Monday, June 29, 2020

ಧರ್ಮಸಂಸ್ಥಾಪನಾರ್ಥಾಯ
ಶಿಕ್ಷಕಮಿತ್ರರಾದ ಶ್ರೀ ಅಣ್ಣಪ್ಪನವರು ಒಂದು ಜಿಜ್ಞಾಸೆಯನ್ನೆತ್ತಿದರು - "ಮಹಾಭಾರತದಲ್ಲಿ ಭೀಷ್ಮನು ದುರ್ಯೋಧನಾದಿ ಕೌರವರ ಕಡೆಯಲ್ಲೇ ಉಳಿದದ್ದೇಕೆ? ಮತ್ತವನು ಅವರ ಆಜ್ಞಾನುವರ್ತಿಯಾಗಲು ಕಾರಣವೇನು? ಹಸ್ತಿನಾಪುರ ಸಿಂಹಾಸನದಲ್ಲಿ ಧರ್ಮವನ್ನೇ ಪ್ರತಿಷ್ಠಾಪಿಸುವ ಪ್ರತಿಜ್ಞೆ ಹೊತ್ತವನು ಹೀಗೆ ನಡೆದುಕೊಂಡದ್ದು ಯಾವ ಕಾರಣಕ್ಕಾಗಿ?"  ಕುರುವಂಶದ ರಾಜ್ಯಾಧಿಕಾರವೇ ಇವನ ಹಕ್ಕಾಗಿದ್ದು, ಕೌರವರ ಅಧಿಕಾರವೇ ಇವನ ತ್ಯಾಗದ ಫಲವಾದ್ದರಿಂದ , 'ಅನ್ನದ ಋಣ'ವೆಂಬುದು ಸಮರ್ಥಿಸಲಾಗದ ಅಂಶ ಎಂಬುದು ಅವರ ಅನಿಸಿಕೆ.

ಮೊದಲನೆಯದಾಗಿ, ಭೀಷ್ಮನು ಕುರುಸಿಂಹಾಸನದಲ್ಲಿ ಧರ್ಮವನ್ನಾಗಲೀ ಇನ್ನೇನನ್ನಾಗಲೀ ಪ್ರತಿಷ್ಠಾಪಿಸುವ ಪ್ರತಿಜ್ಞೆ ಹೊತ್ತಿರಲಿಲ್ಲ.  ರಾಜ್ಯವಾಳುವುದಿಲ್ಲ, ಬ್ರಹ್ಮಚರ್ಯವನ್ನಾಚರಿಸುತ್ತೇನೆ ಎಂಬುದಷ್ಟೇ ಅವನ ಪ್ರತಿಜ್ಞೆ.  ಕುರುಸಿಂಹಾಸನಕ್ಕೆ ಅವನ ನಿಷ್ಠೆ - ಅದನ್ನು ಕಾಯ್ದುಕೊಳ್ಳಲು ಅವನು ಬದ್ಧನಷ್ಟೇ.

