Friday, September 14, 2018

ವಂದೇಮಾತರಂ - ಶ್ರೀ ಅರೋಬಿಂದೋ ಮತ್ತು ನಾನು

ಈ ಹಿಂದೆ, ಶ್ರೀ ಬಂಕಿಮಚಂದ್ರರ ಸುಪ್ರಸಿದ್ಧ ಗೀತೆ "ವಂದೇಮಾತರಂ" ಗೀತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೆ, ಅದು ಇಲ್ಲಿದೆ.  ಈಗ ರಾಷ್ಟ್ರಗೀತೆಯ ವ್ಯಾಜದಿಂದ ವಂದೇಮಾತರಂ ಗೀತೆಯು ಮತ್ತೆ ಚರ್ಚೆಗೊಳಪಡುತ್ತಿದೆ.  ಮಿತ್ರರಾದ ಶ್ರೀ ಶರತ್ ಭಟ್ ಸೆರಾಜೆಯವರು ಈಗಾಗಲೇ ಪ್ರಕಟಗೊಂಡಿರುವ ವಂದೇಮಾತರಂ ಗೀತೆಯ ಐದು ಅನುವಾದಗಳನ್ನು ಒಗ್ಗೂಡಿಸಿ ವಿಶ್ಲೇಷಿಸಿದ್ದಾರೆ.  ಇಲ್ಲಿ, ಶ್ರೀ ಶಿಕಾರಿಪುರ ಹರಿಹರೇಶ್ವರ, ಶ್ರೀ ಅರೋಬಿಂದೋ ಮೊದಲಾದವರ ಅನುವಾದಗಳೊಡನೆ ನನ್ನ ಅನುವಾದವೂ ಸ್ಥಾನಗಳಿಸಿರುವುದು ಅಚ್ಚರಿಗೂಡಿದ ಆನಂದ.  ಈ ಅನುವಾದಗಳಲ್ಲಿ ಶ್ರೀ ಅರೋಬಿಂದೋ ಅವರ ಇಂಗ್ಲಿಷ್ ’ಭಾವಾನುವಾದ’ ಹಲವು ಕಾರಣಗಳಿಗೆ ನನ್ನ ಗಮನ ಸೆಳೆಯಿತು.  ಆ ಅನುವಾದ ಹೀಗಿದೆ:

Mother, I bow to thee!
Rich with thy hurrying streams,
bright with orchard gleams,
Cool with thy winds of delight,
Dark fields waving Mother of might,
Mother free.

Glory of moonlight dreams,
Over thy branches and lordly streams,
Clad in thy blossoming trees,
Mother, giver of ease
Laughing low and sweet!
Mother I kiss thy feet,
Speaker sweet and low!
Mother, to thee I bow.

(ಮೂಲ:
ವಂದೇ ಮಾತರಂ

ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯಶ್ಯಾಮಲಾಂ ಮಾತರಂ
ವಂದೇ ಮಾತರಂ

ಶುಭ್ರಜ್ಯೋತ್ಸ್ನಾಪುಲಕಿತ ಯಾಮಿನೀಂ
ಫುಲ್ಲಕುಸುಮಿತಧ್ರುಮದಳ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ

ವಂದೇ ಮಾತರಂ)

