Saturday, December 13, 2008

ವಿದ್ಯಾ ಪ್ರಸನ್ನ ತೀರ್ಥರು

ಲೌಕಿಕ-ವೈದಿಕ ವಿದ್ಯೆಗಳೆರಡರಲ್ಲೂ ಅಪಾರ ಜ್ಞಾನ, ಕವಿ ಹೃದಯ, ವ್ಯವಹಾರ ಚತುರತೆ, ಆಡಳಿತದಲ್ಲಿ ದಕ್ಷತೆ, ಇದೆಲ್ಲವನ್ನೂ ಮೀರಿದ ವಿರಕ್ತಿ-ಸನ್ಯಾಸ ಇವಿಷ್ಟೂ ಒಬ್ಬನೇ ವ್ಯಕ್ತಿಯಲ್ಲಿ ಮೇಳೈಸಿರುವುದು ಬಹು ವಿರಳ. ಅಂಥಾ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು ಶ್ರೀ ವಿದ್ಯಾ ಪ್ರಸನ್ನ ತೀರ್ಥರು.

.
ಜನನ ೧೮೯೯, ತೆಕ್ಕಲೂರಿನಲ್ಲಿ. ತಂದೆ, ಆ ಕಾಲಕ್ಕೆ ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ತೆಕ್ಕಲೂರು ಅಹೋಬಲಾಚಾರ್ಯರು (ಇವರೇ ಮುಂದೆ ಶ್ರೀ ವ್ಯಾಸರಾಜ ವಿದ್ಯಾ ಸಿಂಹಾಸನದಲ್ಲಿ ೩೫ನೇ ಯತಿಗಳಾಗಿ ವಿರಾಜಿಸಿದ ಶ್ರೀ ವಿದ್ಯಾ ರತ್ನಾಕರ ತೀರ್ಥರು); ತಾಯಿ, ಇದೇ ಸಂಸ್ಥಾನದಲ್ಲಿ ೩೧ನೇ ಯತಿಗಳಾಗಿದ್ದ ಶ್ರೀ ವಿದ್ಯಾ ಶ್ರೀಸಿಂಧು ತೀರ್ಥರ ಪೂರ್ವಾಶ್ರಮದ ಪುತ್ರಿ ಸತ್ಯಭಾಮಮ್ಮನವರು. ಹೀಗೆ ಶ್ರೀಮಠದ ನಿಕಟ ಸಂಪರ್ಕ, ಪಾಂಡಿತ್ಯದ ದಟ್ಟ ವಾತಾವರಣ ಇವುಗಳು ಬಾಲಕ ವೆಂಕಟ ನರಸಿಂಹನಿಗೆ ಬಾಲ್ಯದಲ್ಲೇ ಪಾಂಡಿತ್ಯದ ಉತ್ತಮ ಬುನಾದಿಯನ್ನು ಹಾಕಿ ಕೊಟ್ಟಿದ್ದುವೆನ್ನುವುದರಲ್ಲಿ ಸಂಶಯವಿಲ್ಲ. ಸ್ವತಃ ಪ್ರಕಾಂಡ ಪಂಡಿತರಾದ ಅಹೋಬಲಾಚಾರ್ಯರು ಮಗನ ವಿದ್ಯಾಭ್ಯಾಸದ ಹೊಣೆಯನ್ನು ಸ್ವತಃ ವಹಿಸಿದರು. ಮುಂದೆ ಅವರು ಸನ್ಯಾಸ ಸ್ವೀಕರಿಸಿದ ಮೇಲೂ ಹುಡುಗನ ವಿದ್ಯಾಭ್ಯಾಸಕ್ಕಾಗಿ ಉತ್ತಮ ಪಂಡಿತರನ್ನು ನಿಯಮಿಸಿ ಅದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು.

.
ಆದರೆ ಆ ಕಾಲಕ್ಕಾಗಲೇ ಬ್ರಾಹ್ಮಣ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತ್ತು. ಸಾಂಪ್ರದಾಯಿಕ ವಿದ್ಯಾಭ್ಯಾಸ ಕ್ರಮಕ್ಕೆ ಶರಣು ಹೊಡೆದು, ಲಾಭ ತರುವ ಪಾಶ್ಚಾತ್ಯ ವಿದ್ಯಾಭ್ಯಾಸದೆಡೆಗೆ ಅನೇಕ ಪ್ರತಿಭಾವಂತ ತರುಣರು ಆಕರ್ಷಿತರಾಗುತ್ತಿದ್ದರು. ಈ ಆಕರ್ಷಣೆಗೆ ಬಾಲಕ ವೆಂಕಟ ನರಸಿಂಹನೇನೂ ಹೊರತಾಗಿರಲಿಲ್ಲ. ತಾಯಿಯ ಅಪೇಕ್ಷೆ/ಒತ್ತಾಸೆಯ ಮೇರೆಗೆ ಪರಿಚಿತರು/ಸಂಬಂಧಿಕರ ನೆರವಿನಿಂದ ಲೋವರ್ ಸೆಕೆಂಡರಿ ಪರೀಕ್ಷೆಗೆ ಕುಳಿತ ಹುಡುಗ ಸುಲಭವಾಗಿ ತೇರ್ಗಡೆ ಹೊಂದಿದ. ಹಾಗೆಯೇ ವಿದ್ಯಾಭ್ಯಾಸವನ್ನು ಮುಂದುವರೆಸಿ ಬಿ.ಎ., ಬಿ.ಎಲ್ ಪದವಿಗಳನ್ನು ಗಳಿಸಿದ ವೆಂಕಟ ನರಸಿಂಹಾಚಾರ್ಯರು ೧೯೨೫ರಲ್ಲಿ ಮೈಸೂರಿನಲ್ಲಿ ಸ್ವತಂತ್ರವಾಗಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಮುಂದೆ ಮೂವತ್ತಾರನೆಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸುವವರೆಗೂ ಇದೇ ವೃತ್ತಿಯಲ್ಲಿದ್ದು, ಅಂದಿನ ತರುಣ ವಕೀಲರ ಪಂಕ್ತಿಯಲ್ಲಿ ಅಗ್ರಗಣ್ಯರೆನಿಸಿದ್ದರು.
.
ಈ ಅವಧಿಯಲ್ಲಿ ಕಾವೇರಿ-ಕಪಿಲೆಯಲ್ಲಿ ಸಾಕಷ್ಟು ನೀರು ಹರಿದಿತ್ತು. ಆಚಾರ್ಯರು ನಾಲ್ಕರ ಕೂಸಾಗಿದ್ದಾಗಲೇ ಸನ್ಯಾಸ ಸ್ವೀಕರಿಸಿದ್ದ ಅಹೋಬಲಾಚಾರ್ಯರು ಶ್ರೀ ವಿದ್ಯಾ ರತ್ನಾಕರ ತೀರ್ಥರಾಗಿ ಹನ್ನೆರಡು ವರ್ಷ ವಿದ್ಯಾ ಸಾಮ್ರಾಜ್ಯವನ್ನಾಳಿ ಕೀರ್ತಿಶೇಷರಾಗಿದ್ದರು. ಅವರ ಉತ್ತರಾಧಿಕಾರಿಯಾಗಿ ಶ್ರೀ ವಿದ್ಯಾ ವಾರಿಧಿ ತೀರ್ಥರು ಅಧಿಕಾರ ವಹಿಸಿಕೊಂಡಿದ್ದರು. ಮುಂದೆ ೧೯೩೫ ರಲ್ಲಿ ಶ್ರೀ ವಿದ್ಯಾ ವಾರಿಧಿ ತೀರ್ಥರು ಅನಾರೋಗ್ಯಪೀಡಿತರಾಗಿ ಶ್ರೀಮಠದ ಉತ್ತರಾಧಿಕಾರವನ್ನು ವಹಿಸಲು ಆಚಾರ್ಯರಿಗೆ ಕರೆ ಹೋದಾಗ, ಅವರ ವಕೀಲಿ ವೃತ್ತಿ ಬಿಡುವಿಲ್ಲದಷ್ಟು-ಬಿಡಬಾರದಷ್ಟು ಉನ್ನತ ಸ್ಥಿತಿಯಲ್ಲಿತ್ತು. ಮುಂದೊಂದು ದಿನ ಈ ಕರೆ ಬರುತ್ತದೆಯೆಂದು ಆಚಾರ್ಯರಿಗೆ ತಿಳಿದೇ ಇದ್ದರೂ, ಅದು ಅಷ್ಟು ಬೇಗ ಬರುತ್ತದೆಯೆಂದು ತಿಳಿದಿರಲಿಲ್ಲ. ಮಠದ ವಕೀಲಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದದ್ದು ಬಿಟ್ಟರೆ, ಆಚಾರ್ಯರ ಮಠ ಸಂಪರ್ಕ/ಅವಲಂಬನೆ ಕೇವಲ ಧಾರ್ಮಿಕ ಅಗತ್ಯಗಳಿಗಷ್ಟೇ ಸೀಮಿತವಾಗಿತ್ತು. ಲಾಭದಾಯಕವಾದ ವಕೀಲಿಕೆ, ಕೈತುಂಬಾ ಸಂಪಾದನೆ, ಚಿಕ್ಕ ಚೊಕ್ಕ ಸಂಸಾರ, ನೆಮ್ಮದಿಯ ಜೀವನ - ಸನ್ಯಾಸಕ್ಕೆ ಬೇಕಾದ ವಿರಕ್ತಿಯ ಯಾವ ಹೊಳಹೂ ಆಚಾರ್ಯರ ಜೀವನದ ಕ್ಷಿತಿಜದಲ್ಲಿ ಕಾಣುತ್ತಿರಲಿಲ್ಲ. ಹೀಗಾಗಿ ಸನ್ಯಾಸ ಸುಲಭದ ನಿರ್ಧಾರವಾಗಿರಲಿಲ್ಲ.

.
ವಿರಕ್ತಿಯಿಂದ ಸನ್ಯಾಸವೋ ಸನ್ಯಾಸದಿಂದ ವಿರಕ್ತಿಯೋ ಎಂಬ ಒಳತೋಟಿ ಆಚಾರ್ಯರನ್ನು ಬಹಳ ಕಾಡಿತೆನಿಸುತ್ತದೆ. ಕೊನೆಗೂ ಮುಂದೆಂದಾದರೂ ಬರುವುದೇ ಆಗಿದ್ದ ಸನ್ಯಾಸವೆಂಬ "ಜವಾಬ್ದಾರಿ"ಯನ್ನು ಅಂದೇ ಹೊರುವ ನಿರ್ಧಾರಕ್ಕೆ ಬಂದರು ಆಚಾರ್ಯರು.
.
ಹೀಗೆ ಶ್ರೀ ವಿದ್ಯಾ ಪ್ರಸನ್ನ ತೀರ್ಥರೆಂಬ ಹೆಸರಿನಿಂದ ಆಶ್ರಮ ಸ್ವೀಕರಿಸಿದ ಆಚಾರ್ಯರು, ಮುಂದಿನ ಐದು ವರ್ಷ (ಶ್ರೀ ವಿದ್ಯಾ ವಾರಿಧಿ ತೀರ್ಥರು ಬೃಂದಾವನಸ್ಥರಾಗುವವರೆಗೂ) ತಮ್ಮ ಮುಂದಿದ್ದ ಸನ್ಯಾಸ ಜೀವನದ ಹೊಣೆಗಾರಿಕೆಗಳಿಗೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳಲು ತೊಡಗಿದರು. ಆಸ್ಥಾನದ ಮಹಾ ಮಹಾ ವಿದ್ವಾಂಸರ ನೆರವಿನಿಂದ ಮಧ್ವ ಸಿದ್ಧಾಂತದ ಆಳವಾದ ಅಧ್ಯಯನ ಕೈಗೊಂಡರು. ಅತಿ ಲೌಕಿಕದ ನಡುವಿನಿಂದ ಅಧ್ಯಾತ್ಮದೆಡೆಗೆ ಪಯಣ ಒಂದು ದೊಡ್ಡ ಸವಾಲೇ ಆಗಿತ್ತು. ವಕೀಲಿಯ ಬೆಚ್ಚನೆ ಕರೀ ಕೋಟನ್ನು ಕಿತ್ತೊಗೆದು ತೆಳುವಾದ ಕಾಷಾಯ ಧರಿಸುವುದೇನೂ ಸುಲಭದ ಮಾತಾಗಿರಲಿಲ್ಲ. ಬಿಟ್ಟುಬಂದ ಸಂಸಾರವಿರಲಿ, ಕಟ್ಟಿಕೊಂಡ ಮಠವೂ ಮತ್ತೊಂದು ಮಹಾಸಂಸಾರದಂತೆ ಕಂಡಿರಲು ಸಾಕು. ಅದರ ನೂರೆಂಟು ರೀತಿ-ರಿವಾಜುಗಳು, ಆಡಳಿತದ-ವ್ಯವಹಾರದ ತಲೆನೋವುಗಳು; ಸನ್ಯಾಸವೆಂದರೆ ವೈರಾಗ್ಯಸಾಧನೆಯೆಂದು ನೆಚ್ಚಿ ಬಂದ ಆಚಾರ್ಯರಿಗೆ ಧುತ್ತನೆ ನೂರು ಪ್ರಶ್ನೆಗಳು ಎದುರಾದಂತಿವೆ. ಇಡೀ ವ್ಯವಸ್ಥೆಯಲ್ಲಿ ತನ್ನ ಪಾತ್ರವೇನು? ಜ್ಞಾನಾರ್ಜನೆಯೇ, ಧಾರ್ಮಿಕ ನಾಯಕತ್ವವೇ, ಗುರುತನವೇ, ಮಠದ ಆಡಳಿತವೇ, ಆಸ್ತಿಪಾಲನೆಯೇ, ವಿರಕ್ತಿಯೇ, ಸನ್ಯಾಸವೇ... ಈ ಅವಧಿಯಲ್ಲಿ ತರುಣ ಸನ್ಯಾಸಿ ಅನುಭವಿಸಿದ ಒಳತೋಟಿ ಈ ಕೆಳಕಂಡ ಹಾಡಿನಲ್ಲಿ ಎಷ್ಟು ಶಕ್ತವಾಗಿ ಚಿತ್ರಿತವಾಗಿದೆ ನೋಡಿ:
.
ಬಿಡಿಸೋ ಬಂಧನ ಕೇಶವ ಬಿಗಿಯುತಲಿದೆ
ನಾನು ಬಿಟ್ಟರೂ ಎನ್ನ ಕಂಬಳಿ ಬಿಡದಿದೆ
.
ಎಲ್ಲವ ಬಿಟ್ಟು ನಾ ಬಂದೆನೆಂದರಿತೆನೋ
ಎಲ್ಲವು ಎನ್ನನು ಬಿಡಲಿಲ್ಲವೋ
ಕಲ್ಲು ಎದೆಯ ಪೊತ್ತ ಮಲ್ಲನೆಂದರಿತೆನೋ
ಹುಲ್ಲೆಯ ಮರಿಯಂತೆ ನಡುಗುವಂತಾಯಿತೋ
.
ಮಿಕ್ಕ ವಿಷಯಗಳ ಬೇಡಬೇಡೆನ್ನುತ
ಹೊಕ್ಕರೂ ಮೂಲೆ ಮೂಲೆಗಳನ್ನು
ದಿಕ್ಕುದಿಕ್ಕುಗಳಿಂದ ಸೆಳೆಯುತಲಿರುವುವು
ಅಕ್ಕರೆ ತೊಲಗಿತು ಶುಷ್ಕವಾಯಿತು ಮನವು
.
ಲೋಕರಕ್ಷಕನು ನೀನೆಂಬುದನರಿತರೂ
ವ್ಯಾಕುಲವೇತಕೆ ಪ್ರತಿಕ್ಷಣವೂ
ತಾ ಕಾಣದ ನರ ವರವ ಕೊಡಲುಬಹುದೇ
ಏಕಾಂತಭಕುತ ಪ್ರಸನ್ನನೆ ಕರುಣದಿ
.
ಶ್ರೀ ಪ್ರಸನ್ನ ತೀರ್ಥರು ಕೇವಲ ಕವಿಗಳಷ್ಟೇ ಅಲ್ಲ, ಒಬ್ಬ ಸಮರ್ಥ ಧಾರ್ಮಿಕ ಮುಖಂಡರೂ ಆಗಿದ್ದರು. ಅಖಿಲಭಾರತ ಮಾಧ್ವ ಮಹಾಮಂಡಲಿ ಸ್ಥಾಪಕ ಶಕ್ತಿಗಳಲ್ಲಿ ಪ್ರಮುಖರು. ಮಂಡಲಿಯ ಅಧ್ಯಕ್ಷರಾಗಿ ಅದಕ್ಕೆ ಮಾರ್ಗದರ್ಶನ ನೀಡಿದ್ದಲ್ಲದೇ ಅದರ ಆಶ್ರಯದಲ್ಲಿ ನಡೆದ ಅನೇಕ ಸಮ್ಮೇಳನಗಳಲ್ಲಿ ತಮ್ಮ ವಿಚಾರಪ್ರಚೋದಕವೂ ಸ್ಪೂರ್ತಿದಾಯಕವೂ ಆದ ಭಾಷಣಗಳಿಂದ ಮಾಧ್ವ ಸಮಾಜಕ್ಕೆ ಹೊಸ ಚೈತನ್ಯ ತುಂಬಿದರು.
.
ದಾಸ ಸಾಹಿತ್ಯಕ್ಕೆ ಶ್ರೀಗಳ ಕೊಡುಗೆ ಬಹು ವಿಶಿಷ್ಟವಾದದ್ದು. ಶ್ರೀಪಾದರಾಜ-ವ್ಯಾಸರಾಜ-ವಾದಿರಾಜ-ಪುರಂದರ-ಕನಕರ ದಾಸಪರಂಪರೆಯಲ್ಲೇ ಬಂದರೂ, ಪಾಶ್ಚಾತ್ಯ ಸಾಹಿತ್ಯದ ರಮ್ಯತೆ ಗೇಯತೆಗಳನ್ನೂ ಮೈಗೂಡಿಸಿಕೊಂಡ ಹೊಸತನವೇ ಪ್ರಸನ್ನ ತೀರ್ಥರ ಕೃತಿಗಳ ವೈಶಿಷ್ಟ್ಯ. ಕಲ್ಪನೆಯ ಉತ್ಕೃಷ್ಟತೆ, ಅನುಭಾವ, ವಸ್ತು-ವಿಷಯಗಳ ಹರಹು, ಗೇಯತೆ, ರಮ್ಯತೆಗಳ ಸೊಂಪು ಇವುಗಳನ್ನು ಓದಿ, ಹಾಡಿ, ಕೇಳಿ ಅನುಭವಿಸುವುದೇ ಸೊಗಸು. ಹಾಡುಗಳನ್ನು ರಚಿಸಿ, ತಾವೇ ರಾಗ ಸಂಯೋಜಿಸಿ, ಕಲಿಸಿ ಹಾಡಿಸುತ್ತಿದ್ದರಂತೆ ಶ್ರೀಗಳು. ಕೆಲವೊಂದು ಹಾಡುಗಳನ್ನು ಕೆಲವೊಂದು ಸಂದರ್ಭಗಳಲ್ಲಿ ಶ್ರೀಮಠದ್ದೇ ಆದ ವಿಶಿಷ್ಟ ಮಟ್ಟಿನಲ್ಲಿ ಶಿಷ್ಯ ಸಮುದಾಯ ಹಾಡುತ್ತಿದ್ದ ಸಂಪ್ರದಾಯವಿತ್ತು. ಶ್ರೀ ವಿದ್ಯಾ ಪಯೋನಿಧಿ ತೀರ್ಥರ ಕಾಲದಲ್ಲೂ ಈ ಕ್ರಮ ಚಾಲ್ತಿಯಲ್ಲಿದ್ದುದನ್ನು ನಾನು ಕಂಡಿದ್ದೇನೆ. ಅದು ಈಗಲೂ ಇದೆಯೋ ಇಲ್ಲವೋ ನಾ ಕಾಣೆ. ಇಲ್ಲದಿದ್ದರೆ ಅದು ನಮ್ಮೆಲ್ಲರ ನಷ್ಟ.
ಇತ್ತೀಚಿಗೇನೋ ಅನೇಕ ಪ್ರತಿಭಾವಂತ ಸಂಗೀತಗಾರರು ತಮ್ಮದೇ ರಾಗ-ಶೈಲಿಗಳಲ್ಲಿ ಹಾಡಿ ಜನಪ್ರಿಯಗೊಳಿಸುತ್ತಿದ್ದಾರೆ, ಆದರೆ ಅದೇಕೋ ಅದರಲ್ಲಿ ಆ ಸಾಂಪ್ರದಾಯಿಕ ಶೈಲಿಯ originality ಕಾಣಬರುತ್ತಿಲ್ಲ. ಈ ಹಾಡುಗಳನ್ನು ಮಠದ ಶೈಲಿಯಲ್ಲಿ ಹಾಡಿ-ಕೇಳಿ ಬಲ್ಲವರು ಅದನ್ನು ಧ್ವನಿಮುದ್ರಿಸಿ ಕಳುಹಿಸಿದರೆ, ಅದೆಲ್ಲವನ್ನು ಒಂದೆಡೆ ಸಂಗ್ರಹಿಸಬಹುದು. ಅದೊಂದು ಆಸ್ತಿಯಾಗುತ್ತದೆ ಎಂದು ನನ್ನ ಅನಿಸಿಕೆ.
.
ವಿ.ಸೂ: ಶ್ರೀ ಪ್ರಸನ್ನ ತೀರ್ಥರ ಆರಾಧನೆಯ ಸಂದರ್ಭದಲ್ಲಿ ಸಿದ್ಧಪಡಿಸಿದ ಈ ಲೇಖನಕ್ಕಾಗಿ ಕೆಲ ಮಾಹಿತಿಗಳನ್ನು "ಪ್ರಸನ್ನ ಸಾಹಿತ್ಯ ಸೌರಭ" (ಪ್ರಕಾಶಕರು: ಶ್ರೀ ವಿದ್ಯಾಪ್ರಸನ್ನತೀರ್ಥ ಸ್ಮಾರಕ ಸಮಿತಿ, ಬೆಂಗಳೂರು) ಗ್ರಂಥದಿಂದ ಪಡೆಯಲಾಗಿದೆ, ಧನ್ಯವಾದಗಳೊಂದಿಗೆ.

Saturday, November 1, 2008

ಕನ್ನಡ ರಾಜ್ಯೋತ್ಸವ - ಒಂದು ಹರಟೆ

[ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ]

=====================
ಕನ್ನಡ ರಾಜ್ಯೋತ್ಸವ - ಒಂದು ಹರಟೆ
=====================
[ರಾಜ್ಯೋತ್ಸವದ ಗಲಾಟೆ ಎಲ್ಲೆಲ್ಲೂ. ನೇಪಥ್ಯದಲ್ಲಿ ಅಬ್ಬರದ ಸಂಗೀತ, ಆರ್ಕೆಸ್ಟ್ರಾ, ಮೈಕುಗಳ ಗದ್ದಲ. ರಂಗದ ಮೇಲೆ ೪-೫ ಮಂದಿ ಪ್ರವೇಶ]

ವ್ಯಕ್ತಿ ೧:
[ಜುಗುಪ್ಸೆಯಿಂದ] ಅಬ್ಬಬ್ಬಬ್ಬಾ... ಏನಯ್ಯಾ ಇದು ಗಲಾಟೆ! ಬೆಳಗ್ಗಿನಿಂದ ರಾತ್ರೀವರಗೂ ಒಂದೇ ಸಮನೆ ಕುಟ್ಟಿದ್ದೇ ಸೈ. ತಲೆ ಮೇಲೆ ಸುತ್ತಿಗೆ ಬಡಿದ್ಹಾಗೆ!

ವ್ಯಕ್ತಿ ೨:
ರಾಜ್ಯೋತ್ಸವ ಬಂತೂಂತಂದ್ರೆ ಜನಕ್ಕೆ ಶನಿಕಾಟ ಬಂದ ಹಾಗೇ ನೋಡು. ಇಡೀ ತಿಂಗಳು ಇವರ ಗದ್ದಲ ಸಹಿಸೋದೇ ಒಂದು ಯಮ ಸಾಹಸ ಆಗಿಬಿಡ್ತದೆ.

ವ್ಯಕ್ತಿ ೧:
ಇವ್ರು ಇಷ್ಟ್ ಕಡಿದ್ಹಾಕೋ ಸಂಪತ್ತಿಗೆ ನಾವು ಚಂದಾ ಬೇರೆ ಕೊಡಬೇಕು. [ನಾಟಕೀಯವಾಗಿ] ಅದೂ ಚಂದಾ ಕೇಳೊ ಸ್ಟೈಲ್ ನೋಡ್ಬೇಕು ಕಣಯ್ಯ. ಅದು ಅವಂದೇ ದುಡ್ಡು ಅನ್ನೋ ಹಾಗೂ, ಏನೊ... ನಮ್ಮ ಉಪ್ಕಾರಕ್ಕೆ ನಮ್ಹತ್ರ ಬಿಟ್ಟಿದಾನೆ ಅನ್ನೋಹಾಗೂ ಮಾತು...

ವ್ಯಕ್ತಿ ೩:
ಏ, ಅದೇನ್ರಯ್ಯ? ನಿಮಗೆ ಚಂದಾ ಕೊಡೋದಕ್ಕೆ ಇಷ್ಟಇಲ್ದೇ ಇದ್ರೆ, ಬಿಡಿ. ಅವ್ರಷ್ಟಕ್ಕೆ ಅವ್ರು ರಾಜ್ಯೋತ್ಸವ ಆಚರಣೆ ಮಾಡಿದ್ರೆ, ನಿಮ್ದೇನ್ ಹೋಗುತ್ರಯ್ಯಾ?

ವ್ಯಕ್ತಿ ೪:
ಅಲ್ಲಪ್ಪ, ಕನ್ನಡ ನಾಡ್ನಲ್ಲಿ ಹುಟ್ಟಿ, ಕನ್ನಡದ ಅನ್ನಾನೇ ತಿಂದು, ಕನ್ನಡದ ನೀರ್ನೇ ಕುಡಿಯೋ ನಿಮಗೆ, ಒಂಚೂರಾದ್ರೂ ಕನ್ನಡ ಅಭಿಮಾನ ಬೇಡ್ವೇನ್ರಯ್ಯ? ದಿನಾ ಮಾಡ್ತಾರ ರಾಜ್ಯೋತ್ಸವಾನ? ವರ್ಷಕ್ಕೊಂದ್ಸಾರಿನಪ್ಪ... ನೀವೂ ಇದ್ರಲ್ಲಿ ಸಂತೋಷದಿಂದ ಭಾಗವಹಿಸೋದ್ ಬಿಟ್ಟು, ಕನ್ನಡ ರಾಜ್ಯೋತ್ಸವಾನೇ ಶನಿಕಾಟ ಅಂತೀರಲ್ಲ, ನೀವು ನಿಜವಾಗ್ಲೂ ಕನ್ನಡಿಗರೇನಯ್ಯ?

ವ್ಯಕ್ತಿ ೩:
[ಅನುಮೋದಿಸುತ್ತಾ - ವ್ಯಕ್ತಿ ೧ ಮತ್ತು ೨ ಕಡೆ] ಅದೇಯ ಮತ್ತೆ. ರಾಜ್ಯೋತ್ಸವಾನಂತೆ, ಶನಿಕಾಟ ಅಂತೆ... [ಬೆದರಿಸುವಂತೆ] ಯ್ಯೋಯ್... ಹೀಗೆಲ್ಲಾ ನಂಹತ್ರ ಮಾತಾಡಿದ್ರಿ, ಸರಿ ಹೋಯ್ತು. ಹೊರಗೆಲ್ಲಾರೂ ಮಾತಾಡೀರ, ಜೋಕೆ! ಕಳ್ದ್ಹೋಗ್ತೀರ, ಹುಷಾರ್!
[ಅವರವರಲ್ಲೇ ಜೋರಾದ ವಾಗ್ವಾದ ನಡೆಯ ತೊಡಗುತ್ತದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತದೆ. ಕನ್ನಡ ಪ್ರೊಫೆಸರ್ ವೆಂಕಟಗಿರಿ ಪ್ರವೇಶಿಸುತ್ತಾರೆ]

ವೆಂಕಟಗಿರಿ:
[ಜಗಳ ಬಿಡಿಸಲು ಯತ್ನಿಸುತ್ತಾ] ಏಯ್ ಏಯ್ ಏಯ್... ನಿಲ್ಸಿ, ನಿಲ್ಸಿ. ಏನಿದು [ನೋಡಿ ಚಕಿತನಾಗಿ] ಅರೇ! ಏನಿದು, ಪಿ.ಜಿ. ಪೈಲ್ವಾನ್ರು ನಾಕೂ ಜನಾನೂ ಸೇರಿಬಿಟ್ಟಿದಾರೆ! [ಬಿಡಿಸಿ ದೂರ ಮಾಡಿ] ಏನ್ರಯ್ಯಾ ಇದು... ಕಾಯ್ತಾ ಇರ್ತಾರಪ್ಪ ಕೈ ಕೈ ಮಿಲಾಯ್ಸೋದಕ್ಕೆ. ಏನಾಯ್ತ್ರಪ್ಪಾ?

[ನಾಲ್ಕೂ ಜನ ಹಾವಭಾವಗಳೊಂದಿಗೆ, ನಡೆದಿದ್ದನ್ನು ವಿವರಿಸುತ್ತಾರೆ]

[ಕೇಳುತ್ತಿದ್ದು, ಕುಚೇಷ್ಟೆಯಿಂದ ನಗುತ್ತಾ] ಓಹೋಹೋ... ನೀವೆಲ್ಲಾ "ಕನ್ನಡ ಹೋರಾಟ" ಮಾಡ್ತಾ ಇದೀರ ಅಂತಾಯ್ತು!

ವ್ಯಕ್ತಿ ೩:
[ನಸುಕೋಪದಿಂದ] ಅಯ್... ಏನ್ಸಾರ್, ನೀವೂ ಇವ್ರ ಥರಾನೇ...

ವೆಂಕಟಗಿರಿ:
[ನಸುನಗುತ್ತಾ, ಸಮಾಧಾನಿಸುವವನಂತೆ, ೩ನೇ ವ್ಯಕ್ತಿಗೆ] ಅಲ್ಕಾಣಯ್ಯಾ ಚಂದ್ರಣ್ಣ, ಈ ಗದ್ದಲ ತಡೀಲಾರ್ದೇ ರಾಜಪ್ಪ ಏನೋ ಅಂದ್ನಪ್ಪ; ಅವ್ನು ಏನಂದ ಅಂತ ಅರ್ಥಾನೂ ಮಾಡ್ಕೊಳ್ದೇ ಅವನ್ಗೆ ಹೊಡ್ಯಕ್ಕೆ ಹೋಗಿದ್ಯಲ್ಲ... [ಕ್ಷಣ ತಡೆದು] ಮಸಲಾ, ಈಗ ಅವನಿಗೆ ಕನ್ನಡಾಭಿಮಾನ ಇಲ್ವೇ ಇಲ್ಲ ಅಂತ್ಲೇ ಇಟ್ಕೋಳ್ಳೋಣ. ನೀನು ಅವನಿಗೆ ಹೊಡೆದ್ರೆ ಕನ್ನಡಾಭಿಮಾನ ಬರುತ್ತೇನಯ್ಯ?
[ಚಂದ್ರಣ್ಣ ಇರುಸುಮುರುಸಿನಿಂದ ಬೆಪ್ಪ ನಗೆ ನಗುತ್ತಾ ತಲೆ ತಗ್ಗಿಸುವನು].