ಅನ್ನದ ಋಣದ ಮಾತು ಸರಿಯೇ, ಆದರೆ ಅನ್ನದ ಋಣ ಎಂದರೆ ಕೌರವರು ಭೀಷ್ಮನಿಗೆ ಅನ್ನ ಹಾಕಿ ಸಾಕಿದರೆಂದಲ್ಲ, ಇದನ್ನು ವಿಶಾಲಾರ್ಥದಲ್ಲಿ ನೋಡಬೇಕಾಗುತ್ತದೆ. ಹಾಗೆ ನೋಡದಿದ್ದಾಗಲೇ, "ದುರ್ಯೋಧನನ ಋಣ ಭೀಷ್ಮನಿಗೆಂಥದ್ದು? ರಾಜ್ಯವೇ ಭೀಷ್ಮನ ಭಿಕ್ಷೆಯಾಗಿರುವಾಗ" ಮೊದಲಾದ ವಾದಗಳು ಬರುವುದು. ಆದರೆ ಇಲ್ಲಿನ ಅನ್ನದ ಋಣ ನಿರ್ದಿಷ್ಟ ವ್ಯಕ್ತಿಗಳ ನಡುವಿನದ್ದಲ್ಲ. ರಾಜ್ಯ/ಸಿಂಹಾಸನವು ಒಬ್ಬ ಪ್ರಜೆಯಾಗಿ ಭೀಷ್ಮನನ್ನು ಪೋಷಿಸಿದೆ, ಅದಕ್ಕಾತ ನಿಷ್ಠನಾಗಿದ್ದಾನೆಂಬುದಷ್ಟೇ ಅಲ್ಲಿ ಮುಖ್ಯ. ಆ ಅರ್ಥದಲ್ಲಿ ಕೌರವರೂ, ಧೃತರಾಷ್ಟ್ರನೂ ಆ ಅನ್ನಕ್ಕೆ ಋಣಿಗಳೇ, ಭೀಷ್ಮನೇ ಚಕ್ರವರ್ತಿಯಾಗಿದ್ದಿದ್ದರೂ ಆತ ಋಣಿಯೇ. ಆ ಲೆಕ್ಕದಲ್ಲಿ ಪಾಂಡವರೂ ಋಣಿಗಳೇ, ಆದರೆ ಅವರು ಪ್ರಭುತ್ವದಿಂದ ಸಿಡಿದು ಹೋದವರು, ಮತ್ತು ಅದೇ ಕಾರಣಕ್ಕೆ ರಾಜ್ಯದ ಶತ್ರುಗಳು. ಅದರಿಂದಾಗಿ ಸಿಂಹಾಸನಕ್ಕೆ ನಿಷ್ಠನಾಗಿರುವ ಭೀಷ್ಮವಿದುರಾದಿ ಧರ್ಮಾತ್ಮರು ಪಾಂಡವರ ವಿರುದ್ಧ, ಪ್ರಭುತ್ವದ ಪರ ನಿಲ್ಲಬೇಕಾಯಿತು.

ಪಾಂಡವರೂ ಧರ್ಮಾತ್ಮರು, ಭೀಷ್ಮವಿದುರಾದಿಗಳೂ ಧರ್ಮಾತ್ಮರೆಂದರೆ ಹೇಗಾದೀತು? ಇದೇ ಧರ್ಮಸೂಕ್ಷ್ಮ - ಇಡೀ ಮಹಾಭಾರತದ ಕಥಾಸಂವಿಧಾನವೇ ಇದನ್ನು ವಿಶ್ಲೇಷಿಸುವ ಉದ್ದೇಶ ಹೊಂದಿದ್ದು.

ಕೆಲವರು, ಪಾಂಡವರು ನಿಯೋಗಸಂತಾನವಾದ್ದರಿಂದ ಅವರು ರಾಜ್ಯಕ್ಕೆ ಅರ್ಹರಲ್ಲ ಎಂದು ವಾದಿಸುತ್ತಾರೆ. ಅದು ಸರಿಯಲ್ಲ - ಸ್ವತಃ ಧೃತರಾಷ್ಟ್ರಪಾಂಡುಗಳೇ ನಿಯೋಗಸಂತಾನ - ನಿಯೋಗಸಂತಾನಕ್ಕೆ ಔರಸಸಂತಾನದಷ್ಟೇ ಮಾನ್ಯತೆಯಿರುವುದರಿಂದ ಪ್ರಶ್ನೆ ಅದಲ್ಲ.

ಧೃತರಾಷ್ಟ್ರ ಹಿರಿಯನಾದ್ದರಿಂದ ಸಹಜವಾಗಿಯೇ ರಾಜ್ಯಾಧಿಕಾರವುಳ್ಳವನು. ಆದರೆ ಆತ ಕುರುಡನಾದ್ದರಿಂದ ಪಾಂಡು ರಾಜನಾದ.  ಆದ್ದರಿಂದ ಪಾಂಡುವಿನ ರಾಜ್ಯಾಧಿಕಾರ ಅವನಿಗೆ ಸಹಜವಾಗಿ ಬಂದದ್ದಲ್ಲ.  ಇನ್ನು ಕೆಲಕಾಲಾನಂತರ ಶಾಪಗ್ರಸ್ಥನಾದ ಆತ ಹಸ್ತಿನಾವತಿಯನ್ನು ಬಿಟ್ಟು ಋಷ್ಯಾಶ್ರಮಗಳಲ್ಲಿ ಕಾಲ ಕಳೆಯಬೇಕಾದಾಗ ರಾಜ್ಯಾಧಿಕಾರವು ಧೃತರಾಷ್ಟ್ರನ ಕೈಸೇರಿತು. ಪಾಂಡವರ ಜನನಾನಂತರ ಪಾಂಡು ಸತ್ತೂ ಹೋದ. ಈಗಂತೂ ಧೃತರಾಷ್ಟ್ರನೇ ರಾಜನಾದನಲ್ಲ.

