭಾರತೀಯರು ಸಾವಿರಾರು ವರ್ಷಗಳಿಂದ ರೂಢಿಸಿಕೊಂಡು ಬಂದ ಬದುಕಿನ ವಿಧಾನ - ಹಲವು ಜೀವನಶೈಲಿ, ನಂಬುಗೆ, ಪದ್ಧತಿ, ಸಂಪ್ರದಾಯ, ಆಚರಣೆಗಳ ಕುದಿಮಡಕೆ (melting pot).  ಇಲ್ಲಿ ವೈವಿಧ್ಯವಿದೆ, ವೈರುಧ್ಯಗಳೂ ಇವೆ, ತಗ್ಗುತೆವರುಗಳಿವೆ, ಸಾಮರಸ್ಯವಿದೆ, ಪ್ರಶ್ನೆಗಾಸ್ಪದವಿದೆ, ಆರೋಗ್ಯಕರ ಹಾಸ್ಯಕ್ಕೂ.  ಶತಮಾನಗಳಿಂದ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾ ಪರಿಶೀಲಿಸಿಕೊಳ್ಳುತ್ತಾ ಸರಿಪಡಿಸಿಕೊಳ್ಳುತ್ತಾ, ಹರಿದಿರುವ ಇದು, ನಿರಂತರ, ಚಲನಶೀಲ, ಪರಿವರ್ತನಶೀಲ ಕೂಡ.  ಕಾಲದಿಂದ ಕಾಲಕ್ಕೆ ತನ್ನ ತೆಕ್ಕೆಗೆ ಬಂದ ಹಲವು ಮತ-ಪಂಥ-ವಿಚಾರಧಾರೆಗಳನ್ನು ತನ್ನ ಮುಖ್ಯವಾಹಿನಿಯಲ್ಲಿ ಒಳಗೊಳ್ಳುತ್ತಾ ಹರಿದಿರುವ ಇದು ನಿರ್ದಿಷ್ಟ ಮತವಲ್ಲ, ಭಾರತೀಯನ ಸಹಜ ಜೀವನಧರ್ಮ.  ಇದರಲ್ಲಿ ನಂಬಿಕೆಶ್ರದ್ಧೆಗಳು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳುವಂಥವಲ್ಲ, ಸಹಜವಾಗಿಯೇ ಬರುವಂಥವು.  ಮೀನಿಗೆ ನೀರಿನಲ್ಲಿ ಈಜಲು ಬರುವುದಿಲ್ಲವೆಂದರೂ ನೀರನ್ನು ಬಿಟ್ಟು ನೆಲದ ಮೇಲೆ ಬಂದು ಬದುಕಬಲ್ಲುದೇ?  ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ

ಆದರೆ ಸನಾತನಧರ್ಮದಲ್ಲಿ ಅಭಿಮಾನವನ್ನು ಮಾತ್ರ ಉಳಿಸಿಕೊಂಡು ಇದರ ಮಹತ್ತನ್ನು ಮರೆತ, ಅದು ಹೇಗೋ ಪರವಿಚಾರಧಾರೆಯ ಪ್ರಭಾವಳಿಗೆ ಸಿಕ್ಕ ಮನಸ್ಸುಗಳಲ್ಲಿ ತಮ್ಮ ಸನಾತನಧರ್ಮದ ವಿಷಯದಲ್ಲಿ ಏನೋ ಕೀಳರಿಮೆ, ಏನೋ ಕೊರತೆ.  ತಮ್ಮ ಧರ್ಮವು 'ಕಂದಾಚಾರಗಳ ಮೂಟೆ'ಯೆಂದು ಯಾರೋ ಹೇಳಿದ ಮಾತಿನಲ್ಲಿ ದುಃಖಭರಿತ ನಂಬಿಕೆ, ಜೊತೆಗೆ ಕೆರಳಿಕೆ ಕೂಡ - ಆ ಮಾತನ್ನು ಸುಳ್ಳಾಗಿಸಬೇಕೆಂಬ ಹಳಹಳಿ.  ಅದಕ್ಕಾಗಿ ತಮ್ಮ 'ಧರ್ಮ' ಅತ್ಯಂತ ವೈಜ್ಞಾನಿಕಧರ್ಮವೆಂದು ಹೇಗಾದರೂ ಸಾಧಿಸಿ ತೋರಿಸಬೇಕೆಂಬ ಕಳಕಳಿ.  