ಮೊದಲನೆಯದಾಗಿ ಈ ವೃತ್ತವು ಬಹುದೀರ್ಘವಾದ ಪಾದಗಳನ್ನು ಹೊಂದಿದ್ದು ಬಳಕೆಗೆ ತೊಡಕೆನಿಸಬಹುದಾದ್ದರಿಂದಲೋ ಏನೋ, ಕವಿಗಳಲ್ಲಿ ಇದರ ಬಳಕೆ ಕಡಿಮೆ. ಆದರೆ ಬಹುಸುಂದರವಾದ ಲಯವಿನ್ಯಾಸವನ್ನು ಹೊಂದಿದೆಯಾದ್ದರಿಂದ ಕವಿಗಳು ಅಪರೂಪಕ್ಕೆ ಇದನ್ನು, ಏಕತಾನವನ್ನು ಮುರಿಯುವುದಕ್ಕೋಸ್ಕರ, ಬಳಸುತ್ತಾರೆ. ಉದಾಹರಣೆಗೆ ರುದ್ರಭಟ್ಟನ ಜಗನ್ನಾಥವಿಜಯಕಾವ್ಯದಿಂದ ಈ ಪದ್ಯವನ್ನು ನೋಡಬಹುದು:
ಶ್ರೀಸ್ತನಸುಕುಂಕುಮರಜಸ್ತತಿವಿಲೇಪನಗಭಸ್ತಿಪರಿರಂಜಿತನಿಜೋನ್ನತವಿಶಾಲೋ
ರಸ್ಥಲಪರಿಸ್ಫುರಿತಕೌಸ್ತುಭವಿಭೂಷಣರುಚಿಸ್ತಬಕಿತಾಖಿಳನಭಂ ದಿವಿಜಕಾಂತಾ
ಹಸ್ತಚಮರಾನಿಳಮುಹುಸ್ತರಳಿತಪ್ರಥಿತವಸ್ತುಚಯಕುಂಡಲವಿಮಂಡಿತಕಪೋಲಂ
ಧ್ವಸ್ತದಿತಿಜಂ ನತನಮಸ್ತವಿಬುಧಂ ಭುವನವಿಸ್ತರಣಪಾದನೆಸೆದಂ ಫಣಿಪತಲ್ಪಂ (1-50)
ಇದನ್ನು ಹೀಗೆ ಓದಿದರೆ, ಅರ್ಥವಾಗುವುದಿರಲಿ, ಅದರ ಲಯಸೌಂದರ್ಯವೂ ದಕ್ಕುವುದಿಲ್ಲ. ಇದನ್ನು ಸ್ವಲ್ಪ ವಿಶ್ಲೇಷಿಸಿ, ಹೇಗೆ ಓದಬಹುದೆಂಬುದನ್ನೂ ನೋಡೋಣ.
[ಲಯ ಮಾತ್ರೆ ಗಣ ಮೊದಲಾದ ವಿಷಯಗಳ ಪರಿಚಯವಿಲ್ಲದವರಿಗಾಗಿ ಇಲ್ಲೊಂದಷ್ಟು ಸಂಕ್ಷಿಪ್ತ ವಿವರಣೆಯಿದೆ, ತಿಳಿದವರು ಇದನ್ನು ದಾಟಿಕೊಂಡು ಮುಂದುವರೆಯಬಹುದು:
ಮಾತ್ರಾಕಾಲ/ಮಾತ್ರೆ ಎಂದರೆ ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲಾವಧಿ.
ಒಂದು ಚಿಟುಕಿ ಹೊಡೆಯುವಷ್ಟು ಕಾಲಪ್ರಮಾಣಕ್ಕೆ ಲಘು ಎನ್ನುತ್ತಾರೆ, ಇದನ್ನು "U" ಎಂದು ಗುರುತಿಸುತ್ತಾರೆ. ಹ್ರಸ್ವಾಕ್ಷರಗಳಾದ ಅ, ಇ, ಉ, ಕ, ಗಿ, ಯ ಇತ್ಯಾದಿಗಳು ಒಂದು ಚಿಟುಕಿ ಹೊಡೆಯುವಷ್ಟು ಕಾಲವನ್ನು ತೆಗೆದುಕೊಳ್ಳುವುದರಿಂದ ಇವು ಲಘು ಅಕ್ಷರಗಳು.
ಮೇಲಿನದರ ಎರಡರಷ್ಟು, ಎಂದರೆ ಎರಡು ಚಿಟುಕಿ ಹೊಡೆಯುವಷ್ಟು ಕಾಲಪ್ರಮಾಣಕ್ಕೆ ಗುರು ಎನ್ನುತ್ತಾರೆ, ಇದನ್ನು "-" ಎಂದು ಗುರುತಿಸುತ್ತಾರೆ. ದೀರ್ಘಾಕ್ಷರಗಳಾದ ಆ, ಈ, ಊ, ಕಾ, ಗೀ, ಯಾ ಇತ್ಯಾದಿಗಳು ಎರಡು ಚಿಟುಕಿ ಹೊಡೆಯುವಷ್ಟು ಕಾಲವನ್ನು ತೆಗೆದುಕೊಳ್ಳುವುದರಿಂದ ಇವು ಗುರು ಅಕ್ಷರಗಳು.