ಇದನ್ನು ಪ್ರಸ್ತುತಪಡಿಸುತ್ತಾ ಸೆರಾಜೆಯವರು "ಕೀಟ್ಸ್,ಷೆಲ್ಲಿ ಮುಂತಾದವರನ್ನು ನೆನಪಿಸುವ, ಮೂಲದ ಪ್ರೇರಣೆ ಇರುವ ಪ್ರತಿಸೃಷ್ಟಿ ಅನ್ನಬಹುದಾದ ಅನುವಾದ" ಎಂಬ ವಿವರಣೆ ನೀಡುತ್ತಾರೆ.  ಇದು ಅತ್ಯಂತ ಸಮರ್ಪಕವಾದ ವಿವರಣೆ, ಹೀಗಲ್ಲದೇ ಬೇರೆ ರೀತಿಯಲ್ಲಿ ವಿವರಿಸಲಾಗುವುದಿಲ್ಲ.  ಒಂದು ಸ್ವತಂತ್ರಕೃತಿಯಾಗಿ ಇದು ಸೊಗಸಾದ ಪದ್ಯವೆನಿಸಿದರೂ, ಒಂದು ಅನುವಾದವಾಗಿ ಹಲವು ಸ್ತರಗಳಲ್ಲಿ ಸೋತಿದೆಯೆಂದು ನನ್ನ ಅನಿಸಿಕೆ.  ಅರವಿಂದರಂಥವರೂ ಸಸ್ಯಶ್ಯಾಮಲೆಯನ್ನು dark fields ಎಂದು ಅನುವಾದಿಸಿದ್ದು ಅಚ್ಚರಿಯನ್ನುಂಟುಮಾಡುತ್ತದೆ. ಶ್ಯಾಮ ಎಂಬುದಕ್ಕೆ dark ಎನ್ನುವ ಭಾವವಿದೆಯೆಂಬುದೇನೋ ನಿಜ, ಆದರೆ ಅದು ಒಂದೊಂದು ವರ್ಣ-ವಸ್ತುವಿನೊಡನೆ ಬೇರೆಬೇರೆ ಅರ್ಥಚ್ಛಾಯೆಗಳನ್ನು ತಳೆಯುತ್ತದೆಯಲ್ಲವೇ?  ಅಲ್ಲದೇ ಸಸ್ಯಶ್ಯಾಮಲಾಂ ಎನ್ನುವ ಪದದಲ್ಲಿ fields ಎನ್ನುವ ಸೂಚನೆಯೇ ಇಲ್ಲ - ಅದು fields ಇರಬಹುದು, gardens ಇರಬಹುದು, forests ಕೂಡ ಇರಬಹುದು.  ದಟ್ಟ ಹಸಿರು ಎನ್ನುವುದು ಭಾವ.  ಆದರೆ ಇಂಗ್ಲಿಷಿನಲ್ಲಿ dark green ಎಂಬ ಅನುವಾದವೂ ಆ ಭಾವಕ್ಕೆ ಹೊಂದುವುದಿಲ್ಲ.  ಹಸಿರು ಎಂಬ ಪದ ಮೂಲದಲ್ಲಿ ಇಲ್ಲವೆಂಬುದು ನಿಜ, ಆದರೆ ಅದು ಸಸ್ಯ ಎಂಬ ವಸ್ತುವಿನ ಸ್ವಭಾವದಲ್ಲಿಯೇ ಅಂತರ್ಗತವಾಗಿದೆಯಲ್ಲ, ಅದನ್ನು ಅನುವಾದದಲ್ಲಿ ತರದೇ ಬೇರೆ ದಾರಿಯಿಲ್ಲ.