ಈಗ ಅವರಿಬ್ಬರ ಮಕ್ಕಳಲ್ಲಿ ಮುಂದೆ ಯಾರು ಅರಸರಾಗಬೇಕೆಂಬುದು ಪ್ರಶ್ನೆ. ಪಾಂಡು ದೊರೆಯಾಗಿದ್ದುದ್ದರಿಂದ ಸಹಜವಾಗಿಯೇ ಅವನ ಮಗನಾದ ಧರ್ಮಜ ದೊರೆಯಾಗಬೇಕು (ಅಲ್ಲದೇ ಕೌರವಪಾಂಡವರಲ್ಲಿ ಅವನೇ ಹಿರಿಯ ಕೂಡ). ಆದರೆ ಅದೇನಿದ್ದರೂ ಪಾಂಡುವು ಬದುಕಿದ್ದರೆ ಅವನಿಂದ ಧರ್ಮಜನಿಗೆ ರಾಜ್ಯ ದೊರೆಯಬೇಕಿದ್ದ ಮಾತು. ಈಗ ಪಾಂಡು ಸತ್ತೇ ಹೋಗಿದ್ದಾನೆ, ಮತ್ತು ಮೂಲತಃ ಧೃತರಾಷ್ಟ್ರನಿಗೆ ಸೇರಬೇಕಿದ್ದ ಅಧಿಕಾರ ಅವನಿಗೇ ಮರಳಿದ್ದೂ ಆಗಿದೆ. ಅವನ ಅನರ್ಹತೆಯೇನಿದ್ದರೂ ಆತ ಕುರುಡನೆಂಬುದಷ್ಟೇ?  ಅದು ಅವನ ಸಹಜ ಉತ್ತರಾಧಿಕಾರಿಗಳಾದ ಮಕ್ಕಳ ಅನರ್ಹತೆಯಲ್ಲವಲ್ಲ, ಆದ್ದರಿಂದ ಸಹಜವಾಗಿಯೇ ಈಗ ರಾಜನಾಗಿರುವ ಧೃತರಾಷ್ಟ್ರನ ಮಗ ದುರ್ಯೋಧನನು ರಾಜನಾಗಬೇಕಾದ್ದೇ ಸರಿಯಾದ ಮಾರ್ಗ. ಹೀಗಾಗಿ ತನ್ನ ಹಿರಿಮಗನಾದ ದುರ್ಯೋಧನ ದೊರೆಯಾಗಬಾರದೇಕೆ ಎಂಬ ಪ್ರಶ್ನೆಯನ್ನು ದುರ್ಯೋಧನನು ಹುಟ್ಟಿದೊಡನೆಯೇ ಧೃತರಾಷ್ಟ್ರನು ಎತ್ತುತ್ತಾನೆ ಕೂಡ. ಆದರೆ ದುಷ್ಟನಾದ ದುರ್ಯೋಧನನು ಹುಟ್ಟಿದಾಗಲೇ ಎದ್ದ ಅಶುಭಶಕುನಗಳನ್ನು ಕಂಡು ಗುರುಹಿರಿಯರು ಆ ಮಗುವನ್ನು ತ್ಯಜಿಸಿಯೇ ಬಿಡುವಂತೆ ಸಲಹೆ ನೀಡುವುದರಿಂದ ರಾಜ್ಯಾಧಿಕಾರದ ಬಗೆಗೆ ಮಾತಾಡಿ ಪ್ರಯೋಜನವಿಲ್ಲವೆಂದರಿತು ಧೃತರಾಷ್ಟ್ರ ಸುಮ್ಮನಾಗುತ್ತಾನೆ.

ಹೀಗಾಗಿ ಸಹಜಕ್ರಮದಲ್ಲಿ ನೋಡಿದರೆ ದುರ್ಯೋಧನನಿಗೆ ರಾಜ್ಯ ಸಿಗಬೇಕು. ಆದರೆ ಧರ್ಮರಾಜ ಭೂತಪೂರ್ವ ರಾಜನ ಹಿರಿಯ ಮಗ, ಕೌರವಪಾಂಡವರಿಬ್ಬರಲ್ಲೂ ಹಿರಿಯ ಮತ್ತು ಧರ್ಮಾತ್ಮನಾದ್ದರಿಂದ ಅವನು ಸಿಂಹಾಸನಕ್ಕೆ ಯೋಗ್ಯ. ಎಂದ ಮೇಲೆ ಯಾರಿಗೆ ರಾಜ್ಯ ಸಿಕ್ಕಬೇಕು? ಇದು ಇಲ್ಲಿನ ಧರ್ಮಸೂಕ್ಷ್ಮ.

