ಪ್ರಣಯಕುಪಿತಾಂ ದೃಷ್ಟ್ವಾ ದೇವೀಂ ಸಸಂಭ್ರಮವಿಸ್ಮಿತ
ಸ್ತ್ರಿಭುವನಗುರುರ್ಭೀತ್ಯಾ ಸದ್ಯಃಪ್ರಣಾಮಪರೋಽಭವತ್ |
ನಮಿತಶಿರಸೋ ಗಂಗಾಲೋಕೇ ತಯಾ ಚರಣಾಹತಾ
ವವತು ಭವತಸ್ತ್ರ್ಯಕ್ಷಸ್ಯೈತದ್ವಿಲಕ್ಷಮವಸ್ಥಿತಮ್ ||
ಯಾವುದೋ ಪ್ರಣಯಕಲಹದಲ್ಲಿ ದೇವಿ ಪಾರ್ವತಿ ಕುಪಿತಳಾಗಿದ್ದಾಳೆ, ಅದನ್ನು ಸಂಭ್ರಮವಿಸ್ಮಯಗಳಿಂದ ವೀಕ್ಷಿಸುವ ಶಂಕರನು ಭಯವನ್ನಭಿನಯಿಸುತ್ತಾ ಆಕೆಯನ್ನು ರಮಿಸಲು ಅವಳ ಕಾಲಿಗೇ ಬಿದ್ದಿದ್ದಾನೆ (Acting over smart ಎಂದರೆ ಇದೇ ಇರಬೇಕು). ಹೋಗಲಿ, ಇದರಿಂದ ಸತಿಯ ಕೋಪ ಇಳಿಯಬೇಕಲ್ಲವೇ? ಶಿವನ ಗ್ರಹಚಾರ, ಮೊದಲೇ ಕೋಪಗೊಂಡಿರುವ ಪಾರ್ವತಿಗೆ ಆತನ ಬಾಗಿದ ತಲೆಯ ಮೇಲೆ ಮನೆಮಾಡಿದ್ದ ಗಂಗೆ ಕಣ್ಣಿಗೆ ಬೀಳಬೇಕೇ? ಸರಿ, ಕೋಪ ಇನ್ನಷ್ಟು ಕೆರಳಿ, ತಲೆವಾಗಿದ ಶಿವನನ್ನೇ ಒದ್ದುಬಿಟ್ಟಿದ್ದಾಳೆ (ಬೇಕಿತ್ತೇ ಇದು?) ಆ ಮುಕ್ಕಣ್ಣನಿಗೆ ಒದಗಿದ ಇಂತಹ ವಿಲಕ್ಷಣಸ್ಥಿತಿ ನಮ್ಮನ್ನು ಕಾಪಾಡಲಿ :) ಇದು ಪದ್ಯದ ಭಾವಾರ್ಥ.
ಈ ಪದ್ಯದ ಮೂಲ ನನಗೆ ತಿಳಿಯದು. ಹರಿಣೀ ಛಂದಸ್ಸಿನಲ್ಲಿರುವ ಈ ಸೊಗಸಾದ ಪದ್ಯವನ್ನು ಅದೇ
ಛಂದಸ್ಸಿನಲ್ಲಿ ಅನುವಾದಿಸಲು ಯತ್ನಿಸಿದ್ದೇನೆ. ಈ ಛಂದಸ್ಸಿನಲ್ಲಿ ಸರಿಯಾಗಿ ಮಧ್ಯದಲ್ಲಿ
ಎಡೆಬಿಡದೇ ಬರುವ ಗುರ್ವಕ್ಷರಗಳು (ದೀರ್ಘಾಕ್ಷರಗಳು) ಕನ್ನಡದ ಜಾಯಮಾನಕ್ಕೆ ಸ್ವಲ್ಪ
ತೊಡಕು, ಆದರೂ ಪ್ರಯತ್ನವಷ್ಟೇ:
ಪ್ರಣಯದೆಡೆಯೊಳ್ ಕೋಪಂಗೊಂಡಾ ಶಿವಾನಿಯನೋಡುತಂ
ವಿನಯಭಯದೊಳ್ ಕಾಲೊಳ್ ಬೀಳಲ್ ಚರಾಚರನಾಯಕಂ
ಕನಲುತೊದೆವಳ್ ಮತ್ತಂ ಗಂಗಾವಿಳಾಸವ ಕಾಣಲೀ
ತ್ರಿಣಯನನಿಗಾದೀ ವೈಚಿತ್ರ್ಯಂ ಸದಾ ಪೊರೆಗೆ ಸರ್ವರಂ
ಇದೇನನ್ಯಾಯ, ಜಗಜ್ಜನನಿ, ಮಹಾದೇವಿ ಹೀಗೆ ಮನುಷ್ಯಮಾತ್ರರಂತೆ ಕೋಪಕ್ಕೆ ಪಕ್ಕಾಗುವುದುಂಟೇ, ಅದರಲ್ಲೂ ಕಾಲಿಗೆ ಬಿದ್ದ ಮಹಾದೇವ ಶಂಕರನಿಗೆ ಒದೆಯುವುದೆಂದರೇನು? ಎಂತಹ ಅಪಚಾರ? - ಈ ತರ್ಕಕ್ಕೆಲ್ಲ ಇಲ್ಲಿ ತಾವಿಲ್ಲ. ಮಹಾದೇವದೇವಿರನ್ನೂ ನಮ್ಮ ಮಟ್ಟಕ್ಕಿಳಿಸಿಕೊಂಡು ನಮ್ಮ ಲೀಲೆಗಳನ್ನು ಅವರಿಂದಾಡಿಸಿ ನೋಡುವುದರಲ್ಲೇ ಮನುಷ್ಯನ ಆನಂದವಿರುವುದು ಅಲ್ಲವೇ? ಇದೊಂದು ಮುದ್ದಾದ ಪ್ರಣಯಕಲಹ ಎನ್ನುವುದಷ್ಟು ನಮಗೆ ಮುಖ್ಯ.