ಪದ್ಯವೊಂದನ್ನು ಲಯಬದ್ಧವಾಗಿ ಓದುವಾಗ ಮೂರು ಮೂರು, ನಾಲ್ಕುನಾಲ್ಕು, ಐದೈದು (ಎರಡು+ಮೂರು), ಏಳೇಳು (ಮೂರು+ಎರಡು+ಎರಡು) ಹೀಗೆ ಅನೇಕ ಮಾತ್ರಾಕಾಲಗಳ ಲಯಗಳನ್ನು ಕಾಣಬಹುದು, ಉದಾಹರಣೆಗೆ, ತಕಿಟ (3), ತಝಂ (3), ತಕತಕ (4), ತಧೀಂತ (4), ತಕ ತಕಿಟ (5), ತಕ ಧೀಂತ (5), ತಕಿಟ ತಕ ತಕ (7), ತಝಂ ತಾ ತಕ (7) ಹೀಗೆ. ಇವಕ್ಕೆ ಮಾತ್ರಾಗಣಗಳು ಎನ್ನುತ್ತಾರೆ.
ಮಾತ್ರಾಗಣಗಳಂತೆಯೇ ಪದ್ಯವನ್ನು ಮೂರುಮೂರು ಅಕ್ಷರಗಳ ಗುಂಪಾಗಿಯೂ ಮಾಡಬಹುದು. ಉದಾಹರಣೆಗೆ "ಅವಳೇ ಬಂದಳು ಹೂವಿನಾ ನಗೆಯ ನಕ್ಕೆನ್ನತ್ತ ಕೈ ಚಾಚುತಾ" ಈ ಸಾಲನ್ನು ನೋಡಿ. ಇದನ್ನು ಮೂರು ಮೂರು ಅಕ್ಷರದ ಗುಂಪಾಗಿ ಮಾಡಿದರೆ "ಅವಳೇ | ಬಂದಳು | ಹೂವಿನಾ | ನಗೆಯ | ನಕ್ಕೆನ್ನ | ತ್ತ ಕೈ ಚಾ | ಚುತಾ" ಈ ಮೂರುಮೂರಕ್ಷರಗಳ ಗುಂಪನ್ನು ಗಮನಿಸಿದರೆ ಒಂದೊಂದು ಗುಂಪಿನ ಉಚ್ಚಾರಣೆಯ ಕಾಲಾವಧಿಯೂ ಬೇರೆಬೇರೆ ಇದೆ. ಉದಾಹರಣೆಗೆ ಅವಳೇ ಎಂಬುದು ಹ್ರಸ್ವ, ಹ್ರಸ್ವ, ಮತ್ತು ದೀರ್ಘ (ಎಂದರೆ ಲಘು+ಲಘು+ಗುರು 1+1+2 = 4) ನಾಲ್ಕು ಮಾತ್ರೆಯ ಕಾಲ. ಬಂದಳು ಎನ್ನುವುದು ಗುರು+ಲಘು+ಲಘು (2+1+1 = 4), ಇದೂ ನಾಲ್ಕು ಮಾತ್ರೆಯ ಕಾಲವೇ (ಮೇಲೆ ಮಾತ್ರಾಗಣದ ಲೆಕ್ಕದಲ್ಲಾದರೆ ಇವೆರಡೂ ಒಂದೇ ಎನ್ನಬಹುದಿತ್ತು), ಆದರೆ ಅವಳೇ ಎನ್ನುವುದಕ್ಕೂ ಬಂದಳು ಎನ್ನುವುದಕ್ಕೂ ಲಯದಲ್ಲಿ ವ್ಯತ್ಯಾಸವಿದೆ, ಅಕ್ಷರಗಣ ಈ ಲಯವಿನ್ಯಾಸವನ್ನೂ ಗಮನಕ್ಕೆ ತೆಗೆದುಕೊಳ್ಳುವುದರಿಂದ ಇಲ್ಲಿ ಅವಳೇ ಎನ್ನುವುದೂ ಬಂದಳು ಎನ್ನುವುದೂ ಬೇರೆಬೇರೆಯೆಂದೇ ನೋಡಬೇಕು. ಹೀಗೆ ಮೇಲಿನ ಅಕ್ಷರಗಳ ಗುಂಪು ನೋಡಿದರೆ, ಎಲ್ಲವೂ ಮೂರಕ್ಷರಗಳೇ ಆದರೂ ಅವುಗಳ ಉಚ್ಚಾರಣೆಯ ಕಾಲಾವಧಿ ಬೇರೆ, ಮತ್ತು ಆ ಅಕ್ಷರಗಳಲ್ಲಿ ಲಘು-ಗುರು ಬಂದಿರುವ ಸ್ಥಾನಗಳೂ ಬೇರೆ. ಹೀಗೆ ಬೇರೆಬೇರೆ ಲಯವಿನ್ಯಾಸವಿರುವ ಮೂರಕ್ಷರದ ಎಂಟು ಬಗೆಯ ವಿನ್ಯಾಸ ಸಾಧ್ಯ. ಆ ಒಂದೊಂದು ವಿನ್ಯಾಸಕ್ಕೂ ಒಂದೊಂದು ಹೆಸರಿದೆ ಹೀಗೆ (ನೆನಪಿರಲಿ "U" ಎಂದರೆ ಲಘು, ಒಂದು ಮಾತ್ರೆ; "-" ಎಂದರೆ ಗುರು, ಎರಡು ಮಾತ್ರೆ)