ಇಷ್ಟಕ್ಕೂ ಧರ್ಮರಾಜನು ಧರ್ಮಾತ್ಮನೆಂದು ಹೇಳಿದವರಾರು? ಕತೆಯನ್ನು ರಚಿಸಿದವರು, ಅದರಲ್ಲಿನ ಎಲ್ಲ ಧರ್ಮಾತ್ಮರು, ಅದನ್ನು ಓದಿದ ನಾವು ನೀವು. ಅಷ್ಟೇಕೆ? ಭೀಷ್ಮದ್ರೋಣವಿದುರಾದಿ ಧರ್ಮಾತ್ಮರೆಲ್ಲರೂ ಅಂತಃಕರಣದಲ್ಲಿ ಪಾಂಡವಪಕ್ಷಪಾತಿಗಳೇ. ಆದರೇನು? ಅದಷ್ಟರಿಂದಲೇ ಧರ್ಮ ಸ್ಥಾಪನೆಯಾಗುವುದೇ? ಜನಪ್ರಿಯತೆಯು ಧರ್ಮವನ್ನು ನಿರ್ಧರಿಸುವುದೇ? ಅಥವಾ ಹಾಗೆ ನಿರ್ಧರಿಸಲ್ಪಟ್ಟ ಧರ್ಮಕ್ಕಾಗಿ ವಂಶಾನುಗತವಾಗಿ ಬಂದ ರಾಜತ್ವವನ್ನು ಅದರ ವಾರಸುದಾರನಿಂದ ಕಿತ್ತುಕೊಂಡು ಅವರಿಗೆ ಕೊಡಲಾಗುತ್ತದೆಯೇ?  ಇದು ಜಿಜ್ಞಾಸೆ.  ನಿಜಕ್ಕೂ ಧರ್ಮದಲ್ಲಿ ಸತ್ತ್ವವಿರುವುದಾದರೆ ಅದು ಪರೀಕ್ಷೆಯನ್ನೆದುರಿಸಿ ಗೆಲ್ಲಬೇಕು, ನಿಲ್ಲಬೇಕು. ಕೌರವರ ಅಧರ್ಮವು ಯುದ್ಧದಲ್ಲಿ ಸೋಲಬೇಕು. ಅದುವರೆಗೂ ದುರ್ಯೋಧನನಿಗಿದ್ದ ಜನ್ಮಜಾತ ಹಕ್ಕಿನಂತೆ ಮುಂದುವರೆಯುವುದೇ ಧರ್ಮ.

