ಕಾಲೇಜು ದಿನಗಳಲ್ಲಿ ನಡೆದ ಮೈ ನವಿರೇಳುವ ಸಂದರ್ಭವೊಂದು ನೆನಪಿಗೆ ಬರುತ್ತಿದೆ. ಮುಹೂರ್ತ... ತಡೆಯಿರಿ, ರಾತ್ರಿ ಹನ್ನೆರಡು ದಾಟಿತು. ಸುಮುಹೂರ್ತೇ ಸಾವಧಾನ...
ನಮ್ಮ ಅಚ್ಚುತನ ಮನೆ ನಮ್ಮ ಮನೆಯ ಹಿಂದೆಯೇ ಇತ್ತು. ನಮ್ಮದು ಬಹಳ ಹತ್ತಿರದ ಗೆಳೆತನ. ಬೆಳಗ್ಗೆ ಕಾಲೇಜಿಗೆ ಜೊತೆ, ಮಾತುಕತೆಗೆ ಜೊತೆ, ಸಿನಿಮಾ ನಾಟಕಕ್ಕೆ ಜೊತೆ, ಸಾಹಿತ್ಯ-ಸಂಗೀತದ ಕಾರ್ಯಕ್ರಮವಿದ್ದರೆ ಜೊತೆ - ಕಾಲೇಜಿನಿಂದ ಬಂದು ಮಧ್ಯಾಹ್ನ ಊಟ ಮುಗಿಸಿದ ಕೂಡಲೇ ಅವರ ಮನೆಗೆ ವಕ್ಕರಿಸಿಕೊಳ್ಳುತ್ತಿದ್ದೆ. ಮಾತು ಮಾತು ಮಾತು - ಸಂಜೆ ಕಾಫಿ ಆದ ಮೇಲೆ ವಾಕಿಂಗ್ ಹೊರಟರೆ ಅಲ್ಲಿಂದ ಒಂದೆರಡು ಫರ್ಲಾಂಗ್ ದೂರ ಪೀಸ್ ಪಾರ್ಕಿನ ಬಳಿ ಗಿರೀಶ ಜೊತೆಯಾಗುತ್ತಿದ್ದ, ಅಲ್ಲಿಂದ ಒಂದೆರಡು ಕಿಲೋಮೀಟರು ದೂರ ಶ್ರೀನಿವಾಸ ಟಾಕೀಸ್ ಬಳಿ ಶ್ರೀಕಾಂತನನ್ನೂ ಕರೆದುಕೊಂಡು ಮರಡಿಗುಡ್ಡದ ಕಡೆ ಪಾದಯಾತ್ರೆ, ಆಮೇಲೆ ಗುಡ್ಡಾರೋಹಣ, ಸೂರ್ಯ ಮುಳುಗಿದ ಮೇಲೆ ಗುಡ್ಡವಿಳಿದು ಮೂಲೆ ಅಂಗಡಿಯಲ್ಲಿ ಚುರುಮುರಿ ಕೊಂಡು ನಾಲ್ವರೂ ಹರಟುತ್ತಾ ಎಂಜಿಯೆಸ್ವಿ ಶಾಲೆಯ ಗ್ರೌಂಡಿನಲ್ಲಿ ಕುಳಿತರೆ ಸಂಜೆಯ ಮಬ್ಬುಗತ್ತಲಿನಲ್ಲಿ ಬೀಚಿನಲ್ಲಿ ಕುಳಿತಂತೆ ಅನಿಸುತ್ತಿತ್ತು. ಎಂಟುಗಂಟೆಗೆ ಅಲ್ಲಿ ಬಿಟ್ಟು, ವ್ಯತಿರಿಕ್ತಕ್ರಮದಲ್ಲಿ ಶ್ರೀಕಾಂತನ ಮನೆಯ ಬಳಿ ಅವನನ್ನು ಬಿಟ್ಟು ಅಲ್ಲಿಂದ ಗಿರೀಶನನ್ನು ಅವರ ಮನೆಯ ಬಳಿ ಬೀಳ್ಕೊಂಡು, ಅಚ್ಚುತನ ಮನೆಯಲ್ಲಿ ಅವನನ್ನು ಬಿಟ್ಟು ನಮ್ಮ ಮನೆ ತಲುಪಿ ಊಟ ಮುಗಿಸುವ ಹೊತ್ತಿಗೆ ರಾತ್ರಿ ಹತ್ತು. ಹೀಗಿತ್ತು ಆಗೆಲ್ಲ. ಪರೀಕ್ಷೆಯ ಸಮಯ ಬಂತೆಂದರೆ ಓದಿಕೊಳ್ಳಲು ಅಚ್ಚುತನ ಮನೆ. ಹೋಗಿ ಸ್ವಲ್ಪ ಹೊತ್ತು ಮಾತಾಡಿ ಪುಸ್ತಕ ಮುಂದಿಟ್ಟುಕೊಂಡು ಕುಳಿತರೆ ಸಾಕು, ಪ್ರಪಂಚವೇ ಮರೆತು ಹೋಗುತ್ತಿತ್ತು - ಮಾತು ಮಾತು ಮಾತು - ರಾತ್ರಿ ಹನ್ನೆರಡಕ್ಕೆ ಕಣ್ಣೆಳೆಯಲು ಶುರುವಾಗುವವರೆಗೂ ಸರತಿ - ಮಾತೇ ಮಾತು. ಕೆಲವೊಮ್ಮೆ ಅವನಿಗೆ ನಿದ್ದೆ ಬಂದುಬಿಡುತ್ತಿತ್ತು. ಪರೀಕ್ಷೆ ಮುಂದಿಟ್ಟುಕೊಂಡು ನಿದ್ದೆಯೇ? ಬಲವಂತವಾಗಿ ಎಚ್ಚರಗೊಳಿಸುತ್ತಿದ್ದೆ. ಓದಲು ಶುರು ಮಾಡಿದರೆ ಮತ್ತೆ ನಿದ್ದೆ ಬರುತ್ತದಲ್ಲ - ಅದನ್ನು ತಡೆಯಲು ಮಾತು. ಕೊನೆಗೂ, ಅವನ ಪ್ರಯತ್ನವೆಲ್ಲವನ್ನೂ ಮೀರಿ ಅವ ನಿದ್ದೆಗೆ ಜಾರಿಯೇಬಿಟ್ಟ ಎಂದರೆ, ಆ ಮೇಲೆ ನನ್ನ ಓದು, ಬೆಳಕು ಹರಿಯುವ ತನಕ.
ನಾನೀಗ ಹೇಳಲಿರುವ ಘಟನೆ ಅರ್ಥವಾಗಬೇಕಾದರೆ ಅವರ ಮನೆ ಹೇಗಿತ್ತೆಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ರಸ್ತೆಗ ತೆರೆದುಕೊಳ್ಳುವ ಇಕ್ಕಟ್ಟಾದ ಓಣಿ - ಓಣಿಯೊಳಹೊಕ್ಕು ಅರ್ಧ ಕ್ರಮಿಸಿದರೆ ಮಧ್ಯೆ ಬಲಕ್ಕೊಂದು ಬಾಗಿಲು, ಅಲ್ಲಿ ಒಳಬಂದರೆ ಮೂರು ಮನೆಗೆ ಕಾಮನ್ ಆದ ಒಂದು ಚಾವಣಿಯಿಲ್ಲದ ಪಡಸಾಲೆ. ಅಲ್ಲೇ ಬಲಕ್ಕೆ ಓನರ್ ಮನೆ, ಎಡಕ್ಕೆ ಇವರ ಮನೆ. ಕುಳಿತು ಓದುತ್ತಿದ್ದುದು - ಅಂದರೆ ಓದಲು ಕುಳಿತುಕೊಳ್ಳುತ್ತಿದ್ದುದು, ಸಾಮಾನ್ಯವಾಗಿ ಈ ಪಡಸಾಲೆಯಲ್ಲೇ. ಒಳಬರುವ ಬದಲು ಓಣಿಯಲ್ಲೇ ಮುಂದುವರೆದರೆ ಕೊನೆಯಲ್ಲಿ ಅಚ್ಚುತನ ಮನೆಯ ಹಿತ್ತಿಲೇ ಸಿಗುತ್ತಿತ್ತು. ಅದೇ ಸುಮಾರಿಗೆ ಓಣಿಯ ಎಡಗೋಡೆಯಲ್ಲಿ ಮತ್ತೊಂದು ಬಾಗಿಲು, ಪಕ್ಕದ ಮನೆಯವರಿಗೆ ಸೇರಿದ್ದು - ಮೊದಲು ಎರಡೂ ಆಸ್ತಿಗಳು ಒಂದೇ ಇದ್ದು ಬಹುಶಃ ಇಡೀ ಆಸ್ತಿ ಭಾಗವಾದ ಮೇಲೆ ಮಧ್ಯೆ ಓಣಿ ಬಿಟ್ಟು ಬಾಗಿಲನ್ನು ಇಟ್ಟಿಗೆಯಿಂದ ಮುಚ್ಚಿದ್ದರು - ದಪ್ಪ ಹಳೆಯ ಕಾಲದ ಗೋಡೆಯಾದುದರಿಂದ, ಒಂಟಿ ಇಟ್ಟಿಗೆಯಿಂದ ಮುಚ್ಚಿದ್ದರೂ ಒಬ್ಬ ಅವಿತುಕೊಳ್ಳುವಷ್ಟು ಸ್ಥಳ ಆ ಬಾಗಿಲಿದ್ದ ಜಾಗದಲ್ಲಿತ್ತು. ಅದರೆದುರಿಗೇ ಇವರ ಹಿತ್ತಿಲಲ್ಲಿ ಒಂದು ತೆರೆದ ಭಾವಿ - ತಗ್ಗಾದ ಕಟ್ಟೆ, ತಳದಲ್ಲೆಲ್ಲೋ ಇರುವ ಅಲ್ಪಸ್ವಲ್ಪ ನೀರು ನಿಶ್ಚಲವಾಗಿದ್ದಾಗ ಭಾವಿಯಲ್ಲಿ ಇಣುಕಿದರೆ ನಮ್ಮ ಪ್ರತಿಬಿಂಬ ಕಾಣುವುದು. ಮೇಲೆ ಹುಣ್ಣಿಮೆಯ ಚಂದ್ರನಿದ್ದರಂತೂ ಬಾವಿಯೊಳಗಿನ ನೀರು "ಕರಿತಾವ ಒಳಗ ಬಳಿಗೆ" ಎನ್ನುವಂತಿರುತ್ತಿತ್ತು.
ಭಾವಿಯನ್ನು ದಾಟಿ ಹಿತ್ತಿಲಲ್ಲಿ ಮುಂದುವರೆದರೆ ಕಕ್ಕಸುಮನೆ, ಆಗೆಲ್ಲಾ ಕಕ್ಕಸು ಮನೆ ಇರುತ್ತಿದ್ದುದೇ ಹಿತ್ತಿಲಲ್ಲಿ, ಮನೆಯಿಂದ ಸಾಕಷ್ಟು ದೂರದಲ್ಲಿ. ಮೂರು ಮನೆಗೂ ಇದೇ ಕಾಮನ್ ಕಕ್ಕಸು ಮನೆ. ಅದನ್ನು ಉಪಯೋಗಿಸಬೇಕಾದರೆ ಎಲ್ಲರೂ ಈ ಓಣಿಯನ್ನೇ ಹಾಸಿ ಹೋಗಬೇಕು. ಹಗಲೆಲ್ಲಾ ಇದು ಸಾಮಾನ್ಯವಾಗೇ ಕಾಣಬಹುದು, ಈಗಂತೂ ತಮಾಷೆಯಾಗೂ ಕೇಳಿಸಬಹುದು, ಆದರೆ ರಾತ್ರಿ ಕತ್ತಲಾದ ಮೇಲೆ ಕರೆಂಟೂ ಇಲ್ಲದಿದ್ದಾಗ ಅವಸರವಾದರೆ ಕಷ್ಟ, ಸ್ವಲ್ಪ ಭಯಸ್ತರಿಗಾದರೆ ಫಜೀತಿಯೇ. ಮಕ್ಕಳಾದರೆ ಅಮ್ಮನನ್ನೋ ಅಣ್ಣನನ್ನೋ ಅಕ್ಕನನ್ನೋ "ನಿಂತುಕೋ ಬಾ" ಎಂದು ಕರೆಯುವುದು, ಉದ್ದಕ್ಕೂ ಒಳಗಿನಿಂದ "ಇದ್ದೀಯಾ, ಇದ್ದೀಯಾ" ಎಂದು ಪದೇಪದೇ ಕೂಗಿ ಖಾತ್ರಿ ಪಡಿಸಿಕೊಳ್ಳುವುದು ಇವೆಲ್ಲ ಬಹುಸಾಮಾನ್ಯ. ರಾತ್ರಿ ಕರೆಂಟು ಹೋದರೆ, ತೀರ ಹದಿನೈದು ಹದಿನಾರು ವರ್ಷದವರೂ ಮಕ್ಕಳೇ. ದೊಡ್ಡವರೇನೋ ಪರವಾಗಿಲ್ಲ, ಆದರೆ ದೊಡ್ಡವರಿಗೂ ಧೃತಿಗೆಡಿಸುವ ಸನ್ನಿವೇಶಗಳು ಹಲವೊಮ್ಮೆ ಬಂದುಬಿಡುತ್ತಿದ್ದುವು. ಉದಾಹರಣೆ ಹೇಳುತ್ತೇನೆ ಕೇಳಿ, ಈ ಖತ್ತರನಾಕ್ ಓಣಿಯಲ್ಲೇ ನಡೆದದ್ದು. ಈ ಅಚ್ಚುತ ಮತ್ತೆ ಅವನ ತಮ್ಮ ಮಧು ತುಂಬಾ ಫೈಟಿಂಗ್ ಮಾಡುತ್ತಿದ್ದರು. ಇವನು ಕಾಲೇಜು, ಅವನು ಹೈಸ್ಕೂಲು - ಆದರೂ ಫೈಟಿಂಗಿಗೆ ಕಾಲೇಜೇನು ಮಾಡುತ್ತದೆ? ಮಧು ಸ್ವಲ್ಪ ಪುಕ್ಕಲ.
ಒಮ್ಮೆ ಹೀಗೇ ತುಂಬಾ ಫೈಟಿಂಗ್ ಆಗಿದೆ, ದಿಂಬು, ಬಾಲು, ಬ್ಯಾಟು, ಅಡುಗೆ ಮನೆ ಪಾತ್ರೆ ಪ್ರಯೋಗಗಳೆಲ್ಲ ಮುಗಿದಿದೆ. ಇಬ್ಬರೂ ಸುದಾರಿಸಿಕೊಳ್ಳುತ್ತಿದ್ದರೆ, ಅಷ್ಟರಲ್ಲಿ ಮಧುವಿಗೆ ಹಿಂದೆ ಹೋಗಲು ಅವಸರವಾಗಿದೆ. ಮಾಮೂಲಿನಂತೆ ಅಣ್ಣನನ್ನು "ನಿಂತ್ಕೋ ಬಾರೋ" ಎನ್ನಲು ಬಿಗುಮಾನ. ಇವನೂ "ಇವತ್ತು ಅದ್ಯಾವ ಬಾಯಲ್ಲಿ ಕೇಳ್ತೀ ಕೇಳು ನೋಡೋಣ" ಎಂದುಕೊಂಡು ಕಾದೇ ಇದ್ದಾನೆ. ಅವನೇಕೆ ಕೇಳುತ್ತಾನೆ? ಇವನನ್ನು ಲೆಕ್ಕಕ್ಕೇ ಇಡದೇ ಹೊರಟ. ಹೊರಟವನು ಹೊರಟ, ಅದಾವ ಶಾಪವೋ, ಕರೆಂಟು ಹೋಗಿಬಿಟ್ಟಿತು. ಹೋದ ಕರೆಂಟು ಒಂದು ಐಡಿಯಾ ಆಗಿ ಇವನ ತಲೆಯಲ್ಲಿ ಮಿಂಚಿತು - "ಎಲ ಬಡ್ಡೀಮಗನೇ, ಅಷ್ಟೊಂದು ಕೊಬ್ಬಾ, ಇವತ್ತು ನಿನಗಿದೆ ತಡಿ" ಎಂದುಕೊಂಡವನೇ, ಕತ್ತಲಲ್ಲೇ ತಡವರಿಸುತ್ತಾ ಸದ್ದಿಲ್ಲದೇ ಮೆಲ್ಲಗೆ ಓಣಿಯ ಕಡೆಗೆ ಬಂದು, ಮುಚ್ಚಿದ ಬಾಗಿಲಿದ್ದ ಗೋಡೆಯಲ್ಲಿ ಅವಿತು ನಿಂತ. ಅತ್ತ ಅವನಿಗೆ ಕರೆಂಟು ಹೋದ ಮೇಲೆ ಮೊದಲಿದ್ದ ಧೈರ್ಯ ಮೆಲ್ಲಗೆ ಕರಗತೊಡಗಿತು. ಬಿಗುಮಾನವನ್ನು ಭಯ ಗೆದ್ದಿತು, ಅವಸರ ಅವಸರಿಸಿತು - ಆಪತ್ಕಾಲದಲ್ಲಿ ನಾಚಿಕೆಯೆಂಥದು? "ಅಚ್ಚುತಾ" ಎಂದು ಕರೆದ. ಮಗನ ಹೆಸರು ಕರೆದೊಡನೆಯೇ ಓಡಿ ಬಂದು ಮುಕ್ತಿ ನೀಡಲು ಇವನೇನು ಅವನೇ? ಅದರಲ್ಲೂ ಸ್ವಯಂ "ಭಯಕೃತ್" ಆಗಿ ನಿಂತಿರುವಾಗ "ಭಯನಾಶನ"ನಾಗುವ ಮಾತೆಲ್ಲಿ? - ಉತ್ತರಿಸದೇ ಮನಸ್ಸಿನಲ್ಲೇ "ಬಾ, ಬಾ..." ಎಂದುಕೊಳ್ಳುತ್ತಾ ಹಿಗ್ಗುತ್ತಾ ಕಾದಿದ್ದಾನೆ - ಅತ್ತ ಮಧು ಎರಡು ಮೂರು ಬಾರಿ ಕರೆದವನು ಉತ್ತರ ಬರದಿದ್ದಾಗ ಕೊನೆಗೂ ಅವಸರ ತಾಳಲಾರದೇ ತಾನೇ ಹೋಗುವ ಧೈರ್ಯ ಮಾಡಿದನೆನ್ನಿಸುತ್ತದೆ, ಬಚ್ಚಲಲ್ಲಿ ನೀರು ಬಿಟ್ಟ ಸದ್ದು, ಚೊಂಬು ತುಂಬಿದ ಸದ್ದು, ಅದನ್ನು ಕೈಗೆತ್ತಿಕೊಂಡ ಸದ್ದು, ಬಾಗಿಲು ತೆರೆದ ಸದ್ದು, ಈ ಕಡೆ ಓಣಿಯ ಬಾಗಿಲು ತೆರೆದ ಸದ್ದು... ನಡೆದು ಬರುತ್ತಿರುವ ಹೆಜ್ಜೆ ಸದ್ದು - ಬಂದ ಬಂದ ಬಂದ... "ಇವತ್ತು ಕಕ್ಕಸು ಮನೇಲಲ್ಲ, ನಿಂಗೆ ಎಲ್ಲ ಇಲ್ಲೇ ಆಗುತ್ತೆ ಮಗನೇ...". ಹೆಜ್ಜೆ ಸದ್ದು ತನ್ನ ಮುಂದೆ ಆಕಾರ ಪಡೆಯುತ್ತಿದ್ದಂತೆ, ಧ್ವನಿಗೆ ತುಂಬಬಹುದಾದಷ್ಟೂ ಭಯ ತುಂಬಿಸಿ ಎರಡು ಕೈ ಮುಂದೆ ಮಾಡಿ ಕತ್ತು ಹಿಸುಕುವಂತೆ ಮುನ್ನುಗ್ಗುತ್ತಾ "ಭ್ಯಾ...." ಎಂದ. ಅಂದದ್ದೇ ತಡ ಮಿಂಚಿನಂತೆ ಎದುರಿನಿಂದ ನುಗ್ಗಿದ ಕೈಯೊಂದು ಕತ್ತು ಹಿಸುಕುತ್ತಾ ಕೀರಲು ದನಿಯಲ್ಲಿ ಕೂಗಿತು - "ಅಯ್ಯಯ್ಯೋ ಸಿವನೇ, ಏಡುಕೊಂಡಲವಾಡಾ, ಆಂಜುಣೇಯಾ, ಕಾಪಾಡಪ್ಪಾಆಆಆಅ..."; ಯಾವಾಗ ಹೀಗಾಯಿತೋ, ಇತ್ತ "ಭ್ಯಾ..." ಎಂದು ಹೊರಟ ಧ್ವನಿ "ಆ.... ಕತ್ತೂ ಕತ್ತೂ ಕತ್ತೂ... " ಆಗಿತ್ತು. ಕಕ್ಕಸಿಗೆ ಯಾರೋ ಬಂದದ್ದೇನೋ ನಿಜ, ಆದರೆ ಮಧುವಲ್ಲ, ಅವನಿನ್ನೂ ಧೈರ್ಯ ಅಧೈರ್ಯಗಳ ನಡುವೆ ತೂಗುಯ್ಯಾಲೆಯಾಡುತ್ತಾ ಬಾಗಿಲು ತೆಗೆದು ಹೊಸ್ತಿಲು ದಾಟುವಾಗ ಎದುರುಗಡೆಯಿಂದ ಓನರು ಚೊಂಬು ಹಿಡಿದು ಅವಸರವಸರವಾಗಿ ನುಗ್ಗಿದ್ದು ನೋಡಿ, ಈ ವಿಷಯದಲ್ಲಿ ಅವರೊಡನೆ ರನ್ನಿಂಗ್ ರೇಸ್ ಮಾಡಲು ನಾಚಿ ಅಲ್ಲೇ ನಿಂತಿದ್ದ - ಪಾಪ ಅವರು ಮುಂಬಾಗಿಲು ತೆರೆದು ಓಣಿ ಹೊಕ್ಕ ಮರುಗಳಿಗೆಯೇ ಹೀಗಾಯಿತು. ಇದು ಇವನು ಎಂದು ಗೊತ್ತಾದೊಡನೆ ಪಾಪ ಓನರು "ಏ... ಏನಚ್ಚುತ ಇದು, ಹೀಗಾ ಹೆದರಿಸೋದು, ನಾನು ಮೊದಲೇ ಆರ್ಟ್ ಪೇಸೆಂಟು ಹಚ್ಚುತಾ" ಎಂದರು. ಪಾಪ ನಮ್ಮಾತ, "ಸಾರೀ" ಎಂದು ಮನೆಗೆ ಓಡಿ ಮುಸುಗಿಕ್ಕಿದವನು ಮುಂದೆ ಮೂರು ದಿನ ಮುಖ ತೋರಿಸಲಿಲ್ಲ. ಮತ್ತಿನ್ನೇನು? ಪಾಪ ಕಾಲೇಜಿನ ಹುಡುಗ, ಜವಾಬ್ದಾರಿವಂತ ಎಂದು ಅವರು ಇವನನ್ನು ಯಾವಾಗಲೂ ಬಹಳ ಮೆಚ್ಚುಗೆ ಗೌರವಗಳಿಂದ ಮಾತಾಡಿಸುತ್ತಿದ್ದರು.
ಅಲ್ಲ, ಏಕೆ ಹೇಳಿದೆನೆಂದರೆ, ಆ ಜಾಗವೇ ಹಾಗಿತ್ತು. ಓನರಿಗೇನೋ ಆಂಜುಣೇಯನ ದಯೆಯಿತ್ತು, ಬದುಕಿಕೊಂಡರು - ನಮ್ಮಂತಹ ಪಾಮರರ ಗತಿ? ಅದಕ್ಕೇ ದೆವ್ವಗಳನ್ನು ನಂಬದಿರುವುದೇ ಲೇಸು ಎಂದು ನಾನು ಅವತ್ತೇ ನಿರ್ಧರಿಸಿದೆ.
ಇರಲಿ, ಮುಖ್ಯವಿಷಯಕ್ಕೆ ಬರೋಣ. ಅಚ್ಚುತನ ಮನೆಯಲ್ಲೊಂದು ನಾಯಿಯಿತ್ತು, ಲಕ್ಷಣವಾಗಿತ್ತು, ಚೂಟಿಯಾಗೂ ಇತ್ತು. ನನಗೆ ಅದರೊಡನೆ ವಿಶೇಷ ಸ್ನೇಹವೇನೂ ಇರಲಿಲ್ಲ, ನಾಯಿಗಳ ಬಗೆಗೆ ನನಗಿದ್ದ ಭಯವೇ ಅದಕ್ಕೆ ಕಾರಣ - ಹೇಳಲು ಹೋದರೆ ಅದೇ ಬೇರೆಯ ಕತೆ, ಮತ್ತೆಂದಾದರೂ ಹೇಳುತ್ತೇನೆ. ಇದೇನೋ ಮರಿಯಾಗಿದ್ದಾಗಿನಿಂದ ನೋಡಿದ್ದುದರಿಂದ ಇದರ ಬಗ್ಗೆ ಭಯವೇನೂ ಇರಲಿಲ್ಲವೆನ್ನಿ - ಒಂದು ರೀತಿ "ನಾಭಿನಂದತಿ ನದ್ವೇಷ್ಟೀ" ಎಂಬ ರೀತಿಯ ಸಂಬಂಧ ನಮ್ಮದು. ಅದಕ್ಕೆ ನನ್ನ ಬಗ್ಗೆ ಹೇಗಿತ್ತೋ ಹೇಳಬರುವುದಿಲ್ಲ - ಸಾಮಾನ್ಯವಾಗಿ ಉಳಿದವರೊಡನೆ ಮಾಡುವಂತೆ ಬಾಲವಾಡಿಸಿಕೊಂಡು ಗುರುಗುಟ್ಟುತ್ತಾ ಮೇಲೆ ಬಿದ್ದು ಗಾಬರಿ ಬೀಳಿಸುತ್ತಿರಲಿಲ್ಲ. ಹೋಗಲಿ ನಾನು ಬಂದೆನೆಂಬುದನ್ನು ಪರಿಗಣಿಸುವ ಔಪಚಾರಿಕತೆಯನ್ನೂ ಅದೇನು ಇರಿಸಿಕೊಂಡಿದ್ದಂತೆ ಕಾಣದು. ಬಂದರೂ ಹೋದರೂ ಪಕ್ಕದಲ್ಲೇ ಕುಳಿತರೂ ನಾನಲ್ಲಿ ಇಲ್ಲವೇ ಇಲ್ಲವೆಂಬಂತೆ ಇರುತ್ತಿತ್ತು. ನನಗೇನೋ ಅದು ನೆಮ್ಮದಿಯ ವಿಷಯವೇ. ಆದರೆ ನಾಯಿಬುದ್ಧಿ ಯಾರಿಗೆ ಗೊತ್ತು? ನಾನು ಒಂದೆರಡು ದಿನ ಹೋಗದಿದ್ದರೆ ಆಮೇಲೆ ಅದು ನನ್ನನ್ನು ಮರೆತೇ ಬಿಟ್ಟು ಬೊಗಳತೊಡಗಿದರೆ? ಆದ್ದರಿಂದ ಅದು ನನ್ನನ್ನು ಮರೆಯದಿರಲಿ ಎಂದು ಎದುರು ಕಂಡಾಗ ಮುಟ್ಟಿಯೂ ಮುಟ್ಟದಂತೆ ತಲೆ ಸವರಿ ಮಾತಾಡಿಸುವ ಬಳಕೆಯಿಟ್ಟುಕೊಂಡಿದ್ದೆ.
ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಓದಲು ಅವರ ಮನೆಗೇ ಹೋಗುತ್ತಿದ್ದೆ ಎಂದು ಹೇಳಿದೆನಲ್ಲ. ಹೇಗೆ ಓದುತ್ತಿದ್ದೆವು ಎಂಬುದನ್ನೂ ಮೇಲೇ ವಿವರಿಸಿದ್ದೇನೆ. ನಮ್ಮ ’ಓದು’ ನಡೆಯುತ್ತಿದ್ದಾಗ ಇದೂ ಬಂದು ಕುಳ್ಳಿರುತ್ತಿತ್ತು (ಈಗ ನಮ್ಮ ಸಿಂಬಕ್ಕನೂ ಹಾಗೇ ಮಾಡುತ್ತಾಳೆ - ಇಬ್ಬರು ಮಾತಾಡುತ್ತಿದ್ದರೆ ತಾನೂ ಬಂದು ಮಾತಿಗೆ ಮುಖಮಾಡಿ ಕೂರುವುದು, ತನಗೆ ಪ್ರಸ್ತುತವೆನಿಸುವ ಪದ ಬಂದರೆ ಕಿವಿ ನಿಮಿರಿಸಿ ಕತ್ತು ಓರೆ ಮಾಡಿ ನೋಡುತ್ತಾ ಬಾಲವಾಡಿಸುವುದು). ಅವತ್ತೂ ಎಂದಿನಂತೆ ಓದಲು ಹೋಗಿದ್ದೆ. ಅವತ್ತೇನೋ ಅವರ ಮನೆಯಲ್ಲಿ ಯಾರೂ ಇರಲಿಲ್ಲ - ಎಲ್ಲರೂ ಊರಿಗೆ ಹೋಗಿದ್ದರೆಂದು ನೆನಪು. ಸರಿ, ಹೋದ ಮೇಲೆ, ಯಥಾಪ್ರಕಾರ ರಾತ್ರಿ ನಿದ್ದೆ ಬಂದರೆ ಕುಡಿಯಲಿಕ್ಕಿರಲೆಂದು ಪಾತ್ರೆ ಭರ್ತಿ ಟೀ ಮಾಡಿಟ್ಟುಕೊಂಡು, ಅದನ್ನೂ ಮೀರಿ ನಿದ್ದೆ ಬಂದೇ ಬಿಟ್ಟರೆ ತುರ್ತಾಗಿ ಮಲಗಲಿಕ್ಕೆ ಅನುವಾಗುವಂತೆ ವರಾಂಡಾದಲ್ಲಿ ನೆಲದ ಮೇಲೆ ಹಾಸಿಗೆ ಹಾಸಿಟ್ಟು, ಹೊರಗೆ ಬಂದು ಪಡಸಾಲೆಯಲ್ಲಿ ಕೂತೆವು. ಒಂದು ಸಾಲು ಓದು, ಹತ್ತು ನಿಮಿಷ ತೂಕಡಿಕೆ, ಅದನ್ನು ಓಡಿಸಲೆಂದು ಒಂದು ಕಪ್ ಟೀ, ಟೀ ಜೊತೆ ನೆಂಜಿಕೊಳ್ಳಲಿಕ್ಕೆ ಅರ್ಧ ಗಂಟೆ ಮಾತು - ಹೀಗೇ ಸಾಗಿತ್ತು. ರಾತ್ರಿ ಹನ್ನೆರಡು ಬಡಿಯುತ್ತಿದ್ದಂತೆ ಅಚ್ಚುತ ಆಕಳಿಸುತ್ತ ಮೇಲೆದ್ದ. "ಹನ್ನೆರಡಾಯಿತು, ಒಂದು ಹತ್ತು ನಿಮಿಷ ಬಿಬಿಸಿ ನ್ಯೂಸ್ ಕೇಳಿಕೊಂಡು ಬರ್ತೀನಿ" ಎಂದು ಒಳಗೆ ಹೋದ. ಹಾಲ್ ನಲ್ಲಿ ಚಾಪೆಯ ಮೇಲೆ ಅಡ್ಡಾಗಿ ಟ್ರಾನ್ಸಿಸ್ಟರ್ ಹಚ್ಚಿದ (ನಾನು ಹೇಳುತ್ತಿರುವುದು 1987-88ರ ಮಾತು, ಮೊಬೈಲ್ ಹೆಸರೇ ಕೇಳಿಲ್ಲದ ಕಾಲ ಅದು, ಟಿವಿ ಸಹ (ಅದೂ ಬ್ಲಾಕ್ ಅಂಡ್ ವೈಟ್) ಕೆಲವೇ ಸಾಹುಕಾರರ ಮನೆಗಳಲ್ಲಿ ಮಾತ್ರ ಇರುತ್ತಿತ್ತು, ಫೋನಂತೂ ಇನ್ನೂ ಅಪರೂಪ - ಆಗೆಲ್ಲ ಮನೋರಂಜನೆಯ ಮುಖ್ಯ ಸಾಧನವೆಂದರೆ ರೇಡಿಯೋ ಮಾತ್ರ. ಮೊದಲೆಲ್ಲಾ ರೇಡಿಯೋ ಇಟ್ಟುಕೊಳ್ಳಲಿಕ್ಕೂ ಸರ್ಕಾರದಿಂದ ಲೈಸೆನ್ಸ್ ಪಡೆಯಬೇಕಿತ್ತು, ಕೆಲವರ್ಷಗಳ ಹಿಂದಷ್ಟೇ ಲೈಸೆನ್ಸ್ ಮುಕ್ತಗೊಳಿಸಿದ್ದರು). ಅವನಲ್ಲಿ ಬಿಬಿಸಿ ನ್ಯೂಸ್ ಕೇಳುತ್ತಿದ್ದರೆ ನಾನು ಹೊರಗೆ ಪಡಸಾಲೆಯಲ್ಲಿ ಕುಳಿತು ನನ್ನಷ್ಟಕ್ಕೆ ನಾನು ಓದಿಕೊಳ್ಳುತ್ತಿದ್ದೆ. ಹತ್ತು ನಿಮಿಷಕ್ಕೆಂದು ಹೋದವನು ಹದಿನೈದು ನಿಮಿಷವಾಯಿತು, ಇಪ್ಪತ್ತಾಯಿತು, ಅರ್ಧ ಗಂಟೆಯಾಯಿತು - "ಅಚ್ಚುತಾ" ಎಂದು ಕರೆದರೆ ಉತ್ತರವಿಲ್ಲ. ಸರಿ, ಇವನು ಕೈಕೊಟ್ಟನೆಂದು ಗೊತ್ತಾಗಿ ನಾನು ಓದು ಮುಂದುವರೆಸಿದೆ. ಸ್ವಲ್ಪ ಹೊತ್ತಿನಲ್ಲಿ ಸಣ್ಣಗೆ ಮಳೆ ಹನಿಯತೊಡಗಿದ್ದು ಹತ್ತು ನಿಮಿಷದಲ್ಲಿ ಜೋರಾಯಿತು. ಎದ್ದು ಒಳಗೆ ಹಾಲಿನಲ್ಲಿ ಹಾಸಿದ್ದ ಹಾಸಿಗೆಯ ಮೇಲೇ ಕುಳಿತು ಓದಿಕೊಳ್ಳತೊಡಗಿದೆ. ಒಳಗೆ ಇವನದು ಜೋರು ಗೊರಕೆ. ಸ್ವಲ್ಪ ಹೊತ್ತಿನಲ್ಲೇ ಆ ಗೊರಕೆಯ ಸದ್ದು ಮುಚ್ಚಿಹೋಗುವಂತೆ ಹೊರಗೆ ಧೋ ಎಂದು ಮಳೆ, ಗುಡುಗು ಸಿಡಿಲು - ಸ್ವಲ್ಪ ಹೊತ್ತಿಗೆ ಕರೆಂಟೂ ಹೋಗಿಬಿಟ್ಟಿತು. "ಥೋ, ಇವತ್ತು ಓದಿದ್ದಾಯಿತು..." ಎಂದು ಶಪಿಸಿಕೊಂಡು, ಪುಸ್ತಕವನ್ನ ಅಲ್ಲೇ ಟೇಬಲಿನ ಮೇಲೆ ಎತ್ತಿಟ್ಟು ಮಲಗಿದೆ. ಮಲಗಿದರೆ ನಿದ್ದೆ ತಾನೆ ಎಲ್ಲಿ ಬರಬೇಕು - ಒಂದು ಕಡೆ ಮಳೆ, ಇನ್ನೊಂದು ಕಡೆ ಗೊರಕೆ - ಒಂದು "ತಾರೆನೀಹಾರಿಕೆಗಳಾಚೆಯ ವಿಚಾರ" ಮತ್ತೊಂದೋ "ಪಾತಾಳದಾಳದಿಂದೆದ್ದು ಬರುವ ವಿಕಾರ" - ಅಂದ ಹಾಗೆ ಅದೇ ವರ್ಷದಲ್ಲೆಂದು ನೆನಪು, ನಮ್ಮ ಕನ್ನಡ ಪಠ್ಯದಲ್ಲಿ ಅ ರಾ ಮಿತ್ರರ "ಗೊರಕೆ" ಪ್ರಬಂಧವಿತ್ತು. ಅಲ್ಲಿ ಪ್ರಬಂಧಕಾರರು ಇಂಥದ್ದೇ ಸಂದರ್ಭದಲ್ಲಿ ಅಡಿಗರ ಇದೇ ಸಾಲುಗಳನ್ನು ನೆನೆಯುತ್ತಾರೆ. ನಾನೇನೋ "ಎಲ್ಲಿದೆ ಸಮನ್ವಯದ ಕೊಂಡಿ" ಎಂದು ಹುಡುಕಹೋಗಲಿಲ್ಲ. ತಲೆಯಲ್ಲಿ ನೂರೆಂಟು ಯೋಚನೆಗಳು - ಗೊತ್ತು ಗುರಿಯಿಲ್ಲದ ಯೋಚನೆಗಳು.
ಮನುಷ್ಯನದು ಮಂಗಬುದ್ಧಿಯೇ ಸರಿ - ಸರಿಯಾದ ಸಮಯದಲ್ಲಿ ತಪ್ಪಾದ ಚೇಷ್ಟೆ ಮಾಡಿಬಿಡುತ್ತದೆ. "ಔಷಧಿ ತಗೊಳ್ಳುವಾಗ ಕೋತಿಯನ್ನ ನೆನೆಸಿಕೊಳ್ಳಬೇಡ" ಎಂಬ ಗಾದೆಯನ್ನು ಅಷ್ಟಲ್ಲದೇ ಮಾಡಿದ್ದಾರೆಯೇ? ಆ ಮಾತನ್ನು ನೆನಪಿನಲ್ಲಿಟ್ಟು ಔಷಧಿ ತೆಗೆದುಕೊಳ್ಳುವಾಗ ಪ್ರಯತ್ನಿಸಿ ನೋಡಿ - ಕೋತಿ ನೆನಪಾಗಿಯೇ ಆಗುತ್ತದೆ. ಆಗಲೂ ಹಾಗೇ ಆಯಿತು. ಸರಿರಾತ್ರಿ ಹನ್ನೆರಡು ಮೀರಿದ ಹೊತ್ತು, ಕಗ್ಗತ್ತಲು ಬೇರೆ; ಎಲ್ಲೆಲ್ಲೋ ಅಲೆಯುತ್ತಿದ್ದ ಮನಸ್ಸು ಸಮಯ ನೋಡಿಕೊಂಡು ದೆವ್ವದ ವಿಷಯಕ್ಕೆ ಬಂದು ನಿಂತುಬಿಡಬೇಕೇ? ಅದೊಂದು ಬಂದುದೇ ತಡ, ತರಹೇವಾರಿ ದೆವ್ವಗಳು ತರಹೇವಾರಿ ವೇಷಭೂಷಣಗಳೊಂದಿಗೆ, ಹಾವಭಾವಗಳೊಂದಿಗೆ ಬಗೆಗಣ್ಣ ಮುಂದೆ ಕುಣಿಯತೊಡಗಿದುವು. ಒಲೆಯಲ್ಲಿ ಕಾಲಿಟ್ಟು ಅಡುಗೆ ಮಾಡುವ ದೆವ್ವ, ಎಲೆ ಅಡಿಕೆಗೆ ಸುಣ್ಣ ಕೇಳುವ ದೆವ್ವ, ಹಸೀ ಮಗುವನ್ನು ಅಮ್ಮನ ಬಳಿಯಿಂದ ಒಯ್ದು ಹೊರಗೆ ಹೊಸಿಲ ಮೇಲೆ ಮಲಗಿಸುವ ದೆವ್ವ, ಬಾಣಂತನ ಮಾಡುವ ದೆವ್ವ, ಸ್ವತಃ ಬಾಣಂತಿ ದೆವ್ವ, ಕೊಳ್ಳಿ ದೆವ್ವ, ಮೋಹಿನಿ, ಜಡೆಮುನಿ - ಒಂದೇ ಎರಡೇ? ಎಲ್ಲೋ ಮನೋಹರವಾದ ಕಂಠದಿಂದ ಹೊಮ್ಮುತ್ತಿದ್ದ ಹಾಡು ಬರಬರುತ್ತಾ ಕರ್ಕಶವಾಗಿ ಪ್ರೇತದ ಊಳಾಗುವುದು; ಸ್ನಿಗ್ಧಮನೋಹರವಾದ ಮುದ್ದುಮೊಗ ನಿಧಾನಕ್ಕೆ ಬಿರುಗಣ್ಣು, ಕಿಸುವಾಯಿ, ಕೊರೆವಲ್ಲುಗಳ ಅಕರಾಳವಿಕರಾಳವಾದ ಮುಖವಾಗುವುದು; ಮುದ್ದಿನಿಂದ ಕೊರಳನ್ನು ನೇವರಿಸುತ್ತಿದ್ದ ಕೈ ಒತ್ತುತ್ತಾ ಒತ್ತುತ್ತಾ ಕತ್ತು ಹಿಸುಕತೊಡಗುವುದಿಲ್ಲ ಸದ್ಯ ಎಂದುಕೊಳ್ಳುತ್ತಿದ್ದಂತೆ - ಹಾಗಾಗಿಬಿಟ್ಟರೆ ಎಂದು ಭಯವಾಗಿ ಕಣ್ಣುಬಿಟ್ಟೆ, ನಿದ್ದೆಯೂ ಅಲ್ಲದ ಎಚ್ಚರವೂ ಅಲ್ಲದ ಸ್ಥಿತಿಗೆ ಜಾರಿದ್ದೆನೆಂದು ಅರಿತೆ. ಕಣ್ಣು ಬಿಟ್ಟರೂ ಏನು? ಕಣ್ಣಿರಿಯುವ ಕತ್ತಲು, ಘನೀಭವಿಸಿದ ತಮೋರಾಶಿ - ಹೊರಗೆ ಮಳೆ ನಿಂತಿತ್ತು. ಒಳಗೆ ಬಿಬಿಸಿ ಮುಗಿದು ರೇಡಿಯೋ ಕರಗುಟ್ಟುತ್ತಿತ್ತು, ಅಚ್ಚುತನ ಗೊರಕೆಯೂ ಮೊದಲಿನ ಬಿರುಸು ಕಳೆದುಕೊಂಡು ಗುರುಗುಟ್ಟುವಿಕೆಗಿಳಿದಿತ್ತು - ಅದು ತೋಳನ ಗುರುಗುಟ್ಟುವಿಕೆಯಲ್ಲವಷ್ಟೇ? ಮಲಗಿದ್ದವನ ಕೊರಳಿಗೆ ಬಾಯಿ ಹಾಕಿ, ರಕ್ತ ಹೀರಿದ ತೋಳದ ರಕ್ತಸಿಕ್ತ ಬಾಯಿ, ಕೆಂಡವುಗುಳುವ ಕಣ್ಣು - ಅದೋ ಎದ್ದಿತು, ಇತ್ತಕಡೆಯೇ ಹೆಜ್ಜೆ ಹಾಕುತ್ತಿದೆ, ಬಂದೇ ಬಿಟ್ಟಿತು - ಕಿಟಾರನೆ ಕಿರುಚಬೇಕು, ಅಷ್ಟರಲ್ಲಿ - ಥತ್, ಮತ್ತೆ ಅರೆಗನಸು. ಮಗ್ಗುಲು ಬದಲಿಸಿ ಗೋಡೆಯ ಕಡೆ ತಿರುಗಿ ಮಲಗಿದೆ - ಈ ಹಾಳಾದ ದೆವ್ವವನ್ನು ಸೃಷ್ಟಿಸಿದ ದೇವರನ್ನು ಬೈದುಕೊಳ್ಳುತ್ತಾ, ಅಯ್ಯಯ್ಯೋ, ತಪ್ಪಾಯ್ತಪ್ಪಾ, ಕ್ಷಮಿಸಪ್ಪಾ, ಕಾಪಾಡಪ್ಪಾ ಎಂದುಕೊಳ್ಳುತ್ತಾ, "ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ..." ಎಂದು ಹನುಮಂತನನ್ನು ನೆನೆಯುತ್ತಾ ಮಲಗಿದೆ. ಇನ್ನಂತೂ ಕಣ್ಣನ್ನು ಕಡಿದರೂ ನಿದ್ದೆ ಬಾರದು.
ಹೀಗೇ ಕತ್ತಲನ್ನು ದಿಟ್ಟಿಸುತ್ತಾ, ನಿಧಾನವಾಗಿ ಆವರಿಸುತ್ತಿದ್ದ ನಿಶ್ಶಬ್ದವನ್ನು ಆಲಿಸುತ್ತಾ ಮಲಗಿರುವಾಗ ಇದುವರೆಗೂ ಇದ್ದುದು ಗಮನಿಸದೇ ಇದ್ದುದು ಒಂದು ವಿಷಯ ಈಗ ಗಮನಕ್ಕೆ ಬಂತು - ಯಾರೋ ಉಸಿರಾಡುತ್ತಿರುವ ಶಬ್ದ - ಮೆಲ್ಲಗೆ, ಬಹುಮೆಲ್ಲಗೆ ಕೇಳಿಯೂ ಕೇಳದಂತೆ ಉಸಿರಾಡುತ್ತಿದ್ದಾರೆ. ಎಲ್ಲಿ, ಕಿವಿಯಲ್ಲೇ ಅಂದಾಜಿಸಿದರೆ ನನ್ನ ಪಕ್ಕದಿಂದಲೇ ಅದು ಬರುತ್ತಿತ್ತು. ಅರೇ, ಈ ಗಲಿಬಿಲಿಯಲ್ಲಿ ಅಚ್ಚುತ ಯಾವಾಗಲೋ ಎದ್ದು ಇಲ್ಲಿ ಬಂದು ಮಲಗಿಬಿಟ್ಟಿದ್ದಾನೆ ಎಂದುಕೊಂಡೆ. ಆದರೆ ಆ ನೆಮ್ಮದಿ ಇದ್ದಕ್ಕಿದ್ದ ಹಾಗೆ ಹಾರಿಹೋಗುವಂತೆ, ಅಚ್ಚುತನ ಗೊರಕೆ ಒಳಗೆ ಹಾಲಿನಿಂದ ಇನ್ನೂ ಕೇಳುತ್ತಿದ್ದುದು ಗಮನಕ್ಕೆ ಬಂತು. ಹಾಗಿದ್ದರೆ ಇಲ್ಲಿ ಪಕ್ಕ ಮಲಗಿರುವುದು ಯಾರು? ಮತ್ತೆ ಇದೂ ಅರೆಗನಸಲ್ಲವಷ್ಟೇ? ಚಿವುಟಿ ನೋಡಿಕೊಂಡೆ, ಕನಸಲ್ಲವೆಂದು ಖಾತ್ರಿಯಾಗುತ್ತಿದ್ದಂತೆ ಚಿಲ್ಲನೆ ಬೆವರು ಕಿತ್ತುಕೊಂಡಿತು. ಇದು ನನ್ನ ಭ್ರಮೆಯಲ್ಲವಷ್ಟೇ? ಕಿವಿ ಮೋಸಮಾಡುತ್ತಿಲ್ಲವಷ್ಟೇ? ನೋಡೋಣವೆಂದರೆ ಕತ್ತಲು. ಪಕ್ಕ ಕೈಯಾಡಿಸಿ ಖಾತ್ರಿಪಡಿಸಿಕೊಳ್ಳೋಣವೆಂದರೆ, ನಿಜಕ್ಕೂ ಯಾರಾದರೂ ಮಲಗಿಬಿಟ್ಟಿದ್ದರೆ? ಮಲಗಿದ್ದರೆ ಒಂದು, ಕೈ ಆಡಿಸಿದ್ದೇ ನೆಪನಾಗಿ ಗಬಕ್ಕನೆ ಕೈ ಹಿಡಿದುಬಿಟ್ಟರೆ, ಗೋಣು ಮುರಿದುಬಿಟ್ಟರೆ? ಕಳೆದ ವಾರವಷ್ಟೇ ಹಿಂದಿನ ಬೀದಿಯಲ್ಲಿ ಯಾರೋ ಒಬ್ಬ ಹೆಂಗಸು ಬಾವಿಗೆ ಬಿದ್ದು ಸತ್ತಿದ್ದ ಸುದ್ದಿ ನೆನಪಾಯಿತು. ಮುಗಿಯಿತು - ಅವಳೇ, ಅವಳೇ... ನಾನು ಆ ದಿನದ ಬೆಳಕನ್ನು ನೋಡಲಾರೆನೆಂಬುದು ಖಾತ್ರಿಯಾಯಿತು. ಅಚ್ಚುತಾ ಎಂದು ಕೂಗಲೂ ದನಿಯಿಲ್ಲ, ಕೈಕಾಲುಗಳು ಮರಗಟ್ಟಿವೆ. "ಭೂತಪ್ರೇತ ನಿಕಟ ನಹಿ ಆವೇ" ಎಂದು ಹೇಳಿಕೊಂಡಿದ್ದರೆ ಅದು ಓಡಿ ಹೋಗುತ್ತಿತ್ತೇನೋ, ಆದರೆ ಆಗೆಲ್ಲ ನಮಗೆ ಹನುಮಾನ್ ಚಾಲೀಸಾ ಗೊತ್ತಿರಲಿಲ್ಲ. ಇದು ಯಾವ ಜಾತಿಯ ದೆವ್ವವೋ, ನಮ್ಮ ಮಂತ್ರಸ್ತೋತ್ರಗಳು ಇದಕ್ಕೆ ಅರ್ಥವಾಗುವುದೋ ಇಲ್ಲವೋ. ಈಗಂತೂ ಒಳಹೊರಗೆಲ್ಲ ಸಂಪೂರ್ಣ ನಿಶ್ಶಬ್ದ - ಕೊನೆಗೆ ಒಳಗೆ ಅಚ್ಚುತನ ಗೊರಕೆಯೂ ನಿಂತುಹೋಗಿತ್ತು. ಆದರೆ ನನ್ನ ಪಕ್ಕ ಉಸಿರಾಡುವ ಶಬ್ದ ಇನ್ನೂ ಸ್ಪಷ್ಟವಾಗಿ ಕೇಳುತ್ತಿತ್ತು. ಜೊತೆಗೆ ಈಗ ಅಲ್ಪಸ್ವಲ್ಪ ಹೊರಳುವಿಕೆಯೂ ನನ್ನ ಇಂದ್ರಿಯಗಳಿಗೆ ಮೀರಿದ ಅನುಭವವಾಗಿ ವೇದ್ಯವಾಗತೊಡಗಿತು. ಇಲ್ಲ, ಹೀಗೇ ಬೆಳಗಾಗುವವರೆಗೆ ಸತ್ತುಸತ್ತು ಬದುಕುವುದು ಬೇಡ. ಅದೇನಾದರಾಗಲಿ ಒಮ್ಮೆ ತಡವಿ ನೋಡಿಬಿಡೋಣ - ಗೆದ್ದರೆ ಜಯ, ಸತ್ತರೆ ವೀರಸ್ವರ್ಗ ಎಂದೆಲ್ಲ ಧೈರ್ಯ ತಂದುಕೊಳ್ಳುತ್ತಿರುವಂತೆ, ಅಲ್ಲೆಲ್ಲೋ ಬಹುದೂರದಲ್ಲು ನಾಯೊಂದು ಬೊಗಳಿತು. ಅಕೋ, ಮರುಕ್ಷಣದಲ್ಲಿ ನನ್ನ ಕಿವಿಯೇ ತೂತು ಬಿದ್ದಂತೆ "ಭೌ..." ಕಿವಿಯೊಳಗೇ ಬಾಯಿಟ್ಟು ಮಾರುತ್ತರ ಕೊಟ್ಟಿತು ನನ್ನ ಪಕ್ಕ ಮಲಗಿದ್ದ ಜೀವಿ - ಬೊಗಳಿದ್ದೇ ತಡ ಕರೆಂಟು ಬಂದು ದೀಪವೂ ಜಗ್ಗನೆ ಬೆಳಗಿತು. ನೋಡುವುದೇನು? ಅದೇ ದರಿದ್ರದ ನಾಯಿ, ಯಾವುದೋ ಮಾಯೆಯಲ್ಲಿ ಬಂದು ಪಕ್ಕ ಮಲಗಿಬಿಟ್ಟಿದೆ. ಅದು ಬೊಗಳಿದಾಗ ಅನಿರೀಕ್ಷಿತ ಆಘಾತಕ್ಕೆ ಬೆಚ್ಚಿ ಕೈಕೊಡವಿದೆನೆನಿಸುತ್ತದೆ. ನಾನೂ ಅಲ್ಲೇ ಮಲಗಿದ್ದೆನೆಂದು ಆಗಷ್ಟೇ ಗಮನಿಸಿತೋ, ಅನಿರೀಕ್ಷಿತ 'ದಾಳಿ'ಗೆ ಮತ್ತೊಮ್ಮೆ ಬೊಗಳುತ್ತಾ ಕಚ್ಚಬಂತೋ, ಒಟ್ಟಿನಲ್ಲಿ ದೀಪ ಬೆಳಗಿದಾಗ ನನ್ನ ಕಣ್ಣಿಗೆ ಬಿದ್ದುದು ಆ ದೃಶ್ಯ - ಹಲ್ಲು ಮಸೆಯುತ್ತಾ "ಒಂದು ಹೆಜ್ಜೆ ಮುಂದಿಟ್ಟು ನೋಡು, ನಿನ್ನ..." ಎಂದು ಸಂದೇಶ ಕೊಡುತ್ತ ನಿಂತ ನಾಯಿ! ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆ ಕ್ಷಣದಲ್ಲಿ ಅದರಷ್ಟು ಮುದ್ದಾಗಿ ಕಂಡ ಮತ್ತೊಂದು ವಸ್ತುವಿಲ್ಲ ಬದುಕಿನಲ್ಲಿ. ಬಹುಶಃ ಅದು ಕಚ್ಚಿಯೇ ಇದ್ದರೂ ಸಂತೋಷವಾಗಿ ಕಚ್ಚಿಸಿಕೊಳ್ಳುತ್ತಿದ್ದೆನೇನೋ.
ಆಮೇಲೆ ಗಲಾಟೆ ಕೇಳಿ ಅಚ್ಚುತನೂ ಎದ್ದ, ನಾಯಿಯನ್ನು ಕರೆದುಕೊಂಡ, ದೀಪವಾರಿಸಿ ಮಲಗಿದೆವು ಅನ್ನಿ. ಆದರೆ ಆ 'ರಹಸ್ಯರಾತ್ರಿ' ಮಾತ್ರ ನನ್ನ ಮನದಾಳದಲ್ಲಿ ಅಚ್ಚೊತ್ತಿ ನಿಂತುಬಿಟ್ಟಿದೆ.
ಇದನ್ನು ಆನಂತರ ನಾನು ಅಚ್ಚುತ ಎಷ್ಟು ಬಾರಿ ನೆನೆದುಕೊಂಡು ನಕ್ಕಿದ್ದೇವೋ. ಇವತ್ತು ನಮ್ಮೊಡನೆ ಅವನಿಲ್ಲ. ಮೊನ್ನೆ ಅವನ ಮಗ ಬಂದಿದ್ದ. ಅವನಿಗೆ ಅವರಪ್ಪನ ಕತೆಯನ್ನೆಲ್ಲ ಹೇಳುತ್ತಿದ್ದೆ, ಅದನ್ನೇ ಇಲ್ಲೂ ಬರೆದೆನಷ್ಟೇ.
"ನಾಯಿಗಳಿಗೆ ದೆವ್ವಗಳು ಕಾಣುವ ವಿಷಯ?" ಅಂದಿರಾ? ಅದೇನೋ ನನಗೂ ಗೊತ್ತಿಲ್ಲ. ನಿಮಗೆ ಗೊತ್ತಿರಬಹುದೇನೋ ಎಂದು ಕೇಳಿದೆನಷ್ಟೇ. ಗೊತ್ತಿದ್ದರೆ ನನಗೆ ತಿಳಿಸಿ.
ಸರಿ, ಇನ್ನೇನು ಬೆಳಕು ಹರಿಯುತ್ತಾ ಬಂತು. ದೆವ್ವಗಳೂ ಹುಣಸೇಮರಕ್ಕೆ ತೊಂಗುವ ಹೊತ್ತು. ಪಾಪ, ಅವೂ ವಿರಮಿಸಲಿ.