ಗೌಡರ ವೈಯಕ್ತಿಕ ಪರಿಚಯ ನನಗಿಲ್ಲ. ಆದರೆ ಅವರ ಮಾತು ಕತೆ ಬರಹಗಳಿಂದ ಅವರಲ್ಲೊಬ್ಬ ಸರಳ ಸಜ್ಜನ ಸುಸಂಸ್ಕೃತ ಸಂವೇದನಶೀಲವ್ಯಕ್ತಿಯಿರುವುದಂತೂ ಸ್ಪಷ್ಟವಾಗಿ ಕಾಣುತ್ತದೆ. ಇದುವರೆಗೂ ಇತರ ಅನೇಕ 'ಸಾಯಿತಿ'ಗಳಂತೆ ಯಾವ ಅಡಾವುಡಿಗಳನ್ನೂ ಮಾಡಿಕೊಂಡವರಲ್ಲ - ಅವರಲ್ಲನೇಕರು ಈಗಾಗಲೇ ಸಮ್ಮೇಳನಾಧ್ಯಕ್ಷತೆಯ ದಂಡಿಗೆಯ ಮೇಲೂ ಕೂತು ಹೋಗಿರುವಾಗ, ಆ ಸ್ಥಾನಕ್ಕೆ ಋಜುಸ್ವಭಾವದ, ವಿವಾದಕ್ಕಂಜುವ, ವಿವಾದವಾದರೆ ನಿಜಕ್ಕೂ ನೋಯುವ, ಅವರೇ ಹೇಳುವಂತೆ (ಸತ್ಯವೂ ಆಗಿರುವಂತೆ) "ಅಂತರಾಳದಿಂದ ಕನ್ನಡವನ್ನು ಆರಾಧಿಸು"ತ್ತಾ, "ಕನ್ನಡವನ್ನೇ ತಲೆಯ ಮೇಲೆ ಹೊತ್ತು ಮೆರೆಸು"ವ ಗೌಡರು ಆ ಸ್ಥಾನಕ್ಕೆ ಎಷ್ಟೋ ಎಷ್ಟೆಷ್ಟೋ ಅರ್ಹರಂತೆ ಕಾಣುತ್ತಾರೆಂಬುದರಲ್ಲಿ ಸಂಶಯವಲ್ಲ. ಗೌಡರದು ನಿಜಕ್ಕೂ ಕನ್ನಡದ ಜೀವ. ಆದರೆ ಹಿಂದೀ ರಾಷ್ಟ್ರಭಾಷೆ ಎಂದರೆ ಕನ್ನಡಿಗರಿಗೆ ನೋವೇಕಾಗಬೇಕು ಎಂಬುದು ಏಕೋ ಗೌಡರಿಗೆ ಅರಿವಾದಂತಿಲ್ಲ. ಇದು ಅವರ ಮುಗ್ಧತೆಯೂ ಇರಬಹುದು. ಆದರೂ ಕನ್ನಡದ ಮಣ್ಣಿನಲ್ಲೇ ಹುಟ್ಟಿ ಬೆಳೆದು, ಕನ್ನಡದ ಚಳುವಳಿಗಳಲ್ಲಿ ಭಾಗವಹಿಸಿ, ಕನ್ನಡಿಗರಾಗಿಯೇ ಬದುಕುತ್ತಿರುವ ಗೌಡರಿಗೆ ಹಿಂದೀ ಭೂತಗಳು ಕಾಲದಿಂದ ಕನ್ನಡಕ್ಕೆ ಮಾಡುತ್ತಲೇ ಬಂದಿರುವ ಅನ್ಯಾಯ ಕಾಣಲಿಲ್ಲವೆಂದರೆ ನಂಬುವುದು ಕಷ್ಟ - ಅದರಲ್ಲೂ ಸಮ್ಮೇಳನಾಧ್ಯಕ್ಷರಾಗಿರುವ ಅವರ ಈ ಮಾತು ಹಿಂದೀ ಹಿತಾಸಕ್ತಿಗಳಿಗೆ ಹಾಸಿಗೆ ಹಾಸಿಕೊಡುವಂತೆ ಇದ್ದಾಗ, ಅದು ಯಾರನ್ನಾದರೂ ರೊಚ್ಚಿಗೆಬ್ಬಿಸುವುದು ಸಹಜ. ಅವರು ಸಂದರ್ಶನದಲ್ಲಿ ಅನುಮಾನಿಸಿದಂತೆ, ಈ ಪ್ರತಿಭಟನೆಗಳ ಹಿಂದೆ 'ಹುನ್ನಾರ'ವಿರಲೂ ಸಾಧ್ಯ, ಆದರೆ ಹುನ್ನಾರಕ್ಕೂ ಹೊರತಾದ ಸಾತ್ತ್ವಿಕ ರೋಷವಿದೆಯೆಂಬುದನ್ನು ಸಂವೇದನಶೀಲರಾದ ಗೌಡರು ಮನಗಂಡರೆ ಕನ್ನಡದ ಮನಸ್ಸಿಗೆ ಎಷ್ಟೋ ಹಾಯೆನ್ನಿಸುತ್ತದೆ. ಸಮಸ್ಯೆಯನ್ನು ಕೂಡಿದ ಮಟ್ಟಿಗೂ ವಸ್ತುನಿಷ್ಠವಾಗಿ ವಿವರಿಸಲೆತ್ನಿಸುತ್ತೇನೆ, ಆದರೂ ಅಲ್ಲಲ್ಲಿ ಕೋಪ, ವ್ಯಂಗ್ಯ ಕಟಕಿಗಳು ಕಂಡುಬಂದಲ್ಲಿ, ಅದು ಅನಿವಾರ್ಯ, ಅದಕ್ಕಾಗಿ ಗೌಡರಲ್ಲಿ ಮೊದಲೇ ಕ್ಷಮೆಯಾಚಿಸಿ ನನ್ನ ಪ್ರತಿಕ್ರಿಯೆ ನೀಡುತ್ತಿದ್ದೇನೆ.
ಇರಲಿ, ಗೌಡರೇನೋ ಕನ್ನಡದೇವಿಯನ್ನು ತಲೆಯ ಮೇಲೆ ಹೊತ್ತು ತಿರುಗುವವರು, ಗುಡಿಯಲ್ಲಿಟ್ಟು ಆರಾಧಿಸುವವರು - ಹಿಂದೀ ರಾಷ್ಟ್ರಭಾಷೆಯಾಗಿ ನಮ್ಮ ಮೇಲೆ ಸವಾರಿ ಮಾಡಿದರೆ ಅವರಿಗೆ ಏನೂ ಅನ್ನಿಸಲಿಕ್ಕಿಲ್ಲ. ಆದರೆ ನಾವು ನೆಲದ ಜನ, ನಮಗೆ ಕನ್ನಡದೇವಿಯ ಪೂಜೆಗೀಜೆ ಬರಾಕಿಲ್ಲ. ನಾವೇನಿದ್ದರೂ ಹಸಿವಾದಾಗ ಅಮ್ಮನ ಎದೆ ನೋಡುವವರು, ದಣಿದಾಗ ಅಮ್ಮನ ತೊಡೆಗೆ ತಲೆಯಾನಿಸುವವರು, ನೊಂದಾಗ ಕಣ್ಣು ಮೂಗು ಸುರಿಸಿಕೊಂಡು ಅಮ್ಮನ ಸೆರಗಿಗೆ ಮೊಗವೊಡ್ಡುವವರು. ಆದ್ದರಿಂದ ನಮ್ಮಮ್ಮ ಚೆನ್ನಾಗಿ, ಗಟ್ಟಿಮುಟ್ಟಾಗಿ ಆರೋಗ್ಯವಾಗಿರುವುದು ನಮಗೊಳ್ಳೆಯದು, ನಾವು ಹಾಗಿರುವುದು ಅವಳಿಗೊಳ್ಳೆಯದು ಅಷ್ಟೆ. ಇವಳನ್ನ ಕರೆದುಕೊಂಡು ಹೋಗಿ ಗರ್ಭಗುಡಿಯಲ್ಲಿ ಕೂಡಿಹಾಕಿ, ದಿನಬೆಳಗಾದರೆ ಪಂಪ ರನ್ನ ಕುಮಾರವ್ಯಾಸ ಕುವೆಂಪು ದೊಡ್ಡರಂಗೇಗೌಡ ಎಂದು ಅರ್ಚನೆ ಹಾಡುತ್ತಾ, ನಮಗೆ ಅನ್ನ ಹಾಕಲು ಮಾತ್ರ ಇನ್ನಾವಳೋ ಅಮ್ಮನನ್ನು ಕರೆತಂದು ಕೂರಿಸಿದರೆ, ಸ್ವಾಮಿ, ನಿಮಗೆ ಹೇಗನ್ನಿಸುವುದೋ, ನಮಗೆ ಮಾತ್ರ ತಬ್ಬಲಿಗಳಾದಂತೆ ಅನ್ನಿಸುತ್ತದೆ. ಎಲ್ಲೋ ಪರನಾಡಿನಲ್ಲಿ ತಬ್ಬಲಿತನ ಕಾಡಿದರೆ ಒಂದು ರೀತಿ, ನಮ್ಮ ನೆಲದಲ್ಲೇ ನಾವೇ ತಬ್ಬಲಿಗಳಾಗುವುದಿದೆಯಲ್ಲ, ಅದು ಶತ್ರುವಿಗೂ ಬರಬಾರದ ಪಾಡು. ಸುಶಿಕ್ಷಿತಕವಿಗಳಾದ ತಮಗೆ ಆದಿಕವಿ ಪಂಪನ ಪರಿಚಯವಿರಲೇಬೇಕು. ಆದಿಪುರಾಣದಲ್ಲಿ ಆತ ಬಾಹುಬಲಿಯ ತಮ್ಮಂದಿರಿಂದ ಈ ಮಾತನ್ನು ಹೇಳಿಸುತ್ತಾನೆ:
"ಪಿಱಿಯಣ್ಣಂ ಗುರು ತಂದೆಯೆಂದೆಱಗುವಂ ಮುನ್ನೆಲ್ಲಂ, ಇಂತೀಗಳ್ ಆಳರಸೆಂಬೊಂದು ವಿಭೇದಮಾದೊಡೆ ಎಱಕಂ ಛಿಃ ಕಷ್ಟಮಲ್ತೇ? ವಸುಂಧರೆಗಯ್ಯಂ ದಯೆಗಯ್ಯೆ ಮುಂಪಡೆದುದರ್ಕೆ, ಇಂತೀತನೊಳ್ ತೊಟ್ಟ ಕಿಂಕರಭಾವಂ ನಮಗೆ ಅಕ್ಕಿಗೊಟ್ಟುಮಡಗೂೞುಣ್ಬಂದಮಂ ಪೋಲದೇ" - ಭರತಚಕ್ರವರ್ತಿ ತನ್ನ ತಮ್ಮಂದಿರಿಗೆ "ಬನ್ನಿಂ, ಎಱಗಿಂ ಚಕ್ರೇಶಪಾದಾಬ್ಜದೊಳ್" ಎಂದು ಬರೆಸಿ ಕಳಿಸಿದ ಪತ್ರಕ್ಕೆ ತಮ್ಮಂದಿರ ಪ್ರತಿಕ್ರಿಯೆ ಇದು. ಏನೋ, ಹಿರಿಯಣ್ಣ, ಗುರು, ತಂದೆ ಎಂದು ನಮಿಸುವುದಾದರೆ ಒಂದು ರೀತಿ. ಆದರೆ ಆಳು-ಅರಸ ಎಂಬ ಭಾವನೆಯಿಂದ ತಲೆವಾಗುವುದು ಕಷ್ಟವಲ್ಲವೇ? ನಮಗೆ ರಾಜ್ಯ ಕೊಟ್ಟಿದ್ದು ನಮ್ಮಪ್ಪ, ಪಡೆದವರು ನಾವು. ಇವತ್ತು ಅದೇ ರಾಜ್ಯವನ್ನು ಅವನ ಪದತಲದಲ್ಲಿಟ್ಟು ಅವನಿಗೆ ಕೈಮುಗಿದು ನಿಲ್ಲಬೇಕೆಂದರೆ, ನಮ್ಮ ಅಕ್ಕಿಯನ್ನೇ ಕೊಟ್ಟು, ಅವನು ಉಂಡು ಮಿಕ್ಕ ತಂಗಳುಣ್ಣುವಂತಲ್ಲವೇ?" - ಇದು ಭರತನ ತಮ್ಮಂದಿರ ಅಳಲು. ಇದಕ್ಕೆ ಭರತನೇನೂ ಉತ್ತರಿಸಲಿಲ್ಲವೆನ್ನಿ. ಆಮೇಲೆ ಭರತನ ಕತೆ ಏನಾಯಿತೆಂಬುದನ್ನೂ, ಇವತ್ತಿನ ಸಂದರ್ಭಕ್ಕೆ ಇದರ ಪ್ರಸ್ತುತತೆಯನ್ನೂ, ಕಾವ್ಯಸೂಕ್ಷ್ಮವನ್ನು ತಿಳಿದವರಾದ ತಮಗೆ ವಿವರಿಸಬೇಕಿಲ್ಲವೆಂದು ಭಾವಿಸುತ್ತೇನೆ.
ಇರಲಿ, ಅಲಂಕಾರದ ಭಾಷೆಯಲ್ಲಿ ಮಾತಾಡಿದ್ದು ಸಾಕು. ನೇರವಾಗಿ ಕೇಳುತ್ತೇನೆ, ತಾವು ಉತ್ತರ ಹೇಳುತ್ತೀರೋ ಬಿಡುತ್ತೀರೋ, ಆದರೆ ಉತ್ತರಿಸುವುದು ತಮ್ಮ ನೈತಿಕ ಹೊಣೆಯೆಂಬುದಷ್ಟು ನಿಮಗೆ ಅರ್ಥವಾದರೆ ಸಾಕು; ಏಕೆಂದರೆ ಒಬ್ಬ ವ್ಯಕ್ತಿಯಾಗಿ ದೊಡ್ಡರಂಗೇಗೌಡರ ಅಭಿಪ್ರಾಯಗಳು ಏನೇ ಆದರೂ ನಾವು ತಲೆಕೆಡಿಸಿಕೊಳ್ಳುವವರಲ್ಲ, ಜನಪ್ರಿಯಸಾಹಿತಿಯಾಗಿ ದೊಡ್ಡರಂಗೇಗೌಡರ ಅಭಿಪ್ರಾಯಗಳು ನಮಗೆ ಕಳವಳ ಮೂಡಿಸಬಲ್ಲುವಾದರೂ ಹೇಗೋ ಕಡೆಗಣಿಸಿ ಇರಬಲ್ಲೆವು (ಎಷ್ಟೆಷ್ಟೋ ಸಾಹಿತಿಗಳ ಎಂತೆಂಥದೋ ಬಡಬಡಿಕೆಯನ್ನು ಕಡೆಗಣಿಸಿಲ್ಲವೇ), ಆದರೆ ಕನ್ನಡಸಾಹಿತ್ಯಸಮ್ಮೇಳನಾಧ್ಯಕ್ಷರಾಗಿ, ಸಮಸ್ತಕನ್ನಡಿಗರ ಮುಖವಾಣಿಯಾದ ದೊಡ್ಡರಂಗೇಗೌಡರು ಆಡುವ ಮಾತಿದೆಯಲ್ಲ, ಅದು ನಮ್ಮೆಲ್ಲರ ಧ್ವನಿ. ಆ ಧ್ವನಿಯಲ್ಲಿ ನಮ್ಮದಲ್ಲದ ಮಾತನ್ನಾಡುವುದು ವಿಶ್ವಾಸದ್ರೋಹ! ಅಲ್ಲವೇ? ಹಿಂದೀ ಈ ದೇಶದ ರಾಷ್ಟ್ರಭಾಷೆಯಲ್ಲ, ಅದು ಕೇವಲ ಕೇಂದ್ರಸರ್ಕಾರದ ಆಡಳಿತಭಾಷೆ (ಅದರಲ್ಲೂ ಸೀಮಿತವಲಯಕ್ಕೆ ಮಾತ್ರ) ಎಂಬ ವಿಷಯ ತಮಗೆ ನಿಜಕ್ಕೂ ತಿಳಿದಿರಲಿಲ್ಲವೇ? ತಾವು ತಿಳಿದಿದ್ದೂ ಸುಳ್ಳು ಹೇಳಿರಲಾರಿರಿ ಎಂಬುದು ನಮ್ಮ ನಂಬಿಕೆ. ತಿಳಿದಿರಲಿಲ್ಲವೆಂದರೆ ಆಶ್ಚರ್ಯ! ಹೋಗಲಿ, ಈಗಲಾದರೂ ತಿಳಿಯಿರಿ. ತಿಳಿದ ಮೇಲಾದರೂ ತಮ್ಮ ತಪ್ಪು ತಿಳುವಳಿಕೆಯನ್ನು ಸಾರ್ವಜನಿಕವಾಗಿ ಪ್ರಕಟಪಡಿಸಿ, ನಿಲುವು ತಿದ್ದಿಕೊಳ್ಳಿ - ಅದಿಲ್ಲದ ಕ್ಷಮಾಯಾಚನೆ ಕೇವಲ ಕಾಟಾಚಾರವೆನಿಸಿಕೊಂಡು, ರೋಷವನ್ನೇ ಹೆಚ್ಚಿಸುತ್ತದೆ. ಈ ಬರಹವನ್ನೊಮ್ಮೆ ದಯವಿಟ್ಟು ಓದಿ ನೋಡಿ - https://nannabaraha.blogspot.com/2020/09/blog-post_15.html.
ಇನ್ನೊಂದು ವಿಷಯ - ನಿಮ್ಮ ಮಾತನ್ನು ಪತ್ರಿಕೆಯವರು ತಿರುಚಿಯೋ ಸಂಕ್ಷಿಪ್ತಗೊಳಿಸಿಯೋ ಇರುವ ಸಾಧ್ಯತೆಯನ್ನೂ ನಾನು ಅಲ್ಲಗಳೆಯುತ್ತಿಲ್ಲ. ಅಕಸ್ಮಾತ್ ನಿಮ್ಮ ಮಾತನ್ನು ಅವರು ತಿರುಚಿದ್ದಾರೆಂದರೆ, ನೀವು ಏನು ಹೇಳಿದಿರಿ, ಅವರು ಹೇಗೆ ವರದಿ ಮಾಡಿದ್ದಾರೆ ಎಂಬ ವಿವರಣೆಯನ್ನಾದರೂ ನೀವು ನೀಡಬೇಕಾಗುತ್ತದೆ. ಬದಲಿಗೆ ಸುಮ್ಮನೇ "ತಿರುಚಿದ ವರದಿ" ಎಂದರೆ ಅದಕ್ಕೆ ಅರ್ಥವೇ ಇಲ್ಲ. ನಿಮ್ಮಿಂದ ಆ ಸ್ಪಷ್ಟನೆಯಿಲ್ಲದಿದ್ದರೆ ಪತ್ರಿಕೆಯಲ್ಲಿ ವರದಿಯಾಗಿರುವುದೇ ಯಥಾವತ್ ನಿಮ್ಮ ಮಾತೆಂದು ನಾವು ತಿಳಿಯುವುದು, ಅದನ್ನಾಧರಿಸಿ ಪ್ರತಿಕ್ರಿಯಿಸುವುದು ಸಹಜ. ಮೊನ್ನಿನ ನಿಮ್ಮ ಸಂದರ್ಶನದಲ್ಲಿ ನೀವಾ ಕೆಲಸ ಮಾಡಬಹುದಿತ್ತು, ಅದೇಕೋ ಮಾಡಲಿಲ್ಲ. ಈಗಿನ ನನ್ನ ಈ ಪ್ರತಿಕ್ರಿಯೆಯೂ ಆ ಪತ್ರಿಕಾವರದಿಗಳನ್ನಾಧರಿಸಿದ್ದೇ. ಪತ್ರಿಕಾವರದಿಯ ಪ್ರಕಾರ ನೀವು ಹೇಳಿದ್ದು ಇದು - "ಹಿಂದೀ ನಮ್ಮ ರಾಷ್ಟ್ರಭಾಷೆ. ಇಲ್ಲಿ ಕನ್ನಡ ಹೇಗೋ ಅದೇ ರೀತಿ ಉತ್ತರ ಭಾರತದಲ್ಲಿ ಹಿಂದಿಗೆ ಸ್ಥಾನಮಾನವಿದೆ". ಇದೆಂತಹ ತರ್ಕ ಸ್ವಾಮಿ? ಇಲ್ಲಿ ಕನ್ನಡಕ್ಕೆ ಸ್ಥಾನಮಾನವಿದೆ, ಉತ್ತರದಲ್ಲಿ ಹಿಂದಿಗೆ ಸ್ಥಾನಮಾನವಿದೆ, ಆದ್ದರಿಂದ ಹಿಂದಿ ನಮ್ಮ ರಾಷ್ಟ್ರಭಾಷೆ ಹೇಗೆ? ಅಲ್ಲಿ ಹಿಂದಿಗೆ ಸ್ಥಾನಮಾನವಿದ್ದರೆ ಅದು ಅವರ ನೆಲದ ಭಾಷೆ, ಅದರ ಗೌರವ ಅದಕ್ಕೆ. ಅದು ನಮ್ಮ ರಾಷ್ಟ್ರಭಾಷೆ ಏಕಾದೀತು?
ಆಮೇಲೆ, ಹಿಂದೀಗೆ ಉತ್ತರಭಾರತದಲ್ಲಿ ಸ್ಥಾನಮಾನವಿದೆ ಎಂದಿರಲ್ಲ, ಯಾವ ಹಿಂದೀ ಅದು? ಬ್ರಜಭಾಷೆಯೋ ಅವಧಿಯೋ ಮೈಥಿಲಿಯೋ ಕಡೀಬೋಲೋ ಹರಿಯಾಣವಿಯೋ ರಾಜಾಸ್ತಾನಿಯೋ ಭೋಜ್ಪುರಿಯೋ ಪಂಜಾಬಿಯೋ ಗುಜರಾಥಿಯೋ, ಅಥವಾ ಸಂಸ್ಕೃತದಿಂದ ಯಥೇಚ್ಛವಾಗಿ ಪದಗಳನ್ನು ಎರವಲು ತೆಗೆದುಕೊಂಡು 'ಶುದ್ಧ್ ಹಿಂದೀ'ಎಂದು ಮಾರಲ್ಪಡುತ್ತಿರುವ, ಎಲ್ಲೂ ಯಾರೂ ಉಪಯೋಗಿಸದ 'ರಾಜ್ಭಾಷಾ' ಹಿಂದಿಯೋ? ಈ ಕೊನೆಯ ಹಿಂದೀ, ತಮ್ಮ ರಾಜಕೀಯಬೇಳೆ ಬೇಯಿಸಿಕೊಳ್ಳಲು ಉತ್ತರದ ಹಿಂದೀವಾಲಾಗಳು ಸಂವಿಧಾನಕರ್ತರ ಮೇಲೆ ಒತ್ತಡ ಹೇರಿ, ಸಂವಿಧಾನದ ಮುಖಾಂತರ ಹುಟ್ಟಿಹಾಕಿದ ಹಿಂದೀ ಎಂಬುದನ್ನು ತಿಳಿಯಿರಿ. ಈ ಪ್ರಣಾಳಶಿಶುವಿಗೆ ಭದ್ರವಾದ ಬೇರೇ ಇಲ್ಲ.
ಅದಿರಲಿ, "ಇಂಗ್ಲಿಷ್ ಒಪ್ಪುವ ನಾವು ಹಿಂದೀ ಭಾಷೆಯನ್ನು ಏಕೆ ಒಪ್ಪಿಕೊಳ್ಳಬಾರದು?" ಎಂಬ ಮಾತನ್ನು ನೀವು ಕೇಳಿದಿರಲ್ಲ - ಈಚಿಗೆ ಈ ರೀತಿಯಲ್ಲಿ ಮಾತಾಡುತ್ತಾ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುವ ಕನ್ನಡಿಗಮಂದಿ ಬಹಳವೇ ಹೆಚ್ಚಾಗಿದ್ದಾರೆ ಬಿಡಿ, ಆದರೆ ತಮ್ಮಿಂದ ಆ ಪ್ರಶ್ನೆ ಬಂತಲ್ಲ - ಒಂದು ಕ್ಷಣ ನೀವು ಕನ್ನಡದ ಧ್ವನಿಯೋ ಅಥವಾ ಕನ್ನಡಿಗರ ಕಿವಿಯಿರಿಯುವ ಹಿಂದಿಗರ ಧ್ವನಿಯೋ ಎಂದು ಸಂಶಯವುಂಟಾದದ್ದು ಸುಳ್ಳಲ್ಲ. ಆದರೂ ಈ ಪ್ರಶ್ನೆ ಸ್ವತಃ ನಿಮ್ಮದಲ್ಲದಿರಬಹುದು, ಈಚೀಚಿಗೆ ಎದ್ದಿರುವ "ಇಂಗ್ಲಿಷ್ ಮಾತ್ರ ಏಕೆ ಬೇಕು, ಹಿಂದಿ ಏಕೆ ಬೇಡ" ಎಂಬ ಕೂಗಿಗೆ ನೀವೂ ಮರುಳಾಗಿರಬಹುದು. ಮೊನ್ನಿನ ಸಂದರ್ಶನದಲ್ಲೂ ತಾವು ಅದನ್ನೇ ಸಮರ್ಥಿಸಿಕೊಂಡಿರಿ ಕೂಡ. ಈ ಪ್ರಶ್ನೆ ಬೇರಾರಿಂದಲೋ ಅಲ್ಲ, ನಿಯೋಜಿತ ಸಮ್ಮೇಳನಾಧ್ಯಕ್ಷರಿಂದ ಬಂದಿರುವುದರಿಂದ ಅದಕ್ಕೊಂದು ಸಾರ್ವಜನಿಕತೆಯಿದೆ, ಅದನ್ನು ಉತ್ತರಿಸಬೇಕಾದ್ದು ಕನ್ನಡಿಗನಾಗಿ ನನ್ನ ಕರ್ತವ್ಯವೆಂದು ನಾನು ಭಾವಿಸುತ್ತೇನೆ, ಹೀಗೆ.
ಹಿಂದೀ ಏಕೆ ಒಪ್ಪಿಕೊಳ್ಳಬಾರದು? ಒಪ್ಪಿಕೊಳ್ಳಬಾರದೆಂದು ನಾವಾರೂ ಹೇಳುತ್ತಿಲ್ಲ, ಹಿಂದೀ ಒಂದೇ ಏಕೆ, ತಮಿಳು ತೆಲಗು ಮಲಯಾಳ ಮರಾಠಿ ಗುಜರಾಥಿ ರಾಜಾಸ್ಥಾನಿ ಕಾಶ್ಮೀರಿ ಮೈಥಿಲಿ ಅವಧಿ ಉರ್ದೂ ಎಲ್ಲವನ್ನೂ ಒಪ್ಪೋಣ. ಏಕಲ್ಲ, ಅವೆಲ್ಲವೂ ನಮ್ಮ ಸೋದರಭಾಷೆಗಳೇ. ಒಳ್ಳೆಯದು ಕನ್ನಡದಲ್ಲಿರುವಂತೆ, ಇಂಗ್ಲಿಷಿನಲ್ಲಿರುವಂತೆ ಈ ಭಾಷೆಗಳಲ್ಲೂ ಇವೆ. ನನಗೆ ನೂರು ಭಾಷೆ ಕಲಿಯಲು ಸಾಧ್ಯವಾದರೆ ನನಗೆ ಸಂತೋಷವೇ. ನನ್ನನ್ನೂ ಸೇರಿ ಬಹಳಷ್ಟು ಜನ ಕನ್ನಡಿಗರಿಗೆ ಕನ್ನಡ, ಇಂಗ್ಲಿಷು, ಹಿಂದಿ, ತಮಿಳು, ತೆಲಗು ಈ ಐದು ಭಾಷೆಗಳು ಸಾಕಷ್ಟೇ ಚೆನ್ನಾಗಿ ಬರುತ್ತವೆ. ಕೆಲವರಿಗೆ ಮಲಯಾಳ ಮರಾಠಿಗಳೂ ಸ್ವಲ್ಪ ದೇಶ ಸುತ್ತಿದವರಿಗೆ ಪಂಜಾಬಿ ಬೆಂಗಾಲಿಗಳೂ, ವಿದೇಶವನ್ನೂ ಸುತ್ತಿದವರಿಗೆ ರಶಿಯನ್, ಜರ್ಮನ್, ಫ್ರೆಂಚುಗಳೂ ಬರುವುದುಂಟು (ಅಂದ ಹಾಗೆ ನಮ್ಮ ವಿಶ್ವವಿದ್ಯಾಲಯಗಳಲ್ಲೂ ಫ್ರೆಂಚ್ ಮೊದಲಾದ ವಿದೇಶೀ ಭಾಷೆಗಳನ್ನು ಕಲಿಯುವ ಅವಕಾಶವಿದೆ, ಯಾರೂ ಇದನ್ನು 'ವಿರೋಧಿ'ಸಿ ಗಲಾಟೆ ಮಾಡಿದ್ದಿಲ್ಲ). ಏಕೆಂದರೆ ಹೀಗೆ ಕಲಿತವರು ತಮ್ಮ ಸ್ವಂತ ಆಸಕ್ತಿಯಿಂದ, ಕೆಲವೊಮ್ಮೆ ಅಗತ್ಯಗಳಿಂದ ಕಲಿತವರೇ ಹೊರತು ಯಾರೂ ಅವನ್ನು ತಲೆಯ ಮೇಲೆ ಹೇರಿದ್ದಿಲ್ಲ. ಆ ದೃಷ್ಟಿಯಿಂದ ಹಿಂದಿಯನ್ನು ಒಪ್ಪುವುದರಲ್ಲಿ ನಮಗೆ ಯಾವ ಅಡ್ಡಿಯೂ ಇಲ್ಲ. ಆದರೆ ಇವಾವುದೂ ಹೇರಿಕೆಯೆನಿಸದ್ದು, ಹಿಂದೀ ಮಾತ್ರ ಹೇರಿಕೆಯೇಕಾಗುತ್ತದೆ? ಏಕೆಂದರೆ ನಮ್ಮ ಶಿಕ್ಷಣದಲ್ಲಿ, ದಿನಬಳಕೆಯಲ್ಲಿ, ಆಡಳಿತದ ವ್ಯವಹಾರದಲ್ಲಿ, ಹಿಂದಿಗೆ/ಹಿಂದಿಯವರಿಗೆ ನೀಡುವ (ಇತರರಿಗೆ ನಿರಾಕರಿಸಲಾಗುವ) ವಿಶೇಷ ಸವಲತ್ತುಗಳಲ್ಲಿ ಕೇಂದ್ರಾಡಳಿತವೂ ಅದರ ಬಾಲವಾಗಿರುವ ರಾಜ್ಯಾಡಳಿತಗಳೂ ಹಿಂದಿಯನ್ನು ಗಿಡುಕಿ ಗಿಡುಕಿ ತುಂಬುತ್ತಿರುವುದಕ್ಕೆ, ಮತ್ತದರಿಂದ ನಮ್ಮ ಅನ್ನದ ಅವಕಾಶಗಳು ನಮ್ಮ ಕೈತಪ್ಪಿ ಹಿಂದಿಯವರ ಕೈಗೆ ಸುಲಭವಾಗಿ ಸೇರುತ್ತಿರುವುದಕ್ಕೆ, ಹಿಂದೀ ಹೇರಿಕೆಯೆನ್ನಿಸುವುದು. ನಾವು ಒಪ್ಪಲಾರದ್ದು ಅದನ್ನು.
ಭಾಷೆ ಕಲಿಸಿದರೆ ಅದು ಹೇರಿಕೆ ಹೇಗೆ ಎನ್ನುತ್ತೀರಾ? ಅದು ಕೇವಲ ಒಂದು ಭಾಷೆಯನ್ನು ಕಲಿಯುವ ಅಥವಾ ಬಿಡುವ ವಿಷಯವಲ್ಲ ಸ್ವಾಮಿ. ನಿಮಗಿದು ತಿಳಿಯದೆಂದು ನಾವು ನಂಬಲಾರೆವು, ಆದರೂ ಉದಾಹರಣೆ ಕೊಡುತ್ತೇನೆ. ಯಾವುದೋ ಕೇಂದ್ರಸಂಸ್ಥೆಯ ಉದ್ಯೋಗಪರೀಕ್ಷೆಯಿದೆಯೆಂದುಕೊಳ್ಳಿ - ದೇಶದ ಎಲ್ಲರೂ ಭಾಗವಹಿಸಬಹುದಾದ್ದು. ಎಲ್ಲರಿಗೂ ತೆರೆದ ಪರೀಕ್ಷೆ ಎಂದ ಮೇಲೆ ಅದರಲ್ಲಿ ಗೆಲ್ಲುವ ಅವಕಾಶ ಎಲ್ಲರಿಗೂ ಸಮಾನವಾಗಿರಬೇಕಷ್ಟೇ? ಸಮಾನಾವಕಾಶ ಹೇಗೆ ಬರುತ್ತದೆ? ಪರೀಕ್ಷೆಯನ್ನು ಎಲ್ಲರೂ ಅವರವರ ಭಾಷೆಯಲ್ಲಿ ಎದುರಿಸಲು ಅವಕಾಶ ಮಾಡಿಕೊಡುವುದರಿಂದ. ಆಗ ಏನಾಗುತ್ತದೆ? ಕೆಲಸ/ವಿಷಯ ಬಲ್ಲವನು ಪಾಸಾಗುತ್ತಾನೆ, ಬಾರದವನು ಫೈಲ್ ಆಗುತ್ತಾನೆ. ಹೌದು ತಾನೆ? ಅದು ಸಾಧ್ಯವಿಲ್ಲವೇ? ಬೇಡ, ಪರೀಕ್ಷೆಯನ್ನು ಎಲ್ಲರೂ ಇಂಗ್ಲಿಷಿನಲ್ಲೇ ಬರೆಯಲಿ - ಏಕೆಂದರೆ ಇಂಗ್ಲಿಷ್ ಇಲ್ಲಿನ ಯಾವುದೋ ಒಂದು ಸಮುದಾಯದ ಭಾಷೆಯಲ್ಲ - ಅದು ಎಲ್ಲರಿಗೂ ಸಮಾನದೂರ, ಸಮಾನ ಹತ್ತಿರ. ಇಂಗ್ಲಿಷ್ ಬಲ್ಲವರು ಬರೆದು ಪಾಸಾಗುತ್ತಾರೆ, ಇಂಗ್ಲಿಷ್ ಬರದವರು ಫೈಲ್ ಆಗುತ್ತಾರೆ (ಕೆಲಸ ಗೊತ್ತಿದ್ದೂ ಇಂಗ್ಲಿಷ್ ಬರದವನೂ ಫೈಲ್ ಆಗುತ್ತಾನೆ ಹೌದು, ಅದು ಅನ್ಯಾಯ - ಆದರೆ ಆ ಅನ್ಯಾಯವೂ ಎಲ್ಲ ಭಾಷಿಕರಿಗೂ ಸಮಾನವಾಗಿರುತ್ತದಲ್ಲ - ಅವನು ಕನ್ನಡಿಗನಿರಲಿ, ಹಿಂದಿಯವನಿರಲಿ, ತಮಿಳನಿರಲಿ, ಕಾಶ್ಮೀರಿಯಿರಲಿ). ಇಂಗ್ಲಿಷ್ ಇವರಾರ ಭಾಷೆಯೂ ಅಲ್ಲವಾದ್ದರಿಂದ ಯಾವುದೋ ಒಂದು ಭಾಷಾಸಮುದಾಯಕ್ಕೆ ಅದು ಹೆಚ್ಚುವರಿ ಅನುಕೂಲವನ್ನು ಒದಗಿಸುವುದಿಲ್ಲ. ಸರಿ, ಇದರಿಂದ ಇಂಗ್ಲಿಷ್ ಕಲಿಯದವರಿಗೆ ಅನ್ಯಾಯವಂತೂ ಆಗುತ್ತದಲ್ಲ ಎಂದರೆ, ಅದಕ್ಕೆ ಉಪಾಯವಿಲ್ಲ, ಏಕೆಂದರೆ ನ್ಯಾಯವಾಗಿ ಎಲ್ಲರೂ ಅವರವರ ಭಾಷೆಯಲ್ಲಿ ಬರೆಯುವ ಅವಕಾಶವನ್ನಂತೂ ನೀವು ಕೊಡಲಿಲ್ಲವಲ್ಲ (ಹಾಗಿದ್ದರೆ ಇಂಗ್ಲಿಷೇ ಯಾಕೆ, ಸಂಸ್ಕೃತ ಏಕಲ್ಲ, ಫ್ರೆಂಚ್ ಏಕಲ್ಲ ಇತ್ಯಾದಿ ವಿತಂಡವಾದಗಳೂ ಬಂದದ್ದಿದೆ, ಸದ್ಯಕ್ಕೆ ಅದು ಪಕ್ಕಕಿರಲಿ, ಇಂಗ್ಲಿಷ್ ಏಕೆ ಎನ್ನುವುದನ್ನು ಆಮೇಲೆ ಉತ್ತರಿಸೋಣ). ಈಗ ಇಂಗ್ಲಿಷ್ ಬದಲು ನೀವು ಹಿಂದಿಯಲ್ಲಿ ಬರೆಯಲು ಅವಕಾಶ ಕೊಟ್ಟರೆ ಏನಾಗುತ್ತದೆ? ಮೊದಲಿದ್ದಂತೆ ಕೆಲಸ/ವಿಷಯಜ್ಞಾನವೊಂದೇ ಪಾಸ್/ಫೈಲ್ ಆಗಲು ಮಾನದಂಡವಾಗಿ ಉಳಿಯುವುದಿಲ್ಲ. ಕೆಲಸವೂ ಗೊತ್ತಿದ್ದು ಹಿಂದಿಯೂ ಗೊತ್ತಿದ್ದವನು ಪಾಸ್ ಆಗುತ್ತಾನೆ, ಕೆಲಸ ಗೊತ್ತಿದ್ದೂ ಹಿಂದಿ ಗೊತ್ತಿಲ್ಲದವನು ಫೈಲ್ ಆಗುತ್ತಾನೆ. ಆದರೆ ಅನ್ಯಾಯವೆಂದರೆ, ಹಿಂದಿ ಗೊತ್ತಿಲ್ಲದ ಕನ್ನಡಿಗ ಕೆಲಸದೊಡನೆ ಹಿಂದಿಯನ್ನೂ ಕಲಿತು ಬರಬೇಕಾಗುತ್ತದೆ, ಅದೇ ಹಿಂದಿ ಮಾತೃಭಾಷೆಯಾಗಿರುವವ ಈ ಹೆಚ್ಚುವರಿ ಪ್ರಯತ್ನವಿಲ್ಲದೇ ಕೇವಲ ಕೆಲಸವನ್ನಷ್ಟೇ ಇನ್ನೂ ಚೆನ್ನಾಗಿ ಕಲಿತು ಮೊದಲಿನವನಿಗಿಂತ ಸುಲಭವಾಗಿ ಪಾಸಾಗುತ್ತಾನೆ. ಇದು ಒಂದು ಭಾಷಾಸಮುದಾಯಕ್ಕೆ, ಉಳಿದವರಿಗಿಲ್ಲದ ಹೆಚ್ಚುವರಿ ಸೌಲಭ್ಯ ಕೊಟ್ಟಂತಾಯಿತಷ್ಟೇ? ಇದನ್ನೇ ನೀವು ದೇಶದಾದ್ಯಂತ ಮಾಡಿದಾಗ, ಎಲ್ಲೆಡೆಯೂ ಅವರೇ ವಿಜೃಂಭಿಸುತ್ತಾರೆ. ಹಿಂದಿ ಬರದವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯಾಗುತ್ತದೆ. ಈ ದೇಶ ನಮ್ಮೆಲ್ಲರದೂ ಎಂದ ಮೇಲೆ, ಯಾವುದೋ ಒಂದು ಭಾಷಾಸಮುದಾಯದವರ ಭಾಷೆ ಕಲಿತರಷ್ಟೇ ನಮಗೆ ಬದುಕು ಎನ್ನುವ ಪರಿಸ್ಥಿತಿ ಇರುವುದು ಯಾವ ಸೀಮೆ ನ್ಯಾಯ? ಹಿಂದಿಯ ಬದಲು ಕನ್ನಡದಲ್ಲೇ ಬರೆಯುವ ಅವಕಾಶ ಕೊಡಿ, ಇಂಗ್ಲಿಷೂ ಇರಲಿ. ಉಳಿದವರು ಇದಕ್ಕೆ ಒಪ್ಪುತ್ತಾರಾ? ಬೇಡ, ಕನ್ನಡವನ್ನೇ ರಾಷ್ಟ್ರಭಾಷೆಯೆಂದು ಘೋಷಿಸಿ? ಉಳಿದವರು ಒಪ್ಪುತ್ತಾರಾ? ಇದಕ್ಕೆ ಒಪ್ಪಲಿಲ್ಲವೆಂದ ಮೇಲೆ ಹಿಂದೀ ಏಕೆ?
ಇನ್ನೊಂದು ಉದಾಹರಣೆ ಕೊಡುತ್ತೇನೆ. ಬ್ಯಾಂಕು-ಪೋಸ್ಟಾಫೀಸು. ಇವು ಕೇಂದ್ರಸರ್ಕಾರದ ಆಡಳಿತಕ್ಕೆ ಅಥವಾ ಕೇಂದ್ರಸಂಸ್ಥೆಯ ಮೇಲ್ವಿಚಾರಣೆಗೆ ಒಳಪಟ್ಟುವು. ಆಡಳಿತ ನಿಮ್ಮದಿರಬಹುದು, ಆದರೆ ಅದನ್ನು ಬಳಸುವವರು ನಾವಷ್ಟೇ? ಈ ನೆಲದ ಜನ. ಎಂದ ಮೇಲೆ ನಮ್ಮ ಜೊತೆ ವ್ಯವಹಾರ ಮಾಡಲು ನೀವು ಯಾವ ಭಾಷೆ ಬಳಸಬೇಕು? ನಮ್ಮ ಭಾಷೆಯನ್ನೋ ನಿಮ್ಮ ಭಾಷೆಯನ್ನೋ? ಸಂಪರ್ಕಭಾಷೆ ಇಂಗ್ಲಿಷಿದೆ (ಇಂಗ್ಲಿಷ್ ಏಕೆ ಎನ್ನುವ ಪ್ರಶ್ನೆಯನ್ನು ಸ್ವಲ್ಪ ತಡೆದಿಟ್ಟುಕೊಳ್ಳಿ ಸದ್ಯಕ್ಕೆ, ಆಮೇಲೆ ಅದನ್ನು ನೋಡುವಾ), ಕೇಂದ್ರದ ಭಾಷೆ ಹಿಂದಿ ಇದೆ (ಅದು ಹಿಂದಿ ಏಕಾಗಬೇಕೋ, ಇರಲಿ ಸದ್ಯಕ್ಕೆ ಅದನ್ನೂ ಒಪ್ಪುವಾ), ಈ ನೆಲದ ವ್ಯವಹಾರದ ಭಾಷೆ ಕನ್ನಡ ಇದೆ. ಕಾಲದಿಂದಲೂ ಈ ಸಂಸ್ಥೆಗಳ ಎಲ್ಲಾ ಫಾರ್ಮುಗಳಲ್ಲಿ ಈ ಮೂರೂ ಭಾಷೆಗಳೂ ಇರುತ್ತಿದ್ದುವು. ಆಮೇಲೆ ನೋಡಿದರೆ ಇದ್ದಕ್ಕಿದ್ದಂತೆ ಕನ್ನಡವೇ ಮಾಯ! ಕನ್ನಡ ಬಿಟ್ಟು ಬೇರೇನೂ ಬಾರದ ಹಳ್ಳಿಯ ಅರ್ಜಿ ತುಂಬ ಬೇಕಾದರೆ ಏನು ಮಾಡಬೇಕು? ನಿಮ್ಮ ಹಿಂದೀ ಹುಸಿ ರಾಷ್ಟ್ರೀಯತೆಗೆ ಬಲಿಯಾಗಬೇಕೇ? ಅಥವಾ ಯಾವುದೋ ಮೂಲೆ ಕೊಂಪೆಯಲ್ಲಿದ್ದು, ಜೀವನದಲ್ಲಿ ಹೊರಗೆಲ್ಲೂ ಹೋಗುವ ಅಗತ್ಯವೇ ಇಲ್ಲದಿದ್ದರೂ ನೀವು ಕೊಡುವ ಬ್ಯಾಂಕ್ 'ಸೇವೆ'ಯನ್ನು ಸ್ವೀಕರಿಸುವುದಕ್ಕೋಸ್ಕರ ನಿಮ್ಮ ಭಾಷೆ ಕಲಿಯಬೇಕೇ? ಬೇಡ, ನಮಗೆ ನಿಮ್ಮ ಬ್ಯಾಂಕೇ ಬೇಡ, ಅದನ್ನು ರಾಜ್ಯಾಡಳಿತಕ್ಕೆ ಕೊಡಿ, ಪೋಸ್ಟಾಫೀಸನ್ನು ರಾಜ್ಯಾಡಳಿತಕ್ಕೆ ಕೊಡಿ, ರಾಜ್ಯ ನಮ್ಮೊಡನೆ ಕನ್ನಡದಲ್ಲೇ ವ್ಯವಹರಿಸಲಿ, ಆದೀತೇ? ಕನ್ನಡದ ಪ್ರಜೆಯೊಬ್ಬನಿಗೆ ಹಿಂದಿ ಬರುತ್ತದೆಂದು, ಹಿಂದಿ ಬರಲೇಬೇಕೆಂದು ನೀವು ನಿರೀಕ್ಷಿಸುವುದಾದರೂ ಯಾವ ಆಧಾರದ ಮೇಲೆ? ಇನ್ನು ಈ ಬ್ಯಾಂಕಿಂಗ್ ಪರೀಕ್ಷೆಗಳಲ್ಲೂ ಮೇಲಿನದೇ ಗೋಳು. ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಉತ್ತರಿಸಬಹುದು, ನೋಡಿದರೆ ಎಲ್ಲೆಲ್ಲೂ ಹಿಂದಿಯವರೇ! ಇವರಂತೂ ನಾವು ಇಂಗ್ಲಿಷಿನಲ್ಲಿ ಮಾತಾಡಿದರೂ ಮುಖಮುಖ ನೋಡುತ್ತಾರೆ, ಕನ್ನಡದಲ್ಲಿ ಮಾತಾಡಿದರೆ ನಾಯಿಯಂತೆ ನಡೆಸಿಕೊಳ್ಳುತ್ತಾರೆ. ಇದಂತೂ ನಾವು ದಿನಬೆಳಗಾದರೆ ನೋಡುತ್ತಿರುವ ವಾಸ್ತವವೇ ಆಗಿಬಿಟ್ಟಿವೆ ಈಗ. ಹಿಂದಿ ಏಕೆ ಒಪ್ಪಬಾರದು ಎನ್ನುವುದಕ್ಕೆ ಕಾರಣ ತಿಳಿಯಿತೇ ಈಗಾದರೂ? ಮೊದಲಾದರೆ, ಸ್ವಲ್ಪ ಇಂಗ್ಲಿಷಾದರೂ ಗೊತ್ತಿದ್ದರೆ ಹೇಗೋ ಎಲ್ಲಾದರೂ ಬಚಾಯಿಸಿಕೊಳ್ಳಬಹುದೆನ್ನುವ ಸ್ಥಿತಿಯಿತ್ತು - ಮತ್ತು ಇದು ಭಾರತದಾದ್ಯಂತ ಎಲ್ಲ ಭಾಷಿಕರಿಗೂ ಒಂದೇ ಆದ ಸ್ಥಿತಿಯಾಗಿತ್ತು. ಆದರೆ ನಿಮ್ಮ ಹಿಂದೀ ಪ್ರಭುವಿಗೆ, ಈ ಇಂಗ್ಲಿಷನ್ನಾದರೂ ಏಕೆ ಕಲಿಯಬೇಕು ಎನ್ನುವ ಸೋಮಾರಿತನ. ಒಂದು ಹೆಚ್ಚುವರಿ ಭಾಷೆಯನ್ನೂ ಕಲಿಯದೇ ಕೇಂದ್ರಸರ್ಕಾರಗಳ ಉದ್ಯೋಗ ತನ್ನ ತಟ್ಟೆಗೆ ಬೀಳಬೇಕೆಂಬ ಧೋರಣೆ. ಅವನಿಗಾದರೆ ಕೆಲಸ ಬಂದರೆ ಸಾಕು, ಇನ್ನೊಂದೇ ಒಂದು ಹೆಚ್ಚುವರಿ ಪ್ರಯತ್ನವಿಲ್ಲದೇ ಕೆಲಸವು ಅವನ ಬುಟ್ಟಿಗೆ ಬೀಳುವುದು. ಆದರೆ ಇದೇ ಕೆಲಸಕ್ಕೆ ಕನ್ನಡಿಗರು ಪ್ರಯತ್ನಿಸಬೇಕಾದರೆ ಅವರು ಹಿಂದಿಯನ್ನಾದರೂ ಕಲಿಯಲೇ ಬೇಕು, ಹಿಂದಿಯೇ ಮಾತೃಭಾಷೆಯಾಗಿರುವವರೊಡನೆ (ಜೊತೆಗೆ ಹಿಂದಿಗರ ಸ್ವಜನಪಕ್ಷಪಾತದೊಡನೆ) ಪೈಪೋಟಿ ಮಾಡಬೇಕು! ಈಗಂತೂ ಖಾಸಗೀ ಬಹುರಾಷ್ಟ್ರೀಯ ಕಂಪನಿಗಳಲ್ಲೂ ಹಿಂದಿಗರದ್ದೇ ಹಾವಳಿ, ಸ್ವಜನಪಕ್ಷಪಾತ. ಎಲ್ಲರೂ ಬೆಂಗಳೂರಿಗೆ ದಾಳಿಯಿಡುವರೇ (ನಾನು ಅವರನ್ನು ಟೀಕಿಸುತ್ತಿಲ್ಲ, ಹಾಗಾಗಲು ಅವಕಾಶ ಮಾಡಿಕೊಟ್ತ ವ್ಯವಸ್ಥೆಯನ್ನು ಟೀಕಿಸುತ್ತಿದ್ದೇನೆ), ಕಂಪನಿಗಳಲ್ಲಿ, ಅಂಗಡಿಯಲ್ಲಿ, ಮಾಲ್ ಗಳಲ್ಲಿ, ಅಪಾರ್ಟ್ಮೆಂಟುಗಳಲ್ಲಿ ಎಲ್ಲ ಕಡೆಯೂ ಅವರೇ. ಅವರ ಸೇವೆಗಾಗಿ ಅವರ ಭಾಷೆಯನ್ನೇ ಮಾತಾಡುವ ವಾಚ್ಮನ್ನುಗಳು, ಡೆಲಿವರಿ ಬಾಯ್ ಗಳು ಎಲ್ಲರೂ ಉತ್ತರದಿಂದಲೇ ಅಮದಾಗಬೇಕು. ಹಿಂದೀ ಕಲಿಕೆಯೆನ್ನುವುದು ಕೇವಲ ಒಂದು ಭಾಷೆಯ ಕಲಿಕೆಗೆ ಸಂಬಂಧಿಸಿದ್ದಲ್ಲ ಎಂಬುದು ಅರ್ಥವಾಯಿತೇ? ಬೇಡ, ನಾವೂ ಯಾವ ಭಾಷೆಯನ್ನೂ ಕಲಿಯುವುದಿಲ್ಲ, ಕೆಲಸ ಬಂದರಾಯಿತೋ ಇಲ್ಲವೋ? ನಮಗೂ ಕನ್ನಡದಲ್ಲೇ ಪರೀಕ್ಷೆ ಬರೆಸಿ ಬ್ಯಾಂಕ್ ಕೆಲಸ ಕೊಡಿ. ಆಗುತ್ತದೆಯೋ? ಆಗುವುದಿಲ್ಲವೆಂದ ಮೇಲೆ ಹಿಂದಿಯ ಪುಂಗಿ ಬಂದ್ ಆಗಲಿ.
ಈಗ ಬಹುಚರ್ಚಿತ ಪ್ರಶ್ನೆ, ಗಲಭೆಯೆಬ್ಬಿಸಿ ಆ ಗಲಭೆಯ ನಡುವೆ ಹಿಂದಿಯನ್ನು ತೂರಿಸುವುದಕ್ಕಾಗಿಯೇ ಎಬ್ಬಿಸಿದ ಪ್ರಶ್ನೆ "ಗುಲಾಮಗಿರಿಯ ಸಂಕೇತವಾದ ಇಂಗ್ಲಿಷ್ ಮಾತ್ರ ಬೇಕು ನಮ್ಮದೇ ಭಾಷೆಯಾದ ಹಿಂದಿ ಏಕೆ ಬೇಡ". ನನಗೇನೋ ಇಂಗ್ಲಿಷ್ ಬೇಡ ಸ್ವಾಮಿ, ನನ್ನ ಮಗನನ್ನು ಒಂದು ಹಂತದವರೆಗೂ ಕನ್ನಡಮಾಧ್ಯಮದಲ್ಲೇ ಓದಿಸಿದ್ದೇನೆ (ಪಠ್ಯಪುಸ್ತಕದಲ್ಲಿ ಯಾರಿಗೂ ಅರ್ಥವಾಗದ, ಇತ್ತ ಕನ್ನಡವೂ ಅಲ್ಲದ, ಅತ್ತ ಸಂಸ್ಕೃತವೂ ಅಲ್ಲದ, ಇತ್ತ ಇಂಗ್ಲಿಷೂ ಅಲ್ಲದ ದರಿದ್ರಭಾಷೆಯಿದ್ದಾಗ್ಯೂ). ಆದ್ದರಿಂದ ತಾವೊಂದು ಸವಾಲನ್ನು ಸ್ವೀಕರಿಸಿ. ರಾಜ್ಯದ ಇಂಗ್ಲಿಷ್ ಶಾಲೆಗಳನ್ನೆಲ್ಲ ಮುಚ್ಚಿಸಿಬಿಡಿ. ಇಂಗ್ಲಿಷ್ ಮಾಧ್ಯಮ ಬೇಡ. ಅಷ್ಟೇಕೆ, ಪಠ್ಯಕ್ರಮದಿಂದ ಇಂಗ್ಲಿಷ್ ಭಾಷೆಯನ್ನೇ ಕಿತ್ತೊಗೆದುಬಿಡಿ - ಆದರೆ ನಾಲ್ಕೇ ಶರತ್ತು:
- ರಾಜ್ಯದ ಎಲ್ಲ ಪಠ್ಯಪುಸ್ತಕಗಳನ್ನೂ ಪರಿಶೋಧಿಸಿ, ಕೊನೆಯಪಕ್ಷ ಈಗ್ಗೆ ನಲವತ್ತು ವರ್ಷಗಳ ಹಿಂದೆ ಎಷ್ಟು ಶುದ್ಧವಿತ್ತೋ ಅಷ್ಟೇ ಶುದ್ಧ ಭಾಷೆಯಲ್ಲಿ, ಮಕ್ಕಳಿಗೆ ಸರಳವಾಗಿ ಅರ್ಥವಾಗುವಂತೆ ಪಠ್ಯಗಳನ್ನು ಬರೆಸಬೇಕು.
- ಹದಿನೈದು ವರ್ಷದ ಸಂಪೂರ್ಣ ಕನ್ನಡಮಾಧ್ಯಮದ ವಿದ್ಯಾಭ್ಯಾಸವಾದ ಮೇಲೆ ಅವರು ಕೆಲಸಕ್ಕೆ ಸೇರಬೇಕೆಂದರೆ ಅವರ ವಿದ್ಯಾರ್ಹತೆಗೆ ತಕ್ಕ ಕೆಲಸದ ಖಾತ್ರಿ ನೀವು ನೀಡಬೇಕು - ಸರ್ಕಾರೀ ಸಂಸ್ಥೆಯಲ್ಲಾಗಲಿ ಖಾಸಗಿಯಲ್ಲಾಗಲಿ (ಕನ್ನಡದಲ್ಲಿ ಓದಿದವರೆಂಬ ರಿಯಾಯಿತಿಯೇನೂ ಬೇಡ - ಈಗಿನಂತೆಯೇ ಅವರ ಯೋಗ್ಯತೆ ನೋಡಿಯೇ ಕೆಲಸ ಕೊಡಲಿ (ಸರ್ಕಾರದ ಕೆಲಸಗಳು ಯೋಗ್ಯತೆಯ ಮೇಲೆ ಸಿಗುವುದು ನಿಂತು ಯಾವುದೋ ಕಾಲವಾಯಿತು, ಅದಿರಲಿ). ಆದರೆ ಕನ್ನಡದಲ್ಲಿ ಓದಿದರೆಂಬ ಕಾರಣಕ್ಕೆ ಕೆಲಸ ಸಿಗದಿದ್ದರೆ ಮಾತ್ರ ಅದರ ಹೊಣೆ ನಿಮ್ಮದು.
- ಹದಿನೈದು ವರ್ಷದ ಸಂಪೂರ್ಣ ಕನ್ನಡಮಾಧ್ಯಮದ ವಿದ್ಯಾಭ್ಯಾಸವಾದ ಮೇಲೆ ಅವರು ಓದು ಮುಂದುವರೆಸಬೇಕೆಂದರೆ ಉನ್ನತವಿದ್ಯಾಭ್ಯಾಸಕ್ಕೆ ರಾಷ್ಟ್ರೀಯ/ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ನೀವು ಪ್ರವೇಶ ಕೊಡಿಸಬೇಕು. ಕನ್ನಡದಲ್ಲಿ ಓದಿದ ಮಕ್ಕಳೆಂಬ ರಿಯಾಯಿತಿಯೇನು ಬೇಡ - ಈಗ ಮಾಡುವಂತೆಯೇ, ಅವರ ಅಂಕ ಯೋಗ್ಯತೆ ನೋಡಿಯೇ ಪ್ರವೇಶ ಕೊಡಲಿ. ಆದರೆ ಕನ್ನಡದಲ್ಲಿ ಓದಿದರೆಂಬ ಕಾರಣಕ್ಕೆ ಪ್ರವೇಶ ಸಿಗದಿದ್ದರೆ ಮಾತ್ರ ಅದರ ಹೊಣೆ ನಿಮ್ಮದು.
- ಬರೆದುಕೊಡುತ್ತೇನೆ, ಅಲ್ಲಿ ಉನ್ನತಶಿಕ್ಷಣದ ಭಾಷೆ ಇಂಗ್ಲಿಷೇ ಇರುತ್ತದೆ (ನಿಮ್ಮ ಹಿಂದಿಯೂ ಅಲ್ಲ). ಆಗ ನಮ್ಮ ಮಕ್ಕಳು ಓದಿದ ಈ ಭಾಷೆಯಿಂದ ಆ ಭಾಷೆಗೆ ದಾಟಿಕೊಳ್ಳುವುದಕ್ಕೆ ಸಕಲ ಸಹಾಯವನ್ನೂ ನೀವು ಒದಗಿಸಿ ಕೊಡಬೇಕು. ಕನ್ನಡದಲ್ಲಿ ಓದಿದರೆಂಬ ಕಾರಣಕ್ಕೆ ಅವರಿಗೆ ಯಾವ ತೊಂದರೆಯೂ ಆಗಬಾರದು.
ಇದು ಸಾಧ್ಯವಿಲ್ಲವೇ? ಹಾಗಿದ್ದರೆ ಇಂಗ್ಲಿಷ್ ಗುಮ್ಮ ತೋರಿಸುವುದನ್ನು ನಿಲ್ಲಿಸಿ, ಜನ ಇಂಗ್ಲಿಷ್ ಶಾಲೆಗಳಿಗೆ ಏಕೆ ಹೋಗುತ್ತಾರೆಂಬುದನ್ನು ಅರ್ಥ ಮಾಡಿಕೊಳ್ಳಿ, ಅದು ಗುಮ್ಮನೆಂದು ಗೊತ್ತಿದ್ದೂ ಅನಿವಾರ್ಯವಾಗಿ ಅದರ ಜೊತೆ ಬದುಕುತ್ತಿದ್ದೇವೆ, ಹಿಂದಿಯೊಡನೆ ಆ ಬಾಳಾಟದ ಅಗತ್ಯ ನಮಗಿಲ್ಲ. ಅಥವಾ ಬೇಡ, ಇಂಗ್ಲಿಷಿನ ಜಾಗೆಯಲ್ಲಿ ಹಿಂದಿಯೇ ಬಂದು ಕೂರಲಿ, ಇಂಗ್ಲಿಷ್ ಶಾಲೆಗಳನ್ನೆಲ್ಲ ಮುಚ್ಚಿಸಿ ಹಿಂದೀ ಶಾಲೆಗಳನ್ನೇ ತೆರೆಯಿರಿ (ಮೇಲ್ಕಂಡ ನಾಲ್ಕೂ ಶರತ್ತುಗಳನ್ನೂ ಪೂರೈಸುವುದಾದರೆ). ಕುವೆಂಪು ಇಂಗ್ಲಿಷನ್ನು ಕನ್ನಡದ ಮಕ್ಕಳ ಪಾಲಿನ ಪೂತನಿಯೆಂದು ಕರೆದರು. ಇರಲಿ, ನಾವು ಉಣಬೇಕಾದ್ದು ಪೂತನಿಯ ಮೊಲೆವಾಲನ್ನೇ ಎಂದು ಖಾತ್ರಿಯಿದ್ದ ಮೇಲೆ ನಮಗೆ ಇಂಗ್ಲಿಷ್ ಪೂತನಿಯ ಹಾಲಾದರೇನು ಹಿಂದೀ ಪೂತನಿಯ ಹಾಲಾದರೇನು? ಹೇಳಿ, ಇಂಗ್ಲಿಷ್ ಕೊಡುವುದಷ್ಟನ್ನೂ ಹಿಂದಿಯಿಂದ ಕೊಡಿಸುವಿರಾ? ಸತ್ಯವಾದ ಮಾತು ಏನೆಂದು ಗೊತ್ತೇ? ಇಂಗ್ಲಿಷಿನ ಪೂತನಿ ವಿಷದ ಹಾಲೂಡಿ ಕೊಲ್ಲುತ್ತಾಳೆ. ಆದರೆ ಈಕೆಯಿದ್ದಾಳಲ್ಲ, ಅವಳ ಬಳಿ ಊಡಲು ಹಾಲೇ ಇಲ್ಲ, ಅಸಲಿಗೆ ಮೊಲೆಯೇ ಇಲ್ಲ. ಬದಲಿಗೆ ಮಕ್ಕಳನ್ನು ಹರಿದು ತಿನ್ನುವ ಬಾಯಷ್ಟೇ ಇರುವುದು. ಈಕೆಯನ್ನು ತಾಟಕಿಯೆನ್ನುವುದೇ ಸರಿಯೇನೋ. ಇರಲಿ, ನಾನು ಹಾಗೆನ್ನಲಾರೆ, ಏಕೆಂದರೆ ನನಗೆ ಇಂಗ್ಲಿಷಿನ ಬಗೆಗಾಗಲೀ ಹಿಂದೀ ಬಗೆಗಾಗಲೀ ದ್ವೇಷವಿಲ್ಲ. ಅದನ್ನು ಮುಂದೊತ್ತಿ ಬೇಳೆ ಬೇಯಿಸಿಕೊಳ್ಳುವವರು ಮಾಡುವ ಉಪದ್ವ್ಯಾಪಗಳಿಗೆ ಭಾಷೆಯನ್ನೇಕೆ ದೂರುವುದು. ಅಲಂಕಾರದ ಮಾತು ಬೇಡ, ನೇರವಾದ ಮಾತಿನಲ್ಲಿ ಹೇಳುತ್ತೇನೆ. ಜನ ಉತ್ತಮ ಉದ್ಯೋಗಾವಕಾಶಗಳಿಗಾಗಿ ಇಂಗ್ಲಿಷ್ ಕಲಿಯುತ್ತಾರೆಯೇ ಹೊರತು ಯಾವುದೋ ಹೇರಿಕೆಯಿಂದಲ್ಲ (ಕನ್ನಡಕ್ಕೆ ಸದ್ಯದಲ್ಲಿ ಆ ಶಕ್ತಿಯಿಲ್ಲ ಎನ್ನುವುದೇ ನಮ್ಮ ಅಳಲಾಗಿದೆ - ಅದು ಕನ್ನಡದ ನಿಶ್ಶಕ್ತಿಯಲ್ಲ, ಕನ್ನಡಿಗರ ಅಸಹಾಯಕತೆ ಸದ್ಯಕ್ಕೆ), ಆದರೆ ಏನು ಕಂಡು ಜನ ಹಿಂದೀ ಕಲಿಯಲು ಹೋಗಬೇಕು? ಬದಲಿಗೆ ಹಿಂದೀ ಮಂದಿಯೇ ನಮ್ಮಲ್ಲಿಗೆ ಬಂದು ನಮ್ಮ ಉದ್ಯೋಗಾವಕಾಶಗಳನ್ನು ಕಬಳಿಸುತ್ತಿದ್ದಾರೆ! ಆ ಅವಕಾಶಗಳನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಲು ನಾವು ಹಿಂದೀ ಕಲಿತು ಅವರೊಡನೆ ಪೈಪೋಟಿ ಮಾಡಬೇಕೇನು? ಕಲಿಯುವುದಾದರೆ, ನಮ್ಮೊಡನೆ ಬದುಕಿ ಬಾಳಲು ಅವರು ಕನ್ನಡ ಕಲಿಯಬೇಕು. ಅವರ "ಭಯ್ಯಾ, ಏಕ್ ಮಸಾಲಾ ಡೋಸಾ ದೇನಾ, ಏಕ್ ಈಡ್ಲೀ ಔರ್ ವಡಾ ದೇನಾ"ಗಳನ್ನು ಅರಿತು ಅವರ ಸೇವೆ ಮಾಡುವುದಕ್ಕೋಸ್ಕರ ನಾವೇಕೆ ಹಿಂದೀ ಕಲಿಯಬೇಕು?
ಈಗ ಇಂಗ್ಲಿಷ್ ಅಷ್ಟೊಂದು ಪ್ರತಿರೋಧವಿಲ್ಲದೇ ಇಲ್ಲೇಕೆ ನೆಲೆಯೂರಿತು, ಹಿಂದಿಗೇಕೆ ಪ್ರತಿರೋಧ ಎಂಬುದನ್ನಷ್ಟು ವಿವರಿಸುತ್ತೇನೆ. ಇಂಗ್ಲಿಷರ ಬರುವಿಕೆಗೆ ಮುಂದೆ ನಾವು ನಮ್ಮಷ್ಟಕ್ಕೆ ನಮ್ಮ ಕಸುಬು ಮಾಡಿಕೊಂಡಿದ್ದೆವು, ಹೌದಲ್ಲೋ? ಆಮೇಲೆ ಇಂಗ್ಲಿಷರು ಬಂದರು, ನಿಧಾನಕ್ಕೆ ನೆಲೆಯೂರಿದರು. ಬಂದವರೇನು ಹಿಂದಿಯವರಂತೆ "ರಾಷ್ಟ್ರೀಯತೆ"ಯ ಸೋಗಿನಲ್ಲಿ ಕನ್ನಡವನ್ನು ಬೀಳುಗಳೆಯುವ ಅವಿವೇಕ ಮಾಡಲಿಲ್ಲ. ಅವರ ಉದ್ದೇಶ ಎರಡು - ಒಂದು ಇಲ್ಲಿ ತಳವೂರಿ ಆಡಳಿತ ನಡೆಸುವುದು, ಇನ್ನೊಂದು, ಕ್ರೈಸ್ತಧರ್ಮವನ್ನು ಹರಡುವುದು. ಈ ಕೆಲಸ ಸುಸೂತ್ರವಾಗಿ ಆಗಬೇಕೆಂದರೆ ಇಲ್ಲಿಯ ಭಾಷೆ ಕಲಿಯುವುದರ ಅಗತ್ಯ ಮನಗಂಡರು, ದೇಶಭಾಷೆಗಳನ್ನು ಕಲಿತರು. ಅನೇಕ ಆಂಗ್ಲಮಹನೀಯರು ದೇಶೀಯ ನುಡಿಗಳಿಗೆ ಸಲ್ಲಿಸಿದ ಕೊಡುಗೆ ಅಪಾರ (ಅದರಿಂದ ಅವರು ಮಾಡಿದ ಹಾನಿಯೂ ಅಪಾರ, ಇರಲಿ, ಅದಕ್ಕೇ ಕುವೆಂಪು ಇಂಗ್ಲಿಷನ್ನು ನಮ್ಮ ಪಾಲಿನ ಪೂತನಿ ಎಂದದ್ದು). ಇದೊಂದು ಹಂತ. ತಮ್ಮ ಆಡಳಿತ ವ್ಯಾಪಾರ ವಹಿವಾಟು ನಡೆಸಬೇಕಾದರೆ ಅವರಿಗೆ ನಿಷ್ಠೆಯಿಂದಿದ್ದು ಅವರೊಡನೆ ಅವರದೇ ಭಾಷೆಯಲ್ಲಿ ಸಂವಹನ ನಡೆಸುವ, ಅವರ ಲೆಕ್ಕ ವ್ಯವಹಾರ ಆಡಳಿತವನ್ನು ನೋಡಿಕೊಳ್ಳುವ ಕೆಲಸಗಾರರ ಸೈನ್ಯ ಅವರಿಗೆ ಅಗತ್ಯವಿತ್ತು (ಹಾಗೆಯೇ ಜನರ ತಲೆ ತಿರುಗಿಸಿ, ಇಲ್ಲಿನದೆಲ್ಲ ಕೀಳು ಎಂಬ ಭಾವನೆಯನ್ನು ಬಿತ್ತಿ, ಮತಾಂತರ ಮಾಡುವ ಅಗತ್ಯ ಕೂಡ). ಅದಕ್ಕಾಗಿ ಅವರು ಇಂಗ್ಲಿಷ್ ಶಾಲೆಗಳನ್ನು ತೆರೆದರು, ಇಂಗ್ಲಿಷ್ ಕಲಿಸಿ ತಮಗೆ ಬೇಕಾದ ಕಾರಕೂನರ ಪಡೆಯನ್ನು ತಯಾರಿಸಿಕೊಳ್ಳತೊಡಗಿದರು, ಅವರು ಕೊಡುವುದು ಒಳ್ಳೆಯ 'ಕೆಲಸ' ಎಂದು ಪರಿಗಣಿತವಾಯಿತು, ಒಳ್ಳೆಯ ಕೆಲಸ, ಕೈತುಂಬಾ ಸಂಬಳ. ಜನ ತಾವಾಗೇ ದೇಸೀ ಕಸುಬುಗಳನ್ನು ಬಿಟ್ಟು ಕೆಲಸ-ಹಣ ಸಿಗುವೆಡೆಗೆ ದೌಡಾಯಿಸತೊಡಗಿದರು. ಹೀಗೆ ಸರ್ಕಾರೀ ಕೆಲಸವೆಂಬುದು ಪ್ರತಿಷ್ಠೆಯ ಮಾತಾಗತೊಡಗಿತು. ಕೊನೆಗೆ ಇಂಗ್ಲಿಷರು ದೇಶ ಬಿಟ್ಟು ಹೋಗುವ ಹೊತ್ತಿಗೆ ಸರ್ಕಾರೀ ಕೆಲಸವೆನ್ನುವುದು ಬಹುಜನರ ಬಹುದೊಡ್ಡ ಕನಸಾಗಿತ್ತು. ಅವರೇನೋ ಹೋದರು, ಪ್ರಜಾಪ್ರಭುವಿನ ಕೈಗೆ ಆಡಳಿತ ಬಂದಮೇಲೆ ಆಡಳಿತದ ಭಾಷೆಯೂ ನಮ್ಮನಮ್ಮ ಭಾಷೆಯಾಗಬೇಕಿತ್ತಷ್ಟೇ? ಆದರೆ ಭಾರತದಂತಹ ಅಗಾಧ ದೇಶ ಶತಮಾನಗಳ ಕಾಲ ಇಂಗ್ಲಿಷರ ಆಡಳಿತದಲ್ಲಿದ್ದಾಗ ಸಹಜವಾಗಿಯೇ ಇಂಗ್ಲಿಷ್ ಆಡಳಿತಭಾಷೆಯಾಗಿತ್ತು. ಮತ್ತು ಇಡೀ ದೇಶ ಇಂಗ್ಲಿಷರ ಆಡಳಿತದಲ್ಲಿದ್ದುದರಿಂದ ಬಹುಸುಲಭವಾಗಿ ಇಂಗ್ಲಿಷ್ ಸಂಪರ್ಕಭಾಷೆಯೂ ಆಗಿತ್ತು. ಅವರನಂತರ ಬಂದ ಭಾರತೀಯ ಆಡಳಿತಗಾರರೂ ಬಂದರು. ಆಡಳಿತಗಾರರು ರಾತ್ರೋರಾತ್ರೆ ಬದಲಾಗಬಹುದು, ಆದರೆ ಶತಮಾನಗಳಿಂದ ಬಂದ ವ್ಯವಸ್ಥೆ ರಾತ್ರೋರಾತ್ರೆ ಬದಲಾಗುವುದಿಲ್ಲವಷ್ಟೇ? ಕಾರಣವೂ ಇಲ್ಲದ ಬದಲಾವಣೆಯಾದರೂ ಏಕೆ ಬೇಕು. ಹೊಸ ಆಡಳಿತಗಾರರೂ ಇಂಗ್ಲಿಷ್ ಬಲ್ಲವರೇ ಆದ್ದರಿಂದ ರಾಜ್ಯರಾಜ್ಯಗಳ ನಡುವಣ ಸಂವಹನಕ್ಕೆ ಈಗಾಗಲೇ ಸಂಪರ್ಕಭಾಷೆಯಾಗಿ ಭದ್ರವಾಗಿ ನೆಲೆಯೂರಿದ್ದ ಇಂಗ್ಲಿಷೇ ಮುಂದುವರೆಯಬೇಕಾದ್ದು ಸರಳ, ಸಹಜ ಹಾಗೂ ವಿವೇಕದ ಮಾರ್ಗ. ಅಲ್ಲದೇ ಆಮೇಲೆ ಅಭಿವೃದ್ಧಿಯಾದ ವ್ಯಾಪಾರ ವ್ಯವಹಾರಗಳೆಲ್ಲಾ ಈಗಾಗಲೇ ಬಲವಾಗಿ ಬೇರೂರಿದ್ದ ಇಂಗ್ಲಿಷಿನಲ್ಲಿ ಸರಾಗವಾಗಿ ನಡೆಯುತ್ತಿತ್ತು. ಪ್ರಪಂಚದ ಹಲವು ದೇಶಗಳಲ್ಲಿ ಕಾಲನಿಗಳನ್ನು ಹೊಂದಿದ್ದ ಇಂಗ್ಲಿಷ್ ಸಹಜವಾಗಿಯೇ ಅಂತಾರಾಷ್ಟ್ರೀಯ ಭಾಷೆಯಾಗಿ ಸಹ ಬೆಳೆದಿತ್ತು. ಹೊರರಾಷ್ಟ್ರಗಳ ಕಂಪನಿಗಳೂ ಇಲ್ಲಿಗೆ ಕಾಲಿಟ್ಟಮೇಲಂತೂ ಇಂಗ್ಲಿಷ್ ಇದ್ದುದರಿಂದ ವ್ಯವಹಾರ ಸಲೀಸಾಯಿತು. ಯಾರೂ ಇದು ಬೇಡ ಎನ್ನಲಿಲ್ಲ, ಎನ್ನುವಂತೆಯೂ ಇರಲಿಲ್ಲ - ಇಂಗ್ಲಿಷನ್ನು ಬೇಡವೆಂದು ಅವಕಾಶದಿಂದ ಯಾರು ವಂಚಿತರಾಗುತ್ತಾರೆ? ಹೀಗೆ ಇಂಗ್ಲಿಷ್ ಆಡಳಿತ ಕೊಡಮಾಡಿದ ಅವಕಾಶಗಳು, ಅದರಿಂದ ಇಂಗ್ಲಿಷಿಗೆ ಸಿಕ್ಕ ವಿಪರೀತಪ್ರಾಮಖ್ಯ ದೇಶಭಾಷೆಗಳ ಕತ್ತು ಹಿಸುಕತೊಡಗಿತೇ ಹೊರತು, ಇಲ್ಲಿನ ಭಾಷೆಗಳ ಕತ್ತು ಹಿಸುಕಿ ಯಾರೂ ಇಂಗ್ಲಿಷನ್ನು ಹೇರಿದ್ದಲ್ಲ. ಆದ್ದರಿಂದ ಈಗಾಗಲೇ ದೇಶದಾದ್ಯಂತ ಸಂಪರ್ಕಭಾಷೆಯಾಗಿ ಇಂಗ್ಲಿಷ್ ಬೆಳೆದು ಬಂದಿದೆಯೆಂಬ ವಾಸ್ತವವನ್ನೊಪ್ಪಿ, ಕೇವಲ ಸರ್ಕಾರ ಮತ್ತು ಜನಸಾಮಾನ್ಯನ ನಡುವಣ ಸಂವಹನಕ್ಕಷ್ಟೇ ಆಯಾ ದೇಶಭಾಷೆಯನ್ನು ಬಳಸತೊಡಗಿದ್ದರೆ ಬದುಕು ಎಷ್ಟೋ ಹಸನಾಗುತ್ತಿತ್ತು - ಆಗ ಹೇಗಿರುತ್ತಿತ್ತು? ಸರ್ಕಾರ ಕನ್ನಡಿಗನೊಡನೆ ಕನ್ನಡದಲ್ಲಿ, ತಮಿಳನೊಡನೆ ತಮಿಳಿನಲ್ಲಿ, ಹಿಂದಿಯವನೊಡನೆ ಹಿಂದಿಯಲ್ಲಿ ಮಾತಾಡುತ್ತಿತ್ತು, ಬೇರೆಬೇರೆ ಭಾಷೆಯ ರಾಜ್ಯಗಳು ಪರಸ್ಪರರೊಡನೆ ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದುವು, ಹಿಂದೀ ರಾಜ್ಯಗಳು ಪರಸ್ಪರ ಹಿಂದಿಯಲ್ಲಿ ಮಾತಾಡುತ್ತಿದ್ದುವು, ಕೇಂದ್ರಸರ್ಕಾರ ರಾಜ್ಯಸರ್ಕಾರಗಳೊಡನೆ ಇಂಗ್ಲಿಷಿನಲ್ಲಿ ಮಾತಾಡುತ್ತಿತ್ತು - ಹಿಂದಿಗೆ ಇತರ ಭಾಷೆಗಳಂತೆಯೇ ಅದಕ್ಕೆ ಸಲ್ಲಬೇಕಾದಷ್ಟೇ ಪ್ರಾಮುಖ್ಯ ಸಲ್ಲುತ್ತಿತ್ತು. ಆದರೆ ನಮ್ಮ ರಾಷ್ಟ್ರನಾಯಕರ ತಲೆ ಹೊಕ್ಕಿದ್ದ ಹಿಂದೀಪಾರಮ್ಯದ ಭೂತ ಈ ವಿವೇಕಕ್ಕೆ ಕಿವಿಗೊಡಬೇಕಲ್ಲ. ಹಿಂದಿಗೆ 'ರಾಷ್ಟ್ರೀಯತೆ'ಯ ಮೊಗವಾಡ ತೊಡಿಸಿದರು. ಜನಸಾಮಾನ್ಯರ ಅನುಕೂಲಕ್ಕಾಗಿ ಇಂಗ್ಲಿಷಿನ ಜಾಗದಲ್ಲಿ ದೇಶಭಾಷೆಗಳನ್ನು ಬಲಪಡಿಸುವ ಬದಲು ಈಗಾಗಲೇ ಬೇರೂರಿದ್ದ ಇಂಗ್ಲಿಷನ್ನು ಕಿತ್ತು ಹಾಕಿ ಹಿಂದಿಯನ್ನು ಕೃತಕವಾಗಿ ತಂದಿಕ್ಕುವ ಅವಿವೇಕದ ಕೆಲಸಕ್ಕೆ ಕೈ ಹಾಕಿದರು. ಬೀಜ ನೆಟ್ಟು ಸಸಿ ಬೆಳೆಸಿ ಮರವಾಗಿಸಬಹುದು, ಮರವನ್ನೇ ಕಿತ್ತೊಗೆದು ಆ ಜಾಗದಲ್ಲಿ ಇನ್ನೊಂದು ಮರ ನೆಡಲಾಗುತ್ತದೆಯೇ ಸ್ವಾಮಿ?
ಕನ್ನಡದ ಒಗ್ಗಟ್ಟನ್ನು ಒಡೆಯಲು ಹಿಂದೀವಾಲಾಗಳು ಇನ್ನೊಂದು ಅಸಹ್ಯಕೆಲಸ ಮಾಡುತ್ತಿದ್ದಾರೆ. ಕನ್ನಡದ ಸೋದರಭಾಷೆಗಳಾದ ತುಳು ಕೊಡವ ಇತ್ಯಾದಿಗಳನ್ನು ಎತ್ತಿಕಟ್ಟುವುದು - "ಹಿಂದೀ ಹೇರಿಕೆ ಎನ್ನುತ್ತೀರಲ್ಲ, ಕನ್ನಡದ್ದೂ ಹೇರಿಕೆಯಾಗುತ್ತಿಲ್ಲವೋ" ಎಂಬ ರೀತಿಯ ವಿತಂಡವಾದಗಳನ್ನು ಹರಿಯಬಿಡುವುದು. ಇದನ್ನೂ ಇಲ್ಲೇ ಉತ್ತರಿಸಿಬಿಡುವುದು ಸೂಕ್ತ. ಈ ಕನ್ನಡದ ಸೋದರಭಾಷೆಯ ಸಮುದಾಯಗಳ ಬಗೆಗೆ, ಆಯಾ ಪ್ರದೇಶಗಳ ಬಗೆಗೆ ಕರ್ನಾಟಕದ ಆಡಳಿತಗಳು ಕಾಲದಿಂದಲೂ ಅವಜ್ಞೆ ತೋರಿಕೊಂಡೇ ಬಂದಿರುವುದು ಸತ್ಯವೇ - ಇದನ್ನು ಕೇವಲ ತುಳುವರು ಕೊಡವರಲ್ಲ, ಕನ್ನಡಿಗರೆಲ್ಲರೂ ಕೂಡಿಯೇ ಪ್ರತಿಭಟಿಸಬೇಕಾದ್ದು. ಆದರೆ ಭಾಷೆಯ ವಿಷಯಕ್ಕೆ ಬಂದರೆ, ಕನ್ನಡವು ಹಿಂದಿಯಂತೆ ಖಿಚಡಿ ಭಾಷೆಯೂ ಅಲ್ಲ, ತುಳು ಕೊಡವ ಪ್ರದೇಶಗಳಲ್ಲಿ ಈಗಾಗಲೇ ಇರುವ ಬಳಕೆಗಳನ್ನು ಕಿತ್ತುಹಾಕಿ ಹಿಂದಿಯಂತೆ ಆಡಳಿತಗಳು ಕನ್ನಡವನ್ನು ಈ ಪ್ರದೇಶಗಳಲ್ಲಿ ಹೊಸದಾಗಿ ಮುಂದೊತ್ತಿಯೂ ಇಲ್ಲ. ಈಗ ಹೇಗಿದೆಯೋ ಆ ಭಾಷಾವ್ಯವಸ್ಥೆ ಕಾಲದಿಂದ ಇದ್ದೇ ಇದೆ. ಇನ್ನು ಉದ್ಯೋಗಾವಕಾಶಗಳಲ್ಲಿ ಕನ್ನಡ ಬರುವುದಿಲ್ಲವೆಂಬ ಕಾರಣಕ್ಕೆ ತುಳು/ಕೊಡವರು ವಂಚಿತರಾಗುವ ಕಾರಣವೂ ಇಲ್ಲ - ಅಷ್ಟೇಕೆ, ಮೈಸೂರಿನ ಭಾಗದಲ್ಲಿ ತುಳುವರು, ಹುಬ್ಳಿ ಧಾರವಾಡದ ಕಡೆಯವರೂ, ಆಕಡೆಯಲ್ಲಿ ಇಲ್ಲಿಯವರು ಧಾರಾಳವಾಗಿ ಕಾಣಸಿಗುತ್ತಾರೆ, ಮತ್ತು ಆಯಾ ಸ್ಥಳೀಯರೊಂದಿಗೆ ಹಾಲುಸಕ್ಕರೆಯಂತೆ ಬೆರೆತುಕೊಂಡೇ ಇದ್ದಾರೆ. ಇನ್ನೂ ತುಳುನಾಡು ಕನ್ನಡಕ್ಕೆ ನೀಡಿರುವ ಸಾಹಿತಿಪ್ರತಿಭೆಗಳು ಕಡಿಮೆಯೇನಲ್ಲ - ಸೇಡಿಯಾಪು, ಗೋವಿಂದಪೈ, ಮಂಗೇಶರಾಯರು, ಕೈಯ್ಯಾರ, ಇವರಾರಿಗೂ ತುಳು/ಕೊಡವ ಅಸ್ಮಿತೆಗಳು ತಮ್ಮ ಕನ್ನಡ ಅಸ್ಮಿತೆಯೊಡನೆ ಪೈಪೋಟಿ ನಡೆಸಿವೆಯೆಂದು ಅನ್ನಿಸಿದ್ದೇ ಅಲ್ಲ.
ಹುನ್ನಾರಗಳು ಎಲ್ಲಿವೆಯೆಂದು ಅರ್ಥವಾಯಿತಲ್ಲ. ಒಮ್ಮೆ ಕನ್ನಡದ ಸದ್ದಡಗಿ, ಹಿಂದಿಯ ದಾರಿ ಸುಗಮವಾಗಿಬಿಡಲಿ, ಆಗ ನೋಡಿ, ಈ ಇಂಗ್ಲಿಷ್ ಗುಮ್ಮ, ಕನ್ನಡವು ಸೋದರಭಾಷೆಗಳ ಮೇಲೆ ನಡೆಸುವ 'ದೌರ್ಜನ್ಯ' ಎಲ್ಲ ಕೂಗುಗಳೂ ನಿಂತೇ ಹೋಗುತ್ತವೆ. ಅಲ್ಲಿಗೆ ನಿಜವಾದ ಕಳಕಳಿಯೇನು ಹೇಳಿ ಸ್ವಾಮಿ? ತಮ್ಮ ಕನ್ನಡಪ್ರೇಮ, ಇಂಗ್ಲಿಷಿನ ವಿರುದ್ಧದ ಕಳಕಳಿ ಇದಾವುದರ ಬಗೆಗೂ ಯಾವ ಅನುಮಾನವೂ ಇಲ್ಲ. ಆದರೆ ಸ್ವಾತಂತ್ರ್ಯ ಬಂದಂದಿನಿಂದ ಉತ್ತರದ ಹಿಂದೀವಾಲಾಗಳು ದಕ್ಷಿಣವನ್ನು ಹಣಿಯಲು, ಹಿಂದಿಯ ಆಧಿಪತ್ಯ ಸ್ಥಾಪಿಸಲು ಏನೇನು ಮಾಡುತ್ತಿವೆಯೆಂಬುದು ನಿಮಗೆ ತಿಳಿಯದಿಲ್ಲ, ತಾವೇ ಸ್ವತಃ ಚಳುವಳಿಗಳಲ್ಲಿ ಭಾಗವಹಿಸಿದವರು, ದಶಕಗಳ ಇತಿಹಾಸವಿರುವ ಕನ್ನಡಚಳುವಳಿಯ ಸ್ವರೂಪವನ್ನು ಅರಿತವರು - ಏನೂ ತಿಳಿಯದವರಂತೆ ಮಾತಾಡಬೇಡಿ, ಯಾರುಯಾರೋ ದುರುದ್ದೇಶಪೂರಿತವಾಗಿ ಹರಿಯಬಿಟ್ಟಿರುವ ಸುಳ್ಳುಗಳನ್ನು ವಿತಂಡವಾದಗಳನ್ನು ಸಮರ್ಥಿಸಬೇಡಿ. ಸಮ್ಮೇಳನಾಧ್ಯಕ್ಷಪೀಠವೆಂಬುದು ಕನ್ನಡಿಗರ ಅಸ್ಮಿತೆ ಅಭಿಮಾನಗಳ ಪ್ರತೀಕ - ಯಾರೋ ದೊರೆಮಗ ತಟ್ಟೆಯಲ್ಲಿಟ್ಟು ಕೊಟ್ಟ ತಾಂಬೂಲವಲ್ಲ. ಸಮ್ಮೇಳನದ ಅಧ್ಯಕ್ಷರು ಸಮಸ್ತಕನ್ನಡಿಗರ ಮುಖವಾಣಿ, ಯಾವುದೋ ಒಡ್ಡೋಲಗದ ವಂದಿಮಾಗಧರಲ್ಲ. ಕನ್ನಡದ ಹಿತಾಸಕ್ತಿಗೆ ಮಾರಕವಾದ ನಿಲುವು ತಳೆದಿರುವ ದೊಡ್ಡರಂಗೇಗೌಡರು ಅಧ್ಯಕ್ಷಸ್ಥಾನವನ್ನು ತಿರಸ್ಕರಿಸಬೇಕೆಂದು ಹಲವರು ಹೇಳುತ್ತಾರೆ, ಅದು ಎಷ್ಟುಮಾತ್ರಕ್ಕೂ ಸರಿಯಲ್ಲ. ನೀವಾಡಿದ ಮಾತುಗಳನ್ನು, ಅದರಿಂದಾದ ಘಾತವನ್ನು ಸರಿಪಡಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ, ಮತ್ತು ಅದು ಸಮ್ಮೇಳನದ ಅಧ್ಯಕ್ಷಪೀಠದಿಂದ ಮಾತ್ರ ಸಾಧ್ಯ. ನೀವು "ಯಾವ ಹೇರಿಕೆಯನ್ನೂ ಸಮರ್ಥಿಸುವುದಿಲ್ಲ, ಕನ್ನಡವೇ ಶ್ರೇಷ್ಠ, ಇಂಗ್ಲಿಷ್ ಗುಮ್ಮ" ಎಂದುಬಿಟ್ಟ ಮಾತ್ರಕ್ಕೆ ಹಿಂದಿ ರಾಷ್ಟ್ರಭಾಷೆ ಎಂಬ ನಿಮ್ಮ ನಿಲುವು ಬದಲಾಯಿತೇ? ನೀವು ಹಿರಿಯರು, ಕ್ಷಮೆಯಾಚಿಸಬೇಕಿಲ್ಲ (ಗಟ್ಟಿ ನಿಲುವು ನಿರ್ಧಾರಗಳಿಲ್ಲದ ಖಾಲಿ ಕ್ಷಮಾಯಾಚನೆಯಿಂದ ಪ್ರಯೋಜನವೂ ಇಲ್ಲ). ಆಗಿರುವ ಅನಾಹುತವನ್ನು ಸರಿಪಡಿಸುವ ಅವಕಾಶ ನಿಮ್ಮ ಕೈಲಿದೆ. ಹಿಂದೀ ರಾಷ್ಟ್ರಭಾಷೆಯೆಂಬ ಈ ರಾಷ್ಟ್ರೀಯ ಸುಳ್ಳನ್ನು ಮುಕ್ತಕಂಠದಿಂದ ಖಂಡಿಸಿ, ಕನ್ನಡದ ನೆಲ-ಜಲ-ಅಧಿಕಾರಗಳಲ್ಲಿ ಹಿಂದಿಯ ಬಾಲವನ್ನು ತೂರಿಸದೇ ತೆಪ್ಪಗಿರಬೇಕೆಂದು ಕೇಂದ್ರದ ಹಿಂದೀ ಆಡಳಿತಗಳಿಗೆ, ಅಧಿಕಾರಸ್ಥರಿಗೆ, ರಾಜಕಾರಣಿಗಳಿಗೆ ಅಧ್ಯಕ್ಷಪೀಠದಿಂದ ಖಡಕ್ ಸಂದೇಶ ಕೊಡಿ - ನಿಮ್ಮ ಮೇಲಿನ ಗೌರವ ನೂರ್ಮಡಿಯಾಗುತ್ತದೆ.