ಆದರೆ ಪಾಂಡವರನ್ನು ಹಸ್ತಿನಪುರಕ್ಕೆ ಕರೆತಂದಾಗ, ದಾಯಾದಿಗಳ ನಡುವಣ ಕಲಹ ನಿಜಕ್ಕೂ ಕೈಮೀರಿ ಮನೆಯೇ ಒಡೆಯುವುದನ್ನು ಕಂಡ ಭೀಷ್ಮಾದಿಗಳು ಇದಕ್ಕೊಂದು ರಾಜೀಸೂತ್ರವನ್ನು ಅನುಸರಿಸಿ ರಾಜ್ಯವನ್ನು ಭಾಗಮಾಡುತ್ತಾರೆ. ಆದರೆ ಮೋಸದ ಜೂಜಿಗೆ ಸಿಕ್ಕಿ ಪಾಂಡವರು ಅದನ್ನು ಕಳೆದುಕೊಳ್ಳುತ್ತಾರೆ. ಸರಿ, ಮೋಸದ ಜೂಜು ಅಧರ್ಮವಾಯಿತಲ್ಲ, ಅಷ್ಟಾದರೂ ಪುನಃ ದಕ್ಕಬೇಕಾದ್ದು ಪಾಂಡವರಿಗೇ ತಾನೆ ಎಂದರೆ, ಅದು ಮೋಸವೆಂದು ಕಂಡವರಾರು? ಕತೆಗಾರರು ಹೇಳಿದ್ದು, ನಾವು ಕಂಡದ್ದು, ಭೀಷ್ಮಾದಿಗಳು ಅನುಮಾನಿಸಿದ್ದು. ಅಷ್ಟಕ್ಕೇ ಧರ್ಮದ್ಯೂತವನ್ನು ಮೋಸದ್ದೆಂದು ಘೋಷಿಸಿಬಿಡಲಾಗುವುದಿಲ್ಲವಲ್ಲ. ಆ ಕಾಲಕ್ಕೆ ಜೂಜೂ ಯುದ್ಧದಷ್ಟೇ ಧರ್ಮವತ್ತಾದದ್ದು. ಅದರಲ್ಲಿ ಗೆದ್ದ ರಾಜ್ಯ ಕೌರವರದ್ದೇ. ಅದೇ ಕಾರಣಕ್ಕೆ ಪಾಂಡವರು ಕಾಡಿಗೆ ಹೋದಾಗಲೂ ಭೀಷ್ಮಾದಿಗಳ ಹೃದಯ ಅವರೊಂದಿಗೇ ಇದ್ದರೂ ಅವರನ್ನು ಬೆಂಬಲಿಸಲಾಗದೇ ಸುಮ್ಮನಾಗುತ್ತಾರೆ. ದ್ರೌಪದಿಯ ಮಾನಭಂಗದ ಪ್ರಶ್ನೆ ಬಂದಾಗಲೂ ಇಂಥದ್ದೇ ಧರ್ಮಸೂಕ್ಷ್ಮಗಳಲ್ಲಿ ಸಿಕ್ಕು ಹೈರಾಣಾಗಿಬಿಡುತ್ತಾರೆ ಭೀಷ್ಮಾದಿಗಳು - ಸ್ವತಃ ದ್ರೌಪದಿಯೇ ಕೇಳುತ್ತಾಳೆ, ಧರ್ಮಜನು ತಾನು ಸೋತಮೇಲೆ ನನ್ನನ್ನು ಪಣಕ್ಕಿಟ್ಟನೋ, ಅದಕ್ಕೆ ಮೊದಲೇ ಪಣಕ್ಕಿಟ್ಟನೋ?  ಇಲ್ಲೆಲ್ಲೂ ದ್ರೌಪದಿಯ ಸೀರೆ ಸೆಳೆದದ್ದು ಧರ್ಮವೋ ಅಧರ್ಮವೋ ಎಂಬ ಪ್ರಶ್ನೆ ಬರುವುದಿಲ್ಲ, ಆಕೆ ತಾಂತ್ರಿಕವಾಗಿ ದಾಸಿಯೋ ಅಲ್ಲವೋ ಎಂಬುದೇ ಪ್ರಶ್ನೆ.

ಸರಿ, ಕೊನೆಗೆ ಒಪ್ಪಂದದಂತೆ ಅಜ್ಞಾತವನ್ನು ಮುಗಿಸಿದಮೇಲಾದರೂ ರಾಜ್ಯವನ್ನು ಕೊಡಬೇಕಾಗಿತ್ತಲ್ಲ ಎಂದರೆ ಅಲ್ಲೂ ಸಮಸ್ಯೆ ಅಷ್ಟು ಸರಳವಲ್ಲ. ಕೌರವರು ಪಾಂಡವರನ್ನು ಗುರುತು ಹಿಡಿಯುವ ಹೊತ್ತಿಗೆ ಅಜ್ಞಾತವು ನಿಜಕ್ಕೂ ಮುಗಿದಿತ್ತೋ ಇಲ್ಲವೋ ಎಂಬ ಪ್ರಶ್ನೆ ಕೂಡ ಬರುತ್ತದೆ. ಮುಗಿದಿತ್ತೆಂಬ ವಿಷಯ ಖಚಿತವಾದಮೇಲೆ ಭೀಷ್ಮಾದಿಗಳು ಪಾಂಡವರ ರಾಜ್ಯವನ್ನು ಅವರಿಗೆ ಕೊಟ್ಟುಬಿಡುವಂತೆ ದುರ್ಯೋಧನನಿಗೆ ಹೇಳುತ್ತಾರೆ. ಆದರೆ ಅದಾಗಲೇ ರಾಜ್ಯಭೋಗದಿಂದ ಕೊಬ್ಬಿದ್ದ ಕೌರವರು ಅವರ ಮಾತನ್ನು ಕೇಳುವುದಿಲ್ಲ. ಸ್ವತಃ ರಾಜ್ಯದ ಒಡೆಯನಾಗಬಹುದಿದ್ದ ಭೀಷ್ಮ ತನ್ನ ಅಧಿಕಾರವನ್ನುಪಯೋಗಿಸಿ ಇವರನ್ನು ತೊಲಗಿಸಬಹುದಿತ್ತಲ್ಲವೇ ಎಂದರೆ, ಹಾಗೆ ಮಾಡುವುದು ರಾಜ್ಯವನ್ನು ತ್ಯಜಿಸಿದ ಅವನ ಪ್ರತಿಜ್ಞೆಗೇ ವಿರುದ್ಧ. ಪ್ರತಿಜ್ಞೆಯನ್ನು ಮುರಿಯುವವನು ಭೀಷ್ಮ ಹೇಗಾದಾನು?