[ವೆಂಕಟಗಿರಿ ಮುಂದುವರಿಸುತ್ತಾ] ನೋಡ್ರಯ್ಯಾ, ಅಭಿಮಾನ ಅನ್ನೋದು ಬಲಪ್ರಯೋಗದಿಂದ, ಗದ್ಲಾ ಹಚ್ಚೋದ್ರಿಂದ ಬರೋದಲ್ಲ. ಅದು, ನಮ್ಮ ನಾಡು, ನಮ್ಮ ಸಂಸ್ಕೃತಿಗಳನ್ನ ತಿಳಿದುಕೊಳ್ಳೋದ್ರಿಂದ ಬರೋದು. [ತಡೆದು, ನಿಧಾನವಾಗಿ ಭಾವುಕನಾಗುತ್ತಾ] ಎಂಥಾ ನಾಡು ಇದು. ಸಿರಿಗಂಧದ ಬೀಡು, ಮರಿದುಂಬಿ-ಕೋಗಿಲೆಗಳ ಗೂಡು. "ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಅಂತಾನೆ, ಆದಿ ಕವಿ ಪಂಪ. ಸಸ್ಯ ಶ್ಯಾಮಲೆ, ಸಿರಿದೇವಿ ಕನ್ನಡ ತಾಯಿಗೆ ನಿತ್ಯೋತ್ಸವ - ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ-ಗಂಧಗಳಲ್ಲಿ. "ಕಾವೇರಿಯಿಂದಮಾ ಗೋದಾವರಿವರೆಗಿರ್ದ" ಕನ್ನಡ ನಾಡಿನ ನೆಲ-ಜಲ, ಜನ, ಸಿರಿಸಂಪತ್ತನ್ನು ಪ್ರಾಚೀನ ಕವಿ ಶ್ರೀವಿಜಯನಿಂದ ಹಿಡಿದು ಎಷ್ಟು ಜನ ಕವಿಗಳು ಹಾಡಿ ಹೊಗಳಿದ್ದಾರೆ!

ವ್ಯಕ್ತಿ ೧:
ಅದನ್ನೇ ಸಾರ್, ನಾನು ಹೇಳಿದ್ದು. ಆ ಭವ್ಯ ಸಂಸ್ಕೃತಿ ಎಲ್ಲಿ, ಈ ಗಲಾಟೆ, ಗೂಂಡಾಗಿರಿ ಎಲ್ಲಿ...

ವೆಂಕಟಗಿರಿ:
[ಅನುಮೋದಿಸುತ್ತಾ] ಅದೇ ನಾನೂ ಹೇಳಿದ್ದು. ಹೀಗೆ ಯಾಕಾಗ್ತಾ ಇದೆ? ಯಾಕೇಂದ್ರೆ, ನಮಗೆ ನಮ್ಮ ಬಗ್ಗೆ ಹೆಮ್ಮೆ ಏನೋ ಇದೆ, ಆದರೆ ಯಾವುದರ ಬಗ್ಗೆ ಹೆಮ್ಮೆ ಪಡಬೇಕು ಅಂತಾನೇ ನಮಗೆ ಗೊತ್ತಿಲ್ಲ. ಯಾವುದರ ಬಗ್ಗೆ ನಾಚಿಕೆ ಪಟ್ಟುಕೋ ಬೇಕೋ ಅದರ ಬಗ್ಗೆ ಹೆಮ್ಮೆ ಪಡ್ತೀವಿ. ಅದು ದುರಭಿಮಾನ, ಒಣಹೆಮ್ಮೆ. ಅದು ಹೋಗಬೇಕು, ಅಭಿಮಾನ ಬರಬೇಕು, ರಾಜ್ಯೋತ್ಸವ ನಿಜವಾಗ್ಲೂ ನಮ್ಮ ಹೆಮ್ಮೆಯ ಉತ್ಸವ ಆಗ್ಬೇಕು ಅಂದ್ರೆ, ನಮ್ಮ ಇತಿಹಾಸ, ಪರಂಪರೆ, ಸಾಮರ್ಥ್ಯಗಳ ಬಗ್ಗೆ ತಿಳೀಬೇಕು. ಹಾಗೇ ನಮ್ಮ ಕುಂದುಗಳನ್ನೂ ತೆರೆದ ಮನಸ್ಸಿನಿಂದ ಒಪ್ಕೋಬೇಕು.

ವ್ಯಕ್ತಿ ೧:
ಸಿರಿಸಮೃದ್ಧವಾದ ಈ ನೆಲದಲ್ಲಿ ಅದೆಷ್ಟು ರಾಜವಂಶಗಳು; ಗಂಗ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯ ನಗರದ ಅರಸರು, ಮೈಸೂರು ಅರಸರು...

ವ್ಯಕ್ತಿ ೨:
ಪುಲಿಕೇಶಿ, ನೃಪತುಂಗ, ವಿಷ್ಣುವರ್ಧನ, ಕೃಷ್ಣದೇವರಾಯ, ರಣಧೀರ ಕಂಠೀರವ, ಕಿತ್ತೂರ ಚನ್ನಮ್ಮ, ಒನಕೆ ಓಬವ್ವ, ಟಿಪ್ಪೂ ಸುಲ್ತಾನ್... ಎಷ್ಟೊಂದು ಜನ ವೀರರು ಈ ಮಣ್ಣಿನಲ್ಲಿ ಮೆರೆದವರು!

ವೆಂಕಟಗಿರಿ:
ಹೌದು. ಆದ್ರೆ ನಮ್ಮ ನಾಡು ಕೇವಲ ನೆಲ-ಜಲಗಳ ಸಿರಿಯಷ್ಟೇ ಅಲ್ಲ; ಧೀರರ ನಾಡಷ್ಟೇ ಅಲ್ಲ; ಕಲೆ-ಸಂಸ್ಕೃತಿ-ತಂತ್ರಜ್ಞಾನಗಳ ನೆಲೆವೀಡೂ ಹೌದು. ಕನ್ನಡಿಗರ ಕಲಾ ಸಿದ್ಧಿ ಐಹೊಳೆ, ಬಾದಾಮಿ, ಬೇಲೂರು-ಹಳೇಬೀಡುಗಳಲ್ಲಿ ತನ್ನ ಉತ್ತುಂಗವನ್ನು ಕಂಡರೆ, ಕನ್ನಂಬಾಡಿಯ ಕಟ್ಟೆ, ಕನ್ನಡಿಗರ ಕ್ರಿಯಾಸಿದ್ಧಿಗೆ ಸಾಕ್ಷಿಯಾಗಿದೆ.

ವ್ಯಕ್ತಿ ೧:
ಅಲ್ಲಮ, ಬಸವ, ರಾಮಾನುಜ, ಮಧ್ವ, ವಿದ್ಯಾರಣ್ಯರ ಧರ್ಮಭೂಮಿ ಇದು; ಹಕ್ಕ-ಬುಕ್ಕರ ಕರ್ಮ ಭೂಮಿ; ಪಂಪ, ರನ್ನ, ಲಕ್ಶ್ಮೀಶ, ಕುಮಾರವ್ಯಾಸ, ಹರಿಹರ, ರಾಘವಾಂಕ ಮುಂತಾದ ಕವಿಕೋಗಿಲೆಗಳ ಪುಣ್ಯಾರಾಮ ಇದು; ದಾಸರ-ಶರಣರ ಅನುಭಾವ-ಸಾಹಿತ್ಯಗಳಿಂದ ಶ್ರೀಮಂತಗೊಂಡ ನೆಲ ಇದು;

ವ್ಯಕ್ತಿ ೨:
ಆಧುನಿಕರಲ್ಲಿ? ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಕಾರ್ನಾಡ್... ಪಟ್ಟಿ ಬೆಳೀತಾನೇ ಹೋಗುತ್ತೆ. ಬೇರೆ ಯಾವ ಭಾಷೆಗೂ ದಕ್ಕದ ಏಳು ಜ್ಞಾನಪೀಠ ಪ್ರಶಸ್ತಿಗಳ ಗರಿ, ಕನ್ನಡದ ಕಿರೀಟಕ್ಕೆ!

ವ್ಯಕ್ತಿ ೪:
ಅದು ಸರಿ ಸಾರ್, ರಾಜ್ಯೋತ್ಸವ ಅಂದ್ರೆ ನಮ್ಮಲ್ಲಿ, ಕನ್ನಡ ಬಾವುಟ ಹಾರ್ಸೋದು, ಆರ್ಕೆಸ್ಟ್ರಾ, ಭಾಷಣ ಇದೆಲ್ಲ ಮಾಡ್ತೀವಿ. ಆದ್ರೆ, ಬೇರೆ ರಾಜ್ಯಗಳಲ್ಲೂ ಆಯಾ ರಾಜ್ಯೋತ್ಸವ ಯಾಕೆ ಮಾಡಲ್ಲ?

ವೆಂಕಟಗಿರಿ:
ಒಳ್ಳೇ ಪ್ರಶ್ನೆ. ಮೊದಲಿಂದಲೂ ಅಸ್ತಿತ್ವದಲ್ಲಿ ಇರುವ ರಾಜ್ಯಗಳಲ್ಲಿ ಬಹುಶಃ ಮಾಡೊಲ್ವೋ ಏನೊ. ಆದ್ರೆ, ನಮ್ಮ ರಾಜ್ಯ, ನಾವು ಹೋರಾಡಿ ಗಳಿಸಿದ್ದು. ಸುಮಾರು ೧೦೦ ವರ್ಷಗಳ ಸುದೀರ್ಘ ಇತಿಹಾಸ ಇದೆ, ಈ ಹೋರಾಟಕ್ಕೆ!

ಎಲ್ಲರೂ:
[ಆಶ್ಚರ್ಯ]

ವೆಂಕಟಗಿರಿ:
೧೯೦೫ರ ಸುಮಾರು. ಆಗ ತಾನೆ ವಿದ್ಯಾಭ್ಯಾಸ ಮುಗಿಸಿ ಪುಣೆಯಿಂದ ಬಳ್ಳಾರಿ ಜಿಲ್ಲೆಯ ಆನೆಗೊಂದಿಗೆ ಮರಳಿದ ಆ ಯುವಕ, ತುಸುದೂರದಲ್ಲಿ ಮುಗಿಲಿಗೆ ಮುತ್ತಿಡುವಂತೆ ನಿಂತಿದ್ದ ಭವ್ಯ ಗೋಪುರವನ್ನು ನೋಡಿ ಕೇಳ್ತಾನೆ, "ಅದು ಏನು?" ಅದು ಹಂಪೆಯ ವಿರೂಪಾಕ್ಷ ದೇವಾಲಯ ಎಂಬ ಸ್ಥಳೀಯನ ಉತ್ತರ ಅವನನ್ನು ಚಕಿತಗೊಳಿಸುತ್ತದೆ. ಕರ್ನಾಟಕದ ಮೂಲೆ ಕೊಂಪೆಯಲ್ಲಿದ್ದ, ಹಾಳು ಹಂಪೆಯೇ ಪ್ರಖ್ಯಾತ ವಿಜಯನಗರ ಮಹಾಸಾಮ್ರಾಜ್ಯದ ರಾಜಧಾನಿಯಾಗಿತ್ತು ಅನ್ನೋ ಸತ್ಯ ಅವನಿಗೆ ಹೊಳೀತಲ್ಲ, ಆ ಕ್ಷಣ, ಕರ್ನಾಟಕದ ಇತಿಹಾಸಕ್ಕೆ ಹೊಸ ತಿರುವನ್ನೇ ಕೊಟ್ಟಿತು. ಈ ಯುವಕ ಬೇರಾರೂ ಅಲ್ಲ, ಮುಂದೆ ನಾಡಿನಾದ್ಯಂತ ಸಂಚರಿಸಿ, ಕನ್ನಡಿಗರ ಎದೆ ಎದೆಯಲ್ಲೂ ಕನ್ನಡಾಭಿಮಾನದ ಕೆಚ್ಚನ್ನು ಹೊತ್ತಿಸಿದ ಆಲೂರು ವೆಂಕಟರಾಯರು. ಬಂಗಾಳ ಪಂಜಾಬಗಳಂತೆಯೇ ಕನ್ನಡ ನಾಡು ಸಹ ಭವ್ಯ ಇತಿಹಾಸವನ್ನು ಹೊಂದಿದೆ ಅನ್ನೋ ಸತ್ಯ ಮನದಟ್ಟಾಗುತ್ತಿದ್ದಂತೆ, ಯುವಕ ವೆಂಕಟರಾಯರು ಈ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತರಾದರು. ಸಂಶೋಧನೆಗಳನ್ನು ಕೈಗೊಂಡರು. ಇದರ ಫಲವೇ ಕನ್ನಡ ಇತಿಹಾಸದ ಹೆಮ್ಮೆಯ ಯಶೋಗಾಥೆ, "ಕರ್ನಾಟಕ ಗತ ವೈಭವ". ಜೊತೆಜೊತೆಗೆ, ಹರಿದು ಹಂಚಿಹೋಗಿದ್ದ ನಾಡಿನಾದ್ಯಂತ ಸಂಚಾರ ಕೈಗೊಂಡ ರಾಯರು ತಮ್ಮ ಪ್ರಖರವಾದ ಭಾಷಣಗಳಿಂದ ಜನಮನದಲ್ಲಿ ಕನ್ನಡತನದ ಮಿಂಚು ಹರಿಸಿದರು; ಕಣ್ಣುಗಳಲ್ಲಿ ಅಖಂಡ ಕರ್ನಾಟಕದ ಕನಸನ್ನು ಬಿತ್ತಿದರು.

ಎಲ್ಲರೂ:
[ಆಲಿಸುತ್ತಾರೆ]

ವೆಂಕಟಗಿರಿ:
ಮುಂದೆ ೧೯೧೫ರಲ್ಲಿ ಕರ್ಪೂರ ಶ್ರೀನಿವಾಸರಾಯರು ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವುದರೊಂದಿಗೆ ಕರ್ನಾಟಕ ಏಕೀಕರಣದ ಆಶಯ ಸ್ಪಷ್ಟ ರೂಪು ಪಡೀತು. ೧೯೨೦ರಲ್ಲಿ ಕರ್ನಾಟಕ ರಾಜಕೀಯ ಕಾಂಗ್ರೆಸ್ ಹಾಗೂ ೧೯೨೪ರಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾಂ ಕಾಂಗ್ರೆಸ್ ಅಧಿವೇಶನಗಳು ಕರ್ನಾಟಕ ಏಕೀಕರಣದ ಬೇಡಿಕೆ ಮುಂದಿಟ್ಟವು. ಆಗ ದಕ್ಷಿಣ ಭಾರತದಲ್ಲಿ ಕನ್ನಡ ಭಾಷಿಕರ ೨೨ ಪ್ರದೇಶಗಳಿದ್ದವು. ಅವುಗಳಲ್ಲಿ ಅತಿ ದೊಡ್ಡದು ಮೈಸೂರು ಪ್ರಾಂತ್ಯ. ಸ್ವಾತಂತ್ರ್ಯಾನಂತರ ಈ ಎಲ್ಲ ಪ್ರದೇಶಗಳನ್ನು ಪುನರ್ವಿಂಗಡಿಸಿ ಮುಂಬೈ, ಮದರಾಸು, ಹೈದರಾಬಾದ್, ಕೊಡಗು ಹಾಗೂ ಮೈಸೂರು ಪ್ರಾಂತ್ಯಗಳಿಗೆ ಹಂಚಲಾಯಿತು. ಏಕೀಕೃತ ಕರ್ನಾಟಕದ ಕನಸು ಕನಸಾಗೇ ಉಳೀತು.

ವ್ಯಕ್ತಿ ೪:
ಎಂಥ ವಿಪರ್ಯಾಸ! ಕನ್ನಡಿಗರು ತಮ್ಮ ನಾಡಿನಲ್ಲಿ ತಾವೇ ಪರಕೀಯರು!

ವೆಂಕಟಗಿರಿ:
ಹೌದು. ೧೯೪೭ರಲ್ಲೇ ಭಾರತ ಸ್ವತಂತ್ರಗೊಂಡರೂ, ಕನ್ನಡಿಗರ "ಸ್ವಾತಂತ್ರ್ಯ" ಹೋರಾಟ ನಿಲ್ಲಲಿಲ್ಲ! ಅದಾಗಿ ಒಂಬತ್ತು ವರ್ಷಗಳ ನಂತರ, ೧೯೫೬ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ಆಯೋಗ ತನ್ನ ವರದಿ ಮಂಡಿಸಿತು. ಅದರ ಶಿಪಾರಸಿನ ಮೇರೆಗೆ, ಐದೂ ರಾಜ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡದ ಪ್ರದೇಶಗಳನ್ನೆಲ್ಲ ಒಗ್ಗೂಡಿಸಿ ಒಂದು ಪ್ರತ್ಯೇಕ ರಾಜ್ಯವನ್ನು ರಚಿಸಲಾಯಿತು. ಹೀಗೆ ನವೆಂಬರ್ ೧, ೧೯೫೬ರಂದು ಉದಯವಾಯಿತು ನಮ್ಮ ಚಲುವ ಕನ್ನಡ ನಾಡು. ಆದರೆ, ಇದಕ್ಕೆ "ಕರ್ನಾಟಕ" ಎಂಬ ಹೆಸರು ಬಂದದ್ದು ಮಾತ್ರ ೧೯೭೩ರಲ್ಲಿ.

ವ್ಯಕ್ತಿ ೪:
ಹಾಂ! ಇಷ್ಟು ಹೋರಾಡಿ ಪಡೆದ ನಾಡು. ನಮಗೆ ಅದರ ಬಗ್ಗೆ ಅಷ್ಟೊಂದು ಅಭಿಮಾನ ಇರೋದು ಆಶ್ಚರ್ಯವೇನಲ್ಲ!

ವೆಂಕಟಗಿರಿ:
ಅದೇನೋ ಸರಿ. ಕನ್ನಡದಲ್ಲಿ ಏನಿಲ್ಲ ಹೇಳಿ? ಸುಂದರ ಭಾಷೆ, ತುಂಬಿ ತುಳುಕುವ ಸಂಪತ್ತು, ಶ್ರೀಮಂತ ಸಾಹಿತ್ಯ-ಕಲೆ-ಸಂಗೀತ, ಭವ್ಯ ಇತಿಹಾಸ... ಇವಕ್ಕೆಲ್ಲಾ ವಾರಸುದಾರರು, ನಾವು. ನಮ್ಮ ಬೆನ್ನನ್ನು ನಾವು ತಟ್ಟಿಕೊಳ್ತಾನೇ ಹೋಗಬಹುದು. ಆದರೆ ಇದರಲ್ಲಿ ನಮಗೆ ದಕ್ಕಿದ್ದೆಷ್ಟು; ಎಷ್ಟು ಉಳಿಸಿಕೊಳ್ತಿದೀವಿ... ನೋಡಿದರೆ ಮನಸ್ಸು ಭಾರವಾಗುತ್ತೆ. ಕನ್ನಡದ ನೆಲ-ಜಲ-ಅರಣ್ಯಗಳು ಲೂಟಿಯಾಗ್ತಿವೆ, ಮಲಿನವಾಗ್ತಿವೆ; ಕನ್ನಡದ ಹೆಸರಲ್ಲಿ ಬರೇ ಮಾತಾಡ್ತೀವಿ; ವರ್ಷಕ್ಕೊಮ್ಮೆ ರಾಜ್ಯೋತ್ಸವ ಮಾಡ್ತೀವಿ, ಮೆರೀತೀವಿ, ಮರೀತೀವಿ. ಇನ್ನೊಂದು ಭಾಷೇನ ದ್ವೇಷಿಸೋದನ್ನೇ ಕನ್ನಡಪ್ರೇಮ ಅಂತ ಭ್ರಮಿಸುತ್ತೀವಿ! ನಮ್ಮಲ್ಲಿ ಎಷ್ಟು ಜನ ನಮ್ಮ ಭವ್ಯ ಸಂಸ್ಕೃತಿ-ಪರಂಪರೆಗಳ ಬಗ್ಗೆ ತಿಳಿದಿದ್ದೇವೆ, ಅಭಿಮಾನ ತಳೆದಿದ್ದೇವೆ ಹೇಳಿ, ನೋಡೋಣ? ಎಷ್ಟು ಜನ ಕನ್ನಡ ಪುಸ್ತಕಗಳನ್ನು ಕೊಳ್ಳುತ್ತೇವೆ, ಎಷ್ಟು ಜನ ಅವನ್ನು ಓದುತ್ತೇವೆ? ಬೇಡಪ್ಪ, ಎಷ್ಟು ಜನ ಕೊನೆಯ ಪಕ್ಷ ಸ್ವಚ್ಛ-ಸ್ಪಷ್ಟ ಕನ್ನಡ ಮಾತಾಡ್ತೇವೆ-ಬರೀತೇವೆ? - ಕನ್ನಡ ಅಭಿಮಾನವೆಂದರೆ, ಇದು.

ಎಲ್ಲರೂ:
[ಅನುಮೋದಿಸುವಂತೆ ತಲೆದೂಗುವರು]

ವೆಂಕಟಗಿರಿ:
ಆದರೆ ಈವತ್ತು ನೋಡಿ, ಕನ್ನಡ ರಾಜ್ಯೋತ್ಸವವೆಂದರೆ ಬರೀ ಮೈಕಾಸುರನ ಹಾವಳಿ ಎಂದಾಗಿದೆ. ಕರ್ನಾಟಕ ಸಂಗೀತದ ಸ್ಥಾನವನ್ನು ಈ ನೆಲದ್ದಲ್ಲದ ಅಬ್ಬರದ ಸಿನಿಮಾ ಸಂಗೀತ ಆಕ್ರಮಿಸಿದೆ. "ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ" ಎಂದು ಹಿರಿಯರು ಆಶಿಸಿದ್ದರು. ಆದರೆ ಅದನ್ನೇ ಇಂದು ನಾವು ದೇವರಲ್ಲಿ ಬೇಡಿಕೊಳ್ಳಬೇಕಾಗಿದೆ. ಕನ್ನಡಕ್ಕೆ ನಮ್ಮಿಂದಲೇ ಸಂಚಕಾರ ಬಂದೊದಗಿದೆ. ರಾಜ್ಯೋತ್ಸವದಂದು ದೊಡ್ಡ ದೊಡ್ಡ ಭಾಷಣ ಮಾಡ್ತೇವೆ; ಕನ್ನಡ ಹೋರಾಟದ ಹೆಸರಲ್ಲಿ ರಾಜಕೀಯ ಮಾಡ್ತೇವೆ.

ವ್ಯಕ್ತಿ ೧:
ಕನ್ನಡದ ಸಾಂಸ್ಕೃತಿಕ-ಸಾಹಿತ್ಯ ಕ್ಷೇತ್ರಗಳಲ್ಲೂ ರಾಜಕೀಯ ಕಾಲಿಟ್ಟಿದೆ.

ವೆಂಕಟಗಿರಿ:
ಯಾವ ನಾಡಿನ ಸಾಕಾರಕ್ಕಾಗಿ ಅನೇಕ ಚೇತನಗಳು ಜೀವವನ್ನೇ ತೇದುವೋ ಅದೇ ಕನ್ನಡ ನಾಡಿನಲ್ಲಿ ಇವತ್ತು ಪ್ರತ್ಯೇಕತೆಯ ಅಪಸ್ವರ ಕೇಳಬರುತ್ತಿದೆ. ಈಗ ಹೇಳಿ, ಎಲ್ಲಿದೆ ಕನ್ನಡ? ಎಲ್ಲಿದೆ ಕನ್ನಡತನ?

ಎಲ್ಲರೂ:
[ನಿರುತ್ತರ-ಮೌನ]

ವೆಂಕಟಗಿರಿ:
[ಮುಂದುವರಿಸುತ್ತಾ] ಈ ಸಂದರ್ಭದಲ್ಲಿ ಕುವೆಂಪುರವರ ಸಾಲುಗಳು ನೆನಪಿಗೆ ಬರುತ್ತವೆ [ಘಂಟಾಘೋಷವಾಗಿ ಹೇಳುವನು]

"ಅಖಂಡ ಕರ್ನಾಟಕ:
ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ ಸರ್ವಜ್ಞ ಷಡಕ್ಷರ:
ಸರಸ್ವತಿಯೆ ರಚಿಸಿದೊಂದು ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ!

"ಕರ್ಣಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಕಾವ ಕೊಲುವ ಒಲವ ಬಲವಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ!"

ವ್ಯಕ್ತಿ ೩:
ಸಾರ್, ನಾವು ಈ ವರಗೂ ಕನ್ನಡ ರಾಜ್ಯೋತ್ಸವದ ಬಗ್ಗೆ ಎಷ್ಟು ಹಗುರವಾದ ಭಾವನೆ ಇಟ್ಕೊಂಡಿದ್ವಿ ಅಂತ ನೋಡಿದ್ರೆ, ನಮಗೇ ನಾಚಿಕೆ ಆಗುತ್ತೆ ಸಾರ್.

ವ್ಯಕ್ತಿ ೨:
ನೀವು ಹೇಳೋದು ಸರಿ ಸಾರ್. ಕನ್ನಡ ರಾಜ್ಯೋತ್ಸವದ ಆಚರಣೆ ಹೀಗಲ್ಲ. ಅದು ನಿಜವಾದ ಕನ್ನಡತನಾನ ಬಿಂಬಿಸಬೇಕು.

ವ್ಯಕ್ತಿ ೧:
ಹಾಗಾಗಬೇಕಾದ್ರೆ, ನಮ್ಮ ವ್ಯಕ್ತಿತ್ವದಲ್ಲಿ ಕನ್ನಡತನ ಮೈಗೂಡಬೇಕು.

ವ್ಯಕ್ತಿ ೪:
ಹೌದು. ನಾವು ಕನ್ನಡ ಕಲೀಬೇಕು, ಕಲಿಸಬೇಕು. ಬೇರೆ ಭಾಷೆ ಸಂಸ್ಕೃತಿಗಳ್ನೂ ನೋಡಬೇಕು, ಕನ್ನಡ ಬೆಳೆಸಬೇಕು.

ವೆಂಕಟಗಿರಿ:
[ಸಂತಸದಿಂದ] ಸಂತೋಷ, ಸ್ನೇಹಿತರೆ. ಹಾಗಂತ ನಾವೆಲ್ಲಾ ಪ್ರತಿಜ್ಞೆ ಮಾಡೋಣ.

[ಘೋಷಿಸುವನು] ಕನ್ನಡವೇ...

ಎಲ್ಲರೂ:
ನಮ್ಮುಸಿರು...

ವೆಂಕಟಗಿರಿ:
ಸಿರಿಗನ್ನಡಂ ...

ಎಲ್ಲರೂ:
ಗೆಲ್ಗೆ

ವೆಂಕಟಗಿರಿ:
ಸಿರಿಗನ್ನಡಂ ...

ಎಲ್ಲರೂ:
ಆಳ್ಗೆ

ವೆಂಕಟಗಿರಿ:
ಸಿರಿಗನ್ನಡಂ...

ಎಲ್ಲರೂ:
ಬಾಳ್ಗೆ

[ಮೈಕುಗಳ ಗದ್ದಲ ಈ ಹೊತ್ತಿಗೆ ಸಂಪೂರ್ಣ ನಿಂತಿದೆ. ನೇಪಥ್ಯದಲ್ಲಿ "ಎಲ್ಲಾದರು ಇರು ಎಂತಾದರು ಇರು..." ಗೀತೆ ತೇಲಿ ಬರುತ್ತದೆ. ತೆರೆ]

Friday, October 31, 2008

ಕೊನೆಗೂ ಬಂತು, ಶಾಸ್ತ್ರೀಯ ಸ್ಥಾನ-'ಮಾನ'...

"ಸಾರ್, ಅಭಿನಂದನೆಗಳು" ಎಂದು ಗೆಳೆಯ ರಘು ಅಭಿನಂದಿಸಿದಾಗ ಏಕೆಂದು ಗೊತ್ತಾಗಲಿಲ್ಲ. ಮನೆ ಬದಲಿಸುವ ಗಡಿಬಿಡಿಯಲ್ಲಿ TV ಮುಂತಾದುವನ್ನೆಲ್ಲಾ ಕಟ್ಟಿಟ್ಟಿದ್ದಾಗಿತ್ತು. ದಿನಪತ್ರಿಕೆಯಲ್ಲೂ ಅಂಥಾ ಅಭಿನಂದನಾರ್ಹವಾದ ಸುದ್ದಿಯೇನೂ ಪ್ರಕಟವಾಗಿರಲಿಲ್ಲ. ನನಗಂತೂ ಯಾವ ಪ್ರಶಸ್ತಿಯೂ ಪ್ರಕಟವಾಗಿರಲಿಲ್ಲ (ಯಾವ ಪ್ರಶಸ್ತಿಗೂ ಅರ್ಜಿ ಹಾಕಿದ್ದ ನೆನಪೂ ಇಲ್ಲ)! ಆದ್ದರಿಂದ ನಾನು ಏಕೆಂದು ಕೇಳಿದಾಗ ಅವರಿಗೆ ಆಶ್ಚರ್ಯವಾಗಿರಲಿಕ್ಕೆ ಸಾಕು. "ಕೊನೆಗೂ ಕನ್ನಡಕ್ಕೆ ಪುರಸ್ಕಾರ ಕೊಡಿಸಿಬಿಟ್ರಲ್ಲ ಸಾರ್..." ಎಂದರು. ಯಾವ ಪುರಸ್ಕಾರ ಎಂದಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ದೊರೆತಿದೆ ಎಂದು ತಿಳಿಯಿತು. "ಓ ಹೌದಾ" ಎಂದು ಹೇಳಿ ಸುಮ್ಮನಾದೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ! ಇಡೀ ನಾಡಿಗೆ ನಾಡೇ ಪರಸ್ಪರ ಅಭಿನಂದಿಸಿಕೊಂಡು ಸಂಭ್ರಮಿಸುತ್ತಿದೆ; ಎಲ್ಲೆಲ್ಲೂ ಉತ್ಸಾಹ ಉಕ್ಕಿ ಹರಿಯುತ್ತಿದೆ; ಅಂಥಾದ್ದರಲ್ಲಿ ನನ್ನ ತಣ್ಣನೆಯ ಪ್ರತಿಕ್ರಿಯೆ ಅವರಿಗೆ ಕೊಂಚ ನಿರಾಸೆ ಮೂಡಿಸಿರಲಿಕ್ಕೆ ಸಾಕು. ಆ "ಓ ಹೌದಾ" ದಲ್ಲಿ "ಏನೀಗ?", "ಅದರಲ್ಲಿ ಖುಶಿ ಪಡುವುದೇನಿದೆ?" ಇತ್ಯಾದಿ ಅನೇಕ ಪ್ರಶ್ನೆಗಳು ಅವರಿಗೆ ಕಂಡಿರಬೇಕು. ಇವನ ಬಳಿ ಮಾತೇನು ಎಂದುಕೊಂಡು ಸುಮ್ಮನಾದರು.

E-mail ನೋಡಲೆಂದು ತೆರೆದರೆ mail-box ತುಂಬಿಹೋಗಿತ್ತು. ಅಭಿಮಾನ, ಅಭಿನಂದನೆ, ಒಂದುರೀತಿ ಸಾರ್ಥಕ ಭಾವ, ಇಷ್ಟಕ್ಕೇ ನಿಲ್ಲಬಾರದು, ಕನ್ನಡ ಆಡಳಿತಭಾಷೆಯಾಗಬೇಕು ಎಂಬ ಕರೆ, "ಎಲ್ಲಾದರು ಇರು ಎಂತಾದರು ಇರು... ", "ಸತ್ಯಮೇವ ಜಯತೇ..." ವಿವಿಧ ರೀತಿಯ ಪ್ರತಿಕ್ರಿಯೆಗಳ ಸಂತೆಯೇ ಅಲ್ಲಿತ್ತು. ಕೊನೆಗೂ ಕನ್ನಡಕ್ಕೆ ಪುರಸ್ಕಾರ; ಕೊನೆಗೂ... ಕೊನೆಗೂಊಊ... ಏಕೋ ಆ "ಕೊನೆಗೂ" ಎನ್ನುವ ಶಬ್ದ ಮನಸಿಗೆ ಒಂದುರೀತಿ ಪಿಚ್ಚೆನ್ನಿಸ ಹತ್ತಿತು. ನೂರು ಪ್ರಶ್ನೆಗಳು.