"ಪಾರ್ವತೀಪರಮೇಶ್ವರರ ಪ್ರಣಯಕಲಹ" - ಎಲ್ಲೋರಾ ಗುಹಾದೇವಾಲಯದ ಶಿಲ್ಪ |
ಆದರೂ ಏನೇ ಹೇಳಿ, ಈ ಪದ್ಯವನ್ನೋದಿದಾಗ ಅಂತಃಕರಣವುಕ್ಕಿ ಬರುವುದು ಶಿವನ ಮೇಲಲ್ಲ, ಗಂಗೆಯ ಮೇಲೆ. ಈ ಗಂಗೆ ಸಹನಾಮೂರ್ತಿ, ಪ್ರೇಮಮೂರ್ತಿ ಬಿಡಿ. ನಿಜಕ್ಕೂ ಮಹಾಸತಿಯೆಂದರೆ ಆಕೆಯೇ. ನೋಡಿ, ಬಗ್ಗಿದಾಗೊಮ್ಮೆ ತಲೆಯ ಮೇಲೆ ಗಂಗೆಯನ್ನು ಕಂಡಾಕ್ಷಣಕ್ಕೇ ಪಾರ್ವತಿಗೆ ಸವತಿಮಾತ್ಸರ್ಯವುಕ್ಕಿ, ಕಾಲಿಗೆ ಬಿದ್ದದ್ದು ಗಂಡನೆಂಬುದನ್ನೂ ನೋಡದೇ ಒದ್ದೇಬಿಟ್ಟಳು. ಆದರೆ ಇದೇ ಪಾರ್ವತಿ ದಿನದ ಇಪ್ಪತ್ನಾಲ್ಕು ಗಂಟೆಯೂ ಶಿವನ ಅರ್ಧದೇಹವನ್ನೇ ಆಕ್ರಮಿಸಿಕೊಂಡಿರುವಳಲ್ಲಾ, ಅದನ್ನು ನೋಡಿಯೂ ಆ ಗಂಗೆ ಸುಮ್ಮನಿರುತ್ತಾಳಲ್ಲಾ, ಒಮ್ಮೆಯಾದರೂ ಪತಿಯ ಪಕ್ಕಕ್ಕೆ ಬರುವ ಭಾಗ್ಯವೇ ಇಲ್ಲದೇ, ಯಾವುದೇ ಫಾಯದೆಯಿಲ್ಲದೇ ಇಪ್ಪತ್ನಾಲ್ಕು ಗಂಟೆಯೂ ಶಿವಶಿವೆಯರ ಆಶ್ಲಿಷ್ಟಚೇಷ್ಟೆಗಳಿಗೆಲ್ಲಾ ಮೂಕಸಾಕ್ಷಿಯಾಗಿ ಸುಮ್ಮನೇ ಶಿವನ ತಲೆಯ ಮೇಲೆ ಕೂತಿರುವುದು ಯಾವ ಸುಖಕ್ಕಾಗಿ? ಅವನು ಕಾಲಿಗೆ ಬಿದ್ದ, ಗೌರಿ ಒದ್ದಳು. ಆದರೆ ತನ್ನನ್ನು ತಲೆಯಮೇಲಿರಿಸಿಕೊಂಡೇ ಇಷ್ಟೆಲ್ಲಾ ಆಟವಾಡುವ ಶಿವನನ್ನು ಗಂಗೆ ಮನಸ್ಸು ಮಾಡಿದ್ದರೆ ಮುಳುಗಿಸಿಯೇಬಿಡಬಹುದಿತ್ತಲ್ಲವೇ? ಹಾಗೆ ಮಾಡದೇ ಸುಮ್ಮನೇ ಜಟೆಯ ಒಂದು ಮೂಲೆಯಲ್ಲಿ ಈ ಗಂಗಾಮಾತೆ ಕುಳಿತು ತಪಸ್ಸು ಮಾಡುತ್ತಿರುವುದು ಏತಕ್ಕಾಗಿ? ಇದೀಗ ನಿಜವಾದ platonic love ಅಂದರೆ. ನನ್ನ ಕೇಳಿದರೆ ಅಂತಹ ತುಂಬು ಪ್ರೇಮವೇ ಗಂಗೆಗೆ ಆ ಪಾವನತ್ವವನ್ನು ಕೊಟ್ಟಿರುವುದು. ಆ ಪರಮಪಾವನೆಯು ಗೌರಿಯ ಕಾಲ್ಸೋಕಿ ಗೌರಿಯ ಪಾದವೇ ಪಾವನವಾಯಿತೆನ್ನಲು ಅಡ್ಡಿಯೇನು? ಜಗತ್ತಿಗೇ ಸೌಭಾಗ್ಯದಾತೆಯಾದ ಗೌರಿಯು ಗಂಗೆಯ ಅಳಲನ್ನು ಕಾಣದೆ ಹೋದಳೇ? ಆ ತ್ಯಾಗಮಯಿಯ ಪ್ರೇಮವೇ ಈ ಶಿವಶಿವೆಯರ ಪ್ರಣಯೋತ್ಸವವನ್ನೂ ಪೊರೆಯುತ್ತಿದೆಯೆಂದರೆ ಅತಿಶಯವೇನು? ಆದ್ದರಿಂದ ನಮ್ಮನ್ನು ಪೊರೆಯಬೇಕಾದ್ದು ಶಿವನ ಈ ವಿಚಿತ್ರಸ್ಥಿತಿಯಲ್ಲ, ಗಂಗೆಯ ಅಳವರಿಯದ ಪ್ರೇಮ.
ಅದೇ ಲಹರಿಯನ್ನು ಕಟ್ಟಿಕೊಡುವ ಮತ್ತೆರಡು ಪದ್ಯಗಳು, ವಾರ್ಧಕಷಟ್ಪದಿಯಲ್ಲಿ:
ಕುದಿವ ಕೋಪದ ಶಿವೆಯನೊಲಿಸೆ ಮಣಿವನ ಶಿರದಿ
ನದಿಸತಿಯ ಕಂಡು ಕಡುಮುಳಿದು ಶಂಕರಶಿರವ
ನೊದೆಯೆ ಹಾ ಪರಮಪಾವನೆಯ ಸೋಂಕಿದ ಚರಣ ಪರಮಪಾವನವಾದುದೈ
ಒದೆವಳಾ ಗೌರಿ ದರ್ಶನಮಾತ್ರದೊಳ್ ಗಂಗೆ
ಯೊದೆವಳೇಂ ಪತಿದೇಹದರ್ಧವಾಂತಿಹ ಸತಿಯ
ಮದನಚೇಷ್ಟೆಗಳನನುಗಾಲ ಕಾಣುತ ಸುದತಿ ಪರಮಶಾಂತಿಯನಳಿದಳೇಂ
ಕನಲಿದಳೆ ಕೊರಗಿದಳೆ ಮರುಗಿದಳೆ ಸೊರಗಿದಳೆ
ಮುನಿದು ಶಿವಶಿರವ ಧೀಂಕಿಡುತ ಪುಡಿಗಟ್ಟಿದಳೆ
ಪ್ರಣಯವಂಚಿತೆಗಂಗೆಯಳಲ ಕಾಣಳೆ ಗೌರಿ ಜಗದ ಮಂಗಳದಾತೆಯು
ಮುನಿಯ ತೆರದೊಳದೇಕೆ ತಪಗೈವಳೀ ತಪ
ಸ್ವಿನಿ ಜಹ್ನುಸುತೆಯಿವಳ ಕಿನಿಸಿರದ ಪ್ರೇಮಸೌ
ಜನಿಯಲ್ತೆ ಶಿವೆಯ ಪ್ರಣಯೋತ್ಸವವ ಪೊರೆವುದಾ ಪ್ರೇಮಮಯಿ ಪೊರೆಯಲೆಮ್ಮಂ