ಜೊತೆಗೆ, ಜಲ, ಫಲ, ಮಲಯಜಶೀತಲ, ಸಸ್ಯಶ್ಯಾಮಲ ಇವೆಲ್ಲಾ ಆ ತಾಯಿಯ ವ್ಯಕ್ತಿತ್ವದ ಭಾಗಗಳೇ ಎಂಬ ಜೀವಂತ ಚಿತ್ರಣವು ಮೂಲದಲ್ಲಿದ್ದರೆ, ಅರವಿಂದರ ಅನುವಾದದಲ್ಲಿ ಅವೆಲ್ಲಾ hurrying streams, orchard gleams, winds of delight, dark fields ಮೊದಲಾಗಿ ಕೇವಲ ಭೌತಿಕ ವಸ್ತುಗಳಾಗಿ ಬಂದಿವೆ - ಅದು ಮೂಲದ ಆಶಯವಲ್ಲ. ಅಲ್ಲದೇ, ಸು ಎಂಬ ಉಪಸರ್ಗಕ್ಕೆ ಸಂಸ್ಕೃತದಲ್ಲಿ ಬಹು ವಿಶಾಲವಾದ ಅರ್ಥಗಳಿವೆ.  ಅವೆಲ್ಲವನ್ನೂ ಒಳಗೊಳ್ಳುವ ಅರ್ಥವ್ಯಾಪ್ತಿಯಿರುವ ಸಮಾನ ಪದವು ಇಂಗ್ಲಿಷಿನಲ್ಲಿ ಸಿಗುವುದು ಕಷ್ಟ.  Good ಎನ್ನುವ ಪದವನ್ನು ಬಳಸಬಹುದಾದರೂ, ಅದು ಅತಿಬಳಕೆಯ ಕಾರಣದಿಂದ ಬಹಳ ಸಪ್ಪೆಯಾದ ಅನುವಾದವಾಗುತ್ತದೆ, ವಿಶೇಷವಾದ ಏನನ್ನೂ ಹೇಳಿದಂತಾಗದು.  ಆದ್ದರಿಂದ ಆಯಾ ವಸ್ತುವಿನಲ್ಲಿ ಸು ಎಂಬ ಉಪಸರ್ಗವು ಪ್ರತಿನಿಧಿಸುವ ಮುಖ್ಯ ಗುಣವನ್ನು ಆರಿಸಿಕೊಂಡು ಅನುವಾದಕನು ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.  ಆದರೆ ಹಾಗೆ ಆರಿಸಿಕೊಳ್ಳುವ ವಿಶೇಷಣವು ಆ ವಸ್ತುವಿನಲ್ಲಿ ಪರಿಗಣಿಸಬಹುದಾದ ಅತಿ ಮುಖ್ಯ ಅಂಶವಾಗಿರಬೇಕಾಗುತ್ತದೆ.  ಇಲ್ಲಿ ಶ್ರೀ ಅರವಿಂದರು ಸು ಎಂಬುದನ್ನು hurrying ಎಂದೂ gleam ಎಂದೂ ಅನುವಾದಿಸಿದ್ದಾರೆ. ಆದರೆ ಹರಿವಾಗಲೀ ಹೊಳಪಾಗಲಿ ನೀರು ಹಣ್ಣುಗಳ ಮುಖ್ಯಾಂಶಗಳಲ್ಲ. ನೀರಿನಲ್ಲಿ ಸವಿ, ಹಣ್ಣಿನಲ್ಲಿ ತಾಜಾತನ/ರುಚಿ ಇವು ಆ ವಸ್ತುವು ’ಸು’ ಎನ್ನಿಸಿಕೊಳ್ಳಲು ಇರುವ ಮಾನದಂಡಗಳು.  ಹಾಗೆಯೇ ಮಾರುತಗಳಲ್ಲಿ ಮಲಯಮಾರುತಕ್ಕೆ ಬಹಳ ವಿಶಿಷ್ಟಸ್ಥಾನವಿದೆ. ಸಮುದ್ರದ ಮೇಲಿನಿಂದಲೂ ತಂಗಾಳಿ ಬೀಸಬಹುದು, ಅದು delightಅನ್ನು ಸಹಾ ತರುತ್ತದೆ, ಆದರೆ ಮಲಯಮಾರುತ ಸ್ಪಷ್ಟವಾಗಿಯೇ ನಮೂದಿಸಬೇಕಾದ್ದು. Cool with winds of delights ಎನ್ನುವಲ್ಲಿ ಮಲಯಮಾರುತದ ಸುಗಂಧ ಶೀತಲತೆ ಕಾಣುವುದಿಲ್ಲ.