"ಕೊನೆಗೂ" ಯಾವುದರ ಕೊನೆ? ನಮ್ಮ ಉಗ್ರ ಹೋರಾಟದ ಕೊನೆಗೇ? ಕನ್ನಡ ಏರಬಹುದಾದ ಎತ್ತರದ ಕೊನೆಗೇ? ನಮ್ಮ ದೇಶದಲ್ಲಿ ಪುರಸ್ಕಾರಗಳ ಭಿಕ್ಷೆಗೆ ಕಾದು ಕುಳಿತ ಸಾಲಿನ ಕೊನೆಗೇ?... ಉತ್ತರ ಹೊಳೆಯಲಿಲ್ಲ. ಯೋಚಿಸಿದಷ್ಟೂ ಈ ಸಂಭ್ರಮದಲ್ಲಿ ನಮ್ಮ ಹೆಮ್ಮೆಗಿಂತಾ ನಮ್ಮ ಕೀಳರಿಮೆಯೇ ಒಡೆದು ಕಂಡಿತು.

ಸ್ಥಾನ-'ಮಾನ' ಹೊಡೆದಾಡಿ ಸಂಪಾದಿಸುವಂಥದ್ದೋ, ಅಥವಾ ಯೋಗ್ಯತೆಯನ್ನು ನೋಡಿದ ಯೋಗ್ಯರು (ಅಕಸ್ಮಾತ್ ಅಂಥವರೊಬ್ಬರು ಇದ್ದರೆ) ತಾವಾಗಿ ಕೊಡ ಮಾಡುವ ಮರ್ಯಾದೆಯೇ? (ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಕರೆಯುವ, ಮುಖ್ಯ ಅತಿಥಿಯ ಪರಿಚಯ ಭಾಷಣಕ್ಕಾಗಿ ಅವರಿಂದಲೇ "ಬಯೋ ಡಾಟಾ" ಕೇಳುವ ಸಂಸ್ಕೃತಿ ನಮ್ಮದು, ಇರಲಿ).

ಕನ್ನಡ ಒಂದು "classical" ಭಾಷೆ ಎನ್ನುವುದರಲ್ಲಿ ಎರಡು ಮಾತಿಲ್ಲ - ಅದರ ಹಿರಿಮೆಯಲ್ಲಿ, ಹಳಮೆಯಲ್ಲಿ, ಭಾಷೆಯ ಬಹುಶ್ರುತತೆಯಲ್ಲಿ, ಗತ್ತು-ಗಾಂಭೀರ್ಯಗಳಲ್ಲಿ, ಸಾಹಿತ್ಯ ಸಿರಿಯಲ್ಲಿ. ಪಂಪನಿಂದ ಹಿಡಿದು ಕುವೆಂಪುವಿನವರೆಗೆ ಬೆಳೆದು ಬಂದ ಸಾಹಿತ್ಯ ರಾಶಿಯಲ್ಲಿ ಜಗತ್ತಿನ ಶ್ರೇಷ್ಠ "classic"ಗಳ ಸಾಲಿಗೆ ನಿಲ್ಲುವ ಕೃತಿಗಳು ಬೇಕಾದಷ್ಟಿವೆ. ಈ ದೃಷ್ಟಿಯಿಂದ, ತಮಿಳನ್ನು "classic" ಎಂದು ಪರಿಗಣಿಸುವುದಾದರೆ (ಅಥವ ಪರಿಗಣಿಸದಿದ್ದರೂ) ಕನ್ನಡ ಖಂಡಿತಾ ಒಂದು "classic" ಭಾಷೆಯೇ ಸರಿ. ಆದರೆ ಕೇಂದ್ರ ಕನ್ನಡಕ್ಕೆ ಏಕೆ "ಶಾಸ್ತ್ರೀಯ ಭಾಷೆ" ಸ್ಥಾನ ಕೊಟ್ಟಿರಲಿಲ್ಲ, ತಮಿಳಿಗೆ ಮಾತ್ರಾ ಕೊಟ್ಟಿತ್ತು? ಅದರರ್ಥ ತಮಿಳು ಮಾತ್ರಾ ನಿಜಕ್ಕೂ ಶಾಸ್ತ್ರೀಯ ಭಾಷೆ, ಕನ್ನಡ ಅಲ್ಲ ಎಂದೇ? ಅಥವಾ ಕೇಂದ್ರ, ತಮಿಳನ್ನು ಅಭ್ಯಾಸ ಮಾಡಿದಷ್ಟು ಆಳವಾಗಿ ಕನ್ನಡವನ್ನು ಮಾಡಲಿಲ್ಲ ಎಂದೋ? ಅಥವಾ ತಮಿಳು ವಾದ್ಯಾರುಗಳ ಸಂಖ್ಯೆ ಕೇಂದ್ರ ಸಮಿತಿಗಳಲ್ಲಿ ಹೆಚ್ಚಿತ್ತು ಎನ್ನೋಣವೇ? ನನ್ನ ದೃಷ್ಟಿಯಲ್ಲಿ ಕಾರಣ ಇದಾವುದೂ ಅಲ್ಲ; ಎದ್ದು ಕಾಣುವ ತಮಿಳುತನದ ಉಪಸ್ಥಿತಿಯೇ (ಹಾಗೂ ಕನ್ನಡತನದ ಅನುಪಸ್ಥಿತಿ) ಬಹುಶಃ ಇದಕ್ಕೆ ಕಾರಣ.

ಇವತ್ತೂ ನೀವು ದಿಲ್ಲಿಗೆ ಹೋದರೆ ಅವರು ನಿಮ್ಮನ್ನು ನಿರ್ದೇಶಿಸುವುದು "ಮದ್ರಾಸೀ" ಎಂದೇ (ದಕ್ಷಿಣದವನು ಎಂದರ್ಥ). ರಾಜಕೀಯವಾಗಿ ಹಿಂದಿಯ ಸಾಂಪ್ರದಾಯಿಕ "ವೈರಿ" ತಮಿಳು (ಉತ್ತರ ಅಂದರೆ ಹಿಂದೀ, ದಕ್ಷಿಣ ಅಂದರೆ ತಮಿಳು!). ಅವನು ನಿಮ್ಮನ್ನು ತಿರಸ್ಕರಿಸಿದರೂ "ಮದ್ರಾಸೀ" ಎಂದೇ ತಿರಸ್ಕರಿಸುವುದು. ಪುರಸ್ಕರಿಸಿದರೂ "ಅವನು ಮದ್ರಾಸಿಯಾದರೆ ಏನು, ಅವನೂ ನಮ್ಮಂತೆಯೇ ಭಾರತೀಯನಲ್ಲವೇ" ಎಂದೇ ಪುರಸ್ಕರಿಸುವುದು. ಏಕೆ? ನಾವು ಎಲೆಮರೆಯ ಕಾಯಿಗಳು; ಯಾವುದಕ್ಕೂ ಅಡಾವುಡಿ ಮಾಡಿಕೊಂಡು ಮುಂದೆ (ಮೇಲೆ) ಬಿದ್ದು ಹೋಗುವುದಿಲ್ಲ; ನಮಗೆ ಬರಬೇಕಾದ್ದನ್ನೂ ನಾವು ಬಾಯಿ ಬಿಟ್ಟು ಕೇಳುವುದಿಲ್ಲ. ಉದಾಹರಣೆಗೆ ನೋಡಿ, ಹಿಂದಿ ರಾಜಭಾಷೆಯಾಗಿ ದೇಶದೆಲ್ಲೆಡೆ ಜಾರಿಯಲ್ಲಿದೆ, ತಮಿಳುನಾಡೊಂದನ್ನು ಬಿಟ್ಟು! - https://rajbhasha.gov.in/en/official-language-rules-1976. ಕೇಂದ್ರ, ತನ್ನ ಹಿಂದಿ ಸಂಬಂಧಿತ ಭಾಷಾ ನಿಯಮಗಳಲ್ಲಿ ತಮಿಳುನಾಡಿಗೆ ಸ್ಪಷ್ಟ ವಿನಾಯಿತಿ ನೀಡಿದೆ, ಏಕೆ? ತಮಿಳರು ಹಿಂದಿ ಬೇಡವೆಂದರು, ಬೇಡ. ನಾವು ಅವರೊಂದಿಗೆ ಕೈ ಕೂಡ ಜೋಡಿಸಲಿಲ್ಲ (ನಮಗೆ ಆ ಒಗ್ಗಟ್ಟು ಬೇಕೆನಿಸಲೂ ಇಲ್ಲ - ತಮಿಳು ನಮ್ಮ ಆಜನ್ಮ ವೈರಿ ತಾನೆ!).

ಇವತ್ತು ಇಬ್ಬರು ಕನ್ನಡಿಗರು ಬೇರೆಡೆ ಎಲ್ಲಾದರೂ ಭೇಟಿಮಾಡಲಿ, ಅವರು ಮಾತಾಡುವುದು ಹಿಂದಿಯಲ್ಲಿ (ಅಥವ englishನಲ್ಲಿ). ಎದುರಿನ ಪ್ರಾಣಿ ಕನ್ನಡದವನೆಂದು (ಬೇರೆ ಯಾರಿಂದಲಾದರೂ) ತಿಳಿಯುವವರೆಗೂ ಇದು ಮುಂದುವರೆಯುತ್ತದೆ. ಆಮೇಲೆ ಕೂಡ ಏಕಾಂತದಲ್ಲಿ ಮಾತ್ರ ಕನ್ನಡ. ಗುಂಪಿನಲ್ಲಿ ಗುಂಪು ಭಾಷೆ (ಹಿಂದಿ/english). ಗುಂಪಿನಲ್ಲಿ english ಮಾತಾಡುವುದು ತಪ್ಪೆನ್ನುತ್ತಿಲ್ಲ, ಉಳಿದವರಿಗೆ ಇರಿಸುಮುರಿಸಾಗಬಾರದು ಎನ್ನುವ ಶಿಷ್ಟಾಚಾರ, ಅದು ನಮ್ಮ ಹೆಮ್ಮೆ, ಸರಿ. ಅದೇ ತಮಿಳರ ವಿಷಯಕ್ಕೆ ಬನ್ನಿ. ಎದುರಿಗಿರುವ ವ್ಯಕ್ತಿ ತಮಿಳನಲ್ಲ ಎಂದು ಅವರಿಗೆ ತಿಳಿಯದ ಹೊರತು ಅವರು ತಮಿಳಿನಲ್ಲೇ ಮಾತಾಡುವುದು. ಹಾಗೆಂದು ಅವರೇನೂ ಹಟ ಹಿಡಿದು ತಮಿಳಿನಲ್ಲಿ ಮಾತಾಡುವುದಿಲ್ಲ; ನಿಮಗೆ ತಮಿಳು ಬರುವುದಿಲ್ಲವೆಂದರೆ ಪಾಪ englishನಲ್ಲಿ ಮಾತಾಡುತ್ತಾರೆ (ಅವರಿಗೆ ಗೊತ್ತಿದ್ದರೆ). ಆದರೆ default ಭಾಷೆ ತಮಿಳು. ನಮಗೆ? default language ರಾಜಭಾಷೆ (ಕನ್ನಡ ಕೇವಲ ನಮ್ಮ ಖಾಸಗೀ ಭಾಷೆ - ನಾವು ಕನ್ನಡ ಆಡಳಿತಭಾಷೆಯಾಗುವ ಬಗ್ಗೆ ಮಾತನಾಡುತ್ತೇವೆ!)

ಈ ನಮ್ಮ "ಮುದುರಿಕೊಳ್ಳುವ" ಗುಣವೇ, ಇವತ್ತು ನಮ್ಮನ್ನು ಮೂಲೆಗೆ ತಳ್ಳಿರುವುದು; ನಮ್ಮ ಸಣ್ಣ ಸಣ್ಣ ಹಕ್ಕುಗಳಿಗೂ ನಾವು "ಹೋರಾಟ" ಮಾಡಬೇಕಾದ ಪರಿಸ್ಥಿತಿ ತಂದಿರುವುದು; ನಮಗೆ ಜಗಳಗಂಟರೆಂದು ಹೆಸರು ತಂದುಕೊಟ್ಟಿರುವುದು (ಒಪ್ಪಿಕೊಳ್ಳೋಣ).

ನಮ್ಮ ಭಾಷೆಗೆ (ಯಾವ ಭಾಷೆಗೆ ಅದು ಯಥಾ ಸಹಜವಾಗೇ ಬರಬೇಕಿತ್ತೋ ಆ ಕನ್ನಡಕ್ಕೆ) ಇವತ್ತು ಈ "ಶಾಸ್ತ್ರೀಯ ಸ್ಥಾನ-'ಮಾನ'" ಬಂದಿರುವುದು ಈ "ಹೋರಾಟದ" ಫಲ (ಅತ್ತೂ ಕರೆದೂ...); ತೆಲುಗಿಗೂ ಬಂತು; ರಾಜಕೀಯ ಬಲವಿದ್ದರೆ ನಾಳೆ ಮಣಿಪುರಿಗೂ ಬರುತ್ತದೆ. ಅದಕ್ಕೊಂದು ಬೆಲೆಯೇ? ಇಷ್ಟಕ್ಕೂ ಕೊಟ್ಟವರು ಯಾರು? ಅವರ ಯೋಗ್ಯತೆಯೇನು?

ಈ ದೃಷ್ಟಿಯಲ್ಲಿ ನಮ್ಮ (ನನ್ನ) ನಿಲುವು ಪ್ರಾಯಶಃ ಇದು: ಕೇಂದ್ರ ಒಪ್ಪಲಿ ಬಿಡಲಿ, ಕನ್ನಡ ಶಾಸ್ತ್ರೀಯ ಭಾಷೆ(ಆಗಿತ್ತು, ಆಗಿದೆ, ಆಗಿರುತ್ತದೆ): ಹೇಗೋ ಇವತ್ತು ಇದನ್ನು official ಆಗಿ ಕೇಂದ್ರ ಪರಿಗಣಿಸಿದೆ, ತತ್ಪರಿಣಾಮವಾಗಿ ರಾಜ್ಯಕ್ಕೆ, ಭಾಷೆಯ ಬೆಳವಣಿಗೆಗೆ ಆರ್ಥಿಕ ಸಹಾಯ ಒದಗಬಹುದು, ಅದು ಒಳ್ಳೆಯದು (ಅದರ ಉಪಯೋಗ ಎಷ್ಟರಮಟ್ಟಿಗೆ ಆಗುತ್ತದೆಯೋ ನೋಡೋಣ); ಅದೇನೇ ಇರಲಿ ಕನ್ನಡಿಗರ ಭಾಷಾಜೀವನಕ್ಕಾಗಲೀ ಭಾವ ಜೀವನಕ್ಕಾಗಲೀ ಇದರ ಕೊಡುಗೆಯೇನೂ ಇಲ್ಲ; ನಮ್ಮ ಮುಂದಿನ ಸವಾಲುಗಳು ಮುಂಚಿನಂತೆಯೇ ಇಂದೂ ಇವೆ, ಅವು ಪ್ರಾಯಶಃ ಹೀಗಿವೆ:

ಸಾಂಸ್ಕೃತಿಕವಾಗಿ/ಭಾಷೆಗೆ ಸಂಬಂಧಿಸಿದಂತೆ:

  1. ನಮ್ಮ ಸಂಸ್ಕೃತಿ, ಪರಂಪರೆಗಳ ಬಗ್ಗೆ ಉತ್ತಮ ತಿಳಿವು.
  2. ನಮ್ಮ ನಡೆ-ನುಡಿಗಳಲ್ಲಿ ಕನ್ನಡತನ ಎದ್ದು ಕಾಣುವಂತೆ ರೂಪಿಸಿಕೊಳ್ಳುವುದು. ಉದಾಹರಣೆಗೆ ನಮ್ಮ ನೆಲದಲ್ಲಿದ್ದಾಗ by default ಕನ್ನಡವನ್ನೇ ಮಾತಾಡುವುದು (ಎದುರಿನ ವ್ಯಕ್ತಿಗೆ ಕನ್ನಡ ಬರುವುದಿಲ್ಲವೆಂದು ನಮಗೆ ತಿಳಿಯುವ ವರೆಗೂ - ಅದನ್ನು ತಿಳಿಯ ಪಡಿಸುವುದು ಅವನ ಕೆಲಸ; ನಾವು ಅವನ ಭಾಷೆ ತಿಳಿದುಕೊಂಡು ಮಾತಾಡುವ ಅಗತ್ಯವಿಲ್ಲ)
  3. ಹೆಚ್ಚು ಹೆಚ್ಚು ಕನ್ನಡ ಸಾಹಿತ್ಯ ಓದುವ (ಬರೆಯುವ) ಹವ್ಯಾಸ ಬೆಳೆಸಿಕೊಳ್ಳುವುದು.
  4. ಅನ್ಯ ಭಾಷೆ/ಭಾಷಿಕರ ಬಗ್ಗೆ ಕೀಳರಿಮೆ/ಅಸಹನೆಗಳನ್ನು ನಿವಾರಿಸಿಕೊಳ್ಳುವುದು, ಸೌಹಾರ್ದ
  5. ಬೇರೆ ನೆಲದಲಿರುವಾಗ ಅಲ್ಲಿನ ಸ್ಥಳೀಯ ಭಾಷೆಗೆ ಅತ್ಯುಚ್ಛ ಗೌರವ/ಪ್ರಾಮುಖ್ಯ ನೀಡುವುದು (ಇದರಿಂದ ನಮ್ಮ ನೆಲದಲ್ಲಿ ನಾವು ಏನನ್ನು ನಿರೀಕ್ಷಿಸಬಹುದೆಂಬುದು ನಮಗೇ ಮನದಟ್ಟಾಗುತ್ತದೆ)
  6. ತಮಿಳರನ್ನು ಎಲ್ಲಾ ವಿಷಯದಲ್ಲೂ copy ಮಾಡುವುದನ್ನು ಬಿಡುವುದು, ಹಾಗೆಯೇ ಅವರಲ್ಲಿರುವ ಅನುಕರಣೀಯ ಅಂಶಗಳನ್ನು ಕಡೆಗಣಿಸದಿರುವುದು.
  7. ಮಕ್ಕಳಿಗೆ ಬೇರೆ ಯಾವ ಭಾಷೆಯನ್ನು ಕಲಿಸುವ ಮೊದಲು ಸ್ವಚ್ಛ ಕನ್ನಡದ ಕಲಿಕೆಗೆ ಒತ್ತು ನೀಡುವುದು. ಇದು ಕೇವಲ ಶಾಲೆಯಲ್ಲಿ ಆಗುವ ಮಾತಲ್ಲ, ಮನೆ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ರಾಜಕೀಯವಾಗಿ
  1. ಭಾಷೆಯ ವಿಷಯದಲ್ಲಿ ಪಕ್ಷಪಾತ ನಡೆಯದಂತೆ ಎಚ್ಚರ ವಹಿಸುವುದು (ಉದಾಹರಣೆಗೆ ಮೇಲಿನ link ನೋಡಿ)
  2. ಆಡಳಿತ ಭಾಷೆಯಾಗಿ ಕನ್ನಡವನ್ನು ಸರ್ವಥಾ ಪ್ರೋತ್ಸಹಿಸುವುದು
  3. ಕನ್ನಡ ಆಡಳಿತ ಭಾಷೆ ಎಂದ ಮಾತ್ರಕ್ಕೆ ಅರ್ಥವಾಗದ ಸಂಸ್ಕೃತದ್ದೋ, ಅಥವಾ ಕನ್ನಡದ್ದೇಯೋ ಪದಗಳನ್ನು englishನ ಜಾಗದಲ್ಲಿ ಅಡಕಬೇಕೆಂದಲ್ಲ, ಭಾಷಾಂತರ ಅರ್ಥಪೂರ್ಣವಾಗಿರುವಂತೆ ನೋಡಿಕೊಳ್ಳುವುದು; ಹೇಳಬೇಕಾದ್ದನ್ನು ಅರ್ಥವಾಗುವಂತೆ ಕನ್ನಡದಲ್ಲಿ ಸ್ಪಷ್ಟವಾಗಿ ಹೇಳುವುದು
  4. ನಮ್ಮ ಕನ್ನಡಾಭಿಮಾನ/ಹೋರಾಟ ಪುಂಡಾಟಿಕೆಯಾಗದಂತೆ ಎಚ್ಚರ ವಹಿಸುವುದು
ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು

Saturday, September 13, 2008

ತನ್ನಂತೆ ಪರರ ಬಗೆವೊಡೆ...

ಆವೊತ್ತು ಮುಸ್ಸಂಜೆ ನಸುಗತ್ತಲಲ್ಲಿ ಹಾಗೆ ಹಿಂದಿನಿಂದ ಬಂದು ಪ್ರಾಣಾಂತಿಕವಾಗಿ ಕೊರಳನ್ನು ಅಮುಕಿ ಹಿಡಿದು ಚೂರಿಯಿಂದ ತೊಡೆಯಿರಿದು ಓಡಿದ ಅವನಿಗೆ ನಾನಾರೆಂದು ಗೊತ್ತಿತ್ತೇ? ಇರಲಿಕ್ಕಿಲ್ಲ. ಇವತ್ತು ಪೋಲೀಸರೆದುರಿಗೆ ನನಗೆ ಅವನನ್ನು ಹೇಗೆ ಗುರುತಿಸಲು ಆಗುತ್ತಿಲ್ಲವೋ ಹಾಗೆ ಅವನಿಗೂ ನನ್ನನ್ನು ಗುರುತಿಸಲು ಆಗಿರಲಿಕ್ಕಿಲ್ಲ. ವ್ಯಾವಹಾರಿಕವಾಗಿ ನಾವು "ಶತ್ರು"ಗಳು, ಒಬ್ಬರನ್ನೊಬ್ಬರು ಕಾಣದ ಅಜ್ಞಾತ ಶತ್ರುಗಳು. ಆ ದೃಷ್ಟಿಯಿಂದ ಗುರುತಿಸಲಾಗದಿರುವುದು ಪರಸ್ಪರರಿಗೆ ಒಳ್ಳೆಯದೇ ಸೈ.
ಅವತ್ತು ಅವನಿಗೆ ನನ್ನಿಂದ ಬೇಕಾಗಿದ್ದೆಲ್ಲ ಹಣವೊಂದೇ; ನಾನು ಕಳೆದುಕೊಂಡೂ ಅವನಿಗೆ ಉಪಯೋಗವಾಗಬಹುದಾದದ್ದು ಅದೊಂದೇ ನನ್ನ ಬಳಿಯಿದ್ದದ್ದು, ಜುಜುಬಿ ಹಣ. ಬಹುಶಃ ಸುಮ್ಮನೆ ಕೇಳಿದ್ದರೆ ಕೊಟ್ಟುಬಿಡುತ್ತಿದ್ದೆನೇನೋ (?!). ಅಷ್ಟಕ್ಕೋಸ್ಕರ ಆತ ಅಮುಕಿ ಬಿಸಾಕಿದ್ದು ನನ್ನ ದನಿ, ಅದರಲ್ಲಿದ್ದ ಬನಿ! ಮತ್ತೆಂದೂ ಮೊದಲಿನಂತೆ ಹಾಡಲು ಸಾಧ್ಯವಿಲ್ಲವೇನೋ ಅನ್ನುವ ಭಯ ಬಿತ್ತಿ ಓಡಿಹೋದವನಿಗೆ ಅದರ ಬೆಲೆ ಗೊತ್ತಿತ್ತೇ?


ಬೆಂಗಳೂರಿನಲ್ಲಿ ನೂರು ಇನ್ನೂರು ರುಪಾಯಿಗೆಲ್ಲಾ ಕೊಲೆ ನೆಡೆಯುವ ಬಗ್ಗೆ ಕೇಳಿದ್ದೇವೆ; ಜೀವದ ಬೆಲೆ ಹೋಗಲಿ, ಕೊಲೆಗಾರ ತೆಗೆದುಕೊಳ್ಳುವ riskನ ಬೆಲೆ ಇಷ್ಟೇನೇ? ಬೇರೆಲ್ಲೆಡೆ ಕಾಣುವಂತೆ ಇಲ್ಲೂ ಮೌಲ್ಯಗಳು ತಳಕಂಡಿದೆ ಅನ್ನಲೇಬೇಕು. ತೀರ ನೆನ್ನೆ ಮೊನ್ನಿನ ಕಳ್ಳ/ಕೊಲೆಗಾರ ಕೂಡ ಕೊನೆಯ ಪಕ್ಷ ಆ ಸ್ಥೂಲ cost & benefit ಲೆಕ್ಕಾಚಾರವಾದರೂ ಹಾಕುತ್ತಿದ್ದನೆಂದು ಕಾಣುತ್ತದೆ. ಇವತ್ತು ಅದಿಲ್ಲ. ಜುಜುಬಿ ಇನ್ನೂರು ರುಪಾಯಿಗೆ ಒಬ್ಬನ ತಲೆ ಒಡೆಯವಷ್ಟು ದೊಡ್ಡ ಸಾಹಸ ಮಾಡಬೇಕೆಂದರೆ, ತಲೆಯೊಡೆಯುವ ಜೀವನವೂ ಅದೆಷ್ಟು ದುರ್ಭರವಲ್ಲವೇ?


ಯಾವುದೇ ಒಂದು ಕಾಯಕ ದಂಧೆಯಾಗಿ ಬೆಳೆಯಬೇಕೆಂದರೆ ಅದಕ್ಕೆ ವಿಶೇಷ ಪರಿಣತಿ, ತರಬೇತಿ ಬೇಕು! ಇವತ್ತು ಕ್ರೈಂ ಡೈರಿ, ಕ್ರೈಂ ಸ್ಟೋರಿ ಗಳಂಥ ತಲೆ ಮಾಸಿದ ಬೇಜವಾಬ್ದಾರಿ ಸೀರಿಯಲ್ಲುಗಳಾಗಲಿ ಓಂ ನಿಂದ ಹಿಡಿದು ಮಾದೇಶನ ವರೆಗೆ ಸಾಲು ಸಾಲಾಗಿ ಬರುತ್ತಿರುವ ರೌಡಿ ಪೂಜಕ ಸಿನಿಮಾಗಳಾಗಲಿ, ಅದನ್ನು ಕ್ಯೂ ಕಾದು ಬಾಯಿ ಚಪ್ಪರಿಸಿಕೊಂಡು ಸಾವಿರಗಟ್ಟಲೆ ಜನ ನೋಡುವುದು ನೋಡಿದರೆ ನಾವೆಲ್ಲಿ ಸಾಗುತ್ತಿದ್ದೇವೆ ಎಂದು ಭಯವಾಗುತ್ತದೆ. ಕೊಲೆ ಮಾಡಲು ಬೇಕಾದ್ದು ಬಹುಶಃ ಎರಡೇ: ಒಂದು, ರಕ್ತ ಮಾಂಸ ಚೆಲ್ಲಾಡಿದರೂ ಏನೂ ಅನ್ನಿಸದ insensitivity; ಎರಡು, ಕೊಲೆ ಮಾಡುವ urge (ಅದು ಅಗತ್ಯಕ್ಕಿರಬಹುದು, ಶೋಕಿಗಿರಬಹುದು!). ಇದೆರಡನ್ನೂ ದಂಡಿಯಾಗಿ ದಯಪಾಲಿಸುತ್ತವೆ, ಮೇಲೆ ಹೇಳಿದ "ಮನರಂಜನೆ"ಗಳು. ಒಬ್ಬಿಬ್ಬರು ರೌಡಿತನ ಮಾಡಿದರೆ ನಿಭಾಯಿಸಬಹುದು, ಆದರೆ ಅದೇ ಸರ್ವ ಮಾನ್ಯ ಮೌಲ್ಯವಾಗಿಬಿಟ್ಟರೆ?


ಒಂದುಕಡೆ ಇದನ್ನೇ ದಿನದಿನವೂ ಸಿನಿಮಾ ಟಿವಿಗಳಲ್ಲಿ ನೋಡಿ ಸ್ಪಂದಿಸುವುದನ್ನೇ ನಿಲ್ಲಿಸಿದ ನಾವು, ಇನ್ನೊಂದುಕಡೆ ಅದನ್ನು ದಿನದಿನವೂ ನೋಡಿ ಸ್ಪೂರ್ತಿಗೊಳ್ಳುವ ಪುಂಡ ಹುಡುಗರ ಪಡೆ! ಎಲ್ಲೋ ನಡೆದ ಭೀಕರ ಕೊಲೆ ಕೂಡ ಪತ್ರಿಕೆಯ "ಅಪರಾಧ ಸುದ್ದಿಯ" ಒಂದು ಮೂಲೆ ಬರಹವಾಗುತ್ತದೆ, ಅದೇ ತೆರೆಯಮೇಲಿನ ದೃಶ್ಯವೈಭವವಾಗುತ್ತದೆ ಕೂಡ. ತೆರೆಯ ಮೇಲೆ ನಾಯಕ ನಾಯಕಿಯ ತುಟಿ ಹಿಡಿದು ಮುತ್ತಿಟ್ಟೊಡನೆ ತಲೆಯೇ ಬಿದ್ದುಹೋದಂತೆ ಬೊಬ್ಬಿಡುವ so called ಸಮಾಜ ಸುಧಾರಕರು, ದೃಶ್ಯದ ಹಿಂದು-ಮುಂದಿನ ಹತ್ತು frameಗಳ ಮೇಲೆ ಕತ್ತರಿಯಾಡಿಸಿ ಕೈ ತೊಳೆದುಕೊಳ್ಳುವ censor ಮಂಡಲಿ, ಸಮಾಜದ ಸ್ವಾಸ್ಥ್ಯ ಕಾಯಬೇಕಾದ ಇಂಥ ಹತ್ತು ಹಲವು agencyಗಳು ಈ ತೆರೆಯ ಮೇಲಿನ ಹಿಂಸೆ-ಅತಿರಂಜಕತೆಯ ವಿಷಯದಲ್ಲಿ ಮಾತ್ರ ಅದಾವ ಕತ್ತೆಯನ್ನು ಕಾಯುತ್ತಿವೆಯೋ ಕಾಣೆ!

******

ಮತ್ತೊಂದು ಚಿತ್ರ. ಕುತ್ತಿಗೆಯಲ್ಲಿ ಉಸಿರು ಸಿಕ್ಕಿಸುವ ಊತ, ತೊಡೆ ಇಷ್ಟುದ್ದ ಹಿಸಿದು ಧಾರಾಳ ರಕ್ತ ಸುರಿಸುತ್ತ ಪೋಲೀಸು ಠಾಣೆಗೆ ಬಂದವನಿಗೆ ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸುವ ಕ್ರಮ ಕಾನೂನು ಕಟ್ಟಳೆಗಳಲ್ಲಿಲ್ಲವೇನೋ! ಬದಲಿಗೆ ಕಂಪ್ಲೇಂಟು, ಸ್ಪಾಟ್ ಇನ್ಸ್ಪೆಕ್ಷನ್ (ಎರಡೆರಡು ಬಾರಿ) ಇತ್ಯಾದಿ ಉಪದ್ವ್ಯಾಪಗಳಲ್ಲಿ ಈಡುಪಟ್ಟು ಕರ್ತವ್ಯ ತತ್ಪರತೆ ಮೆರೆವ ಪೋಲೀಸರು, procedure ಪ್ರಕಾರ ಅಳೆದೂ ಸುರಿದೂ, (ಸುರಿವ ಗಾಯವನ್ನು ಅಳೆದು ಆರಿಂಚು ಉದ್ದ ಅರ್ಧ ಇಂಚು ಆಳ ಎಂದು FIR ಬರೆದು), ಪ್ರಥಮ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ರಾತ್ರೆ ಹನ್ನೊಂದು. ಇಡೀ ಆರಿಂಚಿನ ಗಾಯ ಹೆಪ್ಪುಗಟ್ಟಿ ಪ್ರಕೃತಿಸಹಜವಾದ healing process ಆಗಲೇ ಶುರುವಾಗಿತ್ತು!