U - - = ಯಗಣ (ಉದಾ: ಸುರೇಶಂ, ಗಣೇಶಂ)
- - - = ಮಗಣ (ಉದಾ: ಗೌರೀಶಂ, ದೇವೇಂದ್ರಂ)
- - U = ತಗಣ (ಉದಾ: ಗೌರೀಶ, ದೇವೇಂದ್ರ)
- U - = ರಗಣ (ಉದಾ: ಶಂಕರಂ, ಭಾಸ್ಕರಂ)
U - U = ಜಗಣ (ಉದಾ: ಸುರೇಶ, ಗಣೇಶ)
- U U = ಭಗಣ (ಉದಾ: ಶಂಕರ, ಭಾಸ್ಕರ)
U U U = ನಗಣ (ಉದಾ: ಸಲಿಗೆ, ಬೆಸುಗೆ)
U U - = ಸಗಣ (ಉದಾ: ಕಮಲಾ, ವಿಮಲಾ)
ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಲುಸುಲಭ - ಅದಕ್ಕೇ ಒಂದು ಪ್ರಾಚೀನಸೂತ್ರವಿದೆ - "ಯಮಾತಾರಾಜಭಾನಸಲಗಂ". ಇದರ ಪ್ರತಿಯೊಂದು ಅಕ್ಷರವನ್ನೂ ಹಿಡಿದು ಮೂರುಮೂರಾಗಿ ಗುಂಪು ಮಾಡುತ್ತಾ ಹೋದರೆ, ಯಮಾತಾ, ಮಾತಾರಾ, ತಾರಾಜ, ರಾಜಭಾ, ಜಭಾನ, ಭಾನಸ, ನಸಲ, ಸಲಗಂ ಎಂಬ ಬೇರೆಬೇರೆ ಮಾತ್ರಾಕಾಲದ ಗುಂಪುಗಳು ಸಿಗುತ್ತವೆ. ಗಮನಿಸಿ, ಅದರ ವಿನ್ಯಾಸ ಮೇಲೆ ವಿವರಿಸಿದಂತೆಯೇ ಇದೆ. ಮತ್ತು ಪ್ರತಿಯೊಂದು ಗುಂಪಿನ ಮೊದಲಕ್ಷರವೇ ಆ ಗಣದ ಹೆಸರು (ಯಮಾತಾ, ಯಗಣ U - -; ಮಾತಾರಾ, ಮಗಣ - - - ; ತಾರಾಜ, ತಗಣ - - U ಹೀಗೆ ಮೇಲಿನ ಪಟ್ಟಿಗೆ ಹೋಲಿಸುತ್ತಾ ಹೋಗಬಹುದು)
ಪದ್ಯಸೌಧವನ್ನು ಕಟ್ಟಲು ನಾವು ಬಳಸಬಹುದಾದ ಇಟ್ಟಿಗೆಗಳು ಎರಡು ರೀತಿಯವು -
ಒಂದನೆಯದು - ಮೊದಲು ವಿವರಿಸಿದಂತೆ 3, 4, 5, 7 ಮಾತ್ರೆಗಳ ಮಾತ್ರಾಗಣಗಳನ್ನು ಬಳಸಿ ಪದ್ಯ ಕಟ್ಟ ಬಹುದು (ಇಲ್ಲಿ ಗಣವೊಂದರಲ್ಲಿ ಅಕ್ಷರ ಎಷ್ಟೇ ಇರಬಹುದು, ಮಾತ್ರಾಕಾಲ ಸರಿಯಿದ್ದರೆ ಆಯಿತು); ಮಾತ್ರಾಗಣಗಳನ್ನು ಬಳಸಿ ಕಟ್ಟಿದ ಛಂದಸ್ಸುಗಳನ್ನು ಮಾತ್ರಾಗಣ ಛಂದಸ್ಸುಗಳೆನ್ನುತ್ತಾರೆ. ಇವಕ್ಕೆ ತಕಿಟ ತಕಿಟ, ತಕತಕಿಟ ತಾತಕಿಟ, ತಕಿಟ ತಕತಕ, ಇತ್ಯಾದಿ ನಿರ್ದಿಷ್ಟ ಲಯವಿರುತ್ತದೆ (ಷಟ್ಪದಿ, ಕಂದ, ರಗಳೆ ಮೊದಲಾದುವು ಈ ಜಾತಿಗೆ ಸೇರಿದುವು);
ಅಥವಾ ಎರಡನೆಯದು - ಆಮೇಲೆ ವಿವರಿಸಿದಂತೆ ಮೂರು ಮೂರು ಅಕ್ಷರಗಳ (ಯಾವುದೇ ಮಾತ್ರಾಕಾಲದ) ಅಕ್ಷರಗಣಗಳನ್ನು ಬಳಸಿ ಕಟ್ಟಬಹುದು. ಅಕ್ಷರಗಳನ್ನು ಬಳಸಿ ಕಟ್ಟಿದ ಪದ್ಯಗಳನ್ನು ಅಕ್ಷರಗಣದ ಛಂದಸ್ಸುಗಳು, ಅಥವಾ ವೃತ್ತಗಳು ಎನ್ನುತ್ತಾರೆ. ಬೇರೆಬೇರೆ ಅಕ್ಷರಗಣಗಳ ಚಿತ್ರವಿಚಿತ್ರವಾದ ಸಂಯೋಜನೆಗಳಿಂದ ಬೇರೆಬೇರೆ ವೃತ್ತಗಳನ್ನು ಪಡೆಯಬಹುದು. ಮೇಲಿನ ಮಾತ್ರಾಗಣದಂತೆ ಇವಕ್ಕೆ ಇಷ್ಟಿಷ್ಟೇ ಮಾತ್ರೆಗಳ ಒಂದೇ ಸಮನಾದ ಏಕತಾನದ ಲಯವಿರುವುದಿಲ್ಲ, ಬದಲಿಗೆ ವಿವಿಧ ಅಕ್ಷರಗಣಗಳ ಲಯಗಳು ಸೇರಿ ಆ ವೃತ್ತಕ್ಕೇ ವಿಶಿಷ್ಟವಾದ ಒಂದು ಲಯ ಉತ್ಪನ್ನವಾಗುತ್ತದೆ - ಉದಾಹರಣೆಗೆ "ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಂ" ಎನ್ನುವುದನ್ನೂ "ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಶೆಯಂ ಮಾಡದಂ" ಎನ್ನುವುದನ್ನೂ ಜೋರಾಗಿ ಹೇಳಿಕೊಂಡು ನೋಡಿ. ಎರಡೂ ಬೇರೆಬೇರೆ ಅಕ್ಷರಗಣಗಳಿಂದಾದ ಬೇರೆಬೇರೆ ವೃತ್ತಗಳು, ಎರಡಕ್ಕೂ ಬೇರೆಬೇರೆಯಾದ ಲಯವಿದೆ (ಉತ್ಪಲಮಾಲಾ, ಚಂಪಕಮಾಲಾ, ಸ್ರಗ್ಧರಾ, ಮಹಾಸ್ರಘರಾ, ಮತ್ತೇಭವಿಕ್ರೀಡಿತ, ಶಾರ್ದೂಲವಿಕ್ರೀಡಿತ - ಈ ಆರು ಪ್ರಸಿದ್ಧಕರ್ಣಾಟಕವೃತ್ತಗಳೆಂದು ಹೆಸರಾಗಿವೆ, ಕನ್ನಡದಲ್ಲಿ ಇವುಗಳ ಬಳಕೆ ವ್ಯಾಪಕವಾಗಿದೆ. ಹಾಗೆಯೇ ಮಂದಾಕ್ರಾಂತ, ವಸಂತತಿಲಕ, ಶಿಖರಿಣೀ ಮೊದಲಾದ ಅನೇಕ ಪ್ರಸಿದ್ಧವೃತ್ತಗಳು ಸಂಸ್ಕೃತದಲ್ಲಿ ಬಳಕೆಯಲ್ಲಿವೆ)
ಇನ್ನು ಮುಖ್ಯಲೇಖನವನ್ನು ನೋಡೋಣ]
ಲಲಿತವೃತ್ತ ಮೂಲತಃ ಅಕ್ಷರಗಣವೃತ್ತ - 30 ಅಕ್ಷರಗಳ (ಮೂರುಮೂರು ಅಕ್ಷರಗಳ ಹತ್ತು ಗಣಗಳ) ವೃತ್ತ. ಭಜಸನ ಗಣಗಳು ಎರಡಾವರ್ತಿ ಬಂದು ಕೊನೆಯಲ್ಲಿ ಭಗಣವೂ ಯಗಣವೂ ಬರುವಂಥದ್ದು (ಗಣಗಳ ವಿವರಣೆಗೆ ಮೇಲೆ []ರಲ್ಲಿ ವಿವರಣೆಯನ್ನು ನೋಡಿ). ಭಜಸನಭಜಸನಭಯ ಈ ಗಣಗಳ ವಿನ್ಯಾಸವನ್ನು ಮೇಲೆ ವಿವರಿಸಿದ ಯಮಾತಾರಾಜಭಾನಸಲಗಂ ಎಂಬ ಸೂತ್ರದ ಸಹಾಯದಿಂದ ತೋರಿಸುವುದಾದರೆ:
ಭಾನಸ | ಜಭಾನ | ಸಲಗಂ | ನಸಲ | ಭಾನಸ | ಜಭಾನ | ಸಲಗಂ | ನಸಲ | ಭಾನಸ | ಯಮಾತಾ - ಇದು ಈ ವೃತ್ತದ ವಿನ್ಯಾಸ. ಇದನ್ನೇ ಸೇರಿಸಿ ಬರೆದಾಗ:
"ಭಾನಸಜಭಾನಸಲಗಂನಸಲಭಾನಸಜಭಾನಸಲಗಂನಸಲಭಾನಸಯಮಾತಾ" ಹೀಗಾಗುತ್ತದೆ. ಲಯ ದೊರಕಲಿಲ್ಲವೇ? ಇದನ್ನು ಐದೈದು ಮಾತ್ರೆಗಳಾಗಿ ವಿಂಗಡಿಸಿ ಜೋರಾಗಿ ಓದಿಕೊಳ್ಳಿ:
"ಭಾನಸಜ ಭಾನಸಲ ಗಂನಸಲ ಭಾನಸಜ ಭಾನಸಲ ಗಂನಸಲ ಭಾನಸಯ ಮಾತಾ"
