ಮಕರ
ಸಂಕ್ರಮಣದ ಮರುದಿನ
ಕರಿ ಹರಿದಿತ್ತು
ಮುಂಜಾನೆ
ಬ್ರಾಹ್ಮಿ ಕಳೆದೆರಡು ತಾಸು;
ಆರು
ಹೊಡೆಯಲಿನ್ನೈದು ನಿಮಿಷಗಳನಳೆದಿತ್ತು ಗಡಿ
ಯಾರ;
ಗುಣುಗುಣಿಸಿ ಕರೆದಿತ್ತುಫೋನು.
ಅಷ್ಟು ಹೊತ್ತಲಿ ನಮಗೆ ಫೋನು ಬರುವುದೆ ಇಲ್ಲ,
ಕೆಲಸದ ಕರೆಯನು ಬಿಟ್ಟು.
ಕೆಲಸದ್ದಂತೂ ಇರಲಿಕ್ಕಿಲ್ಲ,
ಅದಕೆ ಮೊಬೈಲಿದೆಯಲ್ಲ.
ಹಬ್ಬದ ಸಡಗರ ಖಂಡಿತ ಅಲ್ಲ,
ನೆನ್ನೆಯೆ ಮುಗಿದಿತ್ತೆಲ್ಲ!
ಮತ್ತೇನೀ ಕರೆ
ಬೆಳಗಿನ-
ಮಂಗಳ ವೇಳೆಯಲಿ?
ಕೊನೆಪಟ್ಟಿಯಲ್ಲಿಹರನೊಮ್ಮೆ ಮನ ನೆನೆದಿತ್ತು,
ಛೆ ಛೆ! ಮಂಗಳಮಸ್ತು!
ನಡುಗುಗೈಯನು ಪಿಡಿದು ನುಡಿದಿತ್ತು ಗ್ರಾಹಿ,
ದೂರದಿಂ ತಂದ ಸುದ್ದಿ;
ಪದ್ದಕ್ಕ ಸತ್ತರಂತೆ.
ಸುದ್ದಿ ಬರ
ಸಿಡಿಲೇನು ಆಗಿರಲಿಲ್ಲ;
ನೂರರ ವೃದ್ಧೆ ಪದ್ದಕ್ಕ
ಇದ್ದದ್ದೆ ಗೊತ್ತಿರಲಿಲ್ಲ.
ತುಂಬು ಜೀವ,ಇದ್ದಾಗೊಮ್ಮೆ ನೋಡಿ ಬರಬೇಕಿತ್ತು;
ಸಂಬಂಧ,
ಬದುಕಿಗೆ ದೂರ,
ಸಾವಿಗೆ ಹತ್ತಿರ;
ದಶರಾತ್ರ
ಜ್ಞಾತಿ
ಹತ್ತು ದಿನ
ಸೂತಕವಿರಬೇಕು.
ಅಣ್ಣ ನಡುಗುತ್ತಿದ್ದರು.
ಕೊರೆವ ಚಳಿ,
ಕಾಯಿಸಲು
ಗ್ಯಾಸಿಲ್ಲ, ಲೈಟಿಲ್ಲ, ನೀರಿನ್ನೂ ಬಂದಿಲ್ಲ;
ಸುದ್ದಿ ಕೇಳಿದ ಸ್ನಾನವಾಗಬೇಕು.
ಸ್ನಾನವಾಗಲೆ ಬೇಕು
ಹೊರಗೆ ಹೊರಡುವ ಮುನ್ನ,
ಎಂಟಕ್ಕೆ ಆಫೀಸು.
ಆರು ಹೊಡೆದಿತ್ತು ಗಡಿಯಾರ
ಮಂಗಳವಾರ
ರೇಡಿಯೋ ಮೊಳಗಿತ್ತು ನಾದಸ್ವರ.
ಹೊರಗೆ ಬೀದಿಯ ಮೇಲೆ ಹೂವು ಮಾರುತ್ತಿತ್ತು;
ಹಾಲೂ ಬಂತು, ಪೇಪರೂ ಬಂತು.
ಏಳಕ್ಕೆ ಎದ್ದ ಮಗು ಆಟವಾಡುತ್ತಿತ್ತು,
ಸಂದ ನೂರರ ಹರಕೆ ತುಂಬಿದಂತೆ.
- ೧೭/೦೧/೨೦೦೭
ನನ್ನ ಇತರ ಬ್ಲಾಗುಗಳು
ಶೀರ್ಷಿಕೆಗಳು
- ೦೧. ಒಳಹೋಗುವ ಮುನ್ನ ಒಂದು ನಿಮಿಷ... (1)
- ೦೨. ಕವನಗಳು (32)
- ೦೩. ಅನುವಾದಿತ (12)
- ೦೪. ಹನಿ-ಮಿನಿ; ಚೂರು-ಚುಟುಕ (5)
- ೦೫. ಕೆಲವು ವಚನಗಳು (4)
- ೦೬. ಪ್ರಚಲಿತ (14)
- ೦೭. ಲಹರಿ (15)
- ೦೮. ಭಾಷೆ (16)
- ೦೯. ಪ್ರವಾಸ (2)
- ೧೦. ಚುಚ್ಚಿದ್ದು - ಕಚ್ಚಿದ್ದು (9)
- ೧೧. ವಿಚಾರ (4)
- ೧೨. ನಾಟಕ/ಮಾತು-ಕತೆ/ಪ್ರಹಸನ... (1)
- ೧೩. ವ್ಯಕ್ತಿಗಳು (6)
- ೧೪. ಅರ್ಥಚಿಂತನೆ (2)
- ೧೫. ಪುಸ್ತಕ (2)
- ೧೬. ಕಾವ್ಯದ ಕುಣಿತ (ಪ್ರಾಸ ಛಂದಸ್ಸು ಇತ್ಯಾದಿ) (3)
- ೧೭ ಪಾಕ (2)
- ೧೮ ಸಂಗೀತರಚನೆಗಳು (3)
- ೧೯. ಭಾರತೀಯಕಾವ್ಯಮೀಮಾಂಸೆ (1)
- ೨೦. ಹಬ್ಬ-ಹರಿದಿನ (1)
- ೯೮. ಇತ್ಯಾದಿ... (6)
- ೯೯. ಇತರ ಬ್ಲಾಗ್ ಬರಹ ಸೇರ್ಪಡೆಗಳು (6)
Sunday, July 29, 2007
Subscribe to:
Post Comments (Atom)
2 comments:
ಮತ್ತೊಂದು ಸುಂದರ ಕವನ ಸಾರ್..
ಪದ್ದಕ್ಕ ತುಂಬು ಜೀವ..ಪದ್ದಕ್ಕ ಬದುಕಿ ಬಂದ ಬಾಳ್ವೆಯನ್ನು ಎರಡೇ ಪದಗಳಲ್ಲಿ ಹಿಡಿದಿದ್ದಿರಿ.
"ಬೆಳಗಿನ-
ಮಂಗಳ ವೇಳೆಯಲಿ?.."
ಅಮಂಗಳವಾದದ್ದು ಏನೋ ಇದೆ ಎಂಬುದರ ಸೂಚಕ ಸೊಗಸಾಗಿ ಮೂಡಿ ಬಂದಿದೆ.
ತುಂಬಾ ಮೆಚ್ಚಿದ ಸಾಲುಗಳು..
"ಸಂಬಂಧ,
ಬದುಕಿಗೆ ದೂರ,
ಸಾವಿಗೆ ಹತ್ತಿರ "
ಪದ್ದಕ್ಕ ಕವಿಗೆ ಸಂಬಂಧ,ಆದರೆ ಪದ್ದಕ್ಕನ ಸಂಬಂಧವಿದ್ದದ್ದು.. ಈ ಜಗದೊಡನೆ .."ಬದುಕಿಗೆ ದೂರವಾಗಿ..,ಸಾವಿಗೆ ಹತ್ತಿರವಾಗಿ.. "
"ಸುದ್ದಿ ಕೇಳಿದ ಸ್ನಾನವಾಗಬೇಕು.