ಅದೇ ರೀತಿ ಅನುವಾದದ ಉಳಿದ ಭಾಗಗಳನ್ನೂ ನೋಡಬಹುದು.  ಶುಭ್ರಜ್ಯೋತ್ಸ್ನಾಪುಲಕಿತಯಾಮಿನೀಂ (ಹಾಲುಬೆಳದಿಂಗಳಿನಿಂದ ಪುಳಕಿತವಾದ ರಾತ್ರಿಗಳನ್ನುಹೊಂದಿದವಳು) ಎಂಬುದನ್ನು Glory of moonlight dreams, over thy branches and lordly streams ಎಂದು ಶ್ರೀ ಅರವಿಂದರು ಅನುವಾದಿಸುತ್ತಾರೆ.  ಇದು ಮೂಲವನ್ನು ಎಲ್ಲಿಯೂ ಮುಟ್ಟುವುದೇ ಇಲ್ಲ.  ಫುಲ್ಲಕುಸುಮಿತಧ್ರುಮದಳಶೋಭಿನಿಯು ಸಪ್ಪೆಯಾಗಿ Clad in blossoming trees ಆಗುತ್ತಾಳೆ.  ಸುಹಾಸಿನಿ ಎಂಬುದಕ್ಕೆ One with a sweet smile ಎಂಬ ಸರಳ ಅನುವಾದದ ಬದಲು "Laughing low and sweet" ಎಂದು ಅನುವಾದಿಸುತ್ತಾರೆ.  ಮುಗುಳ್ನಗೆಗೂ ನಗುವುದಕ್ಕೂ (smile and laughter) ಅಜಗಜಾಂತರ ವ್ಯತ್ಯಾಸವಿದೆ.  Laughing low ಎನ್ನುವುದು ಅಪಹಾಸ್ಯದ ಮುಸಿನಗೆಯಾಗಬಲ್ಲುದೇ ವಿನಾ ಮುಗುಳ್ನಗೆಯಾಗಲಾರದು.  ಮತ್ತು  Laughing low and sweet ಎನ್ನುವುದು ಕಪಟದ ನಗೆಯಲ್ಲದೇ ಬೇರೊಂದಾಗಲಾರದು.  ಸುಮಧುರಭಾಷಿಣಿಯದ್ದೂ ಇದೇ ಕತೆ - sweet words ಆಗಬಹುದಾದದ್ದು speaker sweet and low ಆಗಿದೆ.  ಉದ್ದಕ್ಕೂ ಅನುವಾದಕರು streams-gleams, delight-might, dreams-streams, trees-ease, sweet-feet, low-bow ಎಂದು ಪ್ರಾಸಪದಗಳನ್ನು ಸಾಧಿಸಲು ಅಸಾಧ್ಯ ಹೆಣಗಿದ್ದಾರೆಂಬುದು ಸ್ಪಷ್ಟವಾಗಿದೆ.  ಆದರೆ ಈ ಪ್ರಾಸಪದಗಳಿಗಾಗಿ ತೆರಬೇಕಾದ ಬೆಲೆ ಮಾತ್ರ ಬಹು ದೊಡ್ಡದು - ಅದು ಮೂಲದ ಭಾವ!

ಸೆರಾಜೆಯವರು ಹೇಳುವಂತೆ, ಇದು ಮೂಲದ ಸ್ಫೂರ್ತಿಯಿಂದ ಬಂದ ಪ್ರತಿಸೃಷ್ಟಿಯಿರಬಹುದು, ಅನುವಾದ/ಭಾವಾನುವಾದವೆನ್ನುವುದು ಕಷ್ಟ.

