Saturday, September 5, 2020

ಕೊಳ್ಳೇಗಾಲದ ಶೋಭಾ ಟಾಕೀಸ್


ಕೊಳ್ಳೇಗಾಲದ ಶೋಭಾ ಚಿತ್ರಮಂದಿರ ಮುಚ್ಚುತ್ತಿದೆಯಂತೆ. ಮಿತ್ರ
Santhoshkumar Lm ಈ ದುಃಖದ ಸುದ್ದಿಯನ್ನು ಹಂಚಿಕೊಂಡು, ಜೀವವನ್ನು ಮೂವತ್ತೈದು ವರ್ಷದ ಹಿಂದಕ್ಕೆ, ಸಿನಿಮಾ ಎನ್ನುವುದು ನನ್ನ ಬದುಕಿನಲ್ಲೂ ಬಲುಮುಖ್ಯವಾಗಿದ್ದ ಕಾಲಕ್ಕೆ ಒಯ್ದುಬಿಟ್ಟರು. ಶೋಭಾ ಚಿತ್ರಮಂದಿರವನ್ನು ನೆನಪಿಸಿಕೊಳ್ಳುವ ನೆವದಲ್ಲಿ ಶೆಟ್ಟಿ ಹೋಟಲು, ಭಟ್ಟರ ಇಡ್ಲಿ ಚಟ್ನಿಯೊಡನೆ ಮಧುರವಾದ ನೆನಪಿನ ಬುತ್ತಿಯನ್ನೇ ಬಿಚ್ಚಿದರು. ಸಿನಿಮಾ ನೋಡಲು ಹೋಗುವುದರಿಂದ ಹಿಡಿದು ಬಂದ ಮೇಲೆ ವಾರಗಟ್ಟಲೆ ಸಿನಿಮಾ ಕತೆ ಹೇಳುತ್ತಿದ್ದ (ಘಂಟಸಾಲರ ನಮೋ ವೆಂಕಟೇಶ ಅಥವಾ ವಾತಾಪಿ ಗಣಪತಿಂ ಭಜೇ ಇಂದ ಹಿಡಿದು ಶುಭಂ ಎಂದು ತೆರೆ ಬೀಳುವವರೆಗೆ :) ) ಆ ದಿನಗಳು ಎಷ್ಟು ಸೊಗಸಾಗಿದ್ದುವೋ. ಅದು ನಾವೇಯೇ ಎನಿಸುತ್ತದೆ ಈಗ. ಈ ಕ್ಷಣ ಒಮ್ಮೆ ಕೊಳ್ಳೇಗಾಲಕ್ಕೆ ಹೋಗಿ ಬರಲೇ ಎನ್ನಿಸುತ್ತಿದೆ - ನೆನಪುಗಳು ವಾಸ್ತವಕ್ಕಿಂತ ಮಧುರವೇ ಯಾವಾಗಲೂ - ಅವು ಇರಬೇಕಾದ್ದೇ ಹಾಗೆ - ಅವಕ್ಕೆ ವಾಸ್ತವದ ಸೋಂಕು ಸೋಕದಿರಲಿ.

ಕೊಳ್ಳೇಗಾಲದ ಮರಡಿಗುಡ್ಡ ರಸ್ತೆಯಲ್ಲಿ ಬಸ್ ಸ್ಟ್ಯಾಂಡ್ ಎದುರಿಗೆ, ರಸ್ತೆಯ ಈ ಕೊನೆಯಿಂದ ಆ ಕೊನೆಯವರೆಗೆ, ಪಕ್ಕಪಕ್ಕದಲ್ಲಿ ಮೂರು ಟಾಕೀಸುಗಳು, ಕೊಳ್ಳೇಗಾಲದ ಸಿನಿಮಾರಂಜನೆಯ ಮೂರು ಲೋಕಗಳು - ಕೃಷ್ಣ, ಶಾಂತಿ, ಶೋಭ. ಇವತ್ತು ಸಿನಿಮಾಗೆ ಹೋಗಬೇಕೆಂದು ಮನಸ್ಸು ಮಾಡಿ ಹೋದರೆ ಆಯಿತು, ಅಂದುಕೊಂಡ ಸಿನಿಮಾಗೆ ಟಿಕೀಟು ಸಿಗದಿದ್ದರೆ ಪಕ್ಕದಲ್ಲೇ ಇನ್ನೊಂದು, ಅದಿಲ್ಲದಿದ್ದರೆ ಮತ್ತೊಂದು, ಮೂರಕ್ಕೂ ಶೋ ಸಮಯದಲ್ಲಿ ಹದಿನೈದು ಹದಿನೈದು ನಿಮಿಷ ಅಂತರ, ಯಾವುದೋ ಒಂದಕ್ಕೆ ಟಿಕೇಟು ಖಾತ್ರಿ.

ಕೃಷ್ಣ ಮತ್ತು ಶ್ರೀನಿವಾಸ ಟಾಕೀಸುಗಳಲ್ಲಿ ಘಂಟಸಾಲರ "ನಮೋ ವೆಂಕಟೇಶ" ಹಾಡಿನೊಡನೆ ತೆರೆಯೇಳುತ್ತಿದ್ದರೆ, ಶಾಂತಿ ಮತ್ತು ಶೋಭ ಟಾಕೀಸುಗಳಲ್ಲಿ ಅವರದ್ದೇ "ವಾತಾಪಿ ಗಣಪತಿಂ ಭಜೇ" ಹಾಡಿನೊಡನೆ ತೆರೆಯೇಳುತ್ತಿದ್ದುದು. ಶುದ್ಧ ಸಿನಿಮಾ ಪ್ರೇಮಿಯಾದರೆ ಢಣ್ ಎಂಬ ನಾದದೊಡನೆ ಈ ಹಾಡು ಶುರುವಾಗುವ ಮೊದಲು ಬಂದು ಸೀಟಿನಲ್ಲಿ ಕುಳಿತಿರಬೇಕು, ಶುಭಂ ಎಂದು ತೆರೆ ಬೀಳುವವರೆಗೆ ಕೂತಿರಬೇಕು. ಆದರೆ ನಮ್ಮ ಸಿನಿಮಾ ಪ್ರೇಮದಲ್ಲಿದ್ದ ಶುದ್ಧತೆ ಆಗಲೂ ಸುಮಾರು ಜನಕ್ಕೆ ಇರಲೇ ಇಲ್ಲ. ನಮೋ ವೆಂಕಟೇಶ ಇರಲಿ, ನ್ಯೂಸ್ ರೀಲ್ ಇರಲಿ, ಸಿನಿಮಾನೇ ಶುರುವಾದಮೇಲೂ ಬರುತ್ತಲೇ ಇರುತ್ತಿದ್ದರು. ಅವರಿಗೆ ಸೀಟು ತೋರಿಸಲು ಬಂದು, ಮುಖಕ್ಕೆ ಬ್ಯಾಟರಿ ಬಿಡುವ ಗೇಟ್ ಕೀಪರನ ಕಿರಿಕಿರಿ ಬೇರೆ.  ಸಿನಿಮಾದ ಮೊದಲ ಹಾಡು ಆಗುವವರೆಗೂ ಅಡ್ಡಿಯಿಲ್ಲ ಎಂಬುದು ಜನರ ಭಾವನೆ. ಒಂದು ಹಾಡು ಆಗಿ ಹೋಗಿದ್ದರೆ ಸಿನಿಮಾಗೆ ಹೋಗಿ ಪ್ರಯೋಜನವಿಲ್ಲ. ಹೊರಗಡೆಯೂ ತಡವಾಗಿ ಬಂದವರನ್ನು ಗೇಟ್ ಕೀಪರು "ಇನ್ನೂ ಒಂದ್ 'ರೆಕಾಡ್' (ಹಾಡು) ಆಗಿಲ್ಲ ಕಣೋಗಿ" ಎಂದೇ ಧೈರ್ಯ ತುಂಬಿ ಕಳಿಸುತ್ತಿದ್ದುದು. ಆದರೂ ಒಳಬಂದವರಿಗೆ ಆತಂಕ - ಒಂದು 'ರೆಕಾಡ್' ಆಗಿಬಿಟ್ಟಿದೆಯೋ ಎಂದು. ಅಲ್ಲಿ ಈಗಾಗಲೇ ಇದ್ದವರಾರಾದರೂ "ಅಯ್ ಇಲ್ಲ, ಈಗ ನಂಬರ್ ಬುಟ್ರು (ಹೆಸರು/ಟೈಟಲ್ ಕಾರ್ಡ್ ತೋರಿಸಿದರು) ಕ ಬನ್ನಿ" ಎಂದು ಹೇಳಿದ ಮೇಲೇ ಜೀವಕ್ಕೆ ಸಮಾಧಾನ. ಕೊನೆಯಲ್ಲೂ ಅಷ್ಟೇ; ಹೀರೋನೋ ವಿಲನ್ನೋ ಸಾಯಲು ಬಿದ್ದರೆ ಮುಗಿಯಿತು, ಜನ ಎದ್ದು ಹೋಗೋಕ್ಕೆ ಶುರು, ಇನ್ನೂ ಸಾಯುವವರು ಕೊನೆಯುಸಿರೂ ಎಳೆದಿರುವುದಿಲ್ಲ. ನಾವೋ, ತೆರೆಬೀಳುವವರೆಗೂ ಎದ್ದು ಹೋಗಬಾರದೆಂಬುದು ನಮ್ಮ ಬದ್ಧತೆ. ಕಿರಿಕಿರಿಯಾಗುತ್ತಿತ್ತು.

ನನಗೆ ನೆನಪಿರುವಂತೆ ಮೂರನೆಯ ದರ್ಜೆ (ಮುಂದಿನ ಭಾಗದ) ಟಿಕಿಟ್ಟಿನ ಬೆಲೆ 95 ಪೈಸಾ; ಎರಡನೆಯ ದರ್ಜೆಯದು 1.50 ಮತ್ತು ಬಾಲ್ಕನಿಗೆ /2.10. ರಾಜ್ ಕುಮಾರ್ ವಿಷ್ಣುವರ್ಧನ್ ಯಾವುದೇ ಸಿನಿಮಾ ಬರಲಿ, 95 ಪೈಸೆಯ ಕ್ಲಾಸಿನಲ್ಲಿ ಭಕ್ತರ ಹಾವಳಿಯೋ ಹಾವಳಿ; ಸ್ಟಾರ್ ಕಟ್ಟುವುದೇನು, ಹಾರ ಹಾಕುವುದೇನು, ತೆರೆಯ ಮೇಲೆ ರಾಜ್ ಕುಮಾರೋ ವಿಷ್ಣುವರ್ಧನೋ ಕಾಣಿಸಿದೊಡನೇ ಕಾಸು ಎರಚುವುದೇನು. ಎಷ್ಟೋ ಬಾರಿ, ಕಾಸು ಎರಚುತ್ತಾರೆಂದೇ ನಾವು ಹೋಗಿ ಮುಂದಿನ ಸಾಲಿನಲ್ಲಿ ಕೂರುತ್ತಿದ್ದುದು ಉಂಟು. ಟಿಕೆಟಿಗೆ ತೆತ್ತ ಅರ್ಧದಷ್ಟು ಹೇಗೋ ಎದ್ದುಬಿಡುತ್ತಿತ್ತು. ಒಮ್ಮೆ ಯಾವನೋ ಪಡ್ಡೆ ಹುಡುಗ ಕಾಸಿನ ಬದಲು ತೆಂಗಿನ ಕಾಯಿ ಎಸೆದು, ಮುಂದೆ ಕೂತವರಾರಿಗೋ ಜಖಂ ಆಗಿ ದೊಡ್ಡ ಜಗಳವಾಗಿತ್ತು.

ಆಗೆಲ್ಲಾ ಮುಂದಿನ ಸಾಲಿನ ಭಕ್ತರ ಮತ್ತೊಂದು ಖಯಾಲಿಯೆಂದರೆ, ತಮ್ಮ ಮೆಚ್ಚಿನ ಹೀರೋ ತೆರೆಯ ಮೇಲೆ ಬಂದರೆ ಓಡಿ ಹೋಗಿ ಕಾಲಿಗೆ ಬೀಳುವುದು, ಕಾಲು ಹಿಡಿಯುವುದು, ಹೇಗೋ ಆ ಚರಣಸ್ಪರ್ಶ ಆದರೆ ಸಾಕು. ಯಾವುದೋ ಸಿನಿಮಾದಲ್ಲಿ (ನೆನಪಿಲ್ಲ) ರಾಜ್ ಕುಮಾರ್ ಗೂ ಪ್ರಭಾಕರ್ ಗೂ ಫೈಟಿಂಗ್. ಮುಂದಿನ ಸಾಲಿನಲ್ಲಿ ಕೂತವನೊಬ್ಬನಿಗೆ ಇದ್ದಕ್ಕಿದ್ದಂತೆ, ಹೋಗಿ ಫೈಟಿಂಗಿಗೆ ತಯಾರಾಗುತ್ತಿರುವ ಅಣ್ಣಾವ್ರ ಪಾದ ಹಿಡಿದು ಆಶೀರ್ವಾದ ಪಡೆಯಬೇಕೆಂಬ ಖಯಾಲಿ. ಕಂಠಪೂರ್ತಿ ಕುಡಿದುಬಿಟ್ಟಿದ್ದಾನೆ ಬೇರೆ; ತೂರಾಡುತ್ತಾ ಹೋಗಿ ಅಣ್ಣಾವ್ರೇ ಎಂದು ಅಡ್ಡಬಿದ್ದು ಬಾಚಿ ಅಣ್ಣಾವ್ರ ಕಾಲು ಹಿಡಿಯಬೇಕು, ಅಷ್ಟರಲ್ಲಿ ಆ ಜಾಗದಲ್ಲಿ ಪ್ರಭಾಕರ್ ಕಾಲು. ಥೂ.. ಇವ&$@ ಎಂದು ಬೈಯುತ್ತಾ ಇನ್ನೊಮ್ಮೆ ಪಾದ ಹಿಡಿಯಲು ಹೋಗುತ್ತಾನೆ, ಮತ್ತೆ ಪ್ರಭಾಕರ್ ಕಾಲು. ಸುಮಾರು ಸಲ ಇದೇ ಆಗಿ, ಕೊನೆಗೆ ಬೇಸತ್ತು ಅಲ್ಲೇ ಅಂಗತ್ತ ಮಲಗೇ ಬಿಟ್ಟ ಭೂಪ. ಆಕಡೆಯಿಂದ ಅಣ್ಣಾವ್ರು, ಈಕಡೆಯಿಂದ ಪ್ರಭಾಕರ್ರು ಸೇರಿಸಿ ಸೇರಿಸಿ ಒದೆಯುತ್ತಿದ್ದರೂ ಅದರ ಪರಿವೆಯೇ ಇಲ್ಲದೇ ಗೊರಕೆ ಹೊಡೆದದ್ದೇ ಬಂತು.

ಕೊಳ್ಳೇಗಾಲದಲ್ಲಿ ಅತಿ ಹಳೆಯ ಟಾಕೀಸು ಕೃಷ್ಣ. ಹಳೆಯ ಕಾಲದ ರೀತಿಯ ಭಾರಿಭಾರಿ ಕಂಬಗಳು ಬಾಲ್ಕನಿಯಲ್ಲಿ, ತೆರೆಗೆ ಅಡ್ಡಡ್ಡವಾಗಿ - ಟಾಕೀಸೂ ಚಿಕ್ಕದು - ಡಬ್ಬಾ ಟಾಕೀಸು ಎಂದೇ ಅದಕ್ಕೆ ಅಡ್ಡಹೆಸರು - ಈಗಿನ 'ಡಬ್ಬಾ' ಎನ್ನುವ ಅರ್ಥಕ್ಕಿಂತಾ ಅದು ನಿಜಕ್ಕೂ ಡಬ್ಬದಂತೆಯೇ ಇದ್ದುದರಿಂದ. ಆ ಡಬ್ಬದಲ್ಲಿ ಕುಳಿತು ಸಿನಿಮಾ ನೋಡಿ ಮನೆಗೆ ಬಂದರೆ, ಬಟ್ಟೆ ಮೂಸಿ ನೋಡಿಯೇ, ಸಿನಿಮಾಗೆ ಹೋಗಿದ್ದಾರೆಂದು ಹೇಳಬಹುದಿತ್ತು - ಅಷ್ಟು ದಟ್ಟವಾಗಿ ಬಟ್ಟೆಗೆ ಹತ್ತಿರುತ್ತಿತ್ತು ಇಡೀ ಟಾಕೀಸಿನಲ್ಲಿ ಕವಿದಿರುತ್ತಿದ್ದ ಬೀಡಿಯ ವಾಸನೆ - ಆರಂಭದಲ್ಲಿ ಬರುವ ನಮೋ ವೆಂಕಟೇಶಾ ಹಾಡಿನೊಡನೆಯೇ ಧೂಮಪಾನ ನಿಷೇಧಿಸಿದೆ ಎಂಬ ಸ್ಲೈಡನ್ನೇನೋ ತೋರಿಸುತ್ತಿದ್ದರು. ಅದನ್ನು ನೋಡುತ್ತಿದ್ದವರಾರು? ನನಗೆ ನೆನಪಿರುವ ಮೊಟ್ಟ ಮೊದಲ ಸಿನಿಮಾ "ಭಲೇ ಹುಚ್ಚ" ನೋಡಿದ್ದು ಇಲ್ಲೇ, ಹಾಗೆಯೇ ನಾನು ನೋಡಿದ ಮೊದಲ ಕಲರ್ ಸಿನಿಮಾ (ಹೆಸರು ನೆನಪಿಲ್ಲ) ನೋಡಿದ್ದೂ ಇಲ್ಲಿಯೇ - ತಂದೆಯವರ ಜೊತೆ ಎಂದು ಬೇರೆ ಹೇಳಬೇಕಿಲ್ಲವಲ್ಲ.

ಆಮೇಲೆ ಯಾವಾಗಲೋ, 9-10ನೇ ತರಗತಿಯಲ್ಲಿರಬೇಕು, ಯಾವುದೋ ಪ್ರಖ್ಯಾತವಾದ ಸಿನಿಮಾ, ಇದೇ ಕೃಷ್ಣ ಟಾಕೀಸಿನಲ್ಲಿ. ಹೋಗುವ ಹೊತ್ತಿಗೆ ತಡವಾಗಿತ್ತು, ಟಿಕೇಟ್ ಇಲ್ಲ. ಬ್ಲಾಕ್ ಟಿಕೇಟು ಕೊಂಡುಕೊಳ್ಳುವ ಮನಸ್ಸಾಗದೇ ವಾಪಸು ಹೋಗುತ್ತಿದ್ದಾಗ ಯಾರೋ ಒಬ್ಬ, ತನ್ನ ಬಳಿ ಎರಡು ಟಿಕೇಟ್ ಇದೆಯೆಂದೂ ತನ್ನ ಮಿತ್ರ ಬರಲಿಲ್ಲವೆಂದೂ ಟಿಕೆಟಿನ ಬೆಲೆಯನ್ನೇ ಕೊಟ್ಟರೆ ಸಾಕೆಂದೂ ಹೇಳಿದ. ನಮಗೂ ಇಂತಹ ಹಲವು ಸಂದರ್ಭಗಳಲ್ಲಿ ನಾವೂ ಹೀಗೇ ಯಾರಿಗೋ ಮಾರಿ ಬಂದಿದ್ದುದರಿಂದ ಸಂತೋಷವಾಗಿ ಅವನು ಕೊಟ್ಟ ಟಿಕೆಟ್ ಕೊಂಡು ಒಳಹೋದೆವು. ಹೋದರೆ ಗೇಟಿನಲ್ಲಿ ನಮ್ಮನ್ನು ಆಪಾದಮಸ್ತಕ ನೋಡಿದ ಗೇಟ್ ಕೀಪರ್ "ಇದು ಹಳೇ ಟಿಕೇಟು ಹೋಗ್ರಯ್ಯಾ" ಎಂದು ಬೈದು ಕಳಿಸಿದ. ಇದು ಬಹುಶಃ ಬದುಕಿನಲ್ಲಿ ನಾನು ಅನುಭವಿಸಿದ ಮೊಟ್ಟ ಮೊದಲ ಮೋಸ, ಒಂದು ರುಪಾಯಿ 90 ಪೈಸೆಯದ್ದು. ಆಮೇಲೆ ಈ ಘಟನೆಯನ್ನು ಸುಧಾ ಪತ್ರಿಕೆಯ "ನಿಮ್ಮ ಪುಟ"ಕ್ಕೆ ಬರೆದಿದ್ದೆ, ಮತ್ತು ಅದಕ್ಕೆ 50 ರುಪಾಯಿ ಸಂಭಾವನೆಯೂ ಸುಧಾ ಪತ್ರಿಕೆಯ ಪ್ರತಿಯೂ ಬಂದಿತ್ತು. ಹೀಗೆ, ಆದ ನಷ್ಟತುಂಬಿತು. ನನ್ನ ಬದುಕಿನಲ್ಲಿ ಪ್ರಕಟವಾದ ಮೊದಲ ಲೇಖನವೂ ಇದೇ. ಹೀಗೆ ಕೃಷ್ಣ ಟಾಕೀಸು ಬದುಕಿನ ಹಲವು ಮೊದಲುಗಳಿಗೆ ಸಾಕ್ಷಿಯಾಯಿತು :)

ಕೃಷ್ಣಾ ಆದ ಮೇಲೆ ಬಂದಾಕೆ ಶಾಂತಿ.  ಮಯೂರ, ಬಭ್ರುವಾಹನ, ಹುಲಿಯ ಹಾಲಿನ ಮೇವು, ಗಂಧದ ಗುಡಿ (ಬಹುಶಃ ನಾಗರಹಾವೂ) ಮೊದಲಾದ ಮಹೋನ್ನತ ಚಿತ್ರಗಳನ್ನು ನೋಡಿದ್ದು ಶಾಂತಿ ಟಾಕೀಸಿನಲ್ಲಿಯೇ. ಹಾಗೆಯೇ ಕಾಶೀನಾಥರ 'ಅನುಭವ' ಎಂಬ (ಆ ಕಾಲಕ್ಕೆ 'ಮರ್ಯಾದಸ್ಥರು ನೋಡಬಾರದ') ಚಿತ್ರ ನೋಡಿದ್ದೂ ಅಲ್ಲೇ. ಹೆಣ್ಣುಮಕ್ಕಳಿಗೆ ಆ ಚಿತ್ರಕ್ಕೆ ಪ್ರವೇಶವಿರಲಿಲ್ಲವೆಂದು ನೆನಪು, ಚಿತ್ರ ನೋಡಲು ಬಂದ ಯಾವುದೋ ಮಹಿಳೆಯನ್ನು ಬೈದು ಕಳಿಸಿದ್ದರೆಂಬುದೂ ಅಸ್ಪಷ್ಟ ನೆನಪು)

ಆಮೇಲೆ ಬಂದದ್ದು ಶೋಭಾ. ಪ್ರೇಮದ ಕಾಣಿಕೆ ಚಿತ್ರ ಇಲ್ಲಿ ನೋಡಿದ್ದೆಂದು ನೆನಪಿದೆ, ಹಾಗೆಯೇ ಸಿಂಹದ ಮರಿ ಸೈನ್ಯ, ಪುಟಾಣಿ ಏಜೆಂಟ್ 123 ಇವುಗಳನ್ನೂ. ಹಾಗೆಯೇ ತಾಯಿಯವರ ಜೊತೆ "ಉಪಾಸನೆ" ಎಂಬ 'ಗೋಳುಕರೆಯ' (ಆಗಿನ ದೃಷ್ಟಿಯಲ್ಲಿ) ಚಿತ್ರವನ್ನು ನೋಡಿದ್ದೂ ಇಲ್ಲೆಯೇ, ಹೆಂಗಸರಿಗೇ ಪ್ರತ್ಯೇಕವಾಗಿದ್ದ 95 ಪೈಸೆಯ ವರ್ಗದಲ್ಲಿ ಕೂತು. ತಮಾಷೆಯೆಂದರೆ ನಾಯಕಿ ಮತ್ತಾಕೆಯ ಗುರುಗಳನ್ನು ಮೆಚ್ಚುವ, ಸಹಾನುಭೂತಿ ಸೂಚಿಸುವ ಬದಲು ಬೈಯುವ ಹೆಂಗಸರೂ ಅಲ್ಲಿದ್ದುದು ಆಗೆಲ್ಲ ಅಚ್ಚರಿಯೆನಿಸುತ್ತಿರಲಿಲ್ಲ; ಜೊತೆಗೆ ಅಬ್ಬಾ! ಅಲ್ಲಿನ ಕಿಸಿಕಿಸಿ, ಮುಸಿಮುಸಿ, ಅಳು, ಅಯ್ಯೋ ಪಾಪವೇ ಪ್ಚ ಪ್ಚ ಪ್ಚ ಭಗವಂತಾ, ಎಂಥಾ ಕಷ್ಟವಪ್ಪಾ ಎಂಬ ಉದ್ಗಾರಗಳೂ - ಅದೇ ಒಂದು ಪ್ರಪಂಚ.

ಶ್ರೀನಿವಾಸ ಆಮೇಲೆ ಬಂದುದು, ಸುಮಾರು ನಾನು 8-9ನೆಯ ತರಗತಿಯಲ್ಲಿದ್ದಾಗ. ಆಗೆಲ್ಲಾ ಅದೆಷ್ಟೆಷ್ಟೊಂದು ಮುಗ್ಧತೆ, ಎಷ್ಟೊಂದು ಮೂಢನಂಬಿಕೆಗಳು. ಹೊಸ ಸಿನಿಮಾ ಥಿಯೇಟರ್ ಭದ್ರವಾಗಿ ನಿಲ್ಲಬೇಕಾದರೆ ಮಕ್ಕಳನ್ನು ಬಲಿಕೊಡುತ್ತಾರಂತೆ ಎನ್ನುವುದು ನಮ್ಮ ಬಾಲಬಳಗದಲ್ಲಿ ಜನಜನಿತವಾಗಿದ್ದ ನಂಬಿಕೆ. ನನ್ನ ಸಹಪಾಠಿಯಾಗಿದ್ದ ಆನಂದನಂತೂ (ನನಗಿಂತ ಒಂದು ವರ್ಷ ದೊಡ್ಡವನು) ಮಕ್ಕಳನ್ನು ಹೇಗೆ ಎಳೆದುಕೊಂಡು ಹೋಗಿ ಬಲಿ ಕೊಡುತ್ತಾರೆಂಬುದನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಪೂರ್ವಕವಾಗಿ ವರ್ಣಿಸುತ್ತಿದ್ದ - ತಾನೇ ಬಲಿಯಾಗುತ್ತಿರುವ ಮಗುವೋ ಎನ್ನುವಂತೆ. ಹಾಗೆ ಬಲಿ ಕೊಡದಿದ್ದರೆ ಕಟ್ಟಡ ಬಿದ್ದೇ ಹೋಗುತ್ತಂತೆ, ಮೊದಲ ಪ್ರದರ್ಶನದಲ್ಲೇ ತನ್ನ ಬಲಿ ತೆಗೆದುಕೊಂಡುಬಿಡುವುದಂತೆ, ಅದಕ್ಕೇ ಮೊದಲ ಪ್ರದರ್ಶನಕ್ಕೆ ಹೋಗಲು ಜನ ಹೆದರುತ್ತಾರಂತೆ, ಅದಕ್ಕೇ ಯಾವಾಗಲೂ ಫ್ರೀ ಅಂತೆ - ಹೀಗೆ ಏನೇನೋ. ಇವನು ಬಿಡುತ್ತಿರುವುದೆಲ್ಲ ರೈಲು ಎಂದು ಆಗಲೂ ಗೊತ್ತಾಗುತ್ತಿತ್ತು, ಆದರೂ ಅದರಲ್ಲಿ ಎಷ್ಟು ಸುಳ್ಳೋ ಎಷ್ಟು ನಿಜವೋ, ಅಕಸ್ಮಾತ್ ಬಲಿ ಕೊಡುವ ವಿಷಯ ಸುಳ್ಳಾಗಿದ್ದು, ಕಟ್ಟಡ ಮುನಿಸಿಕೊಳ್ಳುವ ವಿಷಯ ನಿಜವಾಗಿದ್ದರೆ? ಸಿನಿಮಾಗೆ ಹೋದವರನ್ನೇ ಬಲಿ ಪಡೆದರೆ? ಆ ಬಲಿ ನಾವೇಕಾಗಬೇಕು? ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಒಳ್ಳೆಯದು ಎಂದು, ಮೊದಲ ಪ್ರದರ್ಶನವಿರಲಿ, ಮೊದಲ ಒಂದು ತಿಂಗಳಿಡೀ ಈ ಚಿತ್ರಮಂದಿರದೆಡೆ ತಲೆ ಹಾಕಿರಲಿಲ್ಲ - ಅಣ್ಣಾವ್ರ ಕವಿರತ್ನ ಕಾಳಿದಾಸ ಮತ್ತು ಭಕ್ತಪ್ರಹ್ಲಾದ ಚಿತ್ರಗಳನ್ನು ನಾಲ್ಕು ನಾಲ್ಕು ಬಾರಿ ನೋಡಿದ್ದು ಇಲ್ಲೇ (ಭಕ್ತಪ್ರಹ್ಲಾದ ಅಂತೂ ಒಂದೇ ದಿನ ಎರಡು ಬಾರಿ - ಒಮ್ಮೆ ನಾನಾಗೇ, ಇನ್ನೊಮ್ಮೆ ಅಫಿಯಲ್ ಆಗಿ ತಂದೆಯವರ ಜೊತೆ :) ) ನನ್ನ ಭಾವಕೋಶದಲ್ಲಿ ಅಚ್ಚಾಗಿರುವ ಕೊನೆಯ ಟಾಕೀಸು ಇದು.

ವಿನಾಯಕ ಚಿತ್ರಮಂದಿರ ನನ್ನ ಪಾಲಿಗೆ ಸಾಕಷ್ಟು 'ಹೊಸದು' ಕಾಲೇಜಿನಲ್ಲಿದ್ದಾಗೇನೋ ಬಂದದ್ದು - ಅಲ್ಲಿ ಒಂದೆರಡು ಚಿತ್ರ ನೋಡಿದ್ದು (Ocotopussy ಎಂಬ 'ಕೆಟ್ಟ' ಚಿತ್ರ, ನನಗೆ ನೆನಪಿರುವಂತೆ) ಬಿಟ್ಟರೆ, ಎಲ್ಲೋ "ಊರಾಚೆ, ಮುಡಿಗುಂಡದ ಹತ್ತಹತ್ತಿರ" ಇದ್ದ ಅದರ ಬಗೆಗೆ ಅಷ್ಟೊಂದು ಭಾವನಾತ್ಮಕ ಸಂಬಂಧವೂ ನೆನಪುಗಳೂ ಇಲ್ಲ.

ಕೊಳ್ಳೇಗಾಲದಲ್ಲೇ ಅತ್ಯುತ್ತಮವಾದ ಟಾಕೀಸ್ ಶೋಭಾ, ಆ ಕಾಲಕ್ಕೆ - ಅದಕ್ಕೆ ಅಲ್ಲಿ ತೋರಿಸುತ್ತಿದ್ದ "Photophone and sound projection only in this theater" ಎಂಬ ಸ್ಲೈಡ್ ಅಷ್ಟೇ ಸಾಕ್ಷಿಯಲ್ಲ, ಟಾಕೀಸು ವಿಶಾಲವಾಗಿತ್ತು, ಸ್ವಚ್ಛವಾಗಿತ್ತು, ಹೊಸದಾಗಿತ್ತು, ಸೀಟುಗಳು ಚೆನ್ನಾಗಿದ್ದುವು, ಸೌಂಡ್ ನಿಜಕ್ಕೂ ಚೆನ್ನಾಗಿತ್ತು - ಆಮೇಲೆ ಶ್ರೀನಿವಾಸ ಮತ್ತು ನಾನು ಊರು ಬಿಡುವ ಒಂದೈದು ವರ್ಷದ ಮೊದಲು ವಿನಾಯಕ ಬಂದರೂ 'ಊರಾಚೆ' ಎಲ್ಲೋ ಇದ್ದ ಅವು ಶೋಭೆಯ ಆಕರ್ಷಣೆಯನ್ನು ಕಿತ್ತುಕೊಳ್ಳಲು ಆಗಲಿಲ್ಲ.

ಈ ಪತ್ರಿಕಾ ವರದಿಯನ್ನು ನೋಡುವವರೆಗೂ ಭೂತಯ್ಯನ ಮಗ ಅಯ್ಯು ಮತ್ತು ಶ್ರೀನಿವಾಸಕಲ್ಯಾಣ ಈ ಟಾಕೀಸಿನ ಮೊದಲ ಮತ್ತು ಎರಡನೆಯ ಚಿತ್ರ ಎಂದು ತಿಳಿದಿರಲಿಲ್ಲ. ಆದರೆ ಅವೆರಡನ್ನೂ ನಾನು ನೋಡಿದ್ದು ನಮ್ಮೂರಿನಲ್ಲೇ, ಮೊದಲ ರಿಲೀಸಿನಲ್ಲೇ ಆದ್ದರಿಂದ ಶೋಭೆಯ ಮೊದಲ ಮತ್ತು ಎರಡನೆಯ ಚಿತ್ರಗಳ ಸಂಭ್ರಮದಲ್ಲಿ ನಾನೂ ಭಾಗಿಯಾಗಿದ್ದೆ ಎಂದು ಈಗ ತಿಳಿದು ಖುಶಿಯಾಗುತ್ತಿದೆ :) ಆಗ ನನಗೆ ಐದೋ ಆರೋ ವರ್ಷ. ತನ್ನ ಮಡಿಲಲ್ಲಿ ಕೂರಿಸಿಕೊಂಡು ಅದೆಷ್ಟೆಷ್ಟೋ ಸಿನಿಮಾ ತೋರಿಸಿ - ಒಳ್ಳೆಯದನ್ನೂ ಕೆಟ್ಟದ್ದನ್ನೂ ತೋರಿಸಿಕೊಟ್ಟು - ಕತೆ ಹೇಳಿ ರಂಜಿಸಿದ ಈಕೆಗೆ "ಹೋಗಿ ಬಾರೇ ಅಕ್ಕಾ" ಎಂದು ವಿದಾಯ ಹೇಳಬೇಕಷ್ಟೇ.