ಇನ್ನು ಯುದ್ಧ ಬೇಕಾಗಿರುವುದು ಕೇವಲ ಕೌರವರಿಗಷ್ಟೇ ಅಲ್ಲ, ಪಾಂಡವರಿಗೂ. ಅವರ ಕಡೆ, ಕೃಷ್ಣನನ್ನೂ ಒಳಗೊಂಡು, ಧರ್ಮಜನೊಬ್ಬನನ್ನು ಬಿಟ್ಟು ಉಳಿದೆಲ್ಲರಿಗೂ ಯುದ್ಧವೇ ಬೇಕಿರುತ್ತದೆ. ಇತ್ತ ಕೌರವರಿಗೆ ಯುದ್ಧ ಬೇಕೆಂದಿಲ್ಲ, ಆದರೆ ಅಡ್ಡಿಯಿಲ್ಲ. ಹೀಗಾಗಿ ಕೃಷ್ಣನು ಸಂಧಿಯ ಹೆಸರಿನಲ್ಲಿ ಯುದ್ಧವನ್ನೇ ಬಲಿಸಿದಾಗ, ಅನಿವಾರ್ಯವಾಗಿ ಪ್ರತಿಯೊಬ್ಬರೂ ಒಂದಿಲ್ಲೊಂದು ಪಕ್ಷ ಹಿಡಿಯಬೇಕಾಗುತ್ತದೆ. ಎಲ್ಲ ರಾಜರಿಗೂ ಹೀಗೊಂದು ಪಕ್ಷವನ್ನು ಹಿಡಿಯುವುದು ರಾಜಕೀಯದ ಆಯ್ಕೆಯಾದರೆ, ಕುರುಕುಲಕ್ಕೇ ಸೇರಿದ ಭೀಷ್ಮರಿಗೂ, ಅದಕ್ಕೆ ನಿಷ್ಠರಾದ ದ್ರೋಣವಿದುರಾದಿಗಳಿಗೂ ಅದು ಧರ್ಮಾಧರ್ಮಗಳ ನಡುವಣ ಆಯ್ಕೆಯಾಗುತ್ತದೆ. ಪ್ರಭುತ್ವದಿಂದ ಸಿಡಿದುಹೋದ ಪಾಂಡವರು ಅದೆಷ್ಟೇ ಧರ್ಮಾತ್ಮರಾದರೂ ಅವರೀಗ ರಾಜ್ಯದ ಶತ್ರುಗಳು. ಮೊದಲೇ ಹೇಳಿದಂತೆ ಧರ್ಮವೆಂಬುದು ಭೀಷ್ಮದ್ರೋಣಾದಿಗಳ ಮೂಗಿನ ನೇರಕ್ಕೆ ನಿರ್ಧಾರವಾಗುವಂಥದ್ದಲ್ಲ. ಅವರ ನಿಷ್ಠೆಯೇನಿದ್ದರೂ ಸಿಂಹಾಸನಕ್ಕೆ. ಅವರೇನಾದರೂ ಪಕ್ಷ ಬದಲಿಸಿ ಪಾಂಡವರ ಕಡೆ ನಿಂತಿದ್ದರೆ ಯುದ್ಧವೇ ಆಗುತ್ತಿರಲಿಲ್ಲವಲ್ಲ, 'ಧರ್ಮಸ್ಥಾಪನೆ'ಯೂ ಆಗುತ್ತಿರಲಿಲ್ಲ (ಸ್ಥಾಪನೆ = establish, to be proved) - ವ್ಯಾಸರ ಉದ್ದೇಶ ಅದಲ್ಲ. ಹೀಗಾಗಿ ಕೇವಲ ಧರ್ಮದ (ಅದರಿಂದಾಗಿ ದೈವದ) ಬಲವುಳ್ಳ ಪಾಂಡವರು, ಭೀಷ್ಮದ್ರೋಣಾದಿ ಧರ್ಮಾತ್ಮರನ್ನೂ ಒಳಗೊಂಡ ಬಲುದೊಡ್ಡ ಅಧರ್ಮದ ಶಕ್ತಿಯೊಂದಿಗೆ ಸೆಣೆಸಬೇಕಾಗುತ್ತದೆ, ಸೆಣೆಸಿ ಗೆದ್ದು ತಮ್ಮ ಧರ್ಮಬಲವನ್ನು ಸ್ಥಾಪಿಸಬೇಕಾಗುತ್ತದೆ. ಆದರೆ ಇಂತಹ ಯಾವ ಲೌಕಿಕ ತುಮುಲಗಳೂ ಇಲ್ಲದ ಕೃಷ್ಣ, ಧರ್ಮವೊಂದಕ್ಕೇ ಬೆಂಬಲವಾಗಿ ನಿಂತು ಗೆಲ್ಲಿಸುತ್ತಲೇ ಹೋಗುತ್ತಾನೆ.

ಶಾಸ್ತ್ರವು ಬೆಂಬಲಿಸುವ ಧರ್ಮವೊಂದು, ಪ್ರಜ್ಜೆಗೆ ದಕ್ಕುವ ಧರ್ಮವೊಂದು - ಲೋಕವು ಬೆಂಬಲಿಸುವ ಧರ್ಮವೊಂದು - ದೈವವು ಬೆಂಬಲಿಸುವ ಧರ್ಮವೊಂದು; ಸ್ಥೂಲದೃಷ್ಟಿಗೆ ಕಾಣುವ ಧರ್ಮವೊಂದು - ಸೂಕ್ಷ್ಮಕ್ಕಷ್ಟೇ ಕಾಣುವ ಧರ್ಮವೊಂದು. ಈ ತುಮುಲ ಅನೇಕ ಸ್ತರಗಳಲ್ಲಿ ನಡೆಯುವಂಥದ್ದು, ಒಂದು ಸರಳವಿಶ್ಲೇಷಣೆಗೆ ದಕ್ಕುವಂಥದ್ದಲ್ಲ.

ಕೃಷ್ಣಪರಮಾತ್ಮನೇ ಹೇಳುತ್ತಾನಲ್ಲ:
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ

ಇದು ಕೇವಲ ಧರ್ಮವು ಕುಸಿದಾಗ ಬಂದು ಧರ್ಮವನ್ನು ಎತ್ತಿ ಹಿಡಿಯುವ ಭರವಸೆಯಲ್ಲ - ಅದನ್ನು ಮಾಡಲು ಧರ್ಮಾತ್ಮರು, ವೀರರು ಇದ್ದೇ ಇದ್ದಾರೆ.  ಆದರೆ ಯಾವಾಗ ಧರ್ಮದ ವ್ಯಾಖ್ಯೆಯೇ ಕುಸಿದು, ಧರ್ಮದ ಹೆಸರಿನಲ್ಲಿ ಅಧರ್ಮವೇ ವಿಜೃಂಭಿಸತೊಡಗುತ್ತದೆಯೋ ಆಗ ಭೀಷ್ಮವಿದುರಾದಿಗಳಂತಹ ಧರ್ಮಜ್ಞರೂ ಧರ್ಮದ ರೂಲ್ ಬುಕ್ಕುಗಳ ಮುಂದೆ ನಿಸ್ಸಹಾಯಕರಾಗಿಹೋಗುತ್ತಾರೆ; ಆಗ ಅವತರಿಸಿ ಬಂದು ಧರ್ಮವನ್ನು ಪುನರ್ವ್ಯಾಖ್ಯಾನಿಸುವ ಭರವಸೆ ಪರಮಾತ್ಮನದು.  ಇದು, ಮಹಾಭಾರತದಲ್ಲಿ ನಡೆಯುವ ಧರ್ಮ'ಸಂಸ್ಥಾಪನೆ'.