ಒಂದು ನುಡಿಯಿಂದ ಇನ್ನೊಂದು ನುಡಿಗೆ ಅನುವಾದಿಸುವುದು ಸರಳವಲ್ಲ.  ಪದಪದ ಅನುವಾದವು ಎಷ್ಟೋ ಬಾರಿ ಅನುವಾದವೇ ಆಗುವುದಿಲ್ಲ, ಬದಲಿಗೆ ಅಪವಾದವಾಗುತ್ತದೆ.  ಹಾಗೆಯೇ ಭಾವಾನುವಾದವು ಅನೇಕ ಬಾರಿ ಪಲಾಯನವಾದವೂ ಆಗಬಹುದು.  ಸಮರ್ಥ ಅನುವಾದಕನು ಇವೆರಡು ಅತಿಗಳ ನಡುವಿನ ದಾರಿ ತುಳಿಯುತ್ತಾನೆ, ಮೂಲದ ಅರ್ಥ, ಭಾವ, ಪದಗಳ ನಾದ, ಲಯ ಇವೆಲ್ಲವನ್ನೂ ಹಿಡಿದಿಡಲು ಸಾಧ್ಯವಾದಷ್ಟು ಶ್ರಮಿಸುತ್ತಾನೆ.  ಈ ಮಾರ್ಗದಲ್ಲಿ ಕೆಲವೊಮ್ಮೆ ಆತ ಪದಪದ ಅನುವಾದ, ಅಥವಾ ಭಾವಾನುವಾದ ಇವುಗಳ ನಡುವೆ ತುಯ್ಯಬಹುದು, ಆದರೆ ಒಂದು ಅತಿಯನ್ನು ಹಿಡಿದು ಹೊರಟರೆ ಅನುವಾದ ಕೆಡುತ್ತದೆಯೆಂಬ ಪ್ರಜ್ಞೆ ಆತನಲ್ಲಿ ಜಾಗೃತವಾಗಿರುತ್ತದೆ.  ಅದು ತೂಕಡಿಸಿದಾಗ ಅನುವಾದ ಕೆಡುತ್ತದೆ.  ಈ ದಿಕ್ಕಿನಲ್ಲಿ ಚಿಂತಿಸುತ್ತಾ ನಾನೂ ಇದೊಂದು ಅನುವಾದವನ್ನು ಪ್ರಯತ್ನಿಸಿದೆ.  ನಾನೇ ವಿವರಿಸಿದ ಅಂಶಗಳು ಈ ಅನುವಾದದಲ್ಲಿ ಎಷ್ಟು ಮಟ್ಟಿಗೆ ಪಾಲಿತವಾಗಿವೆಯೋ ಹೇಳಲಾರೆ, ಒಂದು ಅನುವಾದದಲ್ಲಿ ಅನಿವಾರ್ಯವಾಗಿ ಇದ್ದೇ ಇರುವ ದೋಷಗಳೆಲ್ಲಾ ಇದರಲ್ಲಿಯೂ ಇದೆಯೆಂದು ಬಲ್ಲೆ, ಮೂಲದ ಸಂಕ್ಷಿಪ್ತತೆ ಇಲ್ಲಿ ಬಂದಿಲ್ಲ, ಇಂಗ್ಲಿಷಿನಲ್ಲಿ ಬಳಸಿರುವ ಪ್ರಾಸಪದಗಳು ಕೇವಲ ಸಮೀಪಪ್ರಾಸಗಳಷ್ಟೇ, ಮತ್ತು ಅದನ್ನೂ ಹಟ ಹಿಡಿದು ಪಾಲಿಸಿಲ್ಲ.  ಸಾಧ್ಯವಾದಷ್ಟೂ ಪ್ರಾಸವನ್ನು ಪಾಲಿಸಿದ್ದರೂ, ಎಲ್ಲೆಲ್ಲಿ ಅದರಿಂದ ಮೂಲದ ಭಾವಕ್ಕೆ ಭಂಗಬರಬಹುದೆನ್ನಿಸುತ್ತದೆಯೋ ಅಲ್ಲೆಲ್ಲಾ ಪ್ರಾಸಕ್ಕೆ ಕೈಕೊಟ್ಟಿದ್ದೇನೆ.  ಆದರೆ ಮೂಲಕ್ಕೆ ಸಾಧ್ಯವಾದಷ್ಟು ಹತ್ತಿರ ತರಲು ಯತ್ನಿಸಿದ್ದೇನೆಂಬ ನಂಬಿಕೆ ನನ್ನದು.  ಇದು ಯಾವ ರೀತಿಯಲ್ಲೂ ಮೇಲಿನ ಶ್ರೀ ಅರವಿಂದರ ಅನುವಾದಕ್ಕೆ ಹೆಗಲೆಣೆಯೆನ್ನುವುದಿರಲಿ, ಅದರೊಡನೆ ಹೋಲಿಸುವ ಪ್ರಯತ್ನವೂ ಸರ್ವಥಾ ಅಲ್ಲ.  ಮೇಲಿನ ವಿಷಯಗಳನ್ನು ಚಿಂತಿಸುತ್ತಿದ್ದಾಗ ಹೊಮ್ಮಿದ ಮತ್ತೊಂದು ಅನುವಾದವಷ್ಟೇ:

To thee I bow, O mother

Rich with sweet streams, fruits so fresh,
And cool with fragrant mountain breeze,
And green, O mother, so rich and lush
To thee I bow, O mother

O thou, with nights tingled by moonlight bright
Adorned with woods blooming,
With those soft smiles and words so sweet,
Comforting with bounties

To thee I bow, O mother

ಈ ಬರಹದ ಇಂಗ್ಲಿಷ್ ಅವತರಣಿಕೆಗಾಗಿ ಇಲ್ಲಿ ಚಿಟುಕಿಸಿ.