ವಿಜ್ಜಾನ ಬೇರೆ, ವೈಜ್ಞಾನಿಕತೆ ಬೇರೆ, ಧರ್ಮ ಬೇರೆ, ಮತ ಬೇರೆ, ನಂಬಿಕೆ ಬೇರೆ ಎಂಬ ಬೇರ್ಮೆ ಬುದ್ಧಿಗೆ ಹೋಗದು.  ಹೀಗಾದಾಗ, ಎಲ್ಲಕ್ಕೂ 'ವೈಜ್ಞಾನಿಕ' ವಿವರಣೆ ನೀಡುವ ತೆವಲು ಹುಟ್ಟಿಕೊಳ್ಳುತ್ತದೆ.  ಹಾಗೆ ವಿವರಣೆ ನೀಡುವವರಿಗೆ ಇತ್ತ ವಿಜ್ಞಾನವೂ ತಿಳಿದಿರುವುದಿಲ್ಲ, ಅತ್ತ ಪುರಾಣವೂ ತಿಳಿದಿರುವುದಿಲ್ಲ, ವೈಜ್ಞಾನಿಕಮನೋವೃತ್ತಿಯಂತೂ ಮೊದಲೇ ಇರುವುದಿಲ್ಲ.  ಯಾರಾದರೂ "ನಿಮ್ಮ ಶಿವ ನಿಜಕ್ಕೂ ಗಣೇಶನಿಗೆ ಆನೆ ತಲೆ ಜೋಡಿಸಿದನಾ" ಎಂದು ಲೇವಡಿ ಮಾಡಿದರೆಂದಿಟ್ಟುಕೊಳ್ಳಿ.  "ಹೌದಪ್ಪ, ಹಾಗೆ ಪುರಾಣದ ಕತೆ ಹೇಳುತ್ತದೆ, ಈಗ, ಜೀಸಸ್ ಸತ್ತ ಮೇಲೆ ಬದುಕಿ ಬರಲಿಲ್ಲವೇ ಹಾಗೇ, ಅದು ನಂಬಿಕೆಗೆ ಸಂಬಂಧಿಸಿದ ವಿಚಾರ, ನಮ್ಮ ಪಾಲಿಗೆ ಅದು ಪವಿತ್ರ ನಂಬಿಕೆ, ಪ್ರತಿಯೊಬ್ಬರಿಗೂ ಅವರವರ ನಂಬಿಕೆ ಪವಿತ್ರವಲ್ಲವೇ" ಎಂದು ಹೇಳಿ ಕೈಮುಗಿದು ಸುಮ್ಮನಾಗಲು ಮನಸ್ಸು ಬರುವುದಿಲ್ಲ. ಅನೇಕ ಪುರಾಣಕತೆಗಳಿಗೆ ಅದರದ್ದೇ ಆದ ಸಾಂಕೇತಿಕತೆಯಿರುತ್ತದೆ, ಕೆಲವೊಮ್ಮೆ ಕಲ್ಪನಾವಿಲಾಸವೂ ಇರಬಹುದು, ಮತಭಕ್ತಿಯೂ.  ಅದನ್ನು ಪರಿಶೀಲಿಸಿ ಅದು ಇರುವ ಹಾಗೇ ಒಪ್ಪಿ ಅದಕ್ಕೆ ತಕ್ಕ ಶ್ರದ್ಧೆಯಿಂದ ಮುಂದುವರೆಯಲು ಮನಸ್ಸು ಒಪ್ಪುವುದೇ ಇಲ್ಲ.  "ಹೂಂ ಮತ್ತೆ, ನಮ್ಮ ಹಿಂದೂ ಧರ್ಮ ಮತ್ತೇನೆಂದುಕೊಂಡಿರಿ, ಆಗಲೇ ನಮ್ಮಲ್ಲಿ ವಿಜ್ಞಾನ ಎಷ್ಟು ಮುಂದುವರೆದಿತ್ತು ಗೊತ್ತಾ, Head Transplantation ನಮಗೆ ಆಗಲೇ ಗೊತ್ತಿತ್ತು, Shiva was the first Head Surgeon" ಎಂದು ಬೊಂಕುತ್ತಾರೆ, ನಗುವವರ ಮುಂದೆ ಎಡವಿ ಬೀಳುತ್ತಾರೆ.  ಈ ವಿವರಣೆಗಳನ್ನು ಕಂಡು ಹಾಸ್ಯ ಮಾಡಿದವ, ಸ್ವಘೋಷಿತಧರ್ಮರಕ್ಷಕರ ದೃಷ್ಟಿಯಲ್ಲಿ ಧರ್ಮದ್ರೋಹಿಯಾಗಿಬಿಡುತ್ತಾನೆ (ಆತ ಮನೆಯಲ್ಲಿ ಶ್ರದ್ಧೆಯಿಂದ ತ್ರಿಕಾಲಸಂಧ್ಯಾವಂದನೆ, ದೇವತಾರ್ಚನೆ ಮಾಡುತ್ತಿದ್ದರೂ)! ನಮಸ್ಕಾರ-ಆಶೀರ್ವಾದಗಳಂತಹ ಗೌರವ-ವಾತ್ಸಲ್ಯಗಳ, ಆತ್ಮವಿಶ್ವಾಸ-ಭರವಸೆ ತುಂಬುವ ಸಾಮಾಜಿಕ-ಸಾಂಪ್ರದಾಯಿಕ ಕ್ರಿಯೆ ಕೂಡ, ತನ್ನ ಪವಿತ್ರಭಾವನೆಯಿಂದ ನಮ್ಮ ಮನಗೆಲ್ಲುವುದಿಲ್ಲ, ಅದಕ್ಕೆ ವೈಜ್ಞಾನಿಕ ವಿವರಣೆಯೇ ಬೇಕು - ಎಂಥದ್ದೋ blah blah blah ಕಿರಣಗಳು ಎಲ್ಲಿಂದಲೋ ಹೊರಟು ಇನ್ನೆಲ್ಲೋ ಹೊಕ್ಕು, ಮಿದುಳನ್ನೋ ಹೃದಯವನ್ನೋ ಕಿಡ್ನಿಯನ್ನೋ ಮೀಟಿ ಅದೇನೋ ಮ್ಯಾಜಿಕ್ ಮಾಡಿಬಿಡುತ್ತದೆ, "ನೋಡಿದಿರಾ, ನಮ್ಮ ಸನಾತನ ಹಿಂದೂಧರ್ಮದಲ್ಲಿ ಇವೆಲ್ಲಾ ಹೇಗೆ ಕಂಡುಹಿಡಿದಿದ್ದಾರೆ"!  ಮೊನ್ನೆ ವಾಟ್ಸಪ್ ಜಂಕಿನಲ್ಲಿ ಒಂದು ಬಂದಿತ್ತು.  ಶಿಖೆ ಬಿಡುವುದರಿಂದ ಜುಟ್ಟಿನ ಭಾರವು ತಲೆಯ ಹಿಂಭಾಗವನ್ನು ಚುಳ್ಳಗೆ ಎಳೆದು ಮಿದುಳಿನ ಮೇಲೆ ಅದೆಂಥದ್ದೋ ಒತ್ತಡ ಹಾಕುತ್ತದಂತೆ.  ಅದರಿಂದ concentration, mind-control, memory ಇವೆಲ್ಲಾ ವೃದ್ಧಿಸುತ್ತವಂತೆ.  ಯಜ್ಞೋಪವೀತವು ಅದಾವುದೋ ಕಾಸ್ಮಿಕ್ ಕಿರಣಗಳನ್ನು ಆಕರ್ಷಿಸಿ ಎಡಭುಜದಿಂದ ಬಲಸೊಂಟದವರೆಗೂ ಹಾದು ಹೃದಯ, ಶ್ವಾಸಕೋಶ, ಕಿಡ್ನಿಗಳನ್ನು ಬಲಗೊಳಿಸುತ್ತವಂತೆ.  ಇವೆಲ್ಲಾ ಯುವಜನರಲ್ಲಿ ಸನಾತನಧರ್ಮವನ್ನು popularize ಮಾಡುವ ಹತಾಶಪ್ರಯತ್ನದಂತೆ ಕಾಣುವುದಿಲ್ಲವೇ?  ಅಲ್ಪಸ್ವಲ್ಪ ವಿಜ್ಞಾನ ಓದಿಕೊಂಡು, ಅದೇ ಎಲ್ಲ ಎಂದು ತಿಳಿದುಕೊಂಡು ತಾವೇ ಬೃಹಸ್ಪತಿಯೆಂಬ ಭ್ರಮೆಯಲ್ಲಿ ಬೀಗುವ ಪಡ್ಡೆಗಳಿಗಂತೂ ಇದು ಇನ್ನೂ ನಗೆಪಾಟಲಾಗುತ್ತವಲ್ಲವೇ?  ಇದರ ಬದಲು ಮಕ್ಕಳಿಗೆ ಮನೆಯಲ್ಲಿ ಸ್ತೋತ್ರಪಾಠಾದಿಗಳನ್ನು ಹೇಳಿಕೊಟ್ಟು, ದೇವರಿಗೆ ಗುರುಹಿರಿಯರಿಗೆ ನಮಸ್ಕರಿಸುವ, ಆಯಾ ಸಮಯ ಸಂದರ್ಭಕ್ಕೆ ತಕ್ಕಂತೆ ಉಡುಪು ನಡೆನುಡಿ ಕಲಿಸಿಕೊಡುವ, ಅವುಗಳ ಮಹತ್ವವನ್ನು **ವಿಜ್ಞಾನದ ಹಂಗಿಲ್ಲದೇ** ಸರಳವಾಗಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದರೆ ಬಹುಕಾಲ ಅವು ಮಕ್ಕಳಲ್ಲಿ ಉಳಿಯುವುದಲ್ಲವೇ?  ಮಕ್ಕಳು ಪ್ರಶ್ನಿಸುವುದಿಲ್ಲವೆಂದಲ್ಲ.  ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ಪ್ರಶ್ನೆಗಳೇ ಹೆಚ್ಚು.  ಹಿಂದಿನ ಕಾಲದಲ್ಲಿ ಇಂತಹ ಪ್ರಶ್ನೆಗಳಿಗೆ ಸಿಡುಕುತ್ತಿದ್ದರು, ಈಗಿನವರು ಸಮಾಧಾನದಿಂದ 'ವೈಜ್ಞಾನಿಕ ಉತ್ತರ'ಗಳನ್ನು ಹೊಸೆದು ಕೊಡುತ್ತಾರೆ, ಎರಡೂ ಏಕಪ್ರಕಾರವಾಗಿ 'ಡ್ಯಾಮೇಜ್' ಮಾಡುವಂಥವು.  ಪ್ರಶ್ನೆ ಕೇಳುವುದು ನಮ್ಮ ಧರ್ಮದಲ್ಲಿಯೇ ಇದೆ, ಕೇಳಬೇಕು ಕೂಡ.  ಆದರೆ ಪ್ರಶ್ನೆಗೆಲ್ಲ ಉತ್ತರಿಸಲೇಬೇಕೆಂಬ ನಿಯಮವಾದರೂ ಎಲ್ಲಿದೆ?  ಕೆಲವಕ್ಕೆ ಉತ್ತರವಿರುತ್ತದೆ (ಅದರಲ್ಲಿ ನಿಜಕ್ಕೂ ಸ್ವಲ್ಪ ವಿಜ್ಞಾನವೂ ಇರಬಹುದು), ಕೆಲವಕ್ಕೆ ನಂಬಿಕೆ-ಶ್ರದ್ಧೆಗಳೇ ಉತ್ತರ.  ಅವನ್ನು ಒಪ್ಪಿ ಅಪ್ಪುವ, ಅಥವಾ ಗೌರವಪೂರ್ವಕವಾಗಿ ಪ್ರಶ್ನಿಸುವ/ನಿರಾಕರಿಸುವ ಸಂಸ್ಕಾರ ಮಕ್ಕಳಲ್ಲಿದ್ದರೆ ಆಯಿತು.  ಇನ್ನು ಕೆಲವಕ್ಕೆ ಉತ್ತರ ಕಂಡುಕೊಳ್ಳುವುದು ಕೇಳುವವನದೇ ಹೊಣೆ.  ಉಹೂಂ, ನಮಗೆ ಈ 'ಅವೈಜ್ಞಾನಿಕ' ಕ್ರಮಗಳಿಂದ ಸಮಾಧಾನವಾಗದು - ವಿವರಿಸಲು ವಿಜ್ಞಾನವೇ ಬೇಕು.  ವೈಜ್ಞಾನಿಕ ವಿವರಣೆಯಿಲ್ಲದಿದ್ದರೆ ಒಂದು ಹೊಸೆದರಾಯಿತು.

ಮೊನ್ನೆ ಇನ್ನೊಂದು 'ವೈಜ್ಞಾನಿಕ' ಸಂಶೋಧನೆ ಚಲಾವಣೆಯಲ್ಲಿತ್ತು.  "ವೈಜ್ಞಾನಿಕ ಜ್ಯೋತಿಷ್ಯದ ಪ್ರಕಾರ" ಕೊರೋನಾ ವೈರಸ್ ಪ್ರತಿ 29.5 ವರ್ಷಗಳಿಗೊಮ್ಮೆ ಶನಿಗ್ರಹದಿಂದ ಭೂಮಿಗೆ ಪಯಣಬೆಳೆಸುತ್ತದಂತೆ.  ಇಲ್ಲಿ ಕೆಲಕಾಲವಿದ್ದು ತಾನೇ ಮಾಯವಾಗುತ್ತದಂತೆ.  ಅದಕ್ಕೆ ಜ್ಯೋತಿರ್ಲಿಂಗವೆಂದರೆ ಭಯವಂತೆ, ಅದಕ್ಕೇ ಭಾರತದಲ್ಲಿ ಕೊರೋನಾ ವೈರಸ್ಸಿನ ಭಯ ಅಷ್ಟಿಲ್ಲವಂತೆ :o ಇದಕ್ಕೇನೆನ್ನೋಣ?  (ಇದಕ್ಕೂ "ಆಹಾ, ಶಿವಶಿವಾ" ಎಂದು ಕೆನ್ನೆಬಡಿದುಕೊಂಡು ಕೈಮುಗಿಯುವವರಿದ್ದಾರೆ, ಆದರೆ ಶಿವಭಕ್ತಿಗೆ ವಿಜ್ಞಾನದ, ಅದೂ ಢೋಂಗಿ ವಿಜ್ಞಾನದ ಕುಮ್ಮಕ್ಕು ಬೇಕೇ?) ಮೊದಲಿಗೆ, ವೈಜ್ಞಾನಿಕಜ್ಯೋತಿಷ್ಯ, ಅವೈಜ್ಞಾನಿಕಜ್ಯೋತಿಷ್ಯ ಎಂಬ ಎರಡು ಭಾಗಗಳಿವೆಯೇ?  