ಈಗ ಐದೈದು ಮಾತ್ರೆಯ ಸೊಗಸಾದ ಮಾತ್ರಾಗಣವಿನ್ಯಾಸವನ್ನೂ ಕಾಣಬಹುದು. ಅಕ್ಷರಗಣವೃತ್ತವಾಗಿದ್ದೂ ಮಾತ್ರಾಗಣವಿನ್ಯಾಸದ ಲಯಸೌಂದರ್ಯವನ್ನೂ ಒಳಗೊಂಡ ಅಪರೂಪದ ವೃತ್ತವಿದು. ಈಗ ಇದೇ ರೀತಿ ಮೇಲಿನ ಜಗನ್ನಾಥವಿಜಯದ ಸಾಲನ್ನು ವಿಂಗಡಿಸಿ ಲಯವನ್ನು ಗಮನಿಸಿ. "ಶ್ರೀಸ್ತನಸುಕುಂಕುಮರಜಸ್ತತಿವಿಲೇಪನಗಭಸ್ತಿಪರಿರಂಜಿತನಿಜೋನ್ನತವಿಶಾಲೋ" - ಈ ಸಾಲನ್ನು ಲಯಬದ್ಧವಾಗಿ ಹೀಗೆ ವಿಂಗಡಿಸಬಹುದು:
ಶ್ರೀಸ್ತನಸು ಕುಂಕುಮರ ಜಸ್ತತಿವಿ ಲೇಪನಗ ಭಸ್ತಿಪರಿ ರಂಜಿತನಿ ಜೋನ್ನತವಿ ಶಾಲೋ
ಈ ವೃತ್ತದ ಇನ್ನೊಂದು ವಿಶೇಷವೆಂದರೆ, ಎಲ್ಲ ವೃತ್ತಗಳಲ್ಲೂ ಆದಿಪ್ರಾಸ (ಪಾದದ ದ್ವಿತೀಯಾಕ್ಷರದ ಪ್ರಾಸ)ವಷ್ಟೇ ಇದ್ದರೆ ಇಲ್ಲಿ ಆದಿಪ್ರಾಸವೇ ಪಾದದೊಳಗೂ ಅನುಪ್ರಾಸವಾಗಿ ಬರುತ್ತದೆ. ಮೊದಲ ಗಣದ ಎರಡನೆಯ ಅಕ್ಷರ, ನಾಲ್ಕನೆಯ ಗಣದ ಮೊದಲನೆಯ ಅಕ್ಷರ, ಮತ್ತು ಆರನೆಯ ಗಣದ ಕೊನೆಯ ಅಕ್ಷರ (ಎಂದರೆ 2, 10 ಮತ್ತು 18ನೆಯ ಅಕ್ಷರಗಳು) ಪ್ರಾಸಸ್ಥಾನಗಳು - ಎಂದರೆ ಈ ಜಾಗದಲ್ಲಿ ಒಂದೇ ಅಕ್ಷರ ಬರಬೇಕು). ಇದನ್ನು ಮೇಲಿನ ಸಾಲಿನಲ್ಲಿ ಗಮನಿಸಬಹುದು (" * " ಚಿಹ್ನೆಯಿಂದ ಗುರುತಿಸಲಾಗಿದೆ)
ಶ್ರೀ*ಸ್ತ*ನ | ಸುಕುಂಕು | ಮರಜ | *ಸ್ತ*ತಿವಿ | ಲೇಪನ | ಗಭ*ಸ್ತಿ* | ಪರಿರಂ | ಜಿತನಿ | ಜೋನ್ನತ | ವಿ ಶಾಲೋ
ಮೊದಲ ಗಣದ ಎರಡನೆಯ ಅಕ್ಷರ, ನಾಲ್ಕನೆಯ ಗಣದ ಮೊದಲನೆಯ ಅಕ್ಷರ, ಮತ್ತು ಆರನೆಯ ಗಣದ ಕೊನೆಯ ಅಕ್ಷರ (ಎಂದರೆ 2, 10 ಮತ್ತು 18ನೆಯ ಅಕ್ಷರಗಳು) ಪ್ರಾಸವಾಗಿರುವುದನ್ನು ಗಮನಿಸಬಹುದು. ಈಗಿದನ್ನು ಇಡೀ ಪದ್ಯದಲ್ಲಿ ಗಮನಿಸಿ:
ಶ್ರೀ*ಸ್ತ*ನಸುಕುಂಕುಮರಜ*ಸ್ತ*ತಿವಿಲೇಪನಗಭ*ಸ್ತಿ*ಪರಿರಂಜಿತನಿಜೋನ್ನತವಿ ಶಾಲೋ
ರ*ಸ್ಥ*ಲಪರಿಸ್ಫುರಿತಕೌ*ಸ್ತು*ಭವಿಭೂಷಣರುಚಿ*ಸ್ತ*ಬಕಿತಾಖಿಳನಭಂ ದಿವಿಜಕಾಂತಾ
ಹ*ಸ್ತ*ಚಮರಾನಿಳಮುಹು*ಸ್ತ*ರಳಿತಪ್ರಥಿತವ*ಸ್ತು*ಚಯಕುಂಡಲವಿಮಂಡಿತಕಪೋಲಂ
ಧ್ವ*ಸ್ತ*ದಿತಿಜಂ ನತನಮ*ಸ್ತ*ವಿಬುಧಂ ಭುವನವಿ*ಸ್ತ*ರಣಪಾದನೆಸೆದಂ ಫಣಿಪತಲ್ಪಂ
ಎಲ್ಲ ಪ್ರಾಸಸ್ಥಾನಗಳಲ್ಲೂ ಚಾಚೂ ತಪ್ಪದೇ ಸ್ತ ಅಥವಾ ಸ್ಥ ಅಕ್ಷರಗಳು ಬಂದಿರುವುದನ್ನು ಗಮನಿಸಬಹುದು.
ಅದು ಸರಿ, 2, 10 ಮತ್ತು 18ನೆಯ ಅಕ್ಷರಗಳೇ ಏಕೆ ಎಂದರೆ, ಮೇಲಿನ ಸಾಲನ್ನೇ ಅದರ ಐದೈದರ ಮಾತ್ರಾಕಾಲದ ಲಯದನ್ವಯ ಇಟ್ಟು ಒಂದೊಂದು ಸಾಲಿನಲ್ಲಿ ಎರಡೆರಡು ಗಣಗಳನ್ನಿಟ್ಟು ನೋಡಿದರೆ ಅದರ ಮರ್ಮ ತಿಳಿಯುತ್ತದೆ:
ಶ್ರೀ*ಸ್ತ*ನಸು ಕುಂಕುಮರ
ಜ*ಸ್ತ*ತಿವಿ ಲೇಪನಗ
ಭ*ಸ್ತಿ*ಪರಿ ರಂಜಿತನಿ ಜೋನ್ನತವಿ ಶಾಲೋ
ರ*ಸ್ಥ*ಲಪ ರಿಸ್ಫುರಿತ
ಕೌ*ಸ್ತು*ಭವಿ ಭೂಷಣರು
ಚಿ*ಸ್ತ*ಬಕಿ ತಾಖಿಳನ ಭಂದಿವಿಜ ಕಾಂತಾ
ಮೇಲಿನ ಸಾಲುಗಳನ್ನು ಗಮನಿಸಿದರೆ, ಪ್ರತಿಸಾಲಿನಲ್ಲೂ ಆದಿಪ್ರಾಸವು (ಎರಡನೆಯ ಅಕ್ಷರ) ಮೂಡಿರುವುದನ್ನು ಗಮನಿಸಬಹುದಲ್ಲವೇ? ನಿರ್ದಿಷ್ಟವಾಗಿ ಪಾದದ 2, 10 ಮತ್ತು 18ನೆಯ ಅಕ್ಷರಗಳಲ್ಲೇ ಪ್ರಾಸಸ್ಥಾನವನ್ನಿಟ್ಟಿರುವುದಕ್ಕೆ ಇದೇ ಕಾರಣ - ಕೇವಲ ಅಕ್ಷರಗಣದ ಲೆಕ್ಕದಲ್ಲ, ಮಾತ್ರಾಗಣದ ಲಯವನ್ನನುಸರಿಸಿದರೂ ಪ್ರತಿ ಗಣದಲ್ಲೂ ಪ್ರಾಸಸೌಂದರ್ಯವು ಎದ್ದು ತೋರಲಿ ಎಂಬುದು ಉದ್ದೇಶ (ಮೇಲೆ ಮೂಡಿದ ಆರು ಸಾಲುಗಳ ಪದ್ಯ ಬಹುತೇಕ ಕುಸುಮಷಟ್ಪದಿಯನ್ನೇ ಹೋಲುತ್ತದೆ, ಆದರೆ ತಾಂತ್ರಿಕವಾಗಿ ಕುಸುಮಷಟ್ಪದಿಯಲ್ಲ, ಅದರ ಲಕ್ಷಣಗಳು ಬೇರೆ).
ಈ ಸುಂದರವಾದ ವೃತ್ತವನ್ನು ಅನೇಕ ಕವಿಗಳು ಏಕತಾನವನ್ನು ಮುರಿಯುವುದಕ್ಕೆ, ಲಯವರ್ಧನೆಗಾಗಿ ಉಪಯೋಗಿಸುತ್ತಾರೆಂದು ಹೇಳಿದೆ. ರನ್ನನ ಗದಾಯುದ್ಧದಿಂದ ಇದೇ ವೃತ್ತದ ಒಂದು ಪದ್ಯ
ತಾರಕನಖಂ ನವಸರೋರುಹದಳಾಂಘ್ರಿತಳ ಚಾರುಘನನಾಭಿ ಪುಳಿನಸ್ಥಳ ನಿತಂಬಂ
ಹಾರಲತಿಕಾಕೃತಿ ವಿಹಾರ ನಿಬಿಡಸ್ಪುರದುರೋಜಯುಗಳಂ ಮದನಪಾಶನಿಭ ಹಸ್ತಂ
ಸ್ಮೇರವದನಂ ಚಳಚಕೋರನಯನಂ ಚಿಕುರ ಚಾರು ರಮಣೀಯ ಮೃದುಕುಂತಳಕಳಾಪಂ
ಚಾರು ರುಚಿಸೂತ್ರ ಸುಕುಮಾರಮೆಸೆಗುಂ ಹೃದಯಹಾರಿ ಪೊಗೞಲ್ಕರಿದುಮಾ ಸತಿಯ ರೂಪಂ (8-57)
ಇಲ್ಲೂ ಮೇಲೆ ಹೇಳಿದ ಎಲ್ಲ ನಿಯಮಗಳೂ ಪಾಲಿತವಾಗಿರುವುದನ್ನು ಕಾಣಬಹುದು (ಅಕ್ಷರಗಣ, ಮಾತ್ರಾಗಣ, ಆದಿಪ್ರಾಸ, ಒಳಪ್ರಾಸಗಳು ಇತ್ಯಾದಿ).