******

ಇನ್ನೊಂದು. ವಿಕ್ಟೋರಿಯಾ ಆಸ್ಪತ್ರೆ "ತುರ್ತು" ಚಿಕಿತ್ಸಾ ವಿಭಾಗ. ನಾವು ಹೋಗುವ ಹೊತ್ತಿಗೆ ಇನ್ನೂ ಹತ್ತು ನಿಜಕ್ಕೂ ತುರ್ತು ಕೇಸುಗಳು ಕ್ಯೂ ನಲ್ಲಿ ಕಾಯುತ್ತಿದ್ದವು, ಸಾಲಾಗಿ ನಿಂತ ಸ್ಟ್ರೆಚರುಗಳಲ್ಲಿ ಮಲಗಿ ನರಳುತ್ತಾ. ಒಬ್ಬನಿಗೆ ಲಾಂಗಿನಲ್ಲಿ ಸೊಂಟವನ್ನು ಕೊಚ್ಚಲಾಗಿತ್ತು; ಮತ್ತೊಬ್ಬನ ತಲೆ ಒಡೆದು ಒಳಗಿನ ಹೂರಣ ಹೊರಗಿಣುಕುತ್ತಿತ್ತು; ಮತ್ತೊಬ್ಬನ ಕಿವಿಯಿಂದ ಧಾರಾಕಾರ ರಕ್ತ ಹರಿಯುತ್ತಿತ್ತು. "ಬನ್ನಿ ಸಾರ್, ಇವತ್ತು week-end ಅಲ್ವಾ, assault ಕೇಸುಗಳು ಸ್ವಲ್ಪ ಜಾಸ್ತಿ ರಿಪೋರ್ಟ್ ಆಗವೆ, ನೀವು ಸ್ವಲ್ಪ ಕಾಯಬೇಕಾತದೆ" ಎಂದು ಸ್ವಾಗತಿಸಿದ ಪೋಲೀಸಪ್ಪನಿಗೆ ಪ್ರತಿ ನಮಿಸಿ ಹೋಗಿ ಅಲ್ಲೇ ಬೆಂಚಿನ ಮೇಲೆ ಕುಂತೆ. ಅಲ್ಲಿದ್ದ emergency ಕೇಸುಗಳಲ್ಲೆಲ್ಲಾ ಆರಾಮವಾಗಿ ನಡೆದುಕೊಂಡು ಬಂದಿದ್ದ ಕೇಸು ಇದೊಂದೇ, ಆತ್ಮ.

ಕಾಯುತ್ತಾ ಕೂತಿದ್ದಂತೆಯೇ ಅಲ್ಲಿ ಸ್ಟ್ರೆಚರುಗಳ ಮೇಲೆ ಮಲಗಿದ್ದ ಎರಡು ಕೇಸುಗಳ ಹೆಂಡಿರ ನಡುವೆ ಮಾತು ಹತ್ತಿತು. ನಂತರ ಕೈ ಕೈ ಹತ್ತಿತು. ಹೀಗೆ ಹತ್ತಿದ ಒಂದು ಕೈ ಮೇಲಾಗಿ ಇನ್ನೊಂದರ ತಲೆ ಜುಟ್ಟು ಹಿಡಿದದ್ದೇ ಆ ಕಲ್ಲಾಸ್ಪತ್ರೆಯ ಗೋಡೆಗೆ, ಕ್ಷಮಿಸಿ, ಆಸ್ಪತ್ರೆಯ ಕಲ್ಲು ಗೋಡೆಗೆ ಜಪ್ಪಿಸಿತು. ಹನ್ನೊಂದನೇ ಕೇಸು ತನಗಾಗಿ ರೆಡಿಯಾಗಿದ್ದ ಸ್ಟ್ರೆಚ್ಚರ್ ಮೇಲೆ ಮಲಗಿ ನರಳುತ್ತಾ ಕಾಯತೊಡಗಿತು.
ನಾವು ಕಾಯುತ್ತಲೇ ಹೋದೆವು. ಹತ್ತಾರು ಪೋಲೀಸರು ಅವರವರ "ಕೇಸು"ಗಳನ್ನು ಹಿಡಿದುಕೊಂಡು ಬಂದಿದ್ದರು; ಕೆಲವು ಕೇಸುಗಳಿಗೆ ಚೈನು, ಕೆಲವಕ್ಕೆ ಬೇಡಿ, ಖೈದಿಯಲ್ಲದೆ ಕೇವಲ ಫಿರ್ಯಾದಿಯಾಗಿದ್ದ ಕೇಸುಗಳಿಗೆ ಮಾತ್ರ ಈ ಮರ್ಯಾದೆಯಿಲ್ಲ. ಸುಮಾರು ಒಂದು ಗಂಟೆ ಕಾದು ಸುಸ್ತಾದ ಮೇಲೆ "ಸಾರ್, ಇಲ್ಲಿ ವ್ಯವಸ್ಥೆಯೇ ಹೀಗೆ, ಹೀಗೆ ಕೂತರೆ ಮುಗಿಯೊಲ್ಲ. ನಾವು O.T. ಒಳಗೇ ಹೋಗಿ ಕಾಯುವುದು ವಾಸಿ" ಎಂದ ನನ್ನ ಪೋಲಿಸು ಪೇದೆಯ ಸಲಹೆಯ ಮೇರೆಗೆ ಒಳಗೆ ಹೋದದ್ದಾಯಿತು.

ಸಾಕ್ಷಾತ್ ಧರ್ಮರಾಯನಿಗೆ ಅವನು ತಪ್ಪಿ ಒಂದು ಸುಳ್ಳು ಹೇಳಿದ್ದಕ್ಕಾಗಿ ಕ್ಷಣಮಾತ್ರದ ನರಕದರ್ಶನವಾಯಿತಂತೆ. ದಿನದಿನವೂ ಸುಳ್ಳನ್ನೇ ತಿಂದು ಸುಳ್ಳನ್ನೇ ಕುಡಿದು ಸುಳ್ಳನ್ನೇ ಉಸಿರಾಡಿ ಬದುಕುವ ನಮಗೆ ಕೆಲವು ಗಂಟೆಗಳಾದರೂ ನರಕದರ್ಶನವಾದರೆ ಅಚ್ಚರಿಯೇನಿಲ್ಲ. ಆದರೆ ಆ ದರ್ಶನಭಾಗ್ಯಕ್ಕೆ ಸಾಯುವವರೆಗೂ ಕಾಯಬೇಕಿಲ್ಲ ಎನ್ನುವುದೊಂದೇ ವ್ಯತ್ಯಾಸ. ಒಳಗೆ ಹೋದರೆ ಅಲ್ಲಿ ಸಾಲಾಗಿರಿಸಿದ್ದ ನಾಲ್ಕೈದು ಆಪರೇಶನ್ ಟೇಬಲ್ಲುಗಳ ಮೇಲೆ ಕೇಸುಗಳನ್ನು "ಹ್ಯಾಂಡಲ್" ಮಾಡುತ್ತಿತ್ತು ಡಾಕ್ಟರು/ಹೌಸ್ ಸರ್ಜನುಗಳ ಮಂದೆ. ಅರ್ಧ ಕತ್ತರಿಸಿದ್ದ ಸೊಂಟವನ್ನು ಹೊಲೆಯುತ್ತಿದ್ದ ದಬ್ಬಳವನ್ನು ತಡೆಯಲಾರದೇ ಬಡುಕೊಳ್ಳುವನೊಬ್ಬ; ಕಿವಿಯೊಳಗೆ ಮುಲಾಜಿಲ್ಲದೆ ಓಡಾಡುವ ಶಸ್ತ್ರದ ದಾಳಿಯನ್ನು ಭರಿಸಲಾಗದೆ ಚೀರಿಡುವನೊಬ್ಬ; ದನ ತಿವಿದು ಹೊಟ್ಟೆಯಿಂದ ಬೆನ್ನಿನವರೆಗೂ ತೂತಾದ ಮುದುಕಿಯೊಬ್ಬಳ ಕರುಳುಪಚ್ಚಿಯನ್ನು ಏನಾದರೂ damage ಇದೆಯೇ ಎಂದು ಬೆಳಕಿಗೆ ಹಿಡಿದು ಪರೀಕ್ಷಿಸಿ ನೋಡಿ ಮತ್ತೆ ಹೊಟ್ಟೆಗೆ ತುರುಕುತ್ತಿದ್ದರೆ ಆ ಕರುಳ ಬಳ್ಳಿಯ ನೋವನ್ನು ತಾಳಲಾರದೇ ಭೋರಿಡುತ್ತಿದ್ದ ಮುದುಕಿ; ಈ ಚಿಕಿತ್ಸೆಯ ಪರಿಯನ್ನು ನೋಡಿಯೇ ಮೂರ್ಛೆ ಹೋದವನೊಬ್ಬ (local anesthesia ಇಲ್ಲದಿದ್ದರೂ ನೋವಿಲ್ಲದೆಯೇ ಚಿಕಿತ್ಸೆ ಪಡೆದ ಪುಣ್ಯವಂತ!).

ನೋವೂ ಕೂಡ ತೀರ ಖಾಸಗಿ ವಿಷಯ, ಪರಸ್ಪರ ಅನುಮತಿಯಿಲ್ಲದೆ, ಅಥವ ಉಪಯೋಗವಿಲ್ಲದೆ ಅದರಲ್ಲಿ ತಲೆ ಹಾಕುವುದು ಸಲ್ಲ ಎಂದು ನಂಬಿಕೊಂಡು ಬದುಕುವವನು ನಾನು. ಆ ದೃಷ್ಟಿಯಿಂದ ರೋಗಿ-ವೈದ್ಯರ ಸಂಬಂಧ ಒಂದು ರೀತಿ confidential ಆದುದು ಎಂದು ನನ್ನ ನಿಲುವು. ಆದರೆ ಇಲ್ಲಿ ಆ "ಖಾಸಗಿ"ತನಕ್ಕೆ ಅರ್ಥವೇ ಇರಲಿಲ್ಲ.

ಕೇಸುಗಳು ಒಂದಾದ ಮೇಲೊಂದು ಬರುತ್ತಿದ್ದುವು, ಸ್ವಲ್ಪ ಹೊತ್ತು ಕಿರುಚಿ-ಅರಚಿ ನಂತರ ಬಟ್ಟೆ ಕಟ್ಟಿಸಿಕೊಂಡು ಎದ್ದು ಹೋಗುತ್ತಿದ್ದುವು. ಆಪರೇಶನ್ ಟೇಬಲ್ ಮೇಲಿನ ರಕ್ತವನ್ನು ಬಟ್ಟೆಯೊಂದು ಒರೆಸುತ್ತಿತ್ತು (ರಸ್ತೆ ಬದಿಯ ಕಾಕಾ ಹೋಟೆಲಿನ ಊಟದ ಟೇಬಲ್ ಒರೆಸುವಂತೆ), ಟೇಬಲು ಮತ್ತೊಂದು ಕೇಸಿಗೆ ರೆಡಿ.

ಆಪರೇಶನ್ನು, ಇಲಾಜು, ಟೇಬಲ್ ಒರೆಸುವುದು, ಮತ್ತೊಂದು ಕೇಸನ್ನು ಮುಟ್ಟುವುದು, prescription ಬರೆಯುವುದು ಎಲ್ಲಕ್ಕೂ ಒಂದೇ ಕೈ, ಶುದ್ಧ ಅನಾಚಾರ! Sterilization, clinical-cleansing ಇತ್ಯಾದಿ ಕ್ರಮಗಳೇನಾದರೂ ನಡೆಯುತ್ತಿದ್ದರೆ ನನ್ನ ಮಂದ ದೃಷ್ಟಿಗಂತೂ ಬೀಳಲಿಲ್ಲ. ಹೀಗೆಯೇ ಆತಂಕ ಪಡುತ್ತಿರುವಾಗ ನನ್ನ ಸರದಿ ಬಂತು. ನನ್ನ ಗಾಯವನ್ನು ಮುಟ್ಟಿ, ಎಳೆದು, ಹಿಸಿದು (of course, ನನ್ನ ಬೇಡಿಕೆಯಂತೆ ಕೈ ತೊಳೆದುಕೊಂಡು, ಗ್ಲೌಸ್ ಧರಿಸಿ) ಪರೀಕ್ಷಿಸಿ ನೋಡಿದ house surgeon ಎಂಬ ಹೆಸರಿನ ಪ್ರಾಣಿ "deep-cut ಆಗಿದೆ, ಹೊಲಿಗೆ ಹಾಕಬೇಕು" ಎಂದಾಗ ಎದೆ ಹಾರಿತು. ಆತ್ಮಹತ್ಯೆಯನ್ನು ಒಪ್ಪುತ್ತೇನೆ, ನನ್ನ ಪ್ರಯತ್ನವನ್ನು ಮೀರಿ ಯಾರಾದರೂ ನನ್ನ ಕೊಲೆ ಮಾಡುವರೆಂದರೆ ಅದನ್ನು ಸೈದ್ಧಾಂತಿಕವಾಗಿಯಾದರೂ ಒಪ್ಪಬಹುದು. ಆದರೆ ಸುಮ್ಮಸುಮ್ಮನೆ ಸೋಂಕಿನ ದಬ್ಬಳದಲ್ಲಿ ಹೊಲಿಸಿಕೊಂಡು ಯಾವುದೋ ಮರಣಾಂತಿಕ ಸೋಂಕು ಹತ್ತಿಸಿಕೊಂಡು ನಿಧಾನವಾಗಿ ಸಾಯುವುದರಲ್ಲಿ ನನಗಂತೂ ನಂಬಿಕೆಯಿಲ್ಲ. ಇಷ್ಟೆಲ್ಲಾ ಹೇಳಿ ದಬಾಯಿಸಿದ ಮೇಲೆ, ನನ್ನ ಸಹಿ ತೆಗೆದುಕೊಂಡು ನನ್ನೇನೂ ಮಾಡದೇ ಸುಮ್ಮನೇ ಬಿಡಲು ಒಪ್ಪಿತು ಪ್ರಾಣಿ. ಆಗಲೇ ಸುರಿದು ಮರಗಟ್ಟಿದ್ದ ಗಾಯವನ್ನು ಅಯೋಡಿನ್-ಟಿಂಕ್ಚರ್ ಹಾಕಿ ತೊಳೆದು ಒಂದು ಬಿಗಿ ಕಟ್ಟು ಹಾಕಿಸಿಕೊಂಡು ಹೊರಬೀಳುವ ಹೊತ್ತಿಗೆ ರಾತ್ರೆ ಒಂದು.

ಪೋಲೀಸು ಠಾಣೆಗೆ ವಾಪಸು ಬಂದಾಗ, ಠಾಣೆಯ ಸೂಚನಾ ಫಲಕದಲ್ಲಿ ರಾರಾಜಿಸುತ್ತಿದ್ದ ಅಪರಾಧಗಳ ಅಂಕಿ-ಅಂಶಗಳಲ್ಲಿ "ಹಲ್ಲೆ-ಡಕಾಯಿತಿ" ಕಲಮಿನಲ್ಲಿ ಒಂದು ಅಂಕಿ ಹೆಚ್ಚಾಗಿತ್ತು; ಮರುದಿನ ದಿನಪತ್ರಿಕೆಯ "ಅಪರಾಧ ಸುದ್ದಿ" ಭಾಗದ ಅಡಿ ಮೂಲೆಯಲ್ಲಿ ಸುದ್ದಿಯೊಂದು ವರದಿಯಾಗಿತ್ತು "ನಗರದ ಸಂಕಟಪುರ ಠಾಣೆ ವ್ಯಾಪ್ತಿಯಲ್ಲಿ ಐಟಿ ಉದ್ಯೋಗಿಯನ್ನು ಅಡ್ಡಗಟ್ಟಿ ಪರ್ಸ್ ಅಪಹರಣ"

ಟಿಪ್ಪಣಿ - 17/05/2020ರಂದು ಸೇರಿಸಿದ್ದು:
ಈ ಲೇಖನ ಬರೆದದ್ದು ಸುಮಾರು ಹನ್ನೆರಡು ವರ್ಷಗಳ ಹಿಂದೆ, ಬಹುಶಃ ಆ ಘಟನೆಯಾಗಿ ಒಂದೆರಡು ತಿಂಗಳಲ್ಲಿ - ಘಟನೆಯ ಆಘಾತ, ದಿಗ್ಭ್ರಮೆಗಳಿನ್ನೂ ಮನಸ್ಸಿನಲ್ಲಿ ಹಸಿಯಾಗಿದ್ದಾಗ. ಗಂಟಲನ್ನು ಬಲವಾಗಿ ಅದುಮಿ ಹಿಡಿದುದರಿಂದ ಗಂಟಲು ಯಾವ ಪರಿ ಇರುಕಿ ಹೋಗಿತ್ತೆಂದರೆ ಒಂದುವಾರ-ಹತ್ತು ದಿನ ಮಾತು ಹೊರಡುವುದಿರಲಿ, ಉಸಿರಾಡುವುದೂ ಪ್ರಯಾಸಕರವಾಗಿತ್ತು. ಕಷ್ಟಪಟ್ಟು ಗುಟ್ಟಾಗಿ ಮಾತಾಡಿದಂತೆ ಆಡುವುದಾಗುತ್ತಿತ್ತು. ಹಾಡುವುದಂತೂ ದೂರವೇ ಉಳಿಯಿತು. ಬದುಕಿನಲ್ಲಿ ಇನ್ನೊಮ್ಮೆ ಹಾಡುತ್ತೇನೋ ಇಲ್ಲವೋ ಎನ್ನುವ ಚಿಂತೆಗೆ ವಾರಗಟ್ಟಲೆ ನಿದ್ದೆಯೇ ಬರುತ್ತಿರಲಿಲ್ಲ. ಈ ಲೇಖನ ಬರೆಯುವ ಹೊತ್ತಿಗೆ ಇನ್ನೂ ಉಡುಗಿದ ದನಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿತ್ತು, ಮಾತಾಡುವುದು ಸರಾಗವಾಗಿತ್ತು ಆದರೆ ಕರ್ಕಶವಾಗಿತ್ತು. ಆ ಮನಸ್ಥಿತಿಯಲ್ಲಿ ಬರೆದದ್ದು ಈ ಲೇಖನ.

ಇಡೀ ಘಟನೆಯನ್ನು ಇವತ್ತು ಅವಲೋಕಿಸಿದರೆ, ಈ ದೂರಕ್ಕೆ, ಮೇಲೆ ನಾನು ವ್ಯಕ್ತಪಡಿಸಿದ ಅನಿಸಿಕೆಗಳು ಅಲ್ಲಲ್ಲಲ್ಲಿ ಸ್ವಲ್ಪ ಕಟುವಾಯಿತೇನೋ ಎನಿಸುತ್ತದೆ - ಅಥವಾ ಅದೇ ಸರಿಯಿರಬಹುದು, ಪೋಲೀಸು ಕೋರ್ಟು ಆಸ್ಪತ್ರೆಗಳ ನನ್ನ ಒಟ್ಟಾರೆ ಅನುಭವ ನನಗಂತೂ ಹಿತಕರವಾಗೇನು ಇರಲಿಲ್ಲ (ಕೆಲವಂಶಗಳನ್ನು ಬಿಟ್ಟರೆ). ಇನ್ನೂ ಹಲವರ ಅನುಭವವೂ ಇದೇ ಆಗಿದ್ದೀತು. ಆದರೂ ಅಲ್ಲಿ ಗಮನಿಸದೇ ಬಿಟ್ಟ ಕೆಲವು ಅಂಶಗಳನ್ನು ಹೇಳದಿದ್ದರೆ ಪ್ರಸ್ತುತ ಸಂದರ್ಭಕ್ಕೆ ಅನ್ಯಾಯವಾದೀತು. ಬರವಣಿಗೆಯ ಹಳಮೆಗೆ ಊನವಾಗದಿರಲೆಂದು ಈಗಿನ ಅನಿಸಿಕೆಯನ್ನು ಈ ಅಡಿಟಿಪ್ಪಣಿಯ ಮೂಲಕ ಪ್ರತ್ಯೇಕವಾಗಿಯೇ ದಾಖಲಿಸಿದ್ದೇನೆ.

ರಕ್ತ ಸುರಿಸುತ್ತಿದ್ದವನನ್ನು ಕರೆದುಕೊಂಡು ಹೋಗಿ ಪ್ರಥಮಚಿಕಿತ್ಸೆ ಕೊಡಿಸದೇ ಪೋಲೀಸರು ಪ್ರೊಸೀಜರುಗಳ ಬಗೆಗೇ ಹೆಚ್ಚಿನ ಗಮನ ಕೊಟ್ಟು ಎರಡೆರಡು ಬಾರಿ ಸ್ಪಾಟ್ ಇನ್ಸ್ಪೆಕ್ಷನ್ನಿಗೆ ಕರೆದುಕೊಂಡು ಹೋದರೆಂದು ಹೇಳಿದೆ. ಈಗ ಹಿಂದಿರುಗಿ ನೋಡಿದರೆ ಅದು ಅಷ್ಟು ದೊಡ್ಡ ವಿಷಯವಲ್ಲವೆನಿಸುತ್ತದೆ. ನಮ್ಮ ನೋವು, ಆಘಾತ, ಗಾಬರಿ ನಮಗೆ ಹೆಚ್ಚು, ಆದರೆ ದಿನರಾತ್ರಿಯಾದರೆ ಎಷ್ಟೆಷ್ಟೋ ಘೋರವಾದ ಅಪರಾಧಗಳನ್ನು ನೋಡುವ ಪೋಲೀಸರಿಗೆ ಇದು ನಿಜಕ್ಕೂ ಏನೇನೂ ಅಲ್ಲ. ಕಣ್ಣಿನಲ್ಲಿ ಹೊಕ್ಕ ದೂಳಿನ ಕಣ ಕಣ್ಣಿಗೆ ದೊಡ್ಡ ಬಂಡೆಯಂತೆಯೇ ಅನ್ನಿಸಬಹುದು, ಆದರೆ ವಾಸ್ತವದಲ್ಲಿ ಅದು ಕೇವಲ ದೂಳಿನ ಕಣವಷ್ಟೇ. ವಾಸ್ತವದಲ್ಲಿ ಅದು ತುರ್ತುಚಿಕಿತ್ಸೆ ಒದಗಿಸಬೇಕಾದ ಮಾರಣಾಂತಿಕವಾದ ಗಾಯವೇನಾಗಿರಲಿಲ್ಲ, ಮೇಲೇ ವಿವರಿಸಿದಂತೆ ಕೇವಲ ಅರ್ಧ ಇಂಚು ಆಳದ ಕಾಟಾಗಿತ್ತಷ್ಟೇ. ಹೀಗಿರುವಾಗ, ಪಿರ್ಯಾದಿ ಮಾತಾಡುವ, ಓಡಾಡುವ, ತೋರಿಸಿ ವಿವರಿಸುವ ಸ್ಥಿತಿಯಲ್ಲಿದ್ದರೆ ಕೂಡಲೇ ಆತನನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ಯುವುದು ದುಷ್ಕರ್ಮಿಗಳನ್ನು ಹಿಡಿಯಲು ಸಹಾಯಕವಾಗಬಹುದು. ಅಕಸ್ಮಾತ್ (ಅಂತಹ ಸಂದರ್ಭಗಳೂ ಇರುತ್ತವೆ) ದುಷ್ಕರ್ಮಿಗಳು ಅಲ್ಲೇ ಎಲ್ಲಾದರೂ ಅಡ್ಡಾಡುತ್ತಿದ್ದರೆ ಹಿಡಿಯುವ ಸಾಧ್ಯತೆಯೂ ಇರುತ್ತದೆ. ನನ್ನನ್ನು ಸ್ಥಳಕ್ಕೆ ಕರೆದೊಯ್ದ ಪೋಲೀಸರು ಸುಮಾರು ಒಂದು ಗಂಟೆಯ ಕಾಲ ಅಲ್ಲಿಲ್ಲಿ ಪತ್ತೆ ತರದೂದು ಮಾಡಿದರು ಕೂಡ. ಅದನ್ನು ಇಲ್ಲಿ ಕಾಣಿಸದಿದ್ದರೆ ಅನ್ಯಾಯವಾದೀತು.

ಇನ್ನು ಆಸ್ಪತ್ರೆಯ ವಿಷಯಕ್ಕೆ ಬಂದರೆ, ಕೆಲವು ಕೇಸುಗಳನ್ನು (ಉದಾಹರಣೆಗೆ ಕರುಳುಪಚ್ಚಿಯಲ್ಲಿ ಏನಾದರೂ ಡ್ಯಾಮೇಜ್ ಇದೆಯೇ ಎಂದು ನೋಡುತ್ತಿದ್ದ ವಿಷಯ) ನಿರ್ವಹಿಸಬೇಕಾದ್ದೇ ಹಾಗೆ ಎಂದು ಅದಾಗಿ ಕೆಲದಿನಗಳನಂತರ ವೈದ್ಯಮಿತ್ರರೊಬ್ಬರು ಹೇಳಿದರು. ಆಮೇಲೆ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಿರಬಹುದು, ನಾನರಿಯೆ. ಆಕೆಯನ್ನೂ ಸೇರಿದಂತೆ ಹಲವರಿಗೆ ಅರಿವಳಿಕೆ ಕೊಟ್ಟಿದ್ದಿರಬಹುದು, (ವಿಪರೀತ ಕಾಯುವಿಕೆಯಿಂದ) ಅದರ ಪ್ರಭಾವ ತಗ್ಗಿದ್ದಿರಬಹುದು (ಅರಿವಳಿಕೆಯ ಪ್ರಭಾವ ತಗ್ಗುವ ಯಾತನೆಯ ಅನುಭವ ಬೇರೆ ಒಂದೆರಡು ಸಂದರ್ಭದಲ್ಲಿ ನನಗೇ ಆಗಿದೆ). ಆದ್ದರಿಂದ ಅರಿವಳಿಕೆಯನ್ನೇ ಕೊಟ್ಟಿರಲಿಲ್ಲವೆಂದು ಹೇಳಲಾರೆ. ಹಾಗೆಯೇ ಸ್ವಚ್ಛತೆಯ ವಿಷಯ. ಅದರ ಕೊರತೆಯೇನೋ ಢಾಳಾಗಿಯೇ ಇತ್ತೆಂಬುದು ಸತ್ಯ, ಆದರೆ ಅದನ್ನು ವೈದ್ಯರು ನಿರ್ಲಕ್ಷ್ಯದಿಂದ ರೋಗಿಗಳ ದೇಹಕ್ಕೆ ರವಾನಿಸುತ್ತಿದ್ದರೆಂದು ಹೇಳುವುದು ಕಷ್ಟ. ಯಾವುದೋ ಮಟ್ಟದ sterilization ಇದ್ದಿರಬೇಕು, ನನ್ನ ಗಮನಕ್ಕೆ ಬಂದಿರಲಾರದು. ಆದರೆ ಆ ವೈದ್ಯವಿದ್ಯಾರ್ಥಿ ನನಗೆ ಹೊಲಿಗೆ ಹಾಕಲು ಬಂದಾಗ ನಾನದನ್ನು ನಿರಾಕರಿಸಿದ್ದು ನೋವಿನ ಭಯಕ್ಕಲ್ಲ, ಸ್ವಚ್ಛತೆಯ ಕಾರಣಕ್ಕೇ ಎಂಬುದನ್ನು ನಾನು ಅವರಿಗೇ ನೇರ ಹೇಳಿದ್ದು ನನಗೆ ಸ್ಪಷ್ಟವಾಗಿ ನೆನಪಿದೆ, ಮತ್ತು ನನ್ನ ಮಾತನ್ನು ಆತ ಅಲ್ಲಗಳೆಯಲೂ ಇಲ್ಲ. ಸುಮ್ಮನೇ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟರು (ಮತ್ತು ಮುಚ್ಚಳಿಕೆಯಲ್ಲಿ ನಾನು ಅದೇ ಕಾರಣವನ್ನೇ ಬರೆದನೆಂದೂ ನೆನಪು).

ಒಟ್ಟಿನಲ್ಲಿ ಹೇಳುವುದಾದರೆ, ಮೇಲಿನ ವಿವರಗಳನ್ನು 'ಕಂಡದ್ದು' ಆಗಷ್ಟೇ ಆಘಾತವನ್ನನುಭವಿಸಿ ಚೇತರಿಸಿಕೊಳ್ಳುತ್ತಿದ್ದ ಕಣ್ಣುಗಳೆಂಬುದನ್ನು ನೆನಪಿನಲ್ಲಿಡಬೇಕು, ಆದ್ದರಿಂದ ಅದರಲ್ಲಿ ಒಂದಿಷ್ಟೇ ಇಷ್ಟು ಉತ್ಪ್ರೇಕ್ಷೆಯೂ ಇದ್ದೀತು. ಆದರೆ ನನಗೆ ಈಗಲೂ ನೆನಪಿನಲ್ಲಿರುವಂತೆ ಮೇಲಿನ ವಿವರಗಳು ಕೂಡಿದ ಮಟ್ಟಿಗೂ ವಾಸ್ತವಕ್ಕೆ ಹತ್ತಿರವಾಗಿವೆಯೆಂದಷ್ಟು ಹೇಳಬಲ್ಲೆ. ಈ ಸಂಸ್ಥೆಗಳೊಡನೆ ನನ್ನ ಆಮೇಲಿನ ಹಲವು ಅನುಭವಗಳೂ ಈ ಭಾವನೆಯನ್ನೇ ದೃಢಪಡಿಸುತ್ತವೆ.

Wednesday, August 13, 2008

ಗೌಳೀಪತನ...