ನಾನು ಜ್ಯೋತಿಷ್ಯದ ನಂಬಿಕೆಯನ್ನಿಲ್ಲಿ ಪ್ರಶ್ನಿಸುತ್ತಿಲ್ಲ (ಅದು ನನಗೆ ತಿಳಿದಿಲ್ಲ, ಆದ್ದರಿಂದ ಅದು ನನ್ನ ನಂಬಿಕೆ-ಅಪನಂಬಿಕೆಗಳಿಗೆ ಮೀರಿದ್ದು), ಆದರೆ ಈ 'ವೈಜ್ಞಾನಿಕಜ್ಯೋತಿಷ್ಯ' ಎಂದರೇನು?  ಆ 'ವೈಜ್ಞಾನಿಕ'ಜ್ಯೋತಿಷ್ಯಗ್ರಂಥವಾವುದು?  ಅದರಲ್ಲಿ ಶನಿಗ್ರಹದಿಂದ ಇಲ್ಲಿಗೆ ಬರುವ ಕೊರೋನಾ ವೈರಸ್ಸಿನ ಬಗೆಗೆ ಏನು ಬರೆದಿದೆ?  ಯಾವ ಅಧ್ಯಾಯ, ಯಾವ ಶ್ಲೋಕ?  ಅದರ ಮೇಲೆ ಭಾಷ್ಯ-ವ್ಯಾಖ್ಯಾನಗಳೇನಾದರೂ ಬಂದಿವೆಯೇ?  ನಮಗಿಲ್ಲಿಯವರೆಗೂ ಕಾಣದ ಲೋಕಾಂತರಗಳಲ್ಲಿ ಜೀವವಿದೆಯೋ ಇಲ್ಲವೋ ಎಂಬುದು ನಮಗೂ ವಿಜ್ಞಾನಿಗಳಿಗೂ ಇಬ್ಬರಿಗೂ ಸದ್ಯಕ್ಕೆ ಉತ್ತರಿಸಲಾಗದ ವಿಷಯ, ಇರಲಿ.  ಆದರೆ ನಮ್ಮದೇ ಸೌರಮಂಡಲದ ಭಾಗವಾಗಿರುವ ಶನಿಗ್ರಹದಲ್ಲಿ ಜೀವಜಾಲವಿದೆ, ಮತ್ತು ಅದು ಮೂವತ್ತು ವರ್ಷಕ್ಕೊಮ್ಮೆ ಭೂಮಿಗೂ ಬರುತ್ತಿದೆ ಎಂಬ ವಿಷಯ ಆಧುನಿಕವಿಜ್ಞಾನಿಗಳಿಗೆ ತಿಳಿದಿಲ್ಲವೆಂದರೆ, ಅವರಿಗಿಂತ ದಡ್ಡರಿದ್ದಾರೆಯೇ?  ಅವರು ಅದನ್ನು ತಿಳಿದು ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕಾದ್ದು ಅವಶ್ಯಕವಲ್ಲವೇ?  ಅದು ಈಗಿನ 'ಅವೈಜ್ಞಾನಿಕ'ವಿಜ್ಞಾನಲೋಕದಲ್ಲಿ ಕ್ರಾಂತಿಯನ್ನೇ ಎಬ್ಬಿಸಬಹುದಲ್ಲವೇ?  ಅದಕ್ಕೆ ತಕ್ಕ ಆಕರಗಳನ್ನು ಅವರಿಗೆ ನೀಡಿ ಲೋಕೋಪಕಾರ ಮಾಡುವುದು 'ವೈಜ್ಞಾನಿಕ ಜ್ಯೋತಿಷ್ಯ'ವನ್ನು ಅರಿತವರ ಕರ್ತವ್ಯವಲ್ಲವೇ?  ಆದರೆ ಈ ಪ್ರಶ್ನೆಯೂ ನಮ್ಮ 'ನಂಬಿಕೆ'ಗಳ, ಸಂಪ್ರದಾಯ-ಪದ್ಧತಿಗಳ ಲೇವಡಿಯಂತೆ ಕಂಡರೆ ಏನು ಮಾಡಬೇಕು?  ಕೊರೋನಾವೈರಸು, ಶನಿಗ್ರಹದಲ್ಲಿ ಕೊರೋನಾ ವಾಸ ಇವು ಯಾವತ್ತೂ ನಮ್ಮ ಸಾಂಪ್ರದಾಯಿಕ ಸನಾತನ ನಂಬಿಕೆಗಳ ಭಾಗವಾಗಿರಲೇ ಇಲ್ಲ, ಕೊರೋನಾ ವೈರಸ್ಸು ಮಾಧ್ಯಮಗಳಲ್ಲಿ ಸದ್ದುಮಾಡತೊಡಗಿದ ಮೇಲೆ ಮೊನ್ನೆಮೊನ್ನೆ ಹುಟ್ಟಿಕೊಂಡ ನಂಬಿಕೆಯಿದು.  ಇದನ್ನೂ ಸನಾತನಧರ್ಮದ ಬುಟ್ಟಿಯಲ್ಲಿ ಸೇರಿಸಿ ಕೈಮುಗಿಯಬೇಕೇ?

ನಮ್ಮ ಧರ್ಮ, ಆಚಾರವಿಚಾರ, ಸಂಪ್ರದಾಯ, ಮತಾಚರಣೆಗಳನ್ನು ನೆಚ್ಚಿ ಆಚರಿಸಲು ನಮಗೆ ನಿಜಕ್ಕೂ ಬೇಕಾದ್ದು ವಿಜ್ಞಾನವಲ್ಲ, ಶ್ರದ್ಧೆ.  ಆಚರಣೆಗಳಲ್ಲಿ ವಿಜ್ಞಾನವಿದೆಯೇ?  ಸಂತೋಷ, ಅದರಿಂದ ಏನೋ ಒಳ್ಳೆಯದು ಆದೀತು.  ವಿಜ್ಞಾನವಿಲ್ಲವೇ?  ಅಡ್ಡಿಯಿಲ್ಲ, ನಾವು ಕುಳಿತಿರುವುದು ಲ್ಯಾಬಿನಲ್ಲಲ್ಲ, ಪೂಜಾಗೃಹದೊಳಗೆ.  ಇಲ್ಲಿ ಬೇಕಾದ್ದು ವಿಜ್ಞಾನವಲ್ಲ, ಶ್ರದ್ಧೆ.  ನಮ್ಮ ನಂಬಿಕೆ ಆಚರಣೆಗಳು ಪರಪೀಡಕವಲ್ಲದಿದ್ದರೆ, ಸ್ವಹಾನಿಕಾರಕವಲ್ಲದಿದ್ದರೆ ಆಯ್ತು.  ನಿರಪಾಯಕಾರಿಯಾದ ನಂಬಿಕೆಗಳು ಬದುಕಿಗೊಂದಷ್ಟು ಶಿಸ್ತು, ಸೌಂದರ್ಯ, ಭರವಸೆ, ನೆಮ್ಮದಿಗಳನ್ನು ತರುವುದಾದರೆ ಅವುಗಳನ್ನು ಹಾಳುಮಾಡಲು ಹಾಳು ವಿಜ್ಞಾನಕ್ಕೇಕೆ ಅವಕಾಶ ನೀಡಬೇಕು?  ಎಲ್ಲವನ್ನೂ ತ್ಯಜಿಸಿ ನಿಂತ ಗೊಮ್ಮಟನನ್ನು ನೋಡಲು ಕೋಲೂರಿಕೊಂಡು ಬರಿಗಾಲಿನಲ್ಲಿ ವಿಂಧ್ಯಗಿರಿಯನ್ನೇರುವ ವೃದ್ಧದಂಪತಿಯನ್ನು ನೋಡಿದರೆ ಕೈಗಳು ತಾವೇ ತಾವಾಗಿ ಮುಗಿಯುತ್ತವೆ, ವೈಜ್ಞಾನಿಕ ಆವಿಷ್ಕಾರವಾದ ಕೇಬಲ್ ಕಾರಿನಲ್ಲಿ ಕುಳಿತು ಸುಯ್ಯನೆ ಗೊಮ್ಮಟನ ನೆತ್ತಿಯ ಮೇಲೇ ಇಳಿಯುವ ಕಟ್ಟುಮಸ್ತಾದ ತರುಣರನ್ನು ಕಂಡರೆ ಅಲ್ಲ.  ಮೊದಲ ಚಿತ್ರದಲ್ಲಿ ನಮಗೆ ಕಂಡದ್ದು ಶ್ರದ್ಧೆ.  ಎರಡನೆಯದರಲ್ಲಿ ಕಂಡದ್ದು ವಿಜ್ಞಾನದ ಅಟಾಟೋಪ. 

ಇದು ಖೊಟ್ಟಿ ವಿಜ್ಞಾನದ ಮಾತಾಯಿತು.  ಇನ್ನು ಮೂಢನಂಬಿಕೆಗಳ ವಿಷಯ ಬೇರೆ.  ಅವು ಕೆಲವೊಮ್ಮೆ ಅಪಾಯಕಾರಿ, ಅಮಾನವೀಯ ಕೂಡ.  ಸನಾತನಧರ್ಮವೆಂಬ ಹಣ್ಣಿನ ಬುಟ್ಟಿಯಲ್ಲಿ ಮೂಢನಂಬಿಕೆಗಳು ಕೊಳೆತ ಹಣ್ಣುಗಳಾದರೆ, ಮೇಲೆ ವಿವರಿಸಿದ ರೀತಿಯ ಖೊಟ್ಟಿ ವಿಜ್ಞಾನ ಪ್ಲಾಸ್ಟಿಕ್ ಹಣ್ಣು.  ಕೊಳೆತ ಹಣ್ಣು ಇಡೀ ಬುಟ್ಟಿಯನ್ನೇ ಕೊಳೆಸಿಬಿಡಬಲ್ಲುದು.  ಪ್ಲಾಸ್ಟಿಕ್ ಹಣ್ಣು ಕ್ಯಾನ್ಸರ್ ತರಬಲ್ಲುದು, ತಿಂದರೆ ಇನ್ನೂ ಏನೇನನ್ನೋ ತರಬಲ್ಲುದು.  ಈ ಕೊಳೆತ/ಖೊಟ್ಟಿ ಹಣ್ಣುಗಳನ್ನು ನಿಜವಾದ ತಾಜಾ ಹಣ್ಣುಗಳಿಂದ ಬೇರ್ಪಡಿಸಿ ತೆಗೆದೊಗೆಯಲು ಬೇಕಾದ್ದು ವಿಜ್ಞಾನವಲ್ಲ, ವೈಜ್ಞಾನಿಕದೃಷ್ಟಿ.  ಧರ್ಮಕ್ಕೆ ಬೆಂಬಲ ನೀಡಬೇಕಾದ್ದು ಈ ವೈಜ್ಞಾನಿಕದೃಷ್ಟಿಯೇ ಹೊರತು, ವಿಜ್ಞಾನವಲ್ಲ. 

ಇರಲಿ, ಹಾಗಿದ್ದರೆ ನಮ್ಮಲ್ಲಿ ವಿಜ್ಞಾನ ಇರಲೇ ಇಲ್ಲವೇ?  ಏಕಿಲ್ಲ, ವೈಜ್ಞಾನಿಕರ, ಗಣಿತಜ್ಞರ, ದ್ರಷ್ಟಾರರ ಪರಂಪರೆಯೇ ನಮ್ಮಲ್ಲಿದೆ.  ಹಲವು ಆವಿಷ್ಕಾರಗಳಲ್ಲಿ, ವಾಸ್ತುಗಳಲ್ಲಿ, ಆಚರಣೆಗಳಲ್ಲಿ ಇವು ಎದ್ದು ಕಾಣುತ್ತವೆ ಕೂಡ.  ಕೆಲವು ನಮ್ಮ ಇವತ್ತಿನ 'ಜ್ಞಾನ'ಕ್ಕೆ ಅರ್ಥವಾಗುತ್ತವೆ, ಕೆಲವು ಅರ್ಥವಾಗುವುದಿಲ್ಲ.  ಜೊತೆಗೆ ಅನೇಕ ವಿಷಯಗಳ ಮೇಲೆ ಅರ್ಥಹೀನ ಕಂದಾಚಾರಗಳ ಪಾಚಿಯೂ ಬೆಳೆದಿದೆ.  ಯಾವುದರಡಿಯಲ್ಲಿ ವಿಜ್ಞಾನವಿದೆ, ಯಾವುದರಡಿಯಲ್ಲಿ ಇಲ್ಲ ಎಂದು ಹೇಳುವುದು ಕಷ್ಟ.  ಕಂಡ ಅನೇಕ ವಿಷಯಗಳನ್ನೂ ವಿಜ್ಞಾನವೆಂದು ಗುರುತಿಸುವ ಸ್ಥಿತಿಯಲ್ಲಿ ನಾವಿಲ್ಲ.  ಬದಲಿಗೆ ಅನೇಕ ಕಂದಾಚಾರಗಳನ್ನು ವಿಜ್ಞಾನವೆಂದು ಎತ್ತಿ ಮೆರೆಸುವ ಗದ್ದಲವೇ ಆಧುನಿಕ ಧರ್ಮೋತ್ಸಾಹಿಗಳಲ್ಲಿ ಅತಿಯಾಗಿ ಕಾಣುತ್ತಿದೆ.  ಮರೆವು ಮನುಷ್ಯನಿಗೆ ಸಹಜ, ಮನುಕುಲಕ್ಕೆ ಸಹಜ.  ಸಾವಿರಾರು ವರ್ಷಗಳ ಅವಧಿಯಲ್ಲಿ ವಿಜ್ಞಾನವೂ ಸೇರಿದಂತೆ ಅನೇಕ ವಿಷಯಗಳನ್ನು ಮನುಕುಲ ಮರೆಯುತ್ತದೆ, ಗ್ರಂಥಗಳು ನಷ್ಟವಾಗುತ್ತವೆ, ಸಿಕ್ಕಿದ ಗ್ರಂಥಗಳ ಭಾಷೆಯೇ ಅರ್ಥವಾಗದಿರಬಹುದು ಕೂಡ.  ಈ ಚಕ್ರದಲ್ಲಿ, ಯಾವುದೋ ಕಾಲದಲ್ಲಿ ನಮಗೆ ಆಗಲೇ ಗೊತ್ತಿದ್ದ ವಿಷಯಗಳನ್ನು ನಾವು ಹೊಸದಾಗಿ 'ಕಂಡುಹಿಡಿ'ದದ್ದೂ ಉಂಟು; ಆಗ ಇಲ್ಲದ ಅನೇಕ ವಿಷಯಗಳನ್ನು ಇವತ್ತು ನಾವು ಮೊಟ್ಟಮೊದಲಿಗೆ ಕಂಡುಹಿಡಿದದ್ದೂ ಉಂಟು.  ಮತ್ತು ಸಾವಿರ ವರ್ಷಗಳ ಹಿಂದೆ ನಮಗೆ 'ತಿಳಿದಿದ್ದ' ಅನೇಕ ವಿಷಯಗಳನ್ನು ನಾವಿಂದು ಮರೆತಿರುವುದೂ ಉಂಟು - ಅವುಗಳಲ್ಲಿ ಹಲವು ನಮಗೆ ಇವತ್ತು ಮೂಢನಂಬಿಕೆಯಂತೆ ಕಂಡರೆ, ತಪ್ಪು ವಿಜ್ಞಾನದ್ದಲ್ಲ, ಅದನ್ನು ಮರೆತ ಮರವೆಯದು.  ಯಾರಿಗೆ ಗೊತ್ತು, ಆಗ ತಿಳಿದಿದ್ದ ಅನೇಕ ವಿಷಯಗಳು ಇವತ್ತಿಗೆ ಮರೆತಿರುವಂತೆಯೇ, ಇವತ್ತಿನ ವಿಜ್ಞಾನವೂ ಹೀಗೇ ಕೆಲವಾರು ಸಾವಿರ ವರ್ಷಗಳಲ್ಲಿ ಮನುಕುಲದ ಮರವೆಗೆ ಸಲ್ಲಬಹುದು (ನಾವು ಅದುವರೆಗೆ ಬದುಕಿದ್ದರೆ).  ಆಗ ಇವತ್ತಿನ ವೈಜ್ಞಾನಿಕಸತ್ಯವನ್ನು ಮರೆತ ಮುಂದಿನವರು ಅದನ್ನು 'ಮೂಢನಂಬಿಕೆ' ಎಂದು ಗೇಲಿಮಾಡಿದರೂ ಅಚ್ಚರಿಯಿಲ್ಲ.  ಹೀಗಾಗಿ ಹಿಂದಿನವರೆಲ್ಲ ಕಾಡುಮನುಷ್ಯರು, ನಾವೇ ಬೃಹಸ್ಪತಿಗಳ ಪೀಳಿಗೆ ಎಂದು ಹಿಗ್ಗುವುದು ಹಳೆಯದನ್ನು ಜರಿಯುವುದು ಎಷ್ಟು ಮೂರ್ಖತನವೋ, ಇವತ್ತಿನದೆಲ್ಲಾ ಸಾವಿರಾರು ವರ್ಷಗಳ ಹಿಂದೆಯೇ ಇತ್ತು, ಇವತ್ತಿನದು ಏನೂ ಇಲ್ಲವೆಂದು ಬೋಂಗುಬಿಡುವುದೂ ಅಷ್ಟೇ ಮೂರ್ಖತನ; ಹಾಗೆಯೇ ಇವತ್ತು ನಮಗೆ ಗೊತ್ತಿರುವ 'ಜ್ಞಾನ' ಇನ್ನು ಸಾವಿರಾರುವರ್ಷಗಳನಂತರವೂ ನಮ್ಮ ನೆನಪಿನಲ್ಲಿರುತ್ತದೆಂದು ನಂಬುವುದೂ!

ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾsಪಿ ಕಾವ್ಯಂ ನವಮಿತ್ಯವದ್ಯಮ್ |
ಸಂತಃ ಪರೀಕ್ಷ್ಯಾನ್ಯತರತ್ ಭಜಂತೇ
ಮೂಢಃ ಪರಪ್ರತ್ಯಯನೇಯಬುದ್ಧಿಃ ||

(ಹಳತೆಂಬುದೆಲ್ಲ ಬಲು ಸಾಧುವೆಂದಲ್ಲ ಹೊಸ
ಹೊಳಹೆಂಬ ಕಬ್ಬವದು ಕಗ್ಗವೇನಲ್ಲ
ಬಳಸಿ ಅರಿವನು ಸಂತ ಮೇಣ್ ಮೂಢ ತನ್ನರಿಮೆ
ಬೆಳೆಯಿರದೆ ಪರಬುದ್ಧಿಯಾಶ್ರಯಿಸುವ)

ಈ ಕವಿವಾಣಿ ಕೇವಲ ಕಾವ್ಯಕ್ಕಲ್ಲ, ಜೀವನಕ್ಕೂ ಅನ್ವಯಿಸುವಂಥದ್ದು.  ಅರಿತರೆ ಬದುಕು ಹಸನು.  "ನಮಗೆ ಮಾತ್ರ ಏಕೆ ಹೇಳುತ್ತೀರಿ, 'ಅವರಿಗೂ' ಹೇಳಿ" ಎಂಬ ಸವಾಲು ಕೆಲವೊಮ್ಮೆ (ಕೆಲ ಸಾಮಾಜಿಕ-ರಾಜಕೀಯ ಸಂದರ್ಭಗಳಲ್ಲಿ) ಸರಿಯಾದದ್ದೇ ಆದರೂ, ಮೇಲೆ ವಿವರಿಸಿದ ಸಂದರ್ಭಗಳಲ್ಲಿ ಬಾಲಿಶವಾಗಬಲ್ಲುದು, ಇದರಿಂದ ನಷ್ಟ ನಮಗೇ ಹೊರತು ಆ ಇನ್ನೊಬ್ಬರಿಗಲ್ಲ.  ಈ ಸ್ವವಿಮರ್ಶನನಿರಾಕರಣೆ ನಾವು ಹೆಮ್ಮೆಯಿಂದ ಪ್ರತಿಪಾದಿಸುವ ಸನಾತನಧರ್ಮದ್ದು ಯಾವತ್ತೂ ಆಗಿರಲಿಲ್ಲ.