Sunday, August 14, 2011

ವಂದೇ ಮಾತರಂ (ತಾಯೇ ಬಾಗುವೆ)

"ವಂದೇ ಮಾತರಂ" ಕೇಳಿ ಭಾವುಕನಾಗದ ಭಾರತೀಯನಾರು? ಬಂಕಿಮಚಂದ್ರರ ಕ್ರಾಂತಿಕಾರಿ ಬಂಗಾಳೀ ಕಾದಂಬರಿ ಆನಂದಮಠದಲ್ಲಿ ಬರುವ ಈ ಸುಂದರ ಬಂಗಾಳೀ-ಸಮಸಂಸ್ಕೃತ ಗೀತೆ ತನ್ನ ನವಿರಾದ ಕಾವ್ಯಗುಣದಿಂದ ಮನಮುಟ್ಟುತ್ತದೆ. ರಾಷ್ಟ್ರಗೀತೆಯ ಸ್ಥಾನ ಸಿಗದಿದ್ದರೇನಂತೆ, ಉಜ್ವಲ ರಾಷ್ಟ್ರಪ್ರೇಮವನ್ನು ಬಿಂಬಿಸುವ ಈ ಗೀತೆ ಅದರ ನಿಜ ಅರ್ಥದಲ್ಲಿ ರಾಷ್ಟ್ರಗೀತೆಯೇ ಆಗಿದೆ. ಚಾಲ್ತಿಯಲ್ಲಿರುವ ಭಾಗವನ್ನಷ್ಟೇ ಈ ಕೆಳಗೆ ಕೊಟ್ಟಿದ್ದೇನೆ:

ವಂದೇ ಮಾತರಂ

ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯಶಾಮಲಾಂ ಮಾತರಂ
ವಂದೇ ಮಾತರಂ...

ಶುಭ್ರಜ್ಯೋತ್ಸ್ನಾಪುಲಕಿತ ಯಾಮಿನೀಂ
ಫುಲ್ಲಕುಸುಮಿತಧ್ರುಮದಳ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ

ವಂದೇ ಮಾತರಂ...
====================


ಇದರ ಕನ್ನಡ ಅವತರಣಿಕೆ ಇಲ್ಲಿದೆ. ಮೂಲದ ಸೊಬಗನ್ನು, ಅಷ್ಟೇ ತುಸುಮಾತುಗಳಲ್ಲಿ ಕನ್ನಡದಲ್ಲಿ ಹಿಡಿದಿಡುವುದು ಕಷ್ಟವೇ ಸರಿ. ಆದರೂ ಮೂಲದ ಭಾವವನ್ನಾದರೂ ಹಿಡಿದಿಟ್ಟಿದ್ದೇನೆನಿಸುತ್ತದೆ. ಭಾವಾನುವಾದದ ಅನುಕೂಲಕ್ಕಾಗಿ, ಮೂಲದ ದ್ವಿತೀಯಾ ವಿಭಕ್ತಿಯನ್ನು ("ಅನ್ನು") ಕನ್ನಡದಲ್ಲಿ ಸಂಬೋಧನೆಯಾಗಿ ಬದಲಿಸಿಕೊಂಡಿದ್ದೇನೆ. ಗೆಳೆಯ ಭರತಕುಮಾರರು ಗೂಗಲ್ ಬಜ಼್ ನಲ್ಲಿ "ನಲ್ನೀರು ನಲ್ವಣ್ಣು ತಾಯಿಯೇ ಬಾಗುವೇ ತಾಯಿಯೇ" ಎಂದು ಹೇಳಿ ಸುಮ್ಮನಾಗಿದ್ದರು. ಇಲ್ಲಿನ ಅನುವಾದಕ್ಕೆ ಈ ಒಂಟಿ ಸಾಲೇ ಸ್ಫೂರ್ತಿ. ಇದಕ್ಕಾಗಿ ಭರತಕುಮಾರರಿಗೆ ಧನ್ಯವಾದ.

ತಾಯೇ ಬಾಗುವೆ

ಸವಿನೀರ್, ತನಿವಣ್,
ತಂಬೆಲರೀವಳೇ
ಸಿರಿಹಸಿರವಳೇ, ಬಾಗುವೆ
ತಾಯೇ ಬಾಗುವೆ...

ಮುಂಜಾವದ ಬಿಳಿ ಸೋನೆಯ ಚುಮಚುಮವೇ
ಅರಳಿ ನಗುವ ಹೂ ಮರಗಳ ಗಮಗಮವೇ
ಮೆಲುನಗೆಯೇ, ನಲ್ನುಡಿಗಾತಿಯೇ
ಸೊಗವೀವಳೆ ವರವೀವಳೇ

ತಾಯೇ ಬಾಗುವೆ...

ಇದರ ಧ್ವನಿಮುದ್ರಿಕೆಯನ್ನು ಸ್ವಾತಂತ್ರ್ಯದಿನಾಚರಣೆಯ ಈ ದಿನವೇ ಪ್ರಕಟಿಸಬೇಕೆಂದಿದ್ದೆ, ಸಾಧ್ಯವಾಗಲಿಲ್ಲ. ಇಷ್ಟರಲ್ಲೇ ಪ್ರಕಟಿಸುತ್ತೇನೆ.

ನಿಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಟಿಪ್ಪಣಿ - ೧೯/೦೯/೨೦೧೮
=================
ಮೇಲಿನ ಅನುವಾದದಲ್ಲಿ ಮೂಲಕ್ಕೆ ಹತ್ತಿರವಲ್ಲದ ಒಂದು ಸಾಲನ್ನು ಗಮನಿಸಬೇಕು - "ಮುಂಜಾವದ ಬಿಳಿ ಸೋನೆಯ ಚುಮಚುಮವೇ"  ಮೂಲದಲ್ಲಿರುವುದು "ಶುಭ್ರಜ್ಯೋತ್ಸ್ನಾಪುಲಕಿತ ಯಾಮಿನೀಂ" (ತುಂಬು ಬೆಳುದಿಂಗಳಿಂದ ಪುಳಕಿತವಾದ ಇರುಳುಗಳನ್ನು ಹೊಂದಿರುವವಳೇ).  "ಬೆಳುದಿಂಗಳ ರಾತ್ರಿ"ಯು ಅನುವಾದದಲ್ಲಿ "ಮುಂಜಾವದ ಬಿಳಿ ಸೋನೆಯ ಚುಮಚುಮ" ಆಗಿದ್ದು ವಿಚಿತ್ರ, ಆದರೆ ಸ್ವಾರಸ್ಯದ ವಿಷಯ - ಯಾವುದೋ ಒಂದು ಲಹರಿಯಲ್ಲಿ ಬಂದ ಅನುವಾದವದು; ಮೂಲದ ಅರ್ಥ-ಭಾವಗಳಿಗಿಂತ ನನ್ನದೇ ಆ ಕ್ಷಣದ ಲಹರಿಯನ್ನಾಧರಿಸಿ ಹೊಮ್ಮಿದ್ದು.  ಅದಕ್ಕೆ ತಕ್ಕಂತೆ ಮೂಲದಿಂದ ಚಿಕ್ಕದೊಂದು ಬದಲಾವಣೆಯನ್ನು ಮಾಡಿಕೊಂಡೆನೆಂದು ನೆನಪು.  ದಿನಾ ಬೆಳಗಿನ ಜಾವ ರೇಡಿಯೋದಿಂದ ಬಿತ್ತರಗೊಳ್ಳುತ್ತಿದ್ದ ವಂದೇಮಾತರಂ ನನ್ನ ಬಾಲ್ಯಕಾಲದ ಬೆಳಗಿನ ಜಾವದ ಮಧುರ ನೆನಪುಗಳಲ್ಲೊಂದು.  ಇದನ್ನು ಅನುವಾದಿಸುವಾಗ ಆ ನೆನಪಿನ ಲಹರಿಯೇ ನನ್ನ ಮನದಲ್ಲಿದ್ದುದು.  ಯಾಮಿನಿಯು ಇರುಳ್ವೆಣ್ಣಾಗುವುದಕ್ಕಿಂತ ಸುಂದರ ಮುಂಬೆಳಗಿನ ಯಾಮವಾಗುವುದು, ಜ್ಯೋತ್ಸ್ನೆಯ ಜಾಗವನ್ನು ಬೆಳಗಿನ ಜಾವದ ಬೆಳ್ಳನೆಯ ಹಿಮದ ಜವನಿಕೆಯು ತುಂಬುವುದೂ ಹೆಚ್ಚು ಸೊಗಸಾಗಿ ಕಂಡಿತ್ತು.  "ಪುಲಕಿತ" ಶಬ್ದವು ಅದಕ್ಕಿಂತ ಇಲ್ಲೇ ಹೆಚ್ಚು ಸಾರ್ಥಕವಾಗುವುದೆಂದೂ, ಈ ಪ್ರತಿಮೆಯು ಮೂಲಪ್ರತಿಮೆಗಿಂತ ಕವಿಯ ಭಾವವನ್ನು ಹೆಚ್ಚು ಪರಿಣಾಮಕಾರಿಯಾಗಿ ಧ್ವನಿಸಬಹುದೆಂದೂ ಎನಿಸಿ ಮೇಲ್ಕಂಡ ಮಾರ್ಪಾಟು ಮಾಡಿಕೊಂಡೆ.  ಆಮೇಲೆ ಅದರ ಬಗ್ಗೆ ಹೆಚ್ಚು ಚಿಂತಿಸಹೋಗಿರಲಿಲ್ಲ.  ಆದರೆ ಮೊನ್ನೆ ಅದರ ಇಂಗ್ಲಿಷ್ ಅನುವಾದವನ್ನು ಮಾಡಿದಾಗ (ಅನುವಾದವು ಈ ಬರಹದ ಕೊನೆಯಲ್ಲಿದೆ), ಅದೂ ಈ ಕನ್ನಡಾನುವಾದದ ಜಾಡನ್ನೇ ಹಿಡಿದುದನ್ನು ಗಮನಿಸಿ ನನ್ನ ಗಮನ ಸೆಳೆದವರು ವಿದ್ವನ್ಮಿತ್ರರಾದ ಶ್ರೀ ಶ್ರೀಕಾಂತಮೂರ್ತಿ.   ಅಂತೆಯೇ ಇಂಗ್ಲಿಷ್ ಅನುವಾದವನ್ನು ತಿದ್ದಿದೆ, ಆದರೆ ಕನ್ನಡದ ಅನುವಾದ ಆಗ ಅದು ಬಂದ ಹಾಗೆಯೇ ನನಗೆ ಹೆಚ್ಚು ಪ್ರಿಯವೆನಿಸಿದ್ದರಿಂದ ಅದನ್ನು ಹಾಗೆಯೇ ಉಳಿಸಿಕೊಂಡಿದ್ದೇನೆ.  ಆದರೆ ಮೂಲಕ್ಕನುಗುಣವಾಗಿ ತಿದ್ದಿದ ಅನುವಾದ ಇಲ್ಲಿದೆ (ಎರಡನೆಯ ಚರಣದ ಮೊದಲ ಸಾಲನ್ನು ಗಮನಿಸಿ):

ತಾಯೇ ಬಾಗುವೆ

ಸವಿನೀರ್, ತನಿವಣ್,
ತಂಬೆಲರೀವಳೇ
ಸಿರಿಹಸಿರವಳೇ, ಬಾಗುವೆ
ತಾಯೇ ಬಾಗುವೆ...

ಬೆಳುದಿಂಗಳ ಹಾಲ್ಜೊನ್ನದ ಚುಮಚುಮವೇ
ಅರಳಿ ನಗುವ ಹೂ ಮರಗಳ ಗಮಗಮವೇ
ಮೆಲುನಗೆಯೇ, ನಲ್ನುಡಿಗಾತಿಯೇ
ಸೊಗವೀವಳೆ ವರವೀವಳೇ

ತಾಯೇ ಬಾಗುವೆ...