ಎರಡು ತಿಂಗಳು ಮನೆ ಬೀಗ ಹಾಕಿದ್ದು, ಮತ್ತೆ ಬಂದು ಕಸ ಕುಪ್ಪೆ ಹೊಡೆದು ಮನೆಯನ್ನು ಒಂದು ಹದಕ್ಕೆ ತರುವ ಹೊತ್ತಿಗೆ ಎರಡು ದಿನವೇ ಕಳೆದವು. ಆದರೂ ಸಾರ್ಥಕ ಶ್ರಮ, ಮನೆ ಮೂಲೆ ಮೂಲೆಯೂ ಸ್ವಚ್ಛವಾಯಿತು. ನಿರಾಳ ನಿದ್ದೆ ಮಾಡಿ ಬೆಳಗ್ಗೆ ತಡವಾಗೇ ಎದ್ದೆ. ಸಧ್ಯಕ್ಕೆ ಮನೆಯಲ್ಲಿ ಒಬ್ಬನೇ ಆದ್ದರಿಂದ ಅಡುಗೆ ಮನೆಗೆ ಹೋಗುವ ಅಗತ್ಯ ಹೆಚ್ಚು ಬೀಳುವುದಿಲ್ಲ. ಸರಿ, ಎದ್ದವನೇ ಆತುರಾತುರವಾಗಿ ಸ್ನಾನ ಇತ್ಯಾದಿ ಮುಗಿಸಿ, ಆಫೀಸಿಗೆ ಹೊರಡುವ ಮುನ್ನ ಒಂದು ಲೋಟ ಮಾವಿನ ಜ್ಯೂಸ್ ಕುಡಿದು ಲೋಟವನ್ನು ಸಿಂಕಿಗೆ ಹಾಕಲು ಹೋದೆ. ಲೋಟವನ್ನು ಸಿಂಕಿನಲ್ಲಿ ಹಾಕುತ್ತಿದ್ದಂತೆ ಅದೇನೋ ಕೈಯ ಬಳಿಯೇ ಚಂಗನೆ ಜಿಗಿದು ಕೈಯನ್ನು ತಣ್ಣಗೆ ಸೋಕಿ, ತೊಪ್ಪನೆ ಮತ್ತೆ ಸಿಂಕಿನಲ್ಲೇ ಬಿತ್ತು. ಆಡುಗೆ ಮನೆ ಸ್ವಲ್ಪ ಕತ್ತಲು, ದೀಪವನ್ನು ಹಾಕಿರಲಿಲ್ಲ. ಬೆಚ್ಚಿ ಸರಕ್ಕನೆ ಕೈಯನ್ನು ಹಿಂದಕ್ಕೆಳಕೊಂಡೆ. ಊರಲ್ಲಾದರೆ ಹಲ್ಲಿಯೋ ಕಪ್ಪೆಯೋ ಕೊನೆಗೆ ಹಾವೋ ಚೇಳೋ ಸಹಜವಾಗಿತ್ತು. ಆದರೆ ಆ ಬಳಕೆ ತಪ್ಪಿ ಇಪ್ಪತ್ತು ವರ್ಷವಾಯಿತಲ್ಲ. ಆ ಥ್ರಿಲ್ಲುಗಳೆಲ್ಲಾ ಈ ಪಟ್ಟಣದ ಶುಷ್ಕ-ಸ್ವಚ್ಛ ನಿವಾಸಗಳಲ್ಲೆಲ್ಲಿ ಬರಬೇಕು. ಹಾಗಾಗಿ ಈ ಕ್ಷಣ ಇಲ್ಲಿ ಇದೇನು ಎಂದು ತಲೆಗೆ ಹೊಳೆಯುವುದಕ್ಕೆ ಕೆಲವು ಕ್ಷಣ ಬೇಕಾಯಿತು. ಅಡುಗೆ ಮನೆ ದೀಪ ಹಾಕಿ ನೋಡಿದರೆ ಮತ್ತೇನೂ ಅಲ್ಲ, ನಮ್ಮ ಬಹು ಕಾಲದ ಮಿತ್ರ, ಅದೇ ರಾಕ್ಷಸ ಹಲ್ಲಿ! (ರಾಕ್ಷಸ ಹಲ್ಲಿ ಅಂದರೆ dinosorous ಎಂದೂ, ಅದು ಬಂದು ಬೀಳುವಷ್ಟು ದೊಡ್ಡ ಸಿಂಕ್ ಇಟ್ಟುಕೊಂಡಿರುವ ನಾವು ದೈತ್ಯರೆಂದೂ ತಿಳಿಯಬೇಡಿ ಮತ್ತೆ; ಇದೂ ಸಾಮಾನ್ಯ ಮನೆ ಹಲ್ಲಿ(house lizard)ಯೇ, ಆದರೆ ಸ್ವಲ್ಪ ಗಾತ್ರದಲ್ಲಿ ದೊಡ್ಡದಾಗಿ ಭಯ ಹುಟ್ಟಿಸುವಂತಿದ್ದುದರಿಂದ ನನ್ನ ಮಡದಿ ಮಾಡಿದ ನಾಮಕರಣ). ನಮ್ಮ ಮನೆಗಳಲ್ಲಿ ನೋಡುವ ಸಾಮಾನ್ಯ ಹಲ್ಲಿಯ ಸುಮಾರು ಎರಡು-ಎರಡೂವರೆಯಷ್ಟು ದೊಡ್ಡ ಗಾತ್ರದ ಈ ಹಲ್ಲಿಯ ಬಣ್ಣ ಕೂಡ ಸಾಮಾನ್ಯ ಹಲ್ಲಿಗಿಂತ ಸ್ವಲ್ಪ ಕಡು, ಒರಟು. ಬಹುಶಃ ಅದೂ ಭಯ ಹುಟ್ಟಿಸುವ ಅಂಶಗಳಲ್ಲೊಂದಿರಬೇಕು. ನನ್ನ ಮಡದಿ ಮನೆಯಲ್ಲಿರುವಾಗೆಲ್ಲ ದಿನಕ್ಕೊಮ್ಮೆಯಾದರೂ ಅದೆಲ್ಲಿಂದಲೋ ಧುತ್ತನೆ ಪ್ರತ್ಯಕ್ಷವಾಗಿ (ಅಥವಾ ಮೇಲೆ ನೆಗೆದು, ಕಾಲಮೇಲೆ ಹರಿದು) ಆಕೆಯಿಂದ ಕಿಟಾರನೆ ಚೀರಿಸದಿದ್ದರೆ ಅದಕ್ಕೆ ತಿಂದ ಸೊಳ್ಳೆ ಜೀರ್ಣವಾಗುತ್ತಿರಲಿಲ್ಲ. ಸಾಧಾರಣವಾಗಿ ನಿಶ್ಶಬ್ದವಾಗಿರುವ ಮನೆಯಲ್ಲಿ ಯಾರೋ ಇದ್ದಾರೆ ಎಂಬುದಕ್ಕೆ ಅವಳ ಕೂಗು ಗುರುತಾಗಿರುತ್ತದೆ. ಎಲ್ಲೋ ಆಟವಾಡುತ್ತಿರುವ ನನ್ನ ಮಗನಿಗೋ, ಈ ತೆರೆ ಮರೆಯ (ಅಥವಾ ಕಾಲ್ಕೆಳಗಿನ) ನಾಟಕ ಅರ್ಥವಾಗದು. ಅಮ್ಮ ತನ್ನನ್ನು ನಗಿಸಲೆಂದೇ ಹೀಗೆ ಕೂಗುತ್ತಿದ್ದಾಳೆ ಎಂದೆಣಿಸಿ ಅಮ್ಮನಿಗೆ ಇನ್ನೊಮ್ಮೆ ಅರಚುವಂತೆ ದುಂಬಾಲು ಬೀಳುತ್ತಿದ್ದ. ಅಂತೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಜೊತೆಯಲ್ಲೇ ವಾಸಿಸುತ್ತಿದ್ದ ಈ ಹಲ್ಲಿ ನಿತ್ಯ ಮನರಂಜನೆ ಒದಗಿಸುತ್ತಿತ್ತು. ಆದರೆ ನಮ್ಮ ಚಲ್ಲಾಟ ಅವಳಿಗೆ ಎಂಥಾ ಪ್ರಾಣಸಂಕಟ ತರುತ್ತಿದ್ದಿತೆಂದು ನನಗೆ ಮನದಟ್ಟಾದದ್ದು ಇವತ್ತು ಈ ಮಿತ್ರ ನನ್ನ ಮೇಲೇ "ದಾಳಿ" ಮಾಡಿದಾಗಲೇ!

ದೀಪ ಹಾಕಿ, ಅದು ಹಲ್ಲಿಯೆಂದು ತಿಳಿದ ತಕ್ಷಣ ಮೊದಲು ಮನಸ್ಸಿಗೆ ಬಂದ ಯೋಚನೆ (urge, ಅನ್ನೋಣ), ಅದರ ಮೇಲೆ ಕ್ರಿಮಿ ನಾಶಕವನ್ನೋ ಮತ್ತೇನನ್ನೋ ಸಿಂಪಡಿಸಿ ಅದರ ಕಥೆ ಮುಗಿಸಿಬಿಡಬೇಕೆಂದು; ಹೀಗೆ ಎಲ್ಲೆಂದರೆ ಅಲ್ಲಿ ಅಡಗಿದ್ದು ಸಿಕ್ಕವರ ಮೇಲೆ ಎಗರಿ ಅವರ ಎದೆಬಡಿತ ನಿಲ್ಲಿಸುವುದೆಂದರೆ!
.
ಮೊದಲ ಕ್ಷಣಗಳ ಶಾಕ್ ಮುಗಿದ ನಂತರ ಯೋಚಿಸಲಾರಂಭಿಸಿದೆ. ಈ ಹಲ್ಲಿ ಈ ಸಿಂಕಿನೊಳಗೆ ಏನು ಮಾಡುತ್ತಿದೆ? ಅಲ್ಲಿಂದ ಓಡಿಸೋಣವೆಂದು ಅದರ ಬಳಿ ಸ್ವಲ್ಪ ಸದ್ದು ಮಾಡಿದೆ. ಮತ್ತದೇ ಪುನರಾವರ್ತನೆ. ಅದು ಸಿಂಕಿನೊಳಗಿಂದ ನೆಗೆದು ತಪ್ಪಿಸಿಕೊಳ್ಳಲೆತ್ನಿಸಿತು, ಆದರೆ ಸಿಂಕಿನ ನುಣುಪಾದ ವರ್ತುಲಾಕಾರದ ಗೋಡೆಯ ಮೇಲೆ ಹಿಡಿತ ಸಿಕ್ಕದೇ ಮತ್ತೆ ಅಲ್ಲೇ ಬಿತ್ತು. ತಪ್ಪಿಸಿಕೊಳ್ಳಲು ಪ್ರಾಮಾಣಿಕ ಯತ್ನ ನಡೆಸುತ್ತಿದ್ದ ಹಲ್ಲಿಯನ್ನಂತೂ ಈಗ ದೂರುವಂತೆಯೇ ಇರಲಿಲ್ಲ. ಈಗ ಇದನ್ನು ಸಿಂಕಿನಿಂದ ಬಚಾವು ಮಾಡುವ ಹೊಣೆ ನನ್ನ ಮೇಲೆ ಬಿತ್ತು. ಹೊರ ಹೊರಡಿಸುವುದಾದರೂ ಹೇಗೆ? ಕೋಲನ್ನೋ ಕಡ್ಡಿಯನ್ನೋ ಹಿಡಿದು ತಳ್ಳೋಣವೆಂದರೆ, ಅದು ಸೋಕುವುದೇ ತಡ ಅದು ಹೆದರಿ ಮೇಲೆ ನೆಗೆಯುತ್ತಿತ್ತು. ಅಥವಾ ಪೊರಕೆಯನ್ನೋ ಏನನ್ನಾದರೂ ಅದರ ಮೇಲೆ ಒತ್ತಿ ಹಿಡಿದು ಮೇಲೆ ಸಾಗಿಸೋಣವೆಂದರೆ, ಸಿಂಕು ಮತ್ತು ಅದರಲ್ಲಿ ಹಲ್ಲಿ ಕುಳಿತಿದ್ದ ಕೋನ ಈ ಕೆಲಸಕ್ಕೆ ಎಳ್ಳಷ್ಟೂ ಸಹಾಯಕವಾಗಿರಲಿಲ್ಲ. ಬದಲಾಗಿ ಪೊರಕೆಯ ಕಡ್ಡಿಗಳು ಅದರ ಬೆನ್ನಿಗೆ ನಾಟಿ, ಪರಿಸ್ಥಿತಿ ಇನ್ನೂ ಗಂಭೀರವಾಗುವ ಸಾಧ್ಯತೆ ಇತ್ತು. ನನಗೋ ಆಫೀಸಿಗೆ ತಡವಾಗುತ್ತಿತ್ತು. ಅದೇನಾದರೂ ಮಾಡಿಕೊಂಡು ಹಾಳಾಗಿಹೋಗಲಿ, ಸಧ್ಯಕ್ಕಂತೂ ಇದನ್ನಿಲ್ಲಿಗೆ ಬಿಡೋಣವೆಂದು ನಿರ್ಧರಿಸಿ ಆಫೀಸಿಗೆ ಹೋದೆ.
.
ಆಫೀಸಿನಿಂದ ಮರಳಿ ಬಂದು ನೋಡಿದರೆ, ಈ ಮಹಾಶಯ ಕುಳಿತಲ್ಲಿಂದ ಒಂದಿನಿತೂ ಅಲುಗಿಲ್ಲ. ಹಸಿವಿನಂದ ಸತ್ತೇನಾದರೂ ಹೋಗಿದೆಯೋ ಎಂದು ನೋಡಿದರೆ, ಕಡ್ಡಿ ಅಲುಗಿದೊಡನೆಯೇ ಮೊದಲಷ್ಟೇ ಚುರುಕಾಗಿ ನೆಗೆಯುವ ಪ್ರಯತ್ನವನ್ನು ಪುನರಾವರ್ತಿಸಿತು. ನೆಗೆದು ಇಲ್ಲಿಂದ ತಪ್ಪಿಸಿಕೊಂಡು ಹೋಗಲು ತನ್ನ ಅಭ್ಯಂತರವೇನೂ ಇಲ್ಲ ಎಂದು ಈಗಾಗಲೇ ನನಗೆ ತೋರಿಸಿದ್ದಾಗಿದೆ; ನೆಗೆಯುವ ಪ್ರಯತ್ನವನ್ನೂ ಮಾಡಿ ಅದು ಅಸಾಧ್ಯವೆಂಬುದನ್ನೂ ನನಗೆ ತೋರಿಸಿದ್ದಾಗಿದೆ; ಇಷ್ಟಾದ ಮೇಲೆ ತನ್ನನ್ನು ಪಾರಗಾಣಿಸುವ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಸಂಪೂರ್ಣ ವರ್ಗಾಯಿಸಿ ತಾನು ನಿಶ್ಚಿಂತವಾಗಿ ಕುಳಿತಂತಿತ್ತು ಅದರ ನಿಲುವು. ಎಲಾ ಇದರ, ಒಂದೆರಡು ಬಾರಿ ನೆಗೆದು ತೋರಿಸಿದ ಮಾತ್ರಕ್ಕೆ ತನ್ನ ಕೆಲಸ ಮುಗಿಯಿತೆಂಬಂತೆ ಕುಳಿತಿದೆಯಲ್ಲ! ಬೆಳಗಿನಿಂದ ಸಂಜೆಯ ವರಗೂ ಅಷ್ಟೇನೂ seriousಆಗಿ ಪ್ರಯತ್ನಿಸಿದಂತೇನೂ ಕಾಣಲಿಲ್ಲ ಅದು. ಇಲ್ಲದಿದ್ದರೆ ಒಂದೇ ಒಂದು ಬಾರಿಯಾದರೂ ಅದು ಸಫಲವಾಗುತ್ತಿರಲಿಲ್ಲವೇ! ಒಂದು ಹಲ್ಲಿಯಾದ ಹಲ್ಲಿಗೇ ಇಷ್ಟೊಂದು ಧಿಮಾಕು ಇರಬೇಕಾದರೆ ಇನ್ನು ನಾನು ಮನುಷ್ಯ, ನನಗೆಷ್ಟಿರಬೇಕು. ಅದಕ್ಕೆ ಬೇಕಾದರೆ ನೆಗೆದು ಹೋಗಲಿ, ಇಲ್ಲದಿದ್ದರೆ ಹಸಿದುಕೊಂಡು ಬಿದ್ದಿರಲಿ, ನಾನಂತೂ ಅದಕ್ಕೆ ಸಹಾಯ ಮಾಡುವುದಿಲ್ಲ (ಹೇಗೆ ಮಾಡುವುದು ಗೊತ್ತಿಲ್ಲ, ಅದು ಬೇರೆ ವಿಷಯ) ಅಂದುಕೊಂಡು ಸುಮ್ಮನಾದೆ. ಹಲ್ಲಿಯೂ ಮುಷ್ಕರ ಹಿಡಿದವರಂತೆ ಸುಮ್ಮನೇ ಕೂತಿತ್ತು.
.
ರಾತ್ರಿಯಾಯಿತು, ಉಹ್ಹೂಂ, ಕದಲಲಿಲ್ಲ! ರಾತ್ರಿಗೆ ಅಡುಗೆ ಮಾಡಬೇಕಾದರೆ ಪಾತ್ರೆ ತೊಳೆಯಬೇಕು, ಅದಕ್ಕೆ ಸಿಂಕ್ ಬೇಕು. ಈಗ ನಾನೇನಾದರೂ ಮಾಡದೇ ವಿಧಿಯೇ ಇರಲಿಲ್ಲ. ಅದು ಹತ್ತಿಕೊಂಡು ಮೇಲೆ ಬರಲು ಅನುಕೂಲವಾಗುವಂತೆ ಒಂದು ಬಲವಾದ ಕಡ್ಡಿಯನ್ನಿಡಬಹುದೆಂದು ಹೊಳೆಯಿತು. ಹುಡುಕಿದರೆ ಸಿಂಕಿನ ಎತ್ತರಕ್ಕಿಂತಲೂ ಉದ್ದವಾದ ಕಡ್ಡಿಯೇ ಸಿಗಲಿಲ್ಲ. ಸಿಕ್ಕ ಒಂದು ತುಂಡು ಕಡ್ಡಿಯನ್ನೇ ಸಿಂಕಿನ ಗೋಡೆಯುದ್ದಕ್ಕೂ ನಿಲ್ಲಿಸೋಣವೆಂದರೆ, ಈ ಹಲ್ಲಿ ಯಾವ ಆಯಕಟ್ಟಿನ ಸ್ಥಳದಲ್ಲಿ ಕುಳಿತಿತ್ತೆಂದರೆ, ಅದು ಹೇಗೇ ನಿಲ್ಲಿಸಿದರೂ ಕಡ್ಡಿ ಜರುಗಿ ಸಿಂಕಿನೊಳಗ್ಗೇ ಬೀಳುವಂತಿತ್ತು. ಹೆಚ್ಚು ಪ್ರಯತ್ನ ಪಟ್ಟರೆ ಹಲ್ಲಿ ಮೈಮೇಲೆ ಎಗರುತ್ತಿತ್ತು. ಈ ಗಲಿಬಿಲಿಯಲ್ಲಿ ಕಡ್ಡಿ ಕೊನೆಗೂ ಸಿಂಕಿನೊಳಗೇ ಬಿತ್ತು. ಹಲ್ಲಿ ಆದರಡಿ ಸಿಕ್ಕಿ ಮಿಸುಕಹತ್ತಿತು. ಈಗ ಆ ಕಡ್ಡಿಯನ್ನು ಎತ್ತಲು ಇನ್ನೊಂದು ಕಡ್ಡಿಯನ್ನು ಎಲ್ಲಿಂದ ತರಲಿ? ಕೊನೆಗೂ ಹಾಗೂ ಹೀಗೂ ಮಾಡಿ ಹಲ್ಲಿಯನ್ನು ಏಮಾರಿಸಿ ಕಡ್ಡಿಯನ್ನು ಮೇಲೆತ್ತಿದ್ದಾಯಿತು. ಈಗ ಈ ಹಲ್ಲಿಯನ್ನೇನು ಮಾಡುವುದು? ಅದನ್ನು ಅಲ್ಲಿಂದ ಎತ್ತಂಗಡಿ ಮಾಡದೇ ನಾನು ಪಾತ್ರೆ ತೊಳೆಯುವಂತಿಲಿಲ್ಲ, ಒಲೆ ಹಚ್ಚುವಂತಿಲ್ಲ! ಹೊಟ್ಟೆ ಬೇರೆ ಹಪಹಪಿಸುತ್ತಿತ್ತು. ಕೊನೆಗೊಂದು ಉಪಾಯ ಹೊಳೆಯಿತು. ರಟ್ಟಿನ carton ಒಂದರ ಮುಚ್ಚಳವನ್ನು ಕಿತ್ತಿ, ಅದರ ನುಣುಪಾದ ಮೇಲು ಕಾಗದವನ್ನು ಹರಿದು ತೆಗೆದು, ಅದರ ಮೆಟ್ಟಿಲು ಮೆಟ್ಟಿಲಾದ ಭಾಗ ಮೇಲೆ ಬರುವಂತೆ ಅಣಿಗೊಳಿಸಿದೆ. ಅನಂತರ ಅದನ್ನು ಬೇಕಾದ ಉದ್ದಕ್ಕೆ ಕತ್ತರಿಸಿಕೊಂಡು ಸ್ವಲ್ಪ ಬಾಗಿಸಿ ನಮ್ಮ ಹಲ್ಲಿ ದೊರೆ ಮೇಲೇರಿ ಬರಲು ಒಂದು ನಿಚ್ಚಣಿಕೆ ನಿರ್ಮಿಸಿದೆ. ಹಲ್ಲಿಯನ್ನು ಏಮಾರಿಸಿ ಈ ಏಣಿಯನ್ನು ಸಿಂಕಿನ ಗೋಡೆಗೆ ಆನಿಸಿಟ್ಟೆ. ಇಷ್ಟರಲ್ಲಿ ನಾನು ನಿರಪಾಯಕಾರಿ ಎಂದು ಹಲ್ಲಿಯ ಗಮನಕ್ಕೂ ಬಂದಿತ್ತೇನೋ, ಈಗ ಅದೂ ಸ್ವಲ್ಪ ಸಹಕರಿಸತೊಡಗಿತು. ನಾನು ಏಣಿ ಇಟ್ಟಾಗ ಅದು ಮೈಮೇಲೆ ಹಾರಲಿಲ್ಲ, ಬದಲಾಗಿ ತುಸು ಪಕ್ಕಕ್ಕೆ ಸರಿದು ಏಣಿ ಇಡಲು ಜಾಗ ಮಾಡಿಕೊಟ್ಟಿತು.

ಹಲ್ಲಿಯ ಇಚ್ಚೆ ಪ್ರಾಮಾಣಿಕವಾಗಿದ್ದರೆ, ಈಗ ತಪ್ಪಿಸಿಕೊಳ್ಳುವ ದಾರಿ ಕಂಡೊಡನೆ ಥಟ್ಟನೆ ಅದನ್ನು ಏರಿ ಹಾರಿ ಮರೆಯಾಗಬೇಕೆಂದು ನನ್ನೆಣಿಕೆ. ಆದ್ದರಿಂದ ಅದು ನನ್ನ ಮೈಮೇಲೆ ಹಾರದಂತೆ ಎಚ್ಚರ ವಹಿಸಿ ತುಸು ದೂರ ನಿಂತು ಗಮನಿಸತೊಡಗಿದೆ. ಆದರೆ ನನ್ನ ಸಹಾಯದ ದಿಕ್ಕನ್ನು ಹಲ್ಲಿ ತಪ್ಪಾಗಿ ಅರ್ಥೈಸಿಕೊಂಡಿತ್ತು. ನಾನು ಹಾಕಿದ್ದು ಏಣಿ; ಆದರೆ ಅದು ನಾನೊಂದು ಚಪ್ಪರ ಹಾಕಿ ಕೊಟ್ಟಿದ್ದೇನೆಂದು ತಿಳಿಯಿತೇನೋ, ಆ ರಟ್ಟಿನ ಅಡಿಗೆ ಹೋಗಿ ಸೇರಿಕೊಂಡು ಬಿಟ್ಟಿತು. ಅದನ್ನು ಅಲ್ಲಿಂದ ಹೊರ ಹೊರಡಿಸುವ ಪ್ರಯತ್ನಗಳೊಂದೂ ಫಲ ಕೊಡಲಿಲ್ಲ!

ಆಗಲೇ ಸಮಯ ರಾತ್ರಿ ಹನ್ನೆರಡು. ಇನ್ನು ಈ ಹಲ್ಲಿಯನ್ನು ಓಡಿಸಿ, ಪಾತ್ರೆ ತೊಳೆದು ಅಡುಗೆ ಮಾಡುವ ಅಸೆಯನ್ನು ಕೈಬಿಟ್ಟೆ. ಹೊಟ್ಟೆ ಹಾಕುತ್ತಿದ್ದ ತಾಳಕ್ಕಂತೂ ಒಂದು ನಿಲುಗಡೆ ಬೇಕಲ್ಲ. ಸರಿ, ಮತ್ತಷ್ಟು ಮಾವಿನ ರಸವನ್ನೇ ಕುಡಿದು, ಲೋಟವನ್ನು ಕಟ್ಟೆಯ ಮೇಲೆ ಇಟ್ಟು, ಹಸಿದ ಹೊಟ್ಟೆಗೆ ಸಮಾಧಾನ ಹೇಳುತ್ತಾ ದೀಪ ಆರಿಸಿ ಮಲಗಿದೆ. ತನ್ನ ಮೂರ್ಖತನದಿಂದ ತಾನು ಉಪವಾಸ ಬಿದ್ದಿರುವುದಲ್ಲದೇ ನನ್ನನ್ನೂ ಉಪವಾಸ ಕೆಡವಿದ ಆ ಕ್ಷುದ್ರ ಜಂತುವಿನ ಮೇಲೆ ಕೆಟ್ಟ ಸಿಟ್ಟು ಉಕ್ಕಿ ಬರುತ್ತಿತ್ತು. ಆದರೇನು! ಅದೇ ಅರ್ಥ ಮಾಡಿಕೊಂಡು ಮೇಲೆ ಬಂದ ಹೊರತು ನಾನಂತೂ ಅದನ್ನು ಉದ್ಧರಿಸಲು ಸಾಧ್ಯವೇ ಇರಲಿಲ್ಲ.

ಹಾಗೂ ಹೀಗೂ ಬೆಳಗಾಯಿತು. ಕಣ್ಣುಜ್ಜಿಕೊಂಡು ಮೇಲೆದ್ದು ಅಡುಗೆ ಮನೆಗೆ ಹೋಗಿ ನೋಡಿದೆ. ಹಲ್ಲಿ ತನಗೆ ಹಾಕಿದ್ದ ನಿಚ್ಚಣಿಕೆಯ ಮೇಲೇರಿ ಪರಾರಿಯಾಗಿತ್ತು. ಸಧ್ಯ, ಬದುಕಿದೆ ಎಂದುಕೊಂಡು ಸ್ನಾನ ಇತ್ಯಾದಿ ಮುಗಿಸಿ, ಇದ್ದ ಅಲ್ಪ ಸ್ವಲ್ಪ ಪಾತ್ರೆಗಳನ್ನು ತೊಳೆದಿಟ್ಟು, ಆಗಲೇ ಆಫೀಸಿಗೆ ತಡವಾಗಿದ್ದರಿಂದ ಪೇಪರ್ ಡಬ್ಬದಲ್ಲಿದ್ದ ಕೊನೇ ಗುಟುಕು ಮಾವಿನ ರಸವನ್ನು ಆತುರಾತುರವಾಗಿ ಕುಡಿದು ಖಾಲಿ ಡಬ್ಬವನ್ನು ಅಲ್ಲಿದ್ದ ಕಸದ ಬುಟ್ಟಿಗೆ ಹಾಕಿದೆ. ಅಗೋ, ಕಸದ ಬುಟ್ಟಿಯಿಂದ ಅದೇನೋ ಚಂಗನೆ ನೆಗೆದು ನನ್ನ ಬಲಗಾಲ ಮೇಲೆ ಹರಿದುಕೊಂಡು ಮಾಯವಾಯಿತು. ಅದರೊಡನೆ ನಾನೂ ಚಂಗನೆ ನೆಗೆದದ್ದರಿಂದ ಪಕ್ಕದ ಬಾಗಿಲ ತುದಿಗೆ ಬಡಿದ ಕೈ ಬೆರಳಿಗೆ ಅಸಾಧ್ಯ ಪೆಟ್ಟು ಬಿತ್ತು. ಅಷ್ಟರಲ್ಲಿ ಕಾಲನ್ನೂ ಎತ್ತಿ ಎಡಗಾಲನ್ನೂ ನೆಲಕ್ಕೆ ಅಪ್ಪಳಿಸಿದ್ದರಿಂದ, ಇನ್ನೂ ಎಡಗಾಲ ಅಳವಿನಲ್ಲೇ ಇದ್ದ ಹಲ್ಲಿಯ ಬಾಲ ಜಜ್ಜಿ ಹೋಯಿತು. ಬಾಲವನ್ನು ಅಲ್ಲೇ ಕಳಚಿದ ಹಲ್ಲಿ ಪರಾರಿಯಾಯಿತು. ವಿಲಿವಿಲಿ ಒದ್ದಾಡುತ್ತಿದ್ದ ಬಾಲವನ್ನೇ ನೋಡುತ್ತಾ ಅಪ್ರತಿಭನಾಗಿ ನಿಂತೆ.

ಪಂಚಾಂಗದಲ್ಲಿ ಗೌಳೀಪತನ ಫಲ ಏನು ಬರೆದಿದೆಯೋ ನೋಡಬೇಕು, ಪಾಪ!

Sunday, June 22, 2008

ಮರಳುಗಾಡಿನಲ್ಲಿ oh yes yes - ಒಂದು ಕನ್ನಡ ಕಲಾಪ

ಮಾತಿನ ಗಾರುಡಿಗ ಬೇಂದ್ರೆಯವರ ಮಾತಿನ ಮೋಡಿ, ಪದಗಳ ಜೊತೆಯ ಚಕ್ಕಂದ ಯಾರಿಗೆ ಗೊತ್ತಿಲ್ಲ? ಹೀಗೇ ಒಂದು ಪ್ರಸಂಗ; ಬೇಂದ್ರೆ ಮಿತ್ರರೊಡಗೂಡಿ ಮತ್ತೊಬ್ಬ ಮಿತ್ರರ ಮನೆಗೆ ಹೋಗಿದ್ದರಂತೆ. ಹೊರಗೆಲ್ಲೋ ಹೋಗಿದ್ದ ಮಿತ್ರರಿಗೆ ಕಾಯುತ್ತಾ ಕುಳಿತಿದ್ದಾಗ ಉಳಿದವರಿಗೆ ಹಾಗೇ ಸ್ವಲ್ಪ ಹೊರಗೆ ಸುತ್ತಾಡಿ ಬರೋಣವೆಂಬ ಇರಾದೆ. ಉರಿಬಿಸಿಲಲ್ಲಿ ಸುಮ್ಮನೇ ಸುತ್ತಲು ಒಪ್ಪದ ಬೇಂದ್ರೆ ಮಿತ್ರರ ಮನೆಯಲ್ಲೇ ಉಳಿದರಂತೆ. ಹೀಗೆ ಮನೆಯಲ್ಲಿ ಉಳಿದ ಬೇಂದ್ರೆಗೆ, ಮನೆಯೊಡತಿ ಒಂದು ತಟ್ಟೆಯಲ್ಲಿ ದೊಡ್ಡ ಗಾತ್ರದ ತಂಬಿಟ್ಟು ತಂದಿತ್ತರಂತೆ. ತಂಬಿಟ್ಟು ತಿಂದು ಮುಗಿಸುವಷ್ಟರಲ್ಲಿ ಹಿಂದಿರುಗಿದ ಉಳಿದ ಮಿತ್ರರು, "ಹೀಗೆ ನಮ್ಮನ್ನೆಲ್ಲಾ ಬಿಟ್ಟು ನೀವೊಬ್ಬರೇ ತಂಬಿಟ್ಟು ತಿನ್ನಬಹುದೇ" ಎಂದು ಆಕ್ಷೇಪಿಸಿದ್ದಕ್ಕೆ, ಬೇಂದ್ರೆಯವರ ಉತ್ತರ, "ನೀವ್ ನಂಬಿಟ್ ಹ್ವಾದ್ರಿ, ನಾವ್ ತಂಬಿಟ್ಟು ತಿಂದ್ವಿ" ("ನೀವು ನಮ್ಮನ್ನು ಬಿಟ್ಟು ಹೋದ್ರಿ, ನಾವು ತಮ್ಮನ್ನು ಬಿಟ್ಟು ತಿಂದ್ವಿ"). ಇದನ್ನು ಎನ್ಕೆಯವರು ಎಲ್ಲೋ ಬರೆದದ್ದೋ ಹೇಳಿದ್ದೋ ನೆನಪು.