ಸ್ನಾನವಾಗಲೆ ಬೇಕು "
ಒಂದು ಜೀವದ ಕೊನೆ,ಮತ್ತೊಂದು ಜೀವದ ಆದಿ...ಪ್ರಕ್ರತಿಯ ಸಹಜ ನಿಯಮ.. ಇದರಿಂದ ಯಾವುದಕ್ಕು ಮೈಲಿಗೆ ಇಲ್ಲ.. ಆದರೂ ...ಸ್ನಾನವಾಗಲೆ ಬೇಕು.. !!!
ನನ್ನ ಅರಿವಿಗೆ ಬಂದದ್ದು ನಾನು ತಿಳಿಸಿದ್ದೇನೆ..ನಿಮ್ಮ ಮೂಲ ಆಶಯದಿಂದ ಹೊರತಾದಲ್ಲಿ ನನಗೆ ತಿಳಿಸಿ..
ಹಾಗೆಯೇ ಒಂದೆರಡು ಕಡೆ ನನಗೆ ಸ್ವಲ್ಪ ಸಂದೇಹವಿದೆ ..ಬಿಡಿಸಿ ಹೇಳಿ..
"ಮುಂಜಾನೆ
ಬ್ರಾಹ್ಮಿ ಕಳೆದೆರಡು ತಾಸು;"
"ದಶರಾತ್ರ
ಜ್ಞಾತಿ"
"ಎಂಟಕ್ಕೆ ಆಫೀಸು.
ಆರು ಹೊಡೆದಿತ್ತು ಗಡಿಯಾರ"..
ಜಯಂತ್,
Thanks for your kind comments. ಕವನದಲ್ಲಿ ನೀವು ಗುರ್ತಿಸಿರುವ ಸಾಲುಗಳೆಲ್ಲ ಯಥಾಸಹಜವಾಗಿ ಮೂಡಿಬಂದವು - without any effort to mark the significance. ಆದರೆ ಘಟನಾವಳಿಗಳೇ ತಮ್ಮಷ್ಟಕ್ಕೆ significant ಆಗಿದ್ದು ಗಮನಾರ್ಹ.
"ಮುಂಜಾನೆ
ಬ್ರಾಹ್ಮಿ ಕಳೆದೆರಡು ತಾಸು;"
it originally intended to mark the early morning hours, ಅಷ್ಟೇ. ಆದರೆ ಮಂಗಳಕರವದ "ಬ್ರಾಹ್ಮೀ" ಮುಹೂರ್ತ "ಮುಗಿದು" ಎರಡು ತಾಸಾಗಿತ್ತು, and what follows is possibly something inauspicious.
"ದಶರಾತ್ರ ಜ್ಞಾತಿ" is a terminology used to denote close blood relation. ಜ್ಞಾತಿ ಅಂದರೆ ದಾಯಾದಿ. ಸತ್ತರೆ ಹತ್ತು ದಿನ ಮೈಲಿಗೆ observe ಮಾಡಬೇಕಾದಷ್ಟು ಹತ್ತಿರದ ಸಂಬಂಧ (ಸಂಬಂಧ ಬದುಕಿಗೆ ದೂರ, ಸಾವಿಗೆ ಹತ್ತಿರ - ನೆನೆಯಬಹುದು). ಪದದ ಬಳಕೆಯೇ ಅದರ ಭಾವ ಹೀನ, "matter of fact" ಸ್ಥಿತಿಯನ್ನು ಸೂಚಿಸುತ್ತದೆ. ಸತ್ತವರ ಬಗ್ಗೆ ದುಃಖವಾಗಿದೆಯೋ ಇಲ್ಲವೋ, ಸೂತಕವಂತೂ ಇದೆ !
"ಎಂಟಕ್ಕೆ ಆಫೀಸು.
ಆರು ಹೊಡೆದಿತ್ತು ಗಡಿಯಾರ"..
ಕಾಲದ ಎಣಿಕೆಯನ್ನು ಸೂಚಿಸುತ್ತದೆ. ಯಾಂತ್ರಿಕ ಬದುಕಿನಲ್ಲಿ ಹೇಗೆ ಸಾವಿನಂಥ ಸಾವೂ ಕೂಡ ಒಂದು ಕ್ವಚಿತ್ ಘಟನೆಯಾಗಿ ಸರಿಯುತ್ತದೆ ಅನ್ನುವುದು.
Post a Comment