ಇನ್ನು ನಂಜುಂಡರು ತೋರಿದ ನಾಗಚಂದ್ರನ ಪದ್ಯ ಇನ್ನೂ ಅಪರೂಪ - ಏಕೆಂದರೆ, ಇದು ಲಲಿತವೃತ್ತವೆಂದೇ ಸೂಚಿಸಲ್ಪಟ್ಟಿದ್ದರೂ, ಬಹುತೇಕ ಲಲಿತವೃತ್ತದ ಅಕ್ಷರಗಣವಿನ್ಯಾಸವನ್ನೇ ಅನುಸರಿಸಿದ್ದರೂ ಪದ್ಯದ ಹಲವೆಡೆ ಅಕ್ಷರಗಣಗಳನ್ನು ಗಾಳಿಗೆ ತೂರಿ, ಕೇವಲ ಮಾತ್ರಾಗಣವಿನ್ಯಾಸವನ್ನಷ್ಟೇ ಕವಿ ಲಕ್ಷ್ಯದಲ್ಲಿಟ್ಟುಕೊಂಡಿದ್ದಾನೆ. ಹೀಗಿದ್ದರೂ ಪದ್ಯದ ಮತ್ತೊಂದು ಲಕ್ಷಣವಾದ ಐದೈದರ ಮಾತ್ರಾಲಯಕ್ಕಾಗಲೀ ಮಧ್ಯಪ್ರಾಸಗಳಿಗಾಗಲೀ ಒಂದಿನಿತೂ ಭಂಗ ಬಂದಿಲ್ಲ. ಇದನ್ನಿಲ್ಲಿ ವಿವರವಾಗಿ ನೋಡಬಹುದು:
ಮೂಲಪದ್ಯ:
ತುಂಗಕುಚಕುಂಭಯುಗವಂಗಜಗಜಂ ಮೊಗವಡಂಗಳೆದುದೆನಿಸೆ ವಿಗತಾಂಚಲಮಪಾಂಗಂ
ಮೀಂಗೆಳೆಸುವಿಂದುಕಿರಣಂಗಳೆನೆ ಕರ್ಣಯುಗಳಂಗಳವತಂಸ ಮಣಿಯಂ ಬಳಸೆ ಘರ್ಮೋ
ದಂಗಳಿರೆ ನೊಸಲೊಳೆಳದಿಂಗಳಮರ್ದಿನ ಪನಿಯ ಪಾಂಗನೊಳಕೊಂಡು ನಳಿದೋಳ್ ನಲಿದು ನೀಳು
ತ್ತಂಗಭವಪಾಶಮೆನೆ ಪಿಂಗದರೆವುದು ಘಟ್ಟಿಯಂ ಗಡಣದಿಂ ಘಟ್ಟಿವಳ್ತಿಯರ ತಂಡಂ
ಐದೈದರ ಮಾತ್ರಾವಿನ್ಯಾಸ ಮತ್ತು ಒಳಪ್ರಾಸ (ಪ್ರಾಸಾಕ್ಷರವನ್ನು * ಸಂಜ್ಞೆಯಿಂದ ಸೂಚಿಸಲಾಗಿದೆ)
ತುಂ*ಗ*ಕುಚ | ಕುಂಭಯುಗ | ವಂ*ಗ*ಜಗ | ಜಂ ಮೊಗವ | ಡಂ*ಗ*ಳೆದು | ದೆನಿಸೆ ವಿಗ | ತಾಂಚಲಮ | ಪಾಂಗಂ
ಮೀಂ*ಗೆ*ಳೆಸು | ವಿಂದುಕಿರ | ಣಂ*ಗ*ಳೆನೆ | ಕರ್ಣಯುಗ | ಳಂ*ಗ*ಳವ | ತಂಸ ಮಣಿ | ಯಂ ಬಳಸೆ | ಘರ್ಮೋ
ದಂ*ಗ*ಳಿರೆ | ನೊಸಲೊಳೆಳ | ದಿಂ*ಗ*ಳಮ | ರ್ದಿನ ಪನಿಯ | ಪಾಂ*ಗ*ನೊಳ | ಕೊಂಡು ನಳಿ | ದೋಳ್ ನಲಿದು | ನೀಳು
ತ್ತಂ*ಗ*ಭವ | ಪಾಶಮೆನೆ | ಪಿಂ*ಗ*ದರೆ | ವುದು ಘಟ್ಟಿ | ಯಂ *ಗ*ಡಣ | ದಿಂ ಘಟ್ಟಿ | ವಳ್ತಿಯರ | ತಂಡಂ
ಅಕ್ಷರಗಣವಿಭಾಗ (ಛಂದೋಭಂಗವಾಗಿರುವ ಗಣಗಳನ್ನು * ಸಂಜ್ಞೆಯಿಂದ ಸೂಚಿಸಲಾಗಿದೆ)
ತುಂಗಕು | ಚಕುಂಭ | ಯುಗವಂ | ಗಜಗ | ಜಂ ಮೊಗ | ವಡಂಗ | *ಳೆದುದೆನಿ* | ಸೆ ವಿಗ | ತಾಂಚಲ | ಮಪಾಂಗಂ
ಮೀಂಗೆಳೆ | ಸುವಿಂದು | ಕಿರಣಂ | ಗಳೆನೆ | ಕರ್ಣಯು | ಗಳಂಗ | ಳವತಂ | ಸ ಮಣಿ | ಯಂ ಬಳ | ಸೆ ಘರ್ಮೋ
ದಂಗಳಿ | *ರೆ ನೊಸಲೊ* | ಳೆಳದಿಂ | ಗಳಮ | *ರ್ದಿನ ಪನಿ* | ಯ ಪಾಂಗ | ನೊಳಕೊಂ | ಡು ನಳಿ | ದೋಳ್ ನಲಿ | ದು ನೀಳು
ತ್ತಂಗಭ | ವಪಾಶ | ಮೆನೆ ಪಿಂ | ಗದರೆ | *ವುದು ಘ* | ಟ್ಟಿಯಂ ಗ | ಡಣದಿಂ | *ಘಟ್ಟಿ* | ವಳ್ತಿಯ | ರ ತಂಡಂ
- ಐದೈದು ಮಾತ್ರೆಯ ಲಯವನ್ನೂ ಒಳಪ್ರಾಸವನ್ನೂ ಪದ್ಯವು ಉಳಿಸಿಕೊಂಡಿದ್ದರೂ ಮೂರಕ್ಷರದ ಗಣವಿಭಾಗ ಮಾಡಿದಾಗ ಹಲವೆಡೆ ಛಂದೋಭಂಗವಾಗಿರುವುದನ್ನು ಗಮನಿಸಬಹುದು.
- ಮೊದಲ ಸಾಲಿನ 7ನೆಯ ಗಣದಲ್ಲಿ ಮೂರಕ್ಷರದ ಸಗಣವು (ಸಲಗಂ ಎಂಬಂತೆ) ಬರುವುದರ ಬದಲು ನಾಲ್ಕು ಲಘು ಅಕ್ಷರಗಳು ("ಳೆದುದೆನಿ") ಬಂದಿವೆ;
- ಮೂರನೆಯ ಸಾಲಿನ ಎರಡನೆಯ ಗಣದಲ್ಲಿ ಮೂರಕ್ಷರದ ಜಗಣವು (ಜಭಾನ ಎಂಬಂತೆ) ಬರುವುದರ ಬದಲು ಮತ್ತೆ ನಾಲ್ಕಕ್ಷರದ ಸರ್ವಲಘು ("ರೆ ನೊಸಲೊ") ಬಂದಿದೆ.
- ಅದೇ ಸಾಲಿನ ಐದನೆಯ ಗಣದಲ್ಲಿ ಮೂರಕ್ಷರದ ಭಗಣದ (ಭಾನಸ ಎಂಬಂತೆ) ಬದಲು ಮತ್ತೆ ನಾಲ್ಕಕ್ಷರದ ಸರ್ವಲಘು ಬಂದಿದೆ ("ರ್ದಿನ ಪನಿ");
- ಕೊನೆಯ ಸಾಲಿನ ಐದನೆಯ ಗಣವು ಮೂರಕ್ಷರದ್ದೇ ಆದರೂ ಅಲ್ಲಿ ಬರಬೇಕಾದ ಭಗಣದ (ಭಾನಸ ಎಂಬಂತೆ) ಬದಲು ಸಗಣ (ಸಲಗಂ ಎಂಬಂತೆ) ಬಂದಿದೆ.
- ಅದೇ ಸಾಲಿನ 8ನೆಯ ಗಣದಲ್ಲಿ ನಗಣ (ನಸಲ ಎಂಬಂತೆ) ಬರಬೇಕಿತ್ತು. ಅದು ಮೂರು ಲಘುಗಳ ಗಣ. ಬದಲಿಗೆ ಅಲ್ಲಿ ಒಂದು ಗುರು ಮತ್ತು ಒಂದು ಲಘುವಿನ "ಘಟ್ಟಿ" ಎಂದು ಬಂದಿದೆ.
ಇದು ಒಂದು ಕಡೆಯಾಗಿದ್ದರೆ ಲಿಪಿಕಾರನ ದೋಷವೆಂದು ತರ್ಕಿಸಬಹುದಿತ್ತು. ಆದರೆ ಇಷ್ಟೂ ಕಡೆ ಅಕ್ಷರಗಣದ ನಿಯಮಗಳು ಭಂಗವಾಗಿರುವುದರಿಂದ ಕವಿ ತಾನೇ ಸ್ವಾತಂತ್ರ್ಯವಹಿಸಿ ಹೀಗೆ ಮಾಡಿದ್ದಾನೆಂದು ತರ್ಕಿಸಬೇಕಾಗುತ್ತದೆ. ಪ್ರಾಚೀನಕವಿಗಳು ಸಾಮಾನ್ಯವಾಗಿ ಹೀಗೆ ಮಾಡುವವರಲ್ಲ. ಆದ್ದರಿಂದ ಇದು ಅಪರೂಪದ್ದೆನಿಸಿಕೊಳ್ಳುತ್ತದೆ.
ಒಟ್ಟಿನಲ್ಲಿ, ಲಲಿತವೃತ್ತವು ಅಕ್ಷರಗಣದ ಲಯವೈವಿಧ್ಯವನ್ನೂ, ಮಾತ್ರಾಗಣದ ಏಕರೂಪತೆಯನ್ನೂ ಮೇಳೈಸಿಕೊಂಡಿರುವ, ಅಕ್ಷರಗಣ-ಮಾತ್ರಾಗಣ ಎರಡೂ ಲಯಗಳಿಗೂ ತಕ್ಕ ಪ್ರಾಸವಿನ್ಯಾಸವನ್ನೂ ಹೊಂದಿರುವ ಅಪರೂಪದ ವೃತ್ತ.