ಇಂಥದ್ದು ಎಷ್ಟೋ ಪನ್ನುಗಳು, ಬೇಂದ್ರೆಯವರ ಜೋಳಿಗೆಯಲ್ಲಿ. ಇಂಥದ್ದೇ ಮತ್ತೊಂದು ಪ್ರಸಂಗ; ಜ್ಞಾನಪೀಠ ಪ್ರಶಸ್ತಿ ಬಂದ ಹೊಸದರಲ್ಲಿ ಬೇಂದ್ರೆಯವರಿಗೊಂದು ಸನ್ಮಾನ; ರಿಕ್ಷಾವೊಂದನ್ನು ಹಿಡಿದು ಸಮಾರಂಭಕ್ಕೆ ಬಂದ ಬೇಂದ್ರೆ ಮಾಸ್ತರಿಗೆ ಅತಿಥಿಯೊಬ್ಬರ ಕಳಕಳಿಯ ಪ್ರಶ್ನೆ, "ರಿಕ್ಷಾದಾಗ ಬಂದ್ರೇನು ಮಾಸ್ತರೇ"? ಜ್ಞಾನಪೀಠ ಪ್ರಶಸ್ತಿ ಪಡೆದ ವರಕವಿ ಕೇವಲ ರಿಕ್ಷಾದಲ್ಲಿ ಪಯಣಿಸುವುದೇ ಅನ್ನೋ ಕಳಕಳಿ. ಅದಕ್ಕೆ ಬೇಂದ್ರೆಯವರ ಜವಾಬು ನೋಡಿ. "ಕಾರಿರಲಿಲ್ಲ, ಅಂತsರಿಕ್ಷದಾಗೆ ಬಂದೆ" ("car ಇರಲಿಲ್ಲ ಅಂತ, ರಿಕ್ಷದಾಗೆ ಬಂದೆ"). ಇದನ್ನು ಮೊನ್ನೆ ನೆನಪಿಗೆ ತಂದವರು ಜರಗನಹಳ್ಳಿ ಶಿವಶಂಕರ್. ಸಂದರ್ಭ, ಧ್ವನಿ ಪ್ರತಿಷ್ಠಾನದ "ಶ್ರೀರಂಗ - ರಂಗ ಪ್ರಶಸ್ತಿ" ಪ್ರದಾನ ಸಮಾರಂಭ; ಸ್ಥಳ, ದುಬೈನ ಭಾರತೀಯ ದೂತಾವಾಸದ ಸಭಾಂಗಣ.

"ನಾಳೆ ದುಬೈನಲ್ಲಿ ಕಪ್ಪಣ್ಣ ಮತ್ತೆ ಜರಗನಹಳ್ಳಿ ಶಿವಶಂಕರ್ ಗೆ ಪ್ರಶಸ್ತಿ ಪ್ರದಾನ, ಕಂಬಾರರು ಬರ್ತಾರೆ, ಮತ್ತೆ ಹಯವದನ ನಾಟಕವುಂಟು ಬರ್ತೀರ ಮಾರಾಯರೆ" ಎಂದು ಶಾರ್ಜಾದಲ್ಲಿ ಹೊಸದಾಗಿ ಪರಿಚಯವಾದ ಗೆಳೆಯ ಗಣೇಶ್ ಆಹ್ವಾನಿಸಿದಾಗ ತುಂಬಾ ಖುಶಿಯಾಯಿತು, ಎರಡು ಕಾರಣಕ್ಕೆ. ಯಾವುದೋ ನನ್ನದಲ್ಲದ ನಾಡಿನಲ್ಲಿ (ಸುತ್ತೆಲ್ಲಾ ಭಾರತೀಯರೇ ತುಂಬಿದ್ದರೂ ಬರೀ ಹಿಂದಿ-ತಮಿಳುಮಯ ವಾತಾವರಣದಲ್ಲಿ) ಇದ್ದಕ್ಕಿದ್ದಂತೆ ಕನ್ನಡ ಕೇಳಿದ್ದಕ್ಕೆ; ಅನಿರೀಕ್ಷಿತವಾಗಿ ಒಂದು ಸಾಹಿತ್ಯಕ ಸಮಾರಂಭಕ್ಕೆ ಹೋಗುವ ಅವಕಾಶ ದಕ್ಕಿದ್ದಕ್ಕಾಗಿ (ಬೆಂಗಳೂರಿನಲ್ಲಿ ಇಂಥಾ ಅವಕಾಶಗಳು ದಿನಾ ಒದಗುತ್ತಿದ್ದರೂ ಒಮ್ಮೆಯೂ ಹೋಗಲಾಗುತ್ತಿರಲಿಲ್ಲ!)

ಶುಕ್ರವಾರದ ರಜೆ, ಎರಡು ಗಂಟೆ ಕಾದು ಅಂತೂ ಶಾರ್ಜಾದಿಂದ ದುಬೈಗೆ ಒಂದು ಟಾಕ್ಸಿ ಹಿಡಿಯುವಷ್ಟರಲ್ಲಿ ಸಾಕಾಯಿತು. ಮಧ್ಯಪ್ರಾಚ್ಯದಲ್ಲೀಗ ಕಡು ಬೇಸಿಗೆ, ಮರಳುಗಾಳಿ (sand storm) ಕಾಲ. ಹತ್ತಿರದ ಮರಳುಗಾಡಿನಲ್ಲೆದ್ದ ಬಿರುಗಾಳಿಯಿಂದಾಗಿ ಇಡೀ ನಗರ ದಟ್ಟ ಗೋಧೂಳಿಯಂಥ ಧೂಳಿನಲ್ಲಿ ಮುಳುಗಿತ್ತು. ಹೊರಗಿನ ಬಿರುಬಿಸಿಲೊಂದು ಇಲ್ಲದಿದ್ದರೆ ಇದು ಖಂಡಿತಾ ಹಿಮದ ಮುಸುಕೆಂದು ಯಾರಾದರೂ ಹೇಳಿಬಡಬಹುದು. ಮರುಭೂಮಿಯ ಜಿಯಾಗ್ರಫಿಯ ನೇರ ಪರಿಚಯವಿಲ್ಲದ ನನಗೆ ಇದೊಂದು ಹೊಸ ಅನುಭವ, ಥ್ರಿಲ್ಲಿಂಗ್. ತೀರ ಹತ್ತಿರದ ಗಗನಚುಂಬೀ ಕಟ್ಟಡಗಳೂ ಮಂಜುಮಂಜಾಗಿ ಕಾಣುವಷ್ಟು ಧೂಳು, ಧೂಳಿನ ಜವನಿಕೆಯ ಹಿಂದೆ ಸೂರ್ಯನೋ ಚಂದ್ರನೋ ಗುರುತು ಸಿಗದಷ್ಟು ಬೆಳ್ಳಗೆ ಬಿಳಿಚಿಕೊಂಡ ಸಂಜೆ ಆರರ ಸೂರ್ಯ! ವಾರಗಟ್ಟಲೇ ದಿನಪೂರ್ತಿ ಹೀಗೇ ಇರುತ್ತದಂತೆ. ಇಂಥಾ ವಾತಾವರಣದಲ್ಲಿ ಮರಳುಗಾಡಿನ ಒಳಹೊರಗೆ ಸುಳಿದಾಡುವುದು, ಹೈ-ವೇ ಗಳಲ್ಲಿ ಪಯಣಿಸುವುದು ಸುರಕ್ಷಿತವಲ್ಲವಂತೆ; ವಿಮಾನದಿಂದ ಕಂಡ ದೃಶ್ಯ, ಒಂದು ಭಾರಿ ಹೈ-ವೇ, ಒಂದು ಸ್ವಲ್ಪ ದೂರ ಪಯಣಿಸಿ ಅಗಾಧ ಮರಳು ರಾಶಿಯಡಿ ಹೇಳಹೆಸರಿಲ್ಲದಂತೆ ಮಾಯವಾಗಿತ್ತು. ಹತ್ತಿರದಿಂದೊಮ್ಮೆ ನೋಡಬೇಕು.

ತುಂಬಿದ ವಾಹನ ದಟ್ಟಣೆಯಿಂದಾಗಿ ಹತ್ತು ನಿಮಿಷದ ರಸ್ತೆಯಲ್ಲಿ ಒಂದು ಗಂಟೆ ಪಯಣಿಸಿ ದುಬೈನ ಇಂಡಿಯನ್ ಕಾನ್ಸುಲೇಟ್ ತಲುಪಿ ಸಭಾಂಗಣ ಪ್ರವೇಶಿಸಿದರೆ ಸ್ವಾಗತಿಸಿದ್ದು ಘಮ್ಮನೆ ಮಲ್ಲಿಗೆಯ ಪರಿಮಳ. ಮೈಸೂರು ಮಲ್ಲಿಗೆಯೇ ಇರಬೇಕು, ಇಲ್ಲವೆಂದರೆ ದುಬೈನ ಮರುಭೂಮಿಯಲ್ಲಿ ಮಲ್ಲಿಗೆಯೆಲ್ಲಿ ಬಂದೀತು! ಕನ್ನಡದ ಒಂದು ಕ್ರಿಮಿಯೂ ಕಾಣದ ವಾತಾವರಣದಲ್ಲಿ ಅಂದು ಕನ್ನಡದ್ದೇ ಒಂದು ದೊಡ್ಡ buble ನಿರ್ಮಾಣವಾಗಿತ್ತು. ಇಷ್ಟೊಂದು ಜನ "ನಮ್ಮವರು" ಅಲ್ಲಿ ನೆರೆದು, ನಿರ್ಭಿಡೆಯಾಗಿ ಕನ್ನಡ ಮಾತಾಡುವುದನ್ನು ನೋಡಿ ಒಂದು ಕ್ಷಣ ಕಂಠ ಗದ್ಗದವಾಗಿದ್ದಂತೂ ನಿಜ (ಅಥವ ನಾನು ಹಲವು ತಿಂಗಳಿಂದ ದೇಶಭ್ರಷ್ಟನಾಗಿ ಬದುಕುತ್ತಿರುವುದೂ ಈ ಉತ್ಕಂಠತೆಗೆ ಕಾರಣವಿದ್ದೀತು), ಅದೇನೇ ಇರಲಿ, ಈ missing-my-home ಮನಸ್ಥಿತಿ ಅಲ್ಲಿದ್ದ ಬಹುಪಾಲು ಜನರಲ್ಲಿ ಎದ್ದು ಕಾಣುತ್ತಿತ್ತು.

ಕಪ್ಪಣ್ಣ ತಮ್ಮ ಚಿಕ್ಕ-ಚೊಕ್ಕ ಮಾತಿನಲ್ಲಿ ಈ ಹೊರನಾಡ ಕನ್ನಡಿಗರ ಕನ್ನಡ ಸೇವೆಯನ್ನು ಶ್ಲಾಘಿಸಿದರೆ, ಜರಗನ ಹಳ್ಳಿ ತಮ್ಮ ಚುರುಕು ಚುಟುಕಗಳಿಂದ ರಂಜಿಸಿದರು. ಆದರೆ ತಮ್ಮ ಬಹುಪಾಲು ಭಾಷಣವನ್ನು ಅವರು ತಮ್ಮ ಕವನ ವಾಚನಕ್ಕೇ ಮೀಸಲಿಟ್ಟಂತೆ ತೋರಿತು. ಕಂಬಾರರು ಎಂದಿನಂತೆ ತಮ್ಮ ಹೃದಯಕ್ಕೆ ಹತ್ತಿರವಾದ ಜನಪದ ಹಾಗೂ ವಚನ ಸಾಹಿತ್ಯದ ಶ್ರೇಷ್ಠತೆ-ಪ್ರಸ್ತುತತೆಗಳ ಬಗ್ಗೆ ಮಾತಾಡಿದರು. ಕಂಬಾರ ನನ್ನ ನೆಚ್ಚಿನ ಕವಿಗಳಲ್ಲೊಬ್ಬರು. ಆದರೂ ಅವರ ಕವನಗಳಲ್ಲಿ ಕಾಣುವ-ಕಾಡುವ ಆ ತೀವ್ರತೆ-ಗಾಢತೆ ಅಂದು ಅವರ ಮಾತಿನಲ್ಲಿ ಕಾಣಲಿಲ್ಲ; ಅಥವಾ ಔಪಚಾರಿಕ ಭಾಷಣವೊಂದರಲ್ಲಿ ಕಾವ್ಯದ ವೈಯಕ್ತಿಕತೆಯನ್ನು ನಿರೀಕ್ಷಿಸುವುದು ತಪ್ಪೇನೋ. ಕಾವ್ಯದಲ್ಲಿ ಭಾಷಣ ಅಭಾಸವೆನಿಸುವಂತೆ, ಭಾಷಣದಲ್ಲಿ ಕಾವ್ಯ ಅಪ್ರಸ್ತುತವೆನಿಸಬಹುದು? ಕಂಬಾರರಂಥ ವೈಯಕ್ತಿಕ ನೆಲೆಯ ಕವಿಯ ವಿಷಯದಲ್ಲಂತೂ ಇದು ಹೆಚ್ಚು ನಿಜವೆನಿಸುತ್ತದೆ ನನಗೆ.

ಮುಂದೆ ಪ್ರಸ್ತುತಪಡಿಸಿದ "ಹಯವದನ" ನಾಟಕಕ್ಕೆ ಪೂರ್ವಭಾವಿಯಾಗಿ ಅದರ ಕರ್ತೃ ಗಿರೀಶ್ ಕಾರ್ನಾಡರ ಸಂದೇಶವನ್ನು ಕಪ್ಪಣ್ಣ ತಿಳಿಸಿದರು. "ಹಯವದನ ನಾಟಕ ಮಾಡೋದೇ ಕಷ್ಟ, ಅಂಥಾ ಒಂದು challengeನ್ನು ಆಯ್ಕೆ ಮಾಡಿಕೊಂಡಿದ್ದಾರೆ, ನನಗೆ royalty ಏನೂ ಬೇಡ, ತಂಡಕ್ಕೆ ನನ್ನ good luck ತಿಳಿಸಿ" ಇದು ಕಾರ್ನಾಡರ ಸಂದೇಶದ ಸಾರಾಂಶ. ಕಾರ್ನಾಡರು ಉತ್ಸಾಹಿ ತಂಡಗಳನ್ನು ಅಷ್ಟೊಂದು ಹೆದರಿಸದಿದ್ದರೇ ಚೆನ್ನೇನೋ. Jokes apart, ಹಯವದನ ತನ್ನೆಲ್ಲ ಸಂಕೀರ್ಣತೆ, ದ್ವನಿ ಪೂರ್ಣತೆಗಳಿಂದ ರಂಗಪ್ರಯೋಗಕ್ಕೆ ಒಂದು ಸವಾಲೆಂಬುದೇನೋ ನಿಜ. ಈ ಮಾತನ್ನು ಮುಂದೆ ನಡೆದ ನಾಟಕ ಪ್ರದರ್ಶನ ಕೂಡ ಮತ್ತಷ್ಟು ದೃಢಪಡಿಸಿತು.

ತಂಡದ ಪ್ರದರ್ಶನದಲ್ಲಿ ಪರಿಣತಿ, ಪರಿಶ್ರಮಗಳಿಗಿಂತ ಹೆಚ್ಚಾಗಿ ಎದ್ದು ಕಾಣುತ್ತಿದ್ದದ್ದು, ಖುಷಿ ಕೊಟ್ಟದ್ದು ಅದರ ಉತ್ಸಾಹ, ಸಡಗರ ಮತ್ತು ಆ involvement. ಬಹುಶ: ಪ್ರದರ್ಶನವನ್ನು ಹೆಚ್ಚು ಪ್ರಿಯಗೊಳಿಸಿದ್ದು ಈ ಉತ್ಸಾಹವೇ ಇರಬೇಕು. ಹಯವದನವನ್ನು ಹೆಚ್ಚು "professional" ಆಗಿ ಅದರೆಲ್ಲಾ ಸಂಕೀರ್ಣತೆಗಳೊಂದಿಗೆ ಪ್ರಸ್ತುತಗೊಳಿಸುವ ಬೇಕಾದಷ್ಟು ವೃತ್ತಿಪರ ಹವ್ಯಾಸೀ ತಂಡಗಳಿವೆ. ಇನ್ನೊಮ್ಮೆ serious ಆಗಿ ನೋಡಿದರಾದೀತು.

ಧ್ವನಿ ಪ್ರತಿಷ್ಠಾನದ ೨೩ನೇ ವಾರ್ಷಿಕೋತ್ಸವವಂತೆ ಇದು. ಆಚರಿಸಿಕೊಂಡ ರೀತಿ ಮನಸ್ಸಿಗೆ ಮುದ ನೀಡಿತು, ಚೆನ್ನಾಗಿತ್ತು. ಸಂಸ್ಥೆಗೆ All the best.

Wednesday, April 30, 2008

ಮೈಸೂರು ಅರಮನೆ - ಹೊಸ ಇತಿಹಾಸ

ಕಳೆದ ವಾರ, ಕಛೇರಿಯ ಕೆಲಸಕ್ಕಾಗಿ ಹೈದರಾಬಾದಿಗೆ ಹೋಗಿದ್ದೆ. ಹಿಂದಿರುಗುವಾಗ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಂಡ "ಐತಿಹಾಸಿಕ ಸ್ಮಾರಕ" ಇದು:


ನಾನು ಆಂಧ್ರಪ್ರದೇಶ ಪ್ರವಾಸೋದ್ಯಮಕ್ಕೆ ಬರೆದ ಈ-ಪತ್ರ:
Dear Sir,
Please see the attached photos of one of your displays at Hyderabad Airport taken on 25th April 2008. This is the picture of the world famous Mysore Palace. But shockingly enough, the caption reads "Tipu Sultan's Palace, Mysore"!!!
I had dropped a complaint in the airport complaint/suggession kiosk, but no response till now. For your information, here is a small piece of details about the said palace:
The construction of this palace was started in 1897 to replace the old palace which was destroyed due to fire.
The regent of Mysore at the time, Queen Kempananjammanni Vanivilasa
Sannidhana
, commissioned a British architect, Henry Irwin, to build yet another palace in its place. The construction was completed in 1912.
Not that the above piece of history may interest you, but this is just to insist that you please stand corrected and immediately remove or correct the display before many more visitors laugh at us.
That the tourism department which is supposed to guide and enlighten the tourists about our rich cultural heritage, forgets (or ignores) the history of just 95 years, is a matter of shame, more so when it is displayed in such a bold manner in front of the whole world !!!
Regards,
Manjunatha.K.S
ಈ ಬಗ್ಗೆ ನಿಮಗೂ ಏನಾದರೂ ಬರೆಯಬೇಕೆನ್ನಿಸಿದರೆ, ಆಂಧ್ರಪ್ರದೇಶ ಪ್ರವಾಸೋದ್ಯಮದ ಈ-ವಿಳಾಸ info@aptourism.in - ಹೆಚ್ಚೇನೂ ಉಪಯೋಗವಾಗದಿದ್ದರೂ, ದೇಶದ ಸಾಂಸ್ಕೃತಿಕ ಸಂಪತ್ತಿನ ವಿಷಯದಲ್ಲಿ ಬಾಯಿಗೆ ಬಂದದ್ದೆಲ್ಲಾ ಬಡಬಡಿಸ-ಬಾರದೆನ್ನುವ ಸಣ್ಣ ಎಚ್ಚರಿಕೆಯಾದರೂ ಸಂಬಂಧಪಟ್ಟವರಿಗೆ ಬಂದೀತೆನ್ನುವ ಆಶೆ.
ಸೂಚನೆ: ಇದಕ್ಕೂ ಸರಿಯಾದ ಈ-ವಿಳಾಸವೇನಾದರೂ ತಮಗೆ ತಿಳಿದಿದ್ದಲ್ಲಿ ನನ್ನೊಡನೆ ಹಂಚಿಕೊಳ್ಳಿ.

Sunday, April 6, 2008

ಮನೆಯೊಂದರ ಸುತ್ತ ಮುತ್ತಾ...

ಬಸವನಗುಡಿಯ ಈ ಚಾಳಿಗೆ ನಾವು ಬಂದಾಗ, ಮೊದಲು ನಮ್ಮ ಗಮನ ಸೆಳೆದದ್ದು, ಚಾಳು ಮನೆಯ ಪಕ್ಕದಲ್ಲಿದ್ದ ವಿಶಾಲವಾದ ಖಾಲಿ ಜಾಗ, ಅದರ ಸುಮಾರು ಅರ್ಧದಷ್ಟಿದ್ದ ಮಜಬೂತಾದ ಹಳೆಯ ಮನೆ. ಕಿಷ್ಕಿಂಧೆಯಂತಿದ್ದ ನಮ್ಮ ಮನೆಗೆ ಈ ಖಾಲಿ ಸೈಟು ಒಂದು ದೊಡ್ಡ ವಿಸ್ತರಣದಂತಿತ್ತು. ಬಹುಶಃ ನಾವು ಈ ಚಾಳನ್ನು ಆರಿಸಿಕೊಳ್ಳಲು ಇದೂ ಒಂದು ಕಾರಣ.

ನಿವೇಶನದ ಬಹುಭಾಗ ಪಾಳು ಸುರಿಯುತ್ತಿದ್ದರೂ, ಮನೆಯ ಆಸುಪಾಸಿನಲ್ಲಿ ಸಾಕಷ್ಟು ಜಾಗದಲ್ಲಿ ಮನೆಯವರು ಹಬ್ಬಿಸಿದ್ದ ಮಲ್ಲಿಗೆ ಹಂಬು, ಜಾಜಿ, ಐದಾರು ಗುಲಾಬಿ ಗಿಡ - ಅದರ ಮೇಲೆ ಬೆಳಗು, ಸಂಜೆ, ಮಧ್ಯಾಹ್ನ ಉರಿಬಿಸಿಲಿನಲ್ಲಿ ಬೀಸಿ ಬರುವ ತಂಗಾಳಿ ತೆರೆದ ಕಿಟಕಿಯ ಮೂಲಕ ನಮ್ಮ ಮನೆಯನ್ನೆಲ್ಲ ತುಂಬುತ್ತಿತ್ತು.

ಈ ಸೈಟಿನ ಪಕ್ಕ ಇನ್ನೊಂದು ಮನೆ. ಮನೆಯ ಯಜಮಾನ ಒಬ್ಬ ಶ್ರದ್ಧಾಳು ಬ್ರಾಹ್ಮಣ. ಯಾವುದೋ ಕೇಂದ್ರ ಸರಕಾರದ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದರು. ದಿನಾಲು ಬೆಳಗ್ಗೆ ಶುಭ್ರವಾಗಿ ಮೈತುಂಬಾ ವಿಭೂತಿ ಧರಿಸಿ, ರುದ್ರ-ಚಮಕಗಳನ್ನು ಪಠಿಸುತ್ತಾ ದೇವರ ಪೂಜೆಗೆ ಹೂ ಕೊಯ್ಯುತ್ತಿದ್ದರು. ಈ ಸಮಯಕ್ಕೆ ಏಳುವ ಸುತ್ತ ಮುತ್ತಲ ಕೊನೇ ಪಕ್ಷ ನಾಲ್ಕೈದು ಮಕ್ಕಳು ಅವರಿಗೆ ಗುಡ್ ಮಾರ್ನಿಂಗ್ ಹೇಳಬೇಕು; ಅಲ್ಲೇ ಒಂದೈದು ನಿಮಿಷ ಮಕ್ಕಳೊಡನೆ ಕುಶಲೋಪರಿ, ನಂತರ ವೃದ್ಧರು ಪೂಜೆಗೆ ತೆರಳಬೇಕು. "ಗುಡ್ ಮಾರ್ನಿಂಗ್ ತಾತ" ಎಂದೇ ನಾವು ಅವರನ್ನು ನಿರ್ದೇಶಿಸುತ್ತಿದ್ದುದು.

ನಮ್ಮ ಪಕ್ಕದ ನಿವೇಶನ ಬಹುಪಾಲು ಪಾಳು ಸುರಿಯುತ್ತಿತ್ತು ಎಂದೆನಷ್ಟೆ? ಪಾಳು ಎಂದರೆ ನಿಜವಾಗಿ ಪಾಳೇನಲ್ಲ ಬಿಡಿ. ನಗರೀಕರಣದ ಸೋಂಕಿನಿಂದ ನನ್ನ ದೃಷ್ಟಿ ಪಲ್ಲಟವಾಗಿ ಬಂದ ಮಾತು ಅದು. ಪಾಳೆಂದರೆ, ಆ ಜಾಗವನ್ನು ಮನೆಯವರು ಯಾವುದಕ್ಕೂ ಬಳಸಿರಲಿಲ್ಲ ಎಂದಷ್ಟೇ ಅರ್ಥ. ಮತ್ತೇನನ್ನಾದರೂ ಕಟ್ಟಲು ಪಾಯವಾಗಲೀ, Land scaping ಅಥವಾ Gardening ಇತ್ಯಾದಿ ಸಂಸ್ಕಾರಗಳಾವುವೂ ಈ ಜಾಗಕ್ಕೆ ಆಗಿರಲಿಲ್ಲವೆಂದಷ್ಟೇ ಅರ್ಥ. ಸೈಟಿನ ಈಶಾನ್ಯ ಮೂಲೆಯಲ್ಲಿ ಚಿಕ್ಕ ರೂಮಿನಂಥದ್ದೊಂದು ಪಾಳು ಕಟ್ಟಡ, ಅಲ್ಲಲ್ಲಿ ಮುರಿದು ಬಿದ್ದ ಹಿಂಭಾಗದ ಕಾಂಪೌಂಡು ಗೋಡೆ, ಇವು ಈ ನಿವೇಶನಕ್ಕೆ ಪಾಳಿನ 'ಶೋಭೆ'ಯನ್ನು ತಂದಿತ್ತಿದ್ದುವು. ಮಿಕ್ಕಂತೆ ಹಸಿರೇನೋ ಸಮೃದ್ಧಿಯಾಗಿತ್ತು - ಅದನ್ನೂ ನೀವು ಹಸಿರೆಂದು ಒಪ್ಪುವುದಾದರೆ. ಯಾವಯಾವುದೋ ನೂರೆಂಟು ಜಾತಿಯ ಗಿಡ, ಬಳ್ಳಿಗಳು ಒತ್ತೊತ್ತಾಗಿ ಬೆಳೆದು ನಿಂತು ಒಂದು ಕಾಡನ್ನೇ ನಿರ್ಮಿಸಿದ್ದವು. ಹೀಗೆ ನಿರ್ಮಿತವಾದ ಆ ದಟ್ಟ ಪುಟ್ಟ ಅಭಯಾರಣ್ಯದಲ್ಲಿ, ವ್ಯಾಘ್ರದ ಠೀವಿಯಲ್ಲಿ ಬಾಲ ಝಳಪಿಸುತ್ತಾ ಹೊಂಚಿ ಕುಳಿತು ಇಲಿಬೇಟೆಯಾಡುವ ಮಾರ್ಜಾಲಗಳು (ಅಪರೂಪಕ್ಕೊಮ್ಮೆ ಗುಬ್ಬಿಯನ್ನೂ ಬೇಟೆಯಾಡಿದ್ದುಂಟು - ಗುಬ್ಬಚ್ಚಿ endangered species ಪಟ್ಟಿಯಲ್ಲಿರುವ ಪಕ್ಷಿ ಎಂದು ಅವಕ್ಕೆ ಹೇಗೆ ತಿಳಿಯಬೇಕು); ಕೀಚುಕೀಚೆನ್ನುತ್ತಾ ಅಲ್ಲಿದ್ದ ಬೇವಿನ ಮರದಿಂದ ಕಾಯಿ ಹೆಕ್ಕಿ ತಿನ್ನುತ್ತಾ ಒಂದನ್ನೊಂದು ಅಟ್ಟುತ್ತಾ ಗಲಭೆ ಮಾಡುವ ಅಳಿಲುಗಳು; ಸೈಟಿನ ವಾಯುವ್ಯಕ್ಕೆ (ಅಂದರೆ ನಮ್ಮ ಮನೆಗೆ ಚಾಚಿಕೊಂಡಂತೆ) ಹೊರವಾಗಿ ಬೆಳೆದು ನಿಂತಿದ್ದ ಮಾವಿನ ಮರ; ಅದರ ಚಿಗುರನ್ನೋ, ಹೂವನ್ನೋ ತಿನ್ನಲು ಬರುವ ಕೋಗಿಲೆಗಳು; ಚೈತ್ರವೋ ಶ್ರಾವಣವೋ ಬಂದರಂತೂ ಇವುಗಳ ಸುಗ್ಗಿಯೋ ಸುಗ್ಗಿ. ಬೆಳಗಿನಿಂದ ಸಂಜೆಯವರಗೂ ಒಂದೇ ಸಮನೆ ಕೂಗಿದ್ದೇ ಸೈ. ಕೋಗಿಲೆಯ ಸ್ವರ್ಗಸದೃಶ ಗಾನವನ್ನು ಬಣ್ಣಿಸಿ ತಣಿಯದ ಕವಿಯಿಲ್ಲ. ವರ್ಡ್ಸ್ ವರ್ತ್ ನಿಂದ ಹಿಡಿದು, ಕುವೆಂಪು, ಪು.ತಿ.ನ ವರೆಗೂ! ಬಳಸಿ ಬಳಸಿ ಅದೊಂದು ಸವಕಲು ಕವಿಸಮಯವಾಗಿಬಿಟ್ಟಿದೆ. ಆದರೂ, ಸವಕಲಾದದ್ದು ಕವಿಸಮಯವೇ ಹೊರತು ಕೋಗಿಲೆಯ ದನಿಯಲ್ಲವಲ್ಲ; ಅದು ನಿತ್ಯ ನೂತನ. ಹಾಗೆಂದೇ ಹೇಳುತ್ತೇನೆ, ಕೋಗಿಲೆಯ ಗಾನದ ಸವಿಯನ್ನು ಕೇಳಿಯೇ ಸವಿಯಬೇಕು.

