Sunday, May 31, 2020

ಸಂಸ್ಕೃತದಿಂದ ಪ್ರಾಕೃತವೋ ಪ್ರಾಕೃತದಿಂದ ಸಂಸ್ಕೃತವೋ?

ಈ ಚರ್ಚೆ ವಿದ್ವದ್ವಲಯದಲ್ಲಿ ಚರ್ವಿತಚರ್ವಣವೆನಿಸಬಹುದು.  ನಾನು ಹೇಳುತ್ತಿರುವುದರಲ್ಲಿ ಹೊಸದೇನೂ ಇಲ್ಲ.  ಆದರೂ ಈ ಪ್ರಶ್ನೆ ಪದೇಪದೇ ಬರುತ್ತಲೇ ಇರುವುದರಿಂದ, ಉತ್ತರವೂ ಪುನರಾವರ್ತನೆಯಾಗುವುದು ಸಹಜವಷ್ಟೇ  ಆದ್ದರಿಂದ ಈ ಲೇಖನ ಈಗಾಗಲೇ ಇದನ್ನು ತಿಳಿದವರಿಗಾಗಿ ಅಲ್ಲ, ಇನ್ನೂ ಈ ಪ್ರಶ್ನೆಯಿರುವವರಿಗಾಗಿ ಅಷ್ಟೇ.

ಈ ಲೇಖನದ ವಸ್ತು, ಹಿರಿಯಮಿತ್ರರಾದ ಶ್ರೀ ಸುಧೀಂದ್ರ ದೇಶಪಾಂಡೆಯವರು ಫೇಸ್ಬುಕ್ ಚರ್ಚೆಯೊಂದರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ - "ಸಂಸ್ಕೃತವು ಪ್ರಾಕೃತದಿಂದ (ಪ್ರಾಕೃತ ಇದರರ್ಥ; ಪ್ರಕೃತಿಸಹಜವಾದದ್ದು, ಆಡುಮಾತು. natureದಿಂದ ಹುಟ್ಟಿದ natural) ಹುಟ್ಟಿದೆಯೇ ಹೊರತು, ಪ್ರಾಕೃತವು ಸಂಸ್ಕೃತದಿಂದ ಹುಟ್ಟಿಲ್ಲ. ಗ್ರಂಥಭಾಷೆಯಿಂದ ಆಡುನುಡಿಯು ಹುಟ್ಟುವುದೋ, ಆಡುನುಡಿಯಿಂದ ಗ್ರಾಂಥಿಕ ಭಾಷೆ ಹುಟ್ಟುವುದೋ ಎನ್ನುವುದನ್ನು ಪ್ರಾಜ್ಞರು ತಿಳಿದೇ ಇದ್ದಾರೆ"

ಪ್ರಾಕೃತ-ಸಂಸ್ಕೃತಗಳ ಗೂಡಿಗೆ ಕೈಯಿಕ್ಕುವ ಮೊದಲು, ಮೇಲಿನ ಅಭಿಪ್ರಾಯದ ಕೊನೆಯ ವಾಕ್ಯಕ್ಕೆ ಉತ್ತರಿಸಿಬಿಡುತ್ತೇನೆ - ಅದು ಸರಳ.  ಗ್ರಂಥಭಾಷೆಯಿಂದ ಆಡುನುಡಿ ಹುಟ್ಟುವುದೋ ಆಡುನುಡಿಯಿಂದ ಗ್ರಾಂಥಿಕಭಾಷೆ ಹುಟ್ಟುವುದೋ?  ಗ್ರಂಥಭಾಷೆಯಿಂದ ಆಡುನುಡಿ ಹುಟ್ಟುವುದೆಂಬುದನ್ನು ಯಾರೂ ಒಪ್ಪತಕ್ಕದ್ದಲ್ಲ, ಕಾರಣ ಸ್ಪಷ್ಟವಾಗಿಯೇ ಇದೆ - ಏಕೆಂದರೆ ಅಕ್ಷರ ಬರದವರೂ ಭಾಷೆಯನ್ನು ಮಾತಾಡುತ್ತಾರೆ, ಇದರಲ್ಲಿ ಶಂಕೆಯಿಲ್ಲ.  ಆದರೆ ಆಡುನುಡಿಯಿಂದ ಗ್ರಾಂಥಿಕಭಾಷೆ ಹುಟ್ಟುವುದೆಂಬುದೂ ಅತಿವಾದವೇ.  ಏಕೆಂದರೆ ಆಡುನುಡಿಗಳ ಹಲವು ಪ್ರಭೇದಗಳಿರುತ್ತವೆ, ಅವುಗಳಿಂದ ನೇರವಾಗಿ ಗ್ರಂಥಭಾಷೆ ಹುಟ್ಟುವುದಿಲ್ಲ, ಹಾಗೆ ಹುಟ್ಟಿದರೆ ಒಂದೊಂದು ಆಡುನುಡಿಯ ಪ್ರಭೇದಕ್ಕೂ ಒಂದೊಂದು ಗ್ರಂಥಭಾಷೆಯಿರಬೇಕಾಗುತ್ತದೆ.  ಆದರೆ ವಸ್ತುಸ್ಥಿತಿ ಹಾಗಿಲ್ಲವಲ್ಲ.  ಆದ್ದರಿಂದ ಆಡುನುಡಿಗೂ ಗ್ರಂಥಭಾಷೆಗೂ ಮೂಲವಾದ ಭಾಷಾರೂಪವೊಂದು ಇರಲೇಬೇಕು.  ಒಂದುಕಡೆ, ಆ ಮೂಲರೂಪವೇ ಹಲವು ಪ್ರದೇಶಗಳಲ್ಲಿ ಬೇರೆಬೇರೆ ರೀತಿ ಸವೆಸವೆದು ಬೇರೆಬೇರೆಯ ಭಾಷಾಪ್ರಭೇದಗಳಾಗುತ್ತದೆ (ಇವು ಆಡುನುಡಿಗಳು), ಮತ್ತೆ ಅದೇ ಮೂಲರೂಪವನ್ನೇ ಪರಿಶೋಧಿಸಿ ಅದು ಅನುಸರಿಸುವ ವ್ಯಾಕರಣನಿಯಮಗಳನ್ನು ಸೂತ್ರೀಕರಿಸಿದಾಗ ಗ್ರಂಥಭಾಷೆಯ ಉದ್ಭವವಾಗುತ್ತದೆ.  ಇದರ ಅಗತ್ಯವಾದರೂ ಏನೆಂದರೆ, ಅಕ್ಷರರೂಪದಲ್ಲಿರುವ ಭಾಷೆಯು ಮುಖಭಾವ, ದೇಹದ ಚಲನೆ, ಧ್ವನಿಯ ಏರಿಳಿತಗಳ ಸಹಾಯವಿಲ್ಲದೇ ಕೇವಲ ತನ್ನಿಂತಾನೇ ಸಂವಹನಗೊಳ್ಳಬೇಕಿರುವುದರಿಂದ ಅದು ಹೆಚ್ಚು ನಿಖರವಾಗಿ, ಸಂದೇಹಕ್ಕೆಡೆಯಿಲ್ಲದಂತಿರಬೇಕಾಗುತ್ತದೆ.  ಇದು ಸಾಧ್ಯವಾಗಬೇಕೆಂದರೆ ಭಾಷೆಯು ಯಾವ ನಿಯಮಗಳನ್ನು ಅನುಸರಿಸುತ್ತದೆಂಬುದರ ಸ್ಪಷ್ಟತೆಯೂ, ಬಳಕೆಯಲ್ಲಿ ಕೂಡಿದ ಮಟ್ಟಿಗೂ ಏಕರೂಪತೆಯೂ ಅತ್ಯಗತ್ಯವಾಗುತ್ತದೆ.  ಆದ್ದರಿಂದಲೇ ಗ್ರಂಥಭಾಷೆಗೆ ಆಡುಮಾತಿನಲ್ಲಿಲ್ಲದ ಒಂದು ಔಪಚಾರಿಕತೆ, ವ್ಯಾಕರಣಬದ್ಧತೆ ಇರುತ್ತದೆ.  ಆದರೆ ಗ್ರಂಥಭಾಷೆ ಮತ್ತು ವಿವಿಧ ಆಡುನುಡಿಗಳು ಒಂದೇ ಮೂಲರೂಪದಿಂದ ಹೊಮ್ಮಿದ್ದೆಂಬುದನ್ನು ಗಮನದಲ್ಲಿಡಬೇಕು. 

ಇದೇ ಜಾಡನ್ನನುಸರಿಸಿ ಈಗ ಚರ್ಚೆಯನ್ನು ಮುಂದುವರೆಸೋಣ. ಪ್ರಾಕೃತ ಮೊದಲು, ಸಂಸ್ಕೃತ ಆಮೇಲೆ ಎಂಬ ಮಾತು ಬೇರೆಯದೇ ಚರ್ಚೆ - ಯಾವಯಾವ ಪ್ರಾಕೃತಗಳು ಯಾವಯಾವಾಗ ಹುಟ್ಟಿದುವು, ಸಂಸ್ಕೃತ ಹುಟ್ಟಿದ್ದು ಯಾವಾಗ ಇತ್ಯಾದಿ - ಆದರೆ ಅದು ಇಲ್ಲಿನ ಚರ್ಚೆಯ ವಿಷಯವಲ್ಲ; ಇಲ್ಲಿ ನಾವು ಚರ್ಚಿಸುವುದು ಪ್ರಾಕೃತದಿಂದ ಸಂಸ್ಕೃತ ಹುಟ್ಟಿತೋ ಸಂಸ್ಕೃತದಿಂದ ಪ್ರಾಕೃತವೋ ಎಂಬ ಬಗ್ಗೆ ಮಾತ್ರ.

ಮೊದಲಿಗೆ, ಪ್ರಾಕೃತ-ಸಂಸ್ಕೃತ ಎಂಬ ಹೆಸರಿನ ಒಂದು ಅರ್ಥವನ್ನಷ್ಟೇ ಹಿಡಿದು ಭಾಷಾಮೂಲದ ವ್ಯಾಖ್ಯಾನ ಮಾಡುವುದು ಸರಿಯಲ್ಲ.  ಪ್ರಾಕೃತ = ಪ್ರಕೃತಿಯಿಂದ ಹುಟ್ಟಿದ್ದು ಎಂಬ ಅರ್ಥವನ್ನು ಹಿಡಿದರೆ, ಅದನ್ನು ಎಷ್ಟು ಮೂಲಕ್ಕಾದರೂ ಕೊಂಡೊಯ್ಯಬಹುದು - ಉದಾಹರಣೆಗೆ ಗಾಳಿ ಸುಯ್ಯನೆ ಬೀಸುತ್ತದೆ, ಗಿಡಮರಗಳು ಸರ್ರಬರ್ರನೆ ಆಡುತ್ತವೆ, ನದಿ ಜುಳುಜುಳು ಹರಿಯುತ್ತದೆ, ಪಕ್ಷಿಗಳು ಚಿಲಿಪಿಲಿಗುಟ್ಟುತ್ತವೆ, ನಾಯಿ ಭೌಗುಟ್ಟುತ್ತದೆ, ಹುಲಿ 'ಗರ್'ಜಿಸುತ್ತದೆ - ಇವೆಲ್ಲ ಪ್ರಾಕೃತಿಕಶಬ್ದಗಳೇ.  ಪ್ರಕೃತಿಯದೇ ಒಂದು ಭಾಗವಾದ ಮಾನವ ಕೂಡ ತನ್ನ ವಿಶಿಷ್ಟವಾದ ಧ್ವನಿಪೆಟ್ಟಿಗೆಯ ಸಹಾಯದಿಂದ ಸಾವಿರಾರು ಧ್ವನಿಗಳನ್ನು ಹೊರಡಿಸಬಲ್ಲ, ಇವೆಲ್ಲದರ 'ಭಾಷಾರೂಪ' ಪ್ರಾಕೃತ.  ಹೀಗೆಂದುಬಿಟ್ಟರೆ ಪ್ರಪಂಚದ ಎಲ್ಲ ಮೂಲಭಾಷೆಗಳೂ ಪ್ರಾಕೃತಗಳೇ; ಅವುಗಳನ್ನು ಹಿಡಿದು ಸಂಸ್ಕರಿಸಿ ವ್ಯಾಕರಣದ ಚೌಕಟ್ಟಿಗಳವಡಿಸಿಬಿಟ್ಟರೆ ಅಂತಹ ಎಲ್ಲ ಭಾಷೆಗಳೂ ಸಂಸ್ಕೃತವೇ; ಆ ದೃಷ್ಟಿಯಿಂದ ನಮ್ಮ ಕೊಳ್ಳೇಗಾಲದ ಕನ್ನಡ, ಕುಂದಾಪ್ರಕನ್ನಡ, ಹವಿಗನ್ನಡ ಇವೆಲ್ಲವೂ ಪ್ರಾಕೃತಗಳೆಂದೂ, ಅವುಗಳ ಆಧಾರದ ಮೇಲೇ ರೂಪಿತವಾದ ಮೈಸೂರು, ಮಂಗಳೂರು, ಧಾರವಾಡ ಕನ್ನಡಗಳು ಅರೆಸಂಸ್ಕೃತವೆಂದೂ, ಅವುಗಳನ್ನು ಹಿಡಿದು ವ್ಯಾಕರಣಬಂಧಕ್ಕೊಳಪಡಿಸಿದ ಗ್ರಾಂಥಿಕ ಕನ್ನಡವೇ ಸಂಸ್ಕೃತವೆಂದೂ ಕರೆಯಬೇಕಾಗುತ್ತದೆ.  ಆದರೆ ವಸ್ತುತಃ, ಕನ್ನಡವು ಸಂಸ್ಕೃತವಲ್ಲ, ಅಲ್ಲವೇ? ಎರಡೂ ಬೇರೆಬೇರೆ ಭಾಷೆಗಳು!

ಜೊತೆಗೆ ಪ್ರಾಕೃತ=ಪ್ರಕೃತಿಯಿಂದ ಮಾಡಲ್ಪಟ್ಟದ್ದು ಎಂಬ ವ್ಯಾಖ್ಯಾನವನ್ನಿಟ್ಟುಕೊಂಡರೆ ಇನ್ನೆಷ್ಟು ಗಲಿಬಿಲಿಗಳುಂಟಾಗುತ್ತವೆ ನೋಡೋಣ.

ನಮ್ಮಲ್ಲಿ ಅನೇಕರು ತಿಳಿದಿರಬಹುದಾದಂತೆ ಪ್ರಾಕೃತವೆಂಬುದು "ಒಂದು" ಭಾಷೆಯಲ್ಲ - "ಪಲವುಂ ಕನ್ನಡಂಗಳ್" ಎಂಬಂತೆ ಪಲವುಂ ಪ್ರಾಕೃತಂಗಳ್ ಇವೆ - ಶೌರಸೇನೀ, ಪೈಶಾಚೀ, ಅಪಭ್ರಂಶ, ಮಾಗಧೀ, ಅರ್ಧಮಾಗಧೀ, ವೈದರ್ಭೀ (ಮಹಾರಾಷ್ಟ್ರೀ), ಜೈನ, ಪಾಲಿ ಹೀಗೆ.  ಇವೆಲ್ಲವೂ ತಮ್ಮದೇ ವಿಶಿಷ್ಟತೆಯನ್ನು ಹೊಂದಿರುವವಾದರೂ ಇವುಗಳ ನಡುವಿನ ಸಾಮ್ಯವೂ ಕಡೆಗಣಿಸಲಾಗದಂಥದ್ದು - ಉಚ್ಚಾರಣೆ, ವ್ಯಾಕರಣ, ಪದಸಂಪತ್ತು ಮೊದಲಾದುವುಗಳಲ್ಲಿ - ಈ ಸಾಮ್ಯ ತಮಿಳು-ಕನ್ನಡಗಳ ಸಾಮ್ಯಕ್ಕಿಂತ ಹತ್ತಿರದ್ದು, ಧಾರವಾಡ-ಮೈಸೂರು ಕನ್ನಡಗಳ ಸಾಮ್ಯಕ್ಕಿಂತ ದೂರದ್ದು.  ಆದ್ದರಿಂದ ಇವು ಸೋದರಭಾಷೆಗಳೋ, ಒಂದೇ ಭಾಷೆಯ ಪ್ರಭೇದಗಳೋ ಯಾರ ಊಹೆಗಾದರೂ ಬಿಟ್ಟದ್ದು.  ಜೊತೆಗೆ ಈ ಪ್ರಾಕೃತಗಳನ್ನಾಡುವ ಪ್ರದೇಶಗಳು ಒಂದರಿಂದೊಂದು ಬಹುದೂರದವೆಂಬುದನ್ನು ಗಮನದಲ್ಲಿಡಿ - ಶೌರಸೇನೀ ಉತ್ತರಪ್ರದೇಶದ್ದಾದರೆ, ವೈದರ್ಭೀ ಮಹಾರಾಷ್ಟ್ರದ್ದು.  ಎಲ್ಲವೂ ಒಂದಿನ್ನೊಂದರ ಪ್ರಭಾವವಿಲ್ಲದೇ 'ಪ್ರಾಕೃತಿಕ'ವಾಗಿಯೇ ಹುಟ್ಟಿದವೆನ್ನುವುದಾದರೆ, ಅವುಗಳ ನಡುವಣ ಅಚ್ಚರಿಗೊಳಿಸುವ ಸಾಮ್ಯವನ್ನು ಹೇಗೆ ವಿವರಿಸುತ್ತೀರಿ?  ಭಾಷೆಗಳ ನಡುವೆ ಕೊಡುಕೊಳ್ಳುವಿಕೆ, ಒಂದು ಪ್ರದೇಶದಿಂದ ಮತ್ತೊಂದಕ್ಕೆ ಜನರ ವಲಸೆ ಇದರಿಂದ ಭಾಷೆಗಳು ಪರಸ್ಪರ ಪ್ರಭಾವಿತವಾಗುವುದು ಸಾಮಾನ್ಯ, ಒಪ್ಪೋಣ.  ಆದರೆ ಅವು ಭಾಷೆಯೊಂದನ್ನು ಎಷ್ಟೇ ಅತಿಯಾಗಿ ಪ್ರಭಾವಿಸಿದರೂ ಭಾಷೆಯ ಹಂದರವನ್ನೇ ಬದಲಿಸಿಬಿಡುವುದಿಲ್ಲ, ಅಲ್ಲವೇ?  ಈಗ, ಕನ್ನಡಿಗನಿಗೆ ತಮಿಳು ಅರ್ಥವಾಗುವುದಿಲ್ಲ, ತಮಿಳನಿಗೆ ಕನ್ನಡ ಅರ್ಥವಾಗುವುದಿಲ್ಲ, ಎರಡೂ ಬೇರೆಬೇರೆಯ ಭಾಷೆಗಳು.  ಆದರೆ ನೀವು ಕಾಲದಲ್ಲಿ ಹಿಂದುಹಿಂದಕ್ಕೆ ಪಯಣಿಸಿದಂತೆ ತಮಿಳು ಕನ್ನಡಗಳ ಭೇದಗಳು ಕಡಿಮೆಯಾಗುವುದನ್ನು ಗಮನಿಸಬಹುದು.  ಆದ್ದರಿಂದಲೇ ತಮಿಳು ಕನ್ನಡಗಳೆರಡೂ ಒಂದೇ ಭಾಷಾಕುಟುಂಬಕ್ಕೆ ಸೇರಿದುವೆಂದೂ, ಮೂಲಮಾತೃಕೆಯಾದ ಒಂದು ದ್ರಾವಿಡಭಾಷೆಯಿಂದ ಕವಲೊಡೆದುವೆಂದೂ ಭಾಷಾಶಾಸ್ತ್ರಜ್ಞರು ಒಪ್ಪಿದ್ದಾರಲ್ಲವೇ?  ಇದೇ ಮಾತು ಈ ಪ್ರಾಕೃತಗಳಿಗೂ ಅನ್ವಯಿಸುತ್ತವೆ.  ಹಾಗಾದರೆ, ಈ ಎಲ್ಲ ಪ್ರಾಕೃತಗಳಿಗೂ ಮೂಲಮಾತೃಕೆಯೊಂದಿದೆಯೆಂದಮೇಲೆ, ಈ ಒಂದೊಂದು ಪ್ರಾಕೃತವೂ ಪ್ರಕೃತಿಯಿಂದ ಸ್ಥಳೀಯವಾಗಿಯೇ ಮಾಡಲ್ಪಟ್ಟದ್ದು ಎನ್ನುವ ವಾದ ಬಿದ್ದುಹೋಗುತ್ತದೆ ತಾನೆ?  ಹಾಗಿದ್ದರೆ ಅದಕ್ಕೆ 'ಪ್ರಾಕೃತ' (ಪ್ರಕೃತಿಯಿಂದ ಮಾಡಲ್ಪಟ್ಟದ್ದು) ಎಂದೇಕೆ ಕರೆಯುತ್ತಾರೆ?  ಈ ಪ್ರಶ್ನೆ ಏಕೆ ಬರುತ್ತಿದೆಯೆಂದರೆ, ಪ್ರಾಕೃತ = ಪ್ರಕೃತಿಯಿಂದ ಮಾಡಲ್ಪಟ್ಟದ್ದು ಎನ್ನುವ ವ್ಯಾಖ್ಯೆಯನ್ನು ನಾವು ಹಿಡಿದಿರುವುದರಿಂದ.  ಅದು ಈ ಸಂದರ್ಭಕ್ಕೆ ಹೊಂದುವಂಥದ್ದೇ ಅಲ್ಲ.  ಪ್ರಕೃತ = ಮಾಡಲ್ಪಟ್ಟ, ಇರುವ ಇತ್ಯಾದಿ; ಪ್ರಾಕೃತ = ಪ್ರಕೃತದಲ್ಲಿ ಬಳಕೆಯಲ್ಲಿರುವುದು - ಇದು ಸರಿಯಾದ ವ್ಯಾಖ್ಯಾನ.  ಸಂಸ್ಕೃತ-ಪ್ರಾಕೃತ ಈ ಜೋಡಿಯ ಸಂದರ್ಭದಲ್ಲಿ ಹೇಳುವುದಾದರೆ ('ಸಂಸ್ಕೃತ'ದ ವಿಷಯ ಆಮೇಲೆ ನೋಡೋಣ), ಪ್ರಕೃತದಲ್ಲಿ ಬಳಕೆಯಲ್ಲಿರುವ ಭಾಷಾಪ್ರಭೇದಗಳೇ ಪ್ರಾಕೃತಗಳು (ಎಂದರೆ ಇವುಗಳ ಮೂಲರೂಪ ಹೇಗೋ ಇತ್ತು, ಆದರೆ ಇವತ್ತು ಬಳಕೆಯಲ್ಲಿರುವುದು ಹೀಗೆ)

ಈ ವಿವಿಧ ಪ್ರಾಕೃತಗಳ ಪರಸ್ಪರ ಸಾಮ್ಯವಿರಲಿ, ಪ್ರಾಕೃತ-ಸಂಸ್ಕೃತದ ನಡುವಣ ಸಾಮ್ಯವನ್ನೊಮ್ಮೆ ಗಮನಿಸಿ.  ಉದಾಹರಣೆಗೆ ಈ ಕೆಳಗಿನ ಪದ್ಯವನ್ನೊಮ್ಮೆ ನೋಡೋಣ:

ಭವಭೂಇಜಲಹಿಣಿಗ್ಗಯಕವ್ವಾಮಯರಸಕಣಾ ಇವಾ ಫುರಂತಿ
ಜಸ್ಸ ವಿಸೇಸಾ ಅಜ್ಜವಿ ವಿಯಡೇಸು ಕಹಾಣಿವೇಸೇಸು||

ಇದು ವಾಕ್ಪತಿರಾಜನ "ಗಉಡವಹೋ" (ಸಂ. ಗೌಡವಧಾ) ಎಂಬ ಪ್ರಾಕೃತಕಾವ್ಯದಲ್ಲಿ ಬರುವ ಭವಭೂತಿಕವಿಯ ಪ್ರಶಂಸೆ.  "ಭವಭೂತಿಯೆಂಬ ಜಲಧಿಯನ್ನು ಕಡೆದಾಗ ಸ್ಫುರಿಸಿದ ಕಾವ್ಯಾಮೃತರಸದ ಕೆಲವು ಕಣಗಳು ನನ್ನ ಈ ಕಥಾನಿವೇಶದಲ್ಲಿ ಇಂದಿಗೂ ಪ್ರಕಟಗೊಳ್ಳುತ್ತವೆ" ಇದು ಇದರ ಸ್ಥೂಲಾರ್ಥ, ವಾಕ್ಪತಿರಾಜನು ಭವಭೂತಿಯನ್ನು ಸ್ಮರಿಸಿಕೊಳ್ಳುವ ರೀತಿ.  ನಮಗೆ ಈ ಭಾಷೆಯ ಪರಿಚಯವಿಲ್ಲದಿದ್ದರೂ, ಸಂಸ್ಕೃತದ ಅಲ್ಪಪರಿಚಯವಾದರೂ ಇದ್ದವರಿಗೆ ಈ ಪದ್ಯವನ್ನು ಓದಿದಾಗ ತೀರ ಅಪರಿಚಿತವೆಂದೇನು ಅನ್ನಿಸುವುದಿಲ್ಲ - ಪದಗಳು ವಿಚಿತ್ರವೆನಿಸಬಹುದು, ಆದರೆ ಅದರ ಲಯ, ಶೈಲಿ, ವ್ಯಾಕರಣ ಇವಾವುವೂ ಅಪರಿಚಿತವೆನಿಸುವುದಿಲ್ಲ.  ಈಗ ಮೇಲಿನ ಪದ್ಯದ ಸಂಸ್ಕೃತ ಅನುವಾದವನ್ನೇ ನೋಡಿಬಿಡೋಣ:

ಭವಭೂತಿಜಲಧಿನಿರ್ಗತಕಾವ್ಯಾಮೃತರಸಕಣಾ ಇವ ಸ್ಫುರಂತಿ
ಯಸ್ಯ ವಿಶೇಷಾ ಅದ್ಯಪಿ ವಿಕಟೇಷು ಕಥಾನಿವೇಶೇಷು||

ಎಷ್ಟು ವ್ಯತ್ಯಾಸವಿದೆ?  ಸಂಸ್ಕೃತದ ಭವಭೂತಿ ಇಲ್ಲಿ ಭವಭೂಇ ಆದ (ಕೆಲವು ಪ್ರಾಕೃತಗಳಲ್ಲಿ ಬವಬೂಯಿ), ಜಲಧಿಯು ಜಲಹಿ ಆಯಿತು (ಕೆಲವು ಪ್ರಾಕೃತಗಳಲ್ಲಿ ಜಳಹಿ), ನಿರ್ಗತವು ಣಿಗ್ಗಯವಾಯಿತು, ಅದ್ಯಪಿ > ಅಜ್ಜವಿ; ಕಥಾನಿವೇಶ > ಕಹಾಣಿವೇಸ - ಹೀಗೆ ರೂಪಗಳು ವ್ಯತ್ಯಾಸವಾದುವೇ ವಿನಾ ಉಳಿದದ್ದೆಲ್ಲವೂ ಹಾಗೇ ಇವೆಯಲ್ಲ.

ಹಾಗಿದ್ದರೆ ಸಂಸ್ಕೃತಪ್ರಾಕೃತಗಳೆರಡಕ್ಕೂ ಹೊಕ್ಕುಳಬಳ್ಳಿಯ ಸಂಬಂಧವಿದೆಯೆಂದಂತಾಯಿತಲ್ಲವೇ?  ಯಾವುದರಿಂದ ಯಾವುದು ಹುಟ್ಟಿತು?  ಪ್ರಾಕೃತ = ಪ್ರಕೃತಿಯಿಂದ ಮಾಡಲ್ಪಟ್ಟಿದ್ದು, ಸಂಸ್ಕೃತ = ಅದನ್ನು ಸಂಸ್ಕರಿಸಿದ್ದು ಎನ್ನುವ ವ್ಯಾಖ್ಯೆಯ ಆಧಾರದ ಮೇಲೆ, "ಪ್ರಾಕೃತವೇ ಮೊದಲು, ಅದರಿಂದ ಬಂದದ್ದು ಸಂಸ್ಕೃತ" ಎಂದು ಇದುವರೆಗೆ ವಾದಿಸುತ್ತಿದ್ದೆವು.  ಆದರೆ ಪ್ರಾಕೃತವೆಂಬುದರ ವ್ಯಾಖ್ಯೆ ಹಾಗಲ್ಲವೆಂಬುದನ್ನು ಮೇಲೇ ನೋಡಿದೆವಲ್ಲ - ಪ್ರಾಕೃತವೆಂದರೆ ಪ್ರಕೃತದಲ್ಲಿ ಬಳಕೆಯಲ್ಲಿರುವುದೆಂದಷ್ಟೇ ಅರ್ಥ, ಆದಿಯಿಂದಲೂ (Natural ಆಗಿ) ಹೀಗೇ ಇತ್ತಂದಲ್ಲ.  ಸರಿ, ಪ್ರಾಕೃತವೆಂಬುದರ ವ್ಯಾಖ್ಯೆ ಹೇಗಾದರೂ ಇರಲಿ, ಸಂಸ್ಕೃತವು ಪ್ರಾಕೃತದಿಂದಲೇ ಹುಟ್ಟಿಲ್ಲವೆಂದು ಹೇಗೆ ಹೇಳುತ್ತೀರಿ?  ಪ್ರಾಕೃತವೆಂದರೆ ಸದ್ಯ ಬಳಕೆಯಲ್ಲಿರುವುದು ಎಂದಿರಬಹುದು, ಆದರೆ ಸಂಸ್ಕೃತವೆಂದರೆ "ಸಂಸ್ಕರಿಸಲ್ಪಟ್ಟ ಭಾಷೆ" ಎಂಬ ಅರ್ಥವಂತೂ ಇದೆಯಲ್ಲ - ಪ್ರಾಕೃತವನ್ನು 'ಸಂಸ್ಕರಿಸಿ' ಪಡೆದ ಭಾಷೆಯೇ ಸಂಸ್ಕೃತ ಎಂದು ಇನ್ನೂ ವಾದಿಸಬಹುದು.  ಹೀಗೆ ವಾದ ಹೂಡುವಾಗ ಭಾಷೆಯ ಬೆಳವಣಿಗೆಯ ಸಹಜ ಹರಿವನ್ನು ಗಮನಸಲ್ಲಿಡಬೇಕಾಗುತ್ತದೆ.  ಈಗ ನೋಡಿ, ನಿರ್ಗತ-ಣಿಗ್ಗಯ ಇವುಗಳಲ್ಲಿ ಯಾವುದು ಕ್ಲಿಷ್ಟ, ಯಾವುದು ಸರಳ?  ಸ್ಫುರಂತಿ-ಪುರಂತಿ ಇವುಗಳ ನಡುವೆ?  ಹಾಗೆಯೇ ವಿಶೇಷಾ-ವಿಸೇಸಾ, ವಿಕಟ-ವಿಯಡ.  ಈ ಜೋಡಿಗಳಲ್ಲಿ ಎರಡನೆಯ ಪದವೇ ಉಚ್ಚಾರಣೆಗೆ ಸುಲಭವಲ್ಲವೇ?  ಸರಳವಾದ ಕನ್ನಡದ ಉದಾಹರಣೆಯನ್ನೇ ಕೊಡುವುದಾದರೆ, "ನಾನು ಹೋಗುತ್ತೇನೆ" ಎನ್ನುವುದು ಸರಳವೋ, "ನಾ ವೊಯ್ತಿನಿ" ಎನ್ನುವುದೋ?  "ನಾ ವೊಯ್ತಿನಿ" ಎನ್ನುವುದು ಸರಳ.  "ನಾನು ಹೋಗುತ್ತೇನೆ" ಎನ್ನುವುದನ್ನು ಉಚ್ಚಾರಣೆಯ ಸೌಲಭ್ಯಕ್ಕೆ ತಕ್ಕಂತೆ "ನಾ ವೊಯ್ತಿನಿ" ಎಂದು ಮಾಡಿಕೊಂಡಿತು ನಾಲಿಗೆ.  ಎಂದ ಮೇಲೆ ಮೊದಲಿದ್ದದ್ದು ಯಾವುದು?  ನಾನು ಹೋಗುತ್ತೇನೆ ಎಂಬುದೋ ನಾ ವೊಯ್ತಿನಿ ಎಂಬುದೋ?  ನಾ ವೊಯ್ತಿನಿ ಎಂಬುದೇ ಮೊದಲಿದ್ದದ್ದು, ಅದನ್ನು 'ಸಂಸ್ಕರಿಸಿ' ನಾನು ಹೋಗುತ್ತೇನೆ ಎಂಬ ಮಾತು ಕಟ್ಟಲ್ಪಟ್ಟಿತು ಎಂಬ ವಾದವು ಎಷ್ಟು ಸಹಜವೆನಿಸಬಹುದು?  ಸದ್ಯಕ್ಕೆ, ವಾದಕ್ಕಾಗಿ ಈ ವಾದವನ್ನೇ ಒಪ್ಪೋಣ, ನಾ ವೊಯ್ತಿನಿ ಎಂಬುದೇ ಮೊದಲಿದ್ದುದು, ನಾನು ಹೋಗುತ್ತೇನೆ ಎಂಬುದು ಅದರ 'ಸಂಸ್ಕರಿಸಿದ' ರೂಪ.  ಈ ವಾದದಿಂದ ಹೊರಡುವ ತೊಡಕುಗಳನ್ನು ನೋಡಿ.  "ನಾ ವೊಯ್ತಿನಿ" ಎನ್ನುವುದು ನಮ್ಮ ಮೈಸೂರು ಕಡೆ ನಿರ್ದಿಷ್ಟ ಸಮುದಾಯಗಳ ನಡುವಷ್ಟೇ ಇರುವ ಬಳಕೆ - ಇತರರು "ನಾ ಹೋಗ್ತೀನಿ", "ನಾ ಹೋಗ್ತೇನೆ" ಎಂದೂ ಹೇಳುತ್ತಾರೆ.  ಮಂಗಳೂರು/ಕುಂದಾಪುರದ ಕಡೆ "ನಾ ಹೋಗ್ತೆ/ಹೋಗ್ತ್ನೆ/ಹೋತ್ನೆ" ಎನ್ನುತ್ತಾರೆ (ಹಾಗೆಂದುಕೊಂಡಿದ್ದೇನೆ, ಆ ಕಡೆಯವರು ತಿದ್ದಬಹುದು), ಕೊಯಮತ್ತೂರಿನ ಕಡೆಯವರು "ನಾ ಹೋಪೆ" ಎನ್ನುತ್ತಾರೆ, ಧಾರವಾಡದ ಕಡೆ "ನಾ ಹೊಕ್ಕೀನಿ" ಎನ್ನುತ್ತಾರೆ (ಮತ್ತೆ, ತಪ್ಪಿದ್ದರೆ ತಿದ್ದಬಹುದು); ಕೆಲವು ಬ್ರಾಹ್ಮಣಪಂಗಡಗಳಲ್ಲಿ "ನಾ ಹೋಗ್ತೇನು" ಎಂದೂ ಹೇಳುತ್ತಿದ್ದರು (ಕೈಲಾಸಂ ಈ ರೂಪವನ್ನು ತಮ್ಮ ನಾಟಕಗಳಲ್ಲಿ ಬಳಸಿದ್ದಾರೆ ಕೂಡ) ಈಗ ವೊಯ್ತಿನಿ, ಹೋಗ್ತೀನಿ, ಹೋಗ್ತೇನೆ, ಹೋಗ್ತೇನು, ಹೋಗ್ತೆ, ಹೋಗ್ತ್ನೆ, ಹೋತ್ನೆ, ಹೋಪೆ, ಹೊಕ್ಕೀನಿ ಇವುಗಳಲ್ಲಿ ಯಾವುದು ಮೂಲರೂಪ, ಯಾವುದರಿಂದ ಯಾವುದು ಹುಟ್ಟಿತು, ಈ ಒಂದೊಂದು ರೂಪವೂ ಬಂದದ್ದಾದರೂ ಹೇಗೆ?  ಈ ಒಂದೊಂದು ರೂಪವೂ "ಹೋಗುತ್ತೇನೆ" ಎಂದೇ ಪರಿವರ್ತನೆಗೊಂಡದ್ದಾದರೂ ಹೇಗೆ?  ಹಾಗೆ ಪರಿವರ್ತಿಸಿದ ನಿರ್ದಿಷ್ಟ ವ್ಯಾಕರಣಸೂತ್ರವಾವುದು? (ಹೋಗುತ್ತೇನೆ ಎಂಬುದರಿಂದ ಇವು ಹುಟ್ಟಿದುವು ಎನ್ನುವುದಕ್ಕಾದರೆ ಒಂದೇ ವಿವರಣೆ - ನಾಲಿಗೆಯ ಸೌಲಭ್ಯ), ಆದರೆ ಅವುಗಳಿಂದಲೇ ಇದು ಹುಟ್ಟಿತು ಎನ್ನುವುದಕ್ಕಾದರೆ ನಾಲಿಗೆಯ ಸೌಲಭ್ಯ ಎಂಬ ವಿವರಣೆ ಸಲ್ಲುವುದಿಲ್ಲ, ಹೋಗುತ್ತೇನೆ ಎಂಬುದು ಇವೆಲ್ಲಕ್ಕಿಂತ ಕ್ಲಿಷ್ಟರೂಪ, ಮತ್ತು ನಾಲಿಗೆ ಯಾವಾಗಲೂ ಕ್ಲಿಷ್ಟತೆಯಿಂದ ಸರಳತೆಗೆ ಜಾರುವುದೇ ಹೊರತು, ವಿರುದ್ಧದಿಕ್ಕಿನಲ್ಲಲ್ಲ.  ಅಲ್ಲದೇ ವೊಯ್ತಿನಿ, ಹೋಗ್ತೆ, ಹೋಗ್ತ್ನೆ ಮುಂತಾದುವುಗಳಿಂದ ಹೋಗುತ್ತೇನೆ ಎನ್ನುವ ರೂಪ ಬರಬೇಕಾದರೆ, ಅಲ್ಲಿ ಮುಖ್ಯವಾಗುವುದು ನಾಲಿಗೆಯ ಸೌಲಭ್ಯವಲ್ಲ, ವ್ಯಾಕರಣಬದ್ಧತೆ (ಗ್ರಾಂಥಿಕಭಾಷೆಯಲ್ಲಿ ವ್ಯಾಕರಣವೇ ಮುಖ್ಯವಷ್ಟೇ?).  ಹಾಗಿದ್ದರೆ ಈ ಒಂದೊಂದು ರೂಪದಿಂದಲೂ "ಹೋಗುತ್ತೇನೆ" ಎನ್ನುವ ರೂಪವೇ ಸಿದ್ಧಿಸಬೇಕಾದರೆ ಅಲ್ಲಿ ಬಳಸಿದ ವ್ಯಾಕರಣ ಯಾವುದು?  "ಹೋಗುತ್ತೇನೆ" ಎನ್ನುವುದಕ್ಕಾದರೆ ವ್ಯಾಕರಣದ ವಿವರಣೆಯಿದೆ - ಹೋಗು ಎನ್ನುವ ಧಾತುವಿಗೆ "ತ್ತೇನೆ" ಎನ್ನುವ ಕಾಲಸೂಚಕಪ್ರತ್ಯಯ ಸೇರಿ ಹೋಗುತ್ತೇನೆ ಎಂದಾಯಿತು.  ಹೀಗೇ ಈ ಬಳಕೆಯ ರೂಪಗಳನ್ನು ವಿವರಿಸಲಿಕ್ಕಾಗುತ್ತದೆಯೇ?  ಇದರಿಂದ ಏನು ಸಾಬೀತಾಯಿತು?  ಹೋಗುತ್ತೇನೆ ಎಂಬುದೇ ಮೂಲರೂಪ, ಅದರಿಂದ ಹುಟ್ಟಿದ್ದು ವೊಯ್ತಿನಿ, ಹೋಗ್ತೆ, ಹೋಗ್ತ್ನೆ ಇತ್ಯಾದಿ ರೂಪಗಳು, ಅಲ್ಲವೇ? ಒಂದು ಮೂಲದಿಂದ ಹಲವು ರೂಪಗಳು ಹೊಮ್ಮುವುದು ಸಹಜ, ಆದರೆ ಒಂದೇ ರೂಪಕ್ಕೆ ಹಲವು ಮೂಲಗಳಿರಲಾರವಷ್ಟೇ?  ಜೊತೆಗೆ ನೋಡಿ, ಒಯ್ತಿನಿ ಎನ್ನುವುದು ಹೋಗುತ್ತೇನೆ ಎಂಬುದರ ಬಳಕೆಯ ರೂಪವೂ ಆಗಬಹುದು, ಒಯ್ಯುತ್ತೇನೆ ಎನ್ನುವುದರ ಬಳಕೆಯ ರೂಪವೂ ಆಗಬಹುದು. ಹೀಗಾಗಿ ಒಯ್ತೀನಿ ಎನ್ನುವುದರ ವ್ಯುತ್ಪತ್ತಿಯನ್ನು ಅದೇ ರೂಪದಲ್ಲಿ ವಿವರಿಸುವುದು ಸಾಧ್ಯವೇ ಇಲ್ಲ; ಹೋಗುತ್ತೇನೆ ಮತ್ತು ಒಯ್ಯುತ್ತೇನೆ ಎಂಬ ರೂಪಗಳಲ್ಲೇ ವ್ಯುತ್ಪತ್ತಿಯನ್ನು ವಿವರಿಸಬೇಕು. ಎಂದ ಮೇಲೆ ಯಾವುದು ಮೂಲ?

ಇದೇ ತರ್ಕವನ್ನು ಜಲಧಿ-ಜಲಹಿ/ಜಳಹಿ, ನಿರ್ಗತ-ಣಿಗ್ಗಯ, ಸ್ಫುರಂತಿ-ಪುರಂತಿ, ವಿಶೇಷ-ವಿಸೇಸ, ವಿಕಟ-ವಿಯಡ ಇವುಗಳಿಗೆ ಅನ್ವಯಿಸಿ ನೋಡಿ?  ಎರಡನೆಯ ಪದಗಳಿಂದಲೇ ಮೊದಲಿನವು ಹುಟ್ಟಿದುವೆಂದರೆ, ಅವುಗಳ ವ್ಯುತ್ಪತ್ತಿವಿವರಣೆ, ಬೇರೆಬೇರೆ ಹಲವು ರೂಪಗಳಿಂದ ಒಂದೇ ಸಂಸ್ಕೃತಪದ ಹುಟ್ಟಿದ್ದಾದರೂ ಹೇಗೆ ಮೊದಲಾದ ವಿವರಣೆಗಳು ಬೇಕಲ್ಲವೇ? ಜೋಡಿಯ ಮೊದಲ ಪದಗಳಿಗೆ ವ್ಯುತ್ಪತ್ತಿವಿವರಣೆಯಿದೆ.  ಎರಡನೆಯ ಪದಗಳಿಗೆ ಅಂತಹ ವಿವರಣೆಯಿಲ್ಲ.  ಅವು ಮೊದಲ ಪದಗಳಿಂದ ನಾಲಿಗೆಯ ಸೌಲಭ್ಯಕ್ಕನುಗುಣವಾಗಿ ಹುಟ್ಟಿದವು ಎಂಬುದು ಸ್ಪಷ್ಟವಾಯಿತಲ್ಲವೇ?  ತತ್ಸಮದಿಂದ ಹುಟ್ಟಿದ್ದು ತದ್ಭವವೇ ಹೊರತು ತದ್ಭವದಿಂದಲೇ ತತ್ಸಮವು ಹುಟ್ಟುವುದಿಲ್ಲವಷ್ಟೇ?

ಹಾಗಿದ್ದರೆ ಈಗ ಬಹುಮುಖ್ಯವಾದ ಪ್ರಶ್ನೆಯೇಳುತ್ತದೆ - 'ಸಂಸ್ಕೃತ' ಎಂಬುದು ಸಂಸ್ಕರಿಸಿದ ಭಾಷೆ ತಾನೆ?  "ಪ್ರಾಕೃತದಿಂದ ಸಂಸ್ಕರಿಸಿದ ಭಾಷೆ ಸಂಸ್ಕೃತ" ಎನ್ನುವುದು ಸ್ಪಷ್ಟವಾಗಿಯೇ ಇದೆಯಲ್ಲ.  ಇದಕ್ಕೇನು ಸಮಾಧಾನ?  ಸಮಾಧಾನವಿದೆ.  ಪ್ರಾಕೃತ ಎಂದರೆ ಪ್ರಕೃತಿಜನ್ಯವಾದ ಭಾಷೆಯಲ್ಲ, ಪ್ರಕೃತ ಬಳಕೆಯಲ್ಲಿರುವ ಭಾಷೆ ಎಂಬುದನ್ನು ಮೇಲೆ ನೋಡಿದೆವು.  ಪ್ರಾಕೃತದಿಂದ 'ಸಂಸ್ಕೃತ'ವು ಹುಟ್ಟಲು ಸಾಧ್ಯವಿಲ್ಲ ಎಂಬುದನ್ನೂ ಮೇಲೆಯೇ ನೋಡಿದೆವು.  ಹಾಗಿದ್ದರೆ ಸಂಸ್ಕೃತವು ಹುಟ್ಟಿದ್ದೆಲ್ಲಿಂದ?  ಅದು 'ಸಂಸ್ಕರಿಸಿದ ಭಾಷೆ' ಅಲ್ಲವೇ?  ಖಂಡಿತಾ ಹೌದು, ಆದರೆ ಪ್ರಾಕೃತದಿಂದ 'ಸಂಸ್ಕರಿಸಿ' ಪಡೆದದ್ದಲ್ಲ.  ಸಂಸ್ಕೃತದ ಮೂಲಮಾತೃಕೆ ವೇದಭಾಷೆ (ಗುರುತಿಸುವ ಸೌಲಭ್ಯಕ್ಕಾಗಿ ವೇದಭಾಷೆಯನ್ನು ವೈದಿಕಸಂಸ್ಕೃತವೆಂದೂ, ಅದಲ್ಲದ, ಪಾಣಿನಿಪ್ರಣೀತವಾದ ವ್ಯಾವಹಾರಿಕಸಂಸ್ಕೃತವನ್ನು ಲೌಕಿಕ/ಪಾಣಿನೀಯಸಂಸ್ಕೃತವೆಂದೂ ಕರೆಯುತ್ತೇವೆ, ಆದರೆ ವೇದಭಾಷೆಗೆ ಮೂಲತಃ 'ಸಂಸ್ಕೃತ'ವೆಂಬ ಹೆಸರಿದ್ದಿಲ್ಲ, 'ಸಂಸ್ಕೃತ'ವೆಂಬುದೇನಿದ್ದರೂ ವೇದಭಾಷೆಯನ್ನು ಪರಿಷ್ಕರಿಸಿ, 'ಸಂಸ್ಕರಿಸಿ' ಪಡೆದ ಪಾಣಿನೀಯ ಸಂಸ್ಕೃತ).  ಈ ವೇದಭಾಷೆ ಜನಬಳಕೆಗೆ ಹತ್ತಿರವಾದದ್ದು.  ಮೇಲೆ ಹಲವು ಪ್ರಾಕೃತಗಳನ್ನು ವಿವರಿಸುತ್ತಾ, ಅವಕ್ಕೆ ಮೂಲಮಾತೃಕೆಯೊಂದಿರಬೇಕೆಂದಿದ್ದೆನಲ್ಲವೇ?  ಆ ಮೂಲಮಾತೃಕೆಯೇ ವೇದಭಾಷೆ.  ವೇದಭಾಷೆಯೇ ಬಳಕೆಯಲ್ಲಿ ಸವೆಸವೆದು ವಿವಿಧ ಸ್ಥಳೀಯ ಪ್ರಾಕೃತಗಳಾಗಿ ರೂಪುಗೊಂಡದ್ದು.  ಇದು ಯಾವಾಗ ಸವೆಯಲು ಶುರುವಾಯಿತು, ಯಾವಯಾವಾಗ ಎಲ್ಲೆಲ್ಲಿ ಎಷ್ಟೆಷ್ಟು ಸವೆಯಿತು ಎಂಬುದನ್ನು ಹೇಳಬರುವುದಿಲ್ಲವಷ್ಟೇ?  ಜೊತೆಗೆ ಈ ಪ್ರಾಕೃತಗಳ ಮೂಲಮಾತೃಕೆಯಾದ ವೇದಭಾಷೆಯೇ ಜನಬಳಕೆಗೆ ಹತ್ತಿರವಿದ್ದುದರಿಂದ ಅದರಲ್ಲೂ ಕ್ರಮೇಣ ಸಹಜವಾಗಿಯೇ ಬಳಕೆಯಿಂದುಂಟಾಗುವ ಶೈಥಿಲ್ಯಗಳೂ, 'ಅಪ'ರೂಪಗಳೂ, ನಿರ್ದಿಷ್ಟ ನಿಯಮಗಳಿಗೆ ಕಟ್ಟುಬೀಳದ ಹೊಸಹೊಸ ಪ್ರಯೋಗಗಳೂ ಕಾಲಕ್ರಮದಲ್ಲಿ ಹೇರಳವಾಗಿ ಸೇರಿ, ವೇದಭಾಷೆಯಿಂದಾಚೆಗೂ ಹೊರವಾಗಿ ಬೆಳೆದ ಅಗಾಧವಾದ ವ್ಯಾವಹಾರಿಕಭಾಷೆಯೊಂದು ಪಾಣಿನಿಯ ಕಾಲಕ್ಕಾಗಲೇ ಅಸ್ತಿತ್ವದಲ್ಲಿತ್ತು; ಜೊತೆಗೆ ಇದನ್ನು ವಿವರಿಸುವ ವಿವಿಧ ವ್ಯಾಕರಣಗಳೂ - ಈ ಇವೆಲ್ಲವನ್ನೂ ಸೂತ್ರೀಕರಿಸಿ ನಿಯಮಗಳ ಮೂಲಕ ವಿವರಿಸಿದ್ದು, ನಿಯಮಕ್ಕೆ ಅಳವಡಿಸುವಲ್ಲಿನ ತೊಡಕುಗಳನ್ನು ನಿವಾರಿಸಿ 'ಸಂಸ್ಕರಿಸಿ'ದ್ದು, ತನ್ನ ಕಾಲದಲ್ಲಿ ಬಳಕೆಯಲ್ಲಿದ್ದ ಭಾಷೆಯ ಹಲವು ನಿಯಮಬದ್ಧವಲ್ಲದ ರೂಪಗಳಿಗೆ 'ಸರಿ'ಯಾದ ರೂಪಗಳನ್ನು ಹೇಳಿದ್ದು ಪಾಣಿನಿ.  ಪಾಣಿನಿಪ್ರಣೀತವಾದ, ಪರಿಶೋಧಿಸಲ್ಪಟ್ಟ ಈ ಭಾಷೆಯೇ 'ಸಂಸ್ಕೃತ'ವೆಂದು ಬಳಕೆಗೆ ಬಂತು (ಪಾಣಿನಿಗೂ ಮೊದಲೇ ಹಲವರು ವೈಯಾಕರಣರು ವ್ಯಾಕರಣವನ್ನು ರಚಿಸಿದ್ದಾರಾದರೂ ಪಾಣಿನೀಯವ್ಯಾಕರಣವು ಗಟ್ಟಿಯಾಗಿ ನೆಲೆನಿಂತಿತು)

ಈ ಚರ್ಚೆಯಿಂದ ಸ್ಪಷ್ಟವಾಗಿ ತಿಳಿದುಬರುವ ಅಂಶವೆಂದರೆ, ಹಲವು ಪ್ರಭೇದಗಳನ್ನು ಹೊಂದಿದ ಪ್ರಾಕೃತವೂ, ನಾವಿವತ್ತು ಸಂಸ್ಕೃತವೆಂದು ಕರೆಯುವ ಪಾಣಿನೀಯಸಂಸ್ಕೃತವೂ ವೇದಭಾಷೆಯೆಂಬ ಒಂದೇ ಮೂಲಮಾತೃಕೆಯಿಂದ ಹುಟ್ಟಿದ್ದು.  ಪ್ರಾಕೃತಗಳು ವೇದಭಾಷೆಯ ಆಡುನುಡಿಗಳಾದರೆ, 'ಸಂಸ್ಕೃತ'ವು ವೇದಭಾಷೆಯ ಪರಿಷ್ಕೃತರೂಪ.

ಮುಂದೆ ಈ ಪ್ರಾಕೃತಗಳೇ ಹಲವು ಬೇರೆಬೇರೆ ಭಾಷೆಗಳ ಪ್ರಭಾವಕ್ಕೊಳಗಾಗಿ ಹಲವಾರು ಭಾಷೆಗಳು ಹುಟ್ಟಿಕೊಂಡುವೆಂಬುದು ಬೇರೆಯೇ ವಿಷಯ; ಸದ್ಯಕ್ಕೆ ಇಷ್ಟು ಸಾಕೆನಿಸುತ್ತದೆ.