ಕೋಗಿಲೆಯ ದನಿಯನ್ನು ಕೇಳದವರಾರು? ನಮ್ಮ ಕಚೇರಿಯ ಕರ್ಕಶ ವಾತಾವರಣದಲ್ಲೂ ಹೊರಗಿನ ಒಂದು ಅಬ್ಬೇಪಾರಿ ಮರದ ಮೇಲೆ ಕುಳಿತು ಕೋಗಿಲೆಯೊಂದು ಅಪ್ರಸ್ತುತವಾಗಿ ಆಲಾಪಿಸುತ್ತಿದ್ದುದನ್ನು ಕೇಳಿದ್ದೇನೆ. ಅದರಿಂದ, ಕಃ ಪದಾರ್ಥಗಳಾದ ಕಂಪ್ಯೂಟರು, ಲೆಡ್ಜರುಗಳಿಗೂ ಕೂಡ ಚೈತ್ರದ ಸೋಂಕು ಉಂಟಾಗುತ್ತಿದ್ದುದೂ, ಗಂಟುಮುಖದ ಬಾಸೂ ವಸಂತದೂತನಂತೆ ಕಾಣತೊಡಗುತ್ತಿದ್ದುದೂ ಅನುಭವಕ್ಕೆ ಬಂದಿದೆ. ಆದರೂ ಕೋಗಿಲೆಯ ಕರೆಯೆಂದರೆ ಇಷ್ಟೇ ಅಲ್ಲ. ಸಂಗಾತಿಯನ್ನು ಕರೆಯುವ ಅದರ ಉತ್ಕಂಠತೆ, ಮಾರ್ದವತೆ, ಒಂದು ವಿಧವಾದ ಯಾತನೆ-ಯಾಚನೆ, ಕೇಳಿಯೇ ಅನುಭವಿಸಬೇಕಾದ್ದು. ಆ ದನಿಯಲ್ಲಿನ ಖನಿ-ಇನಿ, ಅದರ ತೀಕ್ಷ್ಣತೆ, ಸ್ಪಷ್ಟತೆ, ಒಂದು ಸ್ತರದಿಂದ ಮತ್ತೊಂದಕ್ಕೆ ಜಾರುತ್ತಾ ಏರಿ, ಹಾಗೇ ಇಳಿದು ವಿರಮಿಸುವ ಪರಿ (ಸಂಗೀತದ ಪರಿಭಾಷೆಯಲ್ಲಿ ಇದನ್ನ ಗಮಕ ಅಂತೇವೆ), ನಿಮ್ಮ ಮನದ ಯಾವುದೋ ತಂತಿಯನ್ನು ಮೀಟಿ ಮಿಡಿಸುವ ಆ ಉತ್ಕಟತೆ, ಇನ್ನಿಲ್ಲದಂತೆ ಕೂಗಿ ಕರೆಯುವ ವಿಹ್ವಲತೆ (ಆದರೂ ಏಕೋ ಹೆಣ್ಣಿನ ಮನ ಕರಗದು - ಗಂಡಿನ ವಿಲಾಪ ನಿಲ್ಲದು!) ಇವನ್ನೆಲ್ಲಾ ಬರೇ ಕೇಳಿದರೆ ಸಾಲದು, ನಿಮ್ಮೆಲ್ಲಾ ಕೆಲಸಗಳನ್ನೂ ಕ್ಷಣ ಬಿಟ್ಟು ಅದಕ್ಕೆ ಕಿವಿಗೊಡಬೇಕು, ಮನಗೊಡಬೇಕು.

ಮಾವಿನ ಕಾಲಕ್ಕೆ ಈ ಮರದಲ್ಲಿ ಹೂವು-ಮಿಡಿ-ಹಣ್ಣುಗಳ ಹುಚ್ಚೇ ಹರಿಯುತ್ತಿತ್ತು. ಎಷ್ಟೋ ಬಾರಿ ಕಾಯಿ-ಹಣ್ಣುಗಳು ನಮ್ಮ ಬಾಲ್ಕನಿಯೊಳಗೆ ಉದುರುತ್ತಿದ್ದುದೂ ಉಂಟು. ಆಗಾಗ್ಗೆ ಮನೆಯವರು ಯಾರನ್ನಾದರೂ ಕರೆದು ಹಣ್ಣು ಕೀಳಿಸುತ್ತಿದ್ದರು.

ಉದ್ದಕ್ಕೂ ಈ ಜಾಗವನ್ನು ಖಾಲಿ ಜಾಗ, ಸೈಟು, ನಿವೇಶನ ಇತ್ಯಾದಿ ವ್ಯವಹಾರೀ ನಾಮಗಳಿಂದ ಕರೆಯುತ್ತಿದ್ದೇನಷ್ಟೇ? ಇದೂ ನನಗಂಟಿದ ನಗರೀಕರಣದ ಮತ್ತೊಂದು ವ್ಯಾಧಿಯೇ! ನಮ್ಮೂರಲ್ಲಿ ನಮಗೂ ಮನೆಯ ಹಿಂದೆ ಇಂಥದ್ದೇ ಜಾಗವಿತ್ತು. ಅದನ್ನು "ಹಿತ್ತಿಲು" ಎನ್ನುತ್ತಿದ್ದೆವು. ನಾವೇನು, ಎಲ್ಲರೂ ಅದನ್ನು ಹಾಗೇ ಕರೆಯುವುದು ಎನ್ನಿ. ಮನೆಯ ಹಿತ್ತಿಲು "ಖಾಲಿ ಜಾಗ", "ಸೈಟು" ಇತ್ಯಾದಿ ಆಗುವುದು ಬೆಂಗಳೂರಿನಂಥ 'ಮುಂದುವರೆದ' ಊರುಗಳಲ್ಲಿ ಮಾತ್ರ. ಒಂದಂಗುಲವೂ ಚಿನ್ನದಷ್ಟು ಬೆಲೆಬಾಳುವ ಇಲ್ಲಿ, ಹಿತ್ತಿಲ ಗಿಡದ ಮದ್ದು ಬಲು ದುಬಾರಿ. ಅದಕ್ಕಿಂತ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ಲುಗಳೇ ಅಗ್ಗ!

ಇರಲಿ, ಇದನ್ನು ನಮ್ಮ ಸಮಾಧಾನಕ್ಕಾದರೂ ಹಿತ್ತಿಲು ಎಂದೇ ಕರೆಯೋಣ. ಈ ಹಿತ್ತಿಲಿನ ನಡುವೆ ಒಂದು ಬಾವಿ, ಪಕ್ಕ ಒಂದು ನೀರಿನ ತೊಟ್ಟಿ, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಕಟ್ಟೆ. ಅಲ್ಲಿ ನೀರು ಕುಡಿಯಲು ಬಂದು ದಿನವೆಲ್ಲ ಸದ್ದುಮಾಡುವ ಕಾಗೆಗಳು, ಮೈನಾ, ಮತ್ತೆಂಥದೋ ಹಕ್ಕಿಗಳು; ಈ ಶಬ್ದಸ್ರೋತಕ್ಕೆ ಅಲ್ಲಲ್ಲಿ ದೊರಕೊಳ್ಳುವ ಮೌನದ ವಿರಾಮ; ವಾಕ್ಯದ ನಡುವೆ ಅಲ್ಪ ವಿರಾಮವಿಟ್ಟಂತೆ ಕ್ಹೂ-ಕ್ಹೂ ಎಂದು ಎರಡೇ ಮಾತ್ರೆಯ ಸದ್ದು ಹೊರಡಿಸುವ ಗೀಜಗವೋ ಮತ್ತಾವುದೋ ಹಕ್ಕಿ. ಎರಡು ವರ್ಷದ ರಾಘವಾಂಕನನ್ನು ಎತ್ತಿಕೊಂಡು ಬಾಲ್ಕನಿಯಿಂದ ಅಲ್ಲಿ ನಡೆಯುವ ವಿಧ್ಯಮಾನಗಳನ್ನೆಲ್ಲ ತೋರಿಸುತ್ತಾ, ವೀಕ್ಷಕ ವಿವರಣೆ ಕೊಡುತ್ತಾ ನಿಂತರೆ, ದಿನ ಕಳೆದದ್ದೇ ತಿಳಿಯದು (ಹೀಗೇ ನಮ್ಮೂರ ಮನೆಯ ಹಿತ್ತಿಲಲ್ಲಿ ದಿನವಿಡೀ ಓತಿಕ್ಯಾತಕ್ಕೆ ಕಲ್ಲು ಹೊಡೆಯುತ್ತಲೋ, ಏರೋಪ್ಲೇನ್ ಚಿಟ್ಟೆ ಹಿಡಿದು ಬಾಲಕ್ಕೆ ದಾರ ಕಟ್ಟಿ ಹಾರಿಸುತ್ತಲೋ, ಹಿತ್ತಿಲಲ್ಲಿ ಬೆಳೆದ ಟೊಮ್ಯಾಟೋ ಕಾಯಿ ಹಣ್ಣಾಗುವ ಕೌತುಕವನ್ನು ಗಮನಿಸುತ್ತಲೋ, ಮೊನ್ನೆ ತಾನೇ ನೆಟ್ಟ ಕುಂಬಳ ಬೀಜ ಮೊಳಕೆಯಾಗುವ ಬೆರಗನ್ನು ಅನುಭವಿಸುತ್ತಲೋ, ಒತ್ತಾಗಿ ಬೆಳೆದ ಹಿಪ್ಪುನೇರಳೆ ಹಿಂಡಿಲ ನಡುವೆ ಥಟ್ಟನೆ ಇಣುಕಬಹುದಾದ ದೆವ್ವವೊಂದನ್ನು ಹುಡುಕುತ್ತಲೋ, ಇಲ್ಲ, ಹಲ ವರುಷಗಳ ನಂತರ, ಹಾಗೇ ಗಿಡಗಳ ಪಾತಿ ಮಾಡುತ್ತಾ ನೀವಾರಶೂಕವನ್ನು ಕುರಿತು ಚಿಂತಿಸುತ್ತಲೋ, ಯಾವುದೋ ವರ್ಣವನ್ನೋ ಕೀರ್ತನೆಯನ್ನೋ ಗಟ್ಟಿ ಮಾಡುತ್ತಲೋ, ಕುವೆಂಪು ಸಾಹಿತ್ಯ ಸಹ್ಯಾದ್ರಿಯಲ್ಲಿ ಕಳೆದು ಹೋಗುತ್ತಲೋ ಬಾಲ್ಯ ಕೌಮಾರ್ಯಗಳ ಬಹುಪಾಲು ಕಳೆಯುವ ಬಾಲಭಾಗ್ಯ ನನ್ನದಾಗಿತ್ತೆಂದು ನೆನೆದರೆ ಬಹಳ ಸಂತಸವಾಗುತ್ತದೆ - ಹಾಗೇ ಪುಟ್ಟ ರಾಘವಾಂಕನ ಬಗ್ಗೆ ಮರುಕ ಕೂಡ)

ಇದು ಹಗಲಿನ ಚಿತ್ರವಾದರೆ, ಇರುಳಿನ ಚಿತ್ರವೇ ಬೇರೆ. ನಿಶೆಯ ನೀರವ ಮೌನವನ್ನು ಮುರಿಯಲೋಸುಗವಷ್ಟೇ ಕೂಗುವಂತೆ ಯಾವುದೋ ಪಕ್ಷಿ ಕಿಚುಕಿಚ್ಚೆಂದು ಕೂಗು ಹಾಕಿ ಸುಮ್ಮನಾಗುತ್ತದೆ. ಹಗಲಿನ ಸದ್ದಿನಂತೆ ನಿರಂತರವಾದ ಸದ್ದಲ್ಲ, ಅದು. ಈಗ ಕೂಗಿತು, ಮತ್ತೆ ಇನ್ನು ಐದೋ ಹತ್ತೋ ನಿಮಿಷಕ್ಕೆ ಮತ್ತೊಂದು ಚರಣ; ಮತ್ತೆರಡುಗಂಟೆ ಅಖಂಡ ಮೌನ. ಒಂದು ರಾತ್ರಿ - ಹನ್ನೆರಡರ ಸಮಯ, ಏತಕ್ಕೋ ಬಾಲ್ಕನಿಗೆ ಬಂದವನಿಗೆ ಪಕ್ಕದ ಹಿತ್ತಿಲಿನ ಬಾವಿಯ ಮೇಲೆ ಬೆಕ್ಕಿನಂಥದ್ದೇನೋ ಕುಳಿತದ್ದು ಕಾಣಿಸಿತು. ಬೆಕ್ಕು ಬಾವಿಯ ಮೇಲೆ ಕುಳಿತು ಏನು ಮಾಡುತ್ತಿದೆ ಇಷ್ಟು ಹೊತ್ತಿನಲ್ಲಿ, ಎಂದು ಹತ್ತಿರ ಬಗ್ಗಿ, ಕಣ್ಣು ಕೀಲಿಸಿ ನೋಡಿದರೆ ಕಂಡದ್ದು, ತನ್ನ ದೊಡ್ಡ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತಾ ನನ್ನತ್ತಲೇ ದುರುಗುಟ್ಟಿ ನೋಡುತ್ತಿದ್ದ ಗೂಬೆ. ನನ್ನನ್ನು ನೋಡುತ್ತಲೇ ಎದ್ದು ಕಿಚುಕಿಚ್ಚೆಂದು ಕೂಗುತ್ತಾ ಹಾರಿಹೋಯಿತು. ಗೂಬೆಗಳು "ಗೂ" ಎಂದು ಮಾತ್ರ ಕೂಗುತ್ತವೆ ಎಂದು ತಿಳಿದಿದ್ದ ನನಗೆ, ಇವುಗಳ ಇನ್ನೊಂದು ಪ್ರಭೇದ ಅರಿವಿಗೆ ಬಂದದ್ದು ಆಗಲೇ. ಇದು ಪ್ರತಿ ರಾತ್ರಿ ಅಲ್ಲಿ ಬಾವಿ ಕಟ್ಟೆಯ ಮೇಲೆ ಕೂರುತ್ತಿತ್ತು. ಏನು ಮಾಡುತ್ತಿತ್ತೋ, ದೇವರೇ ಬಲ್ಲ. ಮತ್ತೊಂದು ದಿನ ನೋಡಿದರೆ ತನ್ನ ಸಂಗಾತಿಯನ್ನೂ ಕರೆತಂದಿತ್ತು. ಈ ಜೋಡಿ ಗೂಗೆಗಳು ರಾತ್ರಿಯಿಡೀ ಅಲ್ಲಿ ಹಾಗೆ ಕುಳಿತೇ ಕಾಲ ಕಳೆಯುತ್ತಿದ್ದುವೆನಿಸುತ್ತದೆ. ಮತ್ತೊಂದು ಗಂಟೆ ಕಳೆದು ಮತ್ತೆ ಹೋಗಿ ನೋಡಿದರೆ ಅವು ಹಾಗೇ ಕುಳಿತಿದ್ದುವು, ಕೂತಿದ್ದ ಭಂಗಿಯಲ್ಲಾಗಲೀ ಜಾಗದಲ್ಲಾಗಲೀ ಕೊಂಚವೂ ಬದಲಾಗಿರಲಿಲ್ಲ. ಅವುಗಳನ್ನು ಗಮನಿಸುವ ಹಟಕ್ಕೆ ಬಿದ್ದು ಅಲ್ಲೇ ಸುಮಾರು ಒಂದು ಗಂಟೆ ನಿಂತೆ. ಉಹ್ಹೂಂ! ಎರಡೂ ಒಂದಿನಿತೂ ಕದಲಲಿಲ್ಲ. ಸುಮ್ಮನೇ ಕುಳಿತೇ ರಾತ್ರಿಯೆಲ್ಲ ಕಳೆಯುವ ಇವುಗಳ ಪರಿ ನನಗೆ ಸೋಜಿಗ ತಂದಿತು. "ನಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್" ಎಂದ ಶ್ರೀ ಕೃಷ್ಣ ಈ ಗೂಬೆಗಳನ್ನು ನೋಡಬೇಕಿತ್ತು! ಕರ್ಮ ನಿರಾಕರಣೆಯ ಪರಮಾವಧಿ! ಅದಾವ ಸಿದ್ಧಾಂತವನ್ನು ಹೇಗೆ ಅರಗಿಸಿಕೊಂಡಿದ್ದುವೋ, ಅದಾವ ಬ್ರಹ್ಮ ಜ್ಞಾನವನ್ನು ಗಳಿಸಿಕೊಂಡಿದ್ದುವೋ (wise old owls)

ಇನ್ನು ಮಳೆಗಾಲ ಬಂದರೆ ಇರುಳಲ್ಲಿ ಬೇರೊಂದು ಕಿನ್ನರ ಲೋಕವೇ ಸೃಷ್ಟಿಯಾಗುತ್ತಿತ್ತು. ಹಗಲೆಲ್ಲ ಎಲ್ಲಿರುತ್ತಿತ್ತೋ, ಕತ್ತಲೆ ಕವಿಯುವುದೇ ತಡ, ನೂರಾರು ಸಂಖ್ಯೆಯಲ್ಲಿ ಮಿಂಚು ಹುಳಗಳು ನಮ್ಮ ಈ ಹುಚ್ಚು ಕಾಡನ್ನು ಇಂದ್ರವನವನ್ನಾಗಿಸುತ್ತಿದ್ದವು.

ಆದರೇನು? ಸ್ವಪ್ನಲೋಕಕ್ಕೊಂದು ಕೊನೆಯಿರಲೇಬೇಕಲ್ಲವೇ? ಇರಲಿ. ಬೆಂಗಳೂರಿನ ಮಧ್ಯಭಾಗದಲ್ಲಿ ಬಸವನಗುಡಿಯಂತಹ posh ಏರಿಯಾಗಳಲ್ಲಿ ಏನಿಲ್ಲೆಂದರೂ ಕನಿಷ್ಠ ಐದಾರು ಕೋಟಿ ಬಾಳುವ ಈ ಜಾಗ ರಿಯಲ್ ಎಷ್ಟೇಟ್ ದಂಧೆಯ ಕಣ್ಣಿಗೆ ಬೀಳದೇ ಉಳಿದಿರುವುದು ಹೇಗೆ ಎಂಬ ನಮ್ಮ ಕೌತುಕ ಬಹುಕಾಲ ಉಳಿಯಲಿಲ್ಲ. ಮನೆಯವರು ಅಲ್ಪಸ್ವಲ್ಪ ಹಣಕಾಸಿನ ಮುಗ್ಗಟ್ಟಿನಲ್ಲಿದ್ದರೆಂದು ಹೇಗೋ ತಿಳಿದು ಬರುತ್ತಿತ್ತು. ಆದರೆ ಅದು ಬೀದಿಗೂ ಬಂದು, ಸಾಲಗಾರರು ಮನೆಯ ಮುಂದೆ ಹೀನಾಯವಾಗಿ ಮಾತಾಡತೊಡಗಿದಾಗ, ಪರಿಸ್ಥಿತಿ ಗಂಭೀರವಾಯಿತು. ಬೆಂಗಳೂರಿನಲ್ಲಿ ಬೆದರಿಸಿ ನೆಲ ಕಿತ್ತುಕೊಳ್ಳುವ (extrotion) ದಂಧೆ ಎಷ್ಟು ಪ್ರಬಲವಾಗಿದೆ ಎಂಬುದು ತಿಳಿಯದ್ದೇನಿಲ್ಲ. ಮನೆಯಾತ ಆರ್ಥಿಕವಾಗಿ, ಭಾವನಾತ್ಮಕವಾಗಿ ನಿಸ್ಸಹಾಯಕನಾಗಿ ಸ್ವತ್ತನ್ನು ಬಂದಷ್ಟಕ್ಕೆ ಮಾರಿ ಕೈ ತೊಳೆದುಕೊಳ್ಳುವಂತೆ ಒತ್ತಡ ತರುವುದು ಇವರ ಕಾರ್ಯ ತಂತ್ರಗಳಲ್ಲೊಂದು. ಮುಂದೆ ನಡೆದದ್ದೆಲ್ಲ ಬಲು ಕ್ಷಿಪ್ರ ಗತಿಯಲ್ಲಿ ನಡೆಯಿತು. ಈ ಮನೆಯ ಆಚೆಬದಿಯ ಮನೆ ಆಗಲೇ ನೆಲಕ್ಕುರುಳಿತ್ತು. ಆ ಚಿಕ್ಕ ಸೈಟಿನಲ್ಲಿ ಆಗಲೇ ಒಂದು residential complex ಕಾಮಗಾರಿ ಶುರುವಾಗಿತ್ತು. ಈ ಮನೆಗೂ ಜನ ಬರತೊಡಗಿದರು - ಸಾಲಗಾರರು, ಕೊಳ್ಳುವವರು, ರಿಯಲ್ ಎಷ್ಟೇಟ್ ಕುಳಗಳು, ದಳ್ಳಾಳಿಗಳು, ಗೂಂಡಾಗಳು. ಸಾಲದ ವಿಲೇವಾರಿ ಮಾತುಕತೆ ನಡುಬೀದಿಯಲ್ಲೇ ನಡೆಯತೊಡಗಿತು. ಆಸ್ತಿಯನ್ನು ಬಂದಷ್ಟು ದುಡ್ಡಿಗೆ ಮಾರಲೇ ಬೇಕಾದ ಅನಿವಾರ್ಯ ಆಗಲೇ ಬಂದೊದಗಿತ್ತು.

ಮತ್ತೆ ಸ್ವಲ್ಪ ದಿನಕ್ಕೆ ಒಂದಷ್ಟು ಜನ ಬಂದು ಸೈಟಿನ ಅಳತೆ ಹಿಡಿದರು; ಇಂಜಿನಿಯರ್ ತನ್ನ ಪ್ಲಾನುಗಳ ಜೊತೆ ಬರತೊಡಗಿದ. ಹಿತ್ತಿಲಲ್ಲಿ ಬೆಳೆದ "ಸತ್ತೆ"ಯ "cleaning" ಆಗಬೇಕಿತ್ತು. ನೋಡನೋಡುತ್ತಿದ್ದಂತೆ ಎಲ್ಲ clean ಆಯಿತು. ಮತ್ತೆ ಸ್ವಲ್ಪ ದಿನಕ್ಕೆ ಆ ದಿನ ಬಂದೇ ಬಂತು. ಹಾರೆ-ಸನಿಕೆಗಳ ಜೊತೆ ಬಂದ ಕೆಲಸಗಾರರ ಗುಂಪು ಮನೆ ಒಡೆಯುವ ಕಾಯಕಕ್ಕೆ ಮೊದಲಿಟ್ಟಿತು. ಕಬ್ಬಿಣದ ಗಟ್ಟಿಯಂಥ ಆ ಮನೆಯನ್ನು ನಿಜಕ್ಕೂ ಒಡೆಯಲು ಸಾಧ್ಯವೇ ಎಂದು ಖೇದಮಿಶ್ರಿತ ಕೌತುಕದಿಂದ ನಾವು ವೀಕ್ಷಿಸುತ್ತಿದ್ದೆವು. ನರಪೇತಲನಂಥ ಹುಡುಗನೊಬ್ಬ ಮನೆಯಮೇಲೇರಿ ತನಗಿಂತ ದೊಡ್ಡದಾದ ಸುತ್ತಿಗೆಯಿಂದ ಮನೆಯ ಬಿಸಿಲುಮಚ್ಚಿನ ನೆಲವನ್ನು ಕುಟ್ಟುತ್ತಿದ್ದರೆ, ಬೆಟ್ಟವನ್ನು ಮುಷ್ಟಿಯಿಂದ ಕುಟ್ಟಿ ಕೆಡಹುವ ವ್ಯರ್ಥ ಪ್ರಯತ್ನದಂತೆ ತೋರುತ್ತಿತ್ತು. ಆದರೂ ದಶಕಗಳ ಕಾಲ ತಲೆಮಾರುಗಳು ಬಾಳಿ ಬದುಕಿದ ಆ ಭದ್ರವಾದ ಮನೆ ನೆಲಕಚ್ಚಿಯೇ ತೀರುವುದೆನ್ನುವ ಅರಿವು, ನಮ್ಮ ನಂಬಿಕೆಗೆ ಮೀರಿದ, ನಂಬಲೊಲ್ಲದ ಸತ್ಯವಾಗಿತ್ತು.

ಮರುದಿನ ವಿದೇಶಕ್ಕೆ ಹೊರಟುನಿಂತ ನಾನು ಹದಿನೈದು ದಿನ ಬಿಟ್ಟು ಮರಳಿಬರುವ ಹೊತ್ತಿಗೆ ಅಲ್ಲೊಂದು ದೊಡ್ಡ ಬಯಲಿತ್ತು. ಬುಲ್ಡೋಝರ್ ಉಪಯೋಗಿಸಿ ಒಡೆದರಂತೆ, ನನ್ನ ಮಡದಿ ಹೇಳಿದ್ದು. ಹೇಗೋ, ನನ್ನ ಅರಿವಿಗೆ ನಿಲುಕಲಿಲ್ಲ.

ಇದಾಗಿ ಕೆಲವು ತಿಂಗಳು ಕಳೆದಿವೆ. ನೆರೆಮನೆಯ ಹುಡುಗರು ಈಗ ರಜಾ ದಿನಗಳಂದು foot ball ಆಡುತ್ತ ಗದ್ದಲವೆಬ್ಬಿಸುವುದಿಲ್ಲ. ನಮ್ಮ ಮನೆಗೇ ಮುಖವಿಟ್ಟುಕೊಂಡ ನೆರೆಮನೆಯಿಂದ ಕಿವಿಗಡಚಿಕ್ಕುವ music systemನ ಗದ್ದಲದ ನಡುವೆ ಇದನ್ನು ಬರೆಯುತ್ತಿದ್ದೇನೆ. ಇಲ್ಲಿ ಈಗ ಕೋಗಿಲೆ ಕರೆಯುವುದಿಲ್ಲ; ಕಾಗೆ ನೀರು ಕುಡಿಯಲು ಬರುವುದಿಲ್ಲ; ಬೆಕ್ಕು ವ್ಯಾಘ್ರದೋಪಾದಿಯಲ್ಲಿ ಇಲಿ ಬೇಟೆಯಾಡುವುದಿಲ್ಲ; ಜ್ಞಾನವೃದ್ಧರಾದ ಘೂಕದಂಪತಿಗಳು ಬಂದು ಕೂರಲು ಬಾವಿ ಕಟ್ಟೆ ಇಲ್ಲಿಲ್ಲ. ಇಲ್ಲೀಗ ಒಂದು luxury apartment complex ತಲೆಯೆತ್ತಿದೆ. ಮನೆಯ ಮುಂದೆ landscape ಮಾಡಿದ ಸಣ್ಣ ಉದ್ಯಾನವಿದೆ, ಚಿಕ್ಕದೊಂದು ಈಜು ಕೊಳವೂ ಇದೆ. ಒಂದೊಂದು ಪ್ಲಾಟಿನ ಬೆಲೆ ಎಂಬತ್ತೈದರಿಂದ ತೊಂಬತ್ತು ಲಕ್ಷ. ಒಂದಷ್ಟು ಹಿಂದೀ, ಸಿಂಧೀ, ಮಾರವಾಡಿ ಸಂಸಾರಗಳು ನೆಲೆಯೂರಿವೆ. ಅಂದಹಾಗೆ, ಇನ್ನೂ ಒಂದೆರಡು ಪ್ಲಾಟು ಮಿಕ್ಕಿವೆ, ಮಾರಾಟಕ್ಕೆ (car parking ಇದೆ)

ನಾವು ಬೇರೆ ಮನೆ ನೋಡುತ್ತಿದ್ದೇವೆ.

Tuesday, February 19, 2008

ಜೋಧಾ-ಅಕ್ಬರ್; ಕ್ಷಮಿಸಿ, ಐಶ್ವರ್ಯಾ-ಹೃತಿಕ್

ಮೂವತ್ತೇಳರ ಆಸುಪಾಸಿನಲ್ಲೂ ಐಶ್ವರ್ಯಾ ತನ್ನ ಸ್ನಿಗ್ಧ ಸೌಂದರ್ಯದಿಂದ ಮನ ಸೆಳೆಯುತ್ತಾಳೆ / ಅಕ್ಬರನ ಪಾತ್ರಕ್ಕಿಂತ ಹೃತಿಕ್ ತನ್ನ ಕಟ್ಟುಮಸ್ತು ದೇಹಸಿರಿ ತೋರಿಸುವ ಕೆಲಸವನ್ನೇ ಹೆಚ್ಚು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾನೆ... ತಲೆ ಚಿಟ್ಟು ಹಿಡಿಸುವ ಚಿತ್ರದ ಕೊನೆಯಲ್ಲಿ ಆಕಳಿಸುತ್ತಾ ನೀವು ಹೊರನೆಡೆಯುವಾಗ ನಿಮ್ಮ ಮನದಲ್ಲಿ ಉಳಿಯುವ ಪಾಯಿಂಟುಗಳು ಬಹುಶಃ ಇವೆರಡೇ.

ಇದು ಬಿಟ್ಟರೆ ಮನಸಿನಲ್ಲಿ ಉಳಿಯುವುದು ಒಂದೆರಡು ಕತ್ತಿ ವರಸೆ ದೃಶ್ಯಗಳು - ಇಲ್ಲೂ ಐಶ್ವರ್ಯಾಳದೇ ಮಿಂಚು... ಹಾಂ, ಇನ್ನೊಂದೆರಡಿವೆ; ಸಂದರ್ಭಕ್ಕೆ ಚೂರೂ ಸರಿಹೊಂದದ ತಲೆ ಚಿಟ್ಟು ಹಿಡಿಸುವ "ಸಂಗೀತ", ಕಾಲಕ್ಕೂ ದೇಶಕ್ಕೂ ಸರಿಹೊಂದದ, ಸುಮಾರು ಆಧುನಿಕಕ್ಕೆ ಹತ್ತಿರವೆನ್ನಿಸುವ ಹಿಂದಿ; ಹಿಂದೂ ಮುಸ್ಲಿಂ ಏಕತೆಯನ್ನೋ, ವೈಷಮ್ಯವನ್ನೋ ಪ್ರೇಕ್ಷಕನ ತಲೆಗೆ ತುಂಬಲೇ ಬೇಕೆಂದು ಹಟ ತೊಟ್ಟ ನಿರ್ದೇಶಕ ಐಶ್ವರ್ಯಾಳ ಬಾಯಿಂದ ಆಡಿಸುವ ಒಂದೆರಡು ಭಾಷಣಗಳು (ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತವೆ!) ನಾಟಕದ ವೇಷದಂತೆ ತೋರುವ (ಮೊಘಲಾಯಿ ಸಿರಿವಂತಿಕೆ - ಕಲಾವಂತಿಕೆಗೆ ಹೊರತಾದ) ವೇಷಭೂಷಣ; ಇನ್ನು ಹಾಡುಗಳೋ, ಮಾತಾಡದಿರುವುದೇ ಉತ್ತಮ (ಒಂದೆರಡು ಬಿಟ್ಟು)

ಮೂಲತಃ ಕೇವಲ ರಾಜಕೀಯ ಅನುಕೂಲಕ್ಕಷ್ಟೇ ನಡೆದಿರಬಹುದಾದ ಜೋಧಾ-ಅಕ್ಬರ್ ಮದುವೆ (ಅದೂ ವಿವಾದಾಸ್ಪದ) ಯಲ್ಲಿ, ಒಂದು ಅಮರ ಪ್ರೇಮ ಕತೆಯನ್ನು ಹುಡುಕ ಹೊರಡುವ ನಿರ್ದೇಶಕ, ಆ ಹುಡುಕಾಟದಲ್ಲೂ ವಿಫಲನಾಗುತ್ತಾನೆ (ಇನ್ನು ಅದನ್ನು picturise ಮಾಡುವುದು ದೂರವೇ ಉಳಿಯಿತು). ಏನನ್ನೂ ಮಾಡಬಲ್ಲ "ಸರ್ವಶಕ್ತ" ನಾದ ಚಕ್ರವರ್ತಿ ಒಂದುಕಡೆ, ಈ high profile ಸಂಬಂಧದಿಂದ ಲಾಭವನ್ನೇ ಪಡೆಯಬಹುದಾದ ರಾಜ ಇನ್ನೊಂದುಕಡೆ, ಯಾವುದೇ ಅಡೆತಡೆಯೇ ಕಾಣದ ಈ ಸಂಬಂಧ "ಅಮರ ಪ್ರೇಮ"ವೆಂದು ಕರೆಯಲು ಬೇಕಾದ ರೊಮ್ಯಾಂಟಿಸಿಸಂ ಆಗಲೀ, ತ್ಯಾಗವಾಗಲೀ ಕಡುಕಷ್ಟವಾಗಲೀ ಇವೊಂದನ್ನೂ ಕಾಣದೇ ಸೊರಗುತ್ತದೆ. ಅದು ಏಕೆ ಅಮರವೋ, ಏಕೆ ಪ್ರೇಮವೋ ಕೊನೆಗೂ ತಿಳಿಯುವುದಿಲ್ಲ. ಇನ್ನು ಅಕ್ಬರ್-ಜೋಧಾರ ವಿರಹಕ್ಕೆ ಕಾರಣವಾದ ಘಟನಾವಳಿಗಳೂ ಕೂಡ, ಪ್ರೇಮವೆಂದರೆ ವಿರಹ ಇರಲೇ ಬೇಕೆನ್ನುವ ಸವಕಲು ಫಾರ್ಮ್ಯುಲಾವನ್ನು ಅನುಸರಿಸಿ ಹೆಣೆದ ಕ್ಷುಲ್ಲಕ ಘಟನೆಗಳಾಗಿ ಕಾಣುತ್ತವೆಯೇ ಹೊರತು ಜೋಧಾ ಆಗಲೀ, ಅಕ್ಬರ್ ಆಗಲೀ ಯಾವುದೂ ಕಷ್ಟವನ್ನು ಅನುಭವಿಸಿದಂತೆ ಅನಿಸುವುದೇ ಇಲ್ಲ.

ಇನ್ನು ಹಿಂದೂ ರಾಜಕುವರಿ ಜೋಧಾಳ ಪ್ರವೇಶದಿಂದಾಗಿಯೇ ಅಕ್ಬರ್ ಒಬ್ಬ ಜನಾನುರಾಗಿ ದೊರೆಯಾಗಿ ಪರಿವರ್ತಿತನಾದ ಎಂದು ಹೇಳಬಯಸುವ ಪ್ರಯತ್ನವಂತೂ ಅತ್ಯಂತ ಹಾಸ್ಯಾಸ್ಪದವಾಗಿ ತೋರುತ್ತದೆ.

ಚಿತ್ರದ ಕೊನೆಯಲ್ಲಿ ನೀವು ಜೋಧಾ ಆಗಲಿ, ಅಕ್ಬರ್ ಆಗಲೀ ಎಲ್ಲಿ ಎಂದು ತಲೆ ಕೆರೆದುಕೊಂಡರೆ, ಅದು ನಿಮ್ಮ ಪಾಡು. ಒಟ್ಟಾರೆ, ಇದು ಇನ್ನೊಂದು ಪಕ್ಕಾ ಮಸಾಲೆ ಚಿತ್ರ. ಅದು ಹೇಳಿಕೊಳ್ಳುವಂತೆ (ಅಥವಾ ಚಿತ್ರದ ಮೊದಲಲ್ಲಿ ಅಮಿತಾಭ್ ಘೋಷಿಸುವಂತೆ) ಒಂದು ಚಾರಿತ್ರಿಕ, ಭೌದ್ಧಿಕ ಚಿತ್ರವೆಂದೇನಾದರೂ ನೀವು ಹೋದರೆ, ಬೇಸ್ತು ಬಿದ್ದಿರಿ.

ಆಟೋಗ್ರಫಿ

ಇವತ್ತೇಕೋ ಇದನ್ನು ಬರೆಯಬೇಕೆನ್ನಿಸಿತು. ಬಹುದಿನದ ನಂತರ ಮಡದಿ ಮಗುವಿನೊಂದಿಗೆ ಒಂದು ಸಿನಿಮಾಕ್ಕೆ ಹೋಗಿದ್ದೆ (ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ, ಸಾಧ್ಯವಾದರೆ). ಸಿನಿಮಾ ಮುಗಿಸಿಕೊಂಡು, ಚೆನ್ನೈ ಸಿಟಿ ಸೆಂಟರ್ ನಲ್ಲಿದ್ದ ಚಿತ್ರಮಂದಿರದಿಂದ ಮೈಲಾಪುರಕ್ಕೆ ಬಂದೆವು. ಅಲ್ಲಿ ರಾತ್ರೆ ಊಟ ಮುಗಿಸಿಕೊಂಡು ತಿರುವಾನ್ಮಿಯೂರಿಗೆ ಹೋಗಲು ಬಸ್ಸು ಕಾಯುತ್ತಿದ್ದೆವು. ಆಗಲೇ ತಡವಾಗುತ್ತಿದ್ದರಿಂದ, ಆಟೋ ಹಿಡಿದು ಹೋದರಾಯಿತೆಂದು ಆಟೋ ವಿಚಾರಿಸಿದರೆ, ಯಥಾಪ್ರಕಾರ ತಲೆ ಬೆಲೆ, ನೂರರಿಂದ ನೂರ ಮೂವತ್ತಕ್ಕೆ ಕಡಿಮೆ ಒಬ್ಬನೂ ಇಲ್ಲ. ಮೈಲಾಪುರದಿಂದ ತಿರುವಾನ್ಮಿಯೂರಿಗೆ ಮೀಟರ್ ಹಾಕಿದರೆ ಹೆಚ್ಚೆಂದರೆ ಅರುವತ್ತು ರೂಪಾಯಿ ಆದೀತು. ಆದರೆ ಇಲ್ಲಿ ನೂರು ರೂಪಾಯಿ ಸಾಮಾನ್ಯ ಬೆಲೆ. ಆದರೂ ಚೌಕಾಸಿ ಮಾಡದೆ ಆಟೋ ಹತ್ತುವುದು ಹೇಗೆ. ನಾನು ಎಂಭತ್ತು ರೂಪಾಯಿ ಕೊಡಲು ತಯಾರಿದ್ದೆ (ಇನ್ನೊಂದು ಇಪ್ಪತ್ತು ರೂಪಾಯಿ ಹೆಚ್ಚಾಗುತ್ತಿತ್ತೆಂದಲ್ಲ, ಆದರೂ ಆಟವನ್ನು ನಿಯಮಕ್ಕನುಸಾರ ಆಡಬೇಕಷ್ಟೇ?). ಬೆಂಗಳೂರು ಮತ್ತು ಚೆನ್ನೈ ಈ ಎರಡೂ ಕಡೆ ಆಟೋದವರ ಜೊತೆ ಏಗಿ ಏಗಿ, ಅವರ ಪಟ್ಟು-ಪ್ರತಿ ಪಟ್ಟುಗಳೆಲ್ಲ ಅರ್ಥವಾಗಿಬಿಟ್ಟಿದೆ. ಹಣವನ್ನು ಚರಂಡಿಯಲ್ಲಿ ಬಿಸಾಡಿದರೂ ಪರವಾಗಿಲ್ಲ, ಆಟೋದವನಿಗೆ ಮಾತ್ರ ಒಂದು ಕಾಸು ಹೆಚ್ಚು ಕೊಡಬಾರದೆಂಬ ದುರ್ಬುದ್ಧಿ ಅದು ಹೇಗೊ ಮನದಲ್ಲಿ ಕೂತುಬಿಟ್ಟಿದೆ. ಆಟೋದವರೆಲ್ಲಾ ಕೆಟ್ಟವರಲ್ಲ ಎಂಬ ಥಿಯರಿ ಗೊತ್ತಿದ್ದರೂ, ಎಷ್ಟೋ ಜನ ಒಳ್ಳೆಯ ಆಟೋ ಚಾಲಕರನ್ನು ನಾನೇ ನನ್ನ ಕಣ್ಣಾರೆ ನೋಡಿದ್ದರೂ, ಅದೇಕೋ, ಆಟೋದವನ ಜೊತೆ ವ್ಯವಹರಿಸುವಾಗ, ಪಾವ್ಲೋವ್ ನ ನಾಯಿಯಂತೆ ನನ್ನ ತಲೆಯಲ್ಲಿ ಚೌಕಾಸಿಯ ಗಂಟೆ ಬಾರಿಸತೊಡಗುತ್ತದೆ, ಮೈಯೆಲ್ಲಾ ಕಣ್ಣಾಗುತ್ತದೆ, ಕಣ್ಣುಗಳು ಮೀಟರಿನಲ್ಲಿ ಕೀಲಿಸಿ ಹೋಗುತ್ತವೆ, ಮಾತು ಬಿಗಿಯಾಗುತ್ತದೆ.

ನನ್ನ ಎಂಬತ್ತು ರೂಪಾಯಿ ಬೆಲೆಗೆ ಒಪ್ಪುವ ಆಟೋಗಾಗಿ ಕಾಯುತ್ತಾ ಅರ್ಧ ಗಂಟೆ ಕಳೆಯಿತು. ಹೊತ್ತಾಗುತ್ತಿದೆ, ಮನೆಗೆ ಬೇಗ ಹೋಗೋಣವೆಂದು ಮಡದಿಯ ವರಾತ ಹೆಚ್ಚಾಯಿತು. ಕೊನೆಗೆ ನಾನು ನಿಧಾನವಾಗಿ ನೂರಕ್ಕೆ ಏರುವಹೊತ್ತಿಗೆ, ಆಟೋ ದರ ಕೂಡ ಏರಿತ್ತು.

ಅಷ್ಟು ಹೊತ್ತಿಗೆ ಅಲ್ಲಿಗೆ ಒಂದು ಆಟೋ ಬಂತು. ಆ ವ್ಯಕ್ತಿಗೆ ಹೋಗಬೇಕಾದ ಸ್ಥಳದ ವಿವರ ಹೇಳಿ ದರ ಎಷ್ಟೆಂದು ಕೇಳಿದೆ. ಅವನು ಎಂಭತ್ತು ರೂಪಾಯಿ ಕೇಳಿದಾಗ ಒಂದು ಕ್ಷಣ ದಂಗಾದೆ. ಈ ಹೊತ್ತಿನಲ್ಲಿ ಅಲ್ಲಿ ನಡೆಯುತ್ತಿದ್ದ ರೇಟ್ ನೂರ ಮೂವತ್ತು ರುಪಾಯಿ. ಇವನಿಗೆ ಹೋಗಬೇಕಾದ ಸ್ಥಳದ ದೂರ ತಿಳಿದಿಲ್ಲದಿರಬಹುದು, ಆಮೇಲೆ ತಗಾದೆ ಮಾಡಬಾರದೆಂದು ಮತ್ತೆ ಅವನಿಗೆ ಸ್ಥಳದ ಗುರುತು ಹೇಳಿದೆ. ಮತ್ತೆ ಅವನು ಎಂಭತ್ತು ರೂಪಯಿಯ ಬೇಡಿಕೆಯನ್ನು ಪುನರುಚ್ಚರಿಸಿದ. ಇದಕ್ಕಿಂತಾ ಒಳ್ಳೆಯ ದರ ಎಲ್ಲಿ ಸಿಗಲು ಸಾಧ್ಯ? ಸರಿ, ಆಟೋ ಹತ್ತಿಯೇ ಬಿಡಬೇಕೆಂದುಕೊಳ್ಳುವಾಗ, ಅಲ್ಲಿಯವರೆಗೂ ಅಪ್ರತಿಭವಾಗಿದ್ದ ಚೌಕಾಸಿ ಪ್ರಜ್ಞೆ ಮತ್ತೆ ಸಾವರಿಸಿಕೊಂಡು. ಅಲ್ಲಿಂದ ತಿರುವಾಣ್ಮಿಯೂರಿಗೆ ತೀರ ಹತ್ತಿರವೆಂದೂ, ಎಂಭತ್ತು ರೂಪಾಯಿ ಹೆಚ್ಚಾಯಿತೆಂದೂ ಹೇಳಿದೆ. ಹೆಚ್ಚೆಂದರೆ ಎಪ್ಪತ್ತು ರೂಪಾಯಿ ಕೊಡುತ್ತೇನೆಂದೆ (ತೀರಾ ಕಡಿಮೆ ಕೇಳುವಹಾಗೂ ಇಲ್ಲ). ತುಸುಹೊತ್ತು ನನ್ನ ಮುಖವನ್ನೇ ದಿಟ್ಟಿಸಿ ನಸು ನಕ್ಕು ಆತ ಹೇಳಿದ, "ಸರ್, ಈ ಹೊತ್ತಿನಲ್ಲಿ ಇಲ್ಲಿ ಎಲ್ಲರೂ ನೂರಿಪ್ಪತ್ತು ಕೇಳುವುದು ನಿಮಗೂ ಗೊತ್ತು, ಒಂದು ರೇಟ್ ಹೇಳಿ ಮತ್ತೆ ಕಡಿಮೆ ಮಾಡುವುದು ಬೇಡವೆಂದು ನಾನು ಸರಿಯಾದ ರೇಟ್ ಹೇಳಿದ್ದೇನೆ; ಇನ್ನೂ ಚೌಕಾಸಿ ಮಾಡುವುದು ನಿಮಗೆ ಸರಿ ಅನ್ಸುತ್ತಾ ಸಾರ್?" ಇದಕ್ಕೆ ನನ್ನಲ್ಲಿ ಉತ್ತರವಿರಲಿಲ್ಲ. ಆದರೂ ಎಂಬತ್ತಕ್ಕೆ ಒಪ್ಪಿ ಬಿಗಿಮುಖ ಮಾಡಿಕೊಂಡು ಆಟೋ ಏರಿ ಕುಳಿತೆ.

ಆಟೋ ಚಾಲಕ ಸ್ವಲ್ಪ ಮಾತುಗಾರನೆಂದು ತೋರುತ್ತದೆ, ದಾರಿಯುದ್ದಕ್ಕೂ ಅದು ಇದು ಮಾತಾಡುತ್ತಾ ಬಂದ. ಊಟ ಆಯಿತೇ ವಿಚಾರಿಸಿದ, ಮೈಲಾಪುರದಲ್ಲಿ ದೇವಸ್ಥಾನಕ್ಕೆ ಬಂದಿದ್ದಿರಾ ಎಂದ, ತಿರುವಾಣ್ಮಿಯೂರಿನಲ್ಲಿ ಮರುಂದೀಶ್ವರನ ದೇವಸ್ಥಾನಕ್ಕೆ ಏಕೆ ಹೋಗಲಿಲ್ಲವೆಂದು ವಿಚಾರಿಸಿದ. ದಾರಿಯಲ್ಲಿ ಮಗು ಸ್ವಲ್ಪ ಗಲಾಟೆ ಮಾಡಿದಾಗ "ಆಟೊ ನಿಲ್ಲಿಸಲೇ" ಎಂದ. ಬೇರೆಯವರಂತೆ ಇವನಬಳಿ ಏಕೋ ಮುಖ ಗಂಟುಮಾಡಿಕೊಂಡಿರಲು ಆಗುತ್ತಿಲ್ಲ, ಆದರೂ ನನ್ನ limited ತಮಿಳು ಜ್ಞಾನ ನನ್ನ ನಾಲಗೆಯನ್ನು ತಡೆದಿತ್ತು. ಸಾಧ್ಯವಾದಷ್ಟು ಹಸನ್ಮುಖಿಯಾಗಿರಲು ಪ್ರಯತ್ನಿಸುತ್ತಾ, ಕೇಳಿದ್ದಕ್ಕೆ ಹೂಂ - ಉಹೂಂ ಕೊಡುತ್ತಾ ಬಂದೆ.

ಮಾತಿನ ಮಧ್ಯೆ ಈ ಚಾಲಕನಿಗೆ ಕಾಲು ಸ್ವಾಧೀನದಲ್ಲಿರಲಿಲ್ಲವೆಂಬುದು ಗಮನಕ್ಕೆ ಬಂತು. ಪಕ್ಕದಲ್ಲಿದ್ದ ಅವನ ಊರೆಗೋಲುಗಳನ್ನು ತೋರುತ್ತಾ ನನ್ನ ಮಡದಿ ಮೆಲುದನಿಯಲ್ಲಿ ಹೇಳಿದಳು, "ಇಂಥವರ ಜೊತೆ ಚೌಕಾಸಿ ಮಾಡುವುದು ಸರಿಯಲ್ಲ, ಅವನು ಕೇಳಿದಷ್ಟು ಕೊಟ್ಟುಬಿಡಿ... afterall, we should help such people" ಮನಸ್ಸಿಗೆ ಸ್ವಲ್ಪ ನೋವಾಯಿತಾದರೂ ನನಗೇಕೋ ಈ ಮನುಷ್ಯನ ಬಗ್ಗೆ ಅಭಿಮಾನ ತೋರುತ್ತಿತ್ತೇ ಹೊರತು, ಕರುಣೆಯಲ್ಲ. "ಸಹಾಯ" ಮಾಡಿ ಅವನ ಅಭಿಮಾನ ಕೆಡಿಸುವುದು ನನಗೆ ಸರಿಬರಲಿಲ್ಲ. ಮೇಲಾಗಿ, ಚೌಕಾಸಿ ಮಾಡುವುದು ಸರ್ವೇ ಸಾಮಾನ್ಯ, ಹಾಗೂ ನಾನೇನು ತೀರಾ unfairಆಗೇನೂ ಇಲ್ಲ. ಇಷ್ಟಕ್ಕೂ ನಾನು ಅವನು ಕೇಳಿದ ಎಂಭತ್ತು ರುಪಾಯನ್ನು ಕೊಡಲು ಸಿದ್ಧನಿದ್ದೆ.
ತಿರುವಾನ್ಮಿಯೂರು ಬಂತು. ಕೈಯಲ್ಲಿ ಸಿದ್ಧಮಾಡಿಟ್ಟುಕೊಂಡಿದ್ದ ಎಂಭತ್ತು ರುಪಾಯಿಯನ್ನು ಅವನ ಕೈಯಲ್ಲಿಟ್ಟು ಆಟೋ ಇಳಿದೆವು. ಗುಡ್ ನೈಟ್ ಹೇಳಿದ ಆತ ಒಂದು ಕ್ಷಣ ತಡೆಯ ಹೇಳಿದ. ಆಲ್ಲೇ ದಾರಿಯಲ್ಲಿ ನಿಂತಿದ್ದವನೊಬ್ಬನ ಹತ್ತಿರ ಹತ್ತು ರೂಪಾಯಿಗೆ ಚಿಲ್ಲರೆ ಇಸಿದುಕೊಂಡು ಐದು ರೂಪಾಯಿ ಮರಳಿ ಕೊಟ್ಟ. ಎಂಬತ್ತು ರೂಪಾಯಿ ಕೊಟ್ಟು ಹೋಗುವುದರಲ್ಲಿದ್ದ ನನಗೆ ಇದು ಕೊಂಚ ಆಶ್ಚರ್ಯ ತಂದಿತು. ಅದನ್ನು ಇಸಕೊಳ್ಳದೆ, ನಾನು ಅವನು ಕೇಳಿದ ಎಂಭತ್ತು ರೂಪಾಯಿಯನ್ನೇ ಕೊಟ್ಟಿರುವುದಾಗಿಯೂ, ಚಿಲ್ಲರೆಯೇನೂ ಬಾಕಿ ಇಲ್ಲವೆಂದೂ ಹೇಳಿದೆ. ಅದಕ್ಕವನು ಒಪ್ಪದೇ ಹೇಳಿದ "ಸಾರ್, ನಾನು ಕೇಳಿದ್ದು ಎಂಭತ್ತೇ ಆದರೂ ನೀವು ಕೊಡುತ್ತೇನೆಂದದ್ದು ಎಪ್ಪತ್ತು ರುಪಾಯಿ. ಅದಕ್ಕೆ ಮನಸಿನಲ್ಲಿ ನಿಮ್ಮ ಎಪ್ಪತ್ತು ರೂಪಾಯಿಗೆ ತಯಾರಿದ್ದೆ. ಆದರೂ ಎಂಭತ್ತು ಕೊಟ್ಟಿದ್ದು ನೋಡಿ ಒಂದುರೀತಿ ಅನ್ನಿಸಿತು, ಅದಕ್ಕೆ ಈ extra ಹಣವನ್ನ ಎರಡು ಭಾಗ ಮಾಡಿ ನಿಮಗೆ ಐದು ರೂಪಾಯಿ ವಾಪಸ್ ಕೊಡುತ್ತಿದ್ದೇನೆ, ವ್ಯವಹಾರ ಅಂದರೆ ವ್ಯವಹಾರ, ದಯವಿಟ್ಟು ತಗೊಳ್ಳಿ" ಅಂದ. ಮತ್ತೆ ನನ್ನಲ್ಲಿ ಉತ್ತರವಿರಲಿಲ್ಲ... ಐದು ರುಪಾಯಿಯನ್ನು ತೆಗೆದುಕೊಂಡರೆ ಹೇಗೆ, ಇಲ್ಲದಿದ್ದರೆ ಹೇಗೆ ಎಂದು ಚಿಂತಿಸಿ ಬಳಲುತ್ತಿರಲು, ಐದು ರುಪಾಯಿ ನಾಣ್ಯವನ್ನ ನನ್ನ ಕೈಯಲ್ಲಿ ತುರುಕಿ ಹೇಳಿದ "ನಿಮಗೆ ಬೇಡದಿದ್ದರೆ, ಮಗೂಗೆ ಒಂದು chocolate ತೆಗೆದು ಕೊಡಿ ಸಾರ್"... ಇಷ್ಟು ಹೇಳಿ, ಆಟೋ ತಿರುಗಿಸಿಕೊಂಡು, ನಮ್ಮೆಲ್ಲರತ್ತ ಮತ್ತೊಂದು ಟಾಟಾ ಮಾಡಿ ಏರಿ ಬರುತ್ತಿದ್ದ ಟ್ರಾಫಿಕ್ ನಲ್ಲಿ ಕಣ್ಮರೆಯಾದ.
ಘಟನೆಯ ಬಗ್ಗೆ ಭರತವಾಕ್ಯವೊಂದನ್ನು ಬರೆಯಬೇಕಿಲ್ಲವೇನೋ. ಮತ್ತೊಂದು ಸಾಮಾನ್ಯ ಘಟನೆಯಾಗಿ ಮರೆಯಬಹುದಿದ್ದ ಇದು, ಏಕೆ ಮಹತ್ವ ಪಡೆಯಿತು, ತಿಳಿಯುತ್ತಿಲ್ಲ. ನಾನು ಎಂಭತ್ತು ಕೊಟ್ಟು ಅವನು ಐದು ಮರಳಿ ಕೊಡುವದರ ಬದಲು, ನಾನು ಎಪ್ಪತ್ತು ರೂಪಾಯಿ ಕೊಟ್ಟು ಅವನು ಇನ್ನೈದಕ್ಕೆ ಚೌಕಾಸಿ ಮಾಡಿದ್ದರೆ (ಹಾಗೂ ಎಪ್ಪತ್ತೈದೇ ರೂಪಾಯಿ), ಸಮೀಕರಣ ಬದಲಾಗುತ್ತಿತ್ತೇ? ಅಥವಾ ನನ್ನ ಮಾತಿನಂತೆ ಅವನು ಎಪ್ಪತ್ತನ್ನಷ್ಟೇ ತೆಗೆದುಕೊಂಡು ಪೂರಾ ಹತ್ತು ರೂಪಾಯಿ ವಾಪಸು ಕೊಟ್ಟಿದ್ದರೆ? ಅಥವಾ ಎಲ್ಲರಂತೆ ನೂರು ಕೇಳಿ ಕೊನೆಗೆ ಎಪ್ಪತ್ತಕ್ಕೇ ಒಪ್ಪಿದ್ದರೆ? ಏಕೋ ಲೆಕ್ಕ ಹತ್ತುತ್ತಿಲ್ಲ.

Monday, January 21, 2008

ಪರ್ಯಾಯದ ಹುಡುಕಾಟದಲ್ಲಿ...

ಇವತ್ತೇಕೋ ಈ ಕೃತಿ (ಹಾಡು, ದಾಸರ ಪದ, ದೇವರ ನಾಮ... ಏನಾದರೂ ಕರಿಯಿರಿ) ಪದೇ ಪದೇ ಮನಸ್ಸಿನಲ್ಲಿ ಗುನುಗುನಿಸುತ್ತಿದೆ. ದುರದೃಷ್ಟವಶಾತ್, ಅದನ್ನಿಲ್ಲಿ ಹಾಡಿ ತೋರಿಸಲಾರೆ. ಹಂಚಿಕೊಳ್ಳುವ ಕುತೂಹಲಕ್ಕಾಗಿ ಇಲ್ಲಿ ಕೊಡುತ್ತಿದ್ದೇನೆ.

ಏನು ಮಾಡಿದರೇನು ಫಲವೋ,
ನೀನು ಮಾನಸ ವೃತ್ತಿ, ತಿದ್ದುವ ತನಕ [ಪ]

ಭಾರಿ ಪಲ್ಲಕ್ಕಿಯ ಏರಿದ ಅನುಭವ
ನೂರು ಜನದ ಸ್ತುತಿ ಕೇಳಿದ ಅನುಭವ
ಕೀರುತಿಯ ಪರಮಾವಧಿಯನು ಏರಿದೆನೊ ನಾ ನಿನ್ನ ಕರುಣದಿ
ಭಾರಿ ಗಾಳಿಗೆ ತರಗೆಲೆಯು ತಾ ತೂರುವಂದದಿ ತೋರುತಿರುವುದೊ [೧]

ವರಗಳ ಕೊಟ್ಟಾಯ್ತು, ಹಿರಿಯನೆಂದೆನಿಸಾಯ್ತು
ಅರಿತು ಶಾಸ್ತ್ರಾರ್ಥವ, ಗುರುತನ ಪಡೆದಾಯ್ತು
ಧರೆತಲದ ವೈಭವಗಳಲಿ ಅತಿ ಅರುಚಿ ಮನದಲಿ ತೋರುತಿರುವುದೊ
ಕರದೊಳಿರುವ ಪ್ರಸನ್ನನೇ ಹೃತ್ಸರಸಿಜದಿ ನೆಲೆಸೆಲೊ ನಿರಂತರ [೨]

ವ್ಯಾಸರಾಜರ ದಿವ್ಯ ಪರಂಪರೆಯಲ್ಲಿ ಬಂದ ಕವಿ-ಸನ್ಯಾಸಿ-ಗುರು ಪ್ರಸನ್ನತೀರ್ಥರ ಈ ಹಾಡು ಅದೆಷ್ಟು ಅನುಭಾವಪೂರ್ಣವಾಗಿದೆ!

ತಾನೇರಿದ ಕೀರ್ತಿಯ ಪರಮಾವಧಿ, ಹರಿಕೃಪೆಯೆಂಬ ಭಾರಿ ಗಾಳಿಯ ಅಲೆ ಮಾತ್ರ ಎಂಬ ತರಗೆಲೆಯ ಅರಿವು; ಪಲ್ಲಕ್ಕಿಯಲ್ಲಿ ಮೆರೆದದ್ದಾಯ್ತು, ಹಿರಿತನ ಪಡೆದಾಯ್ತು, ಶಾಸ್ತ್ರಾರ್ಥವೋದಿ ಗುರುತನ ಪಡೆದದ್ದೂ ಆಯ್ತು, ಧರೆತಲದ ವೈಭವಗಳಲ್ಲಿ ಇನ್ನೇನು ರುಚಿ ಉಳಿದಿದ್ದೀತು, ಎಂಬ ಮಾಗಿದ ವೈರಾಗ್ಯ; ಕರದಲ್ಲಿ ಕುಳಿತು ಪೂಜೆಗೊಳ್ಳುವ ಹರಿ, ಮನದೊಳಗಿನ್ನೂ ಬಾರದ ವಿಹ್ವಲತೆ - ಸಂಸ್ಥಾನ ಪೂಜೆಗಾಗಿ ಕೈಯಲ್ಲಿ ಗೋಪಾಲಕೃಷ್ಣನ ಮೂರ್ತಿಯನ್ನು ಹಿಡಿದು ಕುಳಿತ (ನಾ ಕಂಡಿಲ್ಲದ) ಆ ವೃದ್ಧ ಸನ್ಯಾಸಿಯ ಮನದಲ್ಲಿ ಮೂಡಿರಬಹುದಾದ ಭಾವತರಂಗಗಳು ನಿರಂತರ ಪ್ರತಿಮೆಗಳಾಗಿ ಕಾಡುತ್ತವೆ.

ಒಮ್ಮೊಮ್ಮೆ ಹೀಗೇ, ಮನಸ್ಸು ಎಲ್ಲೆಲ್ಲೋ ಅಲೆಯುತ್ತದೆ, ಯಾವುದೋ ನೆರಳಲ್ಲಿ ತಂಗಬಯಸುತ್ತದೆ, ಯಾವುದೋ ತೀರ್ಥದಲ್ಲಿ ತಣಿಯಬಯಸುತ್ತದೆ. ಯಾವುದೋ ಒಂದು ಮಾತು, ಪ್ರತಿಮೆ, ರೂಪಕ, ಮನವನ್ನು ಕಟ್ಟಿ ನಿಲ್ಲಿಸುತ್ತದೆ, ಎದೆಯನ್ನು ತೋಯಿಸುತ್ತದೆ. ವಾಸ್ತವದ ಪಯಣವನ್ನು ಸಹ್ಯಗೊಳಿಸಲು ಬಹುಶಃ ಇದೆಲ್ಲ ಬೇಕೇನೋ.

ಬೆಳಗೆದ್ದರೆ ದಿನಪತ್ರಿಕೆಗಳಲ್ಲಿ ಒಂದೇ ಸುದ್ದಿ - ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಜಂಗೀ ಕುಸ್ತಿ. ವಿದೇಶ ಯಾನ ಮಾಡಿದ ಯತಿಗೆ ಕೃಷ್ಣ ಪೂಜೆಯ ಹಕ್ಕಿಲ್ಲವಂತೆ ("ಶಮಯನ್ ಭವಸಂತಾಪಂ, ರಮಯನ್ ಸಾಧು ಚಾತಕಾನ್; ಕೃಷ್ಣಮೇಘ ಕೃಪಾದೃಷ್ಟಿ: ವೃಷ್ಟ್ಯಾ ತುಷ್ಣಾತು ಮಾಮಪಿ" - ಯಾವುದೀ ದಿವ್ಯವಾಣಿ!); ಆ 'ಹಕ್ಕು' ಚಲಾಯಿಸಲು ಬಲು ದೊಡ್ಡ ಮಾರಾಮಾರಿ! ಗೆದ್ದವರು, ಬಿದ್ದ ಮೀಸೆಯ ಮಣ್ಣು ಕೊಡವಿಕೊಳ್ಳುವವರು, ದೇಶ ಸುತ್ತಿದವರು, ಕೋಶ ಓದಿದವರು-ಓದದವರು, ಇದ್ದಲ್ಲೇ ಸುಖ ಮೆದ್ದವರು, ಅದು ದಕ್ಕದೇ ಮನದಲ್ಲೇ ಕುದ್ದವರು... ಹಿರಿಯರ ಉಪವಾಸ, ಕಿರಿಯರ ಉದಾಸ, ಕೊನೆಗೂ ಗೆದ್ದ ಕೋಟೆ, ಹೊಸ ಇತಿಹಾಸ, ವೈಭವಪೂರ್ಣ ಸ್ವಯಂ ಮೆರವಣಿಗೆ, ಅಕ್ಷಯಪಾತ್ರೆ-ಸಟ್ಟುಗ, ಖಜಾನೆ ಕೀಲಿ ಕೈ, ಕೃಷ್ಣನ ವಿಗ್ರಹಕ್ಕೆ ವೈಭವದ ಮಂಗಳಾರತಿ, ಪತ್ರಿಕೆಯಲ್ಲಿ ಫೋಟೊ... ಕಲಸು ಮಲಸು ಕೊಲಾಜು ಚಿತ್ರದ ನಡುವೆ, 'ಹಕ್ಕು' ಸಾಧಿಸಿ ಮುಂದೆ ಕುಳಿತ ಸನ್ಯಾಸಿಯ ವಿಜಯದಾರತಿಯ ಪ್ರಭೆಗೆ ಹೊಳೆಯುವ ರನ್ನದ ಕವಚ, ಚಿನ್ನದ ಒಡವೆಗಳ ಮರೆಯಲ್ಲಿ ಮೆಲ್ಲಗೆ ನಗುವ ಕಳ್ಳ ಕೃಷ್ಣ... "ಕರದೊಳಿರುವ ಪ್ರಸನ್ನನೇ ಹೃತ್ಸರಸಿಜದಿ ನೆಲೆಸೆಲೋ ನಿರಂತರ..."

ಕ್ಷಮಿಸಿ, ಎಲ್ಲಿಂದ ಎಲ್ಲಿಗೋ